ಜಗತ್ತು ಆತಂಕದಲ್ಲಿರುವಾಗ, ಭಾರತವು ಭರವಸೆಯನ್ನು ಮೂಡಿಸುತ್ತಿದೆ: ಪ್ರಧಾನಮಂತ್ರಿ
ಇಂದು ಭಾರತವು ಪ್ರತಿಯೊಂದು ಕ್ಷೇತ್ರದಲ್ಲೂ, ಪ್ರತಿಯೊಂದು ವಲಯದಲ್ಲೂ ಅಭೂತಪೂರ್ವ ವೇಗದಲ್ಲಿ ಕೆಲಸ ಮಾಡುತ್ತಿದೆ: ಪ್ರಧಾನಮಂತ್ರಿ
ಭಾರತ ಇಂದು ಅಭಿವೃದ್ಧಿಶೀಲ ರಾಷ್ಟ್ರ ಮತ್ತು ಉದಯೋನ್ಮುಖ ಶಕ್ತಿಯಾಗಿದೆ: ಪ್ರಧಾನಮಂತ್ರಿ
ಭಾರತವು ವಿಶ್ವದ ಅತ್ಯಂತ ಕಿರಿಯ ರಾಷ್ಟ್ರಗಳಲ್ಲಿ ಒಂದಾಗಿದೆ, ಹೆಚ್ಚಿನ ಎತ್ತರವನ್ನು ಸಾಧಿಸುವ ಸಾಮರ್ಥ್ಯವನ್ನು ಹೊಂದಿದೆ: ಪ್ರಧಾನಮಂತ್ರಿ
ಭಾರತ ಈಗ ದೂರದೃಷ್ಟಿಯ ಚಿಂತನೆಯೊಂದಿಗೆ ಮುನ್ನಡೆಯುತ್ತಿದೆ: ಪ್ರಧಾನಮಂತ್ರಿ
ಭಾರತದ 140 ಕೋಟಿ ಜನರು ವಿಕಸಿತ ಭಾರತದ ಸಂಕಲ್ಪದೊಂದಿಗೆ ಸೇರಿದ್ದಾರೆ, ಅವರೇ ಅದನ್ನು ಮುನ್ನಡೆಸುತ್ತಿದ್ದಾರೆ: ಪ್ರಧಾನಮಂತ್ರಿ
ಭಾರತವು ಡಬಲ್ ಎಐ ಶಕ್ತಿ, ಮೊದಲ ಎಐ, ಕೃತಕ ಬುದ್ಧಿಮತ್ತೆ, ಎರಡನೇ ಎಐ, ಮಹತ್ವಾಕಾಂಕ್ಷಿ ಭಾರತದ ಪ್ರಯೋಜನವನ್ನು ಹೊಂದಿದೆ: ಪ್ರಧಾನಮಂತ್ರಿ
ಭಾರತಕ್ಕೆ ಲಘುವಾದ ಸಂಬಂಧಗಳಲ್ಲಿ ನಂಬಿಕೆಯಿಲ್ಲ, ನಮ್ಮ ಸಂಬಂಧಗಳ ಅಡಿಪಾಯವು ನಂಬಿಕೆ ಮತ್ತು ವಿಶ್ವಾಸಾರ್ಹತೆಯಾಗಿದೆ: ಪ್ರಧಾನಮಂತ್ರಿ
ತಂತ್ರಜ್ಞಾನವನ್ನು ಪ್ರಜಾಪ್ರಭುತ್ವಗೊಳಿಸುವ ಮೂಲಕ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯಕ್ಕೆ ಭಾರತವು ಜಗತ್ತಿಗೆ ಹೊಸ ಮಾರ್ಗವನ್ನು ತೋರಿಸಿದೆ: ಪ್ರಧಾನಮಂತ್ರಿ
ಡಿಜಿಟಲ್ ನಾವೀನ್ಯತೆ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳು ಜೊತೆಯಾಗಿರಬಹುದು ಎಂಬುದನ್ನು ಭಾರತ ತೋರಿಸಿದೆ: ಪ್ರಧಾನಮಂತ್ರಿ

ಎನ್ ಡಿ ಟಿ ವಿ ವಿಶ್ವ ಶೃಂಗಸಭೆಯಲ್ಲಿ ನೆರೆದಿರುವ ಎಲ್ಲಾ ಗೌರವಾನ್ವಿತ ಅತಿಥಿಗಳಿಗೆ ಸ್ವಾಗತ. ಈ ಶೃಂಗಸಭೆಯಲ್ಲಿ ನೀವು ವಿವಿಧ ವಿಷಯಗಳ ಬಗ್ಗೆ ಚರ್ಚಿಸುವಿರಿ ಮತ್ತು ವಿವಿಧ ವಲಯಗಳ ಜಾಗತಿಕ ನಾಯಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿದ್ದಾರೆ.

ಮಿತ್ರರೇ, 

ನಾವು ಹಿಂದಿನ 4-5 ವರ್ಷಗಳ ಚರ್ಚೆಗಳನ್ನು ನೋಡಿದರೆ ಬಹುತೇಕ ಚರ್ಚೆಗಳಲ್ಲಿ ಒಂದು ಸಾಮಾನ್ಯ ವಿಷಯವಿದೆ ಎಂಬುದನ್ನು ಗಮನಿಸಬಹುದು. ಅದುವೇ ಭವಿಷ್ಯದ ಬಗ್ಗೆ ಕಾಳಜಿ/ಕಳವಳ. ಕೊರೊನಾ ಸಾಂಕ್ರಾಮಿಕದ ಅವಧಿಯಲ್ಲಿ ಜಾಗತಿಕ ಸಾಂಕ್ರಾಮಿಕ ರೋಗವನ್ನು ಹೇಗೆ ನಿಭಾಯಿಸುವುದು ಎಂಬ ಚಿಂತೆ ಇತ್ತು. ಕೋವಿಡ್  ಹರಡುತ್ತಿದ್ದಂತೆ, ಜಾಗತಿಕ ಆರ್ಥಿಕತೆಯ ಬಗ್ಗೆ ಕಳವಳಗಳು ಹೆಚ್ಚಾದವು. ಸಾಂಕ್ರಾಮಿಕ ರೋಗವು ಹಣದುಬ್ಬರ, ನಿರುದ್ಯೋಗ ಮತ್ತು ಹವಾಮಾನ ಬದಲಾವಣೆಯ ಬಗ್ಗೆ ಚಿಂತೆಗಳನ್ನು ಹೆಚ್ಚಿಸಿತು. ನಂತರ, ಭುಗಿಲೆದ್ದ ಯುದ್ಧಗಳು ಈ ಕುರಿತಾದ ಚರ್ಚೆಗಳು ಮತ್ತು ಆತಂಕಗಳನ್ನು ತೀವ್ರಗೊಳಿಸಿತು. ಜಾಗತಿಕ ಪೂರೈಕೆ ಸರಪಳಿಗೆ ಅಡೆತಡೆಗಳು ಮತ್ತು ಅನೇಕ ಅಮಾಯಕ ಜೀವಿಗಳು ಪ್ರಾಣ ಕಳೆದುಕೊಳ್ಳಬೇಕಾದ ಬಗ್ಗೆ ಆತಂಕ ಉಂಟಾಗಿತ್ತು. ಜಾಗತಿಕ ಶೃಂಗಸಭೆಗಳು ಮತ್ತು ಉಪನ್ಯಾಸಗಳಲ್ಲಿ ಉದ್ವಿಗ್ನತೆಗಳು, ಸಂಘರ್ಷಗಳು ಮತ್ತು ಒತ್ತಡಗಳು ಚರ್ಚಾ ವಿಷಯಗಳಾದವು. ಜಾಗತಿಕವಾಗಿ ಪ್ರಸ್ತುತದ ಚರ್ಚೆಗಳು ಈ ಕಳವಳದ ಬಗ್ಗೆ ಕೇಂದ್ರೀಕೃತವಾಗಿರುವಾಗ, ಭಾರತದಲ್ಲಿ ಯಾವ ರೀತಿಯ ಚಿಂತನೆ ನಡೆಯುತ್ತಿದೆ? ಇದು ಜಾಗತಿಕ ಚಿಂತೆಗೆ ವ್ಯತಿರಿಕ್ತವಾಗಿದೆ. ಭಾರತದಲ್ಲಿ ನಾವು ಈ ಜಾಗತಿಕ ಪ್ರಕ್ಷುಬ್ಧತೆಯ ನಡುವೆಯೂ “ಭಾರತೀಯ ಶತಮಾನ”ದ ಬಗ್ಗೆ ಮಾತನಾಡುತ್ತಿದ್ದೇವೆ. ಭಾರತ ಆಶಾಕಿರಣವಾಗಿದೆ. ಜಗತ್ತು ಚಿಂತೆಯಲ್ಲಿ ಮುಳುಗಿರುವಾಗ, ಭಾರತವು ಭರವಸೆಯನ್ನು ಹರಡುತ್ತಿದೆ. ಹಾಗೆಂದ ಮಾತ್ರಕ್ಕೆ ಜಾಗತಿಕ ಸನ್ನಿವೇಶಗಳು ನಮ್ಮ ಮೇಲೆ ಪರಿಣಾಮ ಬೀರುವುದಿಲ್ಲ ಎಂದಲ್ಲ – ಅದು ಪ್ರಭಾವವನ್ನು ಖಂಡಿತವಾಗಿಯೂ ಬೀರಲಿದೆ. ಭಾರತವು ಸವಾಲುಗಳನ್ನು ಎದುರಿಸುತ್ತಿದೆ, ಆದರೆ ಇಲ್ಲಿ ಸಕಾರಾತ್ಮಕತೆಯ ಭಾವವಿದೆ, ನಾವೆಲ್ಲರೂ ಅದರ ಅನುಭೂತಿ ಪಡೆಯಬಹುದು. ಹೀಗಾಗಿ 'ದಿ ಇಂಡಿಯನ್ ಸೆಂಚುರಿ – (ಭಾರತದ ಶತಮಾನದ)' ದ ಬಗ್ಗೆ ಮಾತು ಕೇಳಿಬರುತ್ತಿದೆ.

 

ಸ್ನೇಹಿತರೇ, 

ಭಾರತ ಇಂದು ಪ್ರತಿಯೊಂದು ಕ್ಷೇತ್ರದಲ್ಲೂ ಪ್ರಗತಿ ಸಾಧಿಸುತ್ತಿರುವ ವೇಗ ಮತ್ತು ಪ್ರಮಾಣವು ಅಭೂತಪೂರ್ವವಾಗಿದೆ. ಭಾರತದ ವೇಗ ಮತ್ತು ಪ್ರಮಾಣಕ್ಕೆ ಸಾಟಿಯಿಲ್ಲ. ನಮ್ಮ ಸರ್ಕಾರ ತನ್ನ ಮೂರನೇ ಅವಧಿಯ ಸುಮಾರು 125 ದಿನಗಳನ್ನು ಪೂರೈಸಿದೆ. ಈ 125 ದಿನಗಳ ಅನುಭವಗಳನ್ನು ನಾನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. 125 ದಿನಗಳಲ್ಲಿ ಬಡವರಿಗೆ 3 ಕೋಟಿ ಹೊಸ ಪಕ್ಕಾ ಮನೆಗಳು ಮಂಜೂರಾಗಿವೆ. ಈ 125 ದಿನಗಳಲ್ಲಿ 9 ಲಕ್ಷ ಕೋಟಿ ರೂಪಾಯಿಗಳ ಮೂಲಸೌಕರ್ಯ ಯೋಜನೆಗಳಿಗೆ ಚಾಲನೆ ನೀಡಲಾಗಿದೆ. ಇದೇ 125 ದಿನಗಳಲ್ಲಿ, ನಾವು 15 ಹೊಸ ವಂದೇ ಭಾರತ್ ರೈಲುಗಳ ಸಂಚಾರ ಪ್ರಾರಂಭಿಸಿದ್ದೇವೆ ಮತ್ತು 8 ಹೊಸ ವಿಮಾನ ನಿಲ್ದಾಣಗಳ ಕಾಮಗಾರಿ ಆರಂಭವಾಗಿದೆ. ಈ 125 ದಿನಗಳಲ್ಲಿ ಯುವಕರಿಗೆ 2 ಲಕ್ಷ ಕೋಟಿ ರೂಪಾಯಿಗಳ ಪ್ಯಾಕೇಜ್ ಒದಗಿಸಿದ್ದೇವೆ, ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ 21 ಸಾವಿರ ಕೋಟಿ ರೂಪಾಯಿಗಳನ್ನು ಜಮೆ ಮಾಡಿದ್ದೇವೆ ಮತ್ತು 70 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗೆ 5 ಲಕ್ಷ ರೂಪಾಯಿಗಳವರೆಗೆ ಉಚಿತ ಆರೋಗ್ಯ ಸೇವೆ ಒದಗಿಸುವಂತಾಗಲು ಕ್ರಮ ಕೈಗೊಂಡಿದ್ದೇವೆ. ಕೇವಲ 125 ದಿನಗಳಲ್ಲಿ ಭಾರತದಲ್ಲಿ ನಡೆದಿರುವ ಕೆಲಸದ ಅಗಾಧತೆಯನ್ನು ನೋಡಿ, 5 ಲಕ್ಷ ಮನೆಗಳಲ್ಲಿ ಮೇಲ್ಛಾವಣಿಯ ಸೌರ ಪ್ಯಾನೆಲ್ ಗಳನ್ನು ಅಳವಡಿಸಲಾಗಿದೆ. ‘ಏಕ್ ಪೆಡ್ ಮಾ ಕೆ ನಾಮ್’ (ತಾಯಿಯ ಹೆಸರಿನಲ್ಲಿ ಒಂದು ಮರ) ಅಭಿಯಾನದಡಿಯಲ್ಲಿ 90 ಕೋಟಿಗೂ ಹೆಚ್ಚು ಸಸಿಗಳನ್ನು ನೆಡಲಾಗಿದೆ. ಅಷ್ಟೇ ಅಲ್ಲ, 125 ದಿನಗಳಲ್ಲಿ 12 ಹೊಸ ಕೈಗಾರಿಕಾ ಪ್ರದೇಶಗಳಿಗೆ ಅನುಮೋದನೆ ನೀಡಿದ್ದೇವೆ. ಈ 125 ದಿನಗಳಲ್ಲಿ ನಮ್ಮ ಸೆನ್ಸೆಕ್ಸ್ ಮತ್ತು ನಿಫ್ಟಿ ಶೇ.6ರಿಂದ 7ರಷ್ಟು ಬೆಳವಣಿಗೆ ಕಂಡಿವೆ. ವಿದೇಶಿ ವಿನಿಮಯ ಮೀಸಲು $650 ಶತಕೋಟಿಯಿಂದ $700 ಶತಕೋಟಿ ದಾಟಿದೆ. ಭಾರತದ ಸಾಧನೆಗಳ ಪಟ್ಟಿ ಸುದೀರ್ಘವಾಗಿದ್ದು ನಾನು ಕಳೆದ 125 ದಿನಗಳ ಬಗ್ಗೆ ಮಾತ್ರ ಮಾತನಾಡುತ್ತಿದ್ದೇನೆ. ಈ 125 ದಿನಗಳಲ್ಲಿ ಭಾರತದಲ್ಲಿ ಯಾವ ಯಾವ ಜಾಗತಿಕ ಚರ್ಚೆಗಳು ನಡೆದಿವೆ ಮತ್ತು ಯಾವ ಯಾವ ಜಾಗತಿಕ ಘಟನೆಗಳು ಜರುಗಿವೆ ಎಂಬುದನ್ನು ನೀವು ಗಮನಿಸಬೇಕು. ದೂರಸಂಪರ್ಕ ಮತ್ತು ಡಿಜಿಟಲ್ ಭವಿಷ್ಯದ ಕುರಿತಾದ ಅಂತಾರಾಷ್ಟ್ರೀಯ ಸಭೆಗಳು, ಜಾಗತಿಕ ಫಿನ್‌ಟೆಕ್ ಉತ್ಸವ, ಜಾಗತಿಕ ಅರೆವಾಹಕ ಪರಿಸರ ವ್ಯವಸ್ಥೆಯ ಕುರಿತು ಚರ್ಚೆಗಳು ಹಾಗೂ ನವೀಕರಿಸಬಹುದಾದ ಇಂಧನ ಮತ್ತು ನಾಗರಿಕ ವಿಮಾನಯಾನದ ಭವಿಷ್ಯದ ಕುರಿತಂತೆ ಅಂತರರಾಷ್ಟ್ರೀಯ ಸಮ್ಮೇಳನಗಳು ಭಾರತದಲ್ಲಿ ನಡೆದಿವೆ. 

ಗೆಳೆಯರೇ, 

ಇದು ಕೇವಲ ಕಾರ್ಯಕ್ರಮಗಳ ಪಟ್ಟಿಯಲ್ಲ; ಭಾರತದ ಮೇಲಿನ ಭರವಸೆಗಳ ಪಟ್ಟಿಯಾಗಿದೆ. ಇದು ಭಾರತದ ನಡೆ ಮತ್ತು ಪ್ರಪಂಚದ ಭರವಸೆ ಎರಡನ್ನೂ ಎತ್ತಿ ತೋರಿಸುತ್ತದೆ. ಇವು ಪ್ರಪಂಚದ ಭವಿಷ್ಯವನ್ನು ರೂಪಿಸುವ ವಿಷಯಗಳಾಗಿವೆ ಮತ್ತು ಇವುಗಳ ಬಗ್ಗೆ ಚರ್ಚೆಗಾಗಿ ವಿಶ್ವ ಇಂದು ಭಾರತದತ್ತ ಮುಖಮಾಡುತ್ತಿದೆ.

ಸ್ನೇಹಿತರೇ,

ಪ್ರಸ್ತುತ ಭಾರತದಲ್ಲಿ ಅನೇಕ ಘಟನೆಗಳು ನಡೆಯುತ್ತಿದ್ದು ನಮ್ಮ ಮೂರನೇ ಅವಧಿಯಲ್ಲಿ ನಾವು ಪ್ರಗತಿ ಸಾಧಿಸಿರುವ ವೇಗದಿಂದಾಗಿ ಅನೇಕ ರೇಟಿಂಗ್ ಏಜೆನ್ಸಿಗಳು ಭಾರತದ ಬೆಳವಣಿಗೆಯ ಮುನ್ಸೂಚನೆ ದರವನ್ನು ಏರಿಕೆ ಮಾಡಿವೆ. ಮಾರ್ಕ್ ಮೊಬಿಯಸ್‌ನಂತಹ ತಜ್ಞರು ಭಾರತದಲ್ಲಿನ ಬೆಳವಣಿಗೆಯಿಂದಾಗಿ ಇಲ್ಲಿನ ಹೂಡಿಕೆ ಅವಕಾಶಗಳ ಬಗ್ಗೆ ಉತ್ಸುಕರಾಗಿದ್ದಾರೆ. ಇದು ಹೆಚ್ಚಿನ ಮಹತ್ವವನ್ನು ಹೊಂದಿದೆ. ಅವರು ತಮ್ಮ ಹೂಡಿಕೆಯ ಕನಿಷ್ಠ ಶೇಕಡ 50ರಷ್ಟನ್ನು ಭಾರತೀಯ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಂತೆ ಸಲಹೆ ನೀಡಿದಾಗ, ಅದು ಪ್ರಬಲ ಸಂದೇಶ ರವಾನಿಸುತ್ತದೆ. 

ಮಿತ್ರರೇ, 

ಭಾರತ ಇಂದು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ ಮತ್ತು ಉದಯೋನ್ಮುಖ ಶಕ್ತಿ ಎರಡೂ ಆಗಿದೆ. ನಾವು ಬಡತನದ ಸವಾಲುಗಳನ್ನು ಅರ್ಥಮಾಡಿಕೊಂಡಿದ್ದೇವೆ ಮತ್ತು ಪ್ರಗತಿಯ ಹಾದಿಯನ್ನು ಹೇಗೆ ರೂಪಿಸಬೇಕು ಎಂಬುದು ನಮಗೆ ತಿಳಿದಿದೆ. ನಮ್ಮ ಸರ್ಕಾರವು ತ್ವರಿತವಾಗಿ ನೀತಿಗಳನ್ನು ರೂಪಿಸುತ್ತಿದೆ, ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ ಮತ್ತು ಹೊಸ ಸುಧಾರಣೆಗಳನ್ನು ಪರಿಚಯಿಸುತ್ತಿದೆ. ಸಾರ್ವಜನಿಕ ಜೀವನದಲ್ಲಿ ನಾನು ಹಲವಾರು ರೀತಿಯ ಜನರನ್ನು ಭೇಟಿಯಾಗುತ್ತೇನೆ. ಕೆಲವರು ಹೇಳುತ್ತಾರೆ, "ಮೋದಿ ಜೀ, ನೀವು ಸತತ ಮೂರು ಬಾರಿ ಗೆದ್ದಿದ್ದೀರಿ, ಎಷ್ಟೊಂದು ಸಾಧಿಸಿದ್ದೀರಿ, ಆದಾಗ್ಯೂ ನೀವು ಇನ್ನೂ ಏಕೆ ದಣಿವರಿಯದೇ  ಕೆಲಸ ಮಾಡುತ್ತಿದ್ದೀರಿ? ಅದರ ಅಗತ್ಯವೇನಿದೆ? ನೀವು ಭಾರತವನ್ನು ಐದನೇ ಅತಿದೊಡ್ಡ ಆರ್ಥಿಕತೆಯನ್ನಾಗಿ ಮಾಡಿದ್ದೀರಿ, ಹಲವಾರು ಮೈಲಿಗಲ್ಲುಗಳನ್ನು ದಾಟಿದ್ದೀರಿ, ಬಾಕಿ ಇದ್ದ ಅನೇಕ ನಿರ್ಧಾರಗಳನ್ನು ಪೂರ್ಣಗೊಳಿಸಿರುವಿರಿ ಮತ್ತು ಅನೇಕ ಸುಧಾರಣೆಗಳನ್ನು ಜಾರಿಗೆ ತಂದಿರುವಿರಿ? ಆದರೂ ಇನ್ನೂ ಏಕೆ ಇಷ್ಟು ಕಷ್ಟಪಟ್ಟು ಕೆಲಸ ಮಾಡುವಿರಿ? ಇದನ್ನು ಹೇಳುವ ಅನೇಕ ಜನರನ್ನು ನಾನು ಭೇಟಿಯಾಗಿದ್ದೇನೆ. ಆದರೆ ನಾವು ಕಂಡ ಕನಸುಗಳು ಮತ್ತು ನಾವು ಮುಂದೆ ಸಾಗುತ್ತಿರುವ ಸಂಕಲ್ಪದಿಂದ ವಿಶ್ರಾಂತಿಗೆ ಅವಕಾಶವಿಲ್ಲ.

 

ಕಳೆದ 10 ವರ್ಷಗಳಲ್ಲಿ 25 ಕೋಟಿ ಜನರನ್ನು ಬಡತನದಿಂದ ಮೇಲೆತ್ತಲಾಗಿದೆ. ಅಷ್ಟು ಸಾಕೇ? ಇಲ್ಲ. ಕಳೆದ 10 ವರ್ಷಗಳಲ್ಲಿ ಸುಮಾರು 12 ಕೋಟಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ ಮತ್ತು 16 ಕೋಟಿ ಜನರು ಅಡುಗೆ ಅನಿಲ ಸಂಪರ್ಕವನ್ನು ಪಡೆದಿದ್ದಾರೆ. ಅದು ಸಾಕಾಗುವುದಿಲ್ಲವೇ? ಕಳೆದ 10 ವರ್ಷಗಳಲ್ಲಿ, 350 ಕ್ಕೂ ಹೆಚ್ಚು ಹೊಸ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲಾಗಿದೆ ಮತ್ತು 15 ಕ್ಕೂ ಹೆಚ್ಚು ಎಐಐಎಂಎಸ್ ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ. ಅದು ಸಾಕಲ್ಲವೇ? ಕಳೆದ 10 ವರ್ಷಗಳಲ್ಲಿ, ಭಾರತದಲ್ಲಿ 1,50,000 ಕ್ಕೂ ಹೆಚ್ಚು ಸ್ಟಾರ್ಟ್ಅಪ್ಗಳನ್ನು ತೆರೆಯಲಾಗಿದೆ ಮತ್ತು 8 ಕೋಟಿ ಯುವಕರು ತಮ್ಮ ಉದ್ಯಮಗಳನ್ನು ಪ್ರಾರಂಭಿಸಲು ಮುದ್ರಾ ಸಾಲವನ್ನು ಪಡೆದಿದ್ದಾರೆ. ಪ್ರಗತಿಯ ಹಸಿವು ತೃಪ್ತಿಗೊಂಡಿದೆಯೇ? ಅದು ಸಾಕಾಗುವುದಿಲ್ಲವೇ? ನನ್ನ ಉತ್ತರ: ಇಲ್ಲ, ಇದು ಸಾಕಾಗುವುದಿಲ್ಲ. ಇಂದು ಭಾರತವು ವಿಶ್ವದ ಕಿರಿಯರನ್ನು ಹೊಂದಿರುವ ದೇಶಗಳಲ್ಲಿ ಒಂದಾಗಿದೆ. ಈ ಯುವ ರಾಷ್ಟ್ರದ ಸಾಮರ್ಥ್ಯವು ನಮ್ಮನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಬಹುದು ಮತ್ತು ಅದಕ್ಕಾಗಿ ನಾವು ಇನ್ನೂ ಹೆಚ್ಚಿನದನ್ನು ಮಾಡಬೇಕಾಗಿದೆ ಮತ್ತು ಅದನ್ನು ತ್ವರಿತವಾಗಿ ಮಾಡಬೇಕಿದೆ.

ಸ್ನೇಹಿತರೇ,

ಭಾರತದ ಆಲೋಚನೆ ಮತ್ತು ಕಾರ್ಯನಿರ್ವಹಿಸುವ ವಿಧಾನಗಳಲ್ಲಿನ ನೀವು ಬದಲಾವಣೆಯನ್ನು ಗಮನಿಸಿರಬೇಕು. ಸಾಂಪ್ರದಾಯಿಕವಾಗಿ ಮತ್ತು ಅರ್ಥೈಸುವಿಕೆಗಾಗಿ, ಸರ್ಕಾರಗಳು ತಮ್ಮ ಕೆಲಸವನ್ನು ಹಿಂದಿನ ಸರ್ಕಾರಗಳಿಗೆ ಹೋಲಿಕೆ ಮಾಡುತ್ತವೆ. ಅದರಲ್ಲಿ ನನಗೆ ಯಾವ ತಪ್ಪೂ ಕಾಣುತ್ತಿಲ್ಲ. ಅವರು "ಮೊದಲು ಏನಿತ್ತು ಮತ್ತು ಈಗ ಏನಿದೆ?" ಎಂದು ಕೇಳುವ ಮೂಲಕ ಪ್ರಗತಿಯ ಮಾಪನ ಮಾಡುವರು. ಇದರಿಂದಾಗಿ ಹಿಂದಿನ ಸರ್ಕಾರಗಳಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸಿದ ತೃಪ್ತಿ ಸಿಗಲಿದೆ. ಅನೇಕ ಸರ್ಕಾರಗಳು ತಮ್ಮ ಸಾಧನೆಗಳನ್ನು ಕಳೆದ 10-15 ವರ್ಷಗಳಿಗೆ ಹೋಲಿಸಿಕೊಳ್ಳುತ್ತಾ ಅದನ್ನು ತಮ್ಮ ಯಶಸ್ಸಿನ ಮಾಪನವಾಗಿ ಬಳಸುತ್ತವೆ. ನಾವೂ ಕೂಡ ಇದೇ ವಿಧವನ್ನೇ ಅನುಸರಿಸುತ್ತಿದೆವು. ಇದು ತೀರಾ ಸಾಮಾನ್ಯವಾಗಿತ್ತು. ಆದರೆ ಈಗ, ಈ ವಿಧಾನವು ನಮಗೆ ತೃಪ್ತಿ ನೀಡುವುದಿಲ್ಲ. ನಿನ್ನೆಯೊಂದಿಗೆ ಇಂದಿನ ದಿನವನ್ನು ಹೋಲಿಸುವ ಪ್ರವೃತ್ತಿಯನ್ನು ನಾವು ಬಳಸುವುದಿಲ್ಲ. ಯಶಸ್ಸಿನ ಮಾನದಂಡವನ್ನು ಮಾಪನ ಮಾಡಲು ನಾವು ಏನನ್ನು ಸಾಧಿಸಿದ್ದೇವೆ ಎಂಬುದು ಮಾಪನವಾಗಿ ಉಳಿದಿಲ್ಲ. ಈಗ ನಾವು ಎಲ್ಲಿಗೆ ತಲುಪಬೇಕು, ಇನ್ನೂ ಎಷ್ಟು ದೂರ ಕ್ರಮಿಸಬೇಕು, ಇನ್ನೂ ಬಾಕಿ ಎಷ್ಟು ಉಳಿದಿದೆ ಮತ್ತು ನಾವು ಯಾವಾಗ ತಲುಪುತ್ತೇವೆ ಎಂಬುದರ ಮೇಲೆ ನಮ್ಮ ಗಮನ ಕೇಂದ್ರೀಕೃತವಾಗಿದೆ. ಈ ಹೊಸ ವಿಧಾನದೊಂದಿಗೆ ಇಡೀ ಸರ್ಕಾರಿ ವ್ಯವಸ್ಥೆಯಡಿ ನನ್ನ ಕಾರ್ಯವನ್ನು ಮುನ್ನಡೆಸಿದೆ.

ಈಗ, ಭಾರತ ಮುನ್ನೋಟದ ವಿಧಾನದೊಂದಿಗೆ ಮುನ್ನಡೆಯುತ್ತಿದೆ. 2047 ರ ವೇಳೆಗೆ ‘ವಿಕಸಿತ ಭಾರತ’ (ಅಭಿವೃದ್ಧಿ ಹೊಂದಿದ ಭಾರತ)ದ ಸಂಕಲ್ಪ ಸಾಕಾರಗೊಳಿಸುವ ಮನಃಸ್ಥಿತಿಯನ್ನು ಈ ವಿಧಾನವು ಪ್ರತಿಬಿಂಬಿಸುತ್ತದೆ. ‘ವಿಕಸಿತ ಭಾರತ’ದ ಪರಿಕಲ್ಪನೆಯನ್ನು ಸಾಕಾರಗೊಳಿಸುವಲ್ಲಿ ನಾವು ಎಷ್ಟು ದೂರ ಕ್ರಮಿಸಿದ್ದೇವೆ ಎಂಬುದನ್ನು ನಾವು ಈಗ ಮಾಪನ ಮಾಡಬೇಕಿದೆ. ಇನ್ನೂ ಎಷ್ಟು ಸಾಧಿಸಬೇಕಿದೆ?ಯಾವ ವೇಗದಲ್ಲಿ ಮತ್ತು ಯಾವ ಪ್ರಮಾಣದಲ್ಲಿ ಕೆಲಸ ಮಾಡಬೇಕು ಎಂಬುದನ್ನು ನಿರ್ಣಯಿಸಬೇಕಾಗಿದೆ. ಇದು ಕೇವಲ ನಿಗದಿತ ಗುರಿಗಳೊಂದಿಗೆ ಸರ್ಕಾರದ ನಿರ್ಧಾರವಲ್ಲ-ಇಂದು, ಭಾರತದ 140 ಕೋಟಿ ಜನರು 'ವಿಕಸಿತ ಭಾರತ'ದ ಸಂಕಲ್ಪದ ಭಾಗವಾಗಿದ್ದು ಅವರೇ ಅದನ್ನು ಮುನ್ನಡೆಸುತ್ತಿದ್ದಾರೆ. ಇದು ಕೇವಲ ಸಾರ್ವಜನಿಕ ಸಹಭಾಗಿತ್ವದ ಅಭಿಯಾನವಾಗಿರದೆ ಭಾರತದ ಆತ್ಮಸ್ಥೈರ್ಯದ ಆಂದೋಲನವೂ ಆಗಿದೆ. 'ವಿಕಸಿತ ಭಾರತ' ಕ್ಕಾಗಿ ಸರ್ಕಾರವು ಮುನ್ನೋಟದ ದಾಖಲೆ ರೂಪಿಸುವ ಕಾರ್ಯ ಆರಂಭಿಸಿದಾಗ, ಲಕ್ಷಾಂತರ ಜನರು ತಮ್ಮ ಸಲಹೆಗಳನ್ನು ಕಳುಹಿಸಿದ್ದರು ಎಂಬುದು ತಿಳಿದರೆ ನಿಮಗೆ ಆಶ್ಚರ್ಯವಾಗಲಿದೆ. ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಚರ್ಚೆಗಳು ನಡೆದವು. ಸರ್ಕಾರ ಮತ್ತು ಸಾಮಾಜಿಕ ಸಂಘ ಸಂಸ್ಥೆಗಳು ಈ ಚರ್ಚೆಗಳನ್ನು ಏರ್ಪಾಡು ಮಾಡಿದ್ದವು.  ಸಾರ್ವಜನಿಕರಿಂದ ಸ್ವೀಕೃತವಾದ ಸಲಹೆಗಳ ಆಧಾರದ ಮೇಲೆ ಭಾರತದ ಮುಂದಿನ 25 ವರ್ಷಗಳ ಗುರಿಗಳನ್ನು ನಿಗದಿಪಡಿಸಲಾಗಿದೆ. ‘ವಿಕಸಿತ ಭಾರತ’ದ ಕುರಿತ ಚರ್ಚೆಗಳು ಈಗ ನಮ್ಮ ಪ್ರಜ್ಞೆಯ ಭಾಗವಾಗಿವೆ. ‘ಜನಶಕ್ತಿ’ (ನಾಗರಿಕರ ಶಕ್ತಿ)ಯ ಮೂಲಕ ‘ರಾಷ್ಟ್ರ ಶಕ್ತಿ’ (ರಾಷ್ಟ್ರೀಯ ಶಕ್ತಿ) ನಿರ್ಮಾಣಕ್ಕೆ ಇದು ಅತ್ಯುತ್ತಮ ಉದಾಹರಣೆ ಎಂದು ನಾನು ಭಾವಿಸುತ್ತೇನೆ.

ಗೆಳೆಯರೇ,

ಇಂದು, ಭಾರತಕ್ಕೆ ಮತ್ತೊಂದು ಅನುಕೂಲವಿದೆ, ಈ ಶತಮಾನವನ್ನು ಭಾರತದ ಶತಮಾನವನ್ನಾಗಿ ಮಾಡುವಲ್ಲಿ ಅದು ನಿರ್ಣಾಯಕವಾಗಿದೆ. ಇದು ಕೃತಕ ಬುದ್ಧಿಮತ್ತೆ ಎಐ ಯುಗ ಎಂದು ನಿಮಗೆಲ್ಲರಿಗೂ ಗೊತ್ತೇ ಇದೆ. ಪ್ರಪಂಚದ ವರ್ತಮಾನ ಮತ್ತು ಭವಿಷ್ಯವು ಎಐನೊಂದಿಗೆ ಸಂಬಂಧವನ್ನು ಹೊಂದಿದೆ. ಭಾರತಕ್ಕೆ ಕೃತಕಬುದ್ಧಿಮತ್ತೆಯ ದ್ವಿಗುಣ ಶಕ್ತಿಯ ಲಾಭವಿದೆ. ಅದು ಹೇಗೆ ಎಂದು ನೀವು ಚಕಿತರಾಗಬಹುದು? "ಇಡೀ ವಿಶ್ವಕ್ಕೆ ಒಂದೇ ಎಐ ಇದೆ, ಹಾಗಾದರೆ ಮೋದಿಗೆ ಎರಡೆರಡು ಕೃತಕ ಬುದ್ಧಿಮತ್ತೆ (ಡಬಲ್ ಎಐ) ಎಲ್ಲಿಂದ ಬಂದಿತು?". ಪ್ರಪಂಚದ ದೃಷ್ಟಿಯಲ್ಲಿ, ಎಐ ಎಂದರೆ ಕೃತಕ ಬುದ್ಧಿಮತ್ತೆ, ಆದರೆ ನಾವು ಕೃತಕ ಬುದ್ಧಿಮತ್ತೆಯ ಜೊತೆಗೆ ಮತ್ತೊಂದು ಎಐ- ಆಕಾಂಕ್ಷೆಯ ಭಾರತ (ಆಸ್ಪಿರೇಷನಲ್ ಇಂಡಿಯಾ)ವನ್ನು ಸಹ ಹೊಂದಿದ್ದೇವೆ. ಮಹತ್ವಾಕಾಂಕ್ಷೆಯ ಭಾರತದ ಶಕ್ತಿಯು ಕೃತಕ ಬುದ್ಧಿಮತ್ತೆಯೊಂದಿಗೆ ಸಂಯೋಜಿತವಾದಾಗ, ಅಭಿವೃದ್ಧಿಯ ವೇಗವು ಸ್ವಾಭಾವಿಕವಾಗಿ ಹೆಚ್ಚಿನ ವೇಗ ಪಡೆಯುತ್ತದೆ. 

 

ಸ್ನೇಹಿತರೇ,

ನಮಗೆ, ಎ ಐ ಕೇವಲ ತಂತ್ರಜ್ಞಾನವಲ್ಲ; ಇದು ಭಾರತದ ಯುವಕರಿಗೆ ಅವಕಾಶಗಳ ಹೊಸ ಹೆಬ್ಬಾಗಿಲು. ಈ ವರ್ಷ, ಭಾರತವು ಭಾರತ್ ಎಐ ಮಿಷನ್ ಅನ್ನು ಪ್ರಾರಂಭಿಸಿತು. ಅದು ಆರೋಗ್ಯ, ಶಿಕ್ಷಣ ಅಥವಾ ಸ್ಟಾರ್ಟ್ಅಪ್ ಯಾವುದೇ ಆಗಿರಲಿ, ಭಾರತದ ಪ್ರತಿಯೊಂದು ವಲಯದಲ್ಲೂ ಕೃತಕ ಬುದ್ಧಿಮತ್ತೆ ಎಐ ಬಳಕೆಯು ಹೆಚ್ಚಾಗುತ್ತಿದೆ. ನಾವು ಜಗತ್ತಿಗೆ ಉತ್ತಮ ಎಐ ಪರಿಹಾರಗಳನ್ನು ಒದಗಿಸುವ ಕೆಲಸ ಮಾಡುತ್ತಿದ್ದೇವೆ. ಕ್ವಾಡ್ ಮಟ್ಟದಲ್ಲಿ, ಭಾರತ ಹಲವಾರು ಉಪಕ್ರಮಗಳನ್ನು ತೆಗೆದುಕೊಂಡಿದೆ. ಭಾರತವು ತನ್ನ ಮತ್ತೊಂದು ಎಐ ಅಂದರೆ ಆಕಾಂಕ್ಷೆಯ ಭಾರತದ ಬಗ್ಗೆ ಅಷ್ಟೇ ಗಂಭೀರವಾಗಿ ಆಲೋಚಿಸುತ್ತಿದೆ. ಮಧ್ಯಮ ವರ್ಗದವರಾಗಿರಬಹುದು, ಸಾಮಾನ್ಯ ಜನರಾಗಿರಬಹುದು, ಅವರ ಜೀವನ ಸೌಕರ್ಯ, ಅವರ ಸುಲಲಿತ ಜೀವನ, ಗುಣಮಟ್ಟ, ಸಣ್ಣ ಉದ್ಯಮಿಗಳು, ಎಂಎಸ್ಎಂಇಗಳು, ಯುವಕರು ಅಥವಾ ಭಾರತದ ಮಹಿಳೆಯರು - ನಾವು ಪ್ರತಿಯೊಬ್ಬರ ಆಕಾಂಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು ನೀತಿಗಳನ್ನು ರೂಪಿಸುತ್ತಿದ್ದೇವೆ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದೇವೆ.

ಮಿತ್ರರೇ,

ಮಹತ್ವಾಕಾಂಕ್ಷೆಯ ಭಾರತಕ್ಕೆ ಒಂದು ಉದಾಹರಣೆಯೆಂದರೆ ಸಂಪರ್ಕ ವಲಯದಲ್ಲಿ ಅತ್ಯುತ್ತಮವಾದ ಕೆಲಸ ಮಾಡಲಾಗುತ್ತಿದೆ. ಭೌತಿಕವಾಗಿ ವೇಗವಾಗಿ ಸಂಪರ್ಕ ಹೊಂದಲು ಮತ್ತು ಒಳಗೊಂಡ ಸಂಪರ್ಕದ ಮೇಲೆ ನಾವು ಹೆಚ್ಚು ಗಮನ ಹರಿಸಿದ್ದೇವೆ. ಅಭಿವೃದ್ಧಿಯ ಆಶಯಗಳನ್ನು ಹೊಂದಿರುವ ಸಮಾಜಕ್ಕೆ ಇದು ಅತ್ಯಗತ್ಯ. ಭಾರತಕ್ಕೆ ಇದು ಇನ್ನಷ್ಟು ನಿರ್ಣಾಯಕವಾಗಿದೆ. ವೈವಿಧ್ಯಮಯ ಭೌಗೋಳಿಕತೆಯನ್ನು ಹೊಂದಿರುವ ಇಂತಹ ದೊಡ್ಡ ದೇಶವು ಅದರ ಸಾಮರ್ಥ್ಯವನ್ನು ಅರಿತುಕೊಳ್ಳಲು ನಿಜವಾಗಿಯೂ ವೇಗವಾಗಿ ಸಂಪರ್ಕ ಹೊಂದುವ ಅಗತ್ಯವಿದೆ. ಅದಕ್ಕಾಗಿಯೇ ನಾವು ವಿಮಾನ ಪ್ರಯಾಣದ ಬಗ್ಗೆಯೂ ಗಮನ ಹರಿಸಿದ್ದೇವೆ. ಚಪ್ಪಲಿ ಧರಿಸುವವರಿಗೂ ವಿಮಾನ ಪ್ರಯಾಣವನ್ನು ಲಭ್ಯವಾಗುವಂತಾಗಲು ನಾನು ಬಯಸುತ್ತೇನೆ ಎಂದು ನಾನು ಮೊದಲು ಹೇಳಿದಾಗ, “ಭಾರತದಲ್ಲಿ ಇದು ಹೇಗೆ ಸಾಧ್ಯ?” ಎಂಬ ಪ್ರತಿಕ್ರಿಯೆ ವ್ಯಕ್ತವಾಗಿದ್ದು ನನಗೆ ನೆನಪಿದೆ. ಆದರೆ ನಾವು ಮುಂದೆ ಸಾಗಿ ಉಡಾನ್ ಯೋಜನೆಯನ್ನು ಜಾರಿ ಮಾಡಿದೆವು. ಇಂದು, ಉಡಾನ್ ಎಂಟು ವರ್ಷಗಳನ್ನು ಪೂರೈಸಿದೆ. ಉಡಾನ್ ಅಡಿಯಲ್ಲಿ, ನಾವು ಎರಡು ಆಧಾರಸ್ತಂಭಗಳ ಮೇಲೆ ಕೆಲಸ ಮಾಡಿದ್ದೇವೆ. ಮೊದಲಿಗೆ, ನಾವು ದ್ವಿತೀಯ ಶ್ರೇಣಿ ಮತ್ತು ತೃತೀಯ ಶ್ರೇಣಿ ನಗರಗಳಲ್ಲಿ ವಿಮಾನ ನಿಲ್ದಾಣಗಳ ಹೊಸ ಜಾಲವನ್ನು ನಿರ್ಮಿಸಿದ್ದೇವೆ. ಎರಡನೆಯದಾಗಿ, ನಾವು ವಿಮಾನ ಪ್ರಯಾಣವು ಎಲ್ಲರಿಗೂ ಕೈಗೆಟುಕುವ ಮತ್ತು ಲಭ್ಯವಾಗುವಂತೆ ಮಾಡಿದ್ದೇವೆ. ಇಲ್ಲಿಯವರೆಗೆ, ಉಡಾನ್ ಅಡಿಯಲ್ಲಿ ಸುಮಾರು 300,000 ವಿಮಾನ ಹಾರಾಟಗಳಾಗಿದ್ದು, 1.5 ಕೋಟಿ ಸಾಮಾನ್ಯ ನಾಗರಿಕರು ಪ್ರಯಾಣಿಸಿದ್ದಾರೆ. ಉಡಾನ್ ಅಡಿಯಲ್ಲಿ ಇಂದು 600 ಕ್ಕೂ ಹೆಚ್ಚು ಮಾರ್ಗಗಳು ಕಾರ್ಯಚರಣೆಯಲ್ಲಿದ್ದು, ಈ ಪೈಕಿ  ಹೆಚ್ಚಿನವು ಸಣ್ಣ ನಗರಗಳನ್ನು ಸಂಪರ್ಕಿಸುತ್ತವೆ. 2014 ರಲ್ಲಿ ಭಾರತದಲ್ಲಿ ಸುಮಾರು 70 ವಿಮಾನ ನಿಲ್ದಾಣಗಳಿದ್ದು ಈಗ ವಿಮಾನ ನಿಲ್ದಾಣಗಳ ಸಂಖ್ಯೆ 150 ದಾಟಿದೆ. ಸಾಮಾಜಿಕ ಮಹತ್ವಾಕಾಂಕ್ಷೆಯು ಅಭಿವೃದ್ಧಿಯನ್ನು ಹೇಗೆ ಉತ್ತೇಜಿಸುತ್ತದೆ ಎಂಬುದನ್ನು ಉಡಾನ್ ಯೋಜನೆಯು ತೋರಿಸಿದೆ.

ಗೆಳೆಯರೇ,

ದೇಶದ ಯುವಜನತೆಗೆ ಸಂಬಂಧಿಸಿದ ಕೆಲವು ಉದಾಹರಣೆಗಳನ್ನು ನೀಡುತ್ತೇನೆ. ಭಾರತದ ಯುವಕರನ್ನು ಜಾಗತಿಕ ಬೆಳವಣಿಗೆಗೆ ಚಾಲನೆ ನೀಡುವ ಶಕ್ತಿಯನ್ನಾಗಿ ಮಾಡಲು ನಾವು ಕೆಲಸ ಮಾಡುತ್ತಿದ್ದೇವೆ. ಅದಕ್ಕಾಗಿಯೇ ನಾವು ಶಿಕ್ಷಣ, ಕೌಶಲ್ಯಾಭಿವೃದ್ಧಿ, ಸಂಶೋಧನೆ ಮತ್ತು ಉದ್ಯೋಗಕ್ಕೆ ಹೆಚ್ಚಿನ ಒತ್ತು ನೀಡಿದ್ದೇವೆ. ಕಳೆದ 10 ವರ್ಷಗಳಲ್ಲಿ ನಾವು ಈ ಕ್ಷೇತ್ರಗಳಲ್ಲಿ ಮಾಡಿರುವ ಕೆಲಸಗಳ ಫಲಿತಾಂಶಗಳನ್ನು ಈಗ ನೋಡಬಹುದಾಗಿದೆ. ಕೆಲವೇ ದಿನಗಳ ಹಿಂದೆ, ಟೈಮ್ಸ್ ಉನ್ನತ ಶಿಕ್ಷಣದ ಶ್ರೇಯಾಂಕಗಳನ್ನು ಬಿಡುಗಡೆ ಮಾಡಲಾಗಿದ್ದು, ಭಾರತವು ಸಂಶೋಧನಾ ಗುಣಮಟ್ಟದಲ್ಲಿ ಹೆಚ್ಚು ಸುಧಾರಣೆಯನ್ನು ಸಾಧಿಸಿದ ದೇಶವಾಗಿದೆ. ಕಳೆದ 8-9 ವರ್ಷಗಳಲ್ಲಿ, ಭಾರತೀಯ ವಿಶ್ವವಿದ್ಯಾನಿಲಯಗಳ ಭಾಗವಹಿಸುವಿಕೆಯು 30 ರಿಂದ 100 ಕ್ಕಿಂತ ತಲುಪಿದೆ. ಕ್ಯೂ ಎಸ್ ಜಗತ್ತಿನ ವಿಶ್ವವಿದ್ಯಾನಿಲಯ ಶ್ರೇಯಾಂಕದಲ್ಲಿ ಭಾರತದ ಉಪಸ್ಥಿತಿಯು ಕಳೆದ 10 ವರ್ಷಗಳಲ್ಲಿ ಶೇಕಡ 300 ಕ್ಕಿಂತ ಹೆಚ್ಚಾಗಿದೆ. ಇಂದು, ಪೇಟೆಂಟ್ಗಳು ಮತ್ತು ಟ್ರೇಡ್ಮಾರ್ಕ್ಗಳ ಸಂಖ್ಯೆಯು ಸಾರ್ವಕಾಲಿಕ ದಾಖಲೆಯ ಮಟ್ಟದಲ್ಲಿದೆ. ಭಾರತವು ಪ್ರಪಂಚದ ಸಂಶೋಧನೆ ಮತ್ತು ಅಭಿವೃದ್ಧಿ (ಆರ್ & ಡಿ)ಗೆ ಪ್ರಮುಖ ತಾಣವಾಗುತ್ತಿದೆ. ಭಾರತದಲ್ಲಿ ಸುಮಾರು 2,500 ಕಂಪನಿಗಳು ತಮ್ಮ ಸಂಶೋಧನಾ ಕೇಂದ್ರಗಳನ್ನು ಹೊಂದಿವೆ. ಭಾರತದ ಸ್ಟಾರ್ಟ್-ಅಪ್ ಪರಿಸರ ವ್ಯವಸ್ಥೆಯು ಅಭೂತಪೂರ್ವ ಬೆಳವಣಿಗೆಯನ್ನು ಕಂಡಿದೆ.

 

ಮಿತ್ರರೇ,

ಭಾರತದಲ್ಲಿನ ಈ ವ್ಯಾಪಕ ಬದಲಾವಣೆಗಳು ವಿಶ್ವಕ್ಕೆ ನಂಬಿಕೆಯ ಬುನಾದಿಯಾಗುತ್ತಿವೆ. ಇಂದು, ಭಾರತವು ಅನೇಕ ಕ್ಷೇತ್ರಗಳಲ್ಲಿ ಜಾಗತಿಕ ಭವಿಷ್ಯವನ್ನು ರೂಪಿಸುವಲ್ಲಿ ಮುಂಚೂಣಿಯಲ್ಲಿದೆ. ವಿಶ್ವವು ಭಾರತವನ್ನು ಬಿಕ್ಕಟ್ಟಿನ ಸಮಯದಲ್ಲಿ ವಿಶ್ವಾಸಾರ್ಹ ಪಾಲುದಾರನನ್ನಾಗಿ ನೋಡುತ್ತಿದೆ. ಕೋವಿಡ್ನ ದಿನಗಳನ್ನು ನೆನಪಿಸಿಕೊಳ್ಳಿ - ಅಗತ್ಯ ಔಷಧಗಳು ಮತ್ತು ಲಸಿಕೆಗಳನ್ನು ಉತ್ಪಾದಿಸುವ ನಮ್ಮ ಸಾಮರ್ಥ್ಯವು ಶತಕೋಟಿ ಡಾಲರ್ಗಳನ್ನು ಗಳಿಸುವ ಸಾಮರ್ಥ್ಯ ಹೊಂದಿತ್ತು, ಇದರಿಂದಾಗಿ ಭಾರತಕ್ಕೆ  ಅನುಕೂಲವಾಗುತ್ತಿತ್ತು, ಆದರೆ ಮಾನವೀಯತೆಯು ಕಳೆದುಹೋಗುತ್ತಿತ್ತು. ಅದು ನಮ್ಮ ತತ್ವವಲ್ಲ. ನಾವು ನೂರಾರು ದೇಶಗಳಿಗೆ ಅವರ ಅಗತ್ಯದ ಸಮಯದಲ್ಲಿ ಔಷಧಿಗಳು ಮತ್ತು ಜೀವರಕ್ಷಕ ಲಸಿಕೆಗಳನ್ನು ಒದಗಿಸಿದ್ದೇವೆ. ಕಷ್ಟದ ಸಮಯದಲ್ಲಿ ಭಾರತವು ಜಗತ್ತಿಗೆ ಕೊಡುಗೆ ನೀಡಬಹುದೆಂದು ನನಗೆ ತೃಪ್ತಿ ಇದೆ.

ಗೆಳೆಯರೇ,

ಭಾರತವು ಲಘುವಾಗಿ ತೆಗೆದುಕೊಳ್ಳುವ ಸಂಬಂಧಗಳನ್ನು ಹೊಂದುವುದಿಲ್ಲ. ನಮ್ಮ ಸಂಬಂಧಗಳು ನಂಬಿಕೆ ಮತ್ತು ವಿಶ್ವಾಸಾರ್ಹತೆಯನ್ನು ಆಧರಿಸಿವೆ ಮತ್ತು ಜಗತ್ತು ಇದನ್ನು ಅರ್ಥಮಾಡಿಕೊಳ್ಳುತ್ತದೆ. ಭಾರತ ಎಂತಹ ದೇಶವೆಂದರೆ ಅದರ ಪ್ರಗತಿಯು ಜಗತ್ತಿಗೆ ಸಂತೋಷವನ್ನು ತರುತ್ತದೆ. ಭಾರತವು ಯಶಸ್ವಿಯಾದಾಗ, ಜಗತ್ತು ಅದರ ಬಗ್ಗೆ ಸಂತಸಪಡಲಿದೆ. ಉದಾಹರಣೆಗೆ ಇತ್ತೀಚಿನ ಚಂದ್ರಯಾನ. ಇಡೀ ವಿಶ್ವವೇ ಈ ಸಾಧನೆಯನ್ನು ಹಬ್ಬದಂತೆ ಆಚರಿಸಿತು. ಭಾರತವು ಪ್ರಗತಿ ಸಾಧಿಸಿದರೆ, ಅದು ಅಸೂಯೆ ಅಥವಾ ಅಸೂಯೆಯ ಭಾವನೆಗಳನ್ನು ಉಂಟುಮಾಡುವುದಿಲ್ಲ. ಬದಲಾಗಿ, ಇಡೀ ಜಗತ್ತು ಸಂತೋಷಪಡಲಿದೆ, ಏಕೆಂದರೆ ಭಾರತದ ಪ್ರಗತಿಯಿಂದಾಗಿ ಇಡೀ ಪ್ರಪಂಚಕ್ಕೆ ಅನುಕೂಲವಾಗಲಿದೆ.

ಭಾರತವು ಹಿಂದೆ ಜಾಗತಿಕ ಬೆಳವಣಿಗೆಯ ಸಕಾರಾತ್ಮಕ ವಾಹಕ ಶಕ್ತಿಯಾಗಿತ್ತು ಎಂಬುದು ನಮಗೆಲ್ಲರಿಗೂ ತಿಳಿದಿದೆ. ಭಾರತದ ಕಲ್ಪನೆಗಳು, ಆವಿಷ್ಕಾರಗಳು ಮತ್ತು ಉತ್ಪನ್ನಗಳು ಹೇಗೆ ಶತಮಾನಗಳವರೆಗೆ ಪ್ರಪಂಚದ ಮೇಲೆ ಶಾಶ್ವತವಾದ ಪ್ರಭಾವವನ್ನು ಬೀರಿದ್ದವು. ಆದರೆ ನಂತರ ಸಮಯ ಬದಲಾಯಿತು ಮತ್ತು ಭಾರತವು ದೀರ್ಘಾವಧಿಯ ವಸಾಹತುಶಾಹಿಯನ್ನು ಸಹಿಸಿಕೊಂಡಿತು. ಇದರಿಂದಾಗಿ ನಾವು ಹಿಂದೆ ಬೀಳುವಂತಾಯಿತು. ಕೈಗಾರಿಕಾ ಕ್ರಾಂತಿಯ ಸಮಯದಲ್ಲಿ, ಭಾರತವನ್ನು ವಸಾಹತುಶಾಹಿಗೊಳಿಸಲಾಯಿತು, ಇದರಿಂದಾಗಿ ನಮಗೆ ಕೈಗಾರಿಕಾ ಕ್ರಾಂತಿಯ ಲಾಭ ಸಿಗದಂತಾಯಿತು.  ಆ ಸಮಯ ಭಾರತದ ಕೈಯಿಂದ ಜಾರಿತು, ಆದರೆ ಇಂದು ಇದು ಭಾರತದ ಸಮಯ. ಇದು ಕೈಗಾರಿಕೆ 4.0 ಯುಗ. ಭಾರತ ಇನ್ನು ಗುಲಾಮನಲ್ಲ; ನಾವು 75 ವರ್ಷಗಳಿಂದ ಸ್ವತಂತ್ರರಾಗಿದ್ದೇವೆ. ಆದ್ದರಿಂದ, ನಾವು ಈಗ ಸಂಪೂರ್ಣವಾಗಿ ಸಿದ್ಧರಾಗಿದ್ದೇವೆ.

ಸ್ನೇಹಿತರೇ,

ಕೈಗಾರಿಕೆ 4.0 ಗೆ ಅಗತ್ಯವಿರುವ ಕೌಶಲ್ಯ ಮತ್ತು ಮೂಲಸೌಕರ್ಯಗಳನ್ನು ಭಾರತ ವೇಗವಾಗಿ ಅಭಿವೃದ್ಧಿಪಡಿಸುತ್ತಿದೆ. ಕಳೆದ ದಶಕದಲ್ಲಿ, ನಾನು ಅನೇಕ ಜಾಗತಿಕ ವೇದಿಕೆಗಳೊಂದಿಗೆ ಸಂಪರ್ಕ ಸಾಧಿಸುವ ಅವಕಾಶವನ್ನು ಹೊಂದಿದ್ದೇನೆ. ನಾನು ಜಗತ್ತಿನಾದ್ಯಂತ G-20 ಮತ್ತು G-7 ಶೃಂಗಸಭೆಗಳ ಭಾಗವಾಗಿದ್ದೇನೆ. ಕೇವಲ 10 ದಿನಗಳ ಹಿಂದೆ, ನಾನು ಆಸಿಯಾನ್ ಶೃಂಗಸಭೆಗಾಗಿ ಲಾವೋಸ್ನಲ್ಲಿದ್ದೆ. ಪ್ರತಿಯೊಂದು ಶೃಂಗಸಭೆಯಲ್ಲೂ ಭಾರತದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (ಡಿಪಿಐ) ಬಗ್ಗೆ ಚರ್ಚಿಸಲಾಗುತ್ತದೆ ಎಂದು ತಿಳಿಯಲು ನಿಮಗೆ ಸಂತೋಷವಾಗುತ್ತದೆ. ಇಂದು ಜಗತ್ತು ಭಾರತದ ಡಿಪಿಐ ಅನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ನಮ್ಮ ಆತ್ಮೀಯ ಸ್ನೇಹಿತ ಮತ್ತು ಭಾರತದ ಅಭಿಮಾನಿ ಶ್ರೀ ಪಾಲ್ ರೋಮರ್ ಅವರು ನಮ್ಮೊಂದಿಗಿದ್ದಾರೆ. ಅಮೆರಿಕ ಸೇರಿದಂತೆ ಹಲವು ವಿಚಾರಗಳನ್ನು ಅವರೊಂದಿಗೆ ವಿವರವಾಗಿ ಚರ್ಚಿಸಲು ನನಗೆ ಈ ಮೊದಲು ಅವಕಾಶ ಸಿಕ್ಕಿತ್ತು ಮತ್ತು ನಮ್ಮ ಸಂಭಾಷಣೆಗಳಲ್ಲಿ, ಪಾಲ್ ಅವರು ಭಾರತದ ಡಿಜಿಟಲ್ ಮೂಲಸೌಕರ್ಯ ಹಾಗೂ ಆಧಾರ್ ಮತ್ತು ಡಿಜಿಲಾಕರ್ನಂತಹ ಆವಿಷ್ಕಾರಗಳನ್ನು ಶ್ಲಾಘಿಸಿದ್ದಾರೆ. ಪ್ರಮುಖ ಶೃಂಗಸಭೆಗಳ ಸಮಯದಲ್ಲಿ, ಭಾರತ ಹೇಗೆ ಅಸಮಾನ್ಯ ಡಿಪಿಐ ಅನ್ನು ಹೇಗೆ ಅಭಿವೃದ್ಧಿಪಡಿಸಿದೆ ಎಂದು ಜನರು ಆಗಾಗ್ಗೆ ಆಶ್ಚರ್ಯ ವ್ಯಕ್ತಪಡಿಸುತ್ತಾರೆ.

 

ಮಿತ್ರರೇ,

ಅಂತರ್ಜಾಲ ಯುಗದಲ್ಲಿ, ಭಾರತದ ಮೊದಲು ಮುಂದೆ ಸಾಗುವ ಅನುಕೂಲವನ್ನು ಹೊಂದಿರಲಿಲ್ಲ. ಈ ಅನುಕೂಲವನ್ನು ಹೊಂದಿರುವ ದೇಶಗಳಲ್ಲಿ, ಖಾಸಗಿ ವೇದಿಕೆಗಳು ಮತ್ತು ನಾವಿನ್ಯತೆಗಳು ಡಿಜಿಟಲ್ ಜಾಗವನ್ನು ಮುನ್ನಡೆಸಿದ್ದು ಜಗತ್ತಿಗೆ ಕ್ರಾಂತಿಯನ್ನು ತಂದಿವೆ. ಆದಾಗ್ಯೂ, ಪ್ರಯೋಜನಗಳು ಸೀಮಿತವಾಗಿದ್ದವು. ಇದಕ್ಕೆ ವ್ಯತಿರಿಕ್ತವಾಗಿ ಭಾರತವು ಜಗತ್ತಿಗೆ ಹೊಸ ಮಾದರಿಯನ್ನು ಪರಿಚಯಿಸಿದೆ. ಭಾರತವು ತಂತ್ರಜ್ಞಾನವನ್ನು ಎಲ್ಲರಿಗೂ ಲಭ್ಯವಾಗಿಸಿದೆ. ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದ ಮೂಲಕ ಹೊಸ ಮಾರ್ಗವನ್ನು ತೋರಿಸಿದೆ. ಇಂದು ಭಾರತದಲ್ಲಿ, ಸರ್ಕಾರವು ವೇದಿಕೆಯನ್ನು ನಿರ್ಮಿಸುತ್ತದೆ ಮತ್ತು ಅದರ ಮೇಲೆ ಲಕ್ಷಾಂತರ ಹೊಸ ಆವಿಷ್ಕಾರಗಳಾಗುತ್ತಿವೆ. ನಮ್ಮ ಜೆಎಎಂ ಸಂಪರ್ಕ-ಜನ್ ಧನ್, ಆಧಾರ್ ಮತ್ತು ಮೊಬೈಲ್-ಸೇವೆಗಳಿ ವೇಗವಾದ ಮತ್ತು ಸೋರಿಕೆ-ಮುಕ್ತ ಸೇವೆ ಒದಗಿಸಲು ಅದ್ಭುತ ವ್ಯವಸ್ಥೆಯಾಗಿದೆ. ಉದಾಹರಣೆಗೆ ನಮ್ಮ ಯುಪಿಐ ಅನ್ನು ತೆಗೆದುಕೊಳ್ಳಿ. ಯುಪಿಐ ಕಾರಣದಿಂದಾಗಿ ಭಾರತದಲ್ಲಿ ಫಿನ್ಟೆಕ್ ಪ್ರಚಂಡ ಬೆಳವಣಿಗೆಯನ್ನು ಕಂಡಿದೆ. ಪ್ರತಿದಿನ, 500 ದಶಲಕ್ಷಕ್ಕಿಂತಲೂ ಹೆಚ್ಚಿನ ಡಿಜಿಟಲ್ ವಹಿವಾಟುಗಳು ನಡೆಯುತ್ತಿವೆ, ಇವು ಕಾರ್ಪೊರೇಷನ್ಗಳಿಂದಲ್ಲ; ಆದರೆ ನಮ್ಮ ಸಣ್ಣ ಅಂಗಡಿಯವರು ಮತ್ತು ಬೀದಿ ವ್ಯಾಪಾರಿಗಳಿಂದ ನಡೆಯುತ್ತಿದೆ. ನಮ್ಮ ಪಿಎಂ ಗತಿ ಶಕ್ತಿ ವೇದಿಕೆ ಮತ್ತೊಂದು ಉದಾಹರಣೆಯಾಗಿದೆ. ಮೂಲಸೌಕರ್ಯ ಯೋಜನೆಗಳ ಸಮಯದಲ್ಲಿ ಉದ್ಭವಿಸಿದ ವ್ಯವಸ್ಥೆಯ ಸವಾಲುಗಳನ್ನು ನಿವಾರಿಸಲು ನಾವು ಪಿಎಂ ಗತಿ ಶಕ್ತಿಯನ್ನು ರಚಿಸಿದ್ದೇವೆ. ಇಂದು, ಇದು ನಮ್ಮ ಸಾಗಣೆ ಪರಿಸರ ವ್ಯವಸ್ಥೆಯನ್ನು ಪರಿವರ್ತಿಸಲು ಸಹಾಯ ಮಾಡುತ್ತಿದೆ. ಅದೇ ರೀತಿ, ನಮ್ಮ ಒ ಎನ್ ಡಿ ಸಿ ವೇದಿಕೆಯು ಆನ್ಲೈನ್ ಚಿಲ್ಲರೆ ವ್ಯಾಪಾರಕ್ಕೆ ಅನುವು ಮಾಡಿದ ಮತ್ತು ಪಾರದರ್ಶಕತೆಯನ್ನು ತಂದಿರುವ ನಾವಿನ್ಯತೆ ಎಂದು ಸಾಬೀತುಪಡಿಸಿದೆ. ಡಿಜಿಟಲ್ ನಾವಿನ್ಯತೆ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳು ಒಟ್ಟಾಗಿ ಇರಬಲ್ಲದು ಎಂದು ಭಾರತ್ ತೋರಿಸಿದೆ. ತಂತ್ರಜ್ಞಾನವು ಒಳಗೊಳ್ಳುವಿಕೆ, ಪಾರದರ್ಶಕತೆ ಮತ್ತು ಸಬಲೀಕರಣದ ಸಾಧನವಾಗಿದೆ, ನಿಯಂತ್ರಣ ಮತ್ತು ವಿಭಜನೆಗೆ ಅಲ್ಲ ಎಂದು ಭಾರತ ನಿರೂಪಿಸಿದೆ.

ಗೆಳೆಯರೇ,

ಮಾನವ ಇತಿಹಾಸದಲ್ಲಿ 21 ನೇ ಶತಮಾನದ ಈ ಯುಗವು ಅತ್ಯಂತ ನಿರ್ಣಾಯಕ ಅವಧಿಗಳಲ್ಲಿ ಒಂದಾಗಿದೆ. ಅಂತಹ ಸಮಯದಲ್ಲಿ, ಸ್ಥಿರತೆ, ಸುಸ್ಥಿರತೆ ಮತ್ತು ಪರಿಹಾರಗಳು-  ಪ್ರಮುಖ ಅಗತ್ಯಗಳಾಗಿದ್ದು ಇವುಗಳು ಮಾನವೀಯತೆಯ ಉತ್ತಮ ಭವಿಷ್ಯಕ್ಕಾಗಿ ಅತ್ಯಗತ್ಯವಾಗಿವೆ. ಇಂದು, ಭಾರತ ಈ ಕ್ಷೇತ್ರಗಳಲ್ಲಿ ಜನರ ಅಪೂರ್ವ ಬೆಂಬಲದೊಂದಿಗೆ ತನ್ನ ಪ್ರಯತ್ನಗಳನ್ನು ಮಾಡುತ್ತಿದೆ. ಆರು ದಶಕಗಳಲ್ಲಿ ಇದೇ ಮೊದಲ ಬಾರಿಗೆ, ದೇಶದ ಜನರು ಸತತ ಮೂರನೇ ಅವಧಿಗೆ ತಮ್ಮ ಜನಾದೇಶವನ್ನು ಸರ್ಕಾರಕ್ಕೆ ನೀಡಿದ್ದಾರೆ. ಇದು ಸ್ಥಿರತೆಯ ಸಂದೇಶವನ್ನು ರವಾನಿಸಿದೆ. ಇತ್ತೀಚೆಗೆ, ಹರಿಯಾಣದಲ್ಲಿ ಚುನಾವಣೆಗಳು ನಡೆದಿದ್ದು ಈ ಚುನಾವಣೆಗಳಲ್ಲಿಯೂ ಸಹ, ಭಾರತದ ಜನರು ಈ ಸ್ಥಿರತೆಯ ಭಾವನೆಯನ್ನು ಬಲಪಡಿಸಿದ್ದಾರೆ.

ಸ್ನೇಹಿತರೇ,

ಹವಾಮಾನ ಬದಲಾವಣೆಯ ಬಿಕ್ಕಟ್ಟು ಎಲ್ಲಾ ಮಾನವೀಯತೆಯ ಬಿಕ್ಕಟ್ಟಾಗಿದೆ. ಈ ಕ್ಷೇತ್ರದಲ್ಲೂ ಸಹ ಬಿಕ್ಕಟ್ಟು ನಿರ್ವಹಣೆಗೆ ಭಾರತ ಮುಂದಾಳತ್ವ ವಹಿಸಲು ಯತ್ನಿಸುತ್ತಿದೆ. ಜಾಗತಿಕ ಹವಾಮಾನ ಬದಲಾವಣೆಗೆ ನಮ್ಮಿಂದ ಅಪಾಯ ತೀರಾ ಕಡಿಮೆ ಇದೆ. ಆದರೂ ನಾವು ಹಸಿರು ಪರಿವರ್ತನೆಯನ್ನು ನಮ್ಮ ಬೆಳವಣಿಗೆಯ ಇಂಧನವನ್ನಾಗಿ ಮಾಡಿದ್ದೇವೆ. ಇಂದು, ಸುಸ್ಥಿರತೆಯು ನಮ್ಮ ಅಭಿವೃದ್ಧಿ ಯೋಜನೆಯ ಕೇಂದ್ರವಾಗಿದೆ. ನಮ್ಮ ಪ್ರಧಾನಮಂತ್ರಿ ಸೂರ್ಯ ಘರ್ ಮುಫ್ಟ್ ಬಿಜ್ಲಿ ಯೋಜನೆ, ಹೊಲಗಳಲ್ಲಿ ಸೌರ ಪಂಪ್ಗಳನ್ನು ಅಳವಡಿಸುವ ಯೋಜನೆ, ನಮ್ಮ ಇವಿ ಕ್ರಾಂತಿ ಅಥವಾ ಎಥೆನಾಲ್ ಮಿಶ್ರಣ ಕಾರ್ಯಕ್ರಮಗಳನ್ನು ನೋಡಿ - ಅದು ದೊಡ್ಡ ಪವನಶಕ್ತಿ ಘಟಕಗಳು, ಎಲ್ ಇ ಡಿ ಬೆಳಕಿನ ಚಲನೆ, ಸೌರ-ಚಾಲಿತ ವಿಮಾನ ನಿಲ್ದಾಣಗಳು ಅಥವಾ ಜೈವಿಕ ಅನಿಲ ಸ್ಥಾವರಗಳ ಮೇಲೆ ಕೇಂದ್ರೀಕರಿಸಿರುವುದನ್ನು ನೋಡಬಹುದು. ನಮ್ಮ ಯಾವುದೇ ಕಾರ್ಯಕ್ರಮಗಳು ಅಥವಾ ಯೋಜನೆಗಳನ್ನು ನೀವು ನೋಡಿದರೂ, ಪ್ರತಿ ಯೋಜನೆಯಲ್ಲೂ ಹಸಿರು ಭವಿಷ್ಯ ಮತ್ತು ಹಸಿರು ಉದ್ಯೋಗಗಳಿಗೆ ಬಲವಾದ ಬದ್ಧತೆಯನ್ನು ನೀವು ಕಾಣಬಹುದು.

 

ಮಿತ್ರರೇ,

ಸ್ಥಿರತೆ ಮತ್ತು ಸುಸ್ಥಿರತೆಯ ಜೊತೆಗೆ, ಭಾರತ ಈಗ ಪರಿಹಾರಗಳತ್ತ ಕೂಡ ಗಮನ ಹರಿಸುತ್ತಿದೆ. ಕಳೆದ ದಶಕದಲ್ಲಿ, ಜಾಗತಿಕ ಸವಾಲುಗಳನ್ನು ಎದುರಿಸಲು ಭಾರತ ಅನೇಕ ಪರಿಹಾರಗಳನ್ನು ಒದಗಿಸುವ ಕೆಲಸ ಮಾಡಿದೆ. ಅದು ಅಂತರರಾಷ್ಟ್ರೀಯ ಸೌರ ಒಕ್ಕೂಟವಾಗಲಿ, ವಿಪತ್ತು ನಿರೋಧಕ ಮೂಲಸೌಕರ್ಯಗಳ ಒಕ್ಕೂಟವಾಗಲಿ, ಭಾರತ-ಮಧ್ಯಪ್ರಾಚ್ಯ ಆರ್ಥಿಕ ಕಾರಿಡಾರ್ ಆಗಿರಲಿ, ಜಾಗತಿಕ ಜೈವಿಕ ಇಂಧನ ಒಕ್ಕೂಟ, ಯೋಗ, ಆಯುರ್ವೇದ, ಮಿಷನ್ ಲೈಫ್ ಅಥವಾ ಮಿಷನ್ ಮಿಲೆಟ್ಸ್- ಹೀಗೆ ಭಾರತದ ಪ್ರತಿಯೊಂದು ಉಪಕ್ರಮವು ಜಗತ್ತಿನ ಸವಾಲುಗಳಿಗೆ ಪರಿಹಾರವನ್ನು ಒದಗಿಸಿದೆ.

ಗೆಳೆಯರೇ,

ಭಾರತದ ಬೆಳೆಯುತ್ತಿರುವ ಸಾಮರ್ಥ್ಯಗಳು ಪ್ರಪಂಚದ ಸುಧಾರಣೆಯನ್ನು ಖಾತ್ರಿಪಡಿಸುತ್ತಿದೆ ಎಂದು ನನಗೆ ಹರ್ಷವಾಗಿದೆ. ಭಾರತವು ಎಷ್ಟು ಪ್ರಗತಿ ಹೊಂದುತ್ತದೋ ಜಗತ್ತಿಗೆ ಅಷ್ಟು ಲಾಭವಾಗುತ್ತದೆ. ಭಾರತದ ಶತಮಾನವು ಕೇವಲ ಭಾರತದ ಗೆಲುವಾಗದೇ ಸಮಸ್ತ ಮಾನವೀಯತೆಯ ವಿಜಯವಾಗಲಿ ಎಂಬುದು ನಮ್ಮ ಗುರಿಯಾಗಿದೆ. ಪ್ರತಿಯೊಬ್ಬರ ಪ್ರತಿಭೆಯ ಮೂಲಕ ಮುನ್ನಡೆಯುವ ಶತಮಾನ, ಪ್ರತಿಯೊಬ್ಬರ ಆವಿಷ್ಕಾರಗಳಿಂದ ಸಮೃದ್ಧವಾಗಿರುವ ಶತಮಾನ, ಬಡತನದಿಂದ ಮುಕ್ತವಾದ ಶತಮಾನ, ಎಲ್ಲರಿಗೂ ಪ್ರಗತಿಗೆ ಅವಕಾಶವಿರುವ ಶತಮಾನ ಮತ್ತು ಭಾರತದ ಪ್ರಯತ್ನಗಳು ಜಗತ್ತಿಗೆ ಸ್ಥಿರತೆ ಮತ್ತು ಶಾಂತಿಯನ್ನು ತರುವ ಶತಮಾನವಾಗಲಿದೆ. ಈ ಉತ್ಸಾಹದೊಂದಿಗೆ ನನ್ನನ್ನು ಈ ಸಮಾರಂಭಕ್ಕೆ ಆಹ್ವಾನಿಸಿದ ಮತ್ತು ಈ ಅವಕಾಶ ನೀಡಿದ ಎನ್ ಡಿ ಟಿ ವಿಗೆ ನಾನು ಮತ್ತೊಮ್ಮೆ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ. ಈ ಶೃಂಗಸಭೆಯ ಯಶಸ್ಸಿಗೆ ನನ್ನ ಶುಭ ಹಾರೈಕೆಗಳು.

ಅನಂತ ಧನ್ಯವಾದಗಳು.

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Cabinet approves minimum support price for Copra for the 2025 season

Media Coverage

Cabinet approves minimum support price for Copra for the 2025 season
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ಡಿಸೆಂಬರ್ 2024
December 21, 2024

Inclusive Progress: Bridging Development, Infrastructure, and Opportunity under the leadership of PM Modi