Quote* ಭಾರತದಲ್ಲಿ, ಧಾರ್ಮಿಕ ಸಂಪ್ರದಾಯಗಳು ದೈನಂದಿನ ಜೀವನದೊಂದಿಗೆ ಆಳವಾಗಿ ಹೆಣೆದುಕೊಂಡಿವೆ: ಪ್ರಧಾನಮಂತ್ರಿ
Quote* ಉಪವಾಸವು ಆಲೋಚನಾ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ, ಹೊಸ ದೃಷ್ಟಿಕೋನಗಳನ್ನು ಒದಗಿಸುತ್ತದೆ ಮತ್ತು ರೂಢಿಗತವಲ್ಲದ ಮಾದರಿಯಲ್ಲಿ (ಔಟ್‌ ಆಫ್‌ ದಿ ಬಾಕ್ಸ್‌) ಆಲೋಚನೆಗೆ ಉತ್ತೇಜಿಸುತ್ತದೆ: ಪ್ರಧಾನಮಂತ್ರಿ
Quote* ಸವಾಲುಗಳು ಜೀವನದ ಭಾಗ, ಆದರೆ ಅವು ವ್ಯಕ್ತಿಯೊಬ್ಬರ ಜೀವನದ ಉದ್ದೇಶವನ್ನು ನಿರ್ಧರಿಸಬಾರದು: ಪ್ರಧಾನಮಂತ್ರಿ
Quote* ಅನೇಕ ಸ್ವಾತಂತ್ರ್ಯ ಹೋರಾಟಗಾರರು ಶಾಶ್ವತವಾದ ಪರಿಣಾಮಗಳನ್ನು ಬೀರಿದರಾದರೂ, ಸತ್ಯವನ್ನು ಅಡಿಪಾಯವಾಗಿ ಹೊಂದಿದ್ದ ಜನಾಂದೋಲನವನ್ನು ಮುನ್ನಡೆಸುವ ಮೂಲಕ ರಾಷ್ಟ್ರವನ್ನು ಜಾಗೃತಗೊಳಿಸಿದವರು ಮಹಾತ್ಮ ಗಾಂಧಿ: ಪ್ರಧಾನಮಂತ್ರಿ
Quote* ಕಸ ಗುಡಿಸುವವರಿಂದ ಹಿಡಿದು ಶಿಕ್ಷಕರವರೆಗೆ, ನೇಕಾರರಿಂದ ಆರೋಗ್ಯ ಸೇವಕರವರೆಗೆ ಪ್ರತಿಯೊಬ್ಬ ವ್ಯಕ್ತಿಯನ್ನು ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಳ್ಳುವಲ್ಲಿ ಗಾಂಧೀಜಿಯವರ ಸಾಮರ್ಥ್ಯ ನಿಜಕ್ಕೂ ಗಮನಾರ್ಹವಾದುದು: ಪ್ರಧಾನಮಂತ್ರಿ
Quote* ನಾನು ವಿಶ್ವ ನಾಯಕನೊಂದಿಗೆ ಕೈಕುಲುಕಿದಾಗ, ಅದು ಮೋದಿ ಆಗಿರುವುದಿಲ್ಲ, ಅಲ್ಲಿರುವುದು 140 ಕೋಟಿ ಭಾರತೀಯರು: ಪ್ರಧಾನಮಂತ್ರಿ
Quote* ನಾವು ಶಾಂತಿಯ ಬಗ್ಗೆ ಮಾತನಾಡಿದಾಗ ಜಗತ್ತು ಭಾರತದತ್ತ ಕಿವಿಗೊಡುತ್ತದೆ, ನಮ್ಮ ಬಲವಾದ ಸಾಂಸ್ಕೃತಿಕ ಮತ್ತು ಐತಿಹಾಸಿಕ ಹಿನ್ನೆಲೆಯಿಂದ ಇದು ಬೆಂಬಲಿಸಲ್ಪಟ್ಟಿದೆ: ಪ್ರಧಾನಮಂತ್ರಿ
Quote* ಕ್ರೀಡೆಯು ರಾಷ್ಟ್ರಗಳಾದ್ಯಂತ ಜನರನ್ನು ಒಟ್ಟುಗೂಡಿಸುವ ಮೂಲಕ ಮತ್ತು ಅವರನ್ನು ಆಳವಾದ ಮಟ್ಟದಲ್ಲಿ ಸಂಪರ್ಕಿಸುವ ಮೂಲಕ ಜಗತ್ತನ್ನು ಶಕ್ತಿಯುತಗೊಳಿಸುತ್ತದೆ: ಪ್ರಧಾನಮಂತ್ರಿ
Quote* ಜಾಗತಿಕ ಸ್ಥಿರತೆ ಮತ್ತು ಸಮೃದ್ಧಿಗೆ ಭಾರತ ಮತ್ತು ಚೀನಾ ನಡುವಿನ ಸಹಕಾರ ಅತ್ಯಗತ್ಯ: ಪ್ರಧಾನಮಂತ್ರಿ
Quote* ʻಕೃತಕ ಬುದ್ಧಿಮತ್ತೆʼಯ(ಎಐ) ಅಭಿವೃದ್ಧಿಯು ಮೂಲಭೂತವಾಗಿ ಸಹಯೋಗದ ಪ್ರಯತ್ನವಾಗಿದೆ. ಯಾವುದೇ ರಾಷ್ಟ್ರವು ಅದನ್ನು ಸಂಪೂರ್ಣವಾಗಿ ಸ್ವಂತವಾಗಿ ಅಭಿವೃದ್ಧಿಪಡಿಸಲು ಸಾಧ್ಯವಿಲ್ಲ: ಪ್ರಧಾನಮಂತ್ರಿ
Quote* ಕೃತಕ ಬುದ್ಧಿಮತ್ತೆಯು ಮಾನವನ ಕಲ್ಪನೆಯ ಆಧಾರದ ಮೇಲೆ ಅನೇಕ ವಿಷಯಗಳನ್ನು ಸೃಷ್ಟಿಸಬಹುದು. ಆದರೆ ಯಾವುದೇ ತಂತ್ರಜ್ಞಾನವು ಮಾನವ ಮನಸ್ಸಿನ ಅಮಿತ ಸೃಜನಶೀಲತೆ ಮತ್ತು ಕಲ್ಪನೆಯ ಸ್ಥಾನವನ್ನು ತುಂಬಲು ಎಂದಿಗೂ ಸಾಧ್ಯವಿಲ್ಲ: ಪ್ರಧಾನಮಂತ್ರಿ
Quote* ನನ್ನ ದೇಶಕ್ಕಾಗಿ ಕಠಿಣ ಪರಿಶ್ರಮ ಪಡುವುದರಲ್ಲಿ ನಾನು ಎಂದಿಗೂ ಹಿಂದೆ ಬೀಳುವುದಿಲ್ಲ, ಕೆಟ್ಟ ಉದ್ದೇಶಗಳೊಂದಿಗೆ ಎಂದಿಗೂ ವರ್ತಿಸುವುದಿಲ್ಲ ಮತ್ತು ವೈಯಕ್ತಿಕ ಲಾಭಕ್ಕಾಗಿ ಎಂದಿಗೂ ಏನನ್ನೂ ಮಾಡುವುದಿಲ್ಲ: ಪ್ರಧಾನಮಂತ್ರಿ

ಪ್ರಧಾನಮಂತ್ರಿ ನರೇಂದ್ರ ಮೋದಿ: ನನ್ನ ಶಕ್ತಿ ಇರುವುದು ಮೋದಿಯಾಗಿರುವುದರಲ್ಲಿ ಅಲ್ಲ; ಅದು 140 ಕೋಟಿ ಭಾರತೀಯರಿಂದ ಬಂದಿದೆ, ಸಾವಿರಾರು ವರ್ಷಗಳ ನಮ್ಮ ದೇಶದ ಶ್ರೀಮಂತ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯಿಂದ ಬಂದಿದೆ. ಅದೇ ನನ್ನ ನಿಜವಾದ ಶಕ್ತಿ. ನಾನು ಎಲ್ಲಿಗೆ ಹೋದರೂ, ಮೋದಿಯಾಗಿ ಹೋಗುವುದಿಲ್ಲ - ವೇದಗಳಿಂದ ವಿವೇಕಾನಂದರವರೆಗೆ ನಮ್ಮ ನಾಗರಿಕತೆಯ ಸಾವಿರಾರು ವರ್ಷಗಳ ಹಳೆಯ ಶ್ರೇಷ್ಠ ಸಂಪ್ರದಾಯಗಳನ್ನು ನನ್ನೊಂದಿಗೆ ಕೊಂಡೊಯ್ಯತೇನೆ. ನಾನು 140 ಕೋಟಿ ಜನರನ್ನು, ಅವರ ಕನಸುಗಳನ್ನು ಮತ್ತು ಅವರ ಆಕಾಂಕ್ಷೆಗಳನ್ನು ಪ್ರತಿನಿಧಿಸುತ್ತೇನೆ. ಅದಕ್ಕಾಗಿಯೇ, ನಾನು ಯಾವುದೇ ವಿಶ್ವ ನಾಯಕರೊಂದಿಗೆ ಕೈಕುಲುಕಿದಾಗ, ಅದು ಕೇವಲ ಮೋದಿಯವರ ಕೈ ಆಗಿರುವುದಿಲ್ಲ - ಅದು 140 ಕೋಟಿ ಭಾರತೀಯರ ಸಾಮೂಹಿಕ ಕೈ ಆಗಿರುತ್ತದೆ. ನನ್ನ ಶಕ್ತಿ ಮೋದಿಯದ್ದಲ್ಲ; ಅದು ಭಾರತದ ಶಕ್ತಿ. ನಾವು ಶಾಂತಿಯ ಬಗ್ಗೆ ಮಾತನಾಡುವಾಗಲೆಲ್ಲಾ, ಜಗತ್ತು ಕೇಳುತ್ತದೆ, ಏಕೆಂದರೆ ಇದು ಬುದ್ಧನ ನಾಡು, ಮಹಾತ್ಮ ಗಾಂಧಿಯವರ ನಾಡು. ನಾವು ಸಂಘರ್ಷದ ಪ್ರತಿಪಾದಕರಲ್ಲ; ನಾವು ಸಾಮರಸ್ಯವನ್ನು ಪ್ರತಿಪಾದಿಸುತ್ತೇವೆ. ನಾವು ಪ್ರಕೃತಿಯೊಂದಿಗೆ ಸಂಘರ್ಷ ಅಥವಾ ರಾಷ್ಟ್ರಗಳ ನಡುವಿನ ಕಲಹವನ್ನು ಬಯಸುವುದಿಲ್ಲ - ನಾವು ಸಹಕಾರದಲ್ಲಿ ನಂಬಿಕೆ ಇಡುವ ಜನರು ಮತ್ತು ನಾವು ಶಾಂತಿಯನ್ನು ಉತ್ತೇಜಿಸಲು ಯಾವುದೇ ರೀತಿಯಲ್ಲಿ ಕೊಡುಗೆ ನೀಡಲು ಸಾಧ್ಯವಾದರೆ, ನಾವು ಯಾವಾಗಲೂ ಅದನ್ನು ಮಾಡಲು ಪ್ರಯತ್ನಿಸುತ್ತೇವೆ. ನನ್ನ ಜೀವನವು ಅತ್ಯಂತ ಬಡತನದಿಂದ ಬಂದಿದೆ, ಆದರೂ ನಾವು ಅದರ ಹೊರೆಯನ್ನು ಎಂದಿಗೂ ಅನುಭವಿಸಲಿಲ್ಲ. ಜೀವನದುದ್ದಕ್ಕೂ ಬೂಟುಗಳನ್ನು ಧರಿಸಿದ ವ್ಯಕ್ತಿಗೆ ಇದ್ದಕ್ಕಿದ್ದಂತೆ ಅವುಗಳಿಲ್ಲದೆ ಹೋದರೆ ಅವನು ಕಷ್ಟಪಡಬೇಕಾಗಬಹುದು. ಆದರೆ ಎಂದಿಗೂ ಬೂಟುಗಳನ್ನು ಧರಿಸದವರಿಗೆ, ಅಭಾವದ ಭಾವನೆಯೇ ಇರುವುದಿಲ್ಲ - ನಾವು ನಮ್ಮ ಜೀವನವನ್ನು ಅದು ಇದ್ದಂತೆಯೇ ಸರಳವಾಗಿ ಬದುಕಿದ್ದೇವೆ.

ನಾನು ಪ್ರಧಾನಿಯಾದಾಗ, ಹೊಸ ಆರಂಭದ ಆಶಯದೊಂದಿಗೆ ಪಾಕಿಸ್ತಾನವನ್ನು ನನ್ನ ಪ್ರಮಾಣವಚನ ಸಮಾರಂಭಕ್ಕೆ ಆಹ್ವಾನಿಸುವ ಮೂಲಕ ಮಹತ್ವದ ಹೆಜ್ಜೆ ಇರಿಸಿದೆ. ಆದಾಗ್ಯೂ, ಸದ್ಭಾವನೆಯ ಪ್ರತಿಯೊಂದು ಪ್ರಯತ್ನವೂ ನಿರಾಶೆಯಲ್ಲಿ ಕೊನೆಯಾಯಿತು. ಬುದ್ಧಿವಂತಿಕೆಯು ಮೇಲುಗೈ ಸಾಧಿಸುತ್ತದೆ, ಅವರನ್ನು ಶಾಂತಿ ಮತ್ತು ಸಮೃದ್ಧಿಯತ್ತ ಕೊಂಡೊಯ್ಯುತ್ತದೆ ಎಂದು ನಾವು ಇನ್ನೂ ಆಶಿಸುತ್ತೇವೆ. ಅಲ್ಲಿನ ಜನರು ಉತ್ತಮ ಭವಿಷ್ಯಕ್ಕಾಗಿ ಹಂಬಲಿಸುತ್ತಿದ್ದಾರೆ ಎಂದು ನನಗೆ ವಿಶ್ವಾಸವಿದೆ. ಟೀಕೆಗೆ ಸಂಬಂಧಿಸಿದಂತೆ - ನಾನು ಅದನ್ನು ಹೇಗೆ ನಿಭಾಯಿಸುತ್ತೇನೆ? ನಾನು ಅದನ್ನು ಒಂದೇ ವಾಕ್ಯದಲ್ಲಿ ಸಂಕ್ಷಿಪ್ತವಾಗಿ ಹೇಳುವುದಾದರೆ, ನಾನು ಅದನ್ನು ಸ್ವಾಗತಿಸುತ್ತೇನೆ. ಟೀಕೆ ಪ್ರಜಾಪ್ರಭುತ್ವದ ಆತ್ಮ ಎಂದು ನಾನು ದೃಢವಾಗಿ ನಂಬುತ್ತೇನೆ. ನಾನು ಯುವಜನತೆಗೆ ಹೇಳುವುದೆಂದರೆ, ಜೀವನದಲ್ಲಿ ರಾತ್ರಿ ಎಷ್ಟೇ ಕತ್ತಲೆಯಾಗಿದ್ದರೂ, ನೆನಪಿಡಿ - ಇದು ಕೇವಲ ಒಂದು ರಾತ್ರಿ, ಬೆಳಿಗ್ಗೆ ಖಂಡಿತವಾಗಿಯೂ ಬರುತ್ತದೆ.

 

|

ಲೆಕ್ಸ್ ಫ್ರಿಡ್ಮನ್: ಭಾರತದ ಪ್ರಧಾನಿ ನರೇಂದ್ರ ಮೋದಿಯವರೊಂದಿಗಿನ ನನ್ನ ಮಾತುಕತೆಯನ್ನು ನೀವು ಕೇಳಲಿದ್ದೀರಿ. ಈ ಮಾತುಕತೆಯು ನನ್ನ ಇದುವರೆಗಿನ ಅತ್ಯಂತ ಆಳವಾದ ಚರ್ಚೆಗಳಲ್ಲಿ ಒಂದಾಗಿದೆ - ಇದು ನನ್ನ ಮೇಲೆ ಅಳಿಸಲಾಗದ ಪ್ರಭಾವ ಬೀರಿತು ಮತ್ತು ನಾನು ಅದರ ಬಗ್ಗೆ ನನ್ನ ಆಲೋಚನೆಗಳನ್ನು ಹಂಚಿಕೊಳ್ಳಲು ಬಯಸುತ್ತೇನೆ. ನೀವು ಬಯಸಿದರೆ, ನಮ್ಮ ಮಾತುಕತೆಯನ್ನು ಕೇಳಲು ನೀವು ನೇರವಾಗಿ ಮುಂದುವರಿಯಬಹುದು.

ನರೇಂದ್ರ ಮೋದಿಯವರ ಜೀವನಗಾಥೆ ಅಸಾಮಾನ್ಯವಾದುದು. ಬಡತನದಿಂದ ಮೇಲೆದ್ದು ಬಂದ ಅವರು, ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ನಾಯಕರಾಗಿ 140 ಕೋಟಿ ಜನರ ರಾಷ್ಟ್ರಕ್ಕೆ ಮಾರ್ಗದರ್ಶನ ನೀಡಿದರು. ಅವರು ಒಮ್ಮೆ ಮಾತ್ರವಲ್ಲ, ಮೂರು ಬಾರಿ ಆಯ್ಕೆಯಾಗಿದ್ದಾರೆ, ಪ್ರತಿಯೊಂದೂ ನಿರ್ಣಾಯಕ ಜನಾದೇಶ ಪಡೆದಿದ್ದಾರೆ. ವೈವಿಧ್ಯಮಯ ಸಂಸ್ಕೃತಿಗಳು, ಸಮುದಾಯಗಳು ಮತ್ತು ಧಾರ್ಮಿಕ, ಸಾಮಾಜಿಕ ಮತ್ತು ರಾಜಕೀಯ ಸವಾಲುಗಳ ಸಂಕೀರ್ಣ ಇತಿಹಾಸವನ್ನು ಹೊಂದಿರುವ ದೇಶವಾದ ಭಾರತವನ್ನು ಒಗ್ಗಟ್ಟಿನಿಂದ ಇರಿಸಿಕೊಳ್ಳಲು ಒಬ್ಬ ನಾಯಕನಾಗಿ ಅವರು ಅನೇಕ ಹೋರಾಟಗಳನ್ನು ಮಾಡಿದ್ದಾರೆ. ಅವರು ದಿಟ್ಟ ಮತ್ತು ಕೆಲವೊಮ್ಮೆ ವಿವಾದಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ಹೆಸರುವಾಸಿಯಾಗಿದ್ದಾರೆ. ಅದಕ್ಕಾಗಿಯೇ ಲಕ್ಷಾಂತರ ಜನರು ಅವರನ್ನು ಮೆಚ್ಚುತ್ತಾರೆ, ಅನೇಕರು ಅವರನ್ನು ಟೀಕಿಸುತ್ತಾರೆ. ನಮ್ಮ ಮಾತುಕತೆಯಲ್ಲಿ, ನಾವು ಈ ಅಂಶಗಳನ್ನು ಆಳವಾಗಿ ಚರ್ಚಿಸಿದ್ದೇವೆ. ಅವರು ಜಾಗತಿಕ ನಾಯಕರಿಂದ ಗೌರವವನ್ನು ಗಳಿಸುತ್ತಾರೆ ಮತ್ತು ಪ್ರಸ್ತುತ ಸಂಘರ್ಷದಲ್ಲಿ ಸಿಲುಕಿರುವ ರಾಷ್ಟ್ರಗಳ ನಾಯಕರು - ಅದು ಅಮೆರಿಕ-ಚೀನಾ, ಉಕ್ರೇನ್-ರಷ್ಯಾ, ಇಸ್ರೇಲ್-ಪ್ಯಾಲೆಸ್ಟೈನ್ ಅಥವಾ ಮಧ್ಯಪ್ರಾಚ್ಯ ಆಗಿರಬಹುದು - ಅವರನ್ನು ಶಾಂತಿಯ ಸೈನಿಕ ಮತ್ತು ಸ್ನೇಹಿತ ಎಂದು ಪರಿಗಣಿಸುತ್ತಾರೆ. ಅವರನ್ನು ವಿಶ್ವಾದ್ಯಂತ ಗುರುತಿಸಲಾಗಿದೆ. ಇತಿಹಾಸದ ಈ ಕ್ಷಣದಲ್ಲಿ, ಮಾನವೀಯತೆಯು ಸೂಕ್ಷ್ಮವಾದ ಕವಲುದಾರಿಯಲ್ಲಿ ನಿಂತಿದೆ ಎಂದು ನಾನು ಅರಿತುಕೊಂಡಿದ್ದೇನೆ. ಯುದ್ಧಗಳು ಉಲ್ಬಣಗೊಳ್ಳುವ ಸಾಧ್ಯತೆ ನಮ್ಮ ಮೇಲೆ ಇದೆ. ಸಂಘರ್ಷಗಳು ರಾಷ್ಟ್ರಗಳನ್ನು ಮೀರಿ ಹರಡಬಹುದು ಮತ್ತು ಜಗತ್ತನ್ನು ಆವರಿಸಬಹುದು. ಪರಮಾಣು ಶಸ್ತ್ರಸಜ್ಜಿತ ರಾಷ್ಟ್ರಗಳ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಗಳು, ಕೃತಕ ಬುದ್ಧಿಮತ್ತೆಯಿಂದ ಪರಮಾಣು ಸಮ್ಮಿಳನದವರೆಗೆ ತ್ವರಿತ ತಾಂತ್ರಿಕ ಪ್ರಗತಿಯೊಂದಿಗೆ, ನಾವು ಊಹಿಸಲು ಸಾಧ್ಯವಾಗದ ರೀತಿಯಲ್ಲಿ ಸಮಾಜ ಮತ್ತು ಭೌಗೋಳಿಕ ರಾಜಕೀಯವನ್ನು ಪರಿವರ್ತಿಸಲು ಸಜ್ಜಾಗಿವೆ. ಈ ಬದಲಾವಣೆಗಳು ರಾಜಕೀಯ ಮತ್ತು ಸಾಂಸ್ಕೃತಿಕ ಕ್ರಾಂತಿಯನ್ನು ಪ್ರಚೋದಿಸಬಹುದು. ಈಗ, ಎಂದಿಗಿಂತಲೂ ಹೆಚ್ಚಾಗಿ, ನಮಗೆ ಮಹಾನ್ ನಾಯಕರು ಬೇಕಾಗಿದ್ದಾರೆ - ವಿಭಜಿಸುವ ಬದಲು ಒಗ್ಗೂಡಿಸುವ ನಾಯಕರು, ತಮ್ಮ ರಾಷ್ಟ್ರಗಳನ್ನು ರಕ್ಷಿಸುವಾಗ ಶಾಂತಿಗೆ ಆದ್ಯತೆ ನೀಡುವವರು, ಆದರೆ ಒಟ್ಟಾರೆಯಾಗಿ ಮಾನವೀಯತೆಯ ಯೋಗಕ್ಷೇಮವನ್ನು ಪರಿಗಣಿಸುವವರು ಬೇಕಾಗಿದ್ದಾರೆ. ಅದಕ್ಕಾಗಿಯೇ ಪ್ರಧಾನಿ ಮೋದಿಯವರೊಂದಿಗಿನ ನನ್ನ ಸಂಭಾಷಣೆ ಅತ್ಯಂತ ಮಹತ್ವದ್ದಾಗಿದೆ. ನಮ್ಮ ಚರ್ಚೆಯ ಕೆಲವು ಅಂಶಗಳು ನಾನು ಅಧಿಕಾರದಿಂದ ಪ್ರಭಾವಿತನಾಗಿದ್ದೇನೆ ಎಂದು ತೋರುವಂತೆ ಮಾಡಬಹುದು. ಅದು ಹಾಗಲ್ಲ - ಎಂದಿಗೂ ಆಗಿಲ್ಲ, ಎಂದಿಗೂ ಆಗುವುದಿಲ್ಲ. ನಾನು ಯಾರನ್ನೂ, ಅದರಲ್ಲೂ ಅಧಿಕಾರದಲ್ಲಿರುವವರನ್ನು ಆರಾಧಿಸುವುದಿಲ್ಲ. ಅಧಿಕಾರ, ಹಣ ಅಥವಾ ಖ್ಯಾತಿಯ ಆಕರ್ಷಣೆಯಲ್ಲಿ ನನಗೆ ನಂಬಿಕೆಯಿಲ್ಲ, ಏಕೆಂದರೆ ಅವು ಹೃದಯ, ಮನಸ್ಸು ಮತ್ತು ಆತ್ಮವನ್ನು ಭ್ರಷ್ಟಗೊಳಿಸಬಹುದು.

ಕ್ಯಾಮೆರಾದ ಮುಂದೆ ಅಥವಾ ಕ್ಯಾಮೆರಾದ ಹಿಂದೆ, ನನ್ನ ಗುರಿ ಯಾವಾಗಲೂ ಮನುಷ್ಯನ ಮನಸ್ಸನ್ನು ಅರ್ಥಮಾಡಿಕೊಳ್ಳುವುದು - ಅದರ ಸಾಧಕ-ಬಾಧಕಗಳೆರಡನ್ನೂ, ನಾನು ಎಲ್ಲವನ್ನೂ ತಿಳಿದುಕೊಳ್ಳಲು ಮತ್ತು ಅರ್ಥಮಾಡಿಕೊಳ್ಳಲು ಬಯಸುತ್ತೇನೆ, ಅದು ಒಳ್ಳೆಯದಾಗಿರಲಿ ಅಥವಾ ಕೆಟ್ಟದಾಗಿರಲಿ. ಮತ್ತು ನಾನು ಆಳವಾಗಿ ಯೋಚಿಸಿದಾಗ, ನಾವೆಲ್ಲರೂ ಒಂದೇ ಎಂದು ನನಗೆ ಅರಿವಾಗುತ್ತದೆ. ನಮ್ಮಲ್ಲಿ ಪ್ರತಿಯೊಬ್ಬರೂ ಒಳಗೆ ಬೆಳಕು ಮತ್ತು ಕತ್ತಲೆ ಎರಡನ್ನೂ ಹೊಂದಿರುತ್ತಾರೆ. ನಾವು ವಿಶ್ವ ನಾಯಕರಾಗಿರಲಿ, ಭಾರತೀಯ ಕಾರ್ಮಿಕರಾಗಿರಲಿ ಅಥವಾ ಅಮೆರಿಕದಲ ರೈತರು ಮತ್ತು ಕಾರ್ಮಿಕರಾಗಿರಲಿ, ನಮಗೆಲ್ಲರಿಗೂ ನಮ್ಮದೇ ಆದ ಹೋರಾಟಗಳು ಮತ್ತು ಭರವಸೆಗಳಿವೆ.

ಇದರ ಬಗ್ಗೆ ಹೇಳುವುದಾದರೆ, ನಾನು ಪ್ರಪಂಚದಾದ್ಯಂತ ಮತ್ತು ಅಮೆರಿಕಾದಾದ್ಯಂತ ನನ್ನ ಪ್ರಯಾಣವನ್ನು ಮುಂದುವರಿಸುವಾಗ, ಕ್ಯಾಮೆರಾ ಇಲ್ಲದೆ ಅಥವಾ ಕ್ಯಾಮೆರಾದಲ್ಲಿ ಅನೇಕ ಅಮೇರಿಕನ್ ಕಾರ್ಮಿಕರು ಮತ್ತು ರೈತರೊಂದಿಗೆ ತೊಡಗಿಸಿಕೊಳ್ಳಲು ಯೋಜಿಸುತ್ತಿದ್ದೇನೆ. ನರೇಂದ್ರ ಮೋದಿಯವರ ಬಗ್ಗೆ ನನ್ನ ಚಿಂತನೆಗಳು ಕೇವಲ ಅವರ ನಾಯಕತ್ವದ ಬಗ್ಗೆ ಮಾತ್ರವಲ್ಲ, ಅವರ ವ್ಯಕ್ತಿತ್ವದ ಬಗ್ಗೆಯೂ ಇವೆ. ಕ್ಯಾಮೆರಾ ಮುಂದೆ ಮತ್ತು ಹೊರಗೆ ನಾನು ಅವರೊಂದಿಗೆ ಕಳೆದ ಕೆಲವು ಗಂಟೆಗಳು ಆಳವಾದ ಚರ್ಚೆಗಳಿಂದ ತುಂಬಿದ್ದವು. ಅಲ್ಲಿ ಆತ್ಮೀಯತೆ, ಸಹಾನುಭೂತಿ, ಹಾಸ್ಯ ಮತ್ತು ಅಂತರಂಗ ಮತ್ತು ಬಹಿರಂಗ ಶಾಂತಿಯ ಭಾವನೆ ಇತ್ತು. ನಮ್ಮ ಮಾತುಕತೆಗಳು ಸಮಯದ ಮಿತಿ ಇರಲಿಲ್ಲ. ಹಿನ್ನೆಲೆಯನ್ನು ಲೆಕ್ಕಿಸದೆ ಅವರು ಎಲ್ಲರನ್ನೂ ಒಂದೇ ರೀತಿಯ ಸಹಾನುಭೂತಿ ಮತ್ತು ತಿಳುವಳಿಕೆಯಿಂದ ನಡೆಸಿಕೊಳ್ಲೂತ್ತಾರೆ ಎಂದು ನಾನು ಕೇಳಿದ್ದೇನೆ. ಅವರ ಮಾತುಕತೆಯಲ್ಲಿನ ಈ ಸ್ಥಿರತೆಯು ಅನುಭವವನ್ನು ನಿಜವಾಗಿಯೂ ಗಮನಾರ್ಹವಾಗಿಸಿತು – ಅದನ್ನು ನಾನು ಎಂದಿಗೂ ಮರೆಯಲಾಗುವುದಿಲ್ಲ.

ಅಂದಹಾಗೆ, ನಾನು ನಿಮಗೆ ಇನ್ನೊಂದು ವಿಷಯವನ್ನು ಹೇಳುತ್ತೇನೆ - ನೀವು ಈ ಮಾತುಕತೆಯ ಉಪಶೀರ್ಷಿಕೆಗಳನ್ನು ಇಂಗ್ಲಿಷ್, ಹಿಂದಿ ಮತ್ತು ಇತರ ಹಲವು ಭಾಷೆಗಳಲ್ಲಿ ಓದಬಹುದು. ಹೆಚ್ಚುವರಿಯಾಗಿ, ನೀವು ಈ ಭಾಷೆಗಳಲ್ಲಿ ಈ ವೀಡಿಯೊವನ್ನು ಕೇಳಬಹುದು. ನೀವು ಅದನ್ನು ದ್ವಿಭಾಷಾ ಸ್ವರೂಪದಲ್ಲಿ ಕೇಳುವ ಆಯ್ಕೆಯನ್ನು ಹೊಂದಿದ್ದೀರಿ, ಅಲ್ಲಿ ನಾನು ಇಂಗ್ಲಿಷ್‌ ನಲ್ಲಿ ಮಾತನಾಡುತ್ತೇನೆ, ಆದರೆ ಪ್ರಧಾನಿ ಮೋದಿಯವರು ಹಿಂದಿಯಲ್ಲಿ ಮಾತನಾಡುತ್ತಾರೆ. ನೀವು ಬಯಸಿದರೆ, ನೀವು ಆಯ್ಕೆ ಮಾಡಿದ ಭಾಷೆಯಲ್ಲಿ ಉಪಶೀರ್ಷಿಕೆಗಳನ್ನು ಸಕ್ರಿಯಗೊಳಿಸಬಹುದು. ಯೂಟ್ಯೂಬ್‌ ನಲ್ಲಿ, "ಸೆಟ್ಟಿಂಗ್‌" ಐಕಾನ್ ಕ್ಲಿಕ್ ಮಾಡುವ ಮೂಲಕ ನೀವು ಆಡಿಯೊ ಭಾಷೆಯನ್ನು ಬದಲಾಯಿಸಬಹುದು. ನಂತರ, "ಆಡಿಯೋ ಟ್ರ್ಯಾಕ್" ಆಯ್ಕೆಮಾಡಿ ಮತ್ತು ನಮ್ಮ ಸಂಭಾಷಣೆಯನ್ನು ಕೇಳಲು ನಿಮ್ಮ ಆದ್ಯತೆಯ ಭಾಷೆಯನ್ನು ಆಯ್ಕೆಮಾಡಿ. ಸಂಪೂರ್ಣ ಚರ್ಚೆಯನ್ನು ಇಂಗ್ಲಿಷ್‌ನಲ್ಲಿ ಕೇಳಲು, "ಇಂಗ್ಲಿಷ್" ಆಯ್ಕೆಮಾಡಿ; ಹಿಂದಿಗಾಗಿ, "ಹಿಂದಿ" ಆಯ್ಕೆಮಾಡಿ. ನೀವು ಸಂಭಾಷಣೆಯನ್ನು ಅದರ ಮೂಲ ಸ್ವರೂಪದಲ್ಲಿ ಕೇಳಲು ಬಯಸಿದರೆ – ಅಲ್ಲಿ ಪ್ರಧಾನಿ ಮೋದಿಯವರು ಹಿಂದಿಯಲ್ಲಿ ಮಾತನಾಡುತ್ತಾರೆ ಮತ್ತು ನಾನು ಇಂಗ್ಲಿಷ್‌ನಲ್ಲಿ ಮಾತನಾಡುತ್ತೇನೆ – ದಯವಿಟ್ಟು "ಹಿಂದಿ (ಲ್ಯಾಟಿನ್)" ಎಂದು ಲೇಬಲ್ ಮಾಡಿದ ಆಡಿಯೋ ಟ್ರ್ಯಾಕ್ ಅನ್ನು ಆಯ್ಕೆಮಾಡಿ. ಈ ಮಾತುಕತೆಯನ್ನು ಒಂದೇ ಭಾಷೆಯಲ್ಲಿ ಅಥವಾ ಹಿಂದಿ ಮತ್ತು ಇಂಗ್ಲಿಷ್ ಎರಡರಲ್ಲೂ ಕೇಳುವ ಸೌಲಭ್ಯವನ್ನು ನೀವು ಹೊಂದಿದ್ದೀರಿ, ನಿಮ್ಮ ಆದ್ಯತೆಯ ಭಾಷೆಯಲ್ಲಿ ಉಪಶೀರ್ಷಿಕೆಗಳು ಲಭ್ಯವಿವೆ. ವೀಡಿಯೊಗಳ ಡೀಫಾಲ್ಟ್ ಭಾಷೆ ಇಂಗ್ಲಿಷ್ ಆಗಿದೆ. ಇದನ್ನು ಸಾಧ್ಯವಾಗಿಸಿದ್ದಕ್ಕಾಗಿ ಇಲೆವೆನ್ ಲ್ಯಾಬ್ಸ್ ಮತ್ತು ಅವರ ಅಸಾಧಾರಣ ಅನುವಾದಕರ ತಂಡಕ್ಕೆ ನನ್ನ ಕೃತಜ್ಞತೆಗಳು.

 

|

ಕೃತಕ ಬುದ್ಧಿಮತ್ತೆ ಕ್ಲೋನಿಂಗ್ ಮೂಲಕ ರಚಿಸಲಾದ ಇಂಗ್ಲಿಷ್‌ ನಲ್ಲಿ ಪ್ರಧಾನಿ ಮೋದಿಯವರ ಧ್ವನಿಯು ಸಾಧ್ಯವಾದಷ್ಟು ಅಧಿಕೃತವಾಗಿ ಧ್ವನಿಸುವಂತೆ ನಾವು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಿದ್ದೇವೆ. ಭಾಷೆ ಎಂದಿಗೂ ನಮ್ಮ ನಡುವೆ ತಡೆಗೋಡೆಯನ್ನು ಸೃಷ್ಟಿಸಬಾರದು ಎಂದು ನಾನು ಬಲವಾಗಿ ನಂಬುತ್ತೇನೆ. ಈ ಸಂಭಾಷಣೆಗಳನ್ನು ಪ್ರಪಂಚದಾದ್ಯಂತದ ಜನರಿಗೆ ಪ್ರತಿ ಭಾಷೆಯಲ್ಲಿ ತರಲು ನಾನು ಪ್ರಯತ್ನಿಸುತ್ತೇನೆ. ಮತ್ತೊಮ್ಮೆ, ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ. ಇದು ನನಗೆ ಅದ್ಭುತ ಪ್ರಯಾಣವಾಗಿದೆ ಮತ್ತು ನಿಮ್ಮ ನಿರಂತರ ಬೆಂಬಲವನ್ನು ಪಡೆದಿರುವುದು ನನಗೆ ಅಪಾರ ಗೌರವವನ್ನು ತಂದಿದೆ. ನಿಮ್ಮೆಲ್ಲರನ್ನೂ ನಾನು ನಿಜವಾಗಿಯೂ ಪ್ರಶಂಸಿಸುತ್ತೇನೆ. ನೀವು "ಲೆಕ್ಸ್ ಫ್ರಿಡ್ಮನ್ ಪಾಡ್‌ಕ್ಯಾಸ್ಟ್" ವೀಕ್ಷಿಸುತ್ತಿದ್ದೀರಿ. ಆದ್ದರಿಂದ, ನನ್ನ ಸ್ನೇಹಿತರೇ, ಆ ಕ್ಷಣ ಬಂದಿದೆ - ನೀವು ಭಾರತದ ಪ್ರಧಾನಿ ನರೇಂದ್ರ ಮೋದಿಯವರೊಂದಿಗಿನ ನನ್ನ ಮಾತುಕತೆಯನ್ನು ಕೇಳಲಿದ್ದೀರಿ.

ಲೆಕ್ಸ್ ಫ್ರಿಡ್ಮನ್: ನಾನು ನಿಮ್ಮೊಂದಿಗೆ ಒಂದು ವಿಷಯವನ್ನು ಹಂಚಿಕೊಳ್ಳಲು ಬಯಸುತ್ತೇನೆ - ನಾನು ಉಪವಾಸ ಮಾಡುತ್ತಿದ್ದೇನೆ. ಸುಮಾರು 45 ಗಂಟೆ ಅಥವಾ ಎರಡು ದಿನಗಳು ಕಳೆದಿವೆ, ಈ ಸಮಯದಲ್ಲಿ ನಾನು ಕೇವಲ ನೀರು ಕುಡಿದಿದ್ದೇನೆ ಮತ್ತು ಆಹಾರ ಸೇವಿಸಿಲ್ಲ. ಈ ಉಪವಾಸವನ್ನು ಗೌರವದಿಂದ ಮತ್ತು ಈ ಮಾತುಕತೆಗೆ ಸಿದ್ಧತೆಯಾಗಿ ನಾನು ಕೈಗೊಂಡಿದ್ದೇನೆ, ಇದರಿಂದ ನಾವು ಆಳವಾದ, ಹೆಚ್ಚು ಆಧ್ಯಾತ್ಮಿಕ ಮಟ್ಟದಲ್ಲಿ ತೊಡಗಿಸಿಕೊಳ್ಳಬಹುದು. ನೀವು ಕೂಡ ನಿಯಮಿತವಾಗಿ ಉಪವಾಸ ಮಾಡುತ್ತೀರಿ ಎಂದು ನಾನು ಕೇಳಿದ್ದೇನೆ. ನಿಮ್ಮ ಜೀವನದಲ್ಲಿ ಉಪವಾಸದ ಮಹತ್ವ ಮತ್ತು ಉಪವಾಸದ ಸಮಯದಲ್ಲಿ ನಿಮ್ಮ ಮನಃಸ್ಥಿತಿಯ ಬಗ್ಗೆ ನನಗೆ ತಿಳಿಸಬಲ್ಲಿರಾ?

ಪ್ರಧಾನಮಂತ್ರಿ: ಮೊದಲನೆಯದಾಗಿ, ನೀವು ಉಪವಾಸ ಮಾಡಿದ್ದೀರಿ ಎಂದು ತಿಳಿದು ನನಗೆ ನಿಜಕ್ಕೂ ಆಶ್ಚರ್ಯವಾಯಿತು, ಅದು ಕೂಡ ಈ ಮಾತುಕತೆಯನ್ನು ಗೌರವಿಸುವುದಕ್ಕಾಗಿ. ನಿಮ್ಮ ನಡವಳಿಕೆಯನ್ನು ನಾನು ಪ್ರಾಮಾಣಿಕವಾಗಿ ಪ್ರಶಂಸಿಸುತ್ತೇನೆ. ಭಾರತದಲ್ಲಿ, ಧಾರ್ಮಿಕ ಸಂಪ್ರದಾಯಗಳು ಕೇವಲ ಆಚರಣೆಗಳಲ್ಲ, ಜೀವನ ವಿಧಾನವಾಗಿವೆ. ನಮ್ಮ ಸರ್ವೋಚ್ಚ ನ್ಯಾಯಾಲಯವು ಹಿಂದೂ ಧರ್ಮವನ್ನು ಕೇವಲ ಆರಾಧನೆಯ ವಿಧಾನವಲ್ಲ, ಜೀವನ ತತ್ವ ಸುಂದರವಾಗಿ ವಿವರಿಸಿದೆ. ನಮ್ಮ ಧರ್ಮಗ್ರಂಥಗಳು ದೇಹ, ಮನಸ್ಸು, ಬುದ್ಧಿಶಕ್ತಿ, ಆತ್ಮ ಮತ್ತು ಮಾನವೀಯತೆಯನ್ನು ಉನ್ನತ ಮಟ್ಟಕ್ಕೆ ಏರಿಸುವ ಮಾರ್ಗಗಳನ್ನು ಅನ್ವೇಷಿಸುತ್ತವೆ ಮತ್ತು ಉಪವಾಸವು ಈ ಪ್ರಕ್ರಿಯೆಗೆ ಕೊಡುಗೆ ನೀಡುವ ಅನೇಕ ವಿಧಾನಗಳಲ್ಲಿ ಒಂದಾಗಿದೆ. ಆದಾಗ್ಯೂ, ಉಪವಾಸವು ಈ ಸಂಪ್ರದಾಯದ ಏಕೈಕ ಅಂಶವಲ್ಲ. ಸಾಂಸ್ಕೃತಿಕವಾಗಿ ಮತ್ತು ತಾತ್ವಿಕವಾಗಿ, ಉಪವಾಸವು ಆಂತರಿಕ ಮತ್ತು ಬಾಹ್ಯ ಶಿಸ್ತನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಭಾರತದ ಪರಿಚಯವಿಲ್ಲದವರಿಗೆ ಅದನ್ನು ಸರಳ ಪದಗಳಲ್ಲಿ ವಿವರಿಸುವುದಾದರೆ, ಉಪವಾಸವು ಒಬ್ಬರ ಜೀವನವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ನಾನು ಹೇಳುತ್ತೇನೆ. ಎರಡು ದಿನಗಳ ಕಾಲ ಕೇವಲ ನೀರನ್ನು ಸೇವಿಸಿ ಉಪವಾಸ ಮಾಡಿದ ನಂತರ, ನಿಮ್ಮ ಇಂದ್ರಿಯಗಳು - ವಿಶೇಷವಾಗಿ ವಾಸನೆ, ಸ್ಪರ್ಶ ಮತ್ತು ರುಚಿ - ಅಸಾಧಾರಣವಾಗಿ ತೀಕ್ಷ್ಣವಾಗಿವೆ ಎಂಬುದನ್ನು ನೀವು ಗಮನಿಸಿರಬೇಕು. ನೀವು ಈಗ ನೀರಿನ ಮಂದ ವಾಸನೆಯನ್ನು ಸಹ ಗುರುತಿಸಬಹುದು, ನೀವು ಹಿಂದೆಂದೂ ಗಮನಿಸದ ವಿಷಯ ಇದು. ಯಾರಾದರೂ ಚಹಾ ಅಥವಾ ಕಾಫಿಯನ್ನು ಹಿಡಿದು ನಿಮ್ಮ ಮುಂದೆ ನಡೆದರೆ, ನೀವು ತಕ್ಷಣ ಸುವಾಸನೆಯನ್ನು ಗುರುತಿಸುತ್ತೀರಿ. ಅದೇ ರೀತಿ, ನೀವು ಒಂದು ಸಣ್ಣ ಹೂವನ್ನು ನೋಡಿದರೆ, ನೀವು ಅದನ್ನು ಹೊಸ ಸ್ಪಷ್ಟತೆಯೊಂದಿಗೆ ಗ್ರಹಿಸುತ್ತೀರಿ.

ಸಂಕ್ಷಿಪ್ತವಾಗಿ ಹೇಳುವುದಾದರೆ, ನೀವು ಉಪವಾಸ ಮಾಡುವಾಗ, ನಿಮ್ಮ ಎಲ್ಲಾ ಇಂದ್ರಿಯಗಳು ಇದ್ದಕ್ಕಿದ್ದಂತೆ ಹೆಚ್ಚು ಸಕ್ರಿಯವಾಗುತ್ತವೆ ಮತ್ತು ಪ್ರಚೋದಕಗಳನ್ನು ಹೀರಿಕೊಳ್ಳುವ ಮತ್ತು ಪ್ರತಿಕ್ರಿಯಿಸುವ ಸಾಮರ್ಥ್ಯವು ಹೆಚ್ಚಾಗುತ್ತದೆ. ಇದು ನಾನು ವೈಯಕ್ತಿಕವಾಗಿ ಅನುಭವಿಸಿದ ವಿಷಯ. ಹೆಚ್ಚುವರಿಯಾಗಿ, ಉಪವಾಸವು ನನ್ನ ಆಲೋಚನೆಗಳ ಪ್ರಭಾವವನ್ನು ತೀಕ್ಷ್ಣಗೊಳಿಸುತ್ತದೆ, ಅವುಗಳಿಗೆ ತಾಜಾತನ ಮತ್ತು ವಿಶಿಷ್ಟ ದೃಷ್ಟಿಕೋನವನ್ನು ನೀಡುತ್ತದೆ ಎಂದು ನಾನು ಕಂಡುಕೊಂಡಿದ್ದೇನೆ. ಇತರರು ಉಪವಾಸದ ಅದೇ ಅನುಭವವನ್ನು ಪಡೆಯುತ್ತಾರೆಯೇ ಎಂದು ನನಗೆ ಖಚಿತವಿಲ್ಲ, ಆದರೆ ಇದು ನನ್ನ ವೈಯಕ್ತಿಕ ಪ್ರಯಾಣವಾಗಿದೆ.

 

ಉಪವಾಸ ಎಂದರೆ ಆಹಾರ ಸೇವಿಸದಿರುವುದು – ತಿನ್ನದೇ ಇರುವುದು ಎಂದು ಅನೇಕ ಜನರು ಭಾವಿಸುತ್ತಾರೆ. ಆದರೆ ಇದು ಸಂಪೂರ್ಣವಾಗಿ ದೈಹಿಕ ಕ್ರಿಯೆ. ಬಾಹ್ಯ ಸಂದರ್ಭಗಳಿಂದಾಗಿ ಯಾರಾದರೂ ತಿನ್ನಲು ಸಾಧ್ಯವಾಗದಿದ್ದರೆ ಮತ್ತು ಅವರ ಹೊಟ್ಟೆಗೆ ಏನೂ ಪ್ರವೇಶಿಸದಿದ್ದರೆ, ಅದನ್ನು ನಿಜವಾಗಿಯೂ ಉಪವಾಸ ಎಂದು ಪರಿಗಣಿಸಲಾಗುವುದಿಲ್ಲ. ಉಪವಾಸವು ಒಂದು ವೈಜ್ಞಾನಿಕ ಪ್ರಕ್ರಿಯೆ. ಉದಾಹರಣೆಗೆ, ನಾನು ಬಹಳ ಸಮಯದಿಂದ ಉಪವಾಸ ಮಾಡುತ್ತಿದ್ದೇನೆ ಮತ್ತು ನಾನು ಪ್ರಾರಂಭಿಸುವ ಮೊದಲು, ನಾನು ಹಲವಾರು ಪೂರ್ವಸಿದ್ಧತಾ ಹಂತಗಳಿಗೆ ಒಳಗಾಗುತ್ತೇನೆ. ನನ್ನ ಉಪವಾಸಕ್ಕೆ ಐದು ರಿಂದ ಏಳು ದಿನಗಳ ಮೊದಲು, ನಾನು ಆಯುರ್ವೇದ ದಿನಚರಿ, ಯೋಗ ಮತ್ತು ನನ್ನ ದೇಹವನ್ನು ಆಂತರಿಕವಾಗಿ ಶುದ್ಧೀಕರಿಸಲು ಇತರ ಸಾಂಪ್ರದಾಯಿಕ ವಿಧಾನಗಳನ್ನು ಅಭ್ಯಾಸ ಮಾಡುತ್ತೇನೆ. ನಂತರ, ಅಧಿಕೃತವಾಗಿ ಉಪವಾಸವನ್ನು ಪ್ರಾರಂಭಿಸುವ ಮೊದಲು, ನನ್ನ ದೇಹವು ಸಂಪೂರ್ಣವಾಗಿ ಹೈಡ್ರೀಕರಿಸಲ್ಪಟ್ಟಿದೆ ಮತ್ತು ನಿರ್ವಿಶೀಕರಣಕ್ಕೆ ಸಿದ್ಧವಾಗಿದೆ ಎಂದು ಖಚಿತಪಡಿಸಿಕೊಳ್ಳಲು ನಾನು ಸಾಧ್ಯವಾದಷ್ಟು ನೀರು ಕುಡಿಯುತ್ತೇನೆ. ನನಗೆ, ಉಪವಾಸವು ಭಕ್ತಿಯ ಕ್ರಿಯೆಯಾಗಿದೆ; ಅದೊಂದು ಶಿಸ್ತು. ಉಪವಾಸದ ಸಮಯದಲ್ಲಿ ನಾನು ಎಷ್ಟೇ ಬಾಹ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೂ, ನಾನು ನನ್ನ ಆಂತರಿಕವಾಗಿ ಆಳವಾಗಿ ಮುಳುಗಿರುತ್ತೇನೆ. ಇದೊಂದು ಆಳವಾದ ಅನುಭವ, ಅದ್ಭುತ ಭಾವನೆ. ನನ್ನ ಉಪವಾಸದ ಅಭ್ಯಾಸವು ಪುಸ್ತಕಗಳು, ಧರ್ಮೋಪದೇಶಗಳು ಅಥವಾ ಕುಟುಂಬ ಸಂಪ್ರದಾಯಗಳಿಂದ ಪ್ರಭಾವಿತವಾಗಿರಲಿಲ್ಲ - ಅದು ನನ್ನ ಸ್ವಂತ ಅನುಭವದಿಂದ ಹುಟ್ಟಿಕೊಂಡಿತು. ನಾನು ಶಾಲೆಯಲ್ಲಿದ್ದಾಗ, ಮಹಾತ್ಮ ಗಾಂಧಿಯವರಿಂದ ಪ್ರೇರಿತವಾದ ಗೋರಕ್ಷಣೆಗಾಗಿ ರಾಷ್ಟ್ರವ್ಯಾಪಿ ಚಳುವಳಿ ನಡೆಯುತ್ತಿತ್ತು. ಆ ಸಮಯದಲ್ಲಿ, ಸರ್ಕಾರವು ಯಾವುದೇ ಕಾನೂನು ಕ್ರಮಗಳನ್ನು ಜಾರಿಗೆ ತಂದಿರಲಿಲ್ಲ ಮತ್ತು ಚಳವಳಿಯ ಭಾಗವಾಗಿ, ದೇಶಾದ್ಯಂತ ಜನರು ಸಾರ್ವಜನಿಕ ಸ್ಥಳಗಳಲ್ಲಿ ದಿನವಿಡೀ ಉಪವಾಸವನ್ನು ಆಚರಿಸಿದರು. ನಾನು ಆಗಿನ್ನೂ ಮಗು. ಬಹುಶಃ ಪ್ರಾಥಮಿಕ ಶಾಲೆಯಿಂದ ಹೊರಬಂದಿದ್ದೆ, ಆದರೆ ನಾನು ಅದರಲ್ಲಿ ಭಾಗವಹಿಸಲು ನಿರ್ಧರಿಸಿದೆ. ಅದು ನನ್ನ ಮೊದಲ ಉಪವಾಸದ ಅನುಭವವಾಗಿತ್ತು. ನಾನು ಚಿಕ್ಕ ವಯಸ್ಸಿನವನಾಗಿದ್ದರೂ ನನಗೆ ಹಸಿವಾಗಲಿಲ್ಲ ಅಥವಾ ತಿನ್ನುವ ಬಯಕೆಯೂ ಆಗಲಿಲ್ಲ. ಬದಲಾಗಿ, ನಾನು ಹೊಸ ಅರಿವು ಮತ್ತು ಶಕ್ತಿಯನ್ನು ಅನುಭವಿಸಿದೆ. ಆಗ ನಾನು ಉಪವಾಸ ಎಂದರೆ ಕೇವಲ ಆಹಾರದಿಂದ ದೂರವಿರುವುದು ಅಲ್ಲ; ಅದು ಆಳವಾದ, ವೈಜ್ಞಾನಿಕ ಪ್ರಕ್ರಿಯೆ ಎಂದು ಅರಿತುಕೊಂಡೆ. ಕಾಲಕ್ರಮೇಣ, ನನ್ನ ದೇಹ ಮತ್ತು ಮನಸ್ಸನ್ನು ಪರಿಷ್ಕರಿಸಲು, ಉಪವಾಸದ ಮೂಲಕ ಅವುಗಳನ್ನು ರೂಪಿಸಲು ನಾನು ಹಲವಾರು ಪ್ರಯೋಗಗಳನ್ನು ನಡೆಸಿದೆ. ಉಪವಾಸದೊಂದಿಗೆ ಇಷ್ಟು ದೀರ್ಘ ಪ್ರಯಾಣವನ್ನು ಮಾಡಿದ ನಂತರ, ನನ್ನ ಚಟುವಟಿಕೆಯ ಮಟ್ಟವು ಎಂದಿಗೂ ಕುಸಿಯುವುದಿಲ್ಲ ಎಂಬುದನ್ನು ನಾನು ಗಮನಿಸಿದ್ದೇನೆ. ವಾಸ್ತವವಾಗಿ, ಕೆಲವೊಮ್ಮೆ, ನಾನು ಉಪವಾಸದ ಸಮಯದಲ್ಲಿ ಇನ್ನೂ ಹೆಚ್ಚು ಕೆಲಸ ಮಾಡುತ್ತಿದ್ದೇನೆ ಎಂದು ಭಾಸವಾಗುತ್ತದೆ. ಮತ್ತೊಂದು ಗಮನಾರ್ಹವಾದ ವಿಚಾರವೆಂದರೆ, ಉಪವಾಸದ ಸಮಯದಲ್ಲಿ ನನ್ನ ಆಲೋಚನೆಗಳನ್ನು ವ್ಯಕ್ತಪಡಿಸಬೇಕಾದಾಗ, ಆಲೋಚನೆಗಳು ಹೇಗೆ ಸಲೀಸಾಗಿ ಬರುತ್ತವೆ ಎಂಬುದನ್ನು ನೋಡಿ ನಾನು ಆಶ್ಚರ್ಯಚಕಿತನಾಗುತ್ತೇನೆ. ಈ ಆಲೋಚನೆಗಳು ಎಲ್ಲಿಂದ ಹುಟ್ಟುತ್ತವೆ ಎಂದು ನನಗೆ ತಿಳಿದಿಲ್ಲ, ಆದರೆ ಅನುಭವವು ನಿಜವಾಗಿಯೂ ಅಸಾಧಾರಣವಾದುದು.

 

|

ಲೆಕ್ಸ್ ಫ್ರಿಡ್ಮನ್: ಹಾಗಾಗಿ, ಉಪವಾಸ ಮಾಡುವಾಗಲೂ, ನೀವು ವಿಶ್ವ ನಾಯಕರನ್ನು ಭೇಟಿಯಾಗುತ್ತೀರಿ, ಪ್ರಧಾನಮಂತ್ರಿಯಾಗಿ ನಿಮ್ಮ ಕರ್ತವ್ಯಗಳನ್ನು ನಿರ್ವಹಿಸುತ್ತೀರಿ ಮತ್ತು ಜಾಗತಿಕ ರಾಜಕಾರಣಿಯಾಗಿ ನಿಮ್ಮ ಜವಾಬ್ದಾರಿಗಳನ್ನು ಪೂರೈಸುತ್ತೀರಿ. ಮತ್ತು ನೀವು ಕೆಲವೊಮ್ಮೆ ಸತತವಾಗಿ ಒಂಬತ್ತು ದಿನಗಳ ಕಾಲ ಉಪವಾಸ ಮಾಡುತ್ತೀರಿ.

ಪ್ರಧಾನಮಂತ್ರಿ: ಹೌದು, ಮತ್ತು ಈ ಅಭ್ಯಾಸಕ್ಕೆ ದೀರ್ಘ ಇತಿಹಾಸವಿದೆ. ಬಹುಶಃ ಕೇಳುಗರಿಗೆ ಇದು ಭಾರವೆನಿಸಬಹುದು, ಆದರೆ ನಾನು ಅದನ್ನು ಹಂಚಿಕೊಳ್ಳುತ್ತೇನೆ.

ಭಾರತದಲ್ಲಿ, ಮಳೆಗಾಲದಲ್ಲಿ 'ಚಾತುರ್ಮಾಸ' ಎಂಬ ಸಂಪ್ರದಾಯವಿದೆ. ಈ ಅವಧಿಯಲ್ಲಿ ಜೀರ್ಣಕ್ರಿಯೆಯ ಶಕ್ತಿ ದುರ್ಬಲಗೊಳ್ಳುತ್ತದೆ ಎಂದು ಹೇಳಲಾಗುತ್ತದೆ, ಆದ್ದರಿಂದ ನಾಲ್ಕು ತಿಂಗಳ ಕಾಲ ದಿನಕ್ಕೆ ಒಮ್ಮೆ ಮಾತ್ರ ತಿನ್ನುವುದು ವಾಡಿಕೆ. ನನಗೆ, ಈ ಅಭ್ಯಾಸವು ಜೂನ್ ಮಧ್ಯಭಾಗದಲ್ಲಿ ಪ್ರಾರಂಭವಾಗುತ್ತದೆ ಮತ್ತು ದೀಪಾವಳಿಯ ನಂತರದವರೆಗೆ, ಸಾಮಾನ್ಯವಾಗಿ ನವೆಂಬರ್ ವರೆಗೆ ಮುಂದುವರಿಯುತ್ತದೆ. ನಂತರ, ಸೆಪ್ಟೆಂಬರ್ ಅಥವಾ ಅಕ್ಟೋಬರ್‌ನಲ್ಲಿ ದುರ್ಗಾ ದೇವಿಯ ಪೂಜೆಗೆ ಮೀಸಲಾಗಿರುವ ಒಂಬತ್ತು ದಿನಗಳ ಹಬ್ಬವಾದ 'ನವರಾತ್ರಿ' ಇದೆ. ಈ ಅವಧಿಯಲ್ಲಿ, ನಾನು ಬಿಸಿನೀರನ್ನು ಮಾತ್ರ ಕುಡಿಯುತ್ತೇನೆ. ಪ್ರಾಸಂಗಿಕವಾಗಿ, ನನ್ನ ಬಾಲ್ಯದ ಅನುಭವಗಳಿಂದಾಗಿ ಬಿಸಿನೀರು ಕುಡಿಯುವುದು ಯಾವಾಗಲೂ ನನ್ನ ಅಭ್ಯಾಸವಾಗಿದೆ ಮತ್ತು ನಾನು ಈ ಅಭ್ಯಾಸವನ್ನೇ ಮುಂದುವರಿಸಿದ್ದೇನೆ. ಮಾರ್ಚ್ ಅಥವಾ ಏಪ್ರಿಲ್‌ ನಲ್ಲಿ ಮತ್ತೊಂದು 'ನವರಾತ್ರಿ' ಬರುತ್ತದೆ, ಇದನ್ನು 'ಚೈತ್ರ ನವರಾತ್ರಿ' ಎಂದು ಕರೆಯಲಾಗುತ್ತದೆ. ಈ ವರ್ಷ, ಇದು ಮಾರ್ಚ್ 31 ರಂದು ಪ್ರಾರಂಭವಾಗುವ ಸಾಧ್ಯತೆಯಿದೆ. ಈ ಉಪವಾಸದ ಸಮಯದಲ್ಲಿ, ನಾನು ದಿನಕ್ಕೆ ಒಂದು ರೀತಿಯ ಹಣ್ಣನ್ನು ಮಾತ್ರ ಸೇವಿಸುತ್ತೇನೆ. ಉದಾಹರಣೆಗೆ, ನಾನು ಪಪ್ಪಾಯಿಯನ್ನು ಆರಿಸಿದರೆ, ಒಂಬತ್ತು ದಿನಗಳ ಅವಧಿಗೆ ದಿನಕ್ಕೆ ಒಮ್ಮೆ ಮಾತ್ರ ಪಪ್ಪಾಯಿ ತಿನ್ನುತ್ತೇನೆ.

ಹಲವು ವರ್ಷಗಳಿಂದ, ಈ ಉಪವಾಸ ಸಂಪ್ರದಾಯ ನನ್ನ ಜೀವನದ ಅವಿಭಾಜ್ಯ ಅಂಗವಾಗಿದೆ. ವಾಸ್ತವವಾಗಿ, ನಾನು ಕಳೆದ 50-55 ವರ್ಷಗಳಿಂದ ಇಂತಹ ಸಂಪ್ರದಾಯವನ್ನು ಅನುಸರಿಸುತ್ತಿದ್ದೇನೆ.

ಲೆಕ್ಸ್ ಫ್ರಿಡ್ಮನ್: ಕೆಲವು ಮಹಾನ್ ವಿಶ್ವ ನಾಯಕರನ್ನು ಭೇಟಿಯಾಗುವಾಗ ನೀವು ಉಪವಾಸ ಮಾಡುತ್ತಿದ್ದಿರಾ? ಅವರ ಪ್ರತಿಕ್ರಿಯೆ ಹೇಗಿತ್ತು? ನೀವು ಆಹಾರವಿಲ್ಲದೆ ಇದ್ದೀರಿ ಎಂದು ಅವರು ಆಶ್ಚರ್ಯಪಟ್ಟರಾ? ಮತ್ತು ನೀವು ಹೇಳಿದ್ದು ಸಂಪೂರ್ಣವಾಗಿ ಸರಿ ಎಂದು ನಾನು ಹೇಳಲೇಬೇಕು. ಎರಡು ದಿನಗಳ ಉಪವಾಸದ ನಂತರ, ನನ್ನಲ್ಲಿ ಅರಿವು ಹೆಚ್ಚಿದೆ ಮತ್ತು ವಿಷಯಗಳನ್ನು ಗ್ರಹಿಸುವ ಸಾಮರ್ಥ್ಯ ಹೆಚ್ಚಾಗಿದೆ ಎಂದು ನಾನು ಗಮನಿಸಿದ್ದೇನೆ. ಇದು ಒಂದು ಆಳವಾದ ಅನುಭವವಾಗಿದೆ. ನೀವು ವಿಶ್ವ ನಾಯಕರ ಸಮ್ಮುಖದಲ್ಲಿ ಉಪವಾಸ ಮಾಡಿದ ಯಾವುದೇ ನಿರ್ದಿಷ್ಟ ಘಟನೆ ನಿಮಗೆ ನೆನಪಿದೆಯೇ?

 

ಪ್ರಧಾನಮಂತ್ರಿ: ಹಾಂ, ನಾನು ಸಾಮಾನ್ಯವಾಗಿ ಈ ಬಗ್ಗೆ ಹೆಚ್ಚಿನ ಜನರಿಗೆ ಹೇಳುವುದಿಲ್ಲ. ಉಪವಾಸವು ನನಗೆ ತೀರಾ ವೈಯಕ್ತಿಕ ವಿಷಯ ಮತ್ತು ನಾನು ಅದನ್ನು ಪ್ರಚಾರ ಮಾಡಲು ಎಂದಿಗೂ ಬಯಸಿಲ್ಲ. ನಾನು ಮುಖ್ಯಮಂತ್ರಿಯಾದ ನಂತರ ಮತ್ತು ಪ್ರಧಾನಿಯಾದ ನಂತರವೇ ಜನರು ಅದರ ಬಗ್ಗೆ ತಿಳಿದುಕೊಳ್ಳಲು ಪ್ರಾರಂಭಿಸಿದರು. ಇಲ್ಲದಿದ್ದರೆ, ಇದು ಯಾವಾಗಲೂ ನನ್ನ ಜೀವನದ ಖಾಸಗಿ ಅಂಶವಾಗಿತ್ತು. ಈಗ ಅದು ತಿಳಿದ ನಂತರ, ನನ್ನ ಅನುಭವಗಳನ್ನು ಕೇಳಿದಾಗ ನಾನು ಹಂಚಿಕೊಳ್ಳುತ್ತೇನೆ, ಅವು ಯಾರಿಗಾದರೂ ಉಪಯುಕ್ತವಾಗಬಹುದು ಎಂಬ ಭರವಸೆಯಿಂದ. ನನ್ನ ಬಳಿ ಯಾವುದೇ ವೈಯಕ್ತಿಕ ಸಂಪತ್ತು ಇಲ್ಲ - ನನ್ನ ಅನುಭವಗಳು ಮಾತ್ರ ನನ್ನ ಸಂಪತ್ತು, ಅದು ಇತರರಿಗೆ ಪ್ರಯೋಜನವಾಗಬಹುದು. ನನ್ನ ಇಡೀ ಜೀವನವು ಜನರಿಗೆ ಸಮರ್ಪಿತವಾಗಿದೆ. ಉದಾಹರಣೆಗೆ, ನಾನು ಪ್ರಧಾನಿಯಾದ ನಂತರ, ನಾನು ಅಧ್ಯಕ್ಷ ಒಬಾಮಾ ಅವರೊಂದಿಗೆ ಶ್ವೇತಭವನದಲ್ಲಿ ದ್ವಿಪಕ್ಷೀಯ ಸಭೆ ನಡೆಸಿದೆ. ಔಪಚಾರಿಕ ಭೋಜನವನ್ನು ಏರ್ಪಡಿಸಲಾಗಿತ್ತು ಮತ್ತು ನಮ್ಮ ತಂಡಗಳ ನಡುವಿನ ಚರ್ಚೆಯ ಸಮಯದಲ್ಲಿ, ಭೋಜನವನ್ನು ಯೋಜಿಸಲಾಗಿದ್ದರೂ, ಪ್ರಧಾನಮಂತ್ರಿಯವರು ಊಟ ಮಾಡುವುದಿಲ್ಲ ಎಂದು ಉಲ್ಲೇಖಿಸಲಾಗಿತ್ತು. ಇದು ಸ್ವಲ್ಪ ಕಳವಳವನ್ನು ಉಂಟುಮಾಡಿತು - ಭಾರತದಂತಹ ದೊಡ್ಡ ರಾಷ್ಟ್ರದ ಪ್ರಧಾನಮಂತ್ರಿಗೆ ಊಟ ನೀಡದೆ ಅವರು ಹೇಗೆ ಆತಿಥ್ಯ ವಹಿಸಬಹುದು? ನಾವು ಕುಳಿತಾಗ, ಅವರು ನನಗೆ ಒಂದು ಲೋಟ ಬಿಸಿನೀರನ್ನು ತಂದರು. ನಾನು ಅಧ್ಯಕ್ಷ ಒಬಾಮಾ ಕಡೆಗೆ ತಿರುಗಿ ತಮಾಷೆಯಾಗಿ, "ನೋಡಿ, ನನ್ನ ಭೋಜನ ಬಂದಿದೆ!" ಎಂದು ಹೇಳಿದೆ ಮತ್ತು ಲೋಟವನ್ನು ಅವರ ಮುಂದೆ ಇಟ್ಟೆ. ನಂತರ, ನಾನು ಮತ್ತೆ ಭೇಟಿ ನೀಡಿದಾಗ, ಅವರು ಆ ಘಟನೆಯನ್ನು ನೆನಪಿಸಿಕೊಂಡರು. "ಕಳೆದ ಬಾರಿ ನೀವು ಉಪವಾಸ ಮಾಡಿದ್ದೀರಿ, ಆದರೆ ಈ ಬಾರಿ ನೀವು ಊಟ ಮಾಡುವುದಾಗಿ ಹೇಳಿದ್ದೀರಿ. ಆದ್ದರಿಂದ, ಈ ಬಾರಿ ಉಪವಾಸವಿಲ್ಲ - ನೀವು ಎರಡು ಪಟ್ಟು ತಿನ್ನಬೇಕು!" ಎಂದು ಅವರು ಹೇಳಿದ್ದರು.

 

|

ಲೆಕ್ಸ್ ಫ್ರಿಡ್ಮನ್: ನಿಮ್ಮ ಬಾಲ್ಯದ ಬಗ್ಗೆ ಮಾತನಾಡೋಣ. ನೀವು ಸಾಮಾನ್ಯ ಹಿನ್ನೆಲೆಯಿಂದ ಬಂದವರು ಮತ್ತು ನಂತರ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಪ್ರಧಾನಿಯಾದವರು. ನಿಮ್ಮ ಪ್ರಯಾಣವು ಅನೇಕರಿಗೆ ಸ್ಫೂರ್ತಿಯಾಗಿದೆ. ನಿಮ್ಮ ಕುಟುಂಬವು ಆರ್ಥಿಕವಾಗಿ ಉತ್ತಮವಾಗಿರಲಿಲ್ಲ ಮತ್ತು ನೀವು ನಿಮ್ಮ ಬಾಲ್ಯದ ವರ್ಷಗಳನ್ನು ಮಣ್ಣಿನಿಂದ ಕಟ್ಟಿದ ಸಾಧಾರಣ, ಒಂದೇ ಕೋಣೆಯ ಮನೆಯಲ್ಲಿ ಕಳೆದಿದ್ದೀರಿ, ಅಲ್ಲಿ ನಿಮ್ಮ ಇಡೀ ಕುಟುಂಬ ವಾಸಿಸುತ್ತಿತ್ತು. ನಿಮ್ಮ ಬಾಲ್ಯದ ಕೆಲವು ನೆನಪುಗಳನ್ನು ಹಂಚಿಕೊಳ್ಳಬಹುದೇ? ಸೀಮಿತ ಸಂಪನ್ಮೂಲಗಳೊಂದಿಗೆ ಬೆಳೆಯುವುದು ನಿಮ್ಮ ವ್ಯಕ್ತಿತ್ವವನ್ನು ಹೇಗೆ ರೂಪಿಸಿತು?

ಪ್ರಧಾನಮಂತ್ರಿ: ನಾನು ಉತ್ತರ ಗುಜರಾತಿನ ಮೆಹ್ಸಾನಾ ಜಿಲ್ಲೆಯ ವಡ್ನಾಗರ ಎಂಬ ಸಣ್ಣ ಪಟ್ಟಣದಲ್ಲಿ ಜನಿಸಿದೆ. ವಡ್ನಾಗರವು ಬಹಳ ಐತಿಹಾಸಿಕ ಮಹತ್ವವನ್ನು ಹೊಂದಿರುವ ಸ್ಥಳವಾಗಿದೆ ಮತ್ತು ನಾನು ಹುಟ್ಟಿ ಶಿಕ್ಷಣ ಪಡೆದ ಸ್ಥಳವೂ ಅದೇ. ಇಂದಿನ ಜಗತ್ತನ್ನು ನೋಡಿದಾಗ, ನಾನು ಬೆಳೆದ ಪರಿಸರವು ಸಾಕಷ್ಟು ವಿಶಿಷ್ಟವಾಗಿದೆ - ಬಹುಶಃ ಅಪರೂಪವೂ ಆಗಿರಬಹುದು ಎಂದು ನಾನು ಅರಿತುಕೊಂಡಿದ್ದೇನೆ. ನಾನು ಶಾಲೆಯಲ್ಲಿದ್ದಾಗ, ನಮ್ಮ ಹಳ್ಳಿಯಲ್ಲಿ ಒಬ್ಬ ಮಹಾನುಭಾವರಿದ್ದರು, ಅವರು "ನೀವು ಎಂದಾದರೂ ಕೆತ್ತಿದ ಕಲ್ಲು, ಕೆತ್ತಿದ ಬಂಡೆ ಅಥವಾ ಯಾವುದೇ ಪ್ರಾಚೀನ ಕಲಾಕೃತಿಯನ್ನು ಕಂಡರೆ, ಅದನ್ನು ಶಾಲೆಯ ಈ ಮೂಲೆಗೆ ತನ್ನಿ" ಎಂದು ಹೇಳುವ ಮೂಲಕ ನಮ್ಮನ್ನು ಪ್ರೋತ್ಸಾಹಿಸುತ್ತಿದ್ದರು. ಅವರ ಮಾತು ನನ್ನ ಕುತೂಹಲವನ್ನು ಕೆರಳಿಸಿತು, ಮತ್ತು ನಾನು ಹೆಚ್ಚು ಅರ್ಥಮಾಡಿಕೊಳ್ಳಲು ಪ್ರಾರಂಭಿಸಿದಾಗ, ನನ್ನ ಹಳ್ಳಿಯ ಇತಿಹಾಸವು ಬಹಳ ಶ್ರೀಮಂತ ಮತ್ತು ಪ್ರಾಚೀನವಾದುದು ಎಂದು ನಾನು ತಿಳಿದುಕೊಂಡೆ. ಶಾಲೆಯಲ್ಲಿ, ನಮ್ಮ ಹಳ್ಳಿಯ ಪರಂಪರೆಯ ಬಗ್ಗೆ ಚರ್ಚೆಗಳು ನನ್ನ ಆಸಕ್ತಿಯನ್ನು ಇನ್ನಷ್ಟು ಹೆಚ್ಚಿಸಿದವು. ನಂತರ, ನಾನು ಪ್ರಸಿದ್ಧ ಚೀನೀ ತತ್ವಜ್ಞಾನಿ ಮತ್ತು ಪ್ರವಾಸಿ ಹ್ಯೂಯೆನ್ ತ್ಸಾಂಗ್ ಅವರನ್ನು ಉಲ್ಲೇಖಿಸುವ ಒಂದು ಚೀನೀ ಚಲನಚಿತ್ರದ ಬಗ್ಗೆ ಪತ್ರಿಕೆಯಲ್ಲಿ ಓದಿದೆ. ವಡ್ನಾಗರ ಒಂದು ಕಾಲದಲ್ಲಿ ಬೌದ್ಧರ ಕಲಿಕೆಯ ಪ್ರಮುಖ ಕೇಂದ್ರವಾಗಿದ್ದರಿಂದ ಅವರು ಶತಮಾನಗಳ ಹಿಂದೆ ನನ್ನ ಹಳ್ಳಿಯಲ್ಲಿ ಸಾಕಷ್ಟು ಸಮಯವನ್ನು ಕಳೆದಿದ್ದಾರೆ ಎಂದು ನನಗೆ ತಿಳಿದುಬಂತು. ವಾಸ್ತವವಾಗಿ, ಐತಿಹಾಸಿಕ ದಾಖಲೆಗಳು 1400 ರಷ್ಟು ಹಿಂದೆಯೇ ಇದು ಅಭಿವೃದ್ಧಿ ಹೊಂದುತ್ತಿರುವ ಬೌದ್ಧ ಶೈಕ್ಷಣಿಕ ಕೇಂದ್ರವಾಗಿತ್ತು ಎಂದು ಸೂಚಿಸುತ್ತವೆ. ಕಾಲಾನಂತರದಲ್ಲಿ, ನಾನು ವಡ್ನಾಗರದ ಇತಿಹಾಸದ ಇನ್ನಷ್ಟು ಆಸಕ್ತಿದಾಯಕ ಅಂಶಗಳನ್ನು ಕಂಡುಕೊಂಡೆ - ಹನ್ನೆರಡನೇ ಶತಮಾನದ ವಿಜಯ ಸ್ಮಾರಕ, ಹದಿನೇಳನೇ ಶತಮಾನದ ದೇವಾಲಯ ಮತ್ತು ಸಂಗೀತದಲ್ಲಿ ಹೆಚ್ಚು ಪರಿಣತಿ ಹೊಂದಿದ್ದ ಹದಿನಾರನೇ ಶತಮಾನದ ಇಬ್ಬರು ಸಹೋದರಿಯರಾದ ತಾನಾ ಮತ್ತು ರಿರಿಯ ಪರಂಪರೆಯ ಬಗ್ಗೆ ತಿಳಿದುಕೊಂಡೆ. ಈ ಐತಿಹಾಸಿಕ ಅಂಶಗಳು ಬೆಳಕಿಗೆ ಬರುತ್ತಿದ್ದಂತೆ, ನನ್ನ ಆಸಕ್ತಿ ಹೆಚ್ಚಾಯಿತು. ನಾನು ಮುಖ್ಯಮಂತ್ರಿಯಾದಾಗ, ವಡ್ನಾಗರದ ಐತಿಹಾಸಿಕ ಮಹತ್ವವನ್ನು ಕೆಲಸದ ಮೂಲಕ, ಒಂದು ಕಾಲದಲ್ಲಿ ಸಾವಿರಾರು ಬೌದ್ಧ ಸನ್ಯಾಸಿಗಳು ಅಲ್ಲಿ ಅಧ್ಯಯನ ಮಾಡಿದರು ಮತ್ತು ಬೌದ್ಧಧರ್ಮ, ಜೈನ ಧರ್ಮ ಮತ್ತು ಹಿಂದೂ ಧರ್ಮದ ಪ್ರಭಾವಗಳು ಆಳವಾಗಿ ಹೆಣೆದುಕೊಂಡಿದ್ದವು ಎಂಬುದಕ್ಕೆ ನಮಗೆ ಪುರಾವೆಗಳು ಸಿಕ್ಕವು.

ವಡ್ನಾಗರದ ಇತಿಹಾಸವು ಕೇವಲ ಪುಸ್ತಕಗಳಿಗೆ ಸೀಮಿತವಾಗಿಲ್ಲ - ಪ್ರತಿಯೊಂದು ಕಲ್ಲು, ಪ್ರತಿ ಗೋಡೆಯೂ ತನ್ನದೇ ಆದ ಕಥೆಯನ್ನು ಹೇಳುತ್ತದೆ. ಈ ಉತ್ಖನನಗಳು ಇತಿಹಾಸಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿರುವ ಗಮನಾರ್ಹ ಆವಿಷ್ಕಾರಗಳನ್ನು ಬಹಿರಂಗಪಡಿಸಿದವು. ಇದುವರೆಗಿನ ಪುರಾವೆಗಳು ವಡ್ನಾಗರವು 2,800 ವರ್ಷಗಳಿಂದ ನಿರಂತರವಾಗಿ ಜನವಸತಿಯಾಗಿದೆ ಎಂದು ಸೂಚಿಸುತ್ತವೆ. ಸುಮಾರು ಮೂರು ಸಹಸ್ರಮಾನಗಳ ಕಾಲದ ಬೆಳವಣಿಗೆ ಮತ್ತು ಅಭಿವೃದ್ಧಿಯ ಉತ್ತಮವಾಗಿ ದಾಖಲಿಸಲ್ಪಟ್ಟ ಇತಿಹಾಸವನ್ನು ಹೊಂದಿರುವ ಮುರಿಯದ ಮತ್ತು ಶಾಶ್ವತವಾದ ಮಾನವ ವಸಾಹತು. ಇಂದು, ಅಂತರರಾಷ್ಟ್ರೀಯ ಮಟ್ಟದ ವಸ್ತುಸಂಗ್ರಹಾಲಯವನ್ನು ಅಲ್ಲಿ ಸ್ಥಾಪಿಸಲಾಗಿದೆ, ವಿಶೇಷವಾಗಿ ಪುರಾತತ್ತ್ವ ಶಾಸ್ತ್ರದ ವಿದ್ಯಾರ್ಥಿಗಳಿಗೆ ಮಹತ್ವದ ಸಂಶೋಧನಾ ಸ್ಥಳವಾಗಿದೆ. ನನಗೆ, ನನ್ನ ಜನ್ಮಸ್ಥಳವು ವಿಶೇಷ ಮಹತ್ವವಾಗಿದೆ ಮತ್ತು ದೇವರ ದಯೆಯಿಂದ ನನ್ನ ಕೆಲಸದ ಸ್ಥಳ ಕಾಶಿಯಾಯಿತು. ಕಾಶಿ - ಬನಾರಸ್ ಅಥವಾ ವಾರಾಣಾಸಿ ಎಂದೂ ಕರೆಯಲಾಗುತ್ತದೆ - ಇದು ನೂರಾರು ವರ್ಷಗಳಿಂದ ನಿರಂತರವಾಗಿ ವಾಸಿಸುತ್ತಿರುವ ಮತ್ತೊಂದು ಪ್ರಾಚೀನ ನಗರವಾಗಿದೆ.

ವಡ್ನಾಗರದಲ್ಲಿ ಜನಿಸಿದ ನನ್ನಂತಹ ವ್ಯಕ್ತಿ ನಂತರ ಕಾಶಿಯಲ್ಲಿ ಗಂಗಾ ಮಾತೆಯ ಪದತಲದಲ್ಲಿ ಜೀವನದ ಕೆಲಸವನ್ನು ಕಂಡುಕೊಂಡಿದ್ದು ಅಸಾಧಾರಣವೆನಿಸುತ್ತದೆ. ನನ್ನ ಆರಂಭಿಕ ವರ್ಷಗಳಲ್ಲಿ, ನಾನು ನನ್ನ ಹೆತ್ತವರು, ಒಡಹುಟ್ಟಿದವರು, ಅಜ್ಜಿಯರು, ಚಿಕ್ಕಪ್ಪಂದಿರು ಮತ್ತು ಚಿಕ್ಕಮ್ಮರೊಂದಿಗೆ ವಾಸಿಸುತ್ತಿದ್ದೆ. ನಾವು ಬೆಳೆದ ಮನೆ ಒಂದು ಸಾಧಾರಣ ವಾಸಸ್ಥಾನವಾಗಿತ್ತು - ಚಿಕ್ಕದು, ಕಿಟಕಿಗಳಿರಲಿಲ್ಲ, ಒಂದೇ ಬಾಗಿಲು ಮಾತ್ರ. ನಾವು ಅಲ್ಲಿಯೇ ಹುಟ್ಟಿ ಬೆಳೆದೆವು. ಜನರು ಬಡತನದ ಬಗ್ಗೆ ಚರ್ಚಿಸುವಾಗ, ಅದನ್ನು ಹೆಚ್ಚಾಗಿ ಸಾಪೇಕ್ಷ ಪರಿಭಾಷೆಯಲ್ಲಿ ರೂಪಿಸಲಾಗುತ್ತದೆ. ಇಂದು, ಸಾರ್ವಜನಿಕ ಜೀವನದಲ್ಲಿ, ಅನೇಕರು ವಿಭಿನ್ನ ಹಿನ್ನೆಲೆಗಳಿಂದ ಬಂದವರು, ಆದರೆ ನನ್ನ ಬಾಲ್ಯವು ತೀವ್ರ ಬಡತನದಲ್ಲಿ ಕಳೆಯಿತು. ಆದಾಗ್ಯೂ, ನಾನು ಅದನ್ನು ಎಂದಿಗೂ ಹೊರೆಯಾಗಿ ಭಾವಿಸಲಿಲ್ಲ. ನೋಡಿ, ಯಾರಾದರೂ ಶೂಗಳನ್ನು ಧರಿಸುವ ಅಭ್ಯಾ ಮಾಡಿಕೊಂಡರೆ ಮತ್ತು ಇದ್ದಕ್ಕಿದ್ದಂತೆ ಅವು ಇಲ್ಲದಿದ್ದರೆ, ಅವರು ಅವುಗಳ ಅನುಪಸ್ಥಿತಿಯನ್ನು ಅನುಭವಿಸುತ್ತಾರೆ. ಆದರೆ ಎಂದಿಗೂ ಶೂಗಳನ್ನು ಧರಿಸದ ವ್ಯಕ್ತಿಯು ತಾನು ಏನನ್ನು ಕಳೆದುಕೊಂಡಿದ್ದೇನೆ ಎಂದು ಅವನಿಗೆ ಎಂದಿಗೂ ತಿಳಿದಿರುವುದಿಲ್ಲ. ನನ್ನ ಬಾಲ್ಯದಲ್ಲಿ ಎಂದಿಗೂ ಶೂಗಳನ್ನು ಹೊಂದಿರಲಿಲ್ಲ, ನನಗೆ ಅವುಗಳು ಇಲ್ಲದಿರುವ ಭಾವನೆಯೇ ಬರಲಿಲ್ಲ. ಹೋಲಿಕೆಗಳಿಲ್ಲದೆ ನನ್ನ ಜೀವನವು ಸರಳವಾಗಿತ್ತು. ನನ್ನ ತಾಯಿ ಮತ್ತು ನನ್ನ ತಂದೆ ಕೂಡ ಕಷ್ಟಪಟ್ಟು ಕೆಲಸ ಮಾಡುತ್ತಿದ್ದರು. ಅವರಿಗೆ ವಿಶಿಷ್ಟವಾದ ದೈನಂದಿನ ದಿನಚರಿ ಇತ್ತು - ಬೆಳಿಗ್ಗೆ 4:00 ಅಥವಾ 4:30 ರ ಸುಮಾರಿಗೆ ಏಳುವುದು. ಅವರು ಬಹಳ ದೂರ ನಡೆದುಕೊಂಡು ಹೋಗುತ್ತಿದ್ದರು, ಹಲವಾರು ದೇವಾಲಯಗಳಿಗೆ ಭೇಟಿ ನೀಡುತ್ತಿದ್ದರು ಮತ್ತು ನಂತರ ತಮ್ಮ ಸಣ್ಣ ಅಂಗಡಿಗೆ ಹೋಗುತ್ತಿದ್ದರು. ಅವರು ಸ್ಥಳೀಯ ಗ್ರಾಮಸ್ಥರು ತಯಾರಿಸಿದ ಕೈಯಿಂದ ಮಾಡಿದ ಚರ್ಮದ ಬೂಟುಗಳನ್ನು ಧರಿಸುತ್ತಿದ್ದರು, ಅದು ಅವರು ನಡೆಯುವಾಗ ವಿಶಿಷ್ಟವಾದ ಟಕ್, ಟಕ್, ಟಕ್ ಶಬ್ದವನ್ನು ಮಾಡುತ್ತಿತ್ತು. ದಾಮೋದರ್  ಭಾಯ್ ಅವರ ಆಗಮನಕ್ಕೆ ಅನುಗುಣವಾಗಿ ತಮ್ಮ ಗಡಿಯಾರಗಳನ್ನು ಹೊಂದಿಸುತ್ತೇವೆ ಎಂದು ಹಳ್ಳಿಯ ಜನರು ಹೇಳುತ್ತಿದ್ದರು, ಏಕೆಂದರೆ ಅವರು ತುಂಬಾ ಸಮಯಪಾಲನೆ ಮಾಡುತ್ತಿದ್ದರು ಮತ್ತು ಶಿಸ್ತುಬದ್ಧರಾಗಿದ್ದರು. ಅವರು ತಡರಾತ್ರಿಯವರೆಗೆ ದಣಿವರಿಯದೆ ಕೆಲಸ ಮಾಡುತ್ತಿದ್ದರು. ಏತನ್ಮಧ್ಯೆ, ನಮ್ಮ ಕಷ್ಟಗಳ ಹೊರತಾಗಿಯೂ, ನಾವು ಎಂದಿಗೂ ವಂಚಿತರಾಗದಂತೆ ನನ್ನ ತಾಯಿ ಖಚಿತಪಡಿಸಿಕೊಂಡರು. ನಮ್ಮ ಮನೆಯ ಜೀವನ ಸಾಧ್ಯವಾದಷ್ಟು ಸುಗಮವಾಗಿರಲು ಅವರು ಎಲ್ಲವನ್ನೂ ನಿರ್ವಹಿಸಿದರು. ಆದರೂ, ಬಡತನದ ಈ ಸಂದರ್ಭಗಳ ಹೊರತಾಗಿಯೂ, ಅವು ನಮ್ಮ ಮನಸ್ಸಿನ ಮೇಲೆ ಎಂದಿಗೂ ಪರಿಣಾಮ ಬೀರಲಿಲ್ಲ.

 

|

ಶಾಲೆಗೆ ಶೂ ಧರಿಸಿ ಹೋಗುವುದನ್ನು ಯೋಚಿಸುವಂತೆಯೂ ಇರಲಿಲ್ಲ ಎಂಬುದು ನನಗೆ ಸ್ಪಷ್ಟವಾಗಿ ನೆನಪಿದೆ. ಒಂದು ದಿನ, ನಾನು ಶಾಲೆಗೆ ಹೋಗುತ್ತಿದ್ದಾಗ, ನನ್ನ ಚಿಕ್ಕಪ್ಪ ನನ್ನನ್ನು ನೋಡಿದರು. ಅವರು ಆಶ್ಚರ್ಯಚಕಿತರಾಗಿ, "ಹೇ! ನೀನು ಶಾಲೆಗೆ ಹೀಗೆ, ಶೂ ಇಲ್ಲದೆ ಹೋಗುತ್ತೀಯಾ?" ಎಂದು ಕೇಳಿದರು. ಅವರು ನನಗೆ ಒಂದು ಜೋಡಿ ಕ್ಯಾನ್ವಾಸ್ ಶೂಗಳನ್ನು ಖರೀದಿಸಿ ನೀಡಿದರು. ಆ ಸಮಯದಲ್ಲಿ, ಆ ಶೂಗಳ ಬೆಲೆ ಸುಮಾರು 10–12 ರೂಪಾಯಿಗಳಾಗಿದ್ದವು. ಅವು ಕ್ಯಾನ್ವಾಸ್‌ ನಿಂದ ಮಾಡಲ್ಪಟ್ಟಿದ್ದರಿಂದ, ಅವು ಸುಲಭವಾಗಿ ಕಲೆಯಾಗುತ್ತಿದ್ದವು ಮತ್ತು ಅವು ಬಿಳಿ ಬಣ್ಣದ್ದಾಗಿದ್ದವು. ಅವುಗಳನ್ನು ಸ್ವಚ್ಛವಾಗಿ ಕಾಣುವಂತೆ ಮಾಡಲು, ನಾನು ಒಂದು ಅಭ್ಯಾಸವನ್ನು ಬೆಳೆಸಿಕೊಂಡೆ. ಶಾಲೆ ಮುಗಿದ ನಂತರ, ನಾನು ಸ್ವಲ್ಪ ಸಮಯ ಅಲ್ಲಿಯೇ ಇದ್ದು, ಶಿಕ್ಷಕರು ಎಸೆದ ಉಳಿದ ಸೀಮೆಸುಣ್ಣದ ತುಂಡುಗಳನ್ನು ಸಂಗ್ರಹಿಸುತ್ತಿದ್ದೆ. ನಾನು ತರಗತಿಯಿಂದ ತರಗತಿಗೆ ಹೋಗಿ, ಸೀಮೆಸುಣ್ಣದ ತುಂಡುಗಳನ್ನು ಸಂಗ್ರಹಿಸಿ, ನಂತರ ಅವುಗಳನ್ನು ಮನೆಗೆ ತೆಗೆದುಕೊಂಡು ಹೋಗಿ, ನೆನೆಸಿ, ನನ್ನ ಕ್ಯಾನ್ವಾಸ್ ಬೂಟುಗಳನ್ನು ಪಾಲಿಶ್ ಮಾಡಲು ಬಳಸುತ್ತಿದ್ದೆ. ಇದು ಅವುಗಳನ್ನು ಹೊಳೆಯುವಂತೆ ಮಾಡುತ್ತಿತ್ತು ಮತ್ತು ನನಗೆ, ಅದೊಂದು ದೊಡ್ಡ ಐಷಾರಾಮಿ, ನಿಧಿಯಂತೆ ಭಾಸವಾಯಿತು. ಏಕೆಂದು ನನಗೆ ತಿಳಿದಿಲ್ಲ, ಆದರೆ ಬಾಲ್ಯದಿಂದಲೂ ನಮ್ಮ ತಾಯಿ ಸ್ವಚ್ಛತೆಯ ಬಗ್ಗೆ ತುಂಬಾ ಜಾಗೃತರಾಗಿದ್ದರು. ಬಹುಶಃ ಆ ಶಿಸ್ತು ನನ್ನಲ್ಲಿಯೂ ಬೇರೂರಿದೆ. ಯಾವಾಗಲೂ ಅಚ್ಚುಕಟ್ಟಾಗಿ ಉಡುಗೆ ತೊಡುವ ಅಭ್ಯಾಸವನ್ನು ನಾನು ಹೇಗೆ ಬೆಳೆಸಿಕೊಂಡೆನೋ ನನಗೆ ಖಚಿತವಿಲ್ಲ, ಆದರೆ ಅದು ನಾನು ಚಿಕ್ಕ ವಯಸ್ಸಿನಿಂದಲೂ ಅನುಸರಿಸುತ್ತಿದ್ದ ಅಭ್ಯಾಸವಾಗಿತ್ತು. ನಾನು ಏನೇ ಧರಿಸಿದರೂ ಅದನ್ನು ಸರಿಯಾಗಿ ಧರಿಸುತ್ತಿದ್ದೆ. ನಮ್ಮ ಬಟ್ಟೆಗಳನ್ನು ಇಸ್ತ್ರಿ ಮಾಡಲು ನಮಗೆ ಯಾವುದೇ ಮಾರ್ಗವಿರಲಿಲ್ಲ, ಆದ್ದರಿಂದ ನಾನು ನನ್ನದೇ ಆದ ಮಾರ್ಗವನ್ನು ಕಂಡುಕೊಂಡೆ. ಶಾಲೆಗೆ ಹೋಗುವ ಮೊದಲು ನಾನು ತಾಮ್ರದ ಪಾತ್ರೆಯಲ್ಲಿ ನೀರನ್ನು ಬಿಸಿ ಮಾಡಿ, ಅದನ್ನು ಇಕ್ಕುಳದಿಂದ ಹಿಡಿದು, ಬಟ್ಟೆಯನ್ನು ಇಸ್ತ್ರಿ ಮಾಡಲು ಬಳಸುತ್ತಿದ್ದೆ. ನಾನು ಈ ಜೀವನವನ್ನು ನಿಜವಾಗಿಯೂ ಆನಂದಿಸಿದೆ. ನಮ್ಮನ್ನು ಎಂದಿಗೂ ಇತರರನ್ನು ಅವರ ಆರ್ಥಿಕ ಸ್ಥಿತಿಯ ಆಧಾರದ ಮೇಲೆ ನಿರ್ಣಯಿಸುವ ಮನಸ್ಥಿತಿಯಲ್ಲಿ ಬೆಳೆಸಲಿಲ್ಲ. ಇವರು ಬಡವರೇ ಅಥವಾ ಇವರು ತಮ್ಮ ಜೀವನವನ್ನು ಹೇಗೆ ನಡೆಸುತ್ತಾರೆ ಎಂಬುದರ ಬಗ್ಗೆ ನಾವು ಎಂದಿಗೂ ಯೋಚಿಸಲಿಲ್ಲ. ಬದಲಾಗಿ, ನಮ್ಮಲ್ಲಿರುವದರಲ್ಲಿ ತೃಪ್ತರಾಗಿರಲು, ಕಷ್ಟಪಟ್ಟು ಕೆಲಸ ಮಾಡುತ್ತಲೇ ಇರಲು ಮತ್ತು ಈ ವಿಷಯಗಳ ಬಗ್ಗೆ ಎಂದಿಗೂ ಯೋಚಿಸಬಾರದು ಎಂಬುದನ್ನು ನಮಗೆ ಕಲಿಸಲಾಯಿತು. ಅದೃಷ್ಟವೋ ದುರದೃಷ್ಟವೋ, ನನ್ನ ರಾಜಕೀಯ ಪ್ರಯಾಣವು ಅಂತಿಮವಾಗಿ ನನ್ನ ಜೀವನದ ಈ ಅಂಶಗಳನ್ನು ಸಾರ್ವಜನಿಕರ ಗಮನಕ್ಕೆ ತಂದಿತು. ನಾನು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದಾಗ, ದೂರದರ್ಶನ ವರದಿಗಾರರು ನನ್ನ ಹಳ್ಳಿಗೆ ಬಂದರು. ಅವರು ನನ್ನ ಬಾಲ್ಯದ ಸ್ನೇಹಿತರೊಂದಿಗೆ ಮಾತನಾಡಲು ಮತ್ತು ನನ್ನ ಮನೆಯ ದೃಶ್ಯಗಳನ್ನು ಸೆರೆಹಿಡಿಯಲು ಪ್ರಾರಂಭಿಸಿದರು. ಆಗ ಮಾತ್ರ ಜನರು ನನ್ನ ಹಿನ್ನೆಲೆ ಮತ್ತು ನಾನು ಎಲ್ಲಿಂದ ಬಂದಿದ್ದೇನೆ ಎಂಬುದರ ಬಗ್ಗೆ ನಿಜವಾಗಿಯೂ ತಿಳಿದುಕೊಂಡರು. ಅದಕ್ಕೂ ಮೊದಲು, ಬಹಳ ಕಡಿಮೆ ಜನರಿಗೆ ನನ್ನ ಬಗ್ಗೆ ತಿಳಿದಿತ್ತು. ನನ್ನ ಜೀವನವು ಹೀಗೆಯೇ ತೆರೆದುಕೊಂಡಿತು. ನನ್ನ ತಾಯಿಗೆ ಸೇವೆ ಮಾಡುವ ಸ್ವಾಭಾವಿಕ ಒಲವು ಇತ್ತು. ಅವರಿಗೆ ಸಾಂಪ್ರದಾಯಿಕ ಪರಿಹಾರಗಳ ಜ್ಞಾನವಿತ್ತು ಮತ್ತು ಅವರು ಹಳ್ಳಿಯಲ್ಲಿ ಮಕ್ಕಳಿಗೆ ಚಿಕಿತ್ಸೆ ನೀಡುತ್ತಿದ್ದರು. ಪೋಷಕರು ತಮ್ಮ ಮಕ್ಕಳನ್ನು ಬೆಳಿಗ್ಗೆ ಸೂರ್ಯೋದಯಕ್ಕೆ ಮೊದಲು - ಕೆಲವೊಮ್ಮೆ ಐದು ಗಂಟೆಗೆ ಮುಂಚೆಯೇ - ಚಿಕಿತ್ಸೆಗಾಗಿ ಅವರ ಬಳಿಗೆ ಕರೆತರುತ್ತಿದ್ದರು. ಮಕ್ಕಳು ಆಗಾಗ್ಗೆ ಅಳುತ್ತಿದ್ದರು ಮತ್ತು ಇದರಿಂದಾಗಿ, ನಾವು ಕೂಡ ಬೇಗನೆ ಏಳಬೇಕಾಗುತ್ತಿತ್ತು. ಅವರು ಮಕ್ಕಳನ್ನು ಎಚ್ಚರಿಕೆಯಿಂದ ನೋಡಿಕೊಳ್ಳುತ್ತಿದ್ದರು, ನಿಸ್ವಾರ್ಥ ಸೇವಾ ಮನೋಭಾವವನ್ನು ಹೊಂದಿದ್ದರು. ಹಿಂತಿರುಗಿ ನೋಡಿದಾಗ, ಇದನ್ನು ನೋಡುತ್ತಾ ನನ್ನಲ್ಲಿ ಸಮಾಜದ ಬಗ್ಗೆ ಆಳವಾದ ಸಹಾನುಭೂತಿ ಮತ್ತು ಇತರರಿಗೆ ಒಳ್ಳೆಯದನ್ನು ಮಾಡುವ ಬಯಕೆ ಮೂಡಿತು ಎಂದು ಅನಿಸುತ್ತದೆ. ಇಂದು ನಾನು ಏನಾಗಿದ್ದೇನೆಂದರೆ ಅದು ನಾನು ಬೆಳೆದ ಪರಿಸರದ ಪರಿಣಾಮವಾಗಿದೆ - ನನ್ನ ತಾಯಿ ಮತ್ತು ತಂದೆ ನನ್ನಲ್ಲಿ ತುಂಬಿದ ಮೌಲ್ಯಗಳು ಮತ್ತು ನನ್ನ ಶಿಕ್ಷಕರ ಮಾರ್ಗದರ್ಶನ. ನನ್ನ ಜೀವನವು ಈ ಪ್ರಭಾವಗಳಿಂದ ರೂಪುಗೊಂಡಿದೆ.

ಲೆಕ್ಸ್ ಫ್ರಿಡ್ಮನ್: ಈ ಮಾತುಕತೆಯನ್ನು ಕೇಳುತ್ತಿರುವ ಅನೇಕ ಯುವಕರು ನಿಮ್ಮ ಕಥೆಯಿಂದ– ಸಾಮಾನ್ಯ ಹಿನ್ನೆಲೆಯಿಂದ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವನ್ನು ಮುನ್ನಡೆಸುವವರೆಗಿನ ನಿಮ್ಮ ಪ್ರಯಾಣದಿಂದ ನಿಜವಾಗಿಯೂ ಪ್ರೇರಿತರಾಗಿದ್ದಾರೆ. ಜೀವನದಲ್ಲಿ ಕಷ್ಟಪಡುತ್ತಿರುವ, ದಾರಿ ತಪ್ಪಿದ ಭಾವನೆ ಹೊಂದಿರುವ ಮತ್ತು ತಮ್ಮ ದಾರಿಯನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿರುವ ಯುವಜನತೆಗೆ ನೀವು ಯಾವ ಸಲಹೆಯನ್ನು ನೀಡುತ್ತೀರಿ?

ಪ್ರಧಾನಮಂತ್ರಿ: ಜೀವನದಲ್ಲಿ ರಾತ್ರಿ ಎಷ್ಟೇ ಕತ್ತಲೆಯಾಗಿ ಕಂಡರೂ, ಅದು ಕೇವಲ ರಾತ್ರಿಯಾಗಿಯೇ ಉಳಿಯುತ್ತದೆ - ಬೆಳಗು ಖಂಡಿತವಾಗಿಯೂ ಬರುತ್ತದೆ ಎಂದು ನಾನು ಎಲ್ಲಾ ಯುವಜನರಿಗೆ ಹೇಳಲು ಬಯಸುತ್ತೇನೆ. ಅದಕ್ಕಾಗಿಯೇ ತಾಳ್ಮೆ ಮತ್ತು ಆತ್ಮವಿಶ್ವಾಸ ಅತ್ಯಗತ್ಯ. ಸನ್ನಿವೇಶಗಳು ಸವಾಲಿನದ್ದಾಗಿರಬಹುದು, ಆದರೆ ನಾನು ಕೇವಲ ಸನ್ನಿವೇಶಗಳಿಂದಾಗಿ ಇಲ್ಲಿಗೆ ಬಂದಿಲ್ಲ. ದೇವರು ಅವರನ್ನು ಈ ಲೋಕಕ್ಕೆ ಒಂದು ಉದ್ದೇಶಕ್ಕಾಗಿ ಕಳುಹಿಸಿದ್ದಾನೆ ಎಂಬ ದೃಢವಿಶ್ವಾಸವಿರಬೇಕು ಮತ್ತು ನೆನಪಿಡಿ, ನೀವು ಎಂದಿಗೂ ಒಂಟಿಯಲ್ಲ - ನಿಮ್ಮನ್ನು ಕಳುಹಿಸಿದವನು ಯಾವಾಗಲೂ ನಿಮ್ಮೊಂದಿಗಿದ್ದಾನೆ. ಈ ಅಚಲ ನಂಬಿಕೆ ಬಹಳ ಮುಖ್ಯ. ಕಷ್ಟಗಳು ನಮ್ಮನ್ನು ಪರೀಕ್ಷಿಸಲು ಇವೆ; ಅವು ನಮ್ಮನ್ನು ಮುರಿಯಲು ಇಲ್ಲ, ಬದಲಾಗಿ ನಮ್ಮನ್ನು ಬಲಪಡಿಸುತ್ತವೆ. ಕಷ್ಟಗಳು ಹತಾಶೆಗೆ ಕಾರಣವಾಗಬಾರದು - ಅವು ದೃಢತೆಯನ್ನು ಬೆಳೆಸುವ ಉದ್ದೇಶವನ್ನು ಹೊಂದಿವೆ. ನಾನು ಯಾವಾಗಲೂ ಪ್ರತಿಯೊಂದು ಬಿಕ್ಕಟ್ಟು, ಪ್ರತಿಯೊಂದು ಸವಾಲನ್ನು ಒಂದು ಅವಕಾಶವಾಗಿ ನೋಡಿದ್ದೇನೆ. ಇದನ್ನೇ ನಾನು ಯುವಜನರಿಗೆ ತಿಳಿಸಲು ಬಯಸುತ್ತೇನೆ. ಎರಡನೆಯದಾಗಿ, ತಾಳ್ಮೆ ಅತ್ಯಗತ್ಯ - ಜೀವನದಲ್ಲಿ ಯಾವುದೇ ಅಡ್ಡದಾರಿಗಳಿಲ್ಲ. ನಮ್ಮ ರೈಲು ನಿಲ್ದಾಣದಲ್ಲಿ, ಸೇತುವೆಯನ್ನು ಬಳಸಿ, ಹಳಿಗಳನ್ನು ದಾಟಬೇಟಿ ಎಂದು ಜನರಿಗೆ ಎಚ್ಚರಿಕೆ ನೀಡುವ ಫಲಕವಿದೆ. ಅದು ಹೇಳುತ್ತದೆ, "ಶಾರ್ಟ್‌ಕಟ್ ನಿಮ್ಮನ್ನು ಸಣ್ಣ ಭಾಗಗಳಾಗಿ ಕತ್ತರಿಸುತ್ತದೆ." ಇದು ಜೀವನಕ್ಕೂ ಸರಿಹೊಂದುತ್ತದೆ. ನಾನು ಯುವಜನರಿಗೆ ನೆನಪಿಸಲು ಬಯಸುತ್ತೇನೆ: "ಶಾರ್ಟ್‌ಕಟ್ ನಿಮ್ಮನ್ನು ಸಣ್ಣ ಭಾಗಗಳಾಗಿ ಕತ್ತರಿಸುತ್ತದೆ." ಜೀವನದಲ್ಲಿ ಯಾವುದೇ ಶಾರ್ಟ್‌ಕಟ್‌ ಗಳಿಲ್ಲ. ತಾಳ್ಮೆ ಮತ್ತು ಪರಿಶ್ರಮ ಅತ್ಯಗತ್ಯ. ನಮಗೆ ಯಾವುದೇ ಜವಾಬ್ದಾರಿ ವಹಿಸಿದರೂ, ನಾವು ಅದಕ್ಕೆ ನಮ್ಮನ್ನು ಹೃತ್ಪೂರ್ವಕವಾಗಿ ಅರ್ಪಿಸಿಕೊಳ್ಳಬೇಕು. ನಾವು ಅದನ್ನು ಸಂತೋಷದಿಂದ ಸ್ವೀಕರಿಸಬೇಕು ಮತ್ತು ನಮ್ಮ ಕೆಲಸದಲ್ಲಿ ಹೆಮ್ಮೆ ಪಡಬೇಕು. ಒಬ್ಬ ವ್ಯಕ್ತಿಯು ಈ ಜೀವನ ವಿಧಾನವನ್ನು ಅಳವಡಿಸಿಕೊಂಡರೆ, ಉಳಿದೆಲ್ಲವೂ ಕಾರ್ಯರೂಪಕ್ಕೆ ಬರುತ್ತದೆ ಎಂದು ನಾನು ನಂಬುತ್ತೇನೆ. ಯಶಸ್ಸು ಮತ್ತು ಸಮೃದ್ಧಿಗೆ ತನ್ನದೇ ಆದ ವೈಭವವಿದೆ, ಆದರೆ ಯಾರೂ ಅತೃಪ್ತರಾಗಬಾರದು. ಯಾರಾದರೂ ಸುಮ್ಮನೆ ಸೋಮಾರಿಯಾಗಿ, ಸೌಕರ್ಯದಲ್ಲಿ ಮುಳುಗಿದ್ದರೆ, ಅವರು ಅಂತಿಮವಾಗಿ ನಿಶ್ಚಲವಾಗುತ್ತಾರೆ. ಸಂದರ್ಭಗಳು ಏನೇ ಇರಲಿ, ಯಾವಾಗಲೂ ಕೊಡುಗೆ ನೀಡಲು ಶ್ರಮಿಸಬೇಕು. ನಾನು ಪ್ರಭಾವಿ ಸ್ಥಾನದಲ್ಲಿದ್ದರೆ, ಅದನ್ನು ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಸಮಾಜಕ್ಕೆ ಮರಳಿ ನೀಡಲು ಬಳಸಬೇಕು. ನಾನು ಅಂತಹ ಸ್ಥಾನದಲ್ಲಿಲ್ಲದಿದ್ದರೂ, ಇನ್ನೂ ಅರ್ಥಪೂರ್ಣ ಕೆಲಸ ಮಾಡಬೇಕಾಗಿರುತ್ತದೆ. ಒಬ್ಬರ ಸ್ಥಾನಮಾನ ಅಥವಾ ಪರಿಸ್ಥಿತಿ ಏನೇ ಇರಲಿ, ಬೆಳವಣಿಗೆ ಮತ್ತು ಸೇವೆಗೆ ಯಾವಾಗಲೂ ಅವಕಾಶವಿರುತ್ತದೆ ಮತ್ತು ಅದು ನಾನು ಪ್ರೋತ್ಸಾಹಿಸುವ ವಿಧಾನವಾಗಿದೆ.

 

 

|

ಇನ್ನೊಂದು ಮುಖ್ಯವಾದ ಅಂಶವೆಂದರೆ ಕಲಿಕೆ ಎಂದಿಗೂ ನಿಲ್ಲಬಾರದು. ಕೆಲವರು ತಮಗೆ ಸಾಕಷ್ಟು ತಿಳಿದಿದೆ ಎಂದು ಭಾವಿಸಿ ಸಂತೃಪ್ತರಾಗುತ್ತಾರೆ. ಆದರೆ ನಮ್ಮೊಳಗಿನ ವಿದ್ಯಾರ್ಥಿ ಎಂದಿಗೂ ಸಾಯಬಾರದು; ನಾವು ಯಾವಾಗಲೂ ಕಲಿಯಲು ಉತ್ಸುಕರಾಗಿರಬೇಕು. ಉದಾಹರಣೆಗೆ, ನನ್ನ ಮಾತೃಭಾಷೆ ಗುಜರಾತಿ ಮತ್ತು ನಾನು ಚಿಕ್ಕವನಿದ್ದಾಗ, ನನಗೆ ಹಿಂದಿಯ ಬಗ್ಗೆ ಕಡಿಮೆ ಜ್ಞಾನವಿತ್ತು. ವಾಗ್ಮೀಯತೆ ಎಂದರೇನು ಅಥವಾ ಪರಿಣಾಮಕಾರಿಯಾಗಿ ಮಾತನಾಡುವುದು ಹೇಗೆ ಎಂದು ನನಗೆ ತಿಳಿದಿರಲಿಲ್ಲ. ಆದಾಗ್ಯೂ, ನಾನು ನನ್ನ ತಂದೆಯೊಂದಿಗೆ ಚಹಾ ಅಂಗಡಿಯಲ್ಲಿ ಕುಳಿತುಕೊಳ್ಳುತ್ತಿದ್ದೆ, ಅಲ್ಲಿ ನನಗೆ ಜೀವನದ ಎಲ್ಲಾ ವರ್ಗಗಳ ಜನರನ್ನು ಭೇಟಿ ಮಾಡುವ ಅವಕಾಶವಿತ್ತು. ಬಾಲ್ಯದಲ್ಲಿಯೂ ಸಹ, ನಾನು ಅವರ ನಡವಳಿಕೆ, ಅವರು ಮಾತನಾಡುವ ರೀತಿ, ಅವರ ದೃಷ್ಟಿಕೋನಗಳಂತಹ ಪ್ರತಿಯೊಂದು ಮುಖಾಮುಖಿಗಳಿಂದ ಕಲಿತಿದ್ದೇನೆ. ನಾನು ಎಲ್ಲವನ್ನೂ ಗ್ರಹಿಸಿಕೊಂಡೆ. ಆ ಸಮಯದಲ್ಲಿ ನಾನು ಪ್ರಭಾವಿ ಸ್ಥಾನದಲ್ಲಿಲ್ಲದಿದ್ದರೂ, ಭವಿಷ್ಯಕ್ಕಾಗಿ ನನ್ನನ್ನು ನಾನು ಸಿದ್ಧಪಡಿಸಿಕೊಳ್ಳಬೇಕು ಎಂದು ನಾನು ನನಗೆ ನಾನೇ ಹೇಳಿಕೊಂಡೆ. ನಾನು ಏಕೆ ಕಲಿಯಬಾರದು? ನಾನು ನನ್ನನ್ನು ಏಕೆ ಸುಧಾರಿಸಿಕೊಳ್ಳಬಾರದು? ಕಲಿಯುವ ಬಯಕೆ ಯಾವಾಗಲೂ ನಮ್ಮೊಳಗೆ ಜೀವಂತವಾಗಿರಬೇಕು ಎಂದು ನಾನು ದೃಢವಾಗಿ ನಂಬುತ್ತೇನೆ. ಇದಲ್ಲದೆ, ಅನೇಕ ಜನರು ಕೆಲವು ಗುರಿಗಳನ್ನು ಸಾಧಿಸುವ ಅಥವಾ ನಿರ್ದಿಷ್ಟವಾದದ್ದನ್ನು ಸಾಧಿಸುವತ್ತ ಗಮನಹರಿಸುವುದನ್ನು ನಾನು ಗಮನಿಸಿದ್ದೇನೆ. ಅವರು ಬಯಸಿದ ಫಲಿತಾಂಶವನ್ನು ತಲುಪಲು ವಿಫಲವಾದಾಗ, ಅವರು ನಿರಾಶೆಗೊಳ್ಳುತ್ತಾರೆ. ಅದಕ್ಕಾಗಿಯೇ ನಾನು ಯಾವಾಗಲೂ ನನ್ನ ಸ್ನೇಹಿತರಿಗೆ ಸಲಹೆ ನೀಡುತ್ತೇನೆ: "ಏನನ್ನಾದರೂ ಪಡೆಯುವ ಅಥವಾ ಆಗುವ ಕನಸು ಕಾಣುವ ಬದಲು, ಏನನ್ನಾದರೂ ಮಾಡುವ ಕನಸು ಕಾಣಿರಿ."

ನೀವು ಹತ್ತು ಗುರಿಗಳನ್ನು ಹೊಂದಿದ್ದರೂ ಎಂಟನ್ನು ತಲುಪಿದಾಗಲೂ ನೀವು ಸಾಧನೆಯ ಭಾವನೆಯನ್ನು ಅನುಭವಿಸುವಿರಿ. ನೀವು ನಿರುತ್ಸಾಹಗೊಳ್ಳದೆ ಹತ್ತು ಸಾಧನೆಗಳಿಗೆ ಶ್ರಮಿಸುತ್ತಲೇ ಇರುತ್ತೀರಿ. ಆದರೆ, ನಿಮ್ಮ ಕನಸು ಏನನ್ನಾದರೂ ಆಗುವುದರ ಬಗ್ಗೆ ಮಾತ್ರವಾಗಿದ್ದರೆ ಮತ್ತು ಅದು ನನಸಾಗದಿದ್ದರೆ, ನೀವು ಸಾಧಿಸಿದ್ದೂ ಸಹ ಹೊರೆಯಾಗಿ ಭಾಸವಾಗುತ್ತದೆ. ಅದಕ್ಕಾಗಿಯೇ ನೀವು ಕೇವಲ ಆಕಾಂಕ್ಷೆಗಿಂತ ಹೆಚ್ಚಾಗಿ ಕ್ರಿಯೆಯ ಮೇಲೆ ಗಮನಹರಿಸಬೇಕು.

ಕೊನೆಯದಾಗಿ, ಜೀವನದಲ್ಲಿ, ನೀವು ಏನನ್ನು ಹೊಂದಿದ್ದೀರಿ ಅಥವಾ ಏನನ್ನು ಪಡೆದಿಲ್ಲ ಎಂಬುದರ ಬಗ್ಗೆ ಚಿಂತಿಸುವ ಬದಲು, "ನಾನು ಏನು ನೀಡಬಲ್ಲೆ?" ಎಂದು ನಿಮ್ಮನ್ನು ಕೇಳಿಕೊಳ್ಳಿ. ನಿಜವಾದ ಸಂತೃಪ್ತಿಯು ನೀಡುವ ಮನೋಭಾವದಿಂದ ಹುಟ್ಟುತ್ತದೆ.

ಲೆಕ್ಸ್ ಫ್ರಿಡ್ಮನ್: ನಾನು ನಿಮ್ಮೊಂದಿಗೆ ಒಂದು ವಿಷಯವನ್ನು ಹಂಚಿಕೊಳ್ಳಲು ಬಯಸುತ್ತೇನೆ. ಬಾಲ್ಯದಿಂದಲೂ, ನಾನು ಈಗ ಮಾಡುತ್ತಿರುವುದನ್ನು ಮಾಡುವುದೇ ನನ್ನ ಕನಸಾಗಿತ್ತು. ಆದ್ದರಿಂದ, ಇದು ನನಗೆ ಬಹಳ ವಿಶೇಷವಾದ ಕ್ಷಣ. ನಿಮ್ಮ ಜೀವನದ ಮತ್ತೊಂದು ಆಕರ್ಷಕ ಭಾಗವೆಂದರೆ, 17 ನೇ ವಯಸ್ಸಿನಲ್ಲಿ, ನೀವು ಮನೆ ಬಿಟ್ಟು ಎರಡು ವರ್ಷಗಳ ಕಾಲ ಹಿಮಾಲಯದಲ್ಲಿ ಅಲೆದಾಡಿದಿರಿ. ನೀವು ನಿಮ್ಮ ಉದ್ದೇಶ, ಸತ್ಯ ಮತ್ತು ದೇವರನ್ನು ಹುಡುಕುತ್ತಿದ್ದಿರಿ. ನಿಮ್ಮ ಜೀವನದ ಈ ಅವಧಿಯ ಬಗ್ಗೆ ಕೆಲವೇ ಜನರಿಗೆ ತಿಳಿದಿದೆ. ನಿಮಗೆ ಮನೆ ಇರಲಿಲ್ಲ, ಆಸ್ತಿಯೂ ಇರಲಿಲ್ಲ - ನಿಮ್ಮ ಜೀವನವು ಸಂಪೂರ್ಣವಾಗಿ ತಪಸ್ವಿಯಾಗಿತ್ತು. ನಿಮ್ಮ ತಲೆಯ ಮೇಲೆ ಸೂರು ಇರಲಿಲ್ಲ. ಆ ಸಮಯದ ಕೆಲವು ಆಧ್ಯಾತ್ಮಿಕ ಕ್ಷಣಗಳು, ಅಭ್ಯಾಸಗಳು ಅಥವಾ ಅನುಭವಗಳನ್ನು ಹಂಚಿಕೊಳ್ಳಲು ನೀವು ಬಯಸುವಿರಾ?

ಪ್ರಧಾನಮಂತ್ರಿ: ನೀವು ಸಾಕಷ್ಟು ಸಂಶೋಧನೆ ಮಾಡಿದ್ದೀರಿ ಎಂದು ನನಗೆ ತೋರುತ್ತದೆ. ನಿಜ ಹೇಳಬೇಕೆಂದರೆ, ನಾನು ಈ ವಿಷಯದ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ, ಆದರೆ ನಾನು ಖಂಡಿತವಾಗಿಯೂ ಕೆಲವು ವಿಷಯಗಳನ್ನು ಹಂಚಿಕೊಳ್ಳಬಲ್ಲೆ. ನಾನು ಒಂದು ಸಣ್ಣ ಸ್ಥಳದಲ್ಲಿ, ಸಮುದಾಯ ಆಧಾರಿತ ವಾತಾವರಣದಲ್ಲಿ ಬೆಳೆದೆ. ಜನರ ನಡುವೆ ವಾಸಿಸುವುದು ಒಂದು ಜೀವನ ವಿಧಾನವಾಗಿತ್ತು. ನಮ್ಮ ಹಳ್ಳಿಯಲ್ಲಿ ಗ್ರಂಥಾಲಯವಿತ್ತು, ನಾನು ಆಗಾಗ್ಗೆ ಪುಸ್ತಕಗಳನ್ನು ಓದಲು ಅಲ್ಲಿಗೆ ಹೋಗುತ್ತಿದ್ದೆ. ಆ ಪುಸ್ತಕಗಳು ನನ್ನಲ್ಲಿ ಸ್ವಯಂ ಶಿಸ್ತಿನ ಆಳವಾದ ಬಯಕೆಯನ್ನು ಹುಟ್ಟುಹಾಕಿದವು. ನಾನು ಸ್ವಾಮಿ ವಿವೇಕಾನಂದ, ಛತ್ರಪತಿ ಶಿವಾಜಿ ಮಹಾರಾಜ್ ಬಗ್ಗೆ ಓದುತ್ತಿದ್ದೆ - ಅವರು ತಮ್ಮ ಜೀವನವನ್ನು ಹೇಗೆ ರೂಪಿಸಿಕೊಂಡರು, ಅವರು ತಮ್ಮನ್ನು ಹೇಗೆ ಪರಿವರ್ತಿಸಿಕೊಂಡರು ಎಂದು ತಿಳಿದುಕೊಳ್ಳುತ್ತಿದ್ದೆ. ಅವರಿಂದ ಪ್ರೇರಿತರಾಗಿ, ನಾನು ನನ್ನ ಸ್ವಂತ ಜೀವನದಲ್ಲಿ ಅವುಗಳನ್ನು ಪ್ರಯೋಗಿಸಿದೆ. ನನ್ನ ಪ್ರಯೋಗಗಳು ಹೆಚ್ಚಾಗಿ ಭೌತಿಕ ಸ್ವರೂಪದ್ದಾಗಿದ್ದವು. ಉದಾಹರಣೆಗೆ, ನಮ್ಮ ಪ್ರದೇಶದಲ್ಲಿ ವಿಪರೀತ ಚಳಿ ಇಲ್ಲದಿದ್ದರೂ, ಡಿಸೆಂಬರ್‌ ನಲ್ಲಿ ರಾತ್ರಿಗಳು ತುಂಬಾ ಚಳಿಯಿಂದ ಕೂಡಿರುತ್ತವೆ. ನಾನು ನನಗೇ ಸವಾಲು ಹಾಕಿಕೊಳ್ಳುತ್ತಿದ್ದೆ - ಕೆಲವು ರಾತ್ರಿಗಳಲ್ಲಿ, ನನ್ನ ದೇಹವು ಚಳಿಯನ್ನು ಹೇಗೆ ಸಹಿಸಿಕೊಳ್ಳುತ್ತದೆ ಎಂದು ನೋಡಲು ನಾನು ಯಾವುದೇ ಹೊದಿಕೆಯಿಲ್ಲದೆ ಹೊರಗೆ ಮಲಗುತ್ತಿದ್ದೆ. ನಾನು ಚಿಕ್ಕ ವಯಸ್ಸಿನಲ್ಲಿಯೇ ಅಂತಹ ಪ್ರಯೋಗಗಳನ್ನು ನಡೆಸಿದ್ದೆ. ಓದುವುದರ ಹೊರತಾಗಿ, ನನ್ನ ದೈನಂದಿನ ಚಟುವಟಿಕೆಗಳಲ್ಲಿ ಹಳ್ಳಿಯ ಕೆರೆಗೆ ಹೋಗುವುದು, ನನ್ನ ಕುಟುಂಬದ ಬಟ್ಟೆಗಳನ್ನು ತೊಳೆಯುವುದು ಮತ್ತು ಈಜುವುದು ಮಾಡುತ್ತಿದ್ದೆ. ಈಜು ನನ್ನ ದೈಹಿಕ ದಿನಚರಿಯ ಪ್ರಮುಖ ಭಾಗವಾಯಿತು. ಹಾಗಾಗಿ ಈ ಎಲ್ಲಾ ವಿಷಯಗಳು ನನ್ನ ಜೀವನಕ್ಕೆ ಸಂಬಂಧಿಸಿವೆ. ನಾನು ಸ್ವಾಮಿ ವಿವೇಕಾನಂದರ ಕೃತಿಗಳನ್ನು ಆಳವಾಗಿ ಅಧ್ಯಯನ ಮಾಡುವಾಗ, ಅವರ ಬೋಧನೆಗಳ ಕಡೆಗೆ ನನಗೆ ಇನ್ನೂ ಬಲವಾದ ಆಕರ್ಷಣೆ ಉಂಟಾಯಿತು. ವಿವೇಕಾನಂದರ ಕುರಿತಾದ ಒಂದು ಕಥೆ ನನ್ನ ಮೇಲೆ ಆಳವಾದ ಪ್ರಭಾವ ಬೀರಿತು.

ವಿವೇಕಾನಂದರ ತಾಯಿ ಅಸ್ವಸ್ಥರಾಗಿದ್ದರು, ಆದ್ದರಿಂದ ಅವರು ತಾಯಿಯನ್ನು ರಾಮಕೃಷ್ಣ ಪರಮಹಂಸರ ಬಳಿಗೆ ಕರೆದೊಯ್ದರು. ಆ ಸಮಯದಲ್ಲಿ, ವಿವೇಕಾನಂದರು ಆಳವಾದ ಬುದ್ಧಿಜೀವಿಗಳಾಗಿದ್ದರು ಮತ್ತು ಆಗಾಗ್ಗೆ ಚರ್ಚೆ ಮತ್ತು ವಾದ ಮಾಡುತ್ತಿದ್ದರು, ಎಲ್ಲವನ್ನೂ ಪ್ರಶ್ನಿಸುತ್ತಿದ್ದರು. "ನನ್ನ ಬಳಿ ಹಣವಿದ್ದರೆ, ಇಂದು ನಾನು ನನ್ನ ತಾಯಿಗೆ ಎಷ್ಟು ಚೆನ್ನಾಗಿ ಸೇವೆ ಮಾಡಬಹುದಿತ್ತು?" ಎಂದು ಅವರು ಯೋಚಿಸುತ್ತಿದ್ದರು ಮತ್ತು ತಮ್ಮ ಪರಿಸ್ಥಿತಿಯ ಬಗ್ಗೆ ಅಸಹಾಯಕರಾಗಿದ್ದರು. ಇದನ್ನು ನೋಡಿದ ರಾಮಕೃಷ್ಣ ಪರಮಹಂಸರು ಅವರಿಗೆ, "ನೀನು ನನಗೇಕೆ ತೊಂದರೆ ಕೊಡುತ್ತಿದ್ದೀಯಾ? ಕಾಳಿ ಮಾತೆಯ ಬಳಿಗೆ ಹೋಗು. ಅವಳು ಅಲ್ಲಿದ್ದಾಳೆ - ನಿನಗೆ ಏನು ಬೇಕೋ ಅದನ್ನು ಅವಳಲ್ಲಿ ಕೇಳು" ಎಂದು ಹೇಳಿದರು. ವಿವೇಕಾನಂದರು ದೇವಸ್ಥಾನಕ್ಕೆ ಹೋಗಿ ಕಾಳಿ ಮಾತೆಯ ವಿಗ್ರಹದ ಮುಂದೆ ಕುಳಿತು ಗಂಟೆಗಟ್ಟಲೆ ಧ್ಯಾನ ಮಾಡಿದರು. ಅವರು ಹಿಂತಿರುಗಿದಾಗ, ರಾಮಕೃಷ್ಣರು, " ನಿನಗೆ ಬೇಕಾದುದನ್ನು ಕಾಳಿ ಮಾತೆಯ ಬಳಿ ಕೇಳಿದೆಯಾ?" ಎಂದು ಕೇಳಿದರು. ವಿವೇಕಾನಂದರು, "ಇಲ್ಲ, ನಾನು ಕೇಳಲಿಲ್ಲ" ಎಂದು ಉತ್ತರಿಸಿದರು. ನಂತರ ರಾಮಕೃಷ್ಣ ಪರಮಹಂಸರು ಅವರಿಗೆ, "ನಾಳೆ ಮತ್ತೆ ಹೋಗು - ಮಾತೆಯು ನಿನ್ನ ಆಸೆಯನ್ನು ಪೂರೈಸುತ್ತಾಳೆ" ಎಂದು ಹೇಳಿದರು. ಮರುದಿನ ಮತ್ತು ಮತ್ತೆ ಮೂರನೇ ದಿನ, ವಿವೇಕಾನಂದರು ದೇವಸ್ಥಾನಕ್ಕೆ ಹೋದರು. ಆದರೆ ಪ್ರತಿ ಬಾರಿಯೂ ಅವರು ಕಾಳಿ ಮಾತೆಯ ಸನ್ನಿಧಿಯಲ್ಲಿ ಮುಳುಗಿ ಏನನ್ನೂ ಕೇಳಲು ಸಾಧ್ಯವಾಗಲಿಲ್ಲ. ಅವರ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದರು, ಅವರಿಗೆ ಸಹಾಯದ ಅಗತ್ಯವಿತ್ತು, ಆದರೂ ಅವರು ಭಕ್ತಿಯಲ್ಲಿ ಮುಳುಗಿ ಖಾಲಿ ಕೈಯಲ್ಲಿ ಹಿಂತಿರುಗುತ್ತಿದ್ದರು. ಅವರು ಇದನ್ನು ರಾಮಕೃಷ್ಣ ಪರಮಹಂಸರಿಗೆ ಹೇಳಿದಾಗ, ಅದು ಅವರೊಳಗೆ ಆಳವಾದ ಸಾಕ್ಷಾತ್ಕಾರವನ್ನು ಹುಟ್ಟುಹಾಕಿತು. ಈ ಅನುಭವವು ಅವರ ದೃಷ್ಟಿಕೋನವನ್ನು ಬದಲಿಸಿತು - ಲೌಕಿಕ ಲಾಭಗಳನ್ನು ಹುಡುಕುವುದು ಅಂತ್ಯವಿಲ್ಲದ ಹಸಿವನ್ನು ಮಾತ್ರ ಹೆಚ್ಚಿಸುತ್ತದೆ, ಆದರೆ ನಿಜವಾದ ತೃಪ್ತಿ ಕೊಡುವುದರಲ್ಲಿ ಅಡಗಿದೆ ಎಂದು ಅವರು ಅರ್ಥಮಾಡಿಕೊಂಡರು. ಈ ಅರಿವಿನಿಂದಲೇ ಅವರ ಜೀವನದಲ್ಲಿ ನಿಸ್ವಾರ್ಥ ಸೇವೆಯ ಮನೋಭಾವ ಬೇರೂರಿತು. ಅವರು ಶಿವ ಮತ್ತು ಆತ್ಮದ ಏಕತೆಯನ್ನು, ಜೀವಿಗಳಿಗೆ ಸೇವೆ ಸಲ್ಲಿಸುವುದು ದೈವಿಕ ಸೇವೆ ಮಾಡುವ ನಿಜವಾದ ಮಾರ್ಗ ಎಂಬ ಕಲ್ಪನೆಯನ್ನು ನಂಬಿದರು. ಈ ಕಥೆ ನನ್ನ ಮೇಲೆ ಆಳವಾದ ಪ್ರಭಾವ ಬೀರಿತು. ಬಹುಶಃ, ಯಾವುದೋ ರೀತಿಯಲ್ಲಿ, ಅದು ನನ್ನ ಸ್ವಂತ ಚಿಂತನೆಯ ಮೇಲೆ ಪ್ರಭಾವ ಬೀರಿತು - ನಿಜವಾದ ತೃಪ್ತಿ ಪಡೆಯುವುದರಿಂದಲ್ಲ, ಕೊಡುವುದರಿಂದ ಬರುತ್ತದೆ ಎಂಬ ನಂಬಿಕೆಯನ್ನು ನನ್ನಲ್ಲಿ ಮೂಡಿಸಿತು. ನನ್ನ ಬಾಲ್ಯದ ಇನ್ನೊಂದು ನೆನಪು ನೆನಪಾಗುತ್ತದೆ. ನಮ್ಮ ಊರಿನ ಹತ್ತಿರದಲ್ಲಿ ಒಂದು ಮಹಾದೇವ ದೇವಸ್ಥಾನವಿತ್ತು, ಅಲ್ಲಿ ಒಬ್ಬ ಸಂತ ಧ್ಯಾನ ಮಾಡಲು ಬರುತ್ತಿದ್ದರು. ಅವರ ಆಧ್ಯಾತ್ಮಿಕ ಉಪಸ್ಥಿತಿಯಿಂದ ಆಕರ್ಷಿತನಾಗಿ ನಾನು ಅವರತ್ತ ಆಕರ್ಷಿತನಾದೆ. ನಾನು ಸ್ವಾಮಿ ವಿವೇಕಾನಂದರ ಬಗ್ಗೆ ಓದಿದ್ದರೂ ನಿಜ ಜೀವನದಲ್ಲಿ ಅಂತಹ ಜನರನ್ನು ಎಂದಿಗೂ ನೋಡಿಲ್ಲವಾದ್ದರಿಂದ, ನಾನು ಗಮನಿಸಲು ಮತ್ತು ಕಲಿಯಲು ಉತ್ಸುಕನಾಗಿದ್ದೆ. ನವರಾತ್ರಿಯ ಸಮಯದಲ್ಲಿ, ಈ ಸಂತರು ಒಂದು ವಿಶಿಷ್ಟ ಉಪವಾಸವನ್ನು ಕೈಗೊಂಡರು - ಒಂಬತ್ತು ಅಥವಾ ಹತ್ತು ದಿನಗಳ ಕಾಲ ತಿನ್ನದೆ ಅಥವಾ ಕುಡಿಯದೆ ಧ್ಯಾನದಲ್ಲಿದ್ದರು. ಅದೇ ಸಮಯದಲ್ಲಿ, ನನ್ನ ಮಾವನ ಕುಟುಂಬದಲ್ಲಿ ಮದುವೆ ನಡೆಯುತ್ತಿತ್ತು, ಮತ್ತು ನನ್ನ ಇಡೀ ಕುಟುಂಬವು ಮದುವೆಗೆ ಹೊರಡಲು ತಯಾರಿ ನಡೆಸುತ್ತಿತ್ತು. ಯಾವುದೇ ಮಗುವಿಗೆ, ತಮ್ಮ ಮಾವನ ಮನೆಗೆ ಭೇಟಿ ನೀಡುವುದು ತುಂಬಾ ಉತ್ಸಾಹದ ಮೂಲವಾಗಿತ್ತು, ಆದರೆ ನಾನು ನನ್ನ ಕುಟುಂಬಕ್ಕೆ, "ಇಲ್ಲ, ನಾನು ಹೋಗುವುದಿಲ್ಲ. ನಾನು ಇಲ್ಲೇ ಇದ್ದು ಸ್ವಾಮೀಜಿಯ ಸೇವೆ ಮಾಡುತ್ತೇನೆ. ಅವರು ತಿನ್ನಲು ಅಥವಾ ಕುಡಿಯಲು ಸಾಧ್ಯವಿಲ್ಲದ ಕಾರಣ, ನಾನು ಅವರನ್ನು ನೋಡಿಕೊಳ್ಳುತ್ತೇನೆ" ಎಂದು ಹೇಳಿದೆ. ಹಾಗಾಗಿ, ಮದುವೆಗೆ ಹೋಗುವ ಬದಲು, ನಾನು ಸಂತರೊಂದಿಗೆ ಇದ್ದು, ಅವರನ್ನು ನೋಡಿಕೊಳ್ಳುತ್ತಿದ್ದೆ. ಮಗುವಾಗಿದ್ದಾಗಲೂ, ನಾನು ಅಂತಹ ಅನುಭವಗಳ ಕಡೆಗೆ ಸಹಜವಾಗಿಯೇ ಒಲವು ತೋರುತ್ತಿದ್ದೆ. ಅದೇ ಸಮಯದಲ್ಲಿ, ದೇಶಕ್ಕೆ ಸೇವೆ ಸಲ್ಲಿಸಿದವರಿಂದ ನನಗೆ ಸ್ಫೂರ್ತಿ ಸಿಕ್ಕಿತು. ನಮ್ಮ ಹಳ್ಳಿಯಲ್ಲಿ, ಕೆಲವು ಪುರುಷರು ಸೈನ್ಯದಲ್ಲಿದ್ದರು. ಅವರು ರಜೆಯ ಮೇಲೆ ಮನೆಗೆ ಹಿಂದಿರುಗಿದಾಗಲೆಲ್ಲಾ, ಅವರ ಸಮವಸ್ತ್ರವನ್ನು ಧರಿಸಿ, ನಾನು ಇಡೀ ದಿನ ಅವರ ಹಿಂದೆ ಓಡುತ್ತಿದ್ದೆ, ರಾಷ್ಟ್ರದ ಬಗೆಗಿನ ಅವರ ಬದ್ಧತೆಯಿಂದ ಆಕರ್ಷಿತನಾದೆ. ನನ್ನ ಜೀವನಕ್ಕೆ ಸ್ಪಷ್ಟವಾದ ನಿರ್ದೇಶನವಿರಲಿಲ್ಲ ಅಥವಾ ನನ್ನ ಬಳಿ ಯಾವುದೇ ಮಾರ್ಗಸೂಚಿಯೂ ಇರಲಿಲ್ಲ, ಆದರೆ ಅರ್ಥಪೂರ್ಣವಾದದ್ದನ್ನು ಮಾಡುವ ತೀವ್ರ ಬಯಕೆ ನನಗಿತ್ತು. ಜೀವನವನ್ನು ಅನ್ವೇಷಿಸಲು, ಅದನ್ನು ಅರ್ಥಮಾಡಿಕೊಳ್ಳಲು ನಾನು ಉತ್ಸುಕನಾಗಿದ್ದೆ. ಈ ಕುತೂಹಲ ನನ್ನನ್ನು ಅನ್ವೇಷಣೆಯ ಪ್ರಯಾಣಕ್ಕೆ ಕರೆದೊಯ್ದಿತು. ನನ್ನ ಅನ್ವೇಷಣೆಯಲ್ಲಿ, ನಾನು ರಾಮಕೃಷ್ಣ ಮಿಷನ್‌ ನ ಸಂಪರ್ಕಕ್ಕೆ ಬಂದೆ, ಅಲ್ಲಿ ಸಂತರು ನನಗೆ ಪ್ರೀತಿ ಮತ್ತು ಆಶೀರ್ವಾದಗಳನ್ನು ನೀಡಿದರು. ಸುಮಾರು ನೂರು ವರ್ಷಗಳ ಕಾಲ ಬದುಕಿದ್ದ ಸ್ವಾಮಿ ಆತ್ಮಸ್ಥಾನಂದ ಅವರೊಂದಿಗೆ ನಾನು ನಿಕಟ ಬಾಂಧವ್ಯವನ್ನು ಬೆಳೆಸಿಕೊಂಡೆ. ನಂತರ, ನಾನು ಪ್ರಧಾನಿಯಾದಾಗ, ಅವರು ನನ್ನ ನಿವಾಸಕ್ಕೆ ಭೇಟಿ ನೀಡಬೇಕೆಂದು ನಾನು ತುಂಬಾ ಬಯಸಿದ್ದೆ, ಆದರೆ ಅವರ ಜವಾಬ್ದಾರಿಗಳು ಅವರನ್ನು ಹಾಗೆ ಮಾಡದಂತೆ ತಡೆಯುತ್ತಿದ್ದವು. ಆದಾಗ್ಯೂ, ನಾನು ಮುಖ್ಯಮಂತ್ರಿಯಾಗಿದ್ದಾಗ ಅವರು ಆಗಾಗ್ಗೆ ನನ್ನನ್ನು ಭೇಟಿ ಮಾಡಿ ತಮ್ಮ ಮಾರ್ಗದರ್ಶನ ಮತ್ತು ಆಶೀರ್ವಾದಗಳನ್ನು ನೀಡಿದರು. "ನೀವು ಇಲ್ಲಿಗೆ ಏಕೆ ಬಂದಿದ್ದೀರಿ? ನಿಮ್ಮ ಆದ್ಯತೆ ಏನು - ನಿಮ್ಮ ಸ್ವಂತ ಯೋಗಕ್ಷೇಮವೇ ಅಥವಾ ಸಮಾಜದ ಸೇವೆಯೇ? ವಿವೇಕಾನಂದರು ಕಲಿಸಿದ್ದನ್ನು ನೆನಪಿಡಿ: ನಿಮ್ಮ ಉದ್ದೇಶ ಸೇವೆ ಮಾಡುವುದು." ಎಂದು ಅವರು ಒಮ್ಮೆ ನನ್ನನ್ನು ಕೇಳಿದ್ದರು.

 

|

ಆ ಕ್ಷಣದಲ್ಲಿ, ನನಗೆ ನಿರಾಶೆಯ ಭಾವನೆ ಉಂಟಾಯಿತು ಏಕೆಂದರೆ ನಾನು ಧರ್ಮೋಪದೇಶಗಳನ್ನು ಮಾತ್ರ ಕೇಳಲು ಸಾಧ್ಯವಾಯಿತು, ನನಗೆ ಯಾವುದೇ ಸಹಾಯ ಸಿಗಲಿಲ್ಲ. ಆ ಅರಿವಿನೊಂದಿಗೆ, ನನ್ನ ಪ್ರಯಾಣ ಮುಂದುವರೆಯಿತು. ನಾನು ಹಿಮಾಲಯದಲ್ಲಿ ಸರಳ ಜೀವನವನ್ನು ನಡೆಸುತ್ತಾ, ವಿವಿಧ ಸ್ಥಳಗಳನ್ನು ಅನುಭವಿಸುತ್ತಾ, ಋಷಿಮುನಿಗಳು ಮತ್ತು ತಪಸ್ವಿಗಳನ್ನು ಭೇಟಿಯಾಗಿ, ಅವರ ಜ್ಞಾನದಿಂದ ಕಲಿಯುತ್ತಾ ಸಮಯ ಕಳೆದೆ. ಆದಾಗ್ಯೂ, ನನ್ನ ಮನಸ್ಸು ಚಂಚಲವಾಗಿತ್ತು. ಬಹುಶಃ ಅದು ನನ್ನ ಯೌವನವಾಗಿತ್ತು - ಕುತೂಹಲದಿಂದ ತುಂಬಿತ್ತು, ತಿಳಿದುಕೊಳ್ಳುವ ಮತ್ತು ಅರ್ಥಮಾಡಿಕೊಳ್ಳುವ ಹಂಬಲವಿತ್ತು. ಪರ್ವತಗಳಲ್ಲಿನ ಜೀವನವು ಸಂಪೂರ್ಣವಾಗಿ ಹೊಸ ಅನುಭವವಾಗಿತ್ತು - ಶೀತ ಹವಾಮಾನ, ಏಕಾಂತತೆ, ಎತ್ತರದ ಹಿಮದಿಂದ ಆವೃತವಾದ ಶಿಖರಗಳು. ಆದರೂ, ಈ ಅನುಭವಗಳು ನನ್ನನ್ನು ರೂಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದವು. ಅವು ನನ್ನ ಆಂತರಿಕ ಸಂಕಲ್ಪವನ್ನು ಬಲಪಡಿಸಿದವು. ನಾನು ನನ್ನನ್ನು ಶಿಸ್ತುಬದ್ಧಗೊಳಿಸಿಕೊಂಡೆ – ಬ್ರಾಹ್ಮಿ ಮುಹೂರ್ತದಲ್ಲಿ ಏಳುವುದು, ಧ್ಯಾನ ಮಾಡುವುದು, ಶೀತಲ ನೀರಿನಲ್ಲಿ ಸ್ನಾನ ಮಾಡುವುದು, ಜನರಿಗೆ ಸೇವೆ ಮಾಡುವುದು. ವಯಸ್ಸಾದ ಸಂತರು ಮತ್ತು ತಪಸ್ವಿಗಳಿಗೆ ಸಹಾಯ ಮಾಡುವತ್ತ ನಾನು ಸ್ವಾಭಾವಿಕವಾಗಿ ಆಕರ್ಷಿತನಾದೆ. ಒಂದು ನಿರ್ದಿಷ್ಟ ಅವಧಿಯಲ್ಲಿ, ಆ ಪ್ರದೇಶದಲ್ಲಿ ನೈಸರ್ಗಿಕ ವಿಕೋಪ ಸಂಭವಿಸಿತು, ನಾನು ಗ್ರಾಮಸ್ಥರಿಗೆ ಸಹಾಯ ಮಾಡಲು ನನ್ನನ್ನು ಅರ್ಪಿಸಿಕೊಂಡೆ. ನನ್ನ ಅಲೆದಾಟದ ವರ್ಷಗಳಲ್ಲಿ, ನಾನು ಎಂದಿಗೂ ಒಂದೇ ಸ್ಥಳದಲ್ಲಿ ದೀರ್ಘಕಾಲ ಉಳಿಯಲಿಲ್ಲ. ನಾನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪ್ರಯಾಣಿಸಿದೆ, ಕಲಿಯುತ್ತಿದ್ದೆ, ಗಮನಿಸುತ್ತಿದ್ದೆ ಮತ್ತು ಸೇವೆ ಮಾಡುತ್ತಿದ್ದೆ. ಅದೇ ನನ್ನ ಜೀವನವಾಗಿತ್ತು.

ಲೆಕ್ಸ್ ಫ್ರಿಡ್ಮನ್: ಗೊತ್ತಿಲ್ಲದವರಿಗಾಗಿ, ನೀವು ರಾಮಕೃಷ್ಣ ಮಿಷನ್ ಆಶ್ರಮದಲ್ಲಿ ಸ್ವಾಮಿ ಆತ್ಮಸ್ಥಾನಂದರೊಂದಿಗೆ ಗಣನೀಯ ಸಮಯವನ್ನು ಕಳೆದಿದ್ದೀರಿ. ನೀವು ಈಗಷ್ಟೇ ಹೇಳಿದಂತೆ, ಅವರು ನಿಮ್ಮನ್ನು ಸೇವಾ ಜೀವನದತ್ತ ಮುನ್ನಡೆಸಿದರು. ನೀವು ಸನ್ಯಾಸಿಯಾಗಲು ಎಲ್ಲವನ್ನೂ ತ್ಯಜಿಸಿ ಸನ್ಯಾಸವನ್ನು ತೆಗೆದುಕೊಳ್ಳುವುದು ಒಂದು ಸಂಭಾವ್ಯ ಮಾರ್ಗವಾಗಿತ್ತು. ಹಾಗಿದ್ದಲ್ಲಿ, ಇಂದು ನೀವು ಸನ್ಯಾಸಿ ನರೇಂದ್ರ ಮೋದಿಯಾಗಿ ಅಥವಾ ಪ್ರಧಾನಮಂತ್ರಿಯಾಗಿ ಇಲ್ಲಿ ಇದ್ದಿರಬಹುದು. ಪ್ರತಿಯೊಂದು ಹಂತದಲ್ಲೂ ಸೇವೆಗೆ ನಿಮ್ಮ ಜೀವನವನ್ನು ಮುಡಿಪಾಗಿಡಲು ನಿರ್ಧರಿಸುವಲ್ಲಿ ಅವರು ನಿರ್ಣಾಯಕ ಪಾತ್ರ ವಹಿಸಿದ್ದಾರೆ.

ಪ್ರಧಾನಮಂತ್ರಿ: ಬಾಹ್ಯ ದೃಷ್ಟಿಕೋನದಿಂದ, ಜನರು ಯಾರಿಗಾದರೂ ನಾಯಕ, ಪ್ರಧಾನಿ ಅಥವಾ ಮುಖ್ಯಮಂತ್ರಿ ಎಂದು ಹಣೆಪಟ್ಟಿ ಕಟ್ಟಬಹುದು. ಆದಾಗ್ಯೂ, ನನ್ನ ಆಂತರಿಕ ಜೀವನವು ನಿರಂತರವಾಗಿದೆ. ಬಾಲ್ಯದಲ್ಲಿ ತನ್ನ ತಾಯಿಗೆ ಮಕ್ಕಳ ಚಿಕಿತ್ಸೆಯಲ್ಲಿ ಸಹಾಯ ಮಾಡುತ್ತಿದ್ದ ಮೋದಿ, ಆ ಮಕ್ಕಳನ್ನು ಆಗ ನೋಡಿಕೊಳ್ಳುತ್ತಿರುವ ಮೋದಿ, ಹಿಮಾಲಯದಲ್ಲಿ ಅಲೆದಾಡಿದ ಮೋದಿ ಮತ್ತು ಇಂದು ಇಲ್ಲಿ ನಿಂತಿರುವ ಮೋದಿ - ಎಲ್ಲರೂ ಒಂದೇ ಪ್ರಯಾಣದ ಭಾಗ. ನನ್ನ ಜೀವನದ ಪ್ರತಿ ಕ್ಷಣವೂ ಇತರರಿಗಾಗಿ ಬದುಕಿದ್ದೇನೆ. ಈ ನಿರಂತರತೆಯು ಪ್ರಪಂಚದ ದೃಷ್ಟಿಯಲ್ಲಿ ಸಾಧು ಮತ್ತು ನಾಯಕನ ನಡುವೆ ತೀವ್ರ ವ್ಯತ್ಯಾಸವನ್ನು ಸೃಷ್ಟಿಸುತ್ತದೆ. ವ್ಯತ್ಯಾಸವು ಉಡುಗೆ ತೊಡುಗೆ, ಜೀವನಶೈಲಿ, ದೈನಂದಿನ ಭಾಷೆ ಮತ್ತು ಜವಾಬ್ದಾರಿಗಳಲ್ಲಿದೆ. ಆದರೆ ಆಂತರಿಕವಾಗಿ, ನಾನು ನನ್ನ ಕರ್ತವ್ಯಗಳನ್ನು ಅದೇ ನಿರ್ಲಿಪ್ತ ಭಾವನೆಯಿಂದ ನಿರ್ವಹಿಸುತ್ತೇನೆ.

ಲೆಕ್ಸ್ ಫ್ರಿಡ್ಮನ್: ನಿಮ್ಮ ಜೀವನದ ಮತ್ತೊಂದು ಮಹತ್ವದ ಅಂಶವೆಂದರೆ ಭಾರತ ಮೊದಲು ಎಂಬ ನಿಮ್ಮ ಅಚಲವಾದ ಬದ್ಧತೆ. ಎಂಟನೇ ವಯಸ್ಸಿನಿಂದಲೇ ನೀವು ಹಿಂದೂ ರಾಷ್ಟ್ರೀಯತೆಯ ಪರಿಕಲ್ಪನೆಯನ್ನು ಬೆಂಬಲಿಸುವ ಸಂಘಟನೆಯಾದ ಆರ್‌ ಎಸ್‌ ಎಸ್‌ ನೊಂದಿಗೆ ಸಂಬಂಧ ಹೊಂದಿದ್ದೀರಿ. ಆರ್‌ ಎಸ್‌ ಎಸ್‌ ನೊಂದಿಗಿನ ನಿಮ್ಮ ಅನುಭವಗಳನ್ನು ಹಂಚಿಕೊಳ್ಳಬಹುದೇ ಮತ್ತು ಅದು ನಿಮ್ಮ ಮೇಲೆ ಹೇಗೆ ಪ್ರಭಾವ ಬೀರಿತು ಎಂಬುದನ್ನು ವಿವರಿಸಬಹುದೇ? ಅದು ನಿಮ್ಮ ನಂಬಿಕೆಗಳು ಮತ್ತು ರಾಜಕೀಯ ದೃಷ್ಟಿಕೋನವನ್ನು ಹೇಗೆ ರೂಪಿಸಿದೆ?

ಪ್ರಧಾನಮಂತ್ರಿ: ಬಾಲ್ಯದಲ್ಲಿ, ನಾನು ಯಾವಾಗಲೂ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಉತ್ಸುಕನಾಗಿದ್ದೆ. ನನಗೆ ಒಬ್ಬ ವ್ಯಕ್ತಿ ಸ್ಪಷ್ಟವಾಗಿ ನೆನಪಿದ್ದಾರೆ, ಆದರೂ ಅವರ ಪೂರ್ಣ ಹೆಸರು ನನಗೆ ನೆನಪಿಲ್ಲ - ಬಹುಶಃ ಮಕೋಸಿಸೋನಿ. ಅವರು ಸೇವಾ ದಳದವರಾಗಿದ್ದರು. ಅವರು ಡ್ರಮ್ (ಡಫ್ಲಿ) ಹಿಡಿದು ಅಸಾಧಾರಣ ಧ್ವನಿಯಲ್ಲಿ ದೇಶಭಕ್ತಿ ಗೀತೆಗಳನ್ನು ಹಾಡುತ್ತಿದ್ದರು. ಅವರು ನಮ್ಮ ಹಳ್ಳಿಗೆ ಭೇಟಿ ನೀಡುತ್ತಿದ್ದರು, ವಿವಿಧ ಸ್ಥಳಗಳಲ್ಲಿ ಪ್ರದರ್ಶನಗಳನ್ನು ಆಯೋಜಿಸುತ್ತಿದ್ದರು. ನಾನು ಅವರನ್ನು ಹಿಂಬಾಲಿಸುತ್ತಿದ್ದೆ, ಸಂಪೂರ್ಣವಾಗಿ ಆಕರ್ಷಿತನಾಗಿದ್ದೆ, ರಾತ್ರಿಯಿಡೀ ಅವರ ಹಾಡುಗಳನ್ನು ಕೇಳುತ್ತಿದ್ದೆ. ಅದರಲ್ಲಿ ನನಗೆ ಅಪಾರ ಸಂತೋಷ ಸಿಕ್ಕಿತು, ಆದರೆ ಆ ಸಮಯದಲ್ಲಿ, ಏಕೆ ಎಂದು ನನಗೆ ಸಂಪೂರ್ಣವಾಗಿ ಅರ್ಥವಾಗಲಿಲ್ಲ. ಅದೇ ರೀತಿ, ನನ್ನ ಮನೆಯ ಬಳಿ ಒಂದು ಆರ್‌ ಎಸ್‌ ಎಸ್ ಶಾಖೆ ಇತ್ತು, ಅಲ್ಲಿ ನಾವು ಆಟಗಳನ್ನು ಆಡುತ್ತಿದ್ದೆವು ಮತ್ತು ದೇಶಭಕ್ತಿ ಗೀತೆಗಳನ್ನು ಹಾಡುತ್ತಿದ್ದೆವು. ಈ ಸಭೆಗಳು ನನಗೆ ತುಂಬಾ ಭಾವನಾತ್ಮಕವಾಗಿದ್ದವು ಮತ್ತು ಆಕರ್ಷಕವಾಗಿದ್ದವು. ನಾನು ಸಂಘದೊಂದಿಗೆ ತೊಡಗಿಸಿಕೊಂಡದ್ದು ಹೀಗೆಯೇ. ಆರ್‌ ಎಸ್‌ ಎಸ್ ನನ್ನಲ್ಲಿ ಒಂದು ಮೂಲಭೂತ ತತ್ವವನ್ನು ತುಂಬಿತು: ಒಬ್ಬ ವ್ಯಕ್ತಿಯು ಏನೇ ಮಾಡಿದರೂ ಅದನ್ನು ರಾಷ್ಟ್ರಕ್ಕೆ ಸೇವೆ ಸಲ್ಲಿಸುವ ಚಿಂತನೆಯೊಂದಿಗೆ ಮಾಡಬೇಕು. ಅಧ್ಯಯನ, ವ್ಯಾಯಾಮ ಅಥವಾ ಯಾವುದೇ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು, ದೇಶಕ್ಕೆ ಕೊಡುಗೆ ನೀಡುವ ಉದ್ದೇಶದಿಂದಲೇ ಮಾಡಬೇಕು. ಈ ತತ್ವವು ಸಂಘದ ಬೋಧನೆಗಳಲ್ಲಿ ಬೇರೂರಿದೆ. ಆರ್‌ ಎಸ್‌ ಎಸ್ ಒಂದು ಬೃಹತ್ ಸಂಘಟನೆಯಾಗಿದ್ದು, ಈಗ 100 ನೇ ವರ್ಷವನ್ನು ಸಮೀಪಿಸುತ್ತಿದೆ, ಮತ್ತು ಜಗತ್ತಿನಲ್ಲಿ ಎಲ್ಲಿಯೂ ಅದರಷ್ಟು ಪ್ರಮಾಣದ ಯಾವುದೇ ಸ್ವಯಂಸೇವಾ ಸಂಘಟನೆಯ ಬಗ್ಗೆ ನನಗೆ ತಿಳಿದಿಲ್ಲ. ಇದು ಕೋಟ್ಯಂತರ ಸದಸ್ಯರನ್ನು ಹೊಂದಿದೆ, ಆದರೆ ಅದರ ಸಾರವನ್ನು ಸಂಪೂರ್ಣವಾಗಿ ಗ್ರಹಿಸುವುದು ಸುಲಭವಲ್ಲ. ಅದರ ಕೆಲಸ ಮತ್ತು ಅದು ಎತ್ತಿಹಿಡಿಯುವ ಉದ್ದೇಶವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು, ಇದು ಬಲವಾದ ನಿರ್ದೇಶನವನ್ನು ನೀಡುತ್ತದೆ. ಸಂಘವು ತನ್ನ ಮೂಲತತ್ವದಲ್ಲಿ, ರಾಷ್ಟ್ರವು ಅತ್ಯುನ್ನತವಾದುದು ಮತ್ತು ಸಾರ್ವಜನಿಕ ಸೇವೆಯು ದೇವರ ಸೇವೆಗೆ ಸಮಾನವಾದುದು ಎಂದು ನಂಬುತ್ತದೆ - ಈ ಕಲ್ಪನೆಯನ್ನು ವೇದಕಾಲದಿಂದಲೂ ಪ್ರತಿಧ್ವನಿಸಲಾಗುತ್ತಿದೆ, ಇದನ್ನು ನಮ್ಮ ಋಷಿಗಳು ಪುನರುಚ್ಚರಿಸಿದ್ದಾರೆ ಮತ್ತು ಸ್ವಾಮಿ ವಿವೇಕಾನಂದರು ಬಲಪಡಿಸಿದ್ದಾರೆ. ಒಬ್ಬ ಸ್ವಯಂಸೇವಕನಿಗೆ ಆರ್‌ ಎಸ್‌ ಎಸ್‌ ನ ಸಾರವು ಕೇವಲ ಒಂದು ಗಂಟೆಯ ಧರ್ಮೋಪದೇಶಕ್ಕೆ ಹಾಜರಾಗುವುದು ಮತ್ತು ಸಮವಸ್ತ್ರ ಧರಿಸುವುದಲ್ಲ ಎಂದು ಕಲಿಸಲಾಗುತ್ತದೆ. ನಿಜವಾದ ಸ್ವಯಂಸೇವೆ (ನಿಸ್ವಾರ್ಥ ಸೇವೆ) ಸಮಾಜಕ್ಕೆ ಕೊಡುಗೆ ನೀಡುವುದರಲ್ಲಿದೆ. ಈ ತತ್ತ್ವದಿಂದ ಪ್ರೇರಿತರಾಗಿ, ಹಲವಾರು ಉಪಕ್ರಮಗಳು ಹೊರಹೊಮ್ಮಿವೆ. ಉದಾಹರಣೆಗೆ, ಕೆಲವು ಸ್ವಯಂಸೇವಕರು ಸೇವಾ ಭಾರತಿಯನ್ನು ಸ್ಥಾಪಿಸಿದರು, ಇದು ಸೇವಾ ಬಸ್ತಿಗಳು ಎಂದು ಕರೆಯಲ್ಪಡುವ ಬಡವರ ವಸಾಹತುಗಳಲ್ಲಿ ಕಾರ್ಯನಿರ್ವಹಿಸುತ್ತದೆ - ಸರ್ಕಾರಿ ಸಹಾಯವಿಲ್ಲದೆ ಕೊಳೆಗೇರಿ ನಿವಾಸಿಗಳಿಗೆ ಸಹಾಯ ಮಾಡುತ್ತದೆ. ಸಾಮಾಜಿಕ ಬೆಂಬಲದ ಮೂಲಕ, ಸ್ವಯಂಸೇವಕರು ಮಕ್ಕಳಿಗೆ ಶಿಕ್ಷಣ ನೀಡಲು, ಆರೋಗ್ಯ ಅಗತ್ಯಗಳನ್ನು ಪರಿಹರಿಸಲು, ಮೌಲ್ಯಗಳನ್ನು ಬೆಳೆಸಲು ಮತ್ತು ಸ್ವಚ್ಛತಾ ಅಭಿಯಾನಗಳನ್ನು ನಡೆಸಲು ತಮ್ಮ ಸಮಯವನ್ನು ಮೀಸಲಿಡುತ್ತಾರೆ. ಪ್ರಸ್ತುತ, ಸೇವಾ ಭಾರತಿ ಸುಮಾರು 1.25 ಲಕ್ಷ ಸೇವಾ ಯೋಜನೆಗಳನ್ನು ನಡೆಸುತ್ತಿದೆ - ಇದು ದಿಗ್ಭ್ರಮೆಗೊಳಿಸುವ ಸಂಖ್ಯೆ. ಅದೇ ರೀತಿ, ಹಿಂದಿನ ಸ್ವಯಂಸೇವಕರು ಕಾಡುಗಳಲ್ಲಿ ವಾಸಿಸುವ ಬುಡಕಟ್ಟು ಸಮುದಾಯಗಳಿಗೆ ಸೇವೆ ಸಲ್ಲಿಸುವ ವನವಾಸಿ ಕಲ್ಯಾಣ ಆಶ್ರಮವನ್ನು ಸ್ಥಾಪಿಸಿದರು ಮತ್ತು ಬುಡಕಟ್ಟು ಮಕ್ಕಳಿಗೆ ಶಿಕ್ಷಣ ನೀಡಲು 70,000 ಕ್ಕೂ ಹೆಚ್ಚು ಏಕಲ್ ವಿದ್ಯಾಲಯಗಳನ್ನು (ಒಬ್ಬ ಶಿಕ್ಷಕ, ಒಂದು ಶಾಲೆ ಉಪಕ್ರಮಗಳು) ನಡೆಸುತ್ತಿದ್ದಾರೆ. ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿಯೂ ಸಹ, ಈ ಶಾಲೆಗಳನ್ನು ಉಳಿಸಿಕೊಳ್ಳಲು ಬೆಂಬಲಿಗರು $10 ಅಥವಾ $15 ದೇಣಿಗೆ ನೀಡುತ್ತಾರೆ, ಕೆಲವೊಮ್ಮೆ ಒಂದು ಕೋಕಾ-ಕೋಲಾವನ್ನು ತ್ಯಜಿಸಿ ಅದರ ಸಮಾನ ಮೊತ್ತವನ್ನು ದೇಣಿಗೆ ನೀಡುತ್ತಾರೆ. ಶಿಕ್ಷಣದಲ್ಲಿ ಕ್ರಾಂತಿಯನ್ನುಂಟುಮಾಡಲು, ವಿದ್ಯಾಭಾರತಿಯನ್ನು ಸ್ಥಾಪಿಸಲಾಯಿತು. ಇದು ಪ್ರಸ್ತುತ ಸುಮಾರು 25,000 ಶಾಲೆಗಳನ್ನು ನಿರ್ವಹಿಸುತ್ತಿದ್ದು, ಏಕಕಾಲದಲ್ಲಿ 30 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಒದಗಿಸುತ್ತಿದೆ. ಕೋಟ್ಯಂತರ ವಿದ್ಯಾರ್ಥಿಗಳು ಕೈಗೆಟುಕುವ ಶಿಕ್ಷಣದಿಂದ ಪ್ರಯೋಜನ ಪಡೆದಿದ್ದಾರೆ. ಅದು ಶೈಕ್ಷಣಿಕ ಜ್ಞಾನವನ್ನು ನೀಡುವುದಲ್ಲದೆ ಸಾಂಸ್ಕೃತಿಕ ಮೌಲ್ಯಗಳು, ಪ್ರಾಯೋಗಿಕ ಕೌಶಲ್ಯಗಳು ಮತ್ತು ಸಮಾಜದ ಬಗ್ಗೆ ಜವಾಬ್ದಾರಿಯ ಪ್ರಜ್ಞೆಯನ್ನು ತುಂಬುತ್ತಿದೆ. ಮಹಿಳಾ ಕಲ್ಯಾಣ, ಯುವ ಅಭಿವೃದ್ಧಿ ಮತ್ತು ಕಾರ್ಮಿಕ ಹಕ್ಕುಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಆರ್‌ ಎಸ್‌ ಎಸ್ ಗಮನಾರ್ಹ ಕೊಡುಗೆಗಳನ್ನು ನೀಡಿದೆ. ಉದಾಹರಣೆಗೆ, ಭಾರತೀಯ ಮಜ್ದೂರ್ ಸಂಘವು ವಿಶ್ವದ ಅತಿದೊಡ್ಡ ಕಾರ್ಮಿಕ ಸಂಘಗಳಲ್ಲಿ ಒಂದಾಗಿದೆ, ಸುಮಾರು 55,000 ಸಂಯೋಜಿತ ಸಂಘಟನೆಗಳು ಮತ್ತು ಕೋಟ್ಯಂತರ ಸದಸ್ಯರನ್ನು ಹೊಂದಿದೆ. ಐತಿಹಾಸಿಕವಾಗಿ, ಕಾರ್ಮಿಕ ಚಳುವಳಿಗಳು ಎಡಪಂಥೀಯ ಸಿದ್ಧಾಂತಗಳಿಂದ ಪ್ರಭಾವಿತವಾಗಿವೆ, ಆಗಾಗ್ಗೆ "ವಿಶ್ವದ ಕಾರ್ಮಿಕರೇ, ಒಂದಾಗಿರಿ" ಎಂಬ ಘೋಷಣೆಯನ್ನು ಪ್ರತಿಪಾದಿಸುತ್ತವೆ. ಆದರೆ, ಆರ್‌ "ಕಾರ್ಮಿಕರೇ, ಜಗತ್ತನ್ನು ಒಗ್ಗೂಡಿಸಿ" ಎಂದು ಹೇಳುತ್ತವೆ. ನುಡಿಗಟ್ಟಿನಲ್ಲಿನ ಈ ಸಣ್ಣ ಬದಲಾವಣೆಯು ಆಳವಾದ ಸೈದ್ಧಾಂತಿಕ ಪರಿಣಾಮಗಳನ್ನು ಬೀರುತ್ತದೆ, ಸಂಘರ್ಷಕ್ಕಿಂತ ಹೆಚ್ಚಾಗಿ ಏಕತೆ ಮತ್ತು ಸಾಮರಸ್ಯದ ತತ್ವವನ್ನು ಪ್ರತಿಬಿಂಬಿಸುತ್ತದೆ. ಆರ್‌ ಎಸ್‌ ಎಸ್ ತತ್ವದಿಂದ ರೂಪುಗೊಂಡ ವ್ಯಕ್ತಿಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಾಗ, ಅವರು ಅಂತಹ ಪರಿವರ್ತನಾ ಉಪಕ್ರಮಗಳಿಗೆ ಚಾಲನೆ ನೀಡುತ್ತಾರೆ. ಕಳೆದ ಶತಮಾನದಲ್ಲಿ, ರಾಷ್ಟ್ರೀಯ ಸ್ವಯಂಸೇವಕ ಸಂಘವು ಸಮರ್ಪಣೆ ಮತ್ತು ನಿಸ್ವಾರ್ಥ ಮನೋಭಾವದಿಂದ ಕೆಲಸ ಮಾಡಿದೆ, ಪ್ರಚಾರವನ್ನು ಬಯಸದೆ ಸಮಾಜಕ್ಕೆ ಅಪಾರ ಕೊಡುಗೆಗಳನ್ನು ನೀಡಿದೆ. ನನ್ನ ಜೀವನಕ್ಕೆ ಒಂದು ಉದ್ದೇಶವನ್ನು ನೀಡಿದ ಅಂತಹ ಉದಾತ್ತ ಸಂಘಟನೆಯಿಂದ ಮೌಲ್ಯಗಳನ್ನು ಅಳವಡಿಸಿಕೊಂಡಿರುವುದು ನನ್ನ ದೊಡ್ಡ ಅದೃಷ್ಟವೆಂದು ನಾನು ಭಾವಿಸುತ್ತೇನೆ. ನಂತರ, ನನಗೆ ಸಂತರೊಂದಿಗೆ ಸಮಯ ಕಳೆಯುವ ಅದೃಷ್ಟ ಸಿಕ್ಕಿತು, ಅಲ್ಲಿ ನಾನು ಆಧ್ಯಾತ್ಮಿಕ ಜಾಗೃತಿಯನ್ನು ಅನುಭವಿಸಿದೆ. ಸ್ವಾಮಿ ಆತ್ಮಸ್ಥಾನಂದರಂತಹ ವ್ಯಕ್ತಿಗಳೊಂದಿಗಿನ ನನ್ನ ಒಡನಾಟವು ಪರಿವರ್ತಕವಾಗಿತ್ತು - ರಾಮಕೃಷ್ಣ ಮಿಷನ್ ಮತ್ತು ಸ್ವಾಮಿ ವಿವೇಕಾನಂದರ ಬೋಧನೆಗಳಂತೆ ಅವರು ಪ್ರತಿ ಹಂತದಲ್ಲೂ ನನಗೆ ಮಾರ್ಗದರ್ಶನ ನೀಡಿದರು. ಸಂಘದ ಸೇವಾ-ಆಧಾರಿತ ತತ್ವವು ಈ ಆಧ್ಯಾತ್ಮಿಕ ಪ್ರಭಾವಗಳೊಂದಿಗೆ ಸೇರಿ, ನನ್ನನ್ನು ರೂಪಿಸುವಲ್ಲಿ ಆಳವಾದ ಪಾತ್ರವನ್ನು ವಹಿಸಿದೆ.

 

|

ಲೆಕ್ಸ್ ಫ್ರಿಡ್ಮನ್: ಆರ್‌ ಎಸ್‌ ಎಸ್ ವ್ಯಕ್ತಿಗಳನ್ನು ರೂಪಿಸುವುದಲ್ಲದೆ, ಭಾರತದ ಕಲ್ಪನೆಯನ್ನು ವ್ಯಾಖ್ಯಾನಿಸುವಲ್ಲಿಯೂ ಕೊಡುಗೆ ನೀಡಿದೆ. ನಿಮ್ಮ ಅಭಿಪ್ರಾಯದಲ್ಲಿ, ಭಾರತವನ್ನು ಒಂದುಗೂಡಿಸುವ ಮೂಲಭೂತ ಪರಿಕಲ್ಪನೆ ಏನು? ಸಮಾಜಗಳು, ಸಮುದಾಯಗಳು ಮತ್ತು ಸಂಸ್ಕೃತಿಗಳ ಅಗಾಧ ವೈವಿಧ್ಯತೆಯನ್ನು ಗಮನಿಸಿದರೆ, ಒಂದು ರಾಷ್ಟ್ರವಾಗಿ ಭಾರತದ ಮೂಲತತ್ವವೇನು?

ಪ್ರಧಾನಮಂತ್ರಿ: ನೋಡಿ, ಭಾರತವು ಒಂದು ಸಾಂಸ್ಕೃತಿಕ ಗುರುತನ್ನು ಹೊಂದಿರುವ, ಸಾವಿರಾರು ವರ್ಷಗಳಷ್ಟು ಹಳೆಯದಾದ ನಾಗರಿಕತೆಯನ್ನು ಹೊಂದಿರುವ ಏಕೀಕೃತ ರಾಷ್ಟ್ರ. ನೂರಕ್ಕೂ ಹೆಚ್ಚು ಭಾಷೆಗಳು ಮತ್ತು ಸಾವಿರಾರು ಉಪಭಾಷೆಗಳಿಗೆ ನೆಲೆಯಾಗಿರುವ ಭಾರತದ ವಿಶಾಲತೆಯನ್ನು ನೋಡಿ. ನೀವು ದೇಶದೊಳಗೆ ಕೇವಲ ಇಪ್ಪತ್ತು ಮೈಲುಗಳಷ್ಟು ಪ್ರಯಾಣಿಸಿದರೆ, ಭಾಷೆ, ಪದ್ಧತಿಗಳು, ಆಹಾರಪದ್ಧತಿ ಮತ್ತು ಉಡುಗೆ ತೊಡುಗೆಗಳು ಸಹ ಬದಲಾಗುತ್ತವೆ. ದಕ್ಷಿಣದಿಂದ ಉತ್ತರ ಭಾರತದವರೆಗೆ, ವೈವಿಧ್ಯತೆ ಎಲ್ಲೆಡೆ ಸ್ಪಷ್ಟವಾಗಿ ಕಂಡುಬರುತ್ತದೆ. ಆದಾಗ್ಯೂ, ನೀವು ಆಳವಾಗಿ ಅಧ್ಯಯನ ಮಾಡಿದರೆ, ಅದರ ಮೂಲಕ ಹಾದುಹೋಗುವ ಒಂದು ಸಾಮಾನ್ಯ ಎಳೆಯನ್ನು ನೀವು ಕಾಣಬಹುದು. ನಾನು ಆಗಾಗ್ಗೆ ಹೇಳುವಂತೆ, ಭಗವಾನ್ ರಾಮನ ಹೆಸರು ದೇಶಾದ್ಯಂತ ಪ್ರತಿಧ್ವನಿಸುತ್ತದೆ - ನೀವು ಎಲ್ಲರ ತುಟಿಗಳಲ್ಲಿ ರಾಮನಾಮ ಕೇಳುತ್ತೀರಿ.

ನೀವು ತಮಿಳುನಾಡಿನಿಂದ ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರಯಾಣಿಸಿದರೆ, ನೀವು ಅನಿವಾರ್ಯವಾಗಿ 'ರಾಮ್' ಎಂಬ ಹೆಸರನ್ನು ಯಾವುದಾದರೂ ರೂಪದಲ್ಲಿ ಹೊಂದಿರುವ ಜನರನ್ನು ಭೇಟಿಯಾಗುತ್ತೀರಿ. ಗುಜರಾತಿನಲ್ಲಿ, ಯಾರನ್ನಾದರೂ 'ರಾಮ್ ಭಾಯಿ' ಎಂದು ಕರೆಯಬಹುದು; ತಮಿಳುನಾಡಿನಲ್ಲಿ, 'ರಾಮಚಂದ್ರ'; ಮತ್ತು ಮಹಾರಾಷ್ಟ್ರದಲ್ಲಿ, 'ರಾಮ್‌ ಭಾವು' ಎಂದು ಕರೆಯಬಹುದು. ಈ ಸಾಂಸ್ಕೃತಿಕ ನಿರಂತರತೆಯು ಭಾರತವನ್ನು ಒಟ್ಟಿಗೆ ಬಂಧಿಸುತ್ತದೆ. ಉದಾಹರಣೆಗೆ, ನಮ್ಮ ದೇಶದಲ್ಲಿ ಸ್ನಾನ ಮಾಡುವುದನ್ನು ತೆಗೆದುಕೊಳ್ಳಿ. ಜನರು ಸಾಮಾನ್ಯವಾಗಿ ಬಕೆಟ್‌ ನಿಂದ ನೀರನ್ನು ಬಳಸಿ ಸ್ನಾನ ಮಾಡುತ್ತಾರೆ, ಆದರೆ ಅವರು ಭಾರತದ ಮೂಲೆ ಮೂಲೆಗಳಿಂದ ನದಿಗಳ ಹೆಸರುಗಳನ್ನು ಕರೆಯುತ್ತಾರೆ. ಗಂಗೇ ಚ ಯಮುನೇಚೈವ ಗೋದಾವರಿ ಸರಸ್ವತಿ, ನರ್ಮದೆ ಸಿಂಧು ಕಾವೇರಿ ಜಲೇಸ್ಮಿನ್ ಸಮ್ನಿಧಿ ಕುರು ಎಂಬ ಪ್ರಾರ್ಥನೆಯು ಈ ಎಲ್ಲಾ ನದಿಗಳ ನೀರಿನಲ್ಲಿ ಒಬ್ಬರು ಸ್ನಾನ ಮಾಡುತ್ತಿದ್ದಾರೆಂದು ಸೂಚಿಸುತ್ತದೆ, ಇದು ಇಡೀ ರಾಷ್ಟ್ರವನ್ನು ಒಳಗೊಳ್ಳುತ್ತದೆ. ನಮ್ಮಲ್ಲಿ ಸಂಕಲ್ಪದ ಬಗ್ಗೆ ಆಳವಾದ ಬೇರೂರಿರುವ ಸಂಪ್ರದಾಯವಿದೆ - ಒಂದು ಗಂಭೀರ ಪ್ರತಿಜ್ಞೆ ಅಥವಾ ಸಂಕಲ್ಪ. ಧಾರ್ಮಿಕ ಸಮಾರಂಭವಾಗಲಿ ಅಥವಾ ಮಹತ್ವದ ಕಾರ್ಯಕ್ರಮವಾಗಲಿ ಪ್ರತಿಯೊಂದು ಪ್ರಮುಖ ಕಾರ್ಯವು ಸಂಕಲ್ಪದಿಂದ ಪ್ರಾರಂಭವಾಗುತ್ತದೆ. ಸಂಕಲ್ಪದ ಮಹತ್ವದ ಬಗ್ಗೆ, ವಿಶೇಷವಾಗಿ ಪ್ರಾಚೀನ ಭಾರತದಲ್ಲಿ ದತ್ತಾಂಶವನ್ನು ಹೇಗೆ ಸಂಗ್ರಹಿಸಲಾಯಿತು ಮತ್ತು ನಮ್ಮ ಧರ್ಮಗ್ರಂಥಗಳನ್ನು ಹೇಗೆ ರಚಿಸಲಾಯಿತು ಎಂಬುದರ ಬಗ್ಗೆ ಒಂದು ದೊಡ್ಡ ಇತಿಹಾಸವನ್ನು ಬರೆಯಬಹುದು. ನಮ್ಮ ಸಂಪ್ರದಾಯದ ಅನನ್ಯತೆಯು, ಪ್ರತಿಜ್ಞೆ, ಪ್ರಾರ್ಥನೆ ಅಥವಾ ಮದುವೆಯ ಸಮಯದಲ್ಲಿ, ನಾವು ವಿಶ್ವವನ್ನು ಸ್ವತಃ ಒಪ್ಪಿಕೊಳ್ಳುವ ಮೂಲಕ ಹೇಗೆ ಪ್ರಾರಂಭಿಸುತ್ತೇವೆ ಎಂಬುದರಲ್ಲಿ ಸ್ಪಷ್ಟವಾಗಿದೆ. ನಾವು ಜಂಬೂದ್ವೀಪ, ನಂತರ ಭರತಖಂಡ, ನಂತರ ಆರ್ಯಾವರ್ತವನ್ನು ಉಲ್ಲೇಖಿಸುತ್ತೇವೆ, ನಂತರ ಅಂತಿಮವಾಗಿ ಗ್ರಾಮ ಮತ್ತು ಕುಟುಂಬ ದೇವತೆಯನ್ನು ಉಲ್ಲೇಖಿಸುತ್ತೇವೆ.

 

ಈ ಸಂಪ್ರದಾಯವು ಭಾರತದಾದ್ಯಂತ ಇನ್ನೂ ಜೀವಂತವಾಗಿದೆ. ದುರದೃಷ್ಟವಶಾತ್, ಅವರು ಸರ್ಕಾರಿ ವ್ಯವಸ್ಥೆಯನ್ನು ಆಧರಿಸಿದ ಪಾಶ್ಚಿಮಾತ್ಯ ಮತ್ತು ಇತರ ಜಾಗತಿಕ ಮಾದರಿಗಳನ್ನು ನೋಡಲಾರಂಭಿಸಿದರು. ಭಾರತವು ತನ್ನ ಇತಿಹಾಸದುದ್ದಕ್ಕೂ ವಿವಿಧ ರೀತಿಯ ಆಡಳಿತಗಳನ್ನು ಕಂಡಿದೆ - ಅಸಂಖ್ಯಾತ ರಾಜರು ಮತ್ತು ಚಕ್ರವರ್ತಿಗಳೊಂದಿಗೆ ಅನೇಕ ಛಿದ್ರಗೊಂಡಿವೆ, ಕೆಲವು ಚದುರಿದ ರೂಪಗಳಲ್ಲಿ ಕಾಣಿಸಿಕೊಂಡಿವೆ. ಆದರೆ ಭಾರತವನ್ನು ಒಟ್ಟಿಗೆ ಹಿಡಿದಿಟ್ಟುಕೊಂಡಿರುವುದು ಅದರ ಸಾಂಸ್ಕೃತಿಕ ಏಕತೆ. ಉದಾಹರಣೆಗೆ, ತೀರ್ಥಯಾತ್ರೆಯ ಸಂಪ್ರದಾಯವು ಒಂದು ಗಮನಾರ್ಹವಾದ ಏಕೀಕರಣ ಶಕ್ತಿಯಾಗಿದೆ. ಆದಿಶಂಕರಾಚಾರ್ಯರು ನಾಲ್ಕು ಧಾಮಗಳನ್ನು ಸ್ಥಾಪಿಸಿದರು, ಆಧ್ಯಾತ್ಮಿಕ ರಾಷ್ಟ್ರದ ಕಲ್ಪನೆಯನ್ನು ಬಲಪಡಿಸಿದರು. ಇಂದಿಗೂ ಸಹ, ಲಕ್ಷಾಂತರ ಜನರು ದೇಶದ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ತೀರ್ಥಯಾತ್ರೆಗಳನ್ನು ಕೈಗೊಳ್ಳುತ್ತಾರೆ.

ಉದಾಹರಣೆಗೆ, ಜನರು ಕಾಶಿಗೆ ಹೋಗುತ್ತಾರೆ, ಇತರರು ರಾಮೇಶ್ವರಂನಿಂದ ಪವಿತ್ರ ನೀರನ್ನು  ಕಾಶಿಗೆ ಕೊಂಡೊಯ್ಯುತ್ತಾರೆ ಮತ್ತು ಕೆಲವರು ಕಾಶಿಯಿಂದ ರಾಮೇಶ್ವರಕ್ಕೆ ಪವಿತ್ರಜಲವನ್ನು ಕೊಂಡೊಯ್ಯುತ್ತಾರೆ. ಈ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಅಭ್ಯಾಸಗಳು ದೇಶವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವುದು ಕಷ್ಟಕರವಾದ ರೀತಿಯಲ್ಲಿ ಒಟ್ಟಿಗೆ ಬಂಧಿಸಿದೆ. ನಮ್ಮ ಪಂಚಾಂಗ (ಹಿಂದೂ ಕ್ಯಾಲೆಂಡರ್) ಅನ್ನು ಯಾರಾದರೂ ಅಧ್ಯಯನ ಮಾಡಿದರೆ, ಅವರು ದೇಶಾದ್ಯಂತ ಆಶ್ಚರ್ಯಕರವಾಗಿ ಶ್ರೀಮಂತ ಮತ್ತು ಪರಸ್ಪರ ಸಂಬಂಧ ಹೊಂದಿರುವ ಸಾಂಸ್ಕೃತಿಕ ಪರಂಪರೆಯನ್ನು ಕಂಡುಕೊಳ್ಳುತ್ತಾರೆ.

ಲೆಕ್ಸ್ ಫ್ರಿಡ್ಮನ್:  ಆಧುನಿಕ ಭಾರತದ ಇತಿಹಾಸವನ್ನು ನೋಡಿದರೆ, ಮಹಾತ್ಮ ಗಾಂಧಿ ಮತ್ತು ನೀವು ಇಬ್ಬರು ಅತ್ಯಂತ ಪ್ರಮುಖ ವ್ಯಕ್ತಿಗಳಾಗಿ ನಿಲ್ಲುತ್ತೀರಿ, ಖಂಡಿತವಾಗಿಯೂ ಭಾರತದ ಇತಿಹಾಸದಲ್ಲಿ ಅತ್ಯಂತ ಪ್ರಮುಖ ವ್ಯಕ್ತಿಗಳಾಗಿದ್ದೀರಿ.ಮಹಾತ್ಮ ಗಾಂಧಿಯವರಲ್ಲಿ ನಿಮಗೆ ಅತಿ ಹೆಚ್ಚು ಮೆಚ್ಚುಗೆಯಾಗುವ ಅಂಶ ಯಾವುದು?

ಪ್ರಧಾನಮಂತ್ರಿ: ನಿಮಗೆ ತಿಳಿದಿರುವಂತೆ, ನಾನು ಗುಜರಾತ್‌ನಲ್ಲಿ ಜನಿಸಿದೆ ಮತ್ತು ನನ್ನ ಮಾತೃಭಾಷೆ ಗುಜರಾತಿ. ಮಹಾತ್ಮ ಗಾಂಧೀಜಿಯವರೂ ಗುಜರಾತ್‌ನವರಾಗಿದ್ದು, ಅದೇ ಭಾಷಾ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದ್ದರು. ಬ್ಯಾರಿಸ್ಟರ್ ಆಗಿ ವಿದೇಶದಲ್ಲಿ ವಾಸಿಸಿ, ಅನೇಕ ಅವಕಾಶಗಳನ್ನು ಪಡೆದರೂ, ಅವರು ತಮ್ಮ ಕುಟುಂಬದಿಂದ ಕಲಿತ ಮೌಲ್ಯಗಳಿಗೆ ಆಳವಾಗಿ ಬದ್ಧರಾಗಿದ್ದರು. ಭಾರತದ ಜನಸೇವೆಗಾಗಿ ಭೌತಿಕ ಸೌಕರ್ಯಗಳನ್ನು ತ್ಯಜಿಸಿ, ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ತಮ್ಮನ್ನು ಅರ್ಪಿಸಿಕೊಂಡರು. ಇಂದಿಗೂ, ಮಹಾತ್ಮ ಗಾಂಧೀಜಿಯವರ ಪ್ರಭಾವ ಭಾರತೀಯ ಜೀವನದಲ್ಲಿ ಅನೇಕ ರೀತಿಯಲ್ಲಿ ಗೋಚರಿಸುತ್ತದೆ. ಅವರ ಪ್ರಮುಖ ಗುಣಗಳಲ್ಲಿ ಒಂದು ಅವರು ಹೇಳಿದ್ದನ್ನು ಆಚರಿಸುತ್ತಿದ್ದರು. ಉದಾಹರಣೆಗೆ ಸ್ವಚ್ಛತೆಯನ್ನು ತೆಗೆದುಕೊಳ್ಳಿ—ಅವರು ಬಲವಾದ ಪ್ರತಿಪಾದಕರಾಗಿದ್ದರು, ಆದರೆ ಅವರು ವೈಯಕ್ತಿಕವಾಗಿ ಸ್ವಚ್ಛತೆಯಲ್ಲಿ ತೊಡಗಿಸಿಕೊಂಡು ಇತರರನ್ನು ಹಾಗೆ ಮಾಡಲು ನಿರಂತರವಾಗಿ ಪ್ರೋತ್ಸಾಹಿಸುತ್ತಿದ್ದರು. ಭಾರತದ ಸ್ವಾತಂತ್ರ್ಯ ಹೋರಾಟವು ವಿಶಿಷ್ಟವಾಗಿತ್ತು. ಮೊಘಲ್ ಅಥವಾ ಬ್ರಿಟಿಷ್ ಆಳ್ವಿಕೆಯಲ್ಲಿದ್ದರೂ, ಶತಮಾನಗಳ ದಬ್ಬಾಳಿಕೆಯ ಹೊರತಾಗಿಯೂ, ಭಾರತದಲ್ಲಿ ಪ್ರತಿರೋಧದ ಮನೋಭಾವವಿಲ್ಲದ ಸಮಯ ಅಥವಾ ಸ್ಥಳ ಇರಲಿಲ್ಲ. ಗುರಿ ಆಧಾರಿತ ಅನೇಕ ಕ್ರಾಂತಿಕಾರಿಗಳು ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನು ತ್ಯಾಗ ಮಾಡಿದರು, ತಮ್ಮ ಯೌವನವನ್ನು ಜೈಲುಗಳಲ್ಲಿ ಕಳೆದರು. ಗಾಂಧೀಜಿಯವರೂ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು, ಆದರೆ ಅವರು ಒಂದು ನಿರ್ಣಾಯಕ ವ್ಯತ್ಯಾಸವನ್ನು ಪರಿಚಯಿಸಿದರು—ಅವರು ಸ್ವಾತಂತ್ರ್ಯ ಹೋರಾಟವನ್ನು ಜನ ಚಳುವಳಿಯನ್ನಾಗಿ ಪರಿವರ್ತಿಸಿದರು. ಅವರ ನಾಯಕತ್ವದ ಮೂಲಕ, ಅವರು ಅತ್ಯಂತ ಸಾಮಾನ್ಯ ಚಟುವಟಿಕೆಗಳಿಗೂ ಪ್ರತಿರೋಧದ ಮನೋಭಾವವನ್ನು ತುಂಬಿದರು. ಯಾರಾದರೂ ನೆಲವನ್ನು ಗುಡಿಸಿದರೆ, ಗಾಂಧೀಜಿಯವರು "ನೀವು ಇದನ್ನು ಸ್ವಾತಂತ್ರ್ಯಕ್ಕಾಗಿ ಮಾಡುತ್ತಿದ್ದೀರಿ" ಎಂದು ಹೇಳುತ್ತಿದ್ದರು. ಯಾರಾದರೂ ಮಗುವಿಗೆ ಕಲಿಸಿದರೆ, ಅವರು "ನೀವು ಸ್ವಾತಂತ್ರ್ಯಕ್ಕಾಗಿ ಕೆಲಸ ಮಾಡುತ್ತಿದ್ದೀರಿ" ಎಂದು ಹೇಳುತ್ತಿದ್ದರು. ಚರಕ ತಿರುಗಿಸುವುದು, ಖಾದಿ ತಯಾರಿಸುವುದು ಅಥವಾ ಕುಷ್ಠರೋಗಿಗಳಿಗೆ ಸೇವೆ ಮಾಡುವುದು ಹೀಗೆ ಯಾವುದೇ ಕಾರ್ಯವಾಗಿದ್ದರೂ, ಅವರು ಪ್ರತಿ ಕಾರ್ಯವನ್ನು ಸ್ವಾತಂತ್ರ್ಯ ಹೋರಾಟಕ್ಕೆ ಜೋಡಿಸಿದರು. ಈ ವಿಧಾನವು ಸಾಮಾನ್ಯ ಮನುಷ್ಯನನ್ನು ಸ್ವಾತಂತ್ರ್ಯ ಚಳುವಳಿಯ ಸೈನಿಕನಂತೆ ಭಾವಿಸುವಂತೆ ಮಾಡಿತು.

ಗಾಂಧೀಜಿಯವರಲ್ಲಿ ಜನರನ್ನು ಒಗ್ಗೂಡಿಸುವ ಸಾಮರ್ಥ್ಯ ಎಷ್ಟು ಅಪಾರವಾಗಿತ್ತೆಂದರೆ, ಬ್ರಿಟಿಷರಿಗೆ ಅದು ಸಂಪೂರ್ಣವಾಗಿ ಅರ್ಥವಾಗಲೇ ಇಲ್ಲ. ಒಂದು ಚಿಟಿಕೆ ಉಪ್ಪು ಕ್ರಾಂತಿಯನ್ನು ಹುಟ್ಟುಹಾಕಬಹುದೆಂದು ಯಾರಾದರೂ ಊಹಿಸಿದ್ದರಾ? ಆದರೆ, ಗಾಂಧೀಜಿಯವರು ದಂಡಿ ಯಾತ್ರೆಯ ಮೂಲಕ ಅದನ್ನು ಸಾಧಿಸಿದರು. ಅವರ ಸರಳತೆ, ವರ್ತನೆ, ಮಾತಿನ ಶೈಲಿ ಮತ್ತು ಅವರ ಭಂಗಿ ಕೂಡ ಶಾಶ್ವತ ಪರಿಣಾಮವನ್ನು ಬೀರಿದವು. ಅವರ ಅನೇಕ ಕಥೆಗಳು ಪ್ರಸಿದ್ಧವಾಗಿವೆ. ಒಂದು ಘಟನೆ ಎದ್ದು ಕಾಣುತ್ತದೆ—ಅವರು ದುಂಡು ಮೇಜಿನ ಸಮ್ಮೇಳನಕ್ಕೆ ಹೋಗುವಾಗ, ಒಬ್ಬ ಇಂಗ್ಲಿಷ್ ವ್ಯಕ್ತಿ ಅವರನ್ನು ಬಕಿಂಗ್‌ಹ್ಯಾಮ್ ಅರಮನೆಗೆ ಕಿಂಗ್ ಜಾರ್ಜ್ ಅವರನ್ನು ಭೇಟಿಯಾಗಲು ಕರೆದುಕೊಂಡು ಹೋದರು. ಗಾಂಧೀಜಿಯವರು ಕೇವಲ ಒಂದು ಸರಳ ಧೋತಿ ಮತ್ತು ಶಾಲು ಧರಿಸಿ ಬಂದರು. ಅನೇಕರು ಆಕ್ಷೇಪಿಸಿದರು, ರಾಜನನ್ನು ಭೇಟಿಯಾಗಲು ಇಂತಹ ಉಡುಪು ಸೂಕ್ತವೇ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯೆಯಾಗಿ, ಗಾಂಧೀಜಿಯವರು ಹಾಸ್ಯವಾಗಿ, "ನಾನು ಬಟ್ಟೆಯ ಬಗ್ಗೆ ಏಕೆ ಚಿಂತಿಸಬೇಕು? ರಾಜನು ನಮ್ಮಿಬ್ಬರಿಗೂ ಸಾಕಾಗುವಷ್ಟು ಬಟ್ಟೆ ಧರಿಸಿದ್ದಾರೆ" ಎಂದು ಹೇಳಿದರು. ಅವರ ಹಾಸ್ಯಪ್ರಜ್ಞೆ ಮತ್ತು ವಿನಯಶೀಲತೆ ಅದ್ಭುತವಾಗಿತ್ತು. ಮುಖ್ಯವಾಗಿ, ಅವರು ಸಾಮೂಹಿಕ ಜವಾಬ್ದಾರಿಯ ಪ್ರಜ್ಞೆಯನ್ನು ಜಾಗೃತಗೊಳಿಸಿದರು ಮತ್ತು ಜನರ ಶಕ್ತಿಯನ್ನು ಗುರುತಿಸಿದರು. ಈ ತತ್ವವು ಇಂದಿಗೂ ನನಗೆ ಮಾರ್ಗದರ್ಶನ ನೀಡುತ್ತದೆ. ನಾನು ಯಾವುದೇ ಕಾರ್ಯವನ್ನು ಕೈಗೊಂಡರೂ, ಸಾರ್ವಜನಿಕರನ್ನು ಸಾಧ್ಯವಾದಷ್ಟು ಒಳಗೊಳ್ಳಲು ಪ್ರಯತ್ನಿಸುತ್ತೇನೆ. ಸರ್ಕಾರವೊಂದೇ ಎಲ್ಲವನ್ನೂ ಸಾಧಿಸಲು ಸಾಧ್ಯವಿಲ್ಲ ಎಂದು ನಾನು ದೃಢವಾಗಿ ನಂಬುತ್ತೇನೆ— ಒಗ್ಗೂಡಿದ ಸಮಾಜದ  ಶಕ್ತಿ ಅಪಾರವಾಗಿದೆ.

 

ಲೆಕ್ಸ್ ಫ್ರಿಡ್ಮನ್:   ಗಾಂಧಿಯವರು ನಿಸ್ಸಂದೇಹವಾಗಿ 20 ನೇ ಶತಮಾನದ ಶ್ರೇಷ್ಠ ನಾಯಕರಲ್ಲಿ ಒಬ್ಬರು, ಮತ್ತು ನೀವು 21 ನೇ ಶತಮಾನದ ಅತ್ಯಂತ ಪ್ರಮುಖ ನಾಯಕರಲ್ಲಿ ಒಬ್ಬರು. ಈ ಯುಗಗಳು ವಿಭಿನ್ನವಾಗಿವೆ, ಆದರೂ ನೀವು ಭೌಗೋಳಿಕ ರಾಜಕೀಯದ ಕಲೆಯನ್ನು ಕರಗತ ಮಾಡಿಕೊಂಡಿದ್ದೀರಿ. ಪ್ರಮುಖ ರಾಷ್ಟ್ರಗಳೊಂದಿಗೆ ಪರಿಣಾಮಕಾರಿಯಾಗಿ ಮಾತುಕತೆಗಳನ್ನು ನಡೆಸಿದ್ದೀರಿ. ಪ್ರೀತಿಪಾತ್ರರಾಗಿರುವುದು ಉತ್ತಮವೋ ಅಥವಾ ಭಯಪಡುವಂತಿರಬೇಕೋ? ಜನರು ನಿಮ್ಮನ್ನು ಮೆಚ್ಚುತ್ತಾರೆ, ಆದರೆ ನಿಮ್ಮ ಶಕ್ತಿಯನ್ನು ಸಹ ಗುರುತಿಸುತ್ತಾರೆ ಎಂದು ತೋರುತ್ತದೆ. ನೀವು ಈ ಸಮತೋಲನವನ್ನು ಹೇಗೆ ಕಾಪಾಡುತ್ತೀರಿ?

ಪ್ರಧಾನಮಂತ್ರಿ: ಮೊದಲನೆಯದಾಗಿ, ಇಂತಹ ಹೋಲಿಕೆಗಳನ್ನು ಮಾಡುವುದು ಸೂಕ್ತವೆಂದು ನಾನು ನಂಬುವುದಿಲ್ಲ. ಅದು 20ನೇ ಶತಮಾನವಾಗಲಿ, 21ನೇ ಶತಮಾನವಾಗಲಿ ಅಥವಾ 22ನೇ ಶತಮಾನವಾಗಲಿ, ಮಹಾತ್ಮ ಗಾಂಧೀಜಿಯವರು ಕಾಲಾತೀತ ವ್ಯಕ್ತಿಯಾಗಿ ಉಳಿಯುತ್ತಾರೆ. ಅವರ ಪ್ರಸ್ತುತತೆ ತಲೆಮಾರುಗಳಿಂದ ತಲೆಮಾರುಗಳಿಗೆ ಮುಂದುವರಿಯುತ್ತದೆ. ನನ್ನ ವಿಷಯಕ್ಕೆ ಬಂದರೆ, ನನಗೆ ಒಂದು ಜವಾಬ್ದಾರಿಯಿದೆ—ಆದರೆ ಆ ಜವಾಬ್ದಾರಿ ಮೋದಿ ಎಂಬ ವ್ಯಕ್ತಿಯ ಬಗ್ಗೆ ಅಲ್ಲ. ನಿಜವಾದ ಶ್ರೇಷ್ಠತೆ ನನ್ನ ದೇಶದಲ್ಲಿದೆ, ಯಾವುದೇ ಒಬ್ಬ ವ್ಯಕ್ತಿಯಲ್ಲಿ ಅಲ್ಲ. ನನ್ನ ಶಕ್ತಿ ಮೋದಿಯಿಂದ ಬರುವುದಿಲ್ಲ, ಆದರೆ 140 ಕೋಟಿ ಭಾರತೀಯರಿಂದ, ನಮ್ಮ ಸಹಸ್ರಾರು ವರ್ಷಗಳ ಸಂಸ್ಕೃತಿ ಮತ್ತು ಸಂಪ್ರದಾಯಗಳಿಂದ ಬರುತ್ತದೆ. ಅದಕ್ಕಾಗಿಯೇ, ನಾನು ಎಲ್ಲಿಗೆ ಹೋದರೂ, ನನ್ನನ್ನು ನಾನು ಪ್ರತಿನಿಧಿಸುವುದಿಲ್ಲ—ವೇದಗಳಿಂದ ವಿವೇಕಾನಂದರವರೆಗೆ ಸಾವಿರಾರು ವರ್ಷಗಳ ಪರಂಪರೆಯನ್ನು ಮತ್ತು 140 ಕೋಟಿ ಜನರ ಆಕಾಂಕ್ಷೆಗಳನ್ನು ನನ್ನೊಂದಿಗೆ ಕೊಂಡೊಯ್ಯುತ್ತೇನೆ. ನಾನು ವಿಶ್ವ ನಾಯಕನೊಂದಿಗೆ ಕೈಕುಲುಕಿದಾಗ, ಅವರು ಹಿಡಿಯುವುದು ಮೋದಿಯ ಕೈಯಲ್ಲ—ಅದು 140 ಕೋಟಿ ಭಾರತೀಯರ ಕೈ. ನಿಜವಾದ ಶಕ್ತಿ ಅಲ್ಲಿಯೇ ಇದೆ. 2013ರಲ್ಲಿ, ನನ್ನ ಪಕ್ಷವು ನನ್ನನ್ನು ಪ್ರಧಾನಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಿದಾಗ, ಗಣನೀಯ ಚರ್ಚೆ ನಡೆಯಿತು ಎಂದು ನಾನು ನೆನಪಿಸಿಕೊಳ್ಳುತ್ತೇನೆ. ರಾಜ್ಯವೊಂದನ್ನು ಮಾತ್ರ ಆಳಿದ ನಾನು ವಿದೇಶಾಂಗ ನೀತಿಯನ್ನು ನಿಭಾಯಿಸಲು ಸಮರ್ಥನೇ ಎಂದು ಅನೇಕರು ಪ್ರಶ್ನಿಸಿದರು. ಅಂತರಾಷ್ಟ್ರೀಯ ಸಂಬಂಧಗಳನ್ನು ನಾನು ಹೇಗೆ ನಿರ್ವಹಿಸುತ್ತೇನೆ ಎಂದು ಸಂದರ್ಶಕರು ಆಗಾಗ್ಗೆ ಕೇಳುತ್ತಿದ್ದರು. ನನ್ನ ಪ್ರತಿಕ್ರಿಯೆ ಸರಳವಾಗಿತ್ತು: "ಭಾರತವು ತಲೆಯನ್ನು ಬಾಗಿಸುವುದಿಲ್ಲ ಅಥವಾ ಇತರರನ್ನು ಕೀಳಾಗಿ ನೋಡುವುದಿಲ್ಲ. ಭಾರತವು ಪರಸ್ಪರ ಗೌರವವನ್ನು ಕಾಪಾಡಿಕೊಂಡು ಸಮಾನವಾಗಿ ಜಗತ್ತಿನೊಂದಿಗೆ ವ್ಯವಹರಿಸುತ್ತದೆ." ಆ ತತ್ವವು ಇಂದಿಗೂ ನನಗೆ ಮಾರ್ಗದರ್ಶನ ನೀಡುತ್ತದೆ. ನನ್ನ ದೇಶ ಮೊದಲು, ಆದರೆ ಇತರರನ್ನು ಗೌರವಿಸುವುದು ಅಷ್ಟೇ ಮುಖ್ಯ. ನಮ್ಮ ಸಾಂಸ್ಕೃತಿಕ ಮೌಲ್ಯಗಳು ಯಾರನ್ನೂ ಅವಮಾನಿಸುವುದನ್ನು ಅಥವಾ ಕೀಳಾಗಿ ಕಾಣುವುದನ್ನು ಬೆಂಬಲಿಸುವುದಿಲ್ಲ. 'ಜೈ ಜಗತ್' (ಜಗತ್ತಿಗೆ ಜಯವಾಗಲಿ) ಮತ್ತು 'ವಸುಧೈವ ಕುಟುಂಬಕಂ' (ಜಗತ್ತು ಒಂದೇ ಕುಟುಂಬ) ತತ್ವವನ್ನು ಭಾರತವು ಯಾವಾಗಲೂ ಎತ್ತಿಹಿಡಿದಿದೆ, ಜಾಗತಿಕ ಕಲ್ಯಾಣದ ದೃಷ್ಟಿಯನ್ನು ಬೆಳೆಸುತ್ತದೆ. ನನ್ನ ಅನೇಕ ಜಾಗತಿಕ ಉಪಕ್ರಮಗಳು ಈ ನೀತಿಯನ್ನು ಪ್ರತಿಬಿಂಬಿಸುತ್ತವೆ. ಉದಾಹರಣೆಗೆ, ಪರಿಸರ ಸವಾಲುಗಳ ಬಗ್ಗೆ ಚರ್ಚೆಗಳಲ್ಲಿ, ನಾನು 'ಒಂದು ಸೂರ್ಯ, ಒಂದು ಜಗತ್ತು, ಒಂದು ಗ್ರಿಡ್' ಎಂಬ ಕಲ್ಪನೆಯನ್ನು ಪರಿಚಯಿಸಿದೆ. ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ, ನಾನು ಒಂದು ಭೂಮಿ, ಒಂದು ಆರೋಗ್ಯವನ್ನು ಪ್ರತಿಪಾದಿಸಿದೆ. ಈ ಪರಿಕಲ್ಪನೆಗಳು ಜಗತ್ತಿನ ಪರಸ್ಪರ ಸಂಪರ್ಕವನ್ನು ಸಾಕಾರಗೊಳಿಸುತ್ತವೆ. ಇಂದು, ಯಾವುದೇ ದೇಶವು ಪ್ರತ್ಯೇಕವಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ—ಸಹಕಾರ ಮತ್ತು ಸಮನ್ವಯ ಅತ್ಯಗತ್ಯ. ಎರಡನೇ ಮಹಾಯುದ್ಧದ ನಂತರ ವಿಶ್ವಸಂಸ್ಥೆಯಂತಹ ಸಂಸ್ಥೆಗಳು ಹುಟ್ಟಿಕೊಂಡವು, ಆದರೆ ಬದಲಾಗುತ್ತಿರುವ ಕಾಲಕ್ಕೆ ಅನುಗುಣವಾಗಿ ಅಗತ್ಯ ಸುಧಾರಣೆಗಳು ಆಗಿಲ್ಲ. ಇದು ಅವುಗಳ ಪ್ರಸ್ತುತತೆಯ ಬಗ್ಗೆ ನಡೆಯುತ್ತಿರುವ ಚರ್ಚೆಯನ್ನು ಹುಟ್ಟುಹಾಕುತ್ತದೆ. ಜಗತ್ತು ಹೊಂದಿಕೊಳ್ಳಬೇಕು, ಮತ್ತು ನಾವೆಲ್ಲರೂ ಜಾಗತಿಕ ಯೋಗಕ್ಷೇಮಕ್ಕಾಗಿ ಒಟ್ಟಾಗಿ ಕೆಲಸ ಮಾಡಬೇಕು.

ಲೆಕ್ಸ್ ಫ್ರಿಡ್ಮನ್:   ಜಾಗತಿಕ ಶಾಂತಿಯನ್ನು ಬೆಳೆಸಲು ಅಗತ್ಯವಾದ ಕೌಶಲ್ಯ, ಅನುಭವ ಮತ್ತು ಭೌಗೋಳಿಕ ರಾಜಕೀಯ ಪ್ರಭಾವವನ್ನು ಹೊಂದಿರುವುದರ ಬಗ್ಗೆ ನೀವು ಮಾತನಾಡಿದ್ದೀರಿ. ಇಂದು ಸಂಘರ್ಷಗಳು ವ್ಯಾಪಕವಾಗಿರುವ ಜಗತ್ತಿನಲ್ಲಿ, ನೀವು ಜಾಗತಿಕ ವೇದಿಕೆಯಲ್ಲಿ ಅತ್ಯಂತ ಶ್ರೇಷ್ಠ ಶಾಂತಿದೂತರಾಗುವ ಸಾಮರ್ಥ್ಯವನ್ನು ಹೊಂದಿದ್ದೀರಿ. ಶಾಂತಿ ಸ್ಥಾಪನೆಗೆ ನಿಮ್ಮ ಕಾರ್ಯತಂತ್ರವನ್ನು ವಿವರಿಸಬಹುದೇ? ಉದಾಹರಣೆಗೆ, ರಷ್ಯಾ ಮತ್ತು ಉಕ್ರೇನ್‌ನಂತಹ ಎರಡು ಯುದ್ಧನಿರತ ರಾಷ್ಟ್ರಗಳ ನಡುವೆ ಶಾಂತಿ ಒಪ್ಪಂದಕ್ಕೆ ನೀವು ಹೇಗೆ ಮಧ್ಯಸ್ಥಿಕೆ ವಹಿಸುವಿರಿ?

ಪ್ರಧಾನಮಂತ್ರಿ: ನಾನು ಭಗವಾನ್ ಬುದ್ಧನ ಜನ್ಮಭೂಮಿಯಾದ ರಾಷ್ಟ್ರವನ್ನು ಪ್ರತಿನಿಧಿಸುತ್ತಿದ್ದೇನೆ. ನಾನು ಮಹಾತ್ಮ ಗಾಂಧೀಜಿಯವರ ಕರ್ಮಭೂಮಿಯಾದ ದೇಶವನ್ನು ಪ್ರತಿನಿಧಿಸುತ್ತಿದ್ದೇನೆ. ಇವರು ಶಾಂತಿಗಾಗಿಯೇ ತಮ್ಮ ಬೋಧನೆ, ಮಾತು, ಕಾರ್ಯ ಮತ್ತು ನಡವಳಿಕೆಯನ್ನು ಸಂಪೂರ್ಣವಾಗಿ ಸಮರ್ಪಿಸಿದ ಮಹಾನ್ ವ್ಯಕ್ತಿಗಳು. ಸಾಂಸ್ಕೃತಿಕವಾಗಿಯೂ ಐತಿಹಾಸಿಕವಾಗಿಯೂ, ಭಾರತವು ಬಲವಾದ ತಳಹದಿಯನ್ನು ಹೊಂದಿದ್ದು, ನಾವು ಶಾಂತಿಯ ಬಗ್ಗೆ ಮಾತನಾಡುವಾಗಲೆಲ್ಲಾ ಜಾಗತಿಕ ಗಮನವನ್ನು ಸೆಳೆಯುತ್ತದೆ. ನಾವು ಬುದ್ಧ ಮತ್ತು ಗಾಂಧಿಯವರ ನಾಡಿನಿಂದ ಬಂದಿರುವುದರಿಂದ ಜಗತ್ತು ನಮ್ಮ ಮಾತನ್ನು ಆಲಿಸುತ್ತದೆ, ಮತ್ತು ನಮ್ಮ ನಿಲುವು ಎಂದಿಗೂ ಸಂಘರ್ಷದ ಪರವಾಗಿರುವುದಿಲ್ಲ—ನಾವು ಸೌಹಾರ್ದತೆಯನ್ನು ಪ್ರತಿಪಾದಿಸುತ್ತೇವೆ. ನಾವು ಸಂಘರ್ಷವನ್ನು ಬಯಸುವುದಿಲ್ಲ, ಪ್ರಕೃತಿಯೊಂದಿಗಾಗಲಿ ಅಥವಾ ರಾಷ್ಟ್ರಗಳ ನಡುವೆಯಾಗಲಿ; ನಾವು ಸಮನ್ವಯ ಮತ್ತು ಸಹಕಾರವನ್ನು ಅಪೇಕ್ಷಿಸುತ್ತೇವೆ. ಇದಕ್ಕೆ ನಾವು ಯಾವುದೇ ರೀತಿಯಲ್ಲಿ ಕೊಡುಗೆ ನೀಡಬಹುದಾದರೆ, ನಾವು ನಿರಂತರವಾಗಿ ಅದಕ್ಕಾಗಿ ಶ್ರಮಿಸುತ್ತೇವೆ. ಉದಾಹರಣೆಗೆ, ನಾನು ರಷ್ಯಾ ಮತ್ತು ಉಕ್ರೇನ್ ಎರಡರೊಂದಿಗೂ ನಿಕಟ ಬಾಂಧವ್ಯವನ್ನು ಹೊಂದಿದ್ದೇನೆ. ನಾನು ಅಧ್ಯಕ್ಷ ಪುಟಿನ್ ಅವರೊಂದಿಗೆ ಕುಳಿತು ಇದು ಯುದ್ಧದ ಸಮಯವಲ್ಲ ಎಂದು ಮಾಧ್ಯಮಗಳಿಗೆ ಹೇಳಬಹುದು. ಅಂತೆಯೇ, ನಾನು ಅಧ್ಯಕ್ಷ ಜೆಲೆನ್ಸ್ಕಿಯೊಂದಿಗೆ ನೇರವಾಗಿ ಮಾತನಾಡಿ, "ಸಹೋದರ, ನಿಮಗೆ ಎಷ್ಟೇ ಜಾಗತಿಕ ಬೆಂಬಲ ದೊರೆತರೂ, ಯುದ್ಧಗಳು ಪರಿಹಾರಗಳನ್ನು ನೀಡುವುದಿಲ್ಲ—ಮಾತುಕತೆಯ ಮೇಜಿನ ಬಳಿ ಶಾಂತಿಯನ್ನು ಸ್ಥಾಪಿಸಲಾಗುತ್ತದೆ" ಎಂದು ಹೇಳಬಹುದು. ಉಕ್ರೇನ್ ಮತ್ತು ರಷ್ಯಾ ಎರಡೂ ಆ ಮೇಜಿನ ಬಳಿ ಕುಳಿತಾಗ ಮಾತ್ರ ಪರಿಹಾರ ಲಭ್ಯವಾಗುತ್ತದೆ. ಎರಡೂ ಪಕ್ಷಗಳು ನೇರವಾಗಿ ಭಾಗವಹಿಸದ ಹೊರತು ಯಾವುದೇ ಬಾಹ್ಯ ಮಧ್ಯಸ್ಥಿಕೆ ಪರಿಣಾಮಕಾರಿಯಾಗುವುದಿಲ್ಲ. ಆರಂಭದಲ್ಲಿ, ಇದರ ಬಗ್ಗೆ ಸೀಮಿತ ತಿಳುವಳಿಕೆ ಇತ್ತು, ಆದರೆ ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿದರೆ, ನಾನು ಆಶಾವಾದಿಯಾಗಿದ್ದೇನೆ. ರಷ್ಯಾ ಮತ್ತು ಉಕ್ರೇನ್ ಎರಡೂ ಗಣನೀಯ ನಷ್ಟವನ್ನು ಅನುಭವಿಸಿವೆ ಮತ್ತು ಜಗತ್ತು ಅದರ ಪರಿಣಾಮಗಳನ್ನು ಎದುರಿಸುತ್ತಿದೆ. ವಿಶೇಷವಾಗಿ ಜಾಗತಿಕ ದಕ್ಷಿಣವು ಆಹಾರ, ಇಂಧನ ಮತ್ತು ರಸಗೊಬ್ಬರಗಳ ಬಿಕ್ಕಟ್ಟಿನಿಂದ ತೀವ್ರ ಸಂಕಷ್ಟಕ್ಕೀಡಾಗಿದೆ. ಇಡೀ ಜಗತ್ತು ಈಗ ಆದಷ್ಟು ಬೇಗ ಶಾಂತಿಯನ್ನು ಬಯಸುತ್ತದೆ. ನಾನು ಯಾವಾಗಲೂ ಸ್ಪಷ್ಟವಾಗಿ ಹೇಳಿದ್ದೇನೆ: ನಾನು ಶಾಂತಿಯ ಪರವಾಗಿ ನಿಲ್ಲುತ್ತೇನೆ. ನಾನು ತಟಸ್ಥನಲ್ಲ—ನಾನು ಒಂದು ನಿಲುವನ್ನು ತೆಗೆದುಕೊಳ್ಳುತ್ತೇನೆ, ಮತ್ತು ನನ್ನ ನಿಲುವು ಶಾಂತಿ. ನಾನು ಅದಕ್ಕಾಗಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದೇನೆ.

ಲೆಕ್ಸ್ ಫ್ರಿಡ್ಮನ್: ಐತಿಹಾಸಿಕವಾಗಿ ಸಂಕೀರ್ಣ ಮತ್ತು ಅತ್ಯಂತ ಅಪಾಯಕಾರಿ ಸಂಘರ್ಷವೆಂದರೆ ಭಾರತ ಮತ್ತು ಪಾಕಿಸ್ತಾನದ ನಡುವಿನದ್ದು. ಎರಡೂ ರಾಷ್ಟ್ರಗಳು ಪರಮಾಣು ಶಕ್ತಿ ಹೊಂದಿವೆ ಮತ್ತು ಅವುಗಳ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಆಳವಾಗಿ ಬೇರೂರಿವೆ. ನೀವು ಪ್ರಗತಿಪರ ಭವಿಷ್ಯವನ್ನು ಕಲ್ಪಿಸುವ ಮತ್ತು ಶಾಂತಿಯನ್ನು ಬಯಸುವ ನಾಯಕರಾಗಿದ್ದೀರಿ. ಭಾರತ ಮತ್ತು ಪಾಕಿಸ್ತಾನದ ನಡುವೆ ಸ್ನೇಹ ಹಾಗೂ ಸೌಹಾರ್ದತೆ ಮೂಡಿಸಲು ಯಾವ ಮಾರ್ಗವನ್ನು ಅನುಸರಿಸುತ್ತೀರಿ?

 

ಪ್ರಧಾನಮಂತ್ರಿ: ಮೊದಲನೆಯದಾಗಿ, ಜಗತ್ತಿನ ಬಹುತೇಕರಿಗೆ ಅರಿವಿಲ್ಲದ ಕೆಲವು ಐತಿಹಾಸಿಕ ಸತ್ಯಗಳನ್ನು ನಾನು ನಿಮ್ಮ ಗಮನಕ್ಕೆ ತರಬಯಸುತ್ತೇನೆ. 1947ರ ಪೂರ್ವದಲ್ಲಿ, ಎಲ್ಲಾ ಧರ್ಮಗಳ ಭಾರತೀಯರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೆಗಲಿಗೆ ಹೆಗಲು ಕೊಟ್ಟು ಹೋರಾಡಿದರು. ಇಡೀ ರಾಷ್ಟ್ರವು ಸ್ವಾತಂತ್ರ್ಯದ ಉತ್ತುಂಗದ ಬಯಕೆಯಿಂದ ಮಿಡಿಯುತ್ತಿತ್ತು, ಅದನ್ನು ಸಂಭ್ರಮಿಸಲು ಸಜ್ಜಾಗುತ್ತಿತ್ತು. ಆದರೆ, ಆ ಕಾಲದ ಕೆಲವು ಅನಿವಾರ್ಯ ಪರಿಸ್ಥಿತಿಗಳಿಂದಾಗಿ—ಅವುಗಳ ಬಗ್ಗೆ ವಿಸ್ತಾರವಾದ ಚರ್ಚೆಗೆ ಅವಕಾಶವಿದೆ—ಆಗಿನ ನೀತಿ ನಿರೂಪಕರು ಭಾರತದ ವಿಭಜನೆಗೆ ಒಪ್ಪಿಗೆ ಸೂಚಿಸಿದರು. ಕೆಲವು ಮುಸ್ಲಿಮರು ಒಂದು ಪ್ರತ್ಯೇಕ ರಾಷ್ಟ್ರವನ್ನು ಬಯಸಿದರೆ, ಅವರಿಗೆ ಅದನ್ನು ನೀಡಬೇಕು ಎಂಬುದು ಆಲೋಚನೆಯಾಗಿತ್ತು. ಭಾರತಾಂಬೆಯ ಮಕ್ಕಳು ಈ ನಿರ್ಧಾರವನ್ನು ಭಾರವಾದ ಹೃದಯದಿಂದ ಒಪ್ಪಿಕೊಂಡರು, ಅಪಾರ ವೇದನೆಯನ್ನು ಸಹಿಸಿಕೊಂಡರು. ದುರದೃಷ್ಟವಶಾತ್, ವಿಭಜನೆಯ ಒಪ್ಪಿಗೆ ಇತಿಹಾಸದ ಅತ್ಯಂತ ರಕ್ತಸಿಕ್ತ ದುರಂತಗಳಲ್ಲಿ ಒಂದಕ್ಕೆ ಕಾರಣವಾಯಿತು. ಲಕ್ಷಾಂತರ ಅಮಾಯಕರು ಹತ್ಯೆಗೀಡಾದರು, ಪಾಕಿಸ್ತಾನದಿಂದ ಹತ್ಯೆಯಾದ ಮುಗ್ಧ ಜನರ ಶವಗಳಿಂದ ತುಂಬಿದ ರೈಲುಗಳು ಬಂದವು. ಅದು ಕಣ್ಣೀರನ್ನು ತರಿಸುವ ಭೀಕರ ದೃಶ್ಯವಾಗಿತ್ತು. ಪಾಕಿಸ್ತಾನಕ್ಕೆ ತನ್ನದೇ ನೆಲವನ್ನು ನೀಡಲಾಗಿರುವುದರಿಂದ, ಕೃತಜ್ಞತೆ ಮತ್ತು ಶಾಂತಿಯುತ ಸಹಬಾಳ್ವೆಯ ಬದ್ಧತೆಯನ್ನು ನಿರೀಕ್ಷಿಸಬಹುದಿತ್ತು. ಆದರೆ, ಶಾಂತಿಯನ್ನು ಅಪ್ಪಿಕೊಳ್ಳುವ ಬದಲು, ಪಾಕಿಸ್ತಾನವು ಭಾರತದ ಕಡೆಗೆ ಶಾಶ್ವತ ವೈರತ್ವದ ಹಾದಿಯನ್ನು ಆರಿಸಿಕೊಂಡಿತು. ಇಂದಿಗೂ, ಪರೋಕ್ಷ ಯುದ್ಧವು ನಿರಂತರವಾಗಿ ನಡೆಯುತ್ತಿದೆ. ಇದು ಕೇವಲ ಸೈದ್ಧಾಂತಿಕ ವಿಷಯವಲ್ಲ—ಯಾವುದೇ ಸಿದ್ಧಾಂತವು ಮುಗ್ಧ ಜನರ ಹತ್ಯೆಯನ್ನು ಸಮರ್ಥಿಸುವುದಿಲ್ಲ. ಆದರೂ, ಪಾಕಿಸ್ತಾನವು ನಿರಂತರವಾಗಿ ಭಯೋತ್ಪಾದನೆಯನ್ನು ರಫ್ತು ಮಾಡುವಲ್ಲಿ ತೊಡಗಿದೆ. ಮತ್ತು ಇದು ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ—ಜಗತ್ತಿನ ಯಾವುದೇ ಭಾಗದಲ್ಲಿ ಭಯೋತ್ಪಾದಕ ದಾಳಿ ನಡೆದಾಗ, ಬಹುತೇಕ ಯಾವಾಗಲೂ ಅದರ ಕುರುಹುಗಳು ಪಾಕಿಸ್ತಾನಕ್ಕೆ ಸಂಬಂಧಿಸಿರುತ್ತವೆ. ಅಮೆರಿಕಾದ 9/11 ದಾಳಿಯನ್ನು ಗಮನಿಸಿ—ಯೋಜನೆ ರೂಪಿಸಿದ ಒಸಾಮಾ ಬಿನ್ ಲಾಡೆನ್ ಪಾಕಿಸ್ತಾನದಲ್ಲಿ ಅಡಗಿಕೊಂಡಿದ್ದನು. ಪಾಕಿಸ್ತಾನವನ್ನು ಭಯೋತ್ಪಾದಕ ಚಟುವಟಿಕೆಗಳ ಕೇಂದ್ರವೆಂದು ಜಗತ್ತು ಈಗ ಗುರುತಿಸಿದೆ. ಇದು ಭಾರತಕ್ಕೆ ಮಾತ್ರವಲ್ಲದೆ ಇಡೀ ಜಗತ್ತಿಗೆ ತೊಂದರೆಯ ಮೂಲವಾಗಿದೆ. ಈ ವಿನಾಶಕಾರಿ ಮಾರ್ಗವನ್ನು ತ್ಯಜಿಸುವಂತೆ ನಾವು ಪಾಕಿಸ್ತಾನವನ್ನು ಪದೇ ಪದೇ ಒತ್ತಾಯಿಸಿದ್ದೇವೆ. ರಾಜ್ಯ ಪ್ರಾಯೋಜಿತ ಭಯೋತ್ಪಾದನೆ ಕೊನೆಗೊಳ್ಳಬೇಕು ಎಂದು ಅವರಿಗೆ ಹೇಳಿದ್ದೇವೆ. ಇಡೀ ರಾಷ್ಟ್ರದ ಭವಿಷ್ಯವನ್ನು ರಾಜ್ಯೇತರ ದುಷ್ಟಶಕ್ತಿಗಳಿಗೆ ಒಪ್ಪಿಸುವುದು ಯಾರ ಹಿತಾಸಕ್ತಿಗೂ ಪ್ರಯೋಜನವಾಗುವುದಿಲ್ಲ. ನಮ್ಮ ಶಾಂತಿ ಪ್ರಯತ್ನಗಳ ಭಾಗವಾಗಿ, ನಾನು ವೈಯಕ್ತಿಕವಾಗಿ ಲಾಹೋರ್‌ಗೆ ಪ್ರಯಾಣಿಸಿದೆ. ನಾನು ಪ್ರಧಾನ ಮಂತ್ರಿಯಾದಾಗ,  ಹೊಸ ಶುಭಾರಂಭವನ್ನು ಆಶಿಸಿ, ನನ್ನ ಪ್ರಮಾಣ ವಚನ ಸಮಾರಂಭಕ್ಕೆ ಪಾಕಿಸ್ತಾನವನ್ನು ಆಹ್ವಾನಿಸುವ ಉಪಕ್ರಮವನ್ನು ಕೈಗೊಂಡೆ. ಆದರೂ, ಶಾಂತಿಗಾಗಿನ ಪ್ರತಿಯೊಂದು ಪ್ರಾಮಾಣಿಕ ಪ್ರಯತ್ನವನ್ನು ವೈರತ್ವದಿಂದ ಎದುರಿಸಲಾಗಿದೆ. ಉತ್ತಮ ವಿವೇಚನೆ ಜಯಿಸುತ್ತದೆ ಮತ್ತು ಪಾಕಿಸ್ತಾನವು ಶಾಂತಿ ಮತ್ತು ಸಮೃದ್ಧಿಯ ಹಾದಿಯನ್ನು ಆರಿಸಿಕೊಳ್ಳುತ್ತದೆ ಎಂದು ನಾವು ಆಶಿಸಬಲ್ಲೆವು. ಈ ಅಂತ್ಯವಿಲ್ಲದ ಹಿಂಸಾಚಾರದ ಸುಳಿಯಿಂದ ಪಾಕಿಸ್ತಾನದ ಸಾಮಾನ್ಯ ಜನರು ಸಹ ಬೇಸತ್ತಿರಬೇಕು ಎಂದು ನಾನು ನಂಬುತ್ತೇನೆ. ಯಾವುದೇ ನಾಗರಿಕನು ನಿರಂತರ ಭಯದಲ್ಲಿ ಬದುಕಲು ಬಯಸುವುದಿಲ್ಲ, ಪ್ರತಿದಿನ ರಕ್ತಪಾತವನ್ನು ನೋಡಲು ಬಯಸುವುದಿಲ್ಲ. ಗಡಿಗಳನ್ನು ದಾಟಿ ಕಳುಹಿಸಲಾಗುವ ಭಯೋತ್ಪಾದಕರು ತಮ್ಮದೇ ಜೀವವನ್ನು ಕಳೆದುಕೊಳ್ಳುತ್ತಾರೆ ಮತ್ತು ಅವರ ಕುಟುಂಬಗಳು ನರಳುತ್ತವೆ.

ಲೆಕ್ಸ್ ಫ್ರಿಡ್ಮನ್:   ಪಾಕಿಸ್ತಾನದೊಂದಿಗಿನ ಸಂಬಂಧ ಸುಧಾರಣೆಗೆ ನೀವು ಮಾಡಿದ ನಿರ್ದಿಷ್ಟ ಪ್ರಯತ್ನಗಳೇನಾದರೂ ಇವೆಯೇ? ಭವಿಷ್ಯದ ಶಾಂತಿಗೆ ಮಾರ್ಗದರ್ಶನ ನೀಡುವಂತಹ ಕಥೆ ಏನಾದರೂ ಇದೆಯೇ?

ಪ್ರಧಾನಮಂತ್ರಿ: ನಾನು ಪ್ರಧಾನಮಂತ್ರಿಯಾದ ತಕ್ಷಣ ನನ್ನ ಪ್ರಮಾಣ ವಚನ ಸಮಾರಂಭಕ್ಕೆ ಅವರನ್ನು ಆಹ್ವಾನಿಸಿದ್ದು ಸಂಬಂಧ ಸುಧಾರಣೆಯ ಮೊದಲ ಪ್ರಮುಖ ಹೆಜ್ಜೆಯಾಗಿತ್ತು. ಇದು ಸ್ವತಃ ಒಂದು ಐತಿಹಾಸಿಕ ಘಟನೆ, ದಶಕಗಳಿಂದ ಆಗದಂತಹದ್ದು. 2013ರಲ್ಲಿ, ಮೋದಿಯವರ ವಿದೇಶಾಂಗ ನೀತಿ ಹೇಗಿರುತ್ತದೆ ಎಂದು ಹಲವರು ಪ್ರಶ್ನಿಸಿದರು, ಮತ್ತು ನಾನು ಸಾರ್ಕ್ ರಾಷ್ಟ್ರಗಳ ಎಲ್ಲ ನಾಯಕರನ್ನು ಸಮಾರಂಭಕ್ಕೆ ಆಹ್ವಾನಿಸಿದ್ದೇನೆ ಎಂದು ತಿಳಿದಾಗ ಅವರು ಅಚ್ಚರಿಗೊಂಡರು. ಈ ನಿರ್ಧಾರ ಮತ್ತು ಅದರ ಹಿಂದಿನ ಪ್ರಕ್ರಿಯೆಯನ್ನು ನಮ್ಮ ಆಗಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ತಮ್ಮ ಆತ್ಮಚರಿತ್ರೆಯಲ್ಲಿ ವಿವರವಾಗಿ ದಾಖಲಿಸಿದ್ದಾರೆ. ಇದು ಭಾರತದ ವಿದೇಶಾಂಗ ನೀತಿಯ ಸ್ಪಷ್ಟತೆ, ಆತ್ಮವಿಶ್ವಾಸ ಮತ್ತು ದೂರದೃಷ್ಟಿಯನ್ನು ಜಗತ್ತಿಗೆ ತೋರಿಸಿದ ನಿರ್ಣಾಯಕ ಕ್ಷಣವಾಗಿತ್ತು. ಭಾರತವು ಶಾಂತಿಗೆ ಎಷ್ಟು ಬದ್ಧವಾಗಿದೆ ಎಂಬುದನ್ನು ಇದು ಜಗತ್ತಿಗೆ ಸಾರಿತು. ಆದರೆ, ಈ ಮಹತ್ವದ ನಡೆಯ ಹೊರತಾಗಿಯೂ, ನಾವು ಬಯಸಿದ ಫಲಿತಾಂಶಗಳು ಸಿಗಲಿಲ್ಲ.

ಲೆಕ್ಸ್ ಫ್ರಿಡ್ಮನ್:   ನಾನು ನಿಮಗೆ ಸ್ವಲ್ಪ ಹಗುರವಾದ ಪ್ರಶ್ನೆಯನ್ನು ಕೇಳುತ್ತೇನೆ. ನಿಮ್ಮ ಅಭಿಪ್ರಾಯದಲ್ಲಿ, ಯಾವ ಕ್ರಿಕೆಟ್ ತಂಡ ಉತ್ತಮ—ಭಾರತ ಅಥವಾ ಪಾಕಿಸ್ತಾನ? ಈ ಎರಡು ತಂಡಗಳ ನಡುವಿನ ಪೈಪೋಟಿ ದಂತಕಥೆಯಾಗಿದೆ, ಮೈದಾನದಲ್ಲಿ ಮಾತ್ರವಲ್ಲದೆ ನೀವು ಈಗಷ್ಟೇ ಚರ್ಚಿಸಿದಂತೆ ಭೌಗೋಳಿಕ ರಾಜಕೀಯ ಉದ್ವಿಗ್ನತೆಯಲ್ಲೂ. ರಾಷ್ಟ್ರಗಳ ನಡುವೆ ಉತ್ತಮ ಸಂಬಂಧ ಮತ್ತು ಪರಸ್ಪರ ಸಹಕಾರವನ್ನು ಬೆಳೆಸುವಲ್ಲಿ ಕ್ರೀಡೆಗಳು, ವಿಶೇಷವಾಗಿ ಕ್ರಿಕೆಟ್ ಮತ್ತು ಫುಟ್‌ಬಾಲ್, ಯಾವ ಪಾತ್ರವನ್ನು ವಹಿಸುತ್ತವೆ?

ಪ್ರಧಾನಮಂತ್ರಿ: ಕ್ರೀಡೆಯು ಇಡೀ ಜಗತ್ತಿಗೆ ಶಕ್ತಿಯ ಮೂಲವಾಗಿದೆ. ಕ್ರೀಡಾ ಮನೋಭಾವವು ಒಗ್ಗೂಡಿಸುವ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತದೆ. ಬಾಹ್ಯ ಪ್ರಭಾವಗಳಿಂದ ಕ್ರೀಡೆಯನ್ನು ಕಲುಷಿತಗೊಳಿಸಲು ನಾನು ಬಯಸುವುದಿಲ್ಲ. ನಾನು ಯಾವಾಗಲೂ ಕ್ರೀಡೆಯನ್ನು ಮಾನವ ಪ್ರಗತಿ ಮತ್ತು ಅಭಿವೃದ್ಧಿಯ ಅತ್ಯಗತ್ಯ ಭಾಗವೆಂದು ಪರಿಗಣಿಸಿದ್ದೇನೆ. ಯಾವ ತಂಡವು ಶ್ರೇಷ್ಠವಾಗಿದೆ ಎಂಬುದಕ್ಕೆ ಸಂಬಂಧಿಸಿದಂತೆ, ನಾನು ಕ್ರಿಕೆಟ್ ತಂತ್ರಗಳಲ್ಲಿ ಪರಿಣಿತನಲ್ಲ, ಆದ್ದರಿಂದ ಆ ಮೌಲ್ಯಮಾಪನವನ್ನು ಪರಿಣಿತರಿಗೆ ಬಿಡುವುದು ಉತ್ತಮ. ಆದಾಗ್ಯೂ, ಫಲಿತಾಂಶಗಳು ತಾವಾಗಿಯೇ ಮಾತನಾಡುತ್ತವೆ. ಇತ್ತೀಚೆಗಷ್ಟೇ ಭಾರತ ಮತ್ತು ಪಾಕಿಸ್ತಾನದ ನಡುವೆ ಪಂದ್ಯ ನಡೆದಿತ್ತು. ಆ ಪಂದ್ಯದ ಫಲಿತಾಂಶವು ಸ್ವಾಭಾವಿಕವಾಗಿ ಯಾವ ತಂಡವು ಪ್ರಸ್ತುತ ಬಲಿಷ್ಠವಾಗಿದೆ ಎಂಬುದನ್ನು ಸೂಚಿಸುತ್ತದೆ.

ಲೆಕ್ಸ್ ಫ್ರಿಡ್ಮನ್: ಹೌದು, ನಾನು ಇತ್ತೀಚೆಗೆ 'ದಿ ಗ್ರೇಟೆಸ್ಟ್ ರೈವಲರಿ: ಇಂಡಿಯಾ ವರ್ಸಸ್ ಪಾಕಿಸ್ತಾನ್' ಎಂಬ ಸರಣಿಯನ್ನು ನೋಡಿದೆ, ಅದರಲ್ಲಿ ಕೆಲವು ಅದ್ಭುತ ಆಟಗಾರರು ಮತ್ತು ಪಂದ್ಯಗಳನ್ನು ತೋರಿಸಿದ್ದಾರೆ. ಅಂತಹ ತೀವ್ರ ಪೈಪೋಟಿಯನ್ನು ನೋಡುವುದು ರೋಮಾಂಚನಕಾರಿಯಾಗಿದೆ. ನೀವು ಫುಟ್‌ಬಾಲ್ ಬಗ್ಗೆಯೂ ಮಾತನಾಡಿದಿರಿ, ಅದು ಭಾರತದಲ್ಲಿ ಬಹಳ ಜನಪ್ರಿಯವಾಗಿದೆ. ಹಾಗಾದರೆ, ಇದೊಂದು ಸ್ವಲ್ಪ ಕಠಿಣ ಪ್ರಶ್ನೆ—ನಿಮ್ಮ ನೆಚ್ಚಿನ ಫುಟ್‌ಬಾಲ್ ಆಟಗಾರ ಯಾರು? ನಮ್ಮಲ್ಲಿ ಮೆಸ್ಸಿ, ಪೆಲೆ, ಮರಡೋನಾ, ಕ್ರಿಸ್ಟಿಯಾನೊ ರೊನಾಲ್ಡೊ ಮತ್ತು ಜಿಡಾನೆ ಅವರಂತಹ ದಂತಕಥೆಗಳಿದ್ದಾರೆ. ನಿಮ್ಮ ಪ್ರಕಾರ, ಸಾರ್ವಕಾಲಿಕ ಶ್ರೇಷ್ಠ ಫುಟ್‌ಬಾಲ್ ಆಟಗಾರ ಯಾರು?"

ಪ್ರಧಾನಮಂತ್ರಿ: ಭಾರತದ ಅನೇಕ ಭಾಗಗಳಲ್ಲಿ ಫುಟ್‌ಬಾಲ್ ಅನ್ನು ವ್ಯಾಪಕವಾಗಿ ಆಡುತ್ತಾರೆ, ಮತ್ತು ನಮ್ಮ ಮಹಿಳಾ ಮತ್ತು ಪುರುಷರ ತಂಡಗಳು ಉತ್ತಮ ಪ್ರಗತಿ ಸಾಧಿಸುತ್ತಿವೆ. ಹಿಂದಿನ ಕಾಲವನ್ನು, ವಿಶೇಷವಾಗಿ 1980ರ ದಶಕವನ್ನು ನೋಡಿದರೆ, ಮೊದಲು ನೆನಪಾಗುವುದು ಮರಡೋನಾ ಹೆಸರು. ಅವರು ಆ ಪೀಳಿಗೆಯ ಹೀರೋ ಆಗಿದ್ದರು. ಆದರೆ, ಇಂದಿನ ಯುವ ಫುಟ್‌ಬಾಲ್ ಅಭಿಮಾನಿಗಳನ್ನು ಕೇಳಿದರೆ, ಅವರು ಮೆಸ್ಸಿಯನ್ನು ತಮ್ಮ ಆದರ್ಶ ಎಂದು ಹೇಳುವ ಸಾಧ್ಯತೆಯಿದೆ. ನಿಮ್ಮ ಪ್ರಶ್ನೆ ನನಗೆ ಒಂದು ಆಸಕ್ತಿದಾಯಕ ಘಟನೆಯನ್ನು ನೆನಪಿಸಿತು. ಮಧ್ಯ ಭಾರತದ ಮಧ್ಯಪ್ರದೇಶ ರಾಜ್ಯದಲ್ಲಿ ಶಹಡೋಲ್ ಎಂಬ ಜಿಲ್ಲೆಯಿದೆ. ಅಲ್ಲಿ ಹೆಚ್ಚಾಗಿ ಬುಡಕಟ್ಟು ಜನರು ವಾಸಿಸುತ್ತಾರೆ. ಬುಡಕಟ್ಟು ಮಹಿಳೆಯರು ನಡೆಸುವ ಸ್ವಸಹಾಯ ಗುಂಪುಗಳ ಜೊತೆ ನಾನು ಆಗಾಗ್ಗೆ ಸಂವಾದ ನಡೆಸುತ್ತೇನೆ, ಆ ಸಂವಾದಗಳು ನನಗೆ ಬಹಳಷ್ಟು ಕಲಿಸುತ್ತವೆ. ಒಂದು ಭೇಟಿಯ ಸಮಯದಲ್ಲಿ, ಕ್ರೀಡಾ ಸಮವಸ್ತ್ರ ಧರಿಸಿದ ಸುಮಾರು 80ರಿಂದ 100 ಯುವಕರನ್ನು ನೋಡಿದೆ—ಕೆಲವರು ಮಕ್ಕಳು, ಕೆಲವರು ಹದಿಹರೆಯದವರು, ಮತ್ತು ಕೆಲವರು ವಯಸ್ಸಾದವರು. ಸ್ವಾಭಾವಿಕವಾಗಿ, ನನಗೆ ಕುತೂಹಲವಾಗಿತ್ತು ಮತ್ತು ಅವರನ್ನು ಸಮೀಪಿಸಿದೆ. "ನೀವೆಲ್ಲಾ ಎಲ್ಲಿಂದ ಬಂದಿದ್ದೀರಿ?" ಎಂದು ಕೇಳಿದೆ. ಅವರು, "ನಾವು ಮಿನಿ ಬ್ರೆಜಿಲ್‌ನಿಂದ ಬಂದಿದ್ದೇವೆ" ಎಂದು ಉತ್ತರಿಸಿದರು. ನನಗೆ ಆಶ್ಚರ್ಯವಾಗಿ, "ಮಿನಿ ಬ್ರೆಜಿಲ್ ಅಂದರೆ ಏನು?" ಎಂದು ಕೇಳಿದೆ. ಆಗ ಅವರು, ನಾಲ್ಕು ತಲೆಮಾರುಗಳಿಂದ ತಮ್ಮ ಊರಿನಲ್ಲಿ ಫುಟ್‌ಬಾಲ್ ಆಡುತ್ತಿರುವುದರಿಂದ ಆ ಹೆಸರಿನಿಂದ ಕರೆಯುತ್ತಾರೆ ಎಂದು ವಿವರಿಸಿದರು. ಆ ಊರಿನಿಂದ ಸುಮಾರು 80 ರಾಷ್ಟ್ರೀಯ ಮಟ್ಟದ ಆಟಗಾರರು ಬಂದಿದ್ದಾರೆ, ಮತ್ತು ಇಡೀ ಊರು ಆ ಕ್ರೀಡೆಗೆ ಸಮರ್ಪಿತವಾಗಿದೆ. ಅವರ ವಾರ್ಷಿಕ ಫುಟ್‌ಬಾಲ್ ಪಂದ್ಯದ ಸಮಯದಲ್ಲಿ, ಸುತ್ತಮುತ್ತಲಿನ ಊರುಗಳಿಂದ 20,000ರಿಂದ 25,000 ಪ್ರೇಕ್ಷಕರು ಬಂದು ನೋಡುತ್ತಾರೆ ಎಂದು ಅವರು ಹೇಳಿದರು. ಭಾರತದಲ್ಲಿ ಫುಟ್‌ಬಾಲ್‌ನ ಹುಚ್ಚು ಹೆಚ್ಚುತ್ತಿರುವುದನ್ನು ಈ ಕಥೆ ತೋರಿಸುತ್ತದೆ, ಮತ್ತು ಇದನ್ನು ನಾನು ಒಳ್ಳೆಯ ಬೆಳವಣಿಗೆ ಎಂದು ಭಾವಿಸುತ್ತೇನೆ. ಫುಟ್‌ಬಾಲ್ ಸೌಹಾರ್ದತೆಯನ್ನು ಬೆಳೆಸುತ್ತದೆ.

ಲೆಕ್ಸ್ ಫ್ರಿಡ್ಮನ್: ಖಂಡಿತವಾಗಿಯೂ—ಫುಟ್‌ಬಾಲ್ ಭಾರತದಲ್ಲಿ ಮಾತ್ರವಲ್ಲ, ಪ್ರಪಂಚದಾದ್ಯಂತ ಜನರನ್ನು ಒಗ್ಗೂಡಿಸುವ ಶಕ್ತಿಶಾಲಿ ಕ್ರೀಡೆಗಳಲ್ಲಿ ಒಂದು. ಇದು ಜನರನ್ನು ಒಂದುಗೂಡಿಸುವ ಕ್ರೀಡೆಯ ಸಾಮರ್ಥ್ಯವನ್ನು ತೋರಿಸುತ್ತದೆ. ನೀವು ಇತ್ತೀಚೆಗೆ ಅಮೆರಿಕಕ್ಕೆ ಭೇಟಿ ನೀಡಿ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ನಿಮ್ಮ ಸ್ನೇಹವನ್ನು ಪುನಶ್ಚೇತನಗೊಳಿಸಿದಿರಿ. ಸ್ನೇಹಿತ ಮತ್ತು ನಾಯಕನಾಗಿ ನೀವು ಅವರಲ್ಲಿ ಯಾವ ಗುಣಗಳನ್ನು ಮೆಚ್ಚುತ್ತೀರಿ?

ಪ್ರಧಾನಮಂತ್ರಿ: ನಾನು ಕೇವಲ ನನ್ನ ಅಭಿಪ್ರಾಯವನ್ನು ಹೇಳುವ ಬದಲು, ನಿಮಗೆ ಸ್ವಲ್ಪ ಒಳನೋಟವನ್ನು ನೀಡುವಂತಹ ಒಂದು ಅನುಭವವನ್ನು ಹಂಚಿಕೊಳ್ಳುತ್ತೇನೆ. ನಾವು ಹೂಸ್ಟನ್‌ನಲ್ಲಿ 'ಹೌಡಿ ಮೋದಿ' ಎಂಬ ಕಾರ್ಯಕ್ರಮವನ್ನು ಆಯೋಜಿಸಿದ್ದೆವು, ಅದರಲ್ಲಿ ಅಧ್ಯಕ್ಷ ಟ್ರಂಪ್ ಮತ್ತು ನಾನು ಇಬ್ಬರೂ ಭಾಗವಹಿಸಿದ್ದೆವು. ಕ್ರೀಡಾಂಗಣವು ಜನಸಾಗರದಿಂದ ತುಂಬಿ ತುಳುಕುತ್ತಿತ್ತು—ಅಮೆರಿಕದಲ್ಲಿನ ರಾಜಕೀಯ ಕಾರ್ಯಕ್ರಮಕ್ಕೆ, ಅದರಲ್ಲೂ ಕ್ರೀಡಾಕೂಟಗಳಿಗೆ ಮೀಸಲಾದ ಸ್ಥಳದಲ್ಲಿ, ಇದು ಅದ್ಭುತ ದೃಶ್ಯವಾಗಿತ್ತು. ಭಾರತೀಯ ವಲಸಿಗರು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರು. ನಾವು ಇಬ್ಬರೂ ಭಾಷಣ ಮಾಡಿದೆವು. ನಾನು ಮಾತನಾಡುತ್ತಿರುವಾಗ, ಅಧ್ಯಕ್ಷ ಟ್ರಂಪ್ ಕುಳಿತು ಏಕಾಗ್ರತೆಯಿಂದ ಆಲಿಸಿದರು. ಇದು ನನಗೆ ಅವರ ವಿನಯವನ್ನು ತೋರಿಸಿತು. ಅಮೆರಿಕದ ಅಧ್ಯಕ್ಷರು, ಪ್ರೇಕ್ಷಕರ ನಡುವೆ ಕುಳಿತು, ನನ್ನ ಭಾಷಣವನ್ನು ಆಲಿಸುತ್ತಿದ್ದರು—ಇದು ಅವರ ಕಡೆಯಿಂದ ಮಹತ್ವದ ಸನ್ನೆ. ನನ್ನ ಭಾಷಣವನ್ನು ಮುಗಿಸಿದ ನಂತರ, ನಾನು ಹಾಜರಾದದ್ದಕ್ಕಾಗಿ ಅವರಿಗೆ ಧನ್ಯವಾದ ಹೇಳಲು ಹೋದೆ. ಅಮೆರಿಕದಲ್ಲಿನ ಬಿಗಿಯಾದ ಭದ್ರತೆ ಮತ್ತು ಜಾರಿಯಲ್ಲಿರುವ ಕಟ್ಟುನಿಟ್ಟಿನ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು, ನಾನು ಒಂದು ಕ್ಷಣ ಹಿಂಜರಿದೆ, ಆದರೆ ನಂತರ, "ನೀವು ನನ್ನೊಂದಿಗೆ ಕ್ರೀಡಾಂಗಣದ ಸುತ್ತಲೂ ಒಂದು ಸುತ್ತು ಬರಲು ಇಷ್ಟಪಡುತ್ತೀರಾ?" ಎಂದು ಕೇಳಿದೆ. ಸಾವಿರಾರು ಜನರು ಹಾಜರಿದ್ದರು, ಅನೇಕರು ಕೈ ಎತ್ತಿ ನಮಸ್ಕಾರ ಮಾಡುತ್ತಿದ್ದರು. ಅಮೆರಿಕದ ರಾಜಕೀಯ ಜೀವನದಲ್ಲಿ, ಅಮೆರಿಕದ ಹಾಲಿ ಅಧ್ಯಕ್ಷರು ದೊಡ್ಡ ಜನಸಮೂಹದ ನಡುವೆ ಮುಕ್ತವಾಗಿ ನಡೆಯುವುದು ಬಹುತೇಕ ಅಸಾಧ್ಯ. ಆದರೂ, ಒಂದು ಕ್ಷಣವೂ ಯೋಚಿಸದೆ, ಅಧ್ಯಕ್ಷ ಟ್ರಂಪ್ ಒಪ್ಪಿಕೊಂಡರು. ಅವರು ಸಾಮಾನ್ಯ ಭದ್ರತಾ ಕಾಳಜಿಗಳನ್ನು ಬದಿಗಿಟ್ಟು ನನ್ನೊಂದಿಗೆ ನಡೆದರು. ಅಮೆರಿಕದ ಭದ್ರತಾ ಸಿಬ್ಬಂದಿ ಸ್ಪಷ್ಟವಾಗಿ ಆಶ್ಚರ್ಯಚಕಿತರಾದರು. ಆ ಕ್ಷಣ ನನಗೆ ಆಳವಾದದ್ದನ್ನು ಬಹಿರಂಗಪಡಿಸಿತು—ಇವರು ಧೈರ್ಯಶಾಲಿ ವ್ಯಕ್ತಿ. ಅವರು ತಮ್ಮದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಮತ್ತು ಮುಖ್ಯವಾಗಿ, ಅವರು ನನ್ನನ್ನು ನಂಬಿದ್ದರು. ಆ ಜನಸಮೂಹದಲ್ಲಿ ಹಿಂಜರಿಕೆಯಿಲ್ಲದೆ ನಡೆಯಲು ಅವರು ನನ್ನ ಮೇಲೆ ಸಾಕಷ್ಟು ವಿಶ್ವಾಸವಿಟ್ಟಿದ್ದರು. ಈ ಪರಸ್ಪರ ನಂಬಿಕೆ ಮತ್ತು ತಿಳುವಳಿಕೆ ನಮ್ಮ ಸಂಬಂಧದ ಭದ್ರ ಬುನಾದಿಯನ್ನು ರೂಪಿಸಿತು. ನಂತರ, ಅವರ ಇತ್ತೀಚಿನ ಚುನಾವಣಾ ಪ್ರಚಾರದ ಸಮಯದಲ್ಲಿ ಅವರಿಗೆ ಗುಂಡು ತಗುಲಿದಾಗ, ನಾನು ಅದೇ ಅಧ್ಯಕ್ಷ ಟ್ರಂಪ್ ಅವರನ್ನು ನೋಡಿದೆ—ಅದೇ ದೃಢಸಂಕಲ್ಪದ ವ್ಯಕ್ತಿ. ಅವರು ಬದುಕುಳಿದರು ಮತ್ತು ಅಮೆರಿಕಕ್ಕೆ ಅವರ ಅಚಲ ಬದ್ಧತೆ ಹಾಗೆಯೇ ಉಳಿಯಿತು. ನಾನು 'ದೇಶ ಮೊದಲು' ವ್ಯಕ್ತಿ. ಅವರು 'ಅಮೆರಿಕ ಮೊದಲು' ವ್ಯಕ್ತಿ. ನಾನು 'ಭಾರತ ಮೊದಲು' ವ್ಯಕ್ತಿ. ಅದಕ್ಕಾಗಿಯೇ ನಾವು ಚೆನ್ನಾಗಿ ಹೊಂದಿಕೊಳ್ಳುತ್ತೇವೆ. ಈ ಹಂಚಿಕೆಯ ತತ್ವಗಳು ನಮ್ಮ ನಡುವೆ ಪ್ರತಿಧ್ವನಿಸುತ್ತವೆ.ಜಾಗತಿಕ ರಾಜಕೀಯದಲ್ಲಿನ ಒಂದು ಪ್ರಮುಖ ಸಮಸ್ಯೆ ಎಂದರೆ ಮಾಧ್ಯಮ ನಿರೂಪಣೆಗಳು ನಾಯಕರು ಪರಸ್ಪರರನ್ನು ಹೇಗೆ ಗ್ರಹಿಸುತ್ತಾರೆ ಎಂಬುದನ್ನು ರೂಪಿಸುತ್ತವೆ. ಸಾಮಾನ್ಯವಾಗಿ, ಅವರು ಪರಸ್ಪರ ವೈಯಕ್ತಿಕವಾಗಿ ತಿಳಿದುಕೊಳ್ಳುವುದಿಲ್ಲ; ಅವರ ಅಭಿಪ್ರಾಯಗಳು ಹೊರಗಿನ ವ್ಯಾಖ್ಯಾನಗಳ ಮೂಲಕ ಫಿಲ್ಟರ್ ಆಗುತ್ತವೆ. ನಾನು ಮೊದಲ ಬಾರಿಗೆ ಶ್ವೇತಭವನಕ್ಕೆ ಭೇಟಿ ನೀಡಿದಾಗ, ಅಧ್ಯಕ್ಷ ಟ್ರಂಪ್ ರಾಜಕೀಯಕ್ಕೆ ತುಲನಾತ್ಮಕವಾಗಿ ಹೊಸಬರಾಗಿದ್ದರು. ಮಾಧ್ಯಮವು ಅವರ ಬಗ್ಗೆ ಒಂದು ನಿರ್ದಿಷ್ಟ ಚಿತ್ರಣವನ್ನು ಸೃಷ್ಟಿಸಿತ್ತು, ಮತ್ತು ಅವರ ಬಗ್ಗೆ ವಿವಿಧ ಮಾಹಿತಿಯನ್ನು ನಾನು ಪಡೆದುಕೊಂಡಿದ್ದೆ. ಆದರೆ, ನಾನು ಅವರನ್ನು ಭೇಟಿಯಾದಾಗ, ಅವರು ತಕ್ಷಣವೇ ಎಲ್ಲಾ ಔಪಚಾರಿಕ ನಿಯಮಗಳನ್ನು ಮುರಿದರು. ಅವರು ವೈಯಕ್ತಿಕವಾಗಿ ನನ್ನನ್ನು ಶ್ವೇತಭವನದ ಪ್ರವಾಸಕ್ಕೆ ಕರೆದೊಯ್ದು ಅದರ ಇತಿಹಾಸವನ್ನು ಗಮನಾರ್ಹ ನಿಖರತೆಯೊಂದಿಗೆ ವಿವರಿಸಿದರು. ಅವರಿಗೆ ಯಾವುದೇ ಟಿಪ್ಪಣಿಗಳು ಇರಲಿಲ್ಲ, ಪ್ರೇರಣೆಗಳು ಇರಲಿಲ್ಲ—ಕೇವಲ ತಮ್ಮ ದೇಶದ ಸಂಸ್ಥೆಗಳ ಬಗ್ಗೆ ಸಹಜ ಜ್ಞಾನವಿತ್ತು. ಅಬ್ರಹಾಂ ಲಿಂಕನ್ ಎಲ್ಲಿ ವಾಸಿಸುತ್ತಿದ್ದರು, ನಿರ್ದಿಷ್ಟ ನ್ಯಾಯಾಲಯವನ್ನು ಏಕೆ ನಿರ್ದಿಷ್ಟ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ, ಮತ್ತು ಯಾವ ಅಧ್ಯಕ್ಷರು ನಿರ್ದಿಷ್ಟ ಮೇಜುಗಳಲ್ಲಿ ಪ್ರಮುಖ ದಾಖಲೆಗಳಿಗೆ ಸಹಿ ಹಾಕಿದ್ದಾರೆ ಎಂಬುದನ್ನು ಅವರು ಐತಿಹಾಸಿಕ ನಿಖರತೆಯೊಂದಿಗೆ ತೋರಿಸಿದರು. ಆ ಅನುಭವವು ನನ್ನ ಮೇಲೆ ಆಳವಾದ ಪ್ರಭಾವ ಬೀರಿತು. ಅವರು ಅಮೆರಿಕದ ಸಂಸ್ಥೆಗಳು ಮತ್ತು ಇತಿಹಾಸವನ್ನು ಎಷ್ಟು ಗೌರವಿಸುತ್ತಾರೆ ಎಂಬುದನ್ನು ಅದು ತೋರಿಸಿತು. ಅವರ ದೇಶದ ಪರಂಪರೆಯ ಬಗ್ಗೆ ಅವರ ಜ್ಞಾನ ಮತ್ತು ಗೌರವ ಸ್ಪಷ್ಟವಾಗಿತ್ತು. ಅವರು ಅಧಿಕಾರದಲ್ಲಿಲ್ಲದ ನಾಲ್ಕು ವರ್ಷಗಳಲ್ಲಿಯೂ ಸಹ, ಅವರು ಬಲವಾದ ಸಂಪರ್ಕವನ್ನು ಕಾಪಾಡಿಕೊಂಡರು. ಕನಿಷ್ಠ ಐವತ್ತು ಬಾರಿ, ಅವರು ಪರಸ್ಪರ ಪರಿಚಯಸ್ಥರ ಮೂಲಕ ಸಂದೇಶಗಳನ್ನು ಕಳುಹಿಸಿದರು, "ಮೋದಿ ನನ್ನ ಸ್ನೇಹಿತ, ನನ್ನ ಶುಭಾಶಯಗಳನ್ನು ತಿಳಿಸಿ" ಎಂದು ಹೇಳಿದರು. ರಾಜಕೀಯದಲ್ಲಿ ಅಂತಹ ನಿರಂತರತೆ ಅಪರೂಪ. ನಾವು ವೈಯಕ್ತಿಕವಾಗಿ ಭೇಟಿಯಾಗದಿದ್ದರೂ, ನಮ್ಮ ಸಂವಹನ ಹಾಗೆಯೇ ಉಳಿಯಿತು.

ಲೆಕ್ಸ್ ಫ್ರಿಡ್ಮನ್: ನಿಮ್ಮ ಇತ್ತೀಚಿನ ಭೇಟಿಯ ಸಂದರ್ಭದಲ್ಲಿ, ಅವರು ನೀವು ತನಗಿಂತ ಉತ್ತಮ ಮತ್ತು ಚುರುಕಾದ ಸಂಧಾನಕಾರರು ಎಂದು ಹೇಳಿದ್ದರು. ಸಂಧಾನಕಾರರಾಗಿ ಅವರ ಬಗ್ಗೆ ನಿಮ್ಮ ಅಭಿಪ್ರಾಯವೇನು? ಮತ್ತು ನೀವು ಸಂಧಾನದಲ್ಲಿ ಉತ್ತಮರು ಎಂದು ಅವರು ಹೇಳಿದಾಗ ಅವರ ಉದ್ದೇಶವೇನಿತ್ತು ಎಂದು ನೀವು ಭಾವಿಸುತ್ತೀರಿ?

ಪ್ರಧಾನಮಂತ್ರಿ: ನಾನು ಅದರ ಬಗ್ಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ, ಏಕೆಂದರೆ ಅದು ಅವರ ದೊಡ್ಡತನ. ಅವರ ವಯಸ್ಸು ನನಗಿಂತ ಕಡಿಮೆಯಿದ್ದರೂ, ಅವರು ವಿವಿಧ ವಿಷಯಗಳಲ್ಲಿ ನನ್ನನ್ನು ಮುಕ್ತವಾಗಿ ಹೊಗಳುತ್ತಾರೆ. ಆದರೂ, ಒಂದು ವಿಷಯ ಖಚಿತ—ನಾನು ನನ್ನ ದೇಶದ ಹಿತಾಸಕ್ತಿಗಳಿಗೆ ಮೊದಲ ಆದ್ಯತೆ ನೀಡುತ್ತೇನೆ. ಅದಕ್ಕಾಗಿಯೇ ನಾನು ಪ್ರತಿ ವೇದಿಕೆಯಲ್ಲೂ ಭಾರತದ ಹಿತಾಸಕ್ತಿಗಳನ್ನು ಸಮರ್ಥಿಸುತ್ತೇನೆ. ನಾನು ಯಾರನ್ನೂ ನೋಯಿಸುವ ಉದ್ದೇಶದಿಂದ ಹಾಗೆ ಮಾಡುವುದಿಲ್ಲ, ಬದಲಿಗೆ ರಚನಾತ್ಮಕವಾಗಿ, ಯಾರೂ ಬೇಸರಗೊಳ್ಳದಂತೆ ನೋಡಿಕೊಳ್ಳುತ್ತೇನೆ. ಆದರೂ, ಮೋದಿ ಇದ್ದರೆ, ಅವರು ಈ ತತ್ವಗಳ ಪರವಾಗಿ ದೃಢವಾಗಿ ನಿಲ್ಲುತ್ತಾರೆ ಎಂದು ಎಲ್ಲರಿಗೂ ತಿಳಿದಿದೆ. ನನ್ನ ದೇಶದ ಜನರು ನನಗೆ ಈ ಜವಾಬ್ದಾರಿಯನ್ನು ವಹಿಸಿದ್ದಾರೆ, ಮತ್ತು ನನಗೆ, ಅವರೇ ನನ್ನ ಅಂತಿಮ ಆಧಾರ. ನಾನು ಯಾವಾಗಲೂ ಅವರ ಆಶಯಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತೇನೆ.

ಲೆಕ್ಸ್ ಫ್ರಿಡ್ಮನ್: ನಿಮ್ಮ ಅಮೆರಿಕ ಭೇಟಿಯ ಸಮಯದಲ್ಲಿ, ನೀವು ಎಲೋನ್ ಮಸ್ಕ್, ಜೆಡಿ ವ್ಯಾನ್ಸ್, ತುಳಸಿ ಗಬ್ಬಾರ್ಡ್ ಮತ್ತು ವಿವೇಕ್ ರಾಮಸ್ವಾಮಿ ಸೇರಿದಂತೆ ಹಲವಾರು ಗಮನಾರ್ಹ ವ್ಯಕ್ತಿಗಳೊಂದಿಗೆ ಪ್ರಮುಖ ಸಭೆಗಳನ್ನು ನಡೆಸಿದ್ದೀರಿ. ಈ ಸಭೆಗಳ ಪ್ರಮುಖ ಅಂಶಗಳು ಯಾವುವು? ಯಾವುದೇ ಮಹತ್ವದ ನಿರ್ಧಾರಗಳು ಅಥವಾ ಸ್ಮರಣೀಯ ಕ್ಷಣಗಳು ಇದ್ದವೇ?

ಪ್ರಧಾನಮಂತ್ರಿ: ನಾನು ಅಧ್ಯಕ್ಷ ಟ್ರಂಪ್ ಅವರನ್ನು ಅವರ ಮೊದಲ ಅವಧಿಯಲ್ಲಿ ಮತ್ತು ಈಗ ಅವರ ಎರಡನೇ ಅವಧಿಯಲ್ಲಿ ಗಮನಿಸಿದ್ದೇನೆ. ಈ ಬಾರಿ, ಅವರು ಗಮನಾರ್ಹವಾಗಿ ಹೆಚ್ಚು ಸಿದ್ಧರಾಗಿದ್ದಾರೆ. ಅವರು ಏನು ಸಾಧಿಸಲು ಬಯಸುತ್ತಾರೆ ಎಂಬುದಕ್ಕೆ ಸ್ಪಷ್ಟವಾದ ಮಾರ್ಗಸೂಚಿ ಮತ್ತು ನಿರ್ದಿಷ್ಟ ತಂತ್ರವನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದಾರೆ. ಇದಲ್ಲದೆ, ಅವರ ತಂಡದ ಸದಸ್ಯರನ್ನು ಭೇಟಿಯಾಗುವ ಅವಕಾಶ ನನಗೆ ದೊರಕಿತು, ಮತ್ತು ಅವರು ಅತ್ಯಂತ ಸಮರ್ಥ ತಂಡವನ್ನು ಕಟ್ಟಿದ್ದಾರೆ ಎಂದು ಹೇಳಲೇಬೇಕು. ಅವರೊಂದಿಗೆ ನಡೆಸಿದ ಸಂವಾದಗಳಿಂದ, ಅವರು ತಮ್ಮ ದೃಷ್ಟಿಯನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಲು ಸಜ್ಜಾಗಿದ್ದಾರೆ ಎಂದು ನನಗೆ ಮನವರಿಕೆಯಾಯಿತು. ನಾನು ಭೇಟಿಯಾದ ಜನರಿಗೆ ಸಂಬಂಧಿಸಿದಂತೆ—ಅದು ತುಳಸಿ ಜೀ, ವಿವೇಕ್ ಜೀ, ಅಥವಾ ಎಲೋನ್ ಮಸ್ಕ್ ಆಗಿರಲಿ—ಒಂದು ಬೆಚ್ಚಗಿನ, ಬಹುತೇಕ ಕುಟುಂಬದಂತಹ ವಾತಾವರಣವಿತ್ತು. ಅವರಲ್ಲಿ ಅನೇಕರು ತಮ್ಮ ಕುಟುಂಬದವರೊಂದಿಗೆ ಬಂದಿದ್ದರು. ನಾನು ಮುಖ್ಯಮಂತ್ರಿಯಾಗಿದ್ದ ಕಾಲದಿಂದಲೂ ಎಲೋನ್ ಮಸ್ಕ್ ಅವರನ್ನು ಬಲ್ಲೆ, ಆದ್ದರಿಂದ ನಮ್ಮ ಭೇಟಿ ಪರಿಚಿತ ಮತ್ತು ವೈಯಕ್ತಿಕವಾಗಿತ್ತು. ಅವರು ತಮ್ಮ ಕುಟುಂಬ ಮತ್ತು ಮಕ್ಕಳನ್ನು ಕರೆತಂದರು, ಅದು ಕೂಟವನ್ನು ಇನ್ನಷ್ಟು ಅನೌಪಚಾರಿಕ ಮತ್ತು ಆಪ್ತವಾಗಿಸಿತು. ಸಹಜವಾಗಿಯೇ, ನಮ್ಮ ಸಂಭಾಷಣೆಗಳು ವಿವಿಧ ವಿಷಯಗಳನ್ನು ಒಳಗೊಂಡಿದ್ದವು. ಪ್ರಸ್ತುತ, ಅವರು ತಮ್ಮ ಬಾಹ್ಯಾಕಾಶ ಯೋಜನೆಗಳಲ್ಲಿ ಆಳವಾಗಿ ತೊಡಗಿಸಿಕೊಂಡಿದ್ದಾರೆ, ಮತ್ತು ಅವರ ಪ್ರಗತಿಯ ಬಗ್ಗೆ ಅವರ ಉತ್ಸಾಹ ಸ್ಪಷ್ಟವಾಗಿ ಗೋಚರಿಸುತ್ತದೆ. 2014 ರಲ್ಲಿ ನಾನು ಅಧಿಕಾರ ವಹಿಸಿಕೊಂಡಾಗಿನಿಂದಲೂ, ನನ್ನ ದೇಶವನ್ನು ಹಳೆಯ ವ್ಯವಸ್ಥೆಗಳು ಮತ್ತು ಅಸಮರ್ಥತೆಗಳಿಂದ ಮುಕ್ತಗೊಳಿಸಲು ನಾನು ಬದ್ಧನಾಗಿರುವುದರಿಂದ, ಇದನ್ನು ನೋಡುವುದು ನನಗೆ ಸಮಾನವಾಗಿ ತೃಪ್ತಿಕರವಾಗಿತ್ತು. ಉದಾಹರಣೆಗೆ, ನಾನು ಅಧಿಕಾರ ವಹಿಸಿಕೊಂಡಾಗ, ಅಸ್ತಿತ್ವದಲ್ಲಿಲ್ಲದ ವ್ಯಕ್ತಿಗಳು ಸಹ ಹಲವಾರು ಸರ್ಕಾರಿ ಕಲ್ಯಾಣ ಯೋಜನೆಗಳ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆಂದು ನಾನು ಗಮನಿಸಿದೆ—ವಂಚನೆಯಿಂದ ಸೃಷ್ಟಿಸಲಾದ ನಕಲಿ ಗುರುತುಗಳು. ಈ ಕಾಲ್ಪನಿಕ ಫಲಾನುಭವಿಗಳಲ್ಲಿ ಕೆಲವರು "ಮದುವೆಯಾಗುತ್ತಾರೆ," "ವಿಧವೆಯರಾಗುತ್ತಾರೆ," ಮತ್ತು ಪಿಂಚಣಿ ಪಡೆಯಲು ಪ್ರಾರಂಭಿಸುತ್ತಾರೆ, ಅಥವಾ ಸುಳ್ಳು ಅಂಗವಿಕಲ ಪ್ರಯೋಜನಗಳನ್ನು ಪಡೆಯುತ್ತಾರೆ. ನಾನು ವ್ಯಾಪಕವಾದ ಪರಿಶೀಲನಾ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ ಮತ್ತು ವ್ಯವಸ್ಥೆಯಿಂದ 100 ಮಿಲಿಯನ್ (10 ಕೋಟಿ) ನಕಲಿ ಅಥವಾ ನಕಲಿ ಫಲಾನುಭವಿಗಳನ್ನು ಗುರುತಿಸಿ ತೆಗೆದುಹಾಕಿದೆ. ಈ ಸ್ವಚ್ಛಗೊಳಿಸುವಿಕೆಯಿಂದ ಉಳಿತಾಯವಾದ ಹಣವನ್ನು ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ನಿಜವಾದ ಫಲಾನುಭವಿಗಳಿಗೆ ನೇರವಾಗಿ ವರ್ಗಾಯಿಸಲಾಯಿತು. ಇದು ದೆಹಲಿಯಿಂದ ಮಂಜೂರಾದ ಪ್ರತಿಯೊಂದು ರೂಪಾಯಿಯು ಯಾವುದೇ ಮಧ್ಯವರ್ತಿಗಳಿಲ್ಲದೆ ನಿಜವಾದ ಫಲಾನುಭವಿಗಳನ್ನು ತಲುಪುವಂತೆ ಮಾಡಿತು. ಈ ಉಪಕ್ರಮವು ನನ್ನ ದೇಶಕ್ಕೆ ಸರಿಸುಮಾರು 3 ಲಕ್ಷ ಕೋಟಿ ರೂಪಾಯಿಗಳನ್ನು ಉಳಿಸಿತು, ಅದು ಹಿಂದೆ ಭ್ರಷ್ಟಾಚಾರದ ಮೂಲಕ ಸೋರಿಕೆಯಾಗುತ್ತಿತ್ತು. ಹೆಚ್ಚುವರಿಯಾಗಿ, ಅಸಮರ್ಥತೆಗಳನ್ನು ತೊಡೆದುಹಾಕಲು ನಾನು ತಂತ್ರಜ್ಞಾನವನ್ನು ವ್ಯಾಪಕವಾಗಿ ಬಳಸುತ್ತಿದ್ದೇನೆ. ಸರ್ಕಾರಿ ಖರೀದಿಗಾಗಿ ಇ-ಮಾರುಕಟ್ಟೆಯಾದ ಜಿಇಎಂ ಪೋರ್ಟಲ್ ಅನ್ನು ನಾನು ಪರಿಚಯಿಸಿದೆ, ಇದು ವೆಚ್ಚ ಕಡಿತ, ಸುಧಾರಿತ ಸ್ಪರ್ಧೆ ಮತ್ತು ಉತ್ತಮ ಗುಣಮಟ್ಟದ ಖರೀದಿಗಳಿಗೆ ಕಾರಣವಾಗಿದೆ. ಮತ್ತೊಂದು ಪ್ರಮುಖ ಉಪಕ್ರಮವೆಂದರೆ ಅಧಿಕಾರಶಾಹಿ ಕೆಂಪು ಟೇಪ್ ಅನ್ನು ಕಡಿಮೆ ಮಾಡುವುದು. ಭಾರತವು ಲೆಕ್ಕವಿಲ್ಲದಷ್ಟು ನಿಯಂತ್ರಕ ಅನುಸರಣೆಗಳಿಂದ ಹೊರೆಯಾಗಿತ್ತು, ಅವುಗಳಲ್ಲಿ ಹಲವು ಬಳಕೆಯಲ್ಲಿಲ್ಲದವು. ನಾನು 40,000 ಅಂತಹ ಅನುಸರಣೆಗಳನ್ನು ರದ್ದುಗೊಳಿಸಿದೆ ಮತ್ತು ಸುಮಾರು 1,500 ಹಳೆಯ ಕಾನೂನುಗಳನ್ನು ರದ್ದುಗೊಳಿಸಿದೆ. ಹಾಗೆ ಮಾಡುವ ಮೂಲಕ, ದಕ್ಷತೆಗೆ ಅಡ್ಡಿಪಡಿಸುವ ಅನಗತ್ಯ ಪ್ರಕ್ರಿಯೆಗಳಿಂದ ಸರ್ಕಾರವನ್ನು ಮುಕ್ತಗೊಳಿಸಲು ನಾನು ಗುರಿಯಿರಿಸಿದೆ. ನಾವು ಜಾರಿಗೊಳಿಸುತ್ತಿರುವ ಪರಿವರ್ತನಾತ್ಮಕ ಬದಲಾವಣೆಗಳು ಇವು, ಮತ್ತು ಸಹಜವಾಗಿಯೇ, ಅಂತಹ ವಿಷಯಗಳು ಚರ್ಚೆಗಳಲ್ಲಿ ಉದ್ಭವಿಸುತ್ತವೆ.

ಲೆಕ್ಸ್ ಫ್ರಿಡ್ಮನ್: ನೀವು ಮತ್ತು ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಸ್ನೇಹಪರ ಸಂಬಂಧವನ್ನು ಹೊಂದಿದ್ದೀರಿ. ಇತ್ತೀಚಿನ ಉದ್ವಿಗ್ನತೆಗಳನ್ನು ಕಡಿಮೆ ಮಾಡಲು ಮತ್ತು ಭಾರತ ಹಾಗೂ ಚೀನಾ ನಡುವಿನ ಸಂವಾದ ಮತ್ತು ಸಹಕಾರವನ್ನು ಪುನಃ ಸ್ಥಾಪಿಸಲು ಆ ಸ್ನೇಹವನ್ನು ಹೇಗೆ ಪುನರುಜ್ಜೀವನಗೊಳಿಸಬಹುದು?"

ಪ್ರಧಾನಮಂತ್ರಿ: ನೋಡಿ, ಭಾರತ ಮತ್ತು ಚೀನಾ ನಡುವಿನ ಸಂಬಂಧವು ಆಳವಾದ ಐತಿಹಾಸಿಕ ಬೇರುಗಳನ್ನು ಹೊಂದಿದೆ. ಎರಡೂ ರಾಷ್ಟ್ರಗಳು ಆಧುನಿಕ ಜಗತ್ತಿನಲ್ಲಿ ಮಹತ್ವದ ಸ್ಥಾನವನ್ನು ಹೊಂದಿರುವ ಪ್ರಾಚೀನ ನಾಗರಿಕತೆಗಳು. ಐತಿಹಾಸಿಕ ದಾಖಲೆಗಳನ್ನು ಪರಿಶೀಲಿಸಿದರೆ, ಶತಮಾನಗಳಿಂದ ಭಾರತ ಮತ್ತು ಚೀನಾ ಪರಸ್ಪರರಿಂದ ಕಲಿತು ಜಾಗತಿಕ ಪ್ರಗತಿಗೆ ಒಟ್ಟಾಗಿ ಕೊಡುಗೆ ನೀಡಿವೆ. ಒಂದು ಕಾಲದಲ್ಲಿ ಭಾರತ ಮತ್ತು ಚೀನಾ ಒಟ್ಟಾಗಿ ಜಗತ್ತಿನ ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) 50% ಕ್ಕಿಂತ ಹೆಚ್ಚಿನ ಪಾಲನ್ನು ಹೊಂದಿದ್ದವು, ಇದು ಅವುಗಳ ಅಗಾಧ ಪ್ರಭಾವವನ್ನು ತೋರಿಸುತ್ತದೆ. ಭಾರತದ ಕೊಡುಗೆ ಗಣನೀಯವಾಗಿತ್ತು. ನಮ್ಮ ರಾಷ್ಟ್ರಗಳ ನಡುವಿನ ಬಾಂಧವ್ಯಗಳು ಯಾವಾಗಲೂ ಬಲವಾಗಿವೆ, ಆಳವಾದ ಸಾಂಸ್ಕೃತಿಕ ಸಂಬಂಧಗಳನ್ನು ಹೊಂದಿವೆ ಮತ್ತು ಐತಿಹಾಸಿಕವಾಗಿ ನಮ್ಮ ನಡುವೆ ಸಂಘರ್ಷದ ದಾಖಲೆಗಳಿಲ್ಲ. ಬದಲಾಗಿ, ಪರಸ್ಪರ ಕಲಿಕೆ ಮತ್ತು ವಿನಿಮಯದ ಮನೋಭಾವವಿತ್ತು. ಉದಾಹರಣೆಗೆ, ಭಾರತದಲ್ಲಿ ಹುಟ್ಟಿದ ಬೌದ್ಧಧರ್ಮದ ಪ್ರಭಾವ ಚೀನಾದಲ್ಲಿ ಆಳವಾಗಿತ್ತು. ಮುಂದೆ ನೋಡಿದರೆ, ನಾವು ಈ ಬಲವಾದ ಬಾಂಧವ್ಯಗಳನ್ನು ಮುಂದುವರಿಸುವುದು ಅತ್ಯಗತ್ಯ. ನೆರೆಯ ದೇಶಗಳ ನಡುವೆ ಭಿನ್ನಾಭಿಪ್ರಾಯಗಳು ಅನಿವಾರ್ಯ—ಇದು ಕೇವಲ ರಾಜತಾಂತ್ರಿಕ ವಾಸ್ತವವಲ್ಲ, ಕುಟುಂಬಗಳಲ್ಲಿಯೂ ಸಂಭವಿಸುವ ಸಾಮಾನ್ಯ ಸಂಗತಿ. ಆದಾಗ್ಯೂ, ಈ ಭಿನ್ನಾಭಿಪ್ರಾಯಗಳು ವಿವಾದಗಳಾಗಿ ಬೆಳೆಯದಂತೆ ನೋಡಿಕೊಳ್ಳಲು ನಾವು ಪ್ರಯತ್ನಿಸುತ್ತೇವೆ. ಭಿನ್ನಾಭಿಪ್ರಾಯಗಳಿಗಿಂತ ಸಂವಾದವನ್ನು ನಾವು ಬಲವಾಗಿ ನಂಬುತ್ತೇವೆ, ಏಕೆಂದರೆ ಸ್ಥಿರತೆ ಮತ್ತು ಸಹಕಾರವು ಎರಡೂ ರಾಷ್ಟ್ರಗಳ ಹಿತಾಸಕ್ತಿಯಲ್ಲಿದೆ. ನಮ್ಮ ಗಡಿ ವಿವಾದವು ಇನ್ನೂ ಇದೆ ಎಂಬುದು ನಿಜ. 2020 ರ ಘಟನೆಗಳು ನಮ್ಮ ಸಂಬಂಧದಲ್ಲಿ ಗಂಭೀರ ಒತ್ತಡವನ್ನು ಸೃಷ್ಟಿಸಿದವು. ಆದಾಗ್ಯೂ, ಅಧ್ಯಕ್ಷ ಕ್ಸಿ ಅವರೊಂದಿಗಿನ ನನ್ನ ಇತ್ತೀಚಿನ ಸಭೆಯ ನಂತರ, ನಾವು ಗಡಿಯಲ್ಲಿ ಸಾಮಾನ್ಯ ಸ್ಥಿತಿಗೆ ಮರಳುವುದನ್ನು ನೋಡಿದ್ದೇವೆ ಮತ್ತು 2020 ರ ಪೂರ್ವದ ಸ್ಥಿತಿಯನ್ನು ಮರುಸ್ಥಾಪಿಸಲು ನಿರಂತರವಾಗಿ ಶ್ರಮಿಸುತ್ತಿದ್ದೇವೆ. ಸಕ್ರಿಯ ಸಂಪರ್ಕದಲ್ಲಿ ಐದು ವರ್ಷಗಳ ಅಂತರವನ್ನು ಗಮನಿಸಿದರೆ, ವಿಶ್ವಾಸವನ್ನು ಮರುನಿರ್ಮಾಣ ಮಾಡುವುದು ಮತ್ತು ಸಹಯೋಗದ ಮನೋಭಾವವನ್ನು ಪುನಃ ಚಿಗುರಿಸುವುದು ಸಮಯ ತೆಗೆದುಕೊಳ್ಳುತ್ತದೆ. ಆದಾಗ್ಯೂ, ನಮ್ಮ ಪಾಲುದಾರಿಕೆ ಕೇವಲ ಲಾಭದಾಯಕವಲ್ಲ, ಜಾಗತಿಕ ಸ್ಥಿರತೆ ಮತ್ತು ಸಮೃದ್ಧಿಗೆ ನಿರ್ಣಾಯಕವಾಗಿದೆ. 21 ನೇ ಶತಮಾನದಲ್ಲಿ—ಸಾಮಾನ್ಯವಾಗಿ "ಏಷ್ಯಾದ ಶತಮಾನ" ಎಂದು ಕರೆಯಲ್ಪಡುವ—ಭಾರತ ಮತ್ತು ಚೀನಾ ನಡುವಿನ ಆರೋಗ್ಯಕರ ಸ್ಪರ್ಧೆ ಸಹಜ ಮತ್ತು ಅಪೇಕ್ಷಣೀಯ, ಆದರೆ ಸಂಘರ್ಷ ಖಂಡಿತಾ ಅಲ್ಲ.

ಲೆಕ್ಸ್ ಫ್ರಿಡ್ಮನ್: ಒಂದು ಬೃಹತ್ ಪ್ರಮಾಣದ ಯುದ್ಧದ ಸಂಭವನೀಯತೆಯ ಬಗ್ಗೆ ಜಾಗತಿಕವಾಗಿ ಆತಂಕ ಹೆಚ್ಚುತ್ತಿದೆ. ಚೀನಾ ಮತ್ತು ಅಮೆರಿಕದ ನಡುವಿನ ಉದ್ವಿಗ್ನತೆಗಳು, ಉಕ್ರೇನ್ ಮತ್ತು ರಷ್ಯಾ ನಡುವಿನ ನಡೆಯುತ್ತಿರುವ ಸಂಘರ್ಷ, ಯುರೋಪ್‌ನಲ್ಲಿನ ಅಶಾಂತಿ ಮತ್ತು ಮಧ್ಯಪ್ರಾಚ್ಯದಲ್ಲಿನ ವೈರತ್ವ ಇವೆಲ್ಲವೂ ಈ ಒತ್ತಡಕ್ಕೆ ಕಾರಣವಾಗುತ್ತಿವೆ. 21ನೇ ಶತಮಾನದಲ್ಲಿ ಜಾಗತಿಕ ಯುದ್ಧವನ್ನು ತಡೆಯಲು ನಿಮ್ಮ ದೃಷ್ಟಿಯಲ್ಲಿ ಏನು ಮಾಡಬಹುದು? ಸಂಘರ್ಷಗಳ ಮತ್ತಷ್ಟು ಉಲ್ಬಣವನ್ನು ನಾವು ಹೇಗೆ ತಪ್ಪಿಸಬಹುದು?

ಪ್ರಧಾನಮಂತ್ರಿ: ನೋಡಿ, ಕೋವಿಡ್-19 ಸಾಂಕ್ರಾಮಿಕವು ಎಲ್ಲಾ ರಾಷ್ಟ್ರಗಳ ದೌರ್ಬಲ್ಯಗಳನ್ನು ಬಯಲು ಮಾಡಿತು. ಒಂದು ದೇಶವು ತನ್ನನ್ನು ತಾನು ಎಷ್ಟು ಶಕ್ತಿಯುತ, ಪ್ರಗತಿಪರ ಅಥವಾ ತಾಂತ್ರಿಕವಾಗಿ ಮುಂದುವರಿದಿದೆ ಎಂದು ಭಾವಿಸಿದರೂ, ಸಾಂಕ್ರಾಮಿಕವು ಎಲ್ಲರನ್ನೂ ವಿನಮ್ರಗೊಳಿಸಿತು. ಇದು ಇಡೀ ಜಗತ್ತನ್ನು ಮಂಡಿಯೂರುವಂತೆ ಮಾಡಿತು. ಒಂದು ಕ್ಷಣದವರೆಗೆ, ಈ ಬಿಕ್ಕಟ್ಟಿನಿಂದ ಜಗತ್ತು ಅಮೂಲ್ಯವಾದ ಪಾಠಗಳನ್ನು ಕಲಿಯುತ್ತದೆ ಮತ್ತು ಎರಡನೇ ಮಹಾಯುದ್ಧದ ನಂತರ ಹೊಸ ಜಾಗತಿಕ ಸುವ್ಯವಸ್ಥೆ ಉದಯಿಸಿದಂತೆ, ಹೊಸ, ಸಹಕಾರಿ ಜಾಗತಿಕ ಕ್ರಮದತ್ತ ಸಾಗುತ್ತದೆ ಎಂದು ಅನಿಸಿತು. ದುರದೃಷ್ಟವಶಾತ್, ಶಾಂತಿಯ ಕಡೆಗೆ ಪ್ರಗತಿ ಸಾಧಿಸುವ ಬದಲು, ಜಗತ್ತು ಅನಿಶ್ಚಿತತೆಯ ಕೂಪಕ್ಕೆ ಜಾರಿತು. ಸಂಘರ್ಷಗಳು ಉಲ್ಬಣಗೊಂಡವು ಮತ್ತು ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಮತ್ತಷ್ಟು ಬಿಗಡಾಯಿಸಿದವು. ಆಧುನಿಕ ಯುದ್ಧಗಳು ಕೇವಲ ಸಂಪನ್ಮೂಲಗಳು ಅಥವಾ ಪ್ರಾದೇಶಿಕ ವಿಸ್ತರಣೆಯ ಬಗ್ಗೆ ಮಾತ್ರವಲ್ಲ. ಇಂದು, ಸಂಘರ್ಷಗಳು ಅನೇಕ ರೂಪಗಳನ್ನು ಪಡೆದುಕೊಳ್ಳುತ್ತವೆ—ಕೇವಲ ದೈಹಿಕ ಯುದ್ಧಗಳಲ್ಲ, ಸೈದ್ಧಾಂತಿಕ ಮತ್ತು ಆರ್ಥಿಕ ಹೋರಾಟಗಳು ಸಹ. ಏತನ್ಮಧ್ಯೆ, ಸುವ್ಯವಸ್ಥೆಯನ್ನು ಕಾಪಾಡಲು ಸ್ಥಾಪಿಸಲಾದ ಅಂತರರಾಷ್ಟ್ರೀಯ ಸಂಸ್ಥೆಗಳು ಹೆಚ್ಚಾಗಿ ನಿಷ್ಕ್ರಿಯವಾಗಿವೆ. ವಿಶ್ವಸಂಸ್ಥೆಯಂತಹ ಸಂಸ್ಥೆಗಳಲ್ಲಿ ಅರ್ಥಪೂರ್ಣ ಸುಧಾರಣೆಗಳು ನಡೆದಿಲ್ಲ. ಅನೇಕ ಜಾಗತಿಕ ಶಕ್ತಿಗಳು ಅಂತರರಾಷ್ಟ್ರೀಯ ಕಾನೂನುಗಳು ಮತ್ತು ನಿಯಮಗಳನ್ನು ನಿರ್ಲಕ್ಷಿಸುತ್ತಿವೆ ಮತ್ತು ಅವುಗಳನ್ನು ಹೊಣೆಗಾರರನ್ನಾಗಿ ಮಾಡಲು ಯಾವುದೇ ಕಾರ್ಯವಿಧಾನವಿಲ್ಲ. ಈ ಸವಾಲುಗಳನ್ನು ಗಮನಿಸಿದರೆ, ಸಂಘರ್ಷದ ಹಾದಿಯು ವಿನಾಶಕ್ಕೆ ಮಾತ್ರ ದಾರಿ ಮಾಡಿಕೊಡುತ್ತದೆ ಎಂದು ಜಗತ್ತು ಅರಿಯಬೇಕು. ಬದಲಾಗಿ, ನಾವು ಸಹಕಾರ ಮತ್ತು ಸಮನ್ವಯಕ್ಕೆ ಆದ್ಯತೆ ನೀಡಬೇಕು. ವಿಸ್ತರಣಾ ಆಕಾಂಕ್ಷೆಗಳು ಸಕಾರಾತ್ಮಕ ಫಲಿತಾಂಶಗಳನ್ನು ನೀಡುವುದಿಲ್ಲ; ಅಭಿವೃದ್ಧಿ ಮತ್ತು ಅಂತರ್ಗತ ವಿಧಾನ ಮಾತ್ರ ನೀಡುತ್ತದೆ. ನಾವು ಆಳವಾದ ಪರಸ್ಪರ ಅವಲಂಬನೆ ಮತ್ತು ಪರಸ್ಪರ ಸಂಪರ್ಕದ ಯುಗದಲ್ಲಿ ಬದುಕುತ್ತಿದ್ದೇವೆ—ಯಾವುದೇ ರಾಷ್ಟ್ರವೂ ಏಕಾಂಗಿಯಾಗಿ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಪ್ರತಿಯೊಂದು ದೇಶಕ್ಕೂ ಇತರರ ಬೆಂಬಲ ಅಗತ್ಯ. ವಿವಿಧ ಅಂತರರಾಷ್ಟ್ರೀಯ ವೇದಿಕೆಗಳಲ್ಲಿನ ನನ್ನ ಭಾಗವಹಿಸುವಿಕೆಗಳ ಮೂಲಕ, ಹೆಚ್ಚುತ್ತಿರುವ ಸಂಘರ್ಷಗಳ ಬಗ್ಗೆ ವಿಶ್ವ ನಾಯಕರು ತೀವ್ರ ಕಾಳಜಿ ವಹಿಸಿದ್ದಾರೆ ಎಂದು ನಾನು ಗಮನಿಸಿದ್ದೇನೆ. ಪರಿಹಾರಕ್ಕಾಗಿ ಪ್ರಬಲವಾದ ಬಯಕೆ ಇದೆ. ಶೀಘ್ರದಲ್ಲೇ ಅಥವಾ ತಡವಾಗಿಯಾದರೂ, ಈ ಉದ್ವಿಗ್ನತೆಯ ಸುಳಿಯಿಂದ ಹೊರಬರಲು ಮತ್ತು ಹೆಚ್ಚು ಸ್ಥಿರವಾದ, ಶಾಂತಿಯುತ ಜಗತ್ತಿನ ಕಡೆಗೆ ಸಾಗಲು ನಾವು ದೃಢವಾದ ಪ್ರಯತ್ನಗಳನ್ನು ಮಾಡಬೇಕಿದೆ. ಈ ನಿಟ್ಟಿನಲ್ಲಿ, ಜಾಗತಿಕ ನಾಯಕರು ತಮ್ಮ ಅಹಂ ಅನ್ನು ಬದಿಗೊತ್ತಿ, ಮಾನವೀಯತೆಯ ಒಳಿತಿಗಾಗಿ ಒಟ್ಟಾಗಿ ಕೆಲಸ ಮಾಡಬೇಕು. ಪರಸ್ಪರ ಗೌರವ, ಸಂವಾದ ಮತ್ತು ಸಹಕಾರದ ಮೂಲಕ ಮಾತ್ರ ನಾವು ಜಾಗತಿಕ ಶಾಂತಿಯನ್ನು ಕಾಪಾಡಿಕೊಳ್ಳಲು ಸಾಧ್ಯ.

ಲೆಕ್ಸ್ ಫ್ರಿಡ್ಮನ್: ನಾನು ಇನ್ನೂ ಕಲಿಯುತ್ತಿದ್ದೇನೆ.

ಪ್ರಧಾನಮಂತ್ರಿ: ನೀವು ಗಡಿಯಾರವನ್ನು ನೋಡುತ್ತಿದ್ದೀರಿ.

ಲೆಕ್ಸ್ ಫ್ರಿಡ್ಮನ್:   ಇಲ್ಲ, ಇಲ್ಲ, ನಾನು ಇನ್ನೂ ಇದನ್ನು ಕಲಿಯುತ್ತಿದ್ದೇನೆ, ಪ್ರಧಾನಮಂತ್ರಿಗಳೇ. ನನಗೆ ಇದು ಇನ್ನೂ ಚೆನ್ನಾಗಿ ಬರುವುದಿಲ್ಲ, ಸರಿ. ನಿಮ್ಮ ವೃತ್ತಿಜೀವನ ಮತ್ತು ಜೀವನದಲ್ಲಿ, ಭಾರತದ ಇತಿಹಾಸದಲ್ಲಿನ ಅನೇಕ ಕಷ್ಟಕರ ಸಂದರ್ಭಗಳನ್ನು ನೀವು ನೋಡಿದ್ದೀರಿ. ಅವುಗಳಲ್ಲಿ ಒಂದು 2002 ರ ಗುಜರಾತ್ ಗಲಭೆಗಳು. ಗುಜರಾತ್‌ ನಲ್ಲಿ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವೆ ಹಿಂಸಾಚಾರ ಭುಗಿಲೆದ್ದಾಗ ಭಾರತದ ಇತ್ತೀಚಿನ ಇತಿಹಾಸದಲ್ಲಿ ಇದು ಅತ್ಯಂತ ಸವಾಲಿನ ಸಮಯವಾಗಿತ್ತು, ಪರಿಣಾಮವಾಗಿ ಸಾವಿರಕ್ಕೂ ಹೆಚ್ಚು ಸಾವುಗಳು ಸಂಭವಿಸಿದವು. ಇದು ಆ ಪ್ರದೇಶದಲ್ಲಿನ ಧಾರ್ಮಿಕ ಉದ್ವಿಗ್ನತೆಗಳನ್ನು ಪ್ರತಿಬಿಂಬಿಸುತ್ತದೆ. ನೀವು ಹೇಳಿದಂತೆ, ಆ ಸಮಯದಲ್ಲಿ, ನೀವು ಗುಜರಾತ್‌ ನ ಮುಖ್ಯಮಂತ್ರಿಯಾಗಿದ್ದಿರಿ. ನಾವು ಅದರ ಬಗ್ಗೆ ಮಾತನಾಡಿದರೆ, ಆ ಅವಧಿಯಿಂದ ನೀವು ಏನು ಕಲಿತಿದ್ದೀರಿ? ಭಾರತದ ಸರ್ವೋಚ್ಚ ನ್ಯಾಯಾಲಯವು ಎರಡು ಬಾರಿ—ಒಮ್ಮೆ 2012 ರಲ್ಲಿ ಮತ್ತು ಮತ್ತೊಮ್ಮೆ 2022 ರಲ್ಲಿ—2002 ರ ಗುಜರಾತ್ ಗಲಭೆಯ ಸಮಯದಲ್ಲಿ ನಡೆದ ಹಿಂಸಾಚಾರದಲ್ಲಿ ನಿಮ್ಮ ಯಾವುದೇ ಪಾತ್ರವಿಲ್ಲ ಎಂದು ತೀರ್ಪು ನೀಡಿದೆ ಎಂದು ನಾನು ಉಲ್ಲೇಖಿಸಲು ಬಯಸುತ್ತೇನೆ. ಆದರೆ ಆ ಸಮಯದಲ್ಲಿ ನೀವು ಕಲಿತ ದೊಡ್ಡ ಪಾಠಗಳು ಯಾವುವು ಎಂದು ನಾನು ಕೇಳಲು ಬಯಸುತ್ತೇನೆ?

ಪ್ರಧಾನಮಂತ್ರಿ: ನೋಡಿ, ಮೊದಲನೆಯದಾಗಿ, ನೀವು ಈ ವಿಷಯದಲ್ಲಿ ಪರಿಣಿತರಲ್ಲ ಎಂದು ಹೇಳಿದ್ದೀರಿ, ಸಂದರ್ಶನವನ್ನು ಹೇಗೆ ನಡೆಸಬೇಕೆಂದು ನೀವು ಇನ್ನೂ ಕಲಿಯುತ್ತಿದ್ದೀರಿ ಮತ್ತು ನಿಮ್ಮ ಮನಸ್ಸಿನಲ್ಲಿ ಕೆಲವು ಸಂದೇಹಗಳಿವೆ ಎಂದು ನನಗೆ ತಿಳಿದಿದೆ. ಆದರೆ ನೀವು ಸಾಕಷ್ಟು ಪ್ರಯತ್ನಗಳನ್ನು ಮಾಡಿದ್ದೀರಿ, ವ್ಯಾಪಕ ಸಂಶೋಧನೆ ಮಾಡಿದ್ದೀರಿ ಮತ್ತು ಪ್ರತಿಯೊಂದು ವಿವರವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದ್ದೀರಿ ಎಂದು ನನಗೆ ಅನಿಸುತ್ತದೆ. ಆದ್ದರಿಂದ, ನಿಮಗೆ ಏನೂ ಕಷ್ಟವಲ್ಲ ಎಂದು ನಾನು ನಂಬುತ್ತೇನೆ. ನೀವು ಮಾಡಿರುವ ಪಾಡ್‌ಕಾಸ್ಟ್‌ಗಳ ಸಂಖ್ಯೆಯನ್ನು ಗಮನಿಸಿದರೆ, ನೀವು ನಿರಂತರವಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದೀರಿ ಎಂದು ನಾನು ನಂಬುತ್ತೇನೆ. ಮತ್ತು ಕೇವಲ ಮೋದಿಯವರನ್ನು ಪ್ರಶ್ನಿಸುವ ಬದಲು, ನೀವು ಭಾರತದ ಪರಿಸರವನ್ನು ಅರ್ಥಮಾಡಿಕೊಳ್ಳಲು ಪ್ರಾಮಾಣಿಕ ಪ್ರಯತ್ನವನ್ನು ಮಾಡಿದ್ದೀರಿ ಎಂದು ನನಗೆ ಅನಿಸುತ್ತದೆ. ಸತ್ಯವನ್ನು ತಲುಪುವ ನಿಮ್ಮ ಪ್ರಯತ್ನಗಳು ಪ್ರಾಮಾಣಿಕತೆಯನ್ನು ತೋರಿಸುತ್ತವೆ ಎಂದು ನಾನು ನಂಬುತ್ತೇನೆ. ಈ ಪ್ರಯತ್ನಕ್ಕಾಗಿ ನಾನು ನಿಮ್ಮನ್ನು ನಿಜವಾಗಿಯೂ ಪ್ರಶಂಸಿಸುತ್ತೇನೆ ಮತ್ತು ಅಭಿನಂದಿಸುತ್ತೇನೆ.

ಲೆಕ್ಸ್ ಫ್ರಿಡ್ಮನ್:   ಧನ್ಯವಾದಗಳು.

ಪ್ರಧಾನಮಂತ್ರಿ: ನಿಮ್ಮ ಹಿಂದಿನ ಘಟನೆಗಳ ಉಲ್ಲೇಖಕ್ಕೆ ಸಂಬಂಧಿಸಿದಂತೆ, ನೀವು 2002ರ ಗುಜರಾತ್ ಗಲಭೆಗಳ ಬಗ್ಗೆ ಮಾತನಾಡಿದ್ದೀರಿ. ಆದರೆ ಅದಕ್ಕೂ ಮೊದಲು, 12-15 ತಿಂಗಳುಗಳ ಹಿಂದಿನ ಚಿತ್ರಣವನ್ನು ನಾನು ನಿಮಗೆ ನೀಡಲು ಬಯಸುತ್ತೇನೆ, ಇದರಿಂದ ನಿಮಗೆ ಪರಿಸ್ಥಿತಿಯ ಸಂದರ್ಭ ಅರ್ಥವಾಗುತ್ತದೆ. ಉದಾಹರಣೆಗೆ, ಡಿಸೆಂಬರ್ 24, 1999 ರಂದು, ಮೂರು ವರ್ಷಗಳ ಹಿಂದೆ, ಕಾಠ್ಮಂಡುವಿನಿಂದ ದೆಹಲಿಗೆ ಹೊರಟ ವಿಮಾನವನ್ನು ಅಪಹರಿಸಿ ಅಫ್ಘಾನಿಸ್ತಾನದ ಕಂದಾಹಾರ್‌ ಗೆ ಕರೆದೊಯ್ಯಲಾಯಿತು. ನೂರಾರು ಭಾರತೀಯ ಪ್ರಯಾಣಿಕರನ್ನು ಒತ್ತೆಯಾಳಾಗಿ ಇರಿಸಲಾಗಿತ್ತು. ಇದು ಭಾರತದಾದ್ಯಂತ ಭಾರಿ ಬಿಕ್ಕಟ್ಟಾಗಿತ್ತು—ಜೀವನ್ಮರಣದ ಪ್ರಶ್ನೆ. ನಂತರ, 2000 ರಲ್ಲಿ, ದೆಹಲಿಯ ಕೆಂಪು ಕೋಟೆಯ ಮೇಲೆ ಭಯೋತ್ಪಾದಕ ದಾಳಿ ನಡೆಯಿತು, ಇದು ಪರಿಸ್ಥಿತಿಗೆ ಮತ್ತೊಂದು ಬಿಕ್ಕಟ್ಟನ್ನು ಸೇರಿಸಿತು. ಸೆಪ್ಟೆಂಬರ್ 11, 2001 ರಂದು, ಅಮೆರಿಕದ ಟ್ವಿನ್ ಟವರ್‌ಗಳ ಮೇಲೆ ದೊಡ್ಡ ಭಯೋತ್ಪಾದಕ ದಾಳಿ ನಡೆಯಿತು, ಮತ್ತೊಮ್ಮೆ ಜಗತ್ತನ್ನು ಎಚ್ಚರಿಸಿತು ಏಕೆಂದರೆ ಅಂತಹ ದಾಳಿಗಳನ್ನು ನಡೆಸಿದವರು ಒಂದೇ ರೀತಿಯವರಾಗಿದ್ದರು. ಅಕ್ಟೋಬರ್ 2001 ರಲ್ಲಿ, ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯ ಮೇಲೆ ಭಯೋತ್ಪಾದಕ ದಾಳಿ ನಡೆಯಿತು. ಡಿಸೆಂಬರ್ 13, 2001 ರಂದು, ಭಾರತೀಯ ಸಂಸತ್ತಿನ ಮೇಲೆ ದಾಳಿ ನಡೆಯಿತು. ಈಗ, ನೀವು 8-10 ತಿಂಗಳ ಈ ಅವಧಿಯನ್ನು ನೋಡಿದರೆ, ಜಾಗತಿಕ ಘಟನೆಗಳು, ಭಯೋತ್ಪಾದಕ ದಾಳಿಗಳು, ರಕ್ತಪಾತ ಮತ್ತು ಮುಗ್ಧ ಜನರ ಸಾವುಗಳನ್ನು ನೀವು ನೋಡುತ್ತೀರಿ. ಅಂತಹ ಸಮಯದಲ್ಲಿ, ಒಂದು ಸಣ್ಣ ಕಿಡಿ ಸಹ ಅಶಾಂತಿಯನ್ನು ಹೊತ್ತಿಸಲು ಸಾಕು, ಮತ್ತು ಅಂತಹ ಪರಿಸ್ಥಿತಿ ಈಗಾಗಲೇ ಬೆಳೆದಿತ್ತು. ಅಕ್ಟೋಬರ್ 7, 2001 ರಂದು, ಈ ಪರಿಸರದಲ್ಲಿ, ನನಗೆ ಇದ್ದಕ್ಕಿದ್ದಂತೆ ಮುಖ್ಯಮಂತ್ರಿಯಾಗುವ ಜವಾಬ್ದಾರಿಯನ್ನು ನೀಡಲಾಯಿತು. ಹಿಂದೆ ಸಂಭವಿಸಿದ ಭಾರಿ ಭೂಕಂಪದ ನಂತರ ಗುಜರಾತ್‌ನ ಪುನರ್ವಸತಿ ನನ್ನ ಅತಿದೊಡ್ಡ ಜವಾಬ್ದಾರಿಯಾಗಿತ್ತು. ಕಳೆದ ಶತಮಾನದ ಅತಿದೊಡ್ಡ ಭೂಕಂಪ ಇದಾಗಿತ್ತು, ಅದರಲ್ಲಿ ಸಾವಿರಾರು ಜನರು ಸಾವನ್ನಪ್ಪಿದ್ದರು. ಇದ್ದಕ್ಕಿದ್ದಂತೆ, ಮುಖ್ಯಮಂತ್ರಿಯಾಗಿ ಈ ಜವಾಬ್ದಾರಿ ನನ್ನ ಮೇಲೆ ಬಂತು. ಇದು ಬಹಳ ಮುಖ್ಯವಾಗಿತ್ತು ಮತ್ತು ನಾನು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ದಿನದಿಂದಲೇ ಅದರಲ್ಲಿ ತೊಡಗಿಸಿಕೊಂಡೆ. ನಾನು ಹಿಂದೆಂದೂ ಸರ್ಕಾರದ ಭಾಗವಾಗದ ವ್ಯಕ್ತಿಯಾಗಿದ್ದೆ. ನನಗೆ ಆಡಳಿತದಲ್ಲಿ ಯಾವುದೇ ಪೂರ್ವ ಅನುಭವವಿರಲಿಲ್ಲ. ನಾನು ಎಂದಿಗೂ ಶಾಸಕನಾಗಿರಲಿಲ್ಲ. ನಾನು ಎಂದಿಗೂ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. ನನ್ನ ಜೀವನದಲ್ಲಿ ಮೊದಲ ಬಾರಿಗೆ, ನಾನು ಚುನಾವಣೆಯಲ್ಲಿ ಸ್ಪರ್ಧಿಸಬೇಕಾಯಿತು ಮತ್ತು ಫೆಬ್ರವರಿ 24, 2002 ರಂದು, ನಾನು ಶಾಸಕನಾದೆ—ಚುನಾಯಿತ ಪ್ರತಿನಿಧಿ. ಮೊದಲ ಬಾರಿಗೆ, ಫೆಬ್ರವರಿ 24, 25, ಅಥವಾ 26 ರಂದು, ನಾನು ಗುಜರಾತ್ ವಿಧಾನಸಭೆಗೆ ಕಾಲಿಟ್ಟೆ. ನಂತರ, ಫೆಬ್ರವರಿ 27, 2002 ರಂದು, ವಿಧಾನಸಭೆಯ ಬಜೆಟ್ ಅಧಿವೇಶನದ ಸಮಯದಲ್ಲಿ, ನಾವು ಸದನದಲ್ಲಿದ್ದೆವು, ನಾನು ಕೇವಲ ಮೂರು ದಿನಗಳ ಶಾಸಕನಾಗಿದ್ದಾಗ, ಗೋದ್ರಾ ಘಟನೆ ಸಂಭವಿಸಿತು—ಜನರನ್ನು ಜೀವಂತವಾಗಿ ಸುಟ್ಟುಹಾಕಿದ ಭಯಾನಕ ಘಟನೆ. ಈಗ, ಇದನ್ನು ಊಹಿಸಿಕೊಳ್ಳಿ: ಹಿನ್ನೆಲೆಯಲ್ಲಿ, ಕಂದಾಹಾರ್ ವಿಮಾನ ಅಪಹರಣ, ಸಂಸತ್ತಿನ ಮೇಲಿನ ದಾಳಿ, 9/11 ಮತ್ತು ಅಂತಹ ಅನೇಕ ಘಟನೆಗಳು ಸಂಭವಿಸಿದ್ದವು, ಮತ್ತು ನಂತರ ಇದ್ದಕ್ಕಿದ್ದಂತೆ, ಈ ಭೀಕರ ಘಟನೆಯಲ್ಲಿ ಹೆಚ್ಚಿನ ಸಂಖ್ಯೆಯ ಜನರನ್ನು ಜೀವಂತವಾಗಿ ಸುಟ್ಟುಹಾಕಲಾಯಿತು. ಪರಿಸ್ಥಿತಿ ಹೇಗಿರಬಹುದೆಂದು ನೀವು ಊಹಿಸಬಲ್ಲಿರಾ? ಖಂಡಿತವಾಗಿಯೂ, ಯಾರಿಗೂ ಹಿಂಸಾಚಾರ ಬೇಕಾಗಿಲ್ಲ. ಎಲ್ಲರಿಗೂ ಶಾಂತಿ ಬೇಕು. 2002 ದೊಡ್ಡ ಗಲಭೆಗಳ ಅವಧಿಯಾಗಿದೆ ಎಂಬ ಹೇಳಿಕೆಗೆ ಸಂಬಂಧಿಸಿದಂತೆ, ಅದು ಒಂದು ಸುಳ್ಳು ನಿರೂಪಣೆ. ನೀವು 2002 ರ ಹಿಂದಿನ ಅಂಕಿಅಂಶಗಳನ್ನು ನೋಡಿದರೆ, ಗುಜರಾತ್ ಹಲವಾರು ಗಲಭೆಗಳನ್ನು ಕಂಡಿದೆ. ಯಾವಾಗಲೂ ಎಲ್ಲೋ ಕರ್ಫ್ಯೂ ಜಾರಿಯಲ್ಲಿರುತ್ತಿತ್ತು. ಸಣ್ಣ ಘಟನೆಗಳು—ಗಾಳಿಪಟದ ಜಗಳ ಅಥವಾ ಸೈಕಲ್ ಅಪಘಾತದಂತಹವು—ಕೋಮು ಹಿಂಸಾಚಾರವಾಗಿ ಬದಲಾಗುತ್ತಿದ್ದವು. 2002 ರ ಮೊದಲು, ಗುಜರಾತ್‌ನಲ್ಲಿ 250 ಕ್ಕೂ ಹೆಚ್ಚು ಪ್ರಮುಖ ಗಲಭೆಗಳು ಸಂಭವಿಸಿದ್ದವು. 1969 ರಲ್ಲಿ, ಗುಜರಾತ್ ಸುಮಾರು ಆರು ತಿಂಗಳ ಕಾಲ ಗಲಭೆಗಳನ್ನು ಕಂಡಿತು. ಆ ಸಮಯದಲ್ಲಿ, ನಾನು ರಾಜಕೀಯ ಚಿತ್ರಣದಲ್ಲಿ ಎಲ್ಲಿಯೂ ಇರಲಿಲ್ಲ—ನಾನು ಆ ಸಮಯದ ಬಗ್ಗೆ ಮಾತನಾಡುತ್ತಿದ್ದೇನೆ. 2002 ರ ಘಟನೆಯು ಕೆಲವು ಸ್ಥಳಗಳಲ್ಲಿ ಹಿಂಸಾಚಾರಕ್ಕೆ ಕಾರಣವಾದ ಕಿಡಿಬಿಂದುವಾಯಿತು. ಆದಾಗ್ಯೂ, ನ್ಯಾಯಾಂಗವು ಎಲ್ಲವನ್ನೂ ವಿವರವಾಗಿ ಪರಿಶೀಲಿಸಿತು. ಆ ಸಮಯದಲ್ಲಿನ ಸರ್ಕಾರಗಳು, ನಮ್ಮ ವಿರೋಧ ಪಕ್ಷವೂ ಸೇರಿದಂತೆ, ಅಧಿಕಾರದಲ್ಲಿದ್ದವು ಮತ್ತು ಅವರು ನನ್ನನ್ನು ಹೊಣೆಗಾರನನ್ನಾಗಿ ಮಾಡಲು ಮತ್ತು ಶಿಕ್ಷಿಸಲು ಬಯಸಿದ್ದರು. ಅವರ ಪುನರಾವರ್ತಿತ ಪ್ರಯತ್ನಗಳ ಹೊರತಾಗಿಯೂ, ನ್ಯಾಯಾಂಗವು ಎಲ್ಲವನ್ನೂ ಆಳವಾಗಿ ವಿಶ್ಲೇಷಿಸಿತು—ಒಂದಲ್ಲ, ಎರಡು ಬಾರಿ—ಮತ್ತು ನಾವು ಸಂಪೂರ್ಣವಾಗಿ ಮುಗ್ಧರೆಂದು ಕಂಡುಬಂದೆವು. ಅಪರಾಧ ಮಾಡಿದವರಿಗೆ ನ್ಯಾಯಾಲಯಗಳು ಶಿಕ್ಷೆ ನೀಡಿದವು. ಆದರೆ ಅತ್ಯಂತ ಮುಖ್ಯವಾದ ವಿಷಯವೆಂದರೆ: 2002 ರ ಮೊದಲು, ಗುಜರಾತ್‌ನಲ್ಲಿ ಬಹುತೇಕ ಪ್ರತಿ ವರ್ಷವೂ ಗಲಭೆಗಳು ಸಂಭವಿಸುತ್ತಿದ್ದವು. ಆದರೆ ಇಂದು, 2025 ರಲ್ಲಿ, ಕಳೆದ 20-22 ವರ್ಷಗಳಿಂದ ಗುಜರಾತ್‌ನಲ್ಲಿ ಯಾವುದೇ ಪ್ರಮುಖ ಗಲಭೆಗಳು ಸಂಭವಿಸಿಲ್ಲ. ಸಂಪೂರ್ಣ ಶಾಂತಿ ನೆಲೆಸಿದೆ. ನಮ್ಮ ವಿಧಾನವು ಎಂದಿಗೂ ಮತ-ಬ್ಯಾಂಕ್ ರಾಜಕೀಯದ ಬಗ್ಗೆ ಇರಲಿಲ್ಲ. ನಾವು "ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್, ಸಬ್ಕಾ ಪ್ರಯಾಸ್" ತತ್ವವನ್ನು ಅನುಸರಿಸುತ್ತೇವೆ. ನಾವು ಓಲೈಕೆಯ ರಾಜಕೀಯದಿಂದ ದೂರ ಸರಿದು ಆಕಾಂಕ್ಷೆಯ ರಾಜಕೀಯವನ್ನು ಅಳವಡಿಸಿಕೊಂಡಿದ್ದೇವೆ. ಅದಕ್ಕಾಗಿಯೇ ಎಲ್ಲಾ ಹಿನ್ನೆಲೆಯ ಜನರು ಗುಜರಾತ್ ಅನ್ನು ಪ್ರಗತಿಪರ ಮತ್ತು ಸಮೃದ್ಧ ರಾಜ್ಯವಾಗಿ ಅಭಿವೃದ್ಧಿಪಡಿಸುವ ನಮ್ಮ ಪ್ರಯತ್ನಗಳಲ್ಲಿ ನಮ್ಮೊಂದಿಗೆ ಕೈಜೋಡಿಸಿದ್ದಾರೆ. ಈಗ, ನಾವು 'ವಿಕಸಿತ್ ಭಾರತ್' (ಅಭಿವೃದ್ಧಿ ಹೊಂದಿದ ಭಾರತ) ಕಡೆಗೆ ಕೆಲಸ ಮಾಡುತ್ತಿದ್ದೇವೆ ಮತ್ತು ಗುಜರಾತ್ ಆ ಮಿಷನ್‌ ನಲ್ಲಿ ತನ್ನ ಪಾತ್ರವನ್ನು ವಹಿಸುವುದನ್ನು ಮುಂದುವರೆಸಿದೆ.

ಲೆಕ್ಸ್ ಫ್ರಿಡ್ಮನ್: ಅನೇಕ ಜನರು ನಿಮ್ಮನ್ನು ಇಷ್ಟಪಡುತ್ತಾರೆ—ನಾನು ಅನೇಕ ವ್ಯಕ್ತಿಗಳಿಂದ ಇದನ್ನು ಕೇಳಿದ್ದೇನೆ. ಆದರೆ ನಿಮ್ಮನ್ನು ಟೀಕಿಸುವವರೂ ಇದ್ದಾರೆ, ಮಾಧ್ಯಮದ ಸದಸ್ಯರೂ ಸೇರಿದಂತೆ. ನಿರ್ದಿಷ್ಟವಾಗಿ ಮಾಧ್ಯಮವು 2002ರ ಗುಜರಾತ್ ಗಲಭೆಗಳಿಗಾಗಿ ನಿಮ್ಮನ್ನು ಟೀಕಿಸಿದೆ. ಟೀಕೆಗಳನ್ನು ನೀವು ಹೇಗೆ ನಿಭಾಯಿಸುತ್ತೀರಿ? ಮಾಧ್ಯಮದಿಂದ, ನಿಮ್ಮ ಸುತ್ತಮುತ್ತಲಿನ ಜನರಿಂದ ಅಥವಾ ನಿಮ್ಮ ಜೀವನದ ಯಾವುದೇ ಭಾಗದಿಂದ ಬರುವ ವಿಮರ್ಶಕರನ್ನು ನೀವು ಹೇಗೆ ಎದುರಿಸುತ್ತೀರಿ?

ಪ್ರಧಾನಮಂತ್ರಿ: ನೋಡಿ, ನೀವು ಈಗ ಕೇಳಿದ ಪ್ರಶ್ನೆಗೆ ಸಂಬಂಧಿಸಿದಂತೆ—ನಾನು ಟೀಕೆಗಳನ್ನು ಹೇಗೆ ನಿಭಾಯಿಸುತ್ತೇನೆ? ಅದನ್ನು ಒಂದೇ ವಾಕ್ಯದಲ್ಲಿ ಹೇಳುವುದಾದರೆ, ನಾನು ಅದನ್ನು ಸ್ವಾಗತಿಸುತ್ತೇನೆ. ಟೀಕೆಯು ಪ್ರಜಾಪ್ರಭುತ್ವದ ಆತ್ಮ ಎಂದು ನಾನು ಬಲವಾಗಿ ನಂಬುತ್ತೇನೆ. ನೀವು ನಿಜವಾಗಿಯೂ ಪ್ರಜಾಪ್ರಭುತ್ವವಾದಿಗಳಾಗಿದ್ದರೆ, ನಿಮ್ಮ ರಕ್ತದಲ್ಲಿ ಪ್ರಜಾಪ್ರಭುತ್ವವಿದ್ದರೆ, ನಮ್ಮ ಶಾಸ್ತ್ರಗಳು ಹೇಳುವಂತೆ: 'ನಿಂದಕ ನಿಯರೆ ರಾಖಿಯೇ' (ನಿಮ್ಮ ವಿಮರ್ಶಕರನ್ನು ಹತ್ತಿರದಲ್ಲಿ ಇಟ್ಟುಕೊಳ್ಳಿ). ಟೀಕೆಯು ಪ್ರಜಾಪ್ರಭುತ್ವ, ಮಾಹಿತಿ ಮತ್ತು ಪರಿಣಾಮಕಾರಿ ರೀತಿಯಲ್ಲಿ ಕೆಲಸ ಮಾಡಲು ನಿಮಗೆ ಅನುವು ಮಾಡಿಕೊಡುತ್ತದೆ. ಟೀಕೆ ನಡೆಯಬೇಕು ಎಂದು ನಾನು ನಂಬುತ್ತೇನೆ—ಅದು ಹೆಚ್ಚು ನಡೆಯಬೇಕು ಮತ್ತು ತೀಕ್ಷ್ಣ ಹಾಗೂ ಸಂಪೂರ್ಣವಾಗಿರಬೇಕು. ಆದರೆ ನನ್ನ ದೂರು ಏನೆಂದರೆ, ಇತ್ತೀಚಿನ ದಿನಗಳಲ್ಲಿ ನಿಜವಾದ ಟೀಕೆ ನಡೆಯುತ್ತಿಲ್ಲ. ನಿಜವಾದ ಟೀಕೆಗೆ ಆಳವಾದ ಅಧ್ಯಯನ, ಕೂಲಂಕಷ ಸಂಶೋಧನೆ ಮತ್ತು ಸತ್ಯ ಹಾಗೂ ಸುಳ್ಳಿನ ನಡುವೆ ವ್ಯತ್ಯಾಸವನ್ನು ಗುರುತಿಸುವ ಅಗತ್ಯವಿದೆ. ಇಂದು, ಜನರು ಸುಲಭದ ದಾರಿಗಳನ್ನು ಹುಡುಕುತ್ತಾರೆ—ಅವರು ಅಧ್ಯಯನ ಮಾಡುವುದಿಲ್ಲ, ಅವರು ಸಂಶೋಧನೆ ಮಾಡುವುದಿಲ್ಲ, ಅವರು ದೌರ್ಬಲ್ಯಗಳನ್ನು ಕಂಡುಹಿಡಿಯಲು ಮತ್ತು ಆರೋಪಗಳನ್ನು ಮಾಡುವಲ್ಲಿ ಪ್ರಯತ್ನಿಸುವುದಿಲ್ಲ. ಆರೋಪ ಮತ್ತು ಟೀಕೆಗಳ ನಡುವೆ ದೊಡ್ಡ ವ್ಯತ್ಯಾಸವಿದೆ. ನೀವು ಮಾಡಿದ ಉಲ್ಲೇಖಗಳು—ಅವು ಆರೋಪಗಳು, ಟೀಕೆಗಳಲ್ಲ. ಪ್ರಜಾಪ್ರಭುತ್ವವು ಬಲವಾಗಿರಲು, ನಮಗೆ ಆಧಾರರಹಿತ ಆರೋಪಗಳಲ್ಲ, ನಿಜವಾದ ಟೀಕೆ ಬೇಕು. ಆರೋಪಗಳು ಯಾರಿಗೂ ಸಹಾಯ ಮಾಡುವುದಿಲ್ಲ; ಅವು ಕೇವಲ ಕ್ಷುಲ್ಲಕ ವಾದಗಳಿಗೆ ಕಾರಣವಾಗುತ್ತವೆ. ಅದಕ್ಕಾಗಿಯೇ ನಾನು ಯಾವಾಗಲೂ ಟೀಕೆಗಳನ್ನು ಸ್ವಾಗತಿಸುತ್ತೇನೆ. ಆದರೆ ಆರೋಪಗಳು ಸುಳ್ಳಾಗಿದ್ದಾಗ, ನಾನು ಶಾಂತವಾಗಿ, ಸ್ಥಿರವಾಗಿರುತ್ತೇನೆ ಮತ್ತು ರಾಷ್ಟ್ರದ ಸೇವೆಯಲ್ಲಿ ನಿರತನಾಗಿರುತ್ತೇನೆ.

ಲೆಕ್ಸ್ ಫ್ರಿಡ್ಮನ್: ಹೌದು, ನೀವು ಹೇಳುತ್ತಿರುವುದು ನನಗೆ ಬಹಳ ಮುಖ್ಯ. ಏಕೆಂದರೆ, ನಾನು ನಿಜವಾಗಿಯೂ ಒಳ್ಳೆಯ ಪತ್ರಿಕೋದ್ಯಮವನ್ನು ಗೌರವಿಸುತ್ತೇನೆ. ದುರದೃಷ್ಟವಶಾತ್, ಇಂದಿನ ದಿನಗಳಲ್ಲಿ, ಅನೇಕ ಪತ್ರಕರ್ತರು ಕೇವಲ ಕ್ಷಿಪ್ರ ಹೆಡ್‌ ಲೈನ್‌ ಗಳ ಹಿಂದೆ ಓಡುತ್ತಿದ್ದಾರೆ. ಅವರಿಗೆ ಲಾಭವಾಗುತ್ತದೆ ಎಂಬ ಕಾರಣಕ್ಕೆ ಆರೋಪಗಳನ್ನು ಮಾಡುತ್ತಾರೆ—ಅವರಿಗೆ ಸಂಚಲನಾತ್ಮಕ ಹೆಡ್‌ಲೈನ್‌ ಗಳು ಮತ್ತು ಅಗ್ಗದ ಜನಪ್ರಿಯತೆ ಬೇಕು. ಒಬ್ಬ ಶ್ರೇಷ್ಠ ಪತ್ರಕರ್ತನಾಗಲು, ಆಸಕ್ತಿ ಮತ್ತು ಹಂಬಲ ಇರಬೇಕು ಎಂದು ನಾನು ನಂಬುತ್ತೇನೆ. ಅದಕ್ಕೆ ಆಳವಾದ ತಿಳುವಳಿಕೆ ಮತ್ತು ಕೂಲಂಕಷ ಸಂಶೋಧನೆ ಅಗತ್ಯ. ಆಳವಿಲ್ಲದ ವರದಿಗಳು ಎಷ್ಟು ಸಾಮಾನ್ಯವಾಗಿದೆ ಎಂದು ನೋಡಿ ನನಗೆ ದುಃಖವಾಗುತ್ತದೆ. ವಾಸ್ತವವಾಗಿ, ನಿಮ್ಮೊಂದಿಗೆ ಮಾತನಾಡಲು ಬಯಸಲು ಇದೊಂದು ಕಾರಣ. ನಾನು ಇದರಲ್ಲಿ ತುಂಬಾ ಸಮರ್ಥನಲ್ಲ ಎಂದು ನನಗೆ ಗೊತ್ತು, ಆದರೆ ಈ ಕಾರಣಗಳಿಗಾಗಿಯೇ ನಿಮ್ಮೊಂದಿಗೆ ಈ ಸಂವಾದವನ್ನು ನಡೆಸಲು ಬಯಸಿದೆ. ಜನರು ಸಾಕಷ್ಟು ಪ್ರಯತ್ನಿಸುವುದಿಲ್ಲ; ಅವರು ಆಳವಾಗಿ ಸಂಶೋಧಿಸುವುದಿಲ್ಲ. ಇದಕ್ಕಾಗಿ ತಯಾರಾಗಲು ನಾನು ಎಷ್ಟು ಪುಸ್ತಕಗಳನ್ನು ಓದಿದ್ದೇನೆ ಎಂದು ನನಗೆ ಗೊತ್ತಿಲ್ಲ—ವಿಷಯಗಳನ್ನು ಸರಿಯಾಗಿ ಅನುಭವಿಸಿ ಅರ್ಥಮಾಡಿಕೊಳ್ಳುವ ಪ್ರಯತ್ನ. ಇದಕ್ಕೆ ಸಾಕಷ್ಟು ಸಿದ್ಧತೆ, ಸಾಕಷ್ಟು ಪರಿಶ್ರಮ ಬೇಕಾಗುತ್ತದೆ. ಮತ್ತು ಹೆಚ್ಚಿನ ಪ್ರಮುಖ ಪತ್ರಕರ್ತರು ಇದೇ ರೀತಿ ಕಾರ್ಯನಿರ್ವಹಿಸಬೇಕು ಎಂದು ನಾನು ಬಯಸುತ್ತೇನೆ. ಇಂತಹ ಆಳವಾದ ಸಂಶೋಧನೆ ಮತ್ತು ಪ್ರಯತ್ನದಿಂದಲೇ ನಿಜವಾದ ವಿಮರ್ಶೆ ಸಾಧ್ಯವಾಗುತ್ತದೆ—ಅಧಿಕಾರದಲ್ಲಿರುವವರ, ಅವರ ಸಾಮರ್ಥ್ಯ, ದೌರ್ಬಲ್ಯಗಳು ಮತ್ತು ತಪ್ಪುಗಳ ಆಳವಾದ ತನಿಖೆ. ಆದರೆ ಇದನ್ನು ಮಾಡಲು, ಸಾಕಷ್ಟು ಸಿದ್ಧತೆ ಅಗತ್ಯ. ಹೆಚ್ಚಿನ ಶ್ರೇಷ್ಠ ಪತ್ರಕರ್ತರು ಈ ರೀತಿ ಕೆಲಸ ಮಾಡಬೇಕು ಎಂದು ನಾನು ನಿಜವಾಗಿಯೂ ಬಯಸುತ್ತೇನೆ.

ಪ್ರಧಾನಮಂತ್ರಿ: ನೋಡಿ, ನಾನು ವಿವರಿಸುತ್ತೇನೆ. ಸರಿಯಾದ ದಿಕ್ಕಿನಲ್ಲಿ ಮತ್ತು ನಿರ್ದಿಷ್ಟ ವಿಮರ್ಶೆಗಳು ನೀತಿ ರೂಪಿಸಲು ಸಹಾಯ ಮಾಡುತ್ತವೆ. ಅವು ಸ್ಪಷ್ಟವಾದ ನೀತಿ ದೃಷ್ಟಿಕೋನವನ್ನು ತರುತ್ತವೆ. ಅಂತಹ ರಚನಾತ್ಮಕ ವಿಮರ್ಶೆಗಳಿಗೆ ನಾನು ವಿಶೇಷ ಗಮನ ನೀಡುತ್ತೇನೆ ಮತ್ತು ಅವುಗಳನ್ನು ಸ್ವಾಗತಿಸುತ್ತೇನೆ. ಈಗ, ನೀವು ಪತ್ರಿಕೋದ್ಯಮ ಮತ್ತು ಹೆಡ್‌ ಲೈನ್‌ ಗಳ ಬಗ್ಗೆ ಹೇಳಿದಂತೆ, ಯಾರಾದರೂ ಹೆಡ್‌ಲೈನ್‌ ಗಳ ಮೋಹ ಹೊಂದಿದ್ದರೆ ಅಥವಾ ಪದಗಳ ಜತೆ ಆಟವಾಡಿದರೆ, ನಾನು ಅದನ್ನು ಅಷ್ಟಾಗಿ ನಕಾರಾತ್ಮಕವಾಗಿ ಪರಿಗಣಿಸುವುದಿಲ್ಲ. ಆದರೆ, ಪತ್ರಿಕೋದ್ಯಮವು ಒಂದು ಕಾರ್ಯಸೂಚಿಯಿಂದ ಪ್ರೇರಿತವಾದಾಗ, ಸತ್ಯವನ್ನು ಕಡೆಗಣಿಸಿದಾಗ, ಅದು ದಶಕಗಳ ಕಾಲ ಹಾನಿ ಮಾಡುತ್ತದೆ. ತಮ್ಮ ಓದುಗರು ಅಥವಾ ಪ್ರೇಕ್ಷಕರನ್ನು ಆಕರ್ಷಿಸಲು ಯಾರಾದರೂ ಚತುರ ಪದಗಳನ್ನು ಬಳಸುವುದನ್ನು ಇಷ್ಟಪಟ್ಟರೆ, ಪರವಾಗಿಲ್ಲ, ಸ್ವಲ್ಪ ಹೊಂದಾಣಿಕೆ ಮಾಡಿಕೊಳ್ಳಬಹುದು. ಆದರೆ ಉದ್ದೇಶ ತಪ್ಪಾಗಿದ್ದರೆ, ಒಂದು ನಿರ್ದಿಷ್ಟ ಕಾರ್ಯಸೂಚಿಯ ಪ್ರಕಾರ ಸತ್ಯಗಳನ್ನು ತಿರುಚುವುದು ಗುರಿಯಾಗಿದ್ದರೆ, ಅದು ಗಂಭೀರ ವಿಷಯವಾಗುತ್ತದೆ.

ಲೆಕ್ಸ್ ಫ್ರಿಡ್ಮನ್:   ಮತ್ತು ಅದರಲ್ಲಿ ಸತ್ಯಕ್ಕೆ ಧಕ್ಕೆಯಾಗುತ್ತದೆ; ಅದು ನನ್ನ ನಂಬಿಕೆ.

ಪ್ರಧಾನಮಂತ್ರಿ: ನನಗೆ ನೆನಪಿದೆ, ಒಮ್ಮೆ ನಾನು ಲಂಡನ್ನಿನಲ್ಲಿ ಭಾಷಣ ಮಾಡಿದ್ದೆ. ಅಲ್ಲಿ ಒಂದು ಗುಜರಾತಿ ಪತ್ರಿಕೆಯವರು ಒಂದು ಕಾರ್ಯಕ್ರಮ ಆಯೋಜಿಸಿದ್ದರು, ಅದಕ್ಕೆ ನನ್ನನ್ನು ಕರೆದಿದ್ದರು. ಆ ಭಾಷಣದಲ್ಲಿ, ಅದು ಪತ್ರಕರ್ತರಿಗಾಗಿ ಏರ್ಪಡಿಸಿದ್ದ ಕಾರ್ಯಕ್ರಮವಾದ್ದರಿಂದ, ನಾನು ಹೀಗೆ ಹೇಳಿದೆ – "ಪತ್ರಿಕೋದ್ಯಮ ಹೇಗಿರಬೇಕು? ಅದು ನೊಣದಂತೆ ಇರಬೇಕೋ, ಜೇನುನೊಣದಂತೆ ಇರಬೇಕೋ?" ನೊಣವು ಕೊಳಕಿನ ಮೇಲೆ ಕುಳಿತು ಮತ್ತಷ್ಟು ಕೊಳೆಯನ್ನು ಹರಡುತ್ತದೆ ಎಂದು ನಾನು ವಿವರಿಸಿದೆ. ಆದರೆ ಜೇನುನೊಣವು ಹೂಗಳ ಮೇಲೆ ಕುಳಿತು ಮಕರಂದ ಸಂಗ್ರಹಿಸಿ ಸಿಹಿಯನ್ನು ಹರಡುತ್ತದೆ. ಆದರೂ, ಯಾರಾದರೂ ತಪ್ಪು ಮಾಡಿದರೆ, ಜೇನುನೊಣವು ಮೂರು ದಿನಗಳ ಕಾಲ ವ್ಯಕ್ತಿಯು ಮುಖ ತೋರಿಸಲು ಸಾಧ್ಯವಾಗದ ರೀತಿಯಲ್ಲಿ ಕಚ್ಚುತ್ತದೆ. ಆದರೆ ಕೆಲವರು ನನ್ನ ಮಾತಿನ ಅರ್ಧ ಭಾಗವನ್ನು ಮಾತ್ರ ತೆಗೆದುಕೊಂಡು ದೊಡ್ಡ ವಿವಾದ ಸೃಷ್ಟಿಸಿದರು. ನಿಜ ಹೇಳಬೇಕೆಂದರೆ, ನಾನು ಯಾರನ್ನೂ ಟೀಕಿಸುತ್ತಿರಲಿಲ್ಲ. ಜೇನುನೊಣದ ಶಕ್ತಿಯನ್ನು ಎತ್ತಿ ತೋರಿಸುತ್ತಿದ್ದೆ—ಒಂದು ಸಣ್ಣ ಕಡಿತದಿಂದಲೂ ಮೂರು ದಿನ ಮುಖ ಮುಚ್ಚಿಕೊಳ್ಳಬೇಕಾಗುತ್ತದೆ. ಮುಖ ಮುಚ್ಚಿಕೊಳ್ಳಲೇಬೇಕು. ಪತ್ರಿಕೋದ್ಯಮಕ್ಕೆ ಇಂತಹ ಶಕ್ತಿ ಇರಬೇಕು. ಆದರೆ ಕೆಲವರು ನೊಣದ ದಾರಿಯನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ.

ಲೆಕ್ಸ್ ಫ್ರಿಡ್ಮನ್: ಈಗ, ನನ್ನ ಹೊಸ ಜೀವನದ ಗುರಿ ಜೇನುನೊಣದಂತೆ ಆಗುವುದು. ನೀವು ಪ್ರಜಾಪ್ರಭುತ್ವದ ಬಗ್ಗೆ ಹೇಳಿದಿರಿ… ಮತ್ತು 2002ರ ವರೆಗೆ, ನಿಮಗೆ ಸರ್ಕಾರದ ಬಗ್ಗೆ ಹೆಚ್ಚು ಪರಿಚಯವಿರಲಿಲ್ಲ. ಆದರೆ 2002ರಿಂದ ಇಲ್ಲಿಯವರೆಗೆ, ನನ್ನ ಲೆಕ್ಕದ ಪ್ರಕಾರ, ನೀವು ಎಂಟು ಚುನಾವಣೆಗಳಲ್ಲಿ ಗೆದ್ದಿದ್ದೀರಿ. ಭಾರತದಲ್ಲಿ, 80 ಕೋಟಿಗೂ ಹೆಚ್ಚು ಜನರು ವಿವಿಧ ಚುನಾವಣೆಗಳಲ್ಲಿ ಮತ ಚಲಾಯಿಸುತ್ತಾರೆ. ಇಂತಹ ಬೃಹತ್ ಚುನಾವಣೆಗಳನ್ನು ಗೆದ್ದು 140 ಕೋಟಿ ಜನರ ದೇಶದಲ್ಲಿ ಜಯಶಾಲಿಯಾಗಲು—ಏನು ಬೇಕು? ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದಲ್ಲಿ ಜನರನ್ನು ಪ್ರತಿನಿಧಿಸುವ ಅವಕಾಶವನ್ನು ನೀವು ಹೇಗೆ ಪಡೆಯುತ್ತೀರಿ?

ಪ್ರಧಾನಮಂತ್ರಿ: ವಿಷಯವೇನೆಂದರೆ, ನಾನು ರಾಜಕೀಯಕ್ಕೆ ಬಂದಿದ್ದು ತಡವಾಗಿ. ಮೊದಮೊದಲು, ನಾನು ಸಂಘಟನೆಯಲ್ಲಿ ಕೆಲಸ ಮಾಡುತ್ತಿದ್ದೆ, ಚುನಾವಣಾ ನಿರ್ವಹಣೆಯ ಜವಾಬ್ದಾರಿಗಳನ್ನು ನೋಡಿಕೊಳ್ಳುತ್ತಿದ್ದೆ. ಅದರಲ್ಲಿಯೇ ನನ್ನ ಹೆಚ್ಚಿನ ಸಮಯ ಕಳೆಯುತ್ತಿತ್ತು. ಕಳೆದ 24 ವರ್ಷಗಳಿಂದ, ಗುಜರಾತ್ ಮತ್ತು ದೇಶದ ಜನರು ನನಗೆ ಸರ್ಕಾರದ ಮುಖ್ಯಸ್ಥನಾಗಿ ಸೇವೆ ಸಲ್ಲಿಸುವ ಅವಕಾಶ ನೀಡಿದ್ದಾರೆ. ಸಂಪೂರ್ಣ ಶ್ರದ್ಧೆಯಿಂದ, ನಾನು ಜನರನ್ನು ದೇವರ ಸ್ವರೂಪವೆಂದು ಭಾವಿಸುತ್ತೇನೆ. ಅವರು ನನಗೆ ವಹಿಸಿರುವ ಜವಾಬ್ದಾರಿಯನ್ನು ನಿಭಾಯಿಸಲು ನಾನು ಸದಾ ಪ್ರಯತ್ನಿಸುತ್ತೇನೆ. ಅವರ ನಂಬಿಕೆಗೆ ಎಂದಿಗೂ ದ್ರೋಹ ಬಗೆಯುವುದಿಲ್ಲ. ಅವರು ನನ್ನನ್ನು ನಾನು ಹೇಗಿದ್ದೇನೋ ಹಾಗೆಯೇ ನೋಡುತ್ತಾರೆ. ನನ್ನ ಸರ್ಕಾರವು "ಸಂಪೂರ್ಣ ವ್ಯಾಪ್ತಿ" ನೀತಿಗಳನ್ನು ಅನುಸರಿಸುತ್ತದೆ, ಅಂದರೆ ಪ್ರತಿ ಯೋಜನೆಯೂ ಯಾವುದೇ ತಾರತಮ್ಯವಿಲ್ಲದೆ ಎಲ್ಲಾ ಫಲಾನುಭವಿಗಳನ್ನು ತಲುಪುವಂತೆ ಶೇಕಡಾ 100ರಷ್ಟು ಜಾರಿಯಾಗಬೇಕು—ಜಾತಿ, ಧರ್ಮ, ನಂಬಿಕೆ, ಆಸ್ತಿ ಅಥವಾ ರಾಜಕೀಯದ ಭೇದವಿಲ್ಲದೆ. ಯೋಜನೆಗಳು ಎಲ್ಲರಿಗೂ ದೊರೆಯುವಂತಿದ್ದರೆ, ತಮಗೆ ಅನ್ಯಾಯವಾಗುತ್ತಿದೆ ಎಂದು ಜನರು ಭಾವಿಸುವುದಿಲ್ಲ. ಯಾರಾದರೂ ಇನ್ನೂ ಪ್ರಯೋಜನ ಪಡೆದಿಲ್ಲದಿದ್ದರೂ, ಮುಂದೊಂದು ದಿನ ಸಿಗುತ್ತದೆ ಎಂಬ ನಂಬಿಕೆ ಇರುತ್ತದೆ. ಇದು ವಿಶ್ವಾಸವನ್ನು ಮೂಡಿಸುತ್ತದೆ. ಆಡಳಿತದಲ್ಲಿನ ಈ ನಂಬಿಕೆಯೇ ದೊಡ್ಡ ಶಕ್ತಿ. ಎರಡನೆಯದಾಗಿ, ನಾನು ಚುನಾವಣೆ-ಕೇಂದ್ರಿತ ಆಡಳಿತ ನಡೆಸುವುದಿಲ್ಲ; ನಾನು ಜನ-ಕೇಂದ್ರಿತ ಆಡಳಿತ ನಡೆಸುತ್ತೇನೆ. ಜನರ ಮತ್ತು ದೇಶದ ಒಳಿತಿಗಾಗಿ ಏನು ಮಾಡಬೇಕು ಎಂಬುದರ ಮೇಲೆ ನನ್ನ ಗಮನವಿರುತ್ತದೆ. ಆರಂಭದಲ್ಲಿ, ನಾನು ಆಧ್ಯಾತ್ಮಿಕ ಪಯಣಕ್ಕೆ ಹೊರಟಿದ್ದೆ, ಆದರೆ ಈಗ, ನನ್ನ ರಾಷ್ಟ್ರವನ್ನು ದೈವಿಕವೆಂದು ಮತ್ತು ಜನರನ್ನು ದೇವರಂತೆ ಕಾಣುತ್ತೇನೆ. ಪೂಜಾರಿಯು ತನ್ನ ದೇವರಿಗೆ ಸೇವೆ ಸಲ್ಲಿಸುವಂತೆ, ನಾನು ಜನಸೇವೆಗೆ ನನ್ನನ್ನು ಅರ್ಪಿಸಿಕೊಳ್ಳುತ್ತೇನೆ. ಎರಡನೆಯದಾಗಿ, ನಾನು ಎಂದಿಗೂ ಜನರಿಂದ ದೂರ ಉಳಿಯುವುದಿಲ್ಲ—ನಾನು ಅವರ ನಡುವೆ, ಅವರಂತೆಯೇ ಬದುಕುತ್ತೇನೆ. "ನೀವು 11 ಗಂಟೆ ಕೆಲಸ ಮಾಡಿದರೆ, ನಾನು 12 ಗಂಟೆ ಕೆಲಸ ಮಾಡುತ್ತೇನೆ" ಎಂದು ನಾನು ನೇರವಾಗಿ ಹೇಳುತ್ತೇನೆ. ಜನರು ಇದನ್ನು ನೋಡಿ ನಂಬುತ್ತಾರೆ. ನನಗೆ ಯಾವುದೇ ವೈಯಕ್ತಿಕ ಸ್ವಾರ್ಥಗಳಿಲ್ಲ—ನನ್ನ ಸ್ಥಾನದಿಂದ ನನ್ನ ಸಂಬಂಧಿಕರು ಅಥವಾ ಆಪ್ತರಿಗೆ ಯಾವುದೇ ಲಾಭವಿಲ್ಲ. ಸಾಮಾನ್ಯ ನಾಗರಿಕರು ಈ ವಿಷಯಗಳನ್ನು ಗೌರವಿಸುತ್ತಾರೆ. ಬಹುಶಃ, ಇನ್ನೂ ಹಲವು ಕಾರಣಗಳಿರಬಹುದು. ಮತ್ತೊಂದು ಪ್ರಮುಖ ಅಂಶವೆಂದರೆ ನನ್ನ ಪಕ್ಷ, ಅದರಲ್ಲಿ ಲಕ್ಷಾಂತರ ಸಮರ್ಪಿತ ಕಾರ್ಯಕರ್ತರು ಭಾರತ ಮಾತೆ ಮತ್ತು ದೇಶದ ಜನರ ಒಳಿತಿಗಾಗಿ ಮಾತ್ರ ಬದುಕುತ್ತಾರೆ. ಅವರು ತಮಗಾಗಿ ಏನನ್ನೂ ಗಳಿಸಿಲ್ಲ—ಅಧಿಕಾರದ ಸ್ಥಾನಗಳನ್ನು ಬಯಸಿಲ್ಲ—ಆದರೂ ಅವರು ದೇಶಕ್ಕಾಗಿ ಅವಿರತವಾಗಿ ಶ್ರಮಿಸುತ್ತಾರೆ. ಹಗಲಿರುಳು ದುಡಿಯುವ ಲಕ್ಷಾಂತರ ಕಾರ್ಯಕರ್ತರಿದ್ದಾರೆ. ನನ್ನ ಪಕ್ಷವು ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷ. ನಾನು ಅದರ ಸದಸ್ಯನಾಗಿರುವುದಕ್ಕೆ ಹೆಮ್ಮೆಪಡುತ್ತೇನೆ. ನನ್ನ ಪಕ್ಷವು ತುಲನಾತ್ಮಕವಾಗಿ ಹೊಸದು, ಆದರೂ ಲಕ್ಷಾಂತರ ಕಾರ್ಯಕರ್ತರ ಪ್ರಯತ್ನಗಳಿವೆ. ಈ ಲಕ್ಷಾಂತರ ನಿಸ್ವಾರ್ಥ ಕಾರ್ಯಕರ್ತರ ಪರಿಶ್ರಮವು ಭಾರತೀಯ ಜನತಾ ಪಕ್ಷದ ಮೇಲಿನ ಜನರ ವಿಶ್ವಾಸವನ್ನು ಬಲಪಡಿಸುತ್ತದೆ. ಅವರ ಸಮರ್ಪಣೆಯಿಂದಲೇ ನಾವು ಚುನಾವಣೆಗಳನ್ನು ಗೆಲ್ಲುತ್ತೇವೆ. ನಾನು ಎಷ್ಟು ಚುನಾವಣೆಗಳನ್ನು ಗೆದ್ದಿದ್ದೇನೆ ಎಂದು ಎಂದಿಗೂ ಲೆಕ್ಕ ಹಾಕಿಲ್ಲ, ಆದರೆ ಜನರ ಆಶೀರ್ವಾದ ಸದಾ ನಮ್ಮೊಂದಿಗಿದೆ.

ಲೆಕ್ಸ್ ಫ್ರಿಡ್ಮನ್: ಭಾರತದ ಅದ್ಭುತ ಚುನಾವಣಾ ವ್ಯವಸ್ಥೆ ಮತ್ತು ಯಂತ್ರೋಪಕರಣಗಳ ಬಗ್ಗೆ ನಿಮ್ಮ ಅಭಿಪ್ರಾಯಗಳ ಬಗ್ಗೆ ನಾನು ಯೋಚಿಸುತ್ತಿದ್ದೆ. ಭಾರತದಲ್ಲಿ ಚುನಾವಣೆಗಳು ನಡೆಯುವ ರೀತಿ ನಿಜಕ್ಕೂ ನನ್ನನ್ನು ಬೆರಗುಗೊಳಿಸಿದೆ. ಎಷ್ಟೊಂದು ಕುತೂಹಲಕಾರಿ ಕಥೆಗಳು ಕೇಳಿಬರುತ್ತವೆ. ಉದಾಹರಣೆಗೆ, ಯಾವುದೇ ಮತದಾರ ಮತಗಟ್ಟೆಯಿಂದ ಎರಡು ಕಿಲೋಮೀಟರ್‌ಗಿಂತ ಹೆಚ್ಚು ದೂರ ಇರಬಾರದು ಎಂಬ ನಿಯಮವಿದೆ. ಹಾಗಾಗಿ, ಭಾರತದ ಅತ್ಯಂತ ದೂರದ ಪ್ರದೇಶಗಳಿಗೆ ಮತಯಂತ್ರಗಳನ್ನು ಸಾಗಿಸುವ ಅನೇಕ ಕಥೆಗಳಿವೆ. ಇದು ನಿಜಕ್ಕೂ ಅದ್ಭುತ—ಪ್ರತಿಯೊಬ್ಬ ಮತದಾರನೂ ಮುಖ್ಯ. 60 ಕೋಟಿಗೂ ಹೆಚ್ಚು ಮತದಾರರಿಗೆ ಚುನಾವಣೆಗಳನ್ನು ನಿರ್ವಹಿಸುವುದು ದೊಡ್ಡ ಲಾಜಿಸ್ಟಿಕಲ್ ಸವಾಲು. ನಿಮಗೆ ವಿಶೇಷವಾಗಿ ಪ್ರಭಾವ ಬೀರಿದ ನಿರ್ದಿಷ್ಟ ಕಥೆ ಏನಾದರೂ ಇದೆಯೇ? ಅಥವಾ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದಲ್ಲಿ ಇಂತಹ ಬೃಹತ್ ಚುನಾವಣೆಗಳನ್ನು ಹೇಗೆ ನಡೆಸುತ್ತಾರೆ ಎಂಬುದರ ಬಗ್ಗೆ ಮಾತನಾಡಬಹುದೇ?

ಪ್ರಧಾನಮಂತ್ರಿ: ಮೊದಲನೆಯದಾಗಿ, ಇಂತಹ ಮಹತ್ವದ ಪ್ರಶ್ನೆಯನ್ನು ಕೇಳಿದ್ದಕ್ಕಾಗಿ ನಾನು ನಿಮಗೆ ಬಹಳ ಕೃತಜ್ಞನಾಗಿದ್ದೇನೆ. ಪ್ರಪಂಚದಾದ್ಯಂತ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರುವವರು ಈ ಉತ್ತರವನ್ನು ಗಮನವಿಟ್ಟು ಕೇಳಬೇಕು. ಸಾಮಾನ್ಯವಾಗಿ, ಚರ್ಚೆಗಳು ಕೇವಲ ಚುನಾವಣೆಯ ಗೆಲುವು-ಸೋಲುಗಳ ಬಗ್ಗೆ ಮಾತ್ರ ನಡೆಯುತ್ತವೆ, ಆದರೆ ನಮ್ಮ ಚುನಾವಣಾ ಪ್ರಕ್ರಿಯೆ ಎಷ್ಟು ಬೃಹತ್ ಪ್ರಮಾಣದಲ್ಲಿ ನಡೆಯುತ್ತದೆ ಎಂಬುದರ ಬಗ್ಗೆ ಅಲ್ಲ. ಉದಾಹರಣೆಗೆ, 2024ರ ಲೋಕಸಭಾ ಚುನಾವಣೆಯನ್ನೇ ತೆಗೆದುಕೊಳ್ಳಿ. 98 ಕೋಟಿ ನೋಂದಾಯಿತ ಮತದಾರರಿದ್ದರು, ಮತ್ತು ಪ್ರತಿಯೊಬ್ಬರ ಫೋಟೋ ಮತ್ತು ಸಂಪೂರ್ಣ ಮಾಹಿತಿ ದಾಖಲಿಸಲಾಗಿತ್ತು. ಈ ಸಂಖ್ಯೆ ಉತ್ತರ ಅಮೆರಿಕಾದ ಜನಸಂಖ್ಯೆಗಿಂತ ಎರಡು ಪಟ್ಟು ಹೆಚ್ಚು ಮತ್ತು ಇಡೀ ಯುರೋಪಿಯನ್ ಒಕ್ಕೂಟದ ಜನಸಂಖ್ಯೆಗಿಂತಲೂ ಹೆಚ್ಚು. ಈ 98 ಕೋಟಿ ನೋಂದಾಯಿತ ಮತದಾರರಲ್ಲಿ, 64.6 ಕೋಟಿ ಜನರು ಮೇ ತಿಂಗಳ ಸುಡುವ ಬಿಸಿಲಿನಲ್ಲಿ, ಕೆಲವು ಕಡೆ 40 ಡಿಗ್ರಿ ಸೆಲ್ಸಿಯಸ್ ತಾಪಮಾನ ಇದ್ದರೂ, ಮನೆಯಿಂದ ಹೊರಬಂದು ಮತ ಚಲಾಯಿಸಿದರು. ಅವರು ತಮ್ಮ ಹಕ್ಕು ಚಲಾಯಿಸಿದರು. ಹೋಲಿಕೆಗಾಗಿ ಹೇಳುವುದಾದರೆ, ಭಾರತದಲ್ಲಿ ಮತ ಚಲಾಯಿಸಿದ ಜನರ ಸಂಖ್ಯೆ ಅಮೆರಿಕಾದ ಒಟ್ಟು ಜನಸಂಖ್ಯೆಯ ಎರಡರಷ್ಟು. ದೇಶಾದ್ಯಂತ 10 ಲಕ್ಷಕ್ಕೂ ಹೆಚ್ಚು ಮತಗಟ್ಟೆಗಳಿದ್ದವು. ಇದಕ್ಕಾಗಿ ಬೇಕಾದ ಮಾನವ ಸಂಪನ್ಮೂಲವನ್ನು ಊಹಿಸಿ! ನನ್ನ ದೇಶದಲ್ಲಿ 2,500ಕ್ಕೂ ಹೆಚ್ಚು ನೋಂದಾಯಿತ ರಾಜಕೀಯ ಪಕ್ಷಗಳಿವೆ—2,500ಕ್ಕೂ ಹೆಚ್ಚು ನೋಂದಾಯಿತ ರಾಜಕೀಯ ಪಕ್ಷಗಳನ್ನು ಹೊಂದಿರುವ ದೇಶವಿದೆಯೆಂದು ಈ ಅಂಕಿ ಅಂಶ ಜಗತ್ತನ್ನು ಬೆರಗುಗೊಳಿಸುತ್ತದೆ. ನಾವು 24 ಗಂಟೆಯೂ ಕಾರ್ಯನಿರ್ವಹಿಸುವ 900ಕ್ಕೂ ಹೆಚ್ಚು ಟಿವಿ ಸುದ್ದಿ ವಾಹಿನಿಗಳನ್ನು ಮತ್ತು ಚುನಾವಣೆಗಳನ್ನು ವರದಿ ಮಾಡುವ 5,000ಕ್ಕೂ ಹೆಚ್ಚು ದಿನಪತ್ರಿಕೆಗಳನ್ನು ಹೊಂದಿದ್ದೇವೆ. ವಿಶಾಲವಾದ ಮತ್ತು ವೈವಿಧ್ಯಮಯ ದೇಶವಾಗಿದ್ದರೂ, ಬಡ ಹಳ್ಳಿಗರೂ ಸಹ ತಂತ್ರಜ್ಞಾನಕ್ಕೆ ಬೇಗ ಹೊಂದಿಕೊಳ್ಳುತ್ತಾರೆ. ನಮ್ಮ ನಾಗರಿಕರು ಎಲೆಕ್ಟ್ರಾನಿಕ್ ಮತಯಂತ್ರಗಳನ್ನು (ಇವಿಎಂ) ಬಳಸುತ್ತಾರೆ, ಇದರಿಂದ ಚುನಾವಣೆಗಳು ಸುಲಭವಾಗುತ್ತವೆ. ಕೆಲವು ದೇಶಗಳಲ್ಲಿ, ಚುನಾವಣಾ ಫಲಿತಾಂಶಗಳು ತಿಂಗಳುಗಟ್ಟಲೆ ತೆಗೆದುಕೊಳ್ಳುತ್ತವೆ, ಆದರೆ ನಮ್ಮ ದೇಶದಲ್ಲಿ, ಲಕ್ಷಾಂತರ ಜನರ ಮತಗಳನ್ನು ಎಣಿಸಿ ಒಂದೇ ದಿನದಲ್ಲಿ ಫಲಿತಾಂಶಗಳನ್ನು ಪ್ರಕಟಿಸುತ್ತೇವೆ. ನೀವು ಸರಿಯಾಗಿ ಹೇಳಿದಂತೆ, ದೂರದ ಪ್ರದೇಶಗಳಲ್ಲಿಯೂ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತದೆ, ಕೆಲವೊಮ್ಮೆ ಮತದಾನದ ಸಲಕರಣೆಗಳು ಮತ್ತು ಅಧಿಕಾರಿಗಳನ್ನು ಸಾಗಿಸಲು ಹೆಲಿಕಾಪ್ಟರ್‌ಗಳು ಬೇಕಾಗುತ್ತವೆ. ಉದಾಹರಣೆಗೆ, ಅರುಣಾಚಲ ಪ್ರದೇಶದಲ್ಲಿ ಪ್ರಪಂಚದಲ್ಲೇ ಅತಿ ಎತ್ತರದ ಮತಗಟ್ಟೆ ಇರಬಹುದು. ಗುಜರಾತ್‌ ನ ಗಿರ್ ಅರಣ್ಯದಲ್ಲಿ, ಕೇವಲ ಒಬ್ಬ ಮತದಾರನಿಗಾಗಿ ವಿಶೇಷ ಮತಗಟ್ಟೆಯನ್ನು ಸ್ಥಾಪಿಸಲಾಯಿತು—ಏಕೆಂದರೆ ಭಾರತೀಯ ಪ್ರಜಾಪ್ರಭುತ್ವದಲ್ಲಿ ಪ್ರತಿಯೊಂದು ಮತವೂ ಮುಖ್ಯ. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ಖಚಿತಪಡಿಸಿಕೊಳ್ಳುವ ಮೂಲಕ ನಾವು ಪ್ರಜಾಪ್ರಭುತ್ವವನ್ನು ಬಲಪಡಿಸಲು ನಿರಂತರವಾಗಿ ಶ್ರಮಿಸುತ್ತೇವೆ. ಭಾರತದ ಚುನಾವಣಾ ಆಯೋಗವು ರಾಜಕೀಯ ಹಸ್ತಕ್ಷೇಪವಿಲ್ಲದೆ ಎಲ್ಲಾ ನಿರ್ಧಾರಗಳನ್ನು ಸ್ವತಂತ್ರವಾಗಿ ತೆಗೆದುಕೊಳ್ಳುವ ಮೂಲಕ ಈ ಚುನಾವಣೆಗಳನ್ನು ನಡೆಸುತ್ತದೆ. ಇದೇ ಒಂದು ಪ್ರಕಾಶಮಾನವಾದ ಕಥೆ. ವಿಶ್ವದ ಪ್ರಮುಖ ವಿಶ್ವವಿದ್ಯಾಲಯಗಳು ನಮ್ಮ ಚುನಾವಣಾ ನಿರ್ವಹಣೆಯನ್ನು ಒಂದು ಅಧ್ಯಯನ ವಿಷಯವಾಗಿ ಪರಿಗಣಿಸಬೇಕು ಎಂದು ನಾನು ನಂಬುತ್ತೇನೆ. ಇದು ಪ್ರೇರಣೆಯ ಮೂಲವಾಗಿದೆ—ನಮ್ಮ ನಾಗರಿಕರು ಎಷ್ಟು ಆಳವಾಗಿ ರಾಜಕೀಯ ಅರಿವುಳ್ಳವರು ಎಂಬುದನ್ನು ತೋರಿಸುತ್ತದೆ. ಪ್ರಜಾಪ್ರಭುತ್ವ ಹೇಗೆ ಕಾರ್ಯನಿರ್ವಹಿಸಬೇಕು ಎಂಬುದಕ್ಕೆ ಉದಾಹರಣೆಯಾಗಿ ಇದನ್ನು ಪ್ರಪಂಚದಾದ್ಯಂತದ ಹೊಸ ಪೀಳಿಗೆಗೆ ತಿಳಿಸಬೇಕು.

ಲೆಕ್ಸ್ ಫ್ರಿಡ್ಮನ್: ನನಗೆ ಪ್ರಜಾಪ್ರಭುತ್ವ ಬಹಳ ಇಷ್ಟ. ಅಮೆರಿಕಾವನ್ನು ಇಷ್ಟಪಡಲು ಅದೂ ಒಂದು ಕಾರಣ. ಆದರೆ ಭಾರತದಲ್ಲಿ ಪ್ರಜಾಪ್ರಭುತ್ವ ಕಾರ್ಯನಿರ್ವಹಿಸುವ ರೀತಿ—ಅದಕ್ಕಿಂತ ಸುಂದರವಾದದ್ದು ಬೇರೊಂದಿಲ್ಲ. ನೀವು ಹೇಳಿದಂತೆ, 90 ಕೋಟಿ ಜನರು ಮತ ಚಲಾಯಿಸಲು ನೋಂದಾಯಿಸಿಕೊಂಡಿದ್ದಾರೆ! ಇದು ನಿಜಕ್ಕೂ ಒಂದು ಅಧ್ಯಯನ ವಿಷಯ. ಇಷ್ಟೊಂದು ಜನರು, ತಮ್ಮ ಸ್ವಂತ ಇಚ್ಛೆಯಿಂದ, ತಮ್ಮನ್ನು ಪ್ರತಿನಿಧಿಸುವ ವ್ಯಕ್ತಿಗೆ ಮತ ಹಾಕಲು ಉತ್ಸಾಹದಿಂದ ಒಟ್ಟಿಗೆ ಸೇರುವುದು ನಿಜಕ್ಕೂ ಅದ್ಭುತ. ಅವರು ಅಪಾರ ಆಸಕ್ತಿಯಿಂದ ಭಾಗವಹಿಸುತ್ತಾರೆ. ಜನರ ಧ್ವನಿಗಳು ಕೇಳಿಸುತ್ತಿವೆ ಎಂದು ಜನರು ಭಾವಿಸುವುದು ಮುಖ್ಯ. ಅದು ನಿಜಕ್ಕೂ ಸುಂದರ. ಧ್ವನಿಗಳು ಕೇಳಿಸುತ್ತಿರುವ ಬಗ್ಗೆ ಹೇಳುವುದಾದರೆ—ಅನೇಕ ಜನರು ನಿಮ್ಮನ್ನು ಪ್ರೀತಿಸುತ್ತಾರೆ. ನೀವು ವಿಶ್ವದ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರು. ಇಷ್ಟು ವರ್ಷಗಳ ಕಾಲ ಅಧಿಕಾರದಲ್ಲಿರುವುದರಿಂದ, ಇಷ್ಟೊಂದು ಅಧಿಕಾರವು ನಿಮ್ಮ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂದು ನೀವು ಎಂದಾದರೂ ಯೋಚಿಸಿದ್ದೀರಾ?

ಪ್ರಧಾನಮಂತ್ರಿ: ಮೊದಲನೆಯದಾಗಿ, "ಪ್ರಭಾವಶಾಲಿ" ಎಂಬ ಪದವು ನನ್ನ ಜೀವನಕ್ಕೆ ಸರಿಹೊಂದುವುದಿಲ್ಲ ಎಂದು ನಾನು ಭಾವಿಸುತ್ತೇನೆ. ನಾನು ಪ್ರಭಾವಶಾಲಿ ಎಂದು ಹೇಳಿಕೊಳ್ಳಲು ಸಾಧ್ಯವಿಲ್ಲ, ಏಕೆಂದರೆ ನಾನು ನನ್ನನ್ನು ಸೇವಕನಾಗಿ ನೋಡುತ್ತೇನೆ. ವಾಸ್ತವವಾಗಿ, ನಾನು ನನ್ನನ್ನು "ಪ್ರಧಾನ ಸೇವಕ" ಎಂದು ಕರೆಯುತ್ತೇನೆ—ಜನರ ಮುಖ್ಯ ಸೇವಕ. ಸೇವೆ ನನ್ನ ಮಾರ್ಗದರ್ಶಿ ತತ್ವ. ಅಧಿಕಾರದ ಬಗ್ಗೆ ಹೇಳುವುದಾದರೆ, ಅದು ನನಗೆ ಎಂದಿಗೂ ತೊಂದರೆ ನೀಡಿಲ್ಲ. ಅಧಿಕಾರದ ಆಟಗಳನ್ನು ಆಡಲು ನಾನು ಎಂದಿಗೂ ರಾಜಕೀಯಕ್ಕೆ ಬಂದಿಲ್ಲ. ಪ್ರಭಾವಶಾಲಿಯಾಗುವುದಕ್ಕಿಂತ, ನಾನು ಕೆಲಸ ಮಾಡುವವನಾಗಲು ಶ್ರಮಿಸುತ್ತೇನೆ. ನಾನು ಪ್ರಭಾವಶಾಲಿಯಲ್ಲ, ಆದರೆ ನಾನು ಕೆಲಸ ಮಾಡುವವನು. ಜನರ ಸೇವೆ ಮಾಡುವುದು ಮತ್ತು ಅವರ ಜೀವನಕ್ಕೆ ಸಕಾರಾತ್ಮಕ ಕೊಡುಗೆ ನೀಡುವುದು ನನ್ನ ಗುರಿಯಾಗಿದೆ. ಅದೇ ನನ್ನ ಉದ್ದೇಶ.

 

ಲೆಕ್ಸ್ ಫ್ರಿಡ್ಮನ್: ನೀವು ಹೇಳಿದಂತೆ, ನೀವು ದಣಿವರಿಯದೆ ಕೆಲಸ ಮಾಡುತ್ತೀರಿ ಮತ್ತು ಸಂಪೂರ್ಣ ಶ್ರದ್ಧೆಯಿಂದ ಹೃತ್ಪೂರ್ವಕವಾಗಿ ಅದರಲ್ಲಿ ತೊಡಗಿಸಿಕೊಳ್ಳುತ್ತೀರಿ. ನೀವು ಎಂದಾದರೂ ಒಂಟಿತನವನ್ನು ಅನುಭವಿಸಿದ್ದೀರಾ?

ಪ್ರಧಾನಮಂತ್ರಿ: ನೋಡಿ, ನಾನು ಎಂದಿಗೂ ಒಂಟಿತನವನ್ನು ಅನುಭವಿಸುವುದಿಲ್ಲ. ಏಕೆಂದರೆ ನಾನು "1 + 1" ಸಿದ್ಧಾಂತವನ್ನು ದೃಢವಾಗಿ ನಂಬುತ್ತೇನೆ. ಈ "1+1" ಸಿದ್ಧಾಂತವು ನನ್ನನ್ನು ಬೆಂಬಲಿಸುತ್ತದೆ. ಈಗ, ಈ 1 + 1 ಎಂದರೇನು ಎಂದು ಯಾರಾದರೂ ನನ್ನನ್ನು ಕೇಳಿದರೆ, ನಾನು ಹೇಳುತ್ತೇನೆ: ಮೊದಲ 1 ಮೋದಿ. ಮತ್ತು ಎರಡನೆಯದು +1 ದೇವರು. ನಾನು ಎಂದಿಗೂ ಏಕಾಂಗಿಯಲ್ಲ ಏಕೆಂದರೆ ದೇವರು ಸದಾ ನನ್ನೊಂದಿಗೆ ಇರುತ್ತಾನೆ. ಆ ಸ್ಫೂರ್ತಿಯೊಂದಿಗೆ ನಾನು ಬದುಕುತ್ತಿದ್ದೇನೆ. ನಾನು ಮೊದಲೇ ಹೇಳಿದಂತೆ, "ನರನ ಸೇವೆಯೇ ನಾರಾಯಣ ಸೇವೆ" ಎಂದು ನಂಬಿದ್ದ ಸ್ವಾಮಿ ವಿವೇಕಾನಂದರ ತತ್ವಗಳನ್ನು ನಾನು ಅನುಸರಿಸಿದ್ದೇನೆ- ಜನರ ಸೇವೆಯೇ ದೇವರ ಸೇವೆ. ನನಗೆ, ರಾಷ್ಟ್ರವು ದೈವಿಕವಾದುದು. ಜನರು ದೈವಿಕರಾದವರು. ಸಾರ್ವಜನಿಕ ಸೇವೆಯು ಸರ್ವಶಕ್ತನ ಸೇವೆಯಾಗಿದೆ, ಮತ್ತು ನಾನು ಆ ಮನಸ್ಥಿತಿಯೊಂದಿಗೆ ಕೆಲಸ ಮಾಡುತ್ತೇನೆ. ಆದ್ದರಿಂದ, ನಾನು ಎಂದಿಗೂ ಒಂಟಿತನವನ್ನು ಎದುರಿಸಬೇಕಾಗಿಲ್ಲ. ಕೋವಿಡ್-19 ಲಾಕ್‌ಡೌನ್‌ ಸಮಯದಲ್ಲಿಯೂ, ಪ್ರಯಾಣವನ್ನು ನಿರ್ಬಂಧಿಸಿದಾಗ, ನಾನು ನನ್ನನ್ನು ತೊಡಗಿಸಿಕೊಂಡಿದ್ದೆ. ನಾನು ಆಡಳಿತವನ್ನು ವೀಡಿಯೊ ಕಾನ್ಫರೆನ್ಸಿಂಗ್‌ ಅಳವಡಿಸಿಕೊಂಡೆ, ಮನೆಯಿಂದ ಕೆಲಸ ಮಾಡುವ ಮಾದರಿಯನ್ನು ಅಭಿವೃದ್ಧಿಪಡಿಸಿದೆ ಮತ್ತು ಕೆಲಸ ಎಂದಿಗೂ ನಿಲ್ಲುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ವರ್ಚುವಲ್ ಸಭೆಗಳನ್ನು ಮುಂದುವರಿಸಿದೆ. ನಾನು ಯಾವಾಗಲೂ ನನ್ನನ್ನು ಕಾರ್ಯೋನ್ಮುಖನಾಗಿಸಿಕೊಂಡಿದ್ದೆ. ಅಲ್ಲದೆ, ನಾನು ಜನರೊಂದಿಗೆ ಸಂಪರ್ಕದಲ್ಲಿರಲು ಪ್ರಯತ್ನಿಸಿದೆ. ನಾನು ಪಕ್ಷದ ಹಿರಿಯ ಕಾರ್ಯಕರ್ತರನ್ನು, 70+ ವರ್ಷ ವಯಸ್ಸಿನವರಿಗೆ ಕರೆ ಮಾಡಿ ಮಾತನಾಡಿಸಲು ನಿರ್ಧರಿಸಿದೆ. ಅವರೆಲ್ಲಾ ತಳಮಟ್ಟದ ಕಾರ್ಯಕರ್ತರು, ಅನೇಕರು ವಿನಮ್ರ ಹಿನ್ನೆಲೆಯಿಂದ ಬಂದವರು, ಅವರು ದೇಶ ಸೇವೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. ನಾನು ವೈಯಕ್ತಿಕವಾಗಿ ಅವರಿಗೆ ಕರೆ ಮಾಡಿ ಕೇಳಿದೆ: ನಿಮಗೆ ಹೇಗನಿಸುತ್ತಿದೆ? ನಿಮ್ಮ ಕುಟುಂಬ ಹೇಗಿದೆ? ಸಾಂಕ್ರಾಮಿಕ ಸಮಯದಲ್ಲಿ ನಿಮ್ಮ ಪ್ರದೇಶದಲ್ಲಿನ ವಿದ್ಯಮಾನಗಳು ಹೇಗಿವೆ? ಇದು ಅವರೊಂದಿಗಿನ ನನ್ನ ಬಂಧವನ್ನು ಬಲಪಡಿಸಿತು, ಮತ್ತು ಅವರು ಭಾವುಕರಾದರು. ಅವರು ಹೇಳುತ್ತಿದ್ದರು, "ಅವರ ಹೆಗಲ ಮೇಲೆ ಎಲ್ಲಾ ಜವಾಬ್ದಾರಿಗಳಿದ್ದರೂ, ಈ ಸಮಯದಲ್ಲಿ ಅವರು ಇನ್ನೂ ನಮ್ಮನ್ನು ನೆನಪಿಸಿಕೊಳ್ಳುತ್ತಾರೆ!" ಎಂದು ನನ್ನ ಕುರಿತಾಗಿ ಅವರು ಭಾವುಕರಾಗಿದ್ದರು. ಸಾಂಕ್ರಾಮಿಕ ಸಮಯದಲ್ಲಿ, ನಾನು ಪ್ರತಿದಿನ ತಪ್ಪದೆ ಇಂತಹ 30-40 ಕರೆಗಳನ್ನು ಮಾಡಿದ್ದೇನೆ. ಇದು ನನಗೆ ಅಪಾರ ಸಂತೋಷವನ್ನು ನೀಡಿತು, ಏಕೆಂದರೆ ನಾನು ಹಳೆಯ ಸಹೋದ್ಯೋಗಿಗಳೊಂದಿಗೆ ಮರುಸಂಪರ್ಕಿಸಲು ಮತ್ತು ಹಿಂದಿನ ನೆನಪುಗಳನ್ನು ಮರುಪರಿಶೀಲಿಸಲು ಸಾಧ್ಯವಾಯಿತು. ಆದ್ದರಿಂದ, ನನಗೆ, ಒಂಟಿತನವು ಅಸ್ತಿತ್ವದಲ್ಲಿಲ್ಲ. ನನ್ನನ್ನು ಕಾರ್ಯನಿರತವಾಗಿ ಮತ್ತು ಸಂಪರ್ಕದಲ್ಲಿಡಲು ನಾನು ಯಾವಾಗಲೂ ಮಾರ್ಗಗಳನ್ನು ಕಂಡುಕೊಳ್ಳುತ್ತೇನೆ. ಅಲ್ಲದೆ, ನನಗೆ ನನ್ನೊಂದಿಗೆ ಮಾತನಾಡುವ ಅಭ್ಯಾಸವಿದೆ. ನನ್ನ ಆರಂಭಿಕ ವರ್ಷಗಳಲ್ಲಿ ಹಿಮಾಲಯದಲ್ಲಿ ನಾನು ಕಳೆದ ಸಮಯವು ಇದಕ್ಕೆ ನನಗೆ ಬಹಳ ಸಹಾಯ ಮಾಡಿದೆ.

ಲೆಕ್ಸ್ ಫ್ರಿಡ್ಮನ್: ನಿಮ್ಮ ಪರಿಚಯವಿರುವ ಎಲ್ಲ ಜನರ ಬಾಯಿಂದ, ನೀವು ಕಠಿಣ ಪರಿಶ್ರಮದ ವ್ಯಕ್ತಿ ಎಂದು ನಾನು ಕೇಳಲ್ಪಟ್ಟಿದ್ದೇನೆ. ಇದರ ಹಿಂದೆ ನಿಮ್ಮ ಮನಸ್ಥಿತಿ ಏನು? ನೀವು ಪ್ರತಿದಿನ ಅಷ್ಟು ದೀರ್ಘಕಾಲ ಕೆಲಸ ಮಾಡುತ್ತೀರಿ. ನೀವು ಎಂದಿಗೂ ದಣಿದಿಲ್ಲವೇ? ಇಷ್ಟೆಲ್ಲಾ ವಿಚಾರಗಳಲ್ಲಿ ನಿಮ್ಮ ಶಕ್ತಿ ಮತ್ತು ತಾಳ್ಮೆಯ ಮೂಲ ಯಾವುದು?

ಪ್ರಧಾನಮಂತ್ರಿ: ನೋಡಿ, ಮೊದಲನೆಯದಾಗಿ, ನಾನು ಮಾತ್ರ ಕಷ್ಟಪಟ್ಟು ಕೆಲಸ ಮಾಡುತ್ತಿದ್ದೇನೆ ಎಂದು ನಾನು ನಂಬುವುದಿಲ್ಲ. ನಾನು ಸುತ್ತಲೂ ನೋಡಿದಾಗ, ನನಗಿಂತ ಹೆಚ್ಚು ಕಷ್ಟಪಟ್ಟು ಕೆಲಸ ಮಾಡುವ ಅನೇಕ ಜನರನ್ನು ನಾನು ನೋಡುತ್ತೇನೆ. ನಾನು ಒಬ್ಬ ರೈತನ ಬಗ್ಗೆ ಯೋಚಿಸಿದಾಗ, ಅವರು ತೆರೆದ ಆಕಾಶದ ಕೆಳಗೆ ಬೆವರು ಸುರಿಸುತ್ತಾ ಎಷ್ಟು ಶ್ರಮ ವಹಿಸುತ್ತಾರೆಂದು ನನಗೆ ಅರಿವಾಗುತ್ತದೆ. ನಮ್ಮ ಸೈನಿಕರನ್ನು ನೋಡಿದಾಗ, ಅವರು ನಮ್ಮ ರಾಷ್ಟ್ರವನ್ನು ರಕ್ಷಿಸಲು ಹಗಲು ರಾತ್ರಿ ದಣಿವರಿಯದೆ ಕೆಲಸ ಮಾಡುವ ವಿಪರೀತ ಪರಿಸ್ಥಿತಿಗಳನ್ನು ಹೇಗೆ ಸಹಿಸಿಕೊಳ್ಳುತ್ತಾರೆ ಎಂದು ನಾನು ಯೋಚಿಸುತ್ತೇನೆ- ಕೆಲವರು ಹಿಮದಲ್ಲಿ, ಕೆಲವರು ಮರುಭೂಮಿಯಲ್ಲಿ ಮತ್ತು ಕೆಲವರು ಸಾಗರದಲ್ಲಿ. ನಾನು ಒಬ್ಬ ಕಾರ್ಮಿಕನನ್ನು ನೋಡಿದಾಗ, ಅವರ ಕಠಿಣ ಪರಿಶ್ರಮವನ್ನು ನೋಡಿ ನಾನು ಆಶ್ಚರ್ಯಚಕಿತನಾಗುತ್ತೇನೆ. ಪ್ರತಿ ಮನೆಯಲ್ಲೂ ತಾಯಂದಿರು ಮತ್ತು ಸಹೋದರಿಯರ ಬಗ್ಗೆ ನಾನು ಯೋಚಿಸಿದಾಗ, ಅವರು ತಮ್ಮ ಕುಟುಂಬಗಳಿಗಾಗಿ ಎಷ್ಟು ಮಾಡುತ್ತಾರೆಂದು ನಾನು ನೋಡುತ್ತೇನೆ – ಮನೆಯಲ್ಲಿ ಎಲ್ಲರಿಗಿಂತ ಮೊದಲು ಏಳುವುದು, ಕೊನೆಯದಾಗಿ ಮಲಗುವುದು, ಎಲ್ಲರನ್ನೂ ನೋಡಿಕೊಳ್ಳುವುದು ಮತ್ತು ಸಾಮಾಜಿಕ ಜವಾಬ್ದಾರಿಗಳನ್ನು ನಿರ್ವಹಿಸುವುದು. ಆದ್ದರಿಂದ ನಾನು ಈ ಎಲ್ಲದರ ಬಗ್ಗೆ ಯೋಚಿಸಿದಾಗ, ನಾನು ನನ್ನನ್ನು ಕೇಳಿಕೊಳ್ಳುತ್ತೇನೆ: ನಾನು ಹೇಗೆ ಮಲಗಲು ಸಾಧ್ಯ? ನಾನು ಹೇಗೆ ವಿಶ್ರಾಂತಿ ಪಡೆಯಲುಸಾಧ್ಯ? ನನ್ನ ಸುತ್ತಲಿನ ಜನರು - ಪ್ರತಿಯೊಬ್ಬ ಭಾರತೀಯನ ಕಠಿಣ ಪರಿಶ್ರಮ ನನ್ನನ್ನು ಪ್ರೇರೇಪಿಸುತ್ತದೆ. ಎರಡನೆಯದಾಗಿ, ನನ್ನ ಜವಾಬ್ದಾರಿಯು ನನ್ನನ್ನು ಓಡುವಂತೆ ಮಾಡುತ್ತದೆ. ದೇಶದ ಜನರು ನನಗೆ ಒಂದು ಕರ್ತವ್ಯವನ್ನು ವಹಿಸಿದ್ದಾರೆ, ಮತ್ತು ನಾನು ಅಧಿಕಾರವನ್ನು ಅನುಭವಿಸಲು ಇಲ್ಲಿಲ್ಲ, ಬದಲಿಗೆ ಸಂಪೂರ್ಣ ಸಮರ್ಪಣೆಯಿಂದ ರಾಷ್ಟ್ರದ ಸೇವೆ ಮಾಡಲು ಬಂದಿದ್ದೇನೆ ಎಂದು ನಾನು ಭಾವಿಸುತ್ತೇನೆ. ನಾನು ಎರಡು ಕೆಲಸಗಳನ್ನು ಮಾಡಲು ಸಾಧ್ಯವಾಗದಿರಬಹುದು, ಆದರೆ ನನ್ನ ಪ್ರಯತ್ನಗಳಲ್ಲಿ ಎಂದಿಗೂ ಕೊರತೆಯಾಗುವುದಿಲ್ಲ. ನಾನು 2014ರಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾಗ ಮತ್ತು ನಾನು ಗುಜರಾತ್‌ನಲ್ಲಿದ್ದಾಗ ಮತ್ತು ನಂತರ ದೆಹಲಿಗೆ ಬಂದಾಗಲೂ, ನಾನು ಎಂದಿಗೂ ಕಠಿಣ ಪರಿಶ್ರಮದಿಂದ ಹಿಂದೆ ಸರಿಯುವುದಿಲ್ಲ ಎಂದು ದೇಶವಾಸಿಗಳಿಗೆ ಭರವಸೆ ನೀಡಿದ್ದೆ. ಎರಡನೆಯದಾಗಿ, ನಾನು ಎಂದಿಗೂ ಕೆಟ್ಟ ಉದ್ದೇಶಗಳೊಂದಿಗೆ ವರ್ತಿಸುವುದಿಲ್ಲ ಎಂದು ಹೇಳಿದೆ. ಮೂರನೆಯದಾಗಿ, ನಾನು ಎಂದಿಗೂ ವೈಯಕ್ತಿಕ ಲಾಭಕ್ಕಾಗಿ ಕೆಲಸ ಮಾಡುವುದಿಲ್ಲ ಎಂದು ಹೇಳಿದೆ. ಇಂದು, 24 ವರ್ಷಗಳ ಸರ್ಕಾರದ ಮುಖ್ಯಸ್ಥನಾಗಿದ್ದ ನಂತರ, ನಾನು ಈ ಮೂರು ತತ್ವಗಳಿಗೆ ಬದ್ಧನಾಗಿದ್ದೇನೆ. ಮತ್ತು ನಾನು ಅದನ್ನು ಮಾಡುತ್ತೇನೆ. ಮತ್ತು ನನ್ನ ದೇಶದ 14೦ ಕೋಟಿ ಜನರಿಗೆ ಅವರ ಆಕಾಂಕ್ಷೆಗಳಿಗಾಗಿ, ಅವರ ಅಗತ್ಯಗಳಿಗಾಗಿ ಸೇವೆ ಸಲ್ಲಿಸಲು ನಾನು ನನ್ನ ಪಾಲಿನ ಅತ್ಯುತ್ತಮವಾದದ್ದನ್ನು ನೀಡುವುದನ್ನು ಮುಂದುವರಿಸುತ್ತೇನೆ. ನನ್ನ ಶಕ್ತಿ ಮತ್ತು ಬದ್ಧತೆ ಎಂದಿನಂತೆಯೇ ಇದೆ!

ಲೆಕ್ಸ್ ಫ್ರಿಡ್ಮನ್: ಒಬ್ಬ ಎಂಜಿನಿಯರ್ ಮತ್ತು ಗಣಿತ ಪ್ರೇಮಿಯಾಗಿ, ನಾನು ಕೇಳಲೇಬೇಕು - ಶ್ರೀನಿವಾಸ ರಾಮಾನುಜನ್ ಒಂದು ಶತಮಾನದ ಹಿಂದೆ ಭಾರತೀಯ ಗಣಿತಜ್ಞರಾಗಿದ್ದರು. ಅವರನ್ನು ಇತಿಹಾಸದ ಶ್ರೇಷ್ಠ ಗಣಿತಜ್ಞರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಸಂಪೂರ್ಣವಾಗಿ ಸ್ವಯಂ-ಕಲಿಕೆಯುಳ್ಳ ಅವರು ಬಡತನದಲ್ಲಿ ಬೆಳೆದರು. ನೀವು ಆಗಾಗ್ಗೆ ಅವರ ಬಗ್ಗೆ ಮಾತನಾಡಿದ್ದೀರಿ. ನೀವು ಅವರಿಂದ ಯಾವ ಸ್ಫೂರ್ತಿಯನ್ನು ಪಡೆಯುತ್ತೀರಿ?

ಪ್ರಧಾನಮಂತ್ರಿ: ನೋಡಿ, ನನಗೆ ಅವರ ಬಗ್ಗೆ ಅಪಾರ ಗೌರವವಿದೆ, ಮತ್ತು ನನ್ನ ದೇಶದಲ್ಲಿ, ಪ್ರತಿಯೊಬ್ಬರೂ ಅವರನ್ನು ಗೌರವಿಸುತ್ತಾರೆ. ಏಕೆಂದರೆ ವಿಜ್ಞಾನ ಮತ್ತು ಆಧ್ಯಾತ್ಮಿಕತೆಯ ನಡುವೆ ಆಳವಾದ ಸಂಬಂಧವಿದೆ ಎಂದು ನಾನು ನಂಬುತ್ತೇನೆ. ನೀವು ಸೂಕ್ಷ್ಮವಾಗಿ ಗಮನಿಸಿದರೆ, ವೈಜ್ಞಾನಿಕವಾಗಿ ಮುಂದುವರಿದಿರುವ ಅನೇಕ ಮನಸ್ಸುಗಳು ಸಹ ಆತ್ಮಿಕವಾಗಿ ಮುಂದುವರಿದಿವೆ—ಅವು ಆಧ್ಯಾತ್ಮಿಕತೆಯಿಂದ ಸಂಪರ್ಕ ಕಡಿದುಕೊಂಡಿಲ್ಲ. ಶ್ರೀನಿವಾಸ ರಾಮಾನುಜನ್ ಅವರು ತಮ್ಮ ಗಣಿತದ ಕಲ್ಪನೆಗಳು ಅವರು ಪೂಜಿಸುವ ದೇವತೆಯಿಂದ ಬಂದವು ಎಂದು ಹೇಳುತ್ತಿದ್ದರು. ಇದರರ್ಥ ಆಲೋಚನೆಗಳು ಆಳವಾದ ಸಮರ್ಪಣೆಯಿಂದ ಬರುತ್ತವೆ. ಮತ್ತು ಸಮರ್ಪಣೆ ಎಂದರೆ ಕೇವಲ ಕಠಿಣ ಪರಿಶ್ರಮವಲ್ಲ - ಅದು ತನ್ನನ್ನು ಸಂಪೂರ್ಣವಾಗಿ ಒಂದು ಉದ್ದೇಶಕ್ಕಾಗಿ ಸಮರ್ಪಿಸಿಕೊಳ್ಳುವುದು, ತನ್ನಲ್ಲಿ ತಾನು ಆಳವಾಗಿ ಮುಳುಗಿಸಿಕೊಳ್ಳುವುದು, ತಮ್ಮ ಕೆಲಸದೊಂದಿಗೆ ಲೀನವಾಗುವುದು. ಜ್ಞಾನದ ವಿವಿಧ ಮೂಲಗಳಿಗೆ ನಾವು ಹೆಚ್ಚು ಮುಕ್ತರಾಗಿದ್ದೇವೆ, ನಾವು ಹೆಚ್ಚು ವಿಚಾರಗಳನ್ನು ಸ್ವೀಕರಿಸುತ್ತೇವೆ. ಮಾಹಿತಿ ಮತ್ತು ಜ್ಞಾನದ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳುವುದು ಸಹ ಮುಖ್ಯವಾಗಿದೆ. ಕೆಲವರು ಮಾಹಿತಿಯನ್ನು ಜ್ಞಾನವೆಂದು ತಪ್ಪಾಗಿ ಭಾವಿಸುತ್ತಾರೆ- ಅವರು ಅಪಾರ ಪ್ರಮಾಣದ ಮಾಹಿತಿಯನ್ನು ಸಂಗ್ರಹಿಸುತ್ತಾರೆ ಮತ್ತು ಅದನ್ನು ತಮ್ಮೊಂದಿಗೆ ಹೊತ್ತು ತಿರುಗುತ್ತಾರೆ. ಆದರೆ ಮಾಹಿತಿಯನ್ನು ಹೊಂದಿರುವುದು ಎಂದರೆ ಜ್ಞಾನವನ್ನು ಹೊಂದಿರುವುದು ಎಂದು ನಾನು ನಂಬುವುದಿಲ್ಲ. ಜ್ಞಾನವು ಒಂದು ಶಿಸ್ತು- ಅದು ಪ್ರಕ್ರಿಯೆಯ ಮೂಲಕ ಕ್ರಮೇಣ ವಿಕಸನಗೊಳ್ಳುತ್ತದೆ. ನಾವು ಈ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಅದನ್ನು ಬುದ್ಧಿವಂತಿಕೆಯಿಂದ ನಿರ್ವಹಿಸಬೇಕು.

ಲೆಕ್ಸ್ ಫ್ರಿಡ್ಮನ್: ನೀವು ನಿರ್ಣಾಯಕ ನಾಯಕನ ಚಿತ್ರಣವನ್ನು ಹೊಂದಿದ್ದೀರಿ. ಆದ್ದರಿಂದ, ನಿರ್ಧಾರಗಳನ್ನು ತೆಗೆದುಕೊಳ್ಳುವ ಪ್ರಕ್ರಿಯೆಯ ಬಗ್ಗೆ ನೀವು ನನಗೆ ಏನಾದರೂ ಹೇಳಬಹುದೇ? ನೀವು ಹೇಗೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ? ನಿಮ್ಮ ಪ್ರಕ್ರಿಯೆ ಏನು? ಏನಾದರೂ ಮಹತ್ವದ ಸಂಗತಿ ಇದ್ದಾಗ, ಸ್ಪಷ್ಟ ಪೂರ್ವನಿದರ್ಶನವಿಲ್ಲದಿದ್ದಾಗ, ಸಾಕಷ್ಟು ಅನಿಶ್ಚಿತತೆ ಇರುವಾಗ, ಮತ್ತು ನೀವು ಸಮತೋಲನವನ್ನು ಸಾಧಿಸಬೇಕಾದಾಗ, ನೀವು ಹೇಗೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ?

ಪ್ರಧಾನಮಂತ್ರಿ: ಇದರಲ್ಲಿ ಹಲವು ಅಂಶಗಳಿವೆ. ಒಂದು, ದೇಶದ 85 ರಿಂದ 90 ಪ್ರತಿಶತದಷ್ಟು ಜಿಲ್ಲೆಗಳಲ್ಲಿ ಒಂದು ರಾತ್ರಿ ಕಳೆದ ಭಾರತದ ಏಕೈಕ ರಾಜಕಾರಣಿ ನಾನು ಎಂದು ನಾನು ನಂಬುತ್ತೇನೆ. ನನ್ನ ಹಿಂದಿನ ಜನ್ಮದಲ್ಲಿ, ನಾನು ವ್ಯಾಪಕವಾಗಿ ಪ್ರಯಾಣಿಸುತ್ತಿದ್ದೆ. ಅದರಿಂದ ನಾನು ಕಲಿತದ್ದು ಮತ್ತು ಗಮನಿಸಿದ್ದು ತಳಮಟ್ಟದ ಜ್ಞಾನವೇ ಹೊರತು ಪುಸ್ತಕಗಳಲ್ಲಿ ಓದಿದ ಅಥವಾ ಇತರರು ಹೇಳಿದ ವಿಷಯವಲ್ಲ. ಎರಡನೆಯದಾಗಿ, ಆಡಳಿತದ ದೃಷ್ಟಿಕೋನದಿಂದ, ನನ್ನನ್ನು ತಡೆಹಿಡಿಯುವ ಅಥವಾ ನನ್ನ ಕಾರ್ಯಗಳನ್ನು ನಿರ್ದೇಶಿಸುವ ಯಾವುದೇ ಹೊರೆಯನ್ನು ನಾನು ಒಯ್ಯುವುದಿಲ್ಲ. ಮೂರನೆಯದಾಗಿ, ನಿರ್ಧಾರ ತೆಗೆದುಕೊಳ್ಳಲು ನನಗೆ ಸರಳ ಮಾನದಂಡವಿದೆ: ನನ್ನ ದೇಶವು ಮೊದಲು ಬರುತ್ತದೆ. ನಾನು ಯಾವಾಗಲೂ ನನ್ನನ್ನು ಕೇಳಿಕೊಳ್ಳುತ್ತೇನೆ: ನಾನು ಮಾಡುತ್ತಿರುವುದು ನನ್ನ ರಾಷ್ಟ್ರಕ್ಕೆ ಯಾವುದೇ ರೀತಿಯಲ್ಲಿ ಹಾನಿ ಮಾಡುತ್ತಿಲ್ಲವೇ? ಮಹಾತ್ಮ ಗಾಂಧಿ ಆಗಾಗ್ಗೆ ಹೇಳುತ್ತಿದ್ದರು: "ನಿರ್ಧಾರ ತೆಗೆದುಕೊಳ್ಳುವಲ್ಲಿ ನೀವು ಸಂದಿಗ್ಧತೆಯನ್ನು ಎದುರಿಸಿದಾಗಲೆಲ್ಲಾ, ನೀವು ಭೇಟಿಯಾದ ಅತ್ಯಂತ ಬಡ ವ್ಯಕ್ತಿಯ ಮುಖದ ಬಗ್ಗೆ ಯೋಚಿಸಿ. ನಿಮ್ಮ ನಿರ್ಧಾರವು ಅವರಿಗೆ ಸಹಾಯ ಮಾಡುತ್ತದೆಯೇ ಎಂದು ಯೋಚಿಸಿ? ಆಗ ನಿಮ್ಮ ನಿರ್ಧಾರ ಸರಿಯಾಗಿರುತ್ತದೆ. ಈ ತತ್ವವು ನನಗೆ ಬಹಳಷ್ಟು ಸಹಾಯ ಮಾಡುತ್ತದೆ. ನಾನು ಸದಾ ಸಾಮಾನ್ಯ ಜನರ ಬಗ್ಗೆ ಯೋಚಿಸಲು ಪ್ರಯತ್ನಿಸುತ್ತೇನೆ ಮತ್ತು ನನ್ನ ನಿರ್ಧಾರವು ಅವರಿಗೆ ಪ್ರಯೋಜನವನ್ನು ನೀಡುತ್ತದೆಯೇ ಎಂದು ಯೋಚಿಸುತ್ತೇನೆ. ಮತ್ತೊಂದು ಪ್ರಮುಖ ಅಂಶವೆಂದರೆ ನಾನು ಒಳ್ಳೆಯ ಸಂಪರ್ಕ ಜಾಲವನ್ನು ಹೊಂದಿದ್ದೇನೆ. ಲೈವ್ ಮಾಹಿತಿ ಹರಿವಿನ ಅನೇಕ ಜಾಲಗಳನ್ನು ನಾನು ಹೊಂದಿರುವುದರಿಂದ ನನ್ನ ಸರ್ಕಾರಿ ಅಧಿಕಾರಿಗಳು ಅಸೂಯೆ ಅಥವಾ ನಿರಾಶೆಯನ್ನು ಅನುಭವಿಸಬಹುದು. ನಾನು ಕೇವಲ ಬ್ರೀಫಿಂಗ್‌ಗಳನ್ನು ಮಾತ್ರ ಅವಲಂಬಿಸಿಲ್ಲ - ನನ್ನ ಬಳಿ ಹಲವಾರು ಮಾಹಿತಿ ಆಕರಗಳಿವೆ ಮತ್ತು ಅವುಗಳಲ್ಲಿ ಅನೇಕವು ಲೈವ್‌ಆಗಿವೆ. ಆದ್ದರಿಂದ, ನಾನು ಅವರಿಂದ ಸಾಕಷ್ಟು ಮಾಹಿತಿಯನ್ನು ಪಡೆಯುತ್ತೇನೆ. ನಾನು ಅನೇಕ ಮೂಲಗಳಿಂದ ಮಾಹಿತಿಯನ್ನು ಪಡೆಯುತ್ತೇನೆ. ಯಾರಾದರೂ ನನಗೆ ಸಂಕ್ಷಿಪ್ತವಾಗಿ ಹೇಳಿದರೆ ನಾನು ಆ ಮಾಹಿತಿಯನ್ನು ಅವಲಂಬಿಸುವುದಿಲ್ಲ. ಇತರ ಆಯಾಮಗಳೂ ಇರುತ್ತವೆ. ಅಲ್ಲದೆ, ನಾನು ವಿದ್ಯಾರ್ಥಿಯ ಮನಸ್ಥಿತಿಯನ್ನು ಹೊಂದಿದ್ದೇನೆ. ಒಬ್ಬ ಅಧಿಕಾರಿ ನನಗೆ ಏನನ್ನಾದರೂ ಹೇಳಿದರೆ, ನಾನು ಅವರನ್ನು ಸಂಪೂರ್ಣವಾಗಿ ಪ್ರಶ್ನಿಸುತ್ತೇನೆ - "ಇದು ಏಕೆ? ಮುಂದೆ ಏನಾಗುತ್ತದೆ? ಇದು ಹೇಗೆ ಕೆಲಸ ಮಾಡುತ್ತದೆ?" ನನ್ನ ಬಳಿ ವಿಭಿನ್ನ ಮಾಹಿತಿ ಇದ್ದರೆ, ನಾನು ವಕೀಲನಾಗಿ ವರ್ತಿಸುತ್ತೇನೆ ಮತ್ತು ಅವರ ಅಭಿಪ್ರಾಯಗಳನ್ನು ಪ್ರಶ್ನಿಸುತ್ತೇನೆ. ವಿಚಾರಗಳ ಈ ಆಳವಾದ ಮಂಥನವು ವಿಷಯದ ಸಾರವನ್ನು ಹೊರತೆಗೆಯಲು ನನಗೆ ಸಹಾಯ ಮಾಡುತ್ತದೆ. ಎರಡನೆಯದಾಗಿ, ನಾನು ಒಂದು ನಿರ್ಧಾರವನ್ನು ತೆಗೆದುಕೊಂಡಾಗ, ಅದನ್ನು ಸಮಾನ ಮನಸ್ಕ ವ್ಯಕ್ತಿಗಳೊಂದಿಗೆ ಆಕಸ್ಮಿಕವಾಗಿ ಹಂಚಿಕೊಳ್ಳುವ ಮೂಲಕ ಮತ್ತು ಅವರ ಪ್ರತಿಕ್ರಿಯೆಗಳನ್ನು ಗಮನಿಸುವ ಮೂಲಕ ನಾನು ಅದನ್ನು ಪರೀಕ್ಷಿಸುತ್ತೇನೆ. ಒಮ್ಮೆ ನನಗೆ ಮನವರಿಕೆಯಾದ ನಂತರ, ನಾನು ಪೂರ್ಣ ವಿಶ್ವಾಸದಿಂದ ಮುಂದುವರಿಯುತ್ತೇನೆ. ಈ ಪ್ರಕ್ರಿಯೆಯು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ನನ್ನ ವೇಗ ತುಂಬಾ ಹೆಚ್ಚು. ನಾನು ನಿಮಗೆ ಒಂದು ಉದಾಹರಣೆಯನ್ನು ನೀಡುತ್ತೇನೆ. ಕೋವಿಡ್-19 ಸಮಯದಲ್ಲಿ, ನಾನು ಹೇಗೆ ನಿರ್ಧಾರಗಳನ್ನು ತೆಗೆದುಕೊಂಡೆ? ನಾನು ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞರನ್ನು ಭೇಟಿಯಾದೆ, ಮತ್ತು ಅವರು ನನಗೆ ವಿವಿಧ ಸಿದ್ಧಾಂತಗಳನ್ನು ನೀಡಿದರು - "ಈ ದೇಶ ಇದನ್ನು ಮಾಡಿತು, ಆ ದೇಶ ಅದನ್ನು ಮಾಡಿತು. ನೀವೂ ಅದನ್ನೇ ಮಾಡಬೇಕು" ಎಂದರು. ಉನ್ನತ ಅರ್ಥಶಾಸ್ತ್ರಜ್ಞರು ನನ್ನ ಮನಸ್ಸನ್ನು ಕೆಣಕುತ್ತಿದ್ದರು. ರಾಜಕೀಯ ಪಕ್ಷಗಳು ನನ್ನ ಮೇಲೆ ಒತ್ತಡ ಹೇರಿದವು- "ಜನರಿಗೆ ಇಷ್ಟು ಹಣವನ್ನು ಕೊಡಿ, ಅದನ್ನು ಮಾಡಿ!" ಎಂದವು.  ಆದರೆ ನಾನು ಯಾವುದೇ ಆತುರದ ಕ್ರಮ ಕೈಗೊಳ್ಳಲಿಲ್ಲ. ನಾನು ಪರಿಸ್ಥಿತಿಯನ್ನು ಆಳವಾಗಿ ವಿಶ್ಲೇಷಿಸಿದೆ. ನಂತರ ನಾನು ನನ್ನ ದೇಶದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ತೆಗೆದುಕೊಂಡೆ. "ಯಾವ ಭಾರತೀಯನೂ ಹಸಿವಿನಿಂದ ಬಳಲಬಾರದು" ಎಂದು ನಾನು ನಿರ್ಧರಿಸಿದೆ. "ಸಾಮಾಜಿಕ ಅಶಾಂತಿಯನ್ನು ತಪ್ಪಿಸಲು ಮೂಲಭೂತ ಅಗತ್ಯಗಳನ್ನು ಪೂರೈಸಬೇಕು." ನಾನು ಈ ವಿಚಾರಗಳನ್ನು ನನ್ನ ಮನಸ್ಸಿನಲ್ಲಿ ಬೆಳೆಸಿಕೊಂಡೆ. ಆ ಸಮಯದಲ್ಲಿ, ಪ್ರಪಂಚದಾದ್ಯಂತ ಲಾಕ್ಡೌನ್ ಇತ್ತು ಮತ್ತು ಜಾಗತಿಕ ಆರ್ಥಿಕತೆಯು ಕುಸಿಯುತ್ತಿತ್ತು. ನಾನು ಖಜಾನೆಯನ್ನು ತೆರೆಯಬೇಕು, ಕರೆನ್ಸಿ ನೋಟುಗಳನ್ನು ಮುದ್ರಿಸಬೇಕು ಮತ್ತು ಅದನ್ನು ಜನರಿಗೆ ವಿತರಿಸಬೇಕು ಎಂದು ಜಗತ್ತು ಬಯಸಿತು. ಅದು ಯಾವ ರೀತಿಯ ಆರ್ಥಿಕ ಮಾದರಿ? ನಾನು ಆ ಮಾರ್ಗವನ್ನು ಅನುಸರಿಸಲು ಬಯಸಲಿಲ್ಲ. ಆದರೆ ನನ್ನ ಅನುಭವವು ನಾನು ಆಯ್ಕೆ ಮಾಡಿದ ಮಾರ್ಗ, ತಜ್ಞರಿಂದ ಪಡೆದ ಅಭಿಪ್ರಾಯಗಳು, ನಾನು ಅವುಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದೆ ಎಂದು ಹೇಳುತ್ತದೆ. ನಾನು ಅವರನ್ನು ವಿರೋಧಿಸಲೂ ಇಲ್ಲ. ಬದಲಾಗಿ, ನಾನು ಭಾರತದ ಅನನ್ಯ ಅಗತ್ಯಗಳು ಮತ್ತು ಅನುಭವಗಳ ಆಧಾರದ ಮೇಲೆ ನೀತಿಗಳನ್ನು ರೂಪಿಸಿದೆ ಮತ್ತು ಅದಕ್ಕೆ ಅನುಗುಣವಾಗಿ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಿದೆ. ಪರಿಣಾಮವಾಗಿ: ಕೋವಿಡ್ ನಂತರ ಅನೇಕ ದೇಶಗಳು ಭಾರಿ ಹಣದುಬ್ಬರವನ್ನು ಅನುಭವಿಸಿದರೂ, ನಮ್ಮ ದೇಶವು ಸ್ಥಿರವಾಗಿ ಉಳಿದಿದೆ. ಇಂದು, ನನ್ನ ದೇಶವು ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ - ಆ ಕಠಿಣ ಆದರೆ ಬುದ್ಧಿವಂತ ನಿರ್ಧಾರಗಳ ನೇರ ಫಲಿತಾಂಶವಾಗಿದೆ. ನಾನು ವಿವಿಧ ಸಿದ್ಧಾಂತಗಳಿಂದ ಪ್ರಲೋಭನೆಗೆ ಒಳಗಾಗಲಿಲ್ಲ. ಪತ್ರಿಕೆಗಳು ಅದನ್ನು ಇಷ್ಟಪಡುತ್ತವೆಯೋ ಇಲ್ಲವೋ ಎಂಬುದರ ಬಗ್ಗೆ ನಾನು ತಲೆಕೆಡಿಸಿಕೊಳ್ಳಲಿಲ್ಲ. ಅವರು ಅದರ ಬಗ್ಗೆ ಒಳ್ಳೆಯದು ಅಥವಾ ಕೆಟ್ಟದ್ದನ್ನು ಬರೆಯುತ್ತಾರೆಯೇ ಅಥವಾ ನನ್ನನ್ನು ಟೀಕಿಸುತ್ತಾರೆ. ನಾನು ಮೂಲಭೂತ ಅಂಶಗಳ ಮೇಲೆ ಕೇಂದ್ರೀಕರಿಸಿದೆ ಮತ್ತು ಅದರೊಂದಿಗೆ ಮುಂದುವರಿಯುತ್ತೇನೆ. ಇದು ನಮ್ಮ ಆರ್ಥಿಕತೆಗೆ ಸಹಾಯ ಮಾಡಿತು. ನನ್ನ ದೇಶದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮುಂದುವರಿಯುವುದು ನನ್ನ ಪ್ರಯತ್ನವಾಗಿತ್ತು. ಎರಡನೆಯದಾಗಿ, ನಾನು ಹೆಚ್ಚಿನ ರಿಸ್ಕ್‌ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದೇನೆ. ಒಂದು ನಿರ್ದಿಷ್ಟ ನಿರ್ಧಾರವು ನನ್ನನ್ನು ನೋಯಿಸುತ್ತದೆಯೇ ಎಂದು ನಾನು ಎಂದಿಗೂ ತಲೆಕೆಡಿಸಿಕೊಳ್ಳುವುದಿಲ್ಲ. ನನ್ನ ದೇಶ ಮತ್ತು ಜನರಿಗೆ ಸೂಕ್ತವಾಗಿದ್ದರೆ, ನಾನು ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಿದ್ಧನಿರುತ್ತೇನೆ. ನಾನು ಉತ್ತರದಾಯಿತ್ವ ತೆಗೆದುಕೊಳ್ಳುತ್ತೇನೆ. ಏನಾದರೂ ತಪ್ಪಾದರೆ, ನಾನು ಎಂದಿಗೂ ಇತರರನ್ನು ದೂಷಿಸುವುದಿಲ್ಲ. ನಾನು ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇನೆ. ಒಬ್ಬ ನಾಯಕನು ಉತ್ತರದಾಯಿತ್ವ ತೆಗೆದುಕೊಂಡಾಗ, ಅವನ ತಂಡವು ವಿಶ್ವಾಸವನ್ನು ಗಳಿಸುತ್ತದೆ. ಅವರಿಗೆ ಗೊತ್ತು, "ಈ ಮನುಷ್ಯ ನಮ್ಮನ್ನು ವಿಫಲರಾಗಲು ಬಿಡುವುದಿಲ್ಲ. ಅವರು ನಮ್ಮೊಂದಿಗೆ ನಿಲ್ಲುತ್ತಾರೆ, ಏಕೆಂದರೆ ನನ್ನ ನಿರ್ಧಾರಗಳು ಪ್ರಾಮಾಣಿಕ ಮತ್ತು ಉತ್ತಮ ನಂಬಿಕೆಯಿಂದ ಕೂಡಿವೆ" ಎಂದು. ತಪ್ಪುಗಳು ಸಂಭವಿಸಬಹುದು ಎಂದು ನಾನು ನನ್ನ ದೇಶವಾಸಿಗಳಿಗೆ ಹೇಳುತ್ತಿರುತ್ತೇನೆ. ನಾನು ಸಹ ಮನುಷ್ಯ ಮತ್ತು ತಪ್ಪುಗಳನ್ನು ಮಾಡಬಹುದು ಎಂದು ನಾನು ಈಗಾಗಲೇ ಜನರಿಗೆ ಹೇಳಿದ್ದೇನೆ. ಆದಾಗ್ಯೂ, ನನ್ನ ಉದ್ದೇಶ ಎಂದಿಗೂ ತಪ್ಪಾಗುವುದಿಲ್ಲ. ಜನರು ಸಹ ಈ ವಿಷಯಗಳನ್ನು ಅರಿತುಕೊಳ್ಳುತ್ತಾರೆ. 2013 ರಲ್ಲಿ ಮೋದಿ ಏನೋ ಹೇಳಿದ್ದರು, ಆದರೆ ಅದು ಆಗಲಿಲ್ಲ ಎಂದು ಅವರು ನೋಡುತ್ತಾರೆ. ಆದರೆ ನನ್ನ ಉದ್ದೇಶ ತಪ್ಪಲ್ಲ ಎಂದು ಅವರಿಗೆ ತಿಳಿದಿದೆ. ನಾನು ಒಳ್ಳೆಯ ಉದ್ದೇಶದಿಂದ ಏನನ್ನಾದರೂ ಮಾಡಲು ಬಯಸುತ್ತೇನೆ ಎಂದು ಅವರಿಗೆ ತಿಳಿದಿದೆ. ಅದಕ್ಕಾಗಿಯೇ, ಸಮಾಜವು ನನ್ನನ್ನು ನನ್ನಂತೆಯೇ ಸ್ವೀಕರಿಸುತ್ತದೆ.

ಲೆಕ್ಸ್ ಫ್ರಿಡ್ಮನ್: ಕೆಲವು ವಾರಗಳ ಹಿಂದೆ, ಫ್ರಾನ್ಸ್‌ನಲ್ಲಿ ನಡೆದ ಕೃತಕ ʻಎಐʼ (ಬುದ್ಧಿಮತ್ತೆ) ಶೃಂಗಸಭೆಯಲ್ಲಿ ನೀವು ʻಎಐʼ ಬಗ್ಗೆ ಅತ್ಯುತ್ತಮ ಭಾಷಣ ಮಾಡಿದ್ದೀರಿ. ಆ ಭಾಷಣದಲ್ಲಿ, ನೀವು ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ಎಐ ಎಂಜಿನಿಯರ್ ಗಳ ಬಗ್ಗೆ ಮಾತನಾಡಿದ್ದೀರಿ - ಬಹುಶಃ ವಿಶ್ವದ ಪ್ರತಿಭಾವಂತ ಎಂಜಿನಿಯರ್‌ಗಳ ಅತಿದೊಡ್ಡ ಭಂಡಾರಗಳಲ್ಲಿ ಭಾರತ ಒಂದಾಗಿದೆ. ʻಎಐʼನಲ್ಲಿ ಭಾರತವು ಜಾಗತಿಕ ನಾಯಕತ್ವವನ್ನು ಹೇಗೆ ಸಾಧಿಸಬಹುದು? ಇದೀಗ, ಇದು ಅಮೆರಿಕದ ನಂತರದ ಸ್ಥಾನದಲ್ಲಿದೆ. ಇತರ ರಾಷ್ಟ್ರಗಳನ್ನು ಮೀರಿಸಲು ಮತ್ತು ʻಎಐʼನಲ್ಲಿ ಅತ್ಯುತ್ತಮವಾಗಲು ಭಾರತ ಏನು ಮಾಡಬಹುದು?

ಪ್ರಧಾನಮಂತ್ರಿ: ನಾನು ಹೇಳಲು ಹೊರಟಿರುವುದು ಸ್ವಲ್ಪ ದಿಟ್ಟತನದಂತೆ ತೋರಬಹುದು, ಮತ್ತು ಕೆಲವರು ಒಪ್ಪದಿರಬಹುದು. ಆದರೆ ನೀವು ಕೇಳಿರುವುದರಿಂದ, ನಾನು ನನ್ನ ಹೃದಯದಿಂದ ಮಾತನಾಡುತ್ತೇನೆ. ʻಎಐʼನಲ್ಲಿ ಜಗತ್ತು ಏನೇ ಮಾಡಿದರೂ, ಭಾರತವಿಲ್ಲದೆ, ʻಎಐʼ ಅಪೂರ್ಣ. ಇದು ನಾನು ನೀಡುತ್ತಿರುವ ಅತ್ಯಂತ ಜವಾಬ್ದಾರಿಯುತ ಹೇಳಿಕೆ. ಅದರ ಬಗ್ಗೆ ಯೋಚಿಸಿ- ʻಎಐʼ ವಿಚಾರದಲ್ಲಿ ನಿಮ್ಮ ಸ್ವಂತ ಅನುಭವ ಏನು? ಪ್ಯಾರಿಸ್‌ನಲ್ಲಿ ನನ್ನ ಭಾಷಣವನ್ನು ನೀವು ಕೇಳಿದ್ದೀರಿ- ನಿಮ್ಮ ಅಭಿಪ್ರಾಯವೇನು? ʻಎಐʼ ಅನ್ನು ಕೇವಲ ಒಂದು ದೇಶದಿಂದ ಮಾತ್ರ ಅಭಿವೃದ್ಧಿಪಡಿಸಬಹುದೇ? ನಿಮ್ಮ ವೈಯಕ್ತಿಕ ಅನುಭವ ಏನು?

ಲೆಕ್ಸ್ ಫ್ರಿಡ್ಮನ್: ವಾಸ್ತವವಾಗಿ, ನಿಮ್ಮ ಭಾಷಣದಲ್ಲಿ, ನೀವು ʻಎಐʼನ ಸಕಾರಾತ್ಮಕ ಪರಿಣಾಮ ಮತ್ತು ಮಿತಿಗಳ ಅದ್ಭುತ ಉದಾಹರಣೆಯನ್ನು ನೀಡಿದ್ದೀರಿ. ವ್ಯಕ್ತಿಯ ಚಿತ್ರವನ್ನು ರಚಿಸಲು ʻಎಐʼ ಅನ್ನು ಕೇಳುವ ಬಗ್ಗೆ ನೀವು ನೀಡಿದ ಉದಾಹರಣೆಯನ್ನು ನಾನು ನಂಬುತ್ತೇನೆ ...

ಪ್ರಧಾನಮಂತ್ರಿ: ಅವರ ಎಡಗೈಯಿಂದ!

ಲೆಕ್ಸ್ ಫ್ರಿಡ್ಮನ್: ಹೌದು, ಎಡಗೈಯ ಬಗ್ಗೆ- ಎಐ ಯಾವಾಗಲೂ ತಮ್ಮ ಬಲಗೈಯಿಂದ ಬರೆಯುವ ವ್ಯಕ್ತಿಯ ಚಿತ್ರವನ್ನು ಸೃಷ್ಟಿಸುತ್ತದೆ. ಎಐ ವ್ಯವಸ್ಥೆಗಳನ್ನು ಪಾಶ್ಚಿಮಾತ್ಯ ದೇಶಗಳು ಮಾತ್ರ ಅಭಿವೃದ್ಧಿಪಡಿಸಿದಾಗ ಮತ್ತು ಭಾರತವು ಆ ಪ್ರಕ್ರಿಯೆಯ ಭಾಗವಾಗದಿದ್ದಾಗ, ʻಎಐʼ ಯಾವಾಗಲೂ ಬಲಗೈ ವ್ಯಕ್ತಿಯ ಚಿತ್ರಣವನ್ನು ಸೃಷ್ಟಿಸುತ್ತದೆ. ಏಕೆಂದರೆ ವ್ಯವಸ್ಥೆಯು ಆ ರೀತಿಯಲ್ಲಿ ತರಬೇತಿ ಪಡೆದಿದೆ ಎಂದು ಇದು ತೋರಿಸುತ್ತದೆ. ಭಾರತವು ಯಾವಾಗಲೂ ವಿಶ್ವದ ನಿರ್ಣಾಯಕ ಭಾಗವಾಗಿದೆ, ಅದೂ 21ನೇ ಶತಮಾನದಲ್ಲಿ.

ಪ್ರಧಾನಮಂತ್ರಿ: ʻಎಐʼ ಅಭಿವೃದ್ಧಿ ಒಂದು ಸಹಯೋಗ ಎಂದು ನಾನು ನಂಬುತ್ತೇನೆ. ಪ್ರತಿಯೊಬ್ಬರೂ ತಮ್ಮ ಅನುಭವಗಳು ಮತ್ತು ಕಲಿಕೆಗಳನ್ನು ಹಂಚಿಕೊಳ್ಳುವ ಮೂಲಕ ಪರಸ್ಪರ ಬೆಂಬಲಿಸಬಹುದು. ಭಾರತವು ಕೇವಲ ಮಾದರಿಗಳನ್ನು ರಚಿಸುತ್ತಿಲ್ಲ, ಬದಲಿಗೆ ನಿರ್ದಿಷ್ಟ ಬಳಕೆಯ ಪ್ರಕರಣಗಳಿಗಾಗಿ ʻಎಐʼ ಆಧಾರಿತ ತಂತ್ರಾಂಶಗಳನ್ನು ಅಭಿವೃದ್ಧಿಪಡಿಸುತ್ತಿದೆ. ʻಜಿಪಿಯುʼ ಪ್ರವೇಶವು ಸಮಾಜದ ಎಲ್ಲಾ ವರ್ಗಗಳನ್ನು ತಲುಪುವುದನ್ನು ಖಚಿತಪಡಿಸಿಕೊಳ್ಳಲು, ನಾವು ಈಗಾಗಲೇ ವಿಶಿಷ್ಟ, ಮಾರುಕಟ್ಟೆ ಆಧಾರಿತ ಮಾದರಿಯನ್ನು ಹೊಂದಿದ್ದೇವೆ. ಭಾರತದಲ್ಲಿ ಮನಸ್ಥಿತಿಯ ಬದಲಾವಣೆ ನಡೆಯುತ್ತಿದೆ. ಐತಿಹಾಸಿಕ ಅಂಶಗಳು, ಸರ್ಕಾರಿ ಕೆಲಸದ ಪ್ರಕ್ರಿಯೆಗಳು ಅಥವಾ ಬಲವಾದ ಬೆಂಬಲ ವ್ಯವಸ್ಥೆಯ ಕೊರತೆಯಿಂದಾಗಿ, ʻಎಐʼ ಅಭಿವೃದ್ಧಿಯಲ್ಲಿ ನಾವು ನಿಧಾನವಾಗಿದ್ದೇವೆ ಎಂದು ಕೆಲವರು ಭಾವಿಸಬಹುದು. ಆದರೆ ʻ5ಜಿʼ ನೋಡಿ- ನಾವು ಬಹಳ ಹಿಂದುಳಿದಿದ್ದೇವೆ ಎಂದು ಜಗತ್ತು ಭಾವಿಸಿತು. ಆದರೆ ಒಮ್ಮೆ ನಾವು ಪ್ರಾರಂಭಿಸಿದ ನಂತರ, ನಾವು ʻ5ಜಿʼ ಅನ್ನು ಹೊರತಂದ ವಿಶ್ವದ ಅತ್ಯಂತ ವೇಗದ ದೇಶವಾಗಿದ್ದೇವೆ. ಅಮೆರಿಕದ ಕಂಪನಿಯ ಸಿಇಒ ಇತ್ತೀಚೆಗೆ ನನ್ನೊಂದಿಗೆ ಒಂದು ಅನುಭವವನ್ನು ಹಂಚಿಕೊಂಡರು. ಅವರು ಹೇಳಿದರು: "ನಾನು ಅಮೆರಿಕದಲ್ಲಿ ಎಂಜಿನಿಯರ್‌ಗಳಿಗೆ ಉದ್ಯೋಗ ಜಾಹೀರಾತನ್ನು ಪೋಸ್ಟ್ ಮಾಡಿದರೆ, ಕೆಲವೇ ಕೆಲವು ಎಂಜಿನಿಯರ್‌ಗಳು ಮಾತ್ರ ಕಾಣಿಸಿಕೊಳ್ಳುತ್ತಾರೆ. ಆದರೆ ನಾನು ಅದೇ ಜಾಹೀರಾತನ್ನು ಭಾರತದಲ್ಲಿ ಪೋಸ್ಟ್ ಮಾಡಿದರೆ, ಅರ್ಜಿ ಸಲ್ಲಿಸುವ ಎಂಜಿನಿಯರ್‌ಗಳ ಸಂಖ್ಯೆಗೆ ಫುಟ್ಬಾಲ್ ಕ್ರೀಡಾಂಗಣವೂ ಸಾಕಾಗುವುದಿಲ್ಲ! ಇದು ಭಾರತ ಹೊಂದಿರುವ ಬೃಹತ್ ಪ್ರತಿಭೆಗಳನ್ನು ತೋರಿಸುತ್ತದೆ. ಮತ್ತು ಕೃತಕ ಬುದ್ಧಿಮತ್ತೆ ನಿಜವಾದ ಬುದ್ಧಿಮತ್ತೆಯಿಂದ ಮಾತ್ರ ಅಭಿವೃದ್ಧಿ ಹೊಂದಬಹುದು. ನಿಜವಾದ ಬುದ್ಧಿಮತ್ತೆ ಇಲ್ಲದೆ, ಕೃತಕ ಬುದ್ಧಿಮತ್ತೆಗೆ ಭವಿಷ್ಯವಿಲ್ಲ. ಮತ್ತು ಈ ನಿಜವಾದ ಬುದ್ಧಿಮತ್ತೆ ಎಲ್ಲಿದೆ? ಇದು ಭಾರತದ ಯುವ ಪ್ರತಿಭೆಗಳ ಭಂಡಾರದಲ್ಲಿದೆ. ಇದು ʻಎಐʼನಲ್ಲಿ ಭಾರತದ ಅತಿದೊಡ್ಡ ಶಕ್ತಿ ಎಂದು ನಾನು ಭಾವಿಸುತ್ತೇನೆ.

ಲೆಕ್ಸ್ ಫ್ರಿಡ್ಮನ್: ಆದರೆ ನೀವು ಉನ್ನತ ಟೆಕ್ ನಾಯಕರನ್ನು ನೋಡಿದರೆ - ಅವರಲ್ಲಿ ಅನೇಕರು ಭಾರತೀಯ ಮೂಲದವರು. ಟೆಕ್ ಪ್ರತಿಭೆಗಳಿಂದ ಹಿಡಿದು ಟೆಕ್ ನಾಯಕತ್ವದವರೆಗೆ, ಸುಂದರ್ ಪಿಚೈ, ಸತ್ಯ ನಾದೆಲ್ಲಾ, ಅರವಿಂದ್ ಶ್ರೀನಿವಾಸ್ ಅವರಂತಹ ಹೆಸರುಗಳನ್ನು ನಾವು ನೋಡುತ್ತೇವೆ. ನೀವು ಅವರಲ್ಲಿ ಕೆಲವರನ್ನು ಭೇಟಿ ಮಾಡಿದ್ದೀರಿ. ಅವರ ಭಾರತೀಯ ಹಿನ್ನೆಲೆಯ ಬಗ್ಗೆ ಏನು ಅದು ಅವರಿಗೆ ಯಶಸ್ವಿಯಾಗಲು ಅನುವು ಮಾಡಿಕೊಡುತ್ತದೆ?

ಪ್ರಧಾನಮಂತ್ರಿ : ನೋಡಿ, ಭಾರತವು ಯಾವ ಮೌಲ್ಯಗಳನ್ನು ಬೆಳೆಸುತ್ತದೆ ಎಂದರೆ ನಮ್ಮ ಜನ್ಮಭೂಮಿ (ಜನ್ಮಸ್ಥಳ) ಮತ್ತು ಕರ್ಮಭೂಮಿ (ಕೆಲಸದ ಸ್ಥಳ) ಎರಡನ್ನೂ ಗೌರವಿಸಲು ನಮಗೆ ಕಲಿಸಲಾಗುತ್ತದೆ. ಅವುಗಳ ನಡುವೆ ಯಾವುದೇ ವ್ಯತ್ಯಾಸ ಇರಬಾರದು. ನಾವು ನಮ್ಮ ತಾಯ್ನಾಡಿಗೆ ಸಮರ್ಪಿತರಾಗಿರುವಂತೆಯೇ, ನಾವು ಕೆಲಸ ಮಾಡುವ ಭೂಮಿಗೂ ಸಮಾನವಾಗಿ ಸಮರ್ಪಿತರಾಗಿರಬೇಕು. ಮತ್ತು ನಾವು ಎಲ್ಲೇ ಇದ್ದರೂ ಯಾವಾಗಲೂ ನಮ್ಮ ಅತ್ಯುತ್ತಮವಾದದ್ದನ್ನು ನೀಡಬೇಕು. ಅದಕ್ಕಾಗಿಯೇ ಭಾರತೀಯರು ಉನ್ನತ ಸ್ಥಾನಗಳಲ್ಲಿರಲಿ ಅಥವಾ ಸಣ್ಣ ಪಾತ್ರಗಳಲ್ಲಿರಲಿ ತಮ್ಮ ಅತ್ಯುತ್ತಮವಾದದ್ದನ್ನು ನೀಡುವಲ್ಲಿ ಶ್ರೇಷ್ಠರಾಗಿದ್ದಾರೆ. ಮತ್ತೊಂದು ಕಾರಣವೆಂದರೆ ಅವರು ತಪ್ಪು ವಿಷಯಗಳಲ್ಲಿ ಸಿಕ್ಕಿಹಾಕಿಕೊಳ್ಳುವುದಿಲ್ಲ. ಅವರಲ್ಲಿ ಹೆಚ್ಚಿನವರು ಸರಿಯಾದ ಕೆಲಸವನ್ನು ಮಾಡುವತ್ತ ಗಮನ ಹರಿಸುತ್ತಾರೆ. ಅಲ್ಲದೆ, ಅವರ ಸ್ವಭಾವವು ಎಲ್ಲರಿಗೂ ಹೊಂದಿಕೊಳ್ಳಲು ಮತ್ತು ಉತ್ತಮವಾಗಿ ಕೆಲಸ ಮಾಡಲು ಅನುವು ಮಾಡಿಕೊಡುತ್ತದೆ. ಅಂತಿಮವಾಗಿ, ಯಶಸ್ಸು ಕೇವಲ ಜ್ಞಾನಕ್ಕೆ ಸಂಬಂಧಿಸಿದ್ದಲ್ಲ. ತಂಡದಲ್ಲಿ ಕೆಲಸ ಮಾಡುವ ಸಾಮರ್ಥ್ಯವನ್ನು ಹೊಂದಿರುವುದು—ಜನರನ್ನು ಅರ್ಥಮಾಡಿಕೊಳ್ಳುವುದು ಮತ್ತು ಅವರ ಅತ್ಯುತ್ತಮ ಕೆಲಸವನ್ನು ಹೊರತರುವುದು—ನಾಯಕತ್ವದಲ್ಲಿ ಒಂದು ದೊಡ್ಡ ಅಂಶವಾಗಿದೆ. ಒಟ್ಟಾರೆಯಾಗಿ, ಅವಿಭಕ್ತ ಕುಟುಂಬಗಳಲ್ಲಿ ಅಥವಾ ಮುಕ್ತ ಸಮಾಜಗಳಲ್ಲಿ ಬೆಳೆದ ಭಾರತೀಯರು ದೊಡ್ಡ ಸಂಸ್ಥೆಗಳನ್ನು ಯಶಸ್ವಿಯಾಗಿ ಮುನ್ನಡೆಸುವುದು ಹೆಚ್ಚು ಸುಲಭ. ಮತ್ತು ಇಂದು ದೊಡ್ಡ ಕಂಪನಿಗಳು ಮಾತ್ರವಲ್ಲ - ಭಾರತೀಯರು ಪ್ರಪಂಚದಾದ್ಯಂತದ ಸರ್ಕಾರಗಳು ಮತ್ತು ಸಂಸ್ಥೆಗಳಲ್ಲಿ ಪ್ರಮುಖ ಸ್ಥಾನಗಳನ್ನು ಹೊಂದಿದ್ದಾರೆ. ಭಾರತೀಯ ವೃತ್ತಿಪರರ ಸಮಸ್ಯೆಗಳನ್ನು ಪರಿಹರಿಸುವ ಕೌಶಲ್ಯಗಳು ಮತ್ತು ವಿಶ್ಲೇಷಣಾತ್ಮಕ ಚಿಂತನೆಯು ಅವರನ್ನು ಜಾಗತಿಕವಾಗಿ ಸ್ಪರ್ಧಾತ್ಮಕ ಮತ್ತು ಹೆಚ್ಚು ಮೌಲ್ಯಯುತವಾಗಿಸುತ್ತದೆ. ಅದಕ್ಕಾಗಿಯೇ, ನಾವೀನ್ಯತೆ, ಉದ್ಯಮಶೀಲತೆ, ನವೋದ್ಯಮಗಳು ಅಥವಾ ಬೋರ್ಡ್ ರೂಮ್ ಗಳಲ್ಲಿ ಭಾರತೀಯರು ಶ್ರೇಷ್ಠರಾಗಿದ್ದಾರೆ. ಈಗ, ನಮ್ಮ ಬಾಹ್ಯಾಕಾಶ ಕ್ಷೇತ್ರವನ್ನು ಉದಾಹರಣೆಯಾಗಿ ತೆಗೆದುಕೊಳ್ಳಿ. ಈ ಮೊದಲು, ಬಾಹ್ಯಾಕಾಶ ಕಾರ್ಯಕ್ರಮವು ಸಂಪೂರ್ಣವಾಗಿ ಸರ್ಕಾರಿ ನಿಯಂತ್ರಣದಲ್ಲಿತ್ತು. ಒಂದೆರಡು ವರ್ಷಗಳ ಹಿಂದೆ, ನಾನು ಅದನ್ನು ಖಾಸಗಿ ವಲಯಕ್ಕೆ ತೆರೆದೆ. ಮತ್ತು ಕೇವಲ ಎರಡು ವರ್ಷಗಳಲ್ಲಿ, ಬಾಹ್ಯಾಕಾಶ ಉದ್ಯಮದಲ್ಲಿ 200 ಕ್ಕೂ ಹೆಚ್ಚು ನವೋದ್ಯಮಗಳು ಹೊರಹೊಮ್ಮಿವೆ. ಭಾರತದ ಚಂದ್ರಯಾನವನ್ನು ನೋಡಿ. ನಮ್ಮ ಯೋಜನೆಯ ವೆಚ್ಚವು ತುಂಬಾ ಕಡಿಮೆಯಾಗಿದೆ, ಇದು ಹಾಲಿವುಡ್ ಚಲನಚಿತ್ರಕ್ಕಿಂತ ಅಗ್ಗವಾಗಿದೆ! ನಮ್ಮ ಆವಿಷ್ಕಾರಗಳು ಎಷ್ಟು ಕಡಿಮೆ ವೆಚ್ಚದಾಯಕವಾಗಿವೆ ಎಂದು ಜಗತ್ತು ನೋಡಿದಾಗ, ಅವರು ಸ್ವಾಭಾವಿಕವಾಗಿ ನಮ್ಮೊಂದಿಗೆ ಸಹಕರಿಸಲು ಬಯಸುತ್ತಾರೆ. ಭಾರತೀಯ ಪ್ರತಿಭೆಗಳಿಗೆ ಈ ಗೌರವವು ನಮ್ಮ ನಾಗರಿಕತೆಯ ನೀತಿಯಿಂದ ಬಂದಿದೆ. ಇದು ನಮ್ಮ ಹೆಗ್ಗುರುತು.

ಲೆಕ್ಸ್ ಫ್ರಿಡ್ಮನ್: ಆದ್ದರಿಂದ, ನೀವು ಮಾನವ ಬುದ್ಧಿವಂತಿಕೆಯ ಬಗ್ಗೆ ಮಾತನಾಡಿದ್ದೀರಿ. ಎಐ (ಕೃತಕ ಬುದ್ಧಿಮತ್ತೆ) ನಮ್ಮ ಸ್ಥಾನವನ್ನು ತುಂಬುತ್ತದೆ ಎಂದು ನೀವು ಚಿಂತಿಸುತ್ತೀರಾ?

ಪ್ರಧಾನಮಂತ್ರಿ: ನೋಡಿ, ಪ್ರತಿಯೊಂದು ಯುಗದಲ್ಲೂ ತಂತ್ರಜ್ಞಾನ ಮತ್ತು ಮಾನವರ ನಡುವೆ ಸ್ಪರ್ಧೆಯ ಪ್ರಜ್ಞೆಯನ್ನು ಸೃಷ್ಟಿಸುವ ಪ್ರಯತ್ನಗಳು ನಡೆದಿವೆ. ತಂತ್ರಜ್ಞಾನವು ಮಾನವೀಯತೆಗೆ ಸವಾಲು ಹಾಕುತ್ತದೆ ಎಂದು ಜನರು ಆಗಾಗ್ಗೆ ಹೇಳುತ್ತಾರೆ. ಆದರೆ ಪ್ರತಿ ಬಾರಿಯೂ, ತಂತ್ರಜ್ಞಾನವು ವಿಕಸನಗೊಂಡಾಗ ಮಾನವರು ಒಂದು ಹೆಜ್ಜೆ ಮುಂದಿದ್ದಾರೆ. ಇದು ಪ್ರತಿ ಬಾರಿಯೂ ಸಂಭವಿಸಿದೆ. ಏಕೆಂದರೆ ತಂತ್ರಜ್ಞಾನವನ್ನು ಉತ್ತಮ ರೀತಿಯಲ್ಲಿ ಹೇಗೆ ಬಳಸಬೇಕೆಂದು ಕಲಿಯುವವರು ಮಾನವರು. ಈಗ, ʻಎಐʼ ಮಾನವರಾಗಿರುವುದರ ನಿಜವಾದ ಅರ್ಥವೇನೆಂದು ಪ್ರತಿಬಿಂಬಿಸಲು ಮಾನವರನ್ನು ಒತ್ತಾಯಿಸುವ ಹಂತವನ್ನು ತಲುಪಿದೆ. ಇದು ʻಎಐʼನ ಶಕ್ತಿಗೆ ಸಾಕ್ಷಿಯಾಗಿದೆ. ಆದರೆ ʻಎಐʼ ಎಷ್ಟೇ ಮುಂದುವರಿದರೂ, ಮಾನವ ಕಲ್ಪನೆ ಯಾವಾಗಲೂ ಅನನ್ಯವಾಗಿ ಉಳಿಯುತ್ತದೆ. ʻಎಐʼ ಅನೇಕ ವಿಷಯಗಳನ್ನು ಸೃಷ್ಟಿಸಬಹುದು. ಬಹುಶಃ, ಭವಿಷ್ಯದಲ್ಲಿ, ಇದು ಇಂದು ನಾವು ಊಹಿಸಬಹುದಾದುದಕ್ಕಿಂತ ಹೆಚ್ಚಿನದನ್ನು ಸೃಷ್ಟಿಸುತ್ತದೆ. ಆದರೆ ಅದು ಮಾನವನ ಕಲ್ಪನಾ ಶಕ್ತಿಯ ಸ್ಥಾನವನ್ನು ತುಂಬಬಲ್ಲದು ಎಂದು ನಾನು ನಂಬುವುದಿಲ್ಲ.

ಲೆಕ್ಸ್ ಫ್ರಿಡ್ಮನ್: ನಾನು ನಿಮ್ಮ ಮಾತನ್ನು ಒಪ್ಪುತ್ತೇನೆ. ಇದು ನಿಜವಾಗಿಯೂ ನನ್ನನ್ನು ಮತ್ತು ಇತರ ಅನೇಕರನ್ನು ಮಾನವರನ್ನು ವಿಶೇಷವಾಗಿಸುವ ಬಗ್ಗೆ ಆಳವಾಗಿ ಯೋಚಿಸುವಂತೆ ಮಾಡುತ್ತದೆ. ಏಕೆಂದರೆ ಕಲ್ಪನೆ, ಸೃಜನಶೀಲತೆ, ಪ್ರಜ್ಞೆ, ಭಯ, ಪ್ರೀತಿ, ಕನಸುಗಳು ಮತ್ತು ವಿಭಿನ್ನವಾಗಿ ಯೋಚಿಸುವ ಸಾಮರ್ಥ್ಯ, ಅದರಾಚೆಗೆ ಮತ್ತು ಅದರಾಚೆಗೆ ಹೋಗುವ ಸಾಮರ್ಥ್ಯದಂತಹ ಅನೇಕ ವಿಷಯಗಳಿವೆ! ರಿಸ್ಕ್‌ಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ-ಈ ಎಲ್ಲಾ ವಿಷಯಗಳು.

ಪ್ರಧಾನಮಂತ್ರಿ: ಈಗ, ಕಾಳಜಿ ವಿಷಯದ ಬಗ್ಗೆ ನೋಡಿ- ಒಬ್ಬರನ್ನೊಬ್ಬರು ನೋಡಿಕೊಳ್ಳುವ ಮಾನವನ ಸಹಜ ಸಾಮರ್ಥ್ಯ ಅದು. ʻಎಐʼ ಅದನ್ನು ಮಾಡಬಲ್ಲದೇ?

ಲೆಕ್ಸ್ ಫ್ರಿಡ್ಮನ್: ಇದು 21  ಶತಮಾನದ ಪರಿಹರಿಸಲಾಗದ ದೊಡ್ಡ ಪ್ರಶ್ನೆಗಳಲ್ಲಿ ಒಂದಾಗಿದೆ. ಪ್ರತಿ ವರ್ಷ, ನೀವು "ಪರೀಕ್ಷಾ ಪೇ ಚರ್ಚಾ" ಕಾರ್ಯಕ್ರಮವನ್ನು ಆಯೋಜಿಸುತ್ತೀರಿ, ಅಲ್ಲಿ ನೀವು ಯುವ ವಿದ್ಯಾರ್ಥಿಗಳೊಂದಿಗೆ ನೇರವಾಗಿ ಸಂವಹನ ನಡೆಸುತ್ತೀರಿ ಮತ್ತು ಪರೀಕ್ಷೆಗಳಿಗೆ ಹೇಗೆ ತಯಾರಿ ನಡೆಸಬೇಕು ಎಂಬುದರ ಬಗ್ಗೆ ಅವರಿಗೆ ಸಲಹೆ ನೀಡುತ್ತೀರಿ. ನಾನು ಈ ಅನೇಕ ಕಾರ್ಯಕ್ರಮಗಳನ್ನು ನೋಡಿದ್ದೇನೆ. ಪರೀಕ್ಷೆಗಳಲ್ಲಿ ಹೇಗೆ ಯಶಸ್ವಿಯಾಗಬೇಕು, ಒತ್ತಡವನ್ನು ಹೇಗೆ ನಿಭಾಯಿಸಬೇಕು ಮತ್ತು ಇತರ ಅಂಶಗಳ ಬಗ್ಗೆ ನೀವು ಮಾರ್ಗದರ್ಶನವನ್ನು ನೀಡುತ್ತೀರಿ. ಭಾರತದ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಪ್ರಯಾಣದಲ್ಲಿ ಯಾವ ಪರೀಕ್ಷೆಗಳನ್ನು ತೆಗೆದುಕೊಳ್ಳಬೇಕು ಮತ್ತು ಅವರು ಏಕೆ ತುಂಬಾ ಒತ್ತಡಕ್ಕೊಳಗಾಗಿದ್ದಾರೆ ಎಂಬುದನ್ನು ನೀವು ಸಂಕ್ಷಿಪ್ತವಾಗಿ ವಿವರಿಸಬಹುದೇ?

ಪ್ರಧಾನಮಂತ್ರಿ: ಒಟ್ಟಾರೆಯಾಗಿ, ಸಮಾಜದಲ್ಲಿ ಒಂದು ವಿಚಿತ್ರ ಮನಸ್ಥಿತಿ ಬೆಳೆದಿದೆ. ಶಾಲೆಗಳಲ್ಲಿಯೂ ಸಹ, ಎಷ್ಟು ವಿದ್ಯಾರ್ಥಿಗಳು ಉನ್ನತ ಶ್ರೇಣಿಗಳನ್ನು ಪಡೆಯುತ್ತಾರೆ ಎಂಬುದರ ಮೇಲೆ ಯಶಸ್ಸನ್ನು ಅಳೆಯಲಾಗುತ್ತದೆ. ಪರೀಕ್ಷೆಗಳಲ್ಲಿ ಮಗುವಿನ ಶ್ರೇಯಾಂಕವು ಅವರ ಕುಟುಂಬದ ಶೈಕ್ಷಣಿಕ ಮತ್ತು ಸಾಮಾಜಿಕ ಸ್ಥಾನಮಾನವನ್ನು ನಿರ್ಧರಿಸುವ ವಾತಾವರಣವನ್ನು ಕುಟುಂಬಗಳು ಸೃಷ್ಟಿಸುತ್ತವೆ. ಈ ಕಾರಣದಿಂದಾಗಿ, ವಿದ್ಯಾರ್ಥಿಗಳ ಮೇಲಿನ ಒತ್ತಡವು ಗಮನಾರ್ಹವಾಗಿ ಹೆಚ್ಚಾಗಿದೆ. ಅನೇಕ ವಿದ್ಯಾರ್ಥಿಗಳು ತಮ್ಮ ಇಡೀ ಜೀವನವು ತಮ್ಮ 10 ಮತ್ತು 12 ನೇ ತರಗತಿಯ ಪರೀಕ್ಷೆಗಳ ಮೇಲೆ ಮಾತ್ರ ಅವಲಂಬಿತವಾಗಿದೆ ಎಂದು ನಂಬಲು ಪ್ರಾರಂಭಿಸುತ್ತಾರೆ. ಈ ಮನಸ್ಥಿತಿಯನ್ನು ಬದಲಾಯಿಸಲು, ನಾವು ನಮ್ಮ ಹೊಸ ಶಿಕ್ಷಣ ನೀತಿಯಲ್ಲಿ ಗಮನಾರ್ಹ ಸುಧಾರಣೆಗಳನ್ನು ಮಾಡಿದ್ದೇವೆ. ಆದಾಗ್ಯೂ, ಈ ಬದಲಾವಣೆಗಳು ಸಂಪೂರ್ಣವಾಗಿ ಜಾರಿಗೆ ಬರುವವರೆಗೆ, ವಿದ್ಯಾರ್ಥಿಗಳೊಂದಿಗೆ ತೊಡಗಿಸಿಕೊಳ್ಳುವುದು, ಅವರ ಕಾಳಜಿಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಅವರಿಗೆ ಮಾರ್ಗದರ್ಶನ ನೀಡುವುದು ನನ್ನ ವೈಯಕ್ತಿಕ ಜವಾಬ್ದಾರಿ ಎಂದು ನಾನು ಭಾವಿಸುತ್ತೇನೆ. ನಾನು "ಪರೀಕ್ಷಾ ಪೇ ಚರ್ಚಾ" ನಡೆಸಿದಾಗ, ಅದು ವಿದ್ಯಾರ್ಥಿಗಳಿಗೆ ಪ್ರಯೋಜನವನ್ನು ನೀಡುವುದಲ್ಲದೆ, ಅವರ ಮನಸ್ಥಿತಿ, ಅವರ ಪೋಷಕರ ನಿರೀಕ್ಷೆಗಳು ಮತ್ತು ಶಿಕ್ಷಕರ ದೃಷ್ಟಿಕೋನಗಳನ್ನು ಅರ್ಥಮಾಡಿಕೊಳ್ಳಲು ನನಗೆ ಅವಕಾಶವನ್ನು ನೀಡುತ್ತದೆ. ಆದ್ದರಿಂದ, 'ಪರೀಕ್ಷಾ ಪೇ ಚರ್ಚಾ' ಅವರಿಗೆ ಪ್ರಯೋಜನಕಾರಿಯಾಗುವುದಲ್ಲದೆ ನನಗೂ ಪ್ರಯೋಜನಕಾರಿಯಾಗಿದೆ. ಒಂದು ನಿರ್ದಿಷ್ಟ ಕ್ಷೇತ್ರದಲ್ಲಿ ತನ್ನನ್ನು ಪರೀಕ್ಷಿಸಲು ಪರೀಕ್ಷೆಗಳು ಉತ್ತಮವಾಗಿವೆ, ಆದರೆ ಅವು ಒಬ್ಬರ ಒಟ್ಟಾರೆ ಸಾಮರ್ಥ್ಯದ ಏಕೈಕ ಅಳತೆಯಾಗಲು ಸಾಧ್ಯವಿಲ್ಲ. ಅನೇಕ ವ್ಯಕ್ತಿಗಳು ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡದಿರಬಹುದು ಆದರೆ ಕ್ರಿಕೆಟ್ ನಂತಹ ಇತರ ಕ್ಷೇತ್ರಗಳಲ್ಲಿ ಗಮನಾರ್ಹ ಯಶಸ್ಸನ್ನು ಸಾಧಿಸಿದ್ದಾರೆ, ಅಲ್ಲಿ ಅವರು ಶತಕಗಳನ್ನು ಗಳಿಸುತ್ತಾರೆ. ಕಲಿಕೆಯ ಮೇಲೆ ಗಮನ ಕೇಂದ್ರೀಕರಿಸಿದಾಗ, ಅಂಕಗಳು ಹೆಚ್ಚಾಗಿ ಸ್ವಾಭಾವಿಕವಾಗಿ ಸುಧಾರಿಸುತ್ತವೆ. ನವೀನ ಕಲಿಕೆಯ ತಂತ್ರವನ್ನು ಬಳಸಿದ ನನ್ನ ಶಿಕ್ಷಕರಲ್ಲಿ ಒಬ್ಬರನ್ನು ನಾನು ನೆನಪಿಸಿಕೊಳ್ಳುತ್ತೇನೆ. ಇದು ಇಂದಿಗೂ ನನ್ನನ್ನು ಆಕರ್ಷಿಸುತ್ತಿದೆ. ಮನೆಯಿಂದ 10 ಕಡಲೆ, 15 ಕಾಳು ಅಕ್ಕಿ ಅಥವಾ 21 ಹೆಸರು ಕಾಳು ತರುವಂತೆ ಅವರು ವಿದ್ಯಾರ್ಥಿಗಳಿಗೆ ಹೇಳುತ್ತಿದ್ದರು. ವಿಭಿನ್ನ ಸಂಖ್ಯೆಗಳು ಮತ್ತು ವಿಭಿನ್ನ ಪ್ರಭೇದಗಳೊಂದಿಗೆ, ಮಗುವು 'ನಾನು 10 ಅನ್ನು ತರಬೇಕು' ಎಂದು ಯೋಚಿಸುತ್ತದೆ. ನಂತರ, ಮನೆಯಲ್ಲಿ, ಅವರು 10ರ ನಂತರ ಏನಾಗುತ್ತದೆ ಎಂದು ಎಣಿಸುತ್ತಿದ್ದರು ಮತ್ತು ನೆನಪಿಸಿಕೊಳ್ಳುತ್ತಿದ್ದರು. ಇವುಗಳನ್ನು ಕಡಲೆ ಎಂದು ಕರೆಯಲಾಗುತ್ತದೆ ಎಂದು ಅವರು ಕಲಿಯುತ್ತಾರೆ. ನಂತರ, ಶಾಲೆಯಲ್ಲಿ, ಎಲ್ಲರೂ ತಮ್ಮ ವಸ್ತುಗಳನ್ನು ಸಂಗ್ರಹಿಸುತ್ತಿದ್ದರು, ಮತ್ತು ಶಿಕ್ಷಕರು ಹೇಳುತ್ತಿದ್ದರು, 'ಸರಿ, 10 ಕಡಲೆ ಕಾಳು, 3 ಕಡಲೆ, 2 ಹೆಸರು ಕಾಳು, ಇವುಗಳಲ್ಲಿ 5 ಅನ್ನು ಹೊರತೆಗೆಯಿರಿ.' ಈ ರೀತಿಯಾಗಿ, ಅವರು ಗಣಿತವನ್ನು ಕಲಿಯುತ್ತಾರೆ, ಕಡಲೆಗಳನ್ನು ಗುರುತಿಸುತ್ತಾರೆ ಮತ್ತು ಹೆಸರು ಕಾಳು ಏನೆಂದು ಅರ್ಥಮಾಡಿಕೊಳ್ಳುತ್ತಾರೆ. ನಾನು ಬಾಲ್ಯದ ಕಲಿಕೆಯ ಬಗ್ಗೆ ಮಾತನಾಡುತ್ತಿದ್ದೇನೆ. ಈ ರೀತಿಯ ಕಲಿಕೆಯ ತಂತ್ರವು ಮಕ್ಕಳಿಗೆ ಹೊರೆಯಿಲ್ಲದೆ ಕಲಿಯಲು ಸಹಾಯ ಮಾಡುತ್ತದೆ, ಮತ್ತು ನಮ್ಮ ಹೊಸ ಶಿಕ್ಷಣ ನೀತಿಯು ಈ ದಿಕ್ಕಿನಲ್ಲಿ ಪ್ರಯತ್ನಗಳನ್ನು ಮಾಡುತ್ತಿದೆ. ನನ್ನ ಇನ್ನೊಬ್ಬ ಶಿಕ್ಷಕರು ಸೃಜನಶೀಲ ವಿಧಾನವನ್ನು ಹೊಂದಿದ್ದರು. ಅವರು ತರಗತಿಯಲ್ಲಿ ಡೈರಿಯನ್ನು ಇರಿಸಿದರು ಮತ್ತು ಬೆಳಿಗ್ಗೆ ಮೊದಲು ಬರುವವರು ಅದರಲ್ಲಿ ತಮ್ಮ ಹೆಸರಿನೊಂದಿಗೆ ಒಂದು ವಾಕ್ಯವನ್ನು ಬರೆಯಬೇಕು ಎಂದು ವಿದ್ಯಾರ್ಥಿಗಳಿಗೆ ಹೇಳಿದರು. ನಂತರದ ಪ್ರತಿಯೊಬ್ಬ ವಿದ್ಯಾರ್ಥಿಯು ಮೊದಲನೆಯದಕ್ಕೆ ಸಂಬಂಧಿಸಿದ ವಾಕ್ಯವನ್ನು ಬರೆಯಬೇಕಾಗಿತ್ತು. ಆರಂಭದಲ್ಲಿ, ನಾನು ಮೊದಲ ವಾಕ್ಯವನ್ನು ಬರೆಯಲು ಬೇಗನೆ ಶಾಲೆಗೆ ಧಾವಿಸುತ್ತಿದ್ದೆ. ಉದಾಹರಣೆಗೆ, ನಾನು ಒಮ್ಮೆ ಬರೆದದ್ದು: "ಇಂದಿನ ಸೂರ್ಯೋದಯವು ಸುಂದರವಾಗಿತ್ತು; ಅದು ನನ್ನಲ್ಲಿ ಶಕ್ತಿಯನ್ನು ತುಂಬಿತು." ನಾನು ಈ ರೀತಿಯದ್ದನ್ನು ಬರೆದಿದ್ದೆ ಮತ್ತು ನನ್ನ ಹೆಸರನ್ನು ಸಹ ಬರೆದಿದ್ದೆ. ಮುಂದಿನ ವಿದ್ಯಾರ್ಥಿಗಳು ನಂತರ ಸೂರ್ಯೋದಯದ ಬಗ್ಗೆ ಸಂಬಂಧಿತ ವಾಕ್ಯಗಳನ್ನು ಬರೆಯುತ್ತಾರೆ. ಕೆಲವು ದಿನಗಳ ನಂತರ, ಇದು ನನ್ನ ಸೃಜನಶೀಲತೆಗೆ ಹೆಚ್ಚು ಪ್ರಯೋಜನವಾಗುತ್ತಿಲ್ಲ ಎಂದು ನಾನು ಅರಿತುಕೊಂಡೆ. ಏಕೆ? ಏಕೆಂದರೆ ನಾನು ಮನಸ್ಸಿನಲ್ಲಿ ಆಲೋಚನಾ ಪ್ರಕ್ರಿಯೆಯೊಂದಿಗೆ ಪ್ರಾರಂಭಿಸುತ್ತೇನೆ ಮತ್ತು ಅದನ್ನು ಸರಳವಾಗಿ ಬರೆಯುತ್ತೇನೆ. ಆದ್ದರಿಂದ, ನಾನು ಮೊದಲು ಹೋಗುವ ಬದಲು, ಕೊನೆಯದಾಗಿ ಹೋಗಬೇಕೆಂದು ನಿರ್ಧರಿಸಿದೆ. ನಂತರ, ಬರವಣಿಗೆಯು ಇತರರು ಬರೆದದ್ದನ್ನು ಓದಲು ಮತ್ತು ನಂತರ ಇನ್ನೂ ಉತ್ತಮವಾದದ್ದನ್ನು ಯೋಚಿಸಲು ನನಗೆ ಅವಕಾಶ ಮಾಡಿಕೊಟ್ಟಿತು, ನನ್ನ ಸೃಜನಶೀಲತೆಯನ್ನು ಸುಧಾರಿಸಿತು ಎಂದು ನಾನು ಅರಿತುಕೊಂಡೆ. ಇಂತಹ ಸಣ್ಣ ಬೋಧನಾ ವಿಧಾನಗಳು ವಿದ್ಯಾರ್ಥಿಗಳ ಜೀವನದ ಮೇಲೆ ಶಾಶ್ವತ ಪರಿಣಾಮ ಬೀರಬಹುದು. ಸಾಂಸ್ಥಿಕ ಕೆಲಸ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿಯಲ್ಲಿ ನನ್ನ ಹಿನ್ನೆಲೆಯಿಂದಾಗಿ, ವಿದ್ಯಾರ್ಥಿಗಳೊಂದಿಗೆ ನಿಯಮಿತವಾಗಿ ತೊಡಗಿಸಿಕೊಳ್ಳಲು ನಾನು ಬಲವಾಗಿ ನಂಬುತ್ತೇನೆ. ಕಾಲಾನಂತರದಲ್ಲಿ, ನಮ್ಮ ಚರ್ಚೆಗಳನ್ನು ಒಂದು ಪುಸ್ತಕವಾಗಿ ಸಂಗ್ರಹಿಸಲಾಗಿದೆ, ಇದು ಲಕ್ಷಾಂತರ ವಿದ್ಯಾರ್ಥಿಗಳಿಗೆ ಉಪಯುಕ್ತ ಉಲ್ಲೇಖವಾಗಿದೆ.

ಲೆಕ್ಸ್ ಫ್ರಿಡ್ಮನ್: ವಿದ್ಯಾರ್ಥಿಗಳು ತಮ್ಮ ವೃತ್ತಿಜೀವನದಲ್ಲಿ ಹೇಗೆ ಯಶಸ್ವಿಯಾಗಬೇಕು ಎಂಬುದರ ಕುರಿತು ನೀವು ಇನ್ನೂ ಕೆಲವು ಸಲಹೆಗಳನ್ನು ನೀಡಬಹುದೇ? ಅವರು ತಮ್ಮ ವೃತ್ತಿಜೀವನದ ಹಾದಿಯನ್ನು ಹೇಗೆ ಕಂಡುಕೊಳ್ಳಬೇಕು ಮತ್ತು ಯಶಸ್ಸನ್ನು ಸಾಧಿಸಬೇಕು? ಈ ಸಲಹೆ ಕೇವಲ ಭಾರತದ ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ನಿಮ್ಮ ಮಾತುಗಳಲ್ಲಿ ಸ್ಫೂರ್ತಿಯನ್ನು ಕಂಡುಕೊಳ್ಳುವ ವಿಶ್ವದಾದ್ಯಂತದ ಜನರಿಗಾಗಿ.

ಪ್ರಧಾನಮಂತ್ರಿ: ನಿಮಗೆ ಯಾವುದೇ ಕೆಲಸ ಸಿಕ್ಕರೂ, ನೀವು ಅದನ್ನು ಪೂರ್ಣ ಸಮರ್ಪಣೆ ಮತ್ತು ಬದ್ಧತೆಯಿಂದ ಮಾಡಿದರೆ, ಶೀಘ್ರದಲ್ಲೇ ಅಥವಾ ನಂತರ, ನೀವು ಅದರಲ್ಲಿ ಪರಿಣತಿಯನ್ನು ಪಡೆಯುತ್ತೀರಿ ಎಂದು ನಾನು ನಂಬುತ್ತೇನೆ. ನಿಮ್ಮ ಸಾಮರ್ಥ್ಯಗಳು ಯಶಸ್ಸಿನ ಬಾಗಿಲು ತೆರೆಯುತ್ತವೆ. ಒಬ್ಬ ವ್ಯಕ್ತಿಯು ಕೆಲಸ ಮಾಡುವಾಗ ತಮ್ಮ ಕೌಶಲ್ಯಗಳನ್ನು ನಿರಂತರವಾಗಿ ಸುಧಾರಿಸುವತ್ತ ಗಮನ ಹರಿಸಬೇಕು ಮತ್ತು ಅವರ ಕಲಿಕೆಯ ಸಾಮರ್ಥ್ಯವನ್ನು ಎಂದಿಗೂ ಕಡೆಗಣಿಸಬಾರದು. ಯಾರಾದರೂ ಕಲಿಯುವ ಸಾಮರ್ಥ್ಯವನ್ನು ಗೌರವಿಸಿದರೆ ಮತ್ತು ಎಲ್ಲದರಿಂದ ಕಲಿಯಲು ಪ್ರಯತ್ನಿಸಿದರೆ, ಅವರು ಅಗಾಧವಾಗಿ ಬೆಳೆಯುತ್ತಾರೆ. ಕೆಲವರು ತಮ್ಮ ಕೆಲಸದ ಮೇಲೆ ಮಾತ್ರ ಗಮನ ಹರಿಸುತ್ತಾರೆ, ಇತರರು ತಮ್ಮ ಸುತ್ತಲಿನವರ ಕೆಲಸವನ್ನು ಗಮನಿಸುತ್ತಾರೆ ಮತ್ತು ಅರ್ಥಮಾಡಿಕೊಳ್ಳುತ್ತಾರೆ, ಇದು ಅವರ ಸಾಮರ್ಥ್ಯಗಳನ್ನು ದ್ವಿಗುಣಗೊಳಿಸುತ್ತದೆ ಅಥವಾ ಮೂರು ಪಟ್ಟು ಹೆಚ್ಚಿಸುತ್ತದೆ. ನಾನು ಯುವಜನರಿಗೆ ಹೇಳುತ್ತೇನೆ- ನಿರುತ್ಸಾಹಗೊಳ್ಳುವ ಅಗತ್ಯವಿಲ್ಲ. ಈ ಲೋಕದಲ್ಲಿ ಎಲ್ಲೋ, ದೇವರು ನಿಮಗಾಗಿ ಬರೆದಿರುವ ಒಂದು ಕೆಲಸವಿದೆ. ಚಿಂತಿಸಬೇಡಿ. ನಿಮ್ಮ ಕೌಶಲ್ಯಗಳನ್ನು ಸುಧಾರಿಸುವತ್ತ ಗಮನ ಹರಿಸಿ ಇದರಿಂದ ನೀವು ಸಮರ್ಥರಾಗುತ್ತೀರಿ ಮತ್ತು ಅವಕಾಶಗಳಿಗೆ ಅರ್ಹರಾಗುತ್ತೀರಿ. ಉದಾಹರಣೆಗೆ, ಯಾರಾದರೂ ಹೇಳಬಹುದು, 'ನಾನು ವೈದ್ಯರಾಗಲು ಬಯಸಿದ್ದೆ, ಆದರೆ ನನಗೆ ಸಾಧ್ಯವಾಗಲಿಲ್ಲ, ಆದ್ದರಿಂದ ನನ್ನ ಜೀವನವು ಹಾಳಾಗಿದೆ. ಈಗ ನಾನು ಶಿಕ್ಷಕನಾಗಿದ್ದೇನೆ.' ನೀವು ಈ ರೀತಿ ಯೋಚಿಸಿದರೆ, ಅದು ಕೆಲಸ ಮಾಡುವುದಿಲ್ಲ. ಸರಿ, ನೀವು ವೈದ್ಯರಾಗಲಿಲ್ಲ, ಆದರೆ ಶಿಕ್ಷಕರಾಗಿ, ನೀವು ನೂರಾರು ವಿದ್ಯಾರ್ಥಿಗಳಿಗೆ ವೈದ್ಯರಾಗುವ ಕನಸುಗಳನ್ನು ಈಡೇರಿಸಲು ಸಹಾಯ ಮಾಡಬಹುದು. ಒಬ್ಬ ವೈದ್ಯರಾಗಿ, ನೀವು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಿರಿ, ಆದರೆ ಶಿಕ್ಷಕರಾಗಿ, ಲಕ್ಷಾಂತರ ಜನರಿಗೆ ಚಿಕಿತ್ಸೆ ನೀಡುವ ಭವಿಷ್ಯದ ವೈದ್ಯರನ್ನು ನೀವು ರೂಪಿಸಬಹುದು. ಇದು ಜೀವನಕ್ಕೆ ಹೊಸ ದೃಷ್ಟಿಕೋನವನ್ನು ನೀಡುತ್ತದೆ. ನೀವು ಏನನ್ನು ಸಾಧಿಸಲು ಸಾಧ್ಯವಾಗಲಿಲ್ಲ ಎಂಬುದರ ಬಗ್ಗೆ ಯೋಚಿಸುವ ಬದಲು, ನೀವು ಇನ್ನೂ ಹೇಗೆ ಕೊಡುಗೆ ನೀಡಬಹುದು ಎಂಬುದರ ಬಗ್ಗೆ ಗಮನ ಹರಿಸಿ. ದೇವರು ಪ್ರತಿಯೊಬ್ಬರಿಗೂ ಕೆಲವು ಅನನ್ಯ ಸಾಮರ್ಥ್ಯಗಳನ್ನು ನೀಡಿದ್ದಾನೆ ಎಂದು ನಾನು ದೃಢವಾಗಿ ನಂಬುತ್ತೇನೆ. ನಿಮ್ಮ ಸಾಮರ್ಥ್ಯದ ಮೇಲಿನ ನಂಬಿಕೆಯನ್ನು ಎಂದಿಗೂ ಕಳೆದುಕೊಳ್ಳಬೇಡಿ. ಅವಕಾಶ ಸಿಕ್ಕಾಗಲೆಲ್ಲಾ, ನೀವು ಸಂದರ್ಭಕ್ಕೆ ತಕ್ಕಂತೆ ಎದ್ದು ನಿಲ್ಲುತ್ತೀರಿ, ಉತ್ತಮವಾಗಿ ಕಾರ್ಯನಿರ್ವಹಿಸುತ್ತೀರಿ ಮತ್ತು ಯಶಸ್ಸನ್ನು ಸಾಧಿಸುತ್ತೀರಿ ಎಂಬ ವಿಶ್ವಾಸದಿಂದಿರಿ. ಮತ್ತು ಒಬ್ಬ ವ್ಯಕ್ತಿಯು ಈ ಮನಸ್ಥಿತಿಯನ್ನು ಹೊಂದಿದ್ದರೆ, ಅವರು ಯಾವಾಗಲೂ ಯಶಸ್ವಿಯಾಗುತ್ತಾರೆ.

ಲೆಕ್ಸ್ ಫ್ರಿಡ್ಮನ್: ವಿದ್ಯಾರ್ಥಿಗಳು ತಮ್ಮ ಪ್ರಯಾಣದಲ್ಲಿ ಒತ್ತಡ, ಹೋರಾಟಗಳು ಮತ್ತು ತೊಂದರೆಗಳನ್ನು ಹೇಗೆ ಎದುರಿಸಬೇಕು?

ಪ್ರಧಾನಮಂತ್ರಿ: ಮೊದಲನೆಯದಾಗಿ, ಪರೀಕ್ಷೆಗಳೇ ಜೀವನವಲ್ಲ ಎಂದು ಅವರು ಅರ್ಥಮಾಡಿಕೊಳ್ಳಬೇಕು. ತಮ್ಮ ಮಕ್ಕಳನ್ನು ಸಮಾಜದಲ್ಲಿ ಮಾದರಿಗಳಾಗಿ ಪ್ರದರ್ಶಿಸಲು ಉದ್ದೇಶಿಸಲಾಗಿಲ್ಲ ಎಂದು ಕುಟುಂಬಗಳು ಅರಿತುಕೊಳ್ಳಬೇಕು- 'ನೋಡಿ, ನನ್ನ ಮಗು ಇಷ್ಟು ಅಂಕಗಳನ್ನು ಗಳಿಸಿದೆ, ನನ್ನ ಮಗು ಎಷ್ಟು ಶ್ರೇಷ್ಠ ನೋಡಿ!' ಎಂದು ಹೇಳಬೇಕು. ಪೋಷಕರು ತಮ್ಮ ಮಕ್ಕಳನ್ನು ತಮ್ಮದೇ ಆದ ಸಾಮಾಜಿಕ ಸ್ಥಾನಮಾನಕ್ಕೆ ಮಾದರಿಯಾಗಿ ಬಳಸುವುದನ್ನು ನಿಲ್ಲಿಸಬೇಕು. ಎರಡನೆಯದಾಗಿ, ವಿದ್ಯಾರ್ಥಿಗಳು ಯಾವಾಗಲೂ ಚೆನ್ನಾಗಿ ಸಿದ್ಧರಾಗಿರಬೇಕು ಎಂದು ನಾನು ನಂಬುತ್ತೇನೆ. ಆಗ ಮಾತ್ರ ಅವರು ಒತ್ತಡವಿಲ್ಲದೆ ಪರೀಕ್ಷೆಗಳನ್ನು ತೆಗೆದುಕೊಳ್ಳಬಹುದು. ಅವರು ಕಲಿತದ್ದರ ಬಗ್ಗೆ ಅವರಿಗೆ ವಿಶ್ವಾಸ ಮತ್ತು ಸ್ಪಷ್ಟತೆ ಇರಬೇಕು. ಕೆಲವೊಮ್ಮೆ, ವಿದ್ಯಾರ್ಥಿಗಳು ಪರೀಕ್ಷಾ ಪತ್ರಿಕೆಯನ್ನು ಸ್ವೀಕರಿಸಿದ ತಕ್ಷಣ ಭಯಭೀತರಾಗುತ್ತಾರೆ. 'ಓಹ್ ಇಲ್ಲ, ನನ್ನ ಪೆನ್ ಸರಿಯಾಗಿ ಕೆಲಸ ಮಾಡುತ್ತಿಲ್ಲ!' ಅಥವಾ 'ನನ್ನ ಪಕ್ಕದಲ್ಲಿ ಕುಳಿತಿರುವ ಈ ವ್ಯಕ್ತಿ ನನ್ನ ಗಮನವನ್ನು ಬೇರೆಡೆಗೆ ಸೆಳೆಯುತ್ತಿದ್ದಾನೆ!' ಅಥವಾ 'ಬೆಂಚ್ ನಡುಗುತ್ತಿದೆ!' ಎಂದು ಅವರ ಮನಸ್ಸು ಅತಿಯಾಗಿ ಯೋಚಿಸಲು ಪ್ರಾರಂಭಿಸುತ್ತದೆ. - ಪರೀಕ್ಷೆಯ ಮೇಲೆ ಗಮನ ಕೇಂದ್ರೀಕರಿಸುವ ಬದಲು ಇದನ್ನು ಮಾಡುತ್ತಾರೆ. ಯಾರಿಗಾದರೂ ಆತ್ಮವಿಶ್ವಾಸದ ಕೊರತೆಯಿದ್ದಾಗ ಇದು ಸಂಭವಿಸುತ್ತದೆ. ಅವರು ತಮ್ಮ ಅಸ್ವಸ್ಥತೆಗೆ ಬಾಹ್ಯ ಕಾರಣಗಳನ್ನು ಹುಡುಕುತ್ತಲೇ ಇರುತ್ತಾರೆ. ಆದರೆ ಒಬ್ಬ ವಿದ್ಯಾರ್ಥಿಯು ತನ್ನ ಮೇಲೆ ನಂಬಿಕೆಯನ್ನು ಹೊಂದಿದ್ದರೆ ಮತ್ತು ಕಠಿಣ ಪರಿಶ್ರಮವನ್ನು ಹಾಕಿದ್ದರೆ, ಅವರು ತಮ್ಮನ್ನು ತಾವು ಸಂಭಾಳಿಸಿಕೊಳ್ಳಲು ಒಂದೆರಡು ನಿಮಿಷಗಳು ಬೇಕಾಗುತ್ತವೆ. ಆಳವಾದ ಉಸಿರನ್ನು ತೆಗೆದುಕೊಳ್ಳಿ, ಗಮನ ಕೇಂದ್ರೀಕರಿಸಿ, ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ, ಮತ್ತು ನಂತರ ಮಾನಸಿಕವಾಗಿ ಸಮಯವನ್ನು ನಿಗದಿಪಡಿಸಿ - 'ನನಗೆ ತುಂಬಾ ಸಮಯವಿದೆ, ಆದ್ದರಿಂದ ನಾನು ಪ್ರತಿ ಪ್ರಶ್ನೆಗೆ ಇಷ್ಟು ನಿಮಿಷಗಳಲ್ಲಿ ಉತ್ತರಿಸುತ್ತೇನೆ,' ಎಂದು ಯೋಜಿಸಿ. ತಮ್ಮ ಉತ್ತರಗಳನ್ನು ಮುಂಚಿತವಾಗಿ ಬರೆಯುವುದನ್ನು ಅಭ್ಯಾಸ ಮಾಡುವ ವಿದ್ಯಾರ್ಥಿಗಳು ತಮ್ಮ ಪರೀಕ್ಷೆಗಳನ್ನು ಸುಗಮವಾಗಿ ಮತ್ತು ಯಾವುದೇ ಸಮಸ್ಯೆಗಳಿಲ್ಲದೆ ಪೂರ್ಣಗೊಳಿಸಲು ಸಹಾಯ ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳುತ್ತಾರೆ ಎಂದು ನಾನು ನಂಬುತ್ತೇನೆ.

ಲೆಕ್ಸ್ ಫ್ರಿಡ್ಮನ್: ಯಾವುದೇ ವ್ಯಕ್ತಿ ಸದಾ ಕಲಿಯಲು ಪ್ರಯತ್ನಿಸಬೇಕು ಎಂದು ನೀವು ಉಲ್ಲೇಖಿಸಿದ್ದೀರಿ. ನೀವು ವೈಯಕ್ತಿಕವಾಗಿ ಹೊಸ ವಿಷಯಗಳನ್ನು ಹೇಗೆ ಕಲಿಯುತ್ತೀರಿ? ಯೌವನದಲ್ಲಿ ಮಾತ್ರವಲ್ಲ, ಜೀವನದುದ್ದಕ್ಕೂ ಕಲಿಯುವ ಅತ್ಯುತ್ತಮ ಮಾರ್ಗದ ಬಗ್ಗೆ ನೀವು ಯಾವ ಸಲಹೆಯನ್ನು ನೀಡುವಿರಿ?

ಪ್ರಧಾನಮಂತ್ರಿ: ನಾನು ಮೊದಲೇ ಹೇಳಿದಂತೆ, ನನ್ನ ಆರಂಭಿಕ ಜೀವನದಲ್ಲಿ, ನನಗೆ ಬಹಳಷ್ಟು ಓದುವ ಅವಕಾಶವಿತ್ತು. ಆದರೆ ಈಗ, ನನ್ನ ಜೀವನವು ಹೇಗಿದೆಯೆಂದರೆ ನನಗೆ ಓದಲು ಹೆಚ್ಚು ಸಮಯ ಸಿಗುವುದಿಲ್ಲ. ಆದರೂ ನಾನು ತೀವ್ರ ಕೇಳುಗ ಮತ್ತು ವೀಕ್ಷಕನಾಗಿದ್ದೇನೆ. ನಾನು ಈ ಕ್ಷಣದಲ್ಲಿ ಸಂಪೂರ್ಣವಾಗಿ ಹಾಜರಿರುತ್ತೇನೆ. ನಾನು ಯಾರನ್ನಾದರೂ ಭೇಟಿಯಾದಾಗಲೆಲ್ಲಾ, ನಾನು ಸಂಪೂರ್ಣವಾಗಿ ಅಲ್ಲಿರುತ್ತೇನೆ, ಸಂಪೂರ್ಣವಾಗಿ ಗಮನ ಹರಿಸುತ್ತೇನೆ. ಇದು ವಿಷಯಗಳನ್ನು ಬೇಗನೆ ಗ್ರಹಿಸಲು ನನಗೆ ಸಹಾಯ ಮಾಡುತ್ತದೆ. ಇದೀಗ, ನಾನು ನಿಮ್ಮೊಂದಿಗೆ ಇದ್ದೇನೆ - ನಾನು ಸಂಪೂರ್ಣವಾಗಿ ನಿಮ್ಮೊಂದಿಗೆ ಇದ್ದೇನೆ. ಮೊಬೈಲ್ ಫೋನ್ ಇಲ್ಲ, ಟೆಲಿಫೋನ್ ಇಲ್ಲ, ನನ್ನ ಗಮನವನ್ನು ಬೇರೆಡೆಗೆ ಸೆಳೆಯುವ ಯಾವುದೇ ಸಂದೇಶಗಳಿಲ್ಲ. ನಾನು ಸಂಪೂರ್ಣವಾಗಿ ಗಮನ ಹರಿಸುತ್ತಿದ್ದೇನೆ. ಈ ಅಭ್ಯಾಸವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು. ನೀವು ಹೆಚ್ಚು ಗಮನ ಹರಿಸಿದಷ್ಟೂ, ನಿಮ್ಮ ಕಲಿಕೆಯ ಸಾಮರ್ಥ್ಯವು ಉತ್ತಮವಾಗುತ್ತದೆ. ಎರಡನೆಯದಾಗಿ, ಕಲಿಕೆಯು ಕೇವಲ ಜ್ಞಾನವನ್ನು ಗಳಿಸುವುದಲ್ಲ- ಅದನ್ನು ಕಾರ್ಯರೂಪಕ್ಕೆ ತರಬೇಕು. ಮಹಾನ್ ಚಾಲಕರ ಆತ್ಮಚರಿತ್ರೆಗಳನ್ನು ಓದುವ ಮೂಲಕ ನೀವು ಉತ್ತಮ ಚಾಲಕರಾಗಲು ಸಾಧ್ಯವಿಲ್ಲ; ನೀವು ನಿಜವಾಗಿಯೂ ಕಾರಿನಲ್ಲಿ ಕುಳಿತು, ಸ್ಟೀರಿಂಗ್ ಚಕ್ರವನ್ನು ಹಿಡಿದು ಚಾಲನೆ ಮಾಡಬೇಕು. ನೀವು ಅಪಾಯಗಳನ್ನು ತೆಗೆದುಕೊಳ್ಳಬೇಕು. ನೀವು ಯೋಚಿಸುತ್ತಲೇ ಇದ್ದರೆ, 'ನಾನು ಅಪಘಾತಕ್ಕೆ ಒಳಗಾದರೆ ಏನು? ನಾನು ಸತ್ತರೆ ಏನಾಗಬಹುದು?' ಆಗ ನೀವು ಏನನ್ನೂ ಕಲಿಯುವುದಿಲ್ಲ. ವರ್ತಮಾನದಲ್ಲಿ ವಾಸಿಸುವವರು ಒಂದು ಪ್ರಮುಖ ತತ್ವವನ್ನು ಅನುಸರಿಸುತ್ತಾರೆ ಎಂದು ನಾನು ನಂಬುತ್ತೇನೆ: ಕಳೆದ ಸಮಯವು ಈಗ ನಿಮ್ಮ ಭೂತಕಾಲವಾಗಿದೆ. ಈ ಕ್ಷಣದಲ್ಲಿ ಜೀವಿಸಿ- ಈ ವರ್ತಮಾನದ ಕ್ಷಣವನ್ನು ಅನುಭವಿಸದೆ ಭೂತಕಾಲಕ್ಕೆ ತಿರುಗಲು ಬಿಡಬೇಡಿ. ಇಲ್ಲದಿದ್ದರೆ, ನಿಮ್ಮ ವರ್ತಮಾನವನ್ನು ಜಾರಲು ಬಿಡುವಾಗ ನೀವು ಭವಿಷ್ಯವನ್ನು ಬೆನ್ನಟ್ಟುತ್ತಲೇ ಇರುತ್ತೀರಿ, ಅದನ್ನು ನಿಮ್ಮ ಭೂತಕಾಲದ ಮತ್ತೊಂದು ಭಾಗವಾಗಿ ಪರಿವರ್ತಿಸುತ್ತೀರಿ. ಹೆಚ್ಚಿನ ಜನರು ಈ ತಪ್ಪನ್ನು ಮಾಡುತ್ತಾರೆ- ಅವರು ಭವಿಷ್ಯದ ಬಗ್ಗೆ ತುಂಬಾ ಚಿಂತಿಸುತ್ತಾರೆ, ಅವರು ತಮ್ಮ ವರ್ತಮಾನವನ್ನು ವ್ಯರ್ಥ ಮಾಡುತ್ತಾರೆ, ಮತ್ತು ಹಾಗೆ ಮಾಡಿದಾಗ ಅವರ ವರ್ತಮಾನವು ಕಳೆದುಹೋದ ಗತವಾಗುತ್ತದೆ.

ಲೆಕ್ಸ್ ಫ್ರಿಡ್ಮನ್: ಹೌದು, ಜನರೊಂದಿಗಿನ ನಿಮ್ಮ ಸಭೆಗಳ ಬಗ್ಗೆ ಮತ್ತು ಸಾಮಾನ್ಯವಾಗಿ ಅಡಚಣೆಗಳು ಹೇಗೆ ಬರುತ್ತವೆ ಎಂಬುದರ ಬಗ್ಗೆ ನಾನು ಅನೇಕ ಕಥೆಗಳನ್ನು ಕೇಳಿದ್ದೇನೆ. ಆದರೆ ಇದೀಗ, ಯಾವುದೇ ಅಡಚಣೆಗಳಿಲ್ಲ - ನಾವಿಬ್ಬರೂ ಮಾತ್ರ ಈ ಸಂಭಾಷಣೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದೇವೆ. ಅದು ಸ್ವತಃ ಒಂದು ಸುಂದರವಾದ ವಿಷಯ. ಮತ್ತು ಇಂದು, ನೀವು ನನಗೆ ನಿಮ್ಮ ಸಂಪೂರ್ಣ ಗಮನವನ್ನು ನೀಡಿದ್ದೀರಿ, ಅದು ಉಡುಗೊರೆಯಂತೆ ಭಾಸವಾಗುತ್ತದೆ. ಧನ್ಯವಾದಗಳು! ಈಗ, ನಾನು ನಿಮಗೆ ಕಷ್ಟಕರವಾದ ಆದರೆ ಆಳವಾಗಿ ಸಂಪರ್ಕ ಹೊಂದಿದ ಪ್ರಶ್ನೆಯನ್ನು ಕೇಳಲು ಬಯಸುತ್ತೇನೆ. ನಿಮ್ಮ ಸ್ವಂತ ಸಾವಿನ ಬಗ್ಗೆ ನೀವು ಎಂದಾದರೂ ಯೋಚಿಸಿದ್ದೀರಾ? ನಿಮಗೆ ಸಾಯುವ ಭಯವಿದೆಯೇ?

ಪ್ರಧಾನಮಂತ್ರಿ: ನಾನು ನಿಮಗೆ ಒಂದು ಪ್ರಶ್ನೆ ಕೇಳಬಹುದೇ?

ಲೆಕ್ಸ್ ಫ್ರಿಡ್ಮನ್: ಖಂಡಿತವಾಗಿಯೂ, ಕೇಳಿರಿ.

ಪ್ರಧಾನಮಂತ್ರಿ: ಜನನದ ನಂತರ, ನಮಗೆ ಜೀವನವಿದೆ ಮತ್ತು ನಮಗೆ ಸಾವೂ ಇದೆ. ಈ ಎರಡರಲ್ಲಿ, ಯಾವುದು ಹೆಚ್ಚು ಖಚಿತವಾದುದು?

ಲೆಕ್ಸ್ ಫ್ರಿಡ್ಮನ್: ಸಾವು!

ಪ್ರಧಾನಮಂತ್ರಿ: ಸಾವು! ಈಗ, ಹೇಳಿ- ನೀವು ನನಗೆ ಸರಿಯಾದ ಉತ್ತರವನ್ನು ನೀಡಿದ್ದೀರಿ. ಹುಟ್ಟಿದ ಯಾರಾರಿಗಾದರೂ ಸಾವು ಅನಿವಾರ್ಯ. ಮತ್ತೊಂದೆಡೆ, ಜೀವನವು ಬೆಳೆಯುತ್ತದೆ ಮತ್ತು ವಿಕಸನಗೊಳ್ಳುತ್ತದೆ. ಜೀವನ ಮತ್ತು ಸಾವಿನ ನಡುವೆ, ಸಾವು ಮಾತ್ರ ನಿಶ್ಚಿತ. ಈಗ, ಸಾವು ನಿಶ್ಚಿತ ಎಂದು ನಿಮಗೆ ಈಗಾಗಲೇ ತಿಳಿದಿದ್ದರೆ, ಅದಕ್ಕೆ ಹೆದರುವುದು ಏಕೆ? ಬದಲಾಗಿ, ನಿಮ್ಮ ಶಕ್ತಿ, ಸಮಯ ಮತ್ತು ಬುದ್ಧಿಯನ್ನು ಜೀವನದಲ್ಲಿ ಹೂಡಿಕೆ ಮಾಡಿ, ಸಾವಿನ ಬಗ್ಗೆ ಚಿಂತಿಸುವುದರಲ್ಲಿ ಅಲ್ಲ. ಜೀವನವು ಪ್ರವರ್ಧಮಾನಕ್ಕೆ ಬರಲಿ! ಜೀವನವು ಅನಿಶ್ಚಿತವಾಗಿದೆ- ಅದಕ್ಕಾಗಿಯೇ ನಾವು ಅದಕ್ಕಾಗಿ ಶ್ರಮಿಸಬೇಕು, ಅದನ್ನು ಸುವ್ಯವಸ್ಥಿತಗೊಳಿಸಬೇಕು ಮತ್ತು ಹಂತ ಹಂತವಾಗಿ ನವೀಕರಿಸಬೇಕು. ಆ ರೀತಿಯಾಗಿ, ಸಾವು ಬರುವವರೆಗೆ, ನೀವು ಪೂರ್ಣ ವಸಂತಕಾಲದಲ್ಲಿ ಹೂವಿನಂತೆ ಅರಳಬಹುದು. ಆದ್ದರಿಂದ, ಸಾವಿನ ಆಲೋಚನೆಯನ್ನು ನಿಮ್ಮ ಮನಸ್ಸಿನಿಂದ ತೆಗೆದುಹಾಕಿ. ಇದು ಖಚಿತ, ಅದು ಈಗಾಗಲೇ ಬರೆಯಲ್ಪಟ್ಟಿದೆ, ಮತ್ತು ಅದು ಅಗತ್ಯವಿದ್ದಾಗ ಬರುತ್ತದೆ. ಸಮಯ ಸಿಕ್ಕಾಗ ಅದು ಬರುತ್ತದೆ.

ಲೆಕ್ಸ್ ಫ್ರಿಡ್ಮನ್: ಭವಿಷ್ಯದ ಬಗ್ಗೆ ನಿಮ್ಮ ಭರವಸೆಗಳು ಯಾವುವು? ಭಾರತಕ್ಕಾಗಿ ಮಾತ್ರವಲ್ಲ, ಇಡೀ ಮಾನವಕುಲಕ್ಕಾಗಿ, ಈ ಭೂಮಿಯ ಮೇಲೆ ವಾಸಿಸುವ ನಮ್ಮೆಲ್ಲರಿಗೂ?

ಪ್ರಧಾನಮಂತ್ರಿ: ಸ್ವಭಾವತಃ ನಾನು ತುಂಬಾ ಆಶಾವಾದಿ ವ್ಯಕ್ತಿ. ಹತಾಶೆ ಮತ್ತು ನಕಾರಾತ್ಮಕತೆ - ಅವು ನನ್ನ ಸಾಫ್ಟ್‌ವೇರ್‌ನಲ್ಲಿಲ್ಲ; ನನ್ನ ಬಳಿ ಆ ಚಿಪ್ ಇಲ್ಲ. ಅದಕ್ಕಾಗಿಯೇ ನನ್ನ ಮನಸ್ಸು ಆ ದಿಕ್ಕಿನಲ್ಲಿ ಯೋಚಿಸುವುದಿಲ್ಲ. ನಾವು ಮಾನವ ಇತಿಹಾಸವನ್ನು ನೋಡಿದರೆ, ಮಾನವೀಯತೆಯು ದೊಡ್ಡ ಬಿಕ್ಕಟ್ಟುಗಳನ್ನು ಜಯಿಸಿ ಮುಂದೆ ಸಾಗಿದೆ ಎಂದು ನಾನು ನಂಬುತ್ತೇನೆ. ಸಮಯದ ಬೇಡಿಕೆಯಂತೆ, ಜನರು ಗಮನಾರ್ಹ ಬದಲಾವಣೆಗಳನ್ನು ಸ್ವೀಕರಿಸಿದ್ದಾರೆ ಮತ್ತು ನಿರಂತರವಾಗಿ ವಿಕಸನಗೊಂಡಿದ್ದಾರೆ. ಜೊತೆಗೆ, ಪ್ರತಿ ಯುಗದಲ್ಲಿ, ಮಾನವರು ಹೊಸ ವಿಷಯಗಳನ್ನು ಸ್ವೀಕರಿಸುವ ನೈಸರ್ಗಿಕ ಪ್ರವೃತ್ತಿಯನ್ನು ಹೊಂದಿದ್ದಾರೆ. ನನ್ನ ಮತ್ತೊಂದು ಅವಲೋಕನವೆಂದರೆ, ಪ್ರಗತಿಯಲ್ಲಿ ಏರಿಳಿತಗಳಿದ್ದರೂ, ಹಳೆಯ ಪರಿಕಲ್ಪನೆಗಳನ್ನು ತ್ಯಜಿಸುವ ಶಕ್ತಿ ಮಾನವಕುಲಕ್ಕೆ ಇದೆ. ಅದು ಅದರ ಮಹತ್ತರ ಸಾಮರ್ಥ್ಯ- ಹೊರೆಗಳಿಂದ ಮುಕ್ತಿ ಪಡೆದು ತ್ವರಿತವಾಗಿ ಮುಂದುವರಿಯುವುದು. ಹಳೆಯ ವಿಷಯಗಳನ್ನು ಬಿಟ್ಟುಬಿಡುವ ಶಕ್ತಿ ನಿರ್ಣಾಯಕವಾದುದು, ಮತ್ತು ನಾನು ಹೆಚ್ಚು ಸಂಪರ್ಕ ಹೊಂದಿರುವ ಸಮಾಜವು ಇದನ್ನು ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ನಾನು ನೋಡುತ್ತೇನೆ. ಅದು ಹಳೆಯದನ್ನು ಬಿಟ್ಟು ಹೊಸದನ್ನು ಸ್ವೀಕರಿಸಬಲ್ಲದು ಎಂದು ನಾನು ಬಲವಾಗಿ ನಂಬುತ್ತೇನೆ.

ಲೆಕ್ಸ್ ಫ್ರಿಡ್ಮನ್: ನಾನು ಯೋಚಿಸುತ್ತಿದ್ದೆ- ಕೆಲವು ಕ್ಷಣಗಳಾದರೂ ನೀವು ನನಗೆ ಹಿಂದೂ ಪ್ರಾರ್ಥನೆ ಅಥವಾ ಧ್ಯಾನವನ್ನು ಕಲಿಸಬಹುದೇ? ನಾನು ಕಲಿಯಲು ಪ್ರಯತ್ನಿಸಿದ್ದೇನೆ, ಮತ್ತು ನಾನು ಗಾಯತ್ರಿ ಮಂತ್ರವನ್ನು ಅಭ್ಯಾಸ ಮಾಡುತ್ತಿದ್ದೇನೆ. ನನ್ನ ಉಪವಾಸದ ಸಮಯದಲ್ಲಿ, ನಾನು ಮಂತ್ರಗಳನ್ನು ಪಠಿಸಲು ಪ್ರಯತ್ನಿಸಿದೆ. ಬಹುಶಃ ನಾನು ಈಗ ಅದನ್ನು ಪಠಿಸಲು ಪ್ರಯತ್ನಿಸಬಹುದು, ಮತ್ತು ಈ ಮಂತ್ರ ಮತ್ತು ಇತರ ಮಂತ್ರಗಳ ಅರ್ಥ ಮತ್ತು ಮಹತ್ವವನ್ನು ಮತ್ತು ಅವು ನಿಮ್ಮ ಜೀವನ ಮತ್ತು ಆಧ್ಯಾತ್ಮಿಕತೆಯ ಮೇಲೆ ಹೇಗೆ ಪ್ರಭಾವ ಬೀರಿವೆ ಎಂಬುದನ್ನು ನೀವು ವಿವರಿಸಬಹುದು. ನಾನು ಪ್ರಯತ್ನಿಸಬಹುದೇ?

ಪ್ರಧಾನಮಂತ್ರಿ: ಖಂಡಿತ, ಮುಂದುವರಿಯಿರಿ!

ಲೆಕ್ಸ್ ಫ್ರಿಡ್ಮನ್: ಓಂ ಭುರ್ ಭುವಃ ಸ್ವಾಹಾ, ತತ್‌ಸವಿತುರ್ ವರೇಣ್ಯಂ, ಭರ್ಗೊ ದೇವಸ್ಯ ಧೀಮಹಿ, ಧಿಯೋ ಯೋ ನೋ ಪ್ರಚೋದಯಾತ್. ಹೇಗಿತ್ತು ನನ್ನ ಪಠಣೆ?

ಪ್ರಧಾನಮಂತ್ರಿ: ನೀವು ಚೆನ್ನಾಗಿ ಮಾಡಿದ್ದೀರಿ! ಓಂ ಭುರ್ ಭುವಃ ಸ್ವಾಹಾ, ತತ್ ಸವಿತುರ್ ವರೇಣಂ, ಭರ್ಗೋ ದೇವಸ್ಯ ಧೀಮಹಿ, ಧಿಯೋ ಯೋ ನೋ ಪ್ರಚೋದಯಾತ್. ಈ ಮಂತ್ರವು ವಾಸ್ತವವಾಗಿ ಸೂರ್ಯನ ಆರಾಧನೆಗೆ ಸಂಬಂಧಿಸಿದೆ. ಪ್ರಾಚೀನ ಕಾಲದಲ್ಲಿ, ಸೂರ್ಯನ ಮಹತ್ವವು ಅಗಾಧವಾಗಿತ್ತು. ಹಿಂದೂ ತತ್ವಶಾಸ್ತ್ರದಲ್ಲಿ, ಪ್ರತಿಯೊಂದು ಮಂತ್ರಕ್ಕೂ ವಿಜ್ಞಾನದೊಂದಿಗೆ ಒಂದು ರೀತಿಯ ಸಂಬಂಧವಿದೆ. ಅದು ವಿಜ್ಞಾನವಾಗಿರಲಿ ಅಥವಾ ಪ್ರಕೃತಿಯಾಗಿರಲಿ, ಈ ಮಂತ್ರಗಳು ಯಾವಾಗಲೂ ಒಂದಲ್ಲ ಒಂದು ರೀತಿಯಲ್ಲಿ ಸಂಬಂಧ ಹೊಂದಿವೆ. ಅವು ಜೀವನದ ವಿವಿಧ ಅಂಶಗಳೊಂದಿಗೆ ಸಂಪರ್ಕ ಹೊಂದಿವೆ. ನಿಯಮಿತವಾಗಿ ಮಂತ್ರಗಳನ್ನು ಪಠಿಸುವುದರಿಂದ ಆಳವಾದ ಪ್ರಯೋಜನಗಳಿವೆ. ಇದು ಶಿಸ್ತು, ಮಾನಸಿಕ ಏಕಾಗ್ರತೆ ಮತ್ತು ಆಳವಾದ ಸಾಮರಸ್ಯದ ಪ್ರಜ್ಞೆಯನ್ನು ತರುತ್ತದೆ.

ಲೆಕ್ಸ್ ಫ್ರಿಡ್ಮನ್: ನಿಮ್ಮ ಆಧ್ಯಾತ್ಮಿಕತೆಯಲ್ಲಿ, ನೀವು ದೇವರೊಂದಿಗೆ ಇರುವಾಗ ನಿಮ್ಮ ಶಾಂತಿಯ ಕ್ಷಣಗಳಲ್ಲಿ, ನಿಮ್ಮ ಮನಸ್ಸು ಹೇಗಿರುತ್ತದೆ? ಆ ಪ್ರಕ್ರಿಯೆಯಲ್ಲಿ ಮಂತ್ರಗಳು ಹೇಗೆ ಸಹಾಯ ಮಾಡುತ್ತವೆ, ವಿಶೇಷವಾಗಿ ನೀವು ಉಪವಾಸದಲ್ಲಿರುವಾಗ ಅಥವಾ ನಿಮ್ಮೊಂದಿಗೆ ಏಕಾಂಗಿಯಾಗಿರುವಾಗ?

ಪ್ರಧಾನ ಮಂತ್ರಿ : ನೋಡಿ, ನಾವು ಜನರೊಂದಿಗೆ 'ಧ್ಯಾನ'ದ ಬಗ್ಗೆ ಮಾತನಾಡುವಾಗ, ಅದು ಅವರಿಗೆ ಭಾರವಾದ ಪದವಾಗಿ ಮಾರ್ಪಟ್ಟಿದೆ. ನಮ್ಮ ಭಾಷೆಯಲ್ಲಿ, ನಾವು ಸರಳವಾದ ಪದವನ್ನು ಹೊಂದಿದ್ದೇವೆ - 'ಧ್ಯಾನ'. ಈಗ, ನಾನು ಧ್ಯಾನದ ಬಗ್ಗೆ 'ಧ್ಯಾನ'ದ ಪರಿಭಾಷೆಯಲ್ಲಿ ಮಾತನಾಡಿದರೆ, ಜನರು ಅದು ತುಂಬಾ ಹೊರೆ ಎಂದು ಭಾವಿಸುತ್ತಾರೆ - ಅವರು ಆಧ್ಯಾತ್ಮಿಕ ವ್ಯಕ್ತಿಗಳಲ್ಲದ ಕಾರಣ ಅವರು ಮಾಡಲು ಸಾಧ್ಯವಿಲ್ಲ. ಆದ್ದರಿಂದ ನಾನು ಅದನ್ನು ವಿಭಿನ್ನ ರೀತಿಯಲ್ಲಿ ವಿವರಿಸುತ್ತೇನೆ - ನಿಮ್ಮ ʻಗೈರುಹಾಜರಿ ಮನಸ್ಸಿʼನ ಅಭ್ಯಾಸವನ್ನು ತೊಡೆದುಹಾಕಿ. ಉದಾಹರಣೆಗೆ, ನೀವು ತರಗತಿಯಲ್ಲಿ ಕುಳಿತು ಕ್ರೀಡಾ ಅವಧಿ ಯಾವಾಗ ಪ್ರಾರಂಭವಾಗುತ್ತದೆ ಎಂದು ಯೋಚಿಸುತ್ತಿದ್ದರೆ, ನಿಮ್ಮ ಗಮನವು ವರ್ತಮಾನದಲ್ಲಿಲ್ಲ ಎಂದರ್ಥ. ಆದರೆ ನೀವು ನಿಮ್ಮ ಗಮನವನ್ನು ಆ ಕ್ಷಣಕ್ಕೆ ಸಂಪೂರ್ಣವಾಗಿ ತಂದರೆ, ಅದು ಧ್ಯಾನ. ನಾನು ಹಿಮಾಲಯದಲ್ಲಿ ವಾಸಿಸುತ್ತಿದ್ದಾಗ, ಒಬ್ಬ ಸಂತನನ್ನು ಭೇಟಿಯಾದೆ, ಅವರು ನನಗೆ ಒಂದು ಸರಳ ತಂತ್ರವನ್ನು ಕಲಿಸಿದರು - ಆಧ್ಯಾತ್ಮಿಕ ವಿಷಯವಲ್ಲ, ಕೇವಲ ತಂತ್ರ. ಹಿಮಾಲಯದಲ್ಲಿ, ಸಣ್ಣ ಜಲಪಾತಗಳು ನಿರಂತರವಾಗಿ ಹರಿಯುತ್ತವೆ. ಅವರು ಒಣಗಿದ ಎಲೆಯನ್ನು ಸಣ್ಣಗೆ ಕೆಳಗೆ ಬೀಳುತ್ತಿದ್ದ ನೀರಿನ ಝರಿಯ ಕೆಳಗೆ ಇರಿಸಿದರು ಮತ್ತು ಅದರ ಕೆಳಗೆ ಒಂದು ಪಾತ್ರೆಯನ್ನು ತಲೆಕೆಳಗಾಗಿ ತಿರುಗಿಸಿಟ್ಟರು. ಆದ್ದರಿಂದ ನೀರು ಸ್ಥಿರವಾಗಿ ಹನಿಯುತ್ತಿತ್ತು. ಅವರು ನನಗೆ ಹೇಳಿದರು, 'ಏನನ್ನೂ ಮಾಡಬೇಡ- ಈ ಹನಿ ಹನಿ ಶಬ್ದವನ್ನು ಕೇಳು. ನೀನು ಬೇರೆ ಏನನ್ನೂ ಕೇಳಬಾರದು- ಪಕ್ಷಿಗಳಲ್ಲ, ಗಾಳಿಯಲ್ಲ, ಏನೂ ಅಲ್ಲ - ಈ ಶಬ್ದವನ್ನು ಮಾತ್ರ.' ಮೊದಲಿಗೆ, ನನಗೆ ಕಷ್ಟವಾಯಿತು, ಆದರೆ ಕಾಲಾನಂತರದಲ್ಲಿ, ನನ್ನ ಮನಸ್ಸು ತರಬೇತಿ ಪಡೆಯಿತು. ನಿಧಾನವಾಗಿ, ಅದು ನನಗೆ ಧ್ಯಾನವಾಯಿತು. ಅಲ್ಲಿ ಮಂತ್ರಗಳಿರಲಿಲ್ಲ, ದೇವರ ಆಲೋಚನೆಗಳಿರಲಿಲ್ಲ- ಕೇವಲ ನೀರಿನ ಶಬ್ದ, ನಾದ-ಬ್ರಹ್ಮ (ದೈವಿಕ ಶಬ್ದ). ಈ ಅಭ್ಯಾಸವು ನನಗೆ ಏಕಾಗ್ರತೆಯನ್ನು ಕಲಿಸಿತು, ಮತ್ತು ಅದು ಸ್ವಾಭಾವಿಕವಾಗಿ ನನ್ನ ಧ್ಯಾನವಾಯಿತು. ಅದರ ಬಗ್ಗೆ ಯೋಚಿಸಿ- ನೀವು ಐಷಾರಾಮಿ ಪಂಚತಾರಾ ಹೋಟೆಲ್ ನಲ್ಲಿದ್ದೀರಿ, ಸುಂದರವಾಗಿ ಅಲಂಕರಿಸಿದ ಕೋಣೆಯಲ್ಲಿದ್ದೀರಿ, ಎಲ್ಲಾ ರೀತಿಯಲ್ಲೂ ಪರಿಪೂರ್ಣರಾಗಿದ್ದೀರಿ, ಆದರೆ ಸ್ನಾನಗೃಹದ ನಲ್ಲಿ ಹನಿಗಳು ಬೀಳುತ್ತಿವೆ. ಕೋಣೆ ಎಷ್ಟೇ ದುಬಾರಿಯಾಗಿದ್ದರೂ ಆ ಸಣ್ಣ ಶಬ್ದವು ನಿಮ್ಮ ಅನುಭವವನ್ನು ಹಾಳುಮಾಡುತ್ತದೆ. ಸಣ್ಣ ವಿಷಯಗಳು ಮನಸ್ಸನ್ನು ಹೇಗೆ ಅಡ್ಡಿಪಡಿಸುತ್ತವೆ ಮತ್ತು ಆಂತರಿಕ ಗಮನವು ನಮ್ಮ ಅನುಭವಗಳನ್ನು ಹೇಗೆ ಪರಿವರ್ತಿಸುತ್ತದೆ ಎಂಬುದನ್ನು ಇದು ತೋರಿಸುತ್ತದೆ. ನಮ್ಮ ಧರ್ಮಗ್ರಂಥಗಳು ಜೀವನ ಮತ್ತು ಸಾವಿನ ಬಗ್ಗೆ ಸಮಗ್ರ ರೀತಿಯಲ್ಲಿ ಮಾತನಾಡುತ್ತವೆ. ಒಂದು ಮಂತ್ರವಿದೆ: 'ಓಂ ಪೂರ್ಣಮದಾ ಪೂರ್ಣಮಿದಂ ಪೂರ್ಣಮುದಾಚ್ಯತೆ'. ಇದು ಜೀವನವನ್ನು ಒಂದು ಸಂಪೂರ್ಣ ಚಕ್ರವೆಂದು ವಿವರಿಸುತ್ತದೆ- ಸಂಪೂರ್ಣತೆಗೆ ಕಾರಣವಾಗುವ ಪರಿಪೂರ್ಣತೆ. ಅಂತೆಯೇ, ನಾವು ಸಾರ್ವತ್ರಿಕ ಯೋಗಕ್ಷೇಮದ ಬಗ್ಗೆ ಮಾತನಾಡುತ್ತೇವೆ: 'ಸರ್ವೇ ಭವಂತು ಸುಖಿನಾ, ಸರ್ವೇ ಸಂತು ನಿರಾಮಯ'—ಎಲ್ಲರೂ ಸಂತೋಷವಾಗಿರಲಿ, ಎಲ್ಲರೂ ರೋಗದಿಂದ ಮುಕ್ತರಾಗಲಿ. 'ಸರ್ವೇ ಭದ್ರಾನಿ ಪಶ್ಯಂತು, ಮಾ ಕಶ್ಚಿದ್ ದುಖ್ಭಾಗ್ ಭವೇತ್'- ಪ್ರತಿಯೊಬ್ಬರೂ ಒಳ್ಳೆಯದನ್ನು ನೋಡಲಿ, ಯಾರೂ ತೊಂದರೆ ಅನುಭವಿಸದಿರಲಿ. ಮತ್ತು ಅಂತಿಮವಾಗಿ, ಪ್ರತಿಯೊಂದು ಮಂತ್ರವು 'ಓಂ ಶಾಂತಿ, ಶಾಂತಿ, ಶಾಂತಿ' - ಶಾಂತಿ, ಶಾಂತಿ, ಶಾಂತಿಯೊಂದಿಗೆ ಕೊನೆಗೊಳ್ಳುತ್ತದೆ. ಭಾರತದಲ್ಲಿ ಈ ಆಚರಣೆಗಳು ಮತ್ತು ಮಂತ್ರಗಳು ಕೇವಲ ಸಂಪ್ರದಾಯಗಳಲ್ಲ; ಅವು ಸಾವಿರಾರು ವರ್ಷಗಳ ಜ್ಞಾನ ಮತ್ತು ನಮ್ಮ ಋಷಿಮುನಿಗಳ ಆಳವಾದ ಆಧ್ಯಾತ್ಮಿಕ ಸಂಶೋಧನೆಯ ಫಲಿತಾಂಶವಾಗಿದೆ. ಅವು ಜೀವನದ ಅಂಶಗಳೊಂದಿಗೆ ಆಳವಾಗಿ ಸಂಪರ್ಕ ಹೊಂದಿವೆ ಮತ್ತು ವೈಜ್ಞಾನಿಕ ರೀತಿಯಲ್ಲಿ ರಚಿತವಾಗಿವೆ.

ಲೆಕ್ಸ್ ಫ್ರಿಡ್ಮನ್: ಶಾಂತಿ, ಶಾಂತಿ, ಶಾಂತಿ. ಈ ಗೌರವಕ್ಕಾಗಿ ಧನ್ಯವಾದಗಳು, ಮತ್ತು ಈ ಅದ್ಭುತ ಸಂವಾದಕ್ಕಾಗಿ ಧನ್ಯವಾದಗಳು. ನನ್ನನ್ನು ಭಾರತಕ್ಕೆ ಸ್ವಾಗತಿಸಿದ್ದಕ್ಕಾಗಿ ಧನ್ಯವಾದಗಳು, ಮತ್ತು ಈಗ ನಾನು ನಾಳೆ ಭಾರತೀಯ ಆಹಾರದೊಂದಿಗೆ ನನ್ನ ಉಪವಾಸವನ್ನು ಅಂತ್ಯಗೊಳಿಸಲು ಕಾಯುತ್ತಿದ್ದೇನೆ. ತುಂಬಾ ಧನ್ಯವಾದಗಳು, ಪ್ರಧಾನ ಮಂತ್ರಿಯವರೆ. ಇದು ನನಗೆ ಸಂದ ಅತಿದೊಡ್ಡ ದೊಡ್ಡ ಗೌರವ.

ಪ್ರಧಾನಮಂತ್ರಿ: ನಿಮ್ಮೊಂದಿಗೆ ಮಾತನಾಡುವ ಅವಕಾಶವನ್ನು ನಾನು ನಿಜವಾಗಿಯೂ ಆನಂದಿಸಿದೆ. ನೀವು ಎರಡು ದಿನಗಳಿಂದ ಉಪವಾಸ ಮಾಡುತ್ತಿರುವುದರಿಂದ, ಒಂದೇ ಬಾರಿಗೆ ತಿನ್ನಲು ಪ್ರಾರಂಭಿಸಬೇಡಿ. ಒಂದು ದಿನ ಕೆಲವು ದ್ರವಾಹಾರದೊಂದಿಗೆ ಪ್ರಾರಂಭಿಸಿ; ಅದು ನಿಮಗೆ ವ್ಯವಸ್ಥಿತ ಪ್ರಯೋಜನವನ್ನು ನೀಡುತ್ತದೆ. ಬಹುಶಃ ಇಂದು, ನಾನು ಮೊದಲ ಬಾರಿಗೆ ಹಲವಾರು ವಿಷಯಗಳ ಬಗ್ಗೆ ಮಾತನಾಡಿದೆ. ಏಕೆಂದರೆ ನಾನು ಸಾಮಾನ್ಯವಾಗಿ ಈ ವಿಷಯಗಳನ್ನು ತುಂಬಾ ವೈಯಕ್ತಿಕವಾಗಿರಿಸುತ್ತೇನೆ. ಆದರೆ ಇಂದು, ಅವುಗಳಲ್ಲಿ ಕೆಲವನ್ನು ಹೊರತರುವಲ್ಲಿ ನೀವು ಯಶಸ್ವಿಯಾಗಿದ್ದೀರಿ. ಇದು ಸಾಧ್ಯವಾಯಿತು...

ಲೆಕ್ಸ್ ಫ್ರಿಡ್ಮನ್: ಧನ್ಯವಾದಗಳು.

ಪ್ರಧಾನಮಂತ್ರಿ: ನಿಮ್ಮ ಕೇಳುಗರು ಅದನ್ನು ಆನಂದಿಸುತ್ತಾರೆ. ನಾನು ಸಹ ನಿಜವಾಗಿಯೂ ಆನಂದಿಸಿದೆ. ನಿಮಗೆ ನನ್ನ ಶುಭ ಹಾರೈಕೆಗಳು. ಧನ್ಯವಾದಗಳು!

ಲೆಕ್ಸ್ ಫ್ರಿಡ್ಮನ್: ಧನ್ಯವಾದಗಳು! ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಈ ಸಂಭಾಷಣೆಯನ್ನು ಆಲಿಸಿದ್ದಕ್ಕಾಗಿ ಧನ್ಯವಾದಗಳು. ಈಗ, ನಾನು ಕೆಲವು ಪ್ರಶ್ನೆಗಳಿಗೆ ಉತ್ತರಿಸಲು ಬಯಸುತ್ತೇನೆ ಮತ್ತು ನನ್ನ ಮನಸ್ಸಿನಲ್ಲಿ ಹರಿಯುವ ಕೆಲವು ಆಲೋಚನೆಗಳನ್ನು ವ್ಯಕ್ತಪಡಿಸಲು ಬಯಸುತ್ತೇನೆ. ನೀವು ಏನನ್ನಾದರೂ ಕೇಳಲು ಅಥವಾ ಯಾವುದೇ ಕಾರಣಕ್ಕಾಗಿ ನನ್ನನ್ನು ತಲುಪಲು ಬಯಸಿದರೆ, [lexfridman.com/contact](https://lexfridman.com/contact) ಲಿಂಕ್‌ಗೆ ಭೇಟಿ ನೀಡಿ. ಮೊದಲನೆಯದಾಗಿ, ನಾನು ಪ್ರಧಾನಿಯವರ ತಂಡವನ್ನು ಅಭಿನಂದಿಸಲು ಬಯಸುತ್ತೇನೆ. ಇದು ಅತ್ಯುತ್ತಮ ತಂಡವಾಗಿತ್ತು! ಅವರು ನಂಬಲಾಗದಷ್ಟು ನುರಿತ, ದಕ್ಷ ಮತ್ತು ಉತ್ತಮ ಸಂವಹನಕಾರರಾಗಿದ್ದರು. ಒಟ್ಟಾರೆಯಾಗಿ, ಇದು ಅದ್ಭುತ ತಂಡವಾಗಿತ್ತು. ಪ್ರಧಾನಿ ಮೋದಿ ಅವರು ಹಿಂದಿಯಲ್ಲಿ ಮಾತನಾಡುವಾಗ ನಾನು ಇಂಗ್ಲಿಷ್ ನಲ್ಲಿ ಮಾತನಾಡಿದ್ದರಿಂದ, ನಮ್ಮ ಸಂಭಾಷಣೆಯನ್ನು ಭಾಷಾಂತರಿಸುತ್ತಿದ್ದ ಭಾಷಾಂತರಕಾರರ ಬಗ್ಗೆ ನಾನು ಏನಾದರೂ ಹೇಳಲೇಬೇಕು. ಆಕೆ ಸಂಪೂರ್ಣವಾಗಿ ಅತ್ಯುತ್ತಮ. ಎಷ್ಟೇ ಹೊಗಳಿದರೂ ಸಾಲದು. ಉಪಕರಣಗಳಿಂದ ಹಿಡಿದು ಅನುವಾದದ ಗುಣಮಟ್ಟದವರೆಗೆ, ಅವರ ಸಂಪೂರ್ಣ ಕೆಲಸವು ಸರಳ, ಅತ್ಯುತ್ತಮವಾಗಿತ್ತು. ಒಟ್ಟಾರೆ, ದೆಹಲಿ ಮತ್ತು ಭಾರತದ ಸುತ್ತಲೂ ಪ್ರಯಾಣಿಸುವಾಗ, ಪ್ರಪಂಚದ ಉಳಿದ ಭಾಗಗಳಿಗಿಂತ ಸಾಕಷ್ಟು ಭಿನ್ನವಾದ ಅಂಶಗಳನ್ನು ನಾನು ಗಮನಿಸಿದ್ದೇನೆ. ನಾನು ಸಂಪೂರ್ಣವಾಗಿ ಬೇರೊಂದು ಜಗತ್ತಿಗೆ ಕಾಲಿಟ್ಟಂತೆ ಭಾಸವಾಯಿತು. ಸಾಂಸ್ಕೃತಿಕವಾಗಿ, ನಾನು ಈ ಮೊದಲು ಅಂತಹದ್ದನ್ನು ಅನುಭವಿಸಿರಲಿಲ್ಲ. ಅಲ್ಲಿ ಜನರು ಪರಸ್ಪರ ಸಂವಹನ ನಡೆಸುವ ರೀತಿ—ಅಂತಹ ನಂಬಲಾಗದ ಮತ್ತು ಆಕರ್ಷಕ ವ್ಯಕ್ತಿಗಳು! ಸಹಜವಾಗಿ, ಭಾರತವು ವೈವಿಧ್ಯಮಯ ಸಂಸ್ಕೃತಿಗಳಿಂದ ಕೂಡಿದೆ, ಮತ್ತು ದೆಹಲಿ ಅದರ ಒಂದು ನೋಟವಾಗಿದೆ. ನ್ಯೂಯಾರ್ಕ್, ಟೆಕ್ಸಾಸ್ ಅಥವಾ ಅಯೋವಾ ಮಾತ್ರ ಇಡೀ ಅಮೆರಿಕವನ್ನು ಪ್ರತಿನಿಧಿಸುವುದಿಲ್ಲ, ಅವು ಅಮೆರಿಕದ ವಿಭಿನ್ನ ಛಾಯೆಗಳಾಗಿವೆ. ಈ ಪ್ರವಾಸದಲ್ಲಿ, ನಾನು ರಿಕ್ಷಾದಲ್ಲಿ ಎಲ್ಲೆಡೆ ಪ್ರಯಾಣಿಸಿದೆ. ನಾನು ಅನ್ವೇಷಿಸುತ್ತಾ ಬೀದಿಗಳಲ್ಲಿ ಅಲೆದಾಡಿದೆ. ನಾನು ಜನರೊಂದಿಗೆ ಅವರ ಜೀವನದ ಬಗ್ಗೆ ಮಾತನಾಡಿದೆ. ಪ್ರಪಂಚದ ಬೇರೆಡೆಯಂತೆ, ಇಲ್ಲಿಯೂ ನನಗೆ ಏನನ್ನಾದರೂ ಮಾರಾಟ ಮಾಡಲು ಬಯಸುವ ಜನರಿದ್ದರು- ಮೊದಲ ನೋಟದಲ್ಲಿ, ನನ್ನನ್ನು ಪ್ರವಾಸಿಯಾಗಿ, ಖರ್ಚು ಮಾಡಲು ಸ್ವಲ್ಪ ಹಣವನ್ನು ಹೊಂದಿರುವ ವಿದೇಶಿ ಪ್ರಯಾಣಿಕನಾಗಿ ಜನರು ನೋಡಿದರು. ಆದರೆ, ಎಂದಿನಂತೆ, ನಾನು ಅಂತಹ ಮೇಲ್ನೋಟದ ಸಂವಹನಗಳನ್ನು ತಪ್ಪಿಸಿದೆ. ಬದಲಾಗಿ, ನಾನು ಜನರೊಂದಿಗೆ ನೇರವಾಗಿ ಹೃದಯಪೂರ್ವಕವಾಗಿ ಮಾತಾಡಿದೆ— ಅವರು ಏನನ್ನು ಪ್ರೀತಿಸುತ್ತಾರೆ, ಅವರು ಯಾವುದಕ್ಕೆ ಭಯಪಡುತ್ತಾರೆ, ಮತ್ತು ಅವರು ಜೀವನದಲ್ಲಿ ಅನುಭವಿಸಿದ ಸಂತೋಷ ಮತ್ತು ಕಷ್ಟಗಳ ಬಗ್ಗೆ ವಿಚಾರಿಸಿದೆ. ಈ ಜನರ ಬಗ್ಗೆ ಒಂದು ಒಳ್ಳೆಯ ವಿಷಯವೆಂದರೆ, ನೀವು ಎಲ್ಲೇ ಇದ್ದರೂ, ಅವರು ಮೇಲ್ಮೈಯಿಂದಾಚೆಗೆ ಬೇಗನೆ ನೋಡುತ್ತಾರೆ - ಅಪರಿಚಿತರು ಆಗಾಗ್ಗೆ ಧರಿಸುವ ಮುಖವಾಡಗಳಿಂದಾಚೆಗೆ ನೋಡಬಲ್ಲರು. ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಅವರಿಗೆ ತೋರಿಸುವಷ್ಟು ನೀವು ಮುಕ್ತ ಮತ್ತು ಪ್ರಾಮಾಣಿಕವಾಗಿದ್ದರೆ, ಅವರು ಅದನ್ನು ಗುರುತಿಸುತ್ತಾರೆ. ಮತ್ತು ಅದನ್ನೇ ನಾನು ಮಾಡಲು ಪ್ರಯತ್ನಿಸಿದೆ. ನಾನು ಹೇಳಲು ಬಯಸುವ ಮತ್ತೊಂದು ವಿಷಯವೆಂದರೆ, ಬಹುಪಾಲು, ಪ್ರತಿಯೊಬ್ಬರೂ ನಂಬಲಾಗದಷ್ಟು ದಯೆ ಮತ್ತು ಮಾನವೀಯತೆಯಿಂದ ತುಂಬಿದ್ದರು. ಅವರು ಇಂಗ್ಲಿಷ್ ಮಾತನಾಡದಿದ್ದರೂ, ಅವರನ್ನು ಅರ್ಥಮಾಡಿಕೊಳ್ಳುವುದು ಸದಾ ಸುಲಭವಾಗಿತ್ತು. ಬಹುಶಃ, ನಾನು ಇಲ್ಲಿಯವರೆಗೆ ಭೇಟಿಯಾದ ಹೆಚ್ಚಿನ ಜನರಿಗೆ ಹೋಲಿಸಿದರೆ, ಭಾರತದಲ್ಲಿ ಇದು ತುಂಬಾ ಸುಲಭವಾಗಿತ್ತು - ಜನರ ಕಣ್ಣುಗಳು, ಮುಖಗಳು ಮತ್ತು ಆಂಗಿಕ ಭಾಷೆ ತುಂಬಾ ತಿಳಿಸುತ್ತದೆ. ಎಲ್ಲವೂ ಸ್ಪಷ್ಟವಾಗಿತ್ತು, ಭಾವನೆಗಳು ಸಹ ಬಹಿರಂಗವಾಗಿ ಗೋಚರಿಸುತ್ತಿದ್ದವು. ಉದಾಹರಣೆಗೆ, ನಾನು ಪೂರ್ವ ಯುರೋಪಿನಲ್ಲಿ ಪ್ರಯಾಣಿಸುವಾಗ, ಯಾರನ್ನಾದರೂ ಅರ್ಥಮಾಡಿಕೊಳ್ಳುವುದು ಹೋಲಿಕೆಯಲ್ಲಿ ಹೆಚ್ಚು ಕಷ್ಟಕರವಾಗಿರುತ್ತದೆ. ನೀವು ನೋಡುವ ಆ ಮೆಮ್ - ಅದರಲ್ಲಿ ಸ್ವಲ್ಪ ಸತ್ಯವಿದೆ. ಸಾಮಾನ್ಯವಾಗಿ, ಜನರು ತಮ್ಮ ನಿಜವಾದ ಭಾವನೆಗಳನ್ನು ಬಹಿರಂಗವಾಗಿ ಹೊರಬರಲು ಬಿಡುವುದಿಲ್ಲ. ಆದರೆ ಭಾರತದಲ್ಲಿ, ಪ್ರತಿಯೊಬ್ಬರೂ ಮುಕ್ತವಾಗಿ ಮುಂದೆ ಬರುತ್ತಾರೆ. ಆದ್ದರಿಂದ, ದೆಹಲಿಯಲ್ಲಿ ಹಲವಾರು ವಾರಗಳನ್ನು ಅಲೆದಾಡಿದ ನಂತರ, ಜನರನ್ನು ಭೇಟಿಯಾದ ನಂತರ, ನಾನು ಅನೇಕ ನಂಬಲಾಗದ ಅನುಭವಗಳು ಮತ್ತು ಸಂವಾದಗಳನ್ನು ನನ್ನವಾಗಿಸಿಕೊಂಡಿದ್ದೇನೆ. ಸಾಮಾನ್ಯವಾಗಿ, ಜನರನ್ನು ಅರ್ಥಮಾಡಿಕೊಳ್ಳುವ ವಿಷಯಕ್ಕೆ ಬಂದಾಗ, ಪದಗಳಿಗಿಂತ ಹೆಚ್ಚಾಗಿ ಕಣ್ಣುಗಳು ಮಾತನಾಡುತ್ತವೆ ಎಂದು ನಾನು ನಂಬುತ್ತೇನೆ. ನಾವು ಮನುಷ್ಯರು ಆಕರ್ಷಕ ಜೀವಿಗಳು. ಮೇಲ್ಮೈಯಲ್ಲಿರುವ ಶಾಂತ ಅಲೆಗಳ ಕೆಳಗೆ, ಆಗಾಗ್ಗೆ ಆಳವಾದ, ಬಿರುಗಾಳಿಯ ಸಾಗರವು ಅಡಗಿರುತ್ತದೆ. ಕ್ಯಾಮೆರಾ ಮುಂದಿರಲಿ ಅಥವಾ ಕ್ಯಾಮೆರಾ ಇಲ್ಲದಿರಲಿ ಈ ಸಂಭಾಷಣೆಗಳಲ್ಲಿ ನಾನು  ಆ ಆಳವನ್ನು ತಲುಪಲು ಪ್ರಯತ್ನಿಸುತ್ತೇನೆ.

ನಾನು ಭಾರತದಲ್ಲಿ ಕಳೆದ ಕೆಲವು ವಾರಗಳು ಒಂದು ಮಾಂತ್ರಿಕ ಅನುಭವವಾಗಿತ್ತು. ಸ್ವಯಂ ಚಾಲಿತ ಕಾರುಗಳಿಗೆ ಅಂತಿಮ ಸವಾಲಿನಂತೆ ಇಲ್ಲಿನ ಸಂಚಾರ ಕೂಡ ನಂಬಲಾಗದಂತಿತ್ತು. ಇದು ನನಗೆ ಪ್ರಕೃತಿಯ ಸಾಕ್ಷ್ಯಚಿತ್ರ ವೀಡಿಯೊಗಳನ್ನು ನೆನಪಿಸಿತು- ಮೀನುಗಳೊಂದಿಗಿನ ವೀಡಿಯೊಗಳು. ಅಲ್ಲಿ ಸಾವಿರಾರು ಮೀನುಗಳು ನಂಬಲಾಗದಷ್ಟು ಹೆಚ್ಚಿನ ವೇಗದಲ್ಲಿ ಒಟ್ಟಿಗೆ ಈಜುತ್ತವೆ, ಮತ್ತು ಅವೆಲ್ಲವೂ ವಿಭಿನ್ನ ದಿಕ್ಕುಗಳಲ್ಲಿ ಚದುರಿದಂತೆ ಕಾಣುತ್ತದೆ. ಆದರೂ, ನೀವು ಅದನ್ನು ವಿಶಾಲ ದೃಷ್ಟಿಕೋನದಿಂದ ನೋಡಿದಾಗ, ಅವೆಲ್ಲವೂ ಪರಿಪೂರ್ಣ ಲಯ ಮತ್ತು ಸಾಮರಸ್ಯದಲ್ಲಿ ಚಲಿಸುತ್ತಿವೆ ಎಂದು ತೋರುತ್ತದೆ. ನಾನು ಖಂಡಿತವಾಗಿಯೂ ನನ್ನ ಸ್ನೇಹಿತ ಪಾಲ್ ರೊಸೊಲಿ ಮತ್ತು ಇನ್ನೂ ಕೆಲವು ಸ್ನೇಹಿತರೊಂದಿಗೆ ಶೀಘ್ರದಲ್ಲೇ ಭಾರತಕ್ಕೆ ಮರಳಲು ಯೋಜಿಸುತ್ತಿದ್ದೇನೆ. ನಾನು ಉತ್ತರದಿಂದ ದಕ್ಷಿಣಕ್ಕೆ ಭಾರತದಾದ್ಯಂತ, ಪ್ರಯಾಣಿಸುತ್ತೇನೆ.

ಈಗ, ನಾನು ಮೊದಲು ಭಾರತ ಮತ್ತು ಅದರ ಆಳವಾದ ತಾತ್ವಿಕ ಮತ್ತು ಆಧ್ಯಾತ್ಮಿಕ ವಿಚಾರಗಳತ್ತ ನನ್ನನ್ನು ಸೆಳೆದ ಪುಸ್ತಕದ ಬಗ್ಗೆ ಮಾತನಾಡಲು ಬಯಸುತ್ತೇನೆ. ಆ ಪುಸ್ತಕವು ಹರ್ಮನ್ ಹೆಸ್ಸೆ ಬರೆದ ʻಸಿದ್ಧಾರ್ಥʼ. ನನ್ನ ಹದಿಹರೆಯದ ವರ್ಷಗಳಲ್ಲಿ ನಾನು ಹೆಸ್ಸೆಯ ಹೆಚ್ಚಿನ ಪ್ರಸಿದ್ಧ ಪುಸ್ತಕಗಳನ್ನು ಓದಿದ್ದೆ, ಆದರೆ ವರ್ಷಗಳ ನಂತರ, ನಾನು ಅವುಗಳನ್ನು ಮರುಪರಿಶೀಲಿಸಿದೆ. ದಸ್ತೇವ್‌ಸ್ಕಿ, ಕ್ಯಾಮಸ್, ಕಾಫ್ಕಾ, ಆರ್ವೆಲ್, ಹೆಮಿಂಗ್ವೇ, ಕೆರೂವಾಕ್, ಸ್ಟೈನ್ಬೆಕ್ ಮತ್ತು ಇತರ ಬರಹಗಾರರು ಸಂಪೂರ್ಣವಾಗಿ ವಿಭಿನ್ನ ರೀತಿಯ ಸಾಹಿತ್ಯದಲ್ಲಿ ಆಳವಾಗಿ ಮುಳುಗಿದ್ದ ಸಮಯದಲ್ಲೇ ನಾನು ʻಸಿದ್ಧಾರ್ಥʼ ಕೈಗೆತ್ತಿಕೊಂಡೆ. ಆ ಪುಸ್ತಕಗಳಲ್ಲಿ ಅನೇಕವು ನನ್ನ ಯೌವನದಲ್ಲಿ ನಾನು ಆಗಾಗ್ಗೆ ಅರ್ಥಮಾಡಿಕೊಳ್ಳಲು ಹೆಣಗಾಡುತ್ತಿದ್ದ ಅದೇ ಮಾನವ ಸಂದಿಗ್ಧತೆಯನ್ನು ಪ್ರತಿಬಿಂಬಿಸುವಂತಿದ್ದವು, ಮತ್ತು ಇಂದಿಗೂ, ಅವು ಹೊಸ ರೀತಿಯಲ್ಲಿ ನನ್ನನ್ನು ಕುತೂಹಲಗೊಳಿಸುತ್ತಲೇ ಇವೆ. ಆದರೆ ಈ ಸಂದಿಗ್ಧತೆಗಳನ್ನು ಪೌರ್ವಾತ್ಯ ದೃಷ್ಟಿಕೋನದಿಂದ ಹೇಗೆ ನೋಡಲಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ನನಗೆ ಸಹಾಯ ಮಾಡಿದ್ದು ʻಸಿದ್ಧಾರ್ಥʼ. ಇದನ್ನು ಹರ್ಮನ್ ಹೆಸ್ಸೆ ಬರೆದಿದ್ದಾರೆ. ಮತ್ತು ಹೌದು, ದಯವಿಟ್ಟು, ನಾನು ಅವರು ಹೆಸರನ್ನು ಈ ರೀತಿ ಹೇಳುತ್ತೇನೆ. ಕೆಲವರು ಅದನ್ನು 'ಹೆಸ್ಸೆ' ಎಂದು ಉಚ್ಚರಿಸುವುದನ್ನು ನಾನು ಕೇಳಿದ್ದೇನೆ, ಆದರೆ ನಾನು ಯಾವಾಗಲೂ 'ಹೆಸ್ಸೆ' ಎಂದು ಹೇಳಿದ್ದೇನೆ. ಹೌದು, ಜರ್ಮನಿ ಮತ್ತು ಸ್ವಿಟ್ಜರ್‌ಲೆಂಡ್‌ನ ನೊಬೆಲ್ ಪ್ರಶಸ್ತಿ ವಿಜೇತ ಬರಹಗಾರ ಹರ್ಮನ್ ಹೆಸ್ಸೆ ತಮ್ಮ ಜೀವನದ ಅತ್ಯಂತ ಕಷ್ಟದ ಸಮಯದಲ್ಲಿ ಈ ಪುಸ್ತಕವನ್ನು ಬರೆದಿದ್ದಾರೆ. ಅವರ ವೈವಾಹಿಕ ಜೀವನವು ಮುರಿದುಬೀಳುತ್ತಿತ್ತು, ಮೊದಲನೆಯ ಮಹಾಯುದ್ಧವು ಅವರ ಶಾಂತಿಯ ಕನಸುಗಳನ್ನು ಛಿದ್ರಗೊಳಿಸಿತ್ತು, ಮತ್ತು ಅವರು ತೀವ್ರ ತಲೆನೋವು, ನಿದ್ರಾಹೀನತೆ ಮತ್ತು ಖಿನ್ನತೆಯಿಂದ ಬಳಲುತ್ತಿದ್ದರು. ಆಗ ಅವರು ಕಾರ್ಲ್ ಜಂಗ್ ಅವರೊಂದಿಗೆ ಮನೋವಿಶ್ಲೇಷಣೆಯನ್ನು ಪ್ರಾರಂಭಿಸಿದರು, ಇದು ಅವರ ತೊಂದರೆಗೊಳಗಾದ ಮನಸ್ಸನ್ನು ಶಾಂತಗೊಳಿಸುವ ಮಾರ್ಗವಾಗಿ ಪೌರಾತ್ಯ ತತ್ವಶಾಸ್ತ್ರವನ್ನು ಅರ್ಥಮಾಡಿಕೊಳ್ಳುವತ್ತ ಕರೆದೊಯ್ಯಿತು. ಹೆಸ್ಸೆ ಪ್ರಾಚೀನ ಹಿಂದೂ ಧರ್ಮಗ್ರಂಥಗಳ ಹಲವಾರು ಅನುವಾದಗಳನ್ನು ಓದಿದರು, ಬೌದ್ಧ ಗ್ರಂಥಗಳನ್ನು ಅಧ್ಯಯನ ಮಾಡಿದರು, ಉಪನಿಷತ್ತುಗಳನ್ನು ಓದಿದರು ಮತ್ತು ಭಗವದ್ಗೀತೆಯನ್ನು ಸಹ ಅನ್ವೇಷಿಸಿದರು. ʻಸಿದ್ಧಾರ್ಥʼ ಬರೆಯುವುದು ಸ್ವತಃ ಅವರಿಗೆ ಒಂದು ಪ್ರಯಾಣವಾಗಿತ್ತು- ಪುಸ್ತಕದ ಮುಖ್ಯ ಪಾತ್ರದ ಪ್ರಯಾಣದಂತೆ. ಹೆಸ್ಸೆ 1919 ರಲ್ಲಿ ಈ ಪುಸ್ತಕವನ್ನು ಬರೆಯಲು ಪ್ರಾರಂಭಿಸಿದರು ಮತ್ತು ಅದನ್ನು ಮೂರು ವರ್ಷಗಳಲ್ಲಿ ಪೂರ್ಣಗೊಳಿಸಿದರು, ಈ ಸಮಯದಲ್ಲಿ ಅವರು ಪ್ರಮುಖ ಮಾನಸಿಕ ಆರೋಗ್ಯ ಸಮಸ್ಯೆ ಎದುರಿಸಿದರು. ಈ ಪುಸ್ತಕವು ಪ್ರಾಚೀನ ಭಾರತದ ಸಿದ್ಧಾರ್ಥ ಎಂಬ ಯುವಕನ ಕಥೆಯನ್ನು ಹೇಳುತ್ತದೆ, ಅವನು ಅಂತಿಮ ಸತ್ಯವನ್ನು ಹುಡುಕಲು ಸಂಪತ್ತು ಮತ್ತು ಸೌಕರ್ಯವನ್ನು ತ್ಯಜಿಸುತ್ತಾನೆ. ಪ್ರತಿ ಪುಟದಲ್ಲೂ, ನೀವು ಅವನ ವೈಯಕ್ತಿಕ ಹೋರಾಟಗಳನ್ನು ಅನುಭವಿಸಬಹುದು- ಅವನ ಚಡಪಡಿಕೆ, ಲೌಕಿಕ ಜೀವನದ ಬಗ್ಗೆ ಅವನ ಭ್ರಮನಿರಸನ ಮತ್ತು ತನಗಾಗಿ ಸತ್ಯವನ್ನು ಕಂಡುಹಿಡಿಯುವ ಅವನ ಆಳವಾದ ಬಯಕೆ. ಈ ಪುಸ್ತಕವು ಹೆಸ್ಸೆಗೆ ಕೇವಲ ತತ್ವಶಾಸ್ತ್ರದ ಬಗ್ಗೆ ಅಲ್ಲ - ಇದು ಅವರ ಮಾನಸಿಕ ಹೋರಾಟಗಳಿಂದ ತಪ್ಪಿಸಿಕೊಳ್ಳುವ ಮಾರ್ಗವಾಗಿಯಿತು ಎಂದು ನಾನು ಮತ್ತೆ ಒತ್ತಿಹೇಳಲು ಬಯಸುತ್ತೇನೆ. ಅವರು ದುಃಖದಿಂದ ಹೊರಬರಲು ಮತ್ತು ಆಂತರಿಕ ಬುದ್ಧಿವಂತಿಕೆಯತ್ತ ಸಾಗಲು ಬರೆಯುತ್ತಿದ್ದರು. ನಾನು ಇಲ್ಲಿ ಪುಸ್ತಕದ ಬಗ್ಗೆ ಹೆಚ್ಚು ವಿವರವಾಗಿ ಹೇಳಲು ಹೋಗುವುದಿಲ್ಲ, ಆದರೆ ಅದರಿಂದ ನಾನು ಕಲಿತ ಎರಡು ಪ್ರಮುಖ ಪಾಠಗಳನ್ನು ಎತ್ತಿ ತೋರಿಸಲು ಬಯಸುತ್ತೇನೆ ಮತ್ತು ಇಂದಿಗೂ ನೆನಪಿಸಿಕೊಳ್ಳುತ್ತೇನೆ. ಮೊದಲನೆಯದು, ನನ್ನ ಪ್ರಕಾರ, ಪುಸ್ತಕದ ಅತ್ಯಂತ ಆಳವಾದ ದೃಶ್ಯಗಳಲ್ಲಿ ಒಂದಾಗಿದೆ. ಸಿದ್ಧಾರ್ಥನು ನದಿಯ ದಡದಲ್ಲಿ ಕುಳಿತು ಗಮನವಿಟ್ಟು ಕೇಳುತ್ತಿರುತ್ತಾನೆ, ಮತ್ತು ಆ ನದಿಯಲ್ಲಿ, ಅವನು ಜೀವನದ ಎಲ್ಲಾ ಧ್ವನಿಗಳನ್ನು ಕೇಳುತ್ತಾನೆ- ಸಮಯದ ಎಲ್ಲಾ ಶಬ್ದಗಳು. ಭೂತ, ವರ್ತಮಾನ ಮತ್ತು ಭವಿಷ್ಯ ಎಲ್ಲವೂ ಒಟ್ಟಿಗೆ ಹರಿಯುತ್ತವೆ. ಆ ದೃಶ್ಯದಿಂದ, ನಾನು ಒಂದು ವಿಷಯವನ್ನು ಅರಿತುಕೊಂಡೆ ಮತ್ತು ಅರ್ಥಮಾಡಿಕೊಂಡೆ: ನಾವು ಸಾಮಾನ್ಯ ಜನರಂತೆ ಯೋಚಿಸಿದರೆ, ಸಮಯವು ಸರಳ ರೇಖೆಯಲ್ಲಿ ಹರಿಯುತ್ತದೆ. ಆದರೆ ಆಳವಾದ ಅರ್ಥದಲ್ಲಿ, ಸಮಯವು ಒಂದು ಭ್ರಮೆಯಾಗಿದೆ. ಸತ್ಯವೇನೆಂದರೆ, ಎಲ್ಲವೂ ಏಕಕಾಲದಲ್ಲಿ ಅಸ್ತಿತ್ವದಲ್ಲಿದೆ. ಈ ರೀತಿಯಾಗಿ, ನಮ್ಮ ಜೀವನವು ಕೇವಲ ಕ್ಷಣಿಕ ಕ್ಷಣವಾಗಿದೆ, ಮತ್ತು ಆದರೂ, ಅದು ಅನಂತವಾಗಿದೆ. ಈ ವಿಚಾರಗಳನ್ನು ಪದಗಳಲ್ಲಿ ವ್ಯಕ್ತಪಡಿಸುವುದು ಕಷ್ಟ- ವೈಯಕ್ತಿಕ ಅನುಭವದ ಮೂಲಕ ಮಾತ್ರ ಅವುಗಳನ್ನು ನಿಜವಾಗಿಯೂ ಅರ್ಥಮಾಡಿಕೊಳ್ಳಬಹುದು ಎಂದು ನಾನು ಭಾವಿಸುತ್ತೇನೆ.

ಇದು ನನಗೆ ಡೇವಿಡ್ ಫಾಸ್ಟರ್ ವ್ಯಾಲೇಸ್ ಅವರ ಪ್ರಸಿದ್ಧ ಮೀನು ಕಥೆಯನ್ನು ನೆನಪಿಸುತ್ತದೆ. ಅವರು ನನ್ನ ನೆಚ್ಚಿನ ಬರಹಗಾರರಲ್ಲಿ ಒಬ್ಬರು. ಅವರು ಸುಮಾರು 20 ವರ್ಷಗಳ ಹಿಂದೆ ಪ್ರಾರಂಭಿಕ ಭಾಷಣದಲ್ಲಿ ಈ ಕಥೆಯನ್ನು ಹೇಳಿದರು. ಕಥೆ ಹೀಗಿದೆ: ಎರಡು ಚಿಕ್ಕ ಮೀನುಗಳು ನೀರಿನಲ್ಲಿ ಈಜುತ್ತಿರುವಾಗ ಅವು ವಿರುದ್ಧ ದಿಕ್ಕಿನಲ್ಲಿ ಈಜುತ್ತಿರುವ ಹಳೆಯ ಮೀನುಗಳನ್ನು ನೋಡುತ್ತವೆ. ವಯಸ್ಸಾದ ಮೀನು ಅವರತ್ತ ತಲೆಯಾಡಿಸಿ, 'ಶುಭೋದಯ, ಮಕ್ಕಳೇ. ನೀರು ಹೇಗಿದೆ?' ಚಿಕ್ಕ ಮೀನುಗಳು ಈಜುತ್ತಲೇ ಇರುತ್ತವೆ ಮತ್ತು ನಂತರ ಪರಸ್ಪರ ತಿರುಗಿ 'ನೀರು ಎಂದರೇನು?' ಎಂದು ಕೇಳುತ್ತವೆ. ಮುಂದೆ ಸಾಗುವ ಮೂಲಕ ಸಮಯವು ನಮ್ಮನ್ನು ಮೋಸಗೊಳಿಸುವಂತೆ, ಈ ಕಥೆಯಲ್ಲಿ, ನೀರು ಆ ಮೋಸವನ್ನು ಪ್ರತಿನಿಧಿಸುತ್ತದೆ. ಮಾನವರಾದ ನಾವು ಅದರಲ್ಲಿ ಸಂಪೂರ್ಣವಾಗಿ ಮುಳುಗಿದ್ದೇವೆ. ಆದರೆ ಬುದ್ಧಿವಂತಿಕೆಯನ್ನು ಪಡೆಯುವುದು ಎಂದರೆ ಸ್ವಲ್ಪ ಹಿಂದೆ ಸರಿಯುವುದು, ವಾಸ್ತವವನ್ನು ಆಳವಾದ ದೃಷ್ಟಿಕೋನದಿಂದ ನೋಡುವುದು, ಅಲ್ಲಿ ಎಲ್ಲವೂ ಸಂಪೂರ್ಣವಾಗಿ ಪರಸ್ಪರ ಸಂಬಂಧ ಹೊಂದಿರುತ್ತದೆ. ಇದು ಸಮಯ ಮತ್ತು ಜಗತ್ತು ಎರಡನ್ನೂ ಮೀರುತ್ತದೆ. ಈ ಕಾದಂಬರಿಯಿಂದ ಕಲಿತ ಮತ್ತೊಂದು ಪ್ರಮುಖ ಪಾಠವೆಂದರೆ- ನಾನು ಚಿಕ್ಕವನಿದ್ದಾಗ ನನ್ನ ಮೇಲೆ ಗಾಢವಾದ ಪ್ರಭಾವ ಬೀರಿದ ಒಂದು ವಿಚಾರ – ಯಾರೂ ಎಂದಿಗೂ ಯಾರನ್ನೂ ಕುರುಡಾಗಿ ಅನುಸರಿಸಬಾರದು. ಪ್ರಪಂಚದ ಬಗ್ಗೆ ಕೇವಲ ಪುಸ್ತಕಗಳ ಮೂಲಕ ಕಲಿಯಬಾರದು. ಬದಲಾಗಿ, ವ್ಯಕ್ತಿಗಳು ತಮ್ಮದೇ ಆದ ಮಾರ್ಗವನ್ನು ರೂಪಿಸಬೇಕು ಮತ್ತು ತಮ್ಮನ್ನು ಜೀವನದಲ್ಲಿ ತೊಡಗಿಸಿಕೊಳ್ಳಬೇಕು. ಏಕೆಂದರೆ ಜೀವನದ ನಿಜವಾದ ಪಾಠಗಳನ್ನು ನೇರ ಅನುಭವದಿಂದ ಮಾತ್ರ ಕಲಿಯಬಹುದು. ಮತ್ತು ಪ್ರತಿಯೊಂದು ಅನುಭವವೂ - ಒಳ್ಳೆಯದು ಅಥವಾ ಕೆಟ್ಟದು - ತಪ್ಪುಗಳು, ದುಃಖ ಮತ್ತು ನೀವು ವ್ಯರ್ಥ ಮಾಡಿದ್ದೀರಿ ಎಂದು ನೀವು ಭಾವಿಸುವ ಸಮಯ, ಇವೆಲ್ಲವೂ ನಿಮ್ಮ ಬೆಳವಣಿಗೆಯ ಅತ್ಯಗತ್ಯ ಭಾಗವಾಗಿದೆ. ಈ ಟಿಪ್ಪಣಿಯಲ್ಲಿ, ಹೆಸ್ಸೆ ಜ್ಞಾನ ಮತ್ತು ಬುದ್ಧಿವಂತಿಕೆಯ ನಡುವಿನ ವ್ಯತ್ಯಾಸವನ್ನು ಗುರುತಿಸುತ್ತಾನೆ. ಜ್ಞಾನವು ಯಾರು ಬೇಕಾದರೂ ಕಲಿಸಬಹುದಾದ ವಿಷಯವಾಗಿದೆ. ಆದರೆ ನೀವು ಜೀವನದ ಅವ್ಯವಸ್ಥೆಯನ್ನು ಎದುರಿಸಿದಾಗ ಮಾತ್ರ ಬುದ್ಧಿವಂತಿಕೆ ಬರುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಬುದ್ಧಿವಂತಿಕೆಯ ಮಾರ್ಗವು ಜಗತ್ತನ್ನು ತಿರಸ್ಕರಿಸುವುದರಲ್ಲಿಲ್ಲ, ಆದರೆ ಅದರಲ್ಲಿ ನಿಮ್ಮನ್ನು ಸಂಪೂರ್ಣವಾಗಿ ತಲ್ಲೀನಗೊಳಿಸುವುದರಲ್ಲಿದೆ. ಹೀಗೆ ನಾನು ಪೌರಾತ್ಯ ತತ್ತ್ವಶಾಸ್ತ್ರದ ದೃಷ್ಟಿಕೋನದಿಂದ ಜಗತ್ತನ್ನು ನೋಡಲು ಪ್ರಾರಂಭಿಸಿದೆ. ಆದರೆ ಹೆಸ್ಸೆಯವರ ಅನೇಕ ಪುಸ್ತಕಗಳು ನನ್ನ ಮೇಲೆ ಪ್ರಭಾವ ಬೀರಿವೆ. ಆದ್ದರಿಂದ, ನನ್ನ ಶಿಫಾರಸು ಇಲ್ಲಿದೆ: ನೀವು ಚಿಕ್ಕವರಿದ್ದಾಗ ಡೆಮಿಯಾನ್ ಓದಿ. ನೀವು ಸ್ವಲ್ಪ ದೊಡ್ಡವರಾದಾಗ ಸ್ಟೆಪೆನ್ ವೋಲ್ಫ್ ಓದಿ. ʻಸಿದ್ಧಾರ್ಥʼನನ್ನು ಯಾವುದೇ ವಯಸ್ಸಿನಲ್ಲಿ- ವಿಶೇಷವಾಗಿ ಕಷ್ಟದ ಸಮಯದಲ್ಲಿ ಓದಿ. ಮತ್ತು ನೀವು ಹೆಸ್ಸೆಯ ಶ್ರೇಷ್ಠ ಮೇರುಕೃತಿಯನ್ನು ಅನುಭವಿಸಲು ಬಯಸಿದರೆ, ʻದಿ ಗ್ಲಾಸ್ ಬೀಡ್ ಗೇಮ್ʼ ಅನ್ನು ಓದಿ- ಮಾನವ ಮನಸ್ಸು ಮತ್ತು ನಾಗರಿಕತೆಯು ಜ್ಞಾನ, ತಿಳಿವಳಿಕೆ ಮತ್ತು ಸತ್ಯದ ಅನ್ವೇಷಣೆಗೆ ತಮ್ಮನ್ನು ಹೇಗೆ ಸಮರ್ಪಿಸಿಕೊಳ್ಳಬಹುದು ಎಂಬುದನ್ನು ಆಳವಾಗಿ ಅನ್ವೇಷಿಸುವ ಪುಸ್ತಕ. ಆದರೆ ಸಿದ್ಧಾರ್ಥ ಪುಸ್ತಕವನ್ನು ನಾನು ಎರಡಕ್ಕಿಂತ  ಹೆಚ್ಚು ಬಾರಿ ಓದಿದ್ದೇನೆ. ನನ್ನ ಜೀವನದಲ್ಲಿ ನಾನು ಕಷ್ಟದ ಸಮಯವನ್ನು ಎದುರಿಸಿದಾಗಲೆಲ್ಲಾ, ಸಿದ್ಧಾರ್ಥನು ಯಾವ ಗುಣಗಳನ್ನು ಹೊಂದಿದ್ದಾನೆ ಎಂದು ಕೇಳಿಕೊಂಡಾಗ ಪುಸ್ತಕದಿಂದ ಆ ಕ್ಷಣವನ್ನು ನಾನು ನೆನಪಿಸಿಕೊಳ್ಳುತ್ತೇನೆ. ಅವರ ಉತ್ತರ ಸರಳವಾಗಿದೆ: "ನಾನು ಯೋಚಿಸಬಲ್ಲೆ, ನಾನು ಕಾಯಬಲ್ಲೆ, ಮತ್ತು ನಾನು ಉಪವಾಸ ಮಾಡಬಹುದು." ಇದನ್ನು ಸ್ವಲ್ಪ ವಿಭಜಿಸಿ ನೋಡೋಣ. ಮೊದಲ ಭಾಗ - "ನಾನು ಯೋಚಿಸಬಲ್ಲೆ." ಮಾರ್ಕಸ್ ಆರೇಲಿಯಸ್ ಹೇಳಿದಂತೆ, "ನಿಮ್ಮ ಜೀವನದ ಗುಣಮಟ್ಟವು ನಿಮ್ಮ ಆಲೋಚನೆಗಳ ಗುಣಮಟ್ಟವನ್ನು ಅವಲಂಬಿಸಿರುತ್ತದೆ." ಎರಡನೆಯ ಭಾಗ - "ನಾನು ಕಾಯಬಲ್ಲೆ." ತಾಳ್ಮೆ ಮತ್ತು ಕಾಯುವಿಕೆಯು ಸಮಸ್ಯೆಯನ್ನು ಎದುರಿಸಲು ಸರಿಯಾದ ಮಾರ್ಗ. ಸಮಯದೊಂದಿಗೆ, ಆಳ ಮತ್ತು ತಿಳುವಳಿಕೆ ಬರುತ್ತದೆ. ಮೂರನೆಯ ಭಾಗ - "ನಾನು ಉಪವಾಸ ಮಾಡಬಹುದು." ಕಡಿಮೆಯೊಂದಿಗೆ ಬದುಕುವ ಮತ್ತು ಇನ್ನೂ ತೃಪ್ತರಾಗಿರುವ ಸಾಮರ್ಥ್ಯವು ನಿಜವಾದ ಸ್ವಾತಂತ್ರ್ಯದ ಮೊದಲ ಹೆಜ್ಜೆಯಾಗಿದೆ. ಮನಸ್ಸು, ದೇಹ ಮತ್ತು ಸಮಾಜವು ನಿಮ್ಮನ್ನು ಬಂಧಿಸಲು ನಿರಂತರವಾಗಿ ಪ್ರಯತ್ನಿಸುವ ಜಗತ್ತಿನಲ್ಲಿ, ಇದೇ ಮುಕ್ತಿಯ ದಾರಿ. ಸರಿ, ಸ್ನೇಹಿತರೇ! ಇದು ಸ್ವಲ್ಪ ದುಃಖಕರ ವಿಷಯವಾದರೂ, ಈ ಕಾರ್ಯಕ್ರಮವು ಇಲ್ಲಿಗೆ ಸಂಪನ್ನವಾಗುತ್ತದೆ. ಎಂದಿನಂತೆ, ಕಾರ್ಯಕ್ರಮ ಆಲಿಸಿದ್ದಕ್ಕಾಗಿ ಧನ್ಯವಾದಗಳು, ಮತ್ತು ಇಷ್ಟು ವರ್ಷಗಳಲ್ಲಿ ನನ್ನನ್ನು ಬೆಂಬಲಿಸಿದ್ದಕ್ಕಾಗಿ ಧನ್ಯವಾದಗಳು. ಭಗವದ್ಗೀತೆಯ ಈ ಮಾತುಗಳೊಂದಿಗೆ ನಾನು ನಿಮಗೆ ವಿದಾಯ ಹೇಳುತ್ತೇನೆ: "ಜೀವನದ ಏಕತೆಯನ್ನು ನೋಡುವವನು ತನ್ನ ಆತ್ಮವನ್ನು ಎಲ್ಲಾ ಜೀವಿಗಳಲ್ಲಿ ಮತ್ತು ಎಲ್ಲಾ ಜೀವಿಗಳನ್ನು ತನ್ನ ಆತ್ಮದಲ್ಲಿ ನೋಡುತ್ತಾನೆ ಮತ್ತು ಅವನು ಎಲ್ಲರನ್ನೂ ನಿಷ್ಪಕ್ಷಪಾತ ದೃಷ್ಟಿಕೋನದಿಂದ ನೋಡುತ್ತಾನೆ." ಆಲಿಸಿದ್ದಕ್ಕಾಗಿ ಧನ್ಯವಾದಗಳು. ಮುಂದಿನ ಬಾರಿ ನಿಮ್ಮನ್ನು ಭೇಟಿಯಾಗುವೆ.

 

Explore More
ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
How GeM has transformed India’s public procurement

Media Coverage

How GeM has transformed India’s public procurement
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 19 ಮೇ 2025
May 19, 2025

Citizens Appreciate PM Modi’s Vision: Powering India’s Sustainable and Inclusive Growth