ನನ್ನ ಕ್ಯಾಬಿನೆಟ್ ಸಹೋದ್ಯೋಗಿಗಳಾದ ಡಾ. ಜಿತೇಂದ್ರ ಸಿಂಗ್ ಅವರೆ, ಪ್ರಧಾನ ಕಾರ್ಯದರ್ಶಿ ಡಾ. ಪಿ.ಕೆ.ಮಿಶ್ರಾ, ಕ್ಯಾಬಿನೆಟ್ ಕಾರ್ಯದರ್ಶಿ ಶ್ರೀ. ರಾಜೀವ್ ಗೌಬಾ, ಕೇಂದ್ರ ಜಾಗೃತಿ ಆಯುಕ್ತರು ಶ್ರೀ.ಸುರೇಶ್ ಪಟೇಲ್, ಇತರ ಎಲ್ಲ ಆಯುಕ್ತರು, ಮಹಿಳೆಯರೇ ಮತ್ತು ಮಹನೀಯರೇ!
ಈ ಜಾಗೃತಿ ಸಪ್ತಾಹವು ಸರ್ದಾರ್ ಸಾಹಿಬ್ ಅವರ ಜಯಂತಿಯ ದಿನದಿಂದ ಪ್ರಾರಂಭವಾಗಿದೆ. ಸರ್ದಾರ್ ಸಾಹೇಬರ ಇಡೀ ಜೀವನವು ಪ್ರಾಮಾಣಿಕತೆ, ಪಾರದರ್ಶಕತೆ ಮತ್ತು ಈ ಮೌಲ್ಯಗಳಿಂದ ಪ್ರೇರಿತವಾದ ಸಾರ್ವಜನಿಕ ಸೇವೆಯ ನಿರ್ಮಾಣಕ್ಕೆ ಮುಡಿಪಾಗಿತ್ತು. ಮತ್ತು ಈ ಎಲ್ಲ ರೀತಿಯ ಬದ್ಧತೆಯೊಂದಿಗೆ, ನೀವು ಜಾಗರೂಕತೆಯ ಬಗ್ಗೆ ಜಾಗೃತಿ ಅಭಿಯಾನವನ್ನು ಪ್ರಾರಂಭಿಸಿದ್ದೀರಿ. ಈ ಬಾರಿ ನೀವೆಲ್ಲರೂ ಜಾಗೃತಿ ಸಪ್ತಾಹವನ್ನು 'ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ಭ್ರಷ್ಟಾಚಾರ ಮುಕ್ತ ಭಾರತ' ಎಂಬ ಸಂಕಲ್ಪದೊಂದಿಗೆ ಆಚರಿಸುತ್ತಿದ್ದೀರಿ. ಈ ಸಂಕಲ್ಪ ಪ್ರಸ್ತುತ ಕಾಲದ ಬೇಡಿಕೆಯಾಗಿದೆ, ಇದು ಸೂಕ್ತವೂ ಆಗಿದೆ ಮತ್ತು ದೇಶವಾಸಿಗಳಿಗೆ ಅಷ್ಟೇ ಮುಖ್ಯವಾಗಿದೆ.
ಸ್ನೇಹಿತರೆ,
ಅಭಿವೃದ್ಧಿ ಹೊಂದಿದ ಭಾರತಕ್ಕೆ, ನಂಬಿಕೆ ಮತ್ತು ವಿಶ್ವಾಸಾರ್ಹತೆ ಎರಡೂ ಬಹಳ ಮುಖ್ಯ. ಸರ್ಕಾರದ ಮೇಲೆ ವೃದ್ಧಿಸುತ್ತಿರುವ ಸಾರ್ವಜನಿಕರ ವಿಶ್ವಾಸ ಅವರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಹಿಂದಿನ ಸರ್ಕಾರಗಳು ಜನರ ನಂಬಿಕೆಯನ್ನು ಕಳೆದುಕೊಂಡಿದ್ದಲ್ಲದೆ, ಜನರು ಅವರನ್ನು ನಂಬುವಂತೆ ಮಾಡುವಲ್ಲಿಯೂ ವಿಫಲವಾದದ್ದು ನಮಗೆ ಕಷ್ಟಕರವಾಗಿತ್ತು. ಸುದೀರ್ಘ ಕಾಲದ ಗುಲಾಮಗಿರಿಯಿಂದ ನಮಗೆ ದೊರೆತ ಭ್ರಷ್ಟಾಚಾರ, ಶೋಷಣೆ, ಸಂಪನ್ಮೂಲಗಳ ನಿಯಂತ್ರಣದ ಪರಂಪರೆ ದುರದೃಷ್ಟವಶಾತ್ ಸ್ವಾತಂತ್ರ್ಯ ನಂತರ ಅದು ಮತ್ತಷ್ಟು ಉಲ್ಬಣಿಸಿತು ಮತ್ತು ಅದರ ಪರಿಣಾಮ ಸ್ವರೂಪವಾಗಿ ದೇಶದ ನಾಲ್ಕು ತಲೆಮಾರುಗಳು ಅದರಿಂದ ಸಾಕಷ್ಟು ನಷ್ಟವನ್ನು ಅನುಭವಿಸಿವೆ.
ಆದರೆ ಸ್ವಾತಂತ್ರ್ಯದ ಅಮೃತ ಕಾಲದಲ್ಲಿ ದಶಕಗಳಿಂದ ನಡೆದುಕೊಂಡು ಬಂದಿರುವ ಈ ಪದ್ಧತಿಯನ್ನು ಸಂಪೂರ್ಣವಾಗಿ ಬದಲಾಯಿಸಬೇಕಾಗಿದೆ. ಈ ಬಾರಿ ಆಗಸ್ಟ್ 15 ರಂದು ನಾನು ಕೆಂಪುಕೋಟೆಯ ವರಣದಲ್ಲಿ ನಾನು ಮಾಡಿದ ಭಾಷಣದಲ್ಲಿ ಕಳೆದ ಎಂಟು ವರ್ಷಗಳ ಶ್ರಮ ಮತ್ತು ಉಪಕ್ರಮಗಳ ಜೊತೆಗೆ ಈಗ ಭ್ರಷ್ಟಾಚಾರದ ವಿರುದ್ಧ ನಿರ್ಣಾಯಕ ಹೋರಾಟದ ಸಮಯ ಬಂದಿದೆ ಎಂದು ಹೇಳಿದ್ದೆ. ಈ ಸಂದೇಶದವನ್ನು ಅರ್ಥಮಾಡಿಕೊಂಡರೆ, ಈ ಹಾದಿಯಲ್ಲಿ ನಡೆಯುವಾಗ, ನಾವು ಅಭಿವೃದ್ಧಿ ಹೊಂದಿದ ಭಾರತದ ಕಡೆಗೆ ವೇಗವಾಗಿ ಚಲಿಸಲು ಸಾಧ್ಯವಾಗುತ್ತದೆ.
ಸ್ನೇಹಿತರೆ,
ನಮ್ಮ ದೇಶದಲ್ಲಿ ಭ್ರಷ್ಟಾಚಾರ ಹರಡಲು ಮತ್ತು ದೇಶವಾಸಿಗಳನ್ನು ಮುಂದೆ ಹೋಗದಂತೆ ತಡೆಯಲು ಎರಡು ಪ್ರಮುಖ ಕಾರಣಗಳಿವೆ - ಒಂದು - ಸೌಲಭ್ಯಗಳ ಕೊರತೆ ಮತ್ತು ಎರಡನೆಯದು - ಸರ್ಕಾರದ ಅನಗತ್ಯ ಮೂಗು ತೂರಿಸುವಿಕೆ. ದೀರ್ಘಕಾಲದವರೆಗೆ, ನಾವು ಸೌಲಭ್ಯಗಳು ಮತ್ತು ಅವಕಾಶಗಳಿಲ್ಲದಂತೆ ಇರಿಸಲ್ಪಟ್ಟಿದ್ದೇವೆ. ಅಂತರವು ಬೆಳೆಯಲು ಅವಕಾಶ ಮಾಡಿಕೊಡಲಾಗಿದೆ. ಇದು ಬೇರೆಯವರಿಗಿಂತ ಮೊದಲು ಯಾವುದೇ ಪ್ರಯೋಜನವನ್ನು ಪಡೆದುಕೊಳ್ಳಬೇಕೆನ್ನುವ ಅನಾರೋಗ್ಯಕರ ಸ್ಪರ್ಧೆಗೆ ಮುನ್ನುಡಿ ಬರೆಯಿತು. ಈ ಸ್ಪರ್ಧೆಯು ಭ್ರಷ್ಟಾಚಾರದ ಪರಿಸರ ವ್ಯವಸ್ಥೆಯನ್ನು ರಚಿಸಲು ಅನುಕೂಲ ವಾತಾವರಣ ಕಲ್ಪಿಸಿತು. ಪಡಿತರ ಅಂಗಡಿಯಲ್ಲಿ ಸರದಿ, ಗ್ಯಾಸ್ ಕನೆಕ್ಷನ್ ನಿಂದ ಸಿಲಿಂಡರ್ ತುಂಬುವವರೆಗೆ, ಬಿಲ್ ಕಟ್ಟುವುದು, ಅಡ್ಮಿಷನ್ ತೆಗೆದುಕೊಳ್ಳುವುದು, ಲೈಸೆನ್ಸ್ ತೆಗೆದುಕೊಳ್ಳುವುದು, ಯಾವುದೇ ಅನುಮತಿ ತೆಗೆದುಕೊಳ್ಳುವುದು ಹೀಗೆ ಎಲ್ಲೆಡೆಗಳಲ್ಲಿ ಸರತಿ ಸಾಲುಗಳು. ಸರದಿ ಸಾಲು ಉದ್ದವಾದಷ್ಟೂ ಭ್ರಷ್ಟಾಚಾರದ ಅಷ್ಟೇ ವೃದ್ಧಿಸುತ್ತದೆ. ಮತ್ತು ಈ ರೀತಿಯ ಭ್ರಷ್ಟಾಚಾರದ ದೊಡ್ಡ ನಷ್ಟವನ್ನು ಯಾರಾದರೂ ಭರಿಸಬೇಕು ಎಂದಾದಲ್ಲಿ, ಅದು ದೇಶದ ಬಡವರು ಮತ್ತು ದೇಶದ ಮಧ್ಯಮ ವರ್ಗದವರು ಮಾತ್ರ.
ದೇಶದ ಬಡವರು ಮತ್ತು ಮಧ್ಯಮ ವರ್ಗದವರು ಈ ಸಂಪನ್ಮೂಲಗಳನ್ನು ಕ್ರೋಡೀಕರಿಸುವಲ್ಲಿ ತಮ್ಮ ಶಕ್ತಿಯನ್ನು ವ್ಯಯಿಸಿದರೆ, ದೇಶ ಹೇಗೆ ಪ್ರಗತಿಯಾಗುತ್ತದೆ? ಅದಕ್ಕಾಗಿಯೇ ಕಳೆದ 8 ವರ್ಷಗಳಿಂದ ಕೊರತೆ ಮತ್ತು ಒತ್ತಡದಿಂದ ಸೃಷ್ಟಿಯಾದ ವ್ಯವಸ್ಥೆಯನ್ನು ಬದಲಾಯಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಬೇಡಿಕೆ ಮತ್ತು ಪೂರೈಕೆ ನಡುವಿನ ಅಂತರವನ್ನು ತುಂಬಲು ಪ್ರಯತ್ನಿಸುತ್ತಿದ್ದೇವೆ. ಇದಕ್ಕಾಗಿ ನಾವು ಹಲವಾರು ಕ್ರಮಗಳನ್ನು ಕೈಗೊಂಡಿದ್ದೇವೆ.
ಮೂರು ಮುಖ್ಯ ಅಂಶಗಳತ್ತ ನಾನು ಗಮನ ಸೆಳೆಯಬಯಸುತ್ತೇನೆ. ಆಧುನಿಕ ತಂತ್ರಜ್ಞಾನದ ಬಳಕೆ, ಎರಡನೆಯದು ಮೂಲ ಸೌಕರ್ಯಗಳ ಸಂತೃಪ್ತಿಯ ಗುರಿ ಮತ್ತು ಸ್ವಾವಲಂಬನೆ. ಈಗ ಅದೇ ಪಡಿತರ ಉದಾಹರಣೆ ತೆಗೆದುಕೊಳ್ಳಿ. ಕಳೆದ 8 ವರ್ಷಗಳಲ್ಲಿ, ನಾವು ತಂತ್ರಜ್ಞಾನದೊಂದಿಗೆ PDS ಅನ್ನು ಸಂಯೋಜಿಸಿದ್ದೇವೆ ಮತ್ತು ಕೋಟಿಗಟ್ಟಲೆ ನಕಲಿ ಫಲಾನುಭವಿಗಳನ್ನು ವ್ಯವಸ್ಥೆಯಿಂದ ಕಿತ್ತೊಗೆದಿದ್ದೇವೆ.
ಅದೇ ರೀತಿ ಡಿಬಿಟಿ ಮೂಲಕ ಸರ್ಕಾರ ನೀಡುವ ಸವಲತ್ತುಗಳನ್ನು ಈಗ ನೇರವಾಗಿ ಫಲಾನುಭವಿಗಳಿಗೆ ತಲುಪಿಸಲಾಗುತ್ತಿದೆ. ಈ ಒಂದೇ ಕ್ರಮದಿಂದ ಇದುವರೆಗೆ 2 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಹಣ ದುರುಪಯೋಗವಾಗದಂತೆ ಉಳಿತಾಯವಾಗಿದೆ. ನಗದು ಆಧಾರಿತ ಆರ್ಥಿಕತೆಯಲ್ಲಿ ಲಂಚ, ಕಪ್ಪುಹಣ ಪತ್ತೆ ಹಚ್ಚುವುದು ಎಷ್ಟು ಕಷ್ಟ ಎಂಬುದು ಎಲ್ಲರಿಗೂ ತಿಳಿದಿದೆ.
ಈಗ ಡಿಜಿಟಲ್ ವ್ಯವಸ್ಥೆಯನ್ನು ಪರಿಚಯಿಸಿರುವುದರಿಂದ ವಹಿವಾಟಿನ ಸಂಪೂರ್ಣ ವಿವರಗಳು ಸುಲಭವಾಗಿ ಲಭ್ಯವಾಗುತ್ತಿವೆ. ಸರ್ಕಾರಿ ಇ-ಮಾರುಕಟ್ಟೆ ಸ್ಥಳ – (ಜಿಇಎಂ) ನಂತಹ ವ್ಯವಸ್ಥೆಯಿಂದ ಸರ್ಕಾರಿ ಸಂಗ್ರಹಣೆಯಲ್ಲಿ ಎಷ್ಟು ಪಾರದರ್ಶಕತೆ ಬಂದಿದೆ ಎಂಬುದನ್ನು ಈ ಪೋರ್ಟಲ್ ನ ಭಾಗವಾದಂತಹ ಜನರು ಅರಿತಿದ್ದಾರೆ ಮತ್ತು ಅದರ ಮಹತ್ವವನ್ನು ಅರ್ಥಮಾಡಿಕೊಳ್ಳುತ್ತಿದ್ದಾರೆ.
ಸ್ನೇಹಿತರೆ,
ಯಾವುದೇ ಸರ್ಕಾರಿ ಯೋಜನೆ ಪ್ರತಿಯೊಬ್ಬ ಅರ್ಹ ಫಲಾನುಭವಿಗಳನ್ನು ತಲುಪುವುದು, ಗುರಿಗಳನ್ನು ಸಂಪೂರ್ಣ ಸಾಧಿಸುವುದು ಸಮಾಜದಲ್ಲಿನ ತಾರತಮ್ಯವನ್ನು ತೊಡೆದುಹಾಕುತ್ತದೆ ಮತ್ತು ಭ್ರಷ್ಟಾಚಾರದ ವ್ಯಾಪ್ತಿಯನ್ನು ಸಹ ಕಿತ್ತೊಗೆಯುತ್ತದೆ. ಸರ್ಕಾರ ಮತ್ತು ಸರ್ಕಾರದ ನಾನಾ ಇಲಾಖೆಗಳು ತಾವಾಗಿಯೇ ಮುಂದೆ ಬಂದು ಪ್ರತಿಯೊಬ್ಬ ಅರ್ಹರನ್ನು ಹುಡುಕಿದಾಗ, ಮಧ್ಯವರ್ತಿಗಳ ಪಾತ್ರ ಕೊನೆಗೊಳ್ಳುತ್ತದೆ. ಆದ್ದರಿಂದ, ನಮ್ಮ ಸರ್ಕಾರವು ಪ್ರತಿ ಯೋಜನೆಯಲ್ಲಿ ಸ್ಯಾಚುರೇಶನ್ ತತ್ವವನ್ನು ಅಳವಡಿಸಿಕೊಂಡಿದೆ. ಪ್ರತಿ ಮನೆಗೆ ನೀರು, ಬಡವರಿಗೆ ಪಕ್ಕಾ ಸೂರು, ಬಡವರಿಗೆ ವಿದ್ಯುತ್ ಸಂಪರ್ಕ ಮತ್ತು ಗ್ಯಾಸ್ ಸಂಪರ್ಕ ಹೀಗೆ ಈ ಯೋಜನೆಗಳು ಸರ್ಕಾರದ ಈ ಧೋರಣೆಯನ್ನು ತೋರಿಸುತ್ತವೆ.
ಸ್ನೇಹಿತರೆ,
ವಿದೇಶಗಳ ಮೇಲೆ ಅತಿಯಾದ ಅವಲಂಬನೆಯೂ ಭ್ರಷ್ಟಾಚಾರಕ್ಕೆ ಪ್ರಮುಖ ಕಾರಣವಾಗಿದೆ. ದಶಕಗಳವರೆಗೆ ನಮ್ಮ ರಕ್ಷಣಾ ಕ್ಷೇತ್ರವನ್ನು ವಿದೇಶಗಳ ಮೇಲೆ ಹೇಗೆ ಅವಲಂಬಿತಗೊಳಿಸಲಾಗಿತ್ತು ಎಂಬುದು ನಿಮಗೆ ಚೆನ್ನಾಗಿ ತಿಳಿದಿದೆ. ಪರಿಣಾಮ ಅದೆಷ್ಟೋ ಹಗರಣಗಳು ನಡೆದಿವೆ. ಇಂದು ರಕ್ಷಣಾ ವಲಯದಲ್ಲಿ ಸ್ವಾವಲಂಬನೆಗೆ ಒತ್ತು ನೀಡುವುದರೊಂದಿಗೆ ಈ ಹಗರಣಗಳ ವ್ಯಾಪ್ತಿ ಕೂಡ ಕೊನೆಗೊಂಡಿದೆ. ರೈಫಲ್‌ಗಳಿಂದ ಫೈಟರ್ ಜೆಟ್‌ಗಳು ಮತ್ತು ಸಾರಿಗೆ ವಿಮಾನಗಳವರೆಗೆ ಇಂದು ಭಾರತವು ಸ್ವತಃ ತಾನೇ ತಯಾರಿಸಿಕೊಳ್ಳುವತ್ತ ಸಾಗುತ್ತಿದೆ. ನಮ್ಮ ವಿದೇಶಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ರಕ್ಷಣೆ ಮಾತ್ರವಲ್ಲ, ಇತರ ಅಗತ್ಯಗಳಿಗಾಗಿಯೂ ಸ್ವಾವಲಂಬನೆಗೆ ಒತ್ತು ನೀಡಲಾಗುತ್ತಿದೆ.
ಸ್ನೇಹಿತರೆ,
ಸಿವಿಸಿ - ಕೇಂದ್ರೀಯ ಜಾಗೃತಾ ಆಯೋಗ ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ಪ್ರತಿಯೊಬ್ಬರ ಪ್ರಯತ್ನಗಳನ್ನು ಪ್ರೋತ್ಸಾಹಿಸುವಂತಹ ಒಂದು ಸಂಸ್ಥೆಯಾಗಿದೆ. ಕಳೆದ ಬಾರಿ ಪ್ರಿವೆಂಟಿವ್ ವಿಜಿಲೆನ್ಸ್ ನತ್ತ ಗಮನ ಹರಿಸಿ ಎಂದು ನಾನು ನಿಮ್ಮೆಲ್ಲರನ್ನು ಒತ್ತಾಯಿಸಿದ್ದೆ. ಈ ನಿಟ್ಟಿನಲ್ಲಿ ನೀವು ಹಲವಾರು ಕ್ರಮಗಳನ್ನು ಕೈಗೊಂಡಿದ್ದೀರಿ ಎಂದು ನನಗೆ ತಿಳಿದುಬಂದಿದೆ. ಇದಕ್ಕಾಗಿ ಮಾಡಿದ 3 ತಿಂಗಳ ಅಭಿಯಾನವೂ ಶ್ಲಾಘನೀಯವಾಗಿದೆ, ನಾನು ನಿಮ್ಮನ್ನು ಮತ್ತು ನಿಮ್ಮ ಇಡೀ ತಂಡವನ್ನು ಅಭಿನಂದಿಸುತ್ತೇನೆ. ಪಾರದರ್ಶಕತೆಯನ್ನು ಖಚಿತಪಡಿಸಲು ನೀವು ಪರಿಶೀಲನೆ ಮತ್ತು ತಪಾಸಣೆಯ ಸಾಂಪ್ರದಾಯಿಕ ವಿಧಾನವನ್ನು ಅಳವಡಿಸಿಕೊಳ್ಳುತ್ತಿದ್ದೀರಿ. ಆದರೆ ಇದನ್ನು ಮತ್ತಷ್ಟು ಆಧುನಿಕ ಹಾಗೂ ತಂತ್ರಜ್ಞಾನ ಆಧಾರಿತವಾಗಿಸಲು ನೀವು ಪ್ರಯತ್ನಿಸಬೇಕು
ಸ್ನೇಹಿತರೆ,
ಎಲ್ಲ ಇಲಾಖೆಗಳೂ ಭ್ರಷ್ಟಾಚಾರದ ವಿರುದ್ಧ ಸರ್ಕಾರದಂತೆಯೇ ಇಚ್ಛಾಶಕ್ತಿಯನ್ನು ತೋರಬೇಕಿದೆ. ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ, ಭ್ರಷ್ಟಾಚಾರದ ಬಗ್ಗೆ ಶೂನ್ಯ ಸಹಿಷ್ಣುತೆಯನ್ನು ಹೊಂದಿರುವ ಆಡಳಿತಾತ್ಮಕ ಪರಿಸರ ವ್ಯವಸ್ಥೆಯನ್ನು ನಾವು ಅಭಿವೃದ್ಧಿಪಡಿಸಬೇಕಾಗಿದೆ. ಇಂದು ಸರ್ಕಾರದ ನೀತಿಯಲ್ಲಿ, ಸರ್ಕಾರದ ಇಚ್ಛೆಯಲ್ಲಿ, ಸರ್ಕಾರದ ನಿರ್ಧಾರಗಳಲ್ಲಿ, ನೀವು ಅದನ್ನು ಎಲ್ಲೆಡೆ ನೋಡಬಹುದಾಗಿದೆ. ಆದರೆ ಈ ಭಾವನೆ ನಮ್ಮ ಆಡಳಿತ ವ್ಯವಸ್ಥೆಯ ಡಿಎನ್‌ಎಯಲ್ಲಿಯೂ ಗಟ್ಟಿಯಾಗಿ ಮೈಗೂಡಬೇಕಿದೆ. ಭ್ರಷ್ಟ ಅಧಿಕಾರಿಗಳ ವಿರುದ್ಧ ಅಪರಾಧ ಅಥವಾ ಇಲಾಖಾವಾರು ಕ್ರಮಗಳು ವರ್ಷಗಟ್ಟಲೆ ನಡೆಯುತ್ತವೆ ಎಂಬ ಭಾವನೆ ಇದೆ. ಮಿಷನ್ ಮೋಡ್‌ನಲ್ಲಿ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಶಿಸ್ತಿನ ಪ್ರಕ್ರಿಯೆಗಳನ್ನು ನಾವು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬಹುದೇ? ಏಕೆಂದರೆ ಆ ನೇತಾಡುವ ಕತ್ತಿ ಅವನಿಗೂ ತೊಂದರೆ ಕೊಡುತ್ತದೆ. ಅವನು ಅಮಾಯಕನಾಗಿದ್ದರೆ, ತಾನು ಜೀವನವನ್ನು ಪ್ರಾಮಾಣಿಕವಾಗಿ ಬದುಕಿದ್ದರೂ ಇಲಾಖೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಮತ್ತು ಈ ಚಕ್ರವ್ಯೂಹದಲ್ಲಿ ಸಿಲುಕಿದೆ ಎಂದು ತನ್ನ ಉಳಿದ ಜೀವನದುದ್ದಕ್ಕೂ ಬಹಳ ದುಃಖವನ್ನು ಅನುಭವಿಸುತ್ತಾನೆ. ತಪ್ಪು ಮಾಡಿದವನು ಶಿಕ್ಷೆ ಅನುಭವಿಸುತ್ತಾನೆ ಎಂಬುದರಲ್ಲಿ ಸಂಶಯವಿಲ್ಲ ಆದರೆ ತಪ್ಪು ಮಾಡದವನಿಗೆ ಈ ತೂಗುಕತ್ತಿಯಿಂದಾಗಿ ಜೀವನ ಬಲು ಭಾರವೆನಿಸುತ್ತದೆ. ನಿಮ್ಮ ಸ್ವಂತ ಒಡನಾಡಿಗಳನ್ನು ದೀರ್ಘಕಾಲ ಹೀಗೆ ಕಾಯಿಸುವುದರಿಂದ ಏನು ಪ್ರಯೋಜನ?
ಇಂತಹ ಆರೋಪಗಳು ಎಷ್ಟು ಬೇಗ ನಿರ್ಧಾರವಾದರೆ ಆಡಳಿತ ವ್ಯವಸ್ಥೆಯಲ್ಲಿ ಅಷ್ಟು ಪಾರದರ್ಶಕತೆ ಹೆಚ್ಚುತ್ತದೆ, ಅದರ ಕಾರ್ಯಕ್ಷಮತೆಯೂ ವೃದ್ಧಿಸುತ್ತದೆ. ಕ್ರಿಮಿನಲ್ ಪ್ರಕರಣಗಳಲ್ಲಿ, ತ್ವರಿತ ಕ್ರಮ, ನಿರಂತರ ಮೇಲ್ವಿಚಾರಣೆಯ ಅಗತ್ಯವೂ ಇದೆ. ಬಾಕಿ ಇರುವ ಭ್ರಷ್ಟಾಚಾರ ಪ್ರಕರಣಗಳ ಆಧಾರದ ಮೇಲೆ ಇಲಾಖೆಗಳಿಗೆ ಶ್ರೇಯಾಂಕ ನೀಡುವುದು ಮಾಡಬಹುದಾದ ಇನ್ನೊಂದು ಉಪಕ್ರಮವಾಗಿದೆ. ಸ್ವಚ್ಛತೆಗೆ ಪೈಪೋಟಿ ನಡೆಸುವಂತೆ ಇದರಲ್ಲೂ ಸ್ಪರ್ಧೆ ಇರಬೇಕು. ಇದರಲ್ಲಿ ಯಾವ ಇಲಾಖೆ ಅಸಡ್ಡೆ ತೋರಿದೆ, ಏನು ಕಾರಣ ಎಂದು ತಿಳಿದುಕೊಳ್ಳುವ, ಅಲ್ಲದೆ ಬೇರೆ ಯಾವ ಇಲಾಖೆ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಮುನ್ನಡೆಯುತ್ತಿದೆ ಪ್ರಾಮಾಣಿಕ ಕ್ರಮ ಕೈಗೊಳ್ಳುತ್ತಿದೆ ಅದನ್ನು ಅರಿಯುವ ಪ್ರಯತ್ನವಾಗಬೇಕು. ಸಂಬಂಧಿತ ವರದಿಗಳ ಮಾಸಿಕ ಅಥವಾ ತ್ರೈಮಾಸಿಕ ಪ್ರಕಟಣೆಯು ಭ್ರಷ್ಟಾಚಾರದ ವಿರುದ್ಧದ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ವಿವಿಧ ಇಲಾಖೆಗಳನ್ನು ಪ್ರೇರೇಪಿಸುತ್ತದೆ.
ತಂತ್ರಜ್ಞಾನದ ಮೂಲಕ ನಾವು ಇನ್ನೊಂದು ಕೆಲಸವನ್ನು ಮಾಡಬಹುದು. ವಿಜಿಲೆನ್ಸ್ ಕ್ಲಿಯರೆನ್ಸ್ ಬಹಳ ಸಮಯ ತೆಗೆದುಕೊಳ್ಳುತ್ತದೆ ಎಂದು ಸಾಮಾನ್ಯವಾಗಿ ಕಂಡುಬರುತ್ತದೆ. ತಂತ್ರಜ್ಞಾನದ ಸಹಾಯದಿಂದ ಈ ಪ್ರಕ್ರಿಯೆಯನ್ನು ಸುಗಮಗೊಳಿಸಬಹುದು. ನಿಮ್ಮ ಮುಂದೆ ನಾನು ಪ್ರಸ್ತಾಪಿಸ ಬಯಸುವ ಇನ್ನೊಂದು ವಿಷಯವೆಂದರೆ ಸಾರ್ವಜನಿಕ ಕುಂದುಕೊರತೆ ದತ್ತಾಂಶ. ಸರ್ಕಾರದ ವಿವಿಧ ಇಲಾಖೆಗಳಿಗೆ ಜನಸಾಮಾನ್ಯರು ದೂರುಗಳನ್ನು ಕಳುಹಿಸುತ್ತಾರೆ, ಅವುಗಳ ವಿಲೇವಾರಿ ವ್ಯವಸ್ಥೆಯೂ ಜಾರಿಯಲ್ಲಿದೆ.
ಆದರೆ ಸಾರ್ವಜನಿಕ ಕುಂದುಕೊರತೆಗಳ ದತ್ತಾಂಶವನ್ನು ನಾವು ಲೆಕ್ಕಪರಿಶೋಧನೆ ಮಾಡಿದರೆ, ಗರಿಷ್ಠ ಸಂಖ್ಯೆಯ ದೂರುಗಳು ಬರುತ್ತಿರುವ ನಿರ್ದಿಷ್ಟ ಇಲಾಖೆ ಇದೆ ಎಂದು ಕಂಡುಹಿಡಿಯಬಹುದು. ಪ್ರಕ್ರಿಯೆ ವಿಳಂಬಗೊಳಿಸುವ ಯಾವುದೇ ಒಬ್ಬ ನಿರ್ದಿಷ್ಟ ವ್ಯಕ್ತಿ ಇದ್ದಾನೆಯೇ ಅಥವಾ ನಮ್ಮ ರೂಢಿಯಲ್ಲಿರುವ ಕಾರ್ಯ ವಿಧಾನಗಳಲ್ಲಿ ಏನಾದರೂ ದೋಷವಿದೆಯೇ ಮತ್ತು ಅದು ಸಮಸ್ಯೆಗಳನ್ನು ಉಂಟುಮಾಡುತ್ತಿದೆಯೇ ಎಂದು ನೋಡಬೇಕು. ಹೀಗೆ ಮಾಡುವುದರಿಂದ ಆ ಇಲಾಖೆಯಲ್ಲಿನ ಭ್ರಷ್ಟಾಚಾರದ ಬುಡಕ್ಕೆ ಸುಲಭವಾಗಿ ಬರಲು ಸಾಧ್ಯವಾಗುತ್ತದೆ ಎಂದು ನಾನು ಭಾವಿಸುತ್ತೇನೆ. ನಾವು ಈ ದೂರುಗಳನ್ನು ಪ್ರತ್ಯೇಕವಾಗಿ ನೋಡಬಾರದು. ಈ ಸಮಸ್ಯೆಗಳನ್ನು ಸಂಪೂರ್ಣವಾಗಿ ವಿಶ್ಲೇಷಿಸಬೇಕು. ಇದರಿಂದ ಸರ್ಕಾರ ಮತ್ತು ಆಡಳಿತ ಇಲಾಖೆಗಳ ಬಗ್ಗೆ ಸಾರ್ವಜನಿಕರಲ್ಲಿ ವಿಶ್ವಾಸವೂ ಹೆಚ್ಚುತ್ತದೆ.
ಸ್ನೇಹಿತರೆ,
ಭ್ರಷ್ಟಾಚಾರದ ಮೇಲೆ ನಿಗಾ ಇಡಲು ಸಮಾಜದ ಮತ್ತು ಸಾಮಾನ್ಯ ನಾಗರಿಕರ ಗರಿಷ್ಠ ಭಾಗವಹಿಸುವಿಕೆಯನ್ನು ನಾವು ಹೇಗೆ ಪ್ರೋತ್ಸಾಹಿಸಬಹುದು ಎಂಬುದನ್ನು ನಾವು ಖಚಿತಪಡಿಸಿಕೊಳ್ಳಬೇಕಿದೆ. ಆದ್ದರಿಂದ, ಭ್ರಷ್ಟರು ಎಷ್ಟೇ ಶಕ್ತಿಶಾಲಿಯಾಗಿದ್ದರೂ, ಅವರನ್ನು ಯಾವುದೇ ಪರಿಸ್ಥಿತಿಯಲ್ಲಿ ಸಹಿಸದಂತೆ ನೋಡಿಕೊಳ್ಳುವುದು ನಿಮ್ಮಂತಹ ಸಂಸ್ಥೆಗಳ ಜವಾಬ್ದಾರಿಯಾಗಿದೆ.
ಯಾವುದೇ ಭ್ರಷ್ಟರು ರಾಜಕೀಯ-ಸಾಮಾಜಿಕ ಆಶ್ರಯ ಪಡೆಯಲಾಗದಂತಹ ವಾತಾವರಣವನ್ನು ನಿರ್ಮಿಸುವುದು ಮತ್ತು ಅಂಥವರು ಕಟಕಟೆಯಲ್ಲಿ ನಿಲ್ಲುವಂತೆ ಮಾಡುವುದು ಕೂಡಾ ಅಷ್ಟೇ ಅಗತ್ಯವಾಗಿದೆ. ಜೈಲು ಶಿಕ್ಷೆಗೆ ಒಳಗಾದ ನಂತರವೂ, ಭ್ರಷ್ಟಾಚಾರ ಸಾಬೀತಾದ ನಂತರವೂ ಅನೇಕ ಬಾರಿ ಭ್ರಷ್ಟರನ್ನು ವೈಭವೀಕರಿಸುವುದನ್ನು ನಾವು ನೋಡಿದ್ದೇವೆ. ಅಂತಹ ಪ್ರಾಮಾಣಿಕತೆಯ ಮುಖವಾಡಗಳನ್ನು ಧರಿಸುವ ಬಹಳಷ್ಟು ಜನರೊಂದಿಗೆ ಛಾಯಾಚಿತ್ರಗಳನ್ನು ತೆಗೆಸಿಕೊಳ್ಳಲು ಜನತೆ ನಾಚಿಕೆಪಡುವುದಿಲ್ಲ..
ಈ ಪರಿಸ್ಥಿತಿ ಭಾರತೀಯ ಸಮಾಜಕ್ಕೆ ಒಳ್ಳೆಯದಲ್ಲ. ಇಂದಿಗೂ ತಪ್ಪಿತಸ್ಥರೆಂದು ಸಾಬೀತಾದ ಕೆಲವರು ಭ್ರಷ್ಟಾಚಾರಿಗಳಪರ ವಾದ ಮಂಡಿಸುವಂಥ ಮತ್ತು ಅವರನ್ನು ಗೌರವಿಸುವಂಥ ಜನರಿದ್ದಾರೆ. ಇದನ್ನು ನಾವು ದೇಶದಲ್ಲಿ ಎಂದಿಗೂ ಕೇಳಿಲ್ಲ. ಅಂತಹವರಿಗೆ, ಅಂತಹ ಶಕ್ತಿಗಳಿಗೆ ಸಮಾಜದಿಂದ ಅವರ ಕರ್ತವ್ಯದ ಅರಿವು ಮೂಡಿಸುವುದು ಬಹಳ ಅವಶ್ಯಕ. ಈ ನಿಟ್ಟಿನಲ್ಲಿ ನಿಮ್ಮ ಇಲಾಖೆ ಕೈಗೊಂಡಿರುವ ದೃಢವಾದ ಕ್ರಮವೂ ಬಹು ದೊಡ್ಡ ಪಾತ್ರವನ್ನು ಹೊಂದಿದೆ.
ಸ್ನೇಹಿತರೆ,
ಇಂದು ನಾನು ನಿಮ್ಮ ನಡುವೆ ಮಧ್ಯೆಯೇ ಇರುವೆ, ನಿಮ್ಮೊಂದಿಗೆ ಕೆಲವು ವಿಚಾರಗಳನ್ನು ಚರ್ಚಿಸಬೇಕೆಂದು ನನಗನ್ನಿಸುತ್ತದೆ. CVC ಯಂತಹ ಭ್ರಷ್ಟಾಚಾರ ಮತ್ತು ಭ್ರಷ್ಟರ ವಿರುದ್ಧ ಕೆಲಸ ಮಾಡುತ್ತಿರುವ ಎಲ್ಲಾ ಸಂಸ್ಥೆಗಳು ಕ್ರಮ ಕೈಗೊಳ್ಳುವುದಕ್ಕೆ ರಕ್ಷಣಾತ್ಮಕವಾಗಿರಬೇಕಾದ ಅಗತ್ಯವಿಲ್ಲ ದು ಹೇಳಲು ನಾನು ಬಯಸುತ್ತೇನೆ. ದೇಶದ ಶ್ರೇಯೋಭಿವೃದ್ಧಿಗಾಗಿ ದುಡಿದರೆ ತಪ್ಪಿತಸ್ಥ ಭಾವದಲ್ಲಿ ಬದುಕುವ ಅಗತ್ಯವಿಲ್ಲ. ನಾವು ರಾಜಕೀಯ ಅಜೆಂಡಾವನ್ನು ಅನುಸರಿಸಬೇಕಾಗಿಲ್ಲ.
ದೇಶದ ಜನಸಾಮಾನ್ಯರು ಎದುರಿಸುತ್ತಿರುವ ಕುಂದು ಕೊರತೆಗಳನ್ನು ನಿವಾರಿಸುವುದು ನಮ್ಮ ಕೆಲಸ, ಮತ್ತು ಪಟ್ಟಭದ್ರ ಹಿತಾಸಕ್ತಿ ಹೊಂದಿರುವವರು ಕೂಗುತ್ತಾರೆ, ಅವರು ಇಂಥ ಸಂಸ್ಥೆಗಳ ಕತ್ತು ಹಿಸುಕಲು ಪ್ರಯತ್ನಿಸುತ್ತಾರೆ. ಈ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಸಮರ್ಪಣಾ ಮನೋಭಾವದ ಜನರ ಅಪಮಾನ ಮಾಡುವ ಪ್ರಯತ್ನ ಮಾಡಲಾಗುತ್ತದೆ. ಇದೆಲ್ಲಾ ಆಗುತ್ತೆ, ನಾನು ಸುದೀರ್ಘ ಕಾಲದಿಂದ ಇದೆಲ್ಲ ಸಹಿಸಿದ್ದೇನೆ. ಸ್ನೇಹಿತರೇ, ಸರ್ಕಾರದ ಮುಖ್ಯಸ್ಥನಾಗಿ ಸುದೀರ್ಘ ಕಾಲ ಕೆಲಸ ಮಾಡುವ ಅವಕಾಶ ನನಗೆ ಲಭಿಸಿದೆ. ನಾನು ಬಹಳಷ್ಟು ನಿಂದನೆ ಮತ್ತು ಬಹಳಷ್ಟು ಆರೋಪಗಳಿಗೆ ಗುರಿಯಾಗಿದ್ದೇನೆ. ಈಗ ನನಗೆ ಇನ್ನೇನೂ ಉಳಿದಿಲ್ಲ.
ಆದರೆ ಜನತೆ ದೇವಸ್ವರೂಪ, ಅವರು ಸತ್ಯವನ್ನೇ ಪರೀಕ್ಷಿಸುತ್ತಾರೆ ಸತ್ಯವನ್ನು ತಿಳಿಯುತ್ತಾರೆ ಮತ್ತು ಸಂದರ್ಭ ಒದಗಿ ಬಂದಾಗ ಸತ್ಯದ ಪರವಾಗಿ ನಿಲ್ಲುತ್ತಾರೆ. ನನ್ನ ಅನುಭವದಿಂದ ನಿಮಗೆ ಈ ಮಾತು ಹೇಳುತ್ತಿದ್ದೇನೆ. ಸ್ನೇಹಿತರೆ, ಪ್ರಾಮಾಣಿಕತೆಯಿಂದ ಕರ್ತವ್ಯ ನಿಭಾಯಿಸಿ. ದೇವರು ನಿಮ್ಮೊಂದಿಗಿರುತ್ತಾನೆ, ಜನತೆ ನಿಮ್ಮೊಂದಿಗಿರುತ್ತಾರೆ ಎಂಬುದನ್ನು ನೀವೇ ಸಾಕ್ಷೀಕರಿಸುತ್ತೀರಿ. ತಮ್ಮ ಸ್ವಂತದ ಲಾಭಕ್ಕಾಗಿ ಕೆಲವರು ಕೂಗುತ್ತಲೇ ಇರುತ್ತಾರೆ. ಅವರ ಕಾಲುಗಳು ಹೂಳಿನಲ್ಲಿ ಹೂತು ಹೋಗಿರುತ್ತವೆ.
ಅದಕ್ಕಾಗಿಯೇ ದೇಶಕ್ಕಾಗಿ ಪ್ರಾಮಾಣಿಕತೆಯಿಂದ ಕೆಲಸ ಮಾಡುವಾಗ, ಪ್ರಾಮಾಣಿಕತೆಯ ಹಾದಿಯಲ್ಲಿ ನಡೆಯುವಾಗ ಇಂಥ ವಿವಾದಗಳು ಎದುರಾದಲ್ಲಿ ರಕ್ಷಣಾತ್ಮಕವಾಗುವ ಅಗತ್ಯವಿಲ್ಲ ಎಂದು ನಾನು ಮತ್ತೆ ಮತ್ತೆ ಹೇಳುತ್ತೇನೆ.
ಅಪರಾಧಿಗಳ ವಿರುದ್ಧ ನೀವು ಕ್ರಮ ಕೈಗೊಳ್ಳಬೇಕಾದ ಸ್ಥಿತಿ ನಿಮ್ಮ ಜೀವನದಲ್ಲಿ ಬಂದಾಗ ಸಮಾಜ ನಿಮ್ಮ ಬೆಂಬಲಕ್ಕೆ ನಿಲ್ಲುತ್ತದೆ ಎಂಬುದಕ್ಕೆ ನೀವೆಲ್ಲರೂ ಸಾಕ್ಷಿ. ಭ್ರಷ್ಟಾಚಾರ ಮುಕ್ತ ದೇಶ ಮತ್ತು ಭ್ರಷ್ಟಾಚಾರ ಮುಕ್ತ ಸಮಾಜವನ್ನು ನಿರ್ಮಿಸಲು, ಸಿವಿಸಿಯಂತಹ ಸಂಸ್ಥೆಗಳು ನಿರಂತರವಾಗಿ ಕಾವಲಿರುವುದು ಅವಶ್ಯಕವಾಗಿದೆ. ಆದರೆ ನೀವು ನಿಮ್ಮ ವ್ಯವಸ್ಥೆಗಳನ್ನು ಸಹ ಸೂಕ್ತ ರೀತಿಯಲ್ಲಿ ಇಟ್ಟುಕೊಳ್ಳಬೇಕು, ಏಕೆಂದರೆ ನೀವು ಏಕಾಂಗಿಯಾಗಿ ಏನನ್ನೂ ಸಾಧಿಸಲಾಗುವುದಿಲ್ಲ. ನಾಲ್ಕು-ಆರು ಜನರು ಕಚೇರಿಯಲ್ಲಿ ಕುಳಿತು ಏನನ್ನು ಮಾಡಬಹುದು? ಕೆಲವೊಮ್ಮೆ ಅವರು ಸಂಯೋಜಿತವಾಗಿರದಿದ್ದರೆ ಇಡೀ ವ್ಯವಸ್ಥೆಯೇ ಕುಸಿದು ಹೋಗುತ್ತದೆ ಮತ್ತು ಅದೇ ಧಾಟಿಯಲ್ಲಿ ಮುಂದುವರಿಯುತ್ತದೆ.
ಸ್ನೇಹಿತರೆ,
ನಿಮ್ಮ ಜವಾಬ್ದಾರಿ ಮಹತ್ತರವಾದುದು. ನಿಮ್ಮ ಸವಾಲುಗಳು ಬದಲಾಗುತ್ತಲೂ ಇರುತ್ತವೆ. ಆದ್ದರಿಂದ ನಿಮ್ಮ ಪದ್ಧತಿಯಲ್ಲಿಯೂ ನಿರಂತರ ಕ್ರಿಯಾಶೀಲತೆ ಅವಶ್ಯಕವಾಗಿದೆ. ಈ ‘ಅಮೃತ ಕಾಲ’ದಲ್ಲಿ ನೀವು ಪಾರದರ್ಶಕ ಮತ್ತು ಸ್ಪರ್ಧಾತ್ಮಕ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದನ್ನು ಮುಂದುವರಿಸುತ್ತೀರಿ ಎಂದು ನನಗೆ ನಂಬಿಕೆಯಿದೆ.
ಇಂದು ಕೆಲವು ಶಾಲಾ ವಿದ್ಯಾರ್ಥಿಗಳನ್ನು ಇಲ್ಲಿಗೆ ಕರೆಸಿರುವುದು ತುಂಬಾ ಒಳ್ಳೆಯದು. ಪ್ರಬಂಧ ಸ್ಪರ್ಧೆಯಲ್ಲಿ ಎಲ್ಲರೂ ಭಾಗವಹಿಸಿದ್ದರು. ಭಾಷಣ ಸ್ಪರ್ಧೆಯ ಸಂಪ್ರದಾಯವನ್ನೂ ಬೆಳೆಸಿಕೊಳ್ಳಬಹುದಾಗಿದೆ. ಆದರೆ ಒಂದು ವಿಷಯ ನನ್ನ ಗಮನ ಸೆಳೆಯಿತು, ನೀವೂ ಗಮನಿಸಿರಬೇಕು. ಕೇವಲ 20 ಪ್ರತಿಶತ ಬಾಲಕರು ಮಾತ್ರ ಪ್ರಶಸ್ತಿ ಗೆದ್ದುಕೊಂಡಿದ್ದಾರೆ ಅದೇ ಸಮಯದಲ್ಲಿ 80 ಪ್ರತಿಶತ ಹೆಣ್ಣು ಮಕ್ಕಳು ಪ್ರಶಸ್ತಿ ಗೆದ್ದಿದ್ದಾರೆ. ಅಂದರೆ ಐದರಲ್ಲಿ ನಾಲ್ವರು ಹೆಣ್ಣುಮಕ್ಕಳಿದ್ದಾರೆ. ಈ ಹೆಣ್ಣುಮಕ್ಕಳ ಹೃದಯ ಮತ್ತು ಮನಸ್ಸಿನಲ್ಲಿ ನೆಲೆಗೊಂಡಂತಹ ಭ್ರಷ್ಟಾಚಾರದ ವಿರುದ್ಧದ ಅದೇ ಗುಣ ಪುರುಷರಲ್ಲಿಯೂ ಜಾಗೃತಗೊಳ್ಳಬೇಕು. ಆಗ ಮಾತ್ರ ಉಜ್ವಲ ಭವಿಷ್ಯದ ಮಾರ್ಗ ಸೃಷ್ಟಿಯಾಗುತ್ತದೆ.
ಆದರೆ ಮಕ್ಕಳ ಮನಸ್ಸಿನಲ್ಲಿ ಭ್ರಷ್ಟಾಚಾರದ ವಿರುದ್ಧ ರೋಷ ಹುಟ್ಟುವಂತೆ ಮಾಡುವ ದೃಷ್ಟಿಯಿಂದ ನಿಮ್ಮ ಈ ನಿರೋಧಕ ಅಭಿಯಾನ ಉತ್ತಮವಾಗಿದೆ. ಕೊಳಕಿನ ವಿರುದ್ಧ ರೋಷ ಹುಟ್ಟದ ಹೊರತು, ಸ್ವಚ್ಛತೆಯ ಮಹತ್ವ ಅರ್ಥವಾಗುವುದಿಲ್ಲ. ಭ್ರಷ್ಟಾಚಾರವನ್ನು ಕಡೆಗಣಿಸಿ ಅಂದಾಜಿಸಬೇಡಿ, ಅದು ಇಡೀ ವ್ಯವಸ್ಥೆಯನ್ನು ಹಾಳುಮಾಡುತ್ತದೆ. ನನಗೆ ಅದರ ಅರಿವಿದೆ ಆದ್ದರಿಂದಲೇ ಇದನ್ನು ಮತ್ತೆ ಮತ್ತೆ ಹೇಳುತ್ತಲೇ ಇರುತ್ತೇನೆ. ಇದರ ಬಗ್ಗೆ ನಾವು ನಿರಂತರವಾಗಿ ಎಚ್ಚರದಿಂದಿರಬೇಕು.
ಕೆಲವರು ಕಾನೂನು ಪರಿಧಿ ಯಿಂದ ಹೊರಗುಳಿದು ಭ್ರಷ್ಟಾಚಾರದ ವ್ಯವಸ್ಥೆಯಲ್ಲಿ ಮುಂದುವರಿಯಲು ತಮ್ಮ ಪ್ರಭಾವವನ್ನು ಬಳಸುತ್ತಾರೆ. ಅಂಥವರು ಕಾನೂನು ಪಾಲನೆ ಮಾಡದಿರುವುದರಿಂದ ಏನೂ ತೊಂದರೆಯಾಗುವುದಿಲ್ಲ ಎಂಬ ಸಲಹೆಯನ್ನು ಸಹ ನೀಡುತ್ತಾರೆ. ಆದರೆ ಈಗ ಅದರ ವ್ಯಾಪ್ತಿ ಹೆಚ್ಚುತ್ತಿದೆ. ಇಂದಲ್ಲದಿದ್ದರೆ ನಾಳೆ, ಒಂದಲ್ಲ ಒಂದು ಹಂತದಲ್ಲಿ ಸಮಸ್ಯೆ ಬಂದೆರಗುವುದು ಖಚಿತ. ಮತ್ತು ಅದರಿಂದ ಹೊರಬರುವುದು ಕಷ್ಟಸಾಧ್ಯ. ತಂತ್ರಜ್ಞಾನವು ಒಂದಲ್ಲ ಒಂದು ಪುರಾವೆಯನ್ನು ಕಂಡು ಹಿಡಿಯುತ್ತದೆ. ತಂತ್ರಜ್ಞಾನದ ಶಕ್ತಿಯನ್ನು ಹೆಚ್ಚೆಚ್ಚು ಬಳಸಿದಷ್ಟು ಸಮರ್ಥವಾಗಿ ವ್ಯವಸ್ಥೆಯನ್ನು ಬದಲಾಯಿಸಬಹುದು. ಬನ್ನಿ ಪ್ರಯತ್ನಿಸೋಣ.
ನಿಮ್ಮೆಲ್ಲರಿಗೂ ಶುಭ ಹಾರೈಸುತ್ತೇನೆ.
ಧನ್ಯವಾದಗಳು ಸೋದರರೆ