ಸಾಂಕ್ರಾಮಿಕದ ಸಂದರ್ಭದಲ್ಲಿ ಸೇವೆ ಮತ್ತು ಬಲಿದಾನ ಮಾಡಿದ ವೈದ್ಯರಿಗೆ ನಮನ ಸಲ್ಲಿಸಿದ ಪ್ರಧಾನಿ
ಆರೋಗ್ಯ ಕ್ಷೇತ್ರದ ಆಯವ್ಯಯ ದುಪ್ಪಟ್ಟಾಗಿದ್ದು, 2 ಲಕ್ಷ ಕೋಟಿ ರೂಪಾಯಿ ಮೀರಿದೆ: ಪ್ರಧಾನಮಂತ್ರಿ
ನಮ್ಮ ವೈದ್ಯರು ತಮ್ಮ ಅನುಭವ ಮತ್ತು ಕೌಶಲದಿಂದ ಹೊಸ ಮತ್ತು ತ್ವರಿತವಾಗಿ ರೂಪಾಂತರವಾಗುತ್ತಿರುವ ಈ ವೈರಾಣುವಿನ್ನು ಎದುರಿಸುತ್ತಿದ್ದಾರೆ : ಪ್ರಧಾನಮಂತ್ರಿ
ಸರ್ಕಾರ ವೈದ್ಯರ ಸುರಕ್ಷತೆಗೆ ಬದ್ಧವಾಗಿದೆ: ಪ್ರಧಾನಮಂತ್ರಿ
ಯೋಗದ ಪ್ರಯೋಜನಗಳ ಕುರಿತಂತೆ ಸಾಕ್ಷಾಧಾರಿತ ಅಧ್ಯಯನಕ್ಕೆ ಕರೆ
ದಾಖಲೀಕರಣ ಪ್ರಾಮುಖ್ಯತೆಯ ಪ್ರತಿಪಾದನೆ, ವಿವರವಾದ ದಾಖಲಾತಿಗಾಗಿ ಕೋವಿಡ್ ಸಾಂಕ್ರಾಮಿಕವು ಉತ್ತಮ ಆರಂಭದ ಹಂತವಾಗಿದೆ ಎಂದು ಹೇಳಿಕೆ

ನಮಸ್ಕಾರ!. ರಾಷ್ಟ್ರೀಯ ವೈದ್ಯರ ದಿನದಂದು ನಿಮ್ಮೆಲ್ಲರಿಗೂ ಶುಭ ಹಾರೈಕೆಗಳು! ಡಾ. ಬಿ.ಸಿ.ರಾಯ್ ಅವರ ನೆನಪಿನಲ್ಲಿ ಆಚರಿಸಲಾಗುತ್ತಿರುವ ಈ ದಿನ ನಮ್ಮ ವೈದ್ಯರ ಮತ್ತು ವೈದ್ಯಕೀಯ ಸಮುದಾಯದ ಅತಿ ಶ್ರೇಷ್ಠ ಆದರ್ಶಗಳನ್ನು ಸಂಕೇತಿಸುತ್ತದೆ. ನಮ್ಮ ವೈದ್ಯರು ಕಳೆದ ಒಂದೂವರೆ ವರ್ಷದಲ್ಲಿ ಹೇಗೆ ದೇಶವಾಸಿಗಳಿಗೆ ಸೇವೆ ಸಲ್ಲಿಸಿದರು ಎನ್ನುವ ರೀತಿಯೇ  ಅದಕ್ಕೆ  ಒಂದು ಸಾಕ್ಷಿ. 130 ಕೋಟಿ ದೇಶವಾಸಿಗಳ ಪರವಾಗಿ ದೇಶದ ಎಲ್ಲಾ ವೈದ್ಯರಿಗೆ ನಾನು ನನ್ನ ಕೃತಜ್ಞತೆಗಳನ್ನು ಮತ್ತು ಧನ್ಯವಾದಗಳನ್ನು ಸಲ್ಲಿಸುತ್ತೇನೆ.

ಸ್ನೇಹಿತರೇ,

ವೈದ್ಯರನ್ನು ದೇವರ ಇನ್ನೊಂದು ರೂಪ ಎನ್ನುತ್ತಾರೆ. ಮತ್ತು ಅದು ಕಾರಣವಿಲ್ಲದೆ ಹೇಳುವಂತಹದಲ್ಲ. ಹಲವು ಜನರ ಜೀವ ಆಪಾಯದಲ್ಲಿರಬಹುದು ಅಥವಾ ಯಾವುದೇ ರೋಗದ ಅಥವಾ ಅಪಘಾತದ ಬಲಿಪಶು ಅವರಾಗಿರಬಹುದು, ಅಥವಾ ನಾವು ನಮ್ಮವರೇ ಒಬ್ಬರನ್ನು ಕಳೆದುಕೊಳ್ಳುತ್ತೇವೆ ಎಂಬ ಭಾವನೆ ಮೂಡಬಹುದು. ಆದರೆ ಅಂತಹ ಸಂದರ್ಭಗಳಲ್ಲಿ , ನಮ್ಮ ವೈದ್ಯರು ಜೀವನದ ದಿಕ್ಕನ್ನು ದೇವತೆಗಳಂತೆ ಬಂದು ಬದಲಿಸುತ್ತಾರೆ ಮತ್ತು ನಮಗೆ ಹೊಸ ಬದುಕನ್ನು ಕೊಡುತ್ತಾರೆ.

ಸ್ನೇಹಿತರೇ

ಇಂದು ದೇಶವು ಕೊರೊನಾ ವಿರುದ್ಧ ಬೃಹತ್ತಾದ ಯುದ್ದವನ್ನು ಕೈಗೊಂಡಿರುವಾಗ, ವೈದ್ಯರು ಹಗಲು ರಾತ್ರಿ ಕೆಲಸ ಮಾಡಿ ಮಿಲಿಯಾಂತರ ಜೀವಗಳನ್ನು ರಕ್ಷಿಸಿದರು. ಈ ಪುಣ್ಯಕರ ಕೆಲಸವನ್ನು ಮಾಡುವಾಗ ದೇಶದ ಹಲವಾರು ವೈದ್ಯರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದರು. ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಈ ಎಲ್ಲಾ ವೈದ್ಯರಿಗೆ ನಾನು ವಿನಯದಿಂದ ನನ್ನ ಗೌರವವನ್ನು ಸಲ್ಲಿಸುತ್ತೇನೆ. ಮತ್ತು ಅವರ ಕುಟುಂಬಗಳಿಗೆ ನನ್ನ ಸಂತಾಪಗಳನ್ನು ವ್ಯಕ್ತಪಡಿಸುತ್ತೇನೆ.

ಸ್ನೇಹಿತರೇ,

ಕೊರೊನಾ ವಿರುದ್ಧದ ಯುದ್ಧದಲ್ಲಿ ಸವಾಲುಗಳ ಸಂಖ್ಯೆ ಎಷ್ಟು ಎಂಬ ಬಗ್ಗೆ ಚಿಂತೆ ಇಲ್ಲ, ನಮ್ಮ ವಿಜ್ಞಾನಿಗಳು ಮತ್ತು ವೈದ್ಯರು ಅವುಗಳಿಗೆ ಹಲವಾರು ಪರಿಹಾರಗಳನ್ನು ಹುಡುಕಿದರು ಮತ್ತು ಸಮರ್ಪಕ ಪರಿಣಾಮಕಾರಿ ಔಷಧಿಗಳನ್ನು ಅಭಿವೃದ್ಧಿಪಡಿಸಿದರು. ಇಂದು ನಮ್ಮ ವೈದ್ಯರು ಕೊರೊನಾದ ಶಿಷ್ಟಾಚಾರಗಳನ್ನು ರೂಪಿಸುವಲ್ಲಿ ಮತ್ತು ಅನುಷ್ಠಾನಗೊಳಿಸುವಲ್ಲಿ ಸಹಾಯ ಮಾಡುತ್ತಿದ್ದಾರೆ. ಈ ವೈರಸ್ ಹೊಸದು, ಹೊಸ ರೂಪಾಂತರಗಳು ಬರುತ್ತಿವೆ. ಆದರೆ ನಮ್ಮ ವೈದ್ಯರು ತಮ್ಮ ಜ್ಞಾನ ಮತ್ತು ಅನುಭವದ ಮೂಲಕ ಆ ವೈರಸ್ಸಿನ ಅಪಾಯ ಮತ್ತು ಸವಾಲುಗಳನ್ನು ನಿಭಾಯಿಸುತ್ತಿದ್ದಾರೆ. ಕಳೆದ ಹಲವಾರು ದಶಕಗಳಿಂದ ದೇಶದಲ್ಲಿ ಇದ್ದ ವೈದ್ಯಕೀಯ ಮೂಲಸೌಕರ್ಯಗಳ ಮಿತಿಗಳ ಬಗ್ಗೆ ನಿಮಗೆ ತಿಳಿದಿದೆ. ಈ ಮೊದಲು ವೈದ್ಯಕೀಯ ಮೂಲಸೌಕರ್ಯವನ್ನು ಹೇಗೆ ನಿರ್ಲಕ್ಷಿಸಲಾಗಿತ್ತು ಎಂಬುದೂ ನಿಮಗೆ ಅರಿವಿದೆ. ನಮ್ಮ ದೇಶದಲ್ಲಿ ಜನಸಂಖ್ಯಾಬಾಹುಳ್ಯದ ಒತ್ತಡ ಈ ಸವಾಲನ್ನು ಇನ್ನಷ್ಟು ಕಠಿಣವಾಗಿಸಿದೆ. ಇದಲ್ಲದೆ ಲಕ್ಷವೊಂದಕ್ಕೆ ಸೋಂಕಿನ ಪ್ರಮಾಣ ಅಥವಾ ಮರಣ ಪ್ರಮಾಣದತ್ತ ನಾವು ಗಮನಿಸಿದರೆ ಆಗ ಇತರ ಅಭಿವೃದ್ಧಿ ಹೊಂದಿದ ಮತ್ತು ಸಮೃದ್ಧತೆ ಇದ್ದ ದೇಶಗಳಿಗೆ ಹೋಲಿಸಿದರೆ ಭಾರತದ ಸ್ಥಾನ ತುಲನಾತ್ಮಕವಾಗಿ ಸ್ಥಿರವಾಗಿತ್ತು. ಅಕಾಲಿಕ ಮರಣ ದುಃಖದ ಸಂಗತಿ ಎನ್ನುವುದರಲ್ಲಿ ಸಂಶಯವಿಲ್ಲ,  ಆದರೆ ಭಾರತ ಕೊರೊನಾದಿಂದ ಮಿಲಿಯಾಂತರ ಜೀವಗಳನ್ನು ಕಾಪಾಡಿತು.ಇದರ ದೊಡ್ಡ ಕೀರ್ತಿ ಪರಿಶ್ರಮಿ ವೈದ್ಯರಿಗೆ, ಆರೋಗ್ಯ ಸೇವೆಯ ಕಾರ್ಯಕರ್ತರಿಗೆ ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಸಲ್ಲಬೇಕು.

ಸ್ನೇಹಿತರೇ,

ಆರೋಗ್ಯ ರಕ್ಷಣಾ ಸೇವೆಗೆ ನಮ್ಮ ಸರಕಾರ ಗರಿಷ್ಠ ಒತ್ತನ್ನು ನೀಡಿದೆ. ಕಳೆದ ವರ್ಷ ಮೊದಲ ಅಲೆ ಬಂದಾಗ ನಾವು ಆರೋಗ್ಯ ರಕ್ಷಣಾ ವಲಯಕ್ಕೆ ಸುಮಾರು 15,000 ಕೋ.ರೂ.ಗಳನ್ನು ಒದಗಿಸಿದೆವು, ಇದರಿಂದ ನಮ್ಮ ಆರೋಗ್ಯ ಮೂಲಸೌಕರ್ಯವನ್ನು ಒಗ್ಗೂಡಿಸುವುದಕ್ಕೆ ಸಾಧ್ಯವಾಯಿತು. ಈ ವರ್ಷ ಆರೋಗ್ಯ ವಲಯಕ್ಕೆ ಮುಂಗಡ ಪತ್ರದಲ್ಲಿ ದುಪ್ಪಟ್ಟಿಗೂ ಅಧಿಕ ಹಣವನ್ನು ಅಂದರೆ ಎರಡು ಲಕ್ಷ ಕೋ.ರೂ.ಗಳಿಗೂ ಅಧಿಕ ಮೊತ್ತವನ್ನು ಮಂಜೂರು ಮಾಡಲಾಗಿದೆ. ಆರೋಗ್ಯ ಸೌಕರ್ಯಗಳು ಇಲ್ಲದಿರುವ ಸ್ಥಳಗಳಲ್ಲಿ, ಪ್ರದೇಶಗಳಲ್ಲಿ ಆರೋಗ್ಯ ಮೂಲಸೌಕರ್ಯವನ್ನು ಬಲಪಡಿಸಲು 50,000 ಕೋ.ರೂ.ಗಳ ಮುಂಗಡ ಖಾತ್ರಿ ಯೋಜನೆಯನ್ನು ನಾವು ರೂಪಿಸಿದ್ದೇವೆ. ಮಕ್ಕಳಿಗೆ ಅವಶ್ಯವಾದ ಆರೋಗ್ಯ ಮೂಲಸೌಕರ್ಯವನ್ನು ಬಲಪಡಿಸಲು 22,000 ಕೋ.ರೂ.ಗಳಿಗೂ ಅಧಿಕ ಮೊತ್ತವನ್ನು ವ್ಯಯಿಸಿದ್ದೇವೆ. ಇಂದು ದೇಶದಲ್ಲಿ ಹೊಸ ಎ.ಐ.ಐ.ಎಂ.ಎಸ್. ಮತ್ತು ವೈದ್ಯಕೀಯ ಕಾಲೇಜುಗಳನ್ನು ತ್ವರಿತವಾಗಿ ಸ್ಥಾಪಿಸಲಾಗುತ್ತಿದೆ ಹಾಗು ಆಧುನಿಕ ಆರೋಗ್ಯ ಮೂಲಸೌಕರ್ಯವನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ದೇಶದಲ್ಲಿ 2014 ರವರೆಗೆ ಬರೇ 6 ಎ.ಐ.ಐ.ಎಂ.ಎಸ್. ಗಳಿದ್ದವು. ಈ ಏಳು ವರ್ಷಗಳ ಅವಧಿಯಲ್ಲಿ 15 ಹೊಸ ಎ.ಐ.ಐ.ಎಂ.ಎಸ್. ಗಳ ಕಾರ್ಯವನ್ನು ಆರಂಭಿಸಲಾಗಿದೆ. ವೈದ್ಯಕೀಯ ಕಾಲೇಜುಗಳ ಸಂಖ್ಯೆಯನ್ನು ಕೂಡಾ ಒಂದೂವರೆ ಪಟ್ಟು ಹೆಚ್ಚಿಸಲಾಗಿದೆ. ಇದರ ಪರಿಣಾಮವಾಗಿ ಇಷ್ಟು ಅತ್ಯಲ್ಪ ಅವಧಿಯಲ್ಲಿ,  ಪದವಿ ಮಟ್ಟದಲ್ಲಿ ಒಂದೂವರೆ ಪಟ್ಟಿಗೂ ಅಧಿಕ ಸೀಟುಗಳ ಸಂಖ್ಯೆ ಹೆಚ್ಚಾಗಿದೆ. ಮತ್ತು 80 ಪ್ರತಿಶತದಷ್ಟು ಸ್ನಾತಕೋತ್ತರ ಸೀಟುಗಳ ಸಂಖ್ಯೆ ಹೆಚ್ಚಿದೆ. ಈ ಸ್ಥಿತಿಗೆ ಬರಲು ನಮ್ಮ ಯುವಜನತೆ ಮತ್ತು ಮಕ್ಕಳು ನೀವು ಅನುಭವಿಸಿದಂತಹ ಕಷ್ಟಗಳನ್ನು ಅನುಭವಿಸಬೇಕಾಗಿಲ್ಲ. ತೀರಾ ದೂರ ಪ್ರದೇಶದ ಯುವಜನತೆ ಕೂಡಾ ವೈದ್ಯರಾಗುವ ಅವಕಾಶವನ್ನು ಪಡೆಯುತ್ತಿದ್ದಾರೆ. ಅವರ ಪ್ರತಿಭೆ ಮತ್ತು ಕನಸುಗಳು ಗಗನಗಾಮಿಯಾಗಲಿವೆ. ವೈದ್ಯಕೀಯ ವಲಯದಲ್ಲಿ ಈ ಬದಲಾವಣೆಗಳು ನಡೆಯುತ್ತಿರಬೇಕಾದರೆ ಇದರ ನಡುವೆ ಸರಕಾರವು ವೈದ್ಯರ ಸುರಕ್ಷೆಗೂ ಬದ್ಧವಾಗಿದೆ. ಕಳೆದ ವರ್ಷವೇ ನಮ್ಮ ಸರಕಾರ ವೈದ್ಯರ ಮೇಲೆ ದಾಳಿ ಮತ್ತು ಹಿಂಸಾಚಾರವನ್ನು ತಡೆಯಲು ಕಾನೂನಿನಲ್ಲಿ ಕಠಿಣ ಪ್ರಸ್ತಾವಗಳನ್ನು ಮಾಡಿ ಜಾರಿಗೆ ತಂದಿದೆ. ಇದರ ಜೊತೆಗೆ ನಮ್ಮ ಕೋವಿಡ್ ವಾರಿಯರ್ ಗಳಿಗೆ ಉಚಿತ ವಿಮಾ ವ್ಯಾಪ್ತಿ ಯೋಜನೆಯನ್ನು ನಾವು ಅನುಷ್ಠಾನಗೊಳಿಸಿದ್ದೇವೆ.

ಸ್ನೇಹಿತರೇ,

ಕೊರೊನಾ ವಿರುದ್ಧ ದೇಶ ಸಾರಿರುವ ಹೋರಾಟ ಇರಲಿ, ವೈದ್ಯಕೀಯ ವ್ಯವಸ್ಥೆಯ ಸುಧಾರಣೆಯ ಗುರಿ ಇರಲಿ, ನೀವೆಲ್ಲರೂ ಬಹಳ ಪ್ರಮುಖವಾದ ಪಾತ್ರವನ್ನು ವಹಿಸಬೇಕಾಗಿದೆ. ಉದಾಹರಣೆಗೆ ಮೊದಲ ಹಂತದಲ್ಲಿ ನೀವೆಲ್ಲರೂ ಲಸಿಕಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಾಗ ಲಸಿಕೆಯ ಬಗ್ಗೆ ಉತ್ಸಾಹ ಮತ್ತು ವಿಶ್ವಾಸ ದೇಶದಲ್ಲಿ ಹಲವು ಪಟ್ಟು ವೃದ್ಧಿಯಾಯಿತು. ಅದೇ ರೀತಿ ನೀವು ಜನತೆಗೆ ಕೋವಿಡ್ ಸಮುಚಿತ ವರ್ತನೆಯನ್ನು ಅನುಸರಿಸುವಂತೆ ಹೇಳಿದಾಗ ಜನರು ಅದನ್ನು ಕಟ್ಟು ನಿಟ್ಟಾಗಿ ಅನುಸರಿಸಿದರು. ಈ ಪಾತ್ರವನ್ನು ತಾವು ಹೆಚ್ಚು ಸಕ್ರಿಯವಾಗಿ ನಡೆಸಬೇಕು ಮತ್ತು ನಿಮ್ಮ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಬೇಕು ಎಂದು ನಾನು ಆಶಿಸುತ್ತೇನೆ.

ಸ್ನೇಹಿತರೇ,

ಇನ್ನೊಂದು ಉತ್ತಮ ಸಂಗತಿ ಈ ದಿನಗಳಲ್ಲಿ ಕಂಡು ಬಂದದ್ದೆಂದರೆ, ವೈದ್ಯಕೀಯ ಸಮುದಾಯದ ಜನರು ಯೋಗದ ಬಗ್ಗೆ ಜಾಗೃತಿ ಮೂಡಿಸಲು ಬಹಳ ಯತ್ನಿಸಿದ್ದಾರೆ. ಸ್ವಾತಂತ್ರ್ಯಾನಂತರ ಯೋಗವನ್ನು ಪ್ರಚುರಪಡಿಸಲು ಮಾಡಬೇಕಾದ ಕಾರ್ಯವನ್ನು ಈಗ ಮಾಡಲಾಗುತ್ತಿದೆ.ಈಗಿನ ಕೊರೊನಾ ಕಾಲದಲ್ಲಿ ಜನರ ಆರೋಗ್ಯದ ಮೇಲೆ ಯೋಗ, ಪ್ರಾಣಾಯಾಮವು ಹೇಗೆ ಧನಾತ್ಮಕ ಪರಿಣಾಮ ಬೀರುತ್ತಿದೆ ಮತ್ತು ಕೋವಿಡೋತ್ತರ ಸಂಕೀರ್ಣ ಸಮಸ್ಯೆಗಳನ್ನು ಎದುರಿಸಲು ಯೋಗ ಹೇಗೆ ಸಹಾಯ ಮಾಡುತ್ತಿದೆ ಎಂಬುದನ್ನು ಆಧುನಿಕ ವೈದ್ಯ ವಿಜ್ಞಾನಕ್ಕೆ ಸಂಬಂಧಪಟ್ಟ ಹಲವು ಸಂಸ್ಥೆಗಳು ಸಾಕ್ಷಾಧಾರ ಆಧಾರಿತ ಅಧ್ಯಯನಗಳನ್ನು ನಡೆಸುತ್ತಿವೆ. ನಿಮ್ಮಲ್ಲಿ ಅನೇಕರು ಈ ವಿಷಯದ ಬಗ್ಗೆ ಬಹಳಷ್ಟು ಸಮಯವನ್ನು ವಿನಿಯೋಗಿಸುತ್ತಿದ್ದಾರೆ.

ಸ್ನೇಹಿತರೇ,

ನಿಮಗೆ ವೈದ್ಯಕೀಯ ವಿಜ್ಞಾನ ತಿಳಿದಿದೆ, ನೀವು ಅದರಲ್ಲಿ ತಜ್ಞರು, ನೀವು ಅದರಲ್ಲಿ ವಿಶೇಷ ಪರಿಣತಿಯನ್ನು ಪಡೆದಿದ್ದೀರಿ. ಮತ್ತು ಭಾರತೀಯರಿಗೆ ಯೋಗವನ್ನು ಅರ್ಥ ಮಾಡಿಕೊಳ್ಳುವುದು ಸಹಜ ಸುಲಭ. ನೀವು ಯೋಗದ ಬಗ್ಗೆ ಅಧ್ಯಯನಗಳನ್ನು ಕೈಗೊಳ್ಳುವಾಗ ಇಡೀ ವಿಶ್ವ ಅದನ್ನು ಗಂಭೀರವಾಗಿ ಪರಿಗಣಿಸುತ್ತದೆ. ಐ.ಎಂ.ಎ.ಯು ಅದನ್ನು ಆಂದೋಲನ ಮಾದರಿಯಲ್ಲಿ ಮುಂದೆ ಕೊಂಡೊಯ್ಯಬಲ್ಲುದೇ?, ಅದು ವೈಜ್ಞಾನಿಕ ಮಾದರಿಯಲ್ಲಿ ಸಾಕ್ಷ್ಯಾಧಾರಿತ ಅಧ್ಯಯನವನ್ನು ಮುಂದಕ್ಕೆ ಕೊಂಡೊಯ್ಯಲು ಸಾಧ್ಯವೇ? ಯೋಗದ ಕುರಿತ ಆ ಅಧ್ಯಯನಗಳನ್ನು ಅಂತಾರಾಷ್ಟ್ರೀಯ ಜರ್ನಲ್ ಗಳಲ್ಲಿ ಪ್ರಕಟಿಸಿ, ಪ್ರಚುರಪಡಿಸುವ  ನಿಟ್ಟಿನಲ್ಲಿ ಪ್ರಯತ್ನಗಳನ್ನು ಕೂಡಾ ಮಾಡಬಹುದು. ಈ ಅಧ್ಯಯನಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ವೈದ್ಯರು ತಮ್ಮ ರೋಗಿಗಳಲ್ಲಿ  ಯೋಗದ ಬಗ್ಗೆ ಹೆಚ್ಚು ಅರಿವು ಮೂಡಿಸಲು ಉತ್ತೇಜಿಸುತ್ತವೆ ಎಂಬ ಬಗ್ಗೆ ನನಗೆ ಖಚಿತವಿದೆ.

ಸ್ನೇಹಿತರೇ,

ನಿಮ್ಮ ಕಠಿಣ ಪರಿಶ್ರಮ, ಪ್ರತಿಭೆ ಮತ್ತು ಕೌಶಲ್ಯವನ್ನು ಯಾರೂ ಸರಿಗಟ್ಟಲಾರರು. ನಿಮ್ಮ ಅನುಭವವನ್ನು ನೀವು ದಾಖಲಿಸಿಡಬೇಕು ಎಂದು ನಾನು ಆಶಿಸುತ್ತೇನೆ. ರೋಗಿಗಳ ಜೊತೆ ನಿಮ್ಮ ಅನುಭವವನ್ನು ದಾಖಲಿಸುವುದು ಬಹಳ ಮುಖ್ಯ. ಇದರ ಜೊತೆಗೆ, ರೋಗಿಯ ರೋಗಲಕ್ಷಣಗಳು, ಚಿಕಿತ್ಸಾ ಯೋಜನೆ, ಮತ್ತು ಪ್ರತಿಕ್ರಿಯೆಯನ್ನೂ ವಿವರವಾಗಿ ದಾಖಲಿಸಿಡಬೇಕು.ಅದು ಸಂಶೋಧನಾ ಅಧ್ಯಯನ ರೂಪದಲ್ಲಿರಬಹುದು, ಅದು ವಿವಿಧ ರೀತಿಯ ಔಷಧಿಗಳು ಮತ್ತು ಚಿಕಿತ್ಸಾ ಕ್ರಮವನ್ನು ಒಳಗೊಂಡಿರಬಹುದು. ನೀವು ಈಗಾಗಲೇ ಸೇವೆ ಮಾಡುತ್ತಿರುವ,  ಆರೈಕೆ ಮಾಡುತ್ತಿರುವ ರೋಗಿಗಳ ಸಂಖ್ಯೆಯಿಂದಾಗಿ  ನೀವು ಈಗಾಗಲೇ ಜಗತ್ತಿನ ಮುಂಚೂಣಿಯಲ್ಲಿದ್ದೀರಿ. ನಿಮ್ಮ ಕೆಲಸ ಮತ್ತು ವೈಜ್ಞಾನಿಕ ಅಧ್ಯಯನಗಳನ್ನು ಜಗತ್ತು ಪರಿಗಣಿಸುವುದನ್ನು ಖಾತ್ರಿ ಮಾಡಬೇಕಾದ ಕಾಲಘಟ್ಟವಿದು. ಮತ್ತು ಭವಿಷ್ಯದ ಜನಾಂಗಕ್ಕೆ ಕೂಡಾ ಇದರ ಪ್ರಯೋಜನಗಳು ಲಭ್ಯವಾಗಬೇಕು. ಇದು ವೈದ್ಯಕೀಯಕ್ಕೆ ಸಂಬಂಧಿಸಿದ ಬಹಳ ಸಂಕೀರ್ಣ ಪ್ರಶ್ನೆಗಳಿಗೆ ಉತ್ತರ ಕಂಡು ಹಿಡಿಯಲು ಜಗತ್ತಿಗೆ ಸಹಾಯ ಮಾಡುತ್ತದೆ. ಮತ್ತು ಪರಿಹಾರಗಳನ್ನು ಹುಡುಕಲು ದಿಕ್ಕುಗಳನ್ನು ತೋರಿಸುತ್ತದೆ. ಇದರ ಆರಂಭಕ್ಕೆ ಈ ಕೋವಿಡ್ ಜಾಗತಿಕ ಸಾಂಕ್ರಾಮಿಕ ಒಂದು ಉತ್ತಮ ಆರಂಭಿಕ ಬಿಂದು ಆಗಬಲ್ಲದು. ಲಸಿಕೆಗಳು ನಮಗೆ ಹೇಗೆ ಸಹಾಯ ಮಾಡುತ್ತಿವೆ, ಸಾಕಷ್ಟು ಮುಂಚಿತವಾಗಿ ರೋಗ ಪತ್ತೆಯಿಂದ ನಮಗೆ ಹೇಗೆ ಪ್ರಯೋಜನಗಳು ಲಭಿಸುತ್ತಿವೆ, ಮತ್ತು ಹೇಗೆ ನಿರ್ದಿಷ್ಟ ಚಿಕಿತ್ಸಾಕ್ರಮವು ನಮಗೆ ಸಹಾಯ ಮಾಡುತ್ತಿದೆ ಎಂಬುದರ ಬಗ್ಗೆ ನಾವು ಹೆಚ್ಚು ಅಧ್ಯಯನಗಳನ್ನು ನಡೆಸಬಹುದೇ?. ಕಳೆದ ಶತಮಾನದಲ್ಲಿ ಕಂಡು ಬಂದ ಜಾಗತಿಕ ಸಾಂಕ್ರಾಮಿಕ್ದ ಬಗ್ಗೆ ಹೆಚ್ಚು ದಾಖಲಾತಿಗಳು ಲಭ್ಯ ಇಲ್ಲ. ಇಂದು ನಮ್ಮಲ್ಲಿ ತಂತ್ರಜ್ಞಾನವಿದೆ ಮತ್ತು ನಾವು ಕೋವಿಡ್ ನ್ನು ನಿಭಾಯಿಸಿದ ಬಗೆಯನ್ನು ಪ್ರಾಯೋಗಿಕ ಅನುಭವಗಳೊಂದಿಗೆ ದಾಖಲಿಸಿಟ್ಟರೆ, ಅದು ಭವಿಷ್ಯದಲ್ಲಿ ಇಡೀ ಮಾನವ ಕುಲಕ್ಕೆ ಬಹಳ ಸಹಕಾರಿಯಾಗುತ್ತದೆ. ದೇಶದಲ್ಲಿ ವೈದ್ಯಕೀಯ ಸಂಶೋಧನೆಗೆ ನಿಮ್ಮ ಅನುಭವ ಇನ್ನಷ್ಟು ವೇಗ, ಶಕ್ತಿಯನ್ನು ಕೊಡುತ್ತ್ತದೆ. ಕೊನೆಯಲ್ಲಿ ನಾನು ನಿಮ್ಮ ಸೇವೆ ಮತ್ತು ಪ್ರಯತ್ನಗಳು ಖಂಡಿತವಾಗಿಯೂ ನಮ್ಮ ನಿರ್ಧಾರವಾದ ‘सर्वे भवन्तु सुखिनः’ಎಂಬುದನ್ನು (ಎಲ್ಲರೂ ಸುಖವಾಗಿರಲಿ ಮತ್ತು ಸಂತೋಷದಿಂದಿರಲಿ) ವಾಸ್ತವಾಗಿಸಲಿವೆ ಎಂದು ಹೇಳುತ್ತೇನೆ. ನಮ್ಮ ದೇಶವು ಕೊರೊನಾವನ್ನು ಗೆಲ್ಲುತ್ತದೆ ಮತ್ತು ನಾವು ಅಭಿವೃದ್ಧಿಯ ಹೊಸ ಆಯಾಮವನ್ನು ಸಾಧಿಸುತ್ತೇವೆ. ಈ ಶುಭ ಹಾರೈಕೆಗಳೊಂದಿಗೆ ನಿಮಗೆ ಬಹಳ ಬಹಳ ಧನ್ಯವಾದಗಳು !.

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Indian economy ends 2024 with strong growth as PMI hits 60.7 in December

Media Coverage

Indian economy ends 2024 with strong growth as PMI hits 60.7 in December
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 17 ಡಿಸೆಂಬರ್ 2024
December 17, 2024

Unstoppable Progress: India Continues to Grow Across Diverse Sectors with the Modi Government