ನಾನು ನಿಮ್ಮೊಡನೆ ಮಾತನಾಡುವಾಗ ಸಂತೋಷ ಅನುಭವಿಸುತ್ತೇನೆ. ನಾನು ಪ್ರತಿಯೊಬ್ಬರ ಜೊತೆ ಮಾತನಾಡದಿದ್ದರೂ ಇಡೀ ಭಾರತದ ಜನತೆ ಇಂದು ನಿಮ್ಮ ಆಸಕ್ತಿ ಮತ್ತು ಉತ್ಸಾಹದ ಬಗ್ಗೆ ಅರಿವುಳ್ಳವರಾಗಿದ್ದಾರೆ. ನನ್ನೊಂದಿಗೆ ಈ ಕಾರ್ಯಕ್ರಮದಲ್ಲ್ಲಿ ದೇಶದ ಕ್ರೀಡಾ ಸಚಿವರಾದ ಶ್ರೀ ಅನುರಾಗ್ ಠಾಕೂರ್ ಅವರು ಹಾಜರಿದ್ದಾರೆ. ಅದೇ ರೀತಿ ಹಾಲಿ ಕಾನೂನು ಸಚಿವರಾದ ಶ್ರೀ ಕಿರಣ್ ರಿಜಿಜು ಜೀ ಅವರಿದ್ದಾರೆ. ಅವರು ಕೆಲ ದಿನಗಳ ಹಿಂದಿನವರೆಗೂ ಕ್ರೀಡಾ ಸಚಿವರಾಗಿ ನಿಮ್ಮೊಂದಿಗೆ ಬಹಳಷ್ಟು ಕೆಲಸ ಮಾಡಿದ್ದಾರೆ. ಕ್ರೀಡಾ ಖಾತೆಯ ಸಹಾಯಕ ಸಚಿವರಾದ ಶ್ರೀ ನಿಶಿತ್ ಪ್ರಾಮಾಣಿಕ್ ಜೀ ಅವರು ಅತ್ಯಂತ ಕಿರಿಯ ವಯಸ್ಸಿನ ಸಚಿವರು.ಅವರು ನಮ್ಮ ತಂಡದಲ್ಲಿದ್ದಾರೆ. ಕ್ರೀಡಾ ಸಂಘಟನೆಗಳ ಎಲ್ಲಾ ಮುಖ್ಯಸ್ಥರು, ಅವುಗಳ ಸದಸ್ಯರು, ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾಗವಹಿಸಲು ತೆರಳುತ್ತಿರುವ ನನ್ನ ಎಲ್ಲಾ ಸಹೋದ್ಯೋಗಿಗಳು, ಕ್ರೀಡಾಳುಗಳ ಕುಟುಂಬದವರು ಇದ್ದಾರೆ. ನಾವಿಂದು ವರ್ಚುವಲ್ ಮೂಲಕ ಸಂಭಾಷಣೆ ನಡೆಸಿದ್ದೇವೆ. ನಾನು ನಿಮ್ಮೆಲ್ಲರಿಗೆ ಇಲ್ಲಿ ದಿಲ್ಲಿಯಲ್ಲಿ ನನ್ನ ಮನೆಯಲ್ಲಿ ಆತಿಥ್ಯ ನೀಡಿದ್ದರೆ ಮತ್ತು ನಿಮ್ಮನ್ನು ವೈಯಕ್ತಿಕವಾಗಿ ಭೇಟಿ ಮಾಡಿದ್ದರೆ ಹೆಚ್ಚು ಉತ್ತಮವಾಗಿರುತ್ತಿತ್ತು. ಈ ಮೊದಲು ನಾನದನ್ನು ಮಾಡುತ್ತಿದ್ದೆ. ಮತ್ತು ಆ ಸಂದರ್ಭ ನನಗೆ ಹೆಚ್ಚು ಸ್ಮರಣಾರ್ಹವಾಗುಳಿದಿದೆ.ಆದರೆ ಈ ಬಾರಿ ಕೊರೊನಾದಿಂದಾಗಿ ಅದು ಅಸಾಧ್ಯವಾಗಿದೆ. ಅದಕ್ಕಿಂತ ಮಿಗಿಲಾಗಿ ಅರ್ಧಕ್ಕಿಂತ ಹೆಚ್ಚು ಮಂದಿ ನಮ್ಮ ಕ್ರೀಡಾಳುಗಳು ವಿದೇಶಗಳಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಆದರೆ ನಾನು ನಿಮಗೆ ಭರವಸೆ ಕೊಡುತ್ತೇನೆ, ನೀವು ಮರಳಿ ಬಂದಾಗ ಖಂಡಿತವಾಗಿಯೂ ನಾನು ನಿಮ್ಮನ್ನು ಭೇಟಿ ಮಾಡುತ್ತೇನೆ.ಕೊರೊನಾದಿಂದ ಬಹಳಷ್ಟು ಬದಲಾವಣೆಗಳಾಗಿವೆ. ಒಲಿಂಪಿಕ್ಸ್ ನ ವರ್ಷ ಕೂಡಾ ಬದಲಾಗಿದೆ. ನೀವು ತಯಾರಾಗುವ ರೀತಿ ಕೂಡಾ ಬದಲಾಗಿದೆ. ಬಹಳ ಬದಲಾವಣೆಗಳಾಗಿವೆ. ಈಗ ಒಲಿಂಪಿಕ್ಸ್ ಆರಂಭವಾಗಲು ಹತ್ತು ದಿನಗಳು ಮಾತ್ರವೇ ಬಾಕಿಯುಳಿದಿವೆ. ನೀವು ಟೋಕಿಯೋದಲ್ಲಿಯೂ ಕೂಡಾ ಸಂಪೂರ್ಣ ಭಿನ್ನ ರೀತಿಯ ವಾತಾವರಣವನ್ನು ಕಾಣಲಿದ್ದೀರಿ.
ಸ್ನೇಹಿತರೇ,
ನಿಮ್ಮೊಂದಿಗಿನ ಇಂದಿನ ಮಾತುಕತೆಯಲ್ಲಿ, ದೇಶವು ಕೂಡಾ ನೀವು ಈ ಸಂಕಷ್ಟದ ಸ್ಥಿತಿಯಲ್ಲಿ ಎಷ್ಟೊಂದು ಕಠಿಣ ಪರಿಶ್ರಮ ಮಾಡಿದ್ದೀರಿ ಮತ್ತು ದೇಶಕ್ಕಾಗಿ ಬೆವರು ಹರಿಸಿದ್ದೀರಿ ಎಂಬುದನ್ನೂ ಅರಿತಿದೆ. ನನ್ನ ಹಿಂದಿನ ’ಮನ್ ಕಿ ಬಾತ್” ಸರಣಿಯಲ್ಲಿ ನಿಮ್ಮ ಕೆಲವು ಸಹೋದ್ಯೋಗಿಗಳು ಎಷ್ಟೊಂದು ಪರಿಶ್ರಮವನ್ನು ಹಾಕುತ್ತಿದ್ದಾರೆ ಎಂಬ ಬಗ್ಗೆ ಚರ್ಚಿಸಿದ್ದೆ. ನಿಮ್ಮ ನೈತಿಕ ಶಕ್ತಿಯನ್ನು ಉದ್ದೀಪಿಸಲು ದೇಶವಾಸಿಗಳಿಗೆ ನಿಮ್ಮನ್ನು ಹುರಿದುಂಬಿಸುವಂತೆ ಕರೆ ನೀಡಿದ್ದೆ. ಇಂದು ದೇಶವು ನಿಮ್ಮನ್ನು ಹುರಿದುಂಬಿಸುವುದನ್ನು ನೋಡಿ ನಾನು ಸಂತೋಷಪಡುತ್ತಿದ್ದೇನೆ. ಇತ್ತೀಚೆಗೆ ನಾನು “ಚೀರ್ ಫಾರ್ ಇಂಡಿಯಾ” ಹ್ಯಾಶ್ ಟ್ಯಾಗಿನ ಅನೇಕ ಚಿತ್ರಗಳನ್ನು ನೋಡಿದ್ದೇನೆ. ಸಾಮಾಜಿಕ ಮಾದ್ಯಮಗಳಿಂದ ಹಿಡಿದು ದೇಶದ ಮೂಲೆ ಮೂಲೆಗಳಲ್ಲಿ ಇಡೀ ದೇಶ ನಿಮ್ಮನ್ನು ಬೆಂಬಲಿಸುತ್ತಿದೆ. 135 ಕೋಟಿ ಭಾರತೀಯರ ಈ ಶುಭ ಹಾರೈಕೆಗಳು ನೀವು ಕ್ರೀಡೆಗೆ ತೊಡಗುವುದಕ್ಕೆ ಮೊದಲು ನಿಮ್ಮೆಲ್ಲರಿಗೂ ದೇಶದ ಆಶೀರ್ವಾದಗಳಿದ್ದಂತೆ. ನಾನು ನನ್ನ ಕಡೆಯಿಂದಲೂ ನಿಮಗೆ ಶುಭವನ್ನು ಹಾರೈಸುತ್ತೇನೆ. ದೇಶವಾಸಿಗಳಿಂದ ಶುಭ ಹಾರೈಕೆಗಳನ್ನು ನಿರಂತರವಾಗಿ ಪಡೆಯುವಂತಾಗಲು ನಮೋ ಆಪ್ ನಲ್ಲಿ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿದೆ. ಜನರು ನಿಮಗಾಗಿ ಹಾರೈಸುತ್ತಿದ್ದಾರೆ. ಶುಭ ಕೋರುತ್ತಿದ್ದಾರೆ. ನಮೋ ಆಪ್ ಗೆ ಭೇಟಿ ನೀಡಿ ನಿಮಗೆ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ.
ಸ್ನೇಹಿತರೇ,
ಇಡೀ ದೇಶ ಭಾವನಾತ್ಮಕವಾಗಿ ನಿಮ್ಮೊಂದಿಗಿದೆ. ಮತ್ತು ನಾನು ನಿಮ್ಮೆಲ್ಲರನ್ನು ಒಟ್ಟಿಗೆ ನೋಡುತ್ತಿರುವಾಗ, ನಾನು ಸಮಾನವಾದಂತಹ ಅಂಶಗಳಾದ ಧೈರ್ಯ, ವಿಶ್ವಾಸ ಮತ್ತು ಧನಾತ್ಮಕತೆಗಳನ್ನು ಕಾಣುತ್ತಿದ್ದೇನೆ. ನಾನು ನಿಮ್ಮಲ್ಲಿ ಸಮಾನವಾದಂತಹ ಅಂಶಗಳನ್ನು ಕಾಣುತ್ತಿದ್ದೇನೆ. ಮತ್ತು ಆ ಅಂಶವೆಂದರೆ ಶಿಸ್ತು. ಅರ್ಪಣಾಭಾವ, ಮತ್ತು ದೃಢತೆ. ನಿಮ್ಮಲ್ಲಿ ಬದ್ಧತೆ ಇರುವ ಹಾಗೆಯೇ ಸ್ಪರ್ಧಾತ್ಮಕತೆ ಇದೆ. ಈ ಗುಣಗಳು ಕೂಡಾ ನವಭಾರತದವು ಆದುದರಿಂದ ನೀವೆಲ್ಲರೂ ನವಭಾರತದ ಪ್ರತಿಫಲನಗಳು ಮತ್ತು ದೇಶದ ಭವಿಷ್ಯದ ಸಂಕೇತಗಳು. ನಿಮ್ಮಲ್ಲಿ ಕೆಲವರು ದಕ್ಷಿಣದವರು, ಉತ್ತರದವರು, ಪೂರ್ವದವರು ಮತ್ತು ಈಶಾನ್ಯದವರು ಇದ್ದಾರೆ. ಕೆಲವರು ತಮ್ಮ ಆಟವನ್ನು ಆರಂಭ ಮಾಡಿದ್ದು, ಗ್ರಾಮಗಳ ಗದ್ದೆಗಳಿಂದ ಇರಬಹುದು. ಮತ್ತು ಇನ್ನು ಕೆಲವು ಸ್ನೇಹಿತರು ತಮ್ಮ ಬಾಲ್ಯ ಕಾಲದಿಂದಲೇ ಯಾವುದಾದರೂ ಕ್ರೀಡಾ ಆಕಾಡೆಮಿಗಳ ಜೊತೆ ಸಂಪರ್ಕದಲ್ಲಿದ್ದವರಾಗಿರಬಹುದು. ಆದರೆ ಈಗ , ನೀವೆಲ್ಲರೂ “ಟೀಮ್ ಇಂಡಿಯಾ”ದ ಭಾಗವಾಗಿದ್ದೀರಿ. ನೀವೆಲ್ಲರೂ ದೇಶದ ಪರವಾಗಿ ಆಡಲಿದ್ದೀರಿ. ಈ ವೈವಿಧ್ಯ, ಈ ತಂಡ ಸ್ಫೂರ್ತಿಯು “ಏಕ ಭಾರತ್ ಶ್ರೇಷ್ಟ ಭಾರತ್’ ( ಒಂದು ಭಾರತ, ಸರ್ವೋಚ್ಚ ಭಾರತ) ನ ಗುರುತಾಗಿದೆ.
ಸ್ನೇಹಿತರೇ,
ದೇಶವು ಹೇಗೆ ಹೊಸ ಆಲೋಚನೆ ಮತ್ತು ಹೊಸ ಧೋರಣೆಯೊಂದಿಗೆ ತನ್ನ ಆಟಗಾರರ ಜೊತೆ ನಿಲ್ಲುತ್ತದೆ ಎಂಬುದಕ್ಕೆ ನೀವೆಲ್ಲರೂ ಸಾಕ್ಷಿಗಳಾಗಿದ್ದೀರಿ. ಇಂದು ನಿಮ್ಮ ಪ್ರೇರಣೆ ದೇಶಕ್ಕೆ ಬಹಳ ಮುಖ್ಯವಾಗಿದೆ. ನೀವು ಮುಕ್ತವಾಗಿ ನಿಮ್ಮ ಪೂರ್ಣ ಸಾಮರ್ಥ್ಯದೊಂದಿಗೆ ಆಡುವಂತೆ, ನಿಮ್ಮ ತಂತ್ರಗಳನ್ನು ಸುಧಾರಿಸುವಂತೆ ಮಾಡಲು ಗರಿಷ್ಠ ಆದ್ಯತೆಯನ್ನು ನೀಡಲಾಗಿದೆ. ನೀವು ನೆನಪಿಸಿಕೊಳ್ಳಬಹುದು, ಒಲಿಂಪಿಕ್ಸ್ ಗೆ ಸಂಬಂಧಿಸಿ ಉನ್ನತ ಮಟ್ಟದ ಸಮಿತಿಯನ್ನು ಬಹಳ ಹಿಂದೆಯೇ ರಚಿಸಲಾಗಿದೆ. ಒಲಿಂಪಿಕ್ ಪೋಡಿಯಂ ಗುರಿ ಯೋಜನೆ ಅಡಿಯಲ್ಲಿ ಸಾಧ್ಯ ಇರುವ ಎಲ್ಲಾ ರೀತಿಯ ನೆರವನ್ನು ಎಲ್ಲಾ ಆಟಗಾರರಿಗೆ ನೀಡಲಾಗಿದೆ. ಇದರ ಅನುಭವ ನಿಮಗೂ ಆಗಿದೆ. ಹಿಂದಿನ ಪರಿಸ್ಥಿತಿಗೆ ಹೋಲಿಸಿದರೆ ಹೊಸ ಬದಲಾವಣೆಗಳು ನಿಮ್ಮ ಅನುಭವಕ್ಕೆ ಬಂದಿರಬಹುದು.
ನನ್ನ ಸ್ನೇಹಿತರೇ,
ನೀವು ದೇಶಕ್ಕಾಗಿ ಬೆವರು ಹರಿಸುತ್ತೀರಿ, ದೇಶದ ಧ್ವಜವನ್ನು ಹೊತ್ತೊಯ್ಯುತ್ತೀರಿ, ಆದುದರಿಂದ ನಿಮ್ಮೊಂದಿಗೆ ದೃಢವಾಗಿ ನಿಲ್ಲುವುದು ದೇಶದ ಜವಾಬ್ದಾರಿ ಕೂಡಾ. ನಾವು ಆಟಗಾರರಿಗೆ ಉತ್ತಮ ತರಬೇತಿ ಶಿಬಿರಗಳನ್ನು ಮತ್ತು ಉತ್ತಮ ಉಪಕರಣಗಳನ್ನು ಒದಗಿಸಲು ಪ್ರಯತ್ನಿಸಿದ್ದೇವೆ. ಇಂದು ಆಟಗಾರರಿಗೆ ಹೆಚ್ಚು ಅಂತಾರಾಷ್ಟ್ರೀಯ ಮಟ್ಟದ ಅನುಭವ ದೊರೆಯುತ್ತಿದೆ. ಕ್ರೀಡಾ ಸಂಸ್ಥೆಗಳು ನಿಮ್ಮ ಸಲಹೆಗಳನ್ನು ಅತ್ಯುತ್ತಮ ಎಂದು ಪರಿಗಣಿಸಿವೆ. ಮತ್ತು ಅದರಿಂದಾಗಿ ಬಹಳ ಕಡಿಮೆ ಅವಧಿಯಲ್ಲಿ ಹಲವಾರು ಬದಲಾವಣೆಗಳು ಆಗಿವೆ.
ಸ್ನೇಹಿತರೇ,
ಸರಿಯಾದ ತಂತ್ರ ಮತ್ತು ಆಟದ ಮೈದಾನಗಳಲ್ಲಿ ಕಠಿಣ ಪರಿಶ್ರಮ ಜೊತೆಗೂಡಿದರೆ ಅದು ವಿಜಯವನ್ನು ಖಾತ್ರಿ ಮಾಡುತ್ತದೆ. ಇದು ಕ್ರೀಡಾಂಗಣದ ಹೊರಗೂ ಅನ್ವಯಿಸುತ್ತದೆ. “ಖೇಲೋ ಇಂಡಿಯಾ” ಮತ್ತು “ಫಿಟ್ ಇಂಡಿಯಾ” ದಂತಹ ಆಂದೋಲನಗಳನ್ನು ನಡೆಸುವ ಮೂಲಕ ಸರಿಯಾದ ತಂತ್ರವನ್ನು ರೂಪಿಸಿ ದೇಶವು ಆಂದೋಲನದೋಪಾದಿಯಲ್ಲಿ ಕಾರ್ಯನಿವಹಿಸಿದ್ದರ ಫಲಿತಾಂಶಗಳನ್ನು ನೀವೀಗ ಕಾಣುತ್ತಿದ್ದೀರಿ. ಇದೇ ಮೊದಲ ಬಾರಿಗೆ ಇಷ್ಟೊಂದು ಆಟಗಾರರು ಒಲಿಂಪಿಕ್ಸ್ ಗೆ ಅರ್ಹತೆಯನ್ನು ಗಳಿಸಿದ್ದಾರೆ. ಮೊದಲ ಬಾರಿಗೆ ಭಾರತದ ಆಟಗಾರರು ಹಲವಾರು ಕ್ರೀಡೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಹಲವಾರು ಕ್ರೀಡೆಗಳಲ್ಲಿ ಭಾರತ ಇದೇ ಮೊದಲ ಬಾರಿಗೆ ಅರ್ಹತೆ ಗಳಿಸಿದೆ.
ಸ್ನೇಹಿತರೇ,
ನಮ್ಮ ದೇಶದಲ್ಲಿ ಹೀಗೆ ಹೇಳಲಾಗುತ್ತದೆ- अभ्यासात् जायते नृणाम् द्वितीया प्रकृतिः ಅಂದರೆ ನಾವು ಅಭ್ಯಾಸ ಮಾಡುತ್ತಿದ್ದರೆ, ನಾವು ಪ್ರಯತ್ನಗಳನ್ನು ಮಾಡುತ್ತಿದ್ದರೆ, ಅದು ನಿಧಾನವಾಗಿ ನಮ್ಮ ಸ್ವಭಾವವಾಗುತ್ತದೆ. ನೀವೆಲ್ಲರೂ ಇಷ್ಟೊಂದು ದೀರ್ಘ ಕಾಲದಿಂದ ವಿಜಯಕ್ಕಾಗಿ ಅಭ್ಯಾಸ ಮಾಡುತ್ತಿರುವಿರಿ. ನಿಮ್ಮೆಲ್ಲರನ್ನೂ ನೋಡುವಾಗ, ನಿಮ್ಮ ಸಾಮರ್ಥ್ಯವನ್ನು ನೋಡುವಾಗ ಅಲ್ಲಿ ಯಾವುದೇ ಸಂಶಯಗಳು ಉಳಿದಿಲ್ಲ. ನಿಮ್ಮ ಉತ್ಸಾಹ, ಮತ್ತು ದೇಶದ ಯುವ ಜನತೆಯನ್ನು ನೋಡುವಾಗ ಗೆಲ್ಲುವುದು ನವಭಾರತದ ಅಭ್ಯಾಸ ಆಗುವ ದಿನಗಳು ದೂರವಿಲ್ಲ ಎಂದು ನಾನು ಹೇಳಬಲ್ಲೆ. ಮತ್ತು ಇದು ಆರಂಭ ಮಾತ್ರ. ನೀವು ಟೋಕಿಯೋಗೆ ಹೋಗುವಾಗ ಮತ್ತು ದೇಶದ ದ್ವಜವನ್ನು ಅರಳಿಸುವಾಗ ಇಡೀ ವಿಶ್ವ ಅದನ್ನು ನೋಡುತ್ತದೆ. ಆದರೆ ನೀವು ನೆನಪಿಡಬೇಕು ನೀವು ಗೆಲುವಿಗಾಗಿ ಆಡುವ ಒತ್ತಡದಲ್ಲಿರಬಾರದು. ನಿಮ್ಮ ಹೃದಯ ಮತ್ತು ಮನಸ್ಸಿಗೆ ಬರೇ ಒಂದು ಸಂಗತಿ ಹೇಳಿ - ಅದೆಂದರೆ ನಾನು ಉತ್ತಮವಾದ ಸಾಧನೆಯನ್ನು ಮಾಡಬೇಕು ಎಂದು. ನಾನು ಮತ್ತೊಮ್ಮೆ ದೇಶವಾಸಿಗಳಲ್ಲಿ ಮನವಿ ಮಾಡಿಕೊಳ್ಳುವುದೇನೆಂದರೆ “ಭಾರತಕ್ಕೆ ಗೆಲುವನ್ನು ಹಾರೈಸಿ” ಎಂಬುದು. ನೀವೆಲ್ಲರೂ ದೇಶಕ್ಕಾಗಿ ಆಡುತ್ತೀರಿ ಎಂಬ ನಂಬಿಕೆ ನನಗಿದೆ ಮತ್ತು ದೇಶದ ಹೆಮ್ಮೆಯನ್ನು ಎತ್ತರಿಸುತ್ತೀರಿ, ಮತ್ತು ಸಾಧನೆಯ ಹೊಸ ಎತ್ತರಗಳನ್ನು ದಾಖಲಿಸುತ್ತೀರಿ ಎಂಬ ಬಗ್ಗೆ ನನಗೆ ಭರವಸೆ ಇದೆ. ಆ ನಂಬಿಕೆ, ಭರವಸೆಯೊಂದಿಗೆ ನಿಮ್ಮೆಲ್ಲರಿಗೂ ಬಹಳ ಬಹಳ ಧನ್ಯವಾದ.ನಿಮಗೆ ಮತ್ತು ನಿಮ್ಮ ಕುಟುಂಬದವರಿಗೆ ನನ್ನ ಶುಭ ಹಾರೈಕೆಗಳು, ವಿಶೇಷ ಶುಭಾಶಯಗಳು, ಧನ್ಯವಾದಗಳು.