9.75 ಕೋಟಿಗೂ ಹೆಚ್ಚು ಫಲಾನುಭವಿ ರೈತ ಕುಟುಂಬಗಳ ಖಾತೆಗಳಿಗೆ ನೇರವಾಗಿ 19,500 ಕೋಟಿ ರೂ.ಗಿಂತಲೂ ಅಧಿಕ ಮೊತ್ತ ವರ್ಗಾವಣೆ ಮಾಡಲಾಗಿದೆ
2047ರಲ್ಲಿ ದೇಶವು ಸ್ವಾತಂತ್ರ್ಯದ 100 ವರ್ಷಗಳನ್ನು ಪೂರ್ಣಗೊಳಿಸಿದಾಗ ಭಾರತದ ಸ್ಥಿತಿಯನ್ನು ನಿರ್ಧರಿಸುವಲ್ಲಿ ನಮ್ಮ ಕೃಷಿ ಮತ್ತು ರೈತರ ಪಾತ್ರ ನಿರ್ಣಾಯಕವಾಗಿದೆ: ಪ್ರಧಾನಿ
ಕನಿಷ್ಠ ಬೆಂಬಲ ಬೆಲೆಯಲ್ಲಿ ರೈತರಿಂದ ಇದುವರೆಗಿನ ಅತಿದೊಡ್ಡ ಮಟ್ಟದಲ್ಲಿ ಖರೀದಿ ಮಾಡಲಾಗಿದ್ದು, 1,70,000 ಕೋಟಿ ರೂ.ಗಳು ಭತ್ತದ ಬೆಳೆಗಾರರ ಖಾತೆಗಳಿಗೆ ಮತ್ತು 85,000 ಕೋಟಿ ರೂ.ಗೋಧಿ ಬೆಳೆಯುವ ರೈತರ ಖಾತೆಗಳಿಗೆ ನೇರವಾಗಿ ತಲುಪಿದೆ: ಪ್ರಧಾನಿ
ತಮ್ಮ ಮನವಿಗೆ ಓಗುಟ್ಟಿದ್ದಕ್ಕಾಗಿ ಮತ್ತು ಕಳೆದ 50 ವರ್ಷಗಳಲ್ಲಿ ದ್ವಿದಳ ಧಾನ್ಯಗಳ ಉತ್ಪಾದನೆಯನ್ನು ಹೆಚ್ಚಿಸಿದ್ದಕ್ಕಾಗಿ ರೈತರಿಗೆ ಧನ್ಯವಾದ ತಿಳಿಸಿದ ಪ್ರಧಾನಿ
ʻರಾಷ್ಟ್ರೀಯ ಖಾದ್ಯ ತೈಲ ಮಿಷನ್-ಆಯಿಲ್ ಪಾಮ್ʼ (ಎನ್ಎಂಇಒ-ಒಪಿ) ಮೂಲಕ ದೇಶವು ಖಾದ್ಯ ತೈಲದಲ್ಲಿ ಸ್ವಾವಲಂಬನೆಗಾಗಿ ಸಂಕಲ್ಪ ತೊಟ್ಟಿದೆ. ಅಡುಗೆ ತೈಲ ಪರಿಸರ ವ್ಯವಸ್ಥೆಯಲ್ಲಿ 11,000 ಕೋಟಿ ರೂ.ಗೂ ಹೆಚ್ಚು ಹೂಡಿಕೆ ಮಾಡಲಾಗುವುದು: ಪ್ರಧಾನಿ
ಇದೇ ಮೊದಲ ಬಾರಿಗೆ ಭಾರತವು ಕೃಷಿ ರಫ್ತಿಗೆ ಸಂಬಂಧಿಸಿದಂತೆ ವಿಶ್ವದ ಅಗ್ರ-10 ರಾಷ್ಟ್ರಗಳಲ್ಲಿ ಸ್ಥಾನ ಪಡೆದಿದೆ: ಪ್ರಧಾನಿ
ದೇಶದ ಕೃಷಿ ನೀತಿಗಳಲ್ಲಿ ಸಣ್ಣ ರೈತರಿಗೆ ಈಗ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ: ಪ್ರಧಾನಿ

ನಮಸ್ಕಾರ್ ಜೀ,

ಕಳೆದ ಕೆಲವು ದಿನಗಳಿಂದ ನಾನು ಸರಕಾರದ ವಿವಿಧ ಕಾರ್ಯಕ್ರಮಗಳ ಬಗ್ಗೆ ಫಲಾನುಭವಿಗಳ ಜೊತೆ ಸಂವಾದ ನಡೆಸುತ್ತಿದ್ದೇನೆ, ಯಾಕೆಂದರೆ ಸರಕಾರದ ಕಾರ್ಯಕ್ರಮಗಳ ಪ್ರಯೋಜನಗಳು ಜನರನ್ನು ಹೇಗೆ ತಲುಪುತ್ತಿವೆ ಎಂಬುದನ್ನು ತಿಳಿದುಕೊಳ್ಳಲು ಇದೊಂದು ಉತ್ತಮ ವಿಧಾನ. ಜನರೊಂದಿಗೆ ನೇರ ಸಂಪರ್ಕದ ಅನುಕೂಲತೆ ಇದು. ಈ ಕಾರ್ಯಕ್ರಮದಲ್ಲಿರುವ ಕೇಂದ್ರ ಸಂಪುಟದ ನನ್ನ ಸಹೋದ್ಯೋಗಿಗಳೇ, ವಿವಿಧ ರಾಜ್ಯಗಳ ಗೌರವಾನ್ವಿತ ಮುಖ್ಯಮಂತ್ರಿಗಳೇ, ಉಪರಾಜ್ಯಪಾಲರೇ ಮತ್ತು ಉಪ ಮುಖ್ಯಮಂತ್ರಿಗಳೇ, ರಾಜ್ಯ ಸರಕಾರಗಳ ಸಚಿವರೇ, ಇತರ ಗಣ್ಯರೇ, ದೇಶಾದ್ಯಂತ ಇರುವ ರೈತರೇ ಮತ್ತು ಸಹೋದರರೇ ಹಾಗು ಸಹೋದರಿಯರೇ,

ಇಂದು, 19,500 ಕೋ.ರೂ.ಗಳಿಗೂ ಅಧಿಕ ಮೊತ್ತವನ್ನು ದೇಶದ ಸುಮಾರು 10 ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿದೆ. ನಿಮ್ಮಲ್ಲಿ ಹಲವರು ನಿಮ್ಮ ಮೊಬೈಲ್ ಫೋನ್ ಗಳಲ್ಲಿ ಹಣ ಬಂದಿದೆಯೋ ಇಲ್ಲವೋ ಎಂಬುದನ್ನು ನೋಡುತ್ತಿರುವುದನ್ನು ಮತ್ತು ಪರಸ್ಪರ ಕೈಎತ್ತುತ್ತಿರುವುದನ್ನು ನಾನು ಕಾಣುತ್ತಿದ್ದೇನೆ.  ಈ ಮಳೆಗಾಲದಲ್ಲಿ ಬಿತ್ತನೆ ಕಾರ್ಯ ಬಿರುಸಿನಿಂದ ನಡೆಯುತ್ತಿರುವಾಗ, ಸಣ್ಣ ರೈತರಿಗೆ ಈ ಮೊತ್ತ ಬಹಳ ಪ್ರಯೋಜನಕಾರಿ. ಒಂದು ಲಕ್ಷ ಕೋ.ರೂ.ಗಳ ಮೌಲ್ಯದ ಕೃಷಿ ಮೂಲಸೌಕರ್ಯ ನಿಧಿ ಇಂದು ಒಂದು ವರ್ಷ ಪೂರ್ಣಗೊಳಿಸಿದೆ. ಈ ನಿಧಿಯಿಂದ ಸಾವಿರಾರು ರೈತ ಸಂಘಟನೆಗಳಿಗೆ ಪ್ರಯೋಜನವಾಗುತ್ತಿದೆ.

ಸಹೋದರರೇ ಮತ್ತು ಸಹೋದರಿಯರೇ,

ಸರಕಾರವು ಹೊಸ ಬೆಳೆಗಳನ್ನು ಪ್ರೋತ್ಸಾಹಿಸಲು ಮತ್ತು ರೈತರಿಗೆ ಹೆಚ್ಚುವರಿ ಆದಾಯವನ್ನು ಒದಗಿಸಲು ಪೂರ್ಣವಾಗಿ ಬದ್ಧವಾಗಿದೆ. ಜೇನು ಕೃಷಿ ಆಂದೋಲನವು ಇಂತಹ ಒಂದು ಆಂದೋಲನ. ಜೇನು ಆಂದೋಲನದಿಂದಾಗಿ ನಾವು ಕಳೆದ ವರ್ಷ 700 ಕೋ.ರೂ, ಮೌಲ್ಯದ ಜೇನನ್ನು ರಫ್ತು ಮಾಡಿದ್ದೇವೆ ಮತ್ತು ಇದರಿಂದ ರೈತರಿಗೆ ಹೆಚ್ಚುವರಿ ಆದಾಯ ಖಾತ್ರಿ ಮಾಡಲ್ಪಟ್ಟಿದೆ. ಜಮ್ಮು ಮತ್ತು ಕಾಶ್ಮೀರದ ಕೇಸರಿ ಜಗತ್ಪ್ರಸಿದ್ಧ. ಈಗ ಸರಕಾರವು ಜಮ್ಮು –ಕಾಶ್ಮೀರದ ಈ ಕೇಸರಿಯನ್ನು  ದೇಶಾದ್ಯಂತ ನಫೆಡ್ ಅಂಗಡಿಗಳಲ್ಲಿ ಲಭ್ಯವಾಗುವಂತೆ ಮಾಡಲು ನಿರ್ಧರಿಸಿದೆ. ಇದರಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಕೇಸರಿ ಬೆಳೆಗೆ ಬಹಳಷ್ಟು ಉತ್ತೇಜನ ದೊರೆಯಲಿದೆ. .

ಸಹೋದರರೇ ಮತ್ತು ಸಹೋದರಿಯರೇ,

ಈ ವಿನಿಮಯ ಕಾರ್ಯಕ್ರಮ ನಾವು ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುವ ಹೊತ್ತಿನಲ್ಲಿ ನಡೆಯುತ್ತಿದೆ. ಆಗಸ್ಟ್ 15 ಇನ್ನು ಕೆಲವೇ ದಿನಗಳಲ್ಲಿ ಹತ್ತಿರ ಬರುತ್ತಿದೆ. ಈ ಬಾರಿ ದೇಶವು ಸ್ವಾತಂತ್ರ್ಯದ 75 ನೇ ವರ್ಷವನ್ನು ಆಚರಿಸುತ್ತಿದೆ. ಇದು ನಮಗೆ ಹೆಮ್ಮೆಯ ವಿಷಯ ಮಾತ್ರವಲ್ಲ. ಇದು ನಮಗೆ ಹೊಸ ದೃಢ ಸಂಕಲ್ಪಗಳನ್ನು ಮತ್ತು ಗುರಿಗಳನ್ನು ಹಾಕಿಕೊಳ್ಳಲು ಲಭಿಸಿರುವ ಬಹಳ ದೊಡ್ಡ ಅವಕಾಶ.

ಈ ಸಂದರ್ಭದಲ್ಲಿ, ಮುಂದಿನ 25 ವರ್ಷಗಳಲ್ಲಿ ನಾವು ಭಾರತವನ್ನು ಎಲ್ಲಿ ಕಾಣಲು ಬಯಸುತ್ತೇವೆ ಎಂಬ ಬಗ್ಗೆ ನಿರ್ಧಾರ ಮಾಡಬೇಕು.ಭಾರತದಲ್ಲಿ ಅದು 2047 ರಲ್ಲಿ ಸ್ವಾತಂತ್ರ್ಯದ ನೂರು ವರ್ಷ ಪೂರೈಸುವಾಗ ಪರಿಸ್ಥಿತಿ ಏನಾಗಿರುತ್ತದೆ ಎಂಬುದನ್ನು  ನಿರ್ಧರಿಸುವಲ್ಲಿ ನಮ್ಮ ಕೃಷಿ, ನಮ್ಮ  ಗ್ರಾಮಗಳು, ಮತ್ತು ನಮ್ಮ ರೈತರ ಪಾತ್ರ ಪ್ರಮುಖವಾದುದಾಗಿರುತ್ತದೆ. ಭಾರತದ ಕೃಷಿಗೆ ಹೊಸ ದಿಕ್ಕು ತೋರಿಸುವ ಅವಶ್ಯಕತೆ ಇದೆ, ಅದು ಹೊಸ ಸವಾಲುಗಳನ್ನು ಸ್ವೀಕರಿಸಿ ಹೊಸ ಅವಕಾಶಗಳ ಪ್ರಯೋಜನವನ್ನು ಪೂರ್ಣ ಪ್ರಮಾಣದಲ್ಲಿ ಪಡೆದುಕೊಳ್ಳಬೇಕಿದೆ.

ಸಹೋದರರೇ ಮತ್ತು ಸಹೋದರಿಯರೇ,

ಈ ಶಕೆಯಲ್ಲಿ ಆಗುತ್ತಿರುವ ತ್ವರಿತಗತಿಯ ಬದಲಾವಣೆಗಳನ್ನು ನಾವೆಲ್ಲರೂ ಸಾಕ್ಷೀಕರಿಸುತ್ತಿದ್ದೇವೆ. ಅದು ಹವಾಮಾನಕ್ಕೆ ಸಂಬಂಧಿಸಿದ ಬದಲಾವಣೆಯಾಗಿರಬಹುದು, ತಿನ್ನುವ ಅಭ್ಯಾಸಕ್ಕೆ ಸಂಬಂಧಿಸಿದ ಬದಲಾವಣೆಯಾಗಿರಬಹುದು ಅಥವಾ ಜಾಗತಿಕ ಸಾಂಕ್ರಾಮಿಕದ ಪರಿಣಾಮವಾಗಿ ಜಗತ್ತಿನಲ್ಲಿ ಆಗುತ್ತಿರುವ ಬದಲಾವಣೆಗಳಿರಬಹುದು.  ಕಳೆದ ಒಂದೂವರೆ ವರ್ಷದಲ್ಲಿ ಕೊರೊನಾ ಜಾಗತಿಕ ಸಾಂಕ್ರಾಮಿಕದ ಸಂದರ್ಭದಲ್ಲಿ  ನಾವಿದನ್ನು  ನೋಡಿದ್ದೇವೆ. ಈ ಅವಧಿಯಲ್ಲಿ ದೇಶದಲ್ಲಿಯೇ ಆಹಾರ ಕ್ರಮದ ಬಗೆಗೆ  ಬಹಳಷ್ಟು ಜಾಗೃತಿ ಉಂಟಾಗಿದೆ. ಸಿರಿ ಧಾನ್ಯಗಳಿಗೆ, ತರಕಾರಿಗಳಿಗೆ, ಹಣ್ಣುಗಳಿಗೆ, ಸಾಂಬಾರು ಪದಾರ್ಥಗಳಿಗೆ, ಮತ್ತು ಸಾವಯವ ಉತ್ಪನ್ನಗಳಿಗೆ ಬೇಡಿಕೆ ತ್ವರಿತವಾಗಿ ಹೆಚ್ಚುತ್ತಿದೆ.ಆದುದರಿಂದ ಭಾರತೀಯ ಕೃಷಿ ಬದಲಾದ ಆವಶ್ಯಕತೆ ಮತ್ತು ಬೇಡಿಕೆಗಳಿಗೆ ಅನುಗುಣವಾಗಿ ಬದಲಾಗಬೇಕಾಗಿದೆ. ಮತ್ತು ನಮ್ಮ ದೇಶದ ರೈತರು ಈ ಬದಲಾವಣೆಗಳನ್ನು ಅಳವಡಿಸಿಕೊಳ್ಳುತ್ತಾರೆ ಎಂಬುದಾಗಿ ನನಗೆ ನಂಬಿಕೆ ಇದೆ.

ಸ್ನೇಹಿತರೇ,

ಜಾಗತಿಕ ಸಾಂಕ್ರಾಮಿಕದ ಸಂದರ್ಭದಲ್ಲಿ ನಾವು ಭಾರತದ ರೈತರ ಸಾಮರ್ಥ್ಯವನ್ನು ನೋಡಿದ್ದೇವೆ. ದಾಖಲೆ ಉತ್ಪಾದನೆಯ ನಡುವೆ ಸರಕಾರ ರೈತರ ಸಮಸ್ಯೆಗಳನ್ನು ನಿವಾರಿಸಲು ಪ್ರಯತ್ನಗಳನ್ನು ಮಾಡಿದೆ. ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ಪ್ರತೀ ವಲಯಗಳಲ್ಲೂ, ಬೀಜಗಳು ಹಾಗು ರಸಗೊಬ್ಬರ, ರೈತರ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸುವುದು ಮತ್ತು ಅನಿಯಂತ್ರಿತವಾಗಿ ಯೂರಿಯಾ ಪೂರೈಕೆ ಸಹಿತ ಪ್ರತಿಯೊಂದಕ್ಕೂ ಕ್ರಮಗಳನ್ನು  ಸರಕಾರವು ಕೈಗೊಂಡಿದೆ. ಕೊರೊನಾದಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಹಲವು ಪಟ್ಟು ಹೆಚ್ಚಾದರೂ ನಮ್ಮ ಸರಕಾರವು ಡಿ.ಎ.ಪಿ.ಯ ಹೊರೆಯನ್ನು ರೈತರ ಮೇಲೆ ಬೀಳಲು ಬಿಡಲಿಲ್ಲ. ಸರಕಾರವು ತಕ್ಷಣವೇ ಈ ನಿಟ್ಟಿನಲ್ಲಿ 12,000 ಕೋ.ರೂ.ಗಳನ್ನು ವ್ಯವಸ್ಥೆ ಮಾಡಿತು.

ಸ್ನೇಹಿತರೇ,

ಸರಕಾರವು ರೈತರಿಂದ ಎಂ.ಎಸ್.ಪಿ.ದರದಲ್ಲಿ ಭಾರೀ ದೊಡ್ಡ ಪ್ರಮಾಣದ ಖರೀದಿಯನ್ನು ಮಾಡಿದೆ. ಅದು ಖಾರೀಫ್ ಇರಲಿ ಅಥವಾ ರಾಬಿ ಋತು ಇರಲಿ ದೊಡ್ಡ ಪ್ರಮಾಣದ ಖರೀದಿಯನ್ನು ಮಾಡಲಾಗಿದೆ. ಇದರಿಂದ 1.70 ಲಕ್ಷ ಕೋ.ರೂ.ಗಳನ್ನು ಭತ್ತ ಬೆಳೆಯುವ ರೈತರ ಬ್ಯಾಂಕ್ ಖಾತೆಗಳಿಗೆ ಮತ್ತು 85,000 ಕೋ. ರೂ .ಗಳನ್ನು ಗೋಧಿ ಬೆಳೆಯುವ ರೈತರ ಖಾತೆಗಳಿಗೆ ಜಮಾ ಮಾಡಲಾಗಿದೆ. ಇಂದು ಭಾರತದ ಧಾನ್ಯಗಳು ರೈತರು ಮತ್ತು ಸರಕಾರದ  ಈ ಸಹಭಾಗಿತ್ವದಿಂದಾಗಿ ತುಂಬಿ ತುಳುಕುತ್ತಿವೆ. ಆದರೆ ಸ್ನೇಹಿತರೇ, ಈ ಸ್ವಾವಲಂಬನೆ ಬರೇ ಗೋಧಿ, ಅಕ್ಕಿ, ಮತ್ತು ಸಕ್ಕರೆಯಲ್ಲಿ ಬಂದರೆ ಸಾಲದು. ನಾವು ಬೇಳೆ ಕಾಳುಗಳಲ್ಲಿ ಮತ್ತು ಖಾದ್ಯ ತೈಲಗಳಲ್ಲಿಯೂ ಸ್ವಾವಲಂಬನೆ ಸಾಧಿಸಬೇಕಾಗಿದೆ. ಮತ್ತು ಭಾರತದ ರೈತರಿಗೆ ಅದನ್ನು ಮಾಡುವ ಸಾಮರ್ಥ್ಯವಿದೆ. ನನಗೆ ನೆನಪಿದೆ, ನಾನು ಕೆಲವು ವರ್ಷಗಳ ಹಿಂದೆ ನಮ್ಮಲ್ಲಿ ಬೇಳೆ ಕಾಳುಗಳ, ದ್ವಿದಳ ಧಾನ್ಯಗಳ ಕೊರತೆ ತಲೆದೋರಿದಾಗ ದೇಶದ ರೈತರಿಗೆ ಬೇಳೆ, ಕಾಳು, ದ್ವಿದಳ ಧಾನ್ಯಗಳ ಉತ್ಪಾದನೆ ಹೆಚ್ಚಿಸುವಂತೆ ಕರೆ ನೀಡಿದ್ದೆ. ದೇಶದ ರೈತರು ನನ್ನ ಕೋರಿಕೆಯನ್ನು  ಅಂಗೀಕರಿಸಿದ್ದರು. ಅದರ ಫಲಿತವಾಗಿ, ದೇಶದಲ್ಲಿ ದ್ವಿದಳ ಧಾನ್ಯಗಳ ಉತ್ಪಾದನೆ ಕಳೆದ ಆರು ವರ್ಷಗಳಲ್ಲಿ ಸರಿ ಸುಮಾರು 50 ಪ್ರತಿಶತದಷ್ಟು ಹೆಚ್ಚಾಗಿದೆ. ನಾವು ಬೇಳೆ ಕಾಳುಗಳ ವಿಷಯದಲ್ಲಿ ಏನು ಮಾಡಿದ್ದೇವೋ, ಅಥವಾ ಗೋಧಿ ಮತ್ತು ಭತ್ತದಲ್ಲಿ ಏನು ಮಾಡಿದ್ದೇವೋ ಅದನ್ನು ಖಾದ್ಯ ತೈಲಗಳಲ್ಲಿಯೂ ಮಾಡುವ ಬಗೆಗೆ ದೃಢ ಸಂಕಲ್ಪ ಕೈಗೊಳ್ಳಬೇಕು. ಖಾದ್ಯ ತೈಲಗಳಲ್ಲಿ ದೇಶವು ಸ್ವಾವಲಂಬನೆಯನ್ನು ಸಾಧಿಸಲು ನಾವು ತ್ವರಿತವಾಗಿ ಕಾರ್ಯ ನಿರ್ವಹಿಸಬೇಕಾಗಿದೆ. 

ಸಹೋದರರೇ ಮತ್ತು ಸಹೋದರಿಯರೇ

ರಾಷ್ಟ್ರೀಯ ಖಾದ್ಯ ತೈಲ ಆಂದೋಲನ –ಆಯಿಲ್ ಪಾಮ್ ನಿಂದಾಗಿ ದೇಶವು ಖಾದ್ಯ ತೈಲದಲ್ಲಿ ಸ್ವಾವಲಂಬನೆ ಸಾಧಿಸುವ ಪ್ರತಿಜ್ಞೆ ಕೈಗೊಂಡಿದೆ. ಭಾರತವು ಇಂದು ಭಾರತ ಬಿಟ್ಟು ತೊಲಗಿ ಚಳವಳಿಯನ್ನು ಸ್ಮರಿಸುತ್ತಿರುವಾಗ, ಈ ದೃಢ ಸಂಕಲ್ಪ ಈ ಚಾರಿತ್ರಿಕ ದಿನದಂದು ನಮಗೆ ಹೊಸ ಶಕ್ತಿಯನ್ನು ನೀಡುತ್ತದೆ. ಈ ಆಂದೋಲನ ಮೂಲಕ ಅಡುಗೆ ಅನಿಲ ಪರಿಸರ ವ್ಯವಸ್ಥೆಯಲ್ಲಿ 11,000 ಕೋ.ರೂ.ಗಳಿಗೂ ಅಧಿಕ ಮೊತ್ತವನ್ನು ಹೂಡಿಕೆ ಮಾಡಲಾಗುತ್ತಿದೆ. ಸರಕಾರವು ರೈತರಿಗೆ ಎಲ್ಲಾ ಸೌಲಭ್ಯಗಳು ಲಭಿಸುವಂತೆ, ಗುಣಮಟ್ಟದ ಬೀಜಗಳಿಂದ ಹಿಡಿದು ತಂತ್ರಜ್ಞಾನದವರೆಗೆ ಎಲ್ಲವೂ ಲಭ್ಯವಾಗುವಂತೆ ಖಾತ್ರಿಪಡಿಸುತ್ತದೆ. ಈ ಆಂದೋಲನದಡಿ ನಮ್ಮ ಇತರ ಸಾಂಪ್ರದಾಯಿಕ ತೈಲ ಬೀಜ ಬೆಳೆಗಳ ಕೃಷಿಯನ್ನೂ ತಾಳೆ ಎಣ್ಣೆ ಬೀಜಗಳ ಕೃಷಿಯ ಜೊತೆಗೆ ಉತ್ತೇಜಿಸಲಾಗುವುದು.

ಸ್ನೇಹಿತರೇ,

ಇದೇ ಮೊದಲ  ಬಾರಿಗೆ ಭಾರತವು ಕೃಷಿ ರಫ್ತಿಗೆ ಸಂಬಂಧಿಸಿ ಜಗತ್ತಿನ ಅತ್ಯುನ್ನತ ಹತ್ತು ರಾಷ್ಟ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ದೇಶವು ಕೊರೊನಾ ಅವಧಿಯಲ್ಲಿಯೇ ಕೃಷಿ ರಪ್ತಿನಲ್ಲಿ ಹೊಸ ದಾಖಲೆಗಳನ್ನು ಬರೆದಿದೆ. ಭಾರತವನ್ನು ಕೃಷಿ ಉತ್ಪನ್ನಗಳ ರಫ್ತು ಮಾಡುವ ಪ್ರಮುಖ ದೇಶ ಎಂದು ಪರಿಗಣಿಸಲ್ಪಟ್ಟಿರುವಾಗ, ನಮ್ಮ ಖಾದ್ಯ ತೈಲ ಆವಶ್ಯಕತೆಗಳಿಗಾಗಿ ಆಮದು ಅವಲಂಬಿಸುವುದು ಸರಿಯಲ್ಲ. ಈ ನಿಟ್ಟಿನಲ್ಲಿ ಕೂಡಾ ಆಮದಿತ ತಾಳೆ ಎಣ್ಣೆ ಪ್ರಮಾಣ 55 ಪ್ರತಿಶತಕ್ಕಿಂತ ಹೆಚ್ಚಿದೆ. ನಾವು ಈ ಪರಿಸ್ಥಿತಿಯನ್ನು ಬದಲಾಯಿಸಬೇಕಾಗಿದೆ. ನಾವು ವಿದೇಶಗಳಿಂದ ಖಾದ್ಯ ತೈಲ ಖರೀದಿ ಮಾಡಲು ಬಳಸುವ ಸಾವಿರಾರು ಕೋಟಿ ರೂಪಾಯಿ ದೇಶದ ನಮ್ಮ ರೈತರಿಗೆ ದೊರೆಯಬೇಕು. ಇದು ಭಾರತದಲ್ಲಿ ತಾಳೆ ಎಣ್ಣೆ ಬೀಜ ಬೆಳೆಯಲು ಇರುವ ಬೃಹತ್ ಅವಕಾಶ. ಇದನ್ನು ಈಶಾನ್ಯ ಭಾರತದಲ್ಲಿ ಮತ್ತು ಅಂಡಮಾನ –ನಿಕೋಬಾರ್ ದ್ವೀಪಗಳಲ್ಲಿ ಉತ್ತೇಜಿಸಬಹುದು. ಈ ವಲಯಗಳಲ್ಲಿ ತಾಳೆ ಎಣ್ಣೆ ಬೀಜಗಳನ್ನು ಸುಲಭದಲ್ಲಿ ಬೆಳೆಯಬಹುದು ಮತ್ತು ತಾಳೆ ಎಣ್ಣೆಯನ್ನು ತಯಾರಿಸಬಹುದು.

ಸ್ನೇಹಿತರೇ,

ಖಾದ್ಯ ತೈಲಗಳಲ್ಲಿ ಈ ಸ್ವಾವಲಂಬನೆಯ ಆಂದೋಲನ ಹಲವು ಪ್ರಯೋಜನಗಳನ್ನು ಒಳಗೊಂಡಿದೆ. ಇದರಿಂದ ರೈತರಿಗೆ ಲಾಭವಾಗುವುದು ಮಾತ್ರವಲ್ಲ, ಬಡವರು ಮತ್ತು ಮಧ್ಯಮ ವರ್ಗದವರ ಕುಟುಂಬಗಳು ಕೂಡಾ ಕಡಿಮೆ ದರದಲ್ಲಿ ಮತ್ತು ಉತ್ತಮ ಗುಣಮಟ್ಟದ ಎಣ್ಣೆಯನ್ನು ಪಡೆಯಲು ಸಾಧ್ಯವಾಗುತ್ತದೆ. ಇದೆಲ್ಲಕ್ಕಿಂತ ಮಿಗಿಲಾಗಿ ಈ ಆಂದೋಲನ ಬಹಳ ದೊಡ್ಡ ಮಟ್ಟದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ಮತ್ತು ಆಹಾರ ಸಂಸ್ಕರಣ ಉದ್ಯಮಗಳಿಗೆ, ಅದರಲ್ಲೂ ವಿಶೇಷವಾಗಿ ತಾಜಾ ಹಣ್ಣು ಸಂಸ್ಕರಣೆ ಕೈಗಾರಿಕೆಗಳಿಗೆ ಉತ್ತೇಜನ ನೀಡುತ್ತದೆ. ತಾಳೆ ಎಣ್ಣೆ ಕೃಷಿ ಇರುವ ರಾಜ್ಯಗಳಲ್ಲಿ ಆಹಾರ ಸಂಸ್ಕರಣ ಘಟಕಗಳಿಗೆ ಸಾಗಾಣಿಕೆಯಿಂದಾಗಿ ಯುವಕರಿಗೆ ಉದ್ಯೋಗ ದೊರೆಯಲಿದೆ.

ಸಹೋದರರೇ ಮತ್ತು ಸಹೋದರಿಯರೇ,

ತಾಳೆ ಎಣ್ಣೆ ಕೃಷಿಯಿಂದ ದೇಶದ ಸಣ್ಣ ರೈತರಿಗೆ ಭಾರೀ ಲಾಭವಾಗಲಿದೆ. ಇತರ ತೈಲ ಬೀಜಗಳ ಬೆಳೆಗಳಿಗೆ  ಹೋಲಿಸಿದರೆ ಹೆಕ್ಟೇರೊಂದಕ್ಕೆ ತಾಳೆ ಎಣ್ಣೆ ಬೀಜಗಳ ಉತ್ಪಾದನೆ ಬಹಳ ಹೆಚ್ಚಾಗಿರುತ್ತದೆ. ಇದಕ್ಕೆ ಸಣ್ಣ ತುಂಡು ಭೂಮಿ ಕೂಡಾ ಸಾಕಾಗುವುದರಿಂದ ಸಣ್ಣ ರೈತರು ಇದರಿಂದ ದೊಡ್ಡ ಪ್ರಮಾಣದ ಲಾಭವನ್ನು ಪಡೆಯಬಹುದು.

ಸ್ನೇಹಿತರೇ,

ನಿಮಗೆಲ್ಲಾ ಬಹಳ ಚೆನ್ನಾಗಿ ತಿಳಿದಿದೆ, ನಮ್ಮ ದೇಶದ 80 ಶೇಖಡಾದಷ್ಟು ರೈತರು ಬರೇ ಎರಡು ಹೆಕ್ಟೇರ್ ನಷ್ಟು ಭೂಮಿಯನ್ನು ಮಾತ್ರ ಹೊಂದಿರುತ್ತಾರೆ. ಮುಂದಿನ 25 ವರ್ಷಗಳಲ್ಲಿ ದೇಶದ ಕೃಷಿಯನ್ನು ಶ್ರೀಮಂತಗೊಳಿಸುವ ಬಹಳ ದೊಡ್ಡ ಹೊಣೆಗಾರಿಕೆ ಈ ಸಣ್ಣ ರೈತರ ಮೇಲಿದೆ. ಆದುದರಿಂದ, ಈ ಸಣ್ಣ ರೈತರಿಗೆ ದೇಶದ ಕೃಷಿ ನೀತಿಗಳಲ್ಲಿ ಈಗ ಗರಿಷ್ಟ ಆದ್ಯತೆ ನೀಡಲಾಗುತ್ತಿದೆ. ಈ ಸ್ಪೂರ್ತಿಯೊಂದಿಗೆ ಕಳೆದ ಕೆಲವು ವರ್ಷಗಳಲ್ಲಿ ಸಣ್ಣ ರೈತರಿಗೆ ಸೌಲಭ್ಯಗಳನ್ನು ಒದಗಿಸುವ ಮತು ಭದ್ರತೆಯನ್ನು ನೀಡುವ ನಿಟ್ಟಿನಲ್ಲಿ ಗಂಭೀರ ಪ್ರಯತ್ನಗಳನ್ನು ಮಾಡಲಾಗುತ್ತಿದೆ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ನಿಧಿ ಅಡಿಯಲ್ಲಿ 1.60 ಲಕ್ಷ ಕೋ.ರೂ. ಗಳನ್ನು ರೈತರಿಗೆ ನೀಡಲಾಗಿದೆ.ಇದರಲ್ಲಿ ಒಂದು ಲಕ್ಷ ಕೋ.ರೂ. ಕೊರೊನಾದ ಈ ಸವಾಲಿನ ಅವಧಿಯಲ್ಲಿ ಸಣ್ಣ ರೈತರಿಗೆ ತಲುಪಿದೆ.ಇದಲ್ಲದೆ ಎರಡು ಕೋಟಿಗೂ ಅಧಿಕ  ಕಿಸಾನ್ ಕ್ರೆಡಿಟ್ ಕಾರ್ಡ್ ಗಳನ್ನು ಕೊರೊನಾ ಅವಧಿಯಲ್ಲಿ ನೀಡಲಾಗಿದೆ. ಅವುಗಳಲ್ಲಿ ಹೆಚ್ಚಿನವು ಸಣ್ಣ ರೈತರಿಗೆ ಸಿಕ್ಕಿವೆ. ಈ ಕಾರ್ಡ್ ಗಳ ಮೂಲಕ ರೈತರು ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಸಾಲವನ್ನು ಪಡೆದಿದ್ದಾರೆ. 100 ವರ್ಷಗಳಲ್ಲಿಯೇ ಅತ್ಯಂತ ದೊಡ್ಡದಾದ ಈ ಸಂಕಷ್ಟದ ಸಮಯದಲ್ಲಿ ಅವರಿಗೆ ಈ ಸಹಾಯ ದೊರೆಯದೇ ಇದ್ದಿದ್ದರೆ ಸಣ್ಣ ರೈತರ ಸ್ಥಿತಿ ಏನಾಗುತ್ತಿತ್ತು ಎಂಬುದನ್ನು ಕಲ್ಪಿಸಿಕೊಳ್ಳಿ. ಅವರು ಸಣ್ಣ ಅವಶ್ಯಕತೆಗಳಿಗೂ ಪರದಾಡಬೇಕಾಗುತ್ತಿತ್ತು.

ಸಹೋದರರೇ ಮತ್ತು ಸಹೋದರಿಯರೇ,

ಇಂದು ಸಣ್ಣ ರೈತರು ಕೃಷಿ ಅಥವಾ ನಿರ್ಮಾಣವಾಗುತ್ತಿರುವ ಸಂಪರ್ಕ ಮೂಲಸೌಕರ್ಯಗಳಿಂದ, ಸ್ಥಾಪಿಸಲಾಗುತ್ತಿರುವ ದೊಡ್ಡ ಆಹಾರ ಪಾರ್ಕ್ ಗಳಿಂದ  ಬಹಳ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ. ಇಂದು ದೇಶಾದ್ಯಂತ ವಿಶೇಷ ಕಿಸಾನ್ ರೈಲುಗಳು ಓಡಾಟ ನಡೆಸುತ್ತಿವೆ. ಇದರ ಪರಿಣಾಮವಾಗಿ ಸಾವಿರಾರು ರೈತರು ತಮ್ಮ ಉತ್ಪನ್ನಗಳನ್ನು ದೇಶದ ದೊಡ್ಡ ಮಂಡಿಗಳಲ್ಲಿ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಾರೆ. ಅವರಿಗೆ ಸಾರಿಗೆ ವೆಚ್ಚ ಇದರಿಂದಾಗಿ ಕಡಿಮೆಯಾಗುತ್ತಿದೆ. ಅದೇ ರೀತಿ ವಿಶೇಷ ಮೂಲಸೌಕರ್ಯ ನಿಧಿ ಅಡಿಯಲ್ಲಿ ಸಣ್ಣ ರೈತರಿಗಾಗಿ ಆಧುನಿಕ ದಾಸ್ತಾನು ಸೌಲಭ್ಯಗಳನ್ನು ರೂಪಿಸಲಾಗುತ್ತಿದೆ. ಕಳೆದ ವರ್ಷ 6,500 ಕ್ಕೂ ಅಧಿಕ ಯೋಜನೆಗಳನ್ನು ಅನುಮೋದಿಸಲಾಗಿದೆ. ಈ ಯೋಜನೆಗಳನ್ನು ಪಡೆದುಕೊಂಡವರಲ್ಲಿ ರೈತರು, ರೈತರ ಸೊಸೈಟಿಗಳು, ಮತ್ತು ರೈತರ ಉತ್ಪನ್ನಗಳ ಸಂಘಟನೆಗಳು, ಸ್ವಸಹಾಯ ಗುಂಪುಗಳು ಮತ್ತು ನವೋದ್ಯಮಗಳು  ಸೇರಿವೆ. ಇತ್ತೀಚೆಗೆ  ಸರಕಾರಿ ಮಂಡಿಗಳಿರುವ ರಾಜ್ಯಗಳು ಕೂಡಾ ಈ ನಿಧಿಯಡಿ ಸಹಾಯವನ್ನು ಪಡೆಯಬಹುದೆಂದು ಸರಕಾರ ನಿರ್ಧಾರ ಮಾಡಿದೆ. ನಮ್ಮ ಸರಕಾರಿ ಮಂಡಿಗಳು ಈ ನಿಧಿಯನ್ನು ಬಳಸಿಕೊಂಡು ಉತ್ತಮ ಮತ್ತು ಹೆಚ್ಚು ಸದೃಢ ಮತು ಆಧುನಿಕವಾಗಲು ಸಾಧ್ಯವಿದೆ.

ಸಹೋದರರೇ ಮತ್ತು ಸಹೋದರಿಯರೇ,

ಸಣ್ಣ ರೈತರನ್ನು ಸಶಕ್ತರನ್ನಾಗಿಸುವ ಯತ್ನವು, ಮೂಲಸೌಕರ್ಯ ನಿಧಿ ಅಥವಾ 10,000 ರೈತ ಉತ್ಪಾದಕರ ಸಂಘಟನೆಗಳನ್ನು ರೂಪಿಸುವ ಮೂಲಕ ಸಾಗಿದೆ. ಇದರಿಂದ ಅವರಿಗೆ ಮಾರುಕಟ್ಟೆಗೆ ಸಂಪರ್ಕ ಸಾಧ್ಯವಾಗಲಿದೆ ಮತ್ತು ಉತ್ತಮ ಬೆಲೆಯೂ ಲಭಿಸಲಿದೆ. ನೂರಾರು ಸಣ್ಣ ರೈತರು ಎಫ್.ಪಿ.ಒ.ಗಳ ಮೂಲಕ ಒಗ್ಗೂಡಿದರೆ, ಸಹಕಾರಿ ವ್ಯವಸ್ಥೆಯೊಳಗೆ ಬಂದರೆ ಅವರ ಶಕ್ತಿ ನೂರು ಪಟ್ಟು ಹೆಚ್ಚುತ್ತದೆ. ಇದು ರೈತರು ಇತರರನ್ನು ಅವಲಂಬಿಸುವುದನ್ನು ಕಡಿಮೆ ಮಾಡುತ್ತದೆ. ಅದು ಆಹಾರ ಸಂಸ್ಕರಣೆಯ ವಿಷಯದಲ್ಲಿರಲಿ ಅಥವಾ ರಫ್ತಿಗೆ ಸಂಬಂಧಿಸಿರಲಿ, ಅವಲಂಬನೆ ಕಡಿಮೆಯಾಗುತ್ತದೆ. ಅವರು ತಾವೇ ವಿದೇಶೀ ಮಾರುಕಟ್ಟೆಯಲ್ಲಿ ತಮ್ಮ ಉತ್ಪನ್ನಗಳನ್ನು ನೇರ ಮಾರಾಟ ಮಾಡಲು  ಸ್ವತಂತ್ರರಾಗಿರುತ್ತಾರೆ. ದೇಶದ ರೈತರು ಸಂಕೋಲೆಗಳಿಂದ ಮುಕ್ತರಾದರೆ ಮಾತ್ರ ಅವರು ತ್ವರಿತವಾಗಿ ಮುನ್ನಡೆಯಲು ಶಕ್ತರಾಗುತ್ತಾರೆ. ಈ ಸ್ಫೂರ್ತಿಯೊಂದಿಗೆ ನಾವು ಮುಂದಿನ 25 ವರ್ಷಗಳಿಗೆ ನಿರ್ಧಾರಗಳನ್ನು ಕೈಗೊಂಡು ಅನುಷ್ಠಾನ ಮಾಡಬೇಕಾಗಿದೆ. ನಾವು ಈಗಿನಿಂದಲೇ ತೈಲ ಬೀಜಗಳಲ್ಲಿ ಸ್ವಾವಲಂಬನೆಯ ಆಂದೋಲನವನ್ನು ಕೈಗೆತ್ತಿಕೊಳ್ಳಬೇಕಿದೆ. ಮತ್ತೊಮ್ಮೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ ಫಲಾನುಭವಿಗಳಿಗೆ ನನ್ನ ಶುಭಾಶಯಗಳನ್ನು ಹೇಳುತ್ತೇನೆ.  ಬಹಳ ಧನ್ಯವಾದಗಳು.

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
PM Modi hails diaspora in Kuwait, says India has potential to become skill capital of world

Media Coverage

PM Modi hails diaspora in Kuwait, says India has potential to become skill capital of world
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ಡಿಸೆಂಬರ್ 2024
December 21, 2024

Inclusive Progress: Bridging Development, Infrastructure, and Opportunity under the leadership of PM Modi