ಸುಮಾರು 17,000 ಕೋಟಿ ರೂ. ಮೌಲ್ಯದ ರಾಷ್ಟ್ರೀಯ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ
ಪಂಚಾಯಿತಿ ಮಟ್ಟದಲ್ಲಿ ಸಾರ್ವಜನಿಕ ಖರೀದಿಗಾಗಿ ಸಮಗ್ರ ಇ-ಗ್ರಾಮ್ ಸ್ವರಾಜ್ ಮತ್ತು ಜಿಇಎಂ ಪೋರ್ಟಲ್ ಅನಾವರಣ
ಸುಮಾರು 35 ಲಕ್ಷ ಸ್ವಾಮಿತ್ವ ಆಸ್ತಿ ಕಾರ್ಡ್‌ಗಳ ಹಸ್ತಾಂತರ
ಪಿಎಂಎವೈ-ಜಿ ಯೋಜನೆ ಅಡಿ 4 ಲಕ್ಷಕ್ಕಿಂತ ಹೆಚ್ಚಿನ ಫಲಾನುಭವಿಗಳ ‘ಗೃಹ ಪ್ರವೇಶ’ದಲ್ಲಿ ಭಾಗಿ
ಸುಮಾರು 2,300 ಕೋಟಿ ರೂ. ಮೌಲ್ಯದ ವಿವಿಧ ರೈಲ್ವೆ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ರಾಷ್ಟ್ರಕ್ಕೆ ಸಮರ್ಪಣೆ
ಜಲಜೀವನ್ ಮಿಷನ್ ಅಡಿ ಸುಮಾರು 7,000 ಕೋಟಿ ರೂ. ಯೋಜನೆಗಳಿಗೆ ಶಂಕುಸ್ಥಾಪನೆ
"ಪಂಚಾಯತ್ ರಾಜ್ ಸಂಸ್ಥೆಗಳು ಪ್ರಜಾಪ್ರಭುತ್ವದ ಮನೋಭಾವ ಉತ್ತೇಜಿಸುವ ಮೂಲಕ ನಮ್ಮ ನಾಗರಿಕರ ಅಭಿವೃದ್ಧಿ ಆಕಾಂಕ್ಷೆಗಳನ್ನು ಪೂರೈಸುತ್ತಿವೆ"
"ಅಮೃತ್ ಕಾಲದಲ್ಲಿ ನಾವು ಅಭಿವೃದ್ಧಿ ಹೊಂದಿದ ಭಾರತದ ಕನಸು ಕಂಡಿದ್ದೇವೆ, ಅದನ್ನು ಸಾಧಿಸಲು ಹಗಲಿರುಳು ಶ್ರಮಿಸುತ್ತಿದ್ದೇವೆ"
"2014ರಿಂದ ದೇಶವು ತನ್ನ ಪಂಚಾಯತ್‌ ಸಂಸ್ಥೆಗಳ ಸಬಲೀಕರಣ ಕೈಗೆತ್ತಿಕೊಂಡಿದೆ, ಅದರ ಫಲಿತಾಂಶಗಳು ಇದೀಗ ಗೋಚರಿಸುತ್ತಿವೆ"
"ಡಿಜಿಟಲ್ ಕ್ರಾಂತಿಯ ಈ ಯುಗದಲ್ಲಿ, ಪಂಚಾಯಿತಿಗಳನ್ನು ಸಹ ಸ್ಮಾರ್ಟ್ ಮಾಡಲಾಗುತ್ತಿದೆ"
"ಪ್ರತಿಯೊಂದು ಪಂಚಾಯಿತಿ, ಪ್ರತಿ ಸಂಸ್ಥೆ, ಪ್ರತಿಯೊಬ್ಬ ಪ್ರತಿನಿಧಿ ಹಾಗೂ ದೇಶದ ಪ್ರತಿಯೊಬ್ಬ ನಾಗರಿಕರು ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ಒಂದಾಗಬೇಕು"
"ನಮ್ಮ ಪಂಚಾಯತ್‌ಗಳು ನೈಸರ್ಗಿಕ ಕೃಷಿಯ ಬಗ್ಗೆ ಸಾರ್ವಜನಿಕ ಜಾಗೃತಿ ಅಭಿಯಾನ ನಡೆಸಬೇಕು"

ಭಾರತ್ ಮಾತಾ ಕಿ - ಜೈ!

ಭಾರತ್ ಮಾತಾ ಕಿ - ಜೈ!

ಮಧ್ಯಪ್ರದೇಶದ ರಾಜ್ಯಪಾಲರಾದ ಶ್ರೀ ಮಂಗೂಭಾಯಿ ಪಟೇಲ್ ಅವರೇ, ಮುಖ್ಯಮಂತ್ರಿ ಶಿವರಾಜ್ ಸಿಂಗ್‌ ಚೌಹಾಣ್‌ ಅವರೇ, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿಗಳೇ, ಪಂಚಾಯತ್ ರಾಜ್ ಸಚಿವ ಗಿರಿರಾಜ್ ಅವರೇ, ಶಾಸಕರು, ಸಂಸದರು, ಇತರ ಗಣ್ಯರೇ ಮತ್ತು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿರುವ ನನ್ನ ಪ್ರೀತಿಯ ಸಹೋದರ ಸಹೋದರಿಯರೇ.

ಈ ಐತಿಹಾಸಿಕ ರೇವಾ ನೆಲದಿಂದ ನಾನು ಮಾತೆ ವಿಂಧ್ಯವಾಸಿನಿಗೆ ನಮಿಸುತ್ತೇನೆ. ಈ ಭೂಮಿ ಧೈರ್ಯಶಾಲಿಗಳಿಗೆ ಸೇರಿದೆ; ಇದು ದೇಶಕ್ಕಾಗಿ ತ್ಯಾಗ ಮಾಡಲು ಸದಾ ಸಿದ್ಧರಿರುವವರಿಗೆ ಸೇರಿದೆ. ನಾನು ಲೆಕ್ಕವಿಲ್ಲದಷ್ಟು ಬಾರಿ ರೇವಾಕ್ಕೆ ಬಂದಿದ್ದೇನೆ ಮತ್ತು ನಾನು ಯಾವಾಗಲೂ ನಿಮ್ಮ ಅಪಾರ ಪ್ರೀತಿ ಮತ್ತು ವಾತ್ಸಲ್ಯವನ್ನು ಪಡೆಯುತ್ತಿದ್ದೇನೆ. ಇಂದೂ ಸಹ ನೀವೆಲ್ಲರೂ ನಮ್ಮನ್ನು ಆಶೀರ್ವದಿಸಲು ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದೀರಿ. ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಕೃತಜ್ಞತೆಗಳು. ನಿಮಗೆಲ್ಲರಿಗೂ ಹಾಗೂ ದೇಶದ 2.5 ಲಕ್ಷಕ್ಕೂ ಹೆಚ್ಚು ಪಂಚಾಯತ್‌ಗಳಿಗೆ ರಾಷ್ಟ್ರೀಯ ಪಂಚಾಯತ್ ರಾಜ್ ದಿನದ ಶುಭಾಶಯಗಳು. ಇಂದು, ನಿಮ್ಮೊಂದಿಗೆ 30 ಲಕ್ಷಕ್ಕೂ ಹೆಚ್ಚು ಪಂಚಾಯತ್ ಪ್ರತಿನಿಧಿಗಳು ಸಹ ವರ್ಚುವಲ್‌ ಆಗಿ ನಮ್ಮೊಂದಿಗೆ ಸಂಪರ್ಕ ಹೊಂದಿದ್ದಾರೆ. ಇದು ಖಂಡಿತವಾಗಿಯೂ ಭಾರತ ಪ್ರಜಾಪ್ರಭುತ್ವದ ಅತ್ಯಂತ ಸ್ಪಷ್ಟ ಚಿತ್ರವಾಗಿದೆ. ನಾವೆಲ್ಲರೂ ಜನಪ್ರತಿನಿಧಿಗಳು. ನಾವೆಲ್ಲರೂ ಈ ದೇಶಕ್ಕೆ, ಈ ಪ್ರಜಾಪ್ರಭುತ್ವಕ್ಕೆ ಸಮರ್ಪಿತರು. ನಮ್ಮ ಕೆಲಸದ ವ್ಯಾಪ್ತಿ ವಿಭಿನ್ನವಾಗಿರಬಹುದು, ಆದರೆ ಗುರಿ ಒಂದೇ ಆಗಿದೆ, ಅದು ಸಾರ್ವಜನಿಕ ಸೇವೆಯಿಂದ ರಾಷ್ಟ್ರಕ್ಕೆ ಸೇವೆ. ಗ್ರಾಮೀಣ ಬಡವರ ಬದುಕು ಸುಗಮವಾಗಲು ಕೇಂದ್ರ ಸರ್ಕಾರ ಮಾಡಿರುವ ಎಲ್ಲ ಯೋಜನೆಗಳನ್ನು ನಮ್ಮ ಪಂಚಾಯಿತಿಗಳು ಅನುಷ್ಠಾನಗೊಳಿಸುತ್ತಿರುವುದು ಸಂತಸ ತಂದಿದೆ.

ಸಹೋದರ ಸಹೋದರಿಯರೇ,

ಇ-ಗ್ರಾಮ್ ಸ್ವರಾಜ್ ಮತ್ತು ಜಿಇಎಂ ಪೋರ್ಟಲ್ ಅನ್ನು ಸಂಯೋಜಿಸುವ ಮೂಲಕ ಇಂದು ಇಲ್ಲಿ ಚಾಲನೆ ನೀಡಲಾದ ಹೊಸ ವ್ಯವಸ್ಥೆಯೊಂದಿಗೆ ನಿಮ್ಮ ಕೆಲಸವು ಸುಲಭವಾಗಲಿದೆ. ಪ್ರಧಾನ ಮಂತ್ರಿ ಸ್ವಾಮಿತ್ವ ಯೋಜನೆಯಡಿ ದೇಶದ 35 ಲಕ್ಷ ಗ್ರಾಮೀಣ ಕುಟುಂಬಗಳಿಗೆ ಆಸ್ತಿ ಕಾರ್ಡ್‌ಗಳನ್ನು ನೀಡಲಾಗಿದೆ. ಇಂದು ಮಧ್ಯಪ್ರದೇಶದ ಅಭಿವೃದ್ಧಿಗೆ ಸಂಬಂಧಿಸಿದ 17,000 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ಯೋಜನೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆಯೂ ನಡೆದಿದೆ. ಇವುಗಳಲ್ಲಿ ರೈಲ್ವೆ ಯೋಜನೆಗಳು, ಬಡವರಿಗೆ ಪಕ್ಕಾ ಮನೆಗಳು ಮತ್ತು ಕುಡಿಯುವ ನೀರಿಗೆ ಸಂಬಂಧಿಸಿದ ಯೋಜನೆಗಳು ಸೇರಿವೆ. ಗ್ರಾಮೀಣ ಬಡವರ ಜೀವನವನ್ನು ಸುಲಭಗೊಳಿಸುವ ಮತ್ತು ಉದ್ಯೋಗವನ್ನು ಸೃಷ್ಟಿಸುವ ಈ ಯೋಜನೆಗಳಿಗಾಗಿ ನಾನು ನಿಮ್ಮೆಲ್ಲರನ್ನು ಅಭಿನಂದಿಸುತ್ತೇನೆ.

 

ಸ್ನೇಹಿತರೇ,

ನಾವೆಲ್ಲರೂ ಈ ಸ್ವಾತಂತ್ರ್ಯದ ‘ಅಮೃತ ಕಾಲʼದಲ್ಲಿ ಅಭಿವೃದ್ಧಿ ಹೊಂದಿದ ಭಾರತದ ಕನಸು ಕಂಡಿದ್ದೇವೆ ಮತ್ತು ಅದನ್ನು ಈಡೇರಿಸಲು ಹಗಲಿರುಳು ಶ್ರಮಿಸುತ್ತಿದ್ದೇವೆ. ಭಾರತವನ್ನು ಅಭಿವೃದ್ಧಿಪಡಿಸಲು, ಭಾರತದ ಹಳ್ಳಿಗಳ ಸಾಮಾಜಿಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದು ಅವಶ್ಯಕವಾಗಿದೆ. ಭಾರತವನ್ನು ಅಭಿವೃದ್ಧಿಪಡಿಸಲುಲು, ಭಾರತದ ಹಳ್ಳಿಗಳ ಆರ್ಥಿಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದು ಅವಶ್ಯಕವಾಗಿದೆ. ಭಾರತವನ್ನು ಅಭಿವೃದ್ಧಿಪಡಿಸಲು, ಭಾರತದ ಹಳ್ಳಿಗಳ ಪಂಚಾಯತ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದು ಸಹ ಅಗತ್ಯವಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ನಮ್ಮ ಸರ್ಕಾರವು ದೇಶದ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಪಡಿಸಲು ನಿರಂತರವಾಗಿ ಶ್ರಮಿಸುತ್ತಿದೆ. ಹಿಂದಿನ ಸರ್ಕಾರಗಳ ತಾರತಮ್ಯ ನೀತಿಗೆ ವಿರುದ್ಧವಾಗಿ ನಾವು ಪಂಚಾಯತ್‌ಗಳನ್ನು ಹೇಗೆ ಸಶಕ್ತಗೊಳಿಸುತ್ತಿದ್ದೇವೆ ಮತ್ತು ಪಂಚಾಯಿತಿಗಳಲ್ಲಿನ ಸೌಲಭ್ಯಗಳನ್ನು ಸುಧಾರಿಸುತ್ತಿದ್ದೇವೆ ಎಂಬುದನ್ನು ಇಂದು ಗ್ರಾಮಸ್ಥರು ಮತ್ತು ದೇಶಾದ್ಯಂತದ ಜನರು ನೋಡುತ್ತಿದ್ದಾರೆ.

2014ಕ್ಕೂ ಮೊದಲು ಪಂಚಾಯಿತಿಗಳಿಗೆ ಹಣಕಾಸು ಆಯೋಗದ ಅನುದಾನ 70,000 ಕೋಟಿ ರೂ.ಗಿಂತ ಕಡಿಮೆ ಇತ್ತು. ನೀವು ಈ ಸಂಖ್ಯೆಯನ್ನು ನೆನಪಿಟ್ಟುಕೊಂಡಿರಾ? ನೀವು ಏನಾದರೂ ಹೇಳಿದರೆ, ನಿಮಗೆ ಅದು ನೆನಪಿದೆ ಎಂದು ನನಗೆ ತಿಳಿಯುತ್ತದೆ. 2014ಕ್ಕೂ ಮೊದಲು ಇದು 70,000 ಕೋಟಿ ರೂ.ಗಿಂತ ಕಡಿಮೆ ಇತ್ತು. ಇಷ್ಟು ದೊಡ್ಡ ದೇಶದಲ್ಲಿ ಎಷ್ಟೋ ಪಂಚಾಯತ್‌ಗಳು ಇಷ್ಟು ಸಣ್ಣ ಮೊತ್ತದಲ್ಲಿ ತಮ್ಮ ಕರ್ತವ್ಯವನ್ನು ಹೇಗೆ ನಿರ್ವಹಿಸಬಲ್ಲವು? 2014ರಲ್ಲಿ ನಮ್ಮ ಸರ್ಕಾರ ರಚನೆಯಾದ ನಂತರ ಪಂಚಾಯಿತಿಗಳಿಗೆ ಈ ಅನುದಾನವನ್ನು 70,000 ಕೋಟಿ ರೂಪಾಯಿಗಳಿಂದ ಎರಡು ಲಕ್ಷ ಕೋಟಿ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ನೀವು ವ್ಯತ್ಯಾಸವನ್ನು ನೋಡಬಹುದು. ನಾವು ಹೇಗೆ ಕೆಲಸ ಮಾಡುತ್ತೇವೆ ಎಂಬುದನ್ನು ಈಗ ನೀವು ಊಹಿಸಬಹುದು. ನಾನು ನಿಮಗೆ ಇನ್ನೂ ಎರಡು ಉದಾಹರಣೆಗಳನ್ನು ನೀಡುತ್ತೇನೆ. 2014ರ ಹಿಂದಿನ 10 ವರ್ಷಗಳಲ್ಲಿ ಕೇವಲ 6,000 ಪಂಚಾಯಿತಿ ಭವನಗಳನ್ನು ಕೇಂದ್ರ ಸರ್ಕಾರದ ನೆರವಿನಿಂದ ನಿರ್ಮಿಸಲಾಗಿತ್ತು. ಇಡೀ ದೇಶದಲ್ಲಿ ಸುಮಾರು 6,000 ಪಂಚಾಯತ್ ಭವನಗಳನ್ನು ಮಾತ್ರ ನಿರ್ಮಿಸಲಾಗಿತ್ತು! ನಮ್ಮ ಸರ್ಕಾರ ಎಂಟು ವರ್ಷಗಳಲ್ಲಿ 30,000 ಕ್ಕೂ ಹೆಚ್ಚು ಹೊಸ ಪಂಚಾಯತ್ ಭವನಗಳನ್ನು ನಿರ್ಮಿಸಿದೆ. ಈಗ ಈ ಅಂಕಿ ಅಂಶವು ನಾವು ಹಳ್ಳಿಗಳ ಬಗ್ಗೆ ಎಷ್ಟು ಸಮರ್ಪಿತರಾಗಿದ್ದೇವೆ ಎಂಬುದನ್ನು ಹೇಳುತ್ತದೆ.

ಹಿಂದಿನ ಸರಕಾರವೂ ಗ್ರಾಮ ಪಂಚಾಯಿತಿಗಳಿಗೆ ಆಪ್ಟಿಕಲ್ ಫೈಬರ್ ನೀಡುವ ಯೋಜನೆ ಆರಂಭಿಸಿತ್ತು. ಆದರೆ ಆ ಯೋಜನೆಯಡಿ ದೇಶದ 70ಕ್ಕಿಂತಲೂ ಕಡಿಮೆ, ನೂರೂ ಅಲ್ಲ, ಗ್ರಾಮ ಪಂಚಾಯಿತಿಗಳು ಆಪ್ಟಿಕಲ್ ಫೈಬರ್‌ನೊಂದಿಗೆ ಸಂಪರ್ಕ ಹೊಂದಿದ್ದವು. ಅದೂ ನಗರಗಳ ಹೊರವಲಯದಲ್ಲಿರುವ ಪಂಚಾಯಿತಿಗಳಲ್ಲಿ! ನಮ್ಮ ಸರ್ಕಾರ ದೇಶದ ಎರಡು ಲಕ್ಷಕ್ಕೂ ಹೆಚ್ಚು ಪಂಚಾಯತ್‌ಗಳಿಗೆ ಆಪ್ಟಿಕಲ್ ಫೈಬರ್ ಒದಗಿಸಿದೆ. ವ್ಯತ್ಯಾಸ ಸ್ಪಷ್ಟವಾಗಿದೆ, ಸ್ನೇಹಿತರೇ. ಸ್ವಾತಂತ್ರ್ಯಾನಂತರದ ಸರ್ಕಾರಗಳು ಭಾರತದ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಹೇಗೆ ನಾಶಪಡಿಸಿದವು ಎಂಬ ವಿವರಗಳಿಗೆ ನಾನು ಹೋಗಬಯಸುವುದಿಲ್ಲ. ಸ್ವಾತಂತ್ರ್ಯ ಪೂರ್ವದಲ್ಲೇ ನೂರಾರು, ಸಾವಿರಾರು ವರ್ಷಗಳ ಹಿಂದೆ ಇದ್ದ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಸ್ವಾತಂತ್ರ್ಯಾನಂತರ ನಂಬಲಿಲ್ಲ. ಭಾರತದ ಆತ್ಮ ಹಳ್ಳಿಗಳಲ್ಲಿ ನೆಲೆಸಿದೆ ಎಂದು ಗೌರವಾನ್ವಿತ ಬಾಪು ಹೇಳುತ್ತಿದ್ದರು. ಆದರೆ ಕಾಂಗ್ರೆಸ್ ಗಾಂಧೀಜಿಯವರ ಅಭಿಪ್ರಾಯಗಳನ್ನೂ ಕಡೆಗಣಿಸಿತು. ತೊಂಬತ್ತರ ದಶಕದಲ್ಲಿ ಪಂಚಾಯತ್ ರಾಜ್ ಹೆಸರಿನಲ್ಲಿ ಕೆಲವು ಔಪಚಾರಿಕತೆಗಳನ್ನು ಮಾಡಲಾಯಿತು, ಆದರೆ ಆಗಲೂ ಪಂಚಾಯತ್‌ಗಳಿಗೆ ಅರ್ಹವಾದ ಗಮನವನ್ನು ನೀಡಲಿಲ್ಲ. 

ಸ್ನೇಹಿತರೇ,

2014 ರಿಂದ, ದೇಶವು ತನ್ನ ಪಂಚಾಯತ್‌ಗಳ ಸಬಲೀಕರಣವನನು ಕೈಗೆತ್ತಿಕೊಂಡಿದೆ ಮತ್ತು ಇಂದು ಅದರ ಫಲಿತಾಂಶಗಳು ಗೋಚರಿಸುತ್ತಿವೆ. ಇಂದು ಭಾರತದ ಪಂಚಾಯತ್‌ಗಳು ಗ್ರಾಮಗಳ ಅಭಿವೃದ್ಧಿಯ ಜೀವಾಳವಾಗಿ ಹೊರಹೊಮ್ಮುತ್ತಿವೆ. ಗ್ರಾಮ ಪಂಚಾಯಿತಿಗಳು ಅಗತ್ಯತೆಗಳಿಗೆ ಅನುಗುಣವಾಗಿ ಗ್ರಾಮಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಯೋಜನೆ ರೂಪಿಸಲಾಗುತ್ತಿದೆ.

ಸ್ನೇಹಿತರೇ,

ಗ್ರಾಮಗಳು ಮತ್ತು ನಗರಗಳ ನಡುವಿನ ಅಂತರವನ್ನು ನಾವು ಪಂಚಾಯತ್‌ಗಳ ಸಹಾಯದಿಂದ ನಿರಂತರವಾಗಿ ಕಡಿಮೆ ಮಾಡುತ್ತಿದ್ದೇವೆ. ಡಿಜಿಟಲ್ ಕ್ರಾಂತಿಯ ಈ ಯುಗದಲ್ಲಿ ಪಂಚಾಯಿತಿಗಳೂ ಸ್ಮಾರ್ಟ್ ಆಗುತ್ತಿವೆ. ಇಂದು ಯೋಜನೆಯಿಂದ ಅನುಷ್ಠಾನದವರೆಗೆ ಪಂಚಾಯತ್ ಮಟ್ಟದಲ್ಲಿ ತಂತ್ರಜ್ಞಾನವನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ಉದಾಹರಣೆಗೆ, ಅಮೃತ ಸರೋವರಗಳ ನಿರ್ಮಾಣಕ್ಕಾಗಿ ನೀವು ತುಂಬಾ ಕೆಲಸ ಮಾಡುತ್ತಿದ್ದೀರಿ. ಈ ಅಮೃತ ಸರೋವರಗಳಿಗೆ ಸ್ಥಳವನ್ನು ಆಯ್ಕೆ ಮಾಡುವುದರಿಂದ ಹಿಡಿದು ಅವುಗಳನ್ನು ಪೂರ್ಣಗೊಳಿಸುವವರೆಗೆ ಪ್ರತಿಯೊಂದು ಹಂತದಲ್ಲೂ ಸಾಕಷ್ಟು ತಂತ್ರಜ್ಞಾನವನ್ನು ಬಳಸಲಾಗಿದೆ. ಇಂದು, ಇ-ಗ್ರಾಮ್ ಸ್ವರಾಜ್ - ಜಿಇಎಂ ಇಂಟಿಗ್ರೇಟೆಡ್ ಪೋರ್ಟಲ್ ಅನ್ನು ಸಹ ಪ್ರಾರಂಭಿಸಲಾಗಿದೆ. ಇದರಿಂದ ಪಂಚಾಯಿತಿಗಳ ಮೂಲಕ ಖರೀದಿ ಪ್ರಕ್ರಿಯೆ ಸರಳ ಮತ್ತು ಪಾರದರ್ಶಕವಾಗಿರುತ್ತದೆ. ಪಂಚಾಯತ್‌ಗಳು ಈಗ ಕಡಿಮೆ ಬೆಲೆಗೆ ಸರಕುಗಳನ್ನು ಖರೀದಿಸಲು ಸಾಧ್ಯವಾಗುತ್ತಿದೆ ಮತ್ತು ಸ್ಥಳೀಯ ಸಣ್ಣ ಕೈಗಾರಿಕೆಗಳು ತಮ್ಮ ಸರಕುಗಳನ್ನು ಮಾರಾಟ ಮಾಡಲು ಪ್ರಬಲ ಮಾಧ್ಯಮವನ್ನು ಪಡೆಯುತ್ತಿವೆ. ದಿವ್ಯಾಂಗರಿಗೆ ತ್ರಿಚಕ್ರ ವಾಹನಗಳಾಗಲಿ ಅಥವಾ ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದ ವಸ್ತುಗಳಾಗಲಿ, ಈ ಪೋರ್ಟಲ್‌ನಲ್ಲಿ ಪಂಚಾಯತ್‌ಗಳಿಗೆ ಎಲ್ಲವೂ ಸುಲಭವಾಗಿ ಲಭ್ಯವಾಗುತ್ತಿವೆ.

ಸಹೋದರ ಸಹೋದರಿಯರೇ,

ಪ್ರಧಾನ ಮಂತ್ರಿ ಸ್ವಾಮಿತ್ವ ಯೋಜನೆಯಲ್ಲಿ ನಾವು ಆಧುನಿಕ ತಂತ್ರಜ್ಞಾನದ ಮತ್ತೊಂದು ಪ್ರಯೋಜನವನ್ನು ಸಹ ನೋಡಬಹುದು. ಗ್ರಾಮಗಳಲ್ಲಿರುವ ಮನೆಗಳ ಆಸ್ತಿ ಪತ್ರಗಳಿಗೆ ಸಂಬಂಧಿಸಿದಂತೆ ಹಲವು ಗೊಂದಲಗಳಿದ್ದವು. ಪರಿಣಾಮವಾಗಿ, ಇದು ವಿವಾದಗಳಿಗೆ ಕಾರಣವಾಗುತ್ತದೆ ಮತ್ತು ಅಕ್ರಮ ಆಸ್ತಿಯ ಸಾಧ್ಯತೆಯೂ ಇರುತ್ತದೆ. ಈಗ ಈ ಎಲ್ಲಾ ಸಮಸ್ಯೆಗಳನ್ನು ಪ್ರಧಾನ ಮಂತ್ರಿ ಸ್ವಾಮಿತ್ವ ಯೋಜನೆಯೊಂದಿಗೆ ಪರಿಹರಿಸಲಾಗುತ್ತಿದೆ. ಇಂದು ಪ್ರತಿ ಗ್ರಾಮಗಳಲ್ಲಿ ಡ್ರೋನ್ ತಂತ್ರಜ್ಞಾನದಿಂದ ಸಮೀಕ್ಷೆ ನಡೆಸಿ ನಕ್ಷೆ ಸಿದ್ಧಪಡಿಸಲಾಗುತ್ತಿದೆ. ಇದರ ಆಧಾರದ ಮೇಲೆ ಯಾವುದೇ ತಾರತಮ್ಯವಿಲ್ಲದೆ ಕಾನೂನು ದಾಖಲೆಗಳನ್ನು ಜನರಿಗೆ ಹಸ್ತಾಂತರಿಸಲಾಗುತ್ತಿದೆ. ಇದುವರೆಗೆ ದೇಶಾದ್ಯಂತ 75,000 ಗ್ರಾಮಗಳಿಗೆ ಆಸ್ತಿ ಕಾರ್ಡ್ ನೀಡಲಾಗಿದೆ. ಮಧ್ಯಪ್ರದೇಶ ಸರ್ಕಾರವು ಈ ನಿಟ್ಟಿನಲ್ಲಿ ಅತ್ಯಂತ ಶ್ಲಾಘನೀಯ ಕೆಲಸ ಮಾಡುತ್ತಿರುವುದು ನನಗೆ ಸಂತೋಷ ತಂದಿದೆ. 

ಸ್ನೇಹಿತರೇ,

ಛಿಂದವಾಡದ ನೀವು ಬಹುಕಾಲ ನಂಬಿಕೊಂಡಿದ್ದ ಜನರು ನಿಮ್ಮ ಅಭಿವೃದ್ಧಿಯ ಬಗ್ಗೆ, ಈ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಏಕೆ ಅಸಡ್ಡೆ ತೋರಿದರು ಎಂದು ನನಗೆ ಅನೇಕ ಬಾರಿ ಆಶ್ಚರ್ಯವಾಗುತ್ತದೆ. ಕೆಲವು ರಾಜಕೀಯ ಪಕ್ಷಗಳ ಚಿಂತನೆಯಲ್ಲಿಯೇ ಉತ್ತರವಿದೆ. ಸ್ವಾತಂತ್ರ್ಯಾನಂತರ ಅತಿ ಹೆಚ್ಚು ಕಾಲ ಸರ್ಕಾರಗಳನ್ನು ನಡೆಸಿದ ಪಕ್ಷ ನಮ್ಮ ಹಳ್ಳಿಗಳ ನಂಬಿಕೆಯನ್ನು ಛಿದ್ರಗೊಳಿಸಿತು. ಜನರು, ಶಾಲೆಗಳು, ರಸ್ತೆಗಳು, ವಿದ್ಯುತ್, ಸಂಗ್ರಹಣಾ ಸ್ಥಳಗಳು, ಗ್ರಾಮೀಣ ಆರ್ಥಿಕತೆ, ಕಾಂಗ್ರೆಸ್ ಆಡಳಿತದಲ್ಲಿ ಕನಿಷ್ಠ ಆದ್ಯತೆಯಾಗಿತ್ತು.

ಸಹೋದರ ಸಹೋದರಿಯರೇ,

ದೇಶದ ಅರ್ಧಕ್ಕಿಂತಲೂ ಹೆಚ್ಚು ಜನಸಂಖ್ಯೆ ವಾಸಿಸುವ ಹಳ್ಳಿಗಳಿಗೆ ಮಲತಾಯಿ ಧೋರಣೆ ತೋರುವುದರಿಂದ ದೇಶ ಪ್ರಗತಿ ಸಾಧಿಸಲು ಸಾಧ್ಯವಿಲ್ಲ. ಹೀಗಾಗಿ 2014ರಲ್ಲಿ ದೇಶ ಸೇವೆ ಮಾಡುವ ಅವಕಾಶ ನೀಡಿದಾಗ ಹಳ್ಳಿಗಳ ಆರ್ಥಿಕತೆ, ಹಳ್ಳಿಗಳಲ್ಲಿನ ಸೌಲಭ್ಯಗಳು ಹಾಗೂ ಹಳ್ಳಿಗಳ ಜನರ ಹಿತಾಸಕ್ತಿಗೆ ಹೆಚ್ಚಿನ ಆದ್ಯತೆ ನೀಡಿದ್ದೇವೆ. ಉಜ್ವಲ ಯೋಜನೆಯಡಿ 10 ಕೋಟಿ ಗ್ಯಾಸ್ ಸಂಪರ್ಕವನ್ನು ಹಳ್ಳಿಗಳ ಜನರಿಗೆ ಮಾತ್ರ ನೀಡಲಾಗಿದೆ. ನಮ್ಮ ಸರ್ಕಾರದ ಅಡಿಯಲ್ಲಿ ದೇಶಾದ್ಯಂತ ಬಡವರಿಗಾಗಿ 3.75 ಕೋಟಿಗೂ ಹೆಚ್ಚು ಮನೆಗಳನ್ನು ನಿರ್ಮಿಸಲಾಗಿದ್ದು, ಅದರಲ್ಲಿ ಮೂರು ಕೋಟಿಗೂ ಹೆಚ್ಚು ಮನೆಗಳನ್ನು ಹಳ್ಳಿಗಳಲ್ಲಿ ನಿರ್ಮಿಸಲಾಗಿದೆ. ಮುಖ್ಯವಾಗಿ, ನಮ್ಮ ಸಹೋದರಿಯರು, ಹೆಣ್ಣುಮಕ್ಕಳು ಮತ್ತು ತಾಯಂದಿರು ಈ ಬಹುತೇಕ ಮನೆಗಳ ಮಾಲೀಕತ್ವದ ಹಕ್ಕುಗಳನ್ನು ಹೊಂದಿದ್ದಾರೆ. ಗಂಡನ ಹೆಸರಲ್ಲಿ ಮನೆ, ಗಂಡನ ಹೆಸರಲ್ಲಿ ಅಂಗಡಿ, ಗಂಡನ ಹೆಸರಲ್ಲಿ ಕಾರು, ಗಂಡಿನ ಹೆಸರಲ್ಲಿ ಜಮೀನು ಎಂಬಂತಹ ಸಂಪ್ರದಾಯ ನಮ್ಮ ದೇಶದಲ್ಲಿತ್ತು. ಮಹಿಳೆಯರ ಹೆಸರಿನಲ್ಲಿ ಏನೂ ಇರಲಿಲ್ಲ. ನಾವು ಈ ಪದ್ಧತಿಯನ್ನು ಬದಲಾಯಿಸಿದ್ದೇವೆ ಮತ್ತು ನಮ್ಮ ತಾಯಿ, ಸಹೋದರಿಯರು ಮತ್ತು ಹೆಣ್ಣುಮಕ್ಕಳು ಮಾಲೀಕರಾಗಿದ್ದಾರೆ.

ಸ್ನೇಹಿತರೇ,

ಬಿಜೆಪಿ ಸರ್ಕಾರ ದೇಶದ ಕೋಟಿ ಕೋಟಿ ಮಹಿಳೆಯರನ್ನು ಮನೆಯ ಮಾಲೀಕರನ್ನಾಗಿ ಮಾಡಿದೆ. ಮತ್ತು ಇಂದಿನ ಕಾಲದಲ್ಲಿ ಪ್ರತಿ ಪಿಎಂ ಆವಾಸ್ ಮನೆಯು ಒಂದು ಲಕ್ಷ ರೂಪಾಯಿಗಿಂತ ಹೆಚ್ಚು ಮೌಲ್ಯದ್ದಾಗಿದೆ ಎಂದು ನಿಮಗೆ ತಿಳಿದಿದೆಯೇ? ಅಂದರೆ ಬಿಜೆಪಿ ದೇಶದ ಕೋಟ್ಯಂತರ ಸಹೋದರಿಯರನ್ನು ‘ಲಕ್ಷಾಧೀಶೆ’ಸಹೋದರಿಯರನ್ನಾಗಿ ಮಾಡಿದೆ. ನಾನು ಈ ಎಲ್ಲಾ 'ಲಖಪತಿ' ಸಹೋದರಿಯರಿಗೆ ನಮಸ್ಕರಿಸುತ್ತೇನೆ ಮತ್ತು ದೇಶದಲ್ಲಿ ಇನ್ನೂ ಲಕ್ಷಾಂತರ ಸಹೋದರಿಯರು 'ಲಖ್ಪತಿ' ಆಗುವಂತೆ ಮಾಡಲು ನಮ್ಮನ್ನು ಆಶೀರ್ವದಿಸಬೇಕೆಂದು ವಿನಂತಿಸುತ್ತೇನೆ. ಇವತ್ತೇ ನಾಲ್ಕು ಲಕ್ಷ ಜನ ಇಲ್ಲಿ ತಮ್ಮ ಪಕ್ಕಾ ಮನೆಗಳನ್ನು ಪ್ರವೇಶಿಸಿದ್ದಾರೆ. ಅವರಲ್ಲಿ ಹೆಚ್ಚಿನ ಸಂಖ್ಯೆಯವರು ‘ಲಖಪತಿ’ಸಹೋದರಿಯರು. ಅವರೆಲ್ಲರಿಗೂ ಅಭಿನಂದನೆಗಳು. 

ಸ್ನೇಹಿತರೇ,

ಪ್ರಧಾನಮಂತ್ರಿ ಸೌಭಾಗ್ಯ ಯೋಜನೆಯಡಿ ವಿದ್ಯುತ್ ಪಡೆದ 2.5 ಕೋಟಿ ಕುಟುಂಬಗಳಲ್ಲಿ ಹೆಚ್ಚಿನವು ಹಳ್ಳಿಗಳಲ್ಲಿವೆ. ಅವರು ಹಳ್ಳಿಗಳಲ್ಲಿ ವಾಸಿಸುವ ನನ್ನ ಸಹೋದರ ಸಹೋದರಿಯರು. ನಮ್ಮ ಸರ್ಕಾರವು ಗ್ರಾಮಸ್ಥರಿಗಾಗಿ ಹರ್ ಘರ್ ಜಲ್ ಯೋಜನೆಯನ್ನೂ ಆರಂಭಿಸಿದೆ. ಈ ಯೋಜನೆಯಿಂದಾಗಿ, ದೇಶದ ಒಂಬತ್ತು ಕೋಟಿಗೂ ಹೆಚ್ಚು ಗ್ರಾಮೀಣ ಕುಟುಂಬಗಳು ಕೇವಲ ಮೂರ್ನಾಲ್ಕು ವರ್ಷಗಳಲ್ಲಿ ಮನೆಗೆ ನಲ್ಲಿ ನೀರನ್ನು ಪಡೆಯಲು ಪ್ರಾರಂಭಿಸಿವೆ. ಮಧ್ಯಪ್ರದೇಶದಲ್ಲಿಯೂ ಹಳ್ಳಿಗಳಲ್ಲಿ ವಾಸಿಸುವ 13 ಲಕ್ಷ ಕುಟುಂಬಗಳು ಮಾತ್ರ ನಲ್ಲಿ ನೀರು ಪಡೆಯುತ್ತಿದ್ದವು. ಹಿಂದಿನ ಸರ್ಕಾರಗಳ ಆಳ್ವಿಕೆಯಲ್ಲಿ ಈ ಅಂಕಿ ಅಂಶವಿತ್ತು. ಇಂದು ಮಧ್ಯಪ್ರದೇಶದ ಸುಮಾರು 60 ಲಕ್ಷ ಮನೆಗಳಿಗೆ ನಲ್ಲಿ ನೀರು ಬರಲಾರಂಭಿಸಿದೆ. ಈ ನಿಟ್ಟಿನಲ್ಲಿ ನಿಮ್ಮ ಜಿಲ್ಲೆ ಶೇ.100 ಸಾಧನೆ ಮಾಡಿದೆ.

ಸ್ನೇಹಿತರೇ,

ಮೊದಲು ನಮ್ಮ ಹಳ್ಳಿಗಳ ಜನರಿಗೆ ದೇಶದ ಬ್ಯಾಂಕ್‌ಗಳ ಮೇಲೆ ಯಾವುದೇ ಹಕ್ಕಿಲ್ಲ ಎಂದು ಪರಿಗಣಿಸಲಾಗಿತ್ತು. ಹಳ್ಳಿಗಳಲ್ಲಿ ಹೆಚ್ಚಿನ ಜನರು ಬ್ಯಾಂಕ್ ಖಾತೆಗಳನ್ನು ಹೊಂದಿರಲಿಲ್ಲ ಮತ್ತು ಬ್ಯಾಂಕ್‌ಗಳಿಂದ ಯಾವುದೇ ಸೌಲಭ್ಯಗಳನ್ನು ಪಡೆಯುತ್ತಿರಲಿಲ್ಲ. ಅವರ ಬಳಿ ಬ್ಯಾಂಕ್ ಖಾತೆ ಇಲ್ಲದ ಕಾರಣ ಬಡವರಿಗೆ ಕಳುಹಿಸಲಾಗುತ್ತಿದ್ದ ಹಣವನ್ನು ದಾರಿ ಮಧ್ಯೆಯೇ ದೋಚಲಾಗುತ್ತಿತ್ತು. ನಮ್ಮ ಸರ್ಕಾರ ಈ ಪರಿಸ್ಥಿತಿಯನ್ನು ಸಂಪೂರ್ಣವಾಗಿ ಬದಲಾಯಿಸಿದೆ. ಜನ್ ಧನ್ ಯೋಜನೆಯಡಿ ಹಳ್ಳಿಗಳ 40 ಕೋಟಿಗೂ ಹೆಚ್ಚು ಜನರ ಬ್ಯಾಂಕ್ ಖಾತೆಗಳನ್ನು ತೆರೆದಿದ್ದೇವೆ. ನಾವು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಮೂಲಕ ಅಂಚೆ ಕಚೇರಿಗಳನ್ನು ಬಳಸಿಕೊಂಡು ಹಳ್ಳಿಗಳಿಗೆ ಬ್ಯಾಂಕ್‌ಗಳ ವ್ಯಾಪ್ತಿಯನ್ನು ಹೆಚ್ಚಿಸಿದ್ದೇವೆ. ನಾವು ಲಕ್ಷಾಂತರ ಬ್ಯಾಂಕ್ ಮಿತ್ರರನ್ನು ಮಾಡಿದ್ದೇವೆ ಮತ್ತು ಬ್ಯಾಂಕ್ ಸಖಿಗಳಿಗೆ ತರಬೇತಿ ನೀಡಿದ್ದೇವೆ. ಇಂದು ಅದರ ಪರಿಣಾಮ ದೇಶದ ಪ್ರತಿ ಹಳ್ಳಿಯಲ್ಲೂ ಗೋಚರಿಸುತ್ತಿದೆ. ದೇಶದ ಹಳ್ಳಿಗಳಿಗೆ ಬ್ಯಾಂಕ್‌ಗಳ ಪ್ರಯೋಜನ ದೊರೆತಾಗ ಜನರಿಗೆ ಕೃಷಿಯಿಂದ ವ್ಯಾಪಾರದವರೆಗೆ ಎಲ್ಲದರಲ್ಲೂ ಸಹಾಯವಾಯಿತು.

ಸ್ನೇಹಿತರೇ,

ಹಿಂದಿನ ಸರ್ಕಾರಗಳು ಭಾರತದ ಹಳ್ಳಿಗಳಿಗೆ ದೊಡ್ಡ ಅನ್ಯಾಯವನ್ನು ಮಾಡಿದವು. ಹಿಂದಿನ ಸರ್ಕಾರಗಳು ಹಳ್ಳಿಗಳಿಗೆ ಹಣ ಖರ್ಚು ಮಾಡುವುದನ್ನು ತಪ್ಪಿಸಿದ್ದವು. ಹಳ್ಳಿಗಳು ಮತ ಬ್ಯಾಂಕ್ ಆಗದ ಕಾರಣ ಅವರನ್ನು ಕಡೆಗಣಿಸಲಾಯಿತು. ಅನೇಕ ರಾಜಕೀಯ ಪಕ್ಷಗಳು ಹಳ್ಳಿಗಳ ಜನರನ್ನು ವಿಭಜಿಸಿ ತಮ್ಮ ಸ್ವಹಿತಾಸಕ್ತಿಯನ್ನು ಪೋಷಿಸುತ್ತಿವೆ. ಭಾರತೀಯ ಜನತಾ ಪಕ್ಷವು ಹಳ್ಳಿಗಳಿಗೆ ನಡೆಯುತ್ತಿದ್ದ ಈ ಅನ್ಯಾಯವನ್ನು ಕೊನೆಗೊಳಿಸಿದೆ. ನಮ್ಮ ಸರ್ಕಾರವು ಹಳ್ಳಿಗಳ ಅಭಿವೃದ್ಧಿಗೆ ಅವಕಾಶವನ್ನು ತೆರೆದಿದೆ. ಹರ್ ಘರ್ ಜಲ್ ಯೋಜನೆಗೆ 3.5 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಖರ್ಚು ಮಾಡಲಾಗುತ್ತಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆಗೂ ಲಕ್ಷಾಂತರ ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತಿದೆ. ದಶಕಗಳಿಂದ ನನೆಗುದಿಗೆ ಬಿದ್ದಿದ್ದ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಒಂದು ಲಕ್ಷ ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ. ಪ್ರಧಾನಮಂತ್ರಿ ಗ್ರಾಮೀಣ ಸಡಕ್ ಯೋಜನೆಗೆ ಸಾವಿರಾರು ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿಯೂ ಸರ್ಕಾರವು ಸುಮಾರು 2.5 ಲಕ್ಷ ಕೋಟಿ ರೂಪಾಯಿಗಳನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಕಳುಹಿಸಿದೆ. ಮಧ್ಯಪ್ರದೇಶದಲ್ಲಿಯೂ ಸುಮಾರು 90 ಲಕ್ಷ ರೈತರು ಈ ಯೋಜನೆಯಡಿ 18500 ಕೋಟಿ ರೂ. ಪಡೆದಿದ್ದಾರೆ. ಈ ನಿಧಿಯಿಂದ ರೇವಾದ ರೈತರು ಸುಮಾರು 500 ಕೋಟಿ ರೂ. ಸ್ವೀಕರಿಸಿದ್ದಾರೆ. ನಮ್ಮ ಸರ್ಕಾರ ಹಲವಾರು ಆಹಾರ ಧಾನ್ಯಗಳ ಎಂಎಸ್‌ಪಿ ಹೆಚ್ಚಿಸಿದ ನಂತರ ಸಾವಿರಾರು ಕೋಟಿ ರೂಪಾಯಿ ಹೆಚ್ಚುವರಿಯಾಗಿ ಹಳ್ಳಿಗಳಿಗೆ ತಲುಪಿದೆ. ಕೊರೊನಾ ಅವಧಿಯಲ್ಲಿ ನಮ್ಮ ಸರ್ಕಾರ ಕಳೆದ ಮೂರು ವರ್ಷಗಳಿಂದ ಹಳ್ಳಿಗಳಲ್ಲಿ ವಾಸಿಸುವ ಬಡವರಿಗೆ ಉಚಿತ ಪಡಿತರವನ್ನು ನೀಡುತ್ತಿದೆ. ಬಡವರ ಕಲ್ಯಾಣಕ್ಕಾಗಿ ಈ ಯೋಜನೆಗೆ ಮೂರು ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ವೆಚ್ಚ ಮಾಡಲಾಗುತ್ತಿದೆ.

ಸ್ನೇಹಿತರೇ,

ಹಳ್ಳಿಗಳಲ್ಲಿ ಇಷ್ಟೊಂದು ಅಭಿವೃದ್ಧಿ ಕಾರ್ಯಗಳು ನಡೆದಾಗ, ಇಷ್ಟು ಹಣ ಖರ್ಚು ಮಾಡಿದಾಗ ಹಳ್ಳಿಗಳಲ್ಲಿ ಉದ್ಯೋಗಾವಕಾಶಗಳೂ ಸೃಷ್ಟಿಯಾಗುತ್ತವೆ. ಹಳ್ಳಿಗಳಲ್ಲಿ ಉದ್ಯೋಗ ಮತ್ತು ಸ್ವಯಂ ಉದ್ಯೋಗವನ್ನು ತ್ವರಿತಗೊಳಿಸುವ ಸಲುವಾಗಿ ಕೇಂದ್ರ ಸರ್ಕಾರವು ಹಳ್ಳಿಗಳ ಜನರಿಗೆ ಹಳ್ಳಿಗಳಲ್ಲಿಯೇ ಕೆಲಸ ನೀಡಲು ಮುದ್ರಾ ಯೋಜನೆಗೆ ಚಾಲನೆ ನೀಡುತ್ತಿದೆ. ಮುದ್ರಾ ಯೋಜನೆಯಡಿ ಕಳೆದ ಕೆಲವು ವರ್ಷಗಳಲ್ಲಿ ಜನರಿಗೆ 24 ಲಕ್ಷ ಕೋಟಿ ರೂ.ಗಳ ನೆರವು ನೀಡಲಾಗಿದೆ. ಇದರಿಂದ ಹಳ್ಳಿಗಳಲ್ಲಿಯೂ ಕೋಟ್ಯಂತರ ಜನ ವ್ಯಾಪಾರ ಆರಂಭಿಸಿದ್ದಾರೆ. ನಮ್ಮ ಸಹೋದರಿಯರು, ಹೆಣ್ಣುಮಕ್ಕಳು ಮತ್ತು ತಾಯಂದಿರು ಕೂಡ ಮುದ್ರಾ ಯೋಜನೆಯ ದೊಡ್ಡ ಫಲಾನುಭವಿಗಳಾಗಿದ್ದಾರೆ. ನಮ್ಮ ಸರ್ಕಾರದ ಯೋಜನೆಗಳು ಹಳ್ಳಿಗಳಲ್ಲಿ ಮಹಿಳೆಯರನ್ನು ಹೇಗೆ ಸಬಲೀಕರಣಗೊಳಿಸುತ್ತಿವೆ, ಮಹಿಳೆಯರನ್ನು ಹೇಗೆ ಆರ್ಥಿಕವಾಗಿ ಸಬಲೀಕರಣಗೊಳಿಸುತ್ತಿವೆ ಎಂಬುದು ಇಂದು ಎಲ್ಲೆಡೆ ಚರ್ಚೆಯ ವಿಷಯವಾಗಿದೆ. ಕಳೆದ ಒಂಬತ್ತು ವರ್ಷಗಳಲ್ಲಿ ಒಂಬತ್ತು ಕೋಟಿ ಮಹಿಳೆಯರು ಸ್ವಸಹಾಯ ಸಂಘಗಳಿಗೆ ಸೇರಿದ್ದಾರೆ. ಇಲ್ಲಿ ಮಧ್ಯಪ್ರದೇಶದಲ್ಲೂ 50 ಲಕ್ಷಕ್ಕೂ ಹೆಚ್ಚು ಮಹಿಳೆಯರು ಸ್ವಸಹಾಯ ಗುಂಪುಗಳೊಂದಿಗೆ ಸಂಬಂಧ ಹೊಂದಿದ್ದಾರೆ. ನಮ್ಮ ಸರ್ಕಾರದಲ್ಲಿ ಪ್ರತಿ ಸ್ವಸಹಾಯ ಸಂಘಗಳಿಗೆ ಬ್ಯಾಂಕ್ ಗ್ಯಾರಂಟಿ ಇಲ್ಲದೆ 20 ಲಕ್ಷ ರೂ.ವರೆಗೆ ಸಾಲ ನೀಡಲಾಗುತ್ತಿದೆ. ಮಹಿಳೆಯರು ಈಗ ಅನೇಕ ಸಣ್ಣ ಕೈಗಾರಿಕೆಗಳನ್ನು ನಿರ್ವಹಿಸುತ್ತಿದ್ದಾರೆ. ರಾಜ್ಯ ಸರ್ಕಾರವೂ ಪ್ರತಿ ಜಿಲ್ಲೆಯಲ್ಲೂ ದೀದಿ ಕೆಫೆ ಮಾಡಿದೆ. ಕಳೆದ ಪಂಚಾಯತ್ ಚುನಾವಣೆಯಲ್ಲಿ ಸ್ವಸಹಾಯ ಸಂಘಗಳಿಗೆ ಸಂಬಂಧಿಸಿದ ಸುಮಾರು 17,000 ಸಹೋದರಿಯರು ಪಂಚಾಯತ್ ಪ್ರತಿನಿಧಿಗಳಾಗಿ ಆಯ್ಕೆಯಾಗಿದ್ದರು. ಇದು ಅತ್ಯಂತ ಹೆಮ್ಮೆಯ ವಿಷಯವಾಗಿದೆ. ಈ ಸಾಧನೆಗಾಗಿ ನಾನು ಮತ್ತೊಮ್ಮೆ ಮಧ್ಯಪ್ರದೇಶದ ಮಹಿಳಾ ಶಕ್ತಿಯನ್ನು ಅಭಿನಂದಿಸುತ್ತೇನೆ.

ಸ್ನೇಹಿತರೇ,

ಇಂದು ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿಯ ಅಭಿಯಾನವೂ ಆರಂಭವಾಗಿದೆ. ಇದು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ‘ಸಬ್ಕಾ ಪ್ರಯಾಸ್’(ಎಲ್ಲರ ಪ್ರಯತ್ನ) ಮನೋಭಾವವನ್ನು ಬಲಪಡಿಸಲಿದೆ. ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ಪ್ರತಿ ಪಂಚಾಯತ್, ಪ್ರತಿ ಸಂಸ್ಥೆಯ ಪ್ರತಿನಿಧಿ ಮತ್ತು ದೇಶದ ಪ್ರತಿಯೊಬ್ಬ ನಾಗರಿಕರು ಒಂದಾಗಬೇಕು. ಯಾವುದೇ ತಾರತಮ್ಯವಿಲ್ಲದೆ, ಪ್ರತಿ ಮೂಲ ಸೌಲಭ್ಯವು ಶೇ.100 ರಷ್ಟು ಫಲಾನುಭವಿಗಳನ್ನು ತ್ವರಿತವಾಗಿ ತಲುಪಿದಾಗ ಮಾತ್ರ ಇದು ಸಾಧ್ಯ. ಈ ನಿಟ್ಟಿನಲ್ಲಿ ಎಲ್ಲ ಪಂಚಾಯಿತಿ ಪ್ರತಿನಿಧಿಗಳ ಪಾತ್ರ ಮಹತ್ವದ್ದಾಗಿದೆ.

ಸಹೋದರ ಸಹೋದರಿಯರೇ,

ಕೃಷಿಗೆ ಸಂಬಂಧಿಸಿದ ಹೊಸ ವ್ಯವಸ್ಥೆಗಳ ಬಗ್ಗೆ ಪಂಚಾಯತ್‌ಗಳಿಂದ ಜಾಗೃತಿ ಅಭಿಯಾನವನ್ನು ನಡೆಸುವುದು ಸಹ ಅಗತ್ಯವಾಗಿದೆ. ಇಂದು, ಸಹಜ ಕೃಷಿಗೆ ಸಂಬಂಧಿಸಿದಂತೆ ದೇಶದಲ್ಲಿ ಬಹಳ ವ್ಯಾಪಕವಾದ ಕೆಲಸಗಳು ನಡೆಯುತ್ತಿವೆ. ಇಲ್ಲಿಯೂ ರಾಸಾಯನಿಕ ಕೃಷಿಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಚರ್ಚೆ ನಡೆದಿದೆ. ಭೂಮಿ ತಾಯಿಯ ದುಃಖದ ಬಗ್ಗೆ ನಮ್ಮ ಹೆಣ್ಣುಮಕ್ಕಳು ನಮಗೆಲ್ಲರಿಗೂ ಹೇಗೆ ತಿಳಿಸಿದರು ಎಂಬುದನ್ನು ನಾವು ನೋಡಿದ್ದೇವೆ. ಭೂಮಿ ತಾಯಿಯ ನೋವನ್ನು ನಮಗೆ ತಿಳಿಸಲು ನಾಟಕಗಳನ್ನು ಬಳಸಿಕೊಂಡಿದ್ದಾರೆ. ರಾಸಾಯನಿಕ ಕೃಷಿಯಿಂದ ಭೂಮಿ ತಾಯಿಗೆ ಆಗುತ್ತಿರುವ ಹಾನಿಯನ್ನು ಈ ಹೆಣ್ಣು ಮಕ್ಕಳು ಅತ್ಯಂತ ಸರಳ ರೀತಿಯಲ್ಲಿ ಎಲ್ಲರಿಗೂ ವಿವರಿಸಿದ್ದಾರೆ. ಭೂಮಿಯ ಈ ಕರೆಯನ್ನು ನಾವೆಲ್ಲರೂ ಅರ್ಥಮಾಡಿಕೊಳ್ಳಬೇಕು. ನಮ್ಮ ತಾಯಿಯನ್ನು ಕೊಲ್ಲುವ ಹಕ್ಕು ನಮಗಿಲ್ಲ. ಈ ಭೂಮಿ ನಮ್ಮ ತಾಯಿ. ಆ ತಾಯಿಯನ್ನು ಕೊಲ್ಲುವ ಹಕ್ಕು ನಮಗಿಲ್ಲ. ನಮ್ಮ ಪಂಚಾಯತ್‌ಗಳು ಸಹಜ ಕೃಷಿಯ ಬಗ್ಗೆ ಜನಜಾಗೃತಿ ಅಭಿಯಾನವನ್ನು ನಡೆಸಬೇಕು ಎಂದು ನಾನು ಒತ್ತಾಯಿಸುತ್ತೇನೆ. ಸಣ್ಣ ರೈತರು, ದನಗಾಹಿಗಳು ಮತ್ತು ಮೀನುಗಾರರಿಗೆ ಸಹಾಯ ಮಾಡಲು ಕೇಂದ್ರ ಸರ್ಕಾರ ನಡೆಸುತ್ತಿರುವ ಅಭಿಯಾನಗಳಲ್ಲಿ ಪಂಚಾಯತ್‌ಗಳ ಪಾತ್ರ ದೊಡ್ಡದಾಗಿದೆ. ನೀವು ಪ್ರತಿಯೊಂದು ಅಭಿವೃದ್ಧಿ ಸಂಬಂಧಿತ ಚಟುವಟಿಕೆಯಲ್ಲಿ ತೊಡಗಿಸಿಕೊಂಡಾಗ, ರಾಷ್ಟ್ರದ ಸಾಮೂಹಿಕ ಪ್ರಯತ್ನಗಳು ಬಲಗೊಳ್ಳುತ್ತವೆ. ಇದು ‘ಅಮೃತ ಕಾಲʼದಲ್ಲಿ ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣಕ್ಕೆ ಶಕ್ತಿಯಾಗಲಿದೆ.

ಸ್ನೇಹಿತರೇ,

ಇಂದು ಪಂಚಾಯತ್ ರಾಜ್ ದಿನದಂದು ಮಧ್ಯಪ್ರದೇಶದ ಅಭಿವೃದ್ಧಿಗೆ ಹೊಸ ಚೈತನ್ಯ ನೀಡುವ ಹಲವು ಯೋಜನೆಗಳ ಶಿಲಾನ್ಯಾಸ ಮತ್ತು ಉದ್ಘಾಟನೆ ನಡೆದಿದೆ. ಚಿಂದ್ವಾರ-ನೈನ್‌ಪುರ್-ಮಂಡ್ಲಾ ಫೋರ್ಟ್ ರೈಲು ಮಾರ್ಗದ ವಿದ್ಯುದ್ದೀಕರಣವು ಈ ಪ್ರದೇಶದ ಜನರಿಗೆ ದೆಹಲಿ-ಚೆನ್ನೈ ಮತ್ತು ಹೌರಾ-ಮುಂಬೈಗೆ ಸಂಪರ್ಕವನ್ನು ಇನ್ನಷ್ಟು ಸುಲಭಗೊಳಿಸುತ್ತದೆ. ಇದು ನಮ್ಮ ಬುಡಕಟ್ಟು ಸಹೋದರ ಸಹೋದರಿಯರಿಗೂ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ. ಇಂದು ಛಿಂದ್‌ವಾರಾದಿಂದ ನೈನ್‌ಪುರಕ್ಕೆ ಹೊಸ ರೈಲುಗಳು ಪ್ರಾರಂಭವಾಗಿವೆ. ಈ ಹೊಸ ರೈಲುಗಳು ಅನೇಕ ಪಟ್ಟಣಗಳು ಮತ್ತು ಹಳ್ಳಿಗಳಿಗೆ ನೇರವಾಗಿ ತಮ್ಮ ಜಿಲ್ಲಾ ಕೇಂದ್ರವಾದ ಚಿಂದ್ವಾರ, ಸಿಯೋನಿಗೆ ಸಂಪರ್ಕ ಕಲ್ಪಿಸಲು ಸಹಾಯ ಮಾಡುತ್ತವೆ. ಈ ರೈಲುಗಳ ಸಹಾಯದಿಂದ ನಾಗ್ಪುರ ಮತ್ತು ಜಬಲ್ಪುರಕ್ಕೆ ಹೋಗಲು ಸಹ ಸುಲಭವಾಗುತ್ತದೆ. ಇಂದು ಪ್ರಾರಂಭವಾಗಿರುವ ಹೊಸ ರೇವಾ-ಇಟ್ವಾರಿ-ಚಿಂದ್ವಾರ ರೈಲು ಸಿಯೋನಿ ಮತ್ತು ಛಿಂದ್ವಾರಾವನ್ನು ನೇರವಾಗಿ ನಾಗ್ಪುರದೊಂದಿಗೆ ಸಂಪರ್ಕಿಸುತ್ತದೆ. ಈ ಇಡೀ ಪ್ರದೇಶವು ವನ್ಯಜೀವಿಗಳಿಗೆ ಬಹಳ ಪ್ರಸಿದ್ಧವಾಗಿದೆ. ಇಲ್ಲಿ ಹೆಚ್ಚುತ್ತಿರುವ ಸಂಪರ್ಕವು ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುತ್ತದೆ ಮತ್ತು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ರೈತರು, ವಿದ್ಯಾರ್ಥಿಗಳು, ರೈಲ್ವೆಯ ದೈನಂದಿನ ಪ್ರಯಾಣಿಕರು, ಸಣ್ಣ ವ್ಯಾಪಾರಸ್ಥರು ಮತ್ತು ಅಂಗಡಿಕಾರರು ಇದರಿಂದ ಹೆಚ್ಚು ಪ್ರಯೋಜನ ಪಡೆಯುತ್ತಾರೆ. ಅದೇನೆಂದರೆ, ಡಬಲ್ ಇಂಜಿನ್ ಸರ್ಕಾರ ಇಂದು ನಿಮ್ಮ ಸಂತೋಷವನ್ನು ಇಮ್ಮಡಿಗೊಳಿಸಿದೆ.

ಸ್ನೇಹಿತರೇ,

ಇಂದು ನಾನು ಇನ್ನೊಂದು ವಿಷಯಕ್ಕಾಗಿ ಧನ್ಯವಾದ ಹೇಳಲು ಬಯಸುತ್ತೇನೆ. ಈ ಭಾನುವಾರದಂದು ‘ಮನ್ ಕಿ ಬಾತ್’ನ 100 ಸಂಚಿಕೆಗಳನ್ನು ಪೂರ್ಣಗೊಳಿಸಿದ ಬಗ್ಗೆ ಶಿವರಾಜ್ ಜಿ ಬಹಳ ವಿವರವಾಗಿ ವಿವರಿಸಿದ್ದಾರೆ. ನಿಮ್ಮ ಆಶೀರ್ವಾದ, ವಾತ್ಸಲ್ಯ ಮತ್ತು ಕೊಡುಗೆಯಿಂದಲೇ ‘ಮನ್ ಕಿ ಬಾತ್’ ಇಂದು ಈ ಸ್ಥಾನಕ್ಕೆ ತಲುಪಿದೆ. ನನ್ನ ‘ಮನ್ ಕಿ ಬಾತ್’ನಲ್ಲಿ ಮಧ್ಯಪ್ರದೇಶದ ಅನೇಕ ಜನರ ಸಾಧನೆಗಳನ್ನು ಪ್ರಸ್ತಾಪಿಸಿದ್ದೇನೆ. ಇಲ್ಲಿನ ಜನರಿಂದ ಲಕ್ಷಾಂತರ ಪತ್ರಗಳು, ಸಂದೇಶಗಳು ಬರುತ್ತಿವೆ. ಈ ಭಾನುವಾರದಂದು 'ಮನ್ ಕಿ ಬಾತ್' ನಲ್ಲಿ ನಿಮ್ಮನ್ನು ಮತ್ತೆ ಭೇಟಿಯಾಗಲು ನಾನು ಕಾತುರದಿಂದ ಕಾಯುತ್ತಿದ್ದೇನೆ. ಏಕೆಂದರೆ ಇದು ಒಂದು ಶತಕದ ಸಂಚಿಕೆ ಅಲ್ಲವೇ? ನಮ್ಮ ದೇಶದಲ್ಲಿ ಶತಕಕ್ಕೆ ತನ್ನದೇ ಆದ ಪ್ರಾಮುಖ್ಯತೆ ಇದೆ. ನೀವು ಪ್ರತಿ ಬಾರಿ ಮಾಡುವಂತೆ ಭಾನುವಾರ ನನ್ನೊಂದಿಗೆ ಸೇರಿಕೊಳ್ಳಿ. ಈ ವಿನಂತಿಯೊಂದಿಗೆ, ನಾನು ನನ್ನ ಭಾಷಣವನ್ನು ಕೊನೆಗೊಳಿಸುತ್ತೇನೆ. ಮತ್ತೊಮ್ಮೆ ನಿಮ್ಮೆಲ್ಲರಿಗೂ ಪಂಚಾಯತ್ ರಾಜ್ ದಿನದ ಶುಭಾಶಯಗಳು. ತುಂಬು ಧನ್ಯವಾದಗಳು!

ಭಾರತ್ ಮಾತಾ ಕಿ - ಜೈ!

ಭಾರತ್ ಮಾತಾ ಕಿ - ಜೈ!

ಭಾರತ್ ಮಾತಾ ಕಿ - ಜೈ!

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
India’s Biz Activity Surges To 3-month High In Nov: Report

Media Coverage

India’s Biz Activity Surges To 3-month High In Nov: Report
NM on the go

Nm on the go

Always be the first to hear from the PM. Get the App Now!
...
PM to participate in ‘Odisha Parba 2024’ on 24 November
November 24, 2024

Prime Minister Shri Narendra Modi will participate in the ‘Odisha Parba 2024’ programme on 24 November at around 5:30 PM at Jawaharlal Nehru Stadium, New Delhi. He will also address the gathering on the occasion.

Odisha Parba is a flagship event conducted by Odia Samaj, a trust in New Delhi. Through it, they have been engaged in providing valuable support towards preservation and promotion of Odia heritage. Continuing with the tradition, this year Odisha Parba is being organised from 22nd to 24th November. It will showcase the rich heritage of Odisha displaying colourful cultural forms and will exhibit the vibrant social, cultural and political ethos of the State. A National Seminar or Conclave led by prominent experts and distinguished professionals across various domains will also be conducted.