ಭಾರತದ ಸ್ವಾತಂತ್ರ್ಯದ 75ನೇ ವರ್ಷದಲ್ಲಿ ನವ ಭಾರತದ ಅಗತ್ಯಗಳು ಮತ್ತು ಆಕಾಂಕ್ಷೆಗಳಿಗೆ ಅನುಗುಣವಾಗಿ ರಾಷ್ಟ್ರದ ರಾಜಧಾನಿಯನ್ನು ಅಭಿವೃದ್ಧಿಪಡಿಸುವಲ್ಲಿ ಭಾರತ ಮತ್ತೊಂದು ಹೆಜ್ಜೆಯನ್ನು ಮುಂದಿಟ್ಟಿದೆ: ಪ್ರಧಾನಿ
ರಾಜಧಾನಿಯಲ್ಲಿ ಆಧುನಿಕ ರಕ್ಷಣಾ ಎನ್‌ಕ್ಲೇವ್‌ ನಿರ್ಮಾಣಕ್ಕೆ ಒಂದು ದೊಡ್ಡ ಹೆಜ್ಜೆ: ಪ್ರಧಾನಿ
ಯಾವುದೇ ದೇಶದ ರಾಜಧಾನಿ ಆ ದೇಶದ ಚಿಂತನೆ, ದೃಢನಿಶ್ಚಯ, ಶಕ್ತಿ ಮತ್ತು ಸಂಸ್ಕೃತಿಯ ಸಂಕೇತವಾಗಿರುತ್ತದೆ: ಪ್ರಧಾನಿ
ಭಾರತವು ಪ್ರಜಾಪ್ರಭುತ್ವದ ತಾಯಿ, ಭಾರತದ ರಾಜಧಾನಿ ಎಂದರೆ ಅಲ್ಲಿ ನಾಗರಿಕರು, ಜನರು ಕೇಂದ್ರ ಸ್ಥಾನದಲ್ಲಿ ಇರಬೇಕು: ಪ್ರಧಾನಿ
ಸುಗಮ ಜೀವನ ಮತ್ತು ಸುಗಮ ವ್ಯಾಪಾರಕ್ಕೆ ಸರಕಾರ ಗಮನ ಕೇಂದ್ರೀಕರಿಸಿದ್ದು, ಇದರಲ್ಲಿ ಆಧುನಿಕ ಮೂಲಸೌಕರ್ಯವು ದೊಡ್ಡ ಪಾತ್ರವನ್ನು ಹೊಂದಿದೆ: ಪ್ರಧಾನಿ
ನೀತಿಗಳು ಮತ್ತು ಉದ್ದೇಶಗಳು ಸ್ಪಷ್ಟವಾಗಿದ್ದಾಗ, ಇಚ್ಛಾಶಕ್ತಿ ಬಲವಾಗಿದ್ದಾಗ ಮತ್ತು ಪ್ರಯತ್ನಗಳು ಪ್ರಾಮಾಣಿಕವಾಗಿದ್ದಾಗ, ಎಲ್ಲವೂ ಸಾಧ್ಯ: ಪ್ರಧಾನಿ
ಅವಧಿಗೆ ಮುನ್ನವೇ ಯೋಜನೆಗಳ ಪೂರ್ಣಗೊಳಿಸುವಿಕೆಯು ಬದಲಾದ ಕಾರ್ಯವಿಧಾನ ಮತ್ತು ಚಿಂತನೆಯನ್ನು ಸೂಚಿಸುತ್ತದೆ: ಪ್ರಧಾನಿ

ಕಾರ್ಯಕ್ರಮದಲ್ಲಿ ಹಾಜರಿರುವ ಕೇಂದ್ರ ಸಂಪುಟದಲ್ಲಿ ನನ್ನ ಹಿರಿಯ ಸಹೋದ್ಯೋಗಿಯಾಗಿರುವ ಶ್ರೀ ರಾಜನಾಥ್ ಸಿಂಗ್ ಜೀ, ಅಜಯ್ ಭಟ್ ಜೀ, ಕೌಶಲ್ ಕಿಶೋರ್ ಜೀ, ರಕ್ಷಣಾ ಸಿಬ್ಬಂದಿಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಮೂರೂ ಸೇವೆಗಳ ಮುಖ್ಯಸ್ಥರೇ, ಹಿರಿಯ ಅಧಿಕಾರಿಗಳೇ ಮತ್ತು ಇತರ ಗಣ್ಯರೇ, ಮಹಿಳೆಯರೇ ಮತ್ತು ಮಹನೀಯರೇ,

ಸ್ವಾತಂತ್ರ್ಯದ 75 ನೇ ವರ್ಷದಲ್ಲಿ ನಾವು ದೇಶದ ರಾಜಧಾನಿಯನ್ನು ನವಭಾರತದ ಆವಶ್ಯಕತೆಗಳು ಮತ್ತು ಆಶೋತ್ತರಗಳಿಗೆ ಅನುಗುಣವಾಗಿ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯನ್ನಿಡುತ್ತಿದ್ದೇವೆ. ಈ ಹೊಸ ರಕ್ಷಣಾ ಕಚೇರಿಗಳ ಸಂಕೀರ್ಣ ನಮ್ಮ ಪಡೆಗಳಿಗೆ ಹೆಚ್ಚು ಅನುಕೂಲಕರವಾಗಿ ಮತ್ತು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಈ ಹೊಸ ಸೌಲಭ್ಯಗಳಿಗಾಗಿ ರಕ್ಷಣಾ ಸೇವೆಗಳ ಜೊತೆ ಸಂಬಂಧ  ಇರುವ ಎಲ್ಲಾ  ಸಹೋದ್ಯೋಗಿಗಳನ್ನು ಅಭಿನಂದಿಸುತ್ತೇನೆ.

ಸ್ನೇಹಿತರೇ,

ನಿಮಗೆಲ್ಲಾ ತಿಳಿದಿದೆ, ಇದುವರೆಗೆ ರಕ್ಷಣಾ ಸಂಬಂಧಿ ಕೆಲಸಗಳು ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ನಿರ್ಮಾಣವಾದಂತಹ ಗೂಡುಗಳಂತಹ ಕಟ್ಟಡಗಳಿಂದ ನಿರ್ವಹಿಸಲ್ಪಡುತ್ತಿದ್ದವು. ಇವುಗಳನ್ನು ಆಗ ಕುದುರೆ ಲಾಯಗಳು ಮತ್ತು ಬ್ಯಾರಕುಗಳ ಅನುಕೂಲಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಮಾಣ ಮಾಡಲಾಗಿತ್ತು. .ಸ್ವಾತಂತ್ರ್ಯದ ಬಳಿಕದ ದಶಕಗಳಲ್ಲಿ ಇಂತಹ ಕಟ್ಟಡಗಳನ್ನು ರಕ್ಷಣಾ ಸಚಿವಾಲಯ, ಭೂಸೇನೆ, ನೌಕಾದಳ, ಮತ್ತು ವಾಯು ದಳಗಳ ಕಚೇರಿಗಳನ್ನಾಗಿ ಮಾರ್ಪಡಿಸಲಾಯಿತು ಮತ್ತು ಕಾಲ ಕಾಲಕ್ಕೆ ಸಣ್ಣ ಪುಟ್ಟ ದುರಸ್ತಿಗಳನ್ನೂ ಮಾಡಲಾಯಿತು. ಹಿರಿಯ ಅಧಿಕಾರಿಗಳು ಬರುವಾಗ ಹೊಸದಾಗಿ ಬಣ್ಣವನ್ನು ಹೊಡೆಸಲಾಗುತ್ತಿತ್ತು. ಮತ್ತು ಇದು ಹಾಗೆಯೇ ನಡೆದುಕೊಂಡು ಬಂದಿತ್ತು. ನಾನಿದನ್ನು ನಿಕಟವಾಗಿ ಗಮನಿಸುತ್ತಿರುವಾಗ ನನ್ನ ಮನಸ್ಸಿಗೆ ಮೊದಲು ಬಂದ ಸಂಗತಿ ಎಂದರೆ ದೇಶದ ಭದ್ರತೆಗಾಗಿ ದುಡಿಯುವ ಪ್ರಮುಖ ಸೇನಾ ಸಿಬ್ಬಂದಿ ಇಂತಹ ಕೆಟ್ಟ ಪರಿಸ್ಥಿತಿಯಲ್ಲಿ ಹೇಗೆ ಕೆಲಸ ಮಾಡುತ್ತಾರೆ ಎಂಬುದಾಗಿತ್ತು. ದಿಲ್ಲಿಯಲ್ಲಿರುವ ನಮ್ಮ ಮಾಧ್ಯಮಗಳು ಇದನ್ನೇಕೆ ಬರೆದಿಲ್ಲ? ನನ್ನ ಮನಸ್ಸಿಗೆ ಏನು ಬಂತೆಂದರೆ ಇಂತಹ ಸ್ಥಳ ಸಹಜವಾಗಿ ಭಾರತ ಸರಕಾರ ಏನು ಮಾಡುತ್ತಿದೆ? ಎಂದು ಟೀಕೆಗೆ ಒಳಗಾಗಬೇಕಿತ್ತು. ಆದರೆ ಯಾಕೆಂದು ನನಗೆ ಗೊತ್ತಿಲ್ಲ, ಇದರ ಬಗ್ಗೆ ಯಾರೂ ಗಮನ ಹರಿಸಲಿಲ್ಲ. ಈ ಗೂಡುಗಳಂತಹ ರಚನೆಗಳಲ್ಲಿ ಇರುವ ಸಮಸ್ಯೆಗಳ ಬಗ್ಗೆ ನಿಮಗೆ ಕೂಡಾ ತಿಳಿದಿದೆ.  

ಇಂದು ನಾವು ಮಿಲಿಟರಿಯನ್ನು 21 ನೇ ಶತಮಾನದ ಭಾರತಕ್ಕೆ ಅನುಗುಣವಾಗಿ ಪ್ರತಿಯೊಂದು ರೀತಿಯಲ್ಲಿ ಆಧುನೀಕರಿಸುತ್ತಿರುವಾಗ, ಆಧುನಿಕ ಸೂಕ್ತ ಸಲಕರಣೆಗಳನ್ನು, ಶಸ್ತ್ರಾಸ್ತ್ರಗಳನ್ನು  ಒದಗಿಸುತ್ತಿರುವಾಗ (ನಮ್ಮ ಸಶಸ್ತ್ರ ಪಡೆಗಳಿಗೆ), ಗಡಿ ಮೂಲಸೌಕರ್ಯಗಳನ್ನು ಆಧುನೀಕರಿಸುತ್ತಿರುವಾಗ, ಪಡೆಗಳ ರಕ್ಷಣಾ  ಸಿಬ್ಬಂದಿ ಮುಖ್ಯಸ್ಥರ ಮೂಲಕ ಉತ್ತಮ ಸಮನ್ವಯವನ್ನು ಖಾತ್ರಿಪಡಿಸುತ್ತಿರುವಾಗ, ಹಿಂದೆ ವರ್ಷಗಳ ಕಾಲಾವಧಿಯನ್ನು ತೆಗೆದುಕೊಳ್ಳುತ್ತಿದ್ದ ಸೇನಾ ಅವಶ್ಯಕ ಸಾಮಗ್ರಿಗಳ ಖರೀದಿಯನ್ನು ತ್ವರಿತಗೊಳಿಸಿರುವಾಗ ರಕ್ಷಣಾ ಮತ್ತು ದೇಶದ ಭದ್ರತೆಗೆ ಸಂಬಂಧಿಸಿದ ಕೆಲಸಗಳನ್ನು ಈ ದಶಕಗಳಷ್ಟು ಹಳೆಯ ಗೂಡುಗಳಿಂದ ನಡೆಸುವುದು ಹೇಗೆ ಸಾಧ್ಯ. ಅದುದರಿಂದ, ಈ ಪರಿಸ್ಥಿತಿಯನ್ನು ಬದಲಾಯಿಸುವುದು ಅಗತ್ಯವಾಗಿತ್ತು. ಸೆಂಟ್ರಲ್  ವಿಸ್ತಾ ಯೋಜನೆಯನ್ನು ಟೀಕಿಸುವವರು 7,000 ಕ್ಕೂ ಅಧಿಕ ಸೇನಾ ಅಧಿಕಾರಿಗಳಿಗಾಗಿ ಸಂಕೀರ್ಣವನ್ನು ಅಭಿವೃದ್ಧಿ ಮಾಡುವಾಗ ಮೌನವಾಗಿದ್ದರು, ಇದು ಕೂಡಾ ಸೆಂಟ್ರಲ್ ವಿಸ್ತಾ ಯೋಜನೆಯ ಭಾಗ ಎಂಬುದನ್ನು  ನಾನು ಬೆಟ್ಟು ಮಾಡಿ ತೋರಿಸ ಬಯಸುತ್ತೇನೆ. ಅವರಿಗೆ ಗೊತ್ತಿತ್ತು, ಅವರ ಉದ್ದೇಶ ಇದ್ದುದು ಗೊಂದಲಗಳನ್ನು ಹರಡುವುದರಲ್ಲಿ. ಹಾಗು ಈ ಸಂಕೀರ್ಣದ ಬಗ್ಗೆ ಮಾತನಾಡಿದರೆ ಅವರ ಸುಳ್ಳುಗಳು ಬಯಲಾಗುತ್ತವೆ ಎಂಬುದೂ ಅವರಿಗೆ ತಿಳಿದಿತ್ತು. ಆದರೆ ದೇಶವು  ಈ ಸೆಂಟ್ರಲ್  ವಿಸ್ತಾದ ಹಿಂದಿನ ನಮ್ಮ ಉದ್ದೇಶಗಳನ್ನು ಗಮನಿಸುತ್ತಿತ್ತು. ಕೆ.ಜಿ.ಮಾರ್ಗ ಮತ್ತು ಆಫ್ರಿಕಾ ಅವೆನ್ಯೂಗಳಲ್ಲಿರುವ ಈ ಆಧುನಿಕ ಕಚೇರಿಗಳು ರಾಷ್ಟ್ರದ ಭದ್ರತೆಗೆ ಸಂಬಂಧಿಸಿದ ಎಲ್ಲಾ ಕೆಲಸಗಳನ್ನು ಸಮರ್ಪಕವಾಗಿ ನಡೆಸುವುದಕ್ಕೆ ಬಹಳ ಸಹಾಯವಾಗಲಿವೆ. ರಾಜಧಾನಿಯಲ್ಲಿ ಆಧುನಿಕ ರಕ್ಷಣಾ ಆವರಣ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಇದೊಂದು ಬಹಳ ದೊಡ್ಡ ಮತ್ತು ಪ್ರಮುಖ ಹೆಜ್ಜೆ. ನಮ್ಮ ಜವಾನರಿಗೆ ಮತ್ತು ಸಿಬ್ಬಂದಿಗೆ ಉಭಯ ಸಂಕೀರ್ಣಗಳಲ್ಲಿಯೂ ಪ್ರತಿಯೊಂದು ಅವಶ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ. ಮತ್ತು ನನ್ನ ಮನಸ್ಸಿನಲ್ಲಿ ಏನಾಗುತ್ತಿದೆ ಎಂಬುದನ್ನೂ ನಾನು ನನ್ನ ದೇಶವಾಸಿಗಳಿಗೆ ತಿಳಿಸಲು ಇಚ್ಛಿಸುತ್ತೇನೆ.

ನೀವು 2014ರಲ್ಲಿ ನನಗೆ ದೇಶಕ್ಕಾಗಿ ಸೇವೆ ಸಲ್ಲಿಸುವ ಅವಕಾಶ ಕೊಟ್ಟಾಗ, ಸರಕಾರಿ ಕಚೇರಿಗಳ ಪರಿಸ್ಥಿತಿ ಚೆನ್ನಾಗಿಲ್ಲ ಎಂಬುದು ನನಗೆ ಗೊತ್ತಿತ್ತು. ಸಂಸತ್ ಭವನದ ಸ್ಥಿತಿ ಕೂಡಾ ಚೆನ್ನಾಗಿರಲಿಲ್ಲ. ನಾನು ಈ ಕೆಲಸವನ್ನು (ಸಂಸತ್ತಿನದು) 2014 ರಲ್ಲಿಯೇ ಮಾಡಬಹುದಿತ್ತು, ಆದರೆ ಅದನ್ನು ಮಾಡದಿರಲು ನಾನು ನಿಶ್ಚಯಿಸಿದೆ. ಮೊದಲು ನಾನು ನಮ್ಮ ದೇಶದ ಹೆಮ್ಮೆಗಾಗಿ ಹೋರಾಡಿದ ಮತ್ತು ತಾಯ್ನಾಡಿಗಾಗಿ ಹುತಾತ್ಮರಾದ ಧೀರ ಯೋಧರಿಗೆ ಸ್ಮಾರಕ ನಿರ್ಮಾಣ ಮಾಡಲು ನಿರ್ಧರಿಸಿದೆ. ಸ್ವಾತಂತ್ರ್ಯ ದೊರೆತಾಗಲೇ ಆರಂಭಗೊಳ್ಳಬೇಕಿದ್ದ ಈ ಕೆಲಸ 2014ರ ಬಳಿಕ  ಆರಂಭವಾಯಿತು. ಆ ಕೆಲಸ ಪೂರ್ಣಗೊಂಡ ಬಳಿಕವಷ್ಟೇ ನಾವು ಸೆಂಟ್ರಲ್ ವಿಸ್ತಾದ ಕೆಲಸವನ್ನು ನಮ್ಮ ಕಚೇರಿಗಳನ್ನು ಸುಧಾರಿಸುವುದಕ್ಕಾಗಿ ಕೈಗೆತ್ತಿಕೊಂಡೆವು. ನಾವು ಮೊದಲು ಚಿಂತಿಸಿದ್ದು ಧೀರ ಹುತಾತ್ಮರ ಬಗ್ಗೆ, ನಮ್ಮ ದೇಶದ ಧೀರ ಸೈನಿಕರ ಬಗ್ಗೆ.

ಸ್ನೇಹಿತರೇ,

ಕಚೇರಿ ಬಳಕೆಯ ಈ ನಿರ್ಮಾಣ ಕಾರ್ಯದ ಜೊತೆ ಇಲ್ಲಿ ನಿವಾಸಿ ಸಂಕೀರ್ಣಗಳ ನಿರ್ಮಾಣ ಕಾರ್ಯವನ್ನೂ ಕೈಗೆತ್ತಿಕೊಳ್ಳಲಾಯಿತು. ವಾಸ್ತವ್ಯ, ಅಡುಗೆ, ಮೆಸ್, ಚಿಕಿತ್ಸೆಗೆ ಸಂಬಂಧಿಸಿದ ಆಧುನಿಕ ಸೌಲಭ್ಯಗಳನ್ನೂ ಒಳಗೊಂಡ ಅಗತ್ಯ ವ್ಯವಸ್ಥೆಗಳನ್ನು ಪ್ರಮುಖವಾದ ಭದ್ರತಾ ಕಾರ್ಯದಲ್ಲಿ ದಿನದ 24 ಗಂಟೆಯೂ ತೊಡಗಿಸಿಕೊಳ್ಳುವ ಜವಾನರಿಗಾಗಿ ಅಭಿವೃದ್ದಿಪಡಿಸಲಾಗಿದೆ. ಬಾಕಿ ಇರುವ ತಮ್ಮ ಅಧಿಕೃತ ಕಾರ್ಯಗಳಿಗಾಗಿ ದೇಶದ ವಿವಿಧೆಡೆಗಳಿಂದ ಬರುವ ಸಾವಿರಾರು ನಿವೃತ್ತ ಸೈನಿಕರನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ತೊಂದರೆಯಾಗದಂತೆ  ಸೂಕ್ತ ಸಂಪರ್ಕ ವ್ಯವಸ್ಥೆಯನ್ನು ಮಾಡಲಾಗಿದೆ. ಅತ್ಯುತ್ತಮ ಸಂಗತಿ ಎಂದರೆ ನಿರ್ಮಾಣ ಮಾಡಲಾದ ಕಟ್ಟಡಗಳು ಪರಿಸರ ಸ್ನೇಹಿಯಾಗಿವೆ ಮತ್ತು ರಾಜಧಾನಿಯ ಗುರುತಾಗಿರುವ  ಕಟ್ಟಡಗಳ ಪ್ರಾಚೀನತೆಯ ರೂಪವನ್ನು ಉಳಿಸಿಕೊಳ್ಳಲಾಗಿದೆ. ಭಾರತದ ಕಲಾವಿದರ ಅತ್ಯಾಕರ್ಷಕ ಕಲಾಕೃತಿಗಳನ್ನು ಮತ್ತು ಆತ್ಮ ನಿರ್ಭರ ಭಾರತದ ಚಿಹ್ನೆಗಳನ್ನು ಇಲ್ಲಿಯ ಸಂಕೀರ್ಣಗಳಲ್ಲಿ ಇರಿಸಲಾಗಿದೆ. ದಿಲ್ಲಿಯ ಚಲನಶೀಲತೆಯನ್ನು ಉಳಿಸಿಕೊಂಡು ಮತ್ತು ಪರಿಸರವನ್ನು ಉಳಿಸಿಕೊಂಡು ಇಲ್ಲಿ ಪ್ರತಿಯೊಬ್ಬರೂ ನಮ್ಮ ಸಾಂಸ್ಕೃತಿಕ ವೈವಿಧ್ಯದ ಆದುನಿಕ ಮಾದರಿಯನ್ನು ಅನುಭವಿಸಬಹುದಾಗಿದೆ.

ಸ್ನೇಹಿತರೇ,   

ದಿಲ್ಲಿಯು ಭಾರತದ ರಾಜಧಾನಿಯಾಗಿ ನೂರು ವರ್ಷಗಳಿಗೂ ಅಧಿಕ ವರ್ಷಗಳು ಸಂದಿವೆ.  ನೂರು ವರ್ಷಗಳಿಗೂ ಅಧಿಕ ವರ್ಷದ ಈ ಅವಧಿಯಲ್ಲಿ  ಜನಸಂಖ್ಯೆ ಮತ್ತು ಇತರ ಪರಿಸ್ಥಿತಿಗಳಿಗೆ ಸಂಬಂಧಿಸಿ ಬಹಳ ದೊಡ್ಡ ಅಸಮತೋಲನ ಉಂಟಾಗಿದೆ. ನಾವು ರಾಜಧಾನಿಯ ಬಗ್ಗೆ ಮಾತನಾಡುವಾಗ, ಅದು ಬರೇ ನಗರವಲ್ಲ. ರಾಜಧಾನಿ ಎಂದರೆ ಚಿಂತನೆ, ದೃಢ ನಿರ್ಧಾರ, ಶಕ್ತಿ ಮತ್ತು ದೇಶದ ಸಂಸ್ಕೃತಿಯ ಸಂಕೇತ. ಭಾರತವು ಪ್ರಜಾಪ್ರಭುತ್ವದ ತಾಯಿ. ಆದುದರಿಂದ ಭಾರತದ ರಾಜಧಾನಿ ತನ್ನ ಜನತೆಯ ಕೇಂದ್ರವಾಗಿರಬೇಕಾಗಿತ್ತು. ಇಂದು ನಾವು ಜೀವಿಸಲು ಅನುಕೂಲಕರ ವಾತಾವರಣ ಮತ್ತು ವ್ಯಾಪಾರೋದ್ಯಮಕ್ಕೆ ಅನುಕೂಲಕರ ವಾತಾವರಣದತ್ತ ನಮ್ಮ ಗಮನವನ್ನು ಕೇಂದ್ರೀಕರಿಸಿರುವಾಗ ಅದರಲ್ಲಿ ಆಧುನಿಕ ಮೂಲಸೌಕರ್ಯ ಅಷ್ಟೇ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಈ ಉತ್ಸಾಹ ಈಗ ನಿರ್ಮಾಣವಾಗುತ್ತಿರುವ ಸೆಂಟ್ರಲ್ ವಿಸ್ತಾದ ಕಾಮಗಾರಿಯ ತಿರುಳು. ಸೆಂಟ್ರಲ್ ವಿಸ್ತಾಕ್ಕೆ ಸಂಬಂಧಿಸಿ ಇಂದು ಆರಂಭಿಸಲಾದ ಜಾಲತಾಣದಲ್ಲಿ ಈ ಬಗ್ಗೆ ವಿವರಗಳು ಲಭ್ಯ ಇವೆ.  

ಸ್ನೇಹಿತರೇ,

ವರ್ಷಗಳಿಂದ, ಅದು ದೇಶಾದ್ಯಂತದ ಚುನಾಯಿತ ಪ್ರತಿನಿಧಿಗಳಿಗಾಗಿ ಹೊಸ ಮನೆಗಳಿರಬಹುದು, ಅಂಬೇಡ್ಕರ್ ಜೀ ಅವರ ಸ್ಮರಣೆಯನ್ನು ನಿರಂತರವಾಗಿಸುವ ಪ್ರಯತ್ನ ಇರಬಹುದು, ಅಥವಾ ಹಲವು ಹೊಸ ಕಟ್ಟಡಗಳಿರಬಹುದು ದಿಲ್ಲಿಯಲ್ಲಿ ರಾಜಧಾನಿಯ ಆಶೋತ್ತರಗಳನ್ನು ಗಮನದಲ್ಲಿಟ್ಟುಕೊಂಡು  ಹೊಸ ನಿರ್ಮಾಣಗಳಿಗೆ ಆದ್ಯತೆಯನ್ನು ನೀಡುತ್ತ ಬರಲಾಗಿದೆ. ನಮ್ಮ ಸೇನೆಯ ಮತ್ತು ನಮ್ಮ ಹುತಾತ್ಮರ ಗೌರವಾರ್ಥದ ರಾಷ್ಟ್ರೀಯ ಸ್ಮಾರಕವೂ ಇದರಲ್ಲಿ ಸೇರಿದೆ. ಹಲವಾರು ದಶಕಗಳ ಬಳಿಕ ಸೇನೆಯ, ಅರೆಮಿಲಿಟರಿ ಪಡೆಗಳ ಮತ್ತು ಪೊಲೀಸ್ ಪಡೆಗಳ  ಹುತಾತ್ಮರಿಗಾಗಿ ನಿರ್ಮಾಣವಾಗಿರುವ ರಾಷ್ಟ್ರೀಯ ಸ್ಮಾರಕಗಳು ಇಂದು ದಿಲ್ಲಿಗೆ ಹೆಮ್ಮೆ ತಂದಿವೆ. ಮತ್ತು ಬಹಳ ಮುಖ್ಯವಾದ ಸಂಗತಿ ಎಂದರೆ ಈ ಬಹುತೇಕ ಸ್ಮಾರಕಗಳು ನಿಗದಿತ ಕಾಲಾವಧಿಗೆ ಮೊದಲೇ ಪೂರ್ಣಗೊಂಡಿವೆ. ಇಲ್ಲದಿದ್ದರೆ ವಿಳಂಬ ಎನ್ನುವುದು ಸರಕಾರದ ಜೊತೆ ಅನ್ವರ್ಥಕವಾಗಿರುತ್ತಿತ್ತು. 4-6 ತಿಂಗಳ ವಿಳಂಬವನ್ನು ಸಹಜ ಎಂದು ಭಾವಿಸಲಾಗುತ್ತದೆ. ನಾವು ಸರಕಾರದಲ್ಲಿ ಹೊಸ ಕೆಲಸದ ಸಂಸ್ಕೃತಿಯನ್ನು ಅಳವಡಿಸಲು ಪ್ರಾಮಾಣಿಕ ಪ್ರಯತ್ನವನ್ನು ಮಾಡಿದೆವು. ದೇಶದ ಸಂಪತ್ತು ವ್ಯರ್ಥವಾಗಬಾರದೆಂದು ಕಾಲಮಿತಿಯಲ್ಲಿ ಕೆಲಸ ಪೂರ್ಣಗೊಳ್ಳಬೇಕೆಂದು ವಿಧಿಸಿದೆವು. ಹಾಗೆಯೇ ಉದ್ದೇಶಿಸಿದ ಖರ್ಚಿಗಿಂತ ಕಡಿಮೆ ಖರ್ಚಿನಲ್ಲಿ ಕೆಲಸ ಮುಗಿಯುವಂತೆ ನೋಡಿಕೊಂಡೆವು. ನಾವು ವೃತ್ತಿಪರತೆ ಹಾಗು ದಕ್ಷತೆಗೆ ಆದ್ಯತೆ ನೀಡಿದ್ದು  ಈ ಧೋರಣೆಯಲ್ಲಿ ದಕ್ಷತೆಗೆ ಇಂದಿನದು ಅತಿ ದೊಡ್ಡ ಉದಾಹರಣೆಯಾಗಿದೆ.

ರಕ್ಷಣಾ ಕಚೇರಿಗಳ ಸಂಕೀರ್ಣ 24 ತಿಂಗಳಿಗೆ ಬದಲಾಗಿ 12 ತಿಂಗಳ ದಾಖಲೆ ಅವಧಿಯಲ್ಲಿ ಪೂರ್ಣಗೊಂಡಿದೆ, ಅಂದರೆ 50 ಪ್ರತಿಶತದಷ್ಟು ಸಮಯ ಉಳಿತಾಯವಾಗಿದೆ. ಕೊರೊನಾದಿಂದಾಗಿ ಕಾರ್ಮಿಕರ ಕೊರತೆಯಿಂದ ಹಿಡಿದು ಇತರೆಲ್ಲಾ ಸವಾಲುಗಳಿದ್ದಾಗ್ಯೂ ಈ ಸಾಧನೆ ಆಗಿದೆ. ಕೊರೊನಾ ಕಾಲದಲ್ಲಿ ನೂರಾರು ಕಾರ್ಮಿಕರಿಗೆ ಈ ಯೋಜನೆಯಲ್ಲಿ ಉದ್ಯೋಗ ದೊರಕಿದೆ. ಎಲ್ಲಾ ಕಾರ್ಮಿಕ ಸಂಗಾತಿಗಳು, ಇಂಜಿನಿಯರುಗಳು, ಸಿಬ್ಬಂದಿಗಳು ಮತ್ತು ಅಧಿಕಾರಿಗಳು ಅಭಿನಂದನೆಗೆ ಅರ್ಹರು. ಕೊರೊನಾ ಕುರಿತಂತೆ ಭಯದ ವಾತಾವರಣ ಇದ್ದಾಗ್ಯು ಮತ್ತು ಅಲ್ಲಿ ಬದುಕು ಹಾಗು ಸಾವಿನ ನಡುವೆ ಪ್ರಶ್ನಾರ್ಥಕ ಚಿಹ್ನೆ ಇದ್ದರೂ ಆ ಸಮಯದಲ್ಲಿ ರಾಷ್ಟ್ರ ನಿರ್ಮಾಣದ ಈ ಪವಿತ್ರ ಕಾರ್ಯದಲ್ಲಿ ತೊಡಗಿದ ಎಲ್ಲಾ ಜನರನ್ನೂ ಇಡೀ ದೇಶ ಅಭಿನಂದಿಸುತ್ತದೆ. ನೀತಿ ಮತ್ತು ಉದ್ದೇಶಗಳು ಸ್ಪಷ್ಟವಾಗಿದ್ದಾಗ, ಇಚ್ಛಾ ಶಕ್ತಿ ಬಲಿಷ್ಠವಾಗಿದ್ದಾಗ, ಪ್ರಯತ್ನಗಳು ಪ್ರಾಮಾಣಿಕವಾಗಿದ್ದಾಗ  ಅಸಾಧ್ಯವಾದುದು ಯಾವುದೂ ಇಲ್ಲ. ಎಲ್ಲವೂ ಸಾಧ್ಯವಿರುತ್ತದೆ. ನಾನು ಖಚಿತವಾಗಿ ಹೇಳುತ್ತೇನೆ ದೇಶದ ಹೊಸ ಸಂಸತ್ ಭವನ ಕಟ್ಟಡ ನಿರ್ಮಾಣ ಹರ್ ದೀಪ ಜೀ ಅವರು ಆತ್ಮವಿಶ್ವಾಸದಿಂದ ಹೇಳಿದಂತೆ, ನಿಗದಿತ ಸಮಯದೊಳಗೆ ಪೂರ್ಣಗೊಳ್ಳಲಿದೆ.

ಸ್ನೇಹಿತರೇ,

ತ್ವರಿತಗತಿಯ ನಿರ್ಮಾಣ ಕಾರ್ಯದಲ್ಲಿ ಹೊಸ ನಿರ್ಮಾಣ ತಂತ್ರಜ್ಞಾನ ಬಹಳ ದೊಡ್ಡ ಪಾತ್ರವನ್ನು ವಹಿಸಿದೆ. ಸಾಂಪ್ರದಾಯಿಕ ಆರ್.ಸಿ.ಸಿ. ನಿರ್ಮಾಣಕ್ಕೆ ಬದಲಾಗಿ ಹಗುರವಾದ ಉಕ್ಕಿನ ಚೌಕಟ್ಟು ತಂತ್ರಜ್ಞಾನವನ್ನು ರಕ್ಷಣಾ ಕಚೇರಿ ಸಂಕೀರ್ಣದಲ್ಲಿ ಬಳಸಲಾಗಿದೆ. ಈ ಕಟ್ಟಡಗಳು ಹೊಸ ತಂತ್ರಜ್ಞಾನದಿಂದಾಗಿ ಅಗ್ನಿ ಮತ್ತು ಇತರ ಪ್ರಾಕೃತಿಕ ವಿಕೋಪಗಳಿಂದ ಸುರಕ್ಷಿತವಾಗಿವೆ. ಈ ಹೊಸ ಸಂಕೀರ್ಣಗಳ ನಿರ್ಮಾಣದಿಂದಾಗಿ ಡಜನ್ನುಗಟ್ಟಲೆ ಎಕರೆ ಪ್ರದೇಶದಲ್ಲಿ ಹರಡಿದ್ದ ಹಳೆಯ ಗೂಡುಗಳ ನಿರ್ವಹಣಾ ವೆಚ್ಚವೂ ಉಳಿತಾಯವಾಗಲಿದೆ. ಆಧುನಿಕ ನಿರ್ಮಾಣ ತಂತ್ರಜ್ಞಾನವನ್ನು  ದಿಲ್ಲಿಯಲ್ಲಿ ಮಾತ್ರವಲ್ಲ ದೇಶದ ಇತರ ನಗರಗಳಲ್ಲಿಯೂ ಸ್ಮಾರ್ಟ್ ಸೌಲಭ್ಯಗಳನ್ನು ಅಭಿವೃದ್ಧಿ ಮಾಡುವಲ್ಲಿ ಮತ್ತು ಬಡವರಿಗೆ ಪಕ್ಕಾ ಮನೆಗಳನ್ನು ಒದಗಿಸುವ ನಿಟ್ಟಿನಲ್ಲಿ ಗಮನ ಕೇಂದ್ರೀಕರಣಗೊಳ್ಳುತ್ತಿರುವುದರ ಬಗ್ಗೆ ನನಗೆ ಸಂತೋಷವಿದೆ. ದೇಶದ ಆರು ನಗರಗಳಲ್ಲಿ ಚಾಲ್ತಿಯಲ್ಲಿರುವ ಲೈಟ್ ಹೌಸ್ (ಹಗುರ ಮನೆಗಳ)  ಯೋಜನೆಗಳು   ಈ ನಿಟ್ಟಿನಲ್ಲಿ ಬಹಳ ದೊಡ್ಡ ಪ್ರಯೋಗಗಳಾಗಿವೆ. ಈ ವಲಯದಲ್ಲಿ ಹೊಸ ನವೋದ್ಯಮಗಳನ್ನು ಉತ್ತೇಜಿಸಲಾಗುತ್ತಿದೆ. ನಮ್ಮ ನಗರ ಕೇಂದ್ರಗಳನ್ನು ನಾವು ಯಾವ ವೇಗದಲ್ಲಿ ಮತ್ತು ಪ್ರಮಾಣದಲ್ಲಿ ಪರಿವರ್ತಿಸಬೇಕೋ ಅದು ಸಾಧ್ಯವಾಗುವುದು ಹೊಸ ತಂತ್ರಜ್ಞಾನದ ವ್ಯಾಪಕ ಬಳಕೆಯಿಂದ  ಮಾತ್ರ.

ಸ್ನೇಹಿತರೇ,

ಈ ರಕ್ಷಣಾ ಕಚೇರಿ ಸಂಕೀರ್ಣಗಳು ಸರಕಾರದ ಆದ್ಯತೆ ಮತ್ತು ಕೆಲಸದ ಸಂಸ್ಕೃತಿ ಬದಲಾವಣೆಯ ಪ್ರತಿಬಿಂಬಗಳು. ಲಭ್ಯವಿರುವ ಭೂಮಿಯನ್ನು ಬಳಸಿಕೊಳ್ಳುವುದು ಅದ್ಯತೆ. ಮತ್ತು ಅದು ಭೂಮಿ ಮಾತ್ರವಲ್ಲ, ನಾವು ಯಾವೆಲ್ಲ ಸಂಪನ್ಮೂಲಗಳನ್ನು, ನೈಸರ್ಗಿಕ ಸಂಪನ್ಮೂಲಗಳನ್ನು  ಹೊಂದಿರುವೆಯೋ ಅವುಗಳ ಗರಿಷ್ಠ ಬಳಕೆಯಾಗಬೇಕು ಎನ್ನುವುದು  ನಮ್ಮ ನಂಬಿಕೆ. ಇಂತಹ ಸಂಪನ್ಮೂಲಗಳು ಅನಗತ್ಯ ಪೋಲಾಗುವುದು ದೇಶಕ್ಕೆ ಸೂಕ್ತವಲ್ಲ ಮತ್ತು ಈ ಧೋರಣೆಗೆ ಆದ್ಯತೆ ನೀಡಿದ್ದರ  ಫಲವಾಗಿ ದೇಶ ಮುನ್ನಡೆ ಸಾಧಿಸುವುದಕ್ಕೆ ಹೆಚ್ಚಿನ ಒತ್ತು ದೊರೆಯುತ್ತಿದೆ. ಸರಕಾರದ ವಿವಿಧ ಇಲಾಖೆಗಳು ಹೊಂದಿರುವ ಭೂಮಿಯ ಗರಿಷ್ಠ ಮತ್ತು ಸೂಕ್ತ ಬಳಕೆಗೆ ನಿಖರ ಯೋಜನೆ ರೂಪಿಸಲಾಗಿದೆ. ಹೊಸ ಕ್ಯಾಂಪಸನ್ನು ಸುಮಾರು 13 ಎಕರೆ ಪ್ರದೇಶದಲ್ಲಿ ನಿರ್ಮಾಣ ಮಾಡಲಾಗಿದೆ. ನಮ್ಮ ಪ್ರತಿಯೊಂದು ಕೆಲಸವನ್ನು ಟೀಕಿಸುತ್ತಿರುವವರ ಮಾತುಗಳ ಹಿನ್ನೆಲೆಯಲ್ಲಿ ದೇಶವಾಸಿಗಳು ಇದನ್ನು ಗಮನಿಸಬೇಕು. ದಿಲ್ಲಿಯಂತಹ ಪ್ರಮುಖ ಸ್ಥಳಗಳಲ್ಲಿ ಈ ಗೂಡುಗಳನ್ನು 62 ಎಕರೆ ಪ್ರದೇಶದಲ್ಲಿ ನಿರ್ಮಾಣ ಮಾಡಲಾಗಿತ್ತು. ಈಗ 62 ಎಕರೆಗೆ ಬದಲಾಗಿ ಅತ್ಯುತ್ತಮ ಮತ್ತು ಆಧುನಿಕ ವ್ಯವಸ್ಥೆಗಳನ್ನು  ಬರೇ 13 ಎಕರೆ ಭೂಮಿಯಲ್ಲಿ ನಿರ್ಮಾಣ ಮಾಡಲಾಗಿದೆ. ಇದು ದೇಶದ ಸಂಪತ್ತಿನ ಬಳಕೆ. ಇಷ್ಟೊಂದು ಬೃಹತ್ ಮತ್ತು ಆಧುನಿಕ ಸೌಲಭ್ಯಗಳಿಗಾಗಿ ಹಿಂದಿಗಿಂತ ಐದು ಪಟ್ಟು ಕಡಿಮೆ ಭೂಮಿಯನ್ನು  ಬಳಕೆ ಮಾಡಲಾಗಿದೆ.

 

ಸ್ನೇಹಿತರೇ,

ಹೊಸ ಸ್ವಾವಲಂಬಿ ಭಾರತ ನಿರ್ಮಾಣದ ಆಂದೋಲನ  ಸ್ವಾತಂತ್ರ್ಯದ ಈ ಯುಗದಲ್ಲಿ ಎಂದರೆ ಮುಂದಿನ 25 ವರ್ಷಗಳಲ್ಲಿ ಸಾಧ್ಯವಾಗುವುದಿದ್ದರೆ ಅದು ಪ್ರತಿಯೊಬ್ಬರ ಪ್ರಯತ್ನದಿಂದ ಮಾತ್ರ. ಹೊಸ ಕಟ್ಟಡಗಳು ಉತ್ಪಾದಕತೆ ಮತ್ತು ದಕ್ಷತೆಯನ್ನು ಹೆಚ್ಚಿಸುವ ಸರಕಾರದ ಉಪಕ್ರಮವನ್ನು ಬೆಂಬಲಿಸುತ್ತವೆ ಮತ್ತು ಆ ದೃಢ ನಿಶ್ಚಯವನ್ನು ಅನುಷ್ಠಾನಕ್ಕೆ ತರಲು ವಿಶ್ವಾಸ, ಆತ್ಮ ಸ್ಥೈರ್ಯ ವನ್ನು  ತುಂಬುತ್ತವೆ. ಸಾಮಾನ್ಯ ಕೇಂದ್ರೀಯ ಸಚಿವಾಲಯ, ಅಂತರ್ ಸಂಪರ್ಕಿತ ಸಮ್ಮೇಳನ ಸಭಾಂಗಣಗಳು, ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳಾದ ಮೆಟ್ರೋ ಮೂಲಕ ಸಂಪರ್ಕ ಸಾಧ್ಯತೆ, ಇವೆಲ್ಲ ರಾಜಧಾನಿಯನ್ನು ಜನತಾ ಸ್ನೇಹಿಯಾಗಿಸುವಲ್ಲಿ ಬಹಳ ದೂರ ನಮ್ಮನ್ನು ಕೊಂಡೊಯ್ಯಲಿದೆ. ಈ ಆಶಯದೊಂದಿಗೆ ನಾವೆಲ್ಲ ನಮ್ಮ ಗುರಿಗಳನ್ನು ತ್ವರಿತವಾಗಿ ಸಾಧಿಸುವಂತಾಗಲಿ, ನಾನು ಮತ್ತೊಮ್ಮೆ ನಿಮಗೆಲ್ಲ ಶುಭವನ್ನು ಹಾರೈಸುತ್ತೇನೆ.

ಬಹಳ ಧನ್ಯವಾದಗಳು!.

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
When PM Modi Fulfilled A Special Request From 101-Year-Old IFS Officer’s Kin In Kuwait

Media Coverage

When PM Modi Fulfilled A Special Request From 101-Year-Old IFS Officer’s Kin In Kuwait
NM on the go

Nm on the go

Always be the first to hear from the PM. Get the App Now!
...
Under Rozgar Mela, PM to distribute more than 71,000 appointment letters to newly appointed recruits
December 22, 2024

Prime Minister Shri Narendra Modi will distribute more than 71,000 appointment letters to newly appointed recruits on 23rd December at around 10:30 AM through video conferencing. He will also address the gathering on the occasion.

Rozgar Mela is a step towards fulfilment of the commitment of the Prime Minister to accord highest priority to employment generation. It will provide meaningful opportunities to the youth for their participation in nation building and self empowerment.

Rozgar Mela will be held at 45 locations across the country. The recruitments are taking place for various Ministries and Departments of the Central Government. The new recruits, selected from across the country will be joining various Ministries/Departments including Ministry of Home Affairs, Department of Posts, Department of Higher Education, Ministry of Health and Family Welfare, Department of Financial Services, among others.