ರಾಜ್ಯ ಮತ್ತು ಕೇಂದ್ರದ ನಡುವಿನ ಸಹಕಾರ ಅತ್ಯಂತ ಮಹತ್ವ: ಪ್ರಧಾನಮಂತ್ರಿ
ಪಿ.ಎಲ್.ಐ. ಯೋಜನೆಯ ಸಂಪೂರ್ಣ ಪ್ರಯೋಜನ ಪಡೆಯುವಂತೆ ಮತ್ತು ಗರಿಷ್ಠ ಹೂಡಿಕೆ ಆಕರ್ಷಿಸುವಂತೆ ರಾಜ್ಯಗಳಿಗೆ ಆಗ್ರಹ

ನಮಸ್ಕಾರ,

ನೀತಿ ಆಯೋಗದ ಆಡಳಿತ ಮಂಡಳಿಯ 6ನೇ ಸಭೆಗೆ ನಿಮ್ಮೆಲ್ಲರನ್ನೂ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ದೇಶದ ಪ್ರಗತಿಯ ಮೂಲತತ್ವ ಅಥವಾ ಸಾರವೇನೆಂದರೆ, ಕೇಂದ್ರ ಮತ್ತು ರಾಜ್ಯ ಸರಕಾರಗಳು ಜತೆಗೂಡಿ ಕೆಲಸ ಮಾಡಬೇಕು ಮತ್ತು ನಿರ್ದಿಷ್ಟ ದಿಕ್ಕಿನಲ್ಲಿ ಸಾಗಬೇಕು. ನಾವು ಸಹಕಾರಿ ಒಕ್ಕೂಟ ವ್ಯವಸ್ಥೆಯನ್ನು ಮತ್ತಷ್ಟು ಅರ್ಥಪೂರ್ಣವಾಗಿಸಬೇಕು ಮತ್ತು ಸ್ಪರ್ಧಾತ್ಮಕ ಸಹಕಾರಿ ಒಕ್ಕೂಟ ವ್ಯವಸ್ಥೆಯನ್ನು ರಾಜ್ಯಗಳ ಹಂತದಿಂದ ಕೆಳಕ್ಕೆ ಅಂದರೆ ಜಿಲ್ಲಾ ಮಟ್ಟಕ್ಕೆ ಕೊಂಡೊಯ್ಯಲು ಪ್ರಯತ್ನಿಸಬೇಕು. ಹಾಗೆ ಮಾಡಿದಾಗ, ಅಭಿವೃದ್ಧಿಯ ಸ್ಪರ್ಧಾತ್ಮಕತೆ ಮುಂದುವರಿಯಲಿದೆ ಮತ್ತು ಅಭಿವೃದ್ಧಿಯೇ ಪ್ರಮುಖ ಕಾರ್ಯಸೂಚಿಯಾಗಿ ಉಳಿದುಕೊಳ್ಳಲಿದೆ. ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಹೇಗೆ ಸ್ಪರ್ಧಾತ್ಮಕತೆ ಹೆಚ್ಚಿಸಬೇಕು ಎಂಬ ಬಗ್ಗೆ ನಾವು ಈ ಮುನ್ನ ಹಲವು ಬಾರಿ ಗುಂಪು ಚರ್ಚೆ ನಡೆಸಿ, ಆಲೋಚಿಸಿದ್ದೇವೆ. ಇದೇ ವಿಷಯಕ್ಕೆ ಇಂದಿನ ಸಭೆಯಲ್ಲೂ ಒತ್ತು ನೀಡಲಾಗುತ್ತಿರುವುದು ಸಹಜವೇ ಆಗಿದೆ. ಕೊರೊನಾ ಸಂಕಷ್ಟ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಜತೆಗೂಡಿ ಕೆಲಸ ಮಾಡಿದಾಗ, ಇಡೀ ದೇಶವೇ ಹೇಗೆ ಯಶಸ್ವಿಯಾಯಿತು ಎಂಬುದನ್ನು ನಾವು ಕಣ್ಣಾರೆ ನೋಡಿದ್ದೇವೆ ಮತ್ತು ಇಡೀ ವಿಶ್ವದಲ್ಲೇ ಭಾರತದ ಬಗ್ಗೆ ಸಕಾರಾತ್ಮಕ ವರ್ಚಸ್ಸು ಹೇಗೆ ಸೃಷ್ಟಿಯಾಯಿತು ಎಂಬುದನ್ನು ನಾವು ಗಮನಿಸಿದ್ದೇವೆ.

ಸ್ನೇಹಿತರೆ,

ಈಗ ದೇಶ ಸ್ವಾತಂತ್ರ್ಯ ಗಳಿಸಿದ 75 ವರ್ಷಗಳನ್ನು ಪೂರ್ಣಗೊಳಿಸಲು ಹೊರಟಿರುವ ಸುಸಂದರ್ಭದಲ್ಲೇ ನೀತಿ ಆಯೋಗದ ಆಡಳಿತ ಮಂಡಳಿಯ 6ನೇ ಸಭೆ ನಡೆಯುತ್ತಿರುವುದು ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಈ ಸಭೆಯ ಮೂಲಕ ನಾನು ಎಲ್ಲ ರಾಜ್ಯಗಳಿಗೆ ಒತ್ತಾಯಿಸುವುದೇನೆಂದರೆ, “75ನೇ ವರ್ಷದ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಮತ್ತು ಅರ್ಥಪೂರ್ಣವಾಗಿ ಆಚರಿಸಲು ನೀವು ಎಲ್ಲ ವರ್ಗದ ಜನರನ್ನು ಸೇರಿಸಿಕೊಂಡು ಜಿಲ್ಲಾ ಮಟ್ಟದಲ್ಲಿ ಸಮಿತಿಗಳನ್ನು ರಚಿಸಿ”. ಕೆಲವು ದಿನಗಳ ಹಿಂದೆ, ಈ ಸಭೆಯಲ್ಲಿ ಚರ್ಚಿಸಲೇಬೇಕಾದ ವಿಷಯಗಳ ಕುರಿತು ಪ್ರಸ್ತಾಪಿಸಲಾಗಿತ್ತು ಅಥವಾ ಉಲ್ಲೇಖಿಸಲಾಗಿತ್ತು. ದೇಶದ ಪ್ರಮುಖ ಆದ್ಯತೆಗಳನ್ನು ಗಣನೆಗೆ ತೆಗೆದುಕೊಂಡು ಈ ಎಲ್ಲಾ ಕಾರ್ಯಸೂಚಿಗಳನ್ನು ಅಯ್ಕೆ ಮಾಡಲಾಗಿದೆ.

ನಮ್ಮ ಈ ಎಲ್ಲ ಕಾರ್ಯಸೂಚಿಗಳ ಕುರಿತು ರಾಜ್ಯಗಳಿಂದ ಸಲಹೆ ಸೂಚನೆ ಪಡೆಯುವ ಸಂಬಂಧ, ಸಿದ್ಧತೆ ನಡೆಸಲು ಸಾಕಷ್ಟು ಸಮಯಾವಕಾಶ ನೀಡಲು ಸಹ ಸುದೀರ್ಘ ಚರ್ಚೆ ನಡೆಸಲಾಗಿದೆ. ಈ ಬಾರಿ ನೀತಿ ಆಯೋಗದ ಆಡಳಿತ ಮಂಡಳಿ ಮತ್ತು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ಮಟ್ಟದಲ್ಲಿ ಆರೋಗ್ಯಕರ ಕಾರ್ಯಾಗಾರ ನಡೆದಿದೆ. ಆ ಕಾರ್ಯಾಗಾರದಲ್ಲಿ ನಡೆದ ಚರ್ಚೆಗಳ ಪ್ರಮುಖ ಅಂಶಗಳನ್ನು ಇಂದಿನ ಸಭೆಯಲ್ಲಿ ಸೇರಿಸಲು ನಾವು ಪ್ರಯತ್ನಿಸಿದ್ದೇವೆ. ಹಾಗಾಗಿ ನೀತಿ ಆಯೋಗದ ಕಾರ್ಯಸೂಚಿಗಳಿಗೆ ಸಾಕಷ್ಟು ಸುಧಾರಣೆಗಳನ್ನು ತರಲಾಗಿದೆ. ರಾಜ್ಯಗಳ ಅಗತ್ಯಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾರ್ಯಸೂಚಿ ರೂಪಿಸಲಾಗಿದೆ. ನೀತಿ ಆಯೋಗದ ಆಡಳಿತ ಮಂಡಳಿಯ ಈ ಬಾರಿಯ ಕಾರ್ಯಸೂಚಿಗಳು ಬಹಳ ನಿರ್ದಿಷ್ಟವಾಗಿವೆ. ಈ ರೀತಿಯ ಪ್ರಕ್ರಿಯೆಯಿಂದಾಗಿ ನಾವು ನಮ್ಮ ಚರ್ಚೆಗಳನ್ನು ಮತ್ತಷ್ಟು ಗಮನಾರ್ಹವಾಗಿಸಿದ್ದೇವೆ.

ಸ್ನೇಹಿತರೆ,

ಕಳೆದ ಕೆಲವು ವರ್ಷಗಳಲ್ಲಿ, ದೇಶದ ಕಡು ಬಡವರ ಬದುಕನ್ನು ಹಸನುಗೊಳಿಸಿ, ಸಬಲೀಕರಿಸುವ ಉದ್ದೇಶದಿಂದ ಅವರಿಗೆ ಬ್ಯಾಂಕ್ ಖಾತೆಗಳನ್ನು ತೆರೆಸಿದ್ದನ್ನು ನಾವೆಲ್ಲಾ ನೋಡಿದ್ದೇವೆ. ದೇಶಾದ್ಯಂತ ಬಡವರಿಗೆ ಲಸಿಕಾ ಕಾರ್ಯಕ್ರಮಗಳನ್ನು ಹೆಚ್ಚಿಸಲಾಗಿದೆ, ಆರೋಗ್ಯ ಸೌಲಭ್ಯಗಳನ್ನು ಹೆಚ್ಚಿಸಲಾಗಿದೆ. ಉಚಿತ ವಿದ್ಯುತ್ ಸಂಪರ್ಕ, ಉಚಿತ ಅನಿಲ ಸಂಪರ್ಕ ಮತ್ತು ಉಚಿತ ಶೌಚಾಲಯ ನಿರ್ಮಾಣ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಈ ಎಲ್ಲಾ ಯೋಜನೆಗಳಿಂದ ಬಡವರು, ಕಡುಬಡವರು ಮತ್ತು ಮಧ್ಯಮ ವರ್ಗದ ಜನರ ಜೀವನದಲ್ಲಿ ಹಿಂದೆಂದೂ ಕಾಣದ ಬದಲಾವಣೆಗಳು ಕಂಡುಬರುತ್ತಿವೆ. ದೇಶದ ಪ್ರತಿ ಬಡವನಿಗೆ ಗಟ್ಟುಮುಟ್ಟಾದ ಮನೆಗಳನ್ನು ತ್ವರಿತ ಗತಿಯಲ್ಲಿ ನಿರ್ಮಿಸಿಕೊಡುವ ಬೃಹತ್ ಆಂದೋಲನವೇ ದೇಶಾದ್ಯಂತ ನಡೆಯುತ್ತಿದೆ. ಈ ಯೋಜನೆಯನ್ನು ಕೆಲವು ರಾಜ್ಯಗಳು ಉತ್ತಮವಾಗಿ ಜಾರಿಗೆ ತರುತ್ತಿದ್ದರೆ, ಮತ್ತೆ ಕೆಲವು ರಾಜ್ಯಗಳು ನಿಧಾನ ಗತಿಯಲ್ಲಿ ಸಾಗುತ್ತಿವೆ. ಅವು ನಿರ್ಮಾಣದ ವೇಗ ಗತಿ ಹೆಚ್ಚಿಸಿಕೊಳ್ಳಬೇಕಿದೆ. 2014ರಿಂದ ದೇಶದ ಗ್ರಾಮೀಣ ಭಾಗಗಳು ಮತ್ತು ನಗರ ಪ್ರದೇಶಗಳಲ್ಲಿ 2.40 ಕೋಟಿಗಿಂತ ಹೆಚ್ಚಿನ ಸೂರುಗಳನ್ನು ನಿರ್ಮಿಸಿಕೊಡಲಾಗಿದೆ. ದೇಶದ ಪ್ರಮುಖ 6 ನಗರಗಳಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿದ ಮನೆಗಳನ್ನು ಸಹ ನಿರ್ಮಿಸುವ ಕಾರ್ಯ ಆಂದೋಲನ ರೂಪದಲ್ಲಿ ನಡೆಯುತ್ತಿದೆ. ಇನ್ನೊಂದು ತಿಂಗಳಲ್ಲಿ ಹೊಸ ತಂತ್ರಜ್ಞಾನದ ವಿನೂತನ ಮಾದರಿಯ ಗುಣಮಟ್ಟದ ಮನೆಗಳ ನಿರ್ಮಾಣ 6 ನಗರಗಳಲ್ಲಿ ಪೂರ್ಣವಾಗಲಿವೆ. ಈ ಪ್ರಯತ್ನ ಪ್ರತಿ ರಾಜ್ಯಕ್ಕೂ ಉಪಯೋಗವಾಗಲಿದೆ. ಅಂತೆಯೇ, ನೀರಿನ ಕೊರತೆ ಮತ್ತು ನೀರಿನಿಂದ ಹರಡುವ ನಾನಾ ರೋಗ ರುಜಿನಗಳು ಜನರ ಅಭಿವೃದ್ಧಿಗೆ ಅಡ್ಡಿಯಾಗುವುದನ್ನು ಮತ್ತು ಅಪೌಷ್ಟಿಕತೆಯ ಸಮಸ್ಯೆಗಳು ಎದುರಾಗುವುದನ್ನು ತಡೆಯಲು ನಾವು ತಂಡ ಸ್ವರೂಪದಲ್ಲಿ ಕಾರ್ಯೋನ್ಮುಖರಾಗಿದ್ದೇವೆ. ಈ ನಿಟ್ಟಿನಲ್ಲಿ ನಾವು, ಗ್ರಾಮೀಣ ಪ್ರದೇಶದ 3.5 ಕೋಟಿಗಿಂತ ಹೆಚ್ಚಿನ ಕುಟುಂಬಗಳಿಗೆ ನಲ್ಲಿ ನೀರು ಸಂಪರ್ಕ ಒದಗಿಸಿ, ನೀರು ಪೂರೈಸುತ್ತಿದ್ದೇವೆ. ಜಲ್ ಜೀವನ್ ಮಿಷನ್ (ಕಾರ್ಯಕ್ರಮ) ಅಡಿ, ಕೇವಲ 18 ತಿಂಗಳಲ್ಲಿ 3.5 ಕೋಟಿಗಿಂತ ಹೆಚ್ಚಿನ ಕುಟುಂಬಗಳಿಗೆ ನಲ್ಲಿ ನೀರು ಪೂರೈಕೆ ಆಗುತ್ತಿದೆ. ಭಾರತ್ ನೆಟ್(ಅಂತರ್ಜಾಲ) ಯೋಜನೆಯು ದೇಶದ ಗ್ರಾಮೀಣ ಭಾಗಗಳಿಗೆ ಅಂತರ್ಜಾಲ ಸಂಪರ್ಕ ಒದಗಿಸುವ ಪ್ರಮುಖ ಪರಿವರ್ತನೆಯ ಮೂಲವಾಗಿದೆ. ಇಂತಹ ಯೋಜನೆಗಳ ಜಾರಿಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಜತೆಗೂಡಿ ಕೆಲಸ ಮಾಡಿದಾಗ, ಕಾಮಗಾರಿಗಳು ವೇಗ ಪಡೆದುಕೊಳ್ಳುತ್ತವೆ ಮತ್ತು ಈ ಎಲ್ಲಾ ಯೋಜನೆಯ ಪ್ರಯೋಜನಗಳನ್ನು ಕಟ್ಟ ಕಡೆಯ ವ್ಯಕ್ತಿಗೆ ತಲುಪಿಸಲು ಸಾಧ್ಯವಾಗುತ್ತದೆ.

ಸ್ನೇಹಿತರೆ,

ಈ ವರ್ಷದ ಬಜೆಟ್’ಗೆ ಸಿಗುತ್ತಿರುವ ಸಕಾರಾತ್ಮಕ ಸ್ಪಂದನೆಯು ಎಲ್ಲೆಡೆ ಹೊಸ ಆಶಾವಾದವನ್ನು ಸೃಷ್ಟಿಸಿದೆ. ಈ ಸ್ಪಂದನೆಯಲ್ಲಿ ದೇಶದ ಒಟ್ಟಾರೆ ಭಾವನೆ ಮತ್ತು ಮನಸ್ಥಿತಿ ಹೊರಹೊಮ್ಮಿದೆ. ದೇಶವೀಗ ತನ್ನ ಮುಕ್ತ ಮನಸ್ಸನ್ನು ಸಜ್ಜುಗೊಳಿಸಿಕೊಂಡಿದೆ. ತ್ವರಿತವಾಗಿ ಪ್ರಗತಿ ಹೊಂದಲು ದೇಶವೀಗ ಬಯಸುತ್ತಿದೆ. ಕಾಲವನ್ನು ವ್ಯರ್ಥ ಮಾಡಲು ಅದು ಬಯಸುತ್ತಿಲ್ಲ. ದೇಶದ ಯುವ ಸಮುದಾಯ ದೇಶದ ಮನಸ್ಥಿತಿಯನ್ನು ಉತ್ತಮತೆಯ ಕಡೆಗೆ ರೂಪಿಸಲು ಮಹತ್ವದ ಪಾತ್ರ ವಹಿಸುತ್ತಿದೆ. ಹಾಗಾಗಿ, ಬದಲಾವಣೆ ಕಡೆಗೆ ಹೊಸ ಆಸಕ್ತಿ ಬೆಳೆದಿದೆ. ದೇಶದ ಅಭಿವೃದ್ಧಿ ಪಯಣದಲ್ಲಿ ಖಾಸಗಿ ವಲಯ ಹೇಗೆ ಹೆಚ್ಚಿನ ಉತ್ಸಾಹದೊಂದಿಗೆ ಮುನ್ನುಗ್ಗುತ್ತಿದೆ ಎಂಬುದನ್ನು ನಾವೆಲ್ಲಾ ನೋಡುತ್ತಿದ್ದೇವೆ. ಸರಕಾರವಾಗಿ, ನಾವು ಈ ಉತ್ಸಾಹವನ್ನು ಗೌರವಿಸಬೇಕು, ಖಾಸಗಿ ವಲಯದ ಶಕ್ತಿಯನ್ನು ಮೆಚ್ಚಿ, ಆತ್ಮನಿರ್ಭರ್ ಭಾರತ ನಿರ್ಮಾಣ ಮಾಡಲು ಅವರಿಗೆ ಅಪಾರ ಅವಕಾಶಗಳನ್ನು ಒದಗಿಸಬೇಕು. ಆತ್ಮನಿರ್ಭರ್ ಭಾರತವು ನವಭಾರತ ನಿರ್ಮಾಣದ ಕಡೆಗೆ ಹೊಸ ಮತ್ತು ವಿನೂತನ ನಡೆಯಾಗಿದೆ. ಇದರಲ್ಲಿ ಪ್ರತಿ ವ್ಯಕ್ತಿ, ಪ್ರತಿ ಸಂಸ್ಥೆ ಮತ್ತು ಪ್ರತಿ ಉದ್ದಿಮೆಯು ಅದರ ಪೂರ್ಣ ಸಾಮರ್ಥ್ಯವನ್ನು ಮೀರಿ ಮುಂದಡಿ ಇಡುವ ಅವಕಾಶವನ್ನು ಗಳಿಸಲಿದೆ.

ಸ್ನೇಹಿತರೆ,

ಭಾರತವು ತನ್ನ ಅಗತ್ಯಗಳಿಗೆ ಉತ್ಪನ್ನ ಮತ್ತು ಸರಕುಗಳನ್ನು ತಯಾರಿಸಿಕೊಳ್ಳುವ ಜತೆಗೆ, ಜಾಗತಿಕ ಮಾರುಕಟ್ಟೆಯಲ್ಲಿ ತನ್ನ ಉತ್ಪನ್ನಗಳನ್ನು ಜನಪ್ರಿಯಗೊಳಿಸುವ ಮೂಲಕ ಉತ್ಪನ್ನಗಳ ತಯಾರಿಕೆಯಲ್ಲಿ ಜಾಗತಿಕ ಸರದಾರನಾಗಿ ಬೀಗಲು ಆತ್ಮ ನಿರ್ಭರ್ ಅಭಿಯಾನವು ರಾಜಪಥವಾಗಿದೆ. ಆದ್ದರಿಂದ ನಾನು ಯಾವಾಗಲೂ ‘ಶೂನ್ಯ ನ್ಯೂನತೆ, ಶೂನ್ಯ ಪರಿಣಾಮ ಇರುವಂತೆ ಉತ್ಪನ್ನಗಳನ್ನು ತಯಾರಿಸುವುದಕ್ಕೆ ಒತ್ತು ನೀಡುತ್ತೇನೆ. ಭಾರತದಂತಹ ರಾಷ್ಟ್ರದಲ್ಲಿ ಅಪಾರ ಪ್ರಮಾಣದಲ್ಲಿರುವ ಯುವ ಜನರ ಆಕಾಂಕ್ಷೆಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು, ನಾವುಗಳು ಆಧುನಿಕ ಮೂಲಸೌಕರ್ಯಗಳನ್ನು ನಿರ್ಮಿಸಬೇಕು. ಅನುಶೋಧನೆಯನ್ನು ಉತ್ತೇಜಿಸಬೇಕು, ತಂತ್ರಜ್ಞಾನದ ಗರಿಷ್ಠ ಬಳಕೆ ಮಾಡಿಕೊಳ್ಳಬೇಕು. ಶಿಕ್ಷಣ ಮತ್ತು ಕೌಶಲ್ಯಗಳಿಗೆ ಉತ್ತಮ ಅವಕಾಶಗಳನ್ನು ಒದಗಿಸಬೇಕು,

ಸ್ನೇಹಿತರೆ,

ನಾವು ನಮ್ಮ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳು(ಎಂಎಸ್ಎಂಇ) ಮತ್ತು ನವೋದ್ಯಮಗಳನ್ನು ಬಲಪಡಿಸುವ ಅಗತ್ಯವಿದೆ. ಉದ್ಯಮ ವ್ಯವಹಾರಗಳಲ್ಲಿ ಪ್ರತಿ ರಾಜ್ಯವೂ ತನ್ನದೇ ಆದ ಬಲಿಷ್ಠ ಅಂಶ ಮತ್ತು ಸಾಮರ್ಥ್ಯಗಳನ್ನು ಹೊಂದಿದೆ. ಪ್ರತಿ ರಾಜ್ಯದ ಪ್ರತಿ ಜಿಲ್ಲೆಯೂ ತನ್ನದೇ ಆದ ಗುಣ ಮತ್ತು ವೈಶಿಷ್ಟ್ಯಗಳನ್ನು ಹೊಂದಿವೆ. ನಾವು ನಿಕಟವಾಗಿ ನೋಡಿದರೆ, ಹಲವಾರು ಸಾಮರ್ಥ್ಯಗಳನ್ನು ಕಾಣಬಹುದು. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ, ದೇಶದಲ್ಲಿರುವ ಇಂತಹ ನೂರಾರು ಜಿಲ್ಲೆಗಳನ್ನು ಪಟ್ಟಿ ಮಾಡಿ, ಆಯ್ಕೆ ಮಾಡಿದ್ದು, ಇಂತಹ ಜಿಲ್ಲೆಗಳಲ್ಲಿ ತಯಾರಾಗುತ್ತಿರುವ ನೂರಾರು ವೈವಿಧ್ಯಮಯ ಉತ್ಪನ್ನಗಳಿಗೆ ಮಾರುಕಟ್ಟೆ ಮತ್ತು ರಫ್ತು ಉತ್ತೇಜನ ನೀಡುತ್ತಿದೆ. ಇದು ರಾಜ್ಯಗಳ ನಡುವೆ ಆರೋಗ್ಯಕರ ಸ್ಪರ್ಧೆ ಏರ್ಪಡಲು ಕಾರಣವಾಗಿದೆ. ಆದರೆ ಈ ಪ್ರಕ್ರಿಯೆಯನ್ನು ಮುಂದಕ್ಕೆ ಕರೆದೊಯ್ಯುವ ಅಗತ್ಯವಿದೆ. ಯಾವ ರಾಜ್ಯ ಹೆಚ್ಚಿನ ರಫ್ತು ಮಾಡಿತು, ಯಾವ ರಾಜ್ಯ ಹಲವು ವಿಧದ ಉತ್ಪನ್ನಗಳನ್ನು ರಫ್ತು ಮಾಡಿತು, ಯಾವ ರಾಜ್ಯ ಗರಿಷ್ಠ ರಾಷ್ಟ್ರಗಳಿಗೆ ರಫ್ತು ಮಾಡಿತು, ಯಾವ ರಾಜ್ಯ ದುಬಾರಿ ಉತ್ಪನ್ನಗಳನ್ನು ರಫ್ತು ಮಾಡಿತು… ಈ ರೀತಿಯ ಬೆಳವಣಿಗೆಗಳಿಂದ ನಾನಾ ಜಿಲ್ಲೆಗಳ ಉತ್ಪನ್ನ ತಯಾರಕರ ನಡುವೆ ಆರೋಗ್ಯಕರ ಸ್ಪರ್ಧೆ ಏರ್ಪಡಬೇಕು. ಇದರಿಂದ ಪ್ರತಿ ಜಿಲ್ಲೆ ಮತ್ತು ರಾಜ್ಯಗಳು ರಫ್ತು ಹೆಚ್ಚಳಕ್ಕೆ ಒತ್ತು ನೀಡಬಹುದು. ಈ ಪ್ರಯೋಗವನ್ನು ನಾವು ಜಿಲ್ಲೆಯ ಕೆಳಹಂತಕ್ಕೆ ಅಂದರೆ ತಾಲೂಕು ಮತ್ತು ಬ್ಲಾಕ್ ಮಟ್ಟಕ್ಕೆ ವಿಸ್ತರಿಸಬೇಕು. ನಾವು ರಾಜ್ಯಗಳ ಸಂಪನ್ಮೂಲಗಳ ಸಂಪೂರ್ಣ ಬಳಕೆ ಮಾಡಿಕೊಳ್ಳಬೇಕು. ನಾವು ರಾಜ್ಯಗಳ ಪ್ರತಿ ತಿಂಗಳ ರಫ್ತು ಪ್ರಮಾಣವನ್ನು ಗಣನೆಗೆ ತೆಗೆದುಕೊಂಡು, ಅದನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು.

ಕೇಂದ್ರ ಮತ್ತು ರಾಜ್ಯಗಳ ನಡುವೆ ನೀತಿ ಮಾರ್ಗಸೂಚಿಗಳು ಮತ್ತು ಉತ್ತಮ ಸಮನ್ವಯತೆ ಅತಿ ಮುಖ್ಯ. ಉದಾಹರಣೆಗೆ, ಮೀನುಗಾರಿಕೆ ಉದ್ಯಮ ಉತ್ತೇಜನಕ್ಕೆ ನಮ್ಮಲ್ಲಿ ಅಮಿತ ಅವಕಾಶಗಳಿವೆ. ಕರಾವಳಿ ರಾಜ್ಯಗಳಲ್ಲಿ ನೀಲಿ ಆರ್ಥಿಕತೆ ಮತ್ತು ಸಾಗರ ಸಂಪತ್ತಿನ ರಫ್ತಿಗೆ ವಿಪುಲ ಅವಕಾಶಗಳಿವೆ. ಹಾಗಾಗಿ, ನಮ್ಮ ಕರಾವಳಿ ರಾಜ್ಯಗಳಿಗೆ ವಿಶೇಷ ಉಪಕ್ರಮಗಳು ಇರಬೇಕು. ಇದು ನಮ್ಮ ಆರ್ಥಿಕತೆಯನ್ನು ಮತ್ತು ಮೀನುಗಾರರ ಜೀವನ ಸ್ಥಿತಿಯನ್ನು ಮೇಲೆತ್ತಲಿದೆ. ಕೇಂದ್ರ ಸರಕಾರ ದೇಶದ ನಾನಾ ವಲಯಗಳಿಗೆ ಉತ್ಪಾದನೆ ಸಂಪರ್ಕಿತ ಉತ್ತೇಜನಾ ಯೋಜನೆ (ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್-ಪಿಎಲ್ಐ) ಯನ್ನು ಜಾರಿಗೆ ತಂದಿರುವುದು ನಿಮಗೆಲ್ಲಾ ತಿಳಿದಿದೆ ಎಂದು ನಾನು ಭಾವಿಸಿದ್ದೇನೆ. ದೇಶದಲ್ಲಿ ಉತ್ಪಾದನೆ(ತಯಾರಿಕೆ) ಹೆಚ್ಚಿಸಲು ಇದೊಂದು ಮಹತ್ವದ ಯೋಜನೆಯಾಗಿದೆ. ರಾಜ್ಯಗಳು ಸಹ ಈ ಯೋಜನೆಯ ಪೂರ್ಣ ಪ್ರಯೋಜನ ಪಡೆಯಬಹುದು ಮತ್ತು ಹೆಚ್ಚಿನ ಪ್ರಮಾಣದ ಹೂಡಿಕೆ ಆಕರ್ಷಿಸಬಹುದು. ಅಲ್ಲದೆ, ರಾಜ್ಯಗಳು ಕಾರ್ಪೊರೇಟ್ ತೆರಿಗೆ ದರ ಕಡಿತದ ಗರಿಷ್ಠ ಪ್ರಯೋಜನಗಳನ್ನು ಪಡೆಯಬಹುದು.

ಸ್ನೇಹಿತರೆ,

ಈ ವರ್ಷದ ಬಜೆಟ್’ನಲ್ಲಿ ದೇಶದ ಮೂಲಸೌಕರ್ಯ ವಲಯಕ್ಕೆ ಹಂಚಿಕೆ ಮಾಡಿರುವ ಬೃಹತ್ ನಿಧಿಯ ಕುರಿತು ವ್ಯಾಪಕ ಚರ್ಚೆಗಳು ನಡೆಯುತ್ತಿವೆ. ಮೂಲಸೌಕರ್ಯ ವಲಯಕ್ಕೆ ಮಾಡುವ ವೆಚ್ಚವು ಹಲವು ಹಂತಗಳಲ್ಲಿ ದೇಶದ ಆರ್ಥಿಕತೆ ಪ್ರಗತಿಗೆ ಕಾರಣವಾಗಲಿದೆ, ದೇಶದಲ್ಲಿ ಲಕ್ಷಾಂತರ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ. ಇದು ಬಹುವಿಧದ ಪರಿಣಾಮಗಳನ್ನು ಸೃಷ್ಟಿಸಲಿದೆ. ರಾಷ್ಟ್ರೀಯ ಮೂಲಸೌಕರ್ಯ ಪೈಪ್’ಲೈನ್ ಯೋಜನೆಯಲ್ಲಿ ರಾಜ್ಯಗಳ ಪಾಲು ಶೇಕಡ 40ರಷ್ಟಿದೆ. ಆದ್ದರಿಂದ ಕೇಂದ್ರ ಮತ್ತು ರಾಜ್ಯಗಳು ಜತೆಗೂಡಿ, ಸಮನ್ವಯದಿಂದ ತಮ್ಮ ಬಜೆಟ್, ಯೋಜನೆಗಳನ್ನು ರೂಪಿಸುವುದು ಮತ್ತು ಆದ್ಯತೆಗಳನ್ನು ನಿಗದಿಪಡಿಸುವುದು ಅತ್ಯಗತ್ಯ. ಈ ವರ್ಷ ಭಾರತ ಸರಕಾರ, ಬಜೆಟ್ ವೇಳಾಪಟ್ಟಿಯನ್ನು ಒಂದು ತಿಂಗಳ ಮೊದಲೇ ಪೂರ್ವನಿಗದಿ ಮಾಡಿತ್ತು. ಕೇಂದ್ರ ಮತ್ತು ರಾಜ್ಯಗಳ ಬಜೆಟ್ ವೇಳಾಪಟ್ಟಿಯಲ್ಲಿ ಸಾಮಾನ್ಯವಾಗಿ 3-4 ವಾರಗಳ ಅಂತರ ಇರುತ್ತದೆ. ಕೇಂದ್ರ ಬಜೆಟ್ ಸ್ವರೂಪದಲ್ಲೇ ರಾಜ್ಯಗಳ ಬಜೆಟ್ ರೂಪುಗೊಂಡರೆ, ಆಗ ಇಬ್ಬರೂ ಜತೆಗೂಡಿ ಒಂದೆ ದಿಕ್ಕಿನಲ್ಲಿ ಸಾಗಲು ಸಾಧ್ಯವಾಗುತ್ತದೆ. ನಾನು ಚರ್ಚಿಸಿದ ದಿಕ್ಕಿನಲ್ಲಿ ರಾಜ್ಯಗಳ ಬಜೆಟ್ ರೂಪುಗೊಳ್ಳುವುದನ್ನು ನೋಡಲು ನಾನು ಇಷ್ಟಪಡುತ್ತೇನೆ. ರಾಜ್ಯಗಳ ಬಜೆಟ್ ಇನ್ನೂ ಮಂಡನೆ ಆಗಬೇಕಿದೆ. ಅವು ಆದ್ಯತೆಯ ಮೇರೆಗೆ ಈ ಕೆಲಸವನ್ನು ಮಾಡುತ್ತವೆಯೇ? ರಾಜ್ಯಗಳಲ್ಲಿ ಅಭಿವೃದ್ಧಿಗೆ ವೇಗ ನೀಡಲು ಮತ್ತು ಅವು ಸ್ವಾವಲಂಬನೆ ಸಾಧಿಸಬೇಕಾದರೆ, ಕೇಂದ್ರ ಬಜೆಟ್ ಜತೆಗೆ, ರಾಜ್ಯಗಳ ಬಜೆಟ್ ಸಹ ಅಷ್ಟೇ ಪ್ರಮುಖ.

ಸ್ನೇಹಿತರೆ,

15ನೇ ಹಣಕಾಸು ಆಯೋಗದಲ್ಲಿ ಸ್ಥಳೀಯ ಸಂಸ್ಥೆಗಳ ಆರ್ಥಿಕ ಸಂಪನ್ಮೂಲದಲ್ಲಿ ಮಹತ್ವದ ಏರಿಕೆ ಆಗಲಿದೆ. ಸ್ಥಳೀಯ ಮಟ್ಟದಲ್ಲಿ ಆಡಳಿತ ಸುಧಾರಣೆಯು ಜನರ ಜೀವನ ಗುಣಮಟ್ಟ ಮತ್ತು ಅವರ ವಿಶ್ವಾಸ ವೃದ್ಧಿಗೆ ಆಧಾರವಾಗಲಿದೆ. ತಂತ್ರಜ್ಞಾನ ಮತ್ತು ಜನರ ಸಕ್ರಿಯ ಪಾಲ್ಗೊಳ್ಳುವಿಕೆ ಈ ಸುಧಾರಣೆಗಳಿಗೆ ಅತ್ಯಗತ್ಯ. ಪಂಚಾಯತ್ ರಾಜ್ ವ್ಯವಸ್ಥೆ ಮತ್ತು ಸ್ಥಳೀಯ ಸಂಸ್ಥೆಗಳ ಮೂಲಕ ಆಯ್ಕೆಯಾಗುವ ಜನಪ್ರತಿನಿಧಿಗಳನ್ನು ಸುಧಾರಣೆಗಳಿಗೆ ಹೊಣೆಗಾರರಾಗಿಸುವ ಕಾಲ ಬಂದಿದೆ ಎಂದು ನನಗನಿಸುತ್ತಿದೆ. ಸ್ಥಳೀಯ ಸಂಸ್ಥೆಗಳ ಮಟ್ಟದಲ್ಲಿ ಬದಲಾವಣೆಗಳನ್ನು ತರಬೇಕಾದರೆ, ಕೇಂದ್ರ, ರಾಜ್ಯ ಮತ್ತು ಜಿಲ್ಲೆಗಳು ಜತೆಗೂಡಿ ಕೆಲಸ ಮಾಡಬೇಕು. ಹೀಗೆ ಮಾಡಿದರೆ, ಸಕಾರಾತ್ಮಕ ಫಲಿತಾಂಶಗಳನ್ನು ಕಾಣಬಹುದು. ಆಕಾಂಕ್ಷಿತ ಜಿಲ್ಲೆಗಳೇ ನಮ್ಮ ಮುಂದಿರುವ ಉದಾಹರಣೆಗಳಾಗಿವೆ. ಆಕಾಂಕ್ಷಿತ ಜಿಲ್ಲೆಗಳಲ್ಲಿ ನಡೆಸಿರುವ ಪ್ರಯೋಗಗಳು ಉತ್ತಮ ಫಲಿತಾಂಶ ನೀಡುತ್ತಿವೆ.

ಸ್ನೇಹಿತರೆ,

ಕೃಷಿ ವಲಯ ಅಪಾರ ಸಾಮರ್ಥ್ಯಗಳನ್ನು ಹೊಂದಿದೆ. ಆದರೆ ನಾವು ಕೆಲವು ವಾಸ್ತವಗಳನ್ನು ಒಪ್ಪಿಕೊಳ್ಳುವ ಅಗತ್ಯವಿದೆ. ಭಾರತ ಕೃಷಿ ಪ್ರಧಾನ ರಾಷ್ಟ್ರ ಎಂದು ಕರೆಯಲಾಗಿದ್ದರೂ, ನಾವಿಂದು 65-70 ಸಾವಿರ ಕೋಟಿ ರೂ. ಮೌಲ್ಯದ ಖಾದ್ಯ ತೈಲವನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ನಾವಿದನ್ನು ನಿಲ್ಲಿಸಬಹುದು. ಈ ಹಣ ನಮ್ಮ ರೈತರ ಖಾತೆಗಳಿಗೆ ಹೋಗುವಂತಾಗಬೇಕು. ಈ ಹಣಕ್ಕೆ ನಮ್ಮ ರೈತರು ಅರ್ಹತೆ ಹೊಂದಿದ್ದಾರೆ. ಆದರೆ ಇದಾಗಬೇಕು ಅಂದರೆ, ನಾವು ಕ್ರಮಬದ್ಧವಾಗಿ ಯೋಜನೆಗಳನ್ನು ರೂಪಿಸಬೇಕು. ಇತ್ತೀಚೆಗೆ, ನಾವು ದ್ವಿದಳ ಧಾನ್ಯಗಳಿಗೆ ಈ ಪ್ರಯೋಗ ಮಾಡಿದ್ದೇವೆ. ಇದು ಯಶಸ್ವಿಯಾಗಿದೆ. ದ್ವಿದಳ ಧಾನ್ಯಗಳ ಆಮದು ಮೊತ್ತ ಗಣನೀಯವಾಗಿ ಇಳಿಕೆ ಕಂಡಿದೆ. ಅಂತಹ ಹಲವಾರು ಉತ್ಪನ್ನಗಳು ಮತ್ತು ಆಹಾರ ವಸ್ತುಗಳು ನಮ್ಮ ಮುಂದಿವೆ. ನಮ್ಮ ದೇಶದ ರೈತರು ಅಂತಹ ಉತ್ಪನ್ನಗಳನ್ನು ಬೆಳೆಯಬಲ್ಲರು. ಅವರಿಗೆ ಯಾವುದೇ ಕಷ್ಟಗಳಿಲ್ಲ ಬೆಳೆ ಮಾಡಲು. ಆದ್ದರಿಂದ, ಹಲವು ಕೃಷಿ ಉತ್ಪನ್ನಗಳನ್ನು ನಮ್ಮ ರೈತರು ದೇಶಕ್ಕಾಗಿ ಬೆಳೆಯುವುದಷ್ಟೇ ಅಲ್ಲ, ಇಡೀ ವಿಶ್ವಕ್ಕೆ ಪೂರೈಸಬಲ್ಲರು. ಈ ನಿಟ್ಟಿನಲ್ಲಿ ರಾಜ್ಯಗಳು ಕೃಷಿ-ಹವಾಮಾನ ಪ್ರಾದೇಶಿಕ ಯೋಜನೆಯ ಕಾರ್ಯತಂತ್ರ ರೂಪಿಸಿ, ನಮ್ಮ ರೈತರಿಗೆ ನೆರವಾಗಬೇಕು.

ಸ್ನೇಹಿತರೆ,

ಕಳೆದ ಕೆಲವು ವರ್ಷಗಳಲ್ಲಿ ಕೃಷಿ, ಪಶುಸಂಗೋಪನೆ ಮತ್ತು ಮೀನುಗಾರಿಕೆ ವಲಯದಲ್ಲಿ ಸಮಗ್ರ ಕಾರ್ಯವಿಧಾನವನ್ನು ಅಳವಡಿಸಿಕೊಂಡಿದ್ದೇವೆ. ಇದರ ಫಲವಾಗಿ, ಕೊರೊನಾ ಕಾಲಾವಧಿಯಲ್ಲೂ ದೇಶದ ಕೃಷಿ ರಫ್ತು ಗಣನೀಯವಾಗಿ ಏರಿಕೆ ಕಂಡಿದೆ. ಆದರೆ ನಮ್ಮ ನಿಜವಾದ ತಾಕತ್ತು ಅದಕ್ಕಿಂತ ಹಲವು ಪಟ್ಟು ಜಾಸ್ತಿಯೇ ಇದೆ. ನಮ್ಮ ಕೃಷಿ ಉತ್ಪನ್ನಗಳು ಪೋಲಾಗುವುದನ್ನು ಕಡಿಮೆ ಮಾಡಲು ದಾಸ್ತಾನು ಮತ್ತು ಸಂಸ್ಕರಣೆಯ ಬಗ್ಗೆಯೂ ಕಾಳಜಿ ವಹಿಸಬೇಕಾಗಿದೆ. ಜತೆಗೆ, ಹೂಡಿಕೆ ಆಕರ್ಷಣೆಗೂ ಒತ್ತು ನೀಡಬೇಕಿದೆ. ದಕ್ಷಿಣ ಪೂರ್ವ ಏಷ್ಯಾ ರಾಷ್ಟ್ರಗಳಿಗೆ ಭಾರತವು ತಾಜಾ ಮೀನುಗಳನ್ನು ರಫ್ತು ಮಾಡುತ್ತಿದೆ ಎಂಬುದು ನಮ್ಮೆಲ್ಲರಿಗೂ ಗೊತ್ತಿರುವ ವಿಷಯ. ಆ ರಾಷ್ಟ್ರಗಳಲ್ಲಿ ನಮ್ಮ ಮೀನುಗಳನ್ನು ಸಂಸ್ಕರಿಸಲಾಗುತ್ತದೆ. ಸಂಸ್ಕರಿತ ಮೀನುಗಳನ್ನು ಅವರು ಮಾರಾಟ ಮಾಡಿ, ಅತ್ಯಧಿಕ ಲಾಭ ಗಳಿಸುತ್ತಿದ್ದಾರೆ. ನಾವೇಕೆ ಸಂಸ್ಕರಿತ ಸಾಗರ ಉತ್ಪನ್ನಗಳನ್ನು ಇಲ್ಲಿಂದಲೇ ನೇರವಾಗಿ ಬೃಹತ್ ಪ್ರಮಾಣದಲ್ಲಿ ರಫ್ತು ಮಾಡಬಾರದು. ನಮ್ಮ ಕರಾವಳಿ ರಾಜ್ಯಗಳೇಕೆ ಸ್ವಂತ ಉಪಕ್ರಮಗಳಿಂದ ಜಾಗತಿಕ ಮಾರುಕಟ್ಟೆಗೆ ಸಂಸ್ಕರಿತ ಉತ್ಪನ್ನಗಳನ್ನು ರಫ್ತು ಮಾಡಬಾರದು? ಇಂಥದ್ದೇ ಪರಿಸ್ಥಿತಿ ನಮ್ಮ ದೇಶದ ನಾನಾ ವಲಯಗಳಲ್ಲಿ ಇದೆ. ನಮ್ಮ ರೈತರು ಅಗತ್ಯ ಆರ್ಥಿಕ ಸಂಪನ್ಮೂಲ, ಉತ್ತಮ ಮೂಲಸೌಕರ್ಯ ಮತ್ತು ಆಧುನಿಕ ತಂತ್ರಜ್ಞಾನ ಪಡೆಯುವುದನ್ನು ಖಾತ್ರಿ ಪಡಿಸಬೇಕಾದರೆ, ಸುಧಾರಣೆಗಳನ್ನು ಜಾರಿಗೆ ತರುವುದು ಅತಿ ಮುಖ್ಯ.

ಸ್ನೇಹಿತರೆ,

ಇತ್ತೀಚೆಗೆ ಹಲವಾರು ಸುಧಾರಣೆಗಳನ್ನು ಜಾರಿಗೆ ತಂದಿದ್ದೇವೆ. ಅವು ಸರಕಾರದ ಹಸ್ತಕ್ಷೇಪ ಮತ್ತು ನಿಯಂತ್ರಣಗಳನ್ನು ಕಡಿಮೆ ಮಾಡಿವೆ. ದೇಶದಲ್ಲಿ ಸಾವಿರಾರು ಅನುಸರಣಾ ಅಗತ್ಯಗಳಿರುವುದನ್ನು ನಾನು ಗಮನಿಸಿದ್ದೇನೆ. ಅವು ಸಾಮಾನ್ಯ ಮನುಷ್ಯರಿಗೂ ಅನ್ವಯವಾಗುತ್ತಿವೆ. ಅವುಗಳನ್ನು ತೆಗೆದು ಹಾಕಬೇಕಿದೆ. ಉದಾಹರಣೆಗೆ, ಇತ್ತೀಚೆಗೆ ಅಂತಹ 1,500 ತೀರಾ ಹಳೆಯದಾದ ಕಾಯಿದೆಗಳನ್ನು ರದ್ದು ಮಾಡಿದೆವು. ಇಂತಹ ಕಾಯಿದೆಗಳನ್ನು ತೆಗೆದುಹಾಕಲು ಸಮಿತಿಯೊಂದನ್ನು ರಚಿಸುವಂತೆ ನಾನು ರಾಜ್ಯಗಳಿಗೆ ಮನವಿ ಮಾಡುತ್ತೇನೆ. ನಮ್ಮಲ್ಲಿ ತಂತ್ರಜ್ಞಾನವಿದೆ. ಆದ್ದರಿಂದ ಜನರಿಗೆ ತೊಂದರೆ ನೀಡುತ್ತಿರುವ ಇಂತಹ ಅನುಸರಣಾ ಹೊರೆಗಳನ್ನು ನಾವೆಲ್ಲಾ ಸೇರಿ ತೊಡೆದುಹಾಕೋಣ. ರಾಜ್ಯಗಳು ಇದಕ್ಕೆ ಮುಂದೆ ಬರಬೇಕು. ನಾನು ಭಾರತ ಸರಕಾರ ಮತ್ತು ಸಂಪುಟ ಕಾರ್ಯದರ್ಶಿಗೆ ಈ ಕುರಿತು ಸೂಚನೆ ನೀಡಿದ್ದೇನೆ. ಅನುಸರಣಾ ಅಗತ್ಯಗಳನ್ನು ಕನಿಷ್ಠ ಮಟ್ಟಕ್ಕೆ ತಗ್ಗಿಸಬೇಕು. ಜನರು ಸುಲಭವಾಗಿ ಜೀವನ ನಡೆಸುವುದು ಸಹ ಅತಿ ಮುಖ್ಯ.

ಅಂತೆಯೇ, ನಮ್ಮ ಯುವ ಸಮುದಾಯಕ್ಕೆ ನಾವು ಅವಕಾಶಗಳನ್ನು ನೀಡಬೇಕು. ಆಗ ಅವರು ತಮ್ಮ ಸಾಮರ್ಥ್ಯಗಳನ್ನು ಮೆರೆಯಲು ಸಾಧ್ಯವಾಗಲಿದೆ. ಕೆಲವು ತಿಂಗಳ ಹಿಂದೆ ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿರುವುದನ್ನು ನೀವೆಲ್ಲಾ ನೋಡಿದ್ದೀರಿ. ಅದರೆ ಈ ಬಗ್ಗೆ ವ್ಯಾಪಕ ಚರ್ಚೆಗಳಾಗಲಿಲ್ಲ. ಆದರೆ, ಅದರ ವ್ಯತಿರಿಕ್ತ ಪರಿಣಾಮಗಳು ಬೃಹತ್ತಾಗಿದ್ದವು. ಇತರೆ ಸೇವಾ ಪೂರೈಕೆದಾರರ(Other Service Providers-OSP) ನಿಯಂತ್ರಣ ಕ್ರಮಗಳಿಗೆ ಸುಧಾರಣೆಗಳನ್ನು ತಂದೆವು. ನಮ್ಮ ಯುವಕರು ಎಲ್ಲಿಂದ ಬೇಕಾದರೂ ಕೆಲಸ ಮಾಡಲು ಇದು ಅವಕಾಶ ಕಲ್ಪಿಸಿದೆ. ಇದರಿಂದ ನಮ್ಮ ತಂತ್ರಜ್ಞಾನ ವಲಯಕ್ಕೆ ಸಾಕಷ್ಟು ಪ್ರಯೋಜನ ಲಭಿಸುತ್ತಿದೆ.

ಇತ್ತೀಚೆಗೆ ಐಟಿ ವಲಯದ ಕೆಲವು ಜನರೊಂದಿಗೆ ನಾನು ಮಾತನಾಡಿದೆ. ಅವರಲ್ಲಿ ಬಹಳಷ್ಟು ಮಂದಿ ಹೇಳಿದ ಅಂಶವೇನೆಂದರೆ, ಶೇಕಡ 95ರಷ್ಟು ಉದ್ಯೋಗಿಗಳು ಇದೀಗ ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಅವರಿಂದ ಕೆಲಸವೂ ಚೆನ್ನಾಗಿ ಆಗುತ್ತಿದೆ. ನೀವೇ ನೋಡಿ ಎಂತಹ ಮಹತ್ವದ ಬದಲಾವಣೆ ಇದು. ಇಂತಹ ವಿಷಯಗಳಿಗೆ ನಾವು ಒತ್ತು ನೀಡುವ ಅಗತ್ಯವಿದೆ. ಇನ್ನೂ ಅಸ್ತಿತ್ವದಲ್ಲಿರುವ ಇಂತಹ ಅಪಾರ ನಿಯಂತ್ರಣಗಳನ್ನು ನಾವು ಸುಧಾರಣೆಗಳ ಮೂಲಕ ರದ್ದು ಮಾಡಿದೆವು. ಕೆಲವು ದಿನಗಳ ಹಿಂದೆ ನಾವು ಕೆಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡೆವು. ಭೌಗೋಳಿಕ ದತ್ತಾಂಶ (ಜಿಯೋಸ್ಪೇಷಿಯಲ್ ಡೇಟಾ)ಕ್ಕೆ ಸಂಬಂಧಿಸಿದ ನಿಯಮಗಳನ್ನು ಉದಾರೀಕರಿಸಿದ್ದೇವೆ. ಇದನ್ನು 10 ವರ್ಷಗಳ ಹಿಂದೆಯೇ ಮಾಡಿದ್ದರೆ, ಗೂಗಲ್’ನಂತಹ ಆಪ್’ಗಳು ಭಾರತದಲ್ಲಿ ಅಭಿವೃದ್ಧಿಯಾಗುತ್ತಿದ್ದವು, ಹೊರರಾಷ್ಟ್ರಗಳಲ್ಲಿ ಅಲ್ಲ. ಇಂತಹ ಆ್ಯಪ್’ಗಳ ಹಿಂದೆ ನಮ್ಮ ಜನರ ಪ್ರತಿಭೆ ಅಡಗಿದೆ, ಆದರೆ ಆ ಉತ್ಪನ್ನಗಳು ನಮ್ಮವಲ್ಲ. ಭೌಗೋಳಿಕ ದತ್ತಾಂಶ ನಿಯಮಗಳ ಉದಾರೀಕರಣ ನಿರ್ಧಾರವು ನಮ್ಮ ನವೋದ್ಯಮಗಳು ಮತ್ತು ತಂತ್ರಜ್ಞಾನ ವಲಯಕ್ಕೆ ನೆರವಾಗಿದೆ.

ಸ್ನೇಹಿತರೆ,

ನಾನು ಎರಡು ವಿಷಯಗಳಿಗೆ ಇಲ್ಲಿ ಒತ್ತಾಯಿಸುತ್ತೇನೆ. ನಾವೀಗ ವಿಶ್ವದಲ್ಲಿ ಅದ್ಭುತ ಅವಕಾಶ ಪಡೆದಿದ್ದೇವೆ. ಆ ಅವಕಾಶವನ್ನು ಸಜ್ಜುಗೊಳಿಸಬೇಕಾದರೆ, ನಾವು ಸುಲಭವಾಗಿ ವ್ಯವಹಾರ ನಡೆಸುವ ಕಡೆಗೆ ಗಮನ ಕೇಂದ್ರೀಕರಿಸಬೇಕು. ಭಾರತದ ನಾಗರಿಕರು ಸುಗಮ ಜೀವನ ನಡೆಸುವಂತಾಗಲು ನಮ್ಮ ಪ್ರಯತ್ನಗಳು ಸಾಗಬೇಕು. ಸುಲಭವಾಗಿ ವ್ಯವಹಾರ ನಡೆಸುವ ಪರಿಸರವು ಅವಕಾಶಗಳನ್ನು ಗಳಿಸಲು ಮತ್ತು ಜಾಗತಿಕ ಮಟ್ಟದಲ್ಲಿ ಭಾರತದ ಸ್ಥಾನ ಭದ್ರವಾಗಲು ಅತಿ ಮುಖ್ಯ. ಇದಕ್ಕಾಗಿ ನಾವು ನಮ್ಮ ಕಾಯಿದೆಗಳು ಮತ್ತು ವ್ಯವಸ್ಥೆಯನ್ನು ಉತ್ತಮಗೊಳಿಸಬೇಕು.

ಸ್ನೇಹಿತರೆ,

ನಿಮ್ಮ ಅನುಭವಗಳು ಮತ್ತು ಸಲಹೆಗಳನ್ನು ಆಲಿಸಲು ನಾನಿಂದು ಎದುರು ನೋಡುತ್ತಿದ್ದೇನೆ. ನಾವಿಂದು ಒಂದು ದಿನದ ಮಟ್ಟಿಗೆ ಇಲ್ಲಿ ಅಸೀನರಾಗಲು ಬಂದಿದ್ದೇವೆ. ನಾವೀಗ ಅಲ್ಪ ವಿರಾಮ ಪಡೆದು, ಎಲ್ಲಾ ವಿಷಯಗಳನ್ನು ಚರ್ಚಿಸೋಣ. ಈ ಬಾರಿ ನಿಮ್ಮೆಲ್ಲರಿಂದ ರಚನಾತ್ಮಕ ಮತ್ತು ಸಕಾರಾತ್ಮಕ ಪ್ರಸ್ತಾವನೆಗಳನ್ನು ನಾನು ಖಂಡಿತಾ ಆಲಿಸುತ್ತೇನೆ. ನಿಮ್ಮ ಅತ್ಯಮೂಲ್ಯ ಸಲಹೆಗಳು ದೇಶವನ್ನು ಮುನ್ನಡೆಸಲು ಸಹಾಯಕವಾಗಲಿವೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಒಂದೇ ದಿಕ್ಕಿನಲ್ಲಿ ನಮಗಿರುವ ಎಲ್ಲಾ ಶಕ್ತಿಯನ್ನು ಒಗ್ಗೂಡಿಸೋಣ. ಆ ಮೂಲಕ ವಿಶ್ವದಲ್ಲಿ ಭಾರತಕ್ಕೆ ಸೃಷ್ಟಿಯಾಗಿರುವ ಅವಕಾಶಗಳನ್ನು ಬಿಡದೆ ಸದುಪಯೋಗ ಪಡಿಸಿಕೊಂಡು ಮುಂದೆ ಸಾಗೋಣ. ಈ ನಿರೀಕ್ಷೆಯೊಂದಿಗೆ, ನಾನು ನಿಮ್ಮೆಲ್ಲರನ್ನು ಈ ಮುಖ್ಯ ಸಮಾವೇಶಕ್ಕೆ ಮತ್ತೊಮ್ಮೆ ಸ್ವಾಗತಿಸುತ್ತೇನೆ. ನಿಮ್ಮೆಲ್ಲರ ಸಲಹೆಗಳಿಗಾಗಿ ಕಾಯುತ್ತಿದ್ದೇನೆ.

ಧನ್ಯವಾದಗಳು.

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Waqf Law Has No Place In The Constitution, Says PM Modi

Media Coverage

Waqf Law Has No Place In The Constitution, Says PM Modi
NM on the go

Nm on the go

Always be the first to hear from the PM. Get the App Now!
...
PM to participate in ‘Odisha Parba 2024’ on 24 November
November 24, 2024

Prime Minister Shri Narendra Modi will participate in the ‘Odisha Parba 2024’ programme on 24 November at around 5:30 PM at Jawaharlal Nehru Stadium, New Delhi. He will also address the gathering on the occasion.

Odisha Parba is a flagship event conducted by Odia Samaj, a trust in New Delhi. Through it, they have been engaged in providing valuable support towards preservation and promotion of Odia heritage. Continuing with the tradition, this year Odisha Parba is being organised from 22nd to 24th November. It will showcase the rich heritage of Odisha displaying colourful cultural forms and will exhibit the vibrant social, cultural and political ethos of the State. A National Seminar or Conclave led by prominent experts and distinguished professionals across various domains will also be conducted.