ಎಲ್ಲರೊಂದಿಗೂ ಮಾತನಾಡುವುದು ನನಗೆ ತುಂಬಾ ಆಸಕ್ತಿದಾಯಕವಾದರೂ, ಪ್ರತಿಯೊಬ್ಬರ ಜೊತೆ ಮಾತನಾಡಲು ಸಾಧ್ಯವಾಗದು. ಆದರೆ ನಿಮ್ಮಲ್ಲಿ ಅನೇಕರೊಂದಿಗೆ ಒಂದಲ್ಲ ಒಂದು ರೀತಿಯಲ್ಲಿ ಸಂಪರ್ಕದಲ್ಲಿರಲು ನನಗೆ ಅವಕಾಶ ದೊರೆಕಿತ್ತು ಮತ್ತು ಬೇರೆ ಬೇರೆ ಸಂದರ್ಭಗಳಲ್ಲಿ ನಿಮ್ಮೊಂದಿಗೆ ಸಂವಾದ ನಡೆಸುವ ಅವಕಾಶವೂ ನನಗೆ ದೊರೆತಿದೆ. ಆದರೆ ಕುಟುಂಬದ ಸದಸ್ಯನಾಗಿ ನನ್ನ ನಿವಾಸಕ್ಕೆ ಬರಲು ನೀವು ಸಮಯ ಮಾಡಿಕೊಂಡುದಕ್ಕಾಗಿ ನನಗೆ ಬಹಳ ಸಂತೋಷವಾಗಿದೆ. ನಿಮ್ಮ ಸಾಧನೆಗಳ ಯಶಸ್ಸಿನ ಬಗ್ಗೆ ಪ್ರತಿಯೊಬ್ಬ ಭಾರತೀಯನು ಹೆಮ್ಮೆಪಡುವುದರಿಂದ, ನಾನು ಸಹ ನಿಮ್ಮೊಂದಿಗೆ ಸಂಬಂಧ ಹೊಂದಲು ಹೆಮ್ಮೆಪಡುತ್ತೇನೆ. ನಿಮಗೆಲ್ಲರಿಗೂ ಇಲ್ಲಿ ಸ್ವಾಗತ.
ದೇಶವು ಎರಡು ದಿನಗಳ ನಂತರ ಸ್ವಾತಂತ್ರ್ಯದ 75 ವರ್ಷಗಳನ್ನು ಪೂರೈಸಲಿದೆ. ನಿಮ್ಮ ಪ್ರಯತ್ನದಿಂದ ಸ್ಫೂರ್ತಿದಾಯಕ ಸಾಧನೆಯೊಂದಿಗೆ ದೇಶವು ಸ್ವಾತಂತ್ರ್ಯದ 'ಅಮೃತ ಕಾಲ'ಕ್ಕೆ ನಾಂದಿ ಹಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ.
ಸ್ನೇಹಿತರೇ,
ಕಳೆದ ಕೆಲವು ವಾರಗಳಲ್ಲಿ, ದೇಶವು ಕ್ರೀಡಾ ಕ್ಷೇತ್ರದಲ್ಲಿ ಎರಡು ಪ್ರಮುಖ ಸಾಧನೆಗಳನ್ನು ಮಾಡಿದೆ. ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಐತಿಹಾಸಿಕ ಸಾಧನೆಯ ಪ್ರದರ್ಶನದ ಜೊತೆಗೆ, ದೇಶವು ಮೊದಲ ಬಾರಿಗೆ ಚೆಸ್ ಒಲಿಂಪಿಯಾಡ್ ಅನ್ನು ಆಯೋಜಿಸಿದೆ. ದೇಶವು ಒಂದು ಯಶಸ್ವಿ ಕಾರ್ಯಕ್ರಮವನ್ನು ಆಯೋಜಿಸಿರುವುದು ಮಾತ್ರವಲ್ಲದೆ, ಚೆಸ್ ನಲ್ಲಿ ತನ್ನ ಶ್ರೀಮಂತ ಸಂಪ್ರದಾಯವನ್ನು ಮುಂದುವರಿಸುತ್ತಾ ಅತ್ಯುತ್ತಮ ಸಾಧನೆಯ ಪ್ರದರ್ಶನವನ್ನೂ ನೀಡಿದೆ. ಇಂದು ಈ ಸಂದರ್ಭದಲ್ಲಿ ಚೆಸ್ ಒಲಿಂಪಿಯಾಡ್ ನಲ್ಲಿ ಭಾಗವಹಿಸಿದ ಎಲ್ಲಾ ಆಟಗಾರರನ್ನು ಮತ್ತು ಎಲ್ಲಾ ಪದಕ ವಿಜೇತರನ್ನು ನಾನು ಅಭಿನಂದಿಸುತ್ತೇನೆ.
ಸ್ನೇಹಿತರೇ,
ಕಾಮನ್ ವೆಲ್ತ್ ಕ್ರೀಡಾಕೂಟಕ್ಕೆ ಮುಂಚಿತವಾಗಿ ನಾನು ನಿಮಗೆಲ್ಲರಿಗೂ ಆಶ್ವಾಸನೆ ನೀಡಿದ್ದೆ, ನೀವು ಹಿಂತಿರುಗಿದ ನಂತರ ನಾವು ವಿಜಯೋತ್ಸವವನ್ನು ಒಟ್ಟಿಗೆ ಆಚರಿಸೋಣ ಎಂಬುದಾಗಿ. ನೀವು ವಿಜಯಶಾಲಿಯಾಗಿ ಮನೆಗೆ ಮರಳುತ್ತೀರಿ ಎಂಬುದು ನನ್ನ ನಂಬಿಕೆಯಾಗಿತ್ತು ಮತ್ತು ಆದ್ದರಿಂದ ನಿಮ್ಮೊಂದಿಗೆ ವಿಜಯವನ್ನು ಆಚರಿಸಲು ನನ್ನ ಬಿಡುವಿಲ್ಲದ ವೇಳಾಪಟ್ಟಿಯ ನಡುವೆಯೂ ನಾನು ನನ್ನ ಸಮಯವನ್ನು ಹೊಂದಿಸಿಕೊಂಡೆ. ಇಂದು ವಿಜಯೋತ್ಸವ ಆಚರಿಸುವ ಸಂದರ್ಭ. ನಾನು ನಿಮ್ಮೊಂದಿಗೆ ಮಾತನಾಡುತ್ತಿದ್ದಾಗ, ನಿಮ್ಮ ಗುರುತಿಸುವಿಕೆಯಂತಾಗಿರುವ ಆತ್ಮವಿಶ್ವಾಸ ಮತ್ತು ಧೈರ್ಯವನ್ನು ನಾನು ನೋಡುವಂತಾಗಿದೆ. ಪದಕಗಳನ್ನು ಗೆದ್ದವರು ಮತ್ತು ಭವಿಷ್ಯದಲ್ಲಿ ಪದಕಗಳನ್ನು ಗೆಲ್ಲಲಿರುವವರು ಇಂದು ಪ್ರಶಂಸೆಗೆ ಅರ್ಹರಾಗಿದ್ದಾರೆ.
ಸ್ನೇಹಿತರೇ,
ನಾನು ನಿಮಗೆ ಇನ್ನೂ ಒಂದು ವಿಷಯವನ್ನು ಹೇಳಲು ಬಯಸುತ್ತೇನೆ. ನೀವೆಲ್ಲರೂ ಅಲ್ಲಿ ಸ್ಪರ್ಧಿಸುತ್ತಿದ್ದಾಗ, ಸಮಯದ ವ್ಯತ್ಯಾಸದಿಂದಾಗಿ ಕೋಟ್ಯಾಂತರ ಭಾರತೀಯರು ಇಲ್ಲಿ ತಡವಾಗಿ ಮಲಗುತ್ತಿದ್ದರು. ದೇಶವಾಸಿಗಳು ನಿಮ್ಮ ಪ್ರತಿಯೊಂದು ಕ್ರಿಯೆಗೂ ಸಮಯ ಹೊಂದಿಸಿಕೊಳ್ಳುತ್ತಿದ್ದರು ಮತ್ತು ತಡರಾತ್ರಿಯವರೆಗೆ ಎಚ್ಚರದಿಂದಿರುತ್ತಿದ್ದರು. ನಿಮ್ಮ ಸಾಧನೆ, ಪ್ರದರ್ಶನವನ್ನು ನೋಡುವುದಕ್ಕಾಗಿ ಅನೇಕ ಜನರು ಅಲಾರಂಗಳನ್ನಿಟ್ಟು ಮಲಗುತ್ತಿದ್ದರು. ಇದರಿಂದ ಅವರಿಗೆ ನಿಮ್ಮ ಸಾಧನೆಯ ಸಕಾಲಿಕ/ಆಯಾ ಕ್ಷಣದ ಮಾಹಿತಿಯನ್ನು ಪಡೆಯಲು ಸಾಧ್ಯವಾಯಿತು. ಜನರು ನಿರಂತರವಾಗಿ ಸ್ಕೋರ್, ಗೋಲ್ ಗಳು ಮತ್ತು ಪಾಯಿಂಟ್ ಗಳನ್ನು ಪರಿಶೀಲಿಸುತ್ತಿದ್ದರು. ಜನರಲ್ಲಿ ಕ್ರೀಡೆಯ ಬಗ್ಗೆ ಈ ಆಸಕ್ತಿ ಮತ್ತು ಆಕರ್ಷಣೆಯನ್ನು ಹೆಚ್ಚಿಸುವಲ್ಲಿ ನೀವೆಲ್ಲರೂ ದೊಡ್ಡ ಪಾತ್ರವನ್ನು ಹೊಂದಿದ್ದೀರಿ ಮತ್ತು ಇದಕ್ಕಾಗಿ ನೀವು ಅಭಿನಂದನೆಗಳಿಗೆ ಅರ್ಹರಾಗಿದ್ದೀರಿ.
ಸ್ನೇಹಿತರೇ,
ಕೇವಲ ಪದಕಗಳ ಸಂಖ್ಯೆಯಿಂದ ಈ ಬಾರಿ ನಿಮ್ಮ ಸಾಧನೆಯ ಪ್ರಾಮಾಣಿಕ ಮೌಲ್ಯಮಾಪನ ಮಾಡಲು ಸಾಧ್ಯವಿಲ್ಲ. ಈ ಬಾರಿ ವಿವಿಧ ಸ್ಪರ್ಧೆಗಳಲ್ಲಿ ಅನೇಕ ಆಟಗಾರರು ಅತ್ಯಂತ ಜಿದ್ದಾ ಜಿದ್ದಿ ಸ್ಪರ್ಧಾ ಹೋರಾಟ ಮಾಡಿದ್ದಾರೆ. ಇದು ಕೂಡ ಒಂದು ಪದಕಕ್ಕಿಂತ ಕಡಿಮೆಯದೇನಲ್ಲ. ಒಳ್ಳೆಯದು ಅವರು ಒಂದು ಸೆಕೆಂಡು ಅಥವಾ ಒಂದು ಸೆಂಟಿಮೀಟರ್ ಬಿಂದುವಿನಿಂದ ಹಿಂದೆ ಬಿದ್ದಿರಬಹುದು, ಆದರೆ ನಾವು ಅದನ್ನೂ ಸಹ ಮುಂದಿನ ದಿನಗಳಲ್ಲಿ ಸಾಧಿಸುತ್ತೇವೆ. ನಿಮ್ಮ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ. ನಾನು ಕೂಡ ಉತ್ಸುಕನಾಗಿದ್ದೇನೆ ಏಕೆಂದರೆ ನಾವು ನಮ್ಮ ಶಕ್ತಿಯಾಗಿರುವ ಕ್ರೀಡೆಗಳನ್ನು ಬಲಪಡಿಸುವುದು ಮಾತ್ರವಲ್ಲದೆ, ಹೊಸ ಕ್ರೀಡೆಗಳಲ್ಲಿ ನಮ್ಮ ಛಾಪು ಮೂಡಿಸುತ್ತಿದ್ದೇವೆ. ಹಾಕಿಯಲ್ಲಿ ನಮ್ಮ ಪರಂಪರೆಯನ್ನು ನಾವು ಮರಳಿ ಗಳಿಸಿಕೊಳ್ಳುತ್ತಿರುವ ರೀತಿಗಾಗಿ ಎರಡೂ ತಂಡಗಳ ಪ್ರಯತ್ನಗಳು, ಕಠಿಣ ಪರಿಶ್ರಮ ಮತ್ತು ಮನೋಧರ್ಮವನ್ನು ನಾನು ಶ್ಲಾಘಿಸುತ್ತೇನೆ. ಕಳೆದ ಬಾರಿಗೆ ಹೋಲಿಸಿದರೆ, ನಾವು ನಾಲ್ಕು ಹೊಸ ಕ್ರೀಡೆಗಳಲ್ಲಿ ಗೆಲುವು ಸಾಧಿಸಿದ್ದೇವೆ. ಲಾನ್ ಬೌಲ್ ಗಳಿಂದ ಹಿಡಿದು ಅಥ್ಲೆಟಿಕ್ಸ್ ವರೆಗೆ ಅಸಾಧಾರಣ ಸಾಧನಾ ಪ್ರದರ್ಶನ ಕಂಡುಬಂದಿದೆ. ಈ ಸಾಧನಾ ಪ್ರದರ್ಶನದೊಂದಿಗೆ, ದೇಶದಲ್ಲಿ ಹೊಸ ಕ್ರೀಡೆಗಳತ್ತ ಯುವಕರ ಒಲವು ಸಾಕಷ್ಟು ಹೆಚ್ಚಾಗಲಿದೆ. ಹೊಸ ಆಟಗಳಲ್ಲಿ ನಾವು ನಮ್ಮ ಪ್ರದರ್ಶನವನ್ನು ಈ ರೀತಿ ಸುಧಾರಿಸುತ್ತಲೇ ಇರಬೇಕು. ಶರತ್, ಕಿಡಂಬಿ, ಸಿಂಧು, ಸೌರಭ್, ಮೀರಾಬಾಯಿ, ಭಜರಂಗ್, ವಿನೇಶ್ ಅಥವಾ ಸಾಕ್ಷಿ ಯಾರೇ ಆಗಿರಲಿ, ನನ್ನ ಮುಂದೆ ಇರುವ ಎಲ್ಲಾ ಹಳೆಯ ಮುಖಗಳನ್ನು ನಾನು ನೋಡಬಹುದು. ಎಲ್ಲಾ ಹಿರಿಯ ಕ್ರೀಡಾಪಟುಗಳು ನಿರೀಕ್ಷೆಯಂತೆ ಮುನ್ನಡೆ ಸಾಧಿಸಿದ್ದಾರೆ ಮತ್ತು ಎಲ್ಲರನ್ನೂ ಪ್ರೋತ್ಸಾಹಿಸಿದ್ದಾರೆ. ಮತ್ತೊಂದೆಡೆ, ನಮ್ಮ ಯುವ ಕ್ರೀಡಾಪಟುಗಳು ಅದ್ಭುತಗಳನ್ನು ಮಾಡಿದ್ದಾರೆ. ಕ್ರೀಡಾಕೂಟದ ಆರಂಭಕ್ಕೆ ಮುನ್ನ ನಾನು ಮಾತನಾಡಿದ ಯುವ ಸಹೋದ್ಯೋಗಿಗಳು ತಮ್ಮ ಭರವಸೆಗೆ ತಕ್ಕಂತೆ ನಡೆದುಕೊಂಡಿದ್ದಾರೆ. ಚೊಚ್ಚಲ ಪ್ರಯತ್ನದಲ್ಲಿ, 31 ಆಟಗಾರರು ಪದಕಗಳನ್ನು ಗೆದ್ದಿದ್ದಾರೆ. ಇದು ಇಂದು ನಮ್ಮ ಯುವಕರ ಆತ್ಮವಿಶ್ವಾಸವು ಯಾವ ಪ್ರಮಾಣದಲ್ಲಿ ಹೆಚ್ಚುತ್ತಿದೆ ಎಂಬುದನ್ನು ತೋರಿಸುತ್ತದೆ. ಅನುಭವಿ ಶರತ್ ಪ್ರಾಬಲ್ಯ ಸಾಧಿಸಿದಾಗ ಮತ್ತು ಅವಿನಾಶ್, ಪ್ರಿಯಾಂಕಾ ಹಾಗು ಸಂದೀಪ್ ಮೊದಲ ಬಾರಿಗೆ ವಿಶ್ವದ ಅತ್ಯುತ್ತಮ ಕ್ರೀಡಾಪಟುಗಳನ್ನು ಎದುರಿಸಿದಾಗ ನವ ಭಾರತದ ಉತ್ಸಾಹವು ಗೋಚರಿಸುತ್ತದೆ. ಪ್ರತಿ ಸ್ಪರ್ಧೆಗೆ ನಾವು ಸಿದ್ಧರಾಗಿದ್ದೇವೆ ಎಂಬ ಮನೋಭಾವ ಇದು. ಇಬ್ಬರು ಭಾರತೀಯ ಆಟಗಾರರು ಏಕಕಾಲದಲ್ಲಿ ಅಥ್ಲೆಟಿಕ್ಸ್ ವೇದಿಕೆಯ ಮೇಲೆ ತ್ರಿವರ್ಣ ಧ್ವಜಕ್ಕೆ ಗೌರವವಂದನೆ ಸಲ್ಲಿಸುತ್ತಿರುವುದನ್ನು ನಾವು ಎಷ್ಟು ಬಾರಿ ನೋಡಿದ್ದೇವೆ ? ಮತ್ತು ಸ್ನೇಹಿತರೇ, ನಮ್ಮ ಹೆಣ್ಣುಮಕ್ಕಳ ಸಾಧನೆಯ ಬಗ್ಗೆ ಇಡೀ ದೇಶವೇ ಬೆರಗುಗೊಂಡಿದೆ. ಈಗಷ್ಟೇ ನಾನು ಪೂಜಾರೊಂದಿಗೆ ಮಾತನಾಡುತ್ತಿದ್ದಾಗ, ನಾನು ಇದನ್ನು ಅವರಲ್ಲಿ ಪ್ರಸ್ತಾಪಿಸಿದೆ. ಪೂಜಾ ಅವರ ಆ ಭಾವನಾತ್ಮಕ ವೀಡಿಯೊವನ್ನು ನೋಡಿದ ನಂತರ, ನೀವು ಕ್ಷಮೆಯಾಚಿಸುವ ಅಗತ್ಯವಿಲ್ಲ ಎಂದು ನಾನು ಸಾಮಾಜಿಕ ಮಾಧ್ಯಮದ ಮೂಲಕ ಹೇಳಿದ್ದೆ. ನೀವು ದೇಶಕ್ಕಾಗಿ ಗೆದ್ದಿದ್ದೀರಿ ಮತ್ತು ನಿಮ್ಮ ಪ್ರಾಮಾಣಿಕತೆ ಹಾಗು ಕಠಿಣ ಪರಿಶ್ರಮದಲ್ಲಿ ನೀವು ರಾಜಿ ಮಾಡಿಕೊಳ್ಳಬೇಕಾಗಿಲ್ಲ. ಒಲಿಂಪಿಕ್ಸ್ ನಂತರ ನಾನು ವಿನೇಶ್ ಗೆ ಇದೇ ಮಾತನ್ನು ಹೇಳಿದ್ದೆ ಮತ್ತು ಅವರು ನಿರಾಶೆಯನ್ನು ಹಿಂದೆ ತಳ್ಳಿ ತನ್ನ ಅತ್ಯುತ್ತಮ ಪ್ರಯತ್ನವನ್ನು ಮಾಡಿದರು ಎಂಬುದು ನನಗೆ ಸಂತೋಷದ ಸಂಗತಿಯಾಗಿದೆ. ಅದು ಬಾಕ್ಸಿಂಗ್, ಜೂಡೋ ಅಥವಾ ಕುಸ್ತಿಯಾಗಿರಲಿ, ಹೆಣ್ಣುಮಕ್ಕಳು ಪ್ರಾಬಲ್ಯ ಸಾಧಿಸಿದ ರೀತಿ, ಅದ್ಭುತವಾಗಿದೆ. ನೀತು ಅವರು ಪ್ರತಿಸ್ಪರ್ಧಿಗಳನ್ನು ಬಾಕ್ಸಿಂಗ್ ರಿಂಗ್ ನಿಂದ ಹೊರಹೋಗುವಂತಹ ಪರಿಸ್ಥಿತಿ ನಿರ್ಮಾಣ ಮಾಡಿದರು. ಹರ್ಮನ್ ಪ್ರೀತ್ ನಾಯಕತ್ವದಲ್ಲಿ, ಭಾರತೀಯ ಕ್ರಿಕೆಟ್ ತಂಡವು ಉದ್ಘಾಟನಾ ಸ್ಪರ್ಧೆಯಲ್ಲೇ ಉತ್ತಮ ಪ್ರದರ್ಶನ ನೀಡಿತು. ಎಲ್ಲಾ ಆಟಗಾರರ ಪ್ರದರ್ಶನವು ಅತ್ಯುತ್ತಮವಾಗಿತ್ತು, ಆದರೆ ರೇಣುಕಾ ಅವರ ಜಯಭೇರಿಗೆ ಯಾರ ಬಳಿಯೂ ಇದುವರೆಗೂ ಉತ್ತರವಿಲ್ಲದಂತಾಗಿದೆ. ದಂತಕಥೆಗಳಾಗಿರುವವರ ನಡುವೆ ಅಗ್ರ ವಿಕೆಟ್-ಟೇಕರ್ (ವಿಕೆಟ್ ಪಡೆದವರು) ಆಗಿರುವುದು ಕಡಿಮೆ ಸಾಧನೆಯೇನಲ್ಲ. ಅವರ ಮುಖದಲ್ಲಿ ಶಿಮ್ಲಾದ ಶಾಂತತೆ ಮತ್ತು ಪರ್ವತಗಳ ಮುಗ್ಧ ನಗು ಇರಬಹುದು, ಆದರೆ ಅವರ ಆಕ್ರಮಣಶೀಲತೆ ದೊಡ್ಡ ಬ್ಯಾಟ್ ಮನ್ ಗಳ ಉತ್ಸಾಹವನ್ನು ಭಗ್ನಗೊಳಿಸುತ್ತದೆ. ಈ ಪ್ರದರ್ಶನವು ಖಂಡಿತವಾಗಿಯೂ ದೂರದ ಪ್ರದೇಶಗಳಲ್ಲಿರುವ ಹೆಣ್ಣುಮಕ್ಕಳನ್ನೂ ಪ್ರೇರೇಪಿಸುತ್ತದೆ, ಪ್ರೋತ್ಸಾಹಿಸುತ್ತದೆ ಮತ್ತು ಉತ್ತೇಜಿಸುತ್ತದೆ.
ಸ್ನೇಹಿತರೇ,
ನೀವು ದೇಶಕ್ಕೆ ಪದಕಗಳನ್ನು ನೀಡುತ್ತೀರಿ ಮತ್ತು ಆಚರಿಸಲು ಹಾಗು ದೇಶವು ಹೆಮ್ಮೆಪಡಲು ಒಂದು ಅವಕಾಶವನ್ನು ನೀಡುತ್ತೀರಿ ಎಂದಲ್ಲ. ಬದಲಾಗಿ, ನೀವು 'ಏಕ್ ಭಾರತ್ ಶ್ರೇಷ್ಠ ಭಾರತ್' ಎಂಬ ಮನೋಭಾವವನ್ನು ಬಲಪಡಿಸುತ್ತೀರಿ. ಕ್ರೀಡೆಯಲ್ಲಿ ಮಾತ್ರವಲ್ಲದೆ ಇತರ ಕ್ಷೇತ್ರಗಳಲ್ಲೂ ಉತ್ತಮ ಸಾಧನೆ ಮಾಡುವಂತೆ ನೀವು ದೇಶದ ಯುವಕರಿಗೆ ಪ್ರೇರೇಪಿಸುತ್ತೀರಿ. ನೀವೆಲ್ಲರೂ ಒಂದೇ ಸಂಕಲ್ಪದೊಂದಿಗೆ ಒಂದೇ ಗುರಿಯೊಂದಿಗೆ ದೇಶವನ್ನು ಒಂದುಗೂಡಿಸುತ್ತೀರಿ, ಅದು ನಮ್ಮ ಸ್ವಾತಂತ್ರ್ಯ ಹೋರಾಟದ ದೊಡ್ಡ ಶಕ್ತಿಯೂ ಆಗಿತ್ತು. ಮಹಾತ್ಮಾ ಗಾಂಧಿ, ನೇತಾಜಿ ಸುಭಾಷ್ ಚಂದ್ರ ಬೋಸ್, ಮಂಗಲ್ ಪಾಂಡೆ, ತಾತ್ಯಾ ಟೋಪೆ, ಲೋಕಮಾನ್ಯ ತಿಲಕ್, ಸರ್ದಾರ್ ಭಗತ್ ಸಿಂಗ್, ಚಂದ್ರಶೇಖರ್ ಆಜಾದ್, ಅಶ್ಫಾಕುಲ್ಲಾ ಖಾನ್ ಮತ್ತು ರಾಮ್ ಪ್ರಸಾದ್ ಬಿಸ್ಮಿಲ್ ಅವರಂತಹ ಅಸಂಖ್ಯಾತ ಹೋರಾಟಗಾರರು ಮತ್ತು ಕ್ರಾಂತಿಕಾರಿಗಳ ದೃಷ್ಟಿಕೋನವು ಬೇರೆ ಬೇರೆಯಾಗಿತ್ತು. ಆದರೆ ಗುರಿ ಒಂದೇ ಆಗಿತ್ತು. ರಾಣಿ ಲಕ್ಷ್ಮಿಬಾಯಿ, ಝಲ್ಕರಿ ಬಾಯಿ, ದುರ್ಗಾ ಭಾಬಿ, ರಾಣಿ ಚೆನ್ನಮ್ಮ, ರಾಣಿ ಗೈಡಿನ್ಲಿಯು ಮತ್ತು ವೇಲು ನಾಚಿಯಾರ್ ರಂತಹ ಅಸಂಖ್ಯಾತ ನಾಯಕಿಯರು ಏಕರೂಪತೆಯನ್ನು ತೊರೆದು ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ಬಿರ್ಸಾ ಮುಂಡಾ, ಅಲ್ಲೂರಿ ಸೀತಾರಾಮ ರಾಜು ಮತ್ತು ಗೋವಿಂದ ಗುರು ಅವರಂತಹ ಅನೇಕ ಮಹಾನ್ ಬುಡಕಟ್ಟು ಹೋರಾಟಗಾರರು ತಮ್ಮ ಧೈರ್ಯ ಮತ್ತು ಉತ್ಸಾಹದಿಂದ ಮಾತ್ರ ಅಂತಹ ಶಕ್ತಿಶಾಲಿ ಸೈನ್ಯದ ವಿರುದ್ಧ ಹೋರಾಡಿದರು. ಡಾ. ರಾಜೇಂದ್ರ ಪ್ರಸಾದ್, ಪಂಡಿತ್ ನೆಹರು, ಸರ್ದಾರ್ ಪಟೇಲ್, ಬಾಬಾ ಸಾಹೇಬ್ ಅಂಬೇಡ್ಕರ್, ಆಚಾರ್ಯ ವಿನೋಬಾ ಭಾವೆ, ನಾನಾಜಿ ದೇಶಮುಖ್, ಲಾಲ್ ಬಹದ್ದೂರ್ ಶಾಸ್ತ್ರಿ, ಶ್ಯಾಮ ಪ್ರಸಾದ್ ಮುಖರ್ಜಿ ಅವರಂತಹ ಅನೇಕ ವ್ಯಕ್ತಿಗಳು ಸ್ವತಂತ್ರ ಭಾರತದ ಕನಸುಗಳನ್ನು ನನಸಾಗಿಸಲು ತಮ್ಮ ಜೀವನವನ್ನು ವ್ಯಯ ಮಾಡಿದರು. ಸ್ವಾತಂತ್ರ್ಯ ಸಂಗ್ರಾಮದಿಂದ ಹಿಡಿದು ಸ್ವತಂತ್ರ ಭಾರತವನ್ನು ಪುನರ್ನಿರ್ಮಾಣ ಮಾಡಲು ಇಡೀ ಭಾರತ ಸಾಮೂಹಿಕವಾಗಿ ಪ್ರಯತ್ನ ನಡೆಸಿದ ರೀತಿಯಲ್ಲಿಯೇ, ನೀವು ಸಹ ಅದೇ ಮನೋಭಾವದಿಂದ ಕ್ರೀಡಾ ಕ್ಷೇತ್ರವನ್ನು ಪ್ರವೇಶಿಸುತ್ತೀರಿ. ರಾಜ್ಯ, ಜಿಲ್ಲೆ, ಗ್ರಾಮ, ಭಾಷೆ ಯಾವುದೇ ಇರಲಿ, ನೀವು ದೇಶದ ಹೆಮ್ಮೆ ಮತ್ತು ಪ್ರತಿಷ್ಠೆಗಾಗಿ ನಿಮ್ಮ ಕೈಲಾದಷ್ಟು ಪ್ರಯತ್ನ ಮಾಡುತ್ತೀರಿ. ತ್ರಿವರ್ಣ ಧ್ವಜ ನಿಮ್ಮ ಚಾಲಕ ಶಕ್ತಿ. ಮತ್ತು ಕೆಲವು ಸಮಯದ ಹಿಂದೆ ಉಕ್ರೇನ್ ನಲ್ಲಿ ತ್ರಿವರ್ಣ ಧ್ವಜದ ಶಕ್ತಿಯನ್ನು ನಾವು ನೋಡಿದ್ದೇವೆ. ಈ ತ್ರಿವರ್ಣ ಧ್ವಜವು ಭಾರತೀಯರಿಗೆ ಮಾತ್ರವಲ್ಲ, ಯುದ್ಧಭೂಮಿಯಿಂದ ಅವರನ್ನು ಸ್ಥಳಾಂತರಿಸುವಾಗ ಇತರ ದೇಶಗಳ ಜನರಿಗೂ ರಕ್ಷಣಾತ್ಮಕ ಗುರಾಣಿಯಾಯಿತು.
ಸ್ನೇಹಿತರೇ,
ಇತ್ತೀಚಿನ ದಿನಗಳಲ್ಲಿ, ನಾವು ಇತರ ಪಂದ್ಯಾವಳಿಗಳಲ್ಲಿಯೂ ಉತ್ತಮ ಸಾಧನೆ ಮಾಡಿದ್ದೇವೆ. ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ನಾವು ಇಲ್ಲಿಯವರೆಗೆ ಅತ್ಯಂತ ಯಶಸ್ವಿ ಪ್ರದರ್ಶನವನ್ನು ನೀಡಿದ್ದೇವೆ. ವಿಶ್ವ ಅಂಡರ್-20 ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿಯೂ ಪ್ರಶಂಸನೀಯ ಪ್ರದರ್ಶನ ಕಂಡುಬಂದಿದೆ. ಅದೇ ರೀತಿ, ವಿಶ್ವ ಕೆಡೆಟ್ ಕುಸ್ತಿ ಚಾಂಪಿಯನ್ ಶಿಪ್ ಮತ್ತು ಪ್ಯಾರಾ ಬ್ಯಾಡ್ಮಿಂಟನ್ ಅಂತರರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಅನೇಕ ಹೊಸ ದಾಖಲೆಗಳನ್ನು ಮಾಡಲಾಗಿದೆ. ಇದು ಖಂಡಿತವಾಗಿಯೂ ಭಾರತೀಯ ಕ್ರೀಡೆಗೆ ಉತ್ಸಾಹದ, ರೋಮಾಂಚನದ ಕಾಲಘಟ್ಟವಾಗಿದೆ. ದೇಶದ ಅನೇಕ ತರಬೇತುದಾರರು, ಕೋಚಿಂಗ್ ಸಿಬ್ಬಂದಿ ಸದಸ್ಯರು ಮತ್ತು ಕ್ರೀಡಾ ಆಡಳಿತಕ್ಕೆ ಸಂಬಂಧಿಸಿದ ಸಹೋದ್ಯೋಗಿಗಳು ಸಹ ಇಲ್ಲಿ ಇದ್ದಾರೆ. ಈ ಯಶಸ್ಸುಗಳಲ್ಲಿ ನಿಮ್ಮ ಪಾತ್ರವೂ ಅತ್ಯುತ್ತಮವಾಗಿದೆ. ನಿಮ್ಮ ಪಾತ್ರ ಬಹಳ ಮುಖ್ಯ. ಆದರೆ ನನ್ನ ಪ್ರಕಾರ ಇದು ಆರಂಭ. ನಾವು ನಮ್ಮ ಕೀರ್ತಿಯ ಮೇಲೆ ವಿಶ್ರಮಿಸುವುದಿಲ್ಲ. ಸ್ನೇಹಿತರೇ, ಭಾರತದ ಕ್ರೀಡೆಯ ಸುವರ್ಣಯುಗ ಈಗ ಬಾಗಿಲು ತಟ್ಟುತ್ತಿದೆ. ಖೇಲೋ ಇಂಡಿಯಾ ವೇದಿಕೆಯಿಂದ ಪದವಿ ಪಡೆದ ಅನೇಕ ಆಟಗಾರರು ಈ ಬಾರಿ ಅಸಾಧಾರಣ ಮತ್ತು ಉತ್ತಮ ಪ್ರದರ್ಶನ ತೋರಿದ್ದಾರೆ ಎಂಬುದು ನನಗೆ ಸಂತೋಷದ ಸಂಗತಿಯಾಗಿದೆ. ಟಾಪ್ಸ್ ನ ಧನಾತ್ಮಕ ಪರಿಣಾಮ ಸಹ ಇದರಲ್ಲಿ ಕಂಡು ಬರುತ್ತಿದೆ. ಹೊಸ ಪ್ರತಿಭೆಗಳನ್ನು ಕಂಡುಹಿಡಿಯಲು ಮತ್ತು ಅವರನ್ನು ವೇದಿಕೆಗೆ ಕರೆ ತರಲು ನಾವು ನಮ್ಮ ಪ್ರಯತ್ನಗಳನ್ನು ತೀವ್ರಗೊಳಿಸಬೇಕಾಗಿದೆ. ವಿಶ್ವದರ್ಜೆಯ, ಎಲ್ಲರನ್ನೂ ಒಳಗೊಳ್ಳುವ, ವೈವಿಧ್ಯಮಯ ಮತ್ತು ಕ್ರಿಯಾತ್ಮಕವಾದ ಕ್ರೀಡಾ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವುದು ನಮ್ಮ ಜವಾಬ್ದಾರಿಯಾಗಿದೆ. ಯಾವುದೇ ಪ್ರತಿಭೆ ಹಿಂದುಳಿಯಲು ಬಿಡಬಾರದು, ಏಕೆಂದರೆ ಅದು ದೇಶದ ಸಂಪತ್ತು. ಮುಂಬರುವ ಏಷ್ಯನ್ ಗೇಮ್ಸ್ ಮತ್ತು ಒಲಿಂಪಿಕ್ಸ್ ಗೆ ಸಿದ್ಧರಾಗುವಂತೆ ನಾನು ಎಲ್ಲಾ ಕ್ರೀಡಾಪಟುಗಳಿಗೆ ಮನವಿ ಮಾಡುತ್ತೇನೆ. ಸ್ವಾತಂತ್ರ್ಯದ 75 ವರ್ಷಗಳ ಸಂದರ್ಭದಲ್ಲಿ ನಾನು ನಿಮ್ಮಲ್ಲಿ ಮತ್ತೊಂದು ವಿನಂತಿಯನ್ನು ಮಾಡುವವನಿದ್ದೇನೆ. ಕಳೆದ ಬಾರಿ ನಾನು ದೇಶದ 75 ಶಾಲೆಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡುವ ಮೂಲಕ ಮಕ್ಕಳನ್ನು ಪ್ರೋತ್ಸಾಹಿಸುವಂತೆ ನಿಮ್ಮಲ್ಲಿ ವಿನಂತಿಸಿದ್ದೆ. ಪೂರ್ವ ನಿರ್ಧರಿತ ಕಾರ್ಯಕ್ರಮಗಳ ನಡುವೆಯೂ, ಅನೇಕ ಸಹೋದ್ಯೋಗಿಗಳು “ಮೀಟ್ ದಿ ಚಾಂಪಿಯನ್” ಅಭಿಯಾನದ ಅಡಿಯಲ್ಲಿ ಇದನ್ನು ನಡೆಸಿಕೊಟ್ಟಿದ್ದಾರೆ. ಈ ಅಭಿಯಾನವನ್ನು ಚಾಲ್ತಿಯಲ್ಲಿಡಿ. ಇದುವರೆಗೆ ಇದನ್ನು ಮಾಡದೇ ಇರುವವರು ಅದನ್ನು ನಡೆಸಿಕೊಡಬೇಕು ಎಂದು ನಾನು ಕೋರುತ್ತೇನೆ. ಯಾಕೆಂದರೆ ದೇಶದ ಯುವಕರು ಈಗ ನಿಮ್ಮನ್ನು ಆದರ್ಶಪ್ರಾಯರಾಗಿ ನೋಡುತ್ತಾರೆ ಮತ್ತು ಆದ್ದರಿಂದ ನಿಮ್ಮ ಮಾತುಗಳನ್ನು ಬಹಳ ಎಚ್ಚರಿಕೆಯಿಂದ ಆಲಿಸುತ್ತಾರೆ. ನಿಮ್ಮ ಸಲಹೆಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಅವರು ಉತ್ಸುಕರಾಗಿದ್ದಾರೆ. ನಿಮ್ಮ ಸಾಮರ್ಥ್ಯ, ಸ್ವೀಕಾರಾರ್ಹತೆ ಮತ್ತು ಹೆಚ್ಚುತ್ತಿರುವ ಗೌರವವು ದೇಶದ ಯುವ ಪೀಳಿಗೆಗೆ ಉಪಯುಕ್ತವಾಗಬೇಕು. ಈ ವಿಜಯದ ಪ್ರಯಾಣದಲ್ಲಿ ನಾನು ಮತ್ತೊಮ್ಮೆ ನಿಮಗೆ ಶುಭ ಹಾರೈಸುತ್ತೇನೆ! ಅನೇಕ ಅಭಿನಂದನೆಗಳು! ಧನ್ಯವಾದಗಳು!