ನಮಸ್ಕಾರ ಸ್ನೇಹಿತರೇ,
ದೀರ್ಘ ಕಾಲದ ನಂತರ ನಾನು ಇಂದು ನಿಮ್ಮನ್ನು ನೋಡುತ್ತಿದ್ದೇನೆ. ನೀವೆಲ್ಲರೂ ಚೆನ್ನಾಗಿದ್ದೀರೆಂದು ತಿಳಿಯುತ್ತೇನೆ. ನಿಮ್ಮ ಕುಟುಂಬದಲ್ಲಿ ಯಾವುದೇ ಬಿಕ್ಕಟ್ಟು ಇಲ್ಲ ಎಂದು ಭಾವಿಸುತ್ತೇನೆ. ದೇವರು ನಿಮಗೆ ಒಳ್ಳೆಯದು ಮಾಡಲಿ.
ವಿಶೇಷ ಸಂದರ್ಭದಲ್ಲಿ ಇಂದಿನ ಸಂಸತ್ತಿನ ಅಧಿವೇಶನ ಪ್ರಾರಂಭವಾಗುತ್ತಿದೆ. ಒಂದು ಕಡೆ ಕೊರೊನಾ ಸಾಂಕ್ರಾಮಿಕ ರೋಗವಿದೆ, ಮತ್ತೊಂದೆಡೆ ನಮ್ಮ ಕರ್ತವ್ಯಗಳನ್ನು ಪೂರೈಸುವ ಜವಾಬ್ದಾರಿ ಇದೆ. ಎಲ್ಲಾ ಸಂಸದರು ಕರ್ತವ್ಯದ ಮಾರ್ಗವನ್ನು ಆರಿಸಿಕೊಂಡಿದ್ದಾರೆ. ಇದಕ್ಕಾಗಿ ಎಲ್ಲ ಸಂಸದರಿಗೂ ಅಭಿನಂದನೆಗಳು ಮತ್ತು ಧನ್ಯವಾದಗಳು.
ಬಜೆಟ್ ಅಧಿವೇಶನವನ್ನು ಸಮಯಕ್ಕಿಂತ ಮೊದಲೇ ಮುಗಿಸಬೇಕಾಯಿತು. ಈ ಬಾರಿ ಸಂಸತ್ತು ದಿನಕ್ಕೆ ಎರಡು ಬಾರಿ ಕಾರ್ಯನಿರ್ವಹಿಸಲಿದೆ. ಒಮ್ಮೆ ರಾಜ್ಯಸಭೆ, ಒಮ್ಮೆ ಲೋಕಸಭೆ ಕಾರ್ಯ ನಿರ್ವಹಿಸಲಿವೆ. ಶಿಫ್ಟ್ ಸಮಯಗಳನ್ನು ಸಹ ಬದಲಾಯಿಸಬೇಕಾಯಿತು. ಶನಿವಾರ–ಭಾನುವಾರದ ವಾರಾಂತ್ಯದ ವಿರಾಮಗಳನ್ನು ಈ ಬಾರಿ ರದ್ದುಪಡಿಸಲಾಗಿದೆ. ಎಲ್ಲಾ ಸದಸ್ಯರು ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಇದನ್ನು ಸ್ವಾಗತಿಸಿದ್ದಾರೆ ಮತ್ತು ಕರ್ತವ್ಯದ ಹಾದಿಯಲ್ಲಿ ಮುಂದುವರಿಯಲು ನಿರ್ಧರಿಸಿದ್ದಾರೆ.
ಈ ಅಧಿವೇಶನದಲ್ಲಿ ಹಲವಾರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು, ವಿವಿಧ ವಿಷಯಗಳ ಬಗ್ಗೆ ಚರ್ಚಿಸಲಾಗುವುದು ಮತ್ತು ಲೋಕಸಭೆಯಲ್ಲಿ ನಾವು ಹೆಚ್ಚು ಚರ್ಚಿಸುತ್ತೇವೆ, ಸದನದಲ್ಲಿ ಚರ್ಚೆಯು ಹೆಚ್ಚು ವೈವಿಧ್ಯಮಯವಾಗಿರುತ್ತದೆ, ಅದು ದೇಶಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿರುತ್ತದೆ ಮತ್ತು ಸಮಸ್ಯೆಗಳನ್ನು ಪರಿಹರಿಸಲು ಅನುಕೂಲವಾಗುತ್ತದೆ.
ಈ ಬಾರಿಯೂ ಸಹ, ಆ ಮಹಾನ್ ಸಂಪ್ರದಾಯವನ್ನು ಅನುಸರಿಸಿ, ಎಲ್ಲಾ ಸಂಸದರು ಒಗ್ಗೂಡಿ ಅದಕ್ಕೆ ಮೌಲ್ಯವನ್ನು ತಂದುಕೊಡುತ್ತಾರೆ ಎಂದು ನನಗೆ ನಂಬಿಕೆ ಇದೆ. ಕೊರೊನಾದಿಂದ ಉಂಟಾಗಿರುವ ಪ್ರಸ್ತುತ ಪರಿಸ್ಥಿತಿಯಲ್ಲಿ, ನಾವು ನಿಯಮಗಳನ್ನು ಪಾಲಿಸಬೇಕು ಮತ್ತು ಹೆಚ್ಚಿನ ಮುನ್ನೆಚ್ಚರಿಕೆಗಳನ್ನು ವಹಿಸಬೇಕು. ಔಷಧಿ ಬರುವವರೆಗೂ ನಮ್ಮ ವಿಧಾನದಲ್ಲಿ ಯಾವುದೇ ಸಡಿಲತೆಯನ್ನು ತೋರಿಸುವಂತಿಲ್ಲ ಎಂಬುದು ಸಹ ಸ್ಪಷ್ಟವಾಗಿದೆ. ಲಸಿಕೆಗಳು ವಿಶ್ವದ ಯಾವುದೇ ಮೂಲೆಯಿಂದಾದರೂ ಸಾಧ್ಯವಾದಷ್ಟು ಬೇಗ ಬರಬೇಕು ಎಂದು ನಾವು ಆಶಿಸುತ್ತಿದ್ದೇವೆ, ನಮ್ಮ ವಿಜ್ಞಾನಿಗಳು ಸಾಧ್ಯವಾದಷ್ಟು ಬೇಗ ಈ ದಿಕ್ಕಿನಲ್ಲಿ ಯಶಸ್ವಿಯಾಗುತ್ತಾರೆ ಮತ್ತು ಈ ಬಿಕ್ಕಟ್ಟಿನಿಂದ ಎಲ್ಲರಿಗೂ ಮುಕ್ತಿ ನೀಡಲು ನಾವು ಯಶಸ್ವಿಯಾಗುತ್ತೇವೆ.
ಈ ಸದನಕ್ಕೆ, ವಿಶೇಷವಾಗಿ ಈ ಅಧಿವೇಶನಕ್ಕೆ ಇನ್ನೂ ಒಂದು ನಿರ್ಣಾಯಕವಾದ ಜವಾಬ್ದಾರಿ ಇದೆ. ಇಂದು ನಮ್ಮ ಕೆಚ್ಚೆದೆಯ ಸೈನಿಕರು ಗಡಿಯಲ್ಲಿದ್ದಾರೆ. ಅವರು ಕಠಿಣ ಭೂಪ್ರದೇಶಗಳಲ್ಲಿ ಗಡಿಗಳನ್ನು ಧೈರ್ಯ ಮತ್ತು ಉತ್ಸಾಹದಿಂದ ರಕ್ಷಿಸುತ್ತಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಅಲ್ಲಿ ಮಳೆ ಪ್ರಾರಂಭವಾಗಲಿದೆ. ಮಾತೃಭೂಮಿಯನ್ನು ರಕ್ಷಿಸಲು ದೃಢನಿಶ್ಚಯದಿಂದ ನಿಂತಿರುವ ಅವರಿಗೆ ಈ ಸದನಗಳು ಮತ್ತು ಸದನದ ಎಲ್ಲ ಸದಸ್ಯರು ಸರ್ವಾನುಮತದ ಧ್ವನಿ, ಉತ್ಸಾಹ ಮತ್ತು ಸಂಕಲ್ಪದಲ್ಲಿ ಸಂದೇಶವನ್ನು ಕಳುಹಿಸಬೇಕಾಗಿದೆ. ಇಡೀ ಸದನವು ದೇಶದ ಕೆಚ್ಚೆದೆಯ ಸೈನಿಕರೊಂದಿಗೆ ನಿಂತಿದೆ; ದೇಶವು ಭಾರತೀಯ ಸೈನ್ಯವನ್ನು ಬೆಂಬಲಿಸುತ್ತದೆ ಎಂದು ಈ ಸದನ ಮತ್ತು ಎಲ್ಲಾ ಗೌರವಾನ್ವಿತ ಸದಸ್ಯರು ಬಲವಾದ ಸಂದೇಶವನ್ನು ನೀಡುತ್ತಾರೆ ಎಂದು ನಾನು ನಂಬಿದ್ದೇನೆ. ಕೊರೊನಾದ ಅವಧಿಯಲ್ಲಿ, ಮೊದಲಿನಂತೆ ಎಲ್ಲೆಡೆ ಮುಕ್ತವಾಗಿ ಸಂಚರಿಸುವ ಅವಕಾಶ ನಿಮಗೆ ಸಿಗುವುದಿಲ್ಲ ಎಂದು ನನಗೆ ಗೊತ್ತು. ಆದರೆ ಸ್ನೇಹಿತರೇ, ದಯವಿಟ್ಟು ನಿಮ್ಮ ಬಗ್ಗೆ ಕಾಳಹಿ ವಹಿಸಿ. ನಿಮಗೆ ಎಲ್ಲಾ ಸುದ್ದಿಗಳೂ ತಲುಪುತ್ತವೆ. ಅದು ನಿಮಗೆ ಕಷ್ಟದ ಕೆಲಸವಲ್ಲ, ಆದರೆ ದಯವಿಟ್ಟು ನಿಮ್ಮ ಬಗ್ಗೆ ನೀವು ಕಾಳಜಿ ವಹಿಸಿ. ಇದು ನಿಮ್ಮೆಲ್ಲರಿಗೂ ನನ್ನ ವೈಯಕ್ತಿಕ ವಿನಂತಿಯಾಗಿದೆ.
ಧನ್ಯವಾದಗಳು ಸ್ನೇಹಿತರೇ