ಸಂಘಟಿತ ಪ್ರಯತ್ನ, ಸಹಯೋಗ ಹಾಗೂ ಸಹಕಾರಕ್ಕೆ ರಾಜ್ಯಗಳನ್ನು ಶ್ಲಾಘಿಸಿದ ಪ್ರಧಾನಮಂತ್ರಿ
ಎಲ್ಲ ಸಾಧ್ಯ ನೆರವು ಒದಗಿಸುತ್ತಿರುವ ಪ್ರಧಾನಮಂತ್ರಿಯವರಿಗೆ ಧನ್ಯವಾದ ಅರ್ಪಿಸಿದ ಮುಖ್ಯಮಂತ್ರಿಗಳು
ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಪ್ರಕರಣಗಳ ಹೆಚ್ಚಳ ಪ್ರವೃತ್ತಿ ಕಾಳಜಿಯ ಸಂಗತಿ: ಪ್ರಧಾನಮಂತ್ರಿ
ಪರೀಕ್ಷೆ, ಪತ್ತೆ, ಚಿಕಿತ್ಸೆ ಮತ್ತು ಲಸಿಕೆ ಸಾಬೀತಾದ ಕಾರ್ಯತಂತ್ರವಾಗಿದೆ: ಪ್ರಧಾನಮಂತ್ರಿ
ಮೂರನೇ ಅಲೆಯ ಸಾಧ್ಯತೆಯನ್ನು ತಡೆಯಲು ನಾವು ಸಕಾರಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕು: ಪ್ರಧಾನಮಂತ್ರಿ
ಮೂಲಸೌಕರ್ಯಗಳ ಕಂದಕವನ್ನು, ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಸರಿದೂಗಿಸಿ: ಪ್ರಧಾನಮಂತ್ರಿ
ಕೊರೊನಾ ಮುಗಿದಿಲ್ಲ, ನಿರ್ಬಂಧ ತೆರವಿನ ನಂತರದ ಚಿತ್ರಣ ಆತಂಕಕಾರಿಯಾಗಿದೆ: ಪ್ರಧಾನಮಂತ್ರಿ

ನಮಸ್ಕಾರಜೀ!

ಕೊರೊನಾ ವಿರುದ್ಧ ದೇಶ ಕೈಗೊಂಡಿರುವ ಯುದ್ಧಕ್ಕೆ ಸಂಬಂಧಿಸಿ ನೀವೆಲ್ಲರೂ ಹಲವು ಪ್ರಮುಖ ವಿಷಯಗಳಿಗೆ ಸಂಬಂಧಿಸಿ ಅಭಿಪ್ರಾಯವನ್ನು ಸ್ಪಷ್ಟಪಡಿಸಿದ್ದೀರಿ. ಎರಡು ದಿನಗಳ ಹಿಂದೆ, ಈಶಾನ್ಯದ ಗೌರವಾನ್ವಿತ ಮುಖ್ಯಮಂತ್ರಿಗಳ ಜೊತೆ ಈ ವಿಷಯದ ಬಗ್ಗೆ ಚರ್ಚಿಸುವ ಅವಕಾಶ ನನಗೆ ಲಭಿಸಿತ್ತು. ನಾನು ನಿರ್ದಿಷ್ಟವಾಗಿ ಪರಿಸ್ಥಿತಿ ಕಳವಳಕಾರಿಯಾಗಿರು ವಂತಹ ರಾಜ್ಯಗಳ ಜೊತೆ ಮಾತನಾಡುತ್ತೇನೆ.

ಸ್ನೇಹಿತರೇ,

ಕಳೆದ ಒಂದೂವರೆ ವರ್ಷದಲ್ಲಿ, ದೇಶವು ಇಂತಹ ಬೃಹತ್ ಜಾಗತಿಕ ಸಾಂಕ್ರಾಮಿಕದ ಜೊತೆ ಪರಸ್ಪರ ಸಹಕಾರ ಮತ್ತು ಸಾಮೂಹಿಕ ಪ್ರಯತ್ನಗಳ ಮೂಲಕ ಹೋರಾಟ ಮಾಡಿದೆ. ಎಲ್ಲಾ ರಾಜ್ಯ ಸರಕಾರಗಳೂ ಪರಸ್ಪರ ಕಲಿತುಕೊಳ್ಳಲು ಪ್ರಯತ್ನಗಳನ್ನು ಮಾಡಿವೆ. ಉತ್ತಮ ಪದ್ಧತಿಗಳನ್ನು ತಿಳಿದುಕೊಳ್ಳಲು, ಮತ್ತು ಪರಸ್ಪರ ಸಹಕಾರ ಮಾಡಲು ಕಲಿತುಕೊಂಡಿರುವ ಪ್ರಯತ್ನಗಳು ಬಹಳ ಶ್ಲಾಘನೀಯ. ಮತ್ತು ಅನುಭವದಿಂದ ನಾವು ಹೇಳಬಹುದು, ಈ ಹೋರಾಟದಲ್ಲಿ ಇಂತಹ ಪ್ರಯತ್ನಗಳ ಮೂಲಕ ಮಾತ್ರವೇ ನಾವು ಗೆಲುವು ಸಾಧಿಸಬಹುದು ಎಂಬುದಾಗಿ.

ಸ್ನೇಹಿತರೇ,

ಮೂರನೇ ಅಲೆಯ ಭಯ ನಿಯಮಿತವಾಗಿ ವ್ಯಕ್ತವಾಗುತ್ತಿರುವ ಪರಿಸ್ಥಿತಿಯಲ್ಲಿ ನಾವಿರುವುದು ನಿಮಗೆಲ್ಲಾ ತಿಳಿದಿದೆ. ದೇಶದ ಬಹುತೇಕ ರಾಜ್ಯಗಳಲ್ಲಿ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿರುವುದು ಸ್ವಲ್ಪ ಮಟ್ಟಿಗೆ ಮಾನಸಿಕ ನೆಮ್ಮದಿಯನ್ನು ಒದಗಿಸಿದೆ. ಈ ಇಳಿಕೆ ಪ್ರವೃತ್ತಿಯಿಂದಾಗಿ ದೇಶವು ಬಹಳ ಶೀಘ್ರದಲ್ಲಿಯೇ ಎರಡನೇ ಅಲೆಯಿಂದ ಸಂಪೂರ್ಣವಾಗಿ ಹೊರಬರುವ ನಿರೀಕ್ಷೆಯನ್ನು ತಜ್ಞರು ವ್ಯಕ್ತಪಡಿಸುತ್ತಿದ್ದಾರೆ. ಆದರೆ ಕೆಲವು ರಾಜ್ಯಗಳಲ್ಲಿ ಪ್ರಕರಣಗಳ ಸಂಖ್ಯೆಯಲ್ಲಾಗುತ್ತಿರುವ ಹೆಚ್ಚಳ ಚಿಂತೆಗೆ ಕಾರಣವಾಗಿದೆ.

ಸ್ನೇಹಿತರೇ,

ಈ ಚರ್ಚೆಗೆ ಇಂದು ನಮ್ಮ ಜೊತೆ ಆರು ರಾಜ್ಯಗಳಿವೆ. ಕಳೆದ ವಾರ ಸುಮಾರು 80 ಶೇಕಡಾದಷ್ಟು ಹೊಸ ಪ್ರಕರಣಗಳು ನಿಮ್ಮ ರಾಜ್ಯಗಳಿಂದ ಬಂದಿವೆ. ಎಂಬತ್ತನಾಲ್ಕು ಶೇಕಡಾದಷ್ಟು ದುರಂತಮಯ ಸಾವುಗಳೂ ಈ ರಾಜ್ಯಗಳಲ್ಲಿ ಸಂಭವಿಸಿವೆ. ಆರಂಭದಲ್ಲಿ ತಜ್ಞರು ಎರಡನೆ ಅಲೆ ಉದ್ಭವಿಸಿದಲ್ಲಿ ಇತರ ರಾಜ್ಯಗಳಿಗೆ ಮೊದಲೇ ಅದು ನಿಯಂತ್ರಣಕ್ಕೆ ಬರುತ್ತದೆ ಎಂದು ಅಂದಾಜು ಮಾಡಿದ್ದರು. ಆದರೆ ಪ್ರಕರಣಗಳು ಮಹಾರಾಷ್ಟ್ರ ಮತ್ತು ಕೇರಳಗಳಲ್ಲಿ ನಿರಂತರವಾಗಿ ಹೆಚ್ಚುತ್ತಿವೆ. ಇದು ನಿಜವಾಗಿಯೂ ನಮ್ಮೆಲ್ಲರಿಗೂ ಮತ್ತು ದೇಶಕ್ಕೂ  ಕಳವಳದ ಸಂಗತಿ. ಎರಡನೇ ಅಲೆಗೆ ಮೊದಲು ಜನವರಿ-ಫೆಬ್ರವರಿಯಲ್ಲಿ ಈ ರೀತಿಯ ಪ್ರವೃತ್ತಿ ಕಂಡು ಬಂದಿರುವುದು ನಿಮಗೆಲ್ಲರಿಗೂ ತಿಳಿದ ಸಂಗತಿಯಾಗಿದೆ. ಆದುದರಿಂದ ಪರಿಸ್ಥಿತಿಯನ್ನು ಈಗಲೇ ನಿಯಂತ್ರಣಕ್ಕೆ ತಾರದಿದ್ದರೆ ಮುಂದಿನ ಹಂತ ಅತ್ಯಂತ ಕಷ್ಟದಾಯಕವಾಗ ಬಹುದೆಂಬ ಆತಂಕ ಸಹಜವಾಗಿ ಹೆಚ್ಚುತ್ತಿದೆ. ಪ್ರಕರಣಗಳು ಹೆಚ್ಚುತ್ತಿರುವ ರಾಜ್ಯಗಳು ಮೂರನೇ ಅಲೆಯ ಸಂಭಾವ್ಯತೆಯನ್ನು ತಡೆಯಲು ಸಾಕಷ್ಟು ಪೂರ್ವತಯಾರಿಯ ಕ್ರಮಗಳನ್ನು ಕೈಗೊಳ್ಳುವುದು ಬಹಳ ಅವಶ್ಯಕ.

ಸ್ನೇಹಿತರೇ,

ಕೊರೊನಾ ವೈರಸ್ಸಿನ ರೂಪಾಂತರಗಳ ಸಾಧ್ಯತೆ ಬಗ್ಗೆ ತಜ್ಞರು ಹೇಳುತ್ತಿದ್ದಾರೆ. ಮತ್ತು ಪ್ರಕರಣಗಳು ಬಹಳ ದೀರ್ಘ ಅವಧಿಯವರೆಗೆ ಇದೇ ರೀತಿ ಮುಂದುವರಿದರೆ ಹೊಸ ರೂಪಾಂತರಿತ ತಳಿಗಳ ಅಪಾಯವೂ ಹೆಚ್ಚಲಿದೆ ಎನ್ನುತ್ತಿದ್ದಾರೆ. ಆದುದರಿಂದ ಕೊರೊನಾದ ಮೂರನೇ ಅಲೆಯನ್ನು ತಡೆಯಲು ಸಮರ್ಪಕ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯವಾಗಿದೆ. ನೀವು ನಿಮ್ಮ ರಾಜ್ಯಗಳಲ್ಲಿ ಅನುಸರಿಸಿದ ತಂತ್ರ ಮತ್ತು ಇಡೀ ದೇಶ ಅದನ್ನು ಜಾರಿಗೆ ತಂದ ತಂತ್ರದಂತಹದೇ ವ್ಯೂಹ ಈ ಸಂದರ್ಭದಲ್ಲಿ  ಅವಶ್ಯ. ಮತ್ತು ನಮಗೆ ಅದರ ಅನುಭವ ಲಭ್ಯವಾಗಿದೆ. ಮತ್ತು ಅದು ನಿಮಗೆ ಪರೀಕ್ಷೆ ಮಾಡಿ ಸಾಬೀತಾದ ವಿಧಾನ. ಪರೀಕ್ಷೆ, ಪತ್ತೆ, ಮತ್ತು ಚಿಕಿತ್ಸೆ ಜೊತೆಗೆ ಲಸಿಕಾ ಕಾರ್ಯಕ್ರಮದ ನಮ್ಮ ತಂತ್ರದ ಮೇಲೆ ಆದ್ಯ ಗಮನ ಕೇಂದ್ರೀಕರಿಸಿ ನಾವು ಮುನ್ನಡೆಯಬೇಕು. ನಾವು ಕಿರು ಕಂಟೈನ್ಮೆಂಟ್ ವಲಯಗಳನ್ನು ರೂಪಿಸುವ ನಿಟ್ಟಿನಲ್ಲಿ ವಿಶೇಷ ಗಮನ ಕೊಡಬೇಕು. ಪಾಸಿಟಿವಿಟಿ ದರ ಹೆಚ್ಚು ಇರುವ ಜಿಲ್ಲೆಗಳಿಗೆ ಮತ್ತು ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಿರುವ ಜಿಲ್ಲೆಗಳಿಗೆ ಹೆಚ್ಚಿನ ಗಮನ ಕೊಡಬೇಕು. ಈಶಾನ್ಯದ ನನ್ನ ಸಹೋದ್ಯೋಗಿಗಳ ಜೊತೆಗೆ ನಾನು ಮಾತನಾಡುವಾಗ ಕೆಲವು ರಾಜ್ಯಗಳು ಲಾಕ್ ಡೌನ್ ಜಾರಿ ಮಾಡದಿರುವ ಸಂಗತಿ ತಿಳಿದು ಬಂದಿತು, ಮತ್ತು ಅವರು ಅದಕ್ಕೆ ಬದಲಾಗಿ ಕಿರು ಕಂಟೈನ್ಮೆಂಟ್ ವಲಯಗಳನ್ನು ರೂಪಿಸುವುದಕ್ಕೆ ಹೆಚ್ಚಿನ ಒತ್ತನ್ನು ನೀಡಿದರು. ಮತ್ತು ಇದರಿಂದ ಅವರು ಪರಿಸ್ಥಿತಿಯನ್ನು ನಿಯಂತ್ರಿಸಿದರು. ಅಂತಹ ಜಿಲ್ಲೆಗಳಿಗೆ ಹೆಚ್ಚಿನ ಗಮನ ನೀಡಿ ಇಡೀ ರಾಜ್ಯದಲ್ಲಿ ಸಾಧ್ಯವಾದಷ್ಟು ಪ್ರಮಾಣದಲ್ಲಿ ಪರೀಕ್ಷೆಗಳನ್ನು  ಹೆಚ್ಚಿಸಬೇಕು. ಹೆಚ್ಚಿನ ಪ್ರಮಾಣದ ಸೋಂಕು ಇರುವ ಜಿಲ್ಲೆಗಳಲ್ಲಿ ಲಸಿಕಾಕರಣ ನಮಗೆ ಒಂದು ವ್ಯೂಹಾತ್ಮಕ ಸಲಕರಣೆಯಾಗಬಲ್ಲದು. ಕೊರೊನಾದಿಂದ ಉದ್ಭವವಾಗುವ ಕಠಿಣ ಪರಿಸ್ಥಿತಿಗಳನ್ನು ಲಸಿಕೆಗಳ ಸಮರ್ಪಕ ಬಳಕೆಯಿಂದ ನಿಭಾಯಿಸಬಹುದು. ಹಲವು ರಾಜ್ಯಗಳು ಈ ಅವಕಾಶವನ್ನು ಅವುಗಳ ಆರ್.ಟಿ.-ಪಿ.ಸಿ.ಆರ್. ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸಲು ಬಳಸಿಕೊಳ್ಳುತ್ತಿವೆ. ಇದು ಕೂಡಾ ಬಹಳ ಶ್ಲಾಘನೀಯ ಮತ್ತು ಅವಶ್ಯವಾದ ಕ್ರಮ. ಆರ್.ಟಿ-ಪಿ.ಸಿ.ಆರ್. ಪರೀಕ್ಷೆಗಳ ಹೆಚ್ಚಳ ವೈರಸ್ಸನ್ನು ನಿರ್ಬಂಧಿಸುವ ಬಹಳ ಪರಿಣಾಮಕಾರಿಯಾ ದಂತಹ ಕ್ರಮವಾಗಿದೆ.

ಸ್ನೇಹಿತರೇ,

ಹೊಸ ಐ.ಸಿ.ಯು. ಹಾಸಿಗೆಗಳ ನಿರ್ಮಾಣಕ್ಕೆ, ಪರೀಕ್ಷಾ ಸಾಮರ್ಥ್ಯ ವಿಸ್ತರಣೆಗೆ ಮತ್ತು ಇತರ ಎಲ್ಲಾ ಆವಶ್ಯಕತೆಗಳಿಗಾಗಿ ದೇಶದ ಎಲ್ಲಾ ರಾಜ್ಯಗಳಿಗೆ ಹಣಕಾಸನ್ನು ಒದಗಿಸಲಾಗುತ್ತದೆ.ಇತ್ತೀಚೆಗೆ ಕೇಂದ್ರ ಸರಕಾರ 23,000 ಕೋ.ರೂ.ಗಳಿಗೂ ಅಧಿಕ ಮೊತ್ತದ ಕೋವಿಡ್ ಪ್ರತಿಕ್ರಿಯಾ ಪ್ಯಾಕೇಜನ್ನು ಬಿಡುಗಡೆ ಮಾಡಿದೆ. ಈ ಬಜೆಟನ್ನು ಆರೋಗ್ಯ ಮೂಲಸೌಕರ್ಯವನ್ನು ಇನ್ನಷ್ಟು ಬಲಪಡಿಸಲು, ರಾಜ್ಯಗಳಲ್ಲಿರುವ ಮೂಲಸೌಕರ್ಯಕ್ಕೆ ಸಂಬಂಧಿಸಿದ ಕಂದಕವನ್ನು ಜೋಡಿಸಲು ತ್ವರಿತವಾಗಿ ಬಳಸಿಕೊಳ್ಳಬೇಕು ಎಂದು ನಾನು ಆಶಿಸುತ್ತೇನೆ. ಗ್ರಾಮೀಣ ಭಾಗಗಳಿಗೆ ನಾವು ವಿಶೇಷವಾಗಿ ಹೆಚ್ಚಿನ ಗಮನವನ್ನು ಕೊಡಬೇಕಾಗಿದೆ. ಅದೇ ರೀತಿ ಐ.ಟಿ. ವ್ಯವಸ್ಥೆಯ ಜಾಲವನ್ನು ಬಲಪಡಿಸುವುದು, ನಿಯಂತ್ರಣ ಕೊಠಡಿಗಳ ಸ್ಥಾಪನೆ, ಎಲ್ಲಾ ರಾಜ್ಯಗಳಲ್ಲಿಯೂ ಕಾಲ್ ಸೆಂಟರ್ ಗಳ ಸ್ಥಾಪನೆಯೂ ಬಹಳ ಮುಖ್ಯವಾಗಿ ಆಗಬೇಕಾಗಿದೆ. ಯಾಕೆಂದರೆ ಆಗ ಸಂಪನ್ಮೂಲಗಳ ದತ್ತಾಂಶಗಳು ಮತ್ತು ಅದರ ಮಾಹಿತಿ ನಾಗರಿಕರಿಗೆ ಪಾರದರ್ಶಕವಾದ ರೀತಿಯಲ್ಲಿ ಲಭಿಸುತ್ತದೆ. ರೋಗಿಗಳು ಮತ್ತು ಅವರ ಸಂಬಂಧಿಕರು  ಚಿಕಿತ್ಸೆಗಾಗಿ ಆಚೀಚೆ ಓಡಾಡಬೇಕಾದ ಅವಶ್ಯಕತೆ ಉದ್ಭವಿಸುವುದಿಲ್ಲ.

ಸ್ನೇಹಿತರೇ,

ನಿಮ್ಮ ರಾಜ್ಯಗಳಿಗೆ ಮಂಜೂರಾದ 332 ಪಿ.ಎಸ್.ಎ. ಸ್ಥಾವರಗಳಲ್ಲಿ 53 ಕಾರ್ಯಾರಂಭ ಮಾಡಿವೆ ಎಂಬುದಾಗಿ ನನಗೆ ತಿಳಿಸಲಾಗಿದೆ. ಈ ಪಿ.ಎಸ್.ಎ. ಆಮ್ಲಜನಕ ಸ್ಥಾವರಗಳನ್ನು ಸಾಧ್ಯವಾದಷ್ಟು ಬೇಗ ಸ್ಥಾಪಿಸಿ ಕಾರ್ಯಾರಂಭ ಮಾಡಬೇಕು ಎಂದು ನಾನು ಎಲ್ಲಾ ರಾಜ್ಯಗಳನ್ನು ಕೋರುತ್ತೇನೆ. ಈ ಕಾರ್ಯಕ್ಕೆ ವಿಶೇಷವಾಗಿ ಹಿರಿಯ ಅಧಿಕಾರಿಯೊಬ್ಬರನ್ನು ನೇಮಿಸಿ ಮತ್ತು 15-20 ದಿನಗಳಲ್ಲಿ ಆಂದೋಲನದೋಪಾದಿಯಲ್ಲಿ ಕೆಲಸ ಪೂರ್ಣಗೊಳಿಸಿ.

ಸ್ನೇಹಿತರೇ,

ಮಕ್ಕಳಿಗೆ ಸಂಬಂಧಿಸಿದ ಇನ್ನೊಂದು ಆತಂಕವೂ ಇದೆ. ಮಕ್ಕಳನ್ನು ಕೊರೊನಾ ಸೋಂಕಿನಿಂದ ರಕ್ಷಿಸಲು ನಾವು ನಮ್ಮ ಕಡೆಯಿಂದ ಸರ್ವ ಸಿದ್ಧತೆಗಳನ್ನೂ ಮಾಡಬೇಕು.

ಸ್ನೇಹಿತರೇ,

ಕಳೆದ ಎರಡು ವಾರಗಳಲ್ಲಿ ನಾವು ಹಲವು ಯುರೋಪ್ ದೇಶಗಳಲ್ಲಿ ಪ್ರಕರಣಗಳು ಬಹಳ ವೇಗದಲ್ಲಿ ಹೆಚ್ಚಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಪಶ್ಚಿಮದತ್ತ ನೋಡಿದರೆ ಪ್ರಕರಣಗಳು ಬಹಳ ವೇಗದಲ್ಲಿ ಹೆಚ್ಚುತ್ತಿವೆ. ಅದು ಯುರೋಪಿನ ದೇಶಗಳಿರಲಿ, ಅಮೆರಿಕಾ ಇರಲಿ, ಅಥವಾ ಪೂರ್ವದ ದೇಶಗಳಾದ ಬಾಂಗ್ಲಾದೇಶ, ಮ್ಯಾನ್ಮಾರ್, ಇಂಡೋನೇಶಿಯಾ ಮತ್ತು ಥೈಲ್ಯಾಂಡ್ ಇರಲಿ ಪ್ರಕರಣಗಳು ಹೆಚ್ಚುತ್ತಿವೆ. ವಾಸ್ತವ ಎಂದರೆ ಕೆಲವೆಡೆ ಪ್ರಕರಣಗಳು ನಾಲ್ಕು ಪಟ್ಟು ಹೆಚ್ಚಾಗಿವೆ. ಕೆಲವೆಡೆ ಎಂಟು ಪಟ್ಟು ಮತ್ತು ಕೆಲವೆಡೆ ಹತ್ತು ಪಟ್ಟು ಹೆಚ್ಚಿವೆ. ಇದು ಇಡೀ ಜಗತ್ತಿಗೆ ಮತ್ತು ನಮಗೆ ಕೂಡಾ ಎಚ್ಚರಿಕೆಯ ಸಂಗತಿಯಾಗಿದೆ. ನಾವು ಜನತೆಗೆ ಪದೇ ಪದೇ ನೆನಪು ಮಾಡಿಕೊಡಬೇಕಾಗಿದೆ ಏನೆಂದರೆ, ಕೊರೊನಾ ನಮ್ಮ ನಡುವಿನಿಂದ ಹೋಗಿಲ್ಲ ಎಂದು. ಅನ್ ಲಾಕ್ ಬಳಿಕ ಬಹಳಷ್ಟು ಸ್ಥಳಗಳಿಂದ ಮೂಡಿ ಬರುತ್ತಿರುವ ಚಿತ್ರಗಳು ಈ ಕಳವಳವನ್ನು ಇನ್ನಷ್ಟು ಹೆಚ್ಚಿಸುತ್ತಿವೆ. ಈ ಬಗ್ಗೆ ನಾನು ನನ್ನ ಆತಂಕವನ್ನು ಈಶಾನ್ಯದ ನನ್ನ ಎಲ್ಲಾ ಸ್ನೇಹಿತರ ಜೊತೆ ಹಂಚಿಕೊಂಡಿದ್ದೇನೆ. ಇಂದು ಕೂಡಾ ನಾನು ಈ ಅಂಶವನ್ನು ಮತ್ತೊಮ್ಮೆ ಒತ್ತಿ ಹೇಳಲು ಇಚ್ಛಿಸುತ್ತೇನೆ. ಇಂದು ನಮ್ಮೊಂದಿಗೆ ಸೇರಿರುವ ರಾಜ್ಯಗಳಲ್ಲಿ ಹಲವಾರು ಮಹಾನಗರಗಳಿವೆ. ಮತ್ತು ಅವುಗಳು ಬಹಳ ನಿಬಿಡವಾದ ಜನ ದಟ್ಟಣೆಯನ್ನು ಹೊಂದಿವೆ. ನಾವಿದನ್ನು ಮನಸ್ಸಿನಲ್ಲಿಡಬೇಕು. ನಾವು ಸಾರ್ವಜನಿಕ ಸ್ಥಳಗಳಲ್ಲಿ ಜನದಟ್ಟಣೆಯನ್ನು ತಡೆಯಬೇಕು ಮತ್ತು ನಾವೆಲ್ಲರೂ ಜಾಗರೂಕರಾಗಿರಬೇಕು.

ಇತರ ರಾಜಕೀಯ ಪಕ್ಷಗಳು, ಸಾಮಾಜಿಕ ಸಂಘಟನೆಗಳು, ಎನ್.ಜಿ.ಒ.ಗಳು ಮತ್ತು ನಾಗರಿಕ ಸಮಾಜದ ಸಹಾಯವನ್ನು ಪಡೆದುಕೊಂಡು ನಾವು ನಿರಂತರವಾಗಿ ಜನತೆಯಲ್ಲಿ ಜಾಗೃತಿಯನ್ನು ಮೂಡಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ನಿಮ್ಮ ವಿಸ್ತಾರವಾದ ಅನುಭವ ಬಹಳ ಉಪಯುಕ್ತವಾದೀತು ಎಂಬ ಬಗ್ಗೆ ನನಗೆ ಖಾತ್ರಿ ಇದೆ. ಈ ಪ್ರಮುಖ ಸಭೆಗೆ ಹಾಜರಾಗಲು ತಮ್ಮ ಸಮಯವನ್ನು ವಿನಿಯೋಗಿಸಿದುದಕ್ಕಾಗಿ ತಮಗೆ ಧನ್ಯವಾದಗಳು!. ಎಲ್ಲಾ ಗೌರವಾನ್ವಿತ ಮುಖ್ಯಮಂತ್ರಿಗಳು ಪ್ರಸ್ತಾಪಿಸಿದಂತೆ, ನಾನು ಪ್ರತೀ ಸಂದರ್ಭದಲ್ಲಿಯೂ ಲಭ್ಯ ಇರುತ್ತೇನೆ ಮತ್ತು ನಿಮ್ಮೆಲ್ಲರೊಂದಿಗೆ ಸಂಪರ್ಕದಲ್ಲಿರುತ್ತೇನೆ. ಭವಿಷ್ಯದಲ್ಲಿಯೂ ಕೂಡಾ ನಾನು ಸದಾ ಲಭ್ಯನಿರುತ್ತೇನೆ, ಆ ಮೂಲಕ ನಾವು ರಾಜ್ಯಗಳನ್ನು ಒಗ್ಗೂಡಿ ರಕ್ಷಿಸಬಹುದು ಮತ್ತು ಈ ಬಿಕ್ಕಟ್ಟಿನಿಂದ ಮನುಕುಲವನ್ನು ಪಾರು ಮಾಡಬಹುದು. ನಾನು ನಿಮ್ಮೆಲ್ಲರಿಗೂ ಶುಭವನ್ನು ಹಾರೈಸುತ್ತೇನೆ. ಬಹಳ ಧನ್ಯವಾದಗಳು.

 

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Cabinet approves minimum support price for Copra for the 2025 season

Media Coverage

Cabinet approves minimum support price for Copra for the 2025 season
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ಡಿಸೆಂಬರ್ 2024
December 21, 2024

Inclusive Progress: Bridging Development, Infrastructure, and Opportunity under the leadership of PM Modi