ನಮಸ್ತೇ
ಇಂದು ನಿಮ್ಮೆಲ್ಲರ ಜೊತೆ ಮಾತನಾಡುವುದು ನನಗೆ ಬಹಳ ತೃಪ್ತಿ ತರುವ ಸಂಗತಿ. ತೃಪ್ತಿ ಯಾಕೆಂದರೆ ದಿಲ್ಲಿಯಿಂದ ಕಳುಹಿಸಲಾಗುವ ಆಹಾರದ ಪ್ರತೀ ಕಾಳು ಕೂಡಾ ಪ್ರತಿಯೊಬ್ಬ ಫಲಾನುಭವಿಯ ತಟ್ಟೆಯನ್ನು ತಲುಪುತ್ತಿದೆ. ಬಡವರಿಗಾಗಿರುವ ಆಹಾರ ಧಾನ್ಯಗಳು ಉತ್ತರ ಪ್ರದೇಶದ ಈ ಮೊದಲಿನ ಸರಕಾರಗಳ ಅವಧಿಯಲ್ಲಿ ಸೋರಿಕೆಯಾಗುತ್ತಿದ್ದವು. ಅದು ಈಗ ಆಗುತ್ತಿಲ್ಲ ಎಂಬುದು ತೃಪ್ತಿಯ ಸಂಗತಿ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನಾವನ್ನು ಉತ್ತರ ಪ್ರದೇಶದಲ್ಲಿ ಜಾರಿ ಮಾಡುತ್ತಿರುವ ರೀತಿ, ಉತ್ತರ ಪ್ರದೇಶದ ಹೊಸ ಸರಕಾರದ ಗುರುತಿಸುವಿಕೆಯನ್ನು ಇನ್ನಷ್ಟು ಬಲಪಡಿಸಿದೆ. ನಿಮ್ಮೊಂದಿಗೆ ಮಾತನಾಡುವಾಗ ನಾನು ಸಂತೋಷ ಅನುಭವಿಸಿದ್ದೇನೆ ಮತ್ತು ನೀವು ಮಾತನಾಡುವಾಗ ವ್ಯಕ್ತವಾಗುವ ಧೈರ್ಯ ಮತ್ತು ವಿಶ್ವಾಸ ನನಗೆ ತೃಪ್ತಿ ತಂದಿದೆ. ಮತ್ತು ನೀವು ಮಾತನಾಡುವ ಪ್ರತೀ ಶಬ್ದದಲ್ಲಿಯೂ ಸತ್ಯವಿದೆ. ನಿಮಗಾಗಿ ಕೆಲಸ ಮಾಡುವ ನನ್ನ ಉತ್ಸಾಹ ಇನ್ನಷ್ಟು ಹೆಚ್ಚಾಗಿದೆ. ನಾವಿನ್ನು ಕಾರ್ಯಕ್ರಮಕ್ಕೆ ತೆರಳೋಣ.
ಇಂದಿನ ಕಾರ್ಯಕ್ರಮದಲ್ಲಿ ಹಾಜರಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ, ಅವರು ಕರ್ಮಯೋಗಿಯೂ ಆಗಿದ್ದಾರೆ. ನಮ್ಮ ಯೋಗಿ ಆದಿತ್ಯನಾಥ ಜೀ ಇರುವುದೇ ಹೀಗೆ. ಉತ್ತರ ಪ್ರದೇಶ ಸರಕಾರದ ಎಲ್ಲಾ ಸಚಿವರೇ, ಸಂಸತ್ತಿನ ನನ್ನ ಎಲ್ಲಾ ಸಹೋದ್ಯೋಗಿಗಳೇ, ಎಲ್ಲಾ ಸಂಸತ್ ಸದಸ್ಯರೇ, ಶಾಸಕರೇ, ಮೇಯರ್ ಗಳೇ, ಜಿಲ್ಲಾ ಪಂಚಾಯರ್ ಅಧ್ಯಕ್ಷರೇ ಮತ್ತು ಇಲ್ಲಿ ಬೃಹತ್ ಸಂಖ್ಯೆಯಲ್ಲಿ ಸೇರಿರುವ ಉತ್ತರ ಪ್ರದೇಶದ ನನ್ನ ಪ್ರೀತಿಯ ಸಹೋದರರೇ ಮತ್ತು ಸಹೋದರಿಯರೇ. ಆಗಸ್ಟ್ ತಿಂಗಳ ಆರಂಭವನ್ನು ನೋಡಿ, ಭಾರತದ ಇತಿಹಾಸದಲ್ಲಿ ಅದು ಹಲವಾರು ಸಾಧನೆಗಳನ್ನು ತಂದಿದೆ. ಭಾರತದ ಜಯ ಆರಂಭವಾದಂತೆ ಕಾಣುತ್ತದೆ. ಇವತ್ತಿನ ದಿನ ಆಗಸ್ಟ್ 5, ಬಹಳ ಮುಖ್ಯವಾದುದು ಮತ್ತು ಬಹಳ ವಿಶೇಷವಾದುದು. ಇತಿಹಾಸ ಇದನ್ನು ದಾಖಲಿಸಿಡುತ್ತದೆ. ಆಗಸ್ಟ್ 5, ದೇಶವು ಎರಡು ವರ್ಷಗಳ ಹಿಂದೆ “ಏಕ್ ಭಾರತ್, ಶ್ರೇಷ್ಠ ಭಾರತ್ ಸ್ಫೂರ್ತಿಯನ್ನು ಇನ್ನಷ್ಟು ಬಲಿಷ್ಠಗೊಳಿಸಿದ ದಿನ. ಸುಮಾರು ಏಳು ದಶಕಗಳ ಬಳಿಕ ಸಂವಿಧಾನದ ವಿಧಿ 370ನ್ನು ತೆಗೆದು ಹಾಕಿ ಜಮ್ಮು ಮತ್ತು ಕಾಶ್ಮೀರದ ಪ್ರತಿಯೊಬ್ಬ ನಾಗರಿಕನಿಗೂ ಪ್ರತೀ ಹಕ್ಕು ಮತ್ತು ಸೌಲಭ್ಯವನ್ನು ಒದಗಿಸಿಕೊಡಲಾಗಿದೆ. ನೂರಾರು ವರ್ಷಗಳ ಬಳಿಕ ಕಳೆದ ವರ್ಷ ಆಗಸ್ಟ್ 5 ರಂದು ಅಯೋಧ್ಯೆಯಲ್ಲಿ ಭಾರತೀಯರು ಭವ್ಯ ರಾಮ ಮಂದಿರ ನಿರ್ಮಾಣ ಕಾರ್ಯದ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಟ್ಟರು. ಅಯೋಧ್ಯೆಯಲ್ಲಿ ಇಂದು ರಾಮ ಮಂದಿರ ನಿರ್ಮಾಣ ತ್ವರಿತಗತಿಯಿಂದ ನಡೆಯುತ್ತಿದೆ. ಮತ್ತು ಇಂದು ಆಗಸ್ಟ್ 5 ನಮಗೆಲ್ಲಾ ಮತ್ತೆ ಬಹಳಷ್ಟು ಉತ್ಸಾಹ ಮತ್ತು ರೋಮಾಂಚನವನ್ನು ತಂದಿದೆ. ಇಂದು ನಮ್ಮ ದೇಶದ ಯುವಜನತೆ ಒಲಿಂಪಿಕ್ಸ್ ಹಾಕಿಯಲ್ಲಿ ನಮ್ಮ ಹೆಮ್ಮೆಯನ್ನು ಮರಳಿ ಗಳಿಸಿಕೊಳ್ಳುವ ನಿಟ್ಟಿನಲ್ಲಿ ದೊಡ್ಡ ಹೆಜ್ಜೆ ಇಟ್ಟಿದ್ದಾರೆ. ಇಂತಹ ಸುವರ್ಣ ಅವಕಾಶ ನಾಲ್ಕು ದಶಕಗಳ ಬಳಿಕ ಲಭಿಸಿದೆ. ಹಾಕಿ ನಮ್ಮ ರಾಷ್ಟ್ರೀಯ ಗುರುತಾಗಿದೆ. ಮತ್ತು ಇಂದು ನಮ್ಮ ಯುವಜನತೆ ದೇಶಕ್ಕೆ ಆ ವೈಭವವನ್ನು ಮರಳಿ ತರುವ ಬಹಳ ದೊಡ್ಡ ಕೊಡುಗೆಯನ್ನು ಕೊಟ್ಟಿದ್ದಾರೆ. ಉತ್ತರ ಪ್ರದೇಶದ 15 ಕೋಟಿ ಜನರಿಗಾಗಿ ಇಂತಹ ಅಮೂಲ್ಯ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿರುವುದು ಇಂದಿನ ದಿನದ ಯೋಗಾಯೋಗವಾಗಿದೆ. ಬಡ ಸಹೋದರರು ಮತ್ತು ಸಹೋದರಿಯರು, ಅವರ ಸಂಖ್ಯೆ ಸುಮಾರು 80 ಕೋಟಿಗೂ ಅಧಿಕವಿದೆ, ಅವರು ಈಗ ಒಂದು ವರ್ಷಕ್ಕೂ ಅಧಿಕ ಸಮಯದಿಂದ ಉಚಿತ ಆಹಾರ ಧಾನ್ಯಗಳನ್ನು ಪಡೆಯುತ್ತಿದ್ದಾರೆ. ಆದರೆ ಇಂದು ನನಗೆ ಇಂತಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅವಕಾಶ ಲಭಿಸಿತು ಮತ್ತು ನಿಮ್ಮನ್ನೆಲ್ಲ ನೋಡುವಂತಾಯಿತು.
ಸಹೋದರರೇ ಮತ್ತು ಸಹೋದರಿಯರೇ,
ಒಂದೆಡೆ, ನಮ್ಮ ದೇಶ ಮತ್ತು ನಮ್ಮ ಯುವ ಜನತೆ ಭಾರತಕ್ಕಾಗಿ ಸಾಧನೆಗಳನ್ನು ಮಾಡುತ್ತಿದ್ದಾರೆ. ವಿಜಯದ ಗೋಲುಗಳನ್ನು ಹೊಡೆಯುತ್ತಿದ್ದಾರೆ, ಆದರೆ ದೇಶದಲ್ಲಿ ರಾಜಕೀಯ ಸ್ವಾರ್ಥಕ್ಕಾಗಿ ಸ್ವಂತಕ್ಕೆ ಗೋಲುಗಳನ್ನು ಹೊಡೆಯುವ ಕೆಲವು ಜನರಿದ್ದಾರೆ. ಅವರಿಗೆ ದೇಶಕ್ಕೆ ಏನು ಬೇಕಾಗಿದೆ ಎಂಬ ಬಗ್ಗೆ ಕಾಳಜಿ ಇಲ್ಲ. ದೇಶ ಏನು ಸಾಧನೆ ಮಾಡುತ್ತಿದೆ, ದೇಶ ಹೇಗೆ ಬದಲಾಗುತ್ತಿದೆ ಎಂಬ ಬಗ್ಗೆ ಕಾಳಜಿ ಇಲ್ಲ. ಇವರು ಅವರ ಸ್ವಾರ್ಥಕ್ಕಾಗಿ ದೇಶದ ಘನತೆ ಮತ್ತು ಸ್ಫೂರ್ತಿಗೆ ಧಕ್ಕೆ ತರುವುದರಲ್ಲಿ ನಿರತರಾಗಿದ್ದಾರೆ. ಈ ಜನರು ದೇಶದ ಸಂಸತ್ತಿಗೆ ನಿರಂತರ ಅವಮಾನ ಮಾಡುತ್ತಿದ್ದಾರೆ, ಸಾರ್ವಜನಿಕ ಭಾವನೆಗಳನ್ನು ಹಂಚಿಕೊಳ್ಳುವ ಪವಿತ್ರ ಸ್ಥಳಕ್ಕೆ ಅವಮಾನ ಮಾಡುತ್ತಿದ್ದಾರೆ. ಅವರ ಸ್ವಾರ್ಥಕ್ಕಾಗಿ, ರಾಜಕೀಯ ಹಿತಾಸಕ್ತಿಗಳಿಗಾಗಿ ಅವರಿದನ್ನು ಮಾಡುತ್ತಿದ್ದಾರೆ. ಇಂದು ಭಾರತದ ಪ್ರತಿಯೊಬ್ಬ ನಾಗರಿಕರೂ ನೂರು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಬಂದಿರುವ ಮತ್ತು ಆ ಮೂಲಕ ಮಾನವತೆಗೆ ತಟ್ಟಿರುವ ಬಲು ದೊಡ್ಡ ಬಿಕ್ಕಟ್ಟಿನಿಂದ ತನ್ನನ್ನು ತಾನು ಪಾರು ಮಾಡಿಕೊಳ್ಳಲು ನಿರಂತರವಾಗಿ ಕಾರ್ಯನಿರತರಾಗಿದ್ದಾರೆ. ಮತ್ತು ಈ ಜನರು ರಾಷ್ಟ್ರೀಯ ಹಿತಾಸಕ್ತಿಯ ಕೆಲಸವನ್ನು ಹೇಗೆ ಸ್ಥಗಿತಗೊಳಿಸುವುದು ಎಂಬ ಸ್ಪರ್ಧೆಯಲ್ಲಿ ನಿರತರಾಗಿದ್ದಾರೆ. ಅವರು ಈ ಸ್ಪರ್ಧೆಯಲ್ಲಿ ತೊಡಗಿದ್ದಾರೆ. ಆದರೆ ಸ್ನೇಹಿತರೇ, ಇದು ಬಹಳ ದೊಡ್ಡ ರಾಷ್ಟ್ರ.ಈ ದೇಶದ ಜನರು ಇಂತಹ ಸ್ವಾರ್ಥಿ ಮತ್ತು ರಾಷ್ಟ್ರ ವಿರೋಧಿ ರಾಜಕೀಯದ ಒತ್ತೆಯಾಳುಗಳಾಗಲಾರರು. ಈ ದೇಶದ ಅಭಿವೃದ್ಧಿಯನ್ನು ಸ್ಥಗಿತ ಮಾಡಲು ಈ ಜನರು ಎಷ್ಟೇ ಹೋರಾಡಲಿ, ಈ ದೇಶ ಅದನ್ನು ಈಗ ಸ್ಥಗಿತಗೊಳಿಸಲಾರದು. ಅವರು ಸಂಸತ್ತಿನ ಕಲಾಪಗಳನ್ನು ನಿಲ್ಲಿಸಲು ಪ್ರಯತ್ನಿಸಿದರು, ಆದರೆ ಈ ದೇಶದ 130 ಕೋಟಿ ಜನರು ದೇಶದ ಪ್ರಗತಿ ಸ್ಥಗಿತಗೊಳ್ಳಲು ಬಿಡಲಿಲ್ಲ. ದೇಶವು ಪ್ರತೀ ಸಂಕಷ್ಟದ ಸವಾಲುಗಳನ್ನು ಎದುರಿಸಿ ಪ್ರತೀ ರಂಗದಲ್ಲಿಯೂ ತ್ವರಿತ ಪ್ರಗತಿ ಸಾಧಿಸುತ್ತಿದೆ. ಕಳೆದ ಕೆಲವು ವಾರಗಳ ಸಾಧನೆ ನೋಡಿ, ದೇಶವು ಹೊಸ ದಾಖಲೆಗಳನ್ನು ಬರೆಯುತ್ತಿದೆ; ಮತ್ತು ಕೆಲವು ಜನರು ದಿಲ್ಲಿಯಲ್ಲಿ ಸಂಸತ್ತನ್ನು ನಿರ್ಬಂಧಿಸುವುದರಲ್ಲಿ ನಿರತರಾಗಿದ್ದರು. ಕಳೆದ ಕೆಲವು ವಾರಗಳ ದಾಖಲೆಗಳನ್ನು ನೋಡಿದರೆ ಭಾರತೀಯರ ಸಾಮರ್ಥ್ಯ ಮತ್ತು ಯಶಸ್ಸು ಎಲ್ಲ ಕಡೆಯೂ ಕಂಡು ಬರುತ್ತದೆ.
ಇಡೀ ದೇಶ ಬಹಳ ಉತ್ಸಾಹದಿಂದ ಒಲಿಂಪಿಕ್ಸ್ ನಲ್ಲಿ (ನಮ್ಮ ಆಟಗಾರರ) ಅಭೂತಪೂರ್ವ ಸಾಧನೆಯನ್ನು ನೋಡುತ್ತಿದೆ. ಭಾರತವು ಲಸಿಕೆ ನೀಡಿಕೆಯಲ್ಲಿ 50 ಕೋಟಿಯ ಗುರಿ ತಲುಪುವ ಸನಿಹದಲ್ಲಿದೆ. ಬಹಳ ಬೇಗ ಅದು ಈ ಗುರಿಯನ್ನು ದಾಟಲಿದೆ. ಈ ಕೊರೊನಾ ಅವಧಿಯಲ್ಲಿ ಭಾರತೀಯರ ಉದ್ಯಮಗಳು ಹೊಸ ಕ್ರಾಂತಿಕಾರಕ ಮಾನದಂಡಗಳನ್ನು ರೂಪಿಸುತ್ತಿವೆ. ಜುಲೈ ತಿಂಗಳಲ್ಲಿ ಜಿ.ಎಸ್.ಟಿ. ಸಂಗ್ರಹ ಇರಲಿ, ಅಥವಾ ನಮ್ಮ ರಫ್ತು ಇರಲಿ, ಅವುಗಳು ಹೊಸ ಎತ್ತರಗಳನ್ನು ತಲುಪುತ್ತಿವೆ. ಜುಲೈ ತಿಂಗಳಲ್ಲ್ಲಿ 1.16ಲಕ್ಷ ಕೋಟಿ ರೂಪಾಯಿ ಜಿ.ಎಸ್.ಟಿ. ಸಂಗ್ರಹ ಆರ್ಥಿಕತೆ ಚಿಗುರುತ್ತಿದೆ ಎಂಬುದಕ್ಕೆ ಸಾಕ್ಷಿ. ಇದೇ ವೇಳೆ ಸ್ವಾತಂತ್ರ್ಯಾನಂತರ ಇದೇ ಮೊದಲ ಬಾರಿಗೆ ಭಾರತದ ರಫ್ತು, ತಿಂಗಳೊಂದರಲ್ಲಿ 2.5 ಲಕ್ಷ ಕೋ.ರೂ.ಗಳನ್ನು ದಾಟಿದೆ.ಮತ್ತು ಇದು ಈ ತಿಂಗಳಲ್ಲಿ ಸಂಭವಿಸಿದೆ. ದಶಕಗಳ ಬಳಿಕ ಕೃಷಿ ರಫ್ತಿನಲ್ಲಿ ನಾವು ಜಗತ್ತಿನ ಉನ್ನತ 10 ರಾಷ್ಟ್ರಗಳ ಪಟ್ಟಿಯಲ್ಲಿದ್ದೇವೆ. ಭಾರತವನ್ನು ಕೃಷಿ ಪ್ರಧಾನ ದೇಶ ಎಂದು ಹೇಳಲಾಗುತ್ತಿತ್ತು, ಆದರೆ ಅದು ಹಲವು ದಶಕಗಳ ಬಳಿಕ ಉನ್ನತ 10 ದೇಶಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿತು.ಭಾರತದ ಹೆಮ್ಮೆ, ದೇಶದ ಮೊದಲ ಭಾರತೀಯ ನಿರ್ಮಿತಿಯ ವಿಮಾನ ವಾಹಕ ವಿಕ್ರಾಂತ್ ಸಾಗರದಲ್ಲಿ ತನ್ನ ಪರೀಕ್ಷಾರ್ಥ ಓಡಾಟವನ್ನು ಆರಂಭ ಮಾಡಿದೆ. ಪ್ರತೀ ಸವಾಲಿಗೆ ಸವಾಲೊಡ್ಡುತ್ತಾ, ಭಾರತವು ಜಗತ್ತಿನ ಅತಿ ಎತ್ತರದ ವಾಹನ ಸಂಚಾರದ ಮಾರ್ಗವನ್ನು ಲಡಾಕಿನಲ್ಲಿ ಪೂರ್ಣ ಮಾಡಿದೆ.ಇತ್ತೀಚೆಗೆ ಭಾರತವು ಇ-ರುಪಿಯನ್ನು ಕಾರ್ಯಾರಂಭ ಮಾಡಿದೆ. ಇದು ಸದ್ಯೋಭವಿಷ್ಯದಲ್ಲಿ ಡಿಜಿಟಲ್ ಭಾರತವನ್ನು ಬಲಪಡಿಸಲಿದೆ ಮತ್ತು ಗುರಿ ಕೇಂದ್ರಿತ ಹಾಗು ನಿರ್ದಿಷ್ಟ ಉದ್ದೇಶವುಳ್ಳ ಕಲ್ಯಾಣ ಕಾರ್ಯಕ್ರಮಗಳನ್ನು ಈಡೇರಿಸಲಿದೆ.
ಸ್ನೇಹಿತರೇ,
ತಮ್ಮ ಸ್ಥಾನ ಮಾನಗಳ ಬಗ್ಗೆಯೇ ಚಿಂತಿತರಾಗಿದ್ದವರಿಗೆ ಈಗ ಭಾರತವನ್ನು ತಡೆದು ನಿಲ್ಲಿಸಲಾಗುತ್ತಿಲ್ಲ. ನವಭಾರತವು ಜಗತ್ತನ್ನು ಪದಕಗಳನ್ನು ಗೆಲ್ಲುವ ಮೂಲಕ ಆಳ್ವಿಕೆ ಮಾಡುತ್ತಿದೆಯೇ ನಾಯಕ ಶಿರೋಮಣಿಗಳಿಂದಲ್ಲ. ನವಭಾರತದಲ್ಲಿ ಮುನ್ನಡೆಯ ರಸ್ತೆಯನ್ನು ನಿರ್ಧರಿಸುವುದು ಕುಟುಂಬಗಳಲ್ಲ, ಬದಲು ಕಠಿಣ ಪರಿಶ್ರಮದ ಮೂಲಕ. ಮತ್ತು ಅದರಿಂದಾಗಿ ಇಂದು ಭಾರತದ ಯುವ ಜನತೆ ಹೇಳುತ್ತಿದ್ದಾರೆ-ಭಾರತ ಮುನ್ನಡೆದಿದೆ ಮತ್ತು ಭಾರತದ ಯುವ ಜನತೆ ಮುನ್ನಡೆಯನ್ನು ನಿರ್ಧರಿಸಿದ್ದಾರೆ.
ಸ್ನೇಹಿತರೇ,
ಯೋಗೀ ಜೀ ಮತ್ತವರ ಸರಕಾರ ಆಯೋಜಿಸಿರುವ ಇಂದಿನ ಕಾರ್ಯಕ್ರಮ ಬಹಳ ಮುಖ್ಯವಾದುದು. ಈ ಸಂಕಷ್ಟದ ಸಮಯದಲ್ಲಿ, ತನ್ನ ಮನೆಯಲ್ಲಿ ಪಡಿತರ ಇಲ್ಲದಂತಹ ಸ್ಥಿತಿಯಲ್ಲಿ ಒಬ್ಬರೇ ಒಬ್ಬ ಬಡವರು ಇರಬಾರದು ಎಂಬುದನ್ನು ಖಾತ್ರಿಪಡಿಸುವುದು ಬಹಳ ಮುಖ್ಯ.
ಸ್ನೇಹಿತರೇ,
ಈ ಜಾಗತಿಕ ಸಾಂಕ್ರಾಮಿಕ ಕಳೆದ ನೂರು ವರ್ಷಗಳಲ್ಲಿ ಅತ್ಯಂತ ದೊಡ್ಡ ಬಿಕ್ಕಟ್ಟು ಮಾತ್ರವಲ್ಲ ಅದು ವಿಶ್ವದ ಬಿಲಿಯಾಂತರ ಜನಸಂಖ್ಯೆಯನ್ನು ಬಾಧಿಸಿದೆ, ಇಡೀ ಮಾನವ ಕುಲವನ್ನು ಹಲವು ಕೋನಗಳಿಂದ ಕಾಡಿದೆ. ಮತ್ತು ಅದು ಅತ್ಯಂತ ದೊಡ್ಡ ಸವಾಲನ್ನು ನಿರ್ಮಾಣ ಮಾಡಿದೆ. ಈ ಹಿಂದಿನ ನಮ್ಮ ಅನುಭವಗಳಿಂದ ಇಂತಹ ದೊಡ್ಡ ಬಿಕ್ಕಟ್ಟು ದೇಶದಲ್ಲಿ ತಲೆ ದೋರಿದಾಗ ಇಡೀ ವ್ಯವಸ್ಥೆ ತುಂಡು ತುಂಡಾಗಿ ಕುಸಿಯುತ್ತದೆ. ಜನರ ನಂಬಿಕೆ ಕೂಡಾ ಅಲುಗಾಡುತ್ತದೆ. ಆದರೆ ಇಂದು ಭಾರತ ಮತ್ತು ಅದರ ಪ್ರತಿಯೊಬ್ಬ ನಾಗರಿಕರು ಈ ಜಾಗತಿಕ ಸಾಂಕ್ರಾಮಿಕದ ಜೊತೆ ಪೂರ್ಣ ಶಕ್ತಿಯಿಂದ ಹೋರಾಡುತ್ತಿದ್ದಾರೆ. ಮೂಲಸೌಕರ್ಯ ಆಧಾರಿತ ವೈದ್ಯಕೀಯ ಸೇವೆ ಇರಲಿ, ವಿಶ್ವದ ಅತಿ ದೊಡ್ಡ ಉಚಿತ ಲಸಿಕಾಕರಣ ಆಂದೋಲನ ಇರಲಿ ಅಥವಾ ಹಸಿವಿನಿಂದ ಭಾರತೀಯರನ್ನು ಪಾರು ಮಾಡುವ ಬೃಹತ್ ಆಂದೋಲನ ಇರಲಿ, ಭಾರತವು ಲಕ್ಷಾಂತರ ಕೋ.ರೂ. ಮೌಲ್ಯದ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುತ್ತಿದೆ. ಈ ಜಾಗತಿಕ ಸಾಂಕ್ರಾಮಿಕದ ನಡುವೆ ಬೃಹತ್ ಸಂಖ್ಯೆಯ ಉದ್ಯೋಗ ಸೃಷ್ಟಿಕರ್ತರನ್ನು ಮತ್ತು ಬೃಹತ್ ಮೂಲಸೌಕರ್ಯ ಯೋಜನೆಗಳನ್ನು ಭಾರತ ಕೈಬಿಡಲಿಲ್ಲ. ದೇಶದ ಸಾಮರ್ಥ್ಯವನ್ನು ಹೆಚ್ಚಿಸಲು ಉತ್ತರ ಪ್ರದೇಶದ ಜನ ಹೆಗಲಿಗೆ ಹೆಗಲು ಕೊಟ್ಟು ದುಡಿದರು, ಇದು ನನಗೆ ಸಂತೋಷ ತಂದಿದೆ. ಹೆದ್ದಾರಿಗಳು, ಎಕ್ಸ್ ಪ್ರೆಸ್ ವೇ ಗಳು, ಮತ್ತು ಸರಕು ಸಾಗಾಣಿಕೆಗಾಗಿಯೇ ಇರುವ ಕಾರಿಡಾರುಗಳು ಮತ್ತು ರಕ್ಷಣಾ ಕಾರಿಡಾರುಗಳ ಯೋಜನೆಗಳು ಉತ್ತರ ಪ್ರದೇಶದಲ್ಲಿ ಪ್ರಗತಿಯ ಹಂತದಲ್ಲಿವೆ, ಅವುಗಳು ಸಾಗುತ್ತಿರುವ ವೇಗ ಇದಕ್ಕೆ ಒಂದು ಜೀವಂತ ಉದಾಹರಣೆ.
ಸ್ನೇಹಿತರೇ,
ಇಂತಹ ಬಿಕ್ಕಟ್ಟಿನ ನಡುವೆಯೂ, (ನಾವದನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದೇವೆ) ಪಡಿತರದಿಂದ ಹಿಡಿದು ಇತರ ಆಹಾರ ಧಾನ್ಯಗಳ ದರ ಜಗತ್ತಿನಾದ್ಯಂತ ಬಿರುಗಾಳಿಯನ್ನು ಎಬ್ಬಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಸಣ್ಣದೊಂದು ಮಹಾಪೂರ ಕೂಡಾ ಹಾಲು ಮತ್ತು ತರಕಾರಿಗಳ ದರ ಹೆಚ್ಚಳಕ್ಕೆ ಕಾರಣವಾಗಬಲ್ಲದೆಂಬುದನ್ನು ಅರಿತಿದ್ದೇವೆ. ಸಣ್ಣದೊಂದು ಅವ್ಯವಸ್ಥೆ ಕೂಡಾ ಹಣದುಬ್ಬರ ಹೆಚ್ಚಳಕ್ಕೆ ಕಾರಣವಾಗಬಲ್ಲದು. ನಮ್ಮೆದುರು ಬಹಳ ದೊಡ್ಡ ಸವಾಲಿದೆ, ಆದರೆ ನಾನು ನನ್ನ ಬಡ ಮಧ್ಯಮ ವರ್ಗದ ಸಹೋದರರಿಗೆ ಮತ್ತು ಸಹೋದರಿಯರಿಗೆ ಅದನ್ನು ನಿಯಂತ್ರಣದಲ್ಲಿಡಲು ನಾವು ಸಾಧ್ಯ ಇರುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತೇವೆ ಎಂದು ಭರವಸೆ ಕೊಡುತ್ತೇನೆ ಹಾಗು ಇದು ನಿಮ್ಮೆಲ್ಲರ ಸಹಕಾರದಿಂದ ಸಾಧ್ಯವಾಗಲಿದೆ. ಕೊರೊನಾ ಅವಧಿಯಲ್ಲಿಯೂ ಕೃಷಿ ಮತ್ತು ಆ ಸಂಬಂಧಿ ಕೆಲಸಗಳು ಸ್ಥಗಿತಗೊಂಡಿರಲಿಲ್ಲ. ಬದಲು ಅವು ಪೂರ್ಣ ಎಚ್ಚರಿಕೆಯಿಂದ ನಿರಂತರವಾಗಿ ನಡೆಯುತ್ತಿದ್ದವು. ಬೀಜ ಮತ್ತು ರಸಗೊಬ್ಬರಗಳನ್ನು ಪಡೆಯುವಲ್ಲಿ ಮತ್ತು ರೈತರ ಉತ್ಪನ್ನಗಳನ್ನು ಮಾರಾಟ ಮಾಡುವಲ್ಲಿ ರೈತರಿಗೆ ಯಾವುದೇ ತೊಂದರೆಗಳಾಗದಂತೆ ನೋಡಿ ಕೊಳ್ಳಲು ಸೂಕ್ತ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಇದರ ಫಲವಾಗಿ ನಮ್ಮ ರೈತರು ದಾಖಲೆ ಪ್ರಮಾಣದ ಉತ್ಪನ್ನಗಳನ್ನು ಉತ್ಪಾದಿಸಿದರು ಮತ್ತು ಅವರ ಉತ್ಪಾದನೆಗಳನ್ನು ಎಂ.ಎಸ್.ಪಿ.ಯಲ್ಲಿ ಖರೀದಿಸುವಲ್ಲಿ ಸರಕಾರ ಹೊಸ ದಾಖಲೆಯನ್ನು ಬರೆಯಿತು. ಮತ್ತು ನಮ್ಮ ಯೋಗಿ ಸರಕಾರ ಕಳೆದ ನಾಲ್ಕು ವರ್ಷಗಳಿಂದ ಪ್ರತೀ ವರ್ಷ ಎಂ.ಎಸ್.ಪಿ. ದರದಲ್ಲಿ ಆಹಾರ ಧಾನ್ಯಗಳ ಖರೀದಿಯಲ್ಲಿ ಹೊಸ ದಾಖಲೆಗಳನ್ನು ಮಾಡುತ್ತಿದೆ. ಎಂ.ಎಸ್.ಪಿ.ಯಲ್ಲಿ ಗೋಧಿ ಮತ್ತು ಭತ್ತ ಖರೀದಿಯಿಂದ ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಯೋಜನ ಪಡೆದ ರೈತರ ಸಂಖ್ಯೆ ದುಪ್ಪಟ್ಟಾಗಿದೆ. ಉತ್ತರ ಪ್ರದೇಶದಲ್ಲಿ 13 ಲಕ್ಷಕ್ಕೂ ಅಧಿಕ ರೈತ ಕುಟುಂಬಗಳು ಅವರ ಉತ್ಪನ್ನಗಳ ಮಾರಾಟದಿಂದ 24,000 ಕೋ.ರೂ.ಗಳನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗಳ ಮೂಲಕ ಪಡೆದಿವೆ.
ಸ್ನೇಹಿತರೇ,
ಕೇಂದ್ರ ಮತ್ತು ಉತ್ತರ ಪ್ರದೇಶದ ಎರಡು ಇಂಜಿನ್ ಗಳ ಸರಕಾರ ಜನ ಸಾಮಾನ್ಯರ ಅನುಕೂಲತೆಗಳಿಗಾಗಿ ಮತ್ತು ಸಶಕ್ತೀಕರಣಕ್ಕಾಗಿ ನಿರಂತರ ಪ್ರಯತ್ನಗಳನ್ನು ಮಾಡುತ್ತಿದೆ. ಕೊರೊನಾ ಜಾಗತಿಕ ಸಾಂಕ್ರಾಮಿಕ ಇದ್ದರೂ ಬಡವರಿಗೆ ಸವಲತ್ತುಗಳನ್ನು ಒದಗಿಸುವ ಆಂದೋಲನದ ವೇಗ ತಗ್ಗಿಲ್ಲ. ಇದುವರೆಗೆ 17 ಲಕ್ಷ ಗ್ರಾಮೀಣ ಮತ್ತು ನಗರಗಳ ಬಡ ಕುಟುಂಬಗಳಿಗೆ ಉತ್ತರ ಪ್ರದೇಶದಲ್ಲಿ ಪಕ್ಕಾ ಮನೆಯನ್ನು ಮಂಜೂರು ಮಾಡಲಾಗಿದೆ. ಲಕ್ಷಾಂತರ ಬಡ ಕುಟುಂಬಗಳಿಗೆ ಮನೆಗಳಲ್ಲಿ ಶೌಚಾಲಯ ಸೌಲಭ್ಯವನ್ನು ಒದಗಿಸಲಾಗಿದೆ. ಸುಮಾರು 1.5 ಕೋಟಿ ಬಡ ಕುಟುಂಬಗಳಿಗೆ ಉಜ್ವಲಾ ಯೋಜನೆ ಅಡಿಯಲ್ಲಿ ಉಚಿತ ಅಡುಗೆ ಅನಿಲ ಸಂಪರ್ಕಗಳನ್ನು ನೀಡಲಾಗಿದೆ. ಲಕ್ಷಾಂತರ ಕುಟುಂಬಗಳಿಗೆ ವಿದ್ಯುತ್ ಸಂಪರ್ಕಗಳನ್ನು ನೀಡಲಾಗಿದೆ. ಪ್ರತೀ ಮನೆಗೂ ನೀರು ಒದಗಿಸುವ ಆಂದೋಲನವೂ ಉತ್ತರ ಪ್ರದೇಶದಲ್ಲಿ ತ್ವರಿತಗತಿಯಿಂದ ಪ್ರಗತಿಯಲ್ಲಿದೆ. ಉತ್ತರ ಪ್ರದೇಶದಲ್ಲಿ ಕಳೆದ ಎರಡು ವರ್ಷಗಳಲ್ಲಿ 27 ಲಕ್ಷ ಗ್ರಾಮೀಣ ಮನೆಗಳಿಗೆ ಕೊಳವೆ ಮೂಲಕ ನೀರೊದಗಿಸಲಾಗುತ್ತಿದೆ.
ಸಹೊದರರೇ ಮತ್ತು ಸಹೋದರಿಯರೇ,
ಎರಡು ಇಂಜಿನ್ ಗಳ ಸರಕಾರ ಬಡವರಿಗೆ, ದುರ್ಬಲರಿಗೆ, ಹಿಂದುಳಿದವರಿಗೆ ಮತ್ತು ಬುಡಕಟ್ಟು ಸಮುದಾಯಗಳ ಜನರಿಗೆ ಮಾಡಲಾದ ಯೋಜನೆಗಳು ತ್ವರಿತವಾಗಿ ಅನುಷ್ಠಾನಗೊಳ್ಳುವುದನ್ನು ಖಾತ್ರಿಪಡಿಸಿದೆ. ಪಿ.ಎಂ. ಸ್ವನಿಧಿ ಯೋಜನಾ ಇದಕ್ಕೊಂದು ಶ್ರೇಷ್ಠ ಉದಾಹರಣೆ. ಕೊರೊನಾ ಇಂದು ಉಂಟು ಮಾಡಿರುವ ಪರಿಸ್ಥಿತಿಯಲ್ಲಿ, ಬೀದಿ ಬದಿ ವ್ಯಾಪಾರಿಗಳು ಅವರ ಜೀವನೋಪಾಯವನ್ನು ಸರಿದಾರಿಗೆ ತರಲು ಬ್ಯಾಂಕ್ ಗಳ ಜೊತೆ ಜೋಡಿಸಲ್ಪಟ್ಟಿದ್ದಾರೆ. ಬಹಳ ಕಡಿಮೆ ಅವಧಿಯಲ್ಲಿ ಉತ್ತರ ಪ್ರದೇಶದ 10 ಲಕ್ಷ ಸ್ನೇಹಿತರಿಗೆ ಪ್ರಯೋಜನಗಳನ್ನು ಕೊಡುವ ಪ್ರಕ್ರಿಯೆ ಈ ಯೋಜನೆ ಅಡಿಯಲ್ಲಿ ಆರಂಭಗೊಂಡಿದೆ.
ಸ್ನೇಹಿತರೇ,
ಹಿಂದಿನ ದಶಕಗಳಲ್ಲಿ ಉತ್ತರ ಪ್ರದೇಶದ ಗುರುತಿಸುವಿಕೆ ಏನಾಗಿತ್ತು ಎಂಬುದನ್ನು ಒಮ್ಮೆ ನೆನಪು ಮಾಡಿಕೊಳ್ಳಿ. ಮತ್ತು ಉತ್ತರ ಪ್ರದೇಶದ ಬಗ್ಗೆ ಏನು ಹೇಳಲಾಗುತ್ತಿತ್ತು ಎಂಬುದನ್ನೂ ಸ್ಮರಿಸಿಕೊಳ್ಳಿ. ಉತ್ತರ ಪ್ರದೇಶವನ್ನು ಸದಾ ರಾಜಕೀಯದ ಪಟ್ಟಕದಲ್ಲಿ (ತ್ರಿಭುಜಾಕೃತಿಯ ಕೊಳವೆ) ನೋಡಲಾಗುತ್ತಿತ್ತು. ಅಂತಹ ಉತ್ತರ ಪ್ರದೇಶವು ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದನ್ನು ಯಾರೂ ಚರ್ಚಿಸುತ್ತಿರಲಿಲ್ಲ. ದಿಲ್ಲಿಯ ಸಿಂಹಾಸನದ ಹಾದಿ ಉತ್ತರ ಪ್ರದೇಶದ ಮೂಲಕ ಸಾಗುತ್ತದೆ ಎಂದು ನಂಬಿದ ಅನೇಕರು ಬಂದಿದ್ದಾರೆ ಮತ್ತು ಹೋಗಿದ್ದಾರೆ. ಅವರು ಯವತ್ತೂ ಭಾರತದ ಸಮೃದ್ಧಿ ಕೂಡಾ ಉತ್ತರ ಪ್ರದೇಶದ ಮೂಲಕ ಹಾದು ಹೋಗುತ್ತದೆ ಎಂಬುದನ್ನು ಎಂದೂ ನೆನಪಿಸಿಕೊಳ್ಳಲಿಲ್ಲ. ಈ ಜನರು ಉತ್ತರ ಪ್ರದೇಶವನ್ನು ರಾಜಕೀಯದ ಕೇಂದ್ರವಾಗಿ ಮಾತ್ರ ಸೀಮಿತಗೊಳಿಸಿದರು. ಕೆಲವರು ಉತ್ತರ ಪ್ರದೇಶವನ್ನು ಅರಸೊತ್ತಿಗೆಗಾಗಿ, ತಮ್ಮ ಕುಟುಂಬಕ್ಕಾಗಿ ಅಥವಾ ರಾಜಕೀಯ ಹಿತಾಸಕ್ತಿಗಳಿಗಾಗಿ ಬಳಸಿಕೊಂಡರು. ಈ ಜನರ ಸಣ್ಣ ರಾಜಕೀಯದಿಂದ, ಭಾರತದ ಇಂತಹ ದೊಡ್ಡ ರಾಜ್ಯ ಭಾರತದ ಆರ್ಥಿಕ ಅಭಿವೃದ್ಧಿಯ ಜೊತೆ ಜೋಡಿಸಲಾಗದೆ ಉಳಿಯಿತು. ಹೌದು, ಕೆಲವು ಮಂದಿ ಶ್ರೀಮಂತರಾದರು. ಕೆಲವು ಕುಟುಂಬಗಳು ಖಂಡಿತವಾಗಿಯೂ ಅಭಿವೃದ್ಧಿ ಸಾಧಿಸಿದವು. ಈ ಜನರು ಉತ್ತರ ಪ್ರದೇಶವನ್ನು ಶ್ರೀಮಂತಗೊಳಿಸಲಿಲ್ಲ ಬದಲು ತಾವು ತಮ್ಮನ್ನು ಶ್ರೀಮಂತರನ್ನಾಗಿಸಿ ಕೊಂಡರು. ಇಂದು ಉತ್ತರ ಪ್ರದೇಶ ಇಂತಹ ವ್ಯಕ್ತಿಗಳ ವಿಷವರ್ತುಲದಿಂದ ಹೊರಬಂದಿರುವುದು ನನಗೆ ಸಂತೋಷದ ಸಂಗತಿಯಾಗಿದೆ. ಮತ್ತು ಅದು ಅಭಿವೃದ್ಧಿಯಲ್ಲಿ ಮುಂದೆ ಸಾಗುತ್ತಿದೆ. ಎರಡು ಇಂಜಿನ್ ಗಳ ಸರಕಾರವು ಸಣ್ಣ ಧೋರಣೆಯಿಂದ ಉತ್ತರ ಪ್ರದೇಶದ ಸಾಮರ್ಥ್ಯವನ್ನು ನೋಡುವ ರೀತಿಯನ್ನು ಬದಲು ಮಾಡಿದೆ. ಕಳೆದ ಕೆಲವು ವರ್ಷಗಳಿಂದ ಉತ್ತರ ಪ್ರದೇಶವು ಭಾರತದ ಅಭಿವೃದ್ಧಿಯ, ಬೆಳವಣಿಗೆಯ ಇಂಜಿನ್ ನ ವಿದ್ಯುತ್ ಕೋಶವಾಗಿ ರೂಪುಗೊಳ್ಳಬಹುದೆಂಬ ಆಶಾವಾದ, ವಿಶ್ವಾಸ ಬೆಳೆಯುತ್ತಿದೆ. ಉತ್ತರ ಪ್ರದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಾಮಾನ್ಯ ಯುವ ಜನರ ಕನಸುಗಳ ಬಗ್ಗೆ ಮಾತನಾಡಲಾಗುತ್ತಿದೆ. ಉತ್ತರ ಪ್ರದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಕ್ರಿಮಿನಲ್ ಗಳಲ್ಲಿ ಭಯದ ವಾತಾವರಣ ಮೂಡಿದೆ. ಉತ್ತರ ಪ್ರದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಬಡವರಿಗೆ ತೊಂದರೆ, ಕಿರುಕುಳ ಕೊಡುವ, ದುರ್ಬಲ ಜನರನ್ನು ಹೆದರಿಸುವವರ ಮನಸ್ಸಿನಲ್ಲಿ ಭಯ ಮೂಡಿದೆ. ಭ್ರಷ್ಟಾಚಾರಕ್ಕೆ ಒಗ್ಗಿ ಹೋಗಿದ್ದ ಮತ್ತು ಸ್ವಜನ ಪಕ್ಷಪಾತಕ್ಕೆ ಒಗ್ಗಿ ಹೋಗಿದ್ದ ವ್ಯವಸ್ಥೆ ಅರ್ಥಪೂರ್ಣ ಬದಲಾವಣೆಗೆ ತೆರೆದುಕೊಂಡಿದೆ. ಇಂದು ಉತ್ತರ ಪ್ರದೇಶದಲ್ಲಿ ಸಾರ್ವಜನಿಕ ಹಣದ ಪ್ರತಿಯೊಂದು ಪೈಸೆಯೂ ನೇರವಾಗಿ ಸಾರ್ವಜನಿಕರ ಖಾತೆಗೆ ಹೋಗುವುದನ್ನು ಖಾತ್ರಿಪಡಿಸಲಾಗುತ್ತಿದೆ. ಸಾರ್ವಜನಿಕರಿಗೆ ಲಾಭವಾಗುತ್ತಿದೆ. ಇಂದು ಉತ್ತರ ಪ್ರದೇಶವು ಹೂಡಿಕೆಯ ಕೇಂದ್ರವಾಗುತ್ತಿದೆ. ದೊಡ್ಡ ಕಂಪೆನಿಗಳು ಉತ್ತರ ಪ್ರದೇಶಕೆ ಬರಲು ಆಸಕ್ತವಾಗಿವೆ. ಉತ್ತರ ಪ್ರದೇಶದಲ್ಲಿ ಮೂಲಸೌಕರ್ಯಗಳ ಬೃಹತ್ ಯೋಜನೆಗಳು ಅನುಷ್ಠಾನಕ್ಕೆ ಬರುತ್ತಿವೆ. ಕೈಗಾರಿಕಾ ಕಾರಿಡಾರುಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಮತ್ತು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಾಗುತ್ತಿದೆ.
ಸಹೋದರರೇ ಮತ್ತು ಸಹೋದರಿಯರೇ,
ಉತ್ತರ ಪ್ರದೆಶದ ಕಠಿಣ ಪರಿಶ್ರಮಿ ಜನರು ಆತ್ಮ ನಿರ್ಭರ ಭಾರತ ನಿರ್ಮಾಣ ಮಾಡಲು , ಸಮೃದ್ಧ ಭಾರತ ನಿರ್ಮಿಸಲು ಬೃಹತ್ ತಳಹದಿ ಇದ್ದಂತೆ. ಇಂದು ನಾವು ಸ್ವಾತಂತ್ರ್ಯದ 75 ವರ್ಷಗಳನ್ನು, ಅಮೃತ ಮಹೋತ್ಸವವನ್ನು ಆಚರಿಸುತ್ತಿದ್ದೇವೆ. ಇದು ಬರೇ ಸ್ವಾತಂತ್ರ್ಯದ ಆಚರಣೆ ಮಾತ್ರ ಅಲ್ಲ. ಇದು ಮುಂದಿನ 25 ವರ್ಷಗಳಿಗೆ ದೊಡ್ಡ ಗುರಿಗಳನ್ನು ನಿಗದಿ ಮಾಡಲು ಮತ್ತು ನಿರ್ಧಾರಗಳನ್ನು ಕೈಗೊಳ್ಳಲು ಇರುವ ಅವಕಾಶ. ಈ ನಿರ್ಧಾರಗಳಲ್ಲಿ ಉತ್ತರ ಪ್ರದೇಶಕ್ಕೆ ದೊಡ್ಡ ಪಾಲಿದೆ ಮತ್ತು ಅಷ್ಟೇ ಜವಾಬ್ದಾರಿಯೂ ಇದೆ.ಕಳೆದ ದಶಕಗಳಲ್ಲಿ ಸಾಧ್ಯವಾಗದೇ ಇರುವುದನ್ನು ಸಾಧಿಸಲು ಈಗ ಉತ್ತರ ಪ್ರದೇಶಕ್ಕೆ ಅವಕಾಶ ಲಭಿಸಿದೆ. ಉತ್ತರ ಪ್ರದೇಶ ಕಳೆದ ಏಳು ದಶಕಗಳಲ್ಲಿ ಯಾವ ಕೊರತೆಗಳನ್ನು ಎದುರಿಸಿತೋ ಅದನ್ನೆಲ್ಲ ಸರಿಪಡಿಸಿಕೊಂಡು ಮುಂದೆ ಸಾಗುವ ದಶಕ. ಇದು ಉತ್ತರ ಪ್ರದೇಶದ ಸಾಮಾನ್ಯ ಯುವ ಜನತೆಯ, ನಮ್ಮ ಪುತ್ರಿಯರ, ಬಡವರ, ಹಿಂದುಳಿದವರ, ಅವಕಾಶವಂಚಿತರ ಸಹಭಾಗಿತ್ವ ಇಲ್ಲದೆ ಮತ್ತು ಅವರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸದೇ ಸಾಧ್ಯವಾಗುವಂತಹದಲ್ಲ. ನಾವು ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಮತ್ತು ಸಬ್ ಕಾ ವಿಶ್ವಾಸ್ ಮಂತ್ರದೊಂದಿಗೆ ಮುನ್ನಡೆಯುತ್ತಿದ್ದೇವೆ. ಈ ಹಿಂದೆ ಶಿಕ್ಷಣಕ್ಕೆ ಸಂಬಂಧಿಸಿ ಎರಡು ಮುಖ್ಯ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಮತ್ತು ಉತ್ತರ ಪ್ರದೇಶ ಇದರಿಂದ ಹೆಚ್ಚು ಲಾಭ ಪಡೆಯಲಿದೆ. ಮೊದಲ ನಿರ್ಧಾರ ಇಂಜಿನಿಯರಿಂಗ್ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ್ದು. ಉತ್ತರ ಪ್ರದೇಶದ ಗ್ರಾಮೀಣ ಜನ, ಬಡವರು ಭಾಷೆಯ ಕಾರಣದಿಂದ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಶಿಕ್ಷಣದಿಂದ ವಂಚಿತರಾಗಿದ್ದರು. ಈಗ ಈ ನಿಬಂಧನೆಯನ್ನು ತೆಗೆದು ಹಾಕಲಾಗಿದೆ. ಇಂಜಿನಿಯರಿಂಗ್ ಮತ್ತು ತಾಂತ್ರಿಕ ಶಿಕ್ಷಣವನ್ನು ಹಿಂದಿ ಸಹಿತ ಹಲವು ಭಾರತೀಯ ಭಾಷೆಗಳಲ್ಲಿ ನೀಡಲಾಗುತ್ತದೆ. ಆಧುನಿಕ ತಂತ್ರಜ್ಞಾನ ಬಳಸಿ ಉತ್ತಮ ಕೋರ್ಸುಗಳನ್ನು ಮತ್ತು ಪಠ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ. ದೇಶದ ಹಲವು ರಾಜ್ಯಗಳಲ್ಲಿರುವ ಸಂಸ್ಥೆಗಳು ಈ ಸೌಲಭ್ಯವನ್ನು ಅನುಷ್ಠಾನ ಮಾಡಲು ಆರಂಭಿಸಿವೆ.
ಸಹೋದರರೇ ಮತ್ತು ಸಹೋದರಿಯರೇ,
ಮತ್ತೊಂದು ಪ್ರಮುಖ ನಿರ್ಧಾರ ವೈದ್ಯಕೀಯ ಶಿಕ್ಷಣಕ್ಕೆ ಸಂಬಂಧಿಸಿದ್ದು. ಒ.ಬಿ.ಸಿ. ಮತ್ತು ಹಿಂದುಳಿದ ವರ್ಗಗಳನ್ನು ವೈದ್ಯ ಶಿಕ್ಷಣದ ಅಖಿಲ ಭಾರತ ಕೋಟಾದಿಂದ ಹೊರಗಿಡಲಾಗಿತ್ತು. ಈ ಪರಿಸ್ಥಿತಿಯನ್ನು ಬದಲಾಯಿಸಿ ನಮ್ಮ ಸರಕಾರ ಇತ್ತೀಚೆಗೆ ಈ ಕೋಟಾದಡಿ ಒ.ಬಿ.ಸಿ.ಗಳಿಗೆ 27 ಶೇಖಡಾ ಮೀಸಲಾತಿಯನ್ನು ಒದಗಿಸಿದೆ. ಇದಲ್ಲದೆ ಸಾಮಾನ್ಯ ವರ್ಗದ ಬಡ ಕುಟುಂಬಗಳ ಮಕ್ಕಳಿಗೆ 10 ಶೇಖಡಾ ಮೀಸಲಾತಿಯನ್ನು ಈ ಅಧಿವೇಶನದಿಂದ ಜಾರಿಗೆ ತರಲಾಗಿದೆ. ಈ ನಿರ್ಧಾರಗಳಿಂದ ವೈದ್ಯಕೀಯ ವೃತ್ತಿಯಲ್ಲಿ ತೊಡಗಲು ಇಚ್ಛಿಸುವ ವೈದ್ಯರಾಗುವವರಿಗೆ ಬೃಹತ್ ಪ್ರತಿಭಾ ರಾಶಿಯು ಸೃಷ್ಟಿಯಾಗಲಿದೆ. ಸಮಾಜದ ಪ್ರತೀ ವರ್ಗಕ್ಕೂ ಮುನ್ನಡೆಯಲು ಉತ್ತೇಜಿಸಲಾಗುವುದು. ಇದು ಬಡವರ ಮಕ್ಕಳು ವೈದ್ಯರಾಗಲು ಹಾದಿಯನ್ನು ರೂಪಿಸಿಕೊಡಲಿದೆ.
ಸಹೋದರರೇ ಮತ್ತು ಸಹೋದರಿಯರೇ,
ಆರೋಗ್ಯ ವಲಯದಲ್ಲಿ ಕೂಡಾ ಉತ್ತರ ಪ್ರದೇಶದಲ್ಲಿ ಅಭೂತಪೂರ್ವ ಕೆಲಸಗಳನ್ನು ಕಳೆದ ಕೆಲವು ವರ್ಷಗಳಿಂದ ಮಾಡಲಾಗಿದೆ.ಉತ್ತರ ಪ್ರದೇಶದಲ್ಲಿ 4-5 ವರ್ಷಗಳ ಹಿಂದೆ ಕೊರೊನಾದಂತಹ ಜಾಗತಿಕ ಸಾಂಕ್ರಾಮಿಕ ಸಂಭವಿಸಿದರೆ ಪರಿಸ್ಥಿತಿ ಏನಾಗುತ್ತಿತ್ತು ಎಂಬುದನ್ನು ಕಲ್ಪಿಸಿಕೊಳ್ಳಿ. ಆಗ ಜ್ವರ, ಸಾಮಾನ್ಯ ನೆಗಡಿ, ಕಾಲರಾಗಳಂತಹ ಖಾಯಿಲೆಗಳು ಪ್ರಾಣಾಂತಿಕವಾಗಿ ಪರಿಣಮಿಸುತ್ತಿದ್ದವು. ಇಂದು ಉತ್ತರ ಪ್ರದೇಶವು 5.25 ಕೋಟಿ ಜನರನ್ನು ಲಸಿಕೆ ಪಡೆಯುವಿಕೆಗೆ ಒಳಪಡಿಸಿದ ಮೊದಲ ರಾಜ್ಯ ಎಂಬ ಮೈಲಿಗಲ್ಲನ್ನು ಸ್ಥಾಪಿಸುತ್ತಿದೆ. ಮತ್ತು ಅದೂ ಕೂಡಾ ಭಾರತೀಯ ನಿರ್ಮಿತ ಲಸಿಕೆಯ ಬಗ್ಗೆ ಕೆಲವು ಮಂದಿ ಸುಳ್ಳು ಪ್ರಚಾರ ಮಾಡಿ ಗೊಂದಲವುಂಟು ಮಾಡಿದ್ದರೂ. ಆದರೆ ಉತ್ತರ ಪ್ರದೇಶದ ಸೂಕ್ಷ್ಮತ್ವವುಳ್ಳ ಜನರು ಈ ಎಲ್ಲಾ ಭ್ರಮೆಗಳನ್ನು, ಸುಳ್ಳುಗಳನ್ನು ತಿರಸ್ಕರಿಸಿದರು. ಉತ್ತರ ಪ್ರದೇಶವು ಉಚಿತ ಲಸಿಕೆ ಆಂದೋಲನವನ್ನು ಅತ್ಯಂತ ತ್ವರಿತಗೊಳಿಸಿಕೊಂಡು, ಮುಖಗವಸುಗಳ ಧರಿಸುವಿಕೆ ಹಾಗು ಎರಡು ಯಾರ್ಡ್ ಅಂತರ ಕಾಯ್ದುಕೊಳ್ಳುವ ನಿಯಮವನ್ನು ಸಡಿಲಿಕೆ ಮಾಡುವುದಿಲ್ಲ ಎಂಬ ಬಗ್ಗೆ ನನಗೆ ಖಚಿತವಿದೆ. ಮತ್ತೊಮ್ಮೆ ನಾನು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನಾದ ಫಲಾನುಭವಿಗಳಿಗೆ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ. ಸದ್ಯದಲ್ಲಿಯೇ ಹಬ್ಬಗಳಿವೆ. ದೀಪಾವಳಿಯವರೆಗೆ ಹಲವಾರು ಹಬ್ಬಗಳಿವೆ. ಆದುದರಿಂದ ನಾವು ದೀಪಾವಳಿಯವರೆಗೆ ಉಚಿತ ಪಡಿತರವನ್ನು ಮುಂದುವರೆಸಲು ನಿರ್ಧರಿಸಿದ್ದೇವೆ. ಇದರಿಂದ ಬಡ ಕುಟುಂಬಗಳ ಯಾರೂ ಈ ಹಬ್ಬದ ಸಂದರ್ಭಗಳಲ್ಲಿ ತೊಂದರೆಗೀಡಾಗಲಾರರು. ನಾನು ಮತ್ತೊಮ್ಮೆ ನಿಮಗೆ ಬರಲಿರುವ ಹಬ್ಬಗಳಿಗಾಗಿ ಶುಭಾಶಯಗಳನ್ನು ಹೇಳುತ್ತೇನೆ. ನೀವೆಲ್ಲರೂ ಆರೋಗ್ಯದಿಂದಿರಿ, ನಿಮ್ಮ ಕುಟುಂಬದವರೂ ಆರೋಗ್ಯವಾಗಿರಲಿ. ನಿಮಗೆಲ್ಲಾ ಬಹಳ ಧನ್ಯವಾದಗಳು!!.