ಭಾರತ್ ಮಾತಾ ಕಿ - ಜೈ!
ಭಾರತ್ ಮಾತಾ ಕಿ - ಜೈ!
ವೇದಿಕೆಯಲ್ಲಿರುವ ಗುಜರಾತಿನ ಗೌರವಾನ್ವಿತ ರಾಜ್ಯಪಾಲರಾದ ಆಚಾರ್ಯ ದೇವವ್ರತ್ ಜಿ, ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರಭಾಯಿ ಪಟೇಲ್ ಜಿ, ಕೇಂದ್ರ ಸಂಪುಟದ ನನ್ನ ಸಹೋದ್ಯೋಗಿ ಸಿ.ಆರ್. ಪಾಟೀಲ್ ಜಿ, ಗುಜರಾತ್‌ನ ನನ್ನ ಸಹೋದರ ಸಹೋದರಿಯರೆ ಮತ್ತು ವಿಶೇಷವಾಗಿ ಅಮ್ರೇಲಿಯ ನನ್ನ ಸಹೋದರ ಸಹೋದರಿಯರೆ,
ದೀಪಾವಳಿ ಮತ್ತು ಧನ ತ್ರಯೋದಶಿಯ ಶುಭ ಸಂದರ್ಭಗಳ ಸಮಯ. ಒಂದೆಡೆ ನಮ್ಮಲ್ಲಿ ‘ಸಂಸ್ಕೃತಿ’ಯ ಆಚರಣೆ ಇದೆ. ಮತ್ತೊಂದೆಡೆ, 'ವಿಕಾಸ'(ಪ್ರಗತಿ)ದ ಆಚರಣೆ -ಇದು ಭಾರತದ ಹೊಸ ಗುರುತು. ‘ವಿರಾಸತ್’(ಪರಂಪರೆ ಸಂರಕ್ಷಿಸುವುದು) ಮತ್ತು ‘ವಿಕಾಸ್’(ಅಭಿವೃದ್ಧಿ ಪೋಷಣೆ) ಕಾರ್ಯಗಳು ಜತೆ ಜತೆಯಾಗಿ ಸಾಗುತ್ತಿವೆ. ಇಂದು, ಗುಜರಾತ್‌ಗೆ ಸಂಬಂಧಿಸಿದ ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಹಾಕುವ ಮತ್ತು ಉದ್ಘಾಟನೆ ನೆರವೇರಿಸುವ ಅವಕಾಶ ನನಗೆ ಸಿಕ್ಕಿತು. ಇಲ್ಲಿಗೆ ಬರುವ ಮೊದಲು, ನಾನು ವಡೋದರಾದಲ್ಲಿದ್ದೆ, ಅಲ್ಲಿ ನಾವು ಭಾರತದ ಈ ರೀತಿಯ ಮೊದಲ ಕಾರ್ಖಾನೆ ಉದ್ಘಾಟಿಸಿದ್ದೇವೆ, ಇದು ನಮ್ಮ ವಾಯುಪಡೆಗಾಗಿ 'ಭಾರತದಲ್ಲಿ ತಯಾರಿಸಿದ' ವಿಮಾನವನ್ನು ಗುಜರಾತ್‌ನ ವಡೋದರಾದಲ್ಲಿ ಉತ್ಪಾದಿಸಲಾಗುತ್ತದೆ. ನಮ್ಮ ಅಮ್ರೇಲಿ ಗಾಯಕ್ವಾಡ್‌ಗಳಿಗೆ ಸೇರಿದ್ದು, ವಡೋದರಾ ಕೂಡ ಗಾಯಕ್ವಾಡ್‌ಗಳಿಗೆ ಸೇರಿದೆ. ಇದು ಹೆಮ್ಮೆಯ ಕ್ಷಣ! ಇಂದು ಇಲ್ಲಿ ನನಗೆ ಭಾರತ್ ಮಾತಾ ಸರೋವರ ಉದ್ಘಾಟಿಸುವ ಅವಕಾಶ ಸಿಕ್ಕಿತು. ಇದೇ ವೇದಿಕೆಯಿಂದ ನಾವು ನೀರು, ರಸ್ತೆಗಳು ಮತ್ತು ರೈಲ್ವೆಗೆ ಸಂಬಂಧಿಸಿದ ಬಹು ದೀರ್ಘಾವಧಿಯ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದೇವೆ, ಉದ್ಘಾಟನೆ ಮಾಡಿದ್ದೇವೆ. ಈ ಎಲ್ಲಾ ಯೋಜನೆಗಳು ಸೌರಾಷ್ಟ್ರ ಮತ್ತು ಕಚ್‌ನ ಜನರ ಜೀವನ ಸರಾಗಗೊಳಿಸುವ ಉದ್ದೇಶ ಹೊಂದಿವೆ. ಈ ಎಲ್ಲಾ ಯೋಜನೆಗಳು ಅಭಿವೃದ್ಧಿಯನ್ನು ಮುಂದಕ್ಕೆ ಕೊಂಡೊಯ್ಯುತ್ತವೆ. ನಾವು ಇಂದು ಉದ್ಘಾಟಿಸಿ ಶಂಕುಸ್ಥಾಪನೆ ನೆರವೇರಿಸಿದ ಯೋಜನೆಗಳು ನಮ್ಮ ರೈತರ ಕಲ್ಯಾಣಕ್ಕಾಗಿ, ಕೃಷಿಯಲ್ಲಿರುವವರ ಏಳಿಗೆಗಾಗಿ ಮತ್ತು ನಮ್ಮ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುತ್ತವೆ. ಈ ಅನೇಕ ಯೋಜನೆಗಳಿಗಾಗಿ ಕಚ್, ಸೌರಾಷ್ಟ್ರ ಮತ್ತು ಗುಜರಾತ್‌ನಲ್ಲಿರುವ ನನ್ನ ಎಲ್ಲಾ ಸಹೋದರ ಸಹೋದರಿಯರಿಗೆ ನನ್ನ ಶುಭಾಶಯಗಳು.
ಸ್ನೇಹಿತರೆ,
ಸೌರಾಷ್ಟ್ರ ಮತ್ತು ಅಮ್ರೇಲಿ ಭೂಮಿ ಅನೇಕ ರತ್ನಗಳಿಗೆ ಜನ್ಮ ನೀಡಿದೆ. ಐತಿಹಾಸಿಕವಾಗಿ, ಸಾಂಸ್ಕೃತಿಕವಾಗಿ, ಸಾಹಿತ್ಯದಲ್ಲಿ ಅಥವಾ ರಾಜಕೀಯದಲ್ಲಿ, ಅಮ್ರೇಲಿಯ ಗತಕಾಲವು ವೈಭವಯುತವಾಗಿದೆ. ಇದು ನಮಗೆ ಯೋಗಿ ಜೀ ಮಹಾರಾಜರನ್ನು ನೀಡಿದ ನಾಡು, ಅದೇ ಭೋಜ ಭಗವಂತನನ್ನು ನೀಡಿದ ನಾಡು, ಗುಜರಾತಿನಲ್ಲಿ ದೂಲ ಭಯ ಕಾಗ್ನ ಉಲ್ಲೇಖವಿಲ್ಲದೆ ಒಂದೇ ಒಂದು ಸಂಜೆ ಕಳೆದು ಹೋಗುವುದು ಅಪರೂಪ. ಪ್ರತಿಯೊಂದು ಜಾನಪದ ಕಥೆ ಮತ್ತು ಕವನಗಳು ಕಾಗ್ ಬಾಪು ಅವರನ್ನು ನೆನಪಿಸಿಕೊಳ್ಳುತ್ತವೆ. ಇಂದು, ಕವಿ ಕಲಾಪಿ ಮತ್ತು ಅವರ ಪ್ರಸಿದ್ಧ ಸಾಲು “ರೇ ಪಂಖಿದ ಸುಖಧಿ ಚಾಂಜೋ”(ಮುಕ್ತವಾಗಿ ಹಾರಿ, ಪುಟ್ಟ ಹಕ್ಕಿ) ಅವರ ನೆನಪುಗಳg ಇಲ್ಲಿನ ಮಣ್ಣು ನೀರಿನೊಂದಿಗೆ ಹಾಸುಹೊಕ್ಕಾಗಿವೆ. ಇದು ಅಮ್ರೇಲಿ, ಕೆ. ಲಾಲ್, ಕವಿ ರಮೇಶಭಾಯ್ ಪಾರೇಖ್ ಮತ್ತು ಗುಜರಾತ್‌ನ ನಮ್ಮ ಮೊದಲ ಮುಖ್ಯಮಂತ್ರಿ ಜೀವರಾಜ್‌ಭಾಯ್ ಮೆಹ್ತಾ ಅವರನ್ನು ಹುಟ್ಟುಹಾಕಿದ ಮಾಂತ್ರಿಕ ಭೂಮಿ. ಇಲ್ಲಿನ ಮಕ್ಕಳು ಸವಾಲುಗಳನ್ನು ಎದುರಿಸಿ, ಸಂಕಷ್ಟಗಳನ್ನು ಎದುರಿಸಿ ಗಟ್ಟಿಯಾಗಿ ನಿಂತಿದ್ದಾರೆ. ಪ್ರಕೃತಿ ವಿಕೋಪಕ್ಕೆ ತಲೆಬಾಗುವ ಬದಲು, ಶಕ್ತಿ ಸಾಮರ್ಥ್ಯದ ಮಾರ್ಗ ಆರಿಸಿಕೊಂಡವರು ಈ ನೆಲದ ಮಕ್ಕಳು. ಅವರಲ್ಲಿ ಕೆಲವರು ತಮ್ಮ ಜಿಲ್ಲೆಯನ್ನು ಮಾತ್ರವಲ್ಲದೆ, ಗುಜರಾತ್ ಮತ್ತು ಭಾರತವೇ ಹೆಮ್ಮೆಪಡುವ ಉದ್ಯಮಿಗಳಾಗಿ ಹೊರಹೊಮ್ಮಿದ್ದಾರೆ. ಸಮಾಜಕ್ಕಾಗಿ ತಮ್ಮ ಕೈಲಾದಷ್ಟು ಮಾಡಲು ಪ್ರಯತ್ನಿಸಿದ್ದಾರೆ. ನಮ್ಮ ಧೋಲಾಕಿಯಾ ಕುಟುಂಬವು ಈ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿದೆ.
ಸರ್ಕಾರದ 80/20 ನೀರಿನ ಯೋಜನೆಯೊಂದಿಗೆ, ಗುಜರಾತ್‌ನ ಬಿಜೆಪಿ ಸರ್ಕಾರವು ಮೊದಲಿನಿಂದಲೂ ನೀರಿಗೆ ಆದ್ಯತೆ ನೀಡಿದೆ. ಈ ಪ್ರಯತ್ನಗಳಲ್ಲಿ 80/20 ಯೋಜನೆ ಮತ್ತು ಸಾರ್ವಜನಿಕ ಸಹಭಾಗಿತ್ವ, ಚೆಕ್ ಡ್ಯಾಂಗಳನ್ನು ನಿರ್ಮಿಸುವುದು, ಕೃಷಿ ಹೊಂಡಗಳನ್ನು ನಿರ್ಮಿಸುವುದು, ಕೆರೆಗಳನ್ನು ಆಳಗೊಳಿಸುವುದು, ನೀರಿನ ದೇವಾಲಯಗಳನ್ನು ನಿರ್ಮಿಸುವುದು, ಕೆರೆಗಳ ಹೂಳು ತೋಡುವುದು ಇತ್ಯಾದಿ. ನಾನು ಮುಖ್ಯಮಂತ್ರಿಯಾಗಿ ದೆಹಲಿಯಲ್ಲಿ ಸಭೆಗಳಲ್ಲಿ ಭಾಗವಹಿಸಲು ಹೋದಾಗ ಮತ್ತು ಅದು ಹೇಗೆ ಮಹತ್ವದ್ದಾಗಿತ್ತು ಎಂಬುದು ನನಗೆ ನೆನಪಿದೆ. ನಮ್ಮ ಬಜೆಟ್‌ನ ಬಹುತೇಕ ಭಾಗವು ಜಲಸಂಪನ್ಮೂಲಕ್ಕೆ ಹೋಗುತ್ತದೆ, ಇತರ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ನಾಯಕರು ನನ್ನನ್ನು ಆಶ್ಚರ್ಯದಿಂದ ನೋಡುತ್ತಿದ್ದರು. ಗುಜರಾತಿನಲ್ಲಿ ಅನೇಕ ಪ್ರತಿಭೆಗಳಿದ್ದು, ಒಮ್ಮೆ ನೀರು ಸಿಕ್ಕರೆ ಗುಜರಾತ್ ಅಭಿವೃದ್ಧಿ ಹೊಂದುತ್ತದೆ ಎಂದು ನಾನು ಅವರಿಗೆ ಹೇಳುತ್ತೇನೆ. ಈ ಸಂಪ್ರದಾಯ ನಮ್ಮ ಗುಜರಾತ್ ನದ್ದು. 80/20 ಯೋಜನೆಗೆ ಅನೇಕ ಜನರು ಸೇರಿದ್ದಾರೆ. ಸಮುದಾಯಗಳು ಮತ್ತು ಹಳ್ಳಿಗಳು ಸೇರಿದಂತೆ ಎಲ್ಲರೂ ಭಾಗವಹಿಸಿದ್ದರು. ನನ್ನ ಧೋಲಾಕಿಯಾ ಕುಟುಂಬವು ಅದನ್ನು ದೊಡ್ಡ ಪ್ರಮಾಣದಲ್ಲಿ ಅಳವಡಿಸಿಕೊಂಡಿತು, ನದಿಗಳಿಗೆ ಜೀವ ತುಂಬಿತು. ನದಿಗಳನ್ನು ಜೀವಂತವಾಗಿಡಲು ಇದು ಉತ್ತಮ ಮಾರ್ಗವಾಗಿದೆ. ನಾವು ನರ್ಮದಾ ನದಿಯಿಂದ 20 ನದಿಗಳಿಗೆ ಸಂಪರ್ಕ ಹೊಂದಿದ್ದೇವೆ. ನದಿಗಳಲ್ಲಿ ಸಣ್ಣ ಕೊಳಗಳನ್ನು ರೂಪಿಸುವ ಕಲ್ಪನೆಯು ನಮ್ಮ ಮನಸ್ಸಿಗೆ ಬಂದಿತು, ಆದ್ದರಿಂದ ನಾವು ಮೈಲುಗಳಷ್ಟು ದೂರ ನೀರನ್ನು ಸಂರಕ್ಷಿಸಬಹುದು. ಒಮ್ಮೆ ನೀರು ನೆಲಕ್ಕೆ ನುಸುಳಿದರೆ ಅದು ಅಮೃತವಾಗಿ ಬದಲಾಗದೆ ಉಳಿಯುವುದಿಲ್ಲ ಸಹೋದರರೆ. ಗುಜರಾತ್, ಸೌರಾಷ್ಟ್ರ ಅಥವಾ ಕಚ್ ಜನರಿಗೆ ನೀರಿನ ಮಹತ್ವ ವಿವರಿಸಲು ಪುಸ್ತಕಗಳ ಅಗತ್ಯವಿಲ್ಲ. ಅವರು ಕಷ್ಟಗಳನ್ನು ನೇರವಾಗಿ ಅನುಭವಿಸಿದ್ದಾರೆ. ಅವರು ತಮ್ಮ ಸಮಸ್ಯೆಗಳನ್ನು ನಿಖರವಾಗಿ ತಿಳಿದಿದ್ದಾರೆ. ಯಾವ ರೀತಿಯ ಸಮಸ್ಯೆಗಳಿವೆ ಎಂದು ಅವರಿಗೆ ತಿಳಿದಿದೆ. ಸೌರಾಷ್ಟ್ರ ಮತ್ತು ಕಚ್ ಜನರು ನೀರಿನ ಕೊರತೆಯಿಂದ ವಲಸೆ ಹೋಗುವುದನ್ನು ನಾವು ನೋಡಿದ್ದೇವೆ. ನಗರಗಳಲ್ಲಿ 8-8 ಮಂದಿ ಬಲವಂತವಾಗಿ ಕೊಠಡಿ ಹಂಚಿಕೊಳ್ಳುತ್ತಿದ್ದ ದಿನಗಳನ್ನು ನೋಡಿದ್ದೇವೆ. ಈಗ, ನಾವು ದೇಶದ ಮೊದಲ ಜಲಶಕ್ತಿ ಸಚಿವಾಲಯವನ್ನು ಸ್ಥಾಪಿಸಿದ್ದೇವೆ. ಏಕೆಂದರೆ ಅದರ ಪ್ರಾಮುಖ್ಯತೆ ನಮಗೆ ತಿಳಿದಿದೆ. ನರ್ಮದೆಯ ನೀರು ಪ್ರತಿ ಹಳ್ಳಿಗೂ ತಲುಪುತ್ತಿರುವಂತೆ ಹಲವು ವರ್ಷಗಳ ಪ್ರಯತ್ನದ ಫಲವನ್ನು ಇಂದು ಕಾಣುತ್ತಿದ್ದೇವೆ.
ನರ್ಮದಾ ಪರಿಕ್ರಮದಿಂದ(ಪ್ರದಕ್ಷಿಣೆ) ಒಬ್ಬರು 'ಪುಣ್ಯ' ಗಳಿಸುವ ಸಮಯ ನನಗೆ ನೆನಪಿದೆ. ಯುಗ ಬದಲಾಗಿದೆ, ತಾಯಿ ನರ್ಮದಾ ಸ್ವತಃ ಹಳ್ಳಿಯಿಂದ ಹಳ್ಳಿಗೆ ಹೋಗಿ 'ಪುಣ್ಯ' ಮತ್ತು ನೀರು ಹಂಚುತ್ತಿದ್ದಾಳೆ. ನಾನು ಪ್ರಾರಂಭಿಸಿದ ಸಾವ್ನಿ(ಸೌನಿ) ಯೋಜನೆಯಂತಹ ಜಲ ಸಂರಕ್ಷಣಾ ಯೋಜನೆಗಳು ಅಪನಂಬಿಕೆ ಮತ್ತು ಸಂದೇಹವನ್ನು ಎದುರಿಸಿದವು. ಇದು ಸಾಧ್ಯ ಎಂದು ಯಾರೂ ನಂಬಲು ಸಿದ್ಧರಿರಲಿಲ್ಲ. ಕೆಲವು ವಂಚಕರು ಇದನ್ನು ಮೋದಿ ಅವರು ಚುನಾವಣೆಗೆ ಮುನ್ನ ಮಾಡಿದ ಪ್ರಚಾರದ ಸ್ಟಂಟ್ ಎಂದು ಟೀಕಿಸಿದರು. ಆದರೆ ಈ ಎಲ್ಲಾ ಯೋಜನೆಗಳು ಕಚ್ ಮತ್ತು ಸೌರಾಷ್ಟ್ರಕ್ಕೆ ಹೊಸ ಜೀವನ ನೀಡಿವೆ, ಹಸಿರು ಹೊಲಗಳ ಕನಸುಗಳು ನನಸಾಗಲು ಜನರಿಗೆ ಅವಕಾಶ ಮಾಡಿಕೊಟ್ಟಿವೆ. ಪವಿತ್ರಾತ್ಮದಿಂದ ಮಾಡಿದ ನಿರ್ಣಯವು ಹೇಗೆ ನೆರವೇರುತ್ತದೆ ಎಂಬುದಕ್ಕೆ ಇದು ಒಂದು ಉದಾಹರಣೆಯಾಗಿದೆ. ಮಾರುತಿ ಕಾರು ಹಾದು ಹೋಗುವಷ್ಟು ದೊಡ್ಡ ಪೈಪ್‌ಗಳನ್ನು ಹಾಕುವ ಬಗ್ಗೆ ನಾನು ಮಾತನಾಡಿದ್ದು ನನಗೆ ನೆನಪಿದೆ, ಜನರು ಈ ಮಾತಿಗೆ ಆಶ್ಚರ್ಯಚಕಿತರಾದರು. ಇಂದು, ಆ ಪೈಪ್‌ಗಳು ಗುಜರಾತ್‌ನಾದ್ಯಂತ ನೀರು ಸಾಗಿಸುತ್ತಿವೆ. ಇದನ್ನೇ ಗುಜರಾತ್ ಸಾಧಿಸಿದೆ. ನಾವು ನದಿಯ ಆಳವನ್ನು ಹೆಚ್ಚಿಸಬೇಕಾಗಿದೆ, ಆದ್ದರಿಂದ ನಾವು ಚೆಕ್ ಡ್ಯಾಂಗಳನ್ನು ನಿರ್ಮಿಸಬೇಕು ಅಥವಾ ಕನಿಷ್ಠ ಬ್ಯಾರೇಜ್ ಗಳನ್ನು ನಿರ್ಮಿಸಬೇಕು. ನೀರನ್ನು ಉಳಿಸಲು ನಾವು ಆ ಮಟ್ಟಕ್ಕೆ ಹೋಗಬೇಕಾಗಿದೆ. ಗುಜರಾತ್‌ನ ಜನರು ನೀರಿನ ಸಂರಕ್ಷಣೆಯನ್ನು ಮನಃಪೂರ್ವಕವಾಗಿ ಸ್ವೀಕರಿಸಿದ್ದಾರೆ. ಇದು ಕುಡಿಯುವ ನೀರಿನ ಗುಣಮಟ್ಟ, ಆರೋಗ್ಯ ಮತ್ತು ಪ್ರತಿ ಮನೆ ಮತ್ತು ಜಮೀನಿಗೆ ನೀರು ಸರಬರಾಜು ಮಾಡುವ ಮಹತ್ವಾಕಾಂಕ್ಷೆಯ ಗುರಿಯ ಸುಧಾರಣೆಗೆ ಕಾರಣವಾಗಿದೆ. ಇದು ಅತ್ಯಂತ ತೃಪ್ತಿಕರವಾದ ಸತ್ಯ. ಇಂದಿನ 18-20 ವರ್ಷ ವಯಸ್ಸಿನ ಯುವಕರಿಗೆ ನೀರಿಲ್ಲದೆ ಜೀವನ ಎಷ್ಟು ಕಷ್ಟ ಎಂದು ತಿಳಿದಿಲ್ಲ. ಈ ಹಿಂದೆ ತಾಯಂದಿರು ಪಾತ್ರೆಗಳೊಂದಿಗೆ ಹಲವಾರು ಕಿಲೋಮೀಟರ್ ದೂರ ನಡೆದು ನೀರು ತರಬೇಕಾಗಿತ್ತು. ಆದರೆ ಈಗ ಸ್ನಾನ ಮಾಡಲು ನಲ್ಲಿ ತಿರುಗಿಸುವುದು ಅವರಿಗೆ ದೈನಂದಿನ ವಾಡಿಕೆಯಾಗಿದೆ.
ಗುಜರಾತ್ ಮಾಡಿರುವ ಕೆಲಸ ಈಗ ಇಡೀ ದೇಶಕ್ಕೆ ಮಾದರಿ ಎಂದು ಸಾಬೀತಾಗಿದೆ. ಗುಜರಾತಿನ ಪ್ರತಿ ಮನೆ ಮತ್ತು ಪ್ರತಿಯೊಂದು ಕ್ಷೇತ್ರಕ್ಕೂ ನೀರು ತರುವ ಅಭಿಯಾನವನ್ನು ಈಗಲೂ ಅಷ್ಟೇ ಸಮರ್ಪಣಾ ಭಾವದಿಂದ ಮತ್ತು ಪರಿಶುದ್ಧತೆಯಿಂದ ನಡೆಸಲಾಗುತ್ತಿದೆ. ಇಂದು ಯೋಜನೆಗಳು ಉದ್ಘಾಟನೆಯಾಗುತ್ತಿವೆ ಮತ್ತು ಲಕ್ಷಾಂತರ ಜನರಿಗೆ ಪ್ರಯೋಜನವಾಗುವ ಭರವಸೆಯೊಂದಿಗೆ ಅವುಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ನವ್ಡಾ-ಚಾವಂದ್ ಬಲ್ಕ್ ಪೈಪ್‌ಲೈನ್ ಯೋಜನೆಯು ಸುಮಾರು 1,300 ಹಳ್ಳಿಗಳಿಗೆ ಮತ್ತು 35ಕ್ಕೂ ಹೆಚ್ಚಿನ ಪಟ್ಟಣಗಳಿಗೆ ನೀರನ್ನು ತರುತ್ತದೆ. ಅಮ್ರೇಲಿ, ಬೊಟಾಡ್, ರಾಜ್‌ಕೋಟ್, ಜುನಾಗಢ್ ಮತ್ತು ಪೋರ್‌ಬಂದರ್‌ನ ಜನರು ಪ್ರತಿದಿನ ಹೆಚ್ಚುವರಿ 30 ಕೋಟಿ ಲೀಟರ್ ನೀರಿನಿಂದ ಪ್ರಯೋಜನ ಪಡೆಯುತ್ತಾರೆ. ಇಂದು 2ನೇ ಹಂತದ ಪಾಸ್ವಿ ಆಗ್ಮೆಂಟೇಶನ್ ನೀರು ಸರಬರಾಜು ಯೋಜನೆಗೆ ಶಂಕುಸ್ಥಾಪನೆ ಮಾಡಲಾಗಿದೆ. ಮಹುವ, ತಲಜಾ ಮತ್ತು ಪಲಿತಾನ 3 ತಾಲೂಕುಗಳು ಈ ಯೋಜನೆಯಿಂದ ಹೆಚ್ಚು ಪ್ರಯೋಜನ ಪಡೆಯುತ್ತವೆ. ಪಾಲಿಟಾನಾ ರಾಜ್ಯದ ಆರ್ಥಿಕತೆಯನ್ನು ಸಮರ್ಥಿಸುವ ಮಹತ್ವದ ಯಾತ್ರಾಸ್ಥಳ ಮತ್ತು ಪ್ರವಾಸಿ ತಾಣವಾಗಿದೆ. ಈ ಯೋಜನೆಗಳಿಂದ 100ಕ್ಕೂ ಹೆಚ್ಚು ಹಳ್ಳಿಗಳು ನೇರವಾಗಿ ಪ್ರಯೋಜನ ಪಡೆಯುತ್ತವೆ.
ಸ್ನೇಹಿತರೆ,
ಇಂದು ನೀರಿನ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯು ಸರ್ಕಾರ ಮತ್ತು ಸಮಾಜದ ನಡುವಿನ ಪಾಲುದಾರಿಕೆಯನ್ನು ಸಂಕೇತಿಸುತ್ತದೆ. ಇದು ಗಮನಾರ್ಹ ಉದಾಹರಣೆಯಾಗಿದೆ. ನಾವು ಸಾರ್ವಜನಿಕ ಭಾಗವಹಿಸುವಿಕೆಗೆ ಒತ್ತು ನೀಡುತ್ತೇವೆ, ಏಕೆಂದರೆ ಸಾಮೂಹಿಕ ಪ್ರಯತ್ನಗಳ ಮೂಲಕ ಮಾತ್ರ ನೀರಿನ ಉಪಕ್ರಮಗಳು ಯಶಸ್ವಿಯಾಗುತ್ತವೆ. ನಾವು ಸ್ವಾತಂತ್ರ್ಯದ 75ನೇ ವರ್ಷ ಆಚರಿಸಿದಾಗ, ಸರ್ಕಾರವು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಬಹುದಿತ್ತು, ಅವುಗಳ ಮೇಲೆ ಮೋದಿ ಅವರ ಹೆಸರಿನ ಫಲಕಗಳನ್ನು ಹಾಕಬಹುದಿತ್ತು, ಆದರೆ ನಾವು ಅದನ್ನು ಮಾಡಬಾರದು ಎಂದು ನಿರ್ಧರಿಸಿದ್ದೇವೆ. ಬದಲಾಗಿ, ನಾವು ಹಳ್ಳಿಗಳಲ್ಲಿ "ಅಮೃತ ಸರೋವರ" (ಕೆರೆಗಳು) ನಿರ್ಮಿಸಲು ಯೋಜನೆ ಪ್ರಾರಂಭಿಸಿದ್ದೇವೆ, ಪ್ರತಿ ಜಿಲ್ಲೆಯಲ್ಲಿ 75 ಕೆರೆಗಳನ್ನು ನಿರ್ಮಿಸುವ ಗುರಿ ಹೊಂದಿದ್ದೇವೆ. ಇತ್ತೀಚಿನ ಮಾಹಿತಿಯ ಪ್ರಕಾರ, ಅಂತಹ ಸುಮಾರು 75,000 ಕೆರೆಗಳ ಕೆಲಸ ನಡೆಯುತ್ತಿದೆ, 60,000ಕ್ಕೂ ಹೆಚ್ಚು ಕೆರೆಗಳು ಈಗಾಗಲೇ ಜೀವದಿಂದ ತುಂಬಿವೆ. ಭವಿಷ್ಯದ ಪೀಳಿಗೆಗೆ ಈ ರೀತಿಯಲ್ಲಿ ಸೇವೆ ಸಲ್ಲಿಸುವುದು ನೆರೆಯ ಪ್ರದೇಶಗಳಲ್ಲಿ ನೀರಿನ ಮಟ್ಟ ಹೆಚ್ಚಿಸಲು ಗಮನಾರ್ಹವಾಗಿ ಸಹಾಯ ಮಾಡಿದೆ. ನಾವು "ಕ್ಯಾಚ್ ದಿ ರೈನ್" ಅಭಿಯಾನ ನಡೆಸಿದ್ದೇವೆ. ನಾನು ದೆಹಲಿಗೆ ಹೋದಾಗ, ಈ ಅನುಭವವು ತುಂಬಾ ಉಪಯುಕ್ತವಾಗಿದೆ. ಇಂದು ಇದು ಯಶಸ್ವಿ ಮಾದರಿಯಾಗಿದೆ. ನೀರಿನ ಸಂರಕ್ಷಣೆ ಉತ್ತೇಜಿಸಲು, ಅದು ಕುಟುಂಬ, ಗ್ರಾಮ ಅಥವಾ ಕಾಲೋನಿ ಮಟ್ಟದಲ್ಲಿರಲಿ, ನೀರನ್ನು ಉಳಿಸಲು ಜನರನ್ನು ಪ್ರೇರೇಪಿಸಬೇಕು. ಗುಜರಾತ್‌ನಿಂದ ನೀರು ನಿರ್ವಹಣೆಯಲ್ಲಿ ತಮ್ಮ ಪರಿಣತಿ ತಂದಿರುವ ಸಿ.ಆರ್. ಪಾಟೀಲ್ ಅವರು ಈಗ ನಮ್ಮ ಸಂಪುಟದಲ್ಲಿ ಇರುವುದು ನಮ್ಮ ಅದೃಷ್ಟ. ಈಗ ಇಡೀ ದೇಶದಲ್ಲಿ ಇದನ್ನು ಅನುಸರಿಸಲಾಗುತ್ತಿದೆ. ಅವರು "ಕ್ಯಾಚ್ ದಿ ರೈನ್" ಅಭಿಯಾನವನ್ನು ತಮ್ಮ ಪ್ರಮುಖ ಉಪಕ್ರಮಗಳಲ್ಲಿ ಒಂದನ್ನಾಗಿ ಮಾಡಿದ್ದಾರೆ. ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಬಿಹಾರದಂತಹ ರಾಜ್ಯಗಳಲ್ಲಿ ಸಾರ್ವಜನಿಕ ಒಳಗೊಳ್ಳುವಿಕೆಯೊಂದಿಗೆ ಸಾವಿರಾರು ರೀಚಾರ್ಜ್ ಬಾವಿಗಳನ್ನು ಈಗಾಗಲೇ ನಿರ್ಮಿಸಲಾಗಿದೆ. ಇತ್ತೀಚೆಗೆ, ದಕ್ಷಿಣ ಗುಜರಾತ್‌ನ ಸೂರತ್‌ನಲ್ಲಿ ವೀಡಿಯೊ ಕಾನ್ಫರೆನ್ಸ್ ಕಾರ್ಯಕ್ರಮ ಸಂದರ್ಭದಲ್ಲಿ, ಜನರು ತಮ್ಮ ಪೂರ್ವಜರ ಹಳ್ಳಿಗಳಲ್ಲಿ ರೀಚಾರ್ಜ್ ಬಾವಿಗಳನ್ನು ನಿರ್ಮಿಸುವುದನ್ನು ನಾವು ನೋಡಿದ್ದೇವೆ, ಅದು ಹಳ್ಳಿಗೆ ಕೆಲವು ಕುಟುಂಬ ಸಂಪತ್ತನ್ನು ಮರುಸ್ಥಾಪಿಸುತ್ತದೆ. ಇದೊಂದು ಅತ್ಯಾಕರ್ಷಕ ಹೊಸ ಉಪಕ್ರಮ. ಹಳ್ಳಿಯ ನೀರನ್ನು ಗ್ರಾಮದೊಳಗೆ ಮತ್ತು ಗಡಿಯ ನೀರನ್ನು ಗಡಿಯೊಳಗೆ ಹಿಡಿದಿಡುವುದು. ಈ ಅಭಿಯಾನಗಳು ಮಹತ್ವದ ಹೆಜ್ಜೆ ಗುರುತುಗಳಾಗಿವೆ. ಸ್ಥಳೀಯ ನೀರು ಉಳಿಸಿಕೊಳ್ಳುವ ಈ ಪ್ರಯತ್ನಗಳು ವಿಶಾಲ ಕಾರ್ಯಾಚರಣೆಯ ಭಾಗವಾಗಿದೆ, ಕಡಿಮೆ ಮಳೆ ಹೊಂದಿರುವ ಇತರೆ ದೇಶಗಳಲ್ಲಿ ಇದು ಕಂಡುಬರುತ್ತದೆ, ಅಲ್ಲಿ ಅವರು ಪ್ರತಿ ಹನಿ ನೀರನ್ನು ಸಂರಕ್ಷಿಸುತ್ತಾರೆ. ನೀವು ಪೋರಬಂದರ್‌ನಲ್ಲಿರುವ ಮಹಾತ್ಮ ಗಾಂಧಿ ವರ ಮನೆಗೆ ಭೇಟಿ ನೀಡಿದರೆ, 200 ವರ್ಷಗಳಷ್ಟು ಹಳೆಯದಾದ ಭೂಗತ ನೀರಿನ ಸಂಗ್ರಹ ಟ್ಯಾಂಕ್ ಕಾಣಬಹುದು, ಇದು ಶತಮಾನಗಳ ಹಿಂದೆ ನಮ್ಮ ಪೂರ್ವಜರು ನೀರನ್ನು ಹೇಗೆ ಗೌರವಿಸುತ್ತಿದ್ದರು ಎಂಬುದನ್ನು ತೋರಿಸುತ್ತದೆ.
ಸ್ನೇಹಿತರೆ,
ನೀರಿನ ಲಭ್ಯತೆ ಕೃಷಿಯನ್ನು ಸುಲಭಗೊಳಿಸಿದೆ. ನಮ್ಮ ಧ್ಯೇಯವಾಕ್ಯ "ಪ್ರತಿ ಹನಿ ಹೆಚ್ಚು ಬೆಳೆ". ಗುಜರಾತಿನಲ್ಲಿ ನಾವು ಸೂಕ್ಷ್ಮ ನೀರಾವರಿ, ವಿಶೇಷವಾಗಿ ಸ್ಪ್ರಿಂಕ್ಲರ್‌ಗಳನ್ನು ಉತ್ತೇಜಿಸಿದ್ದೇವೆ, ಇದನ್ನು ಗುಜರಾತ್‌ನ ರೈತರು ಸ್ವಾಗತಿಸಿದರು. ಇಂದು ನರ್ಮದಾ ನೀರು ಎಲ್ಲೆಲ್ಲಿ ತಲುಪಿದೆಯೋ ಅಲ್ಲೆಲ್ಲಾ ಒಂದು ಕಾಲದಲ್ಲಿ ಒಂದೇ ಒಂದು ಬೆಳೆ ಬೆಳೆಯುವುದು ಕಷ್ಟವಾಗಿದ್ದ ಪ್ರದೇಶಗಳಲ್ಲಿ ರೈತರು 3 ಬೆಳೆ ತೆಗೆಯಬಹುದು. ಇದು ಮನೆಯವರಿಗೆ ಸಂತೋಷ ಮತ್ತು ಸಮೃದ್ಧಿ ತಂದಿದೆ. ಜಫ್ರಾಬಾದ್‌ನಿಂದ ಹತ್ತಿ, ಶೇಂಗಾ, ಎಳ್ಳು, ರಾಗಿ ಮತ್ತು ಬಾಜ್ರಾ(ಮುತ್ತು ರಾಗಿ)ದಂತಹ ಬೆಳೆಗಳೊಂದಿಗೆ ಅಮ್ರೇಲಿ ಜಿಲ್ಲೆ ಕೃಷಿಯಲ್ಲಿ ಮುನ್ನಡೆಯುತ್ತಿದೆ. ದೆಹಲಿಯಲ್ಲಿ ನನ್ನ ಸಭೆಗಳಲ್ಲಿ ನಾನು ಈ ಉಪಕ್ರಮವನ್ನು ಪ್ರಶಂಸಿಸುತ್ತೇನೆ. ಅಮ್ರೇಲಿಯ ಕೇಸರಿ ಮಾವು ಇದೀಗ ಜಿಐ ಟ್ಯಾಗ್ ಪಡೆದುಕೊಂಡಿದ್ದು, ವಿಶ್ವಾದ್ಯಂತ ವಿಶಿಷ್ಟ ಗುರುತು ನೀಡಿದೆ. ಅಮ್ರೇಲಿ ತನ್ನ ನೈಸರ್ಗಿಕ ಕೃಷಿಗಾಗಿ ಮನ್ನಣೆ ಪಡೆಯುತ್ತಿದೆ. ನಮ್ಮ ರಾಜ್ಯಪಾಲರು ಈ ವಿಷಯದಲ್ಲಿ ಕಾರ್ಯಾಚರಣೆ ಮಾದರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅಮ್ರೇಲಿಯ ರೈತರು ಈ ಪ್ರಯೋಗಕ್ಕೆ ಸಮರ್ಪಿತರಾಗಿದ್ದಾರೆ, ತ್ವರಿತ, ಕಾರ್ಯಸಾಧು ಬೆಳೆಗಳನ್ನು ಬೆಳೆಯಲು ಬದ್ಧರಾಗಿದ್ದಾರೆ. ನಮ್ಮ ಹಾಲೋಲ್‌ನಲ್ಲಿ ನೈಸರ್ಗಿಕ ಕೃಷಿಗಾಗಿ ವಿವಿಧ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲಾಗಿದೆ. ಆ ವಿಶ್ವವಿದ್ಯಾಲಯದ ಅಡಿ, ನೈಸರ್ಗಿಕ ಕೃಷಿಗಾಗಿ ಮೊದಲ ಕಾಲೇಜು ಅಮ್ರೇಲಿಯಲ್ಲಿ ಸ್ಥಾಪಿಸಲಾಗಿದೆ. ಇದಕ್ಕೆ ಕಾರಣ ಇಲ್ಲಿನ ರೈತರು ಈ ಹೊಸ ಪ್ರಯೋಗಕ್ಕೆ ಮುಂದಾಗಿರುವುದು. ಆದ್ದರಿಂದ, ಅವರು ಇಲ್ಲಿ ಪ್ರಯೋಗಗಳನ್ನು ನಡೆಸಿದರೆ, ಅವರ ಬೆಳೆಗಳು ತಕ್ಷಣವೇ ಸಿದ್ಧವಾಗುತ್ತವೆ. ರೈತರು ಪಶುಸಂಗೋಪನೆಯಲ್ಲಿ ವಿಶೇಷವಾಗಿ ಜಾನುವಾರು ಸಾಕಣೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳುವುದು, ನೈಸರ್ಗಿಕ ಕೃಷಿಯಿಂದ ಪ್ರಯೋಜನ ಪಡೆಯುವುದು ನಮ್ಮ ಗುರಿಯಾಗಿದೆ. ನಮ್ಮ ಅಮ್ರೇಲಿಯಲ್ಲಿ ಡೇರಿ ಉದ್ಯಮಕ್ಕೆ ಸಂಬಂಧಿಸಿದಂತೆ, ಡೇರಿ ಸ್ಥಾಪಿಸುವುದನ್ನು ಅಪರಾಧವೆಂದು ಪರಿಗಣಿಸುವ ಕಾನೂನುಗಳು ಇದ್ದವು ಎಂಬುದು ನನಗೆ ನೆನಪಿದೆ. ನಾವು ಡೇರಿ ಕೃಷಿಯ ಮೇಲಿನ ನಿರ್ಬಂಧಿತ ಕಾನೂನುಗಳನ್ನು ತೆಗೆದುಹಾಕಿದ್ದೇವೆ, ಅಮ್ರೇಲಿಯಲ್ಲಿ ಡೇರಿ ಉದ್ಯಮ ಸ್ಥಾಪಿಸಲು ಅನುಕೂಲ ಮಾಡಿಕೊಟ್ಟಿದ್ದೇವೆ, ಸಹಕಾರಿ ಪ್ರಯತ್ನಗಳ ಮೂಲಕ ತ್ವರಿತ ಬೆಳವಣಿಗೆಗೆ ಇದು ಕಾರಣವಾಯಿತು. 2007ರಲ್ಲಿ ಅಮರ್ ಡೇರಿ ಸ್ಥಾಪನೆಯಾದಾಗ ಕೇವಲ 25 ಸಹಕಾರಿ ಸಂಘಗಳು ಅದರ ಭಾಗವಾಗಿದ್ದವು. ಇಂದು 700ಕ್ಕೂ ಹೆಚ್ಚು ಹಳ್ಳಿಗಳು ಸೇರಿಕೊಂಡಿವೆ, ಪ್ರತಿದಿನ ಸುಮಾರು 1.25 ಲಕ್ಷ ಲೀಟರ್ ಹಾಲು ಸಂಗ್ರಹಿಸಲಾಗುತ್ತಿದೆ. ಇದು ನಿಜವಾದ ಕ್ರಾಂತಿಯನ್ನು ಪ್ರತಿಬಿಂಬಿಸುತ್ತದೆ, ಇದು ವಿವಿಧ ಅಭಿವೃದ್ಧಿ ಮಾರ್ಗಗಳನ್ನು ಅಳವಡಿಸಿಕೊಂಡಿದೆ.
ಸ್ನೇಹಿತರೆ,
ನನಗೆ ಇನ್ನೊಂದು ಸಂತೋಷವಿದೆ. ನಾನು ಇದನ್ನು ಹಲವು ವರ್ಷಗಳ ಹಿಂದೆ ಪ್ರಸ್ತಾಪಿಸಿದ್ದೇನೆ, ಎಲ್ಲರ ಮುಂದೆ ಹೇಳಿದ್ದೇನೆ. ನಾನು ಶ್ವೇತ ಕ್ರಾಂತಿ, ಹಸಿರು ಕ್ರಾಂತಿ ಎಂದು ಕರೆದಿದ್ದೇನೆ, ಆದರೆ ಈಗ ನಾವು ಸಿಹಿ ಕ್ರಾಂತಿ ಮಾಡಬೇಕಾಗಿದೆ. ನಾವು ಜೇನುತುಪ್ಪವನ್ನು ಹೆಚ್ಚಾಗಿ ಉತ್ಪಾದಿಸಬೇಕಾಗಿದೆ. ಜೇನು ಕೇವಲ ಮನೆಯಲ್ಲಿ ಮಾತನಾಡುವ ವಿಷಯವಾಗಬಾರದು, ಸಹೋದರರೆ. ನಾವು ಹೊಲಗಳಲ್ಲಿ ಜೇನು ಉತ್ಪಾದಿಸಬೇಕು, ಇದರಿಂದ ರೈತರು ಹೆಚ್ಚು ಗಳಿಸಬಹುದು. ನಮ್ಮ ದಿಲೀಪ್ ಭಾಯ್ ಮತ್ತು ರೂಪಲಾ ಜಿ ಅಮ್ರೇಲಿ ಜಿಲ್ಲೆಯಲ್ಲಿ ಈ ವಿಷಯ ಪ್ರಸ್ತಾಪಿಸಿದರು, ಈಗ ಹೊಲಗಳಲ್ಲಿ ಜೇನುಸಾಕಣೆ ಪ್ರಾರಂಭವಾಗಿದೆ, ಜನರು ಇದರ ಬಗ್ಗೆ ತಿಳಿದುಕೊಂಡಿದ್ದಾರೆ. ಈಗ ಇಲ್ಲಿನ ಜೇನು ತನ್ನದೇ ಆದ ಗುರುತು ಸ್ಥಾಪಿಸಿಕೊಳ್ಳುತ್ತಿದೆ. ಇದು ಸಂತಸದ ವಿಷಯ. 'ಏಕ್ ಪೆಡ್ ಮಾ ಕೆ ನಾಮ್' ಅಭಿಯಾನದ ಅಡಿ, ಸಸಿ ನೆಡುವ ಪರಿಸರ ಪ್ರಯತ್ನಗಳು ಈ ವಿಶಿಷ್ಟ ವಿಧಾನಕ್ಕಾಗಿ ಮೆಚ್ಚುಗೆಯೊಂದಿಗೆ ರಾಷ್ಟ್ರವ್ಯಾಪಿ ಮತ್ತು ಜಾಗತಿಕವಾಗಿ ಸ್ವೀಕರಿಸಲ್ಪಟ್ಟಿವೆ. ಎಲ್ಲರೂ ಈ ಅಭಿಯಾನದಲ್ಲಿ ಭಾಗಿಯಾಗಿದ್ದಾರೆ. ಪರಿಸರದ ದೃಷ್ಟಿಯಿಂದ ಇದೊಂದು ಉತ್ತಮ ಪ್ರಯತ್ನ. ಪರಿಸರಕ್ಕೆ ಸಂಬಂಧಿಸಿದ 2ನೇ ಪ್ರಮುಖ ಕೆಲಸವೆಂದರೆ, ನಾವು ಪ್ರಧಾನಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆ ಜಾರಿಗೊಳಿಸುವ ಮೂಲಕ ವಿದ್ಯುತ್ ಬಿಲ್‌ಗಳನ್ನು ತೊಡೆದುಹಾಕಲು ಪ್ರಯತ್ನಿಸುತ್ತಿದ್ದೇವೆ, ಇದು ಉಚಿತ ಸೌರ ವಿದ್ಯುತ್ ಯೋಜನೆಯಾಗಿದ್ದು, ಅದು ಕುಟುಂಬಗಳಿಗೆ ವಾರ್ಷಿಕ 25,000 ರೂ.ನಿಂದ 30,000 ರೂ. ಗಳಿಸಲು ಅನುವು ಮಾಡಿಕೊಡುತ್ತಿದೆ. ಅಷ್ಟೇ ಅಲ್ಲ, ತಾವು ಉಳಿಸುವ ವಿದ್ಯುತ್ ಅನ್ನು ಮಾರಾಟ ಮಾಡಿ ಹೆಚ್ಚುವರಿ ಆದಾಯ ಗಳಿಸುತ್ತಿದ್ದಾರೆ. ಸುಮಾರು 1.5 ಕೋಟಿ ಕುಟುಂಬಗಳು ಈ ಉಪಕ್ರಮಕ್ಕಾಗಿ ನೋಂದಾಯಿಸಿಕೊಂಡಿವೆ, ಗುಜರಾತ್‌ನಲ್ಲಿ ಈಗ 200,000ಕ್ಕೂ ಹೆಚ್ಚು ಮನೆಗಳು ಚಾವಣಿಯಲ್ಲಿ ಸೌರಫಲಕಗಳನ್ನು ಹೊಂದಿವೆ, ವಿದ್ಯುತ್ ಉತ್ಪಾದಿಸುತ್ತವೆ ಮತ್ತು ಹೆಚ್ಚುವರಿ ವಿದ್ಯುತ್ ಮಾರಾಟ ಮಾಡುತ್ತಿವೆ. ಅಮ್ರೇಲಿ ಜಿಲ್ಲೆಯು ಇಂಧನ ಉತ್ಪಾದನೆಯಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ, ಗೋವಿಂದಭಾಯ್ ನೇತೃತ್ವದ ದುಡ್ಧಾ ಗ್ರಾಮವು ಸದ್ಯದಲ್ಲೇ ಸೌರಶಕ್ತಿ ಚಾಲಿತ ಗ್ರಾಮವಾಗಲಿದೆ. 6 ತಿಂಗಳ ಹಿಂದೆ, ಗೋವಿಂದಭಾಯಿ ಅವರು ತಮ್ಮ ಗ್ರಾಮವನ್ನು ‘ಸೂರ್ಯ ಘರ್’ (ಸೌರಶಕ್ತಿ ಚಾಲಿತ ಗ್ರಾಮ) ಮಾಡಬೇಕೆಂದು ಹೇಳಿದ್ದರು, ಇದು ಸಹ ಪೂರ್ಣಗೊಳ್ಳುವ ಹಂತದಲ್ಲಿದೆ. ಈ ಉಪಕ್ರಮವು ಗ್ರಾಮಕ್ಕೆ ವಿದ್ಯುತ್ ಬಿಲ್‌ನಲ್ಲಿ ತಿಂಗಳಿಗೆ 75,000 ರೂ. ಉಳಿಸುವ ನಿರೀಕ್ಷೆಯಿದೆ. ಪ್ರತಿ ಮನೆಗೆ ವಾರ್ಷಿಕವಾಗಿ 4,000 ರೂ. ಉಳಿತಾಯವಾಗುತ್ತದೆ. ದುಡ್ಧಾವನ್ನು ಜಿಲ್ಲೆಯ ಮೊದಲ ಸೋಲಾರ್ ಗ್ರಾಮವನ್ನಾಗಿ ಮಾಡಿದ ಗೋವಿಂದಭಾಯಿ ಮತ್ತು ಅಮ್ರೇಲಿ ಅವರಿಗೆ ಅಭಿನಂದನೆಗಳು.
ಸ್ನೇಹಿತರೆ,
ನೀರು ಮತ್ತು ಪ್ರವಾಸೋದ್ಯಮ ನಿಕಟ ಸಂಬಂಧ ಹೊಂದಿವೆ. ನೀರು ಇರುವಲ್ಲಿ ಪ್ರವಾಸೋದ್ಯಮವು ಸ್ವಾಭಾವಿಕವಾಗಿ ಅನುಸರಿಸುತ್ತದೆ. ಇದೀಗ, ಭಾರತ ಮಾತಾ ಸರೋವರವನ್ನು ನೋಡುವಾಗ, ಸಾಮಾನ್ಯವಾಗಿ ಕಚ್‌ಗೆ ಭೇಟಿ ನೀಡುವ ವಲಸೆ ಹಕ್ಕಿಗಳು ಈ ಡಿಸೆಂಬರ್‌ನಲ್ಲಿ ಇಲ್ಲಿ ಹೊಸ ಜಾಗ ಕಂಡುಕೊಳ್ಳಬಹುದು ಎಂದು ನಾನು ಭಾವಿಸಿದೆ. ಫ್ಲೆಮಿಂಗೋಗಳು ಇಲ್ಲಿಗೆ ಬರಲು ಪ್ರಾರಂಭಿಸಿದಾಗ, ಇದು ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಅಮ್ರೇಲಿ ಜಿಲ್ಲೆಯು ಹಲವಾರು ಯಾತ್ರಾ ಸ್ಥಳಗಳಿಂದ ಆಶೀರ್ವದಿಸಲ್ಪಟ್ಟಿದೆ, ಜನರು ಭಕ್ತಿಯಿಂದ ಭೇಟಿ ನೀಡುತ್ತಾರೆ. ಆರಂಭದಲ್ಲಿ ನೀರಿನ ಸಂಗ್ರಹಕ್ಕಾಗಿ ನಿರ್ಮಿಸಲಾದ ಸರ್ದಾರ್ ಸರೋವರ ಅಣೆಕಟ್ಟಿನ ಸಂಭಾವ್ಯತೆಯನ್ನು ನಾವು ನೋಡಿದ್ದೇವೆ. ಸರ್ದಾರ್ ಪಟೇಲ್ ಅವರ ವಿಶ್ವದ ಅತಿ ಎತ್ತರದ ಪ್ರತಿಮೆಯನ್ನು ಸ್ಥಾಪಿಸುವ ಮೂಲಕ, ನಾವು ಕಳೆದ ವರ್ಷ ಸುಮಾರು 5 ದಶಲಕ್ಷ ಪ್ರವಾಸಿಗರನ್ನು ಆಕರ್ಷಿಸುವ ಸ್ಮಾರಕ ನಿರ್ಮಿಸಿದ್ದೇವೆ. ಕೇವಲ ಅಣೆಕಟ್ಟಿಗೆ ಮಾತ್ರವಲ್ಲದೆ, ಪ್ರತಿಮೆಗೆ ಗೌರವ ಸಲ್ಲಿಸಲು ಈ ಯೋಜನೆ ರೂಪಿಸಲಾಗಿದೆ. ಅಕ್ಟೋಬರ್ 31ರಂದು ಸರ್ದಾರ್ ಪಟೇಲ್ ಅವರ 150ನೇ ಜನ್ಮದಿನಾಚರಣೆ ಸಮೀಪಿಸುತ್ತಿರುವ ಕಾರಣ, ನನ್ನ ಗೌರವ ಸಲ್ಲಿಸಲು ನಾನು ಶೀಘ್ರದಲ್ಲೇ ಗುಜರಾತ್‌ಗೆ ಹಿಂತಿರುಗುತ್ತೇನೆ. ನಾನು ಇಂದು ದೆಹಲಿಗೆ ಹಿಂತಿರುಗುತ್ತೇನೆ, ಆದರೆ ಸರ್ದಾರ್ ಸಾಹಬ್ ಅವರ ಪಾದಗಳಿಗೆ ನನ್ನ ನಮನ ಸಲ್ಲಿಸಲು ಮರುದಿನ ಮತ್ತೆ ಬರುತ್ತೇನೆ. ಎಂದಿನಂತೆ, ನಾವು ಅವರ ಜನ್ಮದಿನವನ್ನು ಏಕತೆಯ ಓಟದೊಂದಿಗೆ ಆಚರಿಸುತ್ತೇವೆ, ಆದರೆ ಈ ವರ್ಷ, ದೀಪಾವಳಿಯು ಅಕ್ಟೋಬರ್ 31ರಂದು ಬರುತ್ತಿದೆ, ನಾವು ಅದನ್ನು ಅಕ್ಟೋಬರ್ 29ಕ್ಕೆ ನಿಗದಿಪಡಿಸಿದ್ದೇವೆ. ಏಕತೆಯ ಓಟ ಕಾರ್ಯಕ್ರಮಗಳು ಗುಜರಾತ್‌ನಾದ್ಯಂತ ವ್ಯಾಪಕವಾಗಿ ನಡೆಯಲಿ ಎಂದು ನಾನು ಭಾವಿಸುತ್ತೇನೆ, ನಾನು ಕೆವಾಡಿಯಾದಲ್ಲಿ ನಡೆದ ರಾಷ್ಟ್ರೀಯ ಏಕತಾ ಪಥಸಂಚಲನದಲ್ಲಿ ಪಾಲ್ಗೊಳ್ಳುತ್ತೇನೆ.
ಸ್ನೇಹಿತರೆ,
ಮುಂಬರುವ ದಿನಗಳಲ್ಲಿ, ಹೊಸದಾಗಿ ಸ್ಥಾಪಿಸಲಾದ ಕೆರ್ಲಿ ರೀಚಾರ್ಜ್ ಜಲಾಶಯವು ಪರಿಸರ-ಪ್ರವಾಸೋದ್ಯಮದ ಮಹತ್ವದ ಕೇಂದ್ರವಾಗಿ ಹೊರಹೊಮ್ಮಲಿದೆ ಎಂದು ನಾನು ಇಂದೇ ಊಹಿಸುತ್ತೇನೆ. ನಾನು ಅಲ್ಲಿ ಸಾಹಸ ಪ್ರವಾಸೋದ್ಯಮಕ್ಕೆ ಉತ್ತಮ ಸಾಮರ್ಥ್ಯವನ್ನು ನೋಡುತ್ತಿದ್ದೇನೆ. ಕೆರ್ಲಿ ಪಕ್ಷಿಧಾಮವು ಅಂತಾರಾಷ್ಟ್ರೀಯ ಮನ್ನಣೆ ಪಡೆಯುತ್ತದೆ, ವಿಶ್ವಾದ್ಯಂತದ ಪಕ್ಷಿ ವೀಕ್ಷಕರು ಮತ್ತು ಪ್ರಕೃತಿ ಪ್ರಿಯರನ್ನು ಆಕರ್ಷಿಸುತ್ತದೆ. ಪಕ್ಷಿ ವೀಕ್ಷಕರು ಸಾಮಾನ್ಯವಾಗಿ ಕೈಯಲ್ಲಿ ಕ್ಯಾಮೆರಾಗಳೊಂದಿಗೆ ದಿನಗಳನ್ನು ಕಳೆಯುತ್ತಾರೆ, ಕಾಡುಗಳಲ್ಲೇ ಮುಳುಗುತ್ತಾರೆ, ಪ್ರವಾಸೋದ್ಯಮದ ಮೂಲಕ ಆದಾಯದ ಮೂಲ ಸೃಷ್ಟಿಸುತ್ತಾರೆ. ಒಂದು ಕಾಲದಲ್ಲಿ ಉಪ್ಪುನೀರಿಗೆ ಹೆಸರಾಗಿದ್ದ ಮತ್ತು ಸವಾಲಾಗಿ ಕಂಡ ಗುಜರಾತ್‌ನ ಕರಾವಳಿಯು ಸಮೃದ್ಧಿಯ ಹೆಬ್ಬಾಗಿಲಾಗಿ ಮಾರ್ಪಾಡಾಗುತ್ತಿದೆ. ಗುಜರಾತಿನ ಕರಾವಳಿಯನ್ನು ಕೇವಲ ಪ್ರಾದೇಶಿಕ ಸ್ವತ್ತಾಗಿ ಮಾತ್ರವಲ್ಲದೆ ಸಂಪತ್ತು ಮತ್ತು ಅಭಿವೃದ್ಧಿಯ ರಾಷ್ಟ್ರೀಯ ಕೇಂದ್ರವನ್ನಾಗಿ ಮಾಡಲು ನಾವು ಆದ್ಯತೆ ನೀಡುತ್ತಿದ್ದೇವೆ. ನಾವು ಪುನರುಜ್ಜೀವನಗೊಳಿಸುತ್ತಿರುವ ಶತಮಾನಗಳ ಪರಂಪರೆಯಲ್ಲಿ ಮುಳುಗಿರುವ ನಮ್ಮ ಬಂದರುಗಳಂತೆ ನಮ್ಮ ಮೀನುಗಾರ ಸಮುದಾಯಗಳು ಹೆಚ್ಚು ಪ್ರಯೋಜನ ಪಡೆಯುತ್ತವೆ. ಲೋಥಾಲ್ - ಪುರಾತನ ನಗರ, 5,000 ವರ್ಷಗಳಷ್ಟು ಹಳೆಯದು. ಮೋದಿ ಅಧಿಕಾರಕ್ಕೆ ಬಂದ ನಂತರ ಇದು ಪ್ರಾಮುಖ್ಯತೆ ಪಡೆದಿಲ್ಲ. ನಾನು ಗುಜರಾತ್ ಮುಖ್ಯಮಂತ್ರಿಯಾದಾಗಿನಿಂದ ಇದು ನನ್ನ ದೃಷ್ಟಿಯಲ್ಲಿ ಯಾವಾಗಲೂ ವಿಶೇಷ ಸ್ಥಾನ ಹೊಂದಿದೆ. ಹಾಗಾಗಿ, ಪ್ರವಾಸೋದ್ಯಮದ ವಿಶ್ವ ಭೂಪಟಕ್ಕೆ ಅದನ್ನು ತರಲು ನಾನು ಬಯಸುತ್ತೇನೆ. ಈಗ ನಾವು ವಿಶ್ವದ ಅತಿದೊಡ್ಡ ಕಡಲ ವಸ್ತುಸಂಗ್ರಹಾಲಯವನ್ನು ಸ್ಥಾಪಿಸುತ್ತಿದ್ದೇವೆ. ನಾವು ಅಮ್ರೇಲಿಯಿಂದ ಅಹಮದಾಬಾದ್‌ಗೆ ಹೋಗುವ ದಾರಿಯಲ್ಲಿ ಬರುತ್ತದೆ, ಇದು ತುಂಬಾ ದೂರವಿಲ್ಲ, ನಾವು ಸ್ವಲ್ಪ ಮುಂದೆ ಹೋಗಬೇಕು.
ನಮ್ಮ ಪ್ರಾಚೀನ ನಾವಿಕರ ಪರಂಪರೆ ಎತ್ತಿ ಹಿಡಿಯುವ ಮೂಲಕ ಭಾರತದ ಕಡಲ ಪರಂಪರೆಯನ್ನು ಜಗತ್ತಿಗೆ ಪ್ರದರ್ಶಿಸುವುದು ನಮ್ಮ ಪ್ರಯತ್ನವಾಗಿದೆ. ನಮ್ಮ ಪ್ರಯತ್ನಗಳು ಸಮುದ್ರ ಸಂಪನ್ಮೂಲ ಅಭಿವೃದ್ಧಿ ಹೆಚ್ಚಿಸಲು ನೀಲಿ ಕ್ರಾಂತಿಯೊಂದಿಗೆ ಜೋಡಿಸಲ್ಪಟ್ಟಿವೆ. ಬಂದರು-ನೇತೃತ್ವದ ಅಭಿವೃದ್ಧಿಯು 'ವಿಕಸಿತ ಭಾರತ'(ಅಭಿವೃದ್ಧಿ ಹೊಂದಿದ ಭಾರತ)ದ ದೃಷ್ಟಿಯನ್ನು ಮುನ್ನಡೆಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದೆ. ಜಫ್ರಾಬಾದ್ ಮತ್ತು ಶಿಯಾಲ್ ಬೆಟ್‌ನಂತಹ ಸ್ಥಳಗಳಲ್ಲಿ ಮೂಲಸೌಕರ್ಯ ಹೆಚ್ಚಿಸಲಾಗುತ್ತಿದೆ, ಅಮ್ರೇಲಿಯನ್ನು ಪ್ರಮುಖ ಪ್ರಾದೇಶಿಕ ಕೇಂದ್ರವಾಗಿ ಪರಿವರ್ತಿಸಲಾಗುತ್ತಿದೆ. ಪಿಪಾವಾವ್ ಬಂದರಿನ ಆಧುನೀಕರಣವು ಸಾವಿರಾರು ಉದ್ಯೋಗಗಳಿಗೆ ಹೊಸ ಮಾರ್ಗಗಳನ್ನು ತೆರೆದಿದೆ, ಲಕ್ಷಾಂತರ ಕಂಟೈನರ್‌ಗಳು ಮತ್ತು ಸಾವಿರಾರು ವಾಹನಗಳನ್ನು ನಿರ್ವಹಿಸುವ ಸಾಮರ್ಥ್ಯ ಹೆಚ್ಚಿಸಿದೆ. ನಾವು ಗುಜರಾತ್‌ನ ಎಲ್ಲಾ ಬಂದರುಗಳನ್ನು ದೇಶದ ಇತರ ಭಾಗಗಳೊಂದಿಗೆ ಸಂಪರ್ಕಿಸುವ ಗುರಿ ಹೊಂದಿದ್ದೇವೆ, ರಾಷ್ಟ್ರವ್ಯಾಪಿ ಆರ್ಥಿಕತೆಗೆ ಲಾಭದಾಯಕವಾದ ತಡೆರಹಿತ ಜಾಲವನ್ನು ಉತ್ತೇಜಿಸುತ್ತೇವೆ.
ಮತ್ತೊಂದೆಡೆ, ಸಾಮಾನ್ಯ ಮನುಷ್ಯನ ಜೀವನದ ಬಗ್ಗೆ ಸಮಾನ ಕಾಳಜಿ ಹೊಂದಿದ್ದೇವೆ. ನಮ್ಮ 3ನೇ ಅವಧಿಯಲ್ಲಿ, ನಮ್ಮ ಮೂಲಸೌಕರ್ಯ ಉಪಕ್ರಮಗಳು ಕೈಗೆಟುಕುವ ವಸತಿ, ವಿದ್ಯುತ್, ರೈಲ್ವೆ, ರಸ್ತೆಗಳು, ಗ್ಯಾಸ್ ಪೈಪ್‌ಲೈನ್‌ಗಳು, ದೂರಸಂಪರ್ಕ, ಆಪ್ಟಿಕಲ್ ಫೈಬರ್‌ಗಳು ಮತ್ತು ಆಸ್ಪತ್ರೆಗಳನ್ನು ಒದಗಿಸುವ ತನಕ ವಿಸ್ತರಿಸುತ್ತವೆ. ಏಕೆಂದರೆ 60 ವರ್ಷಗಳ ನಂತರ ದೇಶವು 3ನೇ ಬಾರಿಗೆ ಪ್ರಧಾನಿಯಾಗಿ ಸೇವೆ ಸಲ್ಲಿಸುವ ಅವಕಾಶ ನೀಡಿದೆ. ಇದರಲ್ಲಿ ಗುಜರಾತ್ ಜನರ ಸಹಕಾರಕ್ಕಾಗಿ ನಾನು ಸದಾ ಕೃತಜ್ಞನಾಗಿರುತ್ತೇನೆ. ಸಂಪರ್ಕಕ್ಕೆ ಈ ಸಮಗ್ರ ವಿಧಾನವು ಸೌರಾಷ್ಟ್ರದಲ್ಲಿ ಈಗಾಗಲೇ ಪ್ರಚಂಡ ಫಲಿತಾಂಶಗಳನ್ನು ನೀಡಿರುವುದನ್ನು ನಾವು ನೋಡಿದ್ದೇವೆ, ದೊಡ್ಡ ಪ್ರಮಾಣದ ಕೈಗಾರಿಕೆಗಳನ್ನು ಆಕರ್ಷಿಸುತ್ತದೆ. ಮೂಲಸೌಕರ್ಯ ಸುಧಾರಿಸಿದಂತೆ, ದೊಡ್ಡ ಪ್ರಮಾಣದ ಕೈಗಾರಿಕೆಗಳು ಬರುತ್ತವೆ. ರೊರೊ ದೋಣಿ ಸೇವೆಯ ಪ್ರಯೋಜನಗಳನ್ನು ನಾವು ನೋಡಿದ್ದೇವೆ. ನಾನು ಶಾಲೆಯಲ್ಲಿ ಅದರ ಬಗ್ಗೆ ಕೇಳುತ್ತಿದ್ದೆ: 'ಗೋಗಾದ ದೋಣಿ, ಗೋಗನ ದೋಣಿ, ಆದರೆ ಯಾರೂ ಅದರ ಬಗ್ಗೆ ಏನೂ ಮಾಡಲಿಲ್ಲ. ನಮಗೆ ಅವಕಾಶ ಸಿಕ್ಕಿದೆ, ಈಗ 700,000ಕ್ಕೂ ಹೆಚ್ಚು ಜನರು ಈ ರೊರೊ ದೋಣಿ ಸೇವೆಯನ್ನು ಬಳಸಿದ್ದಾರೆ. 100,000ಕ್ಕೂ ಹೆಚ್ಚು ವಾಹನಗಳು ಮತ್ತು 75,000ಕ್ಕೂ ಹೆಚ್ಚು ಟ್ರಕ್‌ಗಳು ಮತ್ತು ಬಸ್‌ಗಳು ಇದರ ಪ್ರಯೋಜನ ಪಡೆದಿವೆ. ಇದು ಅಸಂಖ್ಯಾತ ಜನರ ಸಮಯ ಮತ್ತು ಹಣ ಉಳಿಸಿದೆ. ಪೆಟ್ರೋಲ್ ಹೊಗೆಯನ್ನು ತಪ್ಪಿಸಲಾಗಿದೆ. ನೀವು ಅದನ್ನು ಲೆಕ್ಕ ಹಾಕಿದರೆ, ಅಂತಹ ಮಹತ್ವದ ಕೆಲಸವನ್ನು ಮೊದಲೇ ಏಕೆ ಮಾಡಲಿಲ್ಲ ಎಂದು ನಮಗೆಲ್ಲರಿಗೂ ಆಶ್ಚರ್ಯವಾಗುತ್ತದೆ. ಅಂತಹ ಒಳ್ಳೆಯ ಕೆಲಸಗಳು ನನಗೆ ಜವಾಬ್ದಾರಿ ಕೊಟ್ಟಿವೆ ಎಂದು ನಾನು ನಂಬುತ್ತೇನೆ.
ಇಂದು, ಜಾಮ್‌ನಗರದಿಂದ ಅಮೃತಸರ-ಭಟಿಂಡಾ ಆರ್ಥಿಕ ಕಾರಿಡಾರ್ ನಿರ್ಮಿಸುವ ಕೆಲಸ ನಡೆಯುತ್ತಿದೆ. ಅದರಿಂದ ದೊಡ್ಡ ಲಾಭ ಪಡೆಯಲಾಗುವುದು. ಗುಜರಾತ್‌ನಿಂದ ಪಂಜಾಬ್‌ವರೆಗಿನ ರಾಜ್ಯಗಳಿಗೂ ಇದರ ಲಾಭವಾಗಲಿದೆ. ಆ ಮಾರ್ಗದಲ್ಲಿ ದೊಡ್ಡ ಆರ್ಥಿಕ ವಲಯಗಳನ್ನು ಸ್ಥಾಪಿಸಲಾಗುತ್ತಿದೆ. ಪ್ರಮುಖ ಯೋಜನೆಗಳು ಬರಲಿವೆ. ರಸ್ತೆ ಯೋಜನೆಯ ಉದ್ಘಾಟನೆಯೊಂದಿಗೆ, ಜಾಮ್‌ನಗರ-ಮೊರ್ಬಿ ಪ್ರದೇಶವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ರಾಜ್‌ಕೋಟ್-ಮೋರ್ಬಿ-ಜಾಮ್‌ನಗರ ತ್ರಿಕೋನವು ಭಾರತದ ಉತ್ಪಾದನಾ ಕೇಂದ್ರವಾಗಿ ಗುರುತಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ ಎಂದು ನಾನು ಯಾವಾಗಲೂ ಹೇಳುತ್ತೇನೆ. ಇದು ಮಿನಿ ಜಪಾನ್ ಆಗುವ ಶಕ್ತಿ ಹೊಂದಿದೆ. 20 ವರ್ಷಗಳ ಹಿಂದೆ ನಾನು ಇದನ್ನು ಪ್ರಸ್ತಾಪಿಸಿದಾಗ, ಎಲ್ಲರೂ ಇದನ್ನು ಅಣಕಿಸುತ್ತಿದ್ದರು. ಆದರೆ ಇಂದು ಅದು ನಡೆಯುತ್ತಿದೆ, ಸಂಪರ್ಕ ಕಾರ್ಯವು ಈಗ ಅದರೊಂದಿಗೆ ಸಂಬಂಧಿಸಿದೆ. ಪರಿಣಾಮವಾಗಿ, ಸಿಮೆಂಟ್ ಉತ್ಪಾದನಾ ಪ್ರದೇಶದ ಸಂಪರ್ಕವೂ ಸುಧಾರಿಸುತ್ತಿದೆ. ಇದರ ಜತೆಗೆ, ಸೋಮನಾಥ, ದ್ವಾರಕಾ, ಪೋರಬಂದರ್ ಮತ್ತು ಗಿರ್ ಸಿಂಹಗಳ ಯಾತ್ರಾ ಸ್ಥಳಗಳು ಪ್ರವಾಸೋದ್ಯಮ ತಾಣಗಳಾಗಿ ಹೆಚ್ಚು ಪ್ರವೇಶಿಸಬಹುದಾದ ಮತ್ತು ಭವ್ಯವಾಗಿ ಮಾರ್ಪಡಲಿವೆ. ಇಂದು, ಕಚ್‌ನಲ್ಲಿ ರೈಲು ಸಂಪರ್ಕ ವಿಸ್ತರಿಸಿದೆ. ಸೌರಾಷ್ಟ್ರ ಮತ್ತು ಕಚ್‌ಗೆ ಈ ಸಂಪರ್ಕ ಯೋಜನೆಯು ಕಛ್ ಅನ್ನು ರಾಷ್ಟ್ರೀಯ ಪ್ರವಾಸೋದ್ಯಮ ಆಕರ್ಷಣೆ ಕೇಂದ್ರವಾಗಿ ಮಾಡಿದೆ. ಕಚ್‌ನಲ್ಲಿ ಪ್ರವಾಸೋದ್ಯಮ ಮತ್ತು ಕೈಗಾರಿಕೆ ವಿಳಂಬವಾಗುತ್ತದೆ ಎಂದು ದೇಶಾದ್ಯಂತ ಜನರು ಚಿಂತಿತರಾಗಿದ್ದರು, ಆದರೆ ಈಗ ಅವರು ಅದನ್ನು ಅನ್ವೇಷಿಸಲು ಧಾವಿಸುತ್ತಿದ್ದಾರೆ.
ಭಾರತವು ಅಭಿವೃದ್ಧಿ ಹೊಂದುತ್ತಿದ್ದಂತೆ, ಜಗತ್ತಿನಲ್ಲಿ ಅದರ ಹೆಮ್ಮೆ ಹೆಚ್ಚುತ್ತಿದೆ. ಇಡೀ ಜಗತ್ತು ಭಾರತವನ್ನು ಹೊಸ ಭರವಸೆಯಿಂದ ನೋಡುತ್ತಿದೆ, ಭಾರತವನ್ನು ವೀಕ್ಷಿಸಲು ಹೊಸ ದೃಷ್ಟಿಕೋನ ಹೊರಹೊಮ್ಮುತ್ತಿದೆ. ಜನರು ಭಾರತದ ಸಾಮರ್ಥ್ಯವನ್ನು ಗುರುತಿಸಲು ಆರಂಭಿಸಿದ್ದಾರೆ. ಇಂದು ಇಡೀ ಜಗತ್ತು ಭಾರತವನ್ನು ಗಂಭೀರವಾಗಿ ನೋಡುತ್ತಿದೆ ಮತ್ತು ಗಮನವಿಟ್ಟು ಕೇಳುತ್ತಿದೆ. ಎಲ್ಲರೂ ಭಾರತದೊಳಗಿನ ಸಾಧ್ಯತೆಗಳನ್ನು ಚರ್ಚಿಸುತ್ತಿದ್ದಾರೆ. ಇದರಲ್ಲಿ ಗುಜರಾತ್ ಮಹತ್ವದ ಪಾತ್ರ ವಹಿಸುತ್ತಿದೆ. ಭಾರತದ ನಗರಗಳ ಹಳ್ಳಿಗಳಲ್ಲಿ ಎಷ್ಟು ಸಾಮರ್ಥ್ಯವಿದೆ ಎಂಬುದನ್ನು ಗುಜರಾತ್ ಜಗತ್ತಿಗೆ ತೋರಿಸಿದೆ. ಕೆಲವು ದಿನಗಳ ಹಿಂದೆ, ನಾನು ರಷ್ಯಾದಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಿದ್ದೆ, ಅಲ್ಲಿ ನನಗೆ ವಿವಿಧ ದೇಶಗಳ ಅನೇಕ ಪ್ರಧಾನ ಮಂತ್ರಿಗಳು ಮತ್ತು ಅಧ್ಯಕ್ಷರೊಂದಿಗೆ ಶಾಂತಿಯುತ ಸಂಭಾಷಣೆಯಲ್ಲಿ ತೊಡಗುವ ಅವಕಾಶ ಸಿಕ್ಕಿತು. ಅವರು ಭಾರತದೊಂದಿಗೆ ಸಂಪರ್ಕ ಸಾಧಿಸಲು ಮತ್ತು ಭಾರತದ ಅಭಿವೃದ್ಧಿಯ ಪಯಣದಲ್ಲಿ ಪಾಲುದಾರರಾಗಲು ಬಯಸುತ್ತಿದ್ದಾರೆರೆ ಎಂಬುದು ಎಲ್ಲರ ಸಾಮಾನ್ಯ ಭಾವನೆಯಾಗಿತ್ತು. ಭಾರತದಲ್ಲಿ ಹೂಡಿಕೆ ಸಾಧ್ಯತೆಗಳ ಬಗ್ಗೆ ಎಲ್ಲಾ ದೇಶಗಳು ಕೇಳುತ್ತಿವೆ. ನಾನು ರಷ್ಯಾದಿಂದ ಹಿಂದಿರುಗಿದಾಗ ಜರ್ಮನಿಯ ಚಾನ್ಸಲರ್ ದೊಡ್ಡ ನಿಯೋಗದೊಂದಿಗೆ ದೆಹಲಿಗೆ ಬಂದರು. ಅವರು ಏಷ್ಯಾದ್ಯಂತ ಹೂಡಿಕೆ ಮಾಡುವ ಜರ್ಮನಿಯ ಕೈಗಾರಿಕೋದ್ಯಮಿಗಳನ್ನು ಕರೆತಂದರು. ಮೋದಿಯವರ ಮಾತು ಕೇಳಿ, ಭಾರತದಲ್ಲಿ ಏನು ಮಾಡಬೇಕೆಂದು ನಿರ್ಧರಿಸಿ ಎಂದು ಹೇಳಿದರು. ಇದರರ್ಥ ಜರ್ಮನಿ ಕೂಡ ಭಾರತದಲ್ಲಿ ಗಮನಾರ್ಹ ಹೂಡಿಕೆ ಮಾಡಲು ಉತ್ಸುಕವಾಗಿದೆ. ಅಷ್ಟೇ ಅಲ್ಲ, ನಮ್ಮ ಯುವಕರಿಗೆ ಅನುಕೂಲವಾಗುವ ಮಹತ್ವದ ಘೋಷಣೆ ಮಾಡಿದರು. ಹಿಂದೆ, ಜರ್ಮನಿ 20,000 ವೀಸಾಗಳನ್ನು ನೀಡಿತ್ತು. ಆದರೆ ಈಗ ಅವರು ಈಗ 90,000 ವೀಸಾಗಳನ್ನು ನೀಡುವುದಾಗಿ ಮತ್ತು ಅವರ ಕಾರ್ಖಾನೆಗಳಿಗೆ ಭಾರತೀಯ ಯುವಕರ ಅಗತ್ಯವಿದೆ ಎಂದು ಘೋಷಿಸಿದರು. ಭಾರತೀಯ ಯುವಕರ ಶಕ್ತಿ ಅಪಾರವಾಗಿದೆ, ಭಾರತದ ಜನರು ಕಾನೂನು ಪಾಲಕರು ಮತ್ತು ಶಾಂತಿಯುತವಾಗಿ ಒಟ್ಟಿಗೆ ಬದುಕುತ್ತಾರೆ. ಇಲ್ಲಿ ತಮಗೆ 90,000 ಜನರ ಅಗತ್ಯವಿದೆ ಎಂದು ಹೇಳಿದ್ದು, ಪ್ರತಿ ವರ್ಷ 90,000 ವೀಸಾಗಳನ್ನು ನೀಡುವುದಾಗಿ ಘೋಷಿಸಿದ್ದಾರೆ. ಈ ಅಗತ್ಯಕ್ಕೆ ತಕ್ಕಂತೆ ತಯಾರಾಗಲು ನಮ್ಮ ಯುವಕರಿಗೆ ಈಗ ಒಂದು ಅವಕಾಶ. ಇಂದು, ಸ್ಪೇನ್ ಅಧ್ಯಕ್ಷರು ಇಲ್ಲಿದ್ದಾರೆ, ಸ್ಪೇನ್ ಭಾರತದಲ್ಲಿ ಗಣನೀಯ ಹೂಡಿಕೆ ಮಾಡಲು ಯೋಜಿಸಿದೆ. ಇದು ಗುಜರಾತ್‌ನ ಸಣ್ಣ ಕೈಗಾರಿಕೆಗಳಿಗೆ ಹೆಚ್ಚು ಪ್ರಯೋಜನ ನೀಡುತ್ತದೆ, ವಿಶೇಷವಾಗಿ ವಡೋದರಾದಲ್ಲಿ ಸಾರಿಗೆ ವಿಮಾನ ತಯಾರಿಕಾ ಕಾರ್ಖಾನೆಯ ಸ್ಥಾಪನೆಯೊಂದಿಗೆ. ವಿವಿಧ ಉಪಕರಣಗಳನ್ನು ಉತ್ಪಾದಿಸುವ ರಾಜ್‌ಕೋಟ್‌ನಲ್ಲಿರುವ ಸಣ್ಣ ಕಾರ್ಖಾನೆಗಳು ಸಹ ಈ ವಿಮಾನ ಉತ್ಪಾದನೆಗೆ ಕೊಡುಗೆ ನೀಡುತ್ತವೆ. ಗುಜರಾತಿನ ಪ್ರತಿಯೊಂದು ಮೂಲೆಯಿಂದ ಸಣ್ಣ ಲೇಥ್ ಯಂತ್ರಗಳಲ್ಲಿ ಕೆಲಸ ಮಾಡುವ ಜನರು ಸಣ್ಣ ಬಿಡಿಭಾಗಗಳನ್ನು ಒದಗಿಸುತ್ತಾರೆ, ಏಕೆಂದರೆ ವಿಮಾನದಲ್ಲಿ ಸಾವಿರಾರು ಘಟಕಗಳು ಬೇಕಾಗುತ್ತವೆ. ಪ್ರತಿ ಕಾರ್ಖಾನೆಯು ನಿರ್ದಿಷ್ಟ ಭಾಗಗಳಲ್ಲಿ ಪರಿಣತಿ ಹೊಂದಿದೆ. ಸಣ್ಣ ಕೈಗಾರಿಕೆಗಳ ರಚನೆ ಇರುವ ಇಡೀ ಸೌರಾಷ್ಟ್ರ ಪ್ರದೇಶಕ್ಕೆ ಈ ಕೆಲಸವು ಪ್ರಯೋಜನಕಾರಿಯಾಗಿದೆ. ಇದು ಹಲವಾರು ಉದ್ಯೋಗಾವಕಾಶಗಳನ್ನು ತೆರೆಯುತ್ತದೆ.
ಸ್ನೇಹಿತರೆ,
ಗುಜರಾತ್‌ಗೆ ಸೇವೆ ಸಲ್ಲಿಸಲು ನನಗೆ ಅವಕಾಶ ಸಿಕ್ಕಾಗ, ಗುಜರಾತ್‌ನ ಮತ್ತು ಭಾರತದ ಅಭಿವೃದ್ಧಿಗೆ ಚಾಲನೆ ನೀಡುವುದು ನನ್ನ ಉದ್ದೇಶವಾಗಿತ್ತು. ಗುಜರಾತ್‌ನ ಪ್ರಗತಿಯು ಭಾರತದ ಪ್ರಗತಿಗೆ ಕಾರಣವಾಗುತ್ತದೆ ಎಂಬುದು ನನ್ನ ಮಾರ್ಗದರ್ಶಿ ಸೂತ್ರವಾಗಿತ್ತು. 'ವಿಕಸಿತ ಗುಜರಾತ್'(ಸಮೃದ್ಧ ಗುಜರಾತ್) ನಿರ್ಮಿಸುವ ಮೂಲಕ, ನಾವು 'ವಿಕಸಿತ ಭಾರತ'(ಅಭಿವೃದ್ಧಿ ಹೊಂದಿದ ಭಾರತ)ಕ್ಕೆ ದಾರಿ ಮಾಡಿಕೊಡುತ್ತೇವೆ.
ಸ್ನೇಹಿತರೆ,
ಇಂದು, ಬಹಳ ಸಮಯದ ನಂತರ, ನಾನು ಅನೇಕ ಪರಿಚಿತ ಮುಖಗಳ ನಡುವೆ ನನ್ನನ್ನು ಕಂಡುಕೊಳ್ಳುತ್ತೇನೆ. ಎಲ್ಲರೂ ನಗುತ್ತಿರುವುದನ್ನು ಮತ್ತು ಸಂತೋಷವಾಗಿರುವುದನ್ನು ನೋಡಿ ನನಗೆ ಸಂತೋಷವಾಗಿದೆ. ಮತ್ತೊಮ್ಮೆ, ನನ್ನ ಆತ್ಮೀಯ ಸ್ನೇಹಿತ ಸಾವ್ಜಿಭಾಯಿಯನ್ನು ಸೂರತ್‌ನಿಂದ ತನ್ನ ಗಮನ ಬದಲಾಯಿಸುವಂತೆ ನಾನು ಪ್ರೋತ್ಸಾಹಿಸುತ್ತೇನೆ. ಬದಲಾಗಿ, ಗುಜರಾತ್‌ನ ಪ್ರತಿ ಮೂಲೆಗೂ ನೀರು ತಲುಪುವುದನ್ನು ಖಚಿತಪಡಿಸಿಕೊಳ್ಳುವತ್ತ ಗಮನ ಹರಿಸುತ್ತೇನೆ. 80/20 ಯೋಜನೆಗಳ ಸಂಪೂರ್ಣ ಲಾಭವನ್ನು ಗುಜರಾತ್‌ಗೆ ತರೋಣ. ನಿಮ್ಮೆಲ್ಲರಿಗೂ ನನ್ನ ಶುಭಾಶಯಗಳು.
ನೀವೆಲ್ಲರೂ ನನ್ನೊಂದಿಗೆ ಸೇರಿ ಹೀಗೆ ಹೇಳಿ:
ಭಾರತ್ ಮಾತಾ ಕಿ - ಜೈ!
ಭಾರತ್ ಮಾತಾ ಕಿ - ಜೈ!
ಭಾರತ್ ಮಾತಾ ಕಿ - ಜೈ!