ನಮಸ್ಕಾರ!
ಮೂಲಸೌಕರ್ಯ ಕುರಿತ ಈ ವೆಬಿನಾರ್‌ನಲ್ಲಿ ನೂರಾರು ಪಾಲುದಾರರು ಭಾಗವಹಿಸುತ್ತಿರುವುದು ನನಗೆ ಸಂತೋಷ ತಂದಿದೆ. 700ಕ್ಕೂ ಹೆಚ್ಚು ವ್ಯವಸ್ಥಾಪಕ ನಿರ್ದೇಶಕರು (ಎಂಡಿ) ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು(ಸಿಇಒ) ತಮ್ಮ ಅಮೂಲ್ಯ ಸಮಯವನ್ನು ಇದಕ್ಕಾಗಿ ವಿನಿಯೋಗಿಸಿದ್ದಾರೆ ಮತ್ತು ಆ ಮೂಲಕ ಈ ಪ್ರಮುಖ ಉಪಕ್ರಮದ ಶ್ರೇಷ್ಠತೆಯನ್ನು ಅರಿತು, ಅದರ ಮೌಲ್ಯವರ್ಧನೆಗಾಗಿ ಕೆಲಸ ಮಾಡಿದ್ದಾರೆ. ನಾನು ಅವರೆಲ್ಲರನ್ನೂ ಸ್ವಾಗತಿಸಲು ಬಯಸುತ್ತೇನೆ. ಇದಲ್ಲದೆ ವಿವಿಧ ಕ್ಷೇತ್ರಗಳ ತಜ್ಞರು ಮತ್ತು ವಿವಿಧ ಮಧ್ಯಸ್ಥಗಾರರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಮೂಲಕ ಈ ವೆಬಿನಾರ್ ಅನ್ನು ಅತ್ಯಂತ ಶ್ರೀಮಂತ ಮತ್ತು ಫಲಿತಾಂಶ ಆಧಾರಿತವನ್ನಾಗಿಸುತ್ತಾರೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ. ಈ ವೆಬಿನಾರ್‌ಗಾಗಿ ಸಮಯ ಮೀಸಲಿರಿಸಿದ್ದಕ್ಕಾಗಿ ನಾನು ಮತ್ತೊಮ್ಮೆ ನಿಮ್ಮೆಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಲು ಬಯಸುತ್ತೇನೆ ಮತ್ತು ನಿಮ್ಮೆಲ್ಲರಿಗೂ ನನ್ನ ಹಾರ್ದಿಕ ಸ್ವಾಗತವನ್ನು ಕೋರುತ್ತಿದ್ದೇನೆ. ಈ ವರ್ಷದ ಕೇಂದ್ರ ಬಜೆಟ್ ಮೂಲಸೌಕರ್ಯ ವಲಯದ ಬೆಳವಣಿಗೆಗೆ ಹೊಸ ಉತ್ತೇಜನ ನೀಡಲಿದೆ. ವಿಶ್ವವ್ಯಾಪಿಯಾಗಿ ವಿವಿಧ ತಜ್ಞರು ಮತ್ತು ಅನೇಕ ಪ್ರತಿಷ್ಠಿತ ಮಾಧ್ಯಮ ಸಂಸ್ಥೆಗಳು ಭಾರತದ ಬಜೆಟ್ ಮತ್ತು ಅದರ ಕಾರ್ಯತಂತ್ರದ ನಿರ್ಧಾರಗಳನ್ನು ಶ್ಲಾಘಿಸಿವೆ. ಈಗ ನಮ್ಮ ಬಂಡವಾಳ ವೆಚ್ಚವು(ಕ್ಯಾಪೆಕ್ಸ್) ನನ್ನ ಆಡಳಿತದ ಮೊದಲ ವರ್ಷ ಅಂದರೆ 2013-14ಕ್ಕೆ ಹೋಲಿಸಿದರೆ ಐದು ಪಟ್ಟು ಹೆಚ್ಚಾಗಿದೆ. ʻರಾಷ್ಟ್ರೀಯ ಮೂಲಸೌಕರ್ಯ ಪೈಪ್‌ಲೈನ್ʼ ಅಡಿಯಲ್ಲಿ, ಮುಂಬರುವ ದಿನಗಳಲ್ಲಿ 110 ಲಕ್ಷ ಕೋಟಿ ರೂ.ಗಳನ್ನು ಹೂಡಿಕೆ ಮಾಡುವ ಗುರಿಯನ್ನು ಸರಕಾರ ಹೊಂದಿದೆ. ಇಂತಹ ಸನ್ನಿವೇಶದಲ್ಲಿ, ಮಧ್ಯಸ್ಥಗಾರರು ಹೊಸ ಜವಾಬ್ದಾರಿಗಳನ್ನು, ಹೊಸ ಸಾಧ್ಯತೆಗಳನ್ನು ಮತ್ತು ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಲು ಇದು ಸೂಕ್ತ ಸಮಯವಾಗಿದೆ.
ಸ್ನೇಹಿತರೇ,
ಯಾವುದೇ ದೇಶದ ಅಭಿವೃದ್ಧಿ ಮತ್ತು ಸುಸ್ಥಿರ ಅಭಿವೃದ್ಧಿಯಲ್ಲಿ, ದೇಶದ ಉಜ್ವಲ ಭವಿಷ್ಯದ ದೃಷ್ಟಿಯಿಂದ ಮೂಲಸೌಕರ್ಯವು ಸದಾ ಅತ್ಯಂತ ಮುಖ್ಯವಾಗಿದೆ. ಮೂಲಸೌಕರ್ಯಕ್ಕೆ ಸಂಬಂಧಿಸಿದ ಇತಿಹಾಸವನ್ನು ಅಧ್ಯಯನ ಮಾಡುವವರಿಗೆ ಇದು ಚೆನ್ನಾಗಿ ತಿಳಿದಿದೆ. ಚಂದ್ರಗುಪ್ತ ಮೌರ್ಯನು ಸುಮಾರು 2500 ವರ್ಷಗಳ ಹಿಂದೆ ಉತ್ತರಾಪಥವನ್ನು ನಿರ್ಮಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಈ ಮಾರ್ಗವು ಮಧ್ಯ ಏಷ್ಯಾ ಮತ್ತು ಭಾರತೀಯ ಉಪಖಂಡದ ನಡುವೆ ವ್ಯಾಪಾರ-ವ್ಯವಹಾರವನ್ನು ಹೆಚ್ಚಿಸಲು ಬಹಳ ಸಹಾಯ ಮಾಡಿತು. ನಂತರ, ಚಕ್ರವರ್ತಿ ಅಶೋಕನು ಈ ಮಾರ್ಗದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಪ್ರಾರಂಭಿಸಿದನು. 16ನೇ ಶತಮಾನದಲ್ಲಿ, ಶೇರ್ ಷಾ ಸೂರಿ ಕೂಡ ಈ ಮಾರ್ಗದ ಮಹತ್ವವನ್ನು ಅರ್ಥಮಾಡಿಕೊಂಡಿದ್ದ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಹೊಸ ರೀತಿಯಲ್ಲಿ ಪೂರ್ಣಗೊಳಿಸಿದ್ದ. ಬ್ರಿಟಿಷರು ಬಂದಾಗ, ಅವರು ಈ ಮಾರ್ಗವನ್ನು ಮತ್ತಷ್ಟು ನವೀಕರಿಸಿದರು ಮತ್ತು ಇದನ್ನು ʻಜಿಟಿʼ ರಸ್ತೆ ಎಂದು ಕರೆಯಲಾಯಿತು. ಅಂದರೆ, ದೇಶದ ಅಭಿವೃದ್ಧಿಗಾಗಿ ಹೆದ್ದಾರಿಗಳ ಅಭಿವೃದ್ಧಿಯ ಪರಿಕಲ್ಪನೆಯು ಸಾವಿರಾರು ವರ್ಷಗಳಷ್ಟು ಹಳೆಯದು. ಅಂತೆಯೇ, ಇತ್ತೀಚಿನ ದಿನಗಳಲ್ಲಿ ಜನರು ನದಿ ಮಾರ್ಗಗಳು ಮತ್ತು ಜಲಮಾರ್ಗಗಳ ಬಗ್ಗೆ ಸಾಕಷ್ಟು ಮಾತನಾಡುವುದನ್ನು ನಾವು ನೋಡುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ, ನಾವು ಬನಾರಸ್‌ನ ಘಟ್ಟಗಳನ್ನು ನೋಡಿದರೆ, ಅವು ಸಾವಿರಾರು ವರ್ಷಗಳ ಹಿಂದೆ ನಿರ್ಮಿಸಲಾದ ನದಿ ಮಾರ್ಗಗಳಾಗಿವೆ. ಕೊಲ್ಕತ್ತಾದೊಂದಿಗೆ ನೇರ ನೀರಿನ ಸಂಪರ್ಕದಿಂದಾಗಿ, ಬನಾರಸ್ ಅನೇಕ ಶತಮಾನಗಳವರೆಗೆ ವ್ಯಾಪಾರ ಮತ್ತು ವ್ಯವಹಾರದ ಪ್ರಮುಖ ಕೇಂದ್ರವಾಗಿತ್ತು.
ಮತ್ತೊಂದು ಆಸಕ್ತಿದಾಯಕ ಉದಾಹರಣೆಯೆಂದರೆ ತಮಿಳುನಾಡಿನ ತಂಜಾವೂರಿನಲ್ಲಿರುವ ʻಕಲ್ಲನೈʼ ಅಣೆಕಟ್ಟು. ಈ ʻಕಲ್ಲನೈʼ ಅಣೆಕಟ್ಟನ್ನು ಚೋಳ ಸಾಮ್ರಾಜ್ಯದ ಆಳ್ವಿಕೆಯಲ್ಲಿ ನಿರ್ಮಿಸಲಾಯಿತು. ಈ ಅಣೆಕಟ್ಟು ಸುಮಾರು 2000 ವರ್ಷಗಳಷ್ಟು ಹಳೆಯದಾಗಿದೆ ಮತ್ತು ಈ ಅಣೆಕಟ್ಟು ಇಂದಿಗೂ ಕಾರ್ಯನಿರ್ವಹಿಸುತ್ತಿರುವುದನ್ನು ತಿಳಿದರೆ ಪ್ರಪಂಚದಾದ್ಯಂತದ ಜನರು ಚಕಿತರಾಗುತ್ತಾರೆ. 2000 ವರ್ಷಗಳ ಹಿಂದೆ ನಿರ್ಮಿಸಲಾದ ಈ ಅಣೆಕಟ್ಟು ಇನ್ನೂ ಈ ಪ್ರದೇಶದಲ್ಲಿ ಸಮೃದ್ಧಿಯನ್ನು ತರುತ್ತಿದೆ. ಇದರ ಆಧಾರದ ಮೇಲೆ ಭಾರತದ ಪರಂಪರೆ ಏನು, ಅದು ಎಂತಹ ಪರಿಣತಿಯನ್ನು ಹೊಂದಿದೆ, ಅದು ಎಂತಹ ಸಾಮರ್ಥ್ಯವನ್ನು ಹೊಂದಿದೆ ಎಂದು ನೀವು ಊಹಿಸಬಹುದು. ದುರದೃಷ್ಟವಶಾತ್, ಸ್ವಾತಂತ್ರ್ಯದ ನಂತರ, ಆಧುನಿಕ ಮೂಲಸೌಕರ್ಯಕ್ಕೆ ಅಗತ್ಯ ಪ್ರಮಾಣದಲ್ಲಿ ಒತ್ತು ನೀಡಲಿಲ್ಲ. ಹಲವು ದಶಕಗಳಿಂದಲೂ, ʻಬಡತನವು ಮನಸ್ಸಿನ ಸ್ಥಿತಿ - ಬಡತನವು ಒಂದು ಸದ್ಗುಣʼ ಎಂಬ ಆಲೋಚನೆ ನಮ್ಮ ದೇಶದಲ್ಲಿ ಮೇಲುಗೈ ಸಾಧಿಸಿದೆ. ಈ ಚಿಂತನೆಯು ಹಿಂದಿನ ಸರಕಾರಗಳು ದೇಶದ ಮೂಲಸೌಕರ್ಯದಲ್ಲಿ ಹೂಡಿಕೆ ಮಾಡುವುದನ್ನು ತಡೆಯಿತು. ಏಕೆಂದರೆ ಬಡತನ ನಿವಾರಣೆಯು ಹಿಂದಿನ ಸರಕಾರಗಳ ʻವೋಟ್ ಬ್ಯಾಂಕ್ʼ ರಾಜಕಾರಣಕ್ಕೆ ಪೂರಕವಾಗಿರಲಿಲ್ಲ. ನಮ್ಮ ಸರಕಾರವು ದೇಶವನ್ನು ಈ ಚಿಂತನೆಯಿಂದ ಹೊರತಂದಿದೆ ಮಾತ್ರವಲ್ಲ, ಆಧುನಿಕ ಮೂಲಸೌಕರ್ಯಗಳಲ್ಲಿ ದಾಖಲೆಯ ಹೂಡಿಕೆಗಳನ್ನು ಮಾಡುತ್ತಿದೆ.
ಸ್ನೇಹಿತರೇ,
ದೇಶವು ಈಗಾಗಲೇ ಈ ಹೊಸ ಚಿಂತನೆ ಮತ್ತು ಈ ಪ್ರಯತ್ನಗಳ ಫಲಿತಾಂಶಕ್ಕೆ ಸಾಕ್ಷಿಯಾಗಿದೆ. ಇಂದು, ರಾಷ್ಟ್ರೀಯ ಹೆದ್ದಾರಿಗಳ ಸರಾಸರಿ ವಾರ್ಷಿಕ ನಿರ್ಮಾಣವು 2014ರ ಹಿಂದಿನ ದಿನಗಳಿಗೆ ಹೋಲಿಸಿದರೆ ಬಹುತೇಕ ದ್ವಿಗುಣಗೊಂಡಿದೆ. ಅಂತೆಯೇ, 2014ಕ್ಕಿಂತ ಮೊದಲು, ಪ್ರತಿ ವರ್ಷ 600 ಕಿಲೋಮೀಟರ್ ರೈಲು ಮಾರ್ಗಗಳನ್ನು ವಿದ್ಯುದ್ದೀಕರಿಸಲಾಗುತ್ತಿತ್ತು. ಇಂದು ಇದು ಸುಮಾರು 4000 ಕಿಲೋಮೀಟರ್ ಗಳನ್ನು ತಲುಪುತ್ತಿದೆ. ನಾವು ವಿಮಾನ ನಿಲ್ದಾಣಗಳ ವಿಷಯವನ್ನು ಹೇಳುವುದಾದರೆ, ವಿಮಾನ ನಿಲ್ದಾಣಗಳ ಸಂಖ್ಯೆಯೂ 2014 ರಲ್ಲಿ 74 ಇದ್ದದ್ದು ಈಗ ಸುಮಾರು 150ಕ್ಕೆ ಏರಿದೆ. ಅಂದರೆ, ಅದು ದ್ವಿಗುಣಗೊಂಡಿದೆ. ಅಂದರೆ, ಇಷ್ಟು ಕಡಿಮೆ ಅವಧಿಯಲ್ಲಿ 150 ವಿಮಾನ ನಿಲ್ದಾಣಗಳನ್ನು ಪೂರ್ಣಗೊಳಿಸಲಾಗಿದೆ. ಅಂತೆಯೇ, ಇಂದಿನ ಜಾಗತೀಕರಣದ ಯುಗದಲ್ಲಿ, ಸಮುದ್ರ ಬಂದರು ಸಹ ಬಹಳ ನಿರ್ಣಾಯಕವಾಗಿದೆ. ನಮ್ಮ ಬಂದರುಗಳ ಸಾಮರ್ಥ್ಯ ಹೆಚ್ಚಳವು ಮೊದಲಿಗೆ ಹೋಲಿಸಿದರೆ ಬಹುತೇಕ ದ್ವಿಗುಣಗೊಂಡಿದೆ.
ಸ್ನೇಹಿತರೇ,
ಮೂಲಸೌಕರ್ಯ ನಿರ್ಮಾಣವನ್ನು ದೇಶದ ಆರ್ಥಿಕತೆಯ ಪ್ರೇರಕ ಶಕ್ತಿ ಎಂದು ನಾವು ಪರಿಗಣಿಸುತ್ತೇವೆ. ಈ ಮಾರ್ಗವನ್ನು ಅನುಸರಿಸಿ, ಭಾರತವು 2047ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಗುರಿಯನ್ನು ಸಾಧಿಸಲಿದೆ. ಈಗ ನಾವು ನಮ್ಮ ವೇಗವನ್ನು ಇನ್ನಷ್ಟು ಹೆಚ್ಚಿಸಬೇಕಾಗಿದೆ. ಈಗ ನಮ್ಮ ಪ್ರಯಾಣವು ʻಟಾಪ್ ಗೇರ್ʼನಲ್ಲಿ ಇರಬೇಕು. ʻಪಿಎಂ ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ʼ ಈ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ʻಪಿಎಂ ಗತಿಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ʼ ಉಪಕ್ರಮವು ಭಾರತದ ಮೂಲಸೌಕರ್ಯ ಹಾಗೂ ಭಾರತದ ಬಹು ಮಾದರಿ ಸರಕು-ಸಾಗಣೆಯನ್ನು ಪುನರುಜ್ಜೀವಗೊಳಿಸಲಿದೆ. ಒಂದು ರೀತಿಯಲ್ಲಿ, ಇದು ಆರ್ಥಿಕ ಮತ್ತು ಮೂಲಸೌಕರ್ಯ ಯೋಜನೆ ಮತ್ತು ಅಭಿವೃದ್ಧಿಯನ್ನು ಸಂಯೋಜಿಸಲು ಉತ್ತಮ ಸಾಧನವಾಗಿದೆ. ಒಂದು ವಿಷಯವನ್ನು ನೆನಪಿಗೆ ತಂದುಕೊಳ್ಳಲು ಪ್ರಯತ್ನಿಸಿ. ಈ ಮುನ್ನ ಬಂದರುಗಳು ಮತ್ತು ವಿಮಾನ ನಿಲ್ದಾಣಗಳನ್ನು ನಿರ್ಮಿಸುವಾಗಲೆಲ್ಲಾ, ಮೊದಲ ಮೈಲಿ ಮತ್ತು ಕೊನೆಯ ಮೈಲಿ ಸಂಪರ್ಕಕ್ಕೆ ಆದ್ಯತೆ ನೀಡಲಿಲ್ಲ. ಇದು ನಮ್ಮ ಬಹುದೊಡ್ಡ ಸಮಸ್ಯೆಗಳಲ್ಲಿ ಒಂದಾಗಿತ್ತು. ವಿಶೇಷ ಆರ್ಥಿಕ ವಲಯಗಳು ಮತ್ತು ಕೈಗಾರಿಕಾ ಟೌನ್‌ಶಿಪ್‌ಗಳು ತಲೆ ಎತ್ತುತ್ತಿದ್ದವು. ಆದರೆ ಸರಿಯಾದ ಸಂಪರ್ಕ ಹಾಗೂ ವಿದ್ಯುತ್, ನೀರು ಮತ್ತು ಅನಿಲ ಪೈಪ್‌ಲೈನ್‌ಗಳಂತಹ ಮೂಲಸೌಕರ್ಯಗಳ ಲಭ್ಯತೆ ಸಾಧಿಸುವ ವೇಳೆಗೆ ಸಾಕಷ್ಟು ವಿಳಂಬವಾಯಿತು.
ಪರಿಣಾಮವಾಗಿ, ಸರಕು-ಸಾಗಣೆಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳು ಮನೆಮಾಡಿದ್ದವು. ದೇಶದ ಜಿಡಿಪಿಯ ಹೆಚ್ಚಿನ ಭಾಗವು ಅನಗತ್ಯವಾಗಿ ಪೋಲಾಗುತ್ತಿತ್ತು. ಅಲ್ಲದೆ, ಪ್ರತಿಯೊಂದು ರೀತಿಯ ಅಭಿವೃದ್ಧಿ ಯೋಜನೆಗಳೂ ಒಂದಲ್ಲಾ ಒಂದು ರೀತಿಯಲ್ಲಿ ಸ್ಥಗಿತಗೊಳ್ಳುತ್ತಿದ್ದವು. ಈಗ ಈ ಎಲ್ಲ ಸೌಲಭ್ಯಗಳನ್ನು ನಿಗದಿತ ಸಮಯ ಮಿತಿಯೊಂದಿಗೆ ಪರಸ್ಪರ ಹೊಂದಿಸಲಾಗುತ್ತಿದೆ. ಎಲ್ಲರನ್ನೂ ಒಳಗೊಳ್ಳುವ ಮೂಲಕ ಒಂದು ರೀತಿಯ ನೀಲನಕ್ಷೆಯನ್ನು ಸಿದ್ಧಪಡಿಸಲಾಗುತ್ತಿದೆ. ʻಪ್ರಧಾನಮಂತ್ರಿ ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ʼನ ಫಲಿತಾಂಶವೂ ಇಂದು ಗೋಚರಿಸುತ್ತಿರುವುದು ನನಗೆ ಸಂತಸ ತಂದಿದೆ. ನಮ್ಮ ಸರಕು-ಸಾಗಣೆ ದಕ್ಷತೆಯ ಮೇಲೆ ಪರಿಣಾಮ ಬೀರುವ ಆ ಅಂತರಗಳನ್ನು ನಾವು ಗುರುತಿಸಿದ್ದೇವೆ. ಆದ್ದರಿಂದ, ಈ ವರ್ಷದ ಬಜೆಟ್‌ನಲ್ಲಿ 100 ನಿರ್ಣಾಯಕ ಯೋಜನೆಗಳಿಗೆ ಆದ್ಯತೆ ನೀಡಲಾಗಿದೆ ಮತ್ತು ಅವುಗಳಿಗೆ 75,000 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ಗುಣಮಟ್ಟ ಮತ್ತು ಬಹು ಮಾದರಿ ಮೂಲಸೌಕರ್ಯದೊಂದಿಗೆ, ನಮ್ಮ ಸರಕು-ಸಾಗಣೆ ವೆಚ್ಚವು ಮುಂಬರುವ ದಿನಗಳಲ್ಲಿ ಮತ್ತಷ್ಟು ಕಡಿಮೆಯಾಗಲಿದೆ. ಇದು ಭಾರತದಲ್ಲಿ ತಯಾರಿಸಿದ ಸರಕುಗಳ ಮೇಲೆ, ನಮ್ಮ ಉತ್ಪನ್ನಗಳ ಸಾಮರ್ಥ್ಯದ ಮೇಲೆ ಬಹಳ ಸಕಾರಾತ್ಮಕ ಪರಿಣಾಮ ಬೀರಲಿದೆ. ಸರಕು-ಸಾಗಣೆ ವಲಯದ ಜೊತೆಗೆ, ಸುಗಮ ಜೀವನ ಮತ್ತು ಸಗುಮ ವ್ಯವಹಾರದಲ್ಲೂ ಸಾಕಷ್ಟು ಸುಧಾರಣೆಯಾಗಲಿದೆ. ಇಂತಹ ಸನ್ನಿವೇಶದಲ್ಲಿ, ಖಾಸಗಿ ವಲಯದ ಭಾಗವಹಿಸುವಿಕೆಯ ಸಾಧ್ಯತೆಗಳು ಸಹ ನಿರಂತರವಾಗಿ ಹೆಚ್ಚುತ್ತಿವೆ. ಈ ಯೋಜನೆಗಳಲ್ಲಿ ಭಾಗವಹಿಸಲು ನಾನು ಖಾಸಗಿ ವಲಯವನ್ನು ಆಹ್ವಾನಿಸುತ್ತೇನೆ.
ಸ್ನೇಹಿತರೇ,
ಖಂಡಿತವಾಗಿಯೂ ನಮ್ಮ ರಾಜ್ಯಗಳು ಸಹ ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇದಕ್ಕಾಗಿ ರಾಜ್ಯ ಸರಕಾರಗಳು ಹಣದ ಕೊರತೆಯನ್ನು ಎದುರಿಸಬಾರದು ಎಂದು ಸರಕಾರವು 50 ವರ್ಷಗಳ ಬಡ್ಡಿರಹಿತ ಸಾಲವನ್ನು ಇನ್ನೂ ಒಂದು ವರ್ಷ ಮುಂದುವರಿಸುತ್ತಿದೆ. ಇದರಲ್ಲಿ, ಕಳೆದ ವರ್ಷದ ಬಜೆಟ್ ವೆಚ್ಚಕ್ಕೆ ಹೋಲಿಸಿದರೆ ಶೇಕಡಾ 30 ರಷ್ಟು ಹೆಚ್ಚಳ ಕಂಡುಬಂದಿದೆ. ರಾಜ್ಯಗಳು ಗುಣಮಟ್ಟದ ಮೂಲಸೌಕರ್ಯಕ್ಕೆ ಉತ್ತೇಜನ ನೀಡುವುದನ್ನು ಖಚಿತಪಡಿಸಿಕೊಳ್ಳುವುದು ಇದರ ಉದ್ದೇಶವಾಗಿದೆ.
ಸ್ನೇಹಿತರೇ,
ಈ ವೆಬಿನಾರ್‌ನಲ್ಲಿ, ನಾನು ನಿಮ್ಮೆಲ್ಲರನ್ನೂ ಮತ್ತೊಂದು ವಿಷಯದ ಬಗ್ಗೆ ಆಲೋಚಿಸುವಂತೆ ಒತ್ತಾಯಿಸುತ್ತೇನೆ. ಆಧುನಿಕ ಮೂಲಸೌಕರ್ಯಗಳ ನಿರ್ಮಾಣಕ್ಕಾಗಿ ವಿವಿಧ ರೀತಿಯ ವಸ್ತುಗಳನ್ನು ಹೊಂದಿರುವುದು ಅಷ್ಟೇ ಮುಖ್ಯ. ಅಂದರೆ, ಇದು ನಮ್ಮ ಉತ್ಪಾದನಾ ಉದ್ಯಮಕ್ಕೆ ಭಾರಿ ಸಾಧ್ಯತೆಗಳನ್ನು ಸೃಷ್ಟಿಸುತ್ತದೆ. ಈ ವಲಯವು ತನ್ನ ಅಗತ್ಯಗಳು ಮತ್ತು ಮುನ್ಸೂಚನೆಗಳನ್ನು ಮುಂಚಿತವಾಗಿ ನಿರ್ಣಯಿಸಿದ್ದಾದರೆ, ಇದಕ್ಕಾಗಿ ಒಂದು ಕಾರ್ಯವಿಧಾನವನ್ನು ಅಭಿವೃದ್ಧಿಪಡಿಸಿದ್ದಾದರೆ, ನಿರ್ಮಾಣ ಉದ್ಯಮವು ವಸ್ತುಗಳನ್ನು ಸುಲಭವಾಗಿ ಸಂಗ್ರಹಿಸಲು ಸಾಧ್ಯವಾಗುತ್ತದೆ. ನಮಗೆ ಸಮಗ್ರ ವಿಧಾನದ ಅಗತ್ಯವಿದೆ; ನಾವು ಆವರ್ತನ ಆರ್ಥಿಕ ಭಾಗವನ್ನು ನಮ್ಮ ಭವಿಷ್ಯದ ನಿರ್ಮಾಣ ಕಾರ್ಯಗಳೊಂದಿಗೆ ಸಂಯೋಜಿಸಬೇಕು. 'ಕಸದಿಂದ ರಸʼ ಎಂಬ ಪರಿಕಲ್ಪನೆಯೂ ಅದರ ಒಂದು ಭಾಗವಾಗಬೇಕು. ಜೊತೆಗೆ, ʻಪಿಎಂ ಗತಿ-ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ʼ ಕೂಡ ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ನಾನು ನಂಬಿದ್ದೇನೆ.
ಸ್ನೇಹಿತರೇ,
ಯಾವುದೇ ಒಂದು ಸ್ಥಳದಲ್ಲಿ ಮೂಲಸೌಕರ್ಯದ ಅಭಿವೃದ್ಧಿಯಾದಾಗ, ಅದು ತನ್ನೊಂದಿಗೆ ಅಭಿವೃದ್ಧಿಯನ್ನು ತರುತ್ತದೆ. ಒಂದು ರೀತಿಯಲ್ಲಿ, ಅಭಿವೃದ್ಧಿಯ ಸಂಪೂರ್ಣ ಪರಿಸರ ವ್ಯವಸ್ಥೆ ಇದ್ದಲ್ಲಿ, ಏಕಕಾಲದಲ್ಲಿ ಅದು ತನ್ನಷ್ಟಕ್ಕೆ ತಾನೇ ನಿರ್ಮಾಣಗೊಳ್ಳಲು ಆರಂಭವಾಗುತ್ತದೆ. ಕಛ್‌ನಲ್ಲಿ ಭೂಕಂಪ ಸಂಭವಿಸಿದ ನನ್ನ ಹಳೆಯ ಆಡಳಿತದ ದಿನಗಳನ್ನು ನಾನು ಸದಾ ನೆನಪಿಸಿಕೊಳ್ಳುತ್ತೇನೆ. ಯಾವುದೇ ಸರಕಾರಕ್ಕೆ ಇಷ್ಟು ದೊಡ್ಡ ದುರಂತ ಅಥವಾ ಅಪಘಾತ ಎದುರಾದರೆ, ಅದನ್ನು ಮೊದಲೇ ಊಹಿಸುವುದು ಕಷ್ಟ. ಸಾಧ್ಯವಾದಷ್ಟು ಬೇಗ ಕೆಲಸವನ್ನು ಪೂರ್ಣಗೊಳಿಸಿ ಸಾಮಾನ್ಯ ಜೀವನದತ್ತ ಸಾಗಲು ಪ್ರಾರಂಭಿಸಿ ಎಂದು ನಾನು ಅವರಿಗೆ ಹೇಳಿದೆ. ನನ್ನ ಮುಂದೆ ಎರಡು ಆಯ್ಕೆಗಳಿದ್ದವು. ನಾನು ತಾತ್ಕಾಲಿಕ ಪರಿಹಾರಗಳನ್ನು ಬಳಸಬಹುದಿತ್ತು. ಆ ಪ್ರದೇಶದಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಗಳನ್ನು ಕೈಗೊಂಡ ನಂತರ, ಸಣ್ಣ ರಿಪೇರಿಗಳನ್ನು ಮಾಡಿ ಆ ಜಿಲ್ಲೆಗಳನ್ನು ಅವುಗಳ ಹಣೆಬರಹಕ್ಕೆ ಬಿಡಬಹುದಾಗಿತ್ತು. ಅಥವಾ ಅಥವಾ ವಿಪತ್ತನ್ನು ಅವಕಾಶವಾಗಿ ಪರಿವರ್ತಿಸಬಹುದಿತ್ತು. ಕಛ್ ಅನ್ನು ಆಧುನೀಕರಿಸಲು ನಾನು ಹೊಸ ವಿಧಾನದೊಂದಿಗೆ ಮುಂದುವರಿಯಲು ಬಯಸಿದೆ. ನಷ್ಟಗಳು ಇರಬಹುದು ಆದರೆ ಹೊಸದನ್ನು ಮಾಡುವ ಸಮಯ ಇದು, ಒಳ್ಳೆಯದು ಮತ್ತು ದೊಡ್ಡದನ್ನು ಮಾಡುವ ಸಮಯ ಇದೆಂದು ತಿಳಿದೆ.
ಸ್ನೇಹಿತರೇ,
ನಾನು ರಾಜಕೀಯ ಲಾಭ ಅಥವಾ ನಷ್ಟದ ಬಗ್ಗೆ ಯೋಚಿಸಲಿಲ್ಲ ಎಂಬ ವಿಷಯ ತಿಳಿದರೆ ನಿಮಗೆ ಸಂತೋಷವಾಗಬಹುದು. ಅಭಿನಂದನೆಗಳಿಗಾಗಿ ತಾತ್ಕಾಲಿಕ ಕೆಲಸಗಳನ್ನು ಮಾಡುವ ಮೂಲಕ ನಾನು ರಾಜಿ ಮಾಡಿಕೊಳ್ಳಲಿಲ್ಲ. ಬದಲಾಗಿ ನಾನು ಒಂದು ದೊಡ್ಡ ಮಟ್ಟದ ಕೆಲಸಕ್ಕೆ ಕೈ ಹಾಕಿದೆ. ನಾನು ಬೇರೆಯದ್ದೇ ಆಯ್ಕೆಯನ್ನು ಆರಿಸಿಕೊಂಡೆ ಮತ್ತು ಕಛ್‌ನಲ್ಲಿ ಅಭಿವೃದ್ಧಿಗಾಗಿ ಮೂಲಸೌಕರ್ಯವನ್ನು ನನ್ನ ಅಂತಿಮ ಗುರಿಯನ್ನಾಗಿ ಮಾಡಿಕೊಂಡೆ. ಆದ್ದರಿಂದ, ಆ ಸಮಯದಲ್ಲಿ, ಗುಜರಾತ್ ಸರಕಾರವು ಕಛ್‌ನಲ್ಲಿ ರಾಜ್ಯದ ಅತ್ಯುತ್ತಮ ರಸ್ತೆಗಳನ್ನು, ಅಗಲವಾದ ರಸ್ತೆಗಳನ್ನು ನಿರ್ಮಿಸಿತು; ಬೃಹತ್ ನೀರಿನ ಟ್ಯಾಂಕ್‌ಗಳನ್ನು ನಿರ್ಮಿಸಿತು, ಮತ್ತು ದೀರ್ಘಕಾಲದವರೆಗೆ ಬಾಳಿಕೆ ಬರುವ ವಿದ್ಯುತ್ ವ್ಯವಸ್ಥೆಯನ್ನು ನಿರ್ಮಿಸಿತು. ಅನೇಕ ಜನರು "ನೀವು ಏಕೆ ಇಷ್ಟು ವಿಶಾಲವಾದ ರಸ್ತೆಗಳನ್ನು ನಿರ್ಮಿಸುತ್ತಿದ್ದೀರಿ? ಐದು ಅಥವಾ ಹತ್ತು ನಿಮಿಷಗಳಲ್ಲಿ ಒಂದೇ ಒಂದು ವಾಹನವೂ ಇಲ್ಲಿ ಹಾದುಹೋಗುವುದಿಲ್ಲ. ಅದರಿಂದ ಏನು ಪ್ರಯೋಜನ? ನೀವು ತುಂಬಾ ಖರ್ಚು ಮಾಡುತ್ತಿದ್ದೀರಿ" ಎಂದು ನನಗೆ ಹೇಳುತ್ತಿದ್ದರು. ಅವರು ನನಗೆ ಹಾಗೆ ಹೇಳುತ್ತಿದ್ದರು. ಕಛ್‌ನಲ್ಲಿ ಒಂದು ರೀತಿಯಲ್ಲಿ ನಕಾರಾತ್ಮಕ ಬೆಳವಣಿಗೆ ಇತ್ತು. ಅಲ್ಲಿಯವರೆಗೆ, ಕಳೆದ 50 ವರ್ಷಗಳಿಂದ ಜನರು ಕಛ್ ಅನ್ನು ತೊರೆಯುತ್ತಿದ್ದರು.
ಆದರೆ ಸ್ನೇಹಿತರೇ,
ಆ ಸಮಯದಲ್ಲಿ ಆಗಿನ ಅಗತ್ಯಗಳ ಜೊತೆಗೆ ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಮೂಲಸೌಕರ್ಯದ ಮೇಲೆ ನಾವು ಮಾಡಿದ ಹೂಡಿಕೆ ಹಾಗೂ ನಾವು ಕೈಗೊಂಡ ಯೋಜನೆಗಳಿಂದಾಗಿ ಇಂದು ಕಛ್ ಜಿಲ್ಲೆಯು ಅದ್ಭುತ ಪ್ರಯೋಜನಗಳನ್ನು ಪಡೆಯುತ್ತಿದೆ. ಇಂದು ಕಛ್ ಗುಜರಾತ್‌ನ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಜಿಲ್ಲೆಯಾಗಿದೆ. ಈ ಹಿಂದೆ ಗಡಿಯಲ್ಲಿ ನಿಯೋಜಿಸಲಾದ ಅಧಿಕಾರಿಗಳು, ಕಛ್ ಜಿಲ್ಲೆಯಲ್ಲಿ ಕೆಲಸ ಮಾಡುವುದೆಂದರೆ ಒಂದು ರೀತಿಯಲ್ಲಿ ಶಿಕ್ಷೆ ಎಂದು ಪರಿಗಣಿಸುತ್ತಿದ್ದರು. ಇದನ್ನು ಕಾಲಾಪಾನಿ ಶಿಕ್ಷೆ ಎಂದು ಕರೆಯಲಾಯಿತು. ಇಂದು ಇದು ಅತ್ಯಂತ ಅಭಿವೃದ್ಧಿ ಹೊಂದಿದ ಜಿಲ್ಲೆಯಾಗುತ್ತಿದೆ. ಒಂದು ಕಾಲದಲ್ಲಿ ನಿರ್ಜನವಾಗಿದ್ದ ಇಷ್ಟು ದೊಡ್ಡ ಪ್ರದೇಶವು ಈಗ ಅದ್ಭುತವಾಗಿದೆ ಮತ್ತು ಇಡೀ ದೇಶವು ಇಂದು ಅದರ ಬಗ್ಗೆ ಮಾತನಾಡುತ್ತಿದೆ. ಒಂದೇ ಜಿಲ್ಲೆಯಲ್ಲಿ ಐದು ವಿಮಾನ ನಿಲ್ದಾಣಗಳಿವೆ. ಇದರ ಕೀರ್ತಿಯು ವಿಪತ್ತನ್ನು ಅವಕಾಶವಾಗಿ ಪರಿವರ್ತಿಸಿದ ಕಛ್‌ನಲ್ಲಿ ನಿರ್ಮಿಸಲಾದ ಆಧುನಿಕ ಮೂಲಸೌಕರ್ಯಕ್ಕೆ ಸಲ್ಲುತ್ತದೆ. ನಾವು ಆ ಸಮಯದ ಅಗತ್ಯಗಳನ್ನು ಮೀರಿ ಭವಿಷ್ಯದ ದೃಷ್ಟಿಯಿಂದ ಯೋಚಿಸಿದೆವು ಮತ್ತು ಆ ಜಿಲ್ಲೆಯು ಅದರ ಫಲವನ್ನು ಪಡೆಯುತ್ತಿದೆ.
ಸ್ನೇಹಿತರೇ,
ಭೌತಿಕ ಮೂಲಸೌಕರ್ಯದ ಬಲದ ಜೊತೆಗೆ, ದೇಶದ ಸಾಮಾಜಿಕ ಮೂಲಸೌಕರ್ಯವು ಬಲವಾಗಿರಬೇಕು. ನಮ್ಮ ಸಾಮಾಜಿಕ ಮೂಲಸೌಕರ್ಯಗಳು ಬಲವಾಗಿದ್ದರೆ, ಹೆಚ್ಚು ಪ್ರತಿಭಾವಂತ ಯುವಕರು, ನುರಿತ ಯುವಕರು ಕೆಲಸ ಮಾಡಲು ಮುಂದೆ ಬರಲು ಸಾಧ್ಯವಾಗುತ್ತದೆ. ಅದಕ್ಕಾಗಿಯೇ ಕೌಶಲ್ಯ ಅಭಿವೃದ್ಧಿ, ಯೋಜನಾ ನಿರ್ವಹಣೆ, ಹಣಕಾಸು ಕೌಶಲ್ಯಗಳು, ಉದ್ಯಮಿ ಕೌಶಲ್ಯಗಳಂತಹ ಅನೇಕ ವಿಷಯಗಳಿಗೆ ಆದ್ಯತೆ ಮತ್ತು ಒತ್ತು ನೀಡುವುದು ಅಷ್ಟೇ ಅಗತ್ಯವಾಗಿದೆ. ಸಣ್ಣ ಮತ್ತು ದೊಡ್ಡ ಉದ್ಯಮಗಳೆರಡರಲ್ಲೂ ವಿವಿಧ ಕ್ಷೇತ್ರಗಳಲ್ಲಿ ಕೌಶಲ್ಯ ಮುನ್ಸೂಚನೆಗೆ ಸಂಬಂಧಿಸಿದಂತೆ ನಾವು ಒಂದು ಕಾರ್ಯವಿಧಾನವನ್ನು ಅಭಿವೃದ್ಧಿಪಡಿಸಬೇಕಾಗಿದೆ. ಇದು ದೇಶದ ಮಾನವ ಸಂಪನ್ಮೂಲ ಭಂಡಾರಕ್ಕೂ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ. ಈ ದಿಕ್ಕಿನಲ್ಲಿ ವೇಗವಾಗಿ ಕೆಲಸ ಮಾಡುವಂತೆ ನಾನು ಸರಕಾರದ ವಿವಿಧ ಸಚಿವಾಲಯಗಳಿಗೆ ಮನವಿ ಮಾಡಲು ಬಯಸುತ್ತೇನೆ.
ಸ್ನೇಹಿತರೇ,
ನೀವು ಮೂಲಸೌಕರ್ಯಗಳನ್ನು ನಿರ್ಮಿಸುವುದಷ್ಟೇ ಅಲ್ಲ, ಭಾರತದ ಬೆಳವಣಿಗೆಯ ಯುಗಕ್ಕೆ ವೇಗ ನೀಡಲು ಕೆಲಸ ಮಾಡುತ್ತಿದ್ದೀರಿ. ಅದಕ್ಕಾಗಿಯೇ ಈ ವೆಬಿನಾರ್‌ನಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬ ಮಧ್ಯಸ್ಥಗಾರರ ಪಾತ್ರ ಮತ್ತು ಅವರ ಸಲಹೆಗಳು ಬಹಳ ಮುಖ್ಯ. ನಾವು ಮೂಲಸೌಕರ್ಯಗಳ ಬಗ್ಗೆ ಮಾತನಾಡುವಾಗ, ಅದು ಬಹುತೇಕ ರೈಲು, ರಸ್ತೆ, ವಿಮಾನ ನಿಲ್ದಾಣ ಮತ್ತು ಬಂದರಿಗೆ ಸಂಬಂಧಿಸಿದ್ದಾಗಿರುತ್ತದೆ. ಆದರೆ ಈ ಬಾರಿಯ ಬಜೆಟ್‌ನಲ್ಲಿ, ರೈತರಿಗೆ ತಮ್ಮ ಉತ್ಪನ್ನಗಳನ್ನು ಶೇಖರಿಸಲು ಸಹಾಯಮಾಡುವ ನಿಟ್ಟಿನಲ್ಲಿ ಹಳ್ಳಿಗಳಲ್ಲಿ ಸಂಗ್ರಹಾಗಾರ ನಿರ್ಮಿಸುವ ಬೃಹತ್ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಸ್ವಲ್ಪ ಊಹಿಸಿ, ಈಗ ಎಂತಹ ದೊಡ್ಡ ಮೂಲಸೌಕರ್ಯವನ್ನು ನಾವು ರಚಿಸಬೇಕಾಗಿದೆ!
ದೇಶದಲ್ಲಿ ಸ್ವಾಸ್ಥ್ಯ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಲಕ್ಷಾಂತರ ಹಳ್ಳಿಗಳಲ್ಲಿ ಆರೋಗ್ಯ ಸೇವೆಗಳಿಗಾಗಿ ಅತ್ಯುತ್ತಮ ಸ್ವಾಸ್ಥ್ಯ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಇದು ಸಹ ಮೂಲಸೌಕರ್ಯವೇ. ನಾವು ಹೊಸ ರೈಲ್ವೆ ನಿಲ್ದಾಣಗಳನ್ನು ನಿರ್ಮಿಸುತ್ತಿದ್ದೇವೆ; ಇದು ಸಹ ಮೂಲಸೌಕರ್ಯದ ಕೆಲಸವೇ. ಪ್ರತಿ ಕುಟುಂಬಕ್ಕೂ ಶಾಶ್ವತ ಮನೆಗಳನ್ನು ಒದಗಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ; ಅದೂ ಸಹ ಮೂಲಸೌಕರ್ಯ ಸಂಬಂಧಿತ ಕೆಲಸವೇ. ಈ ಯೋಜನೆಗಳಲ್ಲಿ, ನಮಗೆ ಹೊಸ ತಂತ್ರಜ್ಞಾನ, ವಸ್ತುಗಳಲ್ಲಿ ನಾವೀನ್ಯತೆ, ನಿರ್ಮಾಣ ಸಮಯ ಮತ್ತು ಸಮಯ ಮಿತಿಯೊಳಗೆ ಹೇಗೆ ಕೆಲಸ ಮಾಡುವುದು ಬೇಕು ಎಂಬುದು ಮುಖ್ಯ. ಭಾರತವು ಈಗ ಈ ಎಲ್ಲ ಕ್ಷೇತ್ರಗಳಲ್ಲಿ ದೊಡ್ಡ ಮುನ್ನಡೆ ಸಾಧಿಸಬೇಕಾಗಿದೆ. ಅದಕ್ಕಾಗಿಯೇ ಈ ವೆಬಿನಾರ್ ತುಂಬಾ ನಿರ್ಣಾಯಕವಾಗಿದೆ.
ನಾನು ನಿಮ್ಮೆಲ್ಲರಿಗೂ ಶುಭ ಹಾರೈಸಲು ಬಯಸುತ್ತೇನೆ! ಈ ಬಜೆಟ್ ಅನ್ನು ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ ಕಾರ್ಯಗತಗೊಳಿಸಲು ನಿಮ್ಮ ಚಿಂತನ-ಮಂಥನ, ನಿಮ್ಮ ಆಲೋಚನೆಗಳು, ನಿಮ್ಮ ಅನುಭವಗಳು ನಿರ್ಣಾಯಕವಾಗುತ್ತವೆ. ಇದನ್ನು ವೇಗವಾಗಿ ಅನುಷ್ಠಾನಗೊಳಿಸಲಾಗುವುದು ಮತ್ತು ಅದರಿಂದ ಅತ್ಯುತ್ತಮ ಫಲಿತಾಂಶಗಳು ದೊರೆಯಲಿವೆ. ಇದನ್ನು ನಾನು ಬಲವಾಗಿ ನಂಬುತ್ತೇನೆ. ನಿಮ್ಮೆಲ್ಲರಿಗೂ ಶುಭ ಹಾರೈಕೆಗಳು.
ಧನ್ಯವಾದಗಳು!