"ತಲೆಮಾರುಗಳಿಗೆ ಪ್ರೀತಿ ಮತ್ತು ಭಾವನೆಗಳನ್ನು ಉಡುಗೊರೆಯಾಗಿ ನೀಡಿದ ಲತಾ ದೀದಿಯಿಂದ ಸಹೋದರಿಯ ಪ್ರೀತಿಯನ್ನು ಪಡೆಯುವುದಕ್ಕಿಂತಲೂ ಹೆಚ್ಚಿನ ಗೌರವ ಏನಿದೆ"
“ನಾನು ಈ ಪ್ರಶಸ್ತಿಯನ್ನು ಎಲ್ಲಾ ದೇಶವಾಸಿಗಳಿಗೆ ಅರ್ಪಿಸುತ್ತೇನೆ. ಲತಾ ದೀದಿ ಜನರಿಗೆ ಸೇರಿದ್ದಂತೆ, ಅವರ ಹೆಸರಿನಲ್ಲಿ ನನಗೆ ನೀಡಿದ ಈ ಪ್ರಶಸ್ತಿಯೂ ಕೂಡಾ ಜನರಿಗೆ ಸೇರಿದೆ"
"ಸ್ವಾತಂತ್ರ್ಯ ಪೂರ್ವದಲ್ಲಿ ಅವರು ಭಾರತಕ್ಕೆ ಧ್ವನಿ ನೀಡಿದರು ಮತ್ತು ಕಳೆದ 75 ವರ್ಷಗಳ ಕಾಲ ದೇಶದ ಪ್ರಯಾಣವೂ ಕೂಡಾ ಅವರ ಧ್ವನಿಯೊಂದಿಗೆ ಅವಿನಾಭಾವ ಸಂಬಂಧ ಬೆಳೆಸಿಕೊಂಡಿದೆ"
"ಲತಾ ಜೀ ಸಂಗೀತವನ್ನು ಆರಾಧಿಸುತ್ತಿದ್ದರು. ಆದರೆ, ದೇಶಭಕ್ತಿ ಮತ್ತು ರಾಷ್ಟ್ರೀಯ ಸೇವೆಯು ಅವರ ಹಾಡುಗಳ ಮೂಲಕ ಸ್ಫೂರ್ತಿ ಪಡೆದಿವೆ"
"ಲತಾ ಜೀ ಅವರು ನಿಜವಾಗಿಯೂ 'ಏಕ್ ಭಾರತ್ ಶ್ರೇಷ್ಠ್ ಭಾರತ್' ನ ಸುಮಧುರ ಅಭಿವ್ಯಕ್ತಿಯಂತಿದ್ದರು"
“ಲತಾ ಜಿ ಅವರ ಹಾಡುಗಳು ಇಡೀ ದೇಶವನ್ನು ಒಂದುಗೂಡಿಸುವಲ್ಲಿ ಕೆಲಸ ಮಾಡಿತು. ಜಾಗತಿಕವಾಗಿ, ಅವರು ಭಾರತದ ಸಾಂಸ್ಕೃತಿಕ ರಾಯಭಾರಿಯಾಗಿದ್ದರು”

ಶ್ರೀ ಸರಸ್ವತಾಯ ನಮಃ!
ಈ ಪವಿತ್ರ ಸಮಾರಂಭದಲ್ಲಿ ನಮ್ಮೊಂದಿಗೆ ಉಪಸ್ಥಿತರಿರುವ ಮಹಾರಾಷ್ಟ್ರ ರಾಜ್ಯಪಾಲ ಶ್ರೀ ಭಗತ್ ಸಿಂಗ್ ಕೊಶ್ಯಾರಿ ಜಿ, ಮಹಾರಾಷ್ಟ್ರ ವಿಧಾನಸಭೆ ವಿಪಕ್ಷ ನಾಯಕ ಶ್ರೀ ದೇವೇಂದ್ರ ಫಡ್ನವೀಸ್ ಜಿ, ಮಹಾರಾಷ್ಟ್ರ ಸರ್ಕಾರದ ಸಚಿವ ಶ್ರೀ ಸುಭಾಷ್ ದೇಸಾಯಿ ಜಿ, ಗೌರವಾನ್ವಿತ ಉಷಾ ಜಿ, ಆಶಾ ಜಿ, ಆದಿನಾಥ್ ಮಂಗೇಶ್ಕರ್ ಜಿ, ಮಾಸ್ಟರ್ ದೀನನಾಥ್ ಸ್ಮೃತಿ ಪ್ರತಿಷ್ಠಾನದ ಎಲ್ಲಾ ಸದಸ್ಯರು, ಸಂಗೀತ ಮತ್ತು ಕಲಾ ಜಗತ್ತಿನ ಎಲ್ಲಾ ಪ್ರತಿಷ್ಠಿತ ಸಹೋದ್ಯೋಗಿಗಳು, ಅನೇಕ ಗಣ್ಯರು, ಮಹಿಳೆಯರು ಮತ್ತು ಸಜ್ಜನರೆ!

ಗೌರವಾನ್ವಿತ ಹೃದಯನಾಥ್ ಮಂಗೇಶ್ಕರ್ ಜಿ ಅವರು ಸಹ ಈ ಮಹತ್ವದ ಕಾರ್ಯಕ್ರಮಕ್ಕೆ ಬರಬೇಕಿತ್ತು. ಆದರೆ ಆದಿನಾಥ ಜೀ ಹೇಳಿದಂತೆ, ಅನಾರೋಗ್ಯದ ಕಾರಣ ಇಲ್ಲಿಗೆ ಬರಲಾಗಿಲ್ಲ. ಅವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ.

ಸ್ನೇಹಿತರೆ,
ನಾನು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಹೆಚ್ಚು ಯೋಗ್ಯವಾಗಿ ಕಾಣುತ್ತಿಲ್ಲ, ಏಕೆಂದರೆ ನಾನು ಸಂಗೀತದಂತಹ ಆಳವಾದ ವಿಷಯದ ಬಗ್ಗೆ ಹೆಚ್ಚು ಪರಿಣತಿ ಹೊಂದಿಲ್ಲ. ಆದರೆ ಸಾಂಸ್ಕೃತಿಕ ಮೆಚ್ಚುಗೆಯ ದೃಷ್ಟಿಕೋನದಿಂದ, ಸಂಗೀತವು 'ಸಾಧನ' (ಭಕ್ತಿ) ಮತ್ತು 'ಭಾವನಾ' ಎರಡೂ ಆಗಿದೆ ಎಂದು ನಾನು ಭಾವಿಸುತ್ತೇನೆ. ಇವೆರಡು ಪದಗಳು ವಿವರಿಸಲಾಗದ ಅಭಿವ್ಯಕ್ತಿಗೆ ಶಕ್ತಿ ಮತ್ತು ಪ್ರಜ್ಞೆಯನ್ನು ತುಂಬುತ್ತವೆ. 'ನಾದ' (ಧ್ವನಿ) ಮತ್ತು ಪ್ರಜ್ಞೆಯನ್ನು ಭಾವನೆಗಳಿಂದ ತುಂಬಿಸಿ ಅದನ್ನು ಸೃಷ್ಟಿ ಮತ್ತು ಸೂಕ್ಷ್ಮತೆಯ ತೀವ್ರತೆಗೆ ಕೊಂಡೊಯ್ಯುವುದೇ 'ಸಂಗೀತ'. ನೀವು ಚಲನೆಯಿಲ್ಲದಂತೆ ಒಂದೆಡೆ ಕುಳಿತಿರಬಹುದು, ಆದರೆ ಸಂಗೀತವು ನಿಮ್ಮ ಕಣ್ಣುಗಳಿಂದ ಅಶ್ರು ಹರಿಯುವಂತೆ ಮಾಡುತ್ತದೆ. ಸಂಗೀತಕ್ಕಿರುವ ಶಕ್ತಿಯೇ ಅಂಥದ್ದು. ಅದು ಅಗಾಧ. ಸಂಗೀತವು ನಿಮಗೆ ನಿರ್ಲಿಪ್ತತೆಯ ಭಾವವನ್ನು ಸಹ ನೀಡುತ್ತದೆ. ಸಂಗೀತವು ನಿಮ್ಮಲ್ಲಿ ಅಮೂಲ್ಯವಾದ ಮತ್ತು ಮಾತೃ ವಾತ್ಸಲ್ಯವನ್ನು ತುಂಬುತ್ತದೆ. ಇದು ದೇಶಭಕ್ತಿ ಮತ್ತು ಕರ್ತವ್ಯ ಪ್ರಜ್ಞೆಯ ಉತ್ತುಂಗಕ್ಕೆ ಕೊಂಡೊಯ್ಯಬಹುದು. ಸಂಗೀತದ ಈ ಸಾಮರ್ಥ್ಯ ಮತ್ತು ಶಕ್ತಿಯನ್ನು ಲತಾ ದೀದಿಯ ರೂಪದಲ್ಲಿ ನೋಡುವ ಅದೃಷ್ಟ ನಮ್ಮೆಲ್ಲರದಾಯಿತು. ಆಕೆಯನ್ನು ಕಣ್ಣಾರೆ ನೋಡುವ ಸೌಭಾಗ್ಯ ನಮಗೆ ಸಿಕ್ಕಿತು. ಹಲವು ತಲೆಮಾರುಗಳಿಂದ ಮಂಗೇಶ್ಕರ್ ಕುಟುಂಬ ಈ ಯಜ್ಞದಲ್ಲಿ ತ್ಯಾಗ ಮಾಡುತ್ತಿದೆ. ನನ್ನ ಪಾಲಿಗೆ  ಈ ಅದ್ಭುತ ಅನುಭವ ಇನ್ನೂ ಹೆಚ್ಚಿನದಾಗಿದೆ.

ಹರೀಶ್ ಜಿ ಅವರು ಲತಾ ಬಗ್ಗೆ ಕೆಲವು ವಿವರಣೆಗಳನ್ನು ನೀಡಿದರು, ಆದರೆ ದೀದಿ ಅವರೊಂದಿಗಿನ ನನ್ನ ಸಂಬಂಧ ಎಷ್ಟು ಹಳೆಯದು ಎಂದು ನಾನು ಆಶ್ಚರ್ಯ ಪಡುತ್ತಿದ್ದೆ. ನಾಲ್ಕೂವರೆ ದಶಕಗಳ ಹಿಂದೆ ಸುಧೀರ್ ಫಡಕೆ ಅವರು ನನಗೆ ಪರಿಚಯವಾದರು. ಅಂದಿನಿಂದ, ಈ ಕುಟುಂಬದೊಂದಿಗೆ ಅಪಾರ ಪ್ರೀತಿ ಮತ್ತು ಅಸಂಖ್ಯಾತ ಘಟನೆಗಳು ನನ್ನ ಜೀವನದ ಒಂದು ಭಾಗವಾಯಿತು. ನನಗೆ ಲತಾ ದೀದಿ ಮಧುರ ರಾಣಿ ಹಾಗೂ ನನ್ನ ಹಿರಿಯ ಅಕ್ಕ. ಅದೆಷ್ಟೋ ತಲೆಮಾರುಗಳಿಗೆ ಪ್ರೀತಿ, ಭಾವದ ಕಾಣಿಕೆ ನೀಡಿದ ಲತಾ ದೀದಿಯಿಂದ ಹಿರಿಯ ಅಕ್ಕನ ಪ್ರೀತಿ, ವಾತ್ಸಲ್ಯ ಸಿಕ್ಕಿರುವುದಕ್ಕಿಂತ ದೊಡ್ಡ ಸೌಭಾಗ್ಯ ಇನ್ನೇನಿದೆ? ಹಲವು ದಶಕಗಳ ನಂತರ ಈ ಬಾರಿಯ ರಾಖಿ ಹಬ್ಬದಂದು ದೀದಿ ಇರುವುದಿಲ್ಲ. ಸಾಮಾನ್ಯವಾಗಿ, ನಾನು ತುಂಬಾ ಆರಾಮದಾಯಕವಿಲ್ಲದ ಕಾರಣ ನನ್ನ ಗೌರವಾರ್ಥವಾಗಿ ನಡೆಯುವ ಕಾರ್ಯಕ್ರಮಗಳಿಂದ ದೂರವಿರುವುದನ್ನು ನಾನು ಆಯ್ಕೆ ಮಾಡಿಕೊಳ್ಳುತ್ತೇನೆ. ಆದರೆ ಲತಾ ದೀದಿಯಂತಹ ಅಕ್ಕನ ಹೆಸರಿನಲ್ಲಿ ಪ್ರಶಸ್ತಿ ಬಂದಾಗ, ನನ್ನೊಂದಿಗಿನ ಅವರ ಬಾಂಧವ್ಯ ಮತ್ತು ಮಂಗೇಶ್ಕರ್ ಕುಟುಂಬಕ್ಕೆ ನನ್ನ ಮೇಲೆ ಹೊಂದಿರುವ ಹಕ್ಕುಗಳಿಂದಾಗಿ ನಾನು ಇಲ್ಲಿಗೆ ಬರುವುದು ಒಂದು ರೀತಿಯಲ್ಲಿ ಬಾಧ್ಯತೆಯಾಗುತ್ತದೆ. ನನ್ನ ಕಾರ್ಯಕ್ರಮಗಳ ಬಗ್ಗೆ ಮತ್ತು ನಾನು ಎಷ್ಟು ಕಾರ್ಯನಿರತನಾಗಿರುತ್ತೇನೆ  ಎಂದು ಕೇಳುವ ಸಂದೇಶವನ್ನು ಆದಿನಾಥ್ ಜಿ ಅವರಿಂದ ಆಲಿಸಿದಾಗ ಇದು ನಿಜಕ್ಕೂ ಪ್ರೀತಿಯ ಸಂಕೇತವಾಗಿದೆ. ಅವರು ಕಾರ್ಯಕ್ರಮಕ್ಕೆ ಕರೆದಾಗ ಮರುಮಾತನಾಡದೆ ಒಪ್ಪಿಕೊಂಡೆ. ಏಕೆಂದರೆ ನನಗೆ ನಿರಾಕರಿಸಲು ಸಾಧ್ಯವೇ ಇಲ್ಲ. ನಾನು ಈ ಗೌರವಾನ್ವಿತ ಪ್ರಶಸ್ತಿಯನ್ನು ದೇಶದ ಎಲ್ಲ ಜನತೆಗೆ ಅರ್ಪಿಸುತ್ತೇನೆ. ಲತಾ ದೀದಿ ಅವರು ಜನರಿಗೆ ಹೇಗೆ ಸೇರಿದ್ದರೋ, ಅದೇ ರೀತಿ ಅವರ ಹೆಸರಿನಲ್ಲಿ ನನಗೆ ನೀಡಿದ ಈ ಪ್ರಶಸ್ತಿಯೂ ಜನರಿಗೆ ಸೇರಿದ್ದು. ನಾನು ಲತಾ ದೀದಿ ಅವರೊಂದಿಗೆ ಆಗಾಗ್ಗೆ ಸಂಭಾಷಣೆ ನಡೆಸುತ್ತಿದ್ದೆ. ಅವರು ತಮ್ಮ ಸಂದೇಶ ಮತ್ತು ಆಶೀರ್ವಾದಗಳನ್ನು ನನಗೆ ಕಳುಹಿಸುತ್ತಿದ್ದರು. ಬಹುಶಃ ಅವರು ಹೇಳುತ್ತಿದ್ದ ಒಂದು ವಿಷಯ, ನಾನು ಮರೆಯಲು ಸಾಧ್ಯವೇ ಇಲ್ಲ, ಅದು ನಮಗೆಲ್ಲರಿಗೂ ಉಪಯುಕ್ತವಾಗಬಹುದು. ನಾನು ಅವರನ್ನು ತುಂಬಾ ಗೌರವಿಸುತ್ತಿದ್ದೆ. ಅವರು ಯಾವಾಗಲೂ ಹೇಳುತ್ತಿದ್ದರು - “ಒಬ್ಬ ವ್ಯಕ್ತಿ ಅವನ ವಯಸ್ಸಿನಿಂದ ಶ್ರೇಷ್ಠನಾಗುವುದಿಲ್ಲ, ಆದರೆ ಅವನ ಕೆಲಸದಿಂದ. ದೇಶಕ್ಕಾಗಿ ಎಷ್ಟು ಕೆಲಸ ಮಾಡುತ್ತಾನೋ ಅಷ್ಟು ದೊಡ್ಡವನಾಗುತ್ತಾನೆ”. ಯಶಸ್ಸಿನ ಉತ್ತುಂಗದಲ್ಲಿರುವ ಮತ್ತು ಅಂತಹ ಆಲೋಚನೆಗಳನ್ನು ಹೊಂದಿರುವ ವ್ಯಕ್ತಿಯ ಶ್ರೇಷ್ಠತೆಯನ್ನು ನಾವು ಅರಿತುಕೊಳ್ಳುತ್ತೇವೆ. ಲತಾ ದೀದಿ ವಯಸ್ಸಿನ ಜತೆಗೆ ತಮ್ಮ ಅದ್ಬುತ ಕಾರ್ಯಗಳಿಂದ ಪ್ರಬುದ್ಧರಾಗಿದ್ದರು.

ಲತಾ ದೀದಿ ಅವರು ಸರಳತೆಯ ಪ್ರತಿರೂಪ ಎಂದು ನಾವು ಅವರೊಂದಿಗೆ ಕಳೆದ ಸಮಯದಿಂದ ನಮಗೆ ತಿಳಿದಿದೆ. ಲತಾ ದೀದಿ ಸಂಗೀತದಲ್ಲಿ ಆ ಸ್ಥಾನ ಸಾಧಿಸಿದರು, ಜನರು ಅವರನ್ನು ಸರಸ್ವತಿ ಮಾತೆಯ ಸಂಕೇತವೆಂದು ಪರಿಗಣಿಸಿದರು. ಅವರ ಧ್ವನಿ ಸುಮಾರು 80 ವರ್ಷಗಳ ಕಾಲ ಸಂಗೀತ ಜಗತ್ತಿನಲ್ಲಿ ತನ್ನ ಛಾಪು ಮೂಡಿಸಿದೆ. ಗ್ರಾಮ ಫೋನ್‌ಗಳಿಂದ ಹಿಡಿದು, ಕ್ಯಾಸೆಟ್‌ಗಳು, ಸಿಡಿಗಳು, ಡಿವಿಡಿಗಳು, ಪೆನ್ ಡ್ರೈವ್‌ಗಳು, ಆನ್‌ಲೈನ್ ಸಂಗೀತ ಮತ್ತು ಅಪ್ಲಿಕೇಶನ್‌(ಆಪ್)ವರೆಗೆ ಲತಾ ಜಿ ಅವರೊಂದಿಗೆ ಸಂಗೀತ ಜಗತ್ತು ಎಷ್ಟು ಉತ್ತಮ ಪ್ರಯಾಣ ಮಾಡಿದೆ. ಅವರು 4-5 ತಲೆಮಾರುಗಳ ಚಿತ್ರರಂಗಕ್ಕೆ ತಮ್ಮ ಮಧುರ ಕಂಠ ನೀಡಿದರು. ಅವರಿಗೆ ದೇಶದ ಅತ್ಯುನ್ನತ ಗೌರವ 'ಭಾರತ ರತ್ನ' ನೀಡಿ ದೇಶವೇ ಹೆಮ್ಮೆ ಪಡುವಂತೆ ಮಾಡಿತು. ಇಡೀ ಜಗತ್ತು ಅವರನ್ನು ಮಧುರ ರಾಣಿ, ಸಮಧುರ ಗಾಯಕಿ ಎಂದು ಪರಿಗಣಿಸಿತು. ಆದರೆ ಅವರು ಹಣಕ್ಕೆ ಗಮನವನ್ನೇ ನೀಡಲಿಲ್ಲ. ಆದರೆ 'ಸಾಧಿಕಾ' ಎಂದು ಪರಿಗಣಿಸಿದರು. ಮತ್ತು ಅವರು ಯಾವುದೇ ಹಾಡಿನ ರೆಕಾರ್ಡಿಂಗ್‌ಗೆ ಹೋದಾಗ ಚಪ್ಪಲಿ ಹೊರಬಿಟ್ಟು ಗಾಯನ ಆರಂಭಿಸುತ್ತಿದ್ದರು ಎಂದು ನಾವು ಅನೇಕರಿಂದ ಕೇಳಿದ್ದೇವೆ. ಸಂಗೀತದ ಅಭ್ಯಾಸ ಮತ್ತು ದೇವರ ಪೂಜೆ ಅವರಿಗೆ ಒಂದೇ ಆಗಿತ್ತು.
ಸ್ನೇಹಿತರೆ,
ಆದಿಶಂಕರರ ಅದ್ವೈತ ಸಿದ್ಧಾಂತವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದರೆ, ಕೆಲವೊಮ್ಮೆ ನಾವು ಗೊಂದಲಕ್ಕೆ ಒಳಗಾಗುತ್ತೇವೆ. ಆದರೆ ನಾನು ಆದಿಶಂಕರರ ಅದ್ವೈತ ತತ್ವದ ಬಗ್ಗೆ ಯೋಚಿಸಲು ಪ್ರಯತ್ನಿಸಿದಾಗ ಮತ್ತು ನಾನು ಅದನ್ನು ಸರಳ ಪದಗಳಲ್ಲಿ ಹೇಳಬೇಕಾದರೆ, ಸಂಗೀತವಿಲ್ಲದೆ ಆ ಅದ್ವೈತ ತತ್ವಕ್ಕೆ ಭಗವಂತನ ಉಚ್ಚಾರಣೆಯು ಅಪೂರ್ಣವಾಗಿದೆ. ಸಂಗೀತವು ದೇವರೊಂದಿಗೆ ಸಂಯೋಜಿಸಲ್ಪಟ್ಟಿದೆ. ಎಲ್ಲಿ ಸಂಗೀತವಿದೆಯೋ ಅಲ್ಲಿ ಪರಿಪೂರ್ಣತೆ ಇರುತ್ತದೆ. ಸಂಗೀತವು ನಮ್ಮ ಹೃದಯ ಮತ್ತು ನಮ್ಮ ಆತ್ಮಸಾಕ್ಷಿಯ ಮೇಲೆ ಪ್ರಭಾವ ಬೀರುತ್ತದೆ. ಅದರ ಮೂಲವು ಲತಾ ಜಿ ಅವರಂತೆಯೇ ಶುದ್ಧವಾಗಿದ್ದರೆ, ಆ ಸಂಗೀತದಲ್ಲಿ ಆ ಶುದ್ಧತೆ ಮತ್ತು ಭಾವವು ಕರಗುತ್ತದೆ. ಆಕೆಯ ವ್ಯಕ್ತಿತ್ವದ ಈ ಅಂಶವು ನಮಗೆಲ್ಲರಿಗೂ ಮತ್ತು ವಿಶೇಷವಾಗಿ ಯುವ ಪೀಳಿಗೆಗೆ ಸ್ಫೂರ್ತಿಯಾಗಿದೆ.

ಸ್ನೇಹಿತರೆ,
ನಮ್ಮ ದೇಶವು ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಿಸುತ್ತಿರುವ ಸುಸಮಯದಲ್ಲಿ ಲತಾ ಜಿ ಅವರ ಭೌತಿಕ ಪ್ರಯಾಣವು ಪೂರ್ಣಗೊಂಡಿತು. ಅವರು ದೇಶಕ್ಕೆ ಸ್ವಾತಂತ್ರ್ಯ ಸಿಗುವ ಮೊದಲೇ ಭಾರತಕ್ಕೆ ಧ್ವನಿ ನೀಡಿದರು. ಈ 75 ವರ್ಷಗಳ ದೇಶದ ಪ್ರಯಾಣವೂ ಅವರ ಧ್ವನಿಯೊಂದಿಗೆ ಸಂಬಂಧ ಹೊಂದಿದೆ. ಲತಾ ಅವರ ತಂದೆ ದೀನನಾಥ್ ಮಂಗೇಶ್ಕರ್ ಅವರ ಹೆಸರು ಈ ಪ್ರಶಸ್ತಿಗೆ ಸಂಬಂಧಿಸಿದೆ. ದೇಶಕ್ಕೆ ನೀಡಿದ ಕೊಡುಗೆಗಾಗಿ ಎಲ್ಲಾ ದೇಶವಾಸಿಗಳು ಮಂಗೇಶ್ಕರ್ ಕುಟುಂಬಕ್ಕೆ ಋಣಿಯಾಗಿದ್ದಾರೆ. ಸಂಗೀತದ ಜತೆಗೆ ಲತಾ ದೀದಿ ಅವರಲ್ಲಿದ್ದ ದೇಶಭಕ್ತಿಯ ಪ್ರಜ್ಞೆ, ಅದಕ್ಕೆ ಅವರ ತಂದೆಯೇ ಮೂಲ. ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿ ಶಿಮ್ಲಾದಲ್ಲಿ ನಡೆದ ಬ್ರಿಟಿಷ್ ವೈಸ್ ರಾಯ್ ಗೌರವಾರ್ಥ ನಡೆದ ಕಾರ್ಯಕ್ರಮದಲ್ಲಿ ವೀರ್ ಸಾವರ್ಕರ್ ಬರೆದ ಹಾಡನ್ನು ದೀನನಾಥ್ ಜಿ ಹಾಡಿದರು. ದೀನನಾಥ್ ಜಿ ಮಾತ್ರ ಇದನ್ನು ಸಂಗೀತದ ಮೂಲಕ ಬ್ರಿಟಿಷ್ ವೈಸರಾಯ್ ಮುಂದೆ ಮಾಡಬಲ್ಲರು. ವೀರ್ ಸಾವರ್ಕರ್ ಜಿ ಅವರು ಬ್ರಿಟಿಷ್ ಆಳ್ವಿಕೆಗೆ ಸವಾಲು ಹಾಕುವ ಹಾಡು ಬರೆದಿದ್ದಾರೆ. ಈ ಧೈರ್ಯ, ದೇಶಭಕ್ತಿಯ ಭಾವವನ್ನು ದೀನನಾಥ್ ಜಿ ಅವರ ಕುಟುಂಬಕ್ಕೆ ನೀಡಿದರು. ಲತಾ ಜೀ ಅವರು ಸಾಮಾಜಿಕ ಸೇವೆಯ ಕ್ಷೇತ್ರಕ್ಕೆ ಹೋಗಬೇಕೆಂದು ಒಮ್ಮೆ ಹೇಳಿದ್ದರು. ಲತಾ ಜೀ ಸಂಗೀತವನ್ನೇ ತನ್ನ ಆರಾಧನೆಯನ್ನಾಗಿ ಮಾಡಿಕೊಂಡರು, ಆದರೆ ದೇಶಭಕ್ತಿ ಮತ್ತು ರಾಷ್ಟ್ರೀಯ ಸೇವೆಗೆ ಅವರ ಹಾಡುಗಳ ಮೂಲಕ ಸ್ಫೂರ್ತಿ ಪಡೆದರು. ಛತ್ರಪತಿ ಶಿವಾಜಿ ಮಹಾರಾಜರ ಮೇಲೆ ವೀರ್ ಸಾವರ್ಕರ್ ಜಿ ಬರೆದ 'ಹಿಂದೂ ನರಸಿಂಹ' ಗೀತೆಯನ್ನು ಲತಾ ಜೀ ಅವರು ಅಮರಗೊಳಿಸಿದರು, ಶಿವಕಲ್ಯಾಣ ರಾಜ ಅವರ ಆಲ್ಬಮ್ ಅನ್ನು ರೆಕಾರ್ಡ್ ಮಾಡುವ ಮೂಲಕ ಸಮರ್ಥ ಗುರು ರಾಮದಾಸ್ ಜಿ ಅವರ ಕವಿತೆಗಳನ್ನು ಅಮರಗೊಳಿಸಿದರು. "ಏ ಮೇರೆ ವತನ್ ಕೆ ಲೋಗೋ" ಮತ್ತು "ಜೈ ಹಿಂದ್ ಕಿ ಸೇನಾ" ಭಾವನಾತ್ಮಕ ಗೀತೆಗಳು ಅಮರವಾಗಿವೆ, ದೇಶದ ಜನರ ಬಾಯ್ತುದಿಯಲ್ಲಿವೆ. ಅವರ ಜೀವನಕ್ಕೆ ಸಂಬಂಧಿಸಿದ ಹಲವು ಅಂಶಗಳಿವೆ! ಅಮೃತ ಮಹೋತ್ಸವದ ಸಂದರ್ಭದಲ್ಲಿ ಲತಾ ದೀದಿ ಮತ್ತು ಅವರ ಕುಟುಂಬದ ಕೊಡುಗೆಯನ್ನು ಜನರ ಬಳಿಗೆ ಕೊಂಡೊಯ್ಯುವುದು ನಮ್ಮ ಕರ್ತವ್ಯ.

ಸ್ನೇಹಿತರೆ,
ಇಂದು ದೇಶವು ‘ಏಕ ಭಾರತ, ಶ್ರೇಷ್ಠ ಭಾರತ’ ಎಂಬ ನಂಬಿಕೆಯೊಂದಿಗೆ ಮುನ್ನಡೆಯುತ್ತಿದೆ. ಲತಾ ಜೀ ಅವರು 'ಏಕ್ ಭಾರತ್, ಶ್ರೇಷ್ಠ ಭಾರತ'ದ ಸುಮಧುರ ಅಭಿವ್ಯಕ್ತಿಯಂತಿದ್ದರು. ಅವರು ದೇಶದ 30ಕ್ಕಿಂತ ಹೆಚ್ಚಿನ ಭಾಷೆಗಳಲ್ಲಿ ಸಾವಿರಾರು ಹಾಡುಗಳನ್ನು ಹಾಡಿದ್ದಾರೆ. ಹಿಂದಿ, ಮರಾಠಿ, ಸಂಸ್ಕೃತ ಅಥವಾ ಯಾವುದೇ ಭಾರತೀಯ ಭಾಷೆಯಾಗಿರಲಿ, ಪ್ರತಿಯೊಂದು ಭಾಷೆಯಲ್ಲೂ ಲತಾಜಿ ಅವರ ಧ್ವನಿ ಸಮಧುರವಾಗಿರುತ್ತದೆ. ಪ್ರತಿ ರಾಜ್ಯದ, ಪ್ರತಿ ಪ್ರದೇಶದ ಜನರ ಮನಸ್ಸಿನಲ್ಲಿ ನೆಲೆಯೂರಿದ್ದಾರೆ ಲತಾ ಜಿ. ಭಾರತೀಯತೆಯೊಂದಿಗೆ ಸಂಗೀತವು ಹೇಗೆ ಅಮರವಾಗಬಹುದು ಎಂಬುದನ್ನು ಅವರು ಸಾಧಿಸಿ ತೋರಿದ್ದಾರೆ. ಭಗವದ್ಗೀತೆ ಮತ್ತು ತುಳಸಿ, ಮೀರಾ, ಸಂತ ಜ್ಞಾನೇಶ್ವರ್ ಮತ್ತು ನರಸಿ ಮೆಹ್ತಾ ಅವರ ಹಾಡುಗಳನ್ನು ಪಠಿಸಿದ್ದಾರೆ. ಲತಾ ಜಿ ಅವರ ಕಠವು ರಾಮಚರಿತ ಮಾನಸ್‌ನ 'ಚೌಪದಿ' (ಕ್ವಾಟ್ರೇನ್‌ಗಳು)ಯಿಂದ ಹಿಡಿದು ಬಾಪು ಅವರ ನೆಚ್ಚಿನ ಸ್ತೋತ್ರ 'ವೈಷ್ಣವ್ ಜನ ತೋ ತೆನೆ ಕಹಿಯೇ' ವರೆಗೆ ಎಲ್ಲವನ್ನೂ ಪುನರುಜ್ಜೀವಗೊಳಿಸಿದೆ. ಅವರು ತಿರುಪತಿ ದೇವಸ್ಥಾನಕ್ಕಾಗಿ ಹಾಡಿರುವ ಹಾಡುಗಳು ಮತ್ತು ಪಠಣಗಳ ಸರಣಿಯನ್ನು ರೆಕಾರ್ಡ್ ಮಾಡಿದ್ದಾರೆ. ಅದನ್ನು ಪ್ರತಿದಿನ ಬೆಳಗ್ಗೆ ಅಲ್ಲಿ ಬಿತ್ತರಿಸಲಾಗುತ್ತದೆ. ಅಂದರೆ, ಸಂಸ್ಕೃತಿಯಿಂದ ನಂಬಿಕೆಗೆ, ಪೂರ್ವದಿಂದ ಪಶ್ಚಿಮಕ್ಕೆ, ಉತ್ತರದಿಂದ ದಕ್ಷಿಣಕ್ಕೆ, ಲತಾ ಜಿ ಅವರ ಸಂಗೀತ ಸಾಧನೆ ಇಡೀ ದೇಶವನ್ನು ಒಂದುಗೂಡಿಸುವ ಕೆಲಸ ಮಾಡಿದೆ. ಜಾಗತಿಕವಾಗಿಯೂ ಅವರು ಭಾರತದ ಸಾಂಸ್ಕೃತಿಕ ರಾಯಭಾರಿಯಾಗಿದ್ದರು. ಆಕೆಯ ವೈಯಕ್ತಿಕ ಜೀವನವೂ ಹಾಗೆಯೇ ಇತ್ತು. ಅವರು ತಮ್ಮ ಸಂಪಾದನೆ ಮತ್ತು ತನ್ನ ಸ್ನೇಹಿತರ ಸಹಾಯದಿಂದ ಪುಣೆಯಲ್ಲಿ ಮಾಸ್ಟರ್ ದೀನನಾಥ್ ಮಂಗೇಶ್ಕರ್ ಆಸ್ಪತ್ರೆ ನಿರ್ಮಿಸಿದರು. ಅದು ಈಗಲೂ ಬಡವರ ಸೇವೆ ಮಾಡುತ್ತಿದೆ. ಪುಣೆಯ ಮಂಗೇಶ್ಕರ್ ಆಸ್ಪತ್ರೆಯು ಕೊರೊನಾ ಅವಧಿಯಲ್ಲಿ ಬಡವರಿಗಾಗಿ ಹೆಚ್ಚು ಕೆಲಸ ಮಾಡಿದ ದೇಶದ ಆಯ್ದ ಆಸ್ಪತ್ರೆಗಳಲ್ಲಿ ಒಂದು ಎಂಬುದು ಅನೇಕರಿಗೆ ತಿಳಿದಿಲ್ಲ.

ಸ್ನೇಹಿತರೆ,
ಇಂದು, ದೇಶವು ತನ್ನ ಇತಿಹಾಸವನ್ನು ಮೆಲುಕು ಹಾಕುತ್ತಿದೆ, ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಮಯದಲ್ಲಿ ಭವಿಷ್ಯಕ್ಕಾಗಿ ಹೊಸ ಸಂಕಲ್ಪಗಳನ್ನು ಮಾಡುತ್ತಿದೆ. ನಾವು ವಿಶ್ವದ ಅತಿದೊಡ್ಡ ನವೋದ್ಯಮ ಪರಿಸರ ವ್ಯವಸ್ಥೆಗಳಲ್ಲಿ ಒಂದಾಗಿದ್ದೇವೆ. ಇಂದು ಭಾರತವು ಪ್ರತಿಯೊಂದು ಕ್ಷೇತ್ರದಲ್ಲೂ ಸ್ವಾವಲಂಬಿಯಾಗುವತ್ತ ಸಾಗುತ್ತಿದೆ; ಈ ಅಭಿವೃದ್ಧಿಯ ಪಯಣ ನಮ್ಮ ನಿರ್ಣಯಗಳ ಭಾಗವಾಗಿದೆ. ಆದರೆ ಭಾರತದ ಅಭಿವೃದ್ಧಿಯ ಮೂಲಭೂತ ದೃಷ್ಟಿ ಯಾವಾಗಲೂ ವಿಭಿನ್ನವಾಗಿದೆ. ನಮಗೆ ಅಭಿವೃದ್ಧಿ ಎಂದರೆ- 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಮತ್ತು ಸಬ್ ಕಾ ಪ್ರಯಾಸ್'. 'ವಸುಧೈವ ಕುಟುಂಬಕಂ' (ಎಲ್ಲರ ಕಲ್ಯಾಣ) ತತ್ವವು ಎಲ್ಲರ ಅಭಿವೃದ್ಧಿಯ ಈ ಉತ್ಸಾಹದಲ್ಲಿ ಸೇರಿದೆ. ಕೇವಲ ಭೌತಿಕ ಸಾಮರ್ಥ್ಯಗಳಿಂದಲೇ ಇಡೀ ವಿಶ್ವದ ಅಭಿವೃದ್ಧಿ ಮತ್ತು ಇಡೀ ಮನುಕುಲದ ಕಲ್ಯಾಣ ಸಾಧಿಸಲಾಗುವುದಿಲ್ಲ. ಇದಕ್ಕಾಗಿ ಮಾನವೀಯ ಮೌಲ್ಯಗಳು ಬಹಳ ಮುಖ್ಯ! ಇದಕ್ಕಾಗಿ, ಆಧ್ಯಾತ್ಮಿಕ ಪ್ರಜ್ಞೆಯು ವಿಮರ್ಶಾತ್ಮಕವಾಗಿ ಮುಖ್ಯವಾಗಿದೆ. ಅದಕ್ಕಾಗಿಯೇ ಯೋಗ, ಆಯುರ್ವೇದ ಮತ್ತು ಪರಿಸರದಂತಹ ಕ್ಷೇತ್ರಗಳಲ್ಲಿ ಭಾರತವು ನಾಯಕತ್ವ ಪಾತ್ರ ವಹಿಸುತ್ತಿದೆ.

ನಮ್ಮ ಭಾರತೀಯ ಸಂಗೀತವೂ ಈ ಕೊಡುಗೆಯ ಪ್ರಮುಖ ಭಾಗವಾಗಿದೆ ಎಂದು ನಾನು ನಂಬುತ್ತೇನೆ. ಈ ಜವಾಬ್ದಾರಿ ನಿಮ್ಮ ಕೈಯಲ್ಲಿದೆ. ಈ ಪರಂಪರೆಯನ್ನು ಅದೇ ಮೌಲ್ಯಗಳೊಂದಿಗೆ ಜೀವಂತವಾಗಿ ಉಳಿಸಿ, ಅದನ್ನು ಮುಂದುವರಿಸಿ ಮತ್ತು ವಿಶ್ವ ಶಾಂತಿಯ ಮಾಧ್ಯಮವನ್ನಾಗಿ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಸಂಗೀತ ಲೋಕಕ್ಕೆ ಸಂಬಂಧಿಸಿದ ಎಲ್ಲಾ ಪಾಲುದಾರರು ಈ ಜವಾಬ್ದಾರಿಯನ್ನು ನಿರ್ವಹಿಸುತ್ತಾರೆ ಮತ್ತು ನವಭಾರತ ನಿರ್ಮಿಸಲು ನಿರ್ದೇಶನ ನೀಡುತ್ತಾರೆ ಎಂದು ನನಗೆ ಖಾತ್ರಿಯಿದೆ. ಈ ನಂಬಿಕೆಯೊಂದಿಗೆ, ನಾನು ನನ್ನ ಹೃದಯದಿಂದ ನಿಮ್ಮೆಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ. ದೀದಿ ಹೆಸರಿನ ಚೊಚ್ಚಲ ಪ್ರಶಸ್ತಿಗೆ ನನ್ನನ್ನು ಆಯ್ಕೆ ಮಾಡಿದ್ದಕ್ಕಾಗಿ ಮಂಗೇಶ್ಕರ್ ಕುಟುಂಬಕ್ಕೆ ನಾನು ಧನ್ಯವಾದ ಹೇಳುತ್ತೇನೆ. ಆದರೆ ಹರೀಶ್ ಜೀ ಅವರು ಸ್ವೀಕೃತಿ ಪತ್ರ ಓದುವಾಗ, ನಾನು ಇನ್ನೂ ಎಷ್ಟು ಸಾಧಿಸಬೇಕು, ನನ್ನಲ್ಲಿ ಅದೆಷ್ಟು ನ್ಯೂನತೆಗಳಿವೆ ಮತ್ತು ಅದನ್ನು ಹೇಗೆ ನಿವಾರಿಸುವುದು ಎಂದು ಟಿಪ್ಪಣಿ ಮಾಡಲು ನಾನು ಅದನ್ನು ಹಲವಾರು ಬಾರಿ ಓದಬೇಕು ಎಂದು ಯೋಚಿಸಿದೆ. ದೀದಿ ಅವರ ಆಶೀರ್ವಾದ ಮತ್ತು ಮಂಗೇಶ್ಕರ್ ಕುಟುಂಬದ ಪ್ರೀತಿಯಿಂದ, ನನ್ನ ನ್ಯೂನತೆಗಳನ್ನು ಸ್ವೀಕೃತಿ ಪತ್ರದ ಮೂಲಕ ನನಗೆ ನೀಡಲಾಗಿದೆ, ನಾನು ಅವುಗಳನ್ನು ನಿವಾರಿಸಲು ಪ್ರಯತ್ನಿಸುತ್ತೇನೆ.
ತುಂಬು ಹೃದಯದ ಧನ್ಯವಾದಗಳು!
ಎಲ್ಲರಿಗೂ ನಮಸ್ಕಾರ!

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
PM Modi hails diaspora in Kuwait, says India has potential to become skill capital of world

Media Coverage

PM Modi hails diaspora in Kuwait, says India has potential to become skill capital of world
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ಡಿಸೆಂಬರ್ 2024
December 21, 2024

Inclusive Progress: Bridging Development, Infrastructure, and Opportunity under the leadership of PM Modi