ಹರ ಹರ ಮಹಾದೇವ!
ವಣಕ್ಕಂ, ಕಾಶಿ!
ವಣಕ್ಕಂ, ತಮಿಳುನಾಡು!
ಕಾರ್ಯಕ್ರಮದಲ್ಲಿ ಉಪಸ್ತಿತರಿರುವ ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್, ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್ ಜೀ, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿಗಳಾದ ಶ್ರೀ ಧರ್ಮೇಂದ್ರ ಪ್ರಧಾನ್ ಜೀ ಮತ್ತು ಶ್ರೀ ಎಲ್. ಮುರುಗನ್ ಜೀ, ಮಾಜಿ ಕೇಂದ್ರ ಸಚಿವ ಪೊನ್ ರಾಧಾಕೃಷ್ಣನ್ ಜಿ, ವಿಶ್ವವಿಖ್ಯಾತ ಸಂಗೀತಗಾರ ಮತ್ತು ರಾಜ್ಯಸಭಾ ಸದಸ್ಯರಾದ ಇಳಯರಾಜಾ ಜಿ, ಬಿ ಹೆಚ್ ಯು ಉಪಕುಲಪತಿ ಸುಧೀರ್ ಜೈನ್, ಐಐಟಿ ಮದ್ರಾಸ್ ನಿರ್ದೇಶಕರಾದ ಪ್ರೊಫೆಸರ್ ಕಾಮಕೋಟಿ ಜಿ, ಇತರ ಎಲ್ಲ ಗಣ್ಯರು ಮತ್ತು ಕಾಶಿ ಮತ್ತು ತಮಿಳುನಾಡಿನಿಂದ ಬಂದ ನನ್ನ ಎಲ್ಲ ಗೌರವಾನ್ವಿತ ಅತಿಥಿಗಳು, ಮಹಿಳೆಯರೇ ಮತ್ತು ಮಹನೀಯರೇ,
ವಿಶ್ವದ ಅತ್ಯಂತ ಹಳೆಯ ಜೀವಂತ ನಗರವಾದ ಕಾಶಿಯ ಪವಿತ್ರ ಭೂಮಿಯಲ್ಲಿ ನಿಮ್ಮೆಲ್ಲರನ್ನೂ ನೋಡಿ ನನಗೆ ತುಂಬಾ ಸಂತೋಷವಾಗಿದೆ. ಮಹಾದೇವನ ನಗರವಾದ ಕಾಶಿ ನಗರ, ಕಾಶಿ-ತಮಿಳು ಸಂಗಮಕ್ಕೆ ನಿಮ್ಮೆಲ್ಲರನ್ನೂ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ನಮ್ಮ ದೇಶದಲ್ಲಿ 'ಸಂಗಮಗಳು' (ಸಂಗಮಸ್ಥಾನಗಳು) ಯಾವಾಗಲೂ ಹೆಚ್ಚಿನ ಪ್ರಾಮುಖ್ಯವನ್ನು ಹೊಂದಿವೆ. ನದಿಗಳು ಮತ್ತು ತೊರೆಗಳ ಸಂಗಮದಿಂದ ಹಿಡಿದು ಆಲೋಚನೆಗಳು-ಸಿದ್ಧಾಂತಗಳು, ಜ್ಞಾನ-ವಿಜ್ಞಾನ ಮತ್ತು ಸಮಾಜ-ಸಂಸ್ಕೃತಿಗಳವರೆಗೆ ನಾವು ಪ್ರತಿಯೊಂದು ಸಂಗಮವನ್ನು ಆಚರಿಸಿದ್ದೇವೆ. ಈ ಆಚರಣೆಯು ವಾಸ್ತವವಾಗಿ ಭಾರತದ ವೈವಿಧ್ಯ ಮತ್ತು ವಿಶೇಷತೆಗಳ ಆಚರಣೆಯಾಗಿದೆ. ಆದ್ದರಿಂದ, ಕಾಶಿ-ತಮಿಳು ಸಂಗಮ ಸ್ವತಃ ವಿಶೇಷ ಮತ್ತು ಅನನ್ಯವಾಗಿದೆ.
ಇಂದು, ಒಂದೆಡೆ ನಾವು ನಮ್ಮ ಸಾಂಸ್ಕೃತಿಕ ರಾಜಧಾನಿ ಕಾಶಿಯನ್ನು ಹೊಂದಿದ್ದೇವೆ, ಅದು ಇಡೀ ಭಾರತವನ್ನು ಒಳಗೊಂಡಿದೆ, ಮತ್ತು ಮತ್ತೊಂದೆಡೆ, ತಮಿಳುನಾಡು ಮತ್ತು ತಮಿಳು ಸಂಸ್ಕೃತಿ ಇದೆ. ಇದು ಭಾರತದ ಪ್ರಾಚೀನತೆ ಮತ್ತು ಹೆಮ್ಮೆಯ ಕೇಂದ್ರವಾಗಿದೆ. ಈ ಸಂಗಮವು ಗಂಗಾ ಮತ್ತು ಯಮುನೆಯ ಸಂಗಮದಷ್ಟೇ ಪವಿತ್ರವಾಗಿದೆ. ಇದು ಗಂಗಾ ಮತ್ತು ಯಮುನೆಯಷ್ಟೇ ಅಪರಿಮಿತ ಸಾಧ್ಯತೆಗಳು ಮತ್ತು ಸಾಮರ್ಥ್ಯಗಳನ್ನು ಒಳಗೊಂಡಿದೆ. ಈ ಕಾರ್ಯಕ್ರಮದಲ್ಲಿ ನಾನು ಕಾಶಿ ಮತ್ತು ತಮಿಳುನಾಡಿನ ಎಲ್ಲ ಜನರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ಈ ಒಂದು ತಿಂಗಳ ಅವಧಿಯ ಸಮಗ್ರ ಕಾರ್ಯಕ್ರಮವನ್ನು ಸಾಕಾರಗೊಳಿಸಿದ್ದಕ್ಕಾಗಿ ನಾನು ದೇಶದ ಶಿಕ್ಷಣ ಸಚಿವಾಲಯ ಮತ್ತು ಉತ್ತರ ಪ್ರದೇಶ ಸರ್ಕಾರವನ್ನು ಅಭಿನಂದಿಸುತ್ತೇನೆ. ಬಿಎಚ್ ಯು ಮತ್ತು ಐಐಟಿ ಮದ್ರಾಸ್ ನಂತಹ ಪ್ರಮುಖ ಶಿಕ್ಷಣ ಸಂಸ್ಥೆಗಳು ಸಹ ಈ ಕಾರ್ಯಕ್ರಮಕ್ಕೆ ಸಹಕರಿಸುತ್ತಿವೆ. ವಿಶೇಷವಾಗಿ, ಕಾಶಿ ಮತ್ತು ತಮಿಳುನಾಡಿನ ವಿದ್ವಾಂಸರು ಮತ್ತು ವಿದ್ಯಾರ್ಥಿಗಳನ್ನು ನಾನು ಅಭಿನಂದಿಸುತ್ತೇನೆ.
ಸ್ನೇಹಿತರೇ,
ನಮ್ಮ ಋಷಿಮುನಿಗಳು 'ಏಕೋ ಅಹಂ ಬಹು ಸ್ಯಾಮ್' ಎಂದು ಹೇಳಿದ್ದಾರೆ! ಅಂದರೆ, ಒಂದೇ ಪ್ರಜ್ಞೆಯು ವಿವಿಧ ರೂಪಗಳಲ್ಲಿ ಪ್ರಕಟಗೊಳ್ಳುತ್ತದೆ ಎಂದು. ಕಾಶಿ ಮತ್ತು ತಮಿಳುನಾಡಿನ ಸಂದರ್ಭದಲ್ಲಿ, ನಾವು ಈ ತತ್ವಶಾಸ್ತ್ರವನ್ನು ನಾವು ಕಾಣಬಹುದು. ಕಾಶಿ ಮತ್ತು ತಮಿಳುನಾಡು ಎರಡೂ ಕಾಲಾತೀತ ಸಂಸ್ಕೃತಿ ಮತ್ತು ನಾಗರಿಕತೆಯ ಕೇಂದ್ರಗಳಾಗಿವೆ. ಈ ಎರಡೂ ಪ್ರದೇಶಗಳು ವಿಶ್ವದ ಅತ್ಯಂತ ಪ್ರಾಚೀನ ಭಾಷೆಗಳಾದ ಸಂಸ್ಕೃತ ಮತ್ತು ತಮಿಳಿನ ಕೇಂದ್ರಗಳಾಗಿವೆ. ಬಾಬಾ ವಿಶ್ವನಾಥ ಕಾಶಿಯಲ್ಲಿ ನೆಲೆಸಿದ್ದರೆ, ತಮಿಳುನಾಡು ದೇವ ರಾಮೇಶ್ವರಂನಿಂದ ಆಶೀರ್ವದಿಸಲ್ಪಟ್ಟಿದೆ. ಕಾಶಿ ಮತ್ತು ತಮಿಳುನಾಡು ಎರಡೂ 'ಶಿವಮಯ' (ಶಿವನ ಭಕ್ತಿಯಲ್ಲಿ ಮುಳುಗಿದೆ) ಮತ್ತು 'ಶಕ್ತಿಮಯ' (ಶಕ್ತಿ ದೇವಿಯ ಭಕ್ತಿಯಲ್ಲಿ ಮುಳುಗಿದೆ). ಇಲ್ಲಿ ಸ್ವತಃ ಕಾಶಿ ಇದೆ ಮತ್ತು ತಮಿಳುನಾಡಿನಲ್ಲಿ ದಕ್ಷಿಣ ಕಾಶಿ ಇದೆ. ಹಿಂದೂ ಧರ್ಮದ ಏಳು ಪವಿತ್ರ ಯಾತ್ರಾ ಸ್ಥಳಗಳಾದ 'ಸಪ್ತ ಪುರಿ'ಗಳಲ್ಲಿ, 'ಕಾಶಿ-ಕಂಚಿ' ರೂಪದಲ್ಲಿ ಎರಡೂ ತಮ್ಮದೇ ಆದ ಪ್ರಾಮುಖ್ಯವನ್ನು ಹೊಂದಿವೆ.
ಕಾಶಿ ಮತ್ತು ತಮಿಳುನಾಡು ಎರಡೂ ಸಂಗೀತ, ಸಾಹಿತ್ಯ ಮತ್ತು ಕಲೆಯ ಅದ್ಭುತ ಮೂಲಗಳಾಗಿವೆ. ಕಾಶಿಯಲ್ಲಿ 'ತಬಲಾ' ಮತ್ತು ತಮಿಳುನಾಡಿನಲ್ಲಿ 'ತನುಮೈ'! ಬನಾರಸಿ ಸೀರೆ ಕಾಶಿಯಲ್ಲಿ ಲಭ್ಯವಿದ್ದರೆ, ತಮಿಳುನಾಡಿನ ಕಾಂಜೀವರಂ ರೇಷ್ಮೆ ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. ಕಾಶಿ ಮತ್ತು ತಮಿಳುನಾಡು ಎರಡೂ ಭಾರತೀಯ ಆಧ್ಯಾತ್ಮಿಕತೆಯ ಶ್ರೇಷ್ಠ 'ಆಚಾರ್ಯರ' (ಗುರುಗಳ) ಜನ್ಮಸ್ಥಳ ಮತ್ತು 'ಕರ್ಮ ಭೂಮಿ'ಯಾಗಿದೆ (ಕಾರ್ಯಸ್ಥಳ). ಕಾಶಿಯು ತುಳಸಿಯ ಭಕ್ತರ ಭೂಮಿಯಾದರೆ, ತಮಿಳುನಾಡು ಸಂತ ತಿರುವಳ್ಳುವರ್ ಅವರ ಭೂಮಿಯಾಗಿದೆ. ಕಾಶಿ ಮತ್ತು ತಮಿಳುನಾಡಿನ ವಿವಿಧ ವರ್ಣಗಳಲ್ಲಿ ನೀವು ಜೀವನದ ಪ್ರತಿಯೊಂದು ಕ್ಷೇತ್ರ ಮತ್ತು ಆಯಾಮಗಳಲ್ಲಿ ಒಂದೇ ರೀತಿಯ ಶಕ್ತಿಯನ್ನು ಕಾಣಬಹುದು. ಇಂದಿಗೂ ತಮಿಳು ವಿವಾಹ ಸಂಪ್ರದಾಯದಲ್ಲಿ ಕಾಶಿ ಯಾತ್ರೆಯ ಉಲ್ಲೇಖವಿದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಕಾಶಿ ಯಾತ್ರೆಯು ತಮಿಳು ಯುವಕರ ಜೀವನದ ಹೊಸ ಪ್ರಯಾಣಕ್ಕೆ ಸಂಬಂಧಿಸಿದೆ. ಕಾಶಿಯ ಬಗೆಗಿನ ಈ ಚಿರಂತನ ಪ್ರೀತಿಯು ತಮಿಳರ ಹೃದಯಗಳಲ್ಲಿದೆ, ಅದು ಭೂತಕಾಲದಲ್ಲಿಯೂ ಎಂದಿಗೂ ಮರೆಯಾಗಿರಲಿಲ್ಲ, ಅಥವಾ ಭವಿಷ್ಯದಲ್ಲಿ ಎಂದಿಗೂ ಮಸುಕಾಗುವುದಿಲ್ಲ. ಇದು ನಮ್ಮ ಪೂರ್ವಜರು ಬದುಕಿದ 'ಏಕ್ ಭಾರತ್, ಶ್ರೇಷ್ಠ್ ಭಾರತ್' ಸಂಪ್ರದಾಯವಾಗಿದೆ. ಇಂದು ಈ ಕಾಶಿ-ತಮಿಳು ಸಂಗಮ ಮತ್ತೊಮ್ಮೆ ತನ್ನ ವೈಭವವನ್ನು ಮುಂದುವರಿಸುತ್ತಿದೆ.
ಸ್ನೇಹಿತರೇ,
ಕಾಶಿಯ ನಿರ್ಮಾಣ ಮತ್ತು ಅಭಿವೃದ್ಧಿಯಲ್ಲಿ ತಮಿಳುನಾಡು ಅಭೂತಪೂರ್ವ ಕೊಡುಗೆ ನೀಡಿದೆ. ತಮಿಳುನಾಡಿನಲ್ಲಿ ಜನಿಸಿದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ಬಿಎಚ್ ಯುನ ಮಾಜಿ ಉಪಕುಲಪತಿಯಾಗಿದ್ದರು. ಬಿಎಚ್ ಯು ಇಂದಿಗೂ ಅವರ ಕೊಡುಗೆಯನ್ನು ನೆನಪಿಸಿಕೊಳ್ಳುತ್ತದೆ. ಶ್ರೀ ರಾಜೇಶ್ವರ್ ಶಾಸ್ತ್ರಿಯವರಂತಹ ತಮಿಳು ಮೂಲದ ಪ್ರಸಿದ್ಧ ವೈದಿಕ ವಿದ್ವಾಂಸರು ಕಾಶಿಯಲ್ಲಿ ತಂಗಿದ್ದರು. ಅವರು ರಾಮಘಾಟ್ ನಲ್ಲಿ ಸಂಗ್ವೇದ ಶಾಲೆಯನ್ನು ಸ್ಥಾಪಿಸಿದ್ದಾರೆ. ಅಂತೆಯೇ, ಕಾಶಿಯ ಜನರು ಹನುಮಾನ್ ಘಾಟ್ ನಲ್ಲಿ ವಾಸಿಸುತ್ತಿದ್ದ ಶ್ರೀ ಪಟ್ಟಾಭಿರಾಮ ಶಾಸ್ತ್ರಿಗಳನ್ನು ಸಹ ನೆನಪಿಸಿಕೊಳ್ಳುತ್ತಾರೆ. ನೀವು ಕಾಶಿಗೆ ಭೇಟಿ ನೀಡಿದರೆ, ಹರಿಶ್ಚಂದ್ರ ಘಾಟ್ ನಲ್ಲಿ "ಕಾಶಿ ಕಾಮಕೋಟಿಶ್ವರ್ ಪಂಚಾಯತನ ದೇವಾಲಯ" ಇದೆ ಎಂದು ನೋಡಬಹುದು, ಇದು ತಮಿಳರ ದೇವಾಲಯವಾಗಿದೆ. ಕೇದಾರ್ ಘಾಟ್ ನಲ್ಲಿ 200 ವರ್ಷಗಳಷ್ಟು ಹಳೆಯದಾದ ಕುಮಾರಸ್ವಾಮಿ ಮಠ ಮತ್ತು ಮಾರ್ಕಂಡೇಯ ಆಶ್ರಮವೂ ಇದೆ. ತಮಿಳುನಾಡಿನ ಹೆಚ್ಚಿನ ಸಂಖ್ಯೆಯ ಜನರು ಹನುಮಾನ್ ಘಾಟ್ ಮತ್ತು ಕೇದಾರ್ ಘಾಟ್ ಸುತ್ತಲೂ ವಾಸಿಸುತ್ತಿದ್ದಾರೆ. ಅವರು ತಲೆಮಾರುಗಳಿಂದ ಕಾಶಿಗೆ ಅಭೂತಪೂರ್ವ ಕೊಡುಗೆಗಳನ್ನು ನೀಡಿದ್ದಾರೆ. ತಮಿಳುನಾಡಿನ ಇನ್ನೊಬ್ಬ ಮಹಾನ್ ವ್ಯಕ್ತಿ, ಮಹಾನ್ ಕವಿ ಶ್ರೀ ಸುಬ್ರಮಣ್ಯ ಭಾರತಿ ಅವರು ಮಹಾನ್ ಸ್ವಾತಂತ್ರ್ಯ ಹೋರಾಟಗಾರರೂ ಆಗಿದ್ದರು, ಅವರು ಸಹ ಕಾಶಿಯಲ್ಲಿ ಬಹಳ ಕಾಲ ನೆಲೆಸಿದ್ದರು. ಅವರು ಇಲ್ಲಿನ ಮಿಷನ್ ಕಾಲೇಜು ಮತ್ತು ಜೈ ನಾರಾಯಣ್ ಕಾಲೇಜಿನಲ್ಲಿ ಅಧ್ಯಯನ ಮಾಡಿದ್ದಾರೆ. ಅವರು ಕಾಶಿಯೊಂದಿಗೆ ಯಾವ ರೀತಿಯಲ್ಲಿ ಸಂಪರ್ಕ ಹೊಂದಿದ್ದರೆಂದರೆ, ಕಾಶಿಯು ಅವರ ಒಂದು ಭಾಗವಾಗಿತ್ತು. ಅವರು ತಮ್ಮ ಜನಪ್ರಿಯ ಮೀಸೆಯನ್ನು ಇಲ್ಲಿಯೂ ಸಹ ಇಟ್ಟುಕೊಂಡಿದ್ದರು ಎಂದು ಹೇಳಲಾಗುತ್ತದೆ. ಅಂತಹ ಅನೇಕ ವ್ಯಕ್ತಿತ್ವಗಳು, ಸಂಪ್ರದಾಯಗಳು ಮತ್ತು ನಂಬಿಕೆಗಳು ಕಾಶಿ ಮತ್ತು ತಮಿಳುನಾಡುಗಳನ್ನು ರಾಷ್ಟ್ರೀಯ ಏಕತೆಯ ಎಳೆಯೊಂದಿಗೆ ಬೆಸೆದಿವೆ. ಈಗ ಬಿಎಚ್ ಯು ಸುಬ್ರಮಣ್ಯ ಭಾರತಿ ಅವರ ಹೆಸರಿನಲ್ಲಿ ಒಂದು ಅಧ್ಯಯನ ಪೀಠವನ್ನು ಸ್ಥಾಪಿಸುವ ಮೂಲಕ ತನ್ನ ಹೆಮ್ಮೆಯನ್ನು ಹೆಚ್ಚಿಸಿದೆ.
ಸ್ನೇಹಿತರೇ,
ಭಾರತವು ತನ್ನ ಸ್ವಾತಂತ್ರ್ಯದ 'ಅಮೃತ ಕಾಲವನ್ನು' ಆಚರಿಸುವ ಈ ಸಂದರ್ಭದಲ್ಲಿ ಕಾಶಿ-ತಮಿಳು ಸಂಗಮದ ಈ ಕಾರ್ಯಕ್ರಮ ನಡೆಯುತ್ತಿದೆ. 'ಅಮೃತ ಕಾಲವು' ನಮ್ಮ ಸಂಕಲ್ಪಗಳು ಇಡೀ ದೇಶದ ಏಕತೆ ಮತ್ತು ಸಾಮೂಹಿಕ ಪ್ರಯತ್ನಗಳಿಂದ ಈಡೇರುತ್ತದೆ. 'ಸಂ ವೋ ಮನಾನ್ಸಿ ಜಾನತಾಂ’ (ಪರಸ್ಪರರ ಮನಸ್ಸನ್ನು ಅರ್ಥಮಾಡಿಕೊಳ್ಳುವ) ಎಂಬ ಈ ಮಂತ್ರವನ್ನು ಗೌರವಿಸುವ ಮೂಲಕ ಸಾವಿರಾರು ವರ್ಷಗಳಿಂದ ನೈಸರ್ಗಿಕ ಸಾಂಸ್ಕೃತಿಕ ಏಕತೆಯನ್ನು ಬದುಕಿದ ರಾಷ್ಟ್ರ ಭಾರತವಾಗಿದೆ. ನಮ್ಮ ದೇಶದಲ್ಲಿ, ಬೆಳಗಿನ ಜಾವ ಎದ್ದ ನಂತರ 'ಸೌರಾಷ್ಟ್ರೇ ಸೋಮನಾಥಂ' ನಿಂದ 'ಸೇತುಬಂಧೇ ತು ರಮೇಶಂ' ವರೆಗಿನ 12 ಜ್ಯೋತಿರ್ಲಿಂಗಗಳನ್ನು ಸ್ಮರಿಸುವ ಸಂಪ್ರದಾಯವಿದೆ. ದೇಶದ ಆಧ್ಯಾತ್ಮಿಕ ಏಕತೆಯನ್ನು ಸ್ಮರಿಸುವ ಮೂಲಕ ನಾವು ನಮ್ಮ ದಿನವನ್ನು ಪ್ರಾರಂಭಿಸುತ್ತೇವೆ. ಸ್ನಾನ ಮಾಡುವಾಗ ಮತ್ತು ಪೂಜಿಸುವಾಗ ನಾವು ಈ ಮಂತ್ರಗಳನ್ನು ಪಠಿಸುತ್ತೇವೆ - 'ಗಂಗೆ ಚ ಯಮುನೆ ಚೈವ ಗೋದಾವರಿ ಸರಸ್ವತಿ, ನರ್ಮದೆ ಸಿಂಧು ಕಾವೇರಿ ಜಲೇ ಅಸ್ಮಿನ್ ಸನ್ನಿಧಿಂ ಕುರು.' ಅಂದರೆ, ಗಂಗಾ, ಯಮುನಾ ನದಿಯಿಂದ ಗೋದಾವರಿ ಮತ್ತು ಕಾವೇರಿಯವರೆಗಿನ ಎಲ್ಲ ನದಿಗಳು ನಮ್ಮ ನೀರಿನಲ್ಲಿ ನೆಲೆಸಲಿ! ಅಂದರೆ, ನಾವು ಭಾರತದ ಎಲ್ಲ ನದಿಗಳಲ್ಲಿ ಸ್ನಾನ ಮಾಡಬೇಕೆಂದು ಭಾವಿಸುತ್ತೇವೆ ಎಂದರ್ಥ. ಸ್ವಾತಂತ್ರ್ಯದ ನಂತರ ಸಾವಿರಾರು ವರ್ಷಗಳ ಈ ಸಂಪ್ರದಾಯ ಮತ್ತು ಪರಂಪರೆಯನ್ನು ನಾವು ಬಲಪಡಿಸಿ, ಅದನ್ನು ದೇಶದ ಏಕತೆಯ ಎಳೆಯನ್ನಾಗಿ ಮಾಡಬೇಕಾಗಿತ್ತು. ಆದರೆ, ದುರದೃಷ್ಟವಶಾತ್, ಈ ನಿಟ್ಟಿನಲ್ಲಿ ಹೆಚ್ಚಿನ ಪ್ರಯತ್ನಗಳು ನಡೆಯಲಿಲ್ಲ. ಕಾಶಿ-ತಮಿಳು ಸಂಗಮ ಇಂದು ಈ ನಿರ್ಣಯಕ್ಕೆ ವೇದಿಕೆಯಾಗಲಿದೆ. ಇದು ನಮ್ಮ ಕರ್ತವ್ಯಗಳನ್ನು ಅರಿತುಕೊಳ್ಳುವಂತೆ ಮಾಡಿ ರಾಷ್ಟ್ರೀಯ ಏಕತೆಯನ್ನು ಬಲಪಡಿಸಲು ನಮಗೆ ಶಕ್ತಿಯನ್ನು ನೀಡುತ್ತದೆ.
ಸ್ನೇಹಿತರೇ,
ವಿಷ್ಣು ಪುರಾಣದ ಒಂದು ಶ್ಲೋಕವು ಭಾರತದ ರೂಪು ರೇಷೆಯ ಬಗ್ಗೆ ಹೀಗೆ ಹೇಳುತ್ತದೆ. 'ಉತ್ತರಂ ಯತ್ ಸಮುದ್ರಸ್ಯ ಹಿಮಾದ್ರೇಶ್ಚೈವ ದಕ್ಷಿಣಮ್ । ವರ್ಷಂ ತದ್ ಭಾರತಂ ನಾಮ ಭಾರತೀ ಯತ್ರ ಸಂತತಿಃ' ಅಂದರೆ, ಭಾರತವು ಹಿಮಾಲಯದಿಂದ ಹಿಂದೂ ಮಹಾಸಾಗರದವರೆಗೆ ಎಲ್ಲ ವೈವಿಧ್ಯ ಮತ್ತು ವಿಶೇಷತೆಗಳನ್ನು ಒಳಗೊಂಡಿದೆ. ಆಕೆಯ ಪ್ರತಿಯೊಂದು ಮಗುವೂ ಭಾರತೀಯ. ಭಾರತದ ಈ ಮೂಲವನ್ನು ನಾವು ಅನುಭವಿಸಲು, ಸಾವಿರಾರು ಕಿಲೋಮೀಟರ್ ದೂರದಲ್ಲಿದ್ದರೂ ಉತ್ತರ ಮತ್ತು ದಕ್ಷಿಣಗಳು ಎಷ್ಟು ಹತ್ತಿರದಲ್ಲಿವೆ ಎಂಬುದನ್ನು ನಾವು ನೋಡಬಹುದು. ಸಂಗಮ ತಮಿಳು ಸಾಹಿತ್ಯವು ಸಾವಿರಾರು ಮೈಲುಗಳ ದೂರದಲ್ಲಿ ಹರಿಯುವ ಗಂಗೆಯನ್ನು ವೈಭವೀಕರಿಸುತ್ತದೆ ಮತ್ತು ವಾರಾಣಸಿಯ ಜನರನ್ನು ತಮಿಳು ಪಠ್ಯ ಕಳಿಟ್ಟೋಕೈ ಶ್ಲಾಘಿಸಿದೆ. ನಮ್ಮ ಪೂರ್ವಜರು ಮುರುಗ ಮತ್ತು ಕಾಶಿ ಎರಡರ ಮಹಿಮೆಯನ್ನು ತಿರುಪ್ಪುಗಳ್ ಮೂಲಕ ಒಟ್ಟಿಗೆ ಹೊಗಳಿದ್ದಾರೆ ಮತ್ತು ದಕ್ಷಿಣದ ಕಾಶಿ ಎಂದು ಕರೆಯಲ್ಪಡುವ ತೆಂಕಾಸಿಯನ್ನು ಸ್ಥಾಪಿಸಿದ್ದಾರೆ.
ಸ್ನೇಹಿತರೇ,
ಈ ಬಾಂಧವ್ಯವೇ ಭೌತಿಕ ಅಂತರ ಮತ್ತು ಭಾಷೆಗಳ ಅಡೆತಡೆಗಳನ್ನು ಮುರಿದಿದೆ. ಸ್ವಾಮಿ ಕುಮಾರಗುರುಪರವರು ತಮಿಳುನಾಡಿನಿಂದ ಕಾಶಿಗೆ ಬಂದು ಅದನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡರು. ಧರ್ಮಪುರ ಅಧೀನಂನವರಾದ ಸ್ವಾಮಿ ಕುಮಾರಗುರುಪರರು ಕೇದಾರ್ ಘಾಟ್ ನಲ್ಲಿ ಕೇದಾರೇಶ್ವರ ದೇವಾಲಯವನ್ನು ನಿರ್ಮಿಸಿದರು. ನಂತರ, ಅವರ ಶಿಷ್ಯರು ತಂಜಾವೂರು ಜಿಲ್ಲೆಯ ಕಾವೇರಿ ನದಿಯ ದಡದಲ್ಲಿ ಕಾಶಿ ವಿಶ್ವನಾಥ ದೇವಾಲಯವನ್ನು ಸ್ಥಾಪಿಸಿದರು. ಮನೋನ್ಮಣಿಯಂ ಸುಂದರನಾರ್ ಜೀ ಅವರು ತಮಿಳುನಾಡಿನ 'ತಮಿಳು ಥಾಯ್ ವಾಲ್ತು' ಎಂಬ ರಾಜ್ಯ ಗೀತೆಯನ್ನು ಬರೆದಿದ್ದಾರೆ. ಅವರ ಗುರುಗಳಾದ ಕೊಡಗನಲ್ಲೂರು ಸುಂದರ ಸ್ವಾಮಿಗಳು ಕಾಶಿಯ ಮಣಿಕರ್ಣಿಕಾ ಘಾಟ್ ನಲ್ಲಿ ಸಾಕಷ್ಟು ಸಮಯವನ್ನು ಕಳೆದರು ಎಂದು ಹೇಳಲಾಗುತ್ತದೆ. ಕಾಶಿ ಮನೋನ್ಮಣಿಯಂ ಸುಂದರನಾರ್ ಅವರ ಮೇಲೆ ಸಾಕಷ್ಟು ಪ್ರಭಾವ ಬೀರಿತು. ತಮಿಳುನಾಡಿನಲ್ಲಿ ಜನಿಸಿದ ರಾಮಾನುಜಾಚಾರ್ಯರಂತಹ ಸಂತರು ಸಹ ಕಾಶಿಯಿಂದ ಕಾಶ್ಮೀರದವರೆಗೆ ಸಾವಿರಾರು ಮೈಲಿ ಪ್ರಯಾಣಿಸುತ್ತಿದ್ದರು. ಇಂದಿಗೂ ಅವರ ಜ್ಞಾನವನ್ನು ಪುರಾವೆ ಎಂದು ಪರಿಗಣಿಸಲಾಗುತ್ತದೆ.
ಇಂದಿಗೂ ದಕ್ಷಿಣದಿಂದ ಉತ್ತರದವರೆಗಿನ ಇಡೀ ದೇಶವು ಸಿ. ರಾಜಗೋಪಾಲಾಚಾರಿಯವರು ಬರೆದ ರಾಮಾಯಣ ಮತ್ತು ಮಹಾಭಾರತದಿಂದ ಸ್ಫೂರ್ತಿ ಪಡೆಯುತ್ತದೆ. 'ನೀವು ರಾಮಾಯಣ ಮತ್ತು ಮಹಾಭಾರತವನ್ನು ಓದಿರಬಹುದು, ಆದರೆ ನೀವು ಅದನ್ನು ಆಳವಾಗಿ ಅರ್ಥಮಾಡಿಕೊಳ್ಳಲು ಬಯಸಿದರೆ, ರಾಜಾಜಿಯವರು ಬರೆದ ರಾಮಾಯಣ ಮತ್ತು ಮಹಾಭಾರತವನ್ನು ಓದಬೇಕು, ಆಗ ಮಾತ್ರ ನೀವು ಏನನ್ನಾದರೂ ಅರ್ಥಮಾಡಿಕೊಳ್ಳಬಹುದು' ಎಂದು ನನ್ನ ಗುರುಗಳಲ್ಲಿ ಒಬ್ಬರು ನನಗೆ ಹೇಳಿದ್ದು ಈಗಲು ನನಗೆ ನೆನಪಿದೆ. ರಾಮಾನುಜಾಚಾರ್ಯರು ಮತ್ತು ಶಂಕರಾಚಾರ್ಯರಿಂದ ಹಿಡಿದು ರಾಜಾಜಿ ಮತ್ತು ಸರ್ವಪಲ್ಲಿ ರಾಧಾಕೃಷ್ಣನ್ ರವರೆಗೆ ದಕ್ಷಿಣದ ವಿದ್ವಾಂಸರ ಭಾರತೀಯ ತತ್ವಶಾಸ್ತ್ರವನ್ನು ಅರ್ಥಮಾಡಿಕೊಳ್ಳದೆ ನಾವು ಭಾರತವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎಂಬುದು ನನ್ನ ಅನುಭವವಾಗಿದೆ. ಈ ಮಹಾನ್ ಪುರುಷರನ್ನು ನಾವು ಅರ್ಥಮಾಡಿಕೊಳ್ಳಬೇಕಾಗಿದೆ.
ಸ್ನೇಹಿತರೇ,
ಇಂದು, ಭಾರತವು 'ಪಂಚ ಪ್ರಾಣ' (ಐದು ಪ್ರತಿಜ್ಞೆಗಳ) ಮೂಲಕ ನಮ್ಮ ಪರಂಪರೆಯ ಬಗ್ಗೆ ಹೆಮ್ಮೆ ಪಡುತ್ತದೆ. ಪ್ರಪಂಚದ ಯಾವುದೇ ದೇಶವು ಯಾವುದೇ ಪ್ರಾಚೀನ ಪರಂಪರೆಯನ್ನು ಹೊಂದಿದ್ದರೆ, ಆ ದೇಶವು ಅದರ ಬಗ್ಗೆ ಹೆಮ್ಮೆಪಡುತ್ತದೆ. ಅದು ಅದರ ಹೆಮ್ಮೆಯನ್ನು ಜಗತ್ತಿಗೆ ಪರಿಚಯಿಸುತ್ತದೆ. ಈಜಿಪ್ಟಿನ ಪಿರಮಿಡ್ ಗಳಿಂದ ಹಿಡಿದು ಇಟಲಿಯ ಕೊಲೊಸಿಯಂ ಮತ್ತು ಪೀಸಾದ ವಾಲು ಗೋಪುರದವರೆಗೆ ಇಂತಹ ಅನೇಕ ಉದಾಹರಣೆಗಳನ್ನು ನಾವು ನೋಡಬಹುದು. ವಿಶ್ವದ ಅತ್ಯಂತ ಹಳೆಯ ಭಾಷೆಯಾದ ತಮಿಳು ನಮ್ಮಲ್ಲಿದೆ. ಇಂದೂ ಕೂಡಾ, ಈ ಭಾಷೆ ಜೀವಂತವಾಗಿರುವುದರಿಂದ ಜನಪ್ರಿಯವಾಗಿದೆ. ವಿಶ್ವದ ಅತ್ಯಂತ ಹಳೆಯ ಭಾಷೆ ಭಾರತದಲ್ಲಿದೆ ಎಂದು ಪ್ರಪಂಚದ ಜನರು ತಿಳಿದಾಗ, ಅವರು ಆಶ್ಚರ್ಯಚಕಿತರಾಗುತ್ತಾರೆ. ಆದರೆ ಅದನ್ನು ವೈಭವೀಕರಿಸುವಲ್ಲಿ ನಾವು ಹಿಂದುಳಿದಿದ್ದೇವೆ. ಈ ತಮಿಳು ಪರಂಪರೆಯನ್ನು ಸಂರಕ್ಷಿಸಿ ಅದನ್ನು ಶ್ರೀಮಂತಗೊಳಿಸುವುದು 130 ಕೋಟಿ ದೇಶವಾಸಿಗಳ ಜವಾಬ್ದಾರಿಯಾಗಿದೆ. ನಾವು ತಮಿಳನ್ನು ನಿರ್ಲಕ್ಷಿಸಿದರೆ, ರಾಷ್ಟ್ರಕ್ಕೆ ನಾವು ದೊಡ್ಡ ಅಪಚಾರವನ್ನು ಮಾಡಿದಂತೆ ಮತ್ತು ನಾವು ತಮಿಳನ್ನು ನಿರ್ಬಂಧಗಳಲ್ಲಿ ಸೀಮಿತಗೊಳಿಸಿದರೆ, ಅದಕ್ಕೆ ದೊಡ್ಡ ಹಾನಿಯನ್ನು ಮಾಡಿದಂತೆ. ಭಾಷಾ ವ್ಯತ್ಯಾಸಗಳನ್ನು ತೊಲಗಿಸಲು ಮತ್ತು ಭಾವನಾತ್ಮಕ ಏಕತೆಯನ್ನು ಸ್ಥಾಪಿಸಲು ನಾವು ಸದಾ ನೆನಪಿನಲ್ಲಿಡಬೇಕು.
ಸ್ನೇಹಿತರೇ,
ಕಾಶಿ-ತಮಿಳು ಸಂಗಮ ಪದಗಳಿಗಿಂತ ಹೆಚ್ಚಾಗಿ ಅನುಭವದ ವಿಷಯವಾಗಿದೆ ಎಂದು ನಾನು ನಂಬುತ್ತೇನೆ. ಈ ಕಾಶಿ ಯಾತ್ರೆಯ ಸಮಯದಲ್ಲಿ, ನೀವು ನಿಮ್ಮ ಜೀವನದ ಅತ್ಯಂತ ಸವಿಯಾದ ನೆನಪುಗಳೊಂದಿಗೆ ಸಂಪರ್ಕ ಹೊಂದಲಿದ್ದೀರಿ. ಕಾಶಿಯ ಜನರು ನಿಮ್ಮ ಆತಿಥ್ಯದಲ್ಲಿ ಯಾವುದೇ ಅವಕಾಶವನ್ನು ತಪ್ಪಿಸಲು ಬಯಸುವುದಿಲ್ಲ. ಇಂತಹ ಕಾರ್ಯಕ್ರಮಗಳು ತಮಿಳುನಾಡು ಮತ್ತು ಇತರ ದಕ್ಷಿಣದ ರಾಜ್ಯಗಳಲ್ಲಿಯೂ ನಡೆಯಬೇಕು ಮತ್ತು ದೇಶದ ಇತರ ಭಾಗಗಳ ಜನರು ಅಲ್ಲಿಗೆ ಹೋಗಿ ಭಾರತವನ್ನು ಸಂಪೂರ್ಣವಾಗಿ ಅರಿಯಬೇಕು ಎಂದು ನಾನು ಬಯಸುತ್ತೇನೆ. ಈ ಕಾಶಿ-ತಮಿಳು ಸಂಗಮದಿಂದ ಹೊರಬರುವ ಮಕರಂದವನ್ನು ಯುವಕರು ಸಂಶೋಧನೆಯ ಮೂಲಕ ಮುಂದೆ ಕೊಂಡೊಯ್ಯಬೇಕೆಂದು ನಾನು ಬಯಸುತ್ತೇನೆ. ಈ ಬೀಜಗಳು ರಾಷ್ಟ್ರೀಯ ಏಕತೆಯ ಆಲದ ಹೆಮ್ಮರವಾಗಬೇಕು. 'ನಟ್ಟು ನಲ್ಮೆ ನಮ್ದು ನಾಳನ್' (ರಾಷ್ಟ್ರೀಯ ಹಿತಾಸಕ್ತಿಯೇ ನಮ್ಮ ಆಸಕ್ತಿ) ಎಂಬ ಮಂತ್ರವು ನಮ್ಮ ದೇಶವಾಸಿಗಳ ಜೀವನ ಮಂತ್ರವಾಗಬೇಕು. ಇದೇ ಉತ್ಸಾಹದೊಂದಿಗೆ, ಮತ್ತೊಮ್ಮೆ ನಿಮ್ಮೆಲ್ಲರಿಗೂ ಅನಂತ ಶುಭ ಹಾರೈಕೆಗಳನ್ನು ಕೋರುತ್ತೇನೆ.
ಭಾರತ್ ಮಾತಾ ಕಿ - ಜೈ!
ಭಾರತ್ ಮಾತಾ ಕಿ - ಜೈ!
ಭಾರತ್ ಮಾತಾ ಕಿ - ಜೈ!
ಧನ್ಯವಾದಗಳು.
ವಣಕ್ಕಮ್!