ಪ್ರಧಾನ ಮಂತ್ರಿ: ಸ್ನೇಹಿತರೇ, ಸ್ವಾಗತ! ನೀವು ದೇಶವನ್ನು ಉತ್ಸಾಹ ಮತ್ತು ಸಂಭ್ರಮದಿಂದ ಬೀಗುವಂತೆ ಮಾಡಿರುವುದನ್ನು ನೋಡಲು ನಮಗೆ ತುಂಬಾ ಸಂತೋಷವಾಗುತ್ತದೆ. ನೀವು ನಮ್ಮ ಎಲ್ಲಾ ದೇಶವಾಸಿಗಳ ಭರವಸೆ ಮತ್ತು ಆಶಯಗಳನ್ನು ಗೆದ್ದಿದ್ದೀರಿ. ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳು! ಸಾಮಾನ್ಯವಾಗಿ, ನಾನು ಕಚೇರಿಯಲ್ಲಿ ತಡರಾತ್ರಿಯವರೆಗೆ ಕೆಲಸ ಮಾಡುತ್ತೇನೆ, ಆದರೆ ಈ ಬಾರಿ ಟಿವಿ ಆನ್ ಆಗಿತ್ತು ಮತ್ತು ನಾನು ಕಡತಗಳ ಮೇಲೆ ಗಮನಹರಿಸಲು ಸಾಧ್ಯವಾಗಲಿಲ್ಲ. ನೀವು ಅದ್ಭುತವಾದ ತಂಡ ಮನೋಭಾವ, ಪ್ರತಿಭೆ ಮತ್ತು ತಾಳ್ಮೆಯನ್ನು ಪ್ರದರ್ಶಿಸಿದ್ದೀರಿ. ನಿಮ್ಮ ತಾಳ್ಮೆಯನ್ನು ನಾನು ನೋಡಿದೆ; ಯಾವುದೇ ಆತುರ ಇರಲಿಲ್ಲ. ನಿಮ್ಮಲ್ಲಿ ಅಪಾರವಾದ ಆತ್ಮವಿಶ್ವಾಸ ತುಂಬಿತ್ತು. ಹಾಗಾಗಿ ಮತ್ತೊಮ್ಮೆ ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳು.

ರಾಹುಲ್ ದ್ರಾವಿಡ್: ಮೊದಲನೆಯದಾಗಿ, ನಿಮ್ಮನ್ನು ಭೇಟಿ ಮಾಡಲು ನಮಗೆ ಅವಕಾಶ ನೀಡಿದಕ್ಕಾಗಿ ನಾನು ನಿಮಗೆ ಧನ್ಯವಾದ ಹೇಳಲು ಬಯಸುತ್ತೇನೆ. ನವೆಂಬರ್‌ ನಲ್ಲಿ ಅಹಮದಾಬಾದ್‌ನಲ್ಲಿ ನಾವು ಆ ಪಂದ್ಯದಲ್ಲಿ ಸೋತಾಗ, ಆ ಕಷ್ಟದ ಸಮಯದಲ್ಲಿಯೂ ನೀವು ನಮಗೆ ಬೆಂಬಲ ನೀಡಿದಿರಿ. ಈ ಸಂತೋಷದ ಸಂದರ್ಭದಲ್ಲಿ ಇಂದು ನಿಮ್ಮನ್ನು ಭೇಟಿ ಮಾಡಲು ನಮಗೆ ಸಂತೋಷವಾಗುತ್ತಿದೆ. ರೋಹಿತ್ ಮತ್ತು ಎಲ್ಲಾ ಹುಡುಗರು ಅನೇಕ ಪಂದ್ಯಗಳಲ್ಲಿ ಪ್ರಚಂಡ ಹೋರಾಟದ ಮನೋಭಾವವನ್ನು ಮತ್ತು ಎಂದಿಗೂ ಸೋಲದ ಮನೋಭಾವವನ್ನು ತೋರಿಸಿದ್ದಾರೆ. ಫೈನಲ್‌ ಗೆ ತಲುಪಿದ್ದು ಅವರ ಕಠಿಣ ಪರಿಶ್ರಮ ಮತ್ತು ಸ್ಥಿತಿಸ್ಥಾಪಕತ್ವಕ್ಕೆ ಸಾಕ್ಷಿಯಾಗಿದೆ. ಈ ಹುಡುಗರು ಯುವ ಪೀಳಿಗೆಯನ್ನು ಪ್ರೇರೇಪಿಸಿರುವುದನ್ನು ನೋಡುವುದು ಸಂತೋಷವಾಗಿದೆ. ಅವರು 2011 ರ ವಿಜಯವನ್ನು ನೋಡುತ್ತಾ ಬೆಳೆದಿದ್ದಾರೆ ಮತ್ತು ಅವರ ಪ್ರದರ್ಶನವು ನಮ್ಮ ದೇಶದ ಎಲ್ಲಾ ಕ್ರೀಡೆಗಳಲ್ಲಿ ಅನೇಕ ಯುವಕ-ಯುವತಿಯರನ್ನು ಪ್ರೇರೇಪಿಸಿದೆ ಎಂದು ನನಗೆ ವಿಶ್ವಾಸವಿದೆ. ಆದ್ದರಿಂದ, ನಾನು ನಿಮಗೆ ಧನ್ಯವಾದ ಹೇಳಲು ಬಯಸುತ್ತೇನೆ ಮತ್ತು ಈ ಹುಡುಗರಿಗೆ ನನ್ನ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಪ್ರಧಾನ ಮಂತ್ರಿ: ನಿಮ್ಮೆಲ್ಲರಿಗೂ ಅಭಿನಂದನೆಗಳು. ಮುಂಬರುವ ದಿನಗಳಲ್ಲಿ ನೀವು ನಮ್ಮ ದೇಶದ ಯುವಜನತೆಗೆ ಸಾಕಷ್ಟು ಕೊಡುಗೆಗಳನ್ನು ನೀಡಬೇಕಾಗಿದೆ. ನೀವು ಅವರಿಗೆ ವಿಜಯವನ್ನು ನೀಡಿದ್ದೀರಿ, ಆದರೆ ನೀವು ಅವರಿಗೆ ಅನೇಕ ರೀತಿಯಲ್ಲಿ ಸ್ಫೂರ್ತಿ ಮತ್ತು ಮಾರ್ಗದರ್ಶನವನ್ನು ನೀಡಬಹುದು. ನೀವು ಈಗ ಒಂದು ನಿರ್ದಿಷ್ಟ ಪಾಂಡಿತ್ಯವನ್ನು ಹೊಂದಿದ್ದೀರಿ. ಚಹಾಲ್ ಏಕೆ ತುಂಬಾ ಗಂಭೀರವಾಗಿದ್ದಾರೆ? ನಾನು ಹೇಳಿದ್ದು ಸರಿಯಿದೆಯೇ? ಹರಿಯಾಣದ ಯಾರಾದರೂ ಪ್ರತಿ ಸನ್ನಿವೇಶದಲ್ಲೂ ಮತ್ತು ಎಲ್ಲದರಲ್ಲೂ ಸಂತೋಷ ಪಡುತ್ತಾರೆ.

ರೋಹಿತ್, ನಾನು ಈ ಕ್ಷಣದಲ್ಲಿ ನಿಮ್ಮ ಆಲೋಚನೆಗಳನ್ನು ಕೇಳಲು ಬಯಸುತ್ತೇನೆ. ಮೈದಾನ ಯಾವುದಾದರೂ ಆಗಿರಲಿ, ನೆಲ ಬೇರೆ ಬೇರೆ ರಾಷ್ಟ್ರದ್ದಾಗಿರಬಹುದು, ಆದರೆ ಕ್ರಿಕೆಟ್‌ ನ ಸಾರ ಇರುವುದು ಪಿಚ್‌ ನಲ್ಲಿ. ನೀವು ಕ್ರಿಕೆಟ್‌ ನ ಸಾರವನ್ನು ಚುಂಬಿಸಿದ್ದೀರಿ, ಒಬ್ಬ ಭಾರತೀಯ ಮಾತ್ರ ಇದನ್ನು ಮಾಡಬಲ್ಲ.

ರೋಹಿತ್ ಶರ್ಮಾ: ನಾನು ಆ ವಿಜಯದ ಕ್ಷಣವನ್ನು ಶಾಶ್ವತವಾಗಿ ನೆನಪಿಸಿಕೊಳ್ಳಬೇಕಾಗಿತ್ತು ಮತ್ತು ಅದನ್ನು (ಮಣ್ಣನ್ನು) ಸವಿಯಬೇಕಾಗಿತ್ತು ಅಷ್ಟೇ. ಏಕೆಂದರೆ ನಾವು ಆ ಪಿಚ್‌ ನಲ್ಲಿ ಆಡಿದ್ದೇವೆ ಮತ್ತು ಗೆದ್ದಿದ್ದೇವೆ, ಏಕೆಂದರೆ ನಾವು ಅದಕ್ಕಾಗಿ ಬಹಳ ಸಮಯದಿಂದ ಕಾಯುತ್ತಿದ್ದೆವು ಮತ್ತು ಅದಕ್ಕಾಗಿ ಶ್ರಮಿಸಿದ್ದೇವೆ. ಅನೇಕ ಬಾರಿ, ವಿಶ್ವಕಪ್ ಹತ್ತಿರ ಬಂದಿತ್ತು, ಆದರೆ ಅದನ್ನು ಕೈವಶ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ, ಈ ಬಾರಿ ಎಲ್ಲರ ಪ್ರಯತ್ನದಿಂದ ನಾವು ಅದನ್ನು ಸಾಧಿಸಿದ್ದೇವೆ. ಆ ಪಿಚ್ ನನಗೆ ಬಹಳ ಮಹತ್ವದ್ದಾಗಿತ್ತು. ಏಕೆಂದರೆ ನಾವು ನಮ್ಮ ಕನಸುಗಳನ್ನು ಅಲ್ಲಿಯೇ ಸಾಧಿಸಿದ್ದೇವೆ. ಅದು ಆ ಕ್ಷಣದಲ್ಲಿ ಸ್ವಯಂಪ್ರೇರಿತವಾಗಿ ನಡೆಯಿತು. ಇಡೀ ತಂಡವು ಅದಕ್ಕಾಗಿ ತುಂಬಾ ಶ್ರಮಪಟ್ಟಿತು ಮತ್ತು ಆ ಕಠಿಣ ಪರಿಶ್ರಮವು ಅಂತಿಮವಾಗಿ ಫಲ ನೀಡಿತು.

ಪ್ರಧಾನ ಮಂತ್ರಿ: ದೇಶದ ಪ್ರತಿಯೊಬ್ಬ ಪ್ರಜೆಯೂ ಇದನ್ನು ಗಮನಿಸಿರಬೇಕು, ಆದರೆ ರೋಹಿತ್, ನಾನು ಎರಡು ತೀವ್ರತೆಗಳನ್ನು ಗಮನಿಸಿದೆ. ನಿಮ್ಮಲ್ಲಿ ಉಕ್ಕುತ್ತಿದ್ದ ಭಾವನೆಗಳು ಮತ್ತು ಟ್ರೋಫಿಯನ್ನು ಪಡೆಯಲು ಹೋದಾಗ ನೀವು ನೃತ್ಯ ಮಾಡಿದ ರೀತಿಯನ್ನು ನಾನು ನೋಡಿದೆ.

ರೋಹಿತ್ ಶರ್ಮಾ: ಸರ್, ಅದರ ಹಿಂದಿನ ಕಾರಣವೆಂದರೆ ಅದು ನಮಗೆಲ್ಲರಿಗೂ ಅದು ಅತ್ಯಂತ ಮಹತ್ವದ ಕ್ಷಣವಾಗಿತ್ತು. ಅನೇಕ ವರ್ಷಗಳಿಂದ ನಾವೆಲ್ಲರೂ ಅದಕ್ಕಾಗಿ ಕಾಯುತ್ತಿದ್ದೆವು. ಹುಡುಗರು ಸುಮ್ಮನೆ ನಡೆದು ಹೋಗಬೇಡ, ಬೇರೆ ಏನಾದರೂ ಮಾಡು ಎಂದು ಹೇಳಿದರು.

ಪ್ರಧಾನ ಮಂತ್ರಿ: ಹಾಗಾದರೆ ಇದು ಚಹಾಲ್‌ ಅವರ ಕಲ್ಪನೆಯೇ?

ರೋಹಿತ್ ಶರ್ಮಾ: ಚಾಹಲ್ ಮತ್ತು ಕುಲದೀಪ್...

ಪ್ರಧಾನ ಮಂತ್ರಿ: ಸರಿ! ನಿಮ್ಮ ಚೇತರಿಕೆಯ ಪ್ರಯಾಣವು ಕಷ್ಟಕರವಾಗಿದೆ. ಒಬ್ಬ ಆಟಗಾರನಾಗಿ, ಅದು ನಿಮ್ಮ ಆಸ್ತಿ (ಆತ್ಮ ವಿಶ್ವಾಸ) ಆಗಿರಬಹುದು, ಅದು ನಿಮಗೆ ಮುಂದುವರಿಯಲು ಸಹಾಯ ಮಾಡಿದೆ.  ಆದರೆ ಅಂತಹ ಸಮಯದಲ್ಲಿ ಚೇತರಿಸಿಕೊಳ್ಳುವುದು ಸವಾಲಿನ ಸಂಗತಿಯಾಗಿತ್ತು. ನೀವು ಅನೇಕ ಸಾಮಾಜಿಕ ಮಾಧ್ಯಮ ಪೋಸ್ಟ್‌ ಗಳನ್ನು ಮಾಡಿದ್ದೀರಿ ಎಂದು ನನಗೆ ನೆನಪಿದೆ; ನನ್ನ ಸಹೋದ್ಯೋಗಿಗಳು ಅವುಗಳ ಬಗ್ಗೆ ನನಗೆ ಹೇಳುತ್ತಿದ್ದರು-ನೀವು ಪ್ರತಿದಿನ ಎಷ್ಟು ಚೇತರಿಸಿಕೊಂಡಿರಿ.

ರಿಷಬ್ ಪಂತ್: ಮೊದಲಿಗೆ, ನಮ್ಮನ್ನು ಇಲ್ಲಿಗೆ ಆಹ್ವಾನಿಸಿದ್ದಕ್ಕಾಗಿ ಧನ್ಯವಾದಗಳು. ಸರ್, ನಾನು ಒಂದೂವರೆ ವರ್ಷಗಳ ಹಿಂದೆ ಅಪಘಾತಕ್ಕೆ ಒಳಗಾಗಿದ್ದೆ ಮತ್ತು ನಾನು ಕಠಿಣ ಸಮಯವನ್ನು ಎದುರಿಸಿದೆ. ನಿಮ್ಮ ಕರೆಯನ್ನು ನನ್ನ ತಾಯಿ ಸ್ವೀಕರಿಸಿದ್ದು ನನಗೆ ಚೆನ್ನಾಗಿ ನೆನಪಿದೆ. ನನ್ನ ಮನಸ್ಸಿನಲ್ಲಿ ಬಹಳಷ್ಟು ಸಂಗತಿಗಳು ನಡೆಯುತ್ತಿದ್ದವು, ಆದರೆ ನೀವು ಕರೆ ಮಾಡಿದಾಗ, ಎಲ್ಲವೂ ಸರಿಹೋಗುವುದಾಗಿ ತಾವು ಹೇಳಿದ್ದಾಗಿ ನನ್ನ ತಾಯಿ ನನಗೆ ಹೇಳಿದರು, ಅದು ನನಗೆ ಮಾನಸಿಕವಾಗಿ ನಿರಾಳವಾಗಲು ಸಹಾಯ ಮಾಡಿತು.  ನಾನು ಚೇತರಿಸಿಕೊಳ್ಳುವ ಸಮಯದಲ್ಲಿ, ನನಗೆ ಮತ್ತೆ ಕ್ರಿಕೆಟ್ ಆಡಲು ಅವಕಾಶ ಸಿಗುತ್ತದೆಯೇ ಎಂದು ಜನರು ಹೇಳುತ್ತಿದ್ದರು. "ಅವನು ಬ್ಯಾಟ್ಸ್‌ಮನ್ ಆದ್ದರಿಂದ ಇನ್ನೂ ಬ್ಯಾಟಿಂಗ್ ಮಾಡಬಹುದು, ಆದರೆ ಅವನು ವಿಕೆಟ್ ಕೀಪಿಂಗ್ ಮಾಡಲು ಸಾಧ್ಯವಾಗುತ್ತದೆಯೇ?" ಎಂದು ಹೇಳುತ್ತಿದ್ದರು. ಕಳೆದ ಒಂದೂವರೆ ಎರಡು ವರ್ಷಗಳಿಂದ, ನಾನು ಮೈದಾನಕ್ಕೆ ಮರಳಲು ಮತ್ತು ಮೊದಲಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸಲು ನಿರ್ಧರಿಸಿದೆ. ಅದು ಬೇರೆಯವರಿಗೆ ಸಾಬೀತುಪಡಿಸಲು ಅಲ್ಲ, ನನಗಾಗಿ ಮಾತ್ರ. ನಾನು ಮತ್ತೊಮ್ಮೆ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲು ಮತ್ತು ಭಾರತಕ್ಕೆ ವಿಜಯಗಳನ್ನು ತಂದುಕೊಡಲು ನನ್ನನ್ನು ಅರ್ಪಿಸಿಕೊಳ್ಳಬೇಕಾಗಿತ್ತು.

ಪ್ರಧಾನ ಮಂತ್ರಿ: ರಿಷಬ್, ನೀವು ಚೇತರಿಸಿಕೊಳ್ಳುತ್ತಿರುವಾಗ, ನಾನು ನಿಮ್ಮ ತಾಯಿಯೊಂದಿಗೆ ಮಾತನಾಡಿ ಎರಡು ವಿಷಯಗಳನ್ನು ಹೇಳಿದೆ. ಮೊದಲಿಗೆ ನಾನು ವೈದ್ಯರೊಂದಿಗೆ ಸಮಾಲೋಚಿಸಿ ವಿದೇಶದಲ್ಲಿ ಚಿಕಿತ್ಸೆ ಪಡೆಯಬೇಕಾದರೆ ನನಗೆ ತಿಳಿಸಲು ಕೇಳಿದ್ದೆ. ಅವರು ಅದನ್ನು ಪರಿಗಣಿಸುವುದಾಗಿ ನನಗೆ ಭರವಸೆ ನೀಡಿದರು. ಆದರೆ ನನಗೆ ನಿಜವಾಗಿಯೂ ಆಶ್ಚರ್ಯವಾದದ್ದು ನಿಮ್ಮ ತಾಯಿಯ ದೃಢವಾದ ನಂಬಿಕೆ. ನಾನು ಅವರನ್ನು ಎಂದಿಗೂ ಭೇಟಿಯಾಗದಿದ್ದರೂ, ನಮ್ಮ ಮಾತುಕತೆಯ ಸಮಯದಲ್ಲಿ ಅವರು ಭರವಸೆಯ ಭಾವವನ್ನು ತಿಳಿಸಿದರು. ಇದು ಗಮನಾರ್ಹವಾಗಿತ್ತು. ಅಂತಹ ಬೆಂಬಲ ನೀಡುವ ತಾಯಿ ಇರುವಾಗ ನೀವು ಎಂದಿಗೂ ವಿಫಲರಾಗುವುದಿಲ್ಲ ಎಂದು ನಾನು ಭಾವಿಸಿದೆ. ಈ ಆಲೋಚನೆ ನನ್ನ ಮನಸ್ಸಿಗೆ ಬಂದಿತು ಮತ್ತು ನೀವು ಅದನ್ನು ಸರಿ ಎಂದು ಸಾಬೀತುಪಡಿಸಿದ್ದೀರಿ. ನಿಮ್ಮೊಂದಿಗೆ ಮಾತನಾಡುವಾಗ ನಾನು ಗಮನಿಸಿದ ಅತ್ಯಂತ ಗಮನಾರ್ಹವಾದ ವಿಷಯವೆಂದರೆ ನೀವು ಬೇರೆಯವರ ಮೇಲೆ ಆರೋಪ ಹೊರಿಸದಿರುವುದು; ಇದು ನನ್ನದೇ ತಪ್ಪು ಎಂದು ನೀವು ಹೇಳಿದ್ದೀರಿ. ಈ ಮಟ್ಟದ ಹೊಣೆಗಾರಿಕೆಯು ಅಸಾಧಾರಣವಾದುದು, ಏಕೆಂದರೆ ಅನೇಕರು ಹಾಗಲ್ಲ ಹೀಗಲ್ಲ ಎಂದು ಹೇಳಿ ನುಣುಚಿಕೊಳ್ಳುತ್ತಾರೆ. ನಿಮ್ಮ ಮುಕ್ತ ಮನಸ್ಸು  ಶ್ಲಾಘನೀಯವಾದುದು ಮತ್ತು ಅಂತಹ ವಿವರಗಳನ್ನು ಗಮನಿಸುವುದರಿಂದ ನಾನು ಕಲಿಯುತ್ತೇನೆ; ಸ್ನೇಹಿತರೇ, ಎಲ್ಲರಿಂದಲೂ ಕಲಿಯಲು ಪ್ರಯತ್ನಿಸುತ್ತೇನೆ. ನಿಮ್ಮ ತಾಳ್ಮೆ ಮತ್ತು ಸ್ಥಿತಿಸ್ಥಾಪಕತ್ವವು ಅಸಾಧಾರಣವಾಗಿದೆ, ಇದು ದೈವಿಕ ಸಂಪರ್ಕವನ್ನು ಪ್ರತಿಬಿಂಬಿಸುತ್ತದೆ. ಇದು ಸಾಮಾನ್ಯವಾಗಿ ರಾಷ್ಟ್ರಕ್ಕೆ ಮತ್ತು ನಿರ್ದಿಷ್ಟವಾಗಿ ಆಟಗಾರರಿಗೆ ನಿಜವಾಗಿಯೂ ಸ್ಫೂರ್ತಿದಾಯಕವಾಗಿದೆ. ಹೆಬ್ಬೆರಳ ಮೇಲೆ ಗಂಟೆಗಟ್ಟಲೆ ನಿಲ್ಲುವ ವಿಕೆಟ್ ಕೀಪಿಂಗ್ ತರಬೇತಿ ಎಷ್ಟು ಕಠಿಣ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ಆದರೆ ನೀವು ಆ ಸವಾಲನ್ನು ಅದ್ಭುತವಾಗಿ ಜಯಿಸಿದ್ದೀರಿ. ನಿಮಗೆ ಅಭಿನಂದನೆಗಳು.

ರಿಷಬ್ ಪಂತ್: ಧನ್ಯವಾದಗಳು ಸರ್.

ಪ್ರಧಾನ ಮಂತ್ರಿ: ಏರಿಳಿತಗಳಿರುತ್ತವೆ, ಆದರೆ ದೀರ್ಘಕಾಲದ ಪರಿಶ್ರಮವು ಸೂಕ್ತ ಸಮಯದಲ್ಲಿ ಫಲ ನೀಡುತ್ತದೆ. ಕ್ರಿಕೆಟ್‌ಗೆ ನಿಮ್ಮ ಸಮರ್ಪಣೆ ಫಲ ನೀಡಿದೆ. ವಿರಾಟ್, ಈ ಬಾರಿ ನಿಮ್ಮ ಪ್ರಯಾಣ ಏರಿಳಿತಗಳಿಂದ ಕೂಡಿತ್ತು ಅಲ್ಲವೇ?

ವಿರಾಟ್ ಕೊಹ್ಲಿ: ಮೊದಲನೆಯದಾಗಿ, ನಮ್ಮನ್ನು ಇಲ್ಲಿಗೆ ಆಹ್ವಾನಿಸಿದ್ದಕ್ಕಾಗಿ ತುಂಬಾ ಧನ್ಯವಾದಗಳು. ಈ ದಿನ ನನ್ನ ನೆನಪಿನಲ್ಲಿ ಸದಾ ಉಳಿಯುತ್ತದೆ. ಪಂದ್ಯಾವಳಿಯುದ್ದಕ್ಕೂ, ನಾನು ಬಯಸಿದಷ್ಟು ಕೊಡುಗೆ ನೀಡಲು ಸಾಧ್ಯವಾಗಲಿಲ್ಲ ಮತ್ತು ಒಂದು ಹಂತದಲ್ಲಿ, ನಾನು ನನಗೆ ಅಥವಾ ತಂಡಕ್ಕೆ ನ್ಯಾಯವನ್ನು ನೀಡುತ್ತಿಲ್ಲ ಎಂದು ಅನಿಸುತ್ತಿದೆ ಎಂದು ರಾಹುಲ್ ಭಾಯ್‌ ಗೆ ಹೇಳಿದೆ. ಪರಿಸ್ಥಿತಿ ಬಂದಾಗ ನೀನು ಪ್ರದರ್ಶನ ನೀಡುವೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು. ಇದು ನಮ್ಮ ಸಂಭಾಷಣೆಯಾಗಿತ್ತು. ನಾವು ಮೈದಾನಕ್ಕೆ ಹೋದಾಗ, ಪಂದ್ಯಾವಳಿಯಲ್ಲಿನ ನನ್ನ ಪ್ರದರ್ಶನದಿಂದಾಗಿ ನನಗೆ ಆತ್ಮವಿಶ್ವಾಸದ ಕೊರತೆಯಿದೆ ಮತ್ತು ನಾನು ನನ್ನ ನಿರೀಕ್ಷೆಗೆ ತಕ್ಕಂತೆ ಆಡಲು ಸಾಧ್ಯವಾಗುತ್ತದೆ ಎಂದು ನನಗೆ ಖಚಿತವಿಲ್ಲ ಎಂದು ನಾನು ರೋಹಿತ್‌ ಗೆ ಹೇಳಿದೆ. ಆದಾಗ್ಯೂ, ಮೊದಲ ನಾಲ್ಕು ಎಸೆತಗಳಲ್ಲಿ ಮೂರು ಬೌಂಡರಿಗಳನ್ನು ಹೊಡೆದ ನಂತರ, ನನ್ನಲ್ಲಿ ಆತ್ಮವಿಶ್ವಾಸ ಬಂತು. ನಾನು ಅವನಿಗೆ ಹೇಳಿದೆ, "ಇದು ಎಂತಹ ಆಟ; ಒಂದು ದಿನ ನೀವು ಒಂದೇ ಒಂದು ರನ್ ಗಳಿಸಲು ಸಾಧ್ಯವಿಲ್ಲ ಮತ್ತು ಮರುದಿನ, ಎಲ್ಲವೂ ಕ್ಲಿಕ್ ಆಗುತ್ತದೆ." ವಿಶೇಷವಾಗಿ ನಮ್ಮ ವಿಕೆಟ್‌ ಗಳು ಬೀಳಲು ಪ್ರಾರಂಭಿಸಿದಾಗ, ನಾನು ಪರಿಸ್ಥಿತಿಗೆ ಸಂಪೂರ್ಣವಾಗಿ ಶರಣಾಗಬೇಕೆಂದು ಅರಿತುಕೊಂಡೆ; ಆ ಕ್ಷಣದಲ್ಲಿ ತಂಡಕ್ಕೆ ಯಾವುದು ಮುಖ್ಯವೋ ಅದರ ಮೇಲೆ ಮಾತ್ರ ಗಮನ ಹರಿಸಬೇಕಿತ್ತು. ನಾನು ಪರಿಸ್ಥಿತಿಯಲ್ಲಿ ಸಂಪೂರ್ಣವಾಗಿ ಮುಳುಗಿದ್ದೆ. ನಾನು ಆ ಕ್ಷಣದಲ್ಲಿದ್ದೆ. ಮತ್ತು ನಂತರ, ಏನಾಗಬೇಕೋ ಅದು ಸಂಭವಿಸುತ್ತದೆ ಎಂದು ನಾನು ಅರ್ಥಮಾಡಿಕೊಂಡಿದ್ದೆ. ಎನು ಆಗಬೇಕೋ ಅದು ಆಗುತ್ತದೆ ಎಂದು ಭಾವಿಸಿದ್ದೆ, ಅದೇ ಆಯಿತು. ನಾವು ಫೈನಲ್‌ ನಲ್ಲಿ ಗೆದ್ದ ಪರಿಸ್ಥಿತಿಯಿಂದ, ನಾವು ಪ್ರತಿಯೊಂದು ಎಸೆತವನ್ನು ಕೊನೆಯವರೆಗೂ ಗೆದ್ದೆವು. ಫೈನಲ್ ಪಂದ್ಯ ತಿರುವುಮುರುವಾದಾಗಿನಿಂದ. ಏನು ನಡೆಯುತ್ತಿದೆ, ಅದನ್ನು ನಾವು ವಿವರಿಸಲು ಸಾಧ್ಯವಿರಲಿಲ್ಲ. ಒಂದು ಹಂತದಲ್ಲಿ, ನಾವು ಭರವಸೆ ಕಳೆದುಕೊಂಡಿದ್ದೆವು, ಆದರೆ ನಂತರ ಹಾರ್ದಿಕ್ ಒಂದು ವಿಕೆಟ್ ಪಡೆದರು ಮತ್ತು ನಮ್ಮ ಶಕ್ತಿಯು ಮತ್ತೆ ಒಂದೊಂದು ಚೆಂಡಿಗೂ ಹೆಚ್ಚಿತು. ಸವಾಲಿನ ಸಮಯದ ನಂತರ ತಂಡಕ್ಕೆ ಇಂತಹ ಮಹತ್ವದ ದಿನದಂದು ಕೊಡುಗೆ ನೀಡಲು ನನಗೆ ಸಂತೋಷವಾಗಿದೆ. ಇಡೀ ದಿನ ಮತ್ತು ನಾವು ಗೆದ್ದ ದಾರಿ ಅವಿಸ್ಮರಣೀಯವಾಗಿ ಉಳಿಯುತ್ತದೆ. ನಾವು ಗೆಲುವಿಗಾಗಿ ಶ್ರಮಿಸುವ ಸ್ಥಾನವನ್ನು ತಲುಪಲು ನಾನು ತಂಡಕ್ಕೆ ಸಹಾಯ ಮಾಡದೆನೆಂದು ನನಗೆ ಸಂತೋಷವಾಗಿದೆ.

ಪ್ರಧಾನ ಮಂತ್ರಿ: ಎಲ್ಲರೂ ನಿಮ್ಮ ಒಟ್ಟು ರನ್‌ ಗಳ ಮೊತ್ತವು 75 ರಲ್ಲಿ ಸಿಲುಕಿಕೊಂಡಿತು ಎಂದು ಅಂದುಕೊಂಡಿದ್ದರು ವಿರಾಟ್, ಮತ್ತು ನಂತರ ಅದು ಇದ್ದಕ್ಕಿದ್ದಂತೆ 76 ಕ್ಕೆ ಸರಿಯಿತು. ಈ ಸಂಗತಿಗಳು ಕೆಲವೊಮ್ಮೆ ಸಂಭವಿಸುತ್ತವೆ. ನೀವು ಅದನ್ನು ಮಾಡುತ್ತೀರಿ ಎಂದು ಎಲ್ಲರಿಗೂ ವಿಶ್ವಾಸವಿದೆ ಮತ್ತು ಆ ನಂಬಿಕೆಯು ಪ್ರೇರಕ ಶಕ್ತಿಯಾಗುತ್ತದೆ. ಆದರೆ ನೀವು 75 ರಲ್ಲಿ ಸಿಲುಕಿದ್ದಾಗ ನಿಮ್ಮ ಕುಟುಂಬದ ತಕ್ಷಣದ ಪ್ರತಿಕ್ರಿಯೆ ಏನಿತ್ತು?

ವಿರಾಟ್ ಕೊಹ್ಲಿ: ಚೆನ್ನಾಗಿತ್ತು ಸರ್, ಸಮಯದ ವ್ಯತ್ಯಾಸ ಹೆಚ್ಚಿದ್ದರಿಂದ ನಾನು ನನ್ನ ಕುಟುಂಬದೊಂದಿಗೆ ಹೆಚ್ಚು ಮಾತನಾಡಲಿಲ್ಲ. ನನ್ನ ತಾಯಿ ತುಂಬಾ ಚಿಂತೆ ಮಾಡುತ್ತಾರೆ. ಆದರೆ ಮುಖ್ಯ ವಿಷಯವೆಂದರೆ ನನ್ನ ಪ್ರಯತ್ನಗಳ ಹೊರತಾಗಿಯೂ ಯಾವೂದೂ ಫಲ ನೀಡಲಿಲ್ಲ. ನೀವು ಕಷ್ಟಪಟ್ಟು ಪ್ರಯತ್ನಿಸಿದಾಗ ಮತ್ತು ನೀವು ಯಶಸ್ವಿಯಾಗುತ್ತೀರಿ ಎಂದು ಭಾವಿಸಿದಾಗ, ಕೆಲವೊಮ್ಮೆ ನಿಮ್ಮ ಅಹಂಕಾರ ಅಡ್ಡಿಯಾಗುತ್ತದೆ ಮತ್ತು ಆಟವು ನಿಮ್ಮಿಂದ ದೂರವಾಗುತ್ತದೆ. ನಾನು ಅದನ್ನು ಬಿಟ್ಟು ತಂಡದತ್ತ ಗಮನ ಹರಿಸಬೇಕಿತ್ತು. ಆಟದ ಪರಿಸ್ಥಿತಿಯಲ್ಲಿ ನನ್ನ ಅಹಂಕಾರಕ್ಕೆ ಜಾಗವೇ ಇಲ್ಲದಂತಾಗಿತ್ತು. ಒಮ್ಮೆ ನಾನು ಆಟವನ್ನು ಗೌರವಿಸಿದರೆ, ಆ ದಿನ ಅದು ನನ್ನನ್ನು ಗೌರವಿಸಿತು. ಅದು ನನ್ನ ಅನುಭವ ಸರ್.

ಪ್ರಧಾನ ಮಂತ್ರಿ: ನಿಮಗೆ ತುಂಬು ಅಭಿನಂದನೆಗಳು.

ಪ್ರಧಾನ ಮಂತ್ರಿ: ಪಾಜಿ...

ಜಸ್ಪ್ರೀತ್ ಬುಮ್ರಾ: ಇಲ್ಲ ಸರ್, ನಾನು ಭಾರತಕ್ಕೆ ಬೌಲಿಂಗ್ ಮಾಡಿದಾಗ, ಅದು ಹೊಸ ಚೆಂಡು ಅಥವಾ ನಿರ್ಣಾಯಕ ಹಂತಗಳಲ್ಲಿ ಬೌಲ್‌ ಮಾಡುತ್ತೇನೆ.

ಪ್ರಧಾನ ಮಂತ್ರಿ: ನೀವು ಇಡ್ಲಿ ತಿಂದು ಮೈದಾನಕ್ಕೆ ಹೋಗುತ್ತೀರಾ? (ನಗು)

ಜಸ್ಪ್ರೀತ್ ಬುಮ್ರಾ: ಇಲ್ಲ, ಇಲ್ಲ, ಸರ್. ಪರಿಸ್ಥಿತಿ ಕಠಿಣವಾದಾಗಲೆಲ್ಲಾ, ನನ್ನನ್ನು ಬೌಲ್ ಮಾಡಲು ಕರೆಯಲಾಗುತ್ತದೆ ಮತ್ತು ಕಠಿಣ ಓವರ್‌ ಗಳನ್ನು ದಾಟಲು ತಂಡಕ್ಕೆ ಸಹಾಯ ಮಾಡಲು ಸಾಧ್ಯವಾದಾಗ ನನಗೆ ಸಂತೋಷವಾಗುತ್ತದೆ. ಇದು ನನಗೆ ಸಾಕಷ್ಟು ಆತ್ಮವಿಶ್ವಾಸವನ್ನು ನೀಡುತ್ತದೆ, ನನ್ನ ಓವರ್‌ ಗಳಲ್ಲಿ ನಾನು ಆ ವಿಶ್ವಾಸವನ್ನು ಹೊಂದಿದ್ದೇನೆ. ಈ ಪಂದ್ಯಾವಳಿಯಲ್ಲಿ, ನಾನು ಕಠಿಣ ಓವರ್‌ ಗಳನ್ನು ಬೌಲ್ ಮಾಡಬೇಕಾದ ಸಾಕಷ್ಟು ಸನ್ನಿವೇಶಗಳಿದ್ದವು ಮತ್ತು ನಾನು ತಂಡಕ್ಕೆ ಸಹಾಯ ಮಾಡಲು ಮತ್ತು ಪಂದ್ಯಗಳನ್ನು ಗೆಲ್ಲಲು ಸಾಧ್ಯವಾಯಿತು.

ಪ್ರಧಾನ ಮಂತ್ರಿ: ನಾನು ಗಮನಿಸಿದ ಪ್ರಕಾರ, ಬ್ಯಾಟ್ಸ್‌ಮನ್ 90 ರನ್ ತಲುಪಿದ ನಂತರ, ಗೆಲುವಿನ ಚಿತ್ತ ಏನೇ ಇರಲಿ, ಅವರು ಗಮನಾರ್ಹವಾಗಿ ಹೆಚ್ಚು ಗಂಭೀರವಾಗಿರುತ್ತಾರೆ. ಅದೇ ರೀತಿ, ಕೊನೆಯ ಓವರ್‌‌ ನಲ್ಲಿ, ಫಲಿತಾಂಶವು ಒಂದೇ ಚೆಂಡಿನ ಮೇಲೆ ನಿಂತಾಗ, ಅಪಾರ ಒತ್ತಡವಿರುತ್ತದೆ. ಅಂತಹ ಸಂದರ್ಭದಲ್ಲಿ ನೀವು ನಿಮ್ಮನ್ನು ಹೇಗೆ ನಿಭಾಯಿಸುತ್ತೀರಿ?

ಜಸ್ಪ್ರೀತ್ ಬುಮ್ರಾ: ನಾನು 'ನಾವು ಸೋತರೆ ಏನು' ಎಂದು ಯೋಚಿಸಲು ಪ್ರಾರಂಭಿಸಿದರೆ? ಅಥವಾ ನಾನು ಅಸಾಮಾನ್ಯವಾದುದನ್ನು ಮಾಡಲು ಪ್ರಯತ್ನಿಸಿದರೆ, ನಾನು ಭಯಪಡುತ್ತೇನೆ ಮತ್ತು ತಪ್ಪುಗಳನ್ನು ಮಾಡುವ ಸಾಧ್ಯತೆಯಿರುತ್ತದೆ. ನಾನು ಪ್ರೇಕ್ಷಕರು ಅಥವಾ ಇತರ ಜನರ ಮೇಲೆ ಕೇಂದ್ರೀಕರಿಸಿದರೆ, ಆಗ ನಾನು ತಪ್ಪು ಮಾಡಬಹುದು. ಆದ್ದರಿಂದ, ಆ ಕ್ಷಣಗಳಲ್ಲಿ, ನಾನು ನನ್ನ ಗಮನವನ್ನು ನನ್ನ ಮೇಲೆ ಮತ್ತು ನಾನು ಏನು ಮಾಡಬಹುದು ಎಂಬುದರ ಮೇಲೆ ಮಾತ್ರ ಕೇಂದ್ರೀಕರಿಸುತ್ತೇನೆ. ನಾನು ಉತ್ತಮ ಪ್ರದರ್ಶನ ನೀಡಿದ ಮತ್ತು ತಂಡಕ್ಕೆ ಸಹಾಯ ಮಾಡಿದ ಹಿಂದಿನ ನಿದರ್ಶನಗಳನ್ನು ನಾನು ನೆನಪಿಸಿಕೊಳ್ಳುತ್ತೇನೆ. ನಾನು ಆ ಅನುಭವಗಳನ್ನು ನೆನಪಿಟ್ಟುಕೊಳ್ಳಲು ಪ್ರಯತ್ನಿಸುತ್ತೇನೆ ಮತ್ತು ಅತ್ಯುತ್ತಮವಾದದ್ದನ್ನು ನೀಡಲು ಪ್ರಯತ್ನಿಸುತ್ತೇನೆ.

ಪ್ರಧಾನ ಮಂತ್ರಿ: ಆದರೆ ಇದು ತುಂಬಾ ಒತ್ತಡದಿಂದ ಕೂಡಿರುತ್ತದೆ ಗೆಳೆಯ. ಪರಾಠವಿಲ್ಲ ದಿನವು ಅಪೂರ್ಣವೆನಿಸುತ್ತದೆ!

ಜಸ್ಪ್ರೀತ್ ಬುಮ್ರಾ: ಇಲ್ಲ ಸರ್, ವೆಸ್ಟ್ ಇಂಡೀಸ್‌ ನಲ್ಲಿ ನಮಗೆ ಇಡ್ಲಿ ಅಥವಾ ಪರಾಠ ಸಿಗಲಿಲ್ಲ. ನಾವು ಸಿಕ್ಕಿದ್ದರಲ್ಲಿಯೇ ನಿಭಾಯಿಸಿದೆವು. ಆದರೂ ಸನ್ನಿವೇಶ ಚೆನ್ನಾಗಿತ್ತು. ನಾವು ಪದೇ ಪದೇ ಪ್ರಯಾಣಿಸುತ್ತಿದ್ದೆವು ಮತ್ತು ತಂಡವಾಗಿ, ಪಂದ್ಯಾವಳಿಯು ತುಂಬಾ ಚೆನ್ನಾಗಿ ನಡೆಯಿತು. ನಾವು ಮೊದಲ ಬಾರಿಗೆ ವಿಶ್ವಕಪ್ ಗೆದ್ದಿದ್ದೇವೆ ಮತ್ತು ನಾನು ಹಿಂದೆಂದೂ ಅಂತಹ ಭಾವನೆಗಳನ್ನು ಅನುಭವಿಸಿರಲಿಲ್ಲ. ನಾನು ತುಂಬಾ ಹೆಮ್ಮೆಪಡುತ್ತೇನೆ ಮತ್ತು ಇದಕ್ಕಿಂತ ಉತ್ತಮವಾದದ್ದನ್ನು ಎಂದಿಗೂ ಅನುಭವಿಸಿರಲಿಲ್ಲ.

ಪ್ರಧಾನ ಮಂತ್ರಿ: ನೀವು ಉತ್ತಮ ಕೆಲಸ ಮಾಡಿದ್ದೀರಿ. ರಾಷ್ಟ್ರವು ನಿಮ್ಮ ಬಗ್ಗೆ ಹೆಮ್ಮೆಪಡುತ್ತದೆ. ಇದು ನಮಗೆ ಹೆಮ್ಮೆ ತರುತ್ತದೆ.

ಪ್ರಧಾನ ಮಂತ್ರಿ: ಹಾಂ, ಹಾರ್ದಿಕ್, ಹೇಳಿ.

ಹಾರ್ದಿಕ್ ಪಾಂಡ್ಯ: ಮೊದಲನೆಯದಾಗಿ, ಸರ್, ನಮ್ಮನ್ನು ಆಹ್ವಾನಿಸಿದ್ದಕ್ಕಾಗಿ ಧನ್ಯವಾದಗಳು. ಸಂದರ್ಶನದಲ್ಲಿ ನಾನು ಹೇಳಿದಂತೆ, ಕಳೆದ ಆರು ತಿಂಗಳುಗಳು ನನಗೆ ಸಂಬಂಧಿಸಿದಂತೆ ಸಾಕಷ್ಟು ಘಟನೆಗಳು ನಡೆದಿವೆ, ಅನೇಕ ಏರಿಳಿತಗಳು ಬಂದಿವೆ. ನಾನು ಮೈದಾನಕ್ಕೆ ಹೋದಾಗ, ಸಾರ್ವಜನಿಕರು ಕೆಲವೊಮ್ಮೆ ಬೊಬ್ಬೆ ಹಾಕಿದರು ಮತ್ತು ಇನ್ನೂ ಅನೇಕ ಸಂಗತಿಗಳು ನಡೆದವು. ನಾನು ಯಾವಾಗಲೂ ಮಾತುಗಳ ಮೂಲಕ ಅಲ್ಲ, ನನ್ನ ಆಟದ ಮೂಲಕ ಪ್ರತಿಕ್ರಿಯಿಸಬೇಕು ಎಂದು ನಂಬಿದ್ದೇನೆ. ಆಗ ಮೂಕನಾಗಿದ್ದ ನಾನು ಈಗಲೂ ಮೂಕನಾಗಿದ್ದೇನೆ. ನಾನು ಯಾವಾಗಲೂ ಹೋರಾಟದಲ್ಲಿ ನಂಬಿಕೆ ಇಟ್ಟಿದ್ದೇನೆ, ಎಂದಿಗೂ ಮೈದಾನದಿಂದ ಓಡುವವನಲ್ಲ. ಏಕೆಂದರೆ ಜೀವನವು ತೊಂದರೆಗಳು ಮತ್ತು ಯಶಸ್ಸು ಎರಡನ್ನೂ ತೋರಿಸುತ್ತದೆ. ನಾನು ಉಳಿಯುತ್ತೇನೆ, ಕಷ್ಟಪಟ್ಟು ಕೆಲಸ ಮಾಡುತ್ತೇನೆ ಮತ್ತು ತಂಡ, ಆಟಗಾರರು, ನಾಯಕ ಮತ್ತು ತರಬೇತುದಾರರ ಬೆಂಬಲದೊಂದಿಗೆ ನಾನು ಚೆನ್ನಾಗಿ ಸಿದ್ಧಗೊಂಡಿದ್ದೇನೆ ಎಂದು ನನಗೆ ನಂಬಿಕೆಯಿತ್ತು, ಸರ್. ದೇವರು ನನಗೆ ಕೊನೆಯ ಓವರ್‌ ನಲ್ಲಿ ಅವಕಾಶ ನೀಡಿ ಆಶೀರ್ವದಿಸಿದನು.

ಪ್ರಧಾನ ಮಂತ್ರಿ: ನಿಮ್ಮ ಆ ಓವರ್ ಐತಿಹಾಸಿಕವಾಗಿತ್ತು, ಆದರೆ ನೀವು ಸೂರ್ಯನಿಗೆ ಏನು ಹೇಳಿದಿರಿ?

ಹಾರ್ದಿಕ್ ಪಾಂಡ್ಯ: ಸೂರ್ಯ ಕ್ಯಾಚ್ ಹಿಡಿದಾಗ, ನಮ್ಮ ಮೊದಲ ಪ್ರತಿಕ್ರಿಯೆ ಸಂಭ್ರಮವಾಗಿತ್ತು. ನಂತರ ಸೂರ್ಯನ ಕ್ಯಾಚ್‌ ಸರಿಯಾಗಿದೆಯಾ ಎಂದು ಪರಿಶೀಲಿಸಬೇಕು ಎಂದು ನಾವು ಅರಿತುಕೊಂಡೆವು. ಅದು ಸರಿಯಾಗಿತ್ತು ಎಂದು ಖಚಿತಪಡಿಸಿಕೊಂಡೆವು ಮತ್ತು ಮತ್ತೊಮ್ಮೆ ಸಂಭ್ರಮ ಆಚರಿಸಿದೆವು. ಆತ ಆಟವನ್ನು ಬದಲಾಯಿಸುವ ಕ್ಯಾಚ್ ಹಿಡಿದಿದ್ದರು ಮತ್ತು ನಮ್ಮ ಒತ್ತಡವು ಸಂತೋಷಕ್ಕೆ ತಿರುಗಿತು.

ಪ್ರಧಾನ ಮಂತ್ರಿ: ಹೇಳಿ, ಸೂರ್ಯ?

ಸೂರ್ಯಕುಮಾರ್ ಯಾದವ್: ನಾನು ಕಳೆದುಹೋಗಿದ್ದೆ ಸಾರ್! ಆ ಕ್ಷಣದಲ್ಲಿ ನಾನು ಚೆಂಡನ್ನು ಹಿಡಿಯುವತ್ತ ಮಾತ್ರ ಗಮನ ಹರಿಸಿದ್ದೆ. ನಾನು ಅದನ್ನು ಹಿಡಿಯುತ್ತೇನೆಯೇ ಅಥವಾ ಬಿಡುತ್ತೇನೆಯೇ ಎಂಬ ಬಗ್ಗೆ ಯೋಚಿಸಲಿಲ್ಲ, ರನ್‌ ಉಳಿಸಲು ಯೋಚಿಸಿದ್ದೆ. ಗಾಳಿ ಬೀಸುತ್ತಿತ್ತು, ಒಮ್ಮೆ ಅದು ನನ್ನ ಕೈಗೆ ಬಂದಿತು, ನಾನು ಅದನ್ನು ಎಸೆದೆ. ಆದರೆ ರೋಹಿತ್ ದೂರದಲ್ಲಿದ್ದುದನ್ನು ನಾನು ನೋಡಿದೆ. ಹಾಗಾಗಿ ನಾನು ಅದನ್ನು ಮತ್ತೆ ಹಿಡಿದೆ. ನಾವು ಈ ಸನ್ನಿವೇಶಗಳನ್ನು ಸಾಕಷ್ಟು ಅಭ್ಯಾಸ ಮಾಡಿದ್ದೇವೆ. ನಾನು ಯಾವಾಗಲೂ ಬ್ಯಾಟಿಂಗ್‌ ಮಾಡುತ್ತೇನೆ. ಆದರೆ ಓವರ್‌ ಗಳು ಮುಗಿದ ನಂತರ ನಾನು ಬೇರೆ ಹೇಗೆ ಕೊಡುಗೆ ನೀಡಬಲ್ಲೆ? ಹಾಗಾಗಿ ಫೀಲ್ಡಿಂಗ್‌ ನಲ್ಲೂ ತಂಡಕ್ಕೆ ಕೊಡುಗೆ ನೀಡಬೇಕು ಎಂದು ಅನಿಸಿತು.

ಪ್ರಧಾನ ಮಂತ್ರಿ: ನೀವು ಈ ರೀತಿ ಚೆಂಡನ್ನು ಹಿಡಿಯುವುದನ್ನು ಅಭ್ಯಾಸ ಮಾಡುತ್ತೀರಾ?

ರಾಹುಲ್ ದ್ರಾವಿಡ್: ಸೂರ್ಯ ಅಭ್ಯಾಸದ ಸಮಯದಲ್ಲಿ ಅಂತಹ 185, 160 ಕ್ಯಾಚ್‌ ಗಳನ್ನು ತೆಗೆದುಕೊಂಡಿದ್ದಾರೆ.

ಪ್ರಧಾನ ಮಂತ್ರಿ: ಹೌದಾ?

ಸೂರ್ಯಕುಮಾರ್ ಯಾದವ್: ಹೌದು ಸರ್. ಟೂರ್ನಮೆಂಟ್ ಆರಂಭವಾದಾಗಿನಿಂದ ಮತ್ತು ಐಪಿಎಲ್‌ನಿಂದ ಮರಳಿದ ನಂತರ, ನಾನು ಅಂತಹ ಅನೇಕ ಕ್ಯಾಚ್‌ ಗಳನ್ನು ಅಭ್ಯಾಸ ಮಾಡಿದ್ದೇನೆ. ನಿರ್ಣಾಯಕ ಕ್ಷಣದಲ್ಲಿ ಅಂತಹ ಒಂದು ಕ್ಯಾಚ್‌ ಹಿಡಿಯುವ ಅವಕಾಶವನ್ನು ದೇವರು ನನಗೆ ನೀಡುತ್ತಾನೆ ಎಂದು ನನಗೆ ತಿಳಿದಿರಲಿಲ್ಲ. ಆದರೆ ನನ್ನ ಅಭ್ಯಾಸದ ಸಮಯದಲ್ಲಿ ನಾನು ಮೊದಲು ಈ ಪರಿಸ್ಥಿತಿಯನ್ನು ಎದುರಿಸಿದ್ದರಿಂದ ನಾನು ಶಾಂತವಾಗಿದ್ದೆ. ಆದರೆ, ಈ ಬಾರಿ ಸ್ಟ್ಯಾಂಡ್‌ ನಲ್ಲಿ ಹೆಚ್ಚು ಜನ ಸೇರಿದ್ದರು. ಆ ಕ್ಷಣದಲ್ಲಿ ಬಹಳ ದೊಡ್ಡ ಭಾವನೆ ಅನುಭವಿಸಿದೆ.

ಪ್ರಧಾನಮಂತ್ರಿ: ನಾನು ನಿಮ್ಮನ್ನು ಅಭಿನಂದಿಸಲೇಬೇಕು... ಇಡೀ ದೇಶವೇ ಏರಿಳಿತಗಳಿಂದ ಉದ್ವಿಗ್ನವಾಗಿತ್ತು, ತದನಂತರ ಹಠಾತ್ ಘಟನೆಗಳು! ಪರಿಸ್ಥಿತಿ ಸಂಪೂರ್ಣವಾಗಿ ಬದಲಾಯಿತು. ಇದು ಗಮನಾರ್ಹವಾದುದು ಮತ್ತು ಇದು ನಿಮ್ಮ ಜೀವನದ ಭಾಗವಾಗಿದೆ, ನೀವು ನಿಜವಾಗಿಯೂ ತುಂಬಾ ಅದೃಷ್ಟವಂತರು, ಗೆಳೆಯಾ.

ಸೂರ್ಯಕುಮಾರ್ ಯಾದವ್: ನಾನು ಮತ್ತೊಂದು ಸ್ಟಾರ್ ಅನ್ನು ಗಳಿಸಿದೆ ಎಂದು ನನಗೆ ಅನಿಸುತ್ತಿದೆ ಸರ್. ಈಗ ನನಗೆ ಅತೀವ ಸಂತೋಷವಾಗಿದೆ.

ಪ್ರಧಾನ ಮಂತ್ರಿ: ನಿಮಗೆ ತುಂಬು ಅಭಿನಂದನೆಗಳು!

ಸೂರ್ಯಕುಮಾರ್ ಯಾದವ್: ಧನ್ಯವಾದಗಳು ಸರ್!

ಪ್ರಧಾನ ಮಂತ್ರಿ: ನಿಮ್ಮ ತಂದೆಯ ಹೇಳಿಕೆ ದೇಶಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಯಿತು. ಅವರ ಉತ್ತರ ತುಂಬ ಮನಮುಟ್ಟುವಂತಿತ್ತು. ಮೊದಲು ದೇಶ, ಆಮೇಲೆ ನನ್ನ ಮಗ ಎಂದರು. ಇದು ನಿಜವಾಗಿಯೂ ಗಮನಾರ್ಹವಾದುದು! ಹಾಂ, ಅರ್ಷದೀಪ್, ದಯವಿಟ್ಟು ನಿಮ್ಮ ಆಲೋಚನೆಗಳನ್ನು ಹಂಚಿಕೊಳ್ಳಿ.

ಅರ್ಷದೀಪ್ ಸಿಂಗ್: ಸರ್, ನಿಮ್ಮನ್ನು ಭೇಟಿ ಮಾಡಲು ನನಗೆ ಅವಕಾಶ ನೀಡಿದಕ್ಕಾಗಿ ಧನ್ಯವಾದಗಳು. ಆ ಪಂದ್ಯದ ಬಗ್ಗೆ ನನಗೆ ಖುಷಿಯಾಗುತ್ತಿದೆ! ನಾವು ಈ ಟೂರ್ನಿಯನ್ನು ಗೆದ್ದಿರುವುದಕ್ಕೆ ನನಗೆ ತುಂಬಾ ಹೆಮ್ಮೆ ಎನಿಸುತ್ತಿದೆ. ನಾನು ಮೊದಲೇ ಹೇಳಿದಂತೆ, ಜಸ್ಸಿ ಭಾಯ್ ಜೊತೆಗೆ ಬೌಲಿಂಗ್ ಮಾಡುವುದು ಉತ್ತಮವಾಗಿತ್ತು. ಅವರು ಬ್ಯಾಟ್ಸ್‌ಮನ್‌ ಮೇಲೆ ಹೆಚ್ಚಿನ ಒತ್ತಡವನ್ನು ಹಾಕುತ್ತಾರೆ ಮತ್ತು ಆದ್ದರಿಂದ ಬ್ಯಾಟ್ಸ್‌ಮನ್‌ ಆಗಾಗ್ಗೆ ನನ್ನ ವಿರುದ್ಧ ಅಪಾಯಗಳನ್ನು ತೆಗೆದುಕೊಳ್ಳಲು ಪ್ರಯತ್ನಿಸುತ್ತಾರೆ, ಇದು ನನಗೆ ವಿಕೆಟ್‌ ಪಡೆಯಲು ಅನುವು ಮಾಡಿಕೊಡುತ್ತದೆ. ಇತರ ಬೌಲರ್‌ ಗಳು ಕೂಡ ಅಸಾಧಾರಣ ಪ್ರದರ್ಶನ ನೀಡಿದ್ದಾರೆ, ಹಾಗಾಗಿ ನಾನು ವಿಕೆಟ್‌ ಪಡೆಯುತ್ತಿದ್ದಂತೆ ನಾನು ಅದನ್ನು ಆನಂದಿಸುತ್ತಿದ್ದೆ. ಹಾಗಾಗಿ ಇಡೀ ತಂಡಕ್ಕೆ ಅದರ ಶ್ರೇಯ ಸಲ್ಲುತ್ತದೆ ಎಂದು ನಾನು ಭಾವಿಸುತ್ತೇನೆ.

ಪ್ರಧಾನ ಮಂತ್ರಿ: ಅಕ್ಷರ್ ಶಾಲೆಯಲ್ಲಿ ಆಡುತ್ತಿದ್ದಾಗ ಅವರಿಗೆ ಬಹುಮಾನ ಕೊಡುವ ಅವಕಾಶ ನನಗೆ ಸಿಕ್ಕಿತ್ತು.

ಅಕ್ಷರ್ ಪಟೇಲ್: ಅದು 8ನೇ ತರಗತಿಯಲ್ಲಿ, ಸರ್.‌

ಪ್ರಧಾನ ಮಂತ್ರಿ: ನನಗೆ ಕ್ರೀಡಾ ಪ್ರಪಂಚದೊಂದಿಗೆ ಯಾವುದೇ ವೈಯಕ್ತಿಕ ಸಂಬಂಧವಿಲ್ಲ, ಆದರೆ ಕ್ರೀಡೆಯಲ್ಲಿ ಯಾವುದೇ ಮಹತ್ವದ ಘಟನೆ ನಡೆದಾಗ, ನಾನು ಅದರಲ್ಲಿ ತೊಡಗಿಸಿಕೊಳ್ಳುತ್ತೇನೆ.

ಅಕ್ಷರ್ ಪಟೇಲ್: ಆ ಕ್ಯಾಚ್ ನಿರ್ಣಾಯಕವಾಗಿತ್ತು, ಏಕೆಂದರೆ ಅವರ ಪಾರ್ಟನರ್‌ ಶಿಪ್ ಬಲವಾಗಿತ್ತು. ಮೊದಲ ಓವರ್‌‌ ನಲ್ಲಿ ಒಂದು ವಿಕೆಟ್ ಬಿದ್ದಿತು, ಆದರೆ ನಂತರ ಯಾವುದೂ ಬರಲಿಲ್ಲ.  ಕುಲದೀಪ್ ಬೌಲಿಂಗ್ ಮಾಡುವಾಗ ನಾನು ನಿಂತಿದ್ದ ದಿಕ್ಕಿಗೆ ಗಾಳಿ ಬೀಸುತ್ತಿತ್ತು. ಇದು ಸುಲಭವಾದ ಕ್ಯಾಚ್ ಎಂದು ನಾನು ಭಾವಿಸಿದೆ, ಆದರೆ ಚೆಂಡು ಗಾಳಿಯೊಂದಿಗೆ ವೇಗವಾಗಿ ಚಲಿಸಲು ಪ್ರಾರಂಭಿಸಿತು. ಆರಂಭದಲ್ಲಿ, ನಾನು ಅದನ್ನು ನನ್ನ ಎಡಗೈಯಿಂದ ಹಿಡಿಯಲು ಯೋಜಿಸಿದೆ, ಆದರೆ ಅದು ನನ್ನ ಬಲಗೈ ಕಡೆಗೆ ಹೋಗುತ್ತಿದೆ ಎಂದು ನಾನು ಅರಿತುಕೊಂಡೆ. ನಾನು ಜಿಗಿದೆ ಮತ್ತು ನನ್ನ ಕೈಯಲ್ಲಿ ಚೆಂಡಿದೆ ಎನ್ನಿಸಿತು, ನಾನು ಅದನ್ನು ಹಿಡಿದಿದ್ದೇನೆ ಎಂದು ಗೊತ್ತಾಯಿತು. ಬಹುತೇಕ ಸಂದರ್ಭಗಳಲ್ಲಿ, ಅಂತಹ ಕ್ಯಾಚ್‌ ಗಳು ಮಿಸ್ ಆಗುತ್ತವೆ, ಆದರೆ ವಿಶ್ವಕಪ್‌ ನ ಆ ನಿರ್ಣಾಯಕ ಕ್ಷಣದಲ್ಲಿ, ತಂಡಕ್ಕೆ ಅಗತ್ಯವಿರುವಾಗ ಅಂತಹ ಕ್ಯಾಚ್‌ ಹಿಡಿದ ಅದೃಷ್ಟ ನನ್ನದಾಗಿತ್ತು.

ಪ್ರಧಾನ ಮಂತ್ರಿ: ಹಾಗಾದರೆ, ಅಮುಲ್ ಹಾಲು ಕೆಲಸ ಮಾಡುತ್ತಿದೆಯೆಂದು, ತೋರುತ್ತಿದೆ? (ನಗು)

ಕುಲದೀಪ್ ಯಾದವ್: ತುಂಬಾ ಧನ್ಯವಾದಗಳು ಸರ್.

ಪ್ರಧಾನ ಮಂತ್ರಿ: ನಾವು ನಿಮ್ಮನ್ನು ಕುಲದೀಪ್ ಎಂದು ಕರೆಯಬೇಕೇ? ಅಥವಾ ದೇಶದೀಪ್ ಎಂದು ಕರೆಯಬೇಕೇ?

ಕುಲದೀಪ್ ಯಾದವ್: ಸರ್, ನಾನು ನನ್ನ ದೇಶದಿಂದ ಮೊದಲ ಮತ್ತು ಅಗ್ರಗಣ್ಯ ವ್ಯಕ್ತಿ ಯಾಗಿದ್ದೇನೆ, ಆದ್ದರಿಂದ ಖಂಡಿತವಾಗಿ, ನಾನು ಭಾರತಕ್ಕಾಗಿ ಎಲ್ಲಾ ಪಂದ್ಯಗಳನ್ನು ಆಡುವುದನ್ನು ಆನಂದಿಸುತ್ತೇನೆ. ಇದು ನನಗೆ ತುಂಬಾ ಹೆಮ್ಮೆ ತರುತ್ತದೆ. ತಂಡದಲ್ಲಿ ನನ್ನ ಪಾತ್ರ ಆಕ್ರಮಣಕಾರಿ ಸ್ಪಿನ್ನರ್ ಆಗಿರುತ್ತದೆ. ನಾನು ಯಾವಾಗಲೂ ಮಧ್ಯಮ ಓವರ್‌ ಗಳಲ್ಲಿ ಬೌಲ್ ಮಾಡುತ್ತೇನೆ ಮತ್ತು ಆ ಅವಧಿಯಲ್ಲಿ ನಾನು ವಿಕೆಟ್‌ ಗಳನ್ನು ಪಡೆಯುವುದು ಯಾವಾಗಲೂ ನಾಯಕ ಮತ್ತು ಕೋಚ್‌ ಯೋಜನೆಯಾಗಿರುತ್ತದೆ. ವೇಗದ ಬೌಲರ್‌ ಗಳು ಒಂದು ಅಥವಾ ಎರಡು ವಿಕೆಟ್‌ ಗಳನ್ನು ಪಡೆಯುವ ಮೂಲಕ ನಮಗೆ ಉತ್ತಮ ಆರಂಭವನ್ನು ನೀಡುತ್ತಾರೆ, ಮಧ್ಯಮ ಓವರ್‌ ಗಳಲ್ಲಿ ಬೌಲಿಂಗ್ ಮಾಡಲು ಸ್ವಲ್ಪ ಸುಲಭವಾಗುತ್ತದೆ. ಮೂರು ವಿಶ್ವಕಪ್‌ ಗಳಲ್ಲಿ ಆಡಿದ್ದು ಉತ್ತಮ ಅವಕಾಶ, ಟ್ರೋಫಿ ಎತ್ತಿ ಹಿಡಿದಿದ್ದಕ್ಕೆ ತುಂಬಾ ಖುಷಿಯಾಗುತ್ತಿದೆ ಸರ್.

ಪ್ರಧಾನ ಮಂತ್ರಿ: ಹಾಗಾದರೆ, ಕುಲದೀಪ್, ಕ್ಯಾಪ್ಟನ್ ಡ್ಯಾನ್ಸ್ ಮಾಡುವಂತೆ ಮಾಡಲು ನಿಮಗೆಷ್ಟು ಧೈರ್ಯ?

ಕುಲದೀಪ್ ಯಾದವ್: ನಾನು ಕ್ಯಾಪ್ಟನ್ ಡ್ಯಾನ್ಸ್  ಮಾಡುವಂತೆ ಮಾಡಿಲ್ಲ!

ಪ್ರಧಾನ ಮಂತ್ರಿ: (ನಗು)

ಕುಲದೀಪ್ ಯಾದವ್: ನಾವು ಏನಾದರೂ (ಸಂಭ್ರಮಾಚರಣೆ) ಮಾಡಬೇಕೆಂದು ರೋಹಿತ್ ಹೇಳಿದಾಗ, ನಾನು ಸಲಹೆ ನೀಡಿದೆ, ಆದರೆ ನಾನು ಹೇಳಿದ ರೀತಿಯಲ್ಲಿ ಅವರು ಅದನ್ನು ಮಾಡಲಿಲ್ಲ.

ಪ್ರಧಾನ ಮಂತ್ರಿ: ಹಾಗಾದರೆ, ಅದರ ಬಗ್ಗೆ ದೂರು ಇದೆಯೇ?

ಪ್ರಧಾನ ಮಂತ್ರಿ: 2007ರಲ್ಲಿ ಅತ್ಯಂತ ಕಿರಿಯ ಆಟಗಾರ ಮತ್ತು ಈಗ 2024ರಲ್ಲಿ ವಿಜಯಿ ತಂಡದ ನಾಯಕ... ನಿಮ್ಮ ಅನುಭವ ಹೇಗಿತ್ತು?

ರೋಹಿತ್ ಶರ್ಮಾ: ಸರ್, ನಿಜ ಹೇಳಬೇಕೆಂದರೆ, ನಾನು ಮೊದಲು 2007 ರಲ್ಲಿ ತಂಡವನ್ನು ಸೇರಿಕೊಂಡಾಗ, ನಾವು ರಾಹುಲ್ ಭಾಯ್ ನಾಯಕರಾಗಿದ್ದ ತಂಡದಲ್ಲಿ ಐರ್ಲೆಂಡ್ ಪ್ರವಾಸ ಮಾಡಿದ್ದೆವು. ಅದರ ನಂತರ, ನಾವು ವಿಶ್ವಕಪ್‌ ಗಾಗಿ ನೇರವಾಗಿ ದಕ್ಷಿಣ ಆಫ್ರಿಕಾಕ್ಕೆ ಹೋದೆವು. ಅಲ್ಲಿ ವಿಶ್ವಕಪ್ ಗೆದ್ದೆವು. ನಾವು ಭಾರತಕ್ಕೆ ಹಿಂತಿರುಗಿದಾಗ, ಮುಂಬೈನವರೆಲ್ಲರೂ ರಸ್ತೆಗಳಲ್ಲಿ ಸಂಭ್ರಮಪಡುತ್ತಿದ್ದ ಕಾರಣ ವಿಮಾನ ನಿಲ್ದಾಣದಿಂದ ವಾಂಖೆಡೆ ಸ್ಟೇಡಿಯಂ ತಲುಪಲು ನಮಗೆ ಐದು ಗಂಟೆಗಳು ಬೇಕಾಯಿತು. ಆಗ ವಿಶ್ವಕಪ್ ಗೆಲ್ಲುವುದು ಸುಲಭ ಎಂದುಕೊಂಡಿದ್ದೆ. ವರ್ಷಗಳಲ್ಲಿ, ನಾವು ಆಗಾಗ್ಗೆ ಹತ್ತಿರ ಬರುತ್ತಿದ್ದೆವು, ಆದರೆ ವಿಶ್ವಕಪ್ ಗೆಲ್ಲಲು ಸಾಧ್ಯವಾಗಲಿಲ್ಲ. ಈ ವಿಶ್ವಕಪ್‌ ಗಾಗಿ, ತಂಡದ ಆಟಗಾರರಲ್ಲಿ ಸಾಕಷ್ಟು ಹತಾಶೆ ಮತ್ತು ಹಸಿವು ಇತ್ತು ಎಂದು ನಾನು ಆತ್ಮವಿಶ್ವಾಸದಿಂದ ಹೇಳಬಲ್ಲೆ. ನಾವು ವೆಸ್ಟ್ ಇಂಡೀಸ್‌ ಗೆ ಹೋದಾಗ, ಅನೇಕ ಸವಾಲುಗಳು ಇದ್ದವು, ವಿಶೇಷವಾಗಿ ನ್ಯೂಯಾರ್ಕ್‌ ನಲ್ಲಿ ಮೊದಲ ಬಾರಿಗೆ ಕ್ರಿಕೆಟ್ ಆಡುತ್ತಿದ್ದರಿಂದ ಮತ್ತು ಅಲ್ಲಿ ಅಭ್ಯಾಸದ ಮೈದಾನಗಳು ಉತ್ತಮವಾಗಿರಲಿಲ್ಲ. ಆದರೆ ಯಾವ ಹುಡುಗರೂ ಆ ಕಡೆ ಗಮನಹರಿಸಲಿಲ್ಲ; ಅವರು ಬಾರ್ಬಡೋಸ್‌ ನಲ್ಲಿ ಫೈನಲ್ ಅನ್ನು ಹೇಗೆ ಆಡಬೇಕು ಎಂಬುದರ ಮೇಲೆ ಮಾತ್ರ ಗಮನಹರಿಸಿದ್ದರು. 'ಗೆಲ್ಲುವುದು ಹೇಗೆ?' ಎಂಬ ಒಗ್ಗಟ್ಟಿನ ಗುರಿಯೊಂದಿಗೆ ತಂಡವನ್ನು ಮುನ್ನಡೆಸುವುದು ಅದ್ಭುತವಾಗಿತ್ತು. ಭಾರತದ ಧ್ವಜವನ್ನು ಹಿಡಿದುಕೊಂಡು ತಡರಾತ್ರಿಯವರೆಗೂ ರಸ್ತೆಗಳಲ್ಲಿ ಸಂಚರಿಸುವ ಜನರ ಮುಖದಲ್ಲಿ ನಗುವನ್ನು ನೋಡಿದಾಗ ಅಪಾರ ಆನಂದವಾಗುತ್ತದೆ. ರಾಹುಲ್ ಭಾಯ್, ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಮತ್ತು ಲಕ್ಷ್ಮಣ್ ನಮಗೆ ಸ್ಫೂರ್ತಿ ನೀಡಿದಂತೆಯೇ ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುವುದು ನಮ್ಮ ಗುರಿಯಾಗಿದೆ. ಆ ಸ್ಫೂರ್ತಿಯನ್ನು ರವಾನಿಸುವ ಜವಾಬ್ದಾರಿ ನಮ್ಮ ಮೇಲಿದೆ ಮತ್ತು ಈ ವಿಶ್ವಕಪ್ ಗೆಲುವಿನೊಂದಿಗೆ, ಮುಂಬರುವ ಪೀಳಿಗೆಯು ಆ ಉತ್ಸಾಹವನ್ನು ಹೊಂದಿರುತ್ತದೆ ಎಂದು ನನಗೆ ಖಾತ್ರಿಯಿದೆ.

ಪ್ರಧಾನ ಮಂತ್ರಿ: ರೋಹಿತ್, ನೀವು ಯಾವಾಗಲೂ ತುಂಬಾ ಗಂಭೀರವಾಗಿರುತ್ತೀರಾ?

ರೋಹಿತ್ ಶರ್ಮಾ: ಸರ್, ನಿಜವಾಗಿ, ನಮ್ಮ ಹುಡುಗರು ಮಾತ್ರ ಅದರ ಬಗ್ಗೆ ನಿಮಗೆ ಹೇಳಬಹುದು.

ಪ್ರಧಾನ ಮಂತ್ರಿ: ಎಲ್ಲಾ ಪಂದ್ಯಗಳನ್ನು ಗೆದ್ದಿದ್ದಕ್ಕಾಗಿ ಅಭಿನಂದನೆಗಳು! ಈ ಬಾರಿ, ಭಾಗವಹಿಸಿದ ತಂಡಗಳೂ ಹೆಚ್ಚಿದ್ದವು, ಅನೇಕ ಹೊಸ ದೇಶಗಳು ಸೇರಿಕೊಂಡಿವೆ. ಕ್ರಿಕೆಟ್‌ ನಲ್ಲಿ, ಆಡುವವರಿಗೆ ತಮ್ಮ ಸಾಧನೆಗಳ ಅಗಾಧತೆಯ ಅರಿವಾಗುವುದಿಲ್ಲ ಏಕೆಂದರೆ ಅವರು ನಿರಂತರವಾಗಿ ಶ್ರಮಿಸುತ್ತಿರುತ್ತಾರೆ. ದೇಶದ ಮೇಲೆ ಅವರ ಪ್ರಭಾವವು ಗಮನಾರ್ಹವಾಗಿರುತ್ತದೆ, ಆದರೆ ಭಾರತೀಯ ಕ್ರಿಕೆಟ್ ಒಂದು ವಿಶಿಷ್ಟ ಲಕ್ಷಣವನ್ನು ಹೊಂದಿದೆ. ಭಾರತದ ಕ್ರಿಕೆಟ್ ಪ್ರಯಾಣವು ಅಸಾಧಾರಣ ಯಶಸ್ಸು ಕಂಡಿದೆ ಮತ್ತು ಇದು ಇತರ ಕ್ರೀಡೆಗಳಿಗೂ ಸ್ಫೂರ್ತಿ ನೀಡಲು ಪ್ರಾರಂಭಿಸಿದೆ. ಇನ್ನು ಬೇರೆ ಕ್ರೀಡೆಗಳಲ್ಲಿರುವ ಅಥ್ಲೀಟ್ ಗಳು ‘ಕ್ರಿಕೆಟ್ ನಲ್ಲಿ ಇಂಥದ್ದೇನಾದರೂ ಆಗುವುದಾದರೆ ನಮ್ಮ ಕ್ರೀಡೆಯಲ್ಲಿ ಏಕೆ ಆಗಬಾರದು’ಎಂದು ಯೋಚಿಸುತ್ತಿದ್ದಾರೆ. ಇದು ನಿಮ್ಮ ಮೂಲಕ ಮಾಡುತ್ತಿರುವ ಅಗಾಧವಾದ ಸೇವೆ. ನಮ್ಮನ್ನು ಮತ್ತು ದೇಶವನ್ನು ಮುನ್ನಡೆಸಲು, ನಾವು ಎಲ್ಲಾ ಕ್ರೀಡೆಗಳಲ್ಲಿ ಒಂದೇ ಮನೋಭಾವವನ್ನು ಬೆಳೆಸಿಕೊಳ್ಳಬೇಕು, ವಿಶ್ವಾದ್ಯಂತ ನಮ್ಮ ಧ್ವಜದ ವೈಭವವನ್ನು ಹೆಚ್ಚಿಸುವ ಗುರಿಯನ್ನು ಹೊಂದಿರಬೇಕು. ಇಂದು, ದೇಶದಾದ್ಯಂತ ಸಣ್ಣ ಹಳ್ಳಿಗಳು ಮತ್ತು 2 ಮತ್ತು 3ನೇ ಶ್ರೇಣಿ ನಗರಗಳಿಂದ ಪ್ರತಿಭೆಗಳನ್ನು ಕಂಡುಹಿಡಿಯಲಾಗುತ್ತಿದೆ. ಹಿಂದೆ, ಪ್ರತಿಭೆಗಳು ಹೆಚ್ಚಾಗಿ ದೊಡ್ಡ ನಗರಗಳು ಮತ್ತು ಪ್ರಮುಖ ಕ್ಲಬ್‌ ಗಳಿಂದ ಬರುತ್ತಿದ್ದವು, ಆದರೆ ಈಗ, ನಿಮ್ಮ ತಂಡದ ಅರ್ಧಕ್ಕಿಂತ ಹೆಚ್ಚು ಸದಸ್ಯರು ಸಣ್ಣ ಪುಟ್ಟ ಸ್ಥಳಗಳಿಂದ ಬಂದಿದ್ದಾರೆ. ಇದು ವಿಜಯದ ನಿಜವಾದ ಪರಿಣಾಮವಾಗಿದೆ ಮತ್ತು ಅದರ ಪರಿಣಾಮಗಳು ದೀರ್ಘಕಾಲ ಉಳಿಯುತ್ತವೆ. ಅಫ್ಘಾನಿಸ್ತಾನ ಸಚಿವರ ಹೇಳಿಕೆ ಬಹಳ ಕುತೂಹಲಕಾರಿಯಾಗಿದೆ. ಅಫ್ಘಾನಿಸ್ತಾನಕ್ಕೆ ದಕ್ಷಿಣ ಆಫ್ರಿಕಾ ಜೊತೆ ಆಡುವ ಅವಕಾಶ ಸಿಕ್ಕಿತ್ತು. ಇದು ಅವರಿಗೆ ಯಶಸ್ವಿ ಪ್ರಯಾಣ ಆದರೆ ಅವರು ಭಾರತಕ್ಕೆ ಶ್ರೇಯ ನೀಡಿದರು. ಅಫ್ಘಾನಿಸ್ತಾನದ ಕ್ರಿಕೆಟ್ ಪ್ರಗತಿಗೆ ಭಾರತಕ್ಕೆ ಶ್ರೇಯ ನೀಡಿದ ಅಫ್ಘಾನಿಸ್ತಾನದ ಸಚಿವರು, ಭಾರತೀಯರು ತಮ್ಮ ಆಟಗಾರರನ್ನು ಸಿದ್ಧಪಡಿಸಿದ್ದಾರೆ ಎಂದು ಹೇಳಿದರು.

ಪ್ರಧಾನ ಮಂತ್ರಿ: ನೀವೆಲ್ಲರೂ ರಾಹುಲ್ ಅವರನ್ನು 20 ವರ್ಷ ಕಿರಿಯರನ್ನಾಗಿ ಮಾಡಿದ್ದೀರಿ.

ರಾಹುಲ್ ದ್ರಾವಿಡ್: ಇಲ್ಲ, ಇದರ ಶ್ರೇಯ ಈ ಹುಡುಗರಿಗೆ ಸಲ್ಲುತ್ತದೆ. ನಾನು ಆಟಗಾರ ಮತ್ತು ತರಬೇತುದಾರನಾಗಿದ್ದೆ. ಆದ್ದರಿಂದ, ನಾವು ಅವರನ್ನು ಬೆಂಬಲಿಸಲು ಮಾತ್ರ ಸಾಧ್ಯ ಎಂದು ನಾನು ಯಾವಾಗಲೂ ಹೇಳುತ್ತೇನೆ. ನಾನು ಈ ಪಂದ್ಯಾವಳಿಯಲ್ಲಿ ಒಂದೇ ಒಂದು ರನ್ ಗಳಿಸಿಲ್ಲ, ಒಂದೇ ಒಂದು ವಿಕೆಟ್ ಪಡೆದಿಲ್ಲ ಅಥವಾ ಒಂದೇ ಒಂದು ಕ್ಯಾಚ್ ಹಿಡಿದಿಲ್ಲ. ನಾವು ಇತರ ತರಬೇತುದಾರರು ಸೇರಿದಂತೆ ಸಂಪೂರ್ಣ ಬೆಂಬಲ ಸಿಬ್ಬಂದಿ ತಂಡವನ್ನು ಹೊಂದಿದ್ದೆವು, ಅವರು ತುಂಬಾ ಕಷ್ಟಪಟ್ಟು ಕೆಲಸ ಮಾಡಿದ್ದಾರೆ ಮತ್ತು ನಾವೆಲ್ಲರೂ ತಂಡವನ್ನು ಮಾತ್ರ ಬೆಂಬಲಿಸಬಹುದು. ಒತ್ತಡದ ಸಂದರ್ಭಗಳಲ್ಲಿ, ವಿರಾಟ್, ಬುಮ್ರಾ, ಹಾರ್ದಿಕ್ ಅಥವಾ ರೋಹಿತ್ ಅವರಂತಹ ಆಟಗಾರರು ಪ್ರದರ್ಶನ ನೀಡಬೇಕಾದರೆ, ನಾವು ಅವರನ್ನು ಬೆಂಬಲಿಸಬಹುದು ಮತ್ತು ಅವರಿಗೆ ಬೇಕಾದುದನ್ನು ಒದಗಿಸಬಹುದು. ಆದರೆ ಅವರು ಮೈದಾನದಲ್ಲಿ ನಿಜವಾಗಿ ಸಾಧನೆ ಮಾಡುವವರು. ಅದರ ಶ್ರೇಯ ಸಂಪೂರ್ಣವಾಗಿ ಅವರಿಗೆ ಸಲ್ಲುತ್ತದೆ. ಅವರು ನನಗೆ ಅಂತಹ ಅದ್ಭುತ ಅನುಭವವನ್ನು ನೀಡಿದ್ದಕ್ಕಾಗಿ ನಾನು ತುಂಬಾ ಕೃತಜ್ಞನಾಗಿದ್ದೇನೆ ಮತ್ತು ಸಂತೋಷಪಡುತ್ತೇನೆ. ಈ ಟೂರ್ನಿಯಲ್ಲಿ ತಂಡದ ಸ್ಪೂರ್ತಿ ಉತ್ತಮವಾಗಿತ್ತು. ಆಡಿದ ಹನ್ನೊಂದು ಆಟಗಾರರಲ್ಲಿಯೂ ನಾಲ್ಕು ಹುಡುಗರು ಹೊರಗೆ ಕುಳಿತಿದ್ದರು. ಮೊಹಮ್ಮದ್ ಸಿರಾಜ್ ಮೊದಲ ಮೂರು ಪಂದ್ಯಗಳನ್ನು ಆಡಿದ್ದರು, ಆದರೆ ಅಮೆರಿಕಾದಲ್ಲಿ ನಾವು ಹೆಚ್ಚುವರಿ ವೇಗದ ಬೌಲರ್‌ನೊಂದಿಗೆ ಆಡಿದೆವು. ಹಾಗಾಗಿ ಟೂರ್ನಿಯಲ್ಲಿ ಕೇವಲ ಮೂರು ಪಂದ್ಯಗಳನ್ನಷ್ಟೇ ಆಡಿದ್ದಾರೆ. ನಮ್ಮ ತಂಡದ ಮೂವರು ಹುಡುಗರು ಒಂದೇ ಒಂದು ಪಂದ್ಯವನ್ನು ಆಡಲಿಲ್ಲ: ಸಂಜು, ಯುಜ್ವೇಂದ್ರ ಚಹಾಲ್ ಮತ್ತು ಯಶಸ್ವಿ ಜೈಸ್ವಾಲ್. ಅವರು ಆಡದಿದ್ದರೂ, ಅವರು ಹೆಚ್ಚಿನ ಉತ್ಸಾಹವನ್ನು ಉಳಿಸಿಕೊಂಡರು ಮತ್ತು ಅವರು ಎಂದಿಗೂ ನೈತಿಕವಾಗಿ ಕುಗ್ಗಲಿಲ್ಲ. ಅವರು ಎಂದಿಗೂ ಹತಾಶರಾಗಲಿಲ್ಲ. ಇದು ನಮಗೆ ಮತ್ತು ನಮ್ಮ ತಂಡಕ್ಕೆ ಬಹಳ ಮುಖ್ಯವಾಗಿತ್ತು. ಆದ್ದರಿಂದ, ಈ ವರ್ತನೆ ನಮ್ಮ ತಂಡಕ್ಕೆ ನಿರ್ಣಾಯಕವಾಗಿತ್ತು ಮತ್ತು ನಾನು ಅವರ ಮನೋಭಾವವನ್ನು ಬಹಳವಾಗಿ ಪ್ರಶಂಸಿಸುತ್ತೇನೆ.

ಪ್ರಧಾನ ಮಂತ್ರಿ: ಒಬ್ಬ ತರಬೇತುದಾರನಾಗಿ ನೀವು ಇಡೀ ತಂಡದತ್ತ ಗಮನ ಹರಿಸುತ್ತಿರುವುದಕ್ಕೆ ನಾನು ಪ್ರಶಂಸಿಸುತ್ತೇನೆ. ನಿಮ್ಮ ಮಾತುಗಳನ್ನು ಕೇಳುವ ಯಾರಿಗಾದರೂ ಮೈದಾನದಲ್ಲಿ ಕಾಣದವರೂ ಗಮನಾರ್ಹ ಕೊಡುಗೆ ನೀಡುತ್ತಾರೆ ಎಂದು ತಿಳಿಯುತ್ತದೆ. ಅಂತಹ ಬಲವಾದ ತಂಡ ಮನೋಭಾವವು ಯಶಸ್ಸಿಗೆ ಅತ್ಯಗತ್ಯ. ಆದರೆ ರಾಹುಲ್, 2028 ರ ಯು ಎಸ್ ಎ ಒಲಿಂಪಿಕ್ಸ್ ಬಗ್ಗೆ ನಿಮ್ಮ ಆಲೋಚನೆಗಳನ್ನು ತಿಳಿಯಲು ನಾನು ಬಯಸುತ್ತೇನೆ, ಅಲ್ಲಿ ಈಗ ಕ್ರಿಕೆಟ್ ಅನ್ನು ಸೇರಿಸಲಾಗಿದೆ. ವಿಶ್ವಕಪ್‌ ಗಿಂತ ಒಲಿಂಪಿಕ್ಸ್‌ ಗೆ ಹೆಚ್ಚಿನ ಗಮನ ನೀಡಲಾಗುತ್ತದೆ ಎಂದು ನಾನು ನಂಬುತ್ತೇನೆ. ಭಾರತ ಸರ್ಕಾರ, ಕ್ರಿಕೆಟ್ ಮಂಡಳಿ ಅಥವಾ ನೀವು ವೈಯಕ್ತಿಕವಾಗಿ ಒಲಿಂಪಿಕ್ಸ್‌ ಗೆ ತಯಾರಿ ನಡೆಸಿದರೆ, ನಿಮ್ಮ ಪ್ರತಿಕ್ರಿಯೆ ಏನು?

ರಾಹುಲ್ ದ್ರಾವಿಡ್: ಖಂಡಿತವಾಗಿಯೂ ಮೋದಿಜಿ, ಒಲಿಂಪಿಕ್ಸ್‌ನಲ್ಲಿ ಆಡುವುದು ಕ್ರಿಕೆಟಿಗರಿಗೆ ಸಾಂಪ್ರದಾಯಿಕವಾಗಿ ಸಿಕ್ಕಿರುವ ಅವಕಾಶವಲ್ಲ, ಏಕೆಂದರೆ 2028 ರಲ್ಲಿ ಮೊದಲ ಬಾರಿಗೆ ಒಲಿಂಪಿಕ್ಸ್‌ ಗೆ ಕ್ರಿಕೆಟ್ ಸೇರ್ಪಡೆಯಾಗಲಿದೆ. ಇದು ದೇಶಕ್ಕೆ, ಕ್ರಿಕೆಟ್ ಮಂಡಳಿಗೆ ಒಂದು ಸ್ಮರಣೀಯ ಕ್ರೀಡಾಕೂಟ ಎಂದು ನಾನು ಭಾವಿಸುತ್ತೇನೆ. ಸ್ವತಃ ಆಟಗಾರರು ಮತ್ತು ನಾವು ಉತ್ತಮ ಪ್ರದರ್ಶನ ನೀಡಬೇಕು. ನೀವು ಮೊದಲೇ ಹೇಳಿದಂತೆ, ಇತರ ಕ್ರೀಡೆಗಳ ಜೊತೆಗೆ ನಿಲ್ಲಲು ಇದು ನಮಗೆ ಉತ್ತಮ ಅವಕಾಶವಾಗಿದೆ, ಅಲ್ಲಿ ಹಲವಾರು ಶ್ರೇಷ್ಠ ಕ್ರೀಡಾಪಟುಗಳು ನಮ್ಮ ರಾಷ್ಟ್ರಕ್ಕೆ ಅಪಾರ ಹೆಮ್ಮೆಯನ್ನು ತರುತ್ತಾರೆ. ಒಲಿಂಪಿಕ್ಸ್ ಅಂತಹ ಪ್ರತಿಷ್ಠಿತ ಕ್ರೀಡಾಕೂಟವಾಗಿದೆ ಮತ್ತು ಕ್ರಿಕೆಟ್ ಅನ್ನು ಒಳಗೊಂಡಿರುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ. ಆ ಸಮಯದಲ್ಲಿ ಮಂಡಳಿಯಲ್ಲಿ ಯಾರೇ ಇದ್ದರೂ, ನಮ್ಮ ಬಿಸಿಸಿಐ, ಪಂದ್ಯಾವಳಿಗೆ ಸಂಪೂರ್ಣ ಸಿದ್ಧತೆಗಳನ್ನು ಮಾಡುತ್ತದೆ ಎಂದು ನನಗೆ ವಿಶ್ವಾಸವಿದೆ. ರೋಹಿತ್ ಮತ್ತು ವಿರಾಟ್ ಅವರಂತಹ ಯುವ ಆಟಗಾರರು ಸೇರಿದಂತೆ ಈ ತಂಡದ ಅನೇಕ ಹುಡುಗರು ಭಾಗವಹಿಸುತ್ತಾರೆ ಎಂದು ನಾನು ಭಾವಿಸುತ್ತೇನೆ.

ಪ್ರಧಾನ ಮಂತ್ರಿ: ಹೌದು, 2028 ರ ವೇಳೆಗೆ ಅನೇಕ ಹೊಸ ಮುಖಗಳಿರುತ್ತವೆ!

ರಾಹುಲ್ ದ್ರಾವಿಡ್: ವಾಸ್ತವವಾಗಿ, 2028 ರ ವೇಳೆಗೆ, ನಾವು ಅನೇಕ ಹೊಸ ಆಟಗಾರರನ್ನು ನೋಡುತ್ತೇವೆ. ನಮ್ಮ ತಂಡವು ಶ್ರಮಿಸುತ್ತದೆ ಮತ್ತು ಚಿನ್ನದ ಗುರಿಯನ್ನು ಹೊಂದಿರುತ್ತದೆ, ಅದು ಅಪಾರ ಸಂಭ್ರಮ ಮತ್ತು ಸಂತೋಷವನ್ನು ತರುತ್ತದೆ ಎಂದು ನಾನು ಭರವಸೆ ಹೊಂದಿದ್ದೇನೆ.

ಪ್ರಧಾನ ಮಂತ್ರಿ: ಗೆಲುವಿನ ನಂತರ ಆನಂದಬಾಷ್ಪವನ್ನು ನೋಡಿದಾಗ ಸೋಲಿನ ಕ್ಷಣಗಳು ಎಷ್ಟು ಕಠಿಣವಾಗಿದ್ದವು ಎಂದು ನಾನು ಅರ್ಥಮಾಡಿಕೊಳ್ಳಬಲ್ಲೆ. ಸೋಲಿನ ಆ ಕ್ಷಣಗಳಲ್ಲಿ ಆಟಗಾರನು ಅನುಭವಿಸುವ ನೋವನ್ನು ಜನರು ಸಾಮಾನ್ಯವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ, ಕೊನೆಯವರೆಗೆ ಬಂದು ನಂತರ ಸ್ವಲ್ಪದರಲ್ಲಿ ತಪ್ಪಿಸಿಕೊಳ್ಳುತ್ತಾರೆ. ಗೆಲುವಿನ ಸಂತೋಷವು ಸೋಲಿನ ಮೂಲಕ ಪ್ರಯಾಣವು ಎಷ್ಟು ಪ್ರಯಾಸಕರವಾಗಿರಬಹುದು ಎಂಬುದನ್ನು ಎತ್ತಿ ತೋರಿಸುತ್ತದೆ. ಇದೆಲ್ಲವನ್ನೂ ನಾನು ಪ್ರತ್ಯಕ್ಷವಾಗಿ ನೋಡಿದ್ದೇನೆ ಮತ್ತು ನೀವು ಅದನ್ನು ಜಯಿಸುತ್ತೀರಿ ಎಂಬ ವಿಶ್ವಾಸವಿತ್ತು. ಇಂದು, ನೀವು ಅದನ್ನು ನಿಜವಾಗಿಯೂ ಮಾಡಿ ತೋರಿಸಿದ್ದೀರಿ. ನಿಮ್ಮೆಲ್ಲರಿಗೂ ಅಭಿನಂದನೆಗಳು!

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
When PM Modi Fulfilled A Special Request From 101-Year-Old IFS Officer’s Kin In Kuwait

Media Coverage

When PM Modi Fulfilled A Special Request From 101-Year-Old IFS Officer’s Kin In Kuwait
NM on the go

Nm on the go

Always be the first to hear from the PM. Get the App Now!
...
Under Rozgar Mela, PM to distribute more than 71,000 appointment letters to newly appointed recruits
December 22, 2024

Prime Minister Shri Narendra Modi will distribute more than 71,000 appointment letters to newly appointed recruits on 23rd December at around 10:30 AM through video conferencing. He will also address the gathering on the occasion.

Rozgar Mela is a step towards fulfilment of the commitment of the Prime Minister to accord highest priority to employment generation. It will provide meaningful opportunities to the youth for their participation in nation building and self empowerment.

Rozgar Mela will be held at 45 locations across the country. The recruitments are taking place for various Ministries and Departments of the Central Government. The new recruits, selected from across the country will be joining various Ministries/Departments including Ministry of Home Affairs, Department of Posts, Department of Higher Education, Ministry of Health and Family Welfare, Department of Financial Services, among others.