ಎಲ್ಲಾ ಘನತೆವೆತ್ತ,
ಗೌರವಾನ್ವಿತರೇ,
ಇಂದಿನ ಈ ಅದ್ಭುತ ಸಭೆಯನ್ನು ಆಯೋಜಿಸಿರುವುದಕ್ಕೆ ಅಧ್ಯಕ್ಷ ಪುಟಿನ್ ಅವರಿಗೆ ನಾನು ಹೃದಯಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.
ವಿಸ್ತೃತ ಬ್ರಿಕ್ಸ್ ಕುಟುಂಬವಾಗಿ ನಾವು ಇಂದು ಮೊದಲ ಬಾರಿಗೆ ಭೇಟಿಯಾಗುತ್ತಿರುವುದಕ್ಕೆ ನನಗೆ ತುಂಬಾ ಸಂತೋಷವಾಗುತ್ತಿದೆ. ಬ್ರಿಕ್ಸ್ ಕುಟುಂಬಕ್ಕೆ ಸೇರ್ಪಡೆಗೊಂಡ ಎಲ್ಲಾ ಹೊಸ ಸ್ನೇಹಿತರನ್ನು ನಾನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ.
ಕಳೆದೊಂದು ವರ್ಷದಿಂದ ಬ್ರಿಕ್ಸ್ ಅಧ್ಯಕ್ಷತೆಯನ್ನು ಯಶಸ್ವಿಯಾಗಿ ನಿರ್ವಹಿಸಿದ ರಷ್ಯಾದ ಅಧ್ಯಕ್ಷ ಪುಟಿನ್ ಅವರನ್ನು ನಾನು ಅಭಿನಂದಿಸುತ್ತೇನೆ.
ಮಿತ್ರರೇ,
ಯುದ್ಧಗಳು, ಆರ್ಥಿಕ ಅನಿಶ್ಚಿತತೆ, ಹವಾಮಾನ ವೈಪರೀತ್ಯ ಮತ್ತು ಭಯೋತ್ಪಾದನೆಯಂತಹ ಹಲವು ಒತ್ತಡದ ಸವಾಲುಗಳನ್ನು ವಿಶ್ವ ಎದುರಿಸುತ್ತಿರುವ ಈ ಸಂದರ್ಭದಲ್ಲಿ ಶೃಂಗಸಭೆ ನಡೆಯುತ್ತಿದೆ. ಇಡೀ ವಿಶ್ವವು ಉತ್ತರ ದಕ್ಷಿಣ ವಿಭಜನೆ ಮತ್ತು ಪೂರ್ವ ಪಶ್ಚಿಮ ವಿಭಜನೆಯ ಬಗ್ಗೆ ಮಾತನಾಡುತ್ತಿದೆ.
ಹಣದುಬ್ಬರ ನಿಯಂತ್ರಣ, ಆಹಾರ ಭದ್ರತೆ, ಇಂಧನ ಸುರಕ್ಷತೆ, ಆರೋಗ್ಯ ಭದ್ರತೆ, ಜಲ ಭದ್ರತೆ ಖಾತ್ರಿಪಡಿಸುವುದು ವಿಶ್ವ ಎಲ್ಲಾ ರಾಷ್ಟ್ರಗಳಿಗೂ ಆದ್ಯತೆಯ ವಿಷಯಗಳಾಗಿವೆ.
ಇಂದಿನ ತಾಂತ್ರಿಕ ಯುಗದಲ್ಲಿ ಹೊಸ ಸವಾಲುಗಳಾದ ಸೈಬರ್ ಡೀಪ್ ಫೇಕ್, ಡಿಸ್ ಇನ್ಫಾರಮೇಷನ್ ಮತ್ತಿತರವು ಎದುರಾಗುತ್ತಿವೆ.
ಇಂತಹ ಸಮಯದಲ್ಲಿ, ಬ್ರಿಕ್ಸ್ ಬಗ್ಗೆ ಹೆಚ್ಚಿನ ನಿರೀಕ್ಷೆಗಳಿವೆ. ವೈವಿಧ್ಯಮಯ ಮತ್ತು ಎಲ್ಲರನ್ನೂ ಒಳಗೊಂಡ ವೇದಿಕೆಯಾಗಿ, ಬ್ರಿಕ್ಸ್ ಎಲ್ಲಾ ಕ್ಷೇತ್ರಗಳಲ್ಲಿ ಸಕಾರಾತ್ಮಕ ಪಾತ್ರವನ್ನು ವಹಿಸುತ್ತದೆ ಎಂದು ನಾನು ನಂಬಿದ್ದೇನೆ.
ಈ ನಿಟ್ಟಿನಲ್ಲಿ, ನಮ್ಮ ವಿಧಾನವು ಜನಕೇಂದ್ರಿತವಾಗಿ ಉಳಿಯಬೇಕು. ಬ್ರಿಕ್ಸ್ ಒಂದು ವಿಭಜಕ ಸಂಘಟನೆಯಲ್ಲ ಆದರೆ ಮಾನವೀಯತೆಯ ಹಿತಾಸಕ್ತಿಯಲ್ಲಿ ಕೆಲಸ ಮಾಡುತ್ತದೆ ಎಂಬ ಸಂದೇಶವನ್ನು ನಾವು ಜಗತ್ತಿಗೆ ತಿಳಿಸಬೇಕಾಗಿದೆ.
ನಾವು ಮಾತುಕತೆ ಮತ್ತು ರಾಜತಾಂತ್ರಿಕತೆಯನ್ನು ಬೆಂಬಲಿಸುತ್ತೇವೆ, ಯುದ್ಧವಲ್ಲ. ಮತ್ತು ನಾವು ಒಟ್ಟಾಗಿ ಕೋವಿಡ್ ನಂತಹ ಸವಾಲನ್ನು ಜಯಿಸಲು ಸಾಧ್ಯವಾದಂತೆಯೇ, ಭವಿಷ್ಯದ ಪೀಳಿಗೆಗೆ ಸುರಕ್ಷಿತ, ಸದೃಢವಾದ ಮತ್ತು ಸಮೃದ್ಧ ಭವಿಷ್ಯವನ್ನು ಖಾತ್ರಿಪಡಿಸಿಕೊಳ್ಳಲು ನಾವು ಖಂಡಿತವಾಗಿಯೂ ಹೊಸ ಅವಕಾಶಗಳನ್ನು ಸೃಷ್ಟಿಸಲು ಸಮರ್ಥರಾಗಿದ್ದೇವೆ.
ಭಯೋತ್ಪಾದನೆ ಮತ್ತು ಭಯೋತ್ಪಾದನೆಗೆ ಆರ್ಥಿಕ ನೆರವು ನೀಡುವುದನ್ನು ಎದುರಿಸಲು, ನಮಗೆ ಎಲ್ಲರ ಒಂದೇ ಮನಸ್ಸಿನ, ದೃಢ ಬೆಂಬಲದ ಅಗತ್ಯವಿದೆ. ಈ ಗಂಭೀರ ವಿಷಯದಲ್ಲಿ ದ್ವಂದ್ವ ನೀತಿಗೆ ಅವಕಾಶವಿಲ್ಲ. ನಮ್ಮ ದೇಶಗಳಲ್ಲಿ ಯುವಕರ ಮೂಲಭೂತವಾದಿಕರಣವನ್ನು ತಡೆಯಲು ನಾವು ಸಕ್ರಿಯ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.
ವಿಶ್ವಸಂಸ್ಥೆಯಲ್ಲಿನ ಅಂತಾರಾಷ್ಟ್ರೀಯ ಭಯೋತ್ಪಾದನೆಯ ಸಮಗ್ರ ಸಮಾವೇಶದ ದೀರ್ಘಕಾಲ ಬಾಕಿ ಉಳಿದಿರುವ ವಿಷಯದಲ್ಲಿ ನಾವು ಒಗ್ಗೂಡಿ ಕೆಲಸ ಮಾಡಬೇಕು.
ಅದೇ ರೀತಿಯಲ್ಲಿ, ಸೈಬರ್ ಭದ್ರತೆಗಾಗಿ ಮತ್ತು ಸುರಕ್ಷಿತ ಮತ್ತು ಸುರಕ್ಷಿತ ಕೃತಕ ಬುದ್ದಿಮತ್ತೆ(ಎಐ) ಗಾಗಿ ನಾವು ಜಾಗತಿಕ ನಿಯಮಗಳ ಮೇಲೆ ಕೆಲಸ ಮಾಡಬೇಕಾಗಿದೆ.
ಮಿತ್ರರೇ,
ಪಾಲುದಾರ ರಾಷ್ಟ್ರಗಳಾಗಿ ಬ್ರಿಕ್ಸ್‌ಗೆ ಹೊಸ ದೇಶಗಳನ್ನು ಸ್ವಾಗತಿಸಲು ಭಾರತ ಸಿದ್ಧವಾಗಿದೆ.
ಈ ನಿಟ್ಟಿನಲ್ಲಿ ಎಲ್ಲಾ ನಿರ್ಧಾರಗಳನ್ನು ಒಮ್ಮತದಿಂದ ತೆಗೆದುಕೊಳ್ಳಬೇಕು ಮತ್ತು ಬ್ರಿಕ್ಸ್ ಸಂಸ್ಥಾಪಕ ಸದಸ್ಯರ ಅಭಿಪ್ರಾಯಗಳನ್ನು ಗೌರವಿಸಬೇಕು. ಜೊಹಾನ್ಸ್‌ಬರ್ಗ್ ಶೃಂಗಸಭೆಯಲ್ಲಿ ಅಳವಡಿಸಿಕೊಂಡ ಮಾರ್ಗದರ್ಶಿ ತತ್ವಗಳು, ಮಾನದಂಡಗಳು, ಅರ್ಹತೆಗಳು ಮತ್ತು ಕಾರ್ಯವಿಧಾನಗಳನ್ನು ಎಲ್ಲಾ ಸದಸ್ಯರು ಮತ್ತು ಪಾಲುದಾರ ರಾಷ್ಟ್ರಗಳು ಅನುಸರಿಸಬೇಕು.
ಮಿತ್ರರೇ,
ಬ್ರಿಕ್ಸ್ ಒಂದು ಸಂಸ್ಥೆಯಾಗಿದ್ದು, ಅದು ಕಾಲಕ್ಕೆ ತಕ್ಕೆಂತೆ ಬೆಳೆಯುವ ಬಯಕೆ ಹೊಂದಿದೆ. ನಾನು ನಮ್ಮದೇ ಆದ ಉದಾಹರಣೆಯನ್ನು ಜಗತ್ತಿಗೆ ನೀಡುತ್ತಾ, ಮೂಲಕ ನಾವು ಸಾಮೂಹಿಕವಾಗಿ ಮತ್ತು ಒಗ್ಗಟ್ಟಿನಿಂದ ಜಾಗತಿಕ ಸಂಸ್ಥೆಗಳ ಸುಧಾರಣೆಗಳಿಗಾಗಿ ನಮ್ಮ ಧ್ವನಿಯನ್ನು ಎತ್ತಬೇಕು.
ವಿಶ್ವಸಂಸ್ಥೆಯ ಭದ್ರತಾ ಮಂಡಳಿ, ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕುಗಳು ಮತ್ತು ಡಬ್ಲ್ಯುಟಿಒದಂತಹ ಜಾಗತಿಕ ಸಂಸ್ಥೆಗಳಲ್ಲಿ ಕಾಲ ಕಾಲಕ್ಕೆ ಸುಧಾರಣೆಗಳ ಮಾಡುವುದಕ್ಕ ಅನುಗುಣವಾಗಿ ಮುಂದುವರಿಯಬೇಕು.
ನಾವು ಬ್ರಿಕ್ಸ್ ನಲ್ಲಿ ನಮ್ಮ ಪ್ರಯತ್ನಗಳನ್ನು ಮುಂದಕ್ಕೆ ಕೊಂಡೊಯ್ಯುವಾಗ, ಈ ಸಂಸ್ಥೆಯು ಜಾಗತಿಕ ಸಂಸ್ಥೆಗಳನ್ನು ಬದಲಿಸಲು ಪ್ರಯತ್ನಿಸುತ್ತಿರುವ ಒಂದು ಚಿತ್ರಣವನ್ನು ಪಡೆದುಕೊಳ್ಳದಂತೆ ನೋಡಿಕೊಳ್ಳಲು ನಾವು ಜಾಗರೂಕರಾಗಿರಬೇಕು, ಬದಲಿಗೆ ಅವುಗಳನ್ನು ಸುಧಾರಿಸಲು ಕ್ರಮ ಕೈಗೊಳ್ಳಬೇಕು.
ಜಾಗತಿಕ ದಕ್ಷಿಣದ ದೇಶಗಳ ಭರವಸೆಗಳು, ಆಕಾಂಕ್ಷೆಗಳು ಮತ್ತು ನಿರೀಕ್ಷೆಗಳನ್ನು ಸಹ ಮನಸ್ಸಿನಲ್ಲಿಟ್ಟುಕೊಳ್ಳಬೇಕು. ನಮ್ಮ ವಾಯ್ಸ್ ಆಫ್ ಗ್ಲೋಬಲ್ ಸೌತ್ ಶೃಂಗಸಭೆಗಳು ಮತ್ತು ಜಿ-20 ಅಧ್ಯಕ್ಷತೆಯ ಸಮಯದಲ್ಲಿ, ಭಾರತವು ಈ ದೇಶಗಳ ಧ್ವನಿಯನ್ನು ಜಾಗತಿಕ ವೇದಿಕೆಯಲ್ಲಿ ಪ್ರತಿಧ್ವನಿಸಿತು. ಈ ಪ್ರಯತ್ನಗಳು ಬ್ರಿಕ್ಸ್ ಅಡಿಯಲ್ಲಿಯೂ ಬಲಗೊಳ್ಳುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ. ಕಳೆದ ವರ್ಷ ಆಫ್ರಿಕಾದ ದೇಶಗಳನ್ನು ಬ್ರಿಕ್ಸ್ ನೊಂದಿಗೆ ಸಂಯೋಜಿಸಲಾಯಿತು.
ಈ ವರ್ಷವೂ ಕೂಡ ಜಾಗತಿಕ ದಕ್ಷಿಣದ ಹಲವು ದೇಶಗಳನ್ನು ರಷ್ಯಾ ಆಹ್ವಾನಿಸಿತ್ತು.
ಮಿತ್ರರೇ,
ವಿಭಿನ್ನ ದೃಷ್ಟಿಕೋನಗಳು ಮತ್ತು ಸಿದ್ಧಾಂತಗಳ ಸಂಗಮದಿಂದ ರಚಿಸಲಾದ ಬ್ರಿಕ್ಸ್ ಗುಂಪು, ಧನಾತ್ಮಕ ಸಹಕಾರವನ್ನು ಬೆಳೆಸುವ ಜಗತ್ತಿಗೆ ಸ್ಫೂರ್ತಿಯ ಮೂಲವಾಗಿದೆ.
ನಮ್ಮ ವೈವಿಧ್ಯತೆ, ಪರಸ್ಪರ ಗೌರವ ಮತ್ತು ಒಮ್ಮತದ ಆಧಾರದ ಮೇಲೆ ಮುಂದುವರಿಯುವ ನಮ್ಮ ಸಂಪ್ರದಾಯವು ನಮ್ಮ ಸಹಕಾರಕ್ಕೆ ಆಧಾರವಾಗಿದೆ. ನಮ್ಮ ಈ ಗುಣ ಮತ್ತು ನಮ್ಮ ಬ್ರಿಕ್ಸ್ ಮನೋಭಾವವು ಇತರ ದೇಶಗಳನ್ನೂ ಈ ವೇದಿಕೆಗೆ ಆಕರ್ಷಿಸುತ್ತಿದೆ. ಮುಂಬರುವ ದಿನಗಳಲ್ಲಿ ನಾವು ಒಗ್ಗೂಡಿ ಈ ವಿಶಿಷ್ಟ ವೇದಿಕೆಯನ್ನು ಸಂವಾದ, ಸಹಕಾರ ಮತ್ತು ಸಮನ್ವಯಕ್ಕೆ ಮಾದರಿಯನ್ನಾಗಿ ಮಾಡುತ್ತೇವೆಂಬ ವಿಶ್ವಾಸ ನನಗಿದೆ.
ಆ ನಿಟ್ಟಿನಲ್ಲಿ, ಬ್ರಿಕ್ಸ್ ಸಂಸ್ಥಾಪಕ ಸದಸ್ಯರಾಗಿ ಭಾರತ ಸದಾ ತನ್ನ ಜವಾಬ್ದಾರಿಗಳನ್ನು ಈಡೇರಿಸುವುದನ್ನು ಮುಂದುವರಿಸುತ್ತದೆ.
ಮತ್ತೊಮ್ಮೆ, ಎಲ್ಲರಿಗೂ ದೊಡ್ಡ ಧನ್ಯವಾದಗಳು