"ಮಹಿಳೆಯರು ಅಭಿವೃದ್ಧಿ ಹೊಂದಿದಾಗ, ಜಗತ್ತು ಅಭಿವೃದ್ಧಿ ಹೊಂದುತ್ತದೆ"
"ಭಾರತದ ಗ್ರಾಮೀಣ ಸ್ಥಳೀಯ ಸಂಸ್ಥೆಗಳಲ್ಲಿನ ಚುನಾಯಿತ ಪ್ರತಿನಿಧಿಗಳಲ್ಲಿ 1.4 ದಶಲಕ್ಷ ಅಂದರೆ, 46% ಮಹಿಳೆಯರು"
"ಭಾರತದಲ್ಲಿ ಮಹಿಳೆಯರು 'ಮಿಷನ್ ಲೈಫ್' - ಪರಿಸರಕ್ಕಾಗಿ ಜೀವನಶೈಲಿಯ ಬ್ರಾಂಡ್ ಅಂಬಾಸಿಡರ್ ಗಳಾಗಿದ್ದಾರೆ"
"ಪ್ರಕೃತಿಯೊಂದಿಗೆ ಮಹಿಳೆಯರು ಹೊಂದಿರುವ ನಿಕಟ ಸಂಬಂಧದ ಹಿನ್ನೆಲೆಯಲ್ಲಿ, ಹವಾಮಾನ ಬದಲಾವಣೆಗೆ ನವೀನ ಪರಿಹಾರಗಳ ಕೀಲಿ ಮಹಿಳೆಯರ ಕೈಯಲ್ಲಿದೆ"
"ಮಾರುಕಟ್ಟೆಗಳು, ಜಾಗತಿಕ ಮೌಲ್ಯ ಸರಪಳಿಗಳು ಮತ್ತು ಕೈಗೆಟುಕುವ ಹಣಕಾಸು ಸೌಲಭ್ಯಗಳಿಗೆ ಮಹಿಳೆಯರ ಪ್ರವೇಶವನ್ನು ನಿರ್ಬಂಧಿಸುವ ಅಡೆತಡೆಗಳನ್ನು ತೊಡೆದುಹಾಕಲು ನಾವು ಕೆಲಸ ಮಾಡಬೇಕು"
"ಭಾರತದ ಜಿ-20 ಅಧ್ಯಕ್ಷತೆಯಲ್ಲಿ, 'ಮಹಿಳಾ ಸಬಲೀಕರಣ' ಕುರಿತು ಹೊಸ ಕಾರ್ಯಪಡೆ ಸ್ಥಾಪಿಸಲು ನಿರ್ಧರಿಸಲಾಗಿದೆ

ಗೌರವಾನ್ವಿತ ಗಣ್ಯರೆ, ಮಹಿಳೆಯರೆ ಮತ್ತು ಮಹನೀಯರೇ, ನಮಸ್ಕಾರ!
 
ಮಹಾತ್ಮ ಗಾಂಧಿ ಅವರ ಹೆಸರಿನ ನಗರವಾದ ಗಾಂಧಿನಗರಕ್ಕೆ ಅದರ ಸಂಸ್ಥಾಪನೆಯ ದಿನದಂದು ನಾನು ನಿಮ್ಮೆಲ್ಲರನ್ನು ಸ್ವಾಗತಿಸುತ್ತೇನೆ. ಅಹಮದಾಬಾದ್‌ನ ಗಾಂಧಿ ಆಶ್ರಮಕ್ಕೆ ಭೇಟಿ ನೀಡುವ ಅವಕಾಶ ನಿಮಗೆ ಸಿಕ್ಕಿರುವುದು ನನಗೆ ಖುಷಿ ತಂದಿದೆ. ಇಂದು ಇಡೀ ಜಗತ್ತು ಹವಾಮಾನ ಬದಲಾವಣೆ, ಜಾಗತಿಕ ತಾಪಮಾನ ಮತ್ತು ಸುಸ್ಥಿರ ಪರಿಹಾರಗಳನ್ನು ಹುಡುಕುವ ತುರ್ತು ಕುರಿತು ಮಾತನಾಡುತ್ತಿದೆ. ಗಾಂಧಿ ಆಶ್ರಮದಲ್ಲಿ, ನೀವು ಗಾಂಧೀಜಿ ಅವರ ಜೀವನ ಶೈಲಿಯ ಸರಳತೆ ಮತ್ತು ಸುಸ್ಥಿರತೆ, ಸ್ವಾವಲಂಬನೆ ಮತ್ತು ಸಮಾನತೆಯ ಅವರ ದಾರ್ಶನಿಕ ಕಲ್ಪನೆಗಳನ್ನು ನೇರವಾಗಿ ನೋಡುತ್ತೀರಿ. ನೀವು ಅದನ್ನು ಸ್ಫೂರ್ತಿದಾಯಕವಾಗಿ ಕಾಣುತ್ತೀರಿ ಎಂದು ನನಗೆ ಖಾತ್ರಿಯಿದೆ. ದಂಡಿ ಕುಟೀರ್ ವಸ್ತುಸಂಗ್ರಹಾಲಯದಲ್ಲಿ ನೀವು ಅದನ್ನು ಅನುಭವಿಸಬಹುದು ಮತ್ತು ನೀವು ಅದನ್ನು ತಪ್ಪಿಸಿಕೊಳ್ಳಬಾರದು. ಗಾಂಧೀಜಿ ಅವರ ಪ್ರಸಿದ್ಧ ಚರಕ, ನೂಲುವ ಚಕ್ರ, ಗಂಗಾಬೆನ್ ಎಂಬ ಮಹಿಳೆಗೆ ಹತ್ತಿರದ ಹಳ್ಳಿಯಲ್ಲಿ ಸಿಕ್ಕಿತು ಎಂದು ಇಲ್ಲಿ ಉಲ್ಲೇಖಿಸುವುದು ನನಗೆ ಯೋಗ್ಯ ವಿಷಯವೇ ಆಗಿದೆ. ನಿಮಗೆ ತಿಳಿದಿರುವಂತೆ, ಅಂದಿನಿಂದ, ಗಾಂಧೀಜಿ ಯಾವಾಗಲೂ ಖಾದಿ ಧರಿಸುತ್ತಿದ್ದರು, ಅದು ಸ್ವಾವಲಂಬನೆ ಮತ್ತು ಸುಸ್ಥಿರತೆಯ ಸಂಕೇತವಾಗಿತ್ತು.

ಸ್ನೇಹಿತರೆ,
 
ಸ್ತ್ರೀಯರು ಏಳಿಗೆಯಾದಾಗ ಜಗತ್ತು ಏಳಿಗೆಯಾಗುತ್ತದೆ. ಅವರ ಆರ್ಥಿಕ ಸಬಲೀಕರಣವು ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಅವರ ಶಿಕ್ಷಣದ ಪ್ರವೇಶವು ಜಾಗತಿಕ ಪ್ರಗತಿಯನ್ನು ಪ್ರೇರೇಪಿಸುತ್ತದೆ. ಅವರ ನಾಯಕತ್ವವು ಆರ್ಥಿಕ ಒಳಗೊಳ್ಳುವಿಕೆಯನ್ನು ಉತ್ತೇಜಿಸುತ್ತದೆ. ಅವರ ಧ್ವನಿಗಳು ಸಕಾರಾತ್ಮಕ ಬದಲಾವಣೆಯನ್ನು ಪ್ರೇರೇಪಿಸುತ್ತವೆ. ಮಹಿಳೆಯರ ಸಬಲೀಕರಣಕ್ಕೆ ಅತ್ಯಂತ ಪರಿಣಾಮಕಾರಿ ಮಾರ್ಗವೆಂದರೆ, ಮಹಿಳಾ ನೇತೃತ್ವದ ಅಭಿವೃದ್ಧಿ ವಿಧಾನ. ಈ ನಿಟ್ಟಿನಲ್ಲಿ ಭಾರತ ದಾಪುಗಾಲು ಹಾಕುತ್ತಿದೆ.
 
ಸ್ನೇಹಿತರೆ,
 
ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಸ್ವತಃ ಸ್ಫೂರ್ತಿದಾಯಕ ಉದಾಹರಣೆ ಹೊಂದಿದ್ದಾರೆ. ಅವರು ಬಡ ಬುಡಕಟ್ಟು ಸಮಾದಾಯದ ಹಿನ್ನೆಲೆಯಿಂದ ಬಂದವರು. ಆದರೆ ಈಗ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವನ್ನು ಮುನ್ನಡೆಸುತ್ತಿದ್ದಾರೆ. ವಿಶ್ವದ 2ನೇ ಅತಿದೊಡ್ಡ ರಕ್ಷಣಾ ಪಡೆಯ ಕಮಾಂಡರ್-ಇನ್-ಚೀಫ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಪ್ರಜಾಪ್ರಭುತ್ವದ ತಾಯಿ ನೆಲದಲ್ಲಿ ಭಾರತೀಯ ಸಂವಿಧಾನವು ಮೊದಲಿನಿಂದಲೂ ಮಹಿಳೆಯರೂ ಸೇರಿದಂತೆ ಎಲ್ಲಾ ನಾಗರಿಕರಿಗೆ ಮತದಾನದ ಹಕ್ಕನ್ನು ಸಮಾನವಾಗಿ ನೀಡಿತು. ಸಮಾನ ಆಧಾರದ ಮೇಲೆ ಚುನಾವಣೆಗೆ ಸ್ಪರ್ಧಿಸುವ ಹಕ್ಕನ್ನೂ ನೀಡಲಾಯಿತು. ಚುನಾಯಿತ ಮಹಿಳಾ ಪ್ರತಿನಿಧಿಗಳು ಆರ್ಥಿಕ, ಪರಿಸರ ಮತ್ತು ಸಾಮಾಜಿಕ ಬದಲಾವಣೆಯ ಪ್ರಮುಖ ಏಜೆಂಟ್ ಗಳಾಗಿದ್ದಾರೆ. ಭಾರತದಲ್ಲಿ ಗ್ರಾಮೀಣ ಸ್ಥಳೀಯ ಸಂಸ್ಥೆಗಳಲ್ಲಿ ಚುನಾಯಿತ ಪ್ರತಿನಿಧಿಗಳಲ್ಲಿ 1.4 ದಶಲಕ್ಷ ಅಂದರೆ 46% ಮಹಿಳೆಯರು ಇದ್ದಾರೆ. ಸ್ವಸಹಾಯ ಗುಂಪುಗಳಾಗಿ ಮಹಿಳೆಯರನ್ನು ಸಜ್ಜುಗೊಳಿಸುವುದು ಬದಲಾವಣೆಗೆ ಪ್ರಬಲ ಶಕ್ತಿಯಾಗಿದೆ. ಸಾಂಕ್ರಾಮಿಕ ಸಮಯದಲ್ಲಿ, ಈ ಸ್ವಸಹಾಯ ಗುಂಪುಗಳು ಮತ್ತು ಚುನಾಯಿತ ಮಹಿಳಾ ಪ್ರತಿನಿಧಿಗಳು ನಮ್ಮ ಸಮುದಾಯಗಳಿಗೆ ಆಧಾರಸ್ತಂಭಗಳಾಗಿ ಹೊರಹೊಮ್ಮಿದರು. ಅವರು ಮಾಸ್ಕ್ ಮತ್ತು ಸ್ಯಾನಿಟೈಜರ್‌ಗಳನ್ನು ತಯಾರಿಸಿದರು. ಸೋಂಕು ತಡೆಗಟ್ಟುವ ಬಗ್ಗೆ ಜಾಗೃತಿ ಮೂಡಿಸಿದರು. ಭಾರತದಲ್ಲಿ 80%ಗಿಂತ ಹೆಚ್ಚಿನ ದಾದಿಯರು ಮತ್ತು ಶುಶ್ರೂಷಕಿಯರು ಮಹಿಳೆಯರೇ ಇದ್ದಾರೆ. ಸಾಂಕ್ರಾಮಿಕ ಸಮಯದಲ್ಲಿ ಅವರೇ ನಮ್ಮ ಮೊದಲ ರಕ್ಷಣಾ ಮಾರ್ಗವಾಗಿದ್ದರು. ಮತ್ತು ಅವರ ಸಾಧನೆಗಳ ಬಗ್ಗೆ ನಮಗೆ ಹೆಮ್ಮೆ ಇದೆ.
 
ಸ್ನೇಹಿತರೆ,
 
ಭಾರತದಲ್ಲಿ ಮಹಿಳಾ ನೇತೃತ್ವದ ಅಭಿವೃದ್ಧಿಯು ನಮಗೆ ಪ್ರಮುಖ ಆದ್ಯತೆಯಾಗಿದೆ. ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ, ಸುಮಾರು 70% ಸಾಲಗಳನ್ನು ಮಹಿಳೆಯರಿಗೆ ಮಂಜೂರು ಮಾಡಲಾಗಿದೆ. ಇವು ಸೂಕ್ಷ್ಮ ಮಟ್ಟದ ಉದ್ದಿಮೆ ಘಟಕಗಳನ್ನು ಬೆಂಬಲಿಸಲು ಒಂದು ದಶಲಕ್ಷ ರೂಪಾಯಿವರೆಗಿನ ಸಾಲಗಳಾಗಿವೆ. ಅದೇ ರೀತಿ, ಸ್ಟ್ಯಾಂಡ್-ಅಪ್ ಇಂಡಿಯಾ ಅಡಿ, 80% ಫಲಾನುಭವಿಗಳು ಮಹಿಳೆಯರು, ಹಸಿರು ಕ್ಷೇತ್ರ ಯೋಜನೆಗಳಿಗಾಗಿ ಬ್ಯಾಂಕ್ ಸಾಲ ಪಡೆಯುತ್ತಾರೆ. ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಗ್ರಾಮೀಣ ಮಹಿಳೆಯರಿಗೆ ಸುಮಾರು 100 ದಶಲಕ್ಷ ಅಡುಗೆ ಅನಿಲ ಸಂಪರ್ಕಗಳನ್ನು ಒದಗಿಸಲಾಗಿದೆ. ಶುದ್ಧ ಅಡುಗೆ ಇಂಧನವನ್ನು ಒದಗಿಸುವುದರಿಂದ ಪರಿಸರದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ, ಮಹಿಳೆಯರ ಆರೋಗ್ಯ ಸುಧಾರಿಸುತ್ತದೆ. 2014ರಿಂದ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ತಾಂತ್ರಿಕ ಶಿಕ್ಷಣ ಪಡೆಯುವ ಮಹಿಳೆಯರ ಸಂಖ್ಯೆ ದ್ವಿಗುಣಗೊಂಡಿದೆ.

ಭಾರತದಲ್ಲಿ ಸುಮಾರು 43% STEM ಪದವೀಧರರು, ಅಂದರೆ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತಶಾಸ್ತ್ರದಲ್ಲಿ ಮಹಿಳೆಯರಾಗಿದ್ದಾರೆ. ಭಾರತದ ಬಾಹ್ಯಾಕಾಶ ವಿಜ್ಞಾನಿಗಳಲ್ಲಿ ಸುಮಾರು ನಾಲ್ಕನೇ ಒಂದು ಭಾಗದಷ್ಟು ಮಹಿಳೆಯರು. ನಮ್ಮ ಪ್ರಮುಖ ಕಾರ್ಯಕ್ರಮಗಳಾದ ಚಂದ್ರಯಾನ, ಗಗನಯಾನ ಮತ್ತು ಮಿಷನ್ ಮಾರ್ಸ್‌ ಯಶಸ್ಸಿನ ಹಿಂದೆ ಮಹಿಳಾ ವಿಜ್ಞಾನಿಗಳ ಪ್ರತಿಭೆ ಮತ್ತು ಕಠಿಣ ಪರಿಶ್ರಮವಿದೆ. ಇಂದು ಭಾರತದಲ್ಲಿ ಪುರುಷರಿಗಿಂತ ಹೆಚ್ಚಿನ ಮಹಿಳೆಯರು ಉನ್ನತ ಶಿಕ್ಷಣಕ್ಕೆ ದಾಖಲಾಗುತ್ತಿದ್ದಾರೆ. ನಾವು ನಾಗರಿಕ ವಿಮಾನಯಾನದಲ್ಲಿ ಅತಿ ಹೆಚ್ಚು ಶೇಕಡಾವಾರು ಮಹಿಳಾ ಪೈಲಟ್‌ಗಳನ್ನು ಹೊಂದಿದ್ದೇವೆ. ಭಾರತೀಯ ವಾಯುಪಡೆಯಲ್ಲಿ ಮಹಿಳಾ ಪೈಲಟ್‌ಗಳು ಈಗ ಯುದ್ಧ ವಿಮಾನಗಳನ್ನು ಹಾರಿಸುತ್ತಿದ್ದಾರೆ. ನಮ್ಮ ಎಲ್ಲಾ ಸಶಸ್ತ್ರ ಪಡೆಗಳಲ್ಲಿ ಮಹಿಳಾ ಅಧಿಕಾರಿಗಳನ್ನು ಕಾರ್ಯಾಚರಣೆಯ ಕೆಲಸಗಳಲ್ಲಿ ಮತ್ತು ಹೋರಾಟದ ವೇದಿಕೆಗಳಲ್ಲಿ ನಿಯೋಜಿಸಲಾಗುತ್ತಿದೆ.
 
ಸ್ನೇಹಿತರೆ,
 
ಭಾರತದಲ್ಲಿ ಮತ್ತು ಜಾಗತಿಕ ದಕ್ಷಿಣ ಭಾಗದಲ್ಲಿ, ಮಹಿಳೆಯರು ಗ್ರಾಮೀಣ ಕೃಷಿ ಕುಟುಂಬಗಳ ಬೆನ್ನೆಲುಬಾಗಿ, ಸಣ್ಣ ವ್ಯಾಪಾರಿಗಳು ಮತ್ತು ಅಂಗಡಿ ವರ್ತಕರಾಗಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಪ್ರಕೃತಿಯೊಂದಿಗಿನ ಅವರ ನಿಕಟ ಸಂಬಂಧವನ್ನು ಗಮನಿಸಿದರೆ, ಮಹಿಳೆಯರು ಹವಾಮಾನ ಬದಲಾವಣೆಗೆ ನವೀನ ಪರಿಹಾರಗಳ ಕೀಲಿಯನ್ನು ಹೊಂದಿದ್ದಾರೆ. 18ನೇ ಶತಮಾನದಲ್ಲಿ ಭಾರತದಲ್ಲಿ ಮೊದಲ ಪ್ರಮುಖ ಹವಾಮಾನ ಕ್ರಿಯೆಯನ್ನು ಮಹಿಳೆಯರು ಹೇಗೆ ಮುನ್ನಡೆಸಿದರು ಎಂಬುದನ್ನು ನಾನು ನೆನಪಿಸಿಕೊಳ್ಳುತ್ತೇನೆ. ಅಮೃತಾ ದೇವಿ ನೇತೃತ್ವದ ರಾಜಸ್ಥಾನದ ಬಿಷ್ಣೋಯ್ ಸಮುದಾಯವು 'ಚಿಪ್ಕೋ ಚಳವಳಿ' ಆರಂಭಿಸಿತು. ಇದು ಅನಿಯಂತ್ರಿತ ಮರಗಳ ಹನನ ತಡೆಗಟ್ಟಲು ಮರಗಳನ್ನು ಅಪ್ಪಿಕೊಳ್ಳುವ ಚಳುವಳಿಯಾಗಿತ್ತು. ಹಲವಾರು ಇತರ ಗ್ರಾಮಸ್ಥರೊಂದಿಗೆ, ಅವಳು ಪ್ರಕೃತಿಯ ಕಾರಣಕ್ಕಾಗಿ ತನ್ನ ಜೀವನವನ್ನು ಮುಡಿಪಾಗಿಟ್ಟಳು. ಭಾರತದಲ್ಲಿ ಮಹಿಳೆಯರು 'ಮಿಷನ್ ಲೈಫ್'- ಪರಿಸರಕ್ಕಾಗಿ ಜೀವನಶೈಲಿಗಾಗಿ ಬ್ರ್ಯಾಂಡ್ ಅಂಬಾಸಿಡರ್‌ಗಳಾಗಿದ್ದಾರೆ. ಅವರು ಸಾಂಪ್ರದಾಯಿಕ ಬುದ್ಧಿವಂತಿಕೆಯ ಆಧಾರದ ಮೇಲೆ ಕಡಿಮೆಗೊಳಿಸುತ್ತಾರೆ, ಮರುಬಳಕೆ ಮಾಡುತ್ತಾರೆ, ಮರುಬಳಕೆ ಮಾಡುತ್ತಾರೆ ಮತ್ತು ಮರು-ಉದ್ದೇಶ ಮಾಡುತ್ತಾರೆ. ವಿವಿಧ ಉಪಕ್ರಮಗಳ ಅಡಿ, ಮಹಿಳೆಯರು ಸೌರ ಫಲಕಗಳು ಮತ್ತು ದೀಪಗಳನ್ನು ತಯಾರಿಸಲು ಸಕ್ರಿಯವಾಗಿ ತರಬೇತಿ ಪಡೆಯುತ್ತಿದ್ದಾರೆ. ಜಾಗತಿಕ ದಕ್ಷಿಣ ಭಾಗದಲ್ಲಿ ನಮ್ಮ ಪಾಲುದಾರ ರಾಷ್ಟ್ರಗಳೊಂದಿಗೆ 'ಸೋಲಾರ್ ಮಾಮಾಸ್' ಯಶಸ್ವಿ ಸಹಯೋಗಿಗಳಾಗಿದ್ದೇವೆ.

ಸ್ನೇಹಿತರೆ,
 
ಮಹಿಳಾ ಉದ್ಯಮಿಗಳು ಜಾಗತಿಕ ಆರ್ಥಿಕತೆಗೆ ಗಮನಾರ್ಹ ಕೊಡುಗೆ ನೀಡುತ್ತಿದ್ದಾರೆ. ಭಾರತದಲ್ಲಿ ಮಹಿಳಾ ಉದ್ಯಮಿಗಳ ಪಾತ್ರ ಹೊಸದೇನಲ್ಲ. ದಶಕಗಳ ಹಿಂದೆ, 1959 ರಲ್ಲಿ, ಮುಂಬೈನಲ್ಲಿ 7 ಗುಜರಾತಿ ಮಹಿಳೆಯರು ಒಟ್ಟಾಗಿ ಒಂದು ಐತಿಹಾಸಿಕ ಸಹಕಾರ ಚಳುವಳಿ ರೂಪಿಸಿದರು - ಶ್ರೀ ಮಹಿಳಾ ಗೃಹ ಉದ್ಯೋಗ್. ಅಂದಿನಿಂದ, ಇದು ಲಕ್ಷಾಂತರ ಮಹಿಳೆಯರು ಮತ್ತು ಅವರ ಕುಟುಂಬಗಳ ಜೀವನವನ್ನು ಪರಿವರ್ತಿಸಿದೆ. ಅವರ ಅತ್ಯಂತ ಪ್ರಸಿದ್ಧ ಉತ್ಪನ್ನವಾದ ಲಿಜ್ಜತ್ ಪಾಪಡ್ ಬಹುಶಃ ಗುಜರಾತ್‌ನಲ್ಲಿ ನಿಮ್ಮ ಮೆನುಗಳಲ್ಲಿರಬಹುದು! ನಮ್ಮ ಸಹಕಾರಿ ಆಂದೋಲನದ ಮತ್ತೊಂದು ಯಶೋಗಾಥೆ ಹೈನುಗಾರಿಕೆ ಕ್ಷೇತ್ರ. ಇದೂ ಸಹ ಮಹಿಳೆಯರಿಂದ ಚಾಲಿತವಾಗಿದೆ. ಗುಜರಾತ್ ರಾಜ್ಯವೊಂದರಲ್ಲೇ 3.6 ದಶಲಕ್ಷ ಮಹಿಳೆಯರು ಡೈರಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಭಾರತದಾದ್ಯಂತ ಇಂತಹ ಹಲವು, ಇನ್ನೂ ಅನೇಕ ಸ್ಫೂರ್ತಿದಾಯಕ ಕಥೆಗಳಿವೆ. ಭಾರತದಲ್ಲಿ, ಸುಮಾರು 15% ಯುನಿಕಾರ್ನ್ ಸ್ಟಾರ್ಟಪ್‌ಗಳು ಕನಿಷ್ಠ ಒಬ್ಬ ಮಹಿಳಾ ಸಂಸ್ಥಾಪಕರನ್ನು ಹೊಂದಿವೆ. ಈ ಮಹಿಳೆಯರ ನೇತೃತ್ವದ ಯುನಿಕಾರ್ನ್‌ಗಳ ಒಟ್ಟು ಮೌಲ್ಯವು 40 ಶತಕೋಟಿ ಡಾಲರ್‌ಗಳಿಗಿಂತ ಹೆಚ್ಚು. ಆದರೆ, ಮಹಿಳಾ ಸಾಧಕಿಯರೇ ರೂಢಿಸಿಕೊಳ್ಳುವಂತಹ ಮಟ್ಟದ ವೇದಿಕೆ ಸೃಷ್ಟಿಸುವುದು ನಮ್ಮ ಗುರಿಯಾಗಬೇಕು. ಮಾರುಕಟ್ಟೆಗಳು, ಜಾಗತಿಕ ಮೌಲ್ಯ ಸರಪಳಿಗಳು ಮತ್ತು ಕೈಗೆಟುಕುವ ಹಣಕಾಸುಗಳಿಗೆ ಅವರ ಪ್ರವೇಶ ನಿರ್ಬಂಧಿಸುವ ಅಡೆತಡೆಗಳನ್ನು ತೆಗೆದುಹಾಕಲು ನಾವು ಕೆಲಸ ಮಾಡಬೇಕು. ಅದೇ ಸಮಯದಲ್ಲಿ, ಆರೈಕೆ ಮತ್ತು ಮನೆ ಕೆಲಸದ ಹೊರೆಯನ್ನು ಸೂಕ್ತವಾಗಿ ಪರಿಹರಿಸಲಾಗಿದೆ ಎಂದು ನಾವು ಖಚಿತಪಡಿಸಿಕೊಳ್ಳಬೇಕು.
 
ಮಹನೀಯರೆ,

ಮಹಿಳಾ ಉದ್ಯಮಶೀಲತೆ, ನಾಯಕತ್ವ ಮತ್ತು ಶಿಕ್ಷಣದ ಮೇಲೆ ನಿಮ್ಮ ಗಮನವು ಶ್ಲಾಘನೀಯವಾಗಿದೆ. ಮಹಿಳೆಯರಿಗೆ ಡಿಜಿಟಲ್ ಮತ್ತು ಆರ್ಥಿಕ ಸಾಕ್ಷರತೆ ಹೆಚ್ಚಿಸಲು ನೀವು 'ಟೆಕ್-ಈಕ್ವಿಟಿ ಪ್ಲಾಟ್‌ಫಾರ್ಮ್' ಪ್ರಾರಂಭಿಸುತ್ತಿದ್ದೀರಿ ಎಂದು ನನಗೆ ಸಂತೋಷವಾಗಿದೆ. ಭಾರತದ ಜಿ-20 ಅಧ್ಯಕ್ಷತೆಯ ಅಡಿ, 'ಮಹಿಳಾ ಸಬಲೀಕರಣ' ಕುರಿತು ಹೊಸ ಕಾರ್ಯಕಾರಿ ಗುಂಪು ಸ್ಥಾಪಿಸಲು ನಿರ್ಧರಿಸಲಾಗಿದೆ ಎಂಬುದು ನನಗೆ ಸಂತೋಷ ತಂದಿದೆ. ಗಾಂಧಿನಗರದಲ್ಲಿ ನಿಮ್ಮ ಅವಿರತ ಪ್ರಯತ್ನಗಳು ವಿಶ್ವಾದ್ಯಂತದ ಮಹಿಳೆಯರಿಗೆ ಅಪಾರ ಭರವಸೆ ಮತ್ತು ವಿಶ್ವಾಸ ನೀಡುತ್ತದೆ. ಫಲಪ್ರದ ಮತ್ತು ಯಶಸ್ವಿ ಸಮಾವೇಶಕ್ಕಾಗಿ ನಾನು ನಿಮಗೆ ಶುಭ ಹಾರೈಸುತ್ತೇನೆ.
ಧನ್ಯವಾದಗಳು,
 
ತುಂಬು ಧನ್ಯವಾದಗಳು.

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Indian economy ends 2024 with strong growth as PMI hits 60.7 in December

Media Coverage

Indian economy ends 2024 with strong growth as PMI hits 60.7 in December
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 17 ಡಿಸೆಂಬರ್ 2024
December 17, 2024

Unstoppable Progress: India Continues to Grow Across Diverse Sectors with the Modi Government