ಸ್ವಾತಂತ್ರ್ಯೋತ್ಸವದ 75ನೇ ವರ್ಷದಲ್ಲಿ ಸೇವೆ ಪ್ರವೇಶಿಸುತ್ತಿರುವ ನೀವು ಅದೃಷ್ಟವಂತರು, ಮುಂದಿನ 25 ವರ್ಷ ನಿಮಗೆ ಮತ್ತು ಭಾರತ ಎರಡಕ್ಕೂ ನಿರ್ಣಾಯಕ: ಪ್ರಧಾನಮಂತ್ರಿ
ಅವರು ‘ಸ್ವರಾಜ್ಯ’ಕ್ಕಾಗಿ ಹೋರಾಡಿದ್ದರು, ನೀವು ‘ಸುರಾಜ್ಯ”ಕ್ಕಾಗಿ ಮುನ್ನಡೆಯಿರಿ: ಪ್ರಧಾನಮಂತ್ರಿ
ತಾಂತ್ರಿಕ ಅಡಚಣೆಗಳ ಈ ಸಂದರ್ಭದಲ್ಲಿ ಪೊಲೀಸರನ್ನು ಸನ್ನದ್ಧವಾಗಿರಿಸುವುದು ಸವಾಲಿನ ಕೆಲಸ: ಪ್ರಧಾನಮಂತ್ರಿ
ನೀವು ‘ಏಕ ಭಾರತ್ – ಶ್ರೇಷ್ಠ ಭಾರತ್’ ನ ಧ್ವಜ ಹಿಡಿದಿರುವವರು ಸದಾ ‘ರಾಷ್ಟ್ರ ಮೊದಲು, ಸದಾ ರಾಷ್ಟ್ರವೇ ಮೊದಲು” ಎಂಬ ಮಂತ್ರ ಪಾಲನೆ ಮಾಡಿ: ಪ್ರಧಾನಮಂತ್ರಿ
ಸದಾ ಸ್ನೇಹಪರರಾಗಿರಿ ಮತ್ತು ಸಮವಸ್ತ್ರದ ಘನತೆಯನ್ನು ಎತ್ತಿಹಿಡಿಯಿರಿ: ಪ್ರಧಾನಮಂತ್ರಿ
ನಾನು ಹೊಸ ತಲೆಮಾರಿನ ಪ್ರತಿಭಾನ್ವಿತ ಮಹಿಳಾ ಅಧಿಕಾರಿಗಳನ್ನು ನೋಡುತ್ತಿದ್ದೇನೆ, ನಾವು ಪೊಲೀಸ್ ಪಡೆಯಲ್ಲಿ ಮಹಿಳೆಯರ ಸೇರ್ಪಡೆ ಹೆಚ್ಚಿಸಲು ಶ್ರಮಿಸಿದ್ದೇವೆ: ಪ್ರಧಾನಮಂತ್ರಿ
ಸಾಂಕ್ರಾಮಿಕದ ಸಮಯದಲ್ಲಿ ಸೇವೆಯಲ್ಲಿದ್ದಾಗ ಸಾವನ್ನಪ್ಪಿದ ಪೊಲೀಸ್ ಅಧಿಕಾರಿಗಳ ಕುಟುಂಬದವರಿಗೆ ಗೌರವ ನಮನ
ತರಬೇತಿ ಪಡೆಯುತ್ತಿರುವ ನೆರೆಹೊರೆಯ ದೇಶಗಳ ಅಧಿಕಾರಿಗಳು ನಮ್ಮ ನಿಕಟ ಮತ್ತು ಇತರೆ ಆಳವಾದ ಸಂಬಂಧವನ್ನು ಬಲವಾಗಿ ಪ್ರತಿಪಾದಿಸುತ್ತಾರೆ: ಪ್ರಧಾನಮಂತ್ರಿ

ನಿಮ್ಮೆಲ್ಲರೊಂದಿಗೆ ಮಾತನಾಡುವುದು ನನಗೆ ಆನಂದದ ಸಂಗತಿ. ಪ್ರತೀ ವರ್ಷ ನಿಮ್ಮಂತಹ ಯುವ ಮಿತ್ರರ ಜೊತೆ ಸಂವಾದ ನಡೆಸಬೇಕು ಎನ್ನುವುದು ನನ್ನ ಆಶಯ. ಇದರಿಂದ ನಿಮ್ಮ ಚಿಂತನೆಗಳನ್ನು ತಿಳಿದುಕೊಳ್ಳಲು ಸಹಾಯವಾಗುತ್ತದೆ. ನಿಮ್ಮ ಮಾತುಗಳು, ಪ್ರಶ್ನೆಗಳು, ಮತ್ತು ವಿಚಾರ ಮಾಡುವ ಗುಣ ಭವಿಷ್ಯದ ಸವಾಲುಗಳನ್ನು ನಿಭಾಯಿಸಲು ನನಗೂ ಸಹಾಯ ಮಾಡುತ್ತದೆ.

ಸ್ನೇಹಿತರೇ,

ಭಾರತವು ಸ್ವಾತಂತ್ರ್ಯದ 75 ನೇ ವರ್ಷಾಚರಣೆಯ ಅಮೃತ ಮಹೋತ್ಸವ ಆಚರಿಸುವ ಹೊತ್ತಿನಲ್ಲಿ ಈ ಸಂವಾದ ನಡೆಯುತ್ತಿದೆ. ಈ ವರ್ಷದ ಆಗಸ್ಟ್ 15 ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವವನ್ನು ತನ್ನೊಂದಿಗೆ ತರುತ್ತಿದೆ. ಕಳೆದ 75 ವರ್ಷಗಳಲ್ಲಿ ಭಾರತವು ಉತ್ತಮ ಪೊಲೀಸ್ ವ್ಯವಸ್ಥೆಯನ್ನು ನಿರ್ಮಾಣ ಮಾಡಲು ಪ್ರಯತ್ನಿಸಿದೆ. ಪೊಲೀಸ್ ತರಬೇತಿಗೆ ಸಂಬಂಧಿಸಿದ ಮೂಲ ಸೌಕರ್ಯ ಕೂಡಾ ಬಹಳಷ್ಟು ಸುಧಾರಣೆಯಾಗಿದೆ. ಇಂದು ನಾನು ನಿಮ್ಮೊಂದಿಗೆ ಮಾತನಾಡುತ್ತಿರುವಾಗ ಮುಂದಿನ 25 ವರ್ಷ ಕಾಲ ಭಾರತದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಖಾತ್ರಿಪಡಿಸುವಲ್ಲಿ ಭಾಗಿಯಾಗುವ ಯುವ ಸಮೂಹವನ್ನು ಕಾಣುತ್ತಿದ್ದೇನೆ. ಇದು ಬಹಳ ದೊಡ್ಡ ಜವಾಬ್ದಾರಿ. ಆದುದರಿಂದ, ನಾವು ಹೊಸ ಆರಂಭ ಮತ್ತು ಹೊಸ ನಿರ್ಧಾರಗಳೊಂದಿಗೆ ಮುನ್ನಡೆಯಬೇಕು.

ಸ್ನೇಹಿತರೇ,

ನಿಮ್ಮಲ್ಲಿ ದಾಂಡಿಗೆ ಎಷ್ಟು ಮಂದಿ ಹೋಗಿರುವಿರೋ ಎಂಬುದು ನನಗೆ ಗೊತ್ತಿಲ್ಲ. ಸಾಬರಮತಿ ಆಶ್ರಮಕ್ಕೆ ಎಷ್ಟು ಮಂದಿ ಹೋಗಿರುವಿರೋ ಎಂಬುದೂ  ನನಗೆ ತಿಳಿದಿಲ್ಲ. ಆದರೆ 1930ರ ದಂಡಿ ಯಾತ್ರೆಯನ್ನು ನಾನು ನಿಮಗೆ ನೆನಪು ಮಾಡಲು ಇಚ್ಛಿಸುತ್ತೇನೆ. ಗಾಂಧೀಜಿ ಅವರು ಬ್ರಿಟಿಶ್ ಆಡಳಿತದ ನೆಲೆಗಟ್ಟನ್ನು ಉಪ್ಪಿನ ಸತ್ಯಾಗ್ರಹದ ಮೂಲಕ ಅಲುಗಾಡಿಸುವ ಬಗ್ಗೆ ಮಾತನಾಡಿದ್ದರು. ಅವರು ’ಉದ್ದೇಶಗಳು, ಸಾಧನಗಳು ಸರಿ ಇದ್ದಾಗ, ದೇವರು ಕೂಡಾ ನಮ್ಮೊಂದಿಗೆ ನಿಲ್ಲುತ್ತಾರೆ” ಎಂದೂ ಅವರು ಹೇಳಿದ್ದರು.

 

 

ಸ್ನೇಹಿತರೇ,

ಮಹಾತ್ಮಾ ಗಾಂಧಿ ಅವರು ಸಣ್ಣ ಗುಂಪಿನೊಂದಿಗೆ  ಸಾಬರಮತಿ ಆಶ್ರಮದಿಂದ ಹೋಗಿದ್ದರು. ದಿನಗಳು ಕಳೆಯುತ್ತಿದ್ದಂತೆ ಜನರು ಎಲ್ಲೆಲ್ಲಿಂದಲೋ ಬಂದು ಉಪ್ಪಿನ ಸತ್ಯಾಗ್ರಹಕ್ಕೆ ಸೇರಿಕೊಳ್ಳಲು ಆರಂಭ ಮಾಡಿದರು. 24 ದಿನಗಳ ನಂತರ ದಾಂಡಿಯಲ್ಲಿ ಗಾಂಧೀಜಿ ಅವರ ತಮ್ಮ ಪ್ರಯಾಣವನ್ನು ಪೂರ್ಣಗೊಳಿಸಿದಾಗ ಇಡೀ ದೇಶವೇ ಒಗ್ಗೂಡಿ ಎದ್ದು ನಿಂತಿತ್ತು. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಮತ್ತು ಅಟ್ಟೋಕ್ ನಿಂದ ಕಟಕ್ ವರೆಗೆ ಇಡೀ ಭಾರತ ಒಂದಾಗಿತ್ತು. ಆ ಭಾವನಾತ್ಮಕತೆ ಮತ್ತು ಇಚ್ಛಾಶಕ್ತಿಯನ್ನು ಕಲ್ಪಿಸಿಕೊಳ್ಳಿ. ಈ ಸಂಭ್ರಮ ಮತ್ತು ಒಗ್ಗೂಡುವಿಕೆಯ ಬೆಂಬಲ ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಸಾಮೂಹಿಕ ಶಕ್ತಿಯನ್ನು ಉದ್ದೀಪಿಸಿತು. ದೇಶವೀಗ ಅಂತಹದೇ ಸ್ಫೂರ್ತಿಯಲ್ಲಿ ಬದಲಾವಣೆ, ಪರಿವರ್ತನೆಯನ್ನು ಮತ್ತು ಯುವಜನತೆಯಿಂದ ಅಂತಹ ಇಚ್ಛಾಶಕ್ತಿಯನ್ನು ಅಪೇಕ್ಷೆ ಮಾಡುತ್ತಿದೆ. ದೇಶದಲ್ಲಿ 1930 ಮತ್ತು 1947 ರ ನಡುವೆ ಎದ್ದ ಬೃಹತ್ ತೆರೆ, ದೇಶದ ಯುವಜನರು ಮುಂದೆ ಬಂದ ರೀತಿ ಮತ್ತು ಒಂದು ಗುರಿ ಸಾಧನೆಗಾಗಿ ಇಡೀ ಯುವ ತಲೆಮಾರು ಒಂದುಗೂಡಿದ ರೀತಿಯಲ್ಲೇ, ಇಂದು ಅದೇ ಸ್ಫೂರ್ತಿಯನ್ನು ನಿಮ್ಮಿಂದ ಕೂಡಾ ನಿರೀಕ್ಷೆ ಮಾಡಲಾಗುತ್ತಿದೆ. ನಾವೆಲ್ಲರೂ ಇದೇ ಸ್ಫೂರ್ತಿಯಲ್ಲಿ ಬದುಕಬೇಕಾಗಿದೆ ಮತ್ತು ನಿರ್ಧಾರಕ್ಕೆ ಅಂಟಿಕೊಳ್ಳಬೇಕಾಗಿದೆ. ಆ ಕಾಲದಲ್ಲಿ ದೇಶದ ಜನರು, ಅದರಲ್ಲೂ ವಿಶೇಷವಾಗಿ ಯುವಜನರು ಸ್ವರಾಜ್ಯಕ್ಕಾಗಿ ಹೋರಾಟ ಮಾಡಿದರು. ಇಂದು ನೀವೆಲ್ಲರೂ ಒಗ್ಗೂಡಿ ಪೂರ್ಣ ಮನಸ್ಸಿನಿಂದ ಸುರಾಜ್ಯಕ್ಕಾಗಿ ಕೆಲಸ ಮಾಡಬೇಕಾಗಿದೆ.  ಆ ಕಾಲದಲ್ಲಿ ಜನರು ದೇಶದ ಸ್ವಾತಂತ್ರ್ಯಕ್ಕಾಗಿ ಸಾಯಲೂ ಸಿದ್ಧರಿದ್ದರು. ಇಂದು ನೀವು ದೇಶಕ್ಕಾಗಿ ಬದುಕುವ ಸ್ಫೂರ್ತಿಯೊಂದಿಗೆ ಮುನ್ನಡೆಯಬೇಕಾಗಿದೆ. ನಮ್ಮ ಪೊಲೀಸ್  ಸೇವೆ ಹೇಗಿರಲಿದೆ, 25 ವರ್ಷಗಳ ಬಳಿಕ ಅದು ಎಷ್ಟು ಬಲಿಷ್ಠವಾಗಿರಲಿದೆ, ಭಾರತದ ಸ್ವಾತಂತ್ರ್ಯದ ನೂರು ವರ್ಷಗಳು ಪೂರ್ಣಗೊಳ್ಳುವಾಗ ಅದು ಹೇಗಿರುತ್ತದೆ ಎಂಬುದು ಇಂದು ನೀವು ಕೈಗೊಳ್ಳುವ  ಕ್ರಮಗಳನ್ನು ಅವಲಂಬಿಸಿರುತ್ತದೆ. 2047ರಲ್ಲಿ ಬಲಿಷ್ಠ,  ಭವ್ಯ ಮತ್ತು ಶಿಸ್ತಿನ ಭಾರತ ನಿರ್ಮಾಣ ಮಾಡುವ  ನಿಟ್ಟಿನಲ್ಲಿ ಸುಭದ್ರ ನೆಲೆಗಟ್ಟನ್ನು ನೀವು ಹಾಕಬೇಕಾಗಿದೆ. ಈ ನಿರ್ಧಾರವನ್ನು ಕಾರ್ಯರೂಪಕ್ಕೆ ತರಲು ಕಾಲವು ನಿಮ್ಮಂತಹ ಯುವಜನತೆಯನ್ನು ಆಯ್ಕೆ ಮಾಡಿದೆ. ಮತ್ತು ನಾನು ಇದು ನಿಮ್ಮೆಲ್ಲರ ಬಹಳ ದೊಡ್ಡ ಅವಕಾಶ ಎಂದು ಪರಿಗಣಿಸುತ್ತೇನೆ. ಭಾರತವು ಪ್ರತೀ ಕ್ಷೇತ್ರದಲ್ಲಿ ಮತ್ತು ಪ್ರತೀ ಹಂತದಲ್ಲಿಯೂ ಪರಿವರ್ತನೆಯ ಹಾದಿಯಲ್ಲಿ ಸಾಗುತ್ತಿರುವಾಗ ನಿಮ್ಮ ವೃತ್ತಿ ಜೀವನವನ್ನು ನೀವು ಆರಂಭ ಮಾಡುತ್ತಿರುವಿರಿ. ನಿಮ್ಮ ವೃತ್ತಿ ಜೀವನದ  ಮುಂದಿನ 25 ವರ್ಷಗಳ ಕಾಲವು ಭಾರತದ ಅಭಿವೃದ್ಧಿಯಲ್ಲಿ ಬಹು ಮುಖ್ಯ 25 ವರ್ಷಗಳ ಅವಧಿಯೂ ಆಗಿದೆ. ಆದುದರಿಂದ ನಿಮ್ಮ ತಯಾರಿ, ನಿಮ್ಮ ಮನಃಸ್ಥಿತಿ ಈ ಬೃಹತ್ ಗುರಿಯನ್ನು ಸಾಧಿಸಲು ಅನುಕೂಲವಾಗುವಂತಿರಬೇಕು. ಮುಂದಿನ 25 ವರ್ಷಗಳಲ್ಲಿ ನೀವು ದೇಶದ ವಿವಿಧ ಭಾಗಗಳಲ್ಲಿ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡುತ್ತೀರಿ. ಮತ್ತು ವಿವಿಧ ಪಾತ್ರಗಳನ್ನು ನಿಭಾಯಿಸುತ್ತೀರಿ. ನಿಮ್ಮ ಮೇಲೆ ಆಧುನಿಕ, ಸಮರ್ಪಕ ಮತ್ತು ಸೂಕ್ಷ್ಮತ್ವ ಇರುವ ಪೊಲೀಸ್ ಸೇವೆಯನ್ನು ನಿರ್ಮಾಣ ಮಾಡುವ ಬಹಳ ದೊಡ್ಡ ಜವಾಬ್ದಾರಿ ಇದೆ. ಆದುದರಿಂದ 25 ವರ್ಷಗಳ ವಿಶೇಷ ಕಾರ್ಯಕ್ರಮದಲ್ಲಿ ನೀವಿದ್ದೀರಿ ಮತ್ತು ಭಾರತವು ಅದಕ್ಕಾಗಿ ವಿಶೇಷವಾಗಿ ನಿಮ್ಮನ್ನು ಆಯ್ಕೆ ಮಾಡಿದೆ ಎಂಬುದನ್ನು ಸದಾ ನೆನಪಿನಲ್ಲಿಡಬೇಕು.

ಸ್ನೇಹಿತರೇ,

ರಾಷ್ಟ್ರವೊಂದು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತಿರುವಾಗ ಹೊರಗಿನಿಂದ ಮತ್ತು ದೇಶದೊಳಗಿನಿಂದಲೂ ಸವಾಲುಗಳು ಸಮಾನವಾಗಿ ಎದುರಾಗುತ್ತವೆ ಎಂಬುದನ್ನು ಸುತ್ತಲಿನ ಜಗತ್ತಿನ ಅನುಭವಗಳು ತೋರಿಸಿಕೊಟ್ಟಿವೆ. ಆದುದರಿಂದ ತಾಂತ್ರಿಕ ಅವ್ಯವಸ್ಥೆಗಳು ತಲೆದೋರುವ ಈ ಕಾಲಘಟ್ಟದಲ್ಲಿ ಪೊಲೀಸಿಂಗ್ ಗೆ ನಿರಂತರವಾಗಿ ಸಿದ್ಧತೆಗಳನ್ನು ಮಾಡುವುದು ನಿಮ್ಮೆದುರಿನ ಸವಾಲಾಗಿದೆ. ಹೊಸ ಮಾದರಿಯ ಅಪರಾಧಗಳನ್ನು  ಅದಕ್ಕಿಂತ ಹೊಸ ರೀತಿಯಲ್ಲಿ ತಡೆಗಟ್ಟುವುದು ನಿಮ್ಮೆದುರಿನ ಸವಾಲಾಗಿದೆ. ನೀವು ಹೊಸ ಪ್ರಯೋಗಗಳನ್ನು, ಸಂಶೋಧನೆಗಳನ್ನು ಮತ್ತು ವಿಧಾನಗಳನ್ನು ಅದರಲ್ಲೂ ಸೈಬರ್ ಭದ್ರತೆಗೆ ಸಂಬಂಧಿಸಿದ ವಿಧಾನಗಳನ್ನು ಅಭಿವೃದ್ಧಿ ಮಾಡಿ ಅವುಗಳನ್ನು ಅನ್ವಯಿಸಬೇಕಾಗಿದೆ.

 

ಸ್ನೇಹಿತರೇ,

ಸಂವಿಧಾನ ಮತ್ತು ದೇಶದ ಪ್ರಜಾಪ್ರಭುತ್ವ ಕೊಡಮಾಡಿದ ಹಕ್ಕುಗಳನ್ನು ಹೊಂದಿರುವ ದೇಶವಾಸಿಗಳ ಹಕ್ಕುಗಳನ್ನು ಖಾತ್ರಿಪಡಿಸಿಕೊಂಡು, ಅವರು ನಿರೀಕ್ಷೆ ಮಾಡಿದ ರೀತಿಯಲ್ಲಿ ಕರ್ತವ್ಯ ನಿರ್ವಹಿಸುವಲ್ಲಿ ನಿಮ್ಮ ಪಾತ್ರ  ಬಹಳ ಮುಖ್ಯ. ಆದುದರಿಂದ ನಿಮ್ಮಿಂದ ನಿರೀಕ್ಷೆಗಳು ಬಹಳವಿವೆ ಮತ್ತು ನಿಮ್ಮ ನಡತೆಯನ್ನು ಸದಾ ನಿಗಾ ಇಟ್ಟು ನೋಡಲಾಗುತ್ತದೆ. ಅಲ್ಲಿ ನಿಮ್ಮ ಮೇಲೆ ಬಹಳ ಒತ್ತಡ ಇರಬಹುದು. ನೀವು ಬರೇ ಪೊಲೀಸ್ ಠಾಣೆಗಳ ಭೌಗೋಳಿಕ ಮಿತಿಗಳೊಳಗೆ ಅಥವಾ ಪೊಲೀಸ್ ಕೇಂದ್ರ ಕಚೇರಿಯ ಮಿತಿಯೊಳಗೆ ಯೋಚಿಸಬೇಕಾಗಿಲ್ಲ. ನೀವು ಸಮಾಜದ ಪ್ರತಿಯೊಂದು ಭಾಗದ ಬಗ್ಗೆ ನಿಕಟವಾಗಿದ್ದುಕೊಂಡು, ಸ್ನೇಹಾಚಾರದಿಂದಿದ್ದು,  ಸಮವಸ್ತ್ರದ  ಘನತೆಯನ್ನು ಅತ್ಯುಚ್ಚ ಮಟ್ಟದಲ್ಲಿ ಸದಾ ಕಾಪಾಡಿಕೊಂಡು ಇರಬೇಕು.ನೀವು ಸದಾ ಮನಸ್ಸಿನಲ್ಲಿಡಬೇಕಾದ ಇನ್ನೊಂದು ಮುಖ್ಯ ವಿಷಯವಿದೆ. ನೀವು ದೇಶದ ವಿವಿಧ ಜಿಲ್ಲೆಗಳಲ್ಲಿ ಮತ್ತು ನಗರಗಳಲ್ಲಿ ಸೇವೆ ಸಲ್ಲಿಸಲಿದ್ದೀರಿ. ಆದುದರಿಂದ ನೀವು ಸದಾ ಕಾಲವೂ ಒಂದು ಮಂತ್ರವನ್ನು ಮನಸ್ಸಿನಲ್ಲಿಟ್ಟುಕೊಂಡಿರಬೇಕು. ಕ್ಷೇತ್ರದಲ್ಲಿ ನೀವು ಯಾವ ನಿರ್ಧಾರ ಕೈಗೊಳ್ಳುತ್ತೀರೋ ಅದು ದೇಶದ ಹಿತಾಸಕ್ತಿಯನ್ನು ಅನುಸರಿಸಿರಬೇಕು. ಅದರಲ್ಲಿ ರಾಷ್ಟ್ರೀಯ ಧೋರಣೆ ಇರಬೇಕು. ನಿಮ್ಮ ಕೆಲಸದ ವ್ಯಾಪ್ತಿ ಮತ್ತು ಸಮಸ್ಯೆಗಳು ಸ್ಥಳೀಯವಾದವುಗಳಾಗಿರಬಹುದು. ಅವುಗಳನ್ನು ನಿಭಾಯಿಸುವಾಗ ಈ ಮಂತ್ರ ಬಹಳ ಉಪಯುಕ್ತವಾಗಲಿದೆ. ನೀವು “ಏಕ ಭಾರತ್, ಶ್ರೇಷ್ಠ ಭಾರತ್” (ಒಂದು ಭಾರತ, ಸರ್ವೋಚ್ಚ ಭಾರತ) ಎಂಬ ನಿಲುವನ್ನು ಮುಚೂಣಿಯಲ್ಲಿ ನಿಂತು ಸಾರುವವರು ಎಂಬುದನ್ನು ಸದಾ ನೆನಪಿನಲ್ಲಿಡಬೇಕು. ಆದುದರಿಂದ ನಿಮ್ಮ ಪ್ರತಿಯೊಂದು ಕ್ರಿಯೆಯೂ ಮೊದಲಿಗೆ ರಾಷ್ಟ್ರೀಯತೆಯ ಸ್ಫೂರ್ತಿಯನ್ನು ಪ್ರತ್ನಿಧಿಸುತ್ತಿರಬೇಕು ಮತ್ತು ಅಲ್ಲಿ ರಾಷ್ಟ್ರವೇ ಮೊದಲ ಆದ್ಯತೆಯಾಗಿರಬೇಕು.

ಸ್ನೇಹಿತರೇ,

ನನ್ನೆದುರು ಖ್ಯಾತಿವಂತ ಮಹಿಳಾ ಅಧಿಕಾರಿಗಳ ಹೊಸ ತಲೆಮಾರು ಇದೆ. ಹಲವಾರು ವರ್ಷಗಳಿಂದ ಪೊಲೀಸ್ ಪಡೆಯಲ್ಲಿ ಮಹಿಳಾ ಸಹಭಾಗಿತ್ವವನ್ನು ಹೆಚ್ಚಿಸಲು ನಿರಂತರ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ನಮ್ಮ ಪುತ್ರಿಯರು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು, ದಕ್ಷತೆಯ ಜೊತೆ ತಕ್ಷಣದ ಮತ್ತು ಸೂಕ್ಷ್ಮತ್ವದ, ನಿರ್ಧಾರಗಳನ್ನು ಕೈಗೊಂಡು ಪೊಲೀಸ್ ಸೇವೆಯಲ್ಲಿ ಉತ್ತರದಾಯಿತ್ವವನ್ನು ಹೆಚ್ಚಿಸಬಲ್ಲರು. ಅದೇ ರೀತಿ ರಾಜ್ಯಗಳೂ ಒಂದು ಮಿಲಿಯನ್ ಗೂ ಅಧಿಕ ಜನಸಂಖ್ಯೆಯ ನಗರಗಳಲ್ಲಿ ನಮ್ಮ ಕಮಿಶನರ್ ವ್ಯವಸ್ಥೆಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ಕಾರ್ಯತತ್ಪರವಾಗಿವೆ. ಇದುವರೆಗೆ ಈ ವ್ಯವಸ್ಥೆಯನ್ನು 16 ಕ್ಕೂ ಅಧಿಕ ರಾಜ್ಯಗಳ ಹಲವಾರು ನಗರಗಳಲ್ಲಿ ಅನುಷ್ಠಾನ ಗೊಳಿಸಲಾಗಿದೆ. ಇತರ ಸ್ಥಳಗಳಲ್ಲಿಯೂ ಧನಾತ್ಮಕ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂಬ ಬಗ್ಗೆ ನನಗೆ ಖಚಿತ ವಿಶ್ವಾಸವಿದೆ.

ಸ್ನೇಹಿತರೇ,

ಪೊಲೀಸಿಂಗ್ ನ್ನು ಭವಿಷ್ಯವುಳ್ಳ ಮತ್ತು ದಕ್ಷತೆಯುಳ್ಳ ಕ್ಷೇತ್ರವನ್ನಾಗಿಸಲು, ಸಾಮೂಹಿಕ ರೀತಿಯಲ್ಲಿ ಮತ್ತು ಸೂಕ್ಷ್ಮತ್ವದೊಂದಿಗೆ ಕೆಲಸ ಮಾಡುವುದು ಬಹಳ ಮುಖ್ಯ. ಈ ಕೊರೊನಾ ಅವಧಿಯಲ್ಲಿಯೂ ಪೊಲೀಸ್ ಪಡೆಯಲ್ಲಿರುವ ನಮ್ಮ ಸಹೋದ್ಯೋಗಿಗಳು ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಹೇಗೆ ಬಹಳ ದೊಡ್ಡ ಪಾತ್ರವಹಿಸಿದರು ಎಂಬುದನ್ನು ನಾವು ನೋಡಿದ್ದೇವೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ಪೊಲೀಸರು ದೇಶವಾಸಿಗಳ ಜೊತೆ ಹೆಗಲೆಣೆಯಾಗಿ ಕೆಲಸ ಮಾಡಿದ್ದಾರೆ. ಹಲವು ಪೊಲೀಸರು ಈ ಯತ್ನದಲ್ಲಿ ಪ್ರಾಣ ತ್ಯಾಗ ಮಾಡಿದ್ದಾರೆ. ಆ  ಎಲ್ಲಾ ಜವಾನರಿಗೆ, ಪೊಲೀಸ್ ಕಾಮ್ರೆಡ್ ಗಳಿಗೆ ದೇಶದ ಪರವಾಗಿ ನನ್ನ ಗೌರವಗಳನ್ನು ಸಲ್ಲಿಸುತ್ತೇನೆ. ಅವರ ಕುಟುಂಬದವರಿಗೆ ಸಂತಾಪಗಳನ್ನು ವ್ಯಕ್ತಪಡಿಸುತ್ತೇನೆ.

 

ಸ್ನೇಹಿತರೇ

ನಾನು ಇನ್ನೊಂದು ಅಂಶವನ್ನು ನಿಮ್ಮೆದುರು ಇಡಬಯಸುತ್ತೇನೆ. ಈ ದಿನಗಳಲ್ಲಿ ನೈಸರ್ಗಿಕ ಪ್ರಕೋಪಗಳುಂಟಾದಾಗ, ನೆರೆ, ಚಂಡಮಾರುತಗಳು ಅಥವಾ ಭೂಕುಸಿತಗಳು ಉಂಟಾದಾಗ ನಮ್ಮ ಎನ್.ಡಿ.ಆರ್.ಎಫ್. ಕಾಮ್ರೆಡ್ ಗಳು ಅಲ್ಲಿ ಪೂರ್ಣ ಸಿದ್ಧತೆಯೊಂದಿಗೆ ಇರುತ್ತಾರೆ. ವಿಕೋಪದ ಸಂದರ್ಭದಲ್ಲಿ ಎನ್.ಡಿ.ಆರ್.ಎಫ್.ನ ಹೆಸರು ಜನರಲ್ಲಿ ವಿಶ್ವಾಸ ಮೂಡಿಸುತ್ತದೆ. ಎನ್.ಡಿ.ಆರ್.ಎಫ್. ತನ್ನ ಉತ್ಕೃಷ್ಟ ಕೆಲಸದ  ಮೂಲಕ ತನ್ನ ವಿಶ್ವಾಸಾರ್ಹತೆಯನ್ನು ಸಾಬೀತು ಮಾಡಿದೆ. ಇಂದು ನೈಸರ್ಗಿಕ ವಿಕೋಪ ಸಂದರ್ಭದಲ್ಲಿ ಎನ್.ಡಿ.ಆರ್.ಎಫ್. ಸಿಬ್ಬಂದಿ ತಮ್ಮ ಜೀವವನ್ನೂ ಅಪಾಯಕ್ಕೊಡ್ಡಿ ಜನರನ್ನು ರಕ್ಷಿಸುತ್ತಾರೆ ಎಂಬ ಭಾವನೆ ಜನತೆಯಲ್ಲಿ ಮೂಡಿದೆ. ಎನ್.ಡಿ.ಆರ್.ಎಫ್. ಕೂಡಾ ಹೆಚ್ಚಾಗಿ ಪೊಲೀಸ್ ಪಡೆಯ ಸಿಬ್ಬಂದಿಗಳನ್ನು ಹೊಂದಿದೆ, ಅವರು ಕೂಡಾ ನಿಮ್ಮೊಂದಿಗೆ ಇರುವವರು. ಆದರೆ ಪೊಲೀಸರ ವಿಷಯದಲ್ಲಿ ಸಮಾಜದಲ್ಲಿ ಈ ಭಾವನೆ ಮತ್ತು ಗೌರವ ಇದೆಯೇ? ಎನ್.ಡಿ.ಆರ್.ಎಫ್. ನಲ್ಲಿ ಪೊಲೀಸರಿದ್ದಾರೆ. ಎನ್.ಡಿ.ಆರ್.ಎಫ್.ಗೂ ಗೌರವವಿದೆ. ಎನ್.ಡಿ.ಆರ್.ಎಫ್. ನಲ್ಲಿ ಕಾರ್ಯ ನಿರ್ವಹಿಸುವ ಪೊಲೀಸ್ ಸಿಬ್ಬಂದಿಗಳಿಗೂ ಗೌರವ ಲಭಿಸುತ್ತಿದೆ. ಆದರೆ ಸಾಮಾಜಿಕ ವ್ಯವಸ್ಥೆ ಹಾಗಿದೆಯೇ? ಅದು ಯಾಕೆ ಹಾಗಿದೆ? ಇದಕೆ ಉತ್ತರ ನಿಮಗೆ ಗೊತ್ತಿದೆ. ಸಾರ್ವಜನಿಕ ಮನಸ್ಸಿನಲ್ಲಿ ಪೊಲೀಸರ ಕುರಿತಂತೆ ಇರುವ ಋಣಾತ್ಮಕ ಭಾವನೆ ದೊಡ್ಡ ಸವಾಲಾಗಿದೆ. ಕೊರೊನಾ ಆರಂಭದ ಅವಧಿಯಲ್ಲಿ ಈ ಭಾವನೆ ಸ್ವಲ್ಪ ಬದಲಾಗಿದೆ ಎಂದು ಭಾವಿಸಲಾಗುತ್ತಿತ್ತು, ಯಾಕೆಂದರೆ ಜನರು ಸಾಮಾಜಿಕ ಮಾಧ್ಯಮಗಳಲ್ಲಿ ಪೊಲೀಸರು ಬಡವರಿಗೆ ಸಹಾಯ ಮಾಡುವುದನ್ನು ನೋಡುತ್ತಿದ್ದರು. ಹಸಿವಿನಿಂದ ಬಳಲುತ್ತಿರುವವರಿಗೆ ಆಹಾರ ಒದಗಿಸುತ್ತಿದ್ದುದನ್ನು, ಆಹಾರ ತಯಾರಿಸಿ ಅದನ್ನು ಬಡವರಿಗೆ ಪೂರೈಸುತ್ತಿದ್ದುದನ್ನು ನೋಡುತ್ತಿದ್ದರು. ಆದುದರಿಂದ ಪೊಲೀಸರ ಬಗ್ಗೆ ಸಮಾಜದ ಭಾವನೆಯಲ್ಲಿ ಬದಲಾವಣೆ ಕಂಡು ಬರುತ್ತಿತ್ತು. ಆದರೆ ಈಗ ಮತ್ತೆ ಅದೇ ಹಳೆಯ ಪರಿಸ್ಥಿತಿ ಮರಳಿದೆ. ಇಷ್ಟೆಲ್ಲದರ ಬಳಿಕವೂ ಜನರ ನಂಬಿಕೆ ಯಾಕೆ ಸುಧಾರಿಸಲಿಲ್ಲ?, ವಿಶ್ವಾಸಾರ್ಹತೆ ಯಾಕೆ ಸುಧಾರಿಸಲಿಲ್ಲ?.

ಸ್ನೇಹಿತರೇ,

ನಮ್ಮ ಪೊಲೀಸ್ ಸಿಬ್ಬಂದಿಗಳು ದೇಶದ ಭದ್ರತೆಗಾಗಿ, ಕಾನೂನು ಸುವ್ಯವಸ್ಥೆ ಪರಿಪಾಲನೆಗಾಗಿ ಮತ್ತು ಭಯೋತ್ಪಾದನೆ ನಿರ್ಮೂಲನೆಗಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡುತ್ತಾರೆ. ನಿಮಗೆ ಬಹಳ ದಿನಗಳ ಕಾಲ ಮನೆಗೆ ಹೋಗಲು ಸಾಧ್ಯವಾಗದೇ ಇರಬಹುದು, ಹಬ್ಬಗಳ ಸಂದರ್ಭದಲ್ಲಿ ನಿಮ್ಮ ಕುಟುಂಬಗಳಿಂದ ದೂರ ಇರಬೇಕಾಗಬಹುದು. ಆದರೆ ಪೊಲೀಸರ ವಿಷಯದಲ್ಲಿ ಜನರ ಧೋರಣೆ ಬದಲಾಗುತ್ತಿರುತ್ತದೆ. ಈ ನಿಲುವನ್ನು ಬದಲು ಮಾಡುವುದು ಪೊಲೀಸ್ ಸೇವೆಗೆ ಸೇರುತ್ತಿರುವ ಹೊಸ ತಲೆಮಾರಿನ ಜವಾಬ್ದಾರಿಯಾಗಿದೆ ಮತ್ತು ಪೊಲೀಸರ ವಿಷಯದಲ್ಲಿರುವ ನಕಾರಾತ್ಮಕ ಅಭಿಪ್ರಾಯ ಕೊನೆಗೊಳ್ಳಬೇಕಿದೆ. ನೀವಿದನ್ನು ಮಾಡಬೇಕು. ನೀವು ತರಬೇತಿ ಪಡೆಯುತ್ತಿರುವಾಗ ಹಲವಾರು ವರ್ಷಗಳಿಂದ ಬಂದಿರುವ ಪೊಲೀಸ್ ಇಲಾಖೆಯ ಸ್ಥಾಪಿತ ಸಂಪ್ರದಾಯಗಳಿಗೆ ಮುಖಾಮುಖಿಯಾಗಿರುವಿರಿ. ವ್ಯವಸ್ಥೆ ನಿಮ್ಮನ್ನು ಬದಲಾಯಿಸುತ್ತದೋ ಅಥವಾ ನೀವು ವ್ಯವಸ್ಥೆಯನ್ನು ಬದಲಾಯಿಸುತ್ತೀರೋ ಎಂಬುದನ್ನು ನಿಮ್ಮ ತರಬೇತಿ, ಇಚ್ಛಾಶಕ್ತಿ, ಮತ್ತು ನಿಮ್ಮ ನೈತಿಕ ಶಕ್ತಿಯನ್ನು ಅವಲಂಬಿಸಿರುತ್ತದೆ. ನಿಮ್ಮ ಧ್ಯೇಯೋದ್ದೇಶಗಳೇನು?. ನೀವು ಯಾವ ಆದರ್ಶಗಳನ್ನು ಮೈಗೂಢಿಸಿಕೊಂಡಿರುವಿರಿ? ಆ ಆದರ್ಶಗಳನ್ನು ಈಡೇರಿಸಲು ಯಾವ ರೀತಿ ಮುಂದುವರಿಯಲು ನೀವು ನಿರ್ಧಾರ ಮಾಡಿದ್ದೀರಿ?. ಅದು ನಿಮ್ಮ ವರ್ತನೆಯನ್ನು ನಿರ್ದೇಶಿಸುತ್ತದೆ. ಅದೇ ರೀತಿ ಇದು ನಿಮಗೆ ಇನ್ನೊಂದು ಪರೀಕ್ಷೆ. ಮತ್ತು ಇದರಲ್ಲೂ ನೀವು ಯಶಸ್ವಿಯಾಗುತ್ತೀರಿ ಎಂಬ ಬಗ್ಗೆ ನನಗೆ ಖಾತ್ರಿ ಇದೆ.

ಸ್ನೇಹಿತರೇ

ನಮ್ಮ ನೆರೆಯ ದೇಶಗಳ ಇಲ್ಲಿರುವ ಯುವ ಅಧಿಕಾರಿಗಳಿಗೂ ನಾನು ನನ್ನ ಶುಭಾಶಯಗಳನ್ನು ಹೇಳುತ್ತೇನೆ. ಭೂತಾನದವರಿರಲಿ, ನೇಪಾಳ, ಮಾಲ್ದೀವ್ಸ್ ಅಥವಾ ಮಾರಿಷಸ್ ಇರಲಿ ನಾವು ನೆರೆ ಹೊರೆಯವರು ಮಾತ್ರವಲ್ಲ,  ನಾವು ಪರಸ್ಪರ ಚಿಂತನಾಕ್ರಮ ಮತ್ತು ಸಾಮಾಜಿಕ ಸಂರಚನೆಯಲ್ಲಿ ಸಮಾನವಾದ ಅಂಶಗಳನ್ನು ಹೊಂದಿದ್ದೇವೆ. ನಾವು ಸಂತೋಷ ಮತ್ತು ದುಃಖಗಳೆರಡರಲ್ಲೂ ಪರಸ್ಪರ ಸಹಭಾಗಿಗಳು. ಎಂದಾದರೂ ಪ್ರಾಕೃತಿಕ ವಿಕೋಪ ಅಥವಾ ಸಮಸ್ಯೆಗಳು ಉಂಟಾದಾಗ ನಾವು ಪರಸ್ಪರ ಸಹಾಯ ಮಾಡಲು ಮುಂಚೂಣಿಯಲ್ಲಿರುತ್ತೇವೆ. ಕೊರೊನಾ ಅವಧಿಯಲ್ಲಿ ಇದರ ಅನುಭವ ನಮಗಾಗಿದೆ. ಆದುದರಿಂದ ನಮ್ಮ ಸಹಭಾಗಿತ್ವ ಬರಲಿರುವ ವರ್ಷಗಳಲ್ಲಿ ಅಭಿವೃದ್ಧಿಗಾಗಿ ಇನ್ನಷ್ಟು ಬಲಗೊಳ್ಳಬೇಕಾಗಿದೆ. ಅಪರಾಧಗಳು ಮತ್ತು ಅಪರಾಧಿಗಳು ಗಡಿಯಾಚೆಯಿಂದಲೂ ಸಂಭವಿಸುತ್ತಿರುವಾಗ ಮತ್ತು ತಪ್ಪಿಸಿಕೊಳ್ಳುತ್ತಿರುವಾಗ ಇಂದಿನ ಸ್ಥಿತಿಯಲ್ಲಿ ಪರಸ್ಪರ ಸಮನ್ವಯ ಬಹಳ ಮುಖ್ಯ. ಸರ್ದಾರ್ ಪಟೇಲ್ ಅಕಾಡೆಮಿಯಲ್ಲಿ ನೀವು ಕಳೆದ ದಿನಗಳು ನಿಮ್ಮ ಮುಂದಿನ ಉದ್ಯೋಗ ಭವಿತವ್ಯವನ್ನು ಭದ್ರಗೊಳಿಸುವಲ್ಲಿ ಬಹಳ ನೆರವೀಯಬಲ್ಲವು  ಎಂಬುದು ನನಗೆ ಖಾತ್ರಿಯಾಗಿ ಗೊತ್ತಿದೆ. ನಿಮ್ಮ ರಾಷ್ಟ್ರೀಯ ಮತ್ತು ಸಾಮಾಜಿಕ ಬದ್ಧತೆಗೆ ಹಾಗು ಭಾರತದೊಂದಿಗಿನ ಮೈತ್ರಿಗೆ ಇದರಿಂದ ಸಹಾಯವಾಗಲಿದೆ. ನಾನು ಮತ್ತೊಮ್ಮೆ ನಿಮಗೆಲ್ಲರಿಗೂ ಶುಭವನ್ನು ಹಾರೈಸುತ್ತೇನೆ.

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
PM Modi hails diaspora in Kuwait, says India has potential to become skill capital of world

Media Coverage

PM Modi hails diaspora in Kuwait, says India has potential to become skill capital of world
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ಡಿಸೆಂಬರ್ 2024
December 21, 2024

Inclusive Progress: Bridging Development, Infrastructure, and Opportunity under the leadership of PM Modi