ಚೆಸ್ ಒಲಿಂಪಿಯಾಡ್‌ನ ಈ ಅಂತರಾಷ್ಟ್ರೀಯ ಸಮಾರಂಭದಲ್ಲಿ ಭಾಗವಹಿಸಿರುವ ನನ್ನ ಸಂಪುಟ ಸಹೋದ್ಯೋಗಿಗಳು, ಅಂತಾರಾಷ್ಟ್ರೀಯ ಚೆಸ್ ಫೆಡರೇಶನ್ ಅಧ್ಯಕ್ಷ ಅರ್ಕೇಡಿ ಡ್ವೊರ್ಕೊವಿಚ್, ಅಖಿಲ ಭಾರತ ಚೆಸ್ ಫೆಡರೇಶನ್ ಅಧ್ಯಕ್ಷರೇ, ನಾನಾ ದೇಶಗಳ ರಾಯಭಾರಿಗಳೇ, ಹೈಕಮಿಷನರ್‌ಗಳೇ, ಚೆಸ್ ಮತ್ತು ಇತರ ಕ್ರೀಡಾ ಸಂಸ್ಥೆಗಳ ಪ್ರತಿನಿಧಿಗಳೇ, ರಾಜ್ಯ ಸರ್ಕಾರಗಳ ಪ್ರತಿನಿಧಿಗಳೇ, ಎಲ್ಲಾ ಇತರೆ ಗಣ್ಯರೇ, ಚೆಸ್ ಒಲಿಂಪಿಯಾಡ್ ತಂಡದ ಸದಸ್ಯರು ಮತ್ತು ಇತರ ಚೆಸ್ ಆಟಗಾರರೇ, ಪ್ರತಿನಿಧಿಗಳೇ, ಮಹಿಳೆಯರೇ ಮತ್ತು ಮಹನೀಯರೇ!
ಭಾರತದಿಂದ ಇಂದು ಚೆಸ್ ಒಲಿಂಪಿಯಾಡ್ ಕ್ರೀಡಾಕೂಟದ ಮೊದಲ ಜ್ಯೋತಿಯಾತ್ರೆ ಆರಂಭವಾಗುತ್ತಿತ್ತದೆ. ಈ ವರ್ಷ ಇದೇ ಮೊದಲ ಬಾರಿಗೆ ಭಾರತವು ಚೆಸ್ ಒಲಿಂಪಿಯಾಡ್ ಕ್ರೀಡಾಕೂಟವನ್ನು ಆಯೋಸುತ್ತಿದೆ. ಈ ಕ್ರೀಡೆಯು ತನ್ನ ಹುಟ್ಟಿದ ದೇಶದಿಂದ ಹೊರಬಂದು ಇಡೀ ವಿಶ್ವದಲ್ಲಿ ಛಾಪು ಮೂಡಿಸುತ್ತಿರುವುದು ನಮಗೆ ಹೆಮ್ಮೆ ತಂದಿದೆ. ಇದು ಅನೇಕ ದೇಶಗಳಿಗೆ ಪ್ಯಾಷನ್ ಆಗಿದೆ. ಚೆಸ್ ಅನ್ನು ಮತ್ತೊಮ್ಮೆ ಅದರ ಜನ್ಮತಳೆದ ಸ್ಥಳದಲ್ಲಿ ಬೃಹತ್ ಅಂತರಾಷ್ಟ್ರೀಯ ಕಾರ್ಯಕ್ರಮವಾಗಿ ಆಚರಿಸಲಾಗುತ್ತಿದೆ ಎಂಬುದು ನಮಗೆ ಸಂತಸ ತಂದಿದೆ. ‘ಚದುರಂಗ’ದ ರೂಪದಲ್ಲಿ ಈ ಕ್ರೀಡೆಯು ಶತಮಾನಗಳ ಹಿಂದೆ 'ಭಾರತ'ದಿಂದ ಜಗತ್ತಿನಾದ್ಯಂತ ಪ್ರಯಾಣಿಸಿತ್ತು. ಇಂದು ಆರಂಭವಾಗುತ್ತಿರುವ ಮೊದಲ ಚೆಸ್ ಒಲಿಂಪಿಯಾಡ್‌ನ ಜ್ಯೋತಿ ಭಾರತದಿಂದ ಹೊರಟು ಇತರ ದೇಶಗಳಿಗೆ ಪ್ರಯಾಣಿಸಲಿದೆ. ಭಾರತವು ಇಂದು ತನ್ನ ಸ್ವಾತಂತ್ರ್ಯದ 75 ನೇ ವರ್ಷವನ್ನು “ಅಮೃತ ಮಹೋತ್ಸವ’’ವನ್ನಾಗಿ ಆಚರಿಸುತ್ತಿರುವ ಈ ಸಮಯದಲ್ಲಿ, ಚೆಸ್ ಒಲಿಂಪಿಯಾಡ್‌ನ ಈ ಜ್ಯೋತಿಯು ದೇಶದ 75 ನಗರಗಳಿಗೆ ಪ್ರಯಾಣಿಸಲಿದೆ. ಅಂತಾರಾಷ್ಟ್ರೀಯ ಚೆಸ್ ಫೆಡರೇಶನ್ (ಫಿಡೆ)ಯ ಒಂದು ನಿರ್ಧಾರದ ಬಗ್ಗೆ ನನಗೆ ತುಂಬಾ ಸಂತೋಷವಾಗಿದೆ. ಪ್ರತಿ ಚೆಸ್ ಒಲಿಂಪಿಯಾಡ್ ಕ್ರೀಡಾಕೂಟಗಳಿಗೆ ಜ್ಯೋತಿಯಾತ್ರೆ ಭಾರತದಿಂದಲೇ ಆರಂಭಿಸಲು ಫಿಡೆ ನಿರ್ಧರಿಸಿದೆ. ಇದು ಭಾರತಕ್ಕಷ್ಟೇ ಅಲ್ಲ, ‘ಚೆಸ್’ನ ಈ ಭವ್ಯ ಪರಂಪರೆಗೂ ಸಂದ ಗೌರವವಾಗಿದೆ. ಅದಕ್ಕಾಗಿ ನಾನು ಫಿಡೆ ಮತ್ತು ಅದರ ಎಲ್ಲಾ ಸದಸ್ಯರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸುತ್ತೇನೆ. 44ನೇ ಚೆಸ್ ಒಲಿಂಪಿಯಾಡ್‌ನಲ್ಲಿ ಉತ್ತಮ ಪ್ರದರ್ಶನ ನೀಡಲಿರುವ ಎಲ್ಲಾ ಆಟಗಾರರಿಗೂ ನಾನು ಶುಭಾ ಕೋರುತ್ತೇನೆ. ಈ ಪಂದ್ಯದಲ್ಲಿ ಯಾರೇ ಗೆದ್ದರೂ ಅದು ಕ್ರೀಡಾಸ್ಫೂರ್ತಿಯ ಗೆಲುವು. ಮಹಾಬಲಿಪುರಂನಲ್ಲಿ ಕ್ರೀಡೆಯ ಉತ್ಸಾಹವನ್ನು ಪ್ರಮುಖವಾಗಿ ಇರಿಸಿಕೊಂಡು ನೀವು ಹೆಚ್ಚಿನ ಉತ್ಸಾಹದಿಂದ ಆಡುತ್ತೀರಿ ಎಂದು ನಾನು ಭಾವಿಸಿದ್ದೇನೆ.
ಮಿತ್ರರೇ,
ಸಹಸ್ರಾರು ವರ್ಷಗಳಿಂದ 'ತಮಸೋಮ-ಜ್ಯೋತಿರ್ಗಮಯ' ಎಂಬ ಮಂತ್ರವು ಇಡೀ ಜಗತ್ತಿನಲ್ಲಿ ಅನುರಣಿಸುತ್ತಿದೆ. ಅದೇನೆಂದರೆ, ‘ಕತ್ತಲೆ’ಯಿಂದ ‘ಬೆಳಕಿನ’ ಕಡೆಗೆ ನಾವು ನಿರಂತರವಾಗಿ ಸಾಗುತ್ತಿರುವುದು. ಬೆಳಕು, ಅಂದರೆ, ಮಾನವೀಯತೆಗೆ ಉತ್ತಮ ಭವಿಷ್ಯ ಎಂದರ್ಥ. ಬೆಳಕು ಎಂದರೆ ಸಂತೋಷ ಮತ್ತು ಆರೋಗ್ಯಕರ ಜೀವನ. ಬೆಳಕು ಎಂದರೆ ಪ್ರತಿಯೊಂದು ಕ್ಷೇತ್ರದಲ್ಲೂ ಸಾಮರ್ಥ್ಯವನ್ನು ವಿಸ್ತರಿಸಲು ಪ್ರಯತ್ನಿಸುತ್ತಿದೆ ಮತ್ತು ಆದ್ದರಿಂದ ಭಾರತವು ಒಂದು ಕಡೆ ಗಣಿತ, ವಿಜ್ಞಾನ ಮತ್ತು ಖಗೋಳಶಾಸ್ತ್ರದಂತಹ ಕ್ಷೇತ್ರಗಳಲ್ಲಿ ಸಂಶೋಧನೆ ನಡೆಸಿದರೆ ಮತ್ತೊಂದೆಡೆ ಆಯುರ್ವೇದ, ಯೋಗ ಮತ್ತು ಕ್ರೀಡೆಗಳನ್ನು ಜೀವನದ ಒಂದು ಭಾಗವನ್ನಾಗಿ ಮಾಡಿಕೊಂಡಿದೆ.
ಭಾರತದಲ್ಲಿ, ‘ಕುಸ್ತಿ’ ಮತ್ತು ‘ಕಬ್ಬಡಿ’, ‘ಮಲ್ಲಕಂಬ’ದಂತಹ ಕ್ರೀಡೆಗಳನ್ನು ಆಯೋಜಿಸಲಾಗುತ್ತಿತ್ತು, ಆ ಮೂಲಕ ನಾವು ಯುವ ಪೀಳಿಗೆಯನ್ನು ದೈಹಿಕವಾಗಿ ಆರೋಗ್ಯಕರರನ್ನಾಗಿ ಮಾಡುವುದಲ್ಲದೆ, ಅವರ ಸಾಮರ್ಥ್ಯವನ್ನೂ ಕೂಡ ವೃದ್ಧಿಸಬಹುದಾಗಿದೆ. ನಮ್ಮ ಪೂರ್ವಜರು ವಿಶ್ಲೇಷಣಾತ್ಮಕ ಮತ್ತು ಸಮಸ್ಯೆಗಳನ್ನು ಪರಿಹರಿಸುವ ಮಿದುಳುಗಳಿಗಾಗಿ ಚತುರಂಗ ಅಥವಾ ಚದುರಂಗದಂತಹ ಆಟಗಳನ್ನು ಕಂಡುಹಿಡಿದರು. ಭಾರತದ ಮೂಲಕ, ಚೆಸ್ ಪ್ರಪಂಚದ ಅನೇಕ ದೇಶಗಳನ್ನು ತಲುಪಿತು ಮತ್ತು ಅತ್ಯಂತ ಜನಪ್ರಿಯವಾಯಿತು. ಇಂದು ಶಾಲೆಗಳಲ್ಲಿ ಯುವಕರಿಗೆ ಚೆಸ್ ಅನ್ನು ಶಿಕ್ಷಣದ ಸಾಧನವಾಗಿ ಬಳಸಲಾಗುತ್ತಿದೆ. ಚೆಸ್ ಬಗ್ಗೆ ಕಲಿಯುತ್ತಿರುವ ಯುವಕರು ನಾನಾ ಕ್ಷೇತ್ರಗಳಲ್ಲಿ ಸಮಸ್ಯೆಗಳನ್ನು ಪರಿಹರಿಸುವವರಾಗುತ್ತಿದ್ದಾರೆ. ‘ಚೆಕ್‌ಬೋರ್ಡ್’ನಿಂದ ಕಂಪ್ಯೂಟರ್‌ನಲ್ಲಿ ‘ಡಿಜಿಟಲ್ ಚೆಸ್’ ಆಡುವವರೆಗೆ ಈ ಸುದೀರ್ಘ ಪ್ರಯಾಣಕ್ಕೆ ಭಾರತ ಸಾಕ್ಷಿಯಾಗಿದೆ. ನೀಲಕಂಠ ವೈದ್ಯನಾಥ್, ಲಾಲಾ ರಾಜಾ ಬಾಬು ಮತ್ತು ತಿರುವೆಂಗಡಾಚಾರ್ಯರಂತಹ ಶ್ರೇಷ್ಠ ಚೆಸ್ ಆಟಗಾರರನ್ನು ಭಾರತ ಸೃಷ್ಟಿಸಿದೆ. ಇಂದಿಗೂ ನಮ್ಮ ಮುಂದಿರುವ ‘ವಿಶ್ವನಾಥನ್ ಆನಂದ್’ ಜಿ, ‘ಕೋನೇರು ಹಂಪಿ’, ‘ವಿವಿದ್’, ‘ದಿವ್ಯಾ ದೇಶಮುಖ್’ ಮುಂತಾದ ಹಲವು ಪ್ರತಿಭೆಗಳು ಚದುರಂಗದಲ್ಲಿ ನಮ್ಮ ತ್ರಿವರ್ಣ ಧ್ವಜದ ವೈಭವವನ್ನು ಹೆಚ್ಚಿಸುತ್ತಿದ್ದಾರೆ. ಇದೀಗ ಉದ್ಘಾಟನಾ ಸಮಾರಂಭದಲ್ಲಿ ಕೋನೇರು ಹಂಪಿ ಅವರ ಜೊತೆ ಚೆಸ್ ಆಡುವ ಅವಕಾಶ ನನಗೆ ಸಿಕ್ಕಿದೆ.
ಮಿತ್ರರೇ,
ಭಾರತವು ಕಳೆದ 7-8 ವರ್ಷಗಳಲ್ಲಿ ಚೆಸ್‌ನಲ್ಲಿ ತನ್ನ ಕಾರ್ಯಕ್ಷಮತೆಯನ್ನು ನಿರಂತರವಾಗಿ ಸುಧಾರಿಸಿಕೊಳ್ಳುತ್ತಿದೆ ಎಂಬುದನ್ನು ತಿಳಿದು ಸಂತೋಷವಾಗಿದೆ. 41ನೇ ಚೆಸ್ ಒಲಿಂಪಿಯಾಡ್‌ನಲ್ಲಿ ಭಾರತ ಮೊದಲ ಕಂಚಿನ ಪದಕ ಗೆದ್ದುಕೊಂಡಿತ್ತು, 2020 ಮತ್ತು 2021 ರ ವರ್ಚುವಲ್ ಚೆಸ್ ಒಲಿಂಪಿಯಾಡ್‌ನಲ್ಲಿ ಭಾರತವು ಚಿನ್ನ ಮತ್ತು ಕಂಚಿನ ಪದಕವನ್ನು ಗೆದ್ದಿದೆ. ಈ ಬಾರಿ ಚೆಸ್ ಒಲಿಂಪಿಯಾಡ್‌ನಲ್ಲಿ ಹಿಂದೆ ಭಾಗವಹಿಸಿದ್ದಕ್ಕಿಂತ ಅತಿ ಹೆಚ್ಚಿನ ಆಟಗಾರರು ಭಾಗವಹಿಸುತ್ತಿದ್ದಾರೆ. ಹಾಗಾಗಿ ಈ ಬಾರಿ ಭಾರತ ಪದಕ ಗಳಿಕೆಯಲ್ಲಿ ಹೊಸ ದಾಖಲೆ ಬರೆಯಲಿ ಎಂದು ನಾನು ಆಶಿಸುತ್ತೇನೆ. ನನ್ನ ಆಕಾಂಕ್ಷೆಗಳು ನಿಮ್ಮೊಂದಿಗೆ ಹೊಂದಿಕೆಯಾಗುತ್ತವೆ ಎಂ ಭರವಸೆ ನನಗಿದೆ.
ಮಿತ್ರರೇ,
ಚೆಸ್ ಆಟದ ಬಗ್ಗೆ ನನಗೆ ಹೆಚ್ಚು ತಿಳಿದಿಲ್ಲ, ಆದರೆ ಚೆಸ್ ಮತ್ತು ಅದರ ನಿಯಮಗಳ ಹಿಂದೆ ಅಡಗಿರುವ ಸ್ಪೂರ್ತಿ ಮತ್ತು ಅದರ ನಿಯಮಗಳಿಗೆ ಗಾಢ ಅರ್ಥಗಳಿವೆ. ಉದಾಹರಣೆಗೆ, ಚದುರಂಗದ ಪ್ರತಿಯೊಂದು ನಡೆಯೂ ತನ್ನದೇ ಆದ ವಿಶಿಷ್ಟ ಶಕ್ತಿ ಮತ್ತು ಸಾಮರ್ಥ್ಯ ಹೊಂದಿದೆ. ನಡೆಯೊಂದಿಗೆ ಸರಿಯಾದ ಚಲನೆಯನ್ನು ಮಾಡಿದರೆ, ಅದು ತುಂಬಾ ಶಕ್ತಿಯುತವಾಗುತ್ತದೆ! ಕೆಲವೊಮ್ಮೆ ‘ದುರ್ಬಲ’ ಎಂದು ಪರಿಗಣಿಸಲಾದ ‘ಪಾನ್’ ಕೂಡ ‘ಅತ್ಯಂತ ಶಕ್ತಿಶಾಲಿ ಪಾನ್’ ಆಗಲಿದೆ. ಸರಿಯಾದ ನಡೆಯನ್ನು ಮಾಡಲು ಅಥವಾ ಸರಿಯಾದ ಹೆಜ್ಜೆಯನ್ನಿಡಲು ಎಚ್ಚರಿಕೆಯ ಅಗತ್ಯವಿದೆ. ಆಗ ಪಾನ್ ರೂಕ್ ಅಥವಾ ನೈಟ್‌ನ ಶಕ್ತಿಯನ್ನು ಪಡೆಯುತ್ತದೆ!
ಮಿತ್ರರೇ,
ಚದುರಂಗ ಫಲಕದ ವೈಶಿಷ್ಟ್ಯತೆ ನಮಗೆ ಜೀವನದ ದೊಡ್ಡ ಬಹುದೊಡ್ಡ ಸಂದೇಶವನ್ನು ನೀಡುತ್ತದೆ. ಸರಿಯಾದ ಬೆಂಬಲ ಮತ್ತು ಸರಿಯಾದ ವಾತಾವರಣ ಒದಗಿಸಿದರೆ, ದುರ್ಬಲರಿಗೂ ಅಸಾಧ್ಯವಾದ ಗುರಿ ಇರುವುದಿಲ್ಲ. ಯಾವುದೇ ಹಿನ್ನೆಲೆ ಅಥವಾ ದಾರಿಯಲ್ಲಿ ಎಷ್ಟೇ ಅಡೆತಡೆಗಳಿರಲಿ, ಮೊದಲ ಹೆಜ್ಜೆ ಇಡುವಾಗ ಸರಿಯಾದ ಸಹಾಯ ಪಡೆದರೆ ಅವನು ಶಕ್ತಿಶಾಲಿಯಾಗಬಹುದು ಮತ್ತು ನಿರೀಕ್ಷಿತ ಫಲಿತಾಂಶ ಪಡೆಯಬಹುದು.
ಮಿತ್ರರೇ,
ಚೆಸ್ ಆಟವು ಮತ್ತೊಂದು ಉತ್ತಮ ವೈಶಿಷ್ಟ್ಯವನ್ನು ಹೊಂದಿದ್ದು, ಅಂದರೆ ದೃಷ್ಟಿ. ಅಲ್ಪಾವಧಿಯ ಯಶಸ್ಸಿನ ಬದಲು ದೀರ್ಘಾವಧಿಯವರೆಗೆ ಯೋಚಿಸಬಲ್ಲವನು ನಿಜವಾದ ಯಶಸ್ಸನ್ನು ಸಾಧಿಸುತ್ತಾನೆ ಎಂಬುದನ್ನು ಚೆಸ್ ನಮಗೆ ಕಲಿಸುತ್ತದೆ. ಕ್ರೀಡೆಗೆ ಸಂಬಂಧಿಸಿದ ನೀತಿಗಳ ಕುರಿತು ಮಾತನಾಡುತ್ತಾ, ನಾವು ಟಾಪ್ಸ್ ಅಂದರೆ ಟಾರ್ಗೆಟ್ ಒಲಿಂಪಿಕ್ಸ್ ಪೋಡಿಯಂ ಸ್ಕೀಮ್ ಮತ್ತು ಖೇಲೋ ಇಂಡಿಯಾವನ್ನು ಹೊಂದಿದ್ದೇವೆ ಮತ್ತು ಅದರ ಅದ್ಭುತ ಫಲಿತಾಂಶಗಳಿಗೆ ನಾವು ಇಂದು ಸಾಕ್ಷಿಯಾಗುತ್ತಿದ್ದೇವೆ. ಇಂದು ನವ ಭಾರತದ ಯುವಕರು ಚೆಸ್ ಸೇರಿದಂತೆ ಪ್ರತಿಯೊಂದು ಕ್ರೀಡೆಯಲ್ಲೂ ಅದ್ಭುತ ಸಾಧನೆ ಮಾಡುತ್ತಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ, ಒಲಿಂಪಿಕ್ಸ್, ಪ್ಯಾರಾಲಿಂಪಿಕ್ಸ್ ಮತ್ತು ಡೆಫ್ಲಿಂಪಿಕ್ಸ್‌ನಂತಹ ಪ್ರಮುಖ ಜಾಗತಿಕ ಕ್ರೀಡಾಕೂಟಗಳನ್ನು ನಾವು ನೋಡಿದ್ದೇವೆ. ಈ ಎಲ್ಲಾ ಕೂಟಗಳಲ್ಲಿ ಭಾರತದ ಆಟಗಾರರು ಅದ್ಭುತ ಪ್ರದರ್ಶನ ನೀಡಿ, ಹಳೆಯ ದಾಖಲೆಗಳನ್ನು ಮುರಿದು ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿದ್ದಾರೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ, ನಾವು ಮೊದಲ ಬಾರಿಗೆ 7 ಪದಕಗಳನ್ನು ಗೆದ್ದಿದ್ದೇವೆ ಮತ್ತು ಇತ್ತೀಚಿನ ಪ್ಯಾರಾಲಿಂಪಿಕ್ಸ್‌ನಲ್ಲಿ ಮೊದಲ ಬಾರಿಗೆ ನಾವು 19 ಪದಕಗಳನ್ನು ಜಯಿಸಿದ್ದೇವೆ! ಭಾರತ ಇತ್ತೀಚೆಗೆ ಮತ್ತೊಂದು ಯಶಸ್ಸನ್ನು ಸಾಧಿಸಿದೆ. ಏಳು ದಶಕಗಳಲ್ಲಿ ನಾವು ಮೊದಲ ಬಾರಿಗೆ ಥಾಮಸ್ ಕಪ್ ಗೆದ್ದುಕೊಂಡಿದ್ದೇವೆ. ನಮ್ಮ ಮೂವರು ಮಹಿಳಾ ಬಾಕ್ಸರ್‌ಗಳು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಮತ್ತು ಕಂಚಿನ ಪದಕಗಳನ್ನು ಜಯಸಿದ್ದಾರೆ. ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಇತ್ತೀಚೆಗೆ ಮತ್ತೊಂದು ಅಂತಾರಾಷ್ಟ್ರೀಯ ಪದಕ ಗೆದ್ದು ಹೊಸ ದಾಖಲೆ ನಿರ್ಮಿಸಿದ್ದಾರೆ! ಇಂದಿನ ಭಾರತದ ಯುವಕರ ಉತ್ಸಾಹದ ಜೊತೆಗೆ ಭಾರತದ ತಯಾರಿ ಮತ್ತು ವೇಗವನ್ನು ನಾವು ಊಹಿಸಬಹುದಾಗಿದೆ. ನಾವು ಇದೀಗ 2024ರ ಪ್ಯಾರಿಸ್ ಒಲಿಂಪಿಕ್ಸ್ ಮತ್ತು 2028 ಲಾಸ್ ಏಂಜಲೀಸ್ ಒಲಿಂಪಿಕ್ಸ್ ಅನ್ನು ಗುರಿಯಾಗಿಸಿಕೊಂಡಿದ್ದೇವೆ. ಟಾಪ್ಸ್ ಯೋಜನೆಯಡಿ ನಾವು ಸಾವಿರಾರು ಆಟಗಾರರಿಗೆ ನೆರವು ನೀಡುತ್ತಿದ್ದೇವೆ. ಕ್ರೀಡಾ ಜಗತ್ತಿನಲ್ಲಿ ಭಾರತವು ಹೊಸ ಶಕ್ತಿಯಾಗಿ ಹೊರಹೊಮುತ್ತಿರುವುದರ ನಡುವೆಯೇ ಭಾರತದ ಆಟಗಾರರೂ ಕ್ರೀಡಾ ಜಗತ್ತಿನಲ್ಲಿ ಹೊಸ ಗುರುತನ್ನು ಸೃಷ್ಟಿಸುತ್ತಿದ್ದಾರೆ. ಅದಕ್ಕಿಂತಲೂ ಮುಖ್ಯವಾಗಿ ದೇಶದ ಸಣ್ಣ ಸಣ್ಣ ನಗರಗಳ ಯುವಕರು ಕ್ರೀಡಾ ಕ್ಷೇತ್ರದಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಮುಂದಾಗುತ್ತಿದ್ದಾರೆ.
ಮಿತ್ರರೇ,
ಪ್ರತಿಭೆಗೆ ಸೂಕ್ತ ಅವಕಾಶಗಳು ಸಿಕ್ಕಾಗ ಯಶಸ್ಸು ತಾನಾಗಿಯೇ ಅದನ್ನು ಪೋಷಿಸುತ್ತದೆ ಮತ್ತು ನಮ್ಮ ದೇಶದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ದೇಶದ ಯುವಕರಲ್ಲಿ ಧೈರ್ಯ, ಸಮರ್ಪಣೆ ಮತ್ತು ಸಾಮರ್ಥ್ಯದ ಕೊರತೆ ಇಲ್ಲ. ಮೊದಲು, ನಮ್ಮ ಯುವಕರು ಸೂಕ್ತ ವೇದಿಕೆಗಾಗಿ ಕಾಯಬೇಕಾಗಿತ್ತು ಆದರೆ ಈಗ ‘ಖೇಲೋ ಇಂಡಿಯಾ’ ಯೋಜನೆಯಡಿಯಲ್ಲಿ, ದೇಶವು ಅವರ ಕೌಶಲ್ಯಗಳನ್ನು ಹುಡುಕುತ್ತಿದೆ ಮತ್ತು ಅದನ್ನು ಪೋಷಿಸುತ್ತಿದೆ. ಖೇಲೋ ಇಂಡಿಯಾ ಯೋಜನೆಯ ಮೂಲಕ ದೂರದ ಗುಡ್ಡಗಾಡು ಪ್ರದೇಶಗಳು, ಗ್ರಾಮಗಳು ಮತ್ತು ಬುಡಕಟ್ಟು ಪ್ರಾಬಲ್ಯವಿರುವ ಪ್ರದೇಶಗಳಿಂದ ಸಾವಿರಾರು ಯುವಕರನ್ನು ಆಯ್ಕೆ ಮಾಡಲಾಗುತ್ತಿದೆ. ನಾನಾ ರಾಜ್ಯಗಳು ಮತ್ತು ಜಿಲ್ಲೆಗಳಲ್ಲಿ ಆಧುನಿಕ ಕ್ರೀಡಾ ಮೂಲಸೌಕರ್ಯಗಳನ್ನು ನಿರ್ಮಿಸಲಾಗುತ್ತಿದೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಇತರೆ ವಿಷಯಗಳಂತೆ ಕ್ರೀಡೆಗೂ ಆದ್ಯತೆ ನೀಡಲಾಗಿದೆ. ಕ್ರೀಡಾ ಕ್ಷೇತ್ರದಲ್ಲಿ ಯುವಕರು ಆಡುವುದರ ಹೊರತಾಗಿ ಹೊಸ ಅವಕಾಶಗಳನ್ನು ಪಡೆಯುತ್ತಿದ್ದಾರೆ. ಕ್ರೀಡಾ ವಿಜ್ಞಾನ, ಕ್ರಿಡಾ ದೈಹಿಕ ಕ್ಷಮತೆ, ಕ್ರೀಡಾ ಸಂಶೋಧನೆ ಮುಂತಾದ ಹೊಸ ಕೋರ್ಸ್ಗಳನ್ನು ಸೇರ್ಪಡೆ ಮಾಡಲಾಗಿದೆ. ದೇಶದಲ್ಲಿ ಹಲವಾರು ಕ್ರೀಡಾ ವಿಶ್ವವಿದ್ಯಾಲಯಗಳನ್ನು ತೆರೆಯಲಾಗುತ್ತಿದ್ದು, ಇದರಿಂದ ನೀವು ವೃತ್ತಿಜೀವನವನ್ನು ಕಟ್ಟಿಕೊಳ್ಳಬಹುದು.
ಮಿತ್ರರೇ,
ಆಟಗಾರನು ಮೈದಾನಕ್ಕೆ ಹೋದಾಗ ಅಥವಾ ಚೆಸ್ ಬೋರ್ಡ್ ಅಥವಾ ಮೇಜಿನ ಮುಂದೆ ಕುಳಿತಾಗ ಆಟಗಾರ ಆತ/ಆಕೆಯ ಸ್ವಂತ ಗೆಲುವಿನ ಬಗ್ಗೆ ಯೋಚಿಸುವುದಿಲ್ಲ, ಬದಲಿಗೆ ದೇಶಕ್ಕಾಗಿ ಆಡುತ್ತಾರೆ. ಕೋಟಿಗಟ್ಟಲೆ ಜನರ ಆಕಾಂಕ್ಷೆಗಳ ಒತ್ತಡ ಆಟಗಾರನ ಮೇಲಿರುವುದು ಸಹಜ. ಆದರೆ ನಿಮ್ಮ ಸಮರ್ಪಣೆ ಮತ್ತು ಪರಿಶ್ರಮವನ್ನು ದೇಶವು ಅರ್ಥಮಾಡಿಕೊಳ್ಳುತ್ತದೆ ಎಂಬುದನ್ನು ನೀವು ನೆನಪಿನಲ್ಲಿಟ್ಟುಕೊಳ್ಳಬೇಕಾಗುತ್ತದೆ. ನಿಮ್ಮ ಶೇ.100ರಷ್ಟು ಪ್ರುಯತ್ನ ಪಡಬೇಕು, ಆದರೆ ಒತ್ತಡವು ಶೇ, 0 ಆಗಿರಬೇಕು - ಅಂದರೆ ಯಾವುದೇ ಬಗೆಯ ಒತ್ತಡದಿಂದ ಮುಕ್ತವಾಗಿರಬೇಕು. ಹೇಗೆ ಗೆಲುವು ಆಟದ ಒಂದು ಭಾಗವೋ, ಅದೇ ರೀತಿ ಗೆಲುವಿಗಾಗಿ ಶ್ರಮಿಸುವುದು ಕೂಡ ಆಟದ ಭಾಗವೇ ಆಗಿರುತ್ತದೆ. ಚೆಸ್ ಆಟದಲ್ಲಿ ಒಂದು ಸಣ್ಣ ತಪ್ಪು ಆಟವನ್ನು ಬದಲಾಯಿಸಬಹುದು. ಆದರೆ ನಿಮ್ಮ ಬುದ್ದಿ ಶಕ್ತಿ (ಮೈಂಡ್ ಗೇಮ್) ಮೂಲಕ ನೀವು ಟೇಬಲ್ ಅನ್ನು ತಿರುಗಿಸುವಂತೆ ಮಾಡಬಹುದು. ಆದ್ದರಿಂದ ಈ ಆಟದಲ್ಲಿ ನೀವು ನಿಮ್ಮ ಮನಸ್ಸನ್ನು ಹೆಚ್ಚು ನಿಯಂತ್ರಣದಲ್ಲಿಟ್ಟುಕೊಳ್ಳುತ್ತೀರಿ ಮತ್ತು ಶಾಂತವಾಗಿರುತ್ತೀರಿ, ನೀವು ಉತ್ತಮವಾಗಿ ಕಾರ್ಯನಿರ್ವಹಿಸುತ್ತೀರಿ. ಹಾಗಾಗಿ ಈ ಆಟದಲ್ಲಿ ಯೋಗ ಮತ್ತು ಧ್ಯಾನವು ನಿಮಗೆ ಸಾಕಷ್ಟು ಸಹಾಯ ಮಾಡುತ್ತದೆ. ನಾಡಿದ್ದು, ಅಂದರೆ ಜೂನ್ 21 ಅಂತರಾಷ್ಟ್ರೀಯ ಯೋಗ ದಿನ. ನೀವು ಯೋಗವನ್ನು ನಿಮ್ಮ ದೈನಂದಿನ ಜೀವನದ ಭಾಗವನ್ನಾಗಿ ಮಾಡಿಕೊಳ್ಳಬೇಕೆಂದು ನಾನು ಬಯಸುತ್ತೇನೆ ಮತ್ತು ಯೋಗ ದಿನದ ಬಗ್ಗೆ ದೊಡ್ಡ ರೀತಿಯಲ್ಲಿ ಪ್ರಚಾರ ಮಾಡಬೇಕೆಂದು ನಾನು ಬಯಸುತ್ತೇನೆ. ಹಾಗೆ ಮಾಡುವುದರಿಂದ ಕೋಟಿ ಕೋಟಿ ಜನರಿಗೆ ದಾರಿ ತೋರಿಸಲು ಸಾಧ್ಯವಾಗುತ್ತದೆ.ನೀವೆಲ್ಲರೂ ಕ್ರೀಡಾಕೂಟದಲ್ಲಿ ಸಮರ್ಪಣಾ ಭಾವದಿಂದ ಭಾಗವಹಿಸಿ ದೇಶದ ಕೀರ್ತಿ ಹೆಚ್ಚಿಸುವಿರಿ ಎಂದು ನಂಬಿದ್ದೇನೆ. ಈ ನೆನಪಿನಲ್ಲಿಯುವಂತಹ ಅವಕಾಶ ನನಗೆ ನೀಡಿದಕ್ಕಾಗಿ ನಾನು ಮತ್ತೊಮ್ಮೆ ತಮಗೆ ಧನ್ಯವಾದ ಸಲ್ಲಿಸಲು ಬಯಸುತ್ತೇನೆ. ಕ್ರೀಡಾ ಜಗತ್ತಿಗೆ ಮತ್ತೊಮ್ಮೆ ನನ್ನ ಹೃತ್ಪೂರ್ವಕ ಶುಭಾಶಯಗಳು! ತುಂಬಾ ತುಂಬಾ ಧನ್ಯವಾದಗಳು!