ಇಲ್ಲಿರುವ ಎಲ್ಲಾ ಗೌರವಾನ್ವಿತ ಗಣ್ಯರೇ, ಎಲ್ಲಕ್ಕಿಂತ ಮೊದಲು ನಾನು ಮಾತಾ ವೈಷ್ಣೋ ದೇವಿ ಆವರಣದಲ್ಲಿ ನಡೆದ ದುರಂತ ಘಟನೆಗೆ ನನ್ನ ಸಂತಾಪಗಳನ್ನು ವ್ಯಕ್ತಪಡಿಸುತ್ತೇನೆ. ಕಾಲ್ತುಳಿತದಲ್ಲಿ ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡವರಿಗೆ ಮತ್ತು ಗಾಯಗೊಂಡವರಿಗೆ ನಾನು ಸಹಾನುಭೂತಿ ವ್ಯಕ್ತಪಡಿಸುತ್ತೇನೆ. ಕೇಂದ್ರ ಸರಕಾರವು ಜಮ್ಮು ಮತ್ತು ಕಾಶ್ಮೀರದ ಆಡಳಿತದ ಜೊತೆ ನಿರಂತರ ಸಂಪರ್ಕದಲ್ಲಿದೆ. ನಾನು ಉಪ ರಾಜ್ಯಪಾಲ ಮನೋಜ್ ಸಿನ್ಹಾ ಜೀ ಅವರ ಜೊತೆ ಮಾತನಾಡಿದ್ದೇನೆ. ಪರಿಹಾರ ಕಾರ್ಯಗಳಿಗೆ ಮತ್ತು ಗಾಯಾಳುಗಳ ಚಿಕಿತ್ಸೆಗೆ ಪೂರ್ಣ ಗಮನ ನೀಡಲಾಗುತ್ತಿದೆ.
ಸಹೋದರರೇ ಮತ್ತು ಸಹೋದರಿಯರೇ,
ಈ ಕಾರ್ಯಕ್ರಮದಲ್ಲಿ ನಮ್ಮ ಜೊತೆ ಸೇರ್ಪಡೆಗೊಂಡಿರುವ ನನ್ನ ಕೇಂದ್ರ ಸಂಪುಟದ ಸಹೋದ್ಯೋಗಿಗಳೇ, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳೇ, ರಾಜ್ಯಗಳ ಕೃಷಿ ಸಚಿವರೇ, ಇತರ ಗಣ್ಯರೇ ಮತ್ತು ದೇಶಾದ್ಯಂತದ ನನ್ನ ಮಿಲಿಯಾಂತರ ರೈತ ಸಹೋದರರೇ ಹಾಗು ಸಹೋದರಿಯರೇ. ಭಾರತದಲ್ಲಿ ವಾಸಿಸುತ್ತಿರುವ ಮತ್ತು ವಿದೇಶಗಳಲ್ಲಿ ವಾಸವಾಗಿರುವ ಭಾರತೀಯರಿಗೆ, ಭಾರತದ ಪ್ರತಿಯೊಬ್ಬ ಹಿತೈಷಿಗಳಿಗೆ ಮತ್ತು ವಿಶ್ವ ಸಮುದಾಯಕ್ಕೆ ಹೊಸ ವರ್ಷ 2022ರ ಶುಭಾಶಯಗಳು!.
ಈ ಸಂದರ್ಭಗಳು ನನಗೆ ಬಹಳ ಪ್ರೇರಣಾದಾಯಕವಾದಂತಹವು, ಈ ವರ್ಷದಾರಂಭದಲ್ಲಿ ದೇಶಾದ್ಯಂತದ ಕೋಟ್ಯಂತರ ರೈತರನ್ನು ಭೇಟಿಯಾಗುವ ಅವಕಾಶ ನನಗೆ ಲಭಿಸಿದೆ. ಇಂದು ದೇಶದ ಕೋಟ್ಯಂತರ ರೈತ ಕುಟುಂಬಗಳು, ಅದರಲ್ಲೂ ವಿಶೇಷವಾಗಿ ಸಣ್ಣ ರೈತರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ 10 ನೇ ಕಂತನ್ನು ಪಡೆದಿದ್ದಾರೆ. 20,000 ಕೋ.ರೂ.ಗಳನ್ನು ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿದೆ. ಇಂದು ರೈತರ ಉತ್ಪಾದನಾ ಸಂಘಟನೆಗಳ (ಎಫ್.ಪಿ.ಒ.) ಜೊತೆಗಿರುವ ರೈತರಿಗೂ ಹಣಕಾಸು ನೆರವನ್ನು ರವಾನಿಸಲಾಗಿದೆ. ನೂರಾರು ಎಫ್.ಪಿ.ಒ.ಗಳು ಇಂದು ಹೊಸ ಆರಂಭವನ್ನು ಮಾಡುತ್ತಿವೆ.
ಸ್ನೇಹಿತರೇ,
ನಮ್ಮ ದೇಶದಲ್ಲಿ ಹೀಗೊಂದು ಹೇಳಿಕೆ ಇದೆ: ''आमुखायाति कल्याणं कार्यसिद्धिं हि शंसति''
ಯಶಸ್ವೀ ಆರಂಭ ಕಾರ್ಯ ಸಾಧನೆಯ ಮುನ್ಸೂಚನೆ ಎಂಬುದಾಗಿ. ಒಂದು ರಾಷ್ಟ್ರವಾಗಿ ಕಳೆದು ಹೋದ 2021 ನ್ನು ಒಂದೇ ರೀತಿ ನೋಡಲು ಸಾಧ್ಯವಿದೆ. 2021 ರಲ್ಲಿ ಅತಿ ದೊಡ್ಡ ಜಾಗತಿಕ ಸಾಂಕ್ರಾಮಿಕದ ವಿರುದ್ಧ ಮಿಲಿಯಾಂತರ ಭಾರತೀಯರು ಸಾಮೂಹಿಕ ಬಲದೊಂದಿಗೆ ಹೋರಾಡಿದ್ದಕ್ಕೆ ನಾವು ಸಾಕ್ಷಿಯಾಗಿದ್ದೇವೆ. ಇಂದು ನಾವು ಹೊಸ ವರ್ಷದತ್ತ ಸಾಗುತ್ತಿರುವಾಗ, ಕಳೆದ ವರ್ಷದ ನಮ್ಮ ಪ್ರಯತ್ನಗಳಿಂದ ಪ್ರೇರಣೆ ಪಡೆದು ನಾವು ಹೊಸ ನಿರ್ಧಾರಗಳತ್ತ ಸಾಗಬೇಕಿದೆ.
ಈ ವರ್ಷ ನಮ್ಮ ಸ್ವಾತಂತ್ರ್ಯದ 75 ನೇ ವರ್ಷ. ಹೊಸ ಹುರುಪು, ಸಂಭ್ರಮದೊಂದಿಗೆ ಮುನ್ನಡೆ ಸಾಧಿಸಲು ದೇಶಕ್ಕಾಗಿ ನಿರ್ಧಾರಗಳ ರೋಮಾಂಚಕ ಪ್ರಯಾಣ ಆರಂಭಿಸಲು ಇದು ಸಕಾಲ. 2021 ರಲ್ಲಿ ನಾವು ಭಾರತೀಯರು ದೃಢ ನಿರ್ಧಾರ ಕೈಗೊಂಡರೆ, ಬಹಳ ದೊಡ್ಡ ಗುರಿ ಕೂಡಾ ಸಣ್ಣದಾಗುತ್ತದೆ ಎಂಬ ಸಂಗತಿಯನ್ನು ಇಡೀ ವಿಶ್ವಕ್ಕೆ ತೋರಿಸಿದ್ದೇವೆ. ಭಾರತದಂತಹ ದೊಡ್ಡ ದೇಶ, ವೈವಿಧ್ಯಮಯ ದೇಶ, ಇಷ್ಟೊಂದು ಸಣ್ಣ ಅವಧಿಯಲ್ಲಿ 145 ಕೋಟಿ ಲಸಿಕಾ ಡೋಸುಗಳನ್ನು ನೀಡಲು ಸಮರ್ಥವಾಗುತ್ತದೆ ಎಂದು ಯಾರು ಭಾವಿಸಿದ್ದರು?. ಒಂದು ದಿನದಲ್ಲಿ ಭಾರತ 2.5 ಕೋಟಿ ಲಸಿಕಾ ಡೋಸುಗಳನ್ನು ನೀಡಿ ದಾಖಲೆ ಸ್ಥಾಪಿಸುತ್ತದೆ ಎಂದು ಯಾರು ತಾನೇ ಭಾವಿಸಿದ್ದರು?. ಭಾರತವು ಎರಡು ಕೋಟಿ ಮನೆಗಳಿಗೆ ಒಂದು ವರ್ಷದಲ್ಲಿ ಕೊಳವೆ ಮೂಲಕ ನೀರು ಪೂರೈಕೆ ಸಂಪರ್ಕ ಒದಗಿಸುತ್ತದೆ ಎಂದು ಯಾರು ತಾನೇ ಭಾವಿಸಿದ್ದರು?.
ಭಾರತವು ತನ್ನ 80 ಕೋಟಿ ನಾಗರಿಕರಿಗೆ ಈ ಕೊರೊನಾ ಅವಧಿಯಲ್ಲಿ ಕೆಲವು ತಿಂಗಳಿನಿಂದ ಉಚಿತ ಪಡಿತರವನ್ನು ಖಾತ್ರಿಪಡಿಸುತ್ತಿದೆ. ಮತ್ತು ಭಾರತವು ಈ ಉಚಿತ ಪಡಿತರ ಯೋಜನೆಯ ಮೇಲೆ 2.60 ಲಕ್ಷ ಕೋ.ರೂ.ಗಳಿಗೂ ಅಧಿಕ ಮೊತ್ತವನ್ನು ವ್ಯಯ ಮಾಡಿದೆ. ಗ್ರಾಮಗಳು, ಬಡವರು, ಹಳ್ಳಿಗಳಲ್ಲಿ ವಾಸಿಸುತ್ತಿರುವ ನಮ್ಮ ರೈತರು ಮತ್ತು ಕೃಷಿ ಕಾರ್ಮಿಕರು ಈ ಉಚಿತ ಆಹಾರ ಧಾನ್ಯಗಳ ಯೋಜನೆಯಿಂದ ಭಾರೀ ಪ್ರಯೋಜನಗಳನ್ನು ಪಡೆದಿದ್ದಾರೆ.
ಸ್ನೇಹಿತರೇ,
ನಮ್ಮ ದೇಶದಲ್ಲೊಂದು ಹೇಳಿಕೆ ಇದೆ: संघे शक्ति कलौ युगे।
ಅಂದರೆ ಈ ಕಾಲದಲ್ಲಿ ಅಧಿಕಾರ, ಶಕ್ತಿ ಬರುವುದು ಸಂಘಟನೆಯಿಂದ ಮಾತ್ರ ಎಂಬುದಾಗಿ. ಸಂಘ ಶಕ್ತಿ, ಅಂದರೆ ಎಲ್ಲರ ಪ್ರಯತ್ನಗಳು ನಿರ್ಧಾರಗಳ ಈಡೇರಿಕೆಗೆ ಹಾದಿ. 130 ಕೋಟಿ ಭಾರತೀಯರು ಒಟ್ಟಾಗಿ ಒಂದು ಹೆಜ್ಜೆ ಮುಂದಿಟ್ಟರೆ, ಅದು ಒಂದು ಹೆಜ್ಜೆ ಮಾತ್ರವಲ್ಲ, ಅದು 130 ಕೋಟಿ ಹೆಜ್ಜೆಗಳು. ಏನಾದರೂ ಒಳಿತು ಮಾಡುವುದರಿಂದ ನಮಗೆ ಒಂದು ಸಮಾಧಾನ ಲಭಿಸುತ್ತದೆ ಎಂಬುದು ನಮ್ಮ ಸ್ವಭಾವವಾಗಿದೆ. ಮತ್ತು ಇಂತಹ ಒಳ್ಳೆಯ ಕೆಲಸ ಮಾಡುವವರು ಒಗ್ಗೂಡಿದಾಗ ಮುತ್ತು ರತ್ನಗಳ ಮಾಲೆಯೊಂದು ರಚನೆಯಾಗುತ್ತದೆ. ಭಾರತ ಮಾತೆ ಹೊಳೆಯುತ್ತಾಳೆ. ದೇಶವನ್ನು ಕಟ್ಟಲು ತಮ್ಮ ಜೀವನವನ್ನು ವಿನಿಯೋಗಿಸುತ್ತಿರುವ ಅನೇಕ ಜನರು ಇದ್ದಾರೆ. ಈ ಸಂಗತಿಗಳನ್ನು ಅವರು ಈ ಮೊದಲೂ ಮಾಡುತ್ತಿದ್ದರು. ಆದರೆ ಅವರ ಪ್ರಯತ್ನಗಳು ಈಗ ಗುರುತಿಸಲ್ಪಡುತ್ತಿವೆ. ಇಂದು ಪ್ರತಿಯೊಬ್ಬ ಭಾರತೀಯರ ಶಕ್ತಿ ಕೂಡಾ ಸಾಮೂಹಿಕ ಶಕ್ತಿಯಾಗಿ ಪರಿವರ್ತಿತಗೊಳ್ಳುತ್ತಿದೆ ಮತ್ತು ದೇಶದ ಅಭಿವೃದ್ಧಿಗೆ ಹೊಸ ವೇಗ ಹಾಗು ಮತ್ತು ಹೊಸ ಶಕ್ತಿಯನ್ನು ಒದಗಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಪದ್ಮ ಪ್ರಶಸ್ತಿ ಪಡೆಯುತ್ತಿರುವ ಜನರ ಹೆಸರುಗಳನ್ನು ಮತ್ತು ಅವರ ಮುಖಗಳನ್ನು ನೋಡುವಾಗ ನಮ್ಮಲ್ಲಿ ಹರ್ಷ ಉಕ್ಕುತ್ತದೆ. ಪ್ರತಿಯೊಬ್ಬರ ಪ್ರಯತ್ನಗಳಿಂದಾಗಿ ಭಾರತವು ಇಂತಹ ದೊಡ್ಡ ಜಾಗತಿಕ ಸಾಂಕ್ರಾಮಿಕವಾದ ಕೊರೊನಾ ವಿರುದ್ಧ ಹೋರಾಡುತ್ತಿದೆ.
ಸಹೋದರರೇ ಮತ್ತು ಸಹೋದರಿಯರೇ,
ಕೊರೊನಾದ ಈ ಅವಧಿಯಲ್ಲಿ ಆರೋಗ್ಯ ವಲಯವನ್ನು ಬಲಪಡಿಸಲು ನಿರಂತರ ಪ್ರಯತ್ನಗಳು ನಡೆದಿವೆ ಮತ್ತು ಆರೋಗ್ಯ ಮೂಲಸೌಕರ್ಯವನ್ನು ವಿಸ್ತರಿಸಲಾಗಿದೆ. ನೂರಾರು ಹೊಸ ಆಮ್ಲಜನಕ ಸ್ಥಾವರಗಳನ್ನು ಸ್ಥಾಪಿಸಲಾಗಿದೆ. ಮತ್ತು 2021ರಲ್ಲಿ ದೇಶದಲ್ಲಿ ಸಾವಿರಾರು ಹೊಸ ವೆಂಟಿಲೇಟರುಗಳನ್ನು ಸೇರ್ಪಡೆಗೊಳಿಸಲಾಗಿದೆ. 2021ರಲ್ಲಿ ಹಲವು ವೈದ್ಯಕೀಯ ಕಾಲೇಜುಗಳನ್ನು ನಿರ್ಮಾಣ ಮಾಡಲಾಗಿದೆ. ಮತ್ತು ಡಜನ್ನಿನಷ್ಟು ವೈದ್ಯಕೀಯ ಕಾಲೇಜುಗಳ ಕಾಮಗಾರಿಯನ್ನು ಆರಂಭಿಸಲಾಗಿದೆ. 2021ರಲ್ಲಿ ಸಾವಿರಾರು ಕ್ಷೇಮ ಕೇಂದ್ರಗಳನ್ನು ನಿರ್ಮಾಣ ಮಾಡಲಾಗಿದೆ. ಆಯುಷ್ಮಾನ್ ಭಾರತ್ ಆರೋಗ್ಯ ಮೂಲಸೌಕರ್ಯ ಮಿಷನ್ ಜಿಲ್ಲೆಯಿಂದ ಬ್ಲಾಕ್ ಮಟ್ಟದವರೆಗೆ ಉತ್ತಮ ಆಸ್ಪತ್ರೆಗಳ ಜಾಲವನ್ನು ಮತ್ತು ಪರೀಕ್ಷಾ ಪ್ರಯೋಗಾಲಯಗಳ ಜಾಲವನ್ನು ಬಲಪಡಿಸಲಿದೆ. ಡಿಜಿಟಲ್ ಇಂಡಿಯಾ, ಆಯುಷ್ಮಾನ್ ಭಾರತ್ ಡಿಜಿಟಲ್ ಆರೋಗ್ಯ ಮಿಷನ್ ಗಳು ದೇಶದಲ್ಲಿ ಆರೋಗ್ಯ ಸೌಲಭ್ಯಗಳು ಸಮರ್ಪಕವಾಗಿ ಸುಲಭದಲ್ಲಿ ಲಭ್ಯವಾಗುವಂತೆ ಮಾಡಲಿವೆ.
ಸಹೋದರರೇ ಮತ್ತು ಸಹೋದರಿಯರೇ,
ನಮ್ಮಲ್ಲಿ ಕೊರೊನಾ ಇಲ್ಲದೇ ಇದ್ದ ಸಂದರ್ಭಗಳಿಗೆ ಹೋಲಿಸಿದಾಗ ಇಂದು ಅನೇಕ ಆರ್ಥಿಕ ಸೂಚ್ಯಂಕಗಳು ಉತ್ತಮವಾದ ಸಾಧನೆಯನ್ನು ತೋರುತ್ತಿವೆ. ಇಂದು ನಮ್ಮ ದೇಶದ ಬೆಳವಣಿಗೆ ದರ ಪ್ರತಿಶತ 8 ಕ್ಕಿಂತ ಹೆಚ್ಚಿದೆ. ದಾಖಲೆ ವಿದೇಶೀ ಹೂಡಿಕೆ ಭಾರತಕ್ಕೆ ಬಂದಿದೆ. ನಮ್ಮ ವಿದೇಶೀ ವಿನಿಮಯ ಮೀಸಲು ದಾಖಲೆ ಮಟ್ಟಕ್ಕೆ ತಲುಪಿದೆ. ಜಿ.ಎಸ್.ಟಿ. ಸಂಗ್ರಹದಲ್ಲಿ ಹಳೆಯ ದಾಖಲೆಗಳು ಧ್ವಂಸವಾಗಿವೆ. ರಫ್ತಿಗೆ ಸಂಬಂಧಿಸಿ ಅದರಲ್ಲಿಯೂ ಕೃಷಿಗೆ ಸಂಬಂಧಿಸಿ ನಾವು ಹೊಸ ಮಾದರಿಗಳನ್ನು ಸ್ಥಾಪಿಸಿದ್ದೇವೆ.
ಸ್ನೇಹಿತರೇ,
ನಮ್ಮ ದೇಶದ ವೈವಿಧ್ಯತೆ ಮತ್ತು ವಿಸ್ತಾರವನ್ನು ಗಮನದಲ್ಲಿಟ್ಟುಕೊಂಡು ನೋಡಿದಾಗ ನಮ್ಮ ದೇಶ ಅಭಿವೃದ್ಧಿಗೆ ಸಂಬಂಧಿಸಿ ಪ್ರತೀ ಕ್ಷೇತ್ರದಲ್ಲಿಯೂ ಭಾರೀ ದಾಪುಗಾಲುಗಳನ್ನು ಹಾಕುತ್ತಿದೆ. 2021ರಲ್ಲಿ ಭಾರತವು ಯು.ಪಿ.ಐ. ಮೂಲಕ ಸುಮಾರು 70ಲಕ್ಷ ಕೋ.ರೂ.ಗಳನ್ನು ವರ್ಗಾವಣೆ ಮಾಡಿದೆ. ಅಂದರೆ ಡಿಜಿಟಲ್ ವರ್ಗಾವಣೆ ಮಾಡಿದೆ. ಇಂದು 50,000 ಕ್ಕೂ ಅಧಿಕ ನವೋದ್ಯಮಗಳು ಭಾರತದಲ್ಲಿ ಕಾರ್ಯಾಚರಿಸುತ್ತಿವೆ. ಇವುಗಳಲ್ಲಿ 10,000 ಕ್ಕೂ ಅಧಿಕ ನವೋದ್ಯಮಗಳು ಕಳೆದ ಆರು ತಿಂಗಳಲ್ಲಿ ಸ್ಥಾಪಿಸಲ್ಪಟ್ಟಂತಹವು. 2021 ರಲ್ಲಿ ಭಾರತದ ಯುವಜನರು ಕೊರೊನಾ ಅವಧಿಯಲ್ಲಿಯೂ ಕೂಡಾ 42 ಯೂನಿಕಾರ್ನ್ (ಬೃಹತ್ ಸಂಸ್ಥೆಗಳು) ಗಳನ್ನು ರೂಪಿಸುವ ಮೂಲಕ ಇತಿಹಾಸ ಬರೆದಿದ್ದಾರೆ. ನಾನು ನನ್ನ ರೈತ ಸಹೋದರರು ಮತ್ತು ಸಹೋದರಿಯರಿಗೆ ಹೇಳಲು ಇಚ್ಛಿಸುತ್ತೇನೆ, ಒಂದು ಯೂನಿಕಾರ್ನ್ ನವೋದ್ಯಮ ಎಂದರೆ ಅದು 7,000 ಕೋ.ರೂ.ಗಳಿಗೂ ಅಧಿಕ ಮೌಲ್ಯವನ್ನು ಹೊಂದಿರುತ್ತದೆ. ಇಷ್ಟೊಂದು ಕಿರು ಅವಧಿಯಲ್ಲಿ ಇಂತಹ ಪ್ರಗತಿ ಇಂದು ಭಾರತದ ಯುವಜನತೆಯ ಹೊಸ ಯಶೋಗಾಥೆಯಾಗಿ ದಾಖಲಾಗುತ್ತಿದೆ.
ಮತ್ತು ಸ್ನೇಹಿತರೇ,
ಇಂದು, ಭಾರತವು ತನ್ನ ನವೋದ್ಯಮ ಪರಿಸರ ವ್ಯವಸ್ಥೆಯನ್ನು ಬಲಪಡಿಸುತ್ತಿರುವಾಗ, ಇನ್ನೊಂದೆಡೆ ಅದು ತನ್ನ ಸಂಸ್ಕೃತಿಯನ್ನೂ ಅಷ್ಟೇ ಹೆಮ್ಮೆಯೊಂದಿಗೆ ಸಶಕ್ತೀಕರಣಗೊಳಿಸುತ್ತಿದೆ. ಕಾಶಿ ವಿಶ್ವನಾಥ ಧಾಮ ಸೌಂದರ್ಯೀಕರಣ ಯೋಜನೆಯಿಂದ ಹಿಡಿದು ಕೇದಾರನಾಥ ಧಾಮ ಅಭಿವೃದ್ಧಿ ಯೋಜನೆಗಳವರೆಗೆ, ಆದಿ ಶಂಕಾರಾಚಾರ್ಯರ ಸಮಾಧಿ ಪುನರ್ನಿರ್ಮಾಣದಿಂದ ಹಿಡಿದು ಅನ್ನಪೂರ್ಣಾ ಮಾತೆಯ ವಿಗ್ರಹ ಸಹಿತ ಭಾರತದಿಂದ ಕಳವು ಮಾಡಲಾದ ನೂರಾರು ವಿಗ್ರಹಗಳನ್ನು ವಿದೇಶಗಳಿಂದ ಮರಳಿ ತರುವವರೆಗೆ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದಿಂದ ಹಿಡಿದು ಧೋಲಾವಿರಾ ಮತ್ತು ದುರ್ಗಾ ಪೂಜಾಗಳಿಗೆ ವಿಶ್ವ ಪರಂಪರೆಯ ಸ್ಥಾನ ಮಾನದವರೆಗೆ ಭಾರತವು ಬಹಳಷ್ಟನ್ನು ಒದಗಿಸುವ ಸಾಮರ್ಥ್ಯ ಹೊಂದಿದೆ. ಇಡೀ ವಿಶ್ವವೇ ನಮ್ಮ ದೇಶದತ್ತ ಆಕರ್ಷಿತವಾಗಿದೆ. ಈಗ ನಾವು ನಮ್ಮ ಪರಂಪರೆಯನ್ನು ಬಲಪಡಿಸುವಲ್ಲಿ ನಿರತರಾಗಿದ್ದೇವೆ, ಖಂಡಿತವಾಗಿಯೂ ಪ್ರವಾಸೋದ್ಯಮ ಬೆಳೆಯುತ್ತದೆ. ಮತ್ತು ಅದರೊಂದಿಗೆ ತೀರ್ಥ ಯಾತ್ರೆ ಕೂಡಾ.
ಸ್ನೇಹಿತರೇ,
ಇಂದು, ಭಾರತವು ತನ್ನ ಯುವ ಜನತೆ ಮತ್ತು ಮಹಿಳೆಯರಿಗೆ ಸಂಬಂಧಿಸಿ ಅಭೂತಪೂರ್ವ ಕ್ರಮಗಳನ್ನು ಕೈಗೊಳುತ್ತಿದೆ. 2021 ರಲ್ಲಿ ಭಾರತವು ತನ್ನ ಮಿಲಿಟರಿ ಶಾಲೆಗಳನ್ನು ಹೆಣ್ಣು ಮಕ್ಕಳಿಗೆ ತೆರೆಯಿತು. ಭಾರತವು ಮಹಿಳೆಯರಿಗಾಗಿ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ಬಾಗಿಲುಗಳನ್ನು ತೆರೆಯಿತು. 2021 ರಲ್ಲಿ ಭಾರತವು ಹೆಣ್ಣು ಮಕ್ಕಳ ಮದುವೆಯ ವಯಸ್ಸನ್ನು 18 ರಿಂದ 21 ವರ್ಷಕ್ಕೆ ಏರಿಸುವ ಅಂದರೆ ಗಂಡು ಮಕ್ಕಳ ಮದುವೆ ವಯಸ್ಸಿಗೆ ಸಮಾನವನ್ನಾಗಿಸುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ಮಾಡಿದೆ. ಭಾರತದಲ್ಲಿ ಇದೇ ಮೊದಲ ಬಾರಿಗೆ ಸುಮಾರು ಎರಡು ಕೋಟಿಗೂ ಅಧಿಕ ಮಹಿಳೆಯರು ತಮ್ಮ ಮನೆಗಳ ಮಾಲಕತ್ವದ ದಾಖಲೆಗಳನ್ನು ಪ್ರಧಾನ ಮಂತ್ರಿ ಆವಾಸ್ ಯೋಜನಾ ಅಡಿಯಲ್ಲಿ ಪಡೆದಿದ್ದಾರೆ. ನಮ್ಮ ರೈತ ಸಹೋದರರು ಮತ್ತು ಸಹೋದರಿಯರು, ನಮ್ಮ ಗ್ರಾಮಗಳ ಸಂಗಾತಿಗಳು ಇದರ ಮಹತ್ವವನ್ನು ಮನಗಾಣಬಹುದು.
ಸ್ನೇಹಿತರೇ,
2021ರಲ್ಲಿ ಭಾರತೀಯ ಆಟಗಾರರಲ್ಲಿ ನಾವು ಹೊಸ ವಿಶ್ವಾಸವನ್ನು ಕಂಡಿದ್ದೇವೆ. ಭಾರತದಲ್ಲಿ ಕ್ರೀಡಾ ಕ್ಷೇತ್ರದತ್ತ ಆಕರ್ಷಣೆ ಹೆಚ್ಚುತ್ತಿದೆ, ಒಂದು ಹೊಸ ಶಕೆ ಆರಂಭವಾಗಿದೆ. ಟೊಕಿಯೋ ಒಲಿಂಪಿಕ್ಸ್ ನಲ್ಲಿ ಹಲವು ಪದಕಗಳನ್ನು ಭಾರತ ಗೆದ್ದಿರುವುದಕ್ಕೆ ನಾವೆಲ್ಲರೂ ಸಂತೋಷಗೊಂಡಿದ್ದೇವೆ. ನಮ್ಮ ದಿವ್ಯಾಂಗ ಅಥ್ಲೀಟ್ ಗಳು ಪ್ಯಾರಾಲಿಂಪಿಕ್ಸ್ ನಲ್ಲಿ ಚರಿತ್ರೆ ಬರೆದಿರುವಾಗ ನಮ್ಮಲ್ಲಿ ಪ್ರತಿಯೊಬ್ಬರೂ ಹೆಮ್ಮೆಪಟ್ಟಿದ್ದೇವೆ. ಕಳೆದ ಪ್ಯಾರಾಲಿಂಪಿಕ್ಸ್ ನಲ್ಲಿ ನಮ್ಮ ದಿವ್ಯಾಂಗ ಅಥ್ಲೀಟ್ ಗಳು ಪಡೆದ ಪದಕಗಳು ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತ ಇದುವರೆಗೆ ಪಡೆದ ಒಟ್ಟು ಪದಕಗಳಿಗಿಂತ ಹೆಚ್ಚು. ಇಂದು ಭಾರತವು ತನ್ನ ಕ್ರೀಡಾಳುಗಳ ಮೇಲೆ ಮತ್ತು ಕ್ರೀಡಾ ಮೂಲಸೌಕರ್ಯದ ಮೇಲೆ ಹಿಂದೆಂದಿಗಿಂತಲೂ ಹೆಚ್ಚು ಹೂಡಿಕೆ ಮಾಡುತ್ತಿದೆ. ನಾನು ನಾಳೆ ಮೀರತ್ತಿನಲ್ಲಿ ಇನ್ನೊಂದು ಕ್ರೀಡಾ ವಿಶ್ವವಿದ್ಯಾನಿಲಯಕ್ಕೆ ಶಿಲಾನ್ಯಾಸ ಮಾಡಲು ಹೋಗುತ್ತಿದ್ದೇನೆ.
ಸ್ನೇಹಿತರೇ,
ವಿಶ್ವ ಸಂಸ್ಥೆ ಭದ್ರತಾ ಮಂಡಳಿಯಿಂದ ಹಿಡಿದು ಸ್ಥಳೀಯಾಡಳಿತ ಸಂಸ್ಥೆಗಳವರೆಗೆ ಭಾರತವು ತನ್ನ ನೀತಿ ಮತ್ತು ನಿರ್ಧಾರಗಳ ಮೂಲಕ ತನ್ನ ಗುಣ ಸ್ವಭಾವವನ್ನು ತೋರಿಸಿದೆ. 2016 ರಲ್ಲಿ ಭಾರತವು 2030ರ ವೇಳೆಗೆ ತನ್ನ ಸ್ಥಾಪಿತ ವಿದ್ಯುತ್ ಸಾಮರ್ಥ್ಯದ 40 ಪ್ರತಿಶತದಷ್ಟನ್ನು ಪಳೆಯುಳಿಕೆಯೇತರ ಇಂಧನ ಮೂಲಗಳಿಂದ ಪಡೆಯುವ ಗುರಿ ನಿಗದಿ ಮಾಡಿತ್ತು. ಭಾರತವು 2030 ರ ಈ ಗುರಿಯನ್ನು 2021 ರ ನವೆಂಬರ್ ತಿಂಗಳಲ್ಲಿಯೇ ಸಾಧಿಸಿದೆ. ವಾತಾವರಣ ಬದಲಾವಣೆಯ ವಿರುದ್ಧ ಜಾಗತಿಕ ಮಟ್ಟದಲ್ಲಿ ಭಾರತ ನಾಯಕನ ಸ್ಥಾನದಲ್ಲಿ ನಿಂತು 2070 ರವೇಳೆಗೆ ಶೂನ್ಯ ಕಾರ್ಬನ್ ವಿಸರ್ಜನೆಯ ಗುರಿಯನ್ನು ನಿಗದಿ ಮಾಡಿದೆ. ಇಂದು, ಭಾರತವು ಜಲಜನಕ ಮಿಷನ್ನಿನ ಮೇಲೆ ಕಾರ್ಯ ನಿರತವಾಗಿದ್ದು ವಿದ್ಯುತ್ ಚಾಲಿತ ವಾಹನಗಳಲ್ಲಿ ಮುಂಚೂಣಿಯಲ್ಲಿದೆ. ದೇಶದಲ್ಲಿ ಕೋಟ್ಯಾಂತರ ಎಲ್.ಇ.ಡಿ. ಬಲ್ಬ್ ಗಳನ್ನು ವಿತರಿಸಿ ಬಡವರ ಮತ್ತು ಮಧ್ಯಮ ವರ್ಗದ ಜನರ ವಿದ್ಯುತ್ ಬಿಲ್ ಇಳಿಕೆಗೆ ಕಾರಣವಾಗಿದೆ. ವಾರ್ಷಿಕ 20,000 ಕೋ.ರೂ. ವಿದ್ಯುತ್ ಬಿಲ್ ಇಳಿಕೆಯಾಗಿದೆ. ದೇಶದ ನಗರಗಳಲ್ಲಿರುವ ಸ್ಥಳೀಯಾಡಳಿತ ಸಂಸ್ಥೆಗಳು ಬೀದಿ ದೀಪಗಳನ್ನು ಎಲ್.ಇ.ಡಿ.ಬಲ್ಬ್ ಗಳ ಮೂಲಕ ಬದಲಾಯಿಸಲು ಆಂದೋಲನ ಜಾರಿಯಲ್ಲಿದೆ. ರೈತರನ್ನು ಆಹಾರ ದಾನಿಗಳ ಜೊತೆ ಇಂಧನ ದಾನಿಗಳನ್ನಾಗಿಸಲು ಬೃಹತ್ ಆಂದೋಲನವನ್ನು ಭಾರತ ಕೈಗೊಂಡಿದೆ. ಪ್ರಧಾನ ಮಂತ್ರಿ ಕುಸುಮ ಯೋಜನಾ ಮೂಲಕ ರೈತರಿಗೆ ಸೌರ ವಿದ್ಯುತ್ ಉತ್ಪಾದನೆಗಾಗಿ ಅವರ ಕೃಷಿ ಕ್ಷೇತ್ರಗಳ ಬದುವಿನಲ್ಲಿ ಸೌರ ವಿದ್ಯುತ್ ಫಲಕಗಳನ್ನು ಅಳವಡಿಸಿಕೊಳ್ಳಲು ನೆರವು ನೀಡಲಾಗುತ್ತದೆ. ಸರಕಾರವು ಮಿಲಿಯಾಂತರ ರೈತರಿಗೆ ಸೌರ ಪಂಪ್ ಗಳನ್ನು ಒದಗಿಸಿದೆ. ಇದರಿಂದ ಹಣ ಉಳಿತಾಯವಾಗುತ್ತದೆ ಮತ್ತು ಪರಿಸರ ರಕ್ಷಣೆಯೂ ಆಗುತ್ತದೆ.
ಸ್ನೇಹಿತರೇ,
2021 ನ್ನು ಕೊರೊನಾ ವಿರುದ್ಧ ದೇಶವು ಬಲಿಷ್ಟ ಹೋರಾಟ ನಡೆಸಿದ ವರ್ಷ ಎಂದು ನೆನಪಿಸಿಕೊಳ್ಳುವುದಾದರೆ, ಆಗ ಈ ಅವಧಿಯಲ್ಲಿ ಕೈಗೊಂಡ ಸುಧಾರಣೆಗಳನ್ನೂ ಚರ್ಚಿಸಬೇಕಾಗುತ್ತದೆ. ಭಾರತವು ಕಳೆದ ವರ್ಷ ಆಧುನಿಕ ಮೂಲಸೌಕರ್ಯದಲ್ಲಿ ಸುಧಾರಣೆ ತರುವ ಮತ್ತು ಅದನ್ನು ನಿರ್ಮಾಣ ಮಾಡುವ ಪ್ರಕ್ರಿಯೆಗೆ ವೇಗ ನೀಡಿದೆ. ಸರಕಾರಿ ಮಧ್ಯಪ್ರವೇಶವನ್ನು ಕನಿಷ್ಟ ಪ್ರಮಾಣಕ್ಕೆ ಇಳಿಸುವ ಬದ್ಧತೆಯನ್ನು ತೋರಿರುವ ಸರಕಾರ ಪ್ರತಿಯೊಬ್ಬ ಭಾರತೀಯರ ಶಕ್ತಿಯನ್ನು ಹೆಚ್ಚಿಸುವ ಮತ್ತು ಸಾಮೂಹಿಕ ಪ್ರಯತ್ನಗಳ ಮೂಲಕ ರಾಷ್ಟ್ರೀಯ ಗುರಿಗಳನ್ನು ಸಾಧಿಸುವ ನಿಟ್ಟಿನಲ್ಲಿ ಮುನ್ನಡೆಯುತ್ತಿದೆ. ವ್ಯಾಪಾರ ಮತ್ತು ಉದ್ಯಮವನ್ನು ಸುಲಭಸಾಧ್ಯ ಮಾಡಲು ಕಳೆದ ವರ್ಷ ಹಲವಾರು ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.
ಪ್ರಧಾನ ಮಂತ್ರಿ ಗತಿ ಶಕ್ತಿ ರಾಷ್ಟ್ರೀಯ ಮಹಾ ಯೋಜನೆ ದೇಶದಲ್ಲಿಯ ಮೂಲಸೌಕರ್ಯ ನಿರ್ಮಾಣಕ್ಕೆ ಹೊಸ ವೇಗವನ್ನು ಒದಗಿಸಿಕೊಡಲಿದೆ. ಮೇಕ್ ಇನ್ ಇಂಡಿಯಾಕ್ಕೆ ಹೊಸ ಆಯಾಮವನ್ನು ನೀಡಲು ಹೊಸ ವಲಯಗಳಾದ ಚಿಪ್ ತಯಾರಿಕೆ ಮತ್ತು ಸೆಮಿಕಂಡಕ್ಟರ್ ಗಳ ತಯಾರಿಕೆಗಳಿಗೆ ಸಂಬಂಧಿಸಿ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ದೇಶವು ರೂಪಿಸಿದೆ. ಕಳೆದ ವರ್ಷವೊಂದರಲ್ಲಿಯೇ ದೇಶವು ರಕ್ಷಣಾ ವಲಯದಲ್ಲಿ ಸ್ವಾವಲಂಬನೆಗಾಗಿ ಏಳು ರಕ್ಷಣಾ ಕಂಪೆನಿಗಳನ್ನು ಪಡೆದಿದೆ. ನಾವು ಮೊದಲ ಪ್ರಗತಿಪರ ಡ್ರೋನ್ ನೀತಿಯನ್ನು ಜಾರಿಗೆ ತಂದಿದ್ದೇವೆ. ಬಾಹ್ಯಾಕಾಶದಲ್ಲಿ ದೇಶದ ಆಶೋತ್ತರಗಳಿಗೆ ಹೊಸ ಹಾರಾಟದ ಶಕ್ತಿಯನ್ನು ನೀಡಲು ಭಾರತೀಯ ಬಾಹ್ಯಾಕಾಶ ಸಂಘಟನೆಯನ್ನು (ಅಸೋಸಿಯೇಷನ್) ಸ್ಥಾಪಿಸಲಾಗಿದೆ.
ಸ್ನೇಹಿತರೇ.
ಡಿಜಿಟಲ್ ಇಂಡಿಯಾ ಆಂದೋಲನ ದೇಶದ ಅಭಿವೃದ್ಧಿಯನ್ನು ಹಳ್ಳಿಗಳಿಗೆ ಕೊಂಡೊಯ್ಯುವಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತಿದೆ. 2021 ರಲ್ಲಿ ಸಾವಿರಾರು ಹೊಸ ಗ್ರಾಮಗಳನ್ನು ಆಪ್ಟಿಕಲ್ ಫೈಬರ್ ಕೇಬಲ್ ಮೂಲಕ ಜೋಡಿಸಲಾಗಿದೆ. ಇದರಿಂದ ನಮ್ಮ ರೈತ ಸ್ನೇಹಿತರಿಗೆ, ಅವರ ಕುಟುಂಬಗಳಿಗೆ ಮತ್ತು ಅವರ ಮಕ್ಕಳಿಗೆ ಬಹಳ ಪ್ರಯೋಜನಕಾರಿಯಾಗಿದೆ. 2021 ರಲ್ಲಿಯೇ ಹೊಸ ಡಿಜಿಟಲ್ ಪಾವತಿ ವ್ಯವಸ್ಥೆಯಾದ ಇ-ರುಪಿಯನ್ನು ಕಾರ್ಯಾರಂಭ ಮಾಡಲಾಗಿದೆ. ಒಂದು ರಾಷ್ಟ್ರ, ಒಂದು ರೇಶನ್ ಕಾರ್ಡ್ ಕೂಡಾ ದೇಶಾದ್ಯಂತ ಜಾರಿಗೆ ತರಲಾಗಿದೆ. ಇಂದು ಇ-ಶ್ರಮ್ ಕಾರ್ಡ್ ಗಳನ್ನು ದೇಶದ ಅಸಂಘಟಿತ ವಲಯದ ಕಾರ್ಮಿಕರಿಗೆ ನೀಡಲಾಗುತ್ತಿದೆ, ಇದರಿಂದ ಸರಕಾರಿ ಯೋಜನೆಗಳ ಪ್ರಯೋಜನಗಳು ಅವರಿಗೆ ತಲುಪುವುದು ಸುಲಭ ಸಾಧ್ಯವಾಗಲಿದೆ.
ಸಹೋದರರೇ ಮತ್ತು ಸಹೋದರಿಯರೇ,
2022 ರಲ್ಲಿ ನಾವು ನಮ್ಮ ವೇಗವನ್ನು ಹೆಚ್ಚಿಸಿಕೊಳ್ಳಬೇಕು. ಅಲ್ಲಿ ಕೊರೊನಾದ ಸವಾಲುಗಳಿವೆ, ಆದರೆ ಕೊರೊನಾ ಭಾರತದ ವೇಗವನ್ನು ತಡೆಗಟ್ಟಲಾರದು. ಭಾರತವು ಕೊರೊನಾ ವಿರುದ್ಧ ಅತ್ಯಂತ ಎಚ್ಚರಿಕೆಯಿಂದ, ಜಾಗೃತಿಯಿಂದ ಹೋರಾಟ ಮಾಡಲಿದೆ ಮತ್ತು ಅದರ ರಾಷ್ಟ್ರೀಯ ಹಿತಾಸಕ್ತಿಗಳನ್ನು ಈಡೇರಿಸಿಕೊಳ್ಳಲಿದೆ. ನಮ್ಮ ದೇಶದಲ್ಲಿ ಹೇಳಲಾಗುತ್ತದೆ:
''जहीहि भीतिम् भज भज शक्तिम्। विधेहि राष्ट्रे तथा अनुरक्तिम्॥
कुरु कुरु सततम् ध्येय-स्मरणम्। सदैव पुरतो निधेहि चरणम्''॥
ಅಂದರೆ, ನಾವು ಭಯವನ್ನು ಮತ್ತು ಕಳವಳ, ಆತಂಕಗಳನ್ನು ಬಿಟ್ಟು ಬಲ ಮತ್ತು ಸಾಮರ್ಥ್ಯವನ್ನು ನೆನಪಿಸಿಕೊಳ್ಳಬೇಕು. ಮತ್ತು ನಾವು ದೇಶಭಕ್ತಿಯ ಸ್ಪೂರ್ತಿಯನ್ನು, ಉತ್ಸಾಹವನ್ನು ಅತ್ಯುಚ್ಛ ಸ್ಥಾನದಲ್ಲಿಡಬೇಕು. ನಾವು ಸದಾ ನಮ್ಮ ಗುರಿಗಳತ್ತ ಸಾಗುತ್ತಿರಬೇಕು. “ರಾಷ್ಟ್ರ ಮೊದಲು” ಎಂಬ ಭಾವನೆಯೊಂದಿಗೆ ನಿರಂತರ ಪ್ರಯತ್ನ ಇಂದು ಪ್ರತಿಯೊಬ್ಬ ಭಾರತೀಯರ ಸ್ಪೂರ್ತಿಯಾಗುತ್ತಿದೆ. ಆದುದರಿಂದ ನಮ್ಮ ಪ್ರಯತ್ನಗಳಲ್ಲಿ ಏಕತೆ ಇದೆ. ಮತ್ತು ನಮ್ಮ ನಿರ್ಧಾರಗಳನ್ನು ಕಾರ್ಯಗತ ಮಾಡುವ ವೇಗಕ್ಕೆ ಸಂಬಂಧಿಸಿ ಅಸಹನೆ ಇದೆ. ಇಂದು ನಮ್ಮ ನೀತಿಗಳಲ್ಲಿ ನಿರಂತರತೆ ಇದೆ ಮತ್ತು ನಿರ್ಧಾರಗಳಲ್ಲಿ ದೂರದೃಷ್ಟಿ ಇದೆ. ಇಂದಿನ ಕಾರ್ಯಕ್ರಮ ದೇಶದ ರೈತರಿಗೆ ಅರ್ಪಿತವಾಗಿರುವುದು ಇದಕ್ಕೆ ಒಂದು ನಿದರ್ಶನ.
ಪಿ.ಎಂ. ಕಿಸಾನ್ ಸಮ್ಮಾನ್ ನಿಧಿ ಭಾರತದ ರೈತರಿಗೆ ಬಹಳ ದೊಡ್ಡ ಬೆಂಬಲವನ್ನು ನೀಡುತ್ತಿದೆ. ಸಕಾಲದಲ್ಲಿ ಕಂತುಗಳಲ್ಲಿ ಹಣ ಪಾವತಿಯಾಗುತ್ತದೆ, ಕಮಿಷನ್ ಇಲ್ಲದೆ, ಮಧ್ಯವರ್ತಿಗಳಿಲ್ಲದೆ ಪ್ರತೀ ವರ್ಷ ಸಾವಿರಾರು ಕೋಟಿ ರೂಪಾಯಿ ವರ್ಗಾವಣೆಯಾಗುತ್ತದೆ ಎಂದು ಮೊದಲು ಯಾರೂ ಕಲ್ಪಿಸಿರಲಿಲ್ಲ. ನಾವು ಇಂದಿನ ಮೊತ್ತ ಸೇರಿಸಿದರೆ, ಆಗ 1.80 ಲಕ್ಷ ಕೋ.ರೂಗಳಿಗೂ ಅಧಿಕ ಮೊತ್ತವನ್ನು ಕಿಸಾನ್ ಸಮ್ಮಾನ ನಿಧಿ ಅಡಿಯಲ್ಲಿ ರೈತರ ಖಾತೆಗಳಿಗೆ ವರ್ಗಾಯಿಸಲಾಗಿದೆ. ಇಂದು ಕಿಸಾನ್ ಸಮ್ಮಾನ್ ನಿಧಿ ಅವರ ಸಣ್ಣ ಖರ್ಚುಗಳನ್ನು ನಿಭಾಯಿಸಲು ಉಪಯೋಗಕ್ಕೆ ಬರುತ್ತಿದೆ. ಸಣ್ಣ ರೈತರು ಉತ್ತಮ ಗುಣ ಮಟ್ಟದ ಬೀಜಗಳನ್ನು ಖರೀದಿಸುತ್ತಿದ್ದಾರೆ, ಉತ್ತಮ ಗೊಬ್ಬರ ಬಳಸುತ್ತಿದ್ದಾರೆ ಮತ್ತು ಉತ್ತಮ ಉಪಕರಣಗಳನ್ನು ಈ ಮೊತ್ತದಿಂದ ಖರೀದಿ ಮಾಡುತ್ತಿದ್ದಾರೆ.
ಸ್ನೇಹಿತರೇ,
ನಮ್ಮ ರೈತರ ಉತ್ಪನ್ನಗಳ ಸಂಘಟನೆಗಳು (ಎಫ್.ಪಿ.ಒ.ಗಳು) ದೇಶದ ಸಣ್ಣ ರೈತರ ಸಾಮರ್ಥ್ಯ ವರ್ಧನೆಯನ್ನು ಸಂಘಟಿಸುವಲ್ಲಿ ಪ್ರಮುಖವಾದ ಪಾತ್ರವನ್ನು ಹೊಂದಿವೆ. ಇದುವರೆಗೆ ಪ್ರತ್ಯೇಕವಾಗಿದ್ದ, ಏಕಾಂಗಿಯಾಗಿದ್ದ ಸಣ್ಣ ರೈತರು ಈಗ ಎಫ್.ಪಿ.ಒ. ರೂಪದಲ್ಲಿ ಐದು ಬಹಳ ದೊಡ್ಡ ಅಧಿಕಾರ, ಶಕ್ತಿಯನ್ನು ಹೊಂದಿದ್ದಾರೆ. ಮೊದಲನೇಯದ್ದು, ತಮ್ಮ ಉತ್ಪಾದನೆಗೆ ಉತ್ತಮ ಬೆಲೆಯ ಚೌಕಾಶಿ ಮಾಡುವ ಅವಕಾಶ. ಏಕಾಂಗಿಯಾಗಿ ಕೃಷಿ ಮಾಡುವಾಗ ಏನಾಗುತ್ತದೆ ಎಂಬುದು ನಿಮಗೆಲ್ಲಾ ಗೊತ್ತಿದೆಯಲ್ಲವೇ?. ನೀವು ಬೀಜಗಳಿಂದ ಹಿಡಿದು ರಸಗೊಬ್ಬರಗಳವರೆಗೆ ಪ್ರತಿಯೊಂದನ್ನೂ ಚಿಲ್ಲರೆ ಮಾರಾಟಗಾರರಿಂದ ಖರೀದಿಸುತ್ತೀರಿ, ಆದರೆ ಮಾರಾಟ ಮಾಡುವಾಗ ಸಗಟು ವ್ಯಾಪಾರಸ್ಥರಿಗೆ ಮಾರುತ್ತೀರಿ. ಇದು ಹೆಚ್ಚಿನ ಖರ್ಚು ವೆಚ್ಚಕ್ಕೆ ದಾರಿ ಮಾಡಿಕೊಡುತ್ತದೆ. ಮತ್ತು ಲಾಭ ಕಡಿಮೆಯಾಗುತ್ತದೆ. ಆದರೆ ಎಫ್.ಪಿ.ಒ. ಮೂಲಕ ಚಿತ್ರಣ ಬದಲಾಗುತ್ತಿದೆ. ಈಗ ರೈತರು ಕೃಷಿಗೆ ಅವಶ್ಯಕ ವಸ್ತುಗಳನ್ನು ಎಫ್.ಪಿ.ಒ.ಗಳಿಂದ ದೊಡ್ಡ ಪ್ರಮಾಣದಲ್ಲಿ ಖರೀದಿಸಬಹುದು. ಮತ್ತು ಅದನ್ನು ಚಿಲ್ಲರೆಯಲ್ಲಿ ಮಾರಾಟ ಮಾಡಬಹುದು.
ಎಫ್.ಪಿ.ಒ.ಗಳಿಂದ ರೈತರಿಗೆ ದೊರಕಿದ ಇನ್ನೊಂದು ಶಕ್ತಿ ಎಂದರೆ ಬೃಹತ್ ಪ್ರಮಾಣದ ವ್ಯಾಪಾರ. ಎಫ್.ಪಿ.ಒ. ಆಗಿ ರೈತರು ಸಂಘಟಿತ ಮಾದರಿಯಲ್ಲಿ ಕೆಲಸ ಮಾಡುತ್ತಾರೆ. ಇದರಿಂದ ಅವರಿಗೆ ಸಾಧ್ಯತೆಗಳು ಅನೇಕ. ಮೂರನೇ ಶಕ್ತಿ ಎಂದರೆ ಅನ್ವೇಷಣೆ. ಅನೇಕ ರೈತರು ಒಗ್ಗೂಡಿದಾಗ, ಅವರಲ್ಲಿ ಅನುಭವಗಳ ಮೂಟೆಯೇ ಇರುತ್ತದೆ. ಇದರಿಂದ ಮಾಹಿತಿ ಹೆಚ್ಚುತ್ತದೆ. ಹೊಸ ಅನ್ವೇಷಣೆಗಳಿಗೆ ಹೊಸ ದಾರಿ ತೆರೆಯುತ್ತದೆ. ಎಫ್.ಪಿ.ಒ.ಗಳು ಹೊಂದಿರುವ ನಾಲ್ಕನೇ ಶಕ್ತಿ ಎಂದರೆ ಅಪಾಯದ ನಿರ್ವಹಣೆ. ನೀವು ಒಗ್ಗೂಡಿ ಸವಾಲುಗಳನ್ನು ಉತ್ತಮವಾಗಿ ಮೌಲ್ಯಮಾಪನ ಮಾಡಬಹುದು ಮತ್ತು ಅವುಗಳನ್ನು ನಿಭಾಯಿಸಲು ಹಾದಿಗಳನ್ನು ನಿರ್ಮಾಣ ಮಾಡಿಕೊಳ್ಳುವುದು ಸಾಧ್ಯವಿದೆ.
ಮತ್ತು ಐದನೇ ಶಕ್ತಿ ಎಂದರೆ ಮಾರುಕಟ್ಟೆಗೆ ಅನುಗುಣವಾಗಿ ಬದಲಾವಣೆಗಳನ್ನು ಮಾಡಿಕೊಳ್ಳುವ ಸಾಮರ್ಥ್ಯ. ಮಾರುಕಟ್ಟೆ ಮತ್ತು ಮಾರುಕಟ್ಟೆ ಬೇಡಿಕೆಗಳು ನಿರಂತರವಾಗಿ ಬದಲಾಗುತ್ತಿರುತ್ತವೆ. ಆದರೆ ಸಣ್ಣ ರೈತರಿಗೆ ಒಂದೋ ಮಾಹಿತಿ ಲಭಿಸುವುದಿಲ್ಲ, ಅಥವಾ ಪರಿವರ್ತನೆಗೆ ಹಣಕಾಸು ಹೊಂದಿಸುವುದು ಅವರಿಗೆ ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ಎಲ್ಲರೂ ಒಂದೇ ಬೆಳೆಯನ್ನು ಬೆಳೆಯುತ್ತಾರೆ ಮತ್ತು ಆ ಬಳಿಕ ಅವರಿಗೆ ಅದರ ದರ ಕುಸಿದಿರುವುದು ಗೊತ್ತಾಗುತ್ತದೆ. ಆದರೆ ಎಫ್.ಪಿ.ಒ.ದಲ್ಲಿ ನೀವು ಮಾರುಕಟ್ಟೆಗೆ ಸಿದ್ಧರಾಗಿರುವುದು ಮಾತ್ರವಲ್ಲ ಮಾರುಕಟ್ಟೆಯಲ್ಲಿ ಹೊಸ ಉತ್ಪನ್ನಗಳಿಗೆ ಬೇಡಿಕೆ ನಿರ್ಮಾಣ ಮಾಡುವ ಶಕ್ತಿಯನ್ನೂ ಹೊಂದಿರುತ್ತೀರಿ.
ಸ್ನೇಹಿತರೇ,
ಎಫ್.ಪಿ.ಒ.ಗಳ ಶಕ್ತಿಯನ್ನು ಅರಿತುಕೊಂಡು, ನಮ್ಮ ಸರಕಾರ ಪ್ರತೀ ಹಂತದಲ್ಲಿಯೂ ಅವುಗಳಿಗೆ ಉತ್ತೇಜನ ನೀಡುತ್ತಿದೆ. ಈ ಎಫ್.ಪಿ.ಒ.ಗಳು 15 ಲಕ್ಷ ರೂಪಾಯಿಗಳವರೆಗೆ ನೆರವನ್ನೂ ಪಡೆಯುತ್ತವೆ. ಇದರ ಪರಿಣಾಮವಾಗಿ ಸಾವಯವ ಎಫ್.ಪಿ.ಒ. ಗುಚ್ಛಗಳು, ತೈಲ ಬೀಜ ಗುಚ್ಛಗಳು, ಬಿದಿರು ಗುಚ್ಛಗಳು ಮತ್ತು ಜೇನು ಎಫ್.ಪಿ.ಒ. ಗುಚ್ಛಗಳು ದೇಶದಲ್ಲಿಂದು ಬಹಳ ತ್ವರಿತವಾಗಿ ಬೆಳೆಯುತ್ತಿವೆ. ಇಂದು ನಮ್ಮ ರೈತರು “ಒಂದು ಜಿಲ್ಲೆ ಒಂದು ಉತ್ಪನ್ನ’ ಗಳಂತಹ ಯೋಜನೆಗಳ ಪ್ರಯೋಜನಗಳನ್ನು ಪಡೆಯುತ್ತಿರುವುದರಿಂದ ದೇಶದ ಮತ್ತು ವಿದೇಶಗಳಲ್ಲಿಯ ದೊಡ್ಡ ಮಾರುಕಟ್ಟೆಗಳು ಅವರಿಗೆ ಲಭ್ಯವಾಗುತ್ತಿವೆ.
ಸ್ನೇಹಿತರೇ,
ಇಂದು ಕೂಡಾ ನಾವು ಬಹಳ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ಅವುಗಳನ್ನು ದೇಶದ ರೈತರು ಕೂಡಾ ಸುಲಭದಲ್ಲಿ ಪೂರೈಸುವುದಕ್ಕೆ ಸಾಧ್ಯವಿದೆ. ಖಾದ್ಯ ತೈಲ ಇದಕ್ಕೆ ಒಂದು ದೊಡ್ಡ ಉದಾಹರಣೆ. ನಾವು ಖಾದ್ಯ ತೈಲವನ್ನು ಹೊರದೇಶಗಳಿಂದ ಅಮದು ಮಾಡುತ್ತಿದ್ದೇವೆ. ನಮ್ಮ ದೇಶವು ಇತರ ದೇಶಗಳಿಗೆ ಬಹಳ ದೊಡ್ಡ ಮೊತ್ತವನ್ನು ಪಾವತಿ ಮಾಡಬೇಕಾಗುತ್ತಿದೆ. ಆದುದರಿಂದ ನಮ್ಮ ಸರಕಾರ ನಮ್ಮ ರೈತರಿಗೆ ಈ ಹಣ ದೊರೆಯಲಿ ಎಂಬ ಉದ್ದೇಶದಿಂದ 11,000 ಕೋ.ರೂ.ಗಳ ಬಜೆಟ್ಟಿನೊಂದಿಗೆ ರಾಷ್ಟ್ರೀಯ ತಾಳೆ ಎಣ್ಣೆ ಮಿಷನ್ ಆರಂಭ ಮಾಡಿದೆ.
ಸ್ನೇಹಿತರೇ,
ಕಳೆದ ಕೆಲವು ವರ್ಷಗಳಲ್ಲಿ, ದೇಶವು ಕೃಷಿ ಕ್ಷೇತ್ರದಲ್ಲಿ ಹಲವು ಚಾರಿತ್ರಿಕ ಮೈಲಿಗಲ್ಲುಗಳನ್ನು ಸ್ಥಾಪಿಸಿದೆ. ಕೊರೊನಾ ಸವಾಲಿನ ಬಳಿಕವೂ, ನಿವೆಲ್ಲರೂ ದೇಶದ ಆಹಾರ ಧಾನ್ಯ ಉತ್ಪಾದನೆಯನ್ನು ನಿಮ್ಮ ಕಠಿಣ ಪರಿಶ್ರಮದ ಮೂಲಕ ದಾಖಲೆ ಪ್ರಮಾಣದಲ್ಲಿ ಹೆಚ್ಚು ಮಾಡಿದ್ದೀರಿ. ಕಳೆದ ವರ್ಷ ದೇಶದ ಆಹಾರ ಧಾನ್ಯ ಉತ್ಪಾದನೆ 300 ಮಿಲಿಯನ್ ಟನ್ ಗೇರಿದೆ. ತೋಟಗಾರಿಕೆ, ಪುಷ್ಪ ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ಉತ್ಪಾದನೆ ಈಗ 330 ಮಿಲಿಯನ್ ಟನ್ ತಲುಪಿದೆ. ಕಳೆದ ಆರು-ಏಳು ವರ್ಷಗಳಲ್ಲಿ ಹಾಲಿನ ಉತ್ಪಾದನೆ ಸುಮಾರು 45 ಪ್ರತಿಶತ ಹೆಚ್ಚಿದೆ. ಇದು ಮಾತ್ರವಲ್ಲ, ರೈತರು ದಾಖಲೆ ಪ್ರಮಾಣದಲ್ಲಿ ಉತ್ಪಾದನೆ ಮಾಡುತ್ತಿದ್ದರೆ, ದೇಶ ಕೂಡಾ ಎಂ.ಎಸ್.ಪಿ.ಯಲ್ಲಿ ದಾಖಲೆ ಪ್ರಮಾಣದಲ್ಲಿ ಖರೀದಿ ಮಾಡುತ್ತಿದೆ. ನಾವು ನೀರಾವರಿಯಲ್ಲಿ ‘ಹನಿಯೊಂದು-ಹೆಚ್ಚು ಬೆಳೆ‘ಯನ್ನು ಉತ್ತೇಜಿಸುತ್ತಿದ್ದೇವೆ. ಕಳೆದ ಕೆಲವು ವರ್ಷಗಳಲ್ಲಿ ಸುಮಾರು 60 ಲಕ್ಷ ಹೆಕ್ಟೇರ್ ಭೂಮಿಯನ್ನು ಪ್ರಧಾನ ಮಂತ್ರಿ ಕೃಷಿ ಸಿಂಚಯ ಯೋಜನಾ ಅಡಿಯಲ್ಲಿ ಕಿರು ನೀರಾವರಿ ವ್ಯವಸ್ಥೆ ಮತ್ತು ಹನಿ ನೀರಾವರಿ ವ್ಯವಸ್ಥೆಗೆ ಜೋಡಿಸಲಾಗಿದೆ.
ಪ್ರಾಕ್ರತಿಕ ವಿಕೋಪದ ಸಂದರ್ಭಗಳಲ್ಲಿ ರೈತರಿಗೆ ಆಗುವ ಹಾನಿಯ ಪ್ರಮಾಣವನ್ನು ಕಡಿಮೆ ಮಾಡಲು ನಾವು ಪ್ರಯತ್ನಿಸಿದ್ದೇವೆ. ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನಾ ಅಡಿಯಲ್ಲಿ ರೈತರಿಗೆ ನೀಡಲಾದ ಪರಿಹಾರ ಮೊತ್ತ ಈಗ ಒಂದು ಲಕ್ಷ ಕೋ.ರೂ.ಗಳಿಗೆ ತಲುಪಿದೆ. ಈ ಸಂಖ್ಯೆ ಬಹಳ ಮುಖ್ಯ. ದೇಶಾದ್ಯಂತ ರೈತರು ಬರೇ 21,000 ಕೋ.ರೂ.ಗಳನ್ನು ಪ್ರೀಮಿಯಂ ಆಗಿ ಪಾವತಿ ಮಾಡಿದ್ದಾರೆ. ಆದರೆ ಅವರು ಒಂದು ಲಕ್ಷ ಕೋ.ರೂ.ಗಳಿಗೂ ಅಧಿಕ ಮೊತ್ತವನ್ನು ಪರಿಹಾರವಾಗಿ ಪಡೆದಿದ್ದಾರೆ. ಸಹೋದರರೇ ಮತ್ತು ಸಹೋದರಿಯರೇ, ಇಂತಹ ಎಲ್ಲ ಸಂಗತಿಗಳಿಂದ ರೈತರಿಗೆ ಹಣ ಬರುವುದನ್ನು ಖಾತ್ರಿಪಡಿಸಲು ಪ್ರಯತ್ನಗಳನ್ನು ತೀವ್ರಗೊಳಿಸಲಾಗಿದೆ. ಅದು ಕೃಷಿ ತ್ಯಾಜ್ಯದಿಂದಲಾದರೂ ಸರಿ. ದೇಶಾದ್ಯಂತ ಕೃಷಿ ತ್ಯಾಜ್ಯದಿಂದ ಜೈವಿಕ ಇಂಧನವನ್ನು ತಯಾರಿಸಲು ನೂರಾರು ಹೊಸ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ. ಏಳು ವರ್ಷಗಳ ಹಿಂದೆ ದೇಶವು ವಾರ್ಷಿಕ 40 ಕೋಟಿ ಲೀಟರಿಗಿಂತ ಕಡಿಮೆ ಎಥೆನಾಲ್ ಉತ್ಪಾದನೆ ಮಾಡುತ್ತಿತ್ತು. ಇಂದು ಅದು 340 ಕೋಟಿ ಲೀಟರ್ ದಾಟಿದೆ.
ಸ್ನೇಹಿತರೇ,
ಗೋಬರ್-ಧನ್ ಯೋಜನಾ ದೇಶಾದ್ಯಂತ ಜಾರಿಯಲ್ಲಿದೆ. ಸೆಗಣಿಯಿಂದ ಜೈವಿಕ ಅನಿಲ ತಯಾರಿಸುವಂತೆ ಗ್ರಾಮಸ್ಥರನ್ನು ಉತ್ತೇಜಿಸಲಾಗುತ್ತಿದೆ. ಜೈವಿಕ ಅನಿಲ ಬಳಕೆಯನ್ನು ಹೆಚ್ಚಿಸಲು ದೇಶಾದ್ಯಂತ ಸ್ಥಾವರಗಳನ್ನು ಸ್ಥಾಪಿಸಲಾಗುತ್ತಿದೆ. ಈ ಸ್ಥಾವರಗಳು ಪ್ರತೀ ವರ್ಷ ಮಿಲಿಯಾಂತರ ಟನ್ನುಗಳಷ್ಟು ಉತ್ತಮವಾದಂತಹ ಸಾವಯವ ಗೊಬ್ಬರವನ್ನು ಉತ್ಪಾದಿಸುತ್ತವೆ. ಅದು ರೈತರಿಗೆ ಕಡಿಮೆ ದರದಲ್ಲಿ ಲಭಿಸುತ್ತದೆ. ಸೆಗಣಿಯಿಂದ ಆದಾಯ ಉತ್ಪಾದನೆಯಾದಾಗ ಹಾಲು ಕೊಡದ ಜಾನುವಾರುಗಳೂ ಅಥವಾ ಹಾಲು ಕೊಡುವುದನ್ನು ನಿಲ್ಲಿಸಿದ ಜಾನುವಾರುಗಳು ಹೊರೆಯಾಗುವುದಿಲ್ಲ. ದೇಶಕ್ಕೆ ಪ್ರತಿಯೊಬ್ಬರೂ ಉಪಯುಕ್ತವಾಗಿರಬೇಕು ಮತ್ತು ಯಾರೊಬ್ಬರೂ ಅಸಹಾಯಕರಾಗಿರಬಾರದು; ಇದು ಕೂಡಾ ಸ್ವಾವಲಂಬನೆ.
ಸ್ನೇಹಿತರೇ,
ಮನೆಯಲ್ಲಿಯೇ ಪಶುಗಳಿಗೆ ಚಿಕಿತ್ಸೆ ನೀಡುವುದನ್ನು ಖಾತ್ರಿ ಪಡಿಸುವ ಮತ್ತು ಮನೆಯಲ್ಲಿಯೇ ಕೃತಕ ಗರ್ಭಧಾರಣೆ ಮಾಡಿಸುವ ಆಂದೋಲನ ಚಾಲ್ತಿಯಲ್ಲಿದೆ. ಪಶುಗಳಲ್ಲಿ ಕಾಲು ಮತ್ತು ಬಾಯಿ ರೋಗ ನಿಯಂತ್ರಣಕ್ಕೆ ಲಸಿಕಾ ಆಂದೋಲನ ಕೂಡಾ ಚಾಲ್ತಿಯಲ್ಲಿದೆ. ಸರಕಾರವು ಕಾಮಧೇನು ಆಯೋಗವನ್ನು ಸ್ಥಾಪಿಸಿದೆ ಮತ್ತು ಹೈನು ವಲಯಕ್ಕೆ ಮೂಲಸೌಕರ್ಯ ಒದಗಣೆಗೆ ಸಾವಿರಾರು ಕೋ.ರೂ.ಗಳ ವಿಶೇಷ ನಿಧಿಯನ್ನು ಸ್ಥಾಪಿಸಿದೆ. ನಮ್ಮ ಸರಕಾರವು ಲಕ್ಷಾಂತರ ಪಶುಪಾಲಕರನ್ನು ಕಿಸಾನ್ ಕ್ರೆಡಿಟ್ ಕಾರ್ಡ್ ಗಳ ಸೌಲಭ್ಯಗಳೊಂದಿಗೆ ಬೆಸೆದಿದೆ.
ಸ್ನೇಹಿತರೇ,
ಭೂಮಿ ನಮ್ಮ ತಾಯಿ ಮತ್ತು ನಾವು ಭೂ ಮಾತೆಯನ್ನು ರಕ್ಷಿಸಲು ಯಾವುದೇ ಪ್ರಯತ್ನಗಳನ್ನು ಮಾಡದೇ ಇದ್ದಲ್ಲಿ ಆ ನೆಲ ಬರಡು ಭೂಮಿಯಾಗುತ್ತದೆ. ನಮ್ಮ ಭೂಮಿ ಬರಡಾಗುವುದನ್ನು ತಡೆಯಲು ಬಹಳ ಉತ್ತಮವಾದ ದಾರಿ ಇದೆ ಮತ್ತು ಅದು ರಾಸಾಯನಿಕ ಮುಕ್ತ ಕೃಷಿ. ಆದುದರಿಂದ ದೇಶವು ಇನ್ನೊಂದು ದೂರದೃಷ್ಟಿಯ ಪ್ರಯತ್ನವನ್ನು ಕಳೆದ ವರ್ಷ ಆರಂಭ ಮಾಡಿದೆ ಮತ್ತು ಅದು ಸಹಜ ಕೃಷಿ. ಈಗಷ್ಟೇ, ನೀವು ಒಂದು ಸಾಕ್ಷ್ಯ ಚಿತ್ರವನ್ನು ನೋಡಿದಿರಿ ಮತ್ತು ಅದನ್ನು ಸಾಮಾಜಿಕ ಮಾದ್ಯಮಗಳಲ್ಲಿ ಹರಡುವ ಮೂಲಕ ಪ್ರತಿಯೊಬ್ಬ ರೈತರಿಗೂ ಲಭ್ಯವಾಗುವಂತೆ ಮಾಡಲು ನಾನು ಇಚ್ಛಿಸುತ್ತೇನೆ.
ನಾವು ನಮ್ಮ ಹಳೆಯ ತಲೆಮಾರುಗಳ ಮೂಲಕ ಸಹಜ ಕೃಷಿಯ ಬಗ್ಗೆ ಬಹಳಷ್ಟನ್ನು ಕಲಿತಿದ್ದೇವೆ. ನಮ್ಮ ಸಾಂಪ್ರದಾಯಿಕ ಜ್ಞಾನವನ್ನು ಸಂಘಟಿಸಿ ಮತ್ತು ಅದನ್ನು ಆಧುನಿಕ ತಂತ್ರಜ್ಞಾನದ ಜೊತೆ ಬೆಸೆಯಲು ಇದು ಸಕಾಲ. ಜಗತ್ತಿನಲ್ಲಿಂದು ರಾಸಾಯನಿಕ ಮುಕ್ತ ಆಹಾರ ಧಾನ್ಯಗಳಿಗೆ ಭಾರೀ ಬೇಡಿಕೆ ಇದೆ. ಮತ್ತು ಖರೀದಿದಾರರು ಹೆಚ್ಚು ಹಣ ಪಾವತಿ ಮಾಡಲು ತಯಾರಿದ್ದಾರೆ. ಇದಕ್ಕೆ ಉತ್ಪಾದನಾ ವೆಚ್ಚ ಕಡಿಮೆ ಮತ್ತು ಉತ್ತಮ ಉತ್ಪಾದನೆ ಇರುತ್ತದೆ. ರಾಸಾಯನಿಕ ಮುಕ್ತ ಕೃಷಿಯಿಂದ ನಮ್ಮ ಮಣ್ಣಿನ ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನಗಳಿವೆ. ಉತ್ಪಾದಕತೆಗೆ ಮತ್ತು ಬಳಕೆದಾರರ ಆರೋಗ್ಯಕ್ಕೂ ಇದರಿಂದ ಅನುಕೂಲತೆ ಇದೆ. ನಾನಿಂದು ನಿಮ್ಮೆಲ್ಲರನ್ನೂ ನೈಸರ್ಗಿಕ ಅಥವಾ ಸಹಜ ಕೃಷಿಗೆ ಹೆಚ್ಚು ಒತ್ತು ನೀಡಿ ಮತ್ತು ಅದನ್ನು ನಿಮ್ಮ ಕೃಷಿಯಲ್ಲಿ ಅಳವಡಿಸಿಕೊಳ್ಳಿ ಎಂದು ಮನವಿ ಮಾಡುತ್ತೇನೆ.
ಸಹೋದರರೇ ಮತ್ತು ಸಹೋದರಿಯರೇ,
ಹೊಸ ವರ್ಷದ ಈ ಮೊದಲ ದಿನ ಹೊಸ ನಿರ್ಧಾರಗಳ ದಿನ. ಈ ನಿರ್ಧಾರಗಳು ಸ್ವಾತಂತ್ರ್ಯದ ಈ ಪುಣ್ಯ ಕಾಲದಲ್ಲಿ ದೇಶವನ್ನು ಹೆಚ್ಚು ಸಾಮರ್ಥ್ಯಶೀಲವನ್ನಾಗಿಸಲು ಉಪಯುಕ್ತವಾಗಲಿವೆ. ಇಲ್ಲಿಂದ ನಾವು ಅನ್ವೇಷಣೆಯ ನಿರ್ಧಾರವನ್ನು, ಏನಾದರೂ ಹೊಸದನ್ನು ಮಾಡುವ ನಿರ್ಧಾರವನ್ನು ಕೈಗೊಳ್ಳಬೇಕು. ಕೃಷಿಯಲ್ಲಿ ಈ ನಾವಿನ್ಯತೆ ಇಂದಿನ ಕಾಲದ ಆವಶ್ಯಕತೆ. ನಾವು ಹೊಸ ಬೆಳೆಗಳನ್ನು ಮತ್ತು ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳಲು ಹಿಂಜರಿಯಬಾರದು. ಸ್ವಚ್ಛತೆಯ ನಿರ್ಧಾರವನ್ನೂ ನಾವು ಮರೆಯಬಾರದು. ಸ್ವಚ್ಛತೆಯ ಕಿಡಿ, ಹುಮ್ಮಸ್ಸು ಪ್ರತೀ ಗ್ರಾಮದಲ್ಲಿ, ಪ್ರತೀ ಕೃಷಿ ಕ್ಷೇತ್ರದಲ್ಲಿ ಜ್ವಲಿಸುತ್ತಿರಬೇಕು. ಬಹಳ ದೊಡ್ಡ ನಿರ್ಧಾರ ಎಂದರೆ ಸ್ವಾವಲಂಬನೆ ಮತ್ತು ಸ್ಥಳೀಯ ಉತ್ಪನಗಳನ್ನು ಬೆಂಬಲಿಸುವುದು. ಭಾರತದಲ್ಲಿ ಉತ್ಪಾದನೆಯಾದ ಉತ್ಪನ್ನಗಳಿಗೆ ನಾವು ಜಾಗತಿಕ ಮಾನ್ಯತೆಯನ್ನು ನೀಡಬೇಕು. ಇದಕ್ಕಾಗಿ ನಾವು ಭಾರತದಲ್ಲಿ ತಯಾರಾದ ಪ್ರತೀ ಉತ್ಪನ್ನಕ್ಕೂ ನಾವು ಆದ್ಯತೆಯನ್ನು ಕೊಡುವುದು ಅಗತ್ಯವಿದೆ.
ಇಂದಿನ ನಮ್ಮ ಕ್ರಮಗಳು ಮುಂದಿನ 25 ವರ್ಷಗಳ ಅಭಿವೃದ್ಧಿಯ ದಿಕ್ಕು ದಿಶೆಗಳನ್ನು ನಿರ್ಧರಿಸುತ್ತವೆ ಎಂಬುದನ್ನು ನಾವು ಮರೆಯಬಾರದು. ಈ ಪ್ರಯಾಣದಲ್ಲಿ ಪ್ರತಿಯೊಬ್ಬ ದೇಶವಾಸಿಯ ಬೆವರು ಮತ್ತು ಪ್ರಯತ್ನಗಳು ಇರುತ್ತವೆ. ನಾವು ಭಾರತವನ್ನು ಅದರ ವೈಭವದ ಗುರುತಿಸುವಿಕೆಯಲ್ಲಿ ಮರುಸ್ಥಾಪಿಸುತ್ತೇವೆ ಮತ್ತು ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತೇವೆ ಎಂಬ ಬಗ್ಗೆ ನನಗೆ ವಿಶ್ವಾಸವಿದೆ. ಹೊಸ ವರ್ಷದ ಮೊದಲ ದಿನದಂದು ದೇಶದ ಕೋಟ್ಯಾಂತರ ರೈತರ ಬ್ಯಾಂಕ್ ಖಾತೆಗಳಿಗೆ 20,000 ಕೋ.ರೂ.ಗಳ ವರ್ಗಾವಣೆ ಇಂತಹ ಪ್ರಯತ್ನಗಳಲ್ಲಿ ಒಂದು.
ನಿಮಗೆಲ್ಲರಿಗೂ ಹೊಸ ವರ್ಷ 2022 ಸಂತೋಷದಾಯಕವಾಗಿರಲಿ ಎಂದು ಮತ್ತೊಮ್ಮೆ ಹಾರೈಸುತ್ತೇನೆ.
ಬಹಳ ಧನ್ಯವಾದಗಳು!