ʻಅಮೃತ ಕಾಲʼದ ಈ ಚೊಚ್ಚಲ ಬಜೆಟ್, ಅಭಿವೃದ್ಧಿ ಹೊಂದಿದ ಭಾರತದ ಭವ್ಯ ದೃಷ್ಟಿಕೋನವನ್ನು ಪೂರೈಸುವ ನಿಟ್ಟಿನಲ್ಲಿ ಸುದೃಢ ಅಡಿಪಾಯವನ್ನು ನಿರ್ಮಿಸುತ್ತದೆ. ಈ ಬಜೆಟ್ ದೀನದಲಿತರಿಗೆ ಆದ್ಯತೆ ನೀಡಿದೆ. ಇಂದಿನ ಮಹತ್ವಾಕಾಂಕ್ಷೆಯ ಸಮಾಜದ – ಹಳ್ಳಿಯ ಜನರು, ಬಡವರು, ರೈತರು, ಮಧ್ಯಮ ವರ್ಗದವರ ಕನಸುಗಳನ್ನು ಈ ಬಜೆಟ್ ಈಡೇರಿಸಲಿದೆ.
ಈ ಐತಿಹಾಸಿಕ ಬಜೆಟ್‌ಗಾಗಿ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಹಾಗೂ ಅವರ ತಂಡವನ್ನು ನಾನು ಅಭಿನಂದಿಸುತ್ತೇನೆ.
ಸ್ನೇಹಿತರೇ,
ಸಾಂಪ್ರದಾಯಿಕವಾಗಿ, ತಮ್ಮ ಕೈಗಳು, ಉಪಕರಣಗಳು ಮತ್ತು ಸಲಕರಣೆಗಳಿಂದ ಕಷ್ಟಪಟ್ಟು ಏನನ್ನಾದರೂ ಸೃಷ್ಟಿಸುವ ಕೋಟ್ಯಂತರ 'ವಿಶ್ವಕರ್ಮಿಗಳು' ಈ ದೇಶದ ನಿರ್ಮಾತೃಗಳು. ಕಮ್ಮಾರರು, ಅಕ್ಕಸಾಲಿಗರು, ಕುಂಬಾರರು, ಬಡಗಿಗಳು, ಶಿಲ್ಪಿಗಳು, ಕುಶಲಕರ್ಮಿಗಳು, ಗಾರೆ ಕೆಲಸಗಾರರು ಮುಂತಾದ ಅಸಂಖ್ಯಾತ ಜನರ ದೊಡ್ಡ ಪಟ್ಟಿ ನಮ್ಮಲ್ಲಿದೆ. ಈ ಎಲ್ಲ ವಿಶ್ವಕರ್ಮಿಗಳ ಕಠಿಣ ಪರಿಶ್ರಮವನ್ನು ಬೆಂಬಲಿಸಲು ದೇಶವು ಈ ಬಜೆಟ್‌ನಲ್ಲಿ ಮೊದಲ ಬಾರಿಗೆ ವಿವಿಧ ಪ್ರೋತ್ಸಾಹಕ ಯೋಜನೆಗಳನ್ನು ತಂದಿದೆ. ಅಂತಹ ಜನರಿಗೆ ತರಬೇತಿ, ತಂತ್ರಜ್ಞಾನ, ಸಾಲ ಮತ್ತು ಮಾರುಕಟ್ಟೆ ಬೆಂಬಲಕ್ಕಾಗಿ ಅವಕಾಶಗಳನ್ನು ಕಲ್ಪಿಸಲಾಗಿದೆ. ʻಪಿಎಂ ವಿಶ್ವಕರ್ಮ ಕೌಶಲ್ ಸಮ್ಮಾನ್ʼ, ಅಂದರೆ ʻಪಿಎಂ ವಿಕಾಸ್ʼ ಉಪಕ್ರಮವು ಕೋಟ್ಯಂತರ ವಿಶ್ವಕರ್ಮಿಗಳ ಜೀವನದಲ್ಲಿ ದೊಡ್ಡ ಬದಲಾವಣೆಯನ್ನು ತರಲಿದೆ.
ಸ್ನೇಹಿತರೇ,
ನಗರ ಪ್ರದೇಶದ ಮಹಿಳೆಯರಿಂದ ಹಿಡಿದು ಹಳ್ಳಿಗಳಲ್ಲಿ ವಾಸಿಸುವ ಮಹಿಳೆಯರು, ವ್ಯಾಪಾರದಲ್ಲಿ ತೊಡಗಿರುವ ಮಹಿಳೆಯರು ಅಥವಾ ಮನೆಕೆಲಸಗಳಲ್ಲಿ ನಿರತರಾಗಿರುವ ಮಹಿಳೆಯರವರೆಗೆ, ನಾರಿಯರ ಜೀವನವನ್ನು ಸುಲಭಗೊಳಿಸಲು ಸರಕಾರವು ಹಲವು ವರ್ಷಗಳಿಂದ ಅನೇಕ ಕ್ರಮಗಳನ್ನು ಕೈಗೊಂಡಿದೆ. ಅದು ʻಜಲ ಜೀವನ್ ಮಿಷನ್ʼ ಆಗಿರಲಿ, ʻಉಜ್ವಲʼ ಯೋಜನೆಯಾಗಿರಲಿ ಅಥವಾ ʻಪಿಎಂ-ಆವಾಸ್ ಯೋಜನೆʼಯಾಗಿರಲಿ, ಇಂತಹ ಅನೇಕ ಉಪಕ್ರಮಗಳನ್ನು ಸಾಕಷ್ಟು ಹುರುಪಿನಿಂದ ಮುಂದುವರಿಸಲಾಗುವುದು. ಇದಲ್ಲದೆ, 'ಮಹಿಳಾ ಸ್ವಸಹಾಯ ಗುಂಪು' ಬಹಳ ಶಕ್ತಿಯುತ ವಲಯವಾಗಿದ್ದು, ಇಂದು ಅದು ಭಾರತದಲ್ಲಿ ದೊಡ್ಡ ಸ್ಥಾನವನ್ನು ಪಡೆದುಕೊಂಡಿದೆ. ಮಹಿಳಾ ಸ್ವಸಹಾಯ ಗುಂಪುಗಳನ್ನು ಸ್ವಲ್ಪ ಉತ್ತೇಜಿಸಿದ್ದಾದರೆ ಅವು ಪವಾಡಗಳನ್ನು ಸೃಷ್ಟಿಸಬಲ್ಲವು. ಆದ್ದರಿಂದ, 'ಮಹಿಳಾ ಸ್ವಸಹಾಯ ಗುಂಪುಗಳ' ಸರ್ವತೋಮುಖ ಅಭಿವೃದ್ಧಿಗೆ ಕೈಗೊಳ್ಳಲಾದ ಹೊಸ ಉಪಕ್ರಮವು ಈ ಬಜೆಟ್‌ಗೆ ಹೊಸ ಆಯಾಮವನ್ನು ನೀಡುತ್ತದೆ. ಮಹಿಳೆಯರಿಗಾಗಿ ವಿಶೇಷ ಉಳಿತಾಯ ಯೋಜನೆಯನ್ನು ಸಹ ಪ್ರಾರಂಭಿಸಲಾಗುತ್ತಿದೆ. ʻಜನ್ ಧನ್ʼ ಖಾತೆಯ ನಂತರ, ಈ ವಿಶೇಷ ಉಳಿತಾಯ ಯೋಜನೆಯು ಗೃಹಿಣಿಯರು, ತಾಯಂದಿರು ಮತ್ತು ಕುಟುಂಬಗಳ ಸಹೋದರಿಯರಿಗೆ ಹೊಸ ಉತ್ತೇಜನವನ್ನು ನೀಡಲಿದೆ.
ಈ ಬಜೆಟ್ ಸಹಕಾರಿ ಸಂಸ್ಥೆಗಳನ್ನು ಗ್ರಾಮೀಣ ಆರ್ಥಿಕತೆಯ ಅಭಿವೃದ್ಧಿಯ ಕೇಂದ್ರಬಿಂದುವನ್ನಾಗಿ ಮಾಡುತ್ತದೆ. ಸರಕಾರವು ಸಹಕಾರಿ ವಲಯದಲ್ಲಿ ವಿಶ್ವದ ಅತಿದೊಡ್ಡ ಆಹಾರ ಶೇಖರಣಾ ಯೋಜನೆಯನ್ನು ತಂದಿದೆ ಅದೆಂದರೆ - ʻಶೇಖರಣಾ ಸಾಮರ್ಥ್ಯʼ. ಹೊಸ ಪ್ರಾಥಮಿಕ ಸಹಕಾರಿ ಸಂಘಗಳನ್ನು ಸ್ಥಾಪಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಸಹ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಇದು ಕೃಷಿಯ ಜೊತೆಗೆ ಹಾಲು ಮತ್ತು ಮೀನು ಉತ್ಪಾದನೆಯ ಕ್ಷೇತ್ರಗಳನ್ನು ವಿಸ್ತರಿಸುತ್ತದೆ. ರೈತರು, ಜಾನುವಾರು ಸಾಕಾಣಿಕೆದಾರರು ಮತ್ತು ಮೀನುಗಾರರು ತಮ್ಮ ಉತ್ಪನ್ನಗಳಿಗೆ ಉತ್ತಮ ಬೆಲೆ ಪಡೆಯುತ್ತಾರೆ.
ಸ್ನೇಹಿತರೇ,
ಈಗ ನಾವು ಕೃಷಿ ಕ್ಷೇತ್ರದಲ್ಲಿ ಡಿಜಿಟಲ್ ಪಾವತಿಯ ಯಶಸ್ಸನ್ನು ಪುನರಾವರ್ತಿಸಬೇಕಾಗಿದೆ. ಆದ್ದರಿಂದ, ಈ ಬಜೆಟ್‌ನಲ್ಲಿ, ನಾವು ಡಿಜಿಟಲ್ ಕೃಷಿ ಮೂಲಸೌಕರ್ಯಕ್ಕಾಗಿ ಪ್ರಮುಖ ಯೋಜನೆಯನ್ನು ತಂದಿದ್ದೇವೆ. ವಿಶ್ವವು ʻಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷʼವನ್ನು ಆಚರಿಸುತ್ತಿದೆ. ಭಾರತದಲ್ಲಿ ವಿವಿಧ ರೀತಿಯ ಸಿರಿಧಾನ್ಯಗಳಿವೆ, ಅವು ವಿಭಿನ್ನ ಹೆಸರುಗಳನ್ನು ಹೊಂದಿವೆ. ಇಂದು, ಸಿರಿಧಾನ್ಯಗಳು ಪ್ರತಿ ಮನೆಯನ್ನು ತಲುಪುತ್ತಿರುವುದರಿಂದ ಮತ್ತು ಪ್ರಪಂಚದಾದ್ಯಂತ ಜನಪ್ರಿಯವಾಗುತ್ತಿರುವುದರಿಂದ, ಅದರ ಗರಿಷ್ಠ ಪ್ರಯೋಜನಗಳು ಭಾರತದ ಸಣ್ಣ ರೈತರಿಗೆ ತಲುಪಬೇಕು. ಆದ್ದರಿಂದ, ಅದನ್ನು ಹೊಸ ರೀತಿಯಲ್ಲಿ ಮುಂದಕ್ಕೆ ಕೊಂಡೊಯ್ಯುವುದು ಅತ್ಯಗತ್ಯವಾಗಿದೆ. ಸಿರಿಧಾನ್ಯಕ್ಕೆ ಹೊಸ ಗುರುತು, ವಿಶೇಷ ಗುರುತು ಬೇಕು. ಅದಕ್ಕಾಗಿಯೇ ಈಗ ಈ ʻಸೂಪರ್ ಫುಡ್ʼಗೆ 'ಶ್ರೀ ಅನ್ನ' ಎಂಬ ಹೊಸ ಹೆಸರನ್ನು ನೀಡಲಾಗಿದೆ. ಅದರ ಪ್ರಚಾರಕ್ಕಾಗಿ ಹಲವಾರು ಯೋಜನೆಗಳನ್ನು ರೂಪಿಸಲಾಗಿದೆ. 'ಶ್ರೀ ಅನ್ನ'ಕ್ಕೆ ನೀಡಿದ ಆದ್ಯತೆಯಿಂದಾಗಿ ದೇಶದ ಸಣ್ಣ ರೈತರು, ಕೃಷಿಯಲ್ಲಿ ತೊಡಗಿರುವ ನಮ್ಮ ಬುಡಕಟ್ಟು ಸಹೋದರ-ಸಹೋದರಿಯರು ಆರ್ಥಿಕ ಬೆಂಬಲವನ್ನು ಪಡೆಯುತ್ತಾರೆ. ಜೊತೆಗೆ, ಇದೇ ವೇಳೆ, ದೇಶವಾಸಿಗಳು ಆರೋಗ್ಯಕರ ಜೀವನವನ್ನು ಪಡೆಯಲಿದ್ದಾರೆ.
ಸ್ನೇಹಿತರೇ,
ಸುಸ್ಥಿರ ಭವಿಷ್ಯಕ್ಕಾಗಿ ಹಸಿರು ಬೆಳವಣಿಗೆ, ಹಸಿರು ಆರ್ಥಿಕತೆ, ಹಸಿರು ಇಂಧನ, ಹಸಿರು ಮೂಲಸೌಕರ್ಯ ಮತ್ತು ಹಸಿರು ಉದ್ಯೋಗಗಳಿಗೆ ಈ ಬಜೆಟ್ ಅಭೂತಪೂರ್ವ ಉತ್ತೇಜನ ನೀಡಲಿದೆ. ಬಜೆಟ್‌ನಲ್ಲಿ ನಾವು ತಂತ್ರಜ್ಞಾನ ಮತ್ತು ಹೊಸ ಆರ್ಥಿಕತೆಗೆ ಹೆಚ್ಚಿನ ಒತ್ತು ನೀಡಿದ್ದೇವೆ. ಅಭಿವೃದ್ಧಿ ಆಕಾಂಕ್ಷೆಯ ಭಾರತವು ಇಂದು ರಸ್ತೆ, ರೈಲು, ಮೆಟ್ರೋ, ಬಂದರು, ಜಲಮಾರ್ಗಗಳಂತಹ ಪ್ರತಿಯೊಂದು ಕ್ಷೇತ್ರದಲ್ಲೂ ಆಧುನಿಕ ಮತ್ತು ಮುಂದಿನ ಪೀಳಿಗೆಯ ಮೂಲಸೌಕರ್ಯಗಳನ್ನು ಬಯಸುತ್ತದೆ. 2014ಕ್ಕೆ ಹೋಲಿಸಿದರೆ, ಮೂಲಸೌಕರ್ಯದಲ್ಲಿ ಹೂಡಿಕೆಯು ಶೇ.400ಕ್ಕಿಂತ ಹೆಚ್ಚಾಗಿದೆ. ಈ ಬಾರಿ ಮೂಲಸೌಕರ್ಯಕ್ಕಾಗಿ 10 ಲಕ್ಷ ಕೋಟಿ ರೂ.ಗಳ ಅಭೂತಪೂರ್ವ ಹೂಡಿಕೆಯು ಭಾರತದ ಅಭಿವೃದ್ಧಿಗೆ ಹೊಸ ಶಕ್ತಿ ಮತ್ತು ವೇಗವನ್ನು ನೀಡುತ್ತದೆ. ಈ ಹೂಡಿಕೆಯು ಯುವಕರಿಗೆ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ, ದೊಡ್ಡ ಜನಸಂಖ್ಯೆಗೆ ಹೊಸ ಆದಾಯದ ಅವಕಾಶಗಳನ್ನು ಒದಗಿಸುತ್ತದೆ. ಈ ಬಜೆಟ್‌ನಲ್ಲಿ, ಸುಗಮ ವ್ಯಾಪಾರದ ಜೊತೆಗೆ, ನಮ್ಮ ಕೈಗಾರಿಕೆಗಳಿಗೆ ಸಾಲದ ಬೆಂಬಲ ಮತ್ತು ಸುಧಾರಣೆಗಳ ಅಭಿಯಾನವನ್ನು ಮುಂದಕ್ಕೆ ಕೊಂಡೊಯ್ಯಲಾಗಿದೆ. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ(ಎಂಎಸ್ಎಂಇ) ಸಾಲ ಖಾತರಿಗಾಗಿ 2 ಲಕ್ಷ ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ. ಈಗ ʻಪ್ರಿಸಮ್‌ಟಿವ್ ತೆರಿಗೆʼ ವ್ಯವಸ್ಥೆಯಡಿ ಮಿತಿಯನ್ನು ಹೆಚ್ಚಿಸುವುದರಿಂದ ʻಎಂಎಸ್ಎಂಇʼಗಳು ಬೆಳೆಯಲು ಸಹಾಯ ಮಾಡುತ್ತದೆ. ದೊಡ್ಡ ಕಂಪನಿಗಳು ʻಎಂಎಸ್ಎಂಇʼಗಳಿಗೆ ಸಕಾಲದಲ್ಲಿ ಪಾವತಿ ಮಾಡಲು ಹೊಸ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ.
ಸ್ನೇಹಿತರೇ,
ವೇಗವಾಗಿ ಬದಲಾಗುತ್ತಿರುವ ಭಾರತದಲ್ಲಿ, ಅದು ಅಭಿವೃದ್ಧಿಯ ವಿಚಾರವಿರಲಿ ಅಥವಾ ವ್ಯವಸ್ಥೆಗಳ ವಿಚಾರವಿರಲಿ, ಧೈರ್ಯ ಅಥವಾ ಸಂಕಲ್ಪ ಕೈಗೊಳ್ಳುವ ಸಾಮರ್ಥ್ಯವಾಗಿರಲಿ ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಭಾರತದ ಮಧ್ಯಮ ವರ್ಗವು ಮುಖ್ಯವಾಹಿನಿಯಾಗಿ ಮಾರ್ಪಟ್ಟಿದೆ. ಶ್ರೀಮಂತ ಮತ್ತು ಅಭಿವೃದ್ಧಿ ಹೊಂದಿದ ಭಾರತದ ಕನಸುಗಳನ್ನು ಈಡೇರಿಸಲು ಮಧ್ಯಮ ವರ್ಗವು ಒಂದು ದೊಡ್ಡ ಶಕ್ತಿಯಾಗಿದೆ. ಭಾರತದ ಯುವ ಶಕ್ತಿ ಹೇಗೆ ಭಾರತದ ವಿಶೇಷ ಶಕ್ತಿಯಾಗಿದೆಯೋ ಹಾಗೆಯೇ ಭಾರತದ ಬೆಳೆಯುತ್ತಿರುವ ಮಧ್ಯಮ ವರ್ಗವೂ ದೇಶದ ದೊಡ್ಡ ಶಕ್ತಿಯಾಗಿದೆ. ಮಧ್ಯಮ ವರ್ಗದವರನ್ನು ಸಬಲೀಕರಣಗೊಳಿಸುವ ಸಲುವಾಗಿ, ನಮ್ಮ ಸರಕಾರವು ಕಳೆದ ಕೆಲವು ವರ್ಷಗಳಲ್ಲಿ ಹಲವಾರು ನಿರ್ಧಾರಗಳನ್ನು ತೆಗೆದುಕೊಂಡಿದೆ ಮತ್ತು ಸುಗಮ ಜೀವನವನ್ನು ಖಾತರಿಪಡಿಸಿದೆ. ನಾವು ತೆರಿಗೆ ದರವನ್ನು ಕಡಿಮೆ ಮಾಡಿದ್ದೇವೆ, ಜೊತೆಗೆ ಪ್ರಕ್ರಿಯೆಯನ್ನು ಸರಳ, ಪಾರದರ್ಶಕ ಮತ್ತು ವೇಗಗೊಳಿಸಿದ್ದೇವೆ. ಸದಾ ಮಧ್ಯಮ ವರ್ಗದ ಪರವಾಗಿ ನಿಂತಿರುವ ನಮ್ಮ ಸರಕಾರ, ಮಧ್ಯಮ ವರ್ಗಕ್ಕೆ ಭಾರಿ ತೆರಿಗೆ ವಿನಾಯಿತಿ ನೀಡಿದೆ. ಸರ್ವರಿಗೂ ಸೇವೆ ಸಲ್ಲಿಸುವ ಹಾಗೂ ಬಲಿಷ್ಠ ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ಸಹಾಯ ಮಾಡುವ ಈ ಬಜೆಟ್‌ಗಾಗಿ ನಾನು ಮತ್ತೊಮ್ಮೆ ನಿರ್ಮಲಾ ಜೀ ಮತ್ತು ಅವರ ಇಡೀ ತಂಡವನ್ನು ಅಭಿನಂದಿಸುತ್ತೇನೆ. ಈ ಅಭಿನಂದನೆ ಜೊತಗೆ, ನಾನು ನನ್ನ ದೇಶವಾಸಿಗಳಿಗೆ ಕರೆ ನೀಡಲು ಬಯಸುವುದೇನೆಂದರೆ - ಈಗ ಹೊಸ ಬಜೆಟ್ ನಿಮ್ಮ ಮುಂದಿದೆ. ಹೊಸ ನಿರ್ಣಯಗಳೊಂದಿಗೆ ಮುಂದುವರಿಯಿರಿ. 2047ರ ವೇಳೆಗೆ, ನಾವು ಖಂಡಿತವಾಗಿಯೂ ಸಮೃದ್ಧ ಭಾರತ, ಸಮರ್ಥ ಭಾರತ ಮತ್ತು ಎಲ್ಲ ರೀತಿಯಲ್ಲಿ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುತ್ತೇವೆ. ನಾವು ಈ ಪ್ರಯಾಣವನ್ನು ಮುಂದುವರಿಸೋಣ. ಅನಂತ ಧನ್ಯವಾದಗಳು!
ಸೂಚನೆ: ಇದು ಪ್ರಧಾನಿಯವರ ಭಾಷಣದ ಭಾವಾನುವಾದ. ಮೂಲ ಭಾಷಣ ಹಿಂದಿಯಲ್ಲಿತ್ತು.