"ದೇಶದಲ್ಲಿ ಮೂಲಸೌಕರ್ಯ ಅಭಿವೃದ್ಧಿಯ ಪ್ರಸ್ತುತ ವೇಗ ಮತ್ತು ಪ್ರಮಾಣವು 140 ಕೋಟಿ ಭಾರತೀಯರ ಆಕಾಂಕ್ಷೆಗಳಿಗೆ ಸರಿಯಾಗಿ ಹೊಂದಿಕೆಯಾಗುತ್ತಿದೆ"
"ದೇಶದ ಪ್ರತಿಯೊಂದು ಭಾಗವನ್ನು ʻವಂದೇ ಭಾರತ್ʼ ಸಂಪರ್ಕಿಸುವ ದಿನ ದೂರವಿಲ್ಲ"
"ಜಿ-20ಯ ಯಶಸ್ಸು ಭಾರತದ ಪ್ರಜಾಪ್ರಭುತ್ವದ, ಜನಸಂಖ್ಯೆಯ ಮತ್ತು ವೈವಿಧ್ಯತೆಯ ಶಕ್ತಿಯನ್ನು ಪ್ರದರ್ಶಿಸಿದೆ"
"ಭಾರತವು ತನ್ನ ವರ್ತಮಾನ ಮತ್ತು ಭವಿಷ್ಯದ ಅಗತ್ಯಗಳ ನಿಟ್ಟಿನಲ್ಲಿ ಏಕಕಾಲದಲ್ಲಿ ಕೆಲಸ ಮಾಡುತ್ತಿದೆ"
"ಮುಂದಿನ ದಿನಗಳಲ್ಲಿ ʻಅಮೃತ್ ಭಾರತ್ ನಿಲ್ದಾಣʼಗಳು ನವ ಭಾರತದ ಗುರುತಾಗಲಿವೆ"
"ಈಗ ರೈಲ್ವೆ ನಿಲ್ದಾಣಗಳ ಜನ್ಮದಿನವನ್ನು ಆಚರಿಸುವ ಸಂಪ್ರದಾಯವನ್ನು ಮತ್ತಷ್ಟು ವಿಸ್ತರಿಸಲಾಗುವುದು ಮತ್ತು ಹೆಚ್ಚು ಹೆಚ್ಚು ಜನರನ್ನು ಇದರಲ್ಲಿ ತೊಡಗಿಸಿಕೊಳ್ಳಲಾಗುವುದು"
"ಪ್ರಯಾಣಿಕರಿಗೆ ಉತ್ತಮ ಪ್ರಯಾಣ ಅನುಭವವನ್ನು ಒದಗಿಸುವ ಹಾಗೂ ಪ್ರಯಾಣದ ಸುಗಮತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ರೈಲ್ವೆಯ ಪ್ರತಿಯೊಬ್ಬ ಉದ್ಯೋಗಿಯೂ ಸದಾ ಸಂವೇದನಾಶೀಲರಾಗಿರಬೇಕು "
"ಭಾರತೀಯ ರೈಲ್ವೆ ಮತ್ತು ಸಮಾಜದ ಪ್ರತಿಯೊಂದು ಹಂತದಲ್ಲೂ ನಡೆಯುತ್ತಿರುವ ಬದಲಾವಣೆಗಳು, ಅಭಿವೃದ್ಧಿ ಹೊಂದಿದ ಭಾರತದ ಕಡೆಗೆ ಮಹತ್ವದ ಹೆಜ್ಜೆ ಎಂಬುದನ್ನು ಸಾಬೀತುಪಡಿಸುತ್ತವೆ ಎಂಬ ವಿಶ್ವಾಸ ನನಗಿದೆ"

ನಮಸ್ಕಾರ!

ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ವಿವಿಧ ರಾಜ್ಯಗಳ ರಾಜ್ಯಪಾಲರು, ಮುಖ್ಯಮಂತ್ರಿಗಳು, ಕೇಂದ್ರ ಸಂಪುಟ ಸದಸ್ಯರು, ರಾಜ್ಯ ಸಚಿವರು, ಸಂಸದರು, ಶಾಸಕರು, ಇತರೆ ಪ್ರತಿನಿಧಿಗಳೆ ಮತ್ತು ನನ್ನ ಕುಟುಂಬದ ಸದಸ್ಯರೆ,

ದೇಶದಲ್ಲಿ ಆಧುನಿಕ ಸಂಪರ್ಕದ ವಿಸ್ತರಣೆಯು ಅಭೂತಪೂರ್ವ ಸಂದರ್ಭವಾಗಿದೆ. ಮೂಲಸೌಕರ್ಯ ಅಭಿವೃದ್ಧಿಯ ವೇಗ ಮತ್ತು ಪ್ರಮಾಣವು 1.4 ಬಿಲಿಯನ್ ಭಾರತೀಯರ ಮಹತ್ವಾಕಾಂಕ್ಷೆಗಳಿಗೆ ಸಂಪೂರ್ಣವಾಗಿ ಹೊಂದಿಕೆಯಾಗುತ್ತಿದೆ. ಇದನ್ನೇ ಇಂದಿನ ಭಾರತ ಬಯಸುತ್ತದೆ. ಇವು ಯುವಕರು, ಉದ್ಯಮಿಗಳು, ಮಹಿಳೆಯರು, ವೃತ್ತಿಪರರು, ಉದ್ಯಮಿಗಳು ಮತ್ತು ಉದ್ಯೋಗಗಳಿಗೆ ಸಂಬಂಧಿಸಿದವರ ದೊಡ್ಡ ಆಕಾಂಕ್ಷೆಗಳಾಗಿವೆ. ಇಂದು ಏಕಕಾಲದಲ್ಲಿ 9 ವಂದೇ ಭಾರತ್ ರೈಲುಗಳ ಉದ್ಘಾಟನೆ ಇದಕ್ಕೆ ಒಂದು ಉದಾಹರಣೆಯಾಗಿದೆ. ಇಂದು ರಾಜಸ್ಥಾನ, ಗುಜರಾತ್, ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ, ಒಡಿಶಾ, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ, ಕರ್ನಾಟಕ ಮತ್ತು ಕೇರಳದ ಜನರು ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿನ ಸೌಲಭ್ಯ ಪಡೆದಿದ್ದಾರೆ. ಹಿಂದಿನ ರೈಲುಗಳಿಗೆ ಹೋಲಿಸಿದರೆ ಇಂದು ಪ್ರಾರಂಭಿಸಲಾದ ರೈಲುಗಳು ಹೆಚ್ಚು ಆಧುನಿಕ ಮತ್ತು ಆರಾಮದಾಯಕವಾಗಿವೆ. ಈ ವಂದೇ ಭಾರತ್ ರೈಲುಗಳು ಹೊಸ ಭಾರತದ ಹೊಸ ಶಕ್ತಿ, ಉತ್ಸಾಹ ಮತ್ತು ಆಕಾಂಕ್ಷೆಗಳನ್ನು ಸಂಕೇತಿಸುತ್ತಿವೆ. ವಂದೇ ಭಾರತ್ ರೈಲುಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿರುವುದು ನನಗೂ ಖುಷಿ ತಂದಿದೆ. ಇದುವರೆಗೆ ಒಂದು ಕೋಟಿ ಹನ್ನೊಂದು ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಈ ರೈಲುಗಳಲ್ಲಿ ಪ್ರಯಾಣಿಸಿದ್ದು, ಈ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಸ್ನೇಹಿತರೆ,

ದೇಶದ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಜನರು ಇಲ್ಲಿಯವರೆಗೆ 25 ವಂದೇ ಭಾರತ್ ರೈಲುಗಳ ಸೇವೆಗಳಿಂದ ಪ್ರಯೋಜನ ಪಡೆಯುತ್ತಿದ್ದಾರೆ. ಈಗ ಈ ಜಾಲಕ್ಕೆ ಹೆಚ್ಚುವರಿಯಾಗಿ 9 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ಸೇರ್ಪಡೆಯಾಗಿವೆ. ವಂದೇ ಭಾರತ್ ದೇಶದ ಪ್ರತಿಯೊಂದು ಭಾಗಕ್ಕೂ ಸಂಪರ್ಕ ಕಲ್ಪಿಸುವ ದಿನ ದೂರವಿಲ್ಲ. ವಂದೇ ಭಾರತ್ ಎಕ್ಸ್‌ಪ್ರೆಸ್ ತನ್ನ ಉದ್ದೇಶವನ್ನು ಅದ್ಭುತವಾಗಿ ಪೂರೈಸುತ್ತಿರುವುದಕ್ಕೆ ನನಗೆ ಸಂತಸವಾಗುತ್ತಿದೆ. ಪ್ರಯಾಣದ ಸಮಯವನ್ನು ಕಡಿಮೆ ಮಾಡಲು ಬಯಸುವವರಿಗೆ ಈ ರೈಲುಗಳು ಪ್ರಮುಖವಾಗಿವೆ. ಕೆಲವೇ ಗಂಟೆಗಳಲ್ಲಿ ಬೇರೆ ನಗರದಲ್ಲಿ ತಮ್ಮ ಕೆಲಸ ಮುಗಿಸಿ ಅದೇ ದಿನ ಹಿಂದಿರುಗಲು ಬಯಸುವ ಜನರಿಗೆ ಈ ರೈಲುಗಳು ಅತ್ಯಂತ ಅವಶ್ಯಕವಾಗಿವೆ. ವಂದೇ ಭಾರತ್ ರೈಲುಗಳು ಪ್ರವಾಸೋದ್ಯಮ ಮತ್ತು ಆರ್ಥಿಕ ಚಟುವಟಿಕೆಗಳನ್ನು ವೇಗಗೊಳಿಸಿವೆ. ವಂದೇ ಭಾರತ್ ಎಕ್ಸ್‌ಪ್ರೆಸ್ ಸೇವೆ ಎಲ್ಲೆಲ್ಲಿ ತಲುಪಿದೆಯೋ ಅಲ್ಲಿಗೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಪ್ರವಾಸಿಗರ ಸಂಖ್ಯೆಯ ಹೆಚ್ಚಳವು ಆ ಪ್ರದೇಶಗಳಲ್ಲಿನ ವ್ಯಾಪಾರಗಳು ಮತ್ತು ವರ್ತಕರ ಆದಾಯದಲ್ಲಿ ಹೆಚ್ಚಳವನ್ನು ಸೂಚಿಸುತ್ತಿದೆ. ಇದರಿಂದ ಅಲ್ಲಿ ಹೊಸ ಉದ್ಯೋಗಾವಕಾಶಗಳೂ ಸೃಷ್ಟಿಯಾಗುತ್ತಿವೆ.

ನನ್ನ ಕುಟುಂಬದ ಸದಸ್ಯರೆ,

ಇಂದು ಭಾರತದಲ್ಲಿರುವ ಉತ್ಸಾಹ ಮತ್ತು ಆತ್ಮವಿಶ್ವಾಸದ ವಾತಾವರಣ ಕಳೆದ ಹಲವು ದಶಕಗಳಲ್ಲಿ ಇರಲಿಲ್ಲ. ಇಂದು ದೇಶದ ಪ್ರತಿಯೊಬ್ಬ ಪ್ರಜೆಯೂ ತಮ್ಮ ನವ ಭಾರತದ ಸಾಧನೆಗಳ ಬಗ್ಗೆ ಹೆಮ್ಮೆ ಪಡುತ್ತಾರೆ. ಚಂದ್ರಯಾನ-3ರ ಯಶಸ್ಸು ಮಾನವ ನಿರೀಕ್ಷೆಗಳನ್ನು ಹೊಸ ಎತ್ತರಕ್ಕೆ ಏರಿಸಿದೆ. ದೃಢ ಸಂಕಲ್ಪವಿದ್ದರೆ ಅತ್ಯಂತ ಸವಾಲಿನ ಗುರಿಗಳನ್ನೂ ಸಾಧಿಸಬಹುದು ಎಂಬ ವಿಶ್ವಾಸವನ್ನು ಆದಿತ್ಯ-ಎಲ್1 ಉಡಾವಣೆ ನೀಡಿದೆ. ಜಿ-20 ಶೃಂಗಸಭೆಯ ಯಶಸ್ಸು ಭಾರತದ ಪ್ರಜಾಪ್ರಭುತ್ವ, ಜನಸಂಖ್ಯೆ ಮತ್ತು ವೈವಿಧ್ಯತೆಯ ನಂಬಲಾಗದ ಅದ್ಭುತ ಶಕ್ತಿಯನ್ನು ಪ್ರದರ್ಶಿಸಿದೆ. ಭಾರತದ ರಾಜತಾಂತ್ರಿಕ ಕೌಶಲ್ಯಗಳು ವಿಶ್ವಾದ್ಯಂತ ಚರ್ಚೆಯಾಗುತ್ತಿವೆ. ಮಹಿಳಾ ನೇತೃತ್ವದ ಅಭಿವೃದ್ಧಿಯ ನಮ್ಮ ದೂರದೃಷ್ಟಿಯನ್ನು ಜಗತ್ತು ಶ್ಲಾಘಿಸಿದೆ. ಈ ದೃಷ್ಟಿಕೋನ ನಿರ್ಮಿಸಿ, ಸರ್ಕಾರವು 'ನಾರಿ ಶಕ್ತಿ ವಂದನ್ ಅಧಿನಿಯಮ'ವನ್ನು ಸಂಸತ್ತಿನಲ್ಲಿ ಪರಿಚಯಿಸಿತು. ನಾರಿ ಶಕ್ತಿ ವಂದನ್ ಅಧಿನಿಯಮ ಪರಿಚಯಿಸಿದಾಗಿನಿಂದ, ಮಹಿಳೆಯರ ಕೊಡುಗೆ ಮತ್ತು ಪ್ರತಿ ವಲಯದಲ್ಲಿ ಅವರ ಹೆಚ್ಚುತ್ತಿರುವ ಪಾತ್ರದ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಇಂದು ಹಲವಾರು ರೈಲು ನಿಲ್ದಾಣಗಳನ್ನು ಸಂಪೂರ್ಣವಾಗಿ ಮಹಿಳಾ ಉದ್ಯೋಗಿಗಳಿಂದಲೇ ನಿರ್ವಹಿಸಲಾಗುತ್ತಿದೆ. ಅಂತಹ ಪ್ರಯತ್ನಗಳನ್ನು ನಾನು ಶ್ಲಾಘಿಸುತ್ತೇನೆ. ನಾರಿಶಕ್ತಿ ವಂದನ ಅಧಿನಿಯಮಕ್ಕಾಗಿ ಮತ್ತೊಮ್ಮೆ ದೇಶದ ಎಲ್ಲಾ ಮಹಿಳೆಯರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಸ್ನೇಹಿತರೆ,

ಈ ಆತ್ಮವಿಶ್ವಾಸದ ವಾತಾವರಣದ ನಡುವೆ, ‘ಅಮೃತ ಕಾಲ’(ಸುವರ್ಣ ಯುಗ)ದ ಭಾರತವು ತನ್ನ ಪ್ರಸ್ತುತ ಮತ್ತು ಭವಿಷ್ಯದ ಅಗತ್ಯಗಳ ಮೇಲೆ ಏಕಕಾಲದಲ್ಲಿ ಕೆಲಸ ಮಾಡುತ್ತಿದೆ. ಮೂಲಸೌಕರ್ಯ ಯೋಜನೆಗಳ ಅನುಷ್ಠಾನದವರೆಗೆ, ಎಲ್ಲಾ ಪಾಲುದಾರರು ಸಹಕರಿಸುತ್ತಿದ್ದಾರೆ. ಈ ಉದ್ದೇಶಕ್ಕಾಗಿ ಪಿಎಂ ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ (ಸಮಗ್ರ ಯೋಜನೆ) ಮಾಡಲಾಗಿದೆ. ದೇಶದಲ್ಲಿ ಸಾರಿಗೆ ವೆಚ್ಚ ಕಡಿಮೆ ಮಾಡಲು ಮತ್ತು ನಮ್ಮ ರಫ್ತು ವೆಚ್ಚ ಕಡಿಮೆ ಮಾಡಲು, ಹೊಸ ಸರಕು ಸಾಗಣೆ(ಲಾಜಿಸ್ಟಿಕ್ಸ್) ನೀತಿ ಜಾರಿಗೆ ತರಲಾಗಿದೆ. ದೇಶದಲ್ಲಿ ಒಂದು ಸಾರಿಗೆ ವಿಧಾನ ಬೆಂಬಲಿಸಲು ಬಹು-ಮಾದರಿ ಸಂಪರ್ಕಕ್ಕೆ ಒತ್ತು ನೀಡಲಾಗುತ್ತಿದೆ. ಈ ಎಲ್ಲಾ ಉಪಕ್ರಮಗಳ ಪ್ರಮುಖ ಗುರಿಯು ಪ್ರಯಾಣದ ಸುಲಭತೆ ಹೆಚ್ಚಿಸುವುದು, ಭಾರತದ ನಾಗರಿಕರಿಗೆ ಅಮೂಲ್ಯ ಸಮಯ ಉಳಿಸುವುದಾಗಿದೆ. ಈ ವಂದೇ ಭಾರತ್ ರೈಲುಗಳು ಈ ಭಾವನೆಯ ಪ್ರತಿಬಿಂಬವಾಗಿದೆ.

ಸ್ನೇಹಿತರೆ,

ಭಾರತೀಯ ರೈಲ್ವೆಯು ದೇಶದ ಬಡವರು ಮತ್ತು ಮಧ್ಯಮ ವರ್ಗದ ಜನರ ಅತ್ಯಂತ ವಿಶ್ವಾಸಾರ್ಹ ಒಡನಾಡಿಯಾಗಿದೆ. ನಮ್ಮ ದೇಶದಲ್ಲಿ ಒಂದು ದಿನದಲ್ಲಿ ರೈಲಿನಲ್ಲಿ ಪ್ರಯಾಣಿಸುವವರ ಸಂಖ್ಯೆ ಅನೇಕ ದೇಶಗಳ ಜನಸಂಖ್ಯೆಗಿಂತ ಹೆಚ್ಚು. ದುರದೃಷ್ಟವಶಾತ್, ಈ ಹಿಂದೆ ಭಾರತೀಯ ರೈಲ್ವೆಯನ್ನು ಆಧುನೀಕರಿಸಲು ಹೆಚ್ಚಿನ ಗಮನ ನೀಡಿರಲಿಲ್ಲ.  ಆದರೆ ಈಗ, ನಮ್ಮ ಸರ್ಕಾರವು ಭಾರತೀಯ ರೈಲ್ವೆಯ ಪರಿವರ್ತನೆಗೆ ಬದ್ಧವಾಗಿದೆ. ರೈಲ್ವೆ ಬಜೆಟ್‌ ಅನುದಾನವನ್ನು ಸರ್ಕಾರ ಅಭೂತಪೂರ್ವ ಹೆಚ್ಚಳ ಮಾಡಿದೆ. 2014ಕ್ಕೆ ಹೋಲಿಸಿದರೆ ಈ ವರ್ಷ, ರೈಲ್ವೆ ಬಜೆಟ್ 8 ಪಟ್ಟು ಹೆಚ್ಚಾಗಿದೆ. ರೈಲು ಮಾರ್ಗಗಳ 2 ಪಟ್ಟು ಹೆಚ್ಚಳ, ವಿದ್ಯುದೀಕರಣ, ಹೊಸ ರೈಲುಗಳ ಸಂಚಾರ ಮತ್ತು ಹೊಸ ಮಾರ್ಗಗಳ ನಿರ್ಮಾಣದಲ್ಲಿ ತ್ವರಿತ ಪ್ರಗತಿಯಾಗಿದೆ.

ಸ್ನೇಹಿತರೆ,

ಭಾರತೀಯ ರೈಲ್ವೆಯಲ್ಲಿ ರೈಲುಗಳು ಪ್ರಯಾಣಿಕರಿಗೆ ಚಲಿಸುವ ಮನೆಗಳಾಗಿದ್ದರೆ, ನಮ್ಮ ರೈಲು ನಿಲ್ದಾಣಗಳು ಅವರ ತಾತ್ಕಾಲಿಕ ಮನೆಗಳಿದ್ದಂತೆ. ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ವಸಾಹತುಶಾಹಿ ಆಳ್ವಿಕೆಯ ಕಾಲದಿಂದಲೂ ಹೆಚ್ಚಿನ ಬದಲಾವಣೆ ಕಾಣದ ಸಾವಿರಾರು ರೈಲು ನಿಲ್ದಾಣಗಳು ನಮ್ಮಲ್ಲಿವೆ ಎಂಬುದು ನಿಮಗೂ, ನನಗೂ ಗೊತ್ತು. ಅಭಿವೃದ್ಧಿ ಹೊಂದಿದ ಭಾರತವು ತನ್ನ ರೈಲು ನಿಲ್ದಾಣಗಳನ್ನು ಆಧುನೀಕರಿಸಬೇಕಾಗಿದೆ. ಈ ದೃಷ್ಟಿಯೊಂದಿಗೆ, ಭಾರತದಲ್ಲಿ ಮೊದಲ ಬಾರಿಗೆ ರೈಲ್ವೆ ನಿಲ್ದಾಣಗಳ ಅಭಿವೃದ್ಧಿ ಮತ್ತು ಆಧುನೀಕರಣದ ಅಭಿಯಾನ ಪ್ರಾರಂಭಿಸಲಾಗಿದೆ. ಇಂದು ದೇಶದಲ್ಲಿ ರೈಲು ಪ್ರಯಾಣಿಕರ ಅನುಕೂಲಕ್ಕಾಗಿ ನಿರ್ಮಿಸಲಾದ ಫುಟ್‌ ಓವರ್‌ಬ್ರಿಡ್ಜ್‌ಗಳು, ಲಿಫ್ಟ್‌ಗಳು ಮತ್ತು ಎಸ್ಕಲೇಟರ್‌ಗಳು ದಾಖಲೆ ಸಂಖ್ಯೆಯಲ್ಲಿವೆ. ಕೆಲವೇ ದಿನಗಳ ಹಿಂದೆ, ದೇಶದ 500ಕ್ಕೂ ಹೆಚ್ಚು ಪ್ರಮುಖ ನಿಲ್ದಾಣಗಳನ್ನು ನವೀಕರಿಸುವ ಕೆಲಸ ಪ್ರಾರಂಭವಾಯಿತು. ‘ಅಮೃತ ಕಾಲ’ದಲ್ಲಿ ಹೊಸದಾಗಿ ಅಭಿವೃದ್ಧಿಪಡಿಸಲಾದ ಈ ನಿಲ್ದಾಣಗಳನ್ನು ‘ಅಮೃತ ಭಾರತ ನಿಲ್ದಾಣಗಳು’ ಎಂದು ಕರೆಯಲಾಗುತ್ತದೆ. ಈ ನಿಲ್ದಾಣಗಳು ಮುಂದಿನ ದಿನಗಳಲ್ಲಿ ಹೊಸ ಭಾರತದ ಗುರುತಾಗಲಿವೆ.

ನನ್ನ ಕುಟುಂಬದ ಸದಸ್ಯರೆ,

ಪ್ರತಿಯೊಂದು ರೈಲು ನಿಲ್ದಾಣವು ಏನೇ ಇರಲಿ, ತನ್ನದೇ ಆದ ಸಂಸ್ಥಾಪನಾ ದಿನ ಹೊಂದಿದೆ. ಇದೀಗ ಭಾರತೀಯ ರೈಲ್ವೆಯು ರೈಲು ನಿಲ್ದಾಣಗಳ ಸಂಸ್ಥಾಪನಾ ದಿನ ಆಚರಿಸಲು ಆರಂಭಿಸಿರುವುದು ನನಗೆ ಸಂತಸ ತಂದಿದೆ. ಇತ್ತೀಚೆಗೆ ತಮಿಳುನಾಡಿನ ಕೊಯಮತ್ತೂರು, ಮುಂಬೈನ ಛತ್ರಪತಿ ಶಿವಾಜಿ ಟರ್ಮಿನಸ್ ಮತ್ತು ಪುಣೆ ಸೇರಿದಂತೆ ಹಲವಾರು ನಿಲ್ದಾಣಗಳ ಸಂಸ್ಥಾಪನಾ ದಿನ ಆಚರಿಸಲಾಯಿತು. ಕೊಯಮತ್ತೂರು ರೈಲು ನಿಲ್ದಾಣವು ಪ್ರಯಾಣಿಕರಿಗೆ ಸೇವೆ ಸಲ್ಲಿಸುವ 150 ವರ್ಷಗಳನ್ನು ಪೂರೈಸಿದೆ. ಅಲ್ಲಿನ ಜನರು ಸಹಜವಾಗಿಯೇ ಇಂತಹ ಸಾಧನೆಗಳ ಬಗ್ಗೆ ಹೆಮ್ಮೆಪಡುತ್ತಾರೆ. ರೈಲು ನಿಲ್ದಾಣಗಳ ಸಂಸ್ಥಾಪನಾ ದಿನ ಆಚರಿಸುವ ಈ ಸಂಪ್ರದಾಯವನ್ನು ವಿಸ್ತರಿಸಲಾಗುವುದು, ಇದು ಹೆಚ್ಚು ಹೆಚ್ಚು ಜನರನ್ನು ಸಂಪರ್ಕಿಸುತ್ತದೆ.

ನನ್ನ ಕುಟುಂಬದ ಸದಸ್ಯರೆ,

ಭಾರತವು ‘ಅಮೃತ ಕಾಲ’ದಲ್ಲಿ ಅಚಲವಾದ ಸಂಕಲ್ಪದೊಂದಿಗೆ ‘ಏಕ್ ಭಾರತ್, ಶ್ರೇಷ್ಠ ಭಾರತ’ದ ದೃಷ್ಟಿಯನ್ನು ವಾಸ್ತವಕ್ಕೆ ತಿರುಗಿಸಿದೆ. 2047ರಲ್ಲಿ ದೇಶವು 100ನೇ ಸ್ವಾತಂತ್ರ್ಯೋತ್ಸವ ಆಚರಿಸುವಾಗ, ಪ್ರತಿ ರಾಜ್ಯದ ಅಭಿವೃದ್ಧಿ, ಪ್ರತಿ ರಾಜ್ಯದ ಜನರ ಅಭಿವೃದ್ಧಿಯು 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತ ಕಟ್ಟುವ ಗುರಿಯಂತೆಯೇ ನಿರ್ಣಾಯಕವಾಗಿದೆ. ಹಿಂದಿನ ಸರ್ಕಾರಗಳಲ್ಲಿ ಸಚಿವ ಸಂಪುಟ ರಚನೆಯಾದಾಗ, ರೈಲ್ವೆ ಸಚಿವಾಲಯ ಯಾರಿಗೆ ಸಿಗಲಿದೆ ಎಂಬುದು ಹೆಚ್ಚು ಚರ್ಚೆಯಾಗುತ್ತಿದ್ದ ವಿಷಯ. ರೈಲ್ವೆ ಸಚಿವರು ಆದ ರಾಜ್ಯಕ್ಕೆ ಹೆಚ್ಚಿನ ರೈಲುಗಳು ಸಂಚರಿಸುತ್ತವೆ ಎಂದು ನಂಬಲಾಗುತ್ತಿತ್ತು. ಇದಲ್ಲದೆ, ಹೊಸ ರೈಲುಗಳ ಘೋಷಣೆ ಮಾಡಲಾಗುತ್ತಿತ್ತು, ಆದರೆ ಅವುಗಳಲ್ಲಿ ಕೆಲವೇ ರೈಲುಗಳು ಮಾತ್ರ ಹಳಿಗಳ ಮೇಲೆ ಸಂಚರಿಸುತ್ತಿದ್ದವು. ಈ ಸ್ವಯಂ-ಕೇಂದ್ರಿತ ಚಿಂತನೆಯು ರೈಲ್ವೆಗೆ ಹಾನಿ ಮಾಡುವುದಲ್ಲದೆ ದೇಶ ಮತ್ತು ಅದರ ಜನರಿಗೆ ಗಮನಾರ್ಹ ಹಾನಿ ಉಂಟುಮಾಡಿತು. ಈಗ, ದೇಶವು ಯಾವುದೇ ರಾಜ್ಯವನ್ನು ಅಭಿವೃದ್ಧಿಯಿಂದ ತಡೆಹಿಡಿಯುವ ಅಪಾಯ ಎದುರಿಸಲು ಸಾಧ್ಯವಿಲ್ಲ. ‘ಸಬ್ಕಾ ಸಾಥ್, ಸಬ್ಕಾ ವಿಕಾಸ್’ ದೃಷ್ಟಿಯಲ್ಲಿ ನಾವು ಮುಂದುವರಿಯಬೇಕು.

ನನ್ನ ಕುಟುಂಬದ ಸದಸ್ಯರೆ,

ನಮ್ಮ ಕಷ್ಟಪಟ್ಟು ಕೆಲಸ ಮಾಡುವ ರೈಲ್ವೆ ಉದ್ಯೋಗಿಗಳಿಗೂ ಇಂದು ನಾನು ಏನನ್ನಾದರೂ ಹೇಳಲು ಬಯಸುತ್ತೇನೆ. ಯಾರಾದರೂ ಒಂದು ನಗರದಿಂದ ಅಥವಾ ದೂರದ ಸ್ಥಳದಿಂದ ಪ್ರಯಾಣಿಸಿದಾಗ, ಅವರ ಪ್ರಯಾಣ ಹೇಗಿತ್ತು ಎಂದು ಮೊದಲು ಕೇಳಲಾಗುತ್ತಿತ್ತು. ಆ ವ್ಯಕ್ತಿಯು ತನ್ನ ಪ್ರಯಾಣದ ಅನುಭವ ಹಂಚಿಕೊಳ್ಳುವುದು ಮಾತ್ರವಲ್ಲದೆ, ಮನೆಯಿಂದ ಹೊರಟು ತನ್ನ ಗಮ್ಯಸ್ಥಾನವನ್ನು ತಲುಪುವವರೆಗಿನ ಸಂಪೂರ್ಣ ಪ್ರಯಾಣದ ಬಗ್ಗೆ ಮಾತನಾಡುತ್ತಿದ್ದ. ಆದರೆ ಈಗ ರೈಲು ನಿಲ್ದಾಣಗಳು ಎಷ್ಟು ಬದಲಾಗಿವೆ, ರೈಲುಗಳನ್ನು ಎಷ್ಟು ಚೆನ್ನಾಗಿ ನಿರ್ವಹಿಸಲಾಗುತ್ತಿದೆ, ಆತಂಕಮುಕ್ತ ಪ್ರಯಾಣ ಈಗ ಜನರದ್ದಾಗಿದೆ.  ಕಾಗದದ ಬದಲಿಗೆ ಟ್ಯಾಬ್ಲೆಟ್‌ಗಳ ಬಳಕೆ, ಭದ್ರತಾ ವ್ಯವಸ್ಥೆಗಳು ಮತ್ತು ಗುಣಮಟ್ಟದ ಆಹಾರ ಸೇರಿದಂತೆ ತಮ್ಮ ಅನುಭವಗಳ ವಿವಿಧ ಅಂಶಗಳನ್ನು ಪ್ರಯಾಣಿಕರು ವಿವರಿಸುತ್ತಾರೆ. ಆದ್ದರಿಂದ, ಪ್ರಯಾಣಿಕರಿಗೆ ಉತ್ತಮ ಪ್ರಯಾಣದ ಅನುಭವ ಒದಗಿಸಲು ನಿರಂತರವಾದ ಸಹಾನುಭೂತಿ ಮತ್ತು ಸಮರ್ಪಣೆಯನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬ ರೈಲ್ವೆ ಉದ್ಯೋಗಿಗೆ ಅತ್ಯಗತ್ಯ. ಈ ದಿನಗಳಲ್ಲಿ ಇಂತಹ ಸಕಾರಾತ್ಮಕ ಪ್ರತಿಕ್ರಿಯೆ ಕೇಳುವುದೇ ಸಂತಸದ ವಿಚಾರವಾಗಿದೆ. "ಇದು ತುಂಬಾ ಚೆನ್ನಾಗಿತ್ತು, ತುಂಬಾ ಚೆನ್ನಾಗಿತ್ತು" ಎಂದು ಜನರು ಹೇಳುತ್ತಾರೆ, ಅದು ಸಂತೋಷದ ಭಾವನೆ ತರುತ್ತದೆ. ಆದ್ದರಿಂದ, ನಾನು ಎಲ್ಲಾ ಬದ್ಧತೆ ತೋರುತ್ತಿರುವ ಎಲ್ಲಾ  ರೈಲ್ವೆ ಉದ್ಯೋಗಿಗಳನ್ನು ನನ್ನ ಹೃದಯಪೂರ್ವಕವಾಗಿ ಅಭಿನಂದಿಸುತ್ತೇನೆ.

ನನ್ನ ಕುಟುಂಬದ ಸದಸ್ಯರೆ,

ಭಾರತೀಯ ರೈಲ್ವೆ ಸ್ವಚ್ಛತೆಗೆ ಹೊಸ ಮಾನದಂಡಗಳನ್ನು ನಿಗದಿಪಡಿಸಿದೆ, ಇದನ್ನು ಪ್ರತಿಯೊಬ್ಬ ನಾಗರಿಕರು ಗಮನಿಸಿದ್ದಾರೆ. ಹಿಂದಿನದಕ್ಕೆ ಹೋಲಿಸಿದರೆ, ನಮ್ಮ ನಿಲ್ದಾಣಗಳು ಮತ್ತು ರೈಲುಗಳು ಈಗ ಹೆಚ್ಚು ಸ್ವಚ್ಛವಾಗಿವೆ. ಗಾಂಧಿ ಜಯಂತಿ ಹೆಚ್ಚು ದೂರವಿಲ್ಲ ಎಂಬುದು ನಿಮಗೆ ತಿಳಿದಿದೆ. ಗಾಂಧೀಜಿಯವರ ಸ್ವಚ್ಛತೆಯ ಬದ್ಧತೆ ಎಲ್ಲರಿಗೂ ಚಿರಪರಿಚಿತ. ಸ್ವಚ್ಛತೆಗಾಗಿ ಮಾಡುವ ಪ್ರತಿಯೊಂದು ಪ್ರಯತ್ನವೂ ಗಾಂಧೀಜಿ ಅವರಿಗೆ ಸಮರ್ಪಿಸುವ ನಿಜವಾದ ಗೌರವವಾಗಿದೆ. ಇದೇ ಉತ್ಸಾಹದಲ್ಲಿ ಅಕ್ಟೋಬರ್ 1ರಂದು ಬೆಳಗ್ಗೆ 10 ಗಂಟೆಗೆ ಸ್ವಚ್ಛತೆಯ ಬೃಹತ್ ಕಾರ್ಯಕ್ರಮ ನಡೆಯಲಿದೆ. ಇದು ಜನರ ನೇತೃತ್ವದಲ್ಲಿ ದೇಶದೆಲ್ಲೆಡೆ ನಡೆಯುತ್ತಿದೆ. ಈ ಸ್ವಚ್ಛತಾ ಅಭಿಯಾನದಲ್ಲಿ ನೀವು ಸಹ ಭಾಗವಹಿಸಬೇಕೆಂದು ನಾನು ಪ್ರಾಮಾಣಿಕವಾಗಿ ವಿನಂತಿಸುತ್ತೇನೆ. ಅಕ್ಟೋಬರ್ 1ರಂದು ಬೆಳಗ್ಗೆ 10 ಗಂಟೆಯನ್ನು ನಿಮ್ಮ ಕ್ಯಾಲೆಂಡರ್‌ಗಳಲ್ಲಿ ಗುರುತು ಹಾಕಿ. ಗಾಂಧಿ ಜಯಂತಿಯು ಪ್ರತಿಯೊಬ್ಬ ಪ್ರಜೆಯೂ ಖಾದಿ ಮತ್ತು ಸ್ಥಳೀಯ ಉತ್ಪನ್ನಗಳ ಖರೀದಿಗೆ ಒತ್ತು ನೀಡುವ ಸಮಯವಾಗಬೇಕು. ಅಕ್ಟೋಬರ್ 2ರಂದು ಗಾಂಧಿ ಜಯಂತಿ ಮತ್ತು ಅಕ್ಟೋಬರ್ 31ರಂದು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜಯಂತಿ. ಒಂದು ರೀತಿಯಲ್ಲಿ, ಇಡೀ ತಿಂಗಳಿಗೆ ಖಾದಿ, ಕರಕುಶಲ ವಸ್ತುಗಳು, ಸ್ಥಳೀಯ ಉತ್ಪನ್ನಗಳನ್ನು ಪ್ರಜ್ಞಾಪೂರ್ವಕವಾಗಿ ಖರೀದಿಸೋಣ. ನಾವು ಸ್ಥಳೀಯರಿಗೆ ಹೆಚ್ಚು ಧ್ವನಿ ನೀಡಬೇಕಿದೆ.

ಸ್ನೇಹಿತರೆ,

ಭಾರತೀಯ ರೈಲ್ವೆ ಮತ್ತು ಸಮಾಜದ ಎಲ್ಲಾ ವಲಯಗಳಲ್ಲಿ ಆಗುತ್ತಿರುವ ಬದಲಾವಣೆಗಳು ಅಭಿವೃದ್ಧಿ ಹೊಂದಿದ ಭಾರತಕ್ಕೆ ಮಹತ್ವದ ಹೆಜ್ಜೆಯಾಗಲಿದೆ ಎಂದು ನಾನು ನಂಬುತ್ತೇನೆ. ಮತ್ತೊಮ್ಮೆ, ಹೊಸ ವಂದೇ ಭಾರತ್ ರೈಲುಗಳಿಗಾಗಿ ನಾನು ದೇಶದ ಜನರಿಗೆ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ.

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
India’s organic food products export reaches $448 Mn, set to surpass last year’s figures

Media Coverage

India’s organic food products export reaches $448 Mn, set to surpass last year’s figures
NM on the go

Nm on the go

Always be the first to hear from the PM. Get the App Now!
...
Prime Minister lauds the passing of amendments proposed to Oilfields (Regulation and Development) Act 1948
December 03, 2024

The Prime Minister Shri Narendra Modi lauded the passing of amendments proposed to Oilfields (Regulation and Development) Act 1948 in Rajya Sabha today. He remarked that it was an important legislation which will boost energy security and also contribute to a prosperous India.

Responding to a post on X by Union Minister Shri Hardeep Singh Puri, Shri Modi wrote:

“This is an important legislation which will boost energy security and also contribute to a prosperous India.”