ಸಾಂಬಾ ಜಿಲ್ಲೆಯ ಪಲ್ಲಿ ಪಂಚಾಯತ್‌ನಿಂದ ದೇಶಾದ್ಯಂತದ ಎಲ್ಲಾ ಗ್ರಾಮ ಸಭೆಗಳನ್ನುದ್ದೇಶಿಸಿ ಪ್ರಧಾನಿ ಭಾಷಣ
20,000 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ
ಜಮ್ಮು ಮತ್ತು ಕಾಶ್ಮೀರದ ವಿವಿಧ ಪ್ರದೇಶಗಳ ಅಂತರವನ್ನು ಕಡಿಮೆ ಮಾಡುವ ಬನಿಹಾಲ್ ಖಾಜಿಗುಂಡ್ ರಸ್ತೆ ಸುರಂಗ ಉದ್ಘಾಟನೆ
ʻದೆಹಲಿ-ಅಮೃತಸರ-ಕತ್ರಾ ಎಕ್ಸ್‌ಪ್ರೆಸ್‌ವೇʼನ ಮೂರು ರಸ್ತೆ ಯೋಜನೆಗಳು ಹಾಗೂ ರಾಟ್ಲೆ ಮತ್ತು ಕ್ವಾರ್ ಜಲವಿದ್ಯುತ್ ಯೋಜನೆಗಳ ಶಂಕುಸ್ಥಾಪನೆ
ದೇಶದ ಪ್ರತಿ ಜಿಲ್ಲೆಯ 75 ಜಲಮೂಲಗಳನ್ನು ಅಭಿವೃದ್ಧಿಪಡಿಸುವ ಮತ್ತು ಪುನರುಜ್ಜೀವನಗೊಳಿಸುವ ಗುರಿಯನ್ನು ಹೊಂದಿರುವ ಉಪಕ್ರಮ - ʻಅಮೃತ್ ಸರೋವರ್ʼಗೆ ಚಾಲನೆ
"ಜಮ್ಮು ಮತ್ತು ಕಾಶ್ಮೀರದಲ್ಲಿ ʻರಾಷ್ಟ್ರೀಯ ಪಂಚಾಯತ್ ರಾಜ್ ದಿನʼವನ್ನು ಆಚರಿಸುವುದು ಒಂದು ದೊಡ್ಡ ಬದಲಾವಣೆಯನ್ನು ಸೂಚಿಸುತ್ತದೆ"
"ಅದು ಪ್ರಜಾಪ್ರಭುತ್ವವಾಗಿರಲಿ ಅಥವಾ ಅಭಿವೃದ್ಧಿಯ ಸಂಕಲ್ಪವಾಗಿರಲಿ, ಇಂದು ಜಮ್ಮು ಮತ್ತು ಕಾಶ್ಮೀರವು ಹೊಸ ಉದಾಹರಣೆಯನ್ನು ಪ್ರಸ್ತುತಪಡಿಸುತ್ತಿದೆ. ಕಳೆದ 2-3 ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಅಭಿವೃದ್ಧಿಯ ಹೊಸ ಆಯಾಮಗಳನ್ನು ಸೃಷ್ಟಿಸಲಾಗಿದೆ.
"ಹಲವಾರು ವರ್ಷಗಳಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಮೀಸಲಾತಿಯ ಪ್ರಯೋಜನವನ್ನು ಪಡೆಯದಿದ್ದವರು ಈಗ ಮೀಸಲಾತಿಯ ಪ್ರಯೋಜನವನ್ನು ಪಡೆಯುತ್ತಿದ್ದಾರೆ"
"ಅಂತರಗಳು ಯಾವುವೇ ಇರಲಿ, ಅವು ಹೃದಯಗಳ ನಡುವೆ ಇರಲಿ; ಭಾಷೆಗಳು, ಪದ್ಧತಿಗಳು ಅಥವಾ ಸಂಪನ್ಮೂಲಗಳ ನಡುವೆ ಇರಲಿ, ಅವುಗಳ ನಿರ್ಮೂಲನೆ ಇಂದು ನಮ್ಮ ಪ್ರಮುಖ ಆದ್ಯತೆಯಾಗಿದೆ"
"ಸ್ವಾತಂತ್ರ್ಯದ ಈ 'ಅಮೃತ್ ಕಾಲ' ಭಾರತದ ಸುವರ್ಣ ಯುಗವಾಗಲಿದೆ"
"ಕಣಿವೆಯ ಇಂದಿನ ಯುವಕರು ಅವರ ಹೆತ್ತವರು ಮತ್ತು ಅಜ್ಜ-ಅಜ್ಜಿಯರು ಎದುರಿಸಿದ ಸಮಸ್ಯೆಗಳನ್ನು ಎದುರಿಸುವುದಿಲ್ಲ"
"ನಮ್ಮ ಹಳ್ಳಿಗಳು ನೈಸರ್ಗಿಕ ಕೃಷಿಯತ್ತ ಸಾಗಿದರೆ ಅದು ಇಡೀ ಮನುಕುಲಕ್ಕೆ ಪ್ರಯೋಜನಕಾರಿಯಾಗಿದೆ"
'ಸಬ್ ಕಾ ಪ್ರಾಯಾಸ್‌' ಸಹಾಯದಿಂದ ಅಪೌಷ್ಟಿಕತೆಯನ್ನು ನಿವಾರಿಸುವಲ್ಲಿ ಗ್ರಾಮ ಪಂಚಾಯಿತಿಗಳು ಪ್ರಮುಖ ಪಾತ್ರ ವಹಿಸಲಿವೆ.

ಭಾರತ್ ಮಾತಾ ಕಿ ಜೈ
ಭಾರತ್ ಮಾತಾ ಕಿ ಜೈ
ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಶ್ರೀ ಮನೋಜ್ ಸಿನ್ಹಾ ಜಿ, ನನ್ನ ಸಂಪುಟ ಸಹೋದ್ಯೋಗಿ ಗಿರಿರಾಜ್ ಸಿಂಗ್ ಜಿ, ಈ ಮಣ್ಣಿನ ಮಗ ಮತ್ತು ನನ್ನ ಸಹೋದ್ಯೋಗಿ ಡಾ. ಜಿತೇಂದ್ರ ಸಿಂಗ್ ಜಿ, ಶ್ರೀ ಕಪಿಲ್ ಮೊರೇಶ್ವರ್ ಪಾಟೀಲ್ ಜಿ, ನನ್ನ ಸಂಸದೀಯ ಸಹೋದ್ಯೋಗಿ ಶ್ರೀ ಜುಗಲ್ ಕಿಶೋರ್ ಜಿ, ಜಮ್ಮು-ಕಾಶ್ಮೀರ ಸೇರಿದಂತೆ ಇಡೀ ದೇಶದಿಂದ ಸಂಪರ್ಕ ಹೊಂದಿರುವ ಪಂಚಾಯತ್ ರಾಜ್ ಸಂಸ್ಥೆಗಳ ಎಲ್ಲಾ ಸಾರ್ವಜನಿಕ ಪ್ರತಿನಿಧಿಗಳೆ, ಸಹೋದರ ಸಹೋದರಿಯರೆ!
(ಸ್ಥಳೀಯ ಭಾಷೆಯಲ್ಲಿ ಶುಭಾಶಯಗಳು)

ದೇಶಾದ್ಯಂತ ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಎಲ್ಲರಿಗೂ ರಾಷ್ಟ್ರೀಯ ಪಂಚಾಯತ್ ರಾಜ್ ದಿನದ ಶುಭಾಶಯಗಳು!
ಜಮ್ಮು-ಕಾಶ್ಮೀರದ ಅಭಿವೃದ್ಧಿಗೆ ಉತ್ತೇಜನ ನೀಡಲು ಇಂದು ಮಹತ್ವದ ದಿನವಾಗಿದೆ. ನನ್ನ ಕಣ್ಣುಗಳ ಮುಂದೆ ನಾನು ಜನಸಾಗರವನ್ನು ನೋಡುತ್ತಿದ್ದೇನೆ. ಬಹುಶಃ ಹಲವು ದಶಕಗಳ ನಂತರ ಭಾರತದ ಜನರು ಜಮ್ಮು-ಕಾಶ್ಮೀರದ ನೆಲದ ಮೇಲೆ ಇಂತಹ ಭವ್ಯ ದೃಶ್ಯವನ್ನು ನೋಡಲು ಸಾಧ್ಯವಾಗುತ್ತಿದೆ. ನಾನು ವಿಶೇಷವಾಗಿ ಇಂದು ಜಮ್ಮು-ಕಾಶ್ಮೀರದ ಸಹೋದರ, ಸಹೋದರಿಯರಿಗೆ ಅಭಿವೃದ್ಧಿ ಮತ್ತು ಪ್ರಗತಿಯ ಸಂಕಲ್ಪಕ್ಕಾಗಿ ನೀವು ತೋರುತ್ತಿರುವ ಪ್ರೀತಿ, ಉತ್ಸಾಹಕ್ಕಾಗಿ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಲು ಬಯಸುತ್ತೇನೆ.
ಸ್ನೇಹಿತರೆ, ಈ ಭೂಮಿ ನನಗೇನೂ ಹೊಸದಲ್ಲ, ನಾನು ನಿಮಗೂ ಹೊಸಬನೇನಲ್ಲ. ನಾನು ಹಲವಾರು ವರ್ಷಗಳಿಂದ ಈ ಸ್ಥಳದ ಪ್ರತಿಯೊಂದು ಮೂಲೆ ಮೂಲೆಯೊಂದಿಗೆ ಸಂಪರ್ಕ ಹೊಂದಿದ್ದೇನೆ, ಪರಿಚಿತನಾಗಿದ್ದೇನೆ. ಇಂದು 20 ಸಾವಿರ ಕೋಟಿ ರೂ. ವೆಚ್ಚದ ಸಂಪರ್ಕ ಮತ್ತು ವಿದ್ಯುತ್ ಸಂಬಂಧಿತ ಯೋಜನೆಗಳು ಉದ್ಘಾಟನೆಯಾಗಿವೆ ಮತ್ತು ಶಂಕುಸ್ಥಾಪನೆಯಾಗಿದೆ ಎಂದು ಹೇಳಲು ನನಗೆ ಅತ್ಯಂತ ಸಂತೋಷವಾಗಿದೆ. ಇದು ಜಮ್ಮು-ಕಾಶ್ಮೀರದಂತಹ ಸಣ್ಣ ಕೇಂದ್ರಾಡಳಿತ ಪ್ರದೇಶಕ್ಕೆ ಅಸಾಧಾರಣ ಮೊತ್ತವಾಗಿದೆ. ಜಮ್ಮು-ಕಾಶ್ಮೀರದ ಅಭಿವೃದ್ಧಿಗೆ ಹೊಸ ಉತ್ತೇಜನ ನೀಡಲು, ರಾಜ್ಯದಲ್ಲಿ ಕೆಲಸಗಳು ತ್ವರಿತ ಗತಿಯಲ್ಲಿ ನಡೆಯುತ್ತಿವೆ. ಈ ಪ್ರಯತ್ನಗಳು ಜಮ್ಮು-ಕಾಶ್ಮೀರದಲ್ಲಿ ಹೆಚ್ಚಿನ ಸಂಖ್ಯೆಯ ಯುವ ಸಮುದಾಯಕ್ಕೆ ಅಪಾರ ಉದ್ಯೋಗಗಳನ್ನು ಒದಗಿಸುತ್ತವೆ.

ಸ್ನೇಹಿತರೆ,
ಇಂದು ಅನೇಕ ಗ್ರಾಮೀಣ ಕುಟುಂಬಗಳು ತಮ್ಮ ಮನೆಗಳಿಗೆ ಆಸ್ತಿ ಕಾರ್ಡ್‌ಗಳನ್ನು ಸಹ ಪಡೆದಿವೆ. ಈ 'ಸ್ವಾಮಿತ್ವ' ಕಾರ್ಡ್‌ಗಳು ಹಳ್ಳಿಗಳಲ್ಲಿ ಹೊಸ ಸಾಧ್ಯತೆಗಳನ್ನು ಪ್ರೋತ್ಸಾಹಿಸುತ್ತವೆ. ಇಂದು 100 ಜನೌಷಧಿ ಕೇಂದ್ರಗಳು ಜಮ್ಮು-ಕಾಶ್ಮೀರದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಅಗ್ಗದ ಮತ್ತು ಕೈಗೆಟುಕುವ ಬೆಲೆಗೆ ಔಷಧಿಗಳು ಮತ್ತು ಶಸ್ತ್ರಚಿಕಿತ್ಸಾ ಸಾಧನಗಳನ್ನು ಒದಗಿಸುವ ಮಾಧ್ಯಮವಾಗಿ ಮಾರ್ಪಟ್ಟಿವೆ. 2070ರ ವೇಳೆಗೆ ದೇಶವನ್ನು ಇಂಗಾಲದಿಂದ ಶೂನ್ಯ(ತಟಸ್ಥ)ಗೊಳಿಸುವ ದೇಶದ ಸಂಕಲ್ಪಕ್ಕೆ ಅನುಗುಣವಾಗಿ, ಜಮ್ಮು-ಕಾಶ್ಮೀರವು ಆ ದಿಕ್ಕಿನಲ್ಲಿ ಇಂದು ಬೃಹತ್ ಉಪಕ್ರಮ ಕೈಗೊಂಡಿದೆ. ಪಲ್ಲಿ ಪಂಚಾಯತ್ ವ್ಯವಸ್ಥೆಯು ದೇಶದ ಮೊದಲ ಇಂಗಾಲ-ಶೂನ್ಯ ಪಂಚಾಯತ್ ಆಗುವತ್ತ ಮುನ್ನಡೆದಿದೆ.
ವಿಶ್ವದ ಪ್ರಮುಖ ದಿಗ್ಗಜರು ಗ್ಲಾಸ್ಗೋದಲ್ಲಿ ಸೇರಿದ್ದರು. ಇಂಗಾಲ ಹೊರಸೂಸುವಿಕೆ ತಟಸ್ಥಗೊಳಿಸುವ ಬಗ್ಗೆ ಸಾಕಷ್ಟು ಭಾಷಣಗಳು, ಹೇಳಿಕೆಗಳು ಮತ್ತು ಘೋಷಣೆಗಳನ್ನು ಮಾಡಲಾಯಿತು. ಆದರೆ ಇಂಗಾಲ ತಟಸ್ಥ ಗುರಿಯತ್ತ ಸಾಗುತ್ತಿರುವ ಮೊದಲ ದೇಶ ಭಾರತವಾಗಿದ್ದು,  ಇಂದು ಜಮ್ಮು-ಕಾಶ್ಮೀರದ ಒಂದು ಸಣ್ಣ ಪಂಚಾಯತ್ - ಪಲ್ಲಿ ಪಂಚಾಯತ್ ಇಂಗಾಲದ ತಟಸ್ಥ ಪಂಚಾಯತ್ ಆಗಲು ಮುನ್ನಡೆದಿದೆ.  ಪಲ್ಲಿ ಪಂಚಾಯತ್ ಜತೆಗೆ ನಾಡಿನ ಎಲ್ಲಾ ಗ್ರಾಮ ಪಂಚಾಯತ್ ಗಳ ಜನಪ್ರತಿನಿಧಿಗಳಿಗೂ  ಸಂಪರ್ಕ ಸಾಧಿಸುವ ಅವಕಾಶವೂ ಸಿಕ್ಕಿದೆ. ಈ ಮಹಾನ್ ಸಾಧನೆ ಮತ್ತು ಅಭಿವೃದ್ಧಿ ಯೋಜನೆಗಳಿಗಾಗಿ ಜಮ್ಮು-ಕಾಶ್ಮೀರಕ್ಕೆ ಹೃತ್ಪೂರ್ವಕ ಅಭಿನಂದನೆಗಳು!
ಇಲ್ಲಿ ವೇದಿಕೆಗೆ ಬರುವ ಮುನ್ನ ಪಂಚಾಯಿತಿ ಸದಸ್ಯರೊಂದಿಗೆ ಮಾತುಕತೆ ನಡೆಸಿದೆ. ಅವರ ಕನಸುಗಳು, ಸಂಕಲ್ಪಗಳು ಮತ್ತು ಉದಾತ್ತ ಉದ್ದೇಶಗಳು ನನ್ನ ಗಮನಕ್ಕೆ ಬಂದವು. ದೆಹಲಿಯ ಕೆಂಪು ಕೋಟೆಯಿಂದ ನಾನು ಮಾಡಿದ ಕರೆಯನ್ನು ಜಮ್ಮು-ಕಾಶ್ಮೀರದ ಪಲ್ಲಿಯ ಜನರು 'ಸಬ್ ಕಾ ಪ್ರಯಾಸ್' ಎಂದರೇನು ಎಂಬುದನ್ನು ತೋರಿಸಿದ್ದಾರೆ ಎಂಬುದು ನನಗೆ ಖುಷಿಯಾಗಿದೆ. ಇಲ್ಲಿ ಕಾರ್ಯಕ್ರಮ ಆಯೋಜಿಸುವಾಗ ಸರಕಾರಿ ಅಧಿಕಾರಿಗಳು, ಗುತ್ತಿಗೆದಾರರು, ಬಿಲ್ಡರ್‌ಗಳು ನಿತ್ಯ ಬರುತ್ತಿದ್ದರು ಎಂದು ಇಲ್ಲಿನ ಪಂಚ, ಸರಪಂಚರು ಹೇಳುತ್ತಿದ್ದರು. ಆದರೆ ಇಲ್ಲಿ ಯಾವುದೇ ಡಾಬಾ ಅಥವಾ ಲಂಗರ್‌ ವ್ಯವಸ್ಥೆ ಇಲ್ಲ. ಹಾಗಾದರೆ ಇಲ್ಲಿಗೆ ಬರುವವರಿಗೆ ಊಟ ಹಾಕುವುದು ಹೇಗೆ? ಹೀಗಾಗಿ ಪ್ರತಿ ಮನೆಯಿಂದ ತಾಯಂದಿರಿಂದ 20 ಅಥವಾ 30 ರೊಟ್ಟಿ ಸಂಗ್ರಹಿಸಿ, ಕಳೆದ 10 ದಿನಗಳಿಂದ ಇಲ್ಲಿಗೆ ಬಂದಿದ್ದವರಿಗೆಲ್ಲ ಗ್ರಾಮಸ್ಥರು ಊಟ ಹಾಕುತ್ತಿದ್ದರು. 'ಸಬ್ ಭಾರತಿ ಪ್ರಯಾಸ್' ಅಥವಾ 'ಎಲ್ಲರ ಪ್ರಯತ್ನ' ಏನು ಎಂಬುದನ್ನು ನೀವು ನಿಜವಾಗಿ ತೋರಿಸಿದ್ದೀರಿ! ನಾನು ಇಲ್ಲಿಯ ಎಲ್ಲಾ ಗ್ರಾಮಸ್ಥರಿಗೆ ನಮಸ್ಕರಿಸುತ್ತೇನೆ.

ಸಹೋದರ ಸಹೋದರಿಯರೇ,
ಈ ವರ್ಷದ ಪಂಚಾಯತ್ ರಾಜ್ ದಿನವನ್ನು ಜಮ್ಮು-ಕಾಶ್ಮೀರದಲ್ಲಿ ಆಚರಿಸಲಾಗುತ್ತಿದೆ, ಇದು ದೊಡ್ಡ ಬದಲಾವಣೆಯನ್ನು ಸಂಕೇತಿಸುತ್ತಿದೆ. ಜಮ್ಮು-ಕಾಶ್ಮೀರದಲ್ಲಿ ಪ್ರಜಾಪ್ರಭುತ್ವವು ತಳಮಟ್ಟ ತಲುಪಿರುವ ಈ ಸಂದರ್ಭದಲ್ಲಿ ನಾನು ದೇಶಾದ್ಯಂತ ಪಂಚಾಯತ್‌ಗಳೊಂದಿಗೆ ಸಂವಾದ ನಡೆಸುತ್ತಿರುವುದು ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ. ಭಾರತದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿಗೆ ತಂದಾಗ, ಅದನ್ನು ಅಪಾರವಾಗಿ ಪ್ರಚಾರ ಮಾಡಲಾಯಿತು, ಪ್ರತಿಯೊಬ್ಬರೂ ಈ ಉಪಕ್ರಮವನ್ನು ಹೆಮ್ಮೆಪಟ್ಟರು; ಅದರಲ್ಲಿ ತಪ್ಪುಗಳೇನೂ ಇರಲಿಲ್ಲ. ಆದರೆ ನಾವು ಒಂದು ವಿಷಯ ಮರೆತಿದ್ದೇವೆ. ಭಾರತದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಯಾಗಿದೆ ಎಂದು ನಾವು ಹೇಳುತ್ತಿದ್ದರೂ, ಇಂತಹ ಉತ್ತಮ ವ್ಯವಸ್ಥೆ ಇದ್ದರೂ ನನ್ನ ಜಮ್ಮು-ಕಾಶ್ಮೀರದ ಜನರು ಅದರಿಂದ ವಂಚಿತರಾಗಿದ್ದರು ಎಂಬುದನ್ನು ದೇಶವಾಸಿಗಳು ತಿಳಿದುಕೊಳ್ಳಬೇಕು. ಅದು ಇಲ್ಲಿ ಇರಲಿಲ್ಲ. ನೀವು ನನಗೆ ದೆಹಲಿಯಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡಿದ್ದೀರಿ ಮತ್ತು ಜಮ್ಮು-ಕಾಶ್ಮೀರದ ನೆಲದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿಗೆ ತಂದಿದ್ದೀರಿ. ಜಮ್ಮು-ಕಾಶ್ಮೀರದ ಹಳ್ಳಿಗಳಲ್ಲೇ 30 ಸಾವಿರಕ್ಕೂ ಹೆಚ್ಚು ಜನಪ್ರತಿನಿಧಿಗಳು ಆಯ್ಕೆಯಾಗಿ ಇಂದು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಅದು ಪ್ರಜಾಪ್ರಭುತ್ವದ ದೈತ್ಯಶಕ್ತಿ. ಮೊದಲ ಬಾರಿಗೆ 3 ಹಂತದ ಪಂಚಾಯತ್ ರಾಜ್ ವ್ಯವಸ್ಥೆ - ಗ್ರಾಮ ಪಂಚಾಯತ್, ಪಂಚಾಯತ್ ಸಮಿತಿ ಮತ್ತು ಡಿಡಿಸಿ ಚುನಾವಣೆಗಳು ಇಲ್ಲಿ ಶಾಂತಿಯುತವಾಗಿ ನಡೆದವು, ಇದೀಗ ಗ್ರಾಮಗಳ ಜನರು ಗ್ರಾಮದ ಭವಿಷ್ಯವನ್ನು ಅಚ್ಚುಕಟ್ಟಾಗಿ ರೂಪಿಸುತ್ತಿದ್ದಾರೆ.

ಸ್ನೇಹಿತರೆ,

ಅದು ಪ್ರಜಾಪ್ರಭುತ್ವವಾಗಲಿ ಅಥವಾ ಅಭಿವೃದ್ಧಿಯ ನಿರ್ಣಯವಾಗಲಿ, ಇಂದು ಜಮ್ಮು-ಕಾಶ್ಮೀರವು ಇಡೀ ದೇಶಕ್ಕೆ ಹೊಸ ಮಾದರಿಯಾಗಿದೆ. ಕಳೆದ 2-3 ವರ್ಷಗಳಲ್ಲಿ ಜಮ್ಮು-ಕಾಶ್ಮೀರದಲ್ಲಿ ಅಭಿವೃದ್ಧಿಯ ಹೊಸ ಆಯಾಮಗಳು ಸೃಷ್ಟಿಯಾಗಿವೆ. ಜನರಿಗೆ ಅಧಿಕಾರ ನೀಡುವ 175 ಕೇಂದ್ರ ಕಾನೂನುಗಳು ಇಲ್ಲಿ ಜಾರಿಗೆ ಬಂದಿರಲಿಲ್ಲ. ಜಮ್ಮು-ಕಾಶ್ಮೀರದ ಪ್ರತಿಯೊಬ್ಬ ವ್ಯಕ್ತಿಯನ್ನು ಸಬಲೀಕರಣಗೊಳಿಸಲು ನಾವು ಆ ಕಾನೂನುಗಳನ್ನು ಜಾರಿಗೆ ತಂದಿದ್ದೇವೆ, ನಿಮ್ಮನ್ನು ಶಕ್ತಿವಂತರನ್ನಾಗಿ ಮಾಡಿದ್ದೇವೆ. ಸಹೋದರಿಯರು, ಹೆಣ್ಣು ಮಕ್ಕಳು, ಬಡವರು, ದಲಿತರು, ಶೋಷಿತರು ಮತ್ತು ಹಿಂದುಳಿದವರು ಇಲ್ಲಿ ಹೆಚ್ಚು ಪ್ರಯೋಜನ ಪಡೆದಿದ್ದಾರೆ.
ಅಂತಿಮವಾಗಿ 75 ವರ್ಷಗಳ ಸ್ವಾತಂತ್ರ್ಯದ ನಂತರ, ಜಮ್ಮು-ಕಾಶ್ಮೀರದ ವಾಲ್ಮೀಕಿ ಸಮಾಜದ ನನ್ನ ಸಹೋದರ ಸಹೋದರಿಯರು ಭಾರತದ ಇತರ ನಾಗರಿಕರಿಗೆ ಸಮಾನವಾಗಿರಲು ಕಾನೂನುಬದ್ಧ ಹಕ್ಕುಗಳನ್ನು ಪಡೆದಿದ್ದಾರೆ ಎಂದು ಇಂದು ನಾನು ಹೆಮ್ಮೆಪಡುತ್ತೇನೆ. ದಶಕಗಳಿಂದ ವಾಲ್ಮೀಕಿ ಸಮಾಜದ ಪಾದಕ್ಕೆ ಹಾಕಲಾಗಿದ್ದ ಸಂಕೋಲೆಗಳು ಈಗ ಮುರಿದು ಬಿದ್ದಿವೆ. ಸ್ವಾತಂತ್ರ್ಯ ಬಂದು 7 ದಶಕಗಳ ನಂತರ ಅವರಿಗೆ ‘ಸ್ವಾತಂತ್ರ್ಯ’ ಸಿಕ್ಕಿದೆ. ಇಂದು ಪ್ರತಿಯೊಂದು ಸಮಾಜದ ಗಂಡು ಮತ್ತು ಹೆಣ್ಣು ಮಕ್ಕಳು ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಲು ಸಮರ್ಥರಾಗಿದ್ದಾರೆ.

ಜಮ್ಮು-ಕಾಶ್ಮೀರದಲ್ಲಿ ಹಲವು ವರ್ಷಗಳಿಂದ ಮೀಸಲಾತಿಯ ಲಾಭ ಪಡೆಯದವರೂ ಮೀಸಲಾತಿಯ ಲಾಭ ಪಡೆಯುತ್ತಿದ್ದಾರೆ. ಮೊದಲು ಭಾರತದಲ್ಲಿ ಸವಲತ್ತು ವಂಚಿತ ವರ್ಗ ಇತ್ತು, ಆದರೆ ಈಗ ಮೋದಿ ಸರ್ಕಾರವು ಅವರ ಕನಸುಗಳನ್ನು ಈಡೇರಿಸಿರುವುದರಿಂದ ಬಾಬಾ ಸಾಹೇಬರ ಆತ್ಮವು ನಮ್ಮೆಲ್ಲರ ಮೇಲೆ ಆಶೀರ್ವಾದ ಸುರಿಸುತ್ತಿದೆ. ಕೇಂದ್ರ ಸರ್ಕಾರದ ಯೋಜನೆಗಳು ಈಗ ಇಲ್ಲಿ ಕ್ಷಿಪ್ರವಾಗಿ ಜಾರಿಯಾಗುತ್ತಿದ್ದು, ಇದು ಜಮ್ಮು-ಕಾಶ್ಮೀರದ ಹಳ್ಳಿಗಳಿಗೆ ನೇರವಾಗಿ ಪ್ರಯೋಜನ ಒದಗಿಸುತ್ತಿದೆ. ಜಮ್ಮು-ಕಾಶ್ಮೀರದ ಸ್ವಚ್ಛ ಭಾರತ ಅಭಿಯಾನದ ಅಡಿ, ಎಲ್‌ಪಿಜಿ ಗ್ಯಾಸ್ ಸಂಪರ್ಕ, ವಿದ್ಯುತ್ ಸಂಪರ್ಕ, ನೀರಿನ ಸಂಪರ್ಕ ಅಥವಾ ಶೌಚಾಲಯಗಳು ದೊಡ್ಡ ಲಾಭವನ್ನು ತಂದೊಕೊಟ್ಟಿವೆ.

ಸ್ನೇಹಿತರೆ,
ಹೊಸ ಜಮ್ಮು-ಕಾಶ್ಮೀರವು 'ಆಜಾದಿ ಕೆ ಅಮೃತ ಕಾಲ'ದಲ್ಲಿ ಅಂದರೆ ಮುಂಬರುವ 25 ವರ್ಷಗಳಲ್ಲಿ ಅಭಿವೃದ್ಧಿಯ ಹೊಸ ಯಶೋಗಾಥೆ ಬರೆಯಲಿದೆ. ಸ್ವಲ್ಪ ಸಮಯದ ಹಿಂದೆ ಸಂಯುಕ್ತ ಅರಬ್ ಎಮಿರೇಟ್ಸ್  ನಿಯೋಗದೊಂದಿಗೆ ಮಾತನಾಡಲು ನನಗೆ ಅವಕಾಶ ಸಿಕ್ಕಿತು. ಅವರು ಜಮ್ಮು-ಕಾಶ್ಮೀರದ ಬಗ್ಗೆ ತುಂಬಾ ಉತ್ಸುಕರಾಗಿದ್ದರು. ಸ್ವಾತಂತ್ರ್ಯದ ನಂತರದ 7 ದಶಕಗಳಲ್ಲಿ ಜಮ್ಮು-ಕಾಶ್ಮೀರದಲ್ಲಿ ಕೇವಲ 17 ಸಾವಿರ ಕೋಟಿ ರೂಪಾಯಿ ಖಾಸಗಿ ಹೂಡಿಕೆ ಮಾಡಲಾಗಿತ್ತು. ಆದರೆ ಕಳೆದ 2 ವರ್ಷಗಳಲ್ಲಿ ಈ ಅಂಕಿಅಂಶವು 38 ಸಾವಿರ ಕೋಟಿ ರೂಪಾಯಿಗೆ ಏರಿಕೆ ಕಂಡಿದೆ ಎಂಬುದನ್ನು ಊಹಿಸಿ. 38 ಸಾವಿರ ಕೋಟಿ ರೂ. ಹೂಡಿಕೆ ಮಾಡಲು ಖಾಸಗಿ ಕಂಪನಿಗಳು ಇಲ್ಲಿಗೆ ಬರುತ್ತಿವೆ.

ಸ್ನೇಹಿತರು,

ಇಂದು ಕೇಂದ್ರದಿಂದ ಬರುವ ಪ್ರತಿ ಪೈಸೆಯೂ ಇಲ್ಲಿ ಪ್ರಾಮಾಣಿಕವಾಗಿ ಬಳಕೆಯಾಗುತ್ತಿದ್ದು, ಹೂಡಿಕೆದಾರರೂ ಮುಕ್ತ ಮನಸ್ಸಿನಿಂದ ಹಣ ಹೂಡಲು ಬರುತ್ತಿದ್ದಾರೆ. ಮನೋಜ್ ಸಿನ್ಹಾ ಜಿ ಅವರು 3 ವರ್ಷಗಳ ಹಿಂದೆ, ‘ಇದು ಕಡಿಮೆ ಜನಸಂಖ್ಯೆ ಹೊಂದಿರುವ ಸಣ್ಣ ರಾಜ್ಯವಾದ್ದರಿಂದ ಲೇಹ್-ಲಡಾಖ್ ಸೇರಿದಂತೆ ಎಲ್ಲಾ ಜಿಲ್ಲೆಗಳು ಕೇವಲ 5,000 ಕೋಟಿ ರೂಪಾಯಿ ಪಡೆಯುತ್ತಿದ್ದವು’ ಎಂದು ಹೇಳುತ್ತಿದ್ದರು. ಆದರೆ ಕಳೆದ 2 ವರ್ಷಗಳಲ್ಲಿ ಅಭಿವೃದ್ಧಿಯ ವೇಗ ಹಲವು ಪಟ್ಟು ಹೆಚ್ಚಾಗಿದೆ. ಈ ಬಾರಿಯ ಬಜೆಟ್ ನಲ್ಲಿ ಜಿಲ್ಲೆಗಳ ಅಭಿವೃದ್ಧಿಗೆ ನೇರವಾಗಿ ಪಂಚಾಯಿತಿಗಳಿಗೆ 22 ಸಾವಿರ ಕೋಟಿ ರೂ. ಅನುದಾನ ನೀಡಲಾಗುತ್ತಿದೆ. ರಾಜ್ಯದಲ್ಲಿ ನಿರ್ಮಾಣವಾಗಿರುವ ತಳಮಟ್ಟದ ಪ್ರಜಾಪ್ರಭುತ್ವ ವ್ಯವಸ್ಥೆಯಿಂದ ಕೈಗೊಳ್ಳಬೇಕಾದ ಅಭಿವೃದ್ಧಿ ಯೋಜನೆಗಳಿಗೆ ಕೇವಲ 5,000 ಕೋಟಿ ರೂ. ಬದಲಾಗಿ, ಈಗ 22 ಸಾವಿರ ಕೋಟಿ ರೂ. ನೀಡಲಾಗಿದೆ. ಬಂಧುಗಳೇ, ಕೇಂದ್ರ ಸರ್ಕಾರ ಈ ರೀತಿಯಲ್ಲಿ  ಕೆಲಸ ಮಾಡಿದೆ.

ರಾಟಲ್ ವಿದ್ಯುತ್ ಯೋಜನೆ ಮತ್ತು ಕ್ವಾರ್ ವಿದ್ಯುತ್ ಯೋಜನೆ  ಸಿದ್ಧವಾದರೆ, ಜಮ್ಮು-ಕಾಶ್ಮೀರಕ್ಕೆ ಸಾಕಷ್ಟು ಪ್ರಮಾಣದಲ್ಲಿ ವಿದ್ಯುತ್ ಲಭ್ಯವಾಗುವುದಲ್ಲದೆ, ಅಪಾರಉದ್ಯೋಗ ಸೃಷ್ಟಿಗೆ ದೊಡ್ಡ ಮಾರ್ಗವನ್ನು ತೆರೆಯುತ್ತದೆ ಎಂದು ಹೇಳಲು ಇಂದು ನನಗೆ ಸಂತೋಷವಾಗುತ್ತಿದೆ. ಇದು ಜಮ್ಮು-ಕಾಶ್ಮೀರವನ್ನು ಹೊಸ ಆರ್ಥಿಕತೆಯತ್ತ ಕೊಂಡೊಯ್ಯುತ್ತದೆ. ಈಗ ನೋಡಿ, ನನ್ನ ವಿಷಯವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ. ಈ ಹಿಂದೆ ದೆಹಲಿಯಿಂದ ಸರ್ಕಾರಿ ಕಡತವು ಜಮ್ಮು-ಕಾಶ್ಮೀರವನ್ನು ತಲುಪಲು 2-3 ವಾರಗಳನ್ನು ತೆಗೆದುಕೊಳ್ಳುತ್ತಿತ್ತು. ಇಂದು ಈ 500 ಕಿಲೋ ವ್ಯಾಟ್ ಸೌರ ವಿದ್ಯುತ್ ಸ್ಥಾವರವನ್ನು ಕೇವಲ 3 ವಾರಗಳಲ್ಲಿ ಸ್ಥಾಪಿಸಿ ವಿದ್ಯುತ್ ಉತ್ಪಾದಿಸಲು ಪ್ರಾರಂಭಿಸಿರುವುದು ನನಗೆ ಖುಷಿ ತಂದಿದೆ. ಪಲ್ಲಿ ಗ್ರಾಮದ ಎಲ್ಲಾ ಮನೆಗಳಿಗೂ ಈಗ ಸೌರಶಕ್ತಿ ವಿದ್ಯುತ್ ತಲುಪುತ್ತಿದೆ. ಈ ಗ್ರಾಮವು ‘ಗ್ರಾಮ ಊರ್ಜ ಸ್ವರಾಜ್’ ಎಂಬುದಕ್ಕೆ ಉತ್ತಮ ಉದಾಹರಣೆಯಾಗಿದೆ. ಕೆಲಸದ (ಕಾರ್ಯ) ಸಂಸ್ಕೃತಿಯ ಈ ಬದಲಾವಣೆಯು ಜಮ್ಮು-ಕಾಶ್ಮೀರವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ.
ಸ್ನೇಹಿತರು,

ನಾನು ಜಮ್ಮು-ಕಾಶ್ಮೀರದ ಯುವಕರಿಗೆ ಒಂದು ಮಾತು ಹೇಳಲು ಬಯಸುತ್ತೇನೆ. ಸ್ನೇಹಿತರೆ, ನನ್ನ ಮಾತುಗಳನ್ನು ಗುರುತಿಸಿ. ಕಾಶ್ಮೀರ ಕಣಿವೆಯ ಯುವಕರು ತಮ್ಮ ಹೆತ್ತವರು ಮತ್ತು ಅಜ್ಜ ಅಜ್ಜಿಯರಂತೆ ನೀವು ಬಳಲುವುದಿಲ್ಲ. ಅವರು ಎದುರಿಸಿದ ಸಂಕಷ್ಟಗಳನ್ನು ನೀವು ಅನುಭವಿಸಲಾರಿರಿ. ನಾನು ಇದನ್ನು ನಿಮಗೆ ಇದೇ ಖಚಿತಪಡಿಸುತ್ತೇನೆ. ನಿಮಗೆ ಅದನ್ನು ಭರವಸೆ ನೀಡಲು ನಾನು ಇಲ್ಲಿಗೆ ಬಂದಿದ್ದೇನೆ. ಕಳೆದ 8 ವರ್ಷಗಳಲ್ಲಿ ನಮ್ಮ ಸರ್ಕಾರ ‘ಏಕ್ ಭಾರತ್, ಶ್ರೇಷ್ಠ ಭಾರತ’ ಎಂಬ ಮಂತ್ರವನ್ನು ಬಲಪಡಿಸಲು ಹಗಲಿರುಳು ಶ್ರಮಿಸಿದೆ. ನಾನು 'ಏಕ್ ಭಾರತ್, ಶ್ರೇಷ್ಠ ಭಾರತ್' ಕುರಿತು ಮಾತನಾಡುವಾಗ, ನಮ್ಮ ಗಮನವು ಸಂಪರ್ಕಸಾಧಿಸುವ ಮತ್ತು ಕಂದಕ ಮುಚ್ಚುವುದರ ಮೇಲೂ ಇರುತ್ತದೆ - ಅದು ಹೃದಯ, ಭಾಷೆ, ನಡೆವಳಿಕೆ ಅಥವಾ ಸಂಪನ್ಮೂಲಗಳಾಗಿರಬಹುದು. ಅಂತರವನ್ನು ಕಡಿಮೆ ಮಾಡುವುದು ಇಂದು ನಮ್ಮ ದೊಡ್ಡ ಆದ್ಯತೆಯಾಗಿದೆ. ನಮ್ಮ ಡೋಗ್ರಾಗಳ ಬಗ್ಗೆ ಜನಪದ ಸಂಗೀತದಲ್ಲಿ ಹೇಳುವಂತೆ – – मिट्ठड़ी ऐ डोगरें दी बोली, ते खंड मिट्ठे लोक डोगरे ಅಂತಹ ಮಾಧುರ್ಯ ಮತ್ತು ಸೂಕ್ಷ್ಮ ಚಿಂತನೆಗಳು ದೇಶದ ಏಕತೆಗೆ ಶಕ್ತಿಯಾಗುತ್ತವೆ, ಅಂತರಗಳನ್ನು  ಕಡಿಮೆ ಮಾಡುತ್ತವೆ.

ಸಹೋದರ ಸಹೋದರಿಯರೆ, 
ನಮ್ಮ ಸರ್ಕಾರದ ಪ್ರಯತ್ನದಿಂದಾಗಿ, ಈಗ ಬನಿಹಾಲ್-ಖಾಜಿಗುಂಡ್ ಸುರಂಗ ನಿರ್ಮಾಣದಿಂದ ಜಮ್ಮು ಮತ್ತು ಶ್ರೀನಗರ ನಡುವಿನ ಅಂತರವು 2 ತಾಸು ಕಡಿಮೆಯಾಗಿದೆ. ಉಧಮ್‌ಪುರ-ಶ್ರೀನಗರ-ಬಾರಾಮುಲ್ಲಾವನ್ನು ಸಂಪರ್ಕಿಸುವ ಆಕರ್ಷಕ ಕಮಾನು ಸೇತುವೆ ಶೀಘ್ರದಲ್ಲೇ ದೇಶಕ್ಕೆ ಸಮರ್ಪಣೆ ಆಗಲಿದೆ. ದೆಹಲಿ-ಅಮೃತಸರ-ಕತ್ರಾ ಹೆದ್ದಾರಿಯು ದೆಹಲಿಯಿಂದ ಮಾತೆ ವೈಷ್ಣೋದೇವಿ ಮಂದಿರದ ಅಂತರವನ್ನು ಕಡಿಮೆ ಮಾಡಲಿದೆ. ಕನ್ಯಾಕುಮಾರಿಯಿಂದ ವೈಷ್ಣೋದೇವಿಗೆ ಒಂದೇ ರಸ್ತೆಯ ಮೂಲಕ ಸಂಪರ್ಕ ಸಾಧಿಸುವ ದಿನ ದೂರವಿಲ್ಲ. ಅದು ಜಮ್ಮು-ಕಾಶ್ಮೀರ ಅಥವಾ ಲೇಹ್-ಲಡಾಖ್ ಆಗಿರಲಿ, ಜಮ್ಮು-ಕಾಶ್ಮೀರದ ಹೆಚ್ಚಿನ ಭಾಗಗಳು ವರ್ಷದ ಎಲ್ಲಾ ತಿಂಗಳುಗಳಲ್ಲಿ ದೇಶದ ಉಳಿದ ಭಾಗಗಳಿಗೆ ಸಂಪರ್ಕ ಕಲ್ಪಿಸಲು ಎಲ್ಲಾ ಕಡೆಯಿಂದ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಗಡಿ ಗ್ರಾಮಗಳ ಅಭಿವೃದ್ಧಿಗೆ ನಮ್ಮ ಸರ್ಕಾರವೂ ಆದ್ಯತೆ ಮೇರೆಗೆ ಕೆಲಸ ಮಾಡುತ್ತಿದೆ. ಭಾರತದ ಗಡಿಯಲ್ಲಿರುವ ದೂರದ ಹಳ್ಳಿಗೆ  ವೈಬ್ರೆಂಟ್ ವಿಲೇಜ್ ಯೋಜನೆಗೆ ಈ ಬಾರಿಯ ಬಜೆಟ್ ನಲ್ಲಿ ಅನುಮೋದನೆ ನೀಡಲಾಗಿದೆ. ವೈಬ್ರೆಂಟ್ ವಿಲೇಜ್ ಸ್ಕೀಮ್ ಅಡಿ ಗಡಿಯ ಪಕ್ಕದಲ್ಲಿರುವ ಭಾರತದ ಎಲ್ಲಾ ಕುಗ್ರಾಮಗಳಿಗೆ ಇದರ ಪ್ರಯೋಜನ ಲಭ್ಯವಾಗುತ್ತದೆ. ಪಂಜಾಬ್ ಮತ್ತು ಜಮ್ಮು-ಕಾಶ್ಮೀರಕ್ಕೂ ಇದರಿಂದ ಸಾಕಷ್ಟು ಲಾಭವಾಗಲಿದೆ.
ಸ್ನೇಹಿತರೆ,

ಇಂದು ಜಮ್ಮು-ಕಾಶ್ಮೀರ ಸಹ 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್'ಗೆ ಉತ್ತಮ ಉದಾಹರಣೆಯಾಗಿದೆ. ಉತ್ತಮ ಮತ್ತು ಆಧುನಿಕ ಆಸ್ಪತ್ರೆಗಳು, ಹೊಸ ಸಾರಿಗೆ ಸಾಧನಗಳು, ಉನ್ನತ ಶಿಕ್ಷಣ ಸಂಸ್ಥೆಗಳು ಸೇರಿದಂತೆ ನಾನಾ ಯೋಜನೆಗಳನ್ನು ರಾಜ್ಯದ ಯುವಜನರನ್ನು ಗಮನದಲ್ಲಿಟ್ಟುಕೊಂಡು  ಜಾರಿಗೊಳಿಸಲಾಗುತ್ತಿದೆ. ಅಭಿವೃದ್ಧಿ ಮತ್ತು ನಂಬಿಕೆ ಬೆಳೆಯುತ್ತಿರುವ ವಾತಾವರಣದಲ್ಲಿ ಜಮ್ಮು-ಕಾಶ್ಮೀರದಲ್ಲಿ ಪ್ರವಾಸೋದ್ಯಮ ಮತ್ತೆ ಪ್ರವರ್ಧಮಾನಕ್ಕೆ ಬಂದಿದೆ. ಮುಂದಿನ ಜೂನ್-ಜುಲೈ ತನಕ ಇಲ್ಲಿನ ಎಲ್ಲಾ ಪ್ರವಾಸಿ ಸ್ಥಳಗಳು ಈಗಾಗಲೇ ಬುಕ್ ಆಗಿವೆ ಎಂದು ನನಗೆ ತಿಳಿದುಬಂದಿದೆ, ಬುಕ್ಕಿಂಗ್ ಹುಡುಕುವುದೇ ಕಷ್ಟ ಎನ್ನುವಷ್ಟು ಪ್ರಮಾಣದಲ್ಲಿ  ಕಳೆದ ಕೆಲವು ತಿಂಗಳಿಂದ ಹಿಂದೆಂದೂ ಕಾಣದ ರೀತಿಯಲ್ಲಿ ಪ್ರವಾಸಿಗರು ಕಣಿವೆಗೆ ಹರಿದು ಬರುತ್ತಿದ್ದಾರೆ.

ಸ್ನೇಹಿತರೆ,
'ಆಜಾದಿ ಕಾ ಅಮೃತ್ ಕಾಲ್' ಭಾರತಕ್ಕೆ ಸುವರ್ಣ ಅವಧಿಯಾಗಲಿದೆ. ಈ ಸಂಕಲ್ಪ ಎಲ್ಲರ ಪ್ರಯತ್ನದಿಂದ ಸಾಬೀತಾಗಲಿದೆ. ಈ ಅವಧಿಯಲ್ಲಿ ನಿಮ್ಮ ಪಾತ್ರ, ತಳಮಟ್ಟದ ಪ್ರಜಾಪ್ರಭುತ್ವ, ಗ್ರಾಮ ಪಂಚಾಯಿತಿಯ ಪಾತ್ರ ಬಹಳ ನಿರ್ಣಾಯಕವಾಗಿದೆ. ಪಂಚಾಯತ್‌ಗಳ ಈ ಪಾತ್ರವನ್ನು ಅರ್ಥ ಮಾಡಿಕೊಂಡು, 'ಆಜಾದಿ ಕಾ ಅಮೃತ್ ಮಹೋತ್ಸವ'ದಲ್ಲಿ ಅಮೃತ್ ಸರೋವರ ಅಭಿಯಾನ ಪ್ರಾರಂಭಿಸಲಾಗಿದೆ. ಮುಂದಿನ ವರ್ಷ ಅಂದರೆ 2023 ಆಗಸ್ಟ್ 15ರ ವೇಳೆಗೆ ನಾವು ಪ್ರತಿ ಜಿಲ್ಲೆಯಲ್ಲಿ ಕನಿಷ್ಠ 75 ಅಮೃತ ಸರೋವರಗಳನ್ನು ಅಭಿವೃದ್ಧಿಪಡಿಸಬೇಕಾಗಿದೆ.
ಆ ಭಾಗದ ಹುತಾತ್ಮರ ಹೆಸರಿನಲ್ಲಿ ಈ ಕೆರೆಗಳ ಸುತ್ತ ಬೇವು, ಅರಳಿ, ಆಲ  ಮತ್ತಿತರ ಸಸಿಗಳನ್ನು ನೆಡುವ ಪ್ರಯತ್ನವನ್ನೂ ಮಾಡಬೇಕು. ಅಲ್ಲದೆ, ಹುತಾತ್ಮರ ಕುಟುಂಬ ಅಥವಾ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದಿಂದ ಅಮೃತ ಸರೋವರಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುತ್ತದೆ ಎಂಬುದನ್ನು ನಾವು ಖಚಿತಪಡಿಸಿಕೊಳ್ಳಬೇಕು. ಈ ಅಮೃತ ಸರೋವರ ಅಭಿಯಾನ ವೈಭವದ ಕಾರ್ಯಕ್ರಮವಾಗಲಿ.

ಸಹೋದರ ಸಹೋದರಿಯರೆ,
ಇತ್ತೀಚಿನ ವರ್ಷಗಳಲ್ಲಿ, ಹೆಚ್ಚಿನ ಅಧಿಕಾರ, ಹೆಚ್ಚು ಪಾರದರ್ಶಕತೆ ಮತ್ತು ತಂತ್ರಜ್ಞಾನದೊಂದಿಗೆ ಪಂಚಾಯತ್‌ಗಳನ್ನು ಸಬಲೀಕರಣಗೊಳಿಸಲು ಅವಿರತ ಪ್ರಯತ್ನಗಳನ್ನು ಮಾಡಲಾಗಿದೆ. ಪಂಚಾಯತ್‌ಗೆ ಸಂಬಂಧಿಸಿದ ಪಾವತಿ ಯೋಜನೆ ವ್ಯವಸ್ಥೆಯನ್ನು ಇ-ಗ್ರಾಮ ಸ್ವರಾಜ್ ಅಭಿಯಾನಕ್ಕೆ ಜೋಡಿಸಲಾಗುತ್ತಿದೆ. ಇನ್ನು ಗ್ರಾಮದ ಫಲಾನುಭವಿಯೊಬ್ಬರು ತಮ್ಮ ಮೊಬೈಲ್ ಫೋನ್‌ನಲ್ಲಿ ಪಂಚಾಯಿತಿಯಲ್ಲಿ ಆಗುತ್ತಿರುವ ಕಾಮಗಾರಿ, ಅದರ ಸ್ಥಿತಿಗತಿ ಹಾಗೂ ಬಜೆಟ್ ಬಗ್ಗೆ ಮಾಹಿತಿ ಪಡೆಯಬಹುದು. ಪಂಚಾಯಿತಿಗೆ ಬರುತ್ತಿರುವ ಹಣವನ್ನು ಲೆಕ್ಕಪರಿಶೋಧನೆ ಮಾಡಲು ಆನ್‌ಲೈನ್ ವ್ಯವಸ್ಥೆ ಮಾಡಲಾಗಿದೆ. ನಾಗರೀಕ ಸನ್ನದು ಅಭಿಯಾನದ ಮೂಲಕ, ಗ್ರಾಮ ಪಂಚಾಯತ್ ಮಟ್ಟದಲ್ಲಿ ಜನನ ಪ್ರಮಾಣಪತ್ರಗಳು, ವಿವಾಹ ಪ್ರಮಾಣಪತ್ರಗಳು ಮತ್ತು ಆಸ್ತಿಗೆ ಸಂಬಂಧಿಸಿದ ಅನೇಕ ಇತರ ವಿಷಯಗಳಿಗೆ ಸಂಬಂಧಿಸಿದ ಕಾರ್ಯಗಳನ್ನು ಪೂರ್ಣಗೊಳಿಸಲು ರಾಜ್ಯಗಳು ಮತ್ತು ಗ್ರಾಮ ಪಂಚಾಯತ್‌ಗಳನ್ನು ಪ್ರೋತ್ಸಾಹಿಸಲಾಗುತ್ತಿದೆ. ಸ್ವಾಮಿತ್ವ ಯೋಜನೆಯಿಂದ ಗ್ರಾಪಂಗಳಿಗೆ ಆಸ್ತಿ ತೆರಿಗೆ ಮೌಲ್ಯಮಾಪನ ಸುಲಭವಾಗಿದ್ದು, ಹಲವು ಗ್ರಾಮ ಪಂಚಾಯಿತಿಗಳಿಗೆ ಅನುಕೂಲವಾಗುತ್ತಿದೆ.
  ಆಧುನಿಕ ತಂತ್ರಜ್ಞಾನ ಬಳಕೆ ಸಂಬಂಧ ಹೊಸ ನೀತಿಗೂ ಅನುಮೋದನೆ ನೀಡಲಾಗಿದೆ. ಇದೇ ತಿಂಗಳು, ಗ್ರಾಮಗಳಿಗೆ ಮೂಲಸೌಕರ್ಯಗಳನ್ನು ಒದಗಿಸುವ ಕೆಲಸ ಮಾಡಲು ಪಂಚಾಯತ್ ಗಳನ್ನು ಪುನಾರಚಿಸುವ ಸಂಕಲ್ಪದೊಂದಿಗೆ ಏಪ್ರಿಲ್ 11ರಿಂದ 17ರ ವರೆಗೆ ಐಕಾನಿಕ್ ವೀಕ್ ಸಹ ಆಚರಿಸಲಾಯಿತು. ಹಳ್ಳಿಗಳಲ್ಲಿನ ಪ್ರತಿಯೊಬ್ಬ ವ್ಯಕ್ತಿ  ಮತ್ತು ಕುಟುಂಬಕ್ಕೆ ಶಿಕ್ಷಣ, ಆರೋಗ್ಯದಂತಹ ಪ್ರತಿಯೊಂದು ಅಂಶಗಳ ಅಭಿವೃದ್ಧಿಯನ್ನು ಖಚಿತಪಡಿಸುವುದು ಸರ್ಕಾರದ ಸಂಕಲ್ಪವಾಗಿದೆ. ಗ್ರಾಮದ ಅಭಿವೃದ್ಧಿಗೆ ಸಂಬಂಧಿಸಿದ ಪ್ರತಿಯೊಂದು ಯೋಜನೆಗಳ ಅನುಷ್ಠಾನದಲ್ಲಿ ಪಂಚಾಯತ್ ಹೆಚ್ಚಿನ ಪಾತ್ರ ವಹಿಸಲಿದೆ ಎಂಬುದನ್ನು  ಖಚಿತಪಡಿಸಿಕೊಳ್ಳಲು ಸರ್ಕಾರ ಪ್ರಯತ್ನಿಸುತ್ತಿದೆ. ಇದರೊಂದಿಗೆ ಪಂಚಾಯತ್ ವ್ಯವಸ್ಥೆಯು ರಾಷ್ಟ್ರೀಯ ನಿರ್ಣಯಗಳ ಸಾಧನೆಗೆ ಪ್ರಮುಖ ಕೊಂಡಿಯಾಗಿ ಹೊರಹೊಮ್ಮಲಿದೆ.

ಸ್ನೇಹಿತರೆ,
ಪಂಚಾಯತ್‌ಗಳಿಗೆ ಹೆಚ್ಚಿನ ಅಧಿಕಾರ ನೀಡುವ ಗುರಿಯು ಪಂಚಾಯತ್‌ಗಳನ್ನು ನಿಜವಾದ ಅರ್ಥದಲ್ಲಿ ಸಬಲೀಕರಣದ ಕೇಂದ್ರವನ್ನಾಗಿ ಮಾಡುವುದಾಗಿದೆ. ಪಂಚಾಯಿತಿಗಳ ಹೆಚ್ಚುತ್ತಿರುವ ಅಧಿಕಾರ ಮತ್ತು ಪಂಚಾಯಿತಿಗಳಿಗೆ ಸಿಗುವ ಮೊತ್ತವು ಗ್ರಾಮಗಳ ಅಭಿವೃದ್ಧಿಗೆ ಹೊಸ ಉತ್ತೇಜನ ನೀಡುತ್ತದೆ ಎಂದು ಖಚಿತಪಡಿಸಿಕೊಳ್ಳಲಾಗುತ್ತಿದೆ. ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಸಹೋದರಿಯರ ಭಾಗವಹಿಸುವಿಕೆಯನ್ನು ಹೆಚ್ಚಿಸಲು ನಮ್ಮ ಸರ್ಕಾರವು ಹೆಚ್ಚಿನ ಒತ್ತು ನೀಡುತ್ತಿದೆ.
ಭಾರತದ ಸಹೋದರಿಯರು ಮತ್ತು ಹೆಣ್ಣುಮಕ್ಕಳ ಸಾಮರ್ಥ್ಯ ಎಂಥದ್ದು ಎಂಬುದನ್ನು ಕೊರೊನಾ ಅವಧಿಯಲ್ಲಿ ಭಾರತವು ಇಡೀ  ಜಗತ್ತಿಗೆ ತೋರಿಸಿದೆ ಮತ್ತು ಕಲಿಸಿದೆ! ನಮ್ಮ ಹೆಣ್ಣು ಮಕ್ಕಳು, ನಮ್ಮ ತಾಯಂದಿರು ಮತ್ತು ಸಹೋದರಿಯರು ಪ್ರತಿ ಸಣ್ಣ ಕೆಲಸ ಮಾಡುವ ಮೂಲಕ ಕೊರೊನಾ ವಿರುದ್ಧದ ಹೋರಾಟವನ್ನು ಬಲಪಡಿಸಿದ್ದಾರೆ. ಆಶಾ, ಅಂಗನವಾಡಿ ಕಾರ್ಯಕರ್ತೆಯರು ರೋಗ ಪತ್ತೆಯಿಂದ ಹಿಡಿದು ಲಸಿಕೆ ಹಾಕುವವರೆಗೆ ಎಲ್ಲ ಕಾರ್ಯಗಳನ್ನು ಮಾಡಿ ಯಶಸ್ವಿಯಾಗಿದ್ದಾರೆ.


ಗ್ರಾಮಗಳ ಆರೋಗ್ಯ ಮತ್ತು ಪೋಷಣೆ ಜಾಲವು ಮಹಿಳಾ ಶಕ್ತಿಯಿಂದ ತನ್ನ ಶಕ್ತಿಯನ್ನು ಪಡೆಯುತ್ತಿದೆ. ಮಹಿಳಾ ಸ್ವ-ಸಹಾಯ ಗುಂಪುಗಳು ಹಳ್ಳಿಗಳಲ್ಲಿ ಜೀವನೋಪಾಯ ಮತ್ತು ಸಾರ್ವಜನಿಕ ಜಾಗೃತಿಯ ಹೊಸ ಆಯಾಮಗಳನ್ನು ಸೃಷ್ಟಿಸುತ್ತಿವೆ. ನೀರು ಸಂಬಂಧಿತ ವ್ಯವಸ್ಥೆಗಳು - ಹರ್ ಘರ್ ಜಲ್ ಅಭಿಯಾನದಲ್ಲಿ ನಿಗದಿಪಡಿಸಿದಂತೆ ಮಹಿಳೆಯರ ಭಾಗವಹಿಸುವಿಕೆಯನ್ನು ಖಾತ್ರಿಪಡಿಸುವ ಕಾರ್ಯವನ್ನು ಪ್ರತಿ ಪಂಚಾಯತ್ ತ್ವರಿತಗೊಳಿಸಬೇಕು.

ಇದುವರೆಗೆ ದೇಶದಾದ್ಯಂತ 3 ಲಕ್ಷ ಜಲ ಸಮಿತಿಗಳನ್ನು ರಚಿಸಲಾಗಿದೆ ಎಂಬ ವಿಷಯ ನನಗೆ ತಿಳಿದುಬಂದಿದೆ. ಈ ಸಮಿತಿಗಳಲ್ಲಿ ಶೇ.50ರಷ್ಟು ಮಹಿಳೆಯರು ಕಡ್ಡಾಯವಾಗಿ ಇರಬೇಕು, ಅದರಲ್ಲಿ ಶೇ.25ರ ವರೆಗೆ ಸಮಾಜದ ದುರ್ಬಲ ವರ್ಗದವರು ಇರಬೇಕು. ಈಗ ಕೊಳವೆ ನೀರು ಸರಬರಾಜಿನಿಂದ ಹಳ್ಳಿಗಳನ್ನು ತಲುಪುವುದು ಸಾಧ್ಯವಾಗುತ್ತಿದೆ. ಆದರೆ ಅದೇ ಸಮಯದಲ್ಲಿ, ಅದರ ಶುದ್ಧತೆ ಮತ್ತು ನಿರಂತರ ಪೂರೈಕೆ ಖಚಿತಪಡಿಸಿಕೊಳ್ಳಲು ಮಹಿಳೆಯರಿಗೆ ತರಬೇತಿ ನೀಡುವ ಕೆಲಸವೂ ದೇಶಾದ್ಯಂತ ನಡೆಯುತ್ತಿದೆ; ಆದರೆ ನಾನು ಅದನ್ನು ಇನ್ನಷ್ಟು ವೇಗಗೊಳಿಸಲು ಬಯಸುತ್ತೇನೆ. ಇದುವರೆಗೆ ದೇಶಾದ್ಯಂತ 7 ಲಕ್ಷಕ್ಕೂ ಹೆಚ್ಚು ಸಹೋದರಿಯರು ಮತ್ತು ಹೆಣ್ಣು ಮಕ್ಕಳಿಗೆ ತರಬೇತಿ ನೀಡಲಾಗಿದೆ. ಆದರೆ ನಾನು ಇದರ ಪ್ರಮಾಣ ಮತ್ತು ವೇಗವನ್ನು ಹೆಚ್ಚಿಸಬೇಕಿದೆ. ಇಂದು, ಈ ವ್ಯವಸ್ಥೆಯನ್ನು ಸವಲತ್ತು ವಂಚಿತ ಸ್ಥಳಗಳಲ್ಲಿ ಶೀಘ್ರವಾಗಿ ಜಾರಿಗೆ ತರುವಂತೆ ನಾನು ದೇಶಾದ್ಯಂತ ಪಂಚಾಯತ್‌ಗಳನ್ನು ಒತ್ತಾಯಿಸುತ್ತೇನೆ.

ನಾನು ದೀರ್ಘ ಕಾಲದವರೆಗೆ ಗುಜರಾತ್ ಮುಖ್ಯಮಂತ್ರಿಯಾಗಿದ್ದೆ. ನಾನು ಗುಜರಾತ್‌ ಮಹಿಳೆಯರ ಕೈಗೆ ನೀರಿಗೆ ಸಂಬಂಧಿಸಿದ ಯಾವುದೇ ಜವಾಬ್ದಾರಿ ವಹಿಸಿದಾಗಲೆಲ್ಲಾ ಅವರು ಹಳ್ಳಿಗಳಲ್ಲಿ ಶ್ಲಾಘನೀಯ ಕೆಲಸ ಮಾಡಿದ್ದಾರೆ. ಏಕೆಂದರೆ ನೀರಿನ ಕೊರತೆ ಎಂದರೆ ಏನು ಎಂಬುದು ಅವರಿಗೆ ಚೆನ್ನಾಗಿ ತಿಳಿದಿದೆ. ಆ ಮಹಿಳೆಯರು ಅದನ್ನು ಚೆನ್ನಾಗಿ ಅರ್ಥ ಮಾಡಿಕೊಂಡರು ಮತ್ತು ಬಹಳ ಸೂಕ್ಷ್ಮತೆಯಿಂದ ಜವಾಬ್ದಾರಿಯುತವಾಗಿ ವರ್ತಿಸಿದರು. ಅದಕ್ಕಾಗಿಯೇ ಅವರ ಅನುಭವದ ಆಧಾರದ ಮೇಲೆ ನಾನು ಹೇಳಲು ಬಯಸುತ್ತೇನೆ, ನನ್ನ ದೇಶದ ಈ ಪಂಚಾಯತ್‌ಗಳು ನೀರು ಸಂಬಂಧಿತ ಕೆಲಸಗಳಿಗೆ ಮಹಿಳೆಯರನ್ನು ಹೆಚ್ಚಾಗಿ ತೊಡಗಿಸಿಕೊಂಡರೆ, ಅವರು ಹೆಚ್ಚಿನ ಮಹಿಳೆಯರಿಗೆ ತರಬೇತಿ ನೀಡುತ್ತಾರೆ, ಅವರು ಮಹಿಳೆಯರನ್ನು ಹೆಚ್ಚು ನಂಬುತ್ತಾರೆ, ಫಲಿತಾಂಶವು ವೇಗವಾಗಿರುತ್ತದೆ,  ಉತ್ತಮವಾಗಿರುತ್ತದೆ. ನಮ್ಮ ತಾಯಂದಿರು ಮತ್ತು ಸಹೋದರಿಯರ ಶಕ್ತಿಯನ್ನು ನಂಬಿರಿ. ನಾವು ಗ್ರಾಮದಲ್ಲಿ ಪ್ರತಿ ಹಂತದಲ್ಲೂ ಮಹಿಳೆಯರ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸಬೇಕು ಮತ್ತು ಹೆಚ್ಚಿಸಬೇಕು.


ಸಹೋದರ ಸಹೋದರಿಯರೆ,
ಭಾರತದ ಗ್ರಾಮ ಪಂಚಾಯತ್‌ಗಳು ಸ್ಥಳೀಯ ಮಾದರಿಯ ಹಣ ಮತ್ತು ಆದಾಯ ಹೊಂದಿರಬೇಕು. ಪಂಚಾಯತ್‌ ಸಂಪನ್ಮೂಲಗಳನ್ನು ವಾಣಿಜ್ಯವಾಗಿ ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ನೋಡಲು ಪ್ರಯತ್ನಿಸಿ? ತ್ಯಾಜ್ಯದಿಂದ ಸಂಪತ್ತು(ವೇಸ್ಟ್ ಟು ವೆಲ್ತ್), ಗೋಬರ್ಧನ್ ಯೋಜನೆ ಅಥವಾ ನೈಸರ್ಗಿಕ ಕೃಷಿ ಯೋಜನೆಗಳು ಸಂಪನ್ಮೂಲ ಸೃಷ್ಟಿಯ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. ಆದ್ದರಿಂದ, ಹೊಸ ಸಂಪನ್ಮೂಲಗಳನ್ನು ಸೃಜಿಸಬಹುದು. ಜೈವಿಕ ಅನಿಲ, ಜೈವಿಕ-ಸಿಎನ್‌ಜಿ ಅಥವಾ ಸಾವಯವ ಗೊಬ್ಬರಕ್ಕಾಗಿ ಸಣ್ಣ ಸಸ್ಯಗಳನ್ನು ಸಹ ಬೆಳೆಸಬಹುದು. ಇದರಿಂದ ಗ್ರಾಮದ ಆದಾಯವನ್ನೂ ಹೆಚ್ಚಿಸಬಹುದು. ಆದ್ದರಿಂದ, ತ್ಯಾಜ್ಯದ ಉತ್ತಮ ನಿರ್ವಹಣೆಯ ಅಗತ್ಯವಿದೆ.
ಇಂದು, ನಾನು ಗ್ರಾಮದ ಜನರು, ಪಂಚಾಯತ್‌ನ ಜನರು ಇತರ ಎನ್‌ಜಿಒಗಳು ಮತ್ತು ಸಂಸ್ಥೆಗಳಿಗೆ ಸಹಕಾರ ನೀಡುವ ಮೂಲಕ ಹೊಸ ಸಂಪನ್ಮೂಲಗಳನ್ನು ಅಭಿವೃದ್ಧಿಪಡಿಸಲು ಕಾರ್ಯತಂತ್ರ ರೂಪಿಸುವಂತೆ ಒತ್ತಾಯಿಸುತ್ತೇನೆ. ಇದಲ್ಲದೆ, ಇಂದು ನಮ್ಮ ದೇಶದ ಹೆಚ್ಚಿನ ರಾಜ್ಯಗಳಲ್ಲಿ ಶೇಕಡ 50ರಷ್ಟು ಪ್ರತಿನಿಧಿಗಳು ಮಹಿಳೆಯರಿದ್ದಾರೆ. ಕೆಲವು ರಾಜ್ಯಗಳಲ್ಲಿ ಇದು ಶೇ.33ಕ್ಕಿಂತ ಹೆಚ್ಚಿದೆ. ನಾನು ವಿಶೇಷ ವಿನಂತಿ ಮಾಡಲು ಬಯಸುತ್ತೇನೆ, ಅದೇನೆಂದರೆ ನಿಮ್ಮ ಮನೆಯ ಹಸಿ ಮತ್ತು ಒಣ ತ್ಯಾಜ್ಯವನ್ನು ಮನೆಯಲ್ಲೇ ಬೇರ್ಪಡಿಸಲು ಪ್ರಯತ್ನಿಸಿ. ಈ ಅಭ್ಯಾಸವನ್ನು ರೂಢಿಸಿಕೊಂಡರೆ, ಮನೆಯ ತ್ಯಾಜ್ಯವು ನಿಮಗೆ ಚಿನ್ನವಾಗುತ್ತದೆ. ನಾನು ಈ ಅಭಿಯಾನವನ್ನು ಗ್ರಾಮ ಮಟ್ಟದಲ್ಲಿ ನಡೆಸಲು ಬಯಸುತ್ತೇನೆ. ಇಂದು ದೇಶಾದ್ಯಂತ ಇರುವ ಪಂಚಾಯತ್‌ಗಳ ಜನರು ನನ್ನೊಂದಿಗೆ ಸೇರಬೇಕೆಂದು ನಾನು ಮನವಿ ಮಾಡುತ್ತೇನೆ.

ಸ್ನೇಹಿತರು,

ನಮ್ಮ ಕೃಷಿಗೆ ನೀರು ನೇರ ಸಂಬಂಧ ಹೊಂದಿದೆ. ನಮ್ಮ ನೀರಿನ ಗುಣಮಟ್ಟಕ್ಕೂ, ಕೃಷಿಗೂ ಸಂಬಂಧವಿದೆ. ನಾವು ಹೊಲಗಳಲ್ಲಿ ಹಾಕುತ್ತಿರುವ ರಾಸಾಯನಿಕಗಳು ನಮ್ಮ ಭೂಮಿ ತಾಯಿಯ ಆರೋಗ್ಯ ಹಾಳು ಮಾಡುತ್ತಿವೆ, ನಮ್ಮ ಮಣ್ಣಿಗೆ ಹಾನಿಯಾಗುತ್ತಿದೆ. ಮಳೆಯ ನೀರು ಭೂಮಿಯ ಕೆಳಕ್ಕೆ ಹರಿದಾಗ, ಅದು ರಾಸಾಯನಿಕಗಳನ್ನು ಮತ್ತಷ್ಟು ಕೆಳಕ್ಕೆ ಒಯ್ಯುತ್ತದೆ. ನಾವು, ನಮ್ಮ ಪ್ರಾಣಿಗಳು, ನಮ್ಮ ಮಕ್ಕಳು ಅದೇ ನೀರನ್ನು ಕುಡಿಯುತ್ತೇವೆ. ನಾವು ನಮ್ಮ ದೇಹದಲ್ಲಿ ರೋಗಗಳ ಬೇರುಗಳನ್ನು ನೆಡುತ್ತಿದ್ದೇವೆ. ಆದ್ದರಿಂದ, ನಾವು ನಮ್ಮ ಭೂಮಿಯನ್ನು ರಾಸಾಯನಿಕಗಳು ಮತ್ತು ರಾಸಾಯನಿಕ ಗೊಬ್ಬರಗಳಿಂದ ಮುಕ್ತಗೊಳಿಸಬೇಕು. ಆದ್ದರಿಂದ ನಮ್ಮ ಹಳ್ಳಿಗಳು ಮತ್ತು ನಮ್ಮ ರೈತರು ನೈಸರ್ಗಿಕ ಕೃಷಿಯತ್ತ ಸಾಗಿದರೆ, ಇಡೀ ಮಾನವ ಕುಲಕ್ಕೆ ಲಾಭವಾಗುತ್ತದೆ. ಗ್ರಾಮ ಪಂಚಾಯತ್ ಮಟ್ಟದಲ್ಲಿ ನಾವು ಸಾವಯವ ಕೃಷಿಯನ್ನು ಹೇಗೆ ಪ್ರೋತ್ಸಾಹಿಸಬಹುದು? ಅದಕ್ಕಾಗಿ ಸಂಘಟಿತ ಪ್ರಯತ್ನಗಳ ಅಗತ್ಯವಿದೆ.


ಸಹೋದರ ಸಹೋದರಿಯರೆ,
ಸಾವಯವ ಕೃಷಿಯಿಂದ ನಮ್ಮ ಸಣ್ಣ ರೈತರು ಹೆಚ್ಚು ಪ್ರಯೋಜನ ಪಡೆಯಲಿದ್ದಾರೆ. ಅವರ ಜನಸಂಖ್ಯೆಯು ದೇಶದಲ್ಲಿ ಶೇಕಡ 80ಕ್ಕಿಂತ ಹೆಚ್ಚಿದೆ. ಕಡಿಮೆ ಉತ್ಪಾದನಾ ವೆಚ್ಚದಲ್ಲಿ ಹೆಚ್ಚು ಲಾಭ ಬಂದಾಗ ಸಣ್ಣ ರೈತರಿಗೆ ಹೆಚ್ಚಿನ ಪ್ರೋತ್ಸಾಹ ಸಿಗುತ್ತದೆ. ಕಳೆದ ಕೆಲವು ವರ್ಷಗಳಲ್ಲಿ ಈ ಸಣ್ಣ ರೈತರು ಕೇಂದ್ರ ಸರ್ಕಾರದ ನೀತಿಗಳಿಂದ ಹೆಚ್ಚು ಲಾಭ ಪಡೆದಿದ್ದಾರೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯಿಂದ ಸಾವಿರಾರು ಕೋಟಿ ರೂಪಾಯಿ ಸಣ್ಣ ರೈತರಿಗೆ ಲಾಭವಾಗುತ್ತಿದೆ. ಕಿಸಾನ್ ರೈಲ್ ಮೂಲಕ, ಸಣ್ಣ ರೈತರ ಹಣ್ಣುಗಳು ಮತ್ತು ತರಕಾರಿಗಳು ಕಡಿಮೆ ಬೆಲೆಗೆ ದೇಶದ ಪ್ರಮುಖ ಮಾರುಕಟ್ಟೆಗಳನ್ನು ತಲುಪುತ್ತಿವೆ. ಎಫ್ ಪಿಒ ಅಂದರೆ ರೈತ ಉತ್ಪಾದಕರ ಸಂಘದ ರಚನೆಯು ಸಣ್ಣ ರೈತರ ಶಕ್ತಿಯನ್ನು ಹೆಚ್ಚಿಸುತ್ತಿದೆ. ಈ ವರ್ಷ, ಭಾರತವು ದಾಖಲೆಯ ಹಣ್ಣುಗಳು ಮತ್ತು ತರಕಾರಿಗಳನ್ನು ವಿದೇಶಗಳಿಗೆ ರಫ್ತು ಮಾಡಿದೆ. ಇದರಿಂದ ದೇಶದ ಸಣ್ಣ ರೈತರು ಸಾಕಷ್ಟು ಪ್ರಯೋಜನ ಪಡೆಯುತ್ತಿದ್ದಾರೆ.

ಸ್ನೇಹಿತರೆ,
ಪ್ರತಿಯೊಬ್ಬರ ಸಹಭಾಗಿತ್ವದಲ್ಲಿ ಗ್ರಾಮ ಪಂಚಾಯತ್ ಗಳು ಇನ್ನೂ ಒಂದು ಕೆಲಸವನ್ನು ಮಾಡಬೇಕು. ದೇಶವನ್ನು ಅಪೌಷ್ಟಿಕತೆ ಮತ್ತು ರಕ್ತಹೀನತೆಯಿಂದ ಪಾರು ಮಾಡಲು ಕೇಂದ್ರ ಸರ್ಕಾರ ಕೈಗೊಂಡಿರುವ ಉಪಕ್ರಮಗಳ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು. ಈಗ ಸರ್ಕಾರವು ವಿವಿಧ ಯೋಜನೆಗಳಡಿ ನೀಡುವ ಅಕ್ಕಿಯನ್ನು ಸಹ ಸಾರವರ್ಧಿತಗೊಳಿಸಲಾಗುತ್ತಿದೆ ಮತ್ತು ಪೌಷ್ಟಿಕಾಂಶದಿಂದ ಸಮೃದ್ಧಗೊಳಿಸಲಾಗುತ್ತಿದೆ. ಈ ಸಾರವರ್ಧಿತ ಅಕ್ಕಿ ಆರೋಗ್ಯಕ್ಕೆ ಎಷ್ಟು ಮುಖ್ಯ ಎಂಬುದರ ಬಗ್ಗೆ ಜಾಗೃತಿ ಮೂಡಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ‘ಆಜಾದಿ ಕಾ ಅಮೃತ್ ಮಹೋತ್ಸವ’ದಲ್ಲಿ ನಾವು ನಮ್ಮ ಸಹೋದರಿಯರು, ಮಗಳು, ಮಕ್ಕಳನ್ನು ಅಪೌಷ್ಟಿಕತೆ ಮತ್ತು ರಕ್ತಹೀನತೆಯಿಂದ ಮುಕ್ತಗೊಳಿಸಲು ಪ್ರತಿಜ್ಞೆ ಮಾಡಬೇಕು. ನಾವು ಬಯಸಿದ ಫಲಿತಾಂಶವನ್ನು ಪಡೆಯುವವರೆಗೆ ಈ ಮಾನವೀಯ ಕಾರ್ಯವನ್ನು ಸಾಧಿಸುವವರೆಗೆ ಬಿಡಬಾರದು. ನಾವು ಕಾರ್ಯವನ್ನು ಮುಂದುವರಿಸಬೇಕು. ನಮ್ಮ ಭೂಮಿಯಿಂದ ಅಪೌಷ್ಟಿಕತೆಯನ್ನು ತೊಡೆದುಹಾಕಬೇಕು.
 ವೋಕಲ್ ಫಾರ್ ಲೋಕಲ್ ಎಂಬ ಮಂತ್ರದಲ್ಲಿ ಭಾರತದ ಅಭಿವೃದ್ಧಿ ಅಡಗಿದೆ. ಭಾರತದಲ್ಲಿ ಪ್ರಜಾಪ್ರಭುತ್ವದ ಅಭಿವೃದ್ಧಿಗೆ ಸ್ಥಳೀಯ ಆಡಳಿತವು ಪ್ರೇರಕಶಕ್ತಿಯಾಗಿದೆ. ನಿಮ್ಮ ಕೆಲಸದ ವ್ಯಾಪ್ತಿಯು ಸ್ಥಳೀಯವಾಗಿರಬಹುದು, ಆದರೆ ಅದರ ಸಾಮೂಹಿಕ ಪ್ರಭಾವವು ಜಾಗತಿಕವಾಗಿರುತ್ತದೆ. ಸ್ಥಳೀಯರ ಈ ಶಕ್ತಿಯನ್ನು ನಾವು ಗುರುತಿಸಬೇಕು. ಇಂದಿನ ಪಂಚಾಯತ್ ರಾಜ್ ದಿನದಂದು ನನ್ನ ಹಾರೈಕೆ ಏನೆಂದರೆ - ನಿಮ್ಮ ಪಂಚಾಯತ್‌ನಲ್ಲಿ ನೀವು ಮಾಡುವ ಪ್ರತಿಯೊಂದು ಕೆಲಸದಿಂದ ದೇಶದ ಚಿತ್ರಣವನ್ನು ಇನ್ನಷ್ಟು ಬದಲಿಸಬೇಕು, ದೇಶದ ಹಳ್ಳಿಗಳು ಹೆಚ್ಚು ಸಶಕ್ತಗೊಳ್ಳಬೇಕು.
ಮತ್ತೊಮ್ಮೆ, ನಾನು ಜಮ್ಮು-ಕಾಶ್ಮೀರದ ಅಭಿವೃದ್ಧಿ ಯೋಜನೆಗಳಿಗಾಗಿ ಅಭಿನಂದಿಸುತ್ತೇನೆ. ಪಂಚಾಯಿತ್ ಆಗಲಿ, ಸಂಸತ್ತೇ ಆಗಲಿ ಯಾವ ಕೆಲಸವೂ ಚಿಕ್ಕದಲ್ಲ ಎಂದು ದೇಶಾದ್ಯಂತ ಚುನಾಯಿತರಾದ ಲಕ್ಷಾಂತರ ಜನಪ್ರತಿನಿಧಿಗಳಿಗೆ ಹೇಳಲು ಬಯಸುತ್ತೇನೆ. ಪಂಚಾಯತ್ ನಲ್ಲಿ ಕೆಲಸ ಮಾಡುವ ಮೂಲಕ ನನ್ನ ದೇಶವನ್ನು ಮುಂದೆ ಕೊಂಡೊಯ್ಯುತ್ತೇನೆ ಎಂಬ ಸಂಕಲ್ಪದೊಂದಿಗೆ ನೀವು ಮುನ್ನಡೆದರೆ, ದೇಶವು ಕ್ಷಣ ಮಾತ್ರದಲ್ಲಿ ಪ್ರಗತಿ ಹೊಂದುತ್ತದೆ. ಇಂದು ನಾನು ಪಂಚಾಯತ್ ಮಟ್ಟದಲ್ಲಿ ಚುನಾಯಿತ ಪ್ರತಿನಿಧಿಗಳ ಉತ್ಸಾಹ, ಚೈತನ್ಯ ಮತ್ತು ಸಂಕಲ್ಪವನ್ನು ನೋಡುತ್ತಿದ್ದೇನೆ. ನಮ್ಮ ಪಂಚಾಯತ್ ರಾಜ್ ವ್ಯವಸ್ಥೆಯು ಭಾರತವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಪ್ರಬಲ ಸಾಧನವಾಗಲಿದೆ ಎಂಬುದು ನನಗೆ ಖಾತ್ರಿಯಿದೆ. ಆ ನಿರೀಕ್ಷೆಯೊಂದಿಗೆ, ನಾನು ನಿಮಗೆ ಶುಭ ಹಾರೈಸುತ್ತೇನೆ. ತುಂಬು ಧನ್ಯವಾದಗಳು.

ನನ್ನೊಂದಿಗೆ ಎರಡೂ ಕೈಗಳನ್ನು ಮೇಲೆತ್ತಿ ಜೋರಾಗಿ ಹೇಳಿ -
ಭಾರತ್ ಮಾತಾ ಕೀ ಜೈ!
 ಭಾರತ್ ಮಾತಾ ಕೀ ಜೈ!
ತುಂಬು ಧನ್ಯವಾದಗಳು!!

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Mutual fund industry on a high, asset surges Rs 17 trillion in 2024

Media Coverage

Mutual fund industry on a high, asset surges Rs 17 trillion in 2024
NM on the go

Nm on the go

Always be the first to hear from the PM. Get the App Now!
...
PM to participate in Veer Baal Diwas programme on 26 December in New Delhi
December 25, 2024
PM to launch ‘Suposhit Gram Panchayat Abhiyan’

Prime Minister Shri Narendra Modi will participate in Veer Baal Diwas, a nationwide celebration honouring children as the foundation of India’s future, on 26 December 2024 at around 12 Noon at Bharat Mandapam, New Delhi. He will also address the gathering on the occasion.

Prime Minister will launch ‘Suposhit Gram Panchayat Abhiyan’. It aims at improving the nutritional outcomes and well-being by strengthening implementation of nutrition related services and by ensuring active community participation.

Various initiatives will also be run across the nation to engage young minds, promote awareness about the significance of the day, and foster a culture of courage and dedication to the nation. A series of online competitions, including interactive quizzes, will be organized through the MyGov and MyBharat Portals. Interesting activities like storytelling, creative writing, poster-making among others will be undertaken in schools, Child Care Institutions and Anganwadi centres.

Awardees of Pradhan Mantri Rashtriya Bal Puraskar (PMRBP) will also be present during the programme.