ನಮಸ್ಕಾರ್!
ಮೇಘಾಲಯ ರಾಜ್ಯೋತ್ಸವ(ರಾಜ್ಯೋದಯ)ದ ಸುವರ್ಣ ಮಹೋತ್ಸವ ಅಂಗವಾಗಿ ಮೇಘಾಲಯದ ಮಹಾಜನತೆಗೆ ಅಭಿನಂದನೆಗಳು! ಇಂದು, ಮೇಘಾಲಯದ ನಿರ್ಮಾಣ ಮತ್ತು ಅಭಿವೃದ್ಧಿಗೆ ಕೊಡುಗೆ ನೀಡಿದ ಪ್ರತಿಯೊಬ್ಬರನ್ನು ನಾನಿಲ್ಲಿ ಶ್ಲಾಘಿಸುತ್ತೇನೆ. 50 ವರ್ಷಗಳ ಹಿಂದೆ ಮೇಘಾಲಯದ ರಾಜ್ಯೋದಯಕ್ಕಾಗಿ ಧ್ವನಿ ಎತ್ತಿದ ಕೆಲವು ಮಹಾನ್ ವ್ಯಕ್ತಿಗಳು ಈ ಸಮಾರಂಭದಲ್ಲಿ ಉಪಸ್ಥಿತರಿದ್ದಾರೆ. ನಾನು ಅವರನ್ನೂ ಅಭಿನಂದಿಸುತ್ತೇನೆ!
ಸ್ನೇಹಿತರೆ,
ಮೇಘಾಲಯಕ್ಕೆ ಹಲವು ಬಾರಿ ಭೇಟಿ ನೀಡುವ ಸೌಭಾಗ್ಯ ನನಗೆ ಸಿಕ್ಕಿದೆ. ನೀವು ನನಗೆ ಪ್ರಧಾನಿಯಾಗಿ ಸೇವೆ ಸಲ್ಲಿಸುವ ಅವಕಾಶವನ್ನು ನೀಡಿದಾಗ ನಾನು ಮೊದಲ ಬಾರಿಗೆ ಈಶಾನ್ಯ ಮಂಡಳಿ ಸಭೆಯಲ್ಲಿ ಭಾಗವಹಿಸಲು ಶಿಲ್ಲಾಂಗ್‌ಗೆ ಬಂದಿದ್ದೆ. ಮೂರು-ನಾಲ್ಕು ದಶಕಗಳ ನಂತರ ಶಿಲ್ಲಾಂಗ್‌ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪ್ರಧಾನಿಯಾಗಿ ಭಾಗವಹಿಸಿದ್ದು ಮರೆಯಲಾಗದ ಅನುಭವವನ್ನು ನನಗೆ ನೀಡಿದೆ. ಮೇಘಾಲಯದ ಜನರು ಕಳೆದ 50 ವರ್ಷಗಳಲ್ಲಿ ಪ್ರಕೃತಿಗೆ ಹತ್ತಿರವಾಗಿರುವ ತಮ್ಮ ಗುರುತನ್ನು ಬಲಪಡಿಸಿದ್ದಾರೆ ಎಂದು ಹೇಳಲು ನನಗೆ ಖುಷಿಯಾಗುತ್ತಿದೆ. ಮೇಘಾಲಯವು ತನ್ನ ಸುಂದರ ಜಲಪಾತಗಳಿಗಾಗಿ, ಸ್ವಚ್ಛ ಮತ್ತು ಪ್ರಶಾಂತ ಪರಿಸರಕ್ಕಾಗಿ ಮತ್ತು ನಿಮ್ಮ ಅನನ್ಯ ಸಂಪ್ರದಾಯ, ಆಚರಣೆಯೊಂದಿಗೆ ಸಂಪರ್ಕ ಸಾಧಿಸಲು ಇಡೀ ದೇಶ ಮತ್ತು ಜಗತ್ತಿಗೆ ಆಕರ್ಷಕ ಸ್ಥಳವಾಗಿದೆ, ಗಮ್ಯ ತಾಣವಾಗಿದೆ.
ಮೇಘಾಲಯವು ಪ್ರಕೃತಿ ಮತ್ತು ಪ್ರಗತಿ, ಸಂರಕ್ಷಣೆ ಮತ್ತು ಪರಿಸರ-ಸುಸ್ಥಿರ ಅಭಿವೃದ್ಧಿಯ ಸಂದೇಶವನ್ನು ಇಡೀ ಜಗತ್ತಿಗೆ ಸಾರಿದೆ. ಇಲ್ಲಿನ ಖಾಸಿ, ಗಾರೋ ಮತ್ತು ಜೈನ್ತಿಯಾ ಸಮುದಾಯದ ನಮ್ಮ ಸಹೋದರ ಸಹೋದರಿಯರು ಇದಕ್ಕಾಗಿ ವಿಶೇಷ ಮೆಚ್ಚುಗೆಗೆ ಅರ್ಹರಾಗಿದ್ದಾರೆ. ಈ ಸಮುದಾಯಗಳು ಪ್ರಕೃತಿಯೊಂದಿಗೆ ಸಾಮರಸ್ಯದ ಜೀವನವನ್ನು ಪ್ರೋತ್ಸಾಹಿಸಿವೆ. ಕಲೆ ಮತ್ತು ಸಂಗೀತವನ್ನು ಶ್ರೀಮಂತಗೊಳಿಸುವಲ್ಲಿ ಗಮನಾರ್ಹ ಕೊಡುಗೆ ನೀಡಿವೆ. ವಿಸ್ಲಿಂಗ್ ವಿಲೇಜ್‌ನ ಸಂಪ್ರದಾಯ, ಅಂದರೆ, ಕಾಂಗ್‌ಥಾಂಗ್ ಗ್ರಾಮವು ಮೂಲ ಬೇರುಗಳಿಗೆ ನಮ್ಮ ಶಾಶ್ವತ ಸಂಪರ್ಕವನ್ನು ಪ್ರೋತ್ಸಾಹಿಸುತ್ತದೆ. ಮೇಘಾಲಯದ ಪ್ರತಿಯೊಂದು ಹಳ್ಳಿಯು ಗಾಯಕರ ಶ್ರೀಮಂತ ಸಂಪ್ರದಾಯವನ್ನು ಹೊಂದಿದೆ.
ಈ ಭೂಮಿ ಪ್ರತಿಭಾವಂತ ಕಲಾವಿದರಿಂದ ತುಂಬಿದೆ. ಶಿಲ್ಲಾಂಗ್ ಗಾಯಕರು ತಂಡವು ಈ ಸಂಪ್ರದಾಯಕ್ಕೆ ಹೊಸ ಗುರುತನ್ನು ಮತ್ತು ಹೊಸ ಎತ್ತರವನ್ನು ನೀಡಿದೆ. ಕಲೆಯ ಜೊತೆಗೆ ಮೇಘಾಲಯದ ಯುವಕರ ಪ್ರತಿಭೆ ಕ್ರೀಡೆಯಲ್ಲೂ ದೇಶದ ಹೆಮ್ಮೆಯನ್ನು ಗಟ್ಟಿಗೊಳಿಸುತ್ತಿದೆ. ಭಾರತವು ಕ್ರೀಡೆಯಲ್ಲಿ ಪ್ರಮುಖ ಶಕ್ತಿಯಾಗುವ ಹಾದಿಯಲ್ಲಿರುವಾಗ, ಮೇಘಾಲಯದ ಶ್ರೀಮಂತ ಕ್ರೀಡಾ ಸಂಸ್ಕೃತಿಯಿಂದ ದೇಶವು ಹೆಚ್ಚಿನ ಭರವಸೆಯನ್ನು ಹೊಂದಿದೆ. ಮೇಘಾಲಯದ ಸಹೋದರಿಯರು ಬಿದಿರು ಮತ್ತು ಕಬ್ಬು ನೇಯುವ ಕಲೆಯನ್ನು ಪುನರುಜ್ಜೀವನಗೊಳಿಸಿದರೆ, ಇಲ್ಲಿನ ಶ್ರಮಜೀವಿಗಳು ಮೇಘಾಲಯವನ್ನು ಸಾವಯವ ರಾಜ್ಯವೆಂದು ಗುರುತಿಸುತ್ತಿದ್ದಾರೆ. ಇಲ್ಲಿನ ಮಸಾಲ ಪದಾರ್ಥಗಳು ಮತ್ತು ಲಕಾಡಾಂಗ್ ಅರಿಶಿನ ಕೃಷಿ ಈಗ ವಿಶ್ವಾದ್ಯಂತ ಪ್ರಸಿದ್ಧವಾಗಿದೆ.
ಸ್ನೇಹಿತರೆ,
ಕಳೆದ 7 ವರ್ಷಗಳಿಂದ ಮೇಘಾಲಯದ ಅಭಿವೃದ್ಧಿ ಪಯಣವನ್ನು ವೇಗಗೊಳಿಸಲು ಕೇಂದ್ರ ಸರ್ಕಾರ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದೆ. ವಿಶೇಷವಾಗಿ ಉತ್ತಮ ರಸ್ತೆ, ರೈಲು ಮತ್ತು ವಿಮಾನ ಸಂಪರ್ಕಕ್ಕೆ ಕೇಂದ್ರ ಸರ್ಕಾರ ಸಂಪೂರ್ಣ ಬದ್ಧವಾಗಿದೆ. ದೇಶ-ವಿದೇಶಗಳಲ್ಲಿ ಸ್ಥಳೀಯ ಸಾವಯವ ಉತ್ಪನ್ನಗಳಿಗೆ ಹೊಸ ಮಾರುಕಟ್ಟೆಯನ್ನು ಖಚಿತಪಡಿಸಿಕೊಳ್ಳಲು ಆದ್ಯತೆಯ ಆಧಾರದ ಮೇಲೆ ಕೆಲಸ ಮಾಡಲಾಗುತ್ತಿದೆ. ಯುವ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಜಿ ಅವರ ನೇತೃತ್ವದಲ್ಲಿ, ಜನಸಾಮಾನ್ಯರಿಗೆ ಕೇಂದ್ರ ಯೋಜನೆಗಳನ್ನು ತ್ವರಿತ ಗತಿಯಲ್ಲಿ ಖಾತ್ರಿಪಡಿಸುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಪ್ರಧಾನಮಂತ್ರಿ ಗ್ರಾಮೀಣ ಸಡಕ್ ಯೋಜನೆ ಮತ್ತು ರಾಷ್ಟ್ರೀಯ ಜೀವನೋಪಾಯ ಮಿಷನ್‌ನಂತಹ ಕಾರ್ಯಕ್ರಮಗಳಿಂದ ಮೇಘಾಲಯವು ಹೆಚ್ಚು ಪ್ರಯೋಜನ ಪಡೆದಿದೆ. ಜಲ ಜೀವನ್ ಮಿಷನ್‌ನಿಂದಾಗಿ ಮೇಘಾಲಯದಲ್ಲಿ ನಲ್ಲಿ ನೀರು ಪಡೆಯುವ ಕುಟುಂಬಗಳ ಸಂಖ್ಯೆ ಶೇಕಡ 33ಕ್ಕೆ ಹೆಚ್ಚಳವಾಗಿದೆ. ಆದರೆ 2-3 ವರ್ಷಗಳ ಹಿಂದೆ 2019ರ ವರೆಗೆ ಇದರ ಪ್ರಮಾಣ ಶೇಕಡ 1ರಷ್ಟು ಮಾತ್ರ ಇತ್ತು. ಸಾರ್ವಜನಿಕ ಸೌಲಭ್ಯಗಳ ವಿತರಣೆಗಾಗಿ ಡ್ರೋನ್ ತಂತ್ರಜ್ಞಾನವನ್ನು ಬೃಹತ್ ಪ್ರಮಾಣದಲ್ಲಿ ಬಳಸಲಾಗುತ್ತಿದೆ. ಮೇಘಾಲಯವು ಡ್ರೋನ್‌ಗಳ ಮೂಲಕ ಕೊರೊನಾ ಲಸಿಕೆಗಳನ್ನು ತಲುಪಿಸುವ ದೇಶದ ಮುಂಚೂಣಿ ರಾಜ್ಯಗಳಲ್ಲಿ ಒಂದಾಗಿದೆ. ಇದು ಬದಲಾಗುತ್ತಿರುವ ಮೇಘಾಲಯದ ಚಿತ್ರಣಕ್ಕೆ ಸಾಕ್ಷಿಯಾಗಿದೆ.
ಸಹೋದರ, ಸಹೋದರಿಯರೆ,
ಮೇಘಾಲಯ ಸಾಕಷ್ಟು ಸಾಧಿಸಿದೆ, ಆದರೆ ಸಾಧಿಸಲು ಇನ್ನೂ ಬಹಳಷ್ಟಿದೆ. ಪ್ರವಾಸೋದ್ಯಮ ಮತ್ತು ಸಾವಯವ ಕೃಷಿಯ ಹೊರತಾಗಿ, ಮೇಘಾಲಯದಲ್ಲಿ ಹೊಸ ಕ್ಷೇತ್ರಗಳ ಅಭಿವೃದ್ಧಿಗೆ ಪ್ರಯತ್ನಗಳ ಅಗತ್ಯವಿದೆ. ನಿಮ್ಮ ಎಲ್ಲಾ ಪ್ರಯತ್ನಗಳಿಗೆ ನಾನು ನಿಮ್ಮೊಂದಿಗಿದ್ದೇನೆ. ಈ ದಶಕದಲ್ಲಿ ನೀವು ಹೊಂದಿಸಿದ ಗುರಿಗಳನ್ನು ಸಾಧಿಸಲು ನಾವು ಒಟ್ಟಾಗಿ ಕೆಲಸ ಮಾಡೋಣ. ನಿಮ್ಮೆಲ್ಲರಿಗೂ ಶುಭ ಹಾರೈಕೆಗಳು!
ಧನ್ಯವಾದಗಳು, ಖುಬ್ಲಿ ಶಿಬುನ್, ಮಿಥ್ಲಾ
ಜೈ ಹಿಂದ್!