“During Corona time, India saved many lives by supplying essential medicines and vaccines while following its vision of ‘One Earth, One Health’”
“India is committed to become world’s reliable partner in global supply-chains”
“This is the best time to invest in India”
“Not only India is focussing on easing the processes in its quest for self-reliance, it is also incentivizing investment and production”
“India is making policies keeping in mind the goals of next 25 years. In this time period, the country has kept the goals of high growth and saturation of welfare and wellness. This period of growth will be green, clean, sustainable as well as reliable”
“‘Throw away’ culture and consumerism has deepened the climate challenge. It is imperative to rapidly move from today’s ‘take-make-use-dispose’ economy to a circular economy”
“Turning L.I.F.E. into a mass movement can be a strong foundation for P-3 i.e ‘Pro Planet People”
“It is imperative that every democratic nation should push for reforms of the multilateral bodies so that they can come up to the task dealing with the challenges of the present and the future”

ನಮಸ್ಕಾರ!

ವಿಶ್ವ ಆರ್ಥಿಕ ವೇದಿಕೆಯಲ್ಲಿ ಸೇರಿರುವ ಜಗತ್ತಿನಾದ್ಯಂತದ ಗಣ್ಯರಿಗೆ 130 ಕೋಟಿ ಭಾರತೀಯರ ಪರವಾಗಿ ನಾನು ನನ್ನ ನಮಸ್ಕಾರಗಳನ್ನು ತಿಳಿಸುತ್ತೇನೆ. ಇಂದು ನಾನು ನಿಮ್ಮೊಂದಿಗೆ ಮಾತನಾಡುವಾಗ, ಭಾರತವು ಇನ್ನೊಂದು ಕೊರೊನಾ ಅಲೆಯನ್ನು ಅತ್ಯಂತ ಎಚ್ಚರಿಕೆಯಿಂದ ಮತ್ತು ಜಾಗ್ರತೆಯಿಂದ ನಿಭಾಯಿಸುತ್ತಿದೆ. ಸಮಾನಾಂತರವಾಗಿ ಭಾರತವು ಹಲವು ಭರವಸೆದಾಯಕ ಫಲಿತಾಂಶಗಳೊಂದಿಗೆ ಆರ್ಥಿಕ ಕ್ಷೇತ್ರದಲ್ಲಿ ಮುನ್ನಡೆಯುತ್ತಿದೆ. ಇಂದು ಭಾರತವು ಸ್ವಾತಂತ್ರ್ಯದ 75 ನೇ ವರ್ಷಾಚರಣೆಯ ಸಂಭ್ರಮದಲ್ಲಿದೆ ಮತ್ತು ಬರೇ ಒಂದು ವರ್ಷದಲ್ಲಿ 160 ಕೋಟಿ ಕೊರೊನಾ ಲಸಿಕಾ ಡೋಸುಗಳನ್ನು ವಿತರಿಸಿದ ವಿಶ್ವಾಸದಲ್ಲಿದೆ.

ಸ್ನೇಹಿತರೇ,

ಭಾರತದಂತಹ ಬಲಿಷ್ಟ ಪ್ರಜಾಪ್ರಭುತ್ವ ಇಡೀ ಜಗತ್ತಿಗೆ ಅತ್ಯಂತ ಸುಂದರವಾದ ಉಡುಗೊರೆಯನ್ನು ನೀಡಿದೆ. ಭರವಸೆಯ ಗುಚ್ಛವನ್ನು ಒದಗಿಸಿದೆ. ನಾವು ಭಾರತೀಯರು ನಮ್ಮ ಪ್ರಜಾಪ್ರಭುತ್ವದಲ್ಲಿ ಅಚಲವಾದಂತಹ ವಿಶ್ವಾಸವನ್ನು ಹೊಂದಿದ್ದೇವೆ. ಈ ಗುಚ್ಛದಲ್ಲಿ ೨೧ ನೇ ಶತಮಾನದಲ್ಲಿ ಸಶಕ್ತೀಕರಣ ಸಾಧಿಸುವಂತಹ ತಂತ್ರಜ್ಞಾನವಿದೆ. ಮತ್ತು ಅದು ನಮಗೆ,  ಭಾರತೀಯರಿಗೆ  ಮನೋಧರ್ಮ ಹಾಗು ಪ್ರತಿಭೆಯನ್ನು ಒದಗಿಸಿದೆ. ಬಹು-ಭಾಷಿಕ, ಬಹು ಸಾಂಸ್ಕೃತಿಕ ಪರಿಸರದಲ್ಲಿ ನಾವು ಭಾರತೀಯರು ಬದುಕುತ್ತಿರುವುದು ಭಾರತೀಯರಿಗೆ ದೊಡ್ಡ ಶಕ್ತಿ ಮಾತ್ರವಲ್ಲ ಅದು ಇಡೀ ವಿಶ್ವಕ್ಕೆ ಒಂದು ದೊಡ್ಡ ಶಕ್ತಿ. ಈ ಶಕ್ತಿಯು ನಮಗೆ ಬಿಕ್ಕಟ್ಟಿನ ಸಮಯದಲ್ಲಿ ತನ್ನ ಬಗ್ಗೆ ಯೋಚಿಸುವುದಲ್ಲದೆ ಮಾನವತೆಗಾಗಿ ಕೆಲಸ ಮಾಡುವುದನ್ನೂ ಬೋಧಿಸುತ್ತದೆ. ಕೊರೊನಾ ಕಾಲದಲ್ಲಿ, ನಾವು ಭಾರತವು ಹೇಗೆ “ಒಂದು ಭೂಮಿ, ಒಂದು ಆರೋಗ್ಯ” ದೃಷ್ಟಿಯನ್ನಿಟ್ಟುಕೊಂಡು ಕೆಲಸ ಮಾಡಿತು ಎಂಬುದನ್ನು ನೋಡಿದ್ದೇವೆ. ಹಲವು ದೇಶಗಳಿಗೆ ಅವಶ್ಯ ಔಷಧಿಗಳು ಮತ್ತು ಲಸಿಕೆಗಳನ್ನು ಒದಗಿಸುವ ಮೂಲಕ ಕೋಟ್ಯಂತರ ಜೀವಗಳನ್ನು ಉಳಿಸಿತು. ಇಂದು ಭಾರತವು ಔಷಧಿಗಳ (ಫಾರ್ಮಾ) ಉತ್ಪಾದನೆಯಲ್ಲಿ  ವಿಶ್ವದ ಮೂರನೇ ಅತಿ ದೊಡ್ಡ ರಾಷ್ಟ್ರವಾಗಿದೆ. ಅದು ಜಗತ್ತಿಗೇ ಔಷಧಾಲಯವಾಗಿದೆ. ತಮ್ಮ ಸೂಕ್ಷ್ಮತ್ವದ ಮೂಲಕ ಮತ್ತು ತಜ್ಞತೆಯ ಮೂಲಕ ಪ್ರತಿಯೊಬ್ಬರ ನಂಬಿಕೆಯನ್ನು ಗೆಲ್ಲುತ್ತಿರುವ ಆರೋಗ್ಯ ವೃತ್ತಿಪರರು ಮತ್ತು ವೈದ್ಯರನ್ನು ಹೊಂದಿರುವ ಜಗತ್ತಿನ ದೇಶಗಳ ಪಟ್ಟಿಯಲ್ಲಿ ಭಾರತವೂ ಒಂದಾಗಿದೆ.

ಸ್ನೇಹಿತರೇ,

ಬಿಕ್ಕಟ್ಟಿನ ಸಮಯಗಳಲ್ಲಿ ಸೂಕ್ಷ್ಮತ್ವ ಪರೀಕ್ಷೆಗೆ ಒಳಪಡುತ್ತದೆ. ಆದರೆ ಆ ಸಂದರ್ಭದಲ್ಲಿ ಭಾರತದ ಶಕ್ತಿ ಇಡೀ ಜಗತ್ತಿಗೇ ಒಂದು ಉದಾಹರಣೆಯಾಗಿದೆ. ಬಿಕ್ಕಟ್ಟಿನಲ್ಲಿ, ಭಾರತದ ಮಾಹಿತಿ ತಂತ್ರಜ್ಞಾನ ವಲಯ ಹಗಲು ರಾತ್ರಿ ಕೆಲಸ ಮಾಡುವ ಮೂಲಕ ಜಗತ್ತಿನ ಎಲ್ಲಾ ದೇಶಗಳನ್ನು ಕಾಪಾಡಿದೆ. ಭಾರತವು ಜಗತ್ತಿಗೆ ದಾಖಲೆ ಸಂಖ್ಯೆಯ ಸಾಪ್ಟ್ ವೇರ್ ಇಂಜಿನಿಯರುಗಳನ್ನು ಕಳುಹಿಸುತ್ತಿದೆ. ಭಾರತದಲ್ಲಿ 50 ಲಕ್ಷಕ್ಕೂ ಅಧಿಕ  ಸಾಫ್ಟ್ ವೇರ್ ಡೆವಲಪರ್ ಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಇಂದು ಭಾರತವು ಜಗತ್ತಿನಲ್ಲಿಯೇ ಅತ್ಯಧಿಕ ಯೂನಿಕಾರ್ನಗಳನ್ನು ಹೊಂದಿರುವ ರಾಷ್ಟ್ರಗಳಲ್ಲಿ ಮೂರನೇಯ ಸ್ಥಾನದಲ್ಲಿದೆ. ಕಳೆದ 6 ತಿಂಗಳಲ್ಲಿ  10 ಸಾವಿರಕ್ಕೂ ಅಧಿಕ ನವೋದ್ಯಮಗಳು ನೊಂದಾಯಿಸಲ್ಪಟ್ಟಿವೆ. ಇಂದು ಭಾರತವು, ಬೃಹತ್, ಭದ್ರ ಮತ್ತು ಯಶಸ್ವೀ ಡಿಜಿಟಲ್ ಪಾವತಿ ವೇದಿಕೆಯನ್ನು ಹೊಂದಿದೆ. ಕಳೆದ ಒಂದೇ ತಿಂಗಳಲ್ಲಿ ಭಾರತದಲ್ಲಿ 4.4 ಬಿಲಿಯನ್ ವರ್ಗಾವಣೆಗಳು ಏಕೀಕೃತ ಪಾವತಿ ಇಂಟರ್ಫೇಸ್ ಮೂಲಕ ನಡೆದಿವೆ.

ಸ್ನೇಹಿತರೇ,

ಭಾರತವು ಅಭಿವೃದ್ಧಿ ಮಾಡಿದ ಡಿಜಿಟಲ್ ಮೂಲಸೌಕರ್ಯ ಮತ್ತು ವರ್ಷಗಳಿಂದ ಅದನ್ನು ಅಂಗೀಕರಿಸಿ ಅಳವಡಿಸಿಕೊಂಡಿರುವುದರಿಂದ ಭಾರತಕ್ಕೆ ಇಂದು ಭಾರೀ ಶಕ್ತಿ ಬಂದಿದೆ. ಕೊರೊನಾ ಸೋಂಕು ಪತ್ತೆಗೆ ಆರೋಗ್ಯ ಸೇತು ಆಪ್ ನಂತಹ ತಾಂತ್ರಿಕ ಪರಿಹಾರಗಳು ಮತ್ತು ಲಸಿಕೆ ಪಡೆಯಲು ಕೊವಿನ್ ಪೋರ್ಟಲ್ ನಂತಹ ಪರಿಹಾರಗಳು ಭಾರತಕ್ಕೆ ಹೆಮ್ಮೆಯ ಸಂಗತಿಯಾಗಿವೆ. ಭಾರತದ ಕೊವಿನ್ ಪೋರ್ಟಲ್  ಲಸಿಕೆಗೆ ಸ್ಲಾಟ್ ಮುಂಗಡ ಕಾಯ್ದಿರಿಸುವುದರಿಂದ ಹಿಡಿದು ಲಸಿಕೆ ಪಡೆದ ಪ್ರಮಾಣ ಪತ್ರ ನೀಡುವವರೆಗೆ ಒದಗಿಸುತ್ತಿರುವ ಆನ್ ಲೈನ್ ಸೌಲಭ್ಯಗಳು ದೊಡ್ಡ ದೇಶಗಳ ಜನರ ಗಮನವನ್ನೂ ಸೆಳೆದಿವೆ.

ಸ್ನೇಹಿತರೇ,

ಭಾರತವು ಲೈಸೆನ್ಸ್ ರಾಜ್ ನಿಂದ ಗುರುತಿಸಲ್ಪಡುತ್ತಿರುವ ಕಾಲವೊಂದಿತ್ತು. ಮತ್ತು ಬಹುಪಾಲು ಸಂಗತಿಗಳು ಸರಕಾರದಿಂದ ನಿಯಂತ್ರಿಸಲ್ಪಡುತ್ತಿದ್ದವು. ಆ ದಿನಗಳಲ್ಲಿ ವ್ಯಾಪಾರೋದ್ಯಮ ನಡೆಸುವುದು ಎಷ್ಟು ಕಷ್ಟವಿತ್ತು, ಎಷ್ಟೊಂದು ಸವಾಲುಗಳಿದ್ದವು ಎಂಬುದನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ. ನಾವು ಆ ಸವಾಲುಗಳನ್ನು ನಿಭಾಯಿಸಲು ನಿರಂತರವಾಗಿ ಪ್ರಯತ್ನಿಸುತ್ತಿದ್ದೇವೆ. ಇಂದು ಭಾರತವು ವ್ಯಾಪಾರೋದ್ಯಮಕ್ಕೆ ಅನುಕೂಲಕರ ತಾಣವಾಗಿಸುವ ನಿಟ್ಟಿನಲ್ಲಿ ಮತ್ತು ಸರಕಾರದ ಮಧ್ಯಪ್ರವೇಶವನ್ನು ಕನಿಷ್ಠ ಪ್ರಮಾಣಕ್ಕೆ ಇಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ಭಾರತವು ತನ್ನ ಸಾಂಸ್ಥಿಕ (ಕಾರ್ಪೋರೇಟ್) ತೆರಿಗೆಯನ್ನು ಸರಳಗೊಳಿಸುವ ಮತ್ತು ಇಳಿಕೆ ಮಾಡುವ ಮೂಲಕ ಅದನ್ನು ಜಗತ್ತಿನಲ್ಲಿಯೇ ಅತ್ಯಂತ ಸ್ಪರ್ಧಾತ್ಮಕಗೊಳಿಸಿದೆ. ಕಳೆದೊಂದು ವರ್ಷದಲ್ಲಿಯೇ ನಾವು 25 ಸಾವಿರಕ್ಕೂ ಅಧಿಕ ಅನುಸರಣೆಗಳನ್ನು  ತೆಗೆದು ಹಾಕಿದ್ದೇವೆ. ಪೂರ್ವಾನ್ವಯಗೊಳ್ಳುವ ಹಿಂದಿನ ತೆರಿಗೆಗಳಲ್ಲಿ ಸುಧಾರಣಾ ಕ್ರಮಗಳಂತಹ ನಿರ್ಧಾರಗಳಿಂದ ಭಾರತವು ವ್ಯಾಪಾರೋದ್ಯಮ ಸಮುದಾಯದ ವಿಶ್ವಾಸವನ್ನು ಮತ್ತೆ ಗಳಿಸಿಕೊಂಡಿದೆ. ಡ್ರೋನ್ ಗಳು, ಬಾಹ್ಯಾಕಾಶ, ಭೂ ನಕ್ಷೆಗಳಂತಹ ಹಲವಾರು ವಲಯಗಳನ್ನು ನಿಯಂತ್ರಣದಿಂದ  ಮುಕ್ತಗೊಳಿಸಿದೆ. ಮಾಹಿತಿ ತಂತ್ರಜ್ಞಾನ ಮತ್ತು ಬಿ.ಪಿ.ಒ. ಗಳಿಗೆ ಸಂಬಂಧಿಸಿದ ಹಳೆಯ ಟೆಲಿಕಾಂ ನಿಯಂತ್ರಣ ನಿಯಮಾವಳಿಗಳಲ್ಲಿ ಭಾರತವು ಪ್ರಮುಖ ಸುಧಾರಣೆಗಳನ್ನು ಮಾಡಿದೆ.

ಸ್ನೇಹಿತರೇ,

ಜಾಗತಿಕ ಪೂರೈಕೆ ಸರಪಳಿಯಲ್ಲಿ ಭಾರತವು ನಂಬಿಕಸ್ತ ಪಾಲುದಾರನಾಗಲು ಬದ್ಧವಾಗಿದೆ. ನಾವು ಹಲವು ರಾಷ್ಟ್ರಗಳ ಜೊತೆ ಮುಕ್ತ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿದ್ದೇವೆ. ಅನ್ವೇಷಣೆ, ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುವಲ್ಲಿ ಭಾರತೀಯರ ಸಾಮರ್ಥ್ಯ, ಭಾರತೀಯರ ಉದ್ಯಮಶೀಲತೆಯ ಉತ್ಸಾಹ, ಸ್ಫೂರ್ತಿ, ನಮ್ಮ ಪ್ರತಿಯೊಂದು ಜಾಗತಿಕ ಪಾಲುದಾರರಿಗೆ ಹೊಸ ಶಕ್ತಿಯನ್ನು ಕೊಡಬಲ್ಲದು. ಆದುದರಿಂದ ಭಾರತದಲ್ಲಿ ಹೂಡಿಕೆ ಮಾಡಲು ಇದು ಸಕಾಲ. ಭಾರತೀಯ ಯುವಜನತೆಯಲ್ಲಿ ಉದ್ಯಮಶೀಲತ್ವ ಇಂದು ಅತ್ಯುಚ್ಚ ಮಟ್ಟದಲ್ಲಿದೆ. 2014ರಲ್ಲಿ ಭಾರತದಲ್ಲಿ ಕೆಲವು ನೂರರಷ್ಟು ನೊಂದಾಯಿತ ನವೋದ್ಯಮಗಳು ಇದ್ದವು, ಈಗ ಅವುಗಳ ಸಂಖ್ಯೆ 60 ಸಾವಿರ ದಾಟಿದೆ. 80ಕ್ಕೂ ಅಧಿಕ ಯೂನಿಕಾರ್ನ್ ಗಳಿದ್ದು, ಅವುಗಳಲ್ಲಿ 40ಕ್ಕೂ ಅಧಿಕ ಯೂನಿಕಾರ್ನ್ ಗಳು 2021ರಲ್ಲಿ ರಚಿತವಾದಂತಹವು. ಇಲ್ಲಿಂದ ಹೊರದೇಶಗಳಿಗೆ ವಲಸೆ ಹೋದ ಭಾರತೀಯರು ಜಾಗತಿಕ ಮಟ್ಟದಲ್ಲಿ ತಮ್ಮ ಕೌಶಲ್ಯವನ್ನು ತೋರಿಸುತ್ತಿದ್ದಾರೆ. ಅದೇ ರೀತಿ ಭಾರತೀಯ ಯುವಜನ ಸಮೂಹವೂ ಪೂರ್ಣವಾಗಿ ಸಿದ್ಧಗೊಂಡಿದ್ದು, ಭಾರತದಲ್ಲಿ ನಿಮ್ಮ ವ್ಯಾಪಾರೋದ್ಯಮಕ್ಕೆ ಹೊಸ ಎತ್ತರಗಳನ್ನು ಒದಗಿಸಲು ತಯಾರಾಗಿದೆ.

ಸ್ನೇಹಿತರೇ,

ಆಳವಾದ ಆರ್ಥಿಕ ಸುಧಾರಣೆಗಳಿಗೆ ಭಾರತದ ಬದ್ಧತೆ ಇಂದು ಭಾರತವನ್ನು ಅತ್ಯಂತ ಆಕರ್ಷಕ ಹೂಡಿಕೆ ತಾಣವನ್ನಾಗಿಸಿದೆ. ಕೊರೊನಾ ಅವಧಿಯಲ್ಲಿ ಜಗತ್ತು ಪರಿಮಾಣಾತ್ಮಕವಾಗಿ ಸುಲಭಗೊಳಿಸುವ, ಸರಳಗೊಳಿಸುವ  ಕಾರ್ಯಕ್ರಮಗಳಂತಹ ಮಧ್ಯಪ್ರವೇಶಗಳ ಬಗ್ಗೆ ಗಮನ ಹರಿಸುತ್ತಿದ್ದಾಗ ಭಾರತವು ಸುಧಾರಣೆಗಳಿಗೆ ದಾರಿ ತೋರಿಸಿತು. ಡಿಜಿಟಲ್ ಮತ್ತು ಭೌತಿಕ ಮೂಲ ಸೌಕರ್ಯಗಳ ಆಧುನೀಕರಣದ ಬಹಳ ದೊಡ್ಡ ಯೋಜನೆಗಳು ಕೊರೊನಾ ಅವಧಿಯಲ್ಲಿ ಅಭೂತಪೂರ್ವವಾದ ವೇಗವನ್ನು ಪಡೆದುಕೊಂಡವು. ದೇಶದಲ್ಲಿ 6 ಲಕ್ಷಕ್ಕೂ ಅಧಿಕ ಗ್ರಾಮಗಳು ಆಪ್ಟಿಕಲ್ ಫೈಬರ್ ಕೇಬಲ್ ಮೂಲಕ ಜೋಡಿಸಲ್ಪಡುತ್ತಿವೆ. ಡಾಲರ್ 1.3 ಟ್ರಿಲಿಯನ್ ಹೂಡಿಕೆಯನ್ನು ವಿಶೇಷವಾಗಿ ಸಂಪರ್ಕ ಮೂಲಸೌಕರ್ಯದ ಮೇಲೆ ಮಾಡಲಾಗುತ್ತಿದೆ. ಆಸ್ತಿ ಹಣ ಕ್ರೋಡೀಕರಣದಂತಹ ನವ ಹಣಕಾಸು ಸಲಕರಣೆಗಳ ಮೂಲಕ ಡಾಲರ್ 80 ಬಿಲಿಯನ್ ಗುರಿಯನ್ನು ನಿಗದಿ ಮಾಡಲಾಗಿದೆ. ಅಭಿವೃದ್ಧಿಯನ್ನು ಉತ್ತೇಜಿಸಲು ಪ್ರತಿಯೊಬ್ಬ ಭಾಗೀದಾರರನ್ನೂ ಸಮಾನ ವೇದಿಕೆಯ ಮೇಲೆ ತರಲು ಭಾರತವು ಗತಿ ಶಕ್ತಿ ರಾಷ್ಟ್ರೀಯ ಮಹಾ ಯೋಜನೆಯನ್ನು ಆರಂಭ ಮಾಡಿದೆ. ಈ ರಾಷ್ಟ್ರೀಯ ಮಹಾ ಯೋಜನೆ ಅಡಿಯಲ್ಲಿ ಮೂಲ ಸೌಕರ್ಯ ಯೋಜನೆ, ಅಭಿವೃದ್ಧಿ ಮತ್ತು ಅನುಷ್ಠಾನವನ್ನು ಸಮಗ್ರ ರೀತಿಯಲ್ಲಿ ಮಾಡಲಾಗುತ್ತದೆ. ಇದು ಅಡೆತಡೆ ರಹಿತವಾದ ಸಂಪರ್ಕ ಮತ್ತು ಸರಕುಗಳ ಚಲನೆ, ಜನತೆ ಮತ್ತು ಸೇವೆಗಳ ಚಲನೆಗೆ ಹೊಸ ವೇಗವನ್ನು ಒದಗಿಸಲಿದೆ.

ಸ್ನೇಹಿತರೇ,

ಸ್ವಾವಲಂಬನೆಯ ಹಾದಿಯನ್ನು ಅನುಸರಿಸುತ್ತ, ಭಾರತವು ಪ್ರಕ್ರಿಯೆಗಳನ್ನು ಅನುಕೂಲಕರಗೊಳಿಸುವುದರತ್ತ ಮಾತ್ರವಲ್ಲ, ಹೂಡಿಕೆಗೆ ಮತ್ತು ಉತ್ಪಾದನೆಗೆ  ಪ್ರೋತ್ಸಾಹ ನೀಡುವತ್ತಲೂ ಗಮನ ಹರಿಸಿದೆ. ಈ ಧೋರಣೆಯಿಂದಾಗಿ 14 ವಲಯಗಳಲ್ಲಿ ಡಾಲರ್ 26 ಬಿಲಿಯನ್ ಮೌಲ್ಯದ ಉತ್ಪಾದನಾ ಆಧಾರಿತ ಪ್ರೋತ್ಸಾಹ ಯೋಜನೆಗಳು ಇಂದು ಅನುಷ್ಠಾನಕ್ಕೆ ಬಂದಿವೆ. ಜಾಗತಿಕ ಪೂರೈಕೆ ಸರಪಳಿಯನ್ನು ಹೆಚ್ಚು ಅನುಕೂಲಕರವಾಗಿಸಲು ನಮ್ಮ ಬದ್ಧತೆಗೆ ಪ್ರತೀಕವಾಗಿ ಫ್ಯಾಬ್, ಚಿಪ್, ಮತ್ತು ಡಿಸ್ಪ್ಲೇ ಉದ್ಯಮಗಳಿಗೆ ಡಾಲರ್ 10 ಬಿಲಿಯನ್ ಗಳ ಪ್ರೋತ್ಸಾಹ ಧನ ಯೋಜನೆ ಜಾರಿಗೆ ಬರುತ್ತಿದೆ. ನಾವು ಮೇಕ್ ಇನ್ ಇಂಡಿಯಾ ಮತ್ತು ಜಗತ್ತಿಗಾಗಿ ತಯಾರಿಸಿ ಎಂಬ ಹುಮ್ಮಸ್ಸು ಹಾಗು ಉತ್ಸಾಹದೊಂದಿಗೆ ಮುನ್ನಡೆಯುತ್ತಿದ್ದೇವೆ. ಟೆಲಿಕಾಂ, ವಿಮಾ, ರಕ್ಷಣೆ, ಬಾಹ್ಯಾಕಾಶ ಜೊತೆಗೆ ಸೆಮಿ ಕಂಡಕ್ಟರ್ ಗಳ ಕ್ಷೇತ್ರದಲ್ಲಿಯೂ ಕೂಡಾ ಈಗ ಅಲ್ಲಿ ಮಿತಿ ಇಲ್ಲದಷ್ಟು  ಸಾಧ್ಯತೆಗಳಿವೆ. 

ಸ್ನೇಹಿತರೇ,

ಭಾರತವು ಇಂದು ಪ್ರಸ್ತುತ ಹಾಗು ಮುಂದಿನ 25 ವರ್ಷಗಳಿಗೆ ಅನುಗುಣವಾಗಿ ಗುರಿಗಳನ್ನು ನಿಗದಿ ಮಾಡಿ ನೀತಿಗಳನ್ನು ರೂಪಿಸುತ್ತಿದೆ ಮತ್ತು ನಿರ್ಧಾರಗಳನ್ನು ಕೈಗೊಳ್ಳುತ್ತಿದೆ. ಈ ಅವಧಿಗಾಗಿ ಭಾರತವು ಹೆಚ್ಚಿನ ಬೆಳವಣಿಗೆ ಮತ್ತು ಕಲ್ಯಾಣ ಹಾಗು ಕ್ಷೇಮ ಕಾರ್ಯಕ್ರಮಗಳು ಸಂಪೂರ್ಣ ಎಲ್ಲಾ ಜನತೆಗೆ ತಲುಪಿಸುವಂತಹ ಗುರಿಗಳನ್ನು ಹಾಕಿಕೊಂಡಿದೆ. ಈ ಅವಧಿಯ ಬೆಳವಣಿಗೆ ಹಸಿರು ಮಾತ್ರವಲ್ಲ ಅದು ಸ್ವಚ್ಛವೂ ಆಗಿರುತ್ತದೆ. ಅದು ಸಹ್ಯ, ಸುಸ್ಥಿರ ಅಭಿವೃದ್ಧಿಯಾಗಿರುತ್ತದೆ ಮತ್ತು ಅದು ನಂಬಲರ್ಹವೂ ಆಗಿರುತ್ತದೆ. ದೊಡ್ಡ ಬದ್ಧತೆಗಳನ್ನು ತೋರುವ ಸಂಪ್ರದಾಯವನ್ನು ಮುಂದುವರೆಸುತ್ತ ಮತ್ತು ಅವುಗಳನ್ನು ಜಾಗತಿಕ ಒಳಿತಿಗಾಗಿ ನಿಭಾಯಿಸುತ್ತ, ನಾವು 2020ರ  ವೇಳೆಗೆ ನೆಟ್ ಶೂನ್ಯ ಗುರಿಯನ್ನು ತಲುಪಬೇಕು ಎಂಬ ಗುರಿಯನ್ನು ನಿಗದಿ ಮಾಡಿದ್ದೇವೆ. ಜಗತ್ತಿನ 17 ಪ್ರತಿಶತದಷ್ಟು ಜನಸಂಖ್ಯೆಯನ್ನು ಹೊಂದಿರುವ ಭಾರತವು ಜಾಗತಿಕ ಇಂಗಾಲ ಹೊರಸೂಸುವಿಕೆಗೆ 5 ಪ್ರತಿಶತ, ಬರೇ 5 ಪ್ರತಿಶತದಷ್ಟು ಮಾತ್ರ ಪಾಲುದಾರನಾಗಬಹುದು, ಆದರೆ ವಾತಾವರಣ ಬದಲಾವಣೆ ನಿಭಾವಣೆಗೆ ನಮ್ಮ ಬದ್ಧತೆ 100 ಪ್ರತಿಶತದಷ್ಟಿದೆ. ವಾತಾವರಣ ಹೊಂದಾಣಿಕೆಗಾಗಿ ಅಂತಾರಾಷ್ಟ್ರೀಯ ಸೌರ ಮಿತ್ರಕೂಟ ಮತ್ತು ವಿಪತ್ತು ಪುನಶ್ಚೇತನ ಮೂಲಸೌಕರ್ಯ ಉಪಕ್ರಮಗಳು ಇದಕ್ಕೆ ಸಾಕ್ಷಿ. ಹಿಂದಿನ ವರ್ಷಗಳ ಪ್ರಯತ್ನದ ಫಲವಾಗಿ ಇಂದು ನಮ್ಮ ಇಂಧನ ಮಿಶ್ರಣದಲ್ಲಿ 40 % ನಷ್ಟು ಇಂಧನ ಪಳೆಯುಳಿಕೆರಹಿತ ಇಂಧನ ಮೂಲಗಳಿಂದ ಬರುತ್ತಿದೆ.ಭಾರತವು ಪ್ಯಾರೀಸ್ ನಲ್ಲಿ ಮಾಡಲಾದ ಬದ್ಧತೆಗಳನ್ನು ಅವುಗಳ ಗುರಿ ನಿಗದಿಯಾಗಿರುವುದಕ್ಕೆ 9 ವರ್ಷಗಳ ಮೊದಲೇ ಸಾಧಿಸಿದ್ದೇವೆ.

ಸ್ನೇಹಿತರೇ,

ಈ ಎಲ್ಲಾ ಪ್ರಯತ್ನಗಳ ನಡುವೆ, ನಮ್ಮ ಜೀವನ ವಿಧಾನವೂ ವಾತಾವರಣಕ್ಕೆ ಬಹಳ ದೊಡ್ಡ ಸವಾಲು ಆಗಿರುವುದನ್ನು ನಾವು ಪರಿಗಣಿಸಬೇಕಾಗುತ್ತದೆ. “ಬಿಸಾಡುವ” ಸಂಸ್ಕೃತಿ ಮತ್ತು ವಿಪರೀತ ಬಳಕೆದಾರ ಸಂಸ್ಕೃತಿಯ ವಾತಾವರಣ ಸವಾಲನ್ನು ಹೆಚ್ಚು ಗಂಭೀರಗೊಳಿಸಿವೆ. ಇಂದಿನ “ಕೈಗೆತ್ತಿಕೋ-ತಯಾರಿಸು-ಬಳಸು-ಮತ್ತು ಬಿಸಾಡು” ತತ್ವವನ್ನು ನಾವು ಬಹಳ ತ್ವರಿತವಾಗಿ ಬದಲಾಯಿಸಬೇಕು. ಮಿಷನ್ ಲೈಫ್ ಆಂದೋಲನದ ಕೇಂದ್ರ ಬಿಂದುವಿನಲ್ಲಿಯೂ ಇಂತಹದೇ ಸ್ಫೂರ್ತಿ, ಚೈತನ್ಯವಿದೆ. ಅದನ್ನು ನಾನು ಸಿ.ಒ.ಪಿ.-26 ರಲ್ಲಿ ಚರ್ಚಿಸಿದ್ದೆ. ’ಲೈಫ್’ ಎಂದರೆ ಪರಿಸರಕ್ಕಾಗಿ ಜೀವನ ವಿಧಾನ ಬದಲಾವಣೆ, ಇದು ವಾತಾವರಣ ಬದಲಾವಣೆಯ ಬಿಕ್ಕಟ್ಟನ್ನು ನಿಭಾಯಿಸುವುದು ಮಾತ್ರವಲ್ಲ ಭವಿಷ್ಯದ ಊಹಿಸಲಾಗದ ಸವಾಲುಗಳನ್ನು ನಿಭಾಯಿಸಲು ಪುನಶ್ಚೇತನಗೊಳಿಸುವ ಮತ್ತು ಸುಸ್ಥಿರ ಜೀವನ ವಿಧಾನದ ಚಿಂತನೆ. ಆದುದರಿಂದ “ಲೈಫ್’ ಆಂದೋಲನವನ್ನು ಜಾಗತಿಕ ಜನಾಂದೋಲನವಾಗಿ ಪರಿವರ್ತಿಸುವುದು ಬಹಳ ಮುಖ್ಯ. “ಲೈಫ್’ ನಂತಹ  ಸಾರ್ವಜನಿಕ ಸಹಭಾಗಿತ್ವದ ಪ್ರಚಾರಾಂದೋಲನವು “ಭೂಜಗತ್ತಿನ ಜನರ ಪರ”ವಾದಂತಹ ಪಿ-3 ಗೆ ವಿಸ್ತಾರವಾದ ತಳಹದಿಯನ್ನು ಒದಗಿಸಬಲ್ಲದು.

ಸ್ನೇಹಿತರೇ,

ಇಂದು, 2022ರ ಆರಂಭದಲ್ಲಿ , ನಾವು ದಾವೋಸ್ ನಲ್ಲಿ ಈ ವಿಷಯಗಳ ಬಗ್ಗೆ ಗಂಭೀರ ಚಿಂತನಾಪೂರ್ವಕ ಚರ್ಚೆ ನಡೆಸುತ್ತಿರುವಾಗ, ಪ್ರತಿಯೊಬ್ಬರಿಗೂ  ಇನ್ನೂ ಕೆಲವು ಸವಾಲುಗಳ ಬಗ್ಗೆ ಅರಿವು ಮೂಡಿಸುವ ತನ್ನ ಜವಾಬ್ದಾರಿಯನ್ನು   ಭಾರತವು ಪರಿಗಣಿಸುತ್ತದೆ. ಇಂದು ಜಾಗತಿಕ ವ್ಯವಸ್ಥೆಯಲ್ಲಿ ಆಗಿರುವ  ಬದಲಾವಣೆಗಳಿಂದಾಗಿ ಜಾಗತಿಕ ಕುಟುಂಬವಾಗಿ ನಾವು ಎದುರಿಸುತ್ತಿರುವ ಸವಾಲುಗಳು ಕೂಡಾ ಹೆಚ್ಚುತ್ತಿವೆ. ಇವುಗಳ ವಿರುದ್ಧ ಹೋರಾಡಲು ಪ್ರತಿಯೊಂದು ದೇಶವೂ, ಪ್ರತಿಯೊಂದು ಜಾಗತಿಕ ಏಜೆನ್ಸಿಯೂ  ಸಾಮೂಹಿಕ ಮತ್ತು ಸಮ್ಮಿಳಿತ ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯವಿದೆ. ಪೂರೈಕೆ ಸರಪಳಿಯಲ್ಲಿಯ ಏರು ಪೇರುಗಳು, ಹಣದುಬ್ಬರ ಮತ್ತು ವಾತಾವರಣ ಬದಲಾವಣೆಗಳು ಈ ಸವಾಲಿನಲ್ಲಿ ಕೆಲವು. ಮತ್ತೊಂದು ಉದಾಹರಣೆ ಕ್ರಿಪ್ಟೋಕರೆನ್ಸಿಯದ್ದು. ಇದರ ಸವಾಲನ್ನು ನಿಭಾಯಿಸಲು ಒಂದು ರಾಷ್ಟ್ರ ಕ್ರಮ ಕೈಗೊಂಡರೆ ಅದು ಸಾಕಾಗದು. ನಾವು ಸಮಾನ ಮನಸ್ಥಿತಿಯನ್ನು ಹೊಂದಿರಬೇಕಾಗುತ್ತದೆ. ಆದರೆ ಇಂದಿನ ಜಾಗತಿಕ ವ್ಯವಸ್ಥೆಯತ್ತ ನೋಡಿದರೆ, ಹೊಸ ಜಾಗತಿಕ ವ್ಯವಸ್ಥೆ ಮತ್ತು ಹೊಸ ಸವಾಲುಗಳನ್ನು ಎದುರಿಸಲು ಬಹುಪಕ್ಷೀಯ ಸಂಘಟನೆಗಳು ಸಿದ್ಧವಾಗಿವೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಆ ಶಕ್ತಿ ಅವರಲ್ಲಿ ಉಳಿದಿದೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ?. ಈ ಸಂಸ್ಥೆಗಳು ಸ್ಥಾಪನೆಯಾದಾಗ ಪರಿಸ್ಥಿತಿ ಹೀಗಿರಲಿಲ್ಲ. ಇಂದಿನ ಪರಿಸ್ಥಿತಿಗಳು ಭಿನ್ನವಾಗಿವೆ. ಆದುದರಿಂದ ಈ ಸಂಸ್ಥೆಗಳಲ್ಲಿ ಸುಧಾರಣೆಗಳಿಗಾಗಿ ಒತ್ತಾಯಿಸುವುದು ಪ್ರತಿಯೊಂದು ಪ್ರಜಾಸತ್ತಾತ್ಮಕ ದೇಶದ ಜವಾಬ್ದಾರಿಯಾಗಿದೆ.ಇದರಿಂದ ಪ್ರಸ್ತುತದ ಮತ್ತು ಭವಿಷ್ಯದ ಸವಾಲುಗಳನ್ನು ನಿಭಾಯಿಸಲು ಅವುಗಳಿಗೆ ಸಾಧ್ಯವಾಗುವಂತಾಗಬೇಕು. ದಾವೋಸ್ ನಲ್ಲಿ ನಡೆಯುತ್ತಿರುವ ಸಮಾಲೋಚನೆಯಲ್ಲಿ ಈ ನಿಟ್ಟಿನಲ್ಲಿ ಧನಾತ್ಮಕ ಮಾತುಕತೆ ನಡೆಯಬಲ್ಲದು ಎಂಬ ಬಗ್ಗೆ ನನಗೆ ಭರವಸೆ ಇದೆ.

ಸ್ನೇಹಿತರೇ,

ಹೊಸ ಸವಾಲುಗಳ ನಡುವೆ, ಜಗತ್ತಿಗೆ ಹೊಸ ಅವಕಾಶಗಳು, ಹೊಸ ದೃಢ ನಿರ್ಧಾರಗಳು ಅವಶ್ಯವಾಗಿವೆ. ಇಂದು ಜಗತ್ತಿನಲ್ಲಿರುವ ಪ್ರತಿಯೊಂದು ದೇಶವೂ ಹಿಂದೆಂದಿಗಿಂತಲೂ ಹೆಚ್ಚು ಪರಸ್ಪರ ಸಹಕಾರದಿಂದ ಇರುವುದು ಅವಶ್ಯವಾಗಿದೆ. ಇದು ಉತ್ತಮ ಭವಿಷ್ಯದ ಹಾದಿ. ದಾವೋಸ್ ನಲ್ಲಿಯ ಈ ಸಮಾಲೋಚನೆ ಈ ಹುಮ್ಮಸ್ಸನ್ನು ವಿಸ್ತರಿಸುತ್ತದೆ ಎಂಬ ಬಗ್ಗೆ ನನಗೆ ಖಾತ್ರಿ ಇದೆ. ಮತ್ತೊಮ್ಮೆ, ನಿಮ್ಮೆಲ್ಲರನ್ನೂ ವರ್ಚುವಲ್ ಆಗಿ ಭೇಟಿಯಾಗುವ ಅವಕಾಶ ನನಗೆ ದೊರೆತಿದೆ, ನಿಮ್ಮೆಲ್ಲರಿಗೂ ಬಹಳ ಧನ್ಯವಾದಗಳು.

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Cabinet approves minimum support price for Copra for the 2025 season

Media Coverage

Cabinet approves minimum support price for Copra for the 2025 season
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ಡಿಸೆಂಬರ್ 2024
December 21, 2024

Inclusive Progress: Bridging Development, Infrastructure, and Opportunity under the leadership of PM Modi