ನಮಸ್ಕಾರ!
ಹಿಮಾಚಲ ದಿನದಂದು ದೇವಭೂಮಿಯ ಎಲ್ಲಾ ಜನರಿಗೆ ಹೃತ್ಪೂರ್ವಕ ಶುಭಾಶಯಗಳು!
ದೇಶ ಸ್ವಾತಂತ್ರ್ಯ ಗಳಿಸಿದ 75ನೇ ವರ್ಷದ ಅಮೃತ ಮಹೋತ್ಸವ ಆಚರಣೆ ಸುಸಂದರ್ಭದಲ್ಲೇ ಹಿಮಾಚಲ ಪ್ರದೇಶವು ತನ್ನ 75ನೇ ಸಂಸ್ಥಾಪನಾ ದಿನ ಆಚರಿಸುತ್ತಿರುವುದು ಎಂತಹ ಅದ್ಭುತ ಕಾಕತಾಳೀಯ! 'ಆಜಾದಿ ಕಾ ಅಮೃತ್ ಮಹೋತ್ಸವ'ದಲ್ಲಿ, ಅಭಿವೃದ್ಧಿಯ ಅಮೃತವು ಹಿಮಾಚಲ ಪ್ರದೇಶದ ಪ್ರತಿಯೊಬ್ಬ ವ್ಯಕ್ತಿಯನ್ನು ತಲುಪುವುದನ್ನು ಖಚಿತಪಡಿಸಿಕೊಳ್ಳಲು ನಮ್ಮ ಎಲ್ಲಾ ಪ್ರಯತ್ನಗಳು ಸಾಗಿವೆ.
ದಿವಂಗತ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜೀ ಅವರು ಹಿಮಾಚಲ ಪ್ರದೇಶದ ನೈಸರ್ಗಿಕ ಸೌಂದರ್ಯ ಕುರಿತು ಒಮ್ಮೆ ಹೀಗೆ ಬರೆದಿದ್ದರು-
ಹಿಮದಿಂದ ಆವೃತವಾದ ಪರ್ವತಗಳು,
ನದಿಗಳು, ಜಲಪಾತಗಳು, ತೊರೆಗಳು, ಕಾಡುಗಳು,
ಕಿನ್ನರಿಯರ ನೆಲೆವೀಡು,
ಕ್ಷಣ ಕ್ಷಣವೂ ದೇವರುಗಳು ನಡೆದಾಡುವ ನಾಡು!
बर्फ ढंकी पर्वतमालाएं,
नदियां, झरने, जंगल,
किन्नरियों का देश,
देवता डोलें पल-पल !
ಅದೃಷ್ಟವಶಾತ್, ಪ್ರಕೃತಿಯ ಅತ್ಯಮೂಲ್ಯ ಕೊಡುಗೆಗಳು, ಮಾನವ ಸಾಮರ್ಥ್ಯದ ಅಭಿವ್ಯಕ್ತಿ ಮತ್ತು ದುರ್ಗಮವಾದ ಗುಡ್ಡಗಾಡು ಪ್ರದೇಶಗಳನ್ನು ಪಳಗಿಸಿ ತಮ್ಮದೇ ಆದ ಅದೃಷ್ಟ ಕಟ್ಟಿಕೊಳ್ಳಬೇಕಾದ ಹಿಮಾಚಲ ಪ್ರದೇಶದ ಕಠಿಣ ಪರಿಶ್ರಮ ಮತ್ತು ಶ್ರದ್ಧೆಯುಳ್ಳ ಜನರ ನಡುವೆ ಬದುಕುವ ಅವಕಾಶ ನನಗೂ ಸಿಕ್ಕಿದೆ.
ಸ್ನೇಹಿತರೆ,
1948ರಲ್ಲಿ ಹಿಮಾಚಲ ಪ್ರದೇಶ ರಚನೆಯಾದಾಗ, ಅದು ಕಠಿಣ ಸವಾಲುಗಳನ್ನು ಎದುರಿಸುತ್ತಿತ್ತು. ಸಣ್ಣ ಪರ್ವತ ಪ್ರದೇಶವಾಗಿರುವುದರಿಂದ, ಕಠಿಣ ಪರಿಸ್ಥಿತಿಗಳು ಮತ್ತು ದುರ್ಗಮ ಭೂಪ್ರದೇಶದಲ್ಲಿ ಸಾಧ್ಯತೆ ಮತ್ತು ಅವಕಾಶಗಳಿಗಿಂತ ಹೆಚ್ಚಿನ ಸವಾಲುಗಳು ಇದ್ದವು. ಆದರೆ ಹಿಮಾಚಲ ಪ್ರದೇಶದ ಶ್ರದ್ಧೆ, ಪ್ರಾಮಾಣಿಕ ಮತ್ತು ಶ್ರಮಜೀವಿಗಳು ಈ ಸವಾಲನ್ನು ಅವಕಾಶಗಳಾಗಿ ಪರಿವರ್ತಿಸಿದ್ದರು. ತೋಟಗಾರಿಕೆ, ಹೆಚ್ಚುವರಿ ವಿದ್ಯುತ್, ಸಾಕ್ಷರತೆ ದರ, ಗ್ರಾಮೀಣ ರಸ್ತೆ ಜಾಲ, ಮನೆ ಮನೆಗೆ ನೀರು ಮತ್ತು ವಿದ್ಯುತ್ ಸೌಲಭ್ಯಗಳಂತಹ ಹಲವು ನಿಯತಾಂಕಗಳು ಈ ಗುಡ್ಡಗಾಡು ರಾಜ್ಯದ ಪ್ರಗತಿಯನ್ನು ತೋರಿಸುತ್ತಿವೆ.
ಕಳೆದ 7-8 ವರ್ಷಗಳಿಂದ ಹಿಮಾಚಲ ಪ್ರದೇಶದ ಸ್ಥಿತಿಗತಿ, ಅಲ್ಲಿನ ಸೌಲಭ್ಯಗಳನ್ನು ಉತ್ತಮಪಡಿಸಲು ಕೇಂದ್ರ ಸರ್ಕಾರವು ಇನ್ನಿಲ್ಲದ ಪ್ರಯತ್ನಗಳನ್ನು ನಡೆಸುತ್ತಿದೆ. ನಮ್ಮ ಯುವ ಸಹೋದ್ಯೋಗಿ, ಹಿಮಾಚಲ ಪ್ರದೇಶದ ಜನಪ್ರಿಯ ಮುಖ್ಯಮಂತ್ರಿ ಜೈರಾಮ್ ಜೀ ಅವರ ನೇತೃತ್ವದಲ್ಲಿ ಡಬಲ್ ಇಂಜಿನ್ ಸರ್ಕಾರವು ಗ್ರಾಮೀಣ ರಸ್ತೆಗಳ ವಿಸ್ತರಣೆ, ಹೆದ್ದಾರಿ ವಿಸ್ತರಣೆ ಮತ್ತು ರೈಲ್ವೆ ಜಾಲ ವಿಸ್ತರಣೆಯ ಉಪಕ್ರಮವನ್ನು ತೆಗೆದುಕೊಂಡಿದೆ. ಅದರ ಫಲಿತಾಂಶಗಳು ಈಗ ಗೋಚರಿಸುತ್ತಿವೆ. ಸಂಪರ್ಕವು ಉತ್ತಮವಾಗುತ್ತಿದ್ದಂತೆ, ಹಿಮಾಚಲದ ಪ್ರವಾಸೋದ್ಯಮವು ಹೊಸ ಪ್ರದೇಶಗಳನ್ನು ಪ್ರವೇಶಿಸುತ್ತಿದೆ. ಪ್ರತಿ ಹೊಸ ಪ್ರದೇಶವು ಪ್ರವಾಸಿಗರಿಗೆ ಪ್ರಕೃತಿ, ಸಂಸ್ಕೃತಿ ಮತ್ತು ಸಾಹಸದ ವಿಷಯದಲ್ಲಿ ಹೊಸ ಅನುಭವಗಳನ್ನು ನೀಡುತ್ತಿದೆ. ಸ್ಥಳೀಯರಿಗೆ ಉದ್ಯೋಗ ಮತ್ತು ಸ್ವಯಂ-ಉದ್ಯೋಗದ ಕೊನೆ ಇಲ್ಲದ ವಿಪುಲ ಸಾಧ್ಯತೆಗಳನ್ನು ತೆರೆಯುತ್ತಿದೆ, ಆರೋಗ್ಯ ಸೌಲಭ್ಯಗಳನ್ನು ಸುಧಾರಿಸಲಾಗುತ್ತಿದೆ ಮತ್ತು ಕೊರೊನಾ ವೈರಸ್ ವಿರುದ್ಧದ ಕ್ಷಿಪ್ರ ಲಸಿಕೆ ನೀಡಿಕೆಯು ಅಭಿಯಾನದ ರೂಪದಲ್ಲಿ ಅದರ ಫಲಿತಾಂಶವನ್ನು ನಾವು ನೋಡಿದ್ದೇವೆ.
ಸ್ನೇಹಿತರೆ,
ನಾವೀಗ ಹಿಮಾಚಲ ಪ್ರದೇಶದ ಸಂಪೂರ್ಣ ಸಾಮರ್ಥ್ಯ ಹೊರತರಲು ತ್ವರಿತ ಗತಿಯಲ್ಲಿ ಕೆಲಸ ಮಾಡಬೇಕಾಗಿದೆ. ಮುಂಬರುವ 25 ವರ್ಷಗಳಲ್ಲಿ ಹಿಮಾಚಲ ಪ್ರದೇಶ ರಚನೆಯಾಗಿ 100 ವರ್ಷಗಳು ಪೂರ್ಣಗೊಳ್ಳುವ ಜತೆಗೆ ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 100 ವರ್ಷಗಳಾಗುವುದನ್ನು ನಾವು ನೋಡುತ್ತೇವೆ. ಇದು ನಮಗೆ ಹೊಸ ಸಂಕಲ್ಪಗಳ "ಅಮೃತ ಕಾಲವಾಗಿದೆ". ಈ ಅವಧಿಯಲ್ಲಿ, ನಾವು ಪ್ರವಾಸೋದ್ಯಮ, ಉನ್ನತ ಶಿಕ್ಷಣ, ಸಂಶೋಧನೆ, ಐಟಿ, ಜೈವಿಕ ತಂತ್ರಜ್ಞಾನ, ಆಹಾರ ಸಂಸ್ಕರಣೆ ಮತ್ತು ನೈಸರ್ಗಿಕ ಕೃಷಿಯಂತಹ ಕ್ಷೇತ್ರಗಳಲ್ಲಿ ಹಿಮಾಚಲವನ್ನು ಮತ್ತಷ್ಟು ಮುಂದಕ್ಕೆ ಕೊಂಡೊಯ್ಯಬೇಕಾಗಿದೆ. ಇದರಿಂದ ಹಿಮಾಚಲ ಪ್ರದೇಶಕ್ಕೂ ಪ್ರಯೋಜನವಾಗುತ್ತದೆ. ಈ ವರ್ಷದ ಬಜೆಟ್‌ನಲ್ಲಿ ಘೋಷಿಸಲಾದ ರೋಮಾಂಚಕ ಗ್ರಾಮ ಯೋಜನೆ ಮತ್ತು ಪರ್ವತ ಮಾಲ ಯೋಜನೆಗಳು ದೂರದ ಗ್ರಾಮಗಳಿಗೆ ಸಂಪರ್ಕ ಹೆಚ್ಚಿಸುತ್ತವೆ, ಪ್ರವಾಸೋದ್ಯಮವನ್ನು ಉತ್ತೇಜಿಸುತ್ತವೆ ಮತ್ತು ಹಿಮಾಚಲ ಪ್ರದೇಶದಲ್ಲಿ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತವೆ. ನಾವು ಹಿಮಾಚಲ ಪ್ರದೇಶದ ಹಚ್ಚ ಹಸಿರನ್ನು ವಿಸ್ತರಿಸಬೇಕು ಮತ್ತು ಕಾಡುಗಳನ್ನು ಶ್ರೀಮಂತಗೊಳಿಸಬೇಕಾಗಿದೆ. ಶೌಚಾಲಯಗಳಿಗೆ ಸಂಬಂಧಿಸಿದಂತೆ ಮಾಡಲಾದ ಕೆಲಸಗಳು ಈಗ ಇತರ ಶುಚಿತ್ವದ ಮಾನದಂಡಗಳನ್ನು ಪ್ರೋತ್ಸಾಹಿಸಬೇಕು. ಇದಕ್ಕಾಗಿ ಸಾರ್ವಜನಿಕ ಸಹಭಾಗಿತ್ವವನ್ನು ಇನ್ನಷ್ಟು ಹೆಚ್ಚಿಸಬೇಕಾಗಿದೆ ಎಂದರು.
ಸ್ನೇಹಿತರೆ,
ಕೇಂದ್ರದ ಕಲ್ಯಾಣ ಯೋಜನೆಗಳನ್ನು ಜೈರಾಮ್ ಜೀ ಅವರ ಸರ್ಕಾರ ಮತ್ತು ಅವರ ಇಡೀ ತಂಡವು ಚೆನ್ನಾಗಿ ಪ್ರಚಾರ ಮಾಡಿದೆ. ವಿಶೇಷವಾಗಿ ಸಾಮಾಜಿಕ ಭದ್ರತೆಯ ವಿಷಯದಲ್ಲಿ ಹಿಮಾಚಲ ಪ್ರದೇಶ ರಾಜ್ಯ ಶ್ಲಾಘನೀಯ ಕೆಲಸ ಮಾಡಿದೆ. ಪ್ರಾಮಾಣಿಕ ನಾಯಕತ್ವ, ಶಾಂತಿ ಪ್ರಿಯ ಪರಿಸರ, ದೇವರು ಮತ್ತು ದೇವತೆಗಳ ಆಶೀರ್ವಾದ ಮತ್ತು ಹಿಮಾಚಲದ ಶ್ರಮಜೀವಿಗಳು; ಇವೆಲ್ಲವೂ ಸರಿಸಾಟಿ ಇಲ್ಲದವಾಗಿವೆ. ಹಿಮಾಚಲ ಪ್ರದೇಶವು ತ್ವರಿತ ಅಭಿವೃದ್ಧಿಗೆ ಬೇಕಾದ ಎಲ್ಲ ಸಂಪನ್ಮೂಲಗಳನ್ನು ಹೊಂದಿದೆ. ಸಮೃದ್ಧ ಮತ್ತು ಬಲಿಷ್ಠ ಭಾರತ ನಿರ್ಮಿಸುವಲ್ಲಿ ಹಿಮಾಚಲ ಪ್ರದೇಶವು ಕೊಡುಗೆ ನೀಡುವುದನ್ನು ಮುಂದುವರಿಸುತ್ತದೆ ಎಂದು ನಾನು ಭಾವಿಸುತ್ತೇನೆ!
ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು!