ನಮಸ್ಕಾರ!
ಕೇಂದ್ರ ಸಚಿವ ಸಂಪುಟದಲ್ಲಿರುವ ನನ್ನ ಸಹೋದ್ಯೋಗಿಗಳು, ಶಿಕ್ಷಣ, ಕೌಶಲ್ಯ ಅಭಿವೃದ್ಧಿ, ವಿಜ್ಞಾನ, ತಂತ್ರಜ್ಞಾನ ಮತ್ತು ಸಂಶೋಧನೆಗೆ ಸಂಬಂಧಿಸಿದ ಎಲ್ಲಾ ಗಣ್ಯರು ಮತ್ತು ಮಹಿಳೆಯರೇ ಮತ್ತು ಮಹನೀಯರೇ,
ನಮ್ಮ ಸರ್ಕಾರವು ಸಂಬಂಧಪಟ್ಟ ಎಲ್ಲರೊಂದಿಗೆ ಬಜೆಟ್ನ ಮೊದಲು ಮತ್ತು ನಂತರದ ಚರ್ಚೆಯ ವಿಶೇಷ ಸಂಪ್ರದಾಯವನ್ನು ನಿರ್ಮಿಸಿದೆ. ಅದರ ಮುಂದುವರಿದ ಭಾಗವೇ ಇಂದಿನ ಕಾರ್ಯಕ್ರಮ. ಈ ನಿಟ್ಟಿನಲ್ಲಿ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿಗೆ ಸಂಬಂಧಿಸಿದಂತೆ ಬಜೆಟ್‌ನಲ್ಲಿ ಮಾಡಲಾದ ನಿಬಂಧನೆಗಳ ಕುರಿತು ಇಂದು ಎಲ್ಲಾ ಸಂಬಂಧಿತರೊಂದಿಗೆ ವಿವರವಾಗಿ ಚರ್ಚಿಸಲಾಗುವುದು.
ಸ್ನೇಹಿತರೇ,
ನಮ್ಮ ಯುವ ಪೀಳಿಗೆ ದೇಶದ ಚುಕ್ಕಾಣಿ ಹಿಡಿಯುವವರಾಗಿದ್ದು, ಭವಿಷ್ಯದ ರಾಷ್ಟ್ರ ನಿರ್ಮಾತೃಗಳು ಕೂಡಾ ಹೌದು. ಆದ್ದರಿಂದ ಇಂದಿನ ಯುವ ಪೀಳಿಗೆಯನ್ನು ಸಶಕ್ತಗೊಳಿಸುವುದು ಎಂದರೆ ಭಾರತದ ಭವಿಷ್ಯವನ್ನು ಸಶಕ್ತಗೊಳಿಸುವುದು. ಇದನ್ನು ಗಮನದಲ್ಲಿಟ್ಟುಕೊಂಡು 2022ರ ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಐದು ವಿಷಯಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ.
ಮೊದಲನೆಯದು: ಗುಣಮಟ್ಟದ ಶಿಕ್ಷಣದ ಸಾರ್ವತ್ರೀಕರಣ: ನಮ್ಮ ಶಿಕ್ಷಣ ವ್ಯವಸ್ಥೆಯನ್ನು ವಿಸ್ತರಿಸಲು, ಅದರ ಗುಣಮಟ್ಟವನ್ನು ಸುಧಾರಿಸಲು ಮತ್ತು ಶಿಕ್ಷಣ ಕ್ಷೇತ್ರದ ಸಾಮರ್ಥ್ಯವನ್ನು ಹೆಚ್ಚಿಸಲು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.
ಎರಡನೆಯದು: ಕೌಶಲ್ಯ ಅಭಿವೃದ್ಧಿ: ದೇಶದಲ್ಲಿ ಡಿಜಿಟಲ್ ಕೌಶಲ್ಯ ಪರಿಸರ ವ್ಯವಸ್ಥೆ ಇರಬೇಕು. 'ಉದ್ಯಮ 4.0' (ಇಂಡಸ್ಟ್ರಿ 4.0) ಕುರಿತು ಚರ್ಚಿಸುತ್ತಿರುವ ಸಮಯದಲ್ಲಿ, ಉದ್ಯಮದ ಬೇಡಿಕೆಗೆ ಅನುಗುಣವಾಗಿ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮದ ಸಂಪರ್ಕವನ್ನು ಸುಧಾರಿಸಲು ಗಮನ ಹರಿಸಲಾಗಿದೆ.
ಮೂರನೆಯ ಪ್ರಮುಖ ಅಂಶವೆಂದರೆ: ನಗರ ಯೋಜನೆ ಮತ್ತು ವಿನ್ಯಾಸ: ಭಾರತದ ಪ್ರಾಚೀನ ಅನುಭವ ಮತ್ತು ಜ್ಞಾನವನ್ನು ಇಂದಿನ ನಮ್ಮ ಶಿಕ್ಷಣದೊಂದಿಗೆ ಸಂಯೋಜಿಸುವುದು ಅವಶ್ಯಕ.
ನಾಲ್ಕನೆಯ ಪ್ರಮುಖ ಅಂಶವೆಂದರೆ: ಅಂತರಾಷ್ಟ್ರೀಕರಣ: ವಿಶ್ವ ದರ್ಜೆಯ ವಿದೇಶಿ ವಿಶ್ವವಿದ್ಯಾನಿಲಯಗಳು ಭಾರತಕ್ಕೆ ಬರಬೇಕು ಮತ್ತು ಗಿಫ್ಟ್ ಸಿಟಿಯಂತಹ ನಮ್ಮ ಕೈಗಾರಿಕಾ ಪ್ರದೇಶಗಳಲ್ಲಿ ಹೂಡಿಕೆ ಮಾಡಲು ಹಣಕಾಸು ತಂತ್ರಜ್ಞಾನಕ್ಕೆ (ಫಿನ್-ಟೆಕ್) ಸಂಬಂಧಿಸಿದ ಸಂಸ್ಥೆಗಳನ್ನು ಪ್ರೋತ್ಸಾಹಿಸಬೇಕು.
ಐದನೇ ಪ್ರಮುಖ ಅಂಶವೆಂದರೆ: ಎವಿಜಿಸಿ, ಅಂದರೆ ಅನಿಮೇಷನ್ ವಿಷುಯಲ್ ಎಫೆಕ್ಟ್ಸ್ ಗೇಮಿಂಗ್ ಕಾಮಿಕ್: ಇದು ಅಪಾರ ಉದ್ಯೋಗಾವಕಾಶದೊಂದಿಗೆ ಬೃಹತ್ ಜಾಗತಿಕ ಮಾರುಕಟ್ಟೆಯನ್ನು ಹೊಂದಿದೆ. ಈ ನಿಟ್ಟಿನಲ್ಲಿ ಭಾರತೀಯ ಪ್ರತಿಭೆಗಳನ್ನು ಬಳಸಿಕೊಳ್ಳಲು ಒತ್ತು ನೀಡಲಾಗಿದೆ. ಈ ವರ್ಷದ ಬಜೆಟ್ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರುವಲ್ಲಿ ಬಹಳ ದೂರ ಸಾಗಲಿದೆ.
ಸ್ನೇಹಿತರೇ,
ಕೊರೊನ ಬರುವುದಕ್ಕೆ ಬಹಳ ಹಿಂದೆಯೇ ನಾನು ದೇಶದ ಡಿಜಿಟಲ್ ಭವಿಷ್ಯವನ್ನು ಒತ್ತಿ ಹೇಳುತ್ತಿದ್ದೆ. ಗ್ರಾಮಗಳನ್ನು ಆಪ್ಟಿಕಲ್ ಫೈಬರ್‌ನೊಂದಿಗೆ ಸಂಪರ್ಕಿಸಲು, ಡೇಟಾದ ವೆಚ್ಚವನ್ನು ಕನಿಷ್ಠದಲ್ಲಿಯೇ ಇರಿಸಲು ಮತ್ತು ಸಂಪರ್ಕ ಮೂಲಸೌಕರ್ಯವನ್ನು ಸುಧಾರಿಸಲು ನಮ್ಮ ಪ್ರಯತ್ನಗಳನ್ನು ಕೆಲವರು ಪ್ರಶ್ನಿಸಿದ್ದರು. ಆದರೆ ಸಾಂಕ್ರಾಮಿಕ ಸಮಯದಲ್ಲಿ ಈ ಪ್ರಯತ್ನಗಳ ಮಹತ್ವವನ್ನು ಎಲ್ಲರೂ ನೋಡಿದ್ದಾರೆ. ಜಾಗತಿಕ ಸಾಂಕ್ರಾಮಿಕದ ಈ ಸಮಯದಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆಯು ನಿಲ್ಲದೆ ಮುಂದುವರಿಯುವಂತೆ ಮಾಡಿದ್ದು ಡಿಜಿಟಲ್ ಸಂಪರ್ಕ.
ಭಾರತದಲ್ಲಿ ಡಿಜಿಟಲ್ ಅಸಮತೋಲನೆಯ ತ್ವರಿತ ಕುಸಿತವನ್ನು ನಾವು ನೋಡುತ್ತಿದ್ದೇವೆ. ಹೊಸತನದ ಶೋಧಗಳು ನಮ್ಮ ದೇಶದಲ್ಲಿ ಎಲ್ಲರೂ ಒಳಗೊಳ್ಳುವುದನ್ನು ಖಾತ್ರಿಪಡಿಸುತ್ತಿವೆ. ಮತ್ತು ಈಗ ದೇಶವು ಅದನ್ನು ಮೀರಿ ಏಕೀಕರಣದತ್ತ ಸಾಗುತ್ತಿದೆ.
ಈ ದಶಕದಲ್ಲಿ ಶಿಕ್ಷಣ ವ್ಯವಸ್ಥೆಗೆ ನಾವು ತರಲು ಬಯಸುವ ನವೀನತೆಯ ಅಡಿಪಾಯವನ್ನು ಬಲಪಡಿಸಲು ಈ ವರ್ಷದ ಬಜೆಟ್‌ನಲ್ಲಿ ಅನೇಕ ಘೋಷಣೆಗಳನ್ನು ಮಾಡಲಾಗಿದೆ. ಡಿಜಿಟಲ್ ಶಿಕ್ಷಣವು ಡಿಜಿಟಲ್ ಭವಿಷ್ಯದತ್ತ ಸಾಗುತ್ತಿರುವ ಭಾರತದ ವಿಶಾಲ ದೃಷ್ಟಿಯ ಭಾಗವಾಗಿದೆ. ಆದ್ದರಿಂದ, ಇ-ವಿದ್ಯಾ, ಒನ್ ಕ್ಲಾಸ್ ಒನ್ ಚಾನೆಲ್, ಡಿಜಿಟಲ್ ಲ್ಯಾಬ್ಸ್ ಮತ್ತು ಡಿಜಿಟಲ್ ಯೂನಿವರ್ಸಿಟಿಯಂತಹ ಶೈಕ್ಷಣಿಕ ಮೂಲಸೌಕರ್ಯಗಳು ಯುವಕರಿಗೆ ಸಾಕಷ್ಟು ಸಹಾಯ ಮಾಡಲಿವೆ. ಇದು ಹಳ್ಳಿಗಳು, ಬಡವರು, ದಲಿತರು, ಹಿಂದುಳಿದವರು, ಬುಡಕಟ್ಟು ಸಮುದಾಯಗಳು, ಭಾರತದ ಸಾಮಾಜಿಕ-ಆರ್ಥಿಕ ವ್ಯವಸ್ಥೆಯಲ್ಲಿ ಎಲ್ಲರಿಗೂ ಶಿಕ್ಷಣಕ್ಕಾಗಿ ಉತ್ತಮ ಪರಿಹಾರಗಳನ್ನು ಒದಗಿಸುವ ಪ್ರಯತ್ನವಾಗಿದೆ.
ಸ್ನೇಹಿತರೇ,
ರಾಷ್ಟ್ರೀಯ ಡಿಜಿಟಲ್ ವಿಶ್ವವಿದ್ಯಾನಿಲಯವು ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ವಿಶಿಷ್ಟವಾದ ಮತ್ತು ಅಭೂತಪೂರ್ವ ಹೆಜ್ಜೆಯಾಗಿದೆ. ಡಿಜಿಟಲ್ ವಿಶ್ವವಿದ್ಯಾನಿಲಯದಲ್ಲಿ ನಮ್ಮ ದೇಶದ ಸೀಟುಗಳ ಸಮಸ್ಯೆಯನ್ನು ಸಂಪೂರ್ಣವಾಗಿ ಪರಿಹರಿಸಬಲ್ಲ ದೊಡ್ಡ ಸಾಮರ್ಥ್ಯವನ್ನು ನಾನು ಕಾಣಬಲ್ಲೆ. ಪ್ರತಿ ವಿಷಯಕ್ಕೂ ಅನಿಯಮಿತ ಸೀಟುಗಳು ಇದ್ದಾಗ ಶಿಕ್ಷಣ ಜಗತ್ತಿನಲ್ಲಿ ದೊಡ್ಡ ಬದಲಾವಣೆಯನ್ನು ನೀವು ಊಹಿಸಬಹುದು. ಈ ಡಿಜಿಟಲ್ ವಿಶ್ವವಿದ್ಯಾನಿಲಯವು ಕಲಿಕೆ ಮತ್ತು ಮರು-ಕಲಿಕೆಯ ಪ್ರಸ್ತುತ ಮತ್ತು ಭವಿಷ್ಯದ ಅಗತ್ಯಗಳಿಗಾಗಿ ಯುವಕರನ್ನು ಸಿದ್ಧಪಡಿಸುತ್ತದೆ. ನಾನು ಶಿಕ್ಷಣ ಸಚಿವಾಲಯ, ಯುಜಿಸಿ, ಎಐಸಿಟಿಇ ಮತ್ತು ಎಲ್ಲಾ ಸಂಬಂಧಪಟ್ಟವರಿಗೆ ಈ ಡಿಜಿಟಲ್ ವಿಶ್ವವಿದ್ಯಾನಿಲಯವನ್ನು ಶೀಘ್ರವೇ ಪ್ರಾರಂಭಿಸುವುದನ್ನು ಖಚಿತಪಡಿಸಿಕೊಳ್ಳಲು ವಿನಂತಿಸುತ್ತೇನೆ. ಈ ಡಿಜಿಟಲ್ ವಿಶ್ವವಿದ್ಯಾನಿಲಯವು ಮೊದಲಿನಿಂದಲೂ ಅಂತರರಾಷ್ಟ್ರೀಯ ಮಾನದಂಡಗಳೊಂದಿಗೆ ಕಾರ್ಯನಿರ್ವಹಿಸುತ್ತದೆ ಎಂದು ಖಚಿತಪಡಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.
ಸ್ನೇಹಿತರೇ,
ದೇಶದಲ್ಲಿಯೇ ಜಾಗತಿಕ ಗುಣಮಟ್ಟದ ಸಂಸ್ಥೆಗಳನ್ನು ನಿರ್ಮಿಸುವ ಸರ್ಕಾರದ ಉದ್ದೇಶ ಮತ್ತು ಅದಕ್ಕಾಗಿ ನೀತಿ ಚೌಕಟ್ಟು ನಿಮ್ಮ ಮುಂದಿದೆ. ಈಗ ನೀವು ನಿಮ್ಮ ಪ್ರಯತ್ನದಿಂದ ಈ ಉದ್ದೇಶವನ್ನು ಸಾಧಿಸಬೇಕು. ಇಂದು ವಿಶ್ವ ಮಾತೃಭಾಷಾ ದಿನವೂ ಆಗಿದೆ. ಮಾತೃಭಾಷೆಯಲ್ಲಿ ಶಿಕ್ಷಣವು ಮಕ್ಕಳ ಮಾನಸಿಕ ಬೆಳವಣಿಗೆಗೆ ಸಂಬಂಧಿಸಿದೆ. ಅನೇಕ ರಾಜ್ಯಗಳಲ್ಲಿ ಸ್ಥಳೀಯ ಭಾಷೆಗಳಲ್ಲಿ ವೈದ್ಯಕೀಯ ಮತ್ತು ತಾಂತ್ರಿಕ ಶಿಕ್ಷಣವನ್ನು ಪ್ರಾರಂಭಿಸಲಾಗಿದೆ.
ಈಗ ಸ್ಥಳೀಯ ಭಾರತೀಯ ಭಾಷೆಗಳಲ್ಲಿ ಅತ್ಯುತ್ತಮ ವಿಷಯ ಮತ್ತು ಅದರ ಡಿಜಿಟಲ್ ಆವೃತ್ತಿಯ ರಚನೆಯನ್ನು ವೇಗಗೊಳಿಸುವುದು ಎಲ್ಲಾ ಶಿಕ್ಷಣ ತಜ್ಞರ ವಿಶೇಷ ಜವಾಬ್ದಾರಿಯಾಗಿದೆ. ಇಂಟರ್ನೆಟ್, ಮೊಬೈಲ್ ಫೋನ್, ಟಿವಿ ಮತ್ತು ರೇಡಿಯೊ ಮೂಲಕ ಭಾರತೀಯ ಭಾಷೆಗಳಲ್ಲಿ ಇ-ಕಂಟೆಂಟ್ ಅನ್ನು ಎಲ್ಲರಿಗೂ ದಕ್ಕುವಂತೆ ಮಾಡುವ ಕೆಲಸ ಮಾಡಬೇಕು.
ನಾವು ಭಾರತೀಯ ಸಂಕೇತ ಭಾಷೆಗಳಲ್ಲಿ ಪಠ್ಯಕ್ರಮವನ್ನು ಅಭಿವೃದ್ಧಿಪಡಿಸುತ್ತಿದ್ದೇವೆ ಅದು ದಿವ್ಯಾಂಗ ಯುವಕರನ್ನು ಸಶಕ್ತಗೊಳಿಸುತ್ತದೆ. ಹೆಚ್ಚು ತನ್ನ ಸ್ವಂತ ಕಾಲಿನ ಮೇಲೆ ನಿಲ್ಲಲು ಸಹಾಯ ಮಾಡುತ್ತದೆ. ಈ ಸಂದರ್ಭದಲ್ಲೂ ನಿರಂತರ ಸುಧಾರಣೆ ಬಹಳ ಮುಖ್ಯ. ಡಿಜಿಟಲ್ ಉಪಕರಣಗಳು, ಡಿಜಿಟಲ್ ವಿಷಯವನ್ನು ಸುಧಾರಿತ ರೀತಿಯಲ್ಲಿ ತಲುಪಿಸಬಹುದೆಂದು ಖಚಿತಪಡಿಸಿಕೊಳ್ಳಲು ನಮ್ಮ ಶಿಕ್ಷಕರಿಗೆ ಆನ್‌ಲೈನ್ ತರಬೇತಿಯತ್ತಲೂ ಗಮನಹರಿಸಬೇಕು.
ಸ್ನೇಹಿತರೇ,
ಸ್ವಾವಲಂಬಿ ಭಾರತಕ್ಕೆ ಮತ್ತು ಜಾಗತಿಕ ಪ್ರತಿಭೆಗಳ ಬೇಡಿಕೆಯ ದೃಷ್ಟಿಯಿಂದ ಇದು ಬಹಳ ಮುಖ್ಯವಾಗಿದೆ. ಹಳೆಯ ಉದ್ಯೋಗ ಪಾತ್ರಗಳು ಬದಲಾಗುತ್ತಿರುವಂತೆಯೇ ನಾವು ನಮ್ಮದೇ ಆದ 'ಜನಸಂಖ್ಯಾ ಲಾಭಾಂಶ'ವನ್ನು ಸಿದ್ಧಪಡಿಸಬೇಕಾಗಿದೆ. ಆದ್ದರಿಂದ, ಶಿಕ್ಷಣ ಸಮೂಹ ಮತ್ತು ಉದ್ಯಮಗಳು ಒಟ್ಟಾಗಿ ಕೆಲಸ ಮಾಡುವ ಅವಶ್ಯಕತೆಯಿದೆ. ಇದು ಬಜೆಟ್‌ನಲ್ಲಿ ಕೌಶಲ್ಯ ಮತ್ತು ಜೀವನೋಪಾಯಕ್ಕಾಗಿ ಡಿಜಿಟಲ್ ಪರಿಸರ ವ್ಯವಸ್ಥೆ (DESH STACK ದೇಶ್ ಸ್ಟಾಕ್ ಇ-ಪೋರ್ಟಲ್) ಮತ್ತು ಇ-ಸ್ಕಿಲ್ಲಿಂಗ್ ಲ್ಯಾಬ್‌ಗಳ ಘೋಷಣೆಯ ಹಿಂದಿನ ಚಿಂತನೆಯಾಗಿದೆ.
ಸ್ನೇಹಿತರೇ,
ನಾವು ಪ್ರವಾಸೋದ್ಯಮ, ಡ್ರೋನ್, ಅನಿಮೇಷನ್ ಮತ್ತು ಕಾರ್ಟೂನ್ ಹಾಗು ರಕ್ಷಣೆಯಂತಹ ಉದ್ಯಮಗಳ ಮೇಲೆ ಹೆಚ್ಚಿನ ಗಮನವನ್ನು ನೀಡುತ್ತಿದ್ದೇವೆ. ಈ ವಲಯಗಳಿಗೆ ಸಂಬಂಧಿಸಿದ ಅಸ್ತಿತ್ವದಲ್ಲಿರುವ ಕೈಗಾರಿಕೆಗಳು ಮತ್ತು ನವೋದ್ಯಮಗಳಿಗೆ ನಮಗೆ ತರಬೇತಿ ಪಡೆದ ಮಾನವ ಸಂಪನ್ಮೂಲಗಳ ಅಗತ್ಯವಿದೆ. ಅನಿಮೇಷನ್, ದೃಶ್ಯ ಪರಿಣಾಮಗಳು, ಗೇಮಿಂಗ್ ಮತ್ತು ಕಾಮಿಕ್ ವಲಯಗಳ ಅಭಿವೃದ್ಧಿಗಾಗಿ ಕಾರ್ಯಪಡೆಯ ರಚನೆಯು ಈ ನಿಟ್ಟಿನಲ್ಲಿ ಹೆಚ್ಚಿನ ಸಹಾಯವನ್ನು ನೀಡಲಿದೆ. ಈ ರೀತಿಯಾಗಿ, ನಗರಾಭಿವೃದ್ಧಿ ಯೋಜನೆಯಲ್ಲಿ ದೇಶದ ಅಗತ್ಯಗಳನ್ನು ಪೂರೈಸಬಹುದು ಮತ್ತು ಯುವ ಸಮುದಾಯಕ್ಕೂ ವಿನ್ಯಾಸ ಮತ್ತು ಅವಕಾಶಗಳನ್ನು ಸೃಷ್ಟಿಸಲಾಗುತ್ತದೆ. ಸ್ವಾತಂತ್ರ್ಯದ ಪುಣ್ಯಕಾಲದಲ್ಲಿ, ಭಾರತವು ತನ್ನದೇ ಆದ 'ನಗರ ಭೂದೃಶ್ಯ'ವನ್ನು ಪರಿವರ್ತಿಸುವತ್ತ ವೇಗವಾಗಿ ಚಲಿಸುತ್ತಿದೆ. ಹಾಗಾಗಿಯೇ ಎಐಸಿಟಿಇಯಂತಹ ಸಂಸ್ಥೆಗಳ ಮೂಲಕ ಶಿಕ್ಷಣ ಮತ್ತು ತರಬೇತಿಯಲ್ಲಿ ನಿರಂತರ ಸುಧಾರಣೆ ಆಗಬೇಕು ಎಂಬ ವಿಶೇಷ ನಿರೀಕ್ಷೆಯನ್ನು ದೇಶ ಹೊಂದಿದೆ.
ಸ್ನೇಹಿತರೇ,
ಶಿಕ್ಷಣ ಕ್ಷೇತ್ರದ ಮೂಲಕ ಆತ್ಮನಿರ್ಭರ ಭಾರತ್ ಅಭಿಯಾನವನ್ನು ಹೇಗೆ ಸಶಕ್ತಗೊಳಿಸಬೇಕು ಎಂಬುದರ ಕುರಿತು ನಿಮ್ಮ ಅನಿಸಿಕೆಗಳು ದೇಶಕ್ಕೆ ಉಪಯುಕ್ತವಾಗುತ್ತವೆ. ನಮ್ಮೆಲ್ಲರ ಜಂಟಿ ಪ್ರಯತ್ನಗಳಿಂದ ನಾವು ಬಜೆಟ್‌ನ ಗುರಿಗಳನ್ನು ವೇಗವಾಗಿ ಪೂರೈಸಲು ಸಾಧ್ಯವಾಗುತ್ತದೆ ಎಂದು ನನಗೆ ಖಾತ್ರಿಯಿದೆ. ಹಳ್ಳಿಗಳಲ್ಲಿ ಪ್ರಾಥಮಿಕ ಶಿಕ್ಷಣ ಮಾತ್ರ ಇದೆ. ಆದರೆ ನಾವು ಸ್ಮಾರ್ಟ್ ಕ್ಲಾಸ್, ಅನಿಮೇಷನ್ ಮತ್ತು ದೂರ ಶಿಕ್ಷಣದ ಮೂಲಕ ಅಥವಾ ನಮ್ಮ ಹೊಸ ಪರಿಕಲ್ಪನೆಯಾದ ಒನ್ ಕ್ಲಾಸ್, ಒನ್ ಚಾನೆಲ್ ಮೂಲಕ ಹಳ್ಳಿಗಳಲ್ಲಿಯೂ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಖಚಿತಪಡಿಸಿಕೊಳ್ಳಬಹುದು ಎಂದು ಹೊಸ ಅನುಭವಗಳು ತೋರಿಸುತ್ತವೆ. ಬಜೆಟ್‌ನಲ್ಲಿ ಇದಕ್ಕೆ ಅವಕಾಶವಿದೆ. ಅದನ್ನು ಹೇಗೆ ಕಾರ್ಯಗತಗೊಳಿಸಬೇಕು ಎಂಬ ಬಗ್ಗೆ ನಮ್ಮಲ್ಲಿ ವ್ಯವಸ್ಥೆ ಇದೆ.
ಬಜೆಟ್ ಹೇಗಿರಬೇಕೆನ್ನುವುದನ್ನು ಚರ್ಚಿಸಲು ಇಂದು ನಿರೀಕ್ಷಿಸಲಾಗುವುದಿಲ್ಲ, ಏಕೆಂದರೆ ಅದು ಮುಗಿದಿದೆ. ಈಗ ನಿಮ್ಮಿಂದ ಬಜೆಟ್ ಪ್ರಸ್ತಾವನೆಗಳನ್ನು ಅಡೆತಡೆಯಿಲ್ಲದೆ ಮತ್ತು ಸಾಧ್ಯವಾದಷ್ಟು ಬೇಗ ಕಾರ್ಯಗತಗೊಳಿಸಲು ನಿರೀಕ್ಷಿಸಲಾಗಿದೆ. ನೀವು ಈಗಾಗಲೇ ಬಜೆಟ್ ಅನ್ನು ಅಧ್ಯಯನ ಮಾಡಿರಬೇಕು. ನೀವು ಈ ಕ್ಷೇತ್ರದಲ್ಲಿ ಇದ್ದೀರಿ. ನಿಮ್ಮ ಕೆಲಸ, ಶಿಕ್ಷಣ ಇಲಾಖೆ ಮತ್ತು ಕೌಶಲ್ಯ ಇಲಾಖೆಯ ಅವಶ್ಯಕತೆಗಳನ್ನು ಒಟ್ಟುಗೂಡಿಸಿ ಸಮಯಕ್ಕೆ ತಕ್ಕಂತೆ ಉತ್ತಮ ಮಾರ್ಗಸೂಚಿಯನ್ನು ರಚಿಸಲು ನಾವು ಶ್ರಮಿಸಬೇಕು. ನಾವು ಬಜೆಟ್ ಅನ್ನು ಸುಮಾರು ಒಂದು ತಿಂಗಳ ಕಾಲ ಹಿಂದೂಡಿದ್ದೇವೆ ಎನ್ನುವುದನ್ನು ನೀವು ಗಮನಿಸಿರಬೇಕು.
ಈ ಹಿಂದೆ ಫೆಬ್ರವರಿ 28 ರಂದು ಬಜೆಟ್ ಮಂಡನೆಯಾಗುತ್ತಿತ್ತು. ಈಗ ಅದನ್ನು ಫೆಬ್ರವರಿ 1 ಕ್ಕೆ ಹಿಂದೂಡಲಾಗಿದೆ, ಇದರಿಂದಾಗಿ ನಾವು ಏಪ್ರಿಲ್ 1 ರಿಂದಲೇ ಬಜೆಟ್ ಪ್ರಸ್ತಾವನೆಗಳನ್ನು ಕಾರ್ಯಗತಗೊಳಿಸಲು ಪ್ರಾರಂಭಿಸುವ ಮೊದಲು ಪ್ರತಿಯೊಂದು ವ್ಯವಸ್ಥೆಯು ಜಾರಿಯಲ್ಲಿರುತ್ತವೆ. ನಮ್ಮ ಸಮಯ ವ್ಯರ್ಥವಾಗಬಾರದು. ಮತ್ತು ನೀವು ಇದಕ್ಕೆ ಸಾಕಷ್ಟು (ಕೊಡುಗೆ) ನೀಡಬೇಕೆಂದು ನಾನು ಬಯಸುತ್ತೇನೆ. ಶಿಕ್ಷಣ ಇಲಾಖೆಗೆ ಸಂಬಂಧಿಸದ ಕೆಲವು ಸಮಸ್ಯೆಗಳಿವೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ಈಗ ದೇಶವು ಹೆಚ್ಚಿನ ಸಂಖ್ಯೆಯ ಸೈನಿಕ ಶಾಲೆಗಳನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮಾದರಿಯತ್ತ ಸಾಗಿಸಲು ನಿರ್ಧರಿಸಿದೆ. ಸೈನಿಕ ಶಾಲೆಗಳ ರಚನೆ ಹೇಗಿರಬೇಕು ಮತ್ತು ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮಾದರಿ ಹೇಗಿರಬೇಕು, ಇದಕ್ಕಾಗಿ ರಕ್ಷಣಾ ಸಚಿವಾಲಯವು ಬಜೆಟ್ ಅನ್ನು ನೀಡಲಿದೆ. ಹೊಸ ಸೈನಿಕ ಶಾಲೆಗಳಲ್ಲಿ ಶಿಕ್ಷಕರಿಗೆ ಯಾವ ರೀತಿಯ ವಿಶೇಷ ತರಬೇತಿಯ ಅಗತ್ಯವಿದೆ ಏಕೆಂದರೆ ಅದು ದೌಹಿಕ ಶಿಕ್ಷಣದ ಭಾಗವನ್ನೂ ಒಳಗೊಂಡಿರುತ್ತದೆ. ನಾವು ಅದನ್ನು ಹೇಗೆ ಮಾಡಬಹುದು?
ಅಂತೆಯೇ, ಇದು ಕ್ರೀಡೆಗೆ ಸಂಬಂಧಿಸಿದೆ. ಈ ವರ್ಷದ ಒಲಿಂಪಿಕ್ಸ್ ನಂತರ ನಮ್ಮ ದೇಶದಲ್ಲಿ ಕ್ರೀಡೆಯ ಕಡೆಗೆ ವಿಶೇಷ ಆಕರ್ಷಣೆ ಕಂಡುಬಂದಿದೆ. ಇದು ಕೌಶಲ್ಯಗಳ ಪ್ರಪಂಚದ ವಿಷಯವಲ್ಲ, ಆದರೆ ಇದು ಕ್ರೀಡಾ ಪ್ರಪಂಚದ ವಿಷಯವಾಗಿದೆ ಏಕೆಂದರೆ ಇದು ತಂತ್ರಗಳು ಮತ್ತು ತಂತ್ರಜ್ಞಾನದಲ್ಲಿ ದೊಡ್ಡ ಪಾತ್ರವನ್ನು ಹೊಂದಿದೆ. ಅದರಲ್ಲಿ ನಮ್ಮ ಪಾತ್ರವು ಹೇಗಿರಬೇಕು ಏನ್ನುವುದನ್ನೂ ನಾವು ಆಲೋಚಿಸಬಹುದು.
ನಮ್ಮ ದೇಶದಲ್ಲಿ ನಳಂದಾ, ತಕ್ಷಶಿಲಾ ಮತ್ತು ವಲ್ಲಭಿಯಂತಹ ಪ್ರಮುಖ ಶಿಕ್ಷಣ ಸಂಸ್ಥೆಗಳಿರುವಾಗ ನಮ್ಮ ವಿದ್ಯಾರ್ಥಿಗಳು ವಿದೇಶದಲ್ಲಿ ಅಧ್ಯಯನ ಮಾಡಲು ಏಕೆ ಒತ್ತಾಯಿಸುತ್ತಿದ್ದಾರೆ ಎಂದು ನಾವು ಎಂದಾದರೂ ಯೋಚಿಸಿದ್ದೇವೆಯೇ? ಇದು ನಮಗೆ ಒಳ್ಳೆಯದೇ? ನಮ್ಮ ದೇಶದಿಂದ ಹೊರಗೆ ಹೋಗುವ ಮಕ್ಕಳಿಗಾಗಿ ಅನಗತ್ಯ ಹಣ ಖರ್ಚು ಮಾಡಲಾಗುತ್ತಿದೆ ಮತ್ತು ಕುಟುಂಬಗಳು ಸಾಲವನ್ನು ಮಾಡುತ್ತಿವೆ. ಪ್ರಪಂಚದ ವಿಶ್ವವಿದ್ಯಾನಿಲಯಗಳನ್ನು ನಮ್ಮ ದೇಶಕ್ಕೆ ತರುವ ಮೂಲಕ ನಾವು ನಮ್ಮ ಮಕ್ಕಳನ್ನು ನಮ್ಮದೇ ಪರಿಸರದಲ್ಲಿ ಮತ್ತು ಕಡಿಮೆ ಖರ್ಚಿನಲ್ಲಿ ಅಧ್ಯಯನ ಮಾಡುವಂತೆ ನೋಡಿಕೊಳ್ಳಬಹುದೇ? ಅಂದರೆ ನಮ್ಮ ಪೂರ್ವ ಪ್ರಾಥಮಿಕದಿಂದ ಸ್ನಾತಕೋತ್ತರ ಪದವಿಯವರೆಗೆ 21ನೇ ಶತಮಾನಕ್ಕೆ ಹೊಂದಿಕೆಯಾಗಬೇಕಾದ ನೀಲನಕ್ಷೆಯನ್ನು ಹೇಗೆ ಸಿದ್ಧಪಡಿಸುವುದು?
ಬಜೆಟ್ ಇನ್ನೂ ಉತ್ತಮವಾಗಿರಬಹುದೆಂದು ಯಾರಿಗಾದರೂ ಅನಿಸಿದರೆ, ಮುಂದಿನ ವರ್ಷ ನಾವು ಅದರ ಬಗ್ಗೆ ಯೋಚಿಸುತ್ತೇವೆ. ಇದೀಗ, ಬಜೆಟ್ ಅನ್ನು ಉತ್ತಮ ರೀತಿಯಲ್ಲಿ ಕಾರ್ಯಗತಗೊಳಿಸುವುದು ಸೂಕ್ತವಾಗಿದೆ ಇದರಿಂದಾಗಿ ಇದೊಂದು ಅತ್ಯುತ್ತಮ ತೀರ್ಮಾನವಾಗಲಿದೆ ಮತ್ತು ಫಲಿತಾಂಶವಲ್ಲ. ಉದಾಹರಣೆಗೆ, ಅಟಲ್ ಟಿಂಕರಿಂಗ್ ಲ್ಯಾಬ್‌ಗಳಿಗೆ ಸಂಬಂಧಿಸಿದವರು ವಿಭಿನ್ನವಾಗಿರಬಹುದು, ಆದರೆ ಅವು ಒಂದು ಅಥವಾ ಇನ್ನೊಂದು ಶಿಕ್ಷಣ ವ್ಯವಸ್ಥೆಯೊಂದಿಗೆ ಸಂಪರ್ಕ ಹೊಂದಿವೆ. ನಾವು ಹೊಸತನದ ಶೋಧದ ಬಗ್ಗೆ ಮಾತನಾಡುವಾಗ, ಈ ಅಟಲ್ ಟಿಂಕರಿಂಗ್ ಲ್ಯಾಬ್‌ಗಳನ್ನು ಹೇಗೆ ಆಧುನೀಕರಿಸಬೇಕು ಎಂದು ನಾವು ನೋಡಬೇಕು. ಬಜೆಟ್‌ನಲ್ಲಿ ರಾಷ್ಟ್ರೀಯ ಶಿಕ್ಷಣದ ಸಂದರ್ಭದಲ್ಲಿ ಹಲವು ಸಮಸ್ಯೆಗಳಿವೆ. ನಾವು ತ್ವರಿತವಾಗಿ ಬಜೆಟ್ ಅನ್ನು ಜಾರಿಗೊಳಿಸಲು ಬಯಸುತ್ತೇವೆ ಮತ್ತು ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ 'ಅಮೃತ್ ಕಾಲ'ದ ಅಡಿಪಾಯವನ್ನು ಹಾಕುತ್ತೇವೆ.
ನಿಮ್ಮಂತೆ ಒಳಗೊಂಡಿರುವ ಎಲ್ಲಾ ಜನರೊಂದಿಗೆ ಪ್ರಮುಖ ಬದಲಾವಣೆಯನ್ನು ತರುವುದು ಅವಶ್ಯಕ. ನಿಮಗೆ ತಿಳಿದಿರುವಂತೆ ಬಜೆಟ್ ಮಂಡನೆಯಾದ ನಂತರ ಸ್ವಲ್ಪ ಬಿಡುವು ಇರುತ್ತದೆ. ಅದರ ನಂತರ, ಎಲ್ಲಾ ಸಂಸದರು ಬಜೆಟ್ ಅನ್ನು ಸೂಕ್ಷ್ಮವಾಗಿ ಚರ್ಚಿಸುತ್ತಾರೆ ಮತ್ತು ಆ ಚರ್ಚೆಗಳಿಂದ ಅನೇಕ ಒಳ್ಳೆಯ ವಿಷಯಗಳು ಹೊರಹೊಮ್ಮುತ್ತವೆ. ಆದರೆ ನಾವು ಈ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿದ್ದೇವೆ. ಈಗ ಆಯಾ ಇಲಾಖೆಯವರು ನೇರವಾಗಿ ಸಂಬಂಧಪಟ್ಟವರೊಂದಿಗೆ ಚರ್ಚೆ ನಡೆಸುತ್ತಿದ್ದಾರೆ.
ನಾನು "ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ, ಸಬ್ಕಾ ಪ್ರಯಾಸ್" ಅನ್ನು ಒತ್ತಿಹೇಳಿದಾಗ 'ಸಬ್ಕಾ ಪ್ರಯಾಸ್' (ಎಲ್ಲರ ಪ್ರಯತ್ನಗಳು l) ಬಜೆಟ್‌ನಲ್ಲಿ ಬಹಳ ಮುಖ್ಯವಾಗಿದೆ. ಬಜೆಟ್ ಕೇವಲ ಖಾತೆಗಳ ಲೆಕ್ಕದ ಆಟವಲ್ಲ. ನಾವು ಬಜೆಟ್ ಅನ್ನು ಸರಿಯಾದ ರೀತಿಯಲ್ಲಿ ಮತ್ತು ಸಮಯೋಚಿತವಾಗಿ ಬಳಸಿಕೊಳ್ಳಬಹುದಾದರೆ ನಮ್ಮ ಸೀಮಿತ ಸಂಪನ್ಮೂಲಗಳೊಂದಿಗೆ ನಾವು ದೊಡ್ಡ ಬದಲಾವಣೆಯನ್ನು ಮಾಡಬಹುದು. ಬಜೆಟ್ ಬಗ್ಗೆ ಪ್ರತಿಯೊಬ್ಬರ ಮನಸ್ಸಿನಲ್ಲಿ ಸ್ಪಷ್ಟತೆ ಇದ್ದಾಗ ಮಾತ್ರ ಇದು ಸಾಧ್ಯ.
ಇಂದಿನ ಚರ್ಚೆಯು ಶಿಕ್ಷಣ ಮತ್ತು ಕೌಶಲ್ಯ ಸಚಿವಾಲಯಗಳಿಗೆ ಸಾಕಷ್ಟು ಲಾಭವಾಗಲಿದೆ. ಬಜೆಟ್‌ನ ಬಾಹ್ಯರೇಖೆಗಳ ಬಗ್ಗೆ ನಿಮ್ಮ ಚರ್ಚೆಗಳಿಂದ ಅನೇಕ ಪ್ರಾಯೋಗಿಕ ಸಮಸ್ಯೆಗಳು ಹೊರಹೊಮ್ಮುತ್ತವೆ. ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸಿ. ಸರ್ಕಾರ ಮತ್ತು ಸಾಮಾಜಿಕ ವ್ಯವಸ್ಥೆಯ ನಡುವೆ ಅಂತರ ಬಾರದಂತೆ ಸರಳ ರೀತಿಯಲ್ಲಿ ಈ ಬಜೆಟ್ ಅನ್ನು ಹೇಗೆ ಅನುಷ್ಠಾನಗೊಳಿಸಬೇಕು ಎನ್ನುವುದು ಮುಖ್ಯ. ಈ ಚರ್ಚೆಯು ಹೆಚ್ಚು ಒಟ್ಟಿಗೆ ಕೆಲಸ ಮಾಡುವುದು ಹೇಗೆ ಎಂಬುದರ ಕುರಿತಾಗಿದೆ.
ಮತ್ತೊಮ್ಮೆ ಈ ಚರ್ಚೆಯಲ್ಲಿ ಭಾಗವಹಿಸಿದ್ದಕ್ಕಾಗಿ ನಿಮ್ಮೆಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ. ದಿನವಿಡೀ ನೀವು ನಡೆಸುವ ಚರ್ಚೆಗಳಿಂದ ಸಾಕಷ್ಟು ಒಳ್ಳೆಯ ವಿಷಯಗಳು ಹೊರಬರುತ್ತವೆ, ಇದರಿಂದ ಶಿಕ್ಷಣ ಇಲಾಖೆಯು ತ್ವರಿತ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ ಮತ್ತು ಮುಂದಿನ ಬಜೆಟ್ ಅನ್ನು ನಾವು ಅತ್ಯುತ್ತಮವಾಗಿ ರಚಿಸಲು ಸಾಧ್ಯವಾಗುತ್ತದೆ. ನಾವು ಮುಂದಿನ ವರ್ಷದ ಬಜೆಟ್ ಅನ್ನು ಉತ್ತಮ ಫಲಿತಾಂಶದೊಂದಿಗೆ ಸಿದ್ಧಪಡಿಸುತ್ತೇವೆ. ನಾನು ನಿಮಗೆಲ್ಲರಿಗೂ ಶುಭ ಹಾರೈಸುತ್ತೇನೆ.
ಬಹಳ ಧನ್ಯವಾದಗಳು!