


ಭಾರತ್ ಮಾತಾ ಕಿ ಜೈ!
ಭಾರತ್ ಮಾತಾ ಕಿ ಜೈ!
ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ತ್ರಿಪುರಾ ರಾಜ್ಯಪಾಲರಾದ ಶ್ರೀ ಸತ್ಯದೇವ್ ನಾರಾಯಣ್ ಆರ್ಯಾ ಜೀ, ಜನಪ್ರಿಯ ಮುಖ್ಯಮಂತ್ರಿ ಶ್ರೀ ಮಾಣಿಕ್ ಶಾ ಜೀ, ನನ್ನ ಸಹೋದ್ಯೋಗಿಗಳಾದ ಕೇಂದ್ರ ಸಂಪುಟ ಸಚಿವರಾದ ಪ್ರತಿಮಾ ಭೌಮಿಕ್ ಜೀ, ತ್ರಿಪುರಾ ವಿಧಾನಸಭೆಯ ಸಭಾಧ್ಯಕ್ಷರಾದ ಶ್ರೀ ರತನ್ ಚಕ್ರವರ್ತಿ ಜೀ, ಉಪಮುಖ್ಯಮಂತ್ರಿ ಶ್ರೀ ಜಿಶ್ನು ದೇವ್ ವರ್ಮಾ ಜೀ, ನನ್ನ ಸ್ನೇಹಿತ ಮತ್ತು ಸಂಸದರಾದ ಶ್ರೀ ಬಿಪ್ಲಬ್ ದೇವ್ ಜೀ, ತ್ರಿಪುರಾ ಸರ್ಕಾರದ ಎಲ್ಲಾ ಗೌರವಾನ್ವಿತ ಎಲ್ಲಾ ಸಚಿವರೇ ಮತ್ತು ತ್ರಿಪುರಾದ ಪ್ರೀತಿಯ ಜನರೇ!
ನಮಸ್ಕಾರ!
ಖುಲುಮಖ!
ಮಾತಾ ತ್ರಿಪುರ ಸುಂದರಿ ಭೂಮಿಯಲ್ಲಿರಲು ನಾನು ಆಶೀರ್ವದಿಸಲ್ಪಟ್ಟಿದ್ದೇನೆ. ಮಾತಾ ತ್ರಿಪುರ ಸುಂದರಿಯ ಪವಿತ್ರ ಭೂಮಿಗೆ ನಾನು ಶುಭಾಶಯ ಕೋರುತ್ತೇನೆ.
ಮೊದಲಿಗೆ ಸರಿ ಸುಮಾರು ಎರಡು ಗಂಟೆಗಳ ಕಾಲ ವಿಳಂಬವಾಗಿ ಆಗಮಿಸಿದ ಕಾರಣಕ್ಕಾಗಿ ನಾನು ನಿಮ್ಮೆಲ್ಲರಲ್ಲೂ ಕ್ಷಮೆ ಕೋರುತ್ತೇನೆ. ನಾನು ನಿಗದಿತ ಸಮಯಕ್ಕಿಂತ ಹೆಚ್ಚು ಕಾಲ ಮೇಘಾಲಯದಲ್ಲಿದ್ದೆ. ಇಲ್ಲಿ ಬೆಳಿಗ್ಗೆ 11 ರಿಂದ 12 ಗಂಟೆಯಿಂದ ಇಲ್ಲಿ ನೀವು ಕಾಯುತ್ತಿರುವುದಾಗಿ ನನಗೆ ಮಾಹಿತಿ ನೀಡಿದ್ದಾರೆ. ನಾನು ವಿಳಂಬವಾಗಿ ಆಗಮಿಸಿದ ಕಾರಣಕ್ಕಾಗಿ ನೀವು ಸಮಸ್ಯೆ ಎದುರಿಸಿದ್ದೀರಿ ಮತ್ತು ನನ್ನನ್ನು ಆಶೀರ್ವದಿಸಲು ನೀವು ಇಲ್ಲಿ ಸೇರಿದ್ದೀರಿ. ಈ ಕಾರಣಕ್ಕಾಗಿ ನಾನು ಹೃದಯ ತುಂಬಿದ ಕೃತಜ್ಞತೆ ವ್ಯಕ್ತಪಡಿಸುತ್ತಿದ್ದೇನೆ. ಮೊದಲಿಗೆ ಸ್ವಚ್ಛತೆ ಕುರಿತು ಬಹುದೊಡ್ಡ ಅಭಿಯಾನವನ್ನು ತ್ರಿಪುರಾ ಜನತೆ ಹಮ್ಮಿಕೊಂಡಿದ್ದು, ನಿಮಗೆಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ನೀವು ಕಳೆದ ಐದು ವರ್ಷಗಳಲ್ಲಿ ಸ್ವಚ್ಛತೆಯನ್ನು ಸಾಮೂಹಿಕ ಆಂದೋಲನವನ್ನಾಗಿ ಮಾಡಿದ್ದೀರಿ. ಇದರ ಫಲವಾಗಿ ದೇಶದ ಸಣ್ಣ ರಾಜ್ಯಗಳ ಪೈಕಿ ತ್ರಿಪುರಾ ಸ್ವಚ್ಛ ರಾಜ್ಯವಾಗಿ ಹೊರ ಹೊಮ್ಮಿದೆ.
ಸ್ನೇಹಿತರೇ
ಮಾತೆ ತ್ರಿಪುರ ಸಂದರಿ ಆಶೀರ್ವಾದದೊಂದಿಗೆ ತ್ರಿಪುರಾದಲ್ಲಿ ಅಭಿವೃದ್ಧಿಯ ಯಾನ ಇಂದು ಹೊಸ ಎತ್ತರಕ್ಕೆ ಏರಿದೆ. ಸಂಪರ್ಕ, ಕೌಶಲ್ಯಾಭಿವೃದ್ಧಿ ಮತ್ತು ಬಡವರಿಗೆ ಸಂಬಂಧಿಸಿದ ಯೋಜನೆಗಳನ್ನು ಜಾರಿ ಮಾಡಿದ ನಿಮಗೆ ಅಭಿನಂದನೆಗಳು. ಇಂದು ತ್ರಿಪುರಾ ಮೊದಲ ದಂತ ವೈದ್ಯಕೀಯ ಕಾಲೇಜು ಪಡೆದುಕೊಂಡಿದೆ. ಇದರಿಂದ ತ್ರಿಪುರಾದಲ್ಲಿ ವೈದ್ಯರಾಗಲು ಯುವ ಸಮೂಹಕ್ಕೆ ಸಹಕಾರಿಯಾಗಲಿದೆ. ಇಂದು ತ್ರಿಪುರಾದ ಎರಡು ಲಕ್ಷಕ್ಕೂ ಹೆಚ್ಚು ಬಡ ಕುಟುಂಬದವರು ಪಕ್ಕಾ ಮನೆಗಳನ್ನು ಪಡೆಯುತ್ತಿದ್ದಾರೆ. ಬಹುತೇಕ ಮನೆಗಳು ತಾಯಂದಿರು ಮತ್ತು ಸಹೋದರಿಯರು ಪಡೆಯಲಿದ್ದಾರೆ. ಮತ್ತು ನಿಮಗೆಲ್ಲರಿಗೂ ಗೊತ್ತಿರುವಂತೆ ಪ್ರತಿಯೊಂದು ಮನೆ ಲಕ್ಷಾಂತರ ರೂಪಾಯಿ ಮೌಲ್ಯ ಹೊಂದಿವೆ. ಮೊದಲ ಬಾರಿಗೆ ಬಹುತೇಕ ಸಹೋದರಿಯರ ಹೆಸರಿನಲ್ಲಿ ಆಸ್ತಿ ನೋಂದಣಿಯಾಗುತ್ತಿದೆ. ನೀವು ಲಕ್ಷಾಂತರ ರೂಪಾಯಿ ಮೊತ್ತದ ಮನೆಗಳ ಮಾಲೀಕರಾಗುತ್ತಿದ್ದೀರಿ. ತ್ರಿಪುರಾದ ಅಗರ್ತಲಾದ ನನ್ನ ತಾಯಂದಿರು ಮತ್ತು ಸಹೋದರಿಯರು “ಲಕ್ಷಾಧಿಪತಿ”ಯಾಗುತ್ತಿದ್ದು, ಇದಕ್ಕಾಗಿ ಅಭಿನಂದನೆ ಸಲ್ಲಿಸುತ್ತೇನೆ.
ಬಡವರಿಗಾಗಿ ಮನೆ ಕಟ್ಟುವಲ್ಲಿ ತ್ರಿಪುರಾ ದೇಶದಲ್ಲಿ ಮುಂಚೂಣಿ ರಾಜ್ಯವಾಗಿದೆ. ಮಾಣೀಕ್ ಜೀ ಮತ್ತು ಅವರ ತಂಡ ಪ್ರಶಂಸನೀಯ ಕೆಲಸ ಮಾಡುತ್ತಿದೆ. ಮತ್ತು ಯಾರಾದರೂ ನಮಗೆ ಒಂದು ರಾತ್ರಿ ಆಶ್ರಯ ನೀಡಿದರೂ ಸಹ ನಾವು ಇಡೀ ಜೀವನ ಪೂರ್ತಿ ಅವರ ಆಶಿರ್ವಾದ ಪಡೆಯುತ್ತೇವೆ ಎಂಬುದು ತಮಗೆ ತಿಳಿದಿದೆ. ಆದ್ದರಿಂದ ನಾವೆಲ್ಲರೂ ತ್ರಿಪುರಾದಿಂದ ಹೇರಳವಾಗಿ ಆಶೀರ್ವಾದ ಪಡೆಯುತ್ತಿದ್ದೇವೆ. ವಿಮಾನ ನಿಲ್ದಾಣದಿಂದ ಇಲ್ಲಿಗೆ ಬರಲು ನಮಗೆ ಸ್ವಲ್ಪ ಸಮಯ ಹಿಡಿಯಿತು. ಏಕೆಂದರೆ ರಸ್ತೆಯ ಎರಡೂ ಬದಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನತೆ ಆಶೀರ್ವಾದ ನೀಡಲು ಸಾಲುಗಟ್ಟಿ ನಿಂತಿದ್ದರು. ಇಲ್ಲಿ ಕುಳಿತಿರುವ ಬಹುತೇಕ ಹತ್ತು ಪಟ್ಟು ಜನ ರಸ್ತೆಯಲ್ಲಿ ನಿಂತು ಆಶೀರ್ವಾದ ಮಾಡಿದ್ದಾರೆ. ನಾನೂ ಸಹ ಅವರಿಗೆ ಶುಭ ಕೋರಿದೆ. ಇದಕ್ಕೂ ಮುಂಚೆ ನಾನು ಹೇಳಿದಂತೆ ಮೇಘಾಲಯದಲ್ಲಿ ಈಶಾನ್ಯ ರಾಜ್ಯಗಳ ಮಂಡಳಿ ಸಭೆಯಲ್ಲಿ ಭಾಗವಹಿಸಿದ್ದೆ. ಈ ಸಭೆಯಲ್ಲಿ ಮುಂದಿನ ಕೆಲವು ವರ್ಷಗಳಲ್ಲಿ ತ್ರಿಪುರ ಸೇರಿದಂತೆ ಈಶಾನ್ಯ ರಾಜ್ಯಗಳ ಅಭಿವೃದ್ದಿ ಕುರಿತ ನೀಲ ನಕ್ಷೆ ರೂಪಿಸುವ ಕುರಿತು ಚರ್ಚಿಸಿದ್ದೇವೆ. ಸಭೆಯಲ್ಲಿ ಈಶಾನ್ಯದ ಎಂಟು ರಾಜ್ಯಗಳ ಅಭ್ಯುದಯ ಕುರಿತ ಎಂಟು ಅಂಶಗಳ ಕುರಿತು ಚರ್ಚಿಸಲಾಗಿದೆ. ತ್ರಿಪುರಾ ಡಬಲ್ ಇಂಜಿನ್ ಸರ್ಕಾರವಾಗಿದೆ. ಆದ್ದರಿಂದ ಅಭಿವೃದ್ಧಿಯ ಮಾರ್ಗಸೂಚಿ ಇಲ್ಲಿ ತ್ವರಿತಗತಿಯಲ್ಲಿ ಸಾಗುವುದನ್ನು ನಾವು ಖಚಿತಪಡಿಸಿಕೊಳ್ಳುತ್ತಿದ್ದೇವೆ.
ಸ್ನೇಹಿತರೇ
ಡಬಲ್ ಇಂಜಿನ್ ಸರ್ಕಾರ ರಚನೆಗೂ ಮುನ್ನ ತ್ರಿಪುರಾ ಮತ್ತು ಈಶಾನ್ಯ ರಾಜ್ಯಗಳು ಎರಡು ಕಾರಣಗಳಿಗಾಗಿ ಸದಾ ಸುದ್ದಿಯಾಗುತ್ತಿತ್ತು. ಒಂದು ಚುನಾವಣೆ ನಡೆದಾಗ ಮತ್ತು ಮತ್ತೊಂದು ಹಿಂಸಾಚಾರ ಘಟನೆ ಸಂಭವಿಸಿದಾಗ. ಇದೀಗ ಸಮಯ ಬದಲಾವಣೆಯಾಗಿದೆ. ಇಂದು ತ್ರಿಪುರಾ ರಾಜ್ಯದ ಮೂಲ ಸೌಕರ್ಯ ಅಭಿವೃದ್ದಿ ಮತ್ತು ಸ್ವಚ್ಛತೆ ಕುರಿತು ಮಾತನಾಡುತ್ತಾರೆ. ಲಕ್ಷಾಂತರ ಮಂದಿ ಮನೆಗಳನ್ನು ಹೊಂದಿದ್ದು, ಇದರ ಬಗ್ಗೆ ಚರ್ಚೆಯಾಗುತ್ತಿದೆ. ತ್ರಿಪುರಾ ರಾಜ್ಯಕ್ಕೆ ಕೇಂದ್ರ ಸರ್ಕಾರ ಮೂಲ ಸಂಪರ್ಕ ಸೌಕರ್ಯಕ್ಕಾಗಿ ಸಹಸ್ರಾರು ಕೋಟಿ ರೂಪಾಯಿ ನೀಡಿದೆ ಮತ್ತು ಇದನ್ನು ಇಲ್ಲಿನ ಸರ್ಕಾರ ತ್ವರಿತವಾಗಿ ಸಾಕಾರಗೊಳಿಸುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ತ್ರಿಪುರಾದಲ್ಲಿ ಎಷ್ಟು ರಾಷ್ಟ್ರೀಯ ಹೆದ್ದಾರಿಗಳನ್ನು ವಿಸ್ತರಿಸಲಾಗಿದೆ ಎಂಬುದನ್ನು ನೀವು ನೋಡುತ್ತಿದ್ದೀರಿ. ಕಳೆದ ಐದು ವರ್ಷಗಳಲ್ಲಿ ಹಲವಾರು ಹಳ್ಳಿಗಳು ರಸ್ತೆ ಸಂಪರ್ಕ ಪಡೆದಿವೆ. ಇದೀಗ ವೇಗವಾಗಿ ತ್ರಿಪುರದ ಎಲ್ಲಾ ಹಳ್ಳಿಗಳು ರಸ್ತೆ ಸಂಪರ್ಕ ಪಡೆಯುತ್ತಿವೆ. ತ್ರಿಪುರದ ರಸ್ತೆ ಸಂಪರ್ಕ ಜಾಲವನ್ನು ಮತ್ತಷ್ಟು ಬಲಗೊಳಿಸುವ ಸಂಬಂಧ ಇಂದು ಶಿಲಾನ್ಯಾಸ ನೆರವೇರಿಸಲಾಗುತ್ತಿದೆ. ಅಗರ್ತಲಾದ ಬೈಪಾಸ್ ರಸ್ತೆಯಿಂದ ರಾಜಧಾನಿಯ ಸಂಚಾರ ವ್ಯವಸ್ಥೆ ಮತ್ತಷ್ಟು ಸುಧಾರಿಸಿದೆ ಮತ್ತು ಜೀವನ ಇನ್ನಷ್ಟು ಸುಗಮಗೊಂಡಿದೆ.
ಸ್ನೇಹಿತರೇ
ಇಂದು ತ್ರಿಪುರಾ ಅಂತರರಾಷ್ಟ್ರೀಯ ವ್ಯಾಪಾರ ವಲಯದ ಹೆಬ್ಬಾಗಿಲಾಗಿ ಪರಿವರ್ತನೆಯಾಗಿದೆ. ಅಗರ್ತಲ –ಅಖಾವುರ ರೈಲ್ವೆ ಸಂಪರ್ಕ ಹೊಸ ವ್ಯಾಪಾರ ಮಾರ್ಗವಾಗಿದೆ. ಇದೇ ರೀತಿ ಭಾರತ – ಥೈಲ್ಯಾಂಡ್ – ಮ್ಯಾನ್ಮಾರ್ ಹೆದ್ದಾರಿಯಂತಹ ರಸ್ತೆ ಮೂಲ ಸೌಕರ್ಯಗಳ ಮೂಲಕ ಈಶಾನ್ಯ ಇತರೆ ದೇಶಗಳೊಂದಿಗಿನ ಸಂಬಂಧಕ್ಕೆ ಹೆಬ್ಬಾಗಿಲು ಸಹ ಆಗಿದೆ. ಅಗರ್ತಲಾ ಮಹಾರಾಜ ಬೀರ್ ವಿಕ್ರಮ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ನಿರ್ಮಾಣದ ಮೂಲಕ ದೇಶ ಮತ್ತು ವಿದೇಶಗಳೊಂದಿಗಿನ ಸಂಪರ್ಕ ಸುಲಭವಾಗಿದೆ. ಇದರ ಫಲದಿಂದ ತ್ರಿಪುರ ಈಶಾನ್ಯ ಭಾಗದ ಪ್ರಮುಖ ಸಾಗಾಣೆ ಕೇಂದ್ರವಾಗಿ ಅಭಿವೃದ್ಧಿ ಹೊಂದುತ್ತಿದೆ. ಇಂದು ಜನತೆ, ವಿಶೇಷವಾಗಿ ನಮ್ಮ ಯುವ ಸಮೂಹ ತ್ರಿಪುರದಲ್ಲಿ ಅಂತರ್ಜಾಲ ಸೇವೆಯ ಲಾಭವನ್ನು ಪಡೆಯುತ್ತಿದೆ. ಡಬಲ್ ಇಂಜಿನ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ತ್ರಿಪುರದ ಪಂಚಾಯತ್ ಗಳು ಆಪ್ಟಿಕಲ್ ಫೈಬರ್ ಸಂಪರ್ಕ ಪಡೆದುಕೊಂಡಿವೆ.
ಸ್ನೇಹಿತರೇ
ಬಿಜೆಪಿ ನೇತೃತ್ವದ ಡಬಲ್ ಇಂಜಿನ್ ಸರ್ಕಾರ ಭೌತಿಕ ಮತ್ತು ಡಿಜಿಟಲ್ ಮೂಲ ಸೌಕರ್ಯಕ್ಕೆ ಮಾತ್ರವಲ್ಲದೇ ಸಾಮಾಜಿಕ ಮೂಲ ಸೌಕರ್ಯಕ್ಕೂ ಒತ್ತು ನೀಡುತ್ತಿದೆ. ಬಿಜೆಪಿ ಸರ್ಕಾರದ ಅತ್ಯುನ್ನತ ಆದ್ಯತೆ ಎಂದರೆ ಚಿಕಿತ್ಸೆಯು ಮನೆಗೆ ಸನಿಹದಲ್ಲಿರಬೇಕು. ಕೈಗೆಕುಟುವ ದರಲ್ಲಿರಬೇಕು ಮತ್ತು ಎಲ್ಲರಿಗೂ ಲಭ್ಯವಿರಬೇಕು. ಈ ನಿಟ್ಟಿನಲ್ಲಿ ಆಯುಷ್ಮಾನ್ ಭಾರತ್ ಯೋಜನೆ ಅತಿ ಹೆಚ್ಚು ಉಪಯುಕ್ತವಾಗಿದೆ. ಆಯುಷ್ಮಾನ್ ಭಾರತ್ ಯೋಜನೆಯಡಿ 7,000 ಕ್ಕೂ ಹೆಚ್ಚು ಆರೋಗ್ಯ ಮತ್ತು ಯೋಗ ಕ್ಷೇಮ ಕೇಂದ್ರಗಳಿಗೆ ಈಶಾನ್ಯ ರಾಜ್ಯಗಳಲ್ಲಿ ಮಂಜೂರಾತಿ ನೀಡಲಾಗಿದೆ. ಇದರಲ್ಲಿ 1000 ಕೇಂದ್ರಗಳು ತ್ರಿಪುರಾದಲ್ಲಿದೆ. ಕ್ಯಾನ್ಸರ್ ಮತ್ತು ಮಧುಮೇಹದಂತಹ ಹಲವಾರು ಗಂಭೀರ ಕಾಯಿಲೆಗಳಿಗೆ ಸಂಬಂಧಿಸಿದಂತೆ ಸಹಸ್ರಾರು ರೋಗಿಗಳನ್ನು ತಪಾಸಣೆಗೊಳಪಡಿಸಲಾಗಿದೆ. ಆಯುಷ್ಮಾನ್ ಭಾರತ್ –ಪಿಎಂ ಜನಾರೋಗ್ಯ ಯೋಜನೆಯಡಿ 5 ಲಕ್ಷ ರೂಪಾಯಿವರೆಗೆ ಉಚಿತ ಚಿಕಿತ್ಸೆಯನ್ನು ತ್ರಿಪುರಾದ ಸಹಸ್ರಾರು ಬಡ ಕುಟುಂಬಗಳು ಪಡೆದುಕೊಂಡಿವೆ.
ಸ್ನೇಹಿತರೇ
ಶೌಚಾಲಯ, ವಿದ್ಯುದೀಕರಣ ಅಥವಾ ಅನಿಲ ಸಂಪರ್ಕ ವಲಯದಲ್ಲಿ ತ್ರಿಪುರಾದಲ್ಲಿ ಗಣನೀಯ ಕೆಲಸಗಳು ನಡೆದಿವೆ. ಈಗ ಅನಿಲ ಸಂಪರ್ಕ ಜಾಲವನ್ನು ಸಹ ಸ್ಥಾಪಿಸಲಾಗಿದೆ. ಡಬಲ್ ಎಂಜಿನ್ ಸರ್ಕಾರ ತ್ರಿಪುರಾದಲ್ಲಿ ಸುಲಭ ದರದಲ್ಲಿ ಕೊಳವೆ ಮೂಲಕ ಅನಿಲ ಪೂರೈಕೆ ಮಾಡುತ್ತಿದೆ. ಡಬಲ್ ಎಂಜಿನ್ ಸರ್ಕಾರ ಪ್ರತಿಯೊಂದು ಮನೆಗೆ ಕೊಳವೆ ಮೂಲಕ ನೀರು ಪೂರೈಸುವುದನ್ನು ತ್ವರಿತಗೊಳಿಸಿದೆ. ಕೇವಲ ಮೂರು ವರ್ಷಗಳ ಅವಧಿಯಲ್ಲಿ ತ್ರಿಪುರಾದಲ್ಲಿ ನಾಲ್ಕು ಲಕ್ಷ ಕುಟುಂಬಗಳು ಕೊಳವೆ ಮೂಲಕ ನೀರಿನ ಸಂಪರ್ಕ ಪಡೆದುಕೊಂಡಿವೆ. 2017 ಕ್ಕಿಂತ ಮೊದಲು ತ್ರಿಪುರಾದಲ್ಲಿ ಬಡವರ ಪಡಿತರದಲ್ಲಿ ಲೂಟಿಯಾಗುತ್ತಿತ್ತು. ಇಂದು ಡಬಲ್ ಎಂಜಿನ್ ಸರ್ಕಾರ ಪ್ರತಿಯೊಬ್ಬ ಬಡವರಿಗೂ ಪಡಿತರ ಸೌಲಭ್ಯ ಮತ್ತು ಮೂರು ವರ್ಷಗಳಿಂದ ಉಚಿತ ಪಡಿತರ ಪೂರೈಸುತ್ತಿದೆ.
ಸ್ನೇಹಿತರೇ
ಎಲ್ಲಾ ಯೋಜನೆಗಳಲ್ಲಿ ಅತಿ ಹೆಚ್ಚು ಫಲಾನುಭವಿಗಳೆಂದರೆ ನಮ್ಮ ತಾಯಂದಿರು ಮತ್ತು ಸಹೋದರಿಯರು. ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯಿಂದ ಒಂದು ಲಕ್ಷಕ್ಕೂ ಹೆಚ್ಚು ಗರ್ಭೀಣಿ ತಾಯಂದಿರು ಸೌಲಭ್ಯ ಪಡೆದಿದ್ದಾರೆ. ಈ ಯೋಜನೆಯಡಿ ಸಹಸ್ರಾರು ರೂಪಾಯಿ ಮೊತ್ತವನ್ನು ತಾಯಂದಿರ ಪೌಷ್ಟಿಕ ಆಹಾರಕ್ಕಾಗಿ ನೇರವಾಗಿ ಇವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗಿದೆ. ಇಂದು ಹೆಚ್ಚೆಚ್ಚು ಹೆರಿಗೆಗಳು ಆಸ್ಪತ್ರೆಗಳಲ್ಲಿ ಆಗುತ್ತಿದ್ದು, ತಾಯಿ ಮತ್ತು ಶಿಶುವಿನ ಜೀವ ರಕ್ಷಿಸಲಾಗುತ್ತಿದೆ. ತ್ರಿಪುರದಲ್ಲಿ ಸಹೋದರಿಯರು ಮತ್ತು ಹೆಣ್ಣು ಮಕ್ಕಳನ್ನು ಸ್ವಾವಲಂಬಿಯನ್ನಾಗಿ ಮಾಡಲು ಇಲ್ಲಿನ ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವ ರೀತಿಯೂ ಸಹ ತುಂಬಾ ಪ್ರಶಂಸನೀಯವಾಗಿದೆ. ಮಹಿಳೆಯರಿಗಾಗಿ ಉದ್ಯೋಗ ಸೃಜಿಸಲು ನೂರಾರು ಕೋಟಿ ರೂಪಾಯಿ ಮೊತ್ತದ ಪ್ಯಾಕೇಜ್ ರೂಪಿಸುವಂತೆ ಸರ್ಕಾರಕ್ಕೆ ಸೂಚಿಸಿದ್ದೇನೆ. ಡಬಲ್ ಎಂಜಿನ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮಹಿಳಾ ಸ್ವ ಸಹಾಯ ಗುಂಪುಗಳ ರಚನೆ 9 ಪಟ್ಟು ಏರಿಕೆಯಾಗಿದೆ.
ಸಹೋದರರೇ ಮತ್ತು ಸಹೋದರಿಯರೇ
ತನ್ನ ಸಿದ್ಧಾಂತದ ಪ್ರಾಮುಖ್ಯತೆಯನ್ನು ಕಳೆದುಕೊಂಡ ಮತ್ತು ಅವಕಾಶವಾದಿ ರಾಜಕಾರಣ ಮಾಡುತ್ತಿರುವ ಪಕ್ಷ ದಶಕಗಳಿಂದ ತ್ರಿಪುರಾ ರಾಜವನ್ನು ಆಳುತ್ತಿತ್ತು. ಅವರು ತ್ರಿಪುರಾ ರಾಜ್ಯದ ಅಭಿವೃದ್ಧಿಯನ್ನು ಅವಗಣನೆ ಮಾಡಿದ್ದರು. ತ್ರಿಪುರಾದ ಸಂಪನ್ಮೂಲವನ್ನು ತಮ್ಮ ಹಿತಾಸಕ್ತಿಗಾಗಿ ಬಳಸಲಾಗುತ್ತಿತ್ತು. ಇದರಿಂದ ಬಡವರು, ಯುವ ಜನಾಂಗ, ರೈತರು ಮತ್ತು ನನ್ನ ಸಹೋದರಿಯರು, ತಾಯಂದಿರು ಹೆಚ್ಚಿನ ತೊಂದರೆ ಎದುರಿಸುತ್ತಿದ್ದರು. ಇಂತಹ ಸಿದ್ಧಾಂತ ಮತ್ತು ಮನಸ್ಥಿತಿ ಸಾರ್ವಜನಿಕರಿಗೆ ಪ್ರಯೋಜನಕಾರಿಯಲ್ಲ. ಅವರಿಗೆ ನಕಾರಾತ್ಮಕತೆಯನ್ನು ಪಸರಿಸುವುದಷ್ಟೇ ಗೊತ್ತಿದೆ. ಅವರ ಬಳಿ ಸಕಾರಾತ್ಮಕ ಕಾರ್ಯಸೂಚಿ ಇಲ್ಲ. ಡಬಲ್ ಇಂಜಿನ್ ಸರ್ಕಾರ ಸಂಕಲ್ಪ ಮತ್ತು ಸಾಧನೆಗೆ ಧನಾತ್ಮಕ ನೀಲ ನಕ್ಷೆಯನ್ನು ಹೊಂದಿದೆ. ತ್ರಿಪುರಾದ ಅಭಿವೃದ್ಧಿಗೆ ಆಕ್ಸಿಲರೇಟರ್ ಅಗತ್ಯವಿದ್ದಾಗ ನಿರಾಶಾವಾದಿಗಳು ರಿವರ್ಸ್ ಗೇರ್ ನಲ್ಲಿ ಚಾಲನೆ ಮಾಡುತ್ತಿದ್ದರು.
ಸ್ನೇಹಿತರೇ
ಅಧಿಕಾರದ ಈ ರಾಜಕಾರಣ ನಮ್ಮ ಬುಡಕಟ್ಟು ಸಮಾಜಕ್ಕೆ ದೊಡ್ಡ ಹಾನಿಯುಂಟು ಮಾಡಿದೆ. ಬುಡಕಟ್ಟು ಸಮಾಜ ಮತ್ತು ಬುಡಕಟ್ಟು ಪ್ರದೇಶ ಅಭಿವೃದ್ಧಿಯಿಂದ ವಂಚಿತವಾಗಿತ್ತು. ಇಂತಹ ರಾಜಕಾರಣವನ್ನು ಬಿಜೆಪಿ ಬದಲಿಸಿದೆ. ಈ ಕಾರಣಕ್ಕಾಗಿ ಬಿಜೆಪಿ ಬುಡಕಟ್ಟು ಸಮಾಜದ ಮೊದಲ ಆಯ್ಕೆಯಾಗಿದೆ. ಗುಜರಾತ್ ನಲ್ಲಿ ಈಚೆಗಷ್ಟೇ ಚುನಾವಣೆ ನಡೆಯಿತು. ಗುಜರಾತ್ ನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು 27 ವರ್ಷ ಕಳೆದರೂ ಸಹ ಭರ್ಜರಿ ಗೆಲುವಿನ ಹಿಂದೆ ಬುಡಕಟ್ಟು ಜನರ ಕೊಡುಗೆಯೂ ಹೆಚ್ಚಾಗಿದೆ. ಬುಡಕಟ್ಟು ಸಮುದಾಯಕ್ಕೆ ಮೀಸಲಾದ 27 ಕ್ಷೇತ್ರಗಳಲ್ಲಿ ಬಿಜೆಪಿ 24 ರಲ್ಲಿ ಗೆಲುವು ಸಾಧಿಸಿದೆ.
ಸ್ನೇಹಿತರೇ
ಅಟಲ್ [ಅಟಲ್ ಬಿಹಾರಿ ವಾಜಪೇಯಿ] ಜೀ ಸರ್ಕಾರ ಮೊದಲ ಬಾರಿಗ ಬುಡಕಟ್ಟು ಸಮುದಾಯಕ್ಕೆ ಪ್ರತ್ಯೇಕ ಸಚಿವಾಲಯ ಮತ್ತು ಪ್ರತ್ಯೇಕ ಆಯವ್ಯಯವನ್ನು ನಿಗದಿ ಮಾಡಿತ್ತು. ದೆಹಲಿಯಲ್ಲಿ ಸರ್ಕಾರ ರಚಿಸಲು ನೀವು ನಮಗೆ ಅವಕಾಶ ನೀಡಿದಾಗಿನಿಂದಲೂ ಬುಡಕಟ್ಟು ಸಮುದಾಯಕ್ಕೆ ಸಂಬಂಧಿಸಿದ ಪ್ರತಿಯೊಂದು ವಿಷಯಕ್ಕೂ ನಾವು ಆದ್ಯತೆ ನೀಡುತ್ತಿದ್ದೇವೆ. ಬುಡಕಟ್ಟು ಜನಾಂಗಕ್ಕೆ ಮೀಸಲಾಗಿದ್ದ ಬಜೆಟ್ ಮೊತ್ತವನ್ನು 21,000 ಕೋಟಿ ರೂಪಾಯಿಯಿಂದ 88,000 ಕೋಟಿ ರೂಪಾಯಿಗೆ ಏರಿಕೆ ಮಾಡಿದ್ದೇವೆ. ಅಂತೆಯೇ ಬುಡಕಟ್ಟು ಜನಾಂಗದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತವನ್ನು ಬಹುತೇಕ ದುಪ್ಪಟ್ಟುಗೊಳಿಸಿದ್ದೇವೆ. ಇದರಿಂದ ತ್ರಿಪುರಾದ ಬುಡಕಟ್ಟು ಸಮುದಾಯಕ್ಕೆ ಲಾಭವಾಗಿದೆ. 2014 ರಲ್ಲಿ 100 ಕ್ಕೂ ಕಡಿಮೆ ಪ್ರಮಾಣದಲ್ಲಿ ಏಕಲವ್ಯ ಮಾದರಿ ಶಾಲೆಗಳಿತ್ತು, ಇಂದು ಇವು 500 ಸನಿಹದಲ್ಲಿವೆ. ತ್ರಿಪುರದಲ್ಲಿ ಇಂತಹ 20ಕ್ಕೂ ಹೆಚ್ಚು ಶಾಲೆಗಳಿಗೆ ಮಂಜೂರಾತಿ ನೀಡಲಾಗಿದೆ. ಹಿಂದಿನ ಸರ್ಕಾರಗಳು 8 ರಿಂದ 10 ಅರಣ್ಯ ಉತ್ಪನ್ನಗಳಿಗೆ ಎಂ.ಎಸ್.ಪಿ ನೀಡುತ್ತಿತ್ತು. ಬಿಜೆಪಿ ಸರ್ಕಾರ 90 ಅರಣ್ಯ ಉತ್ಪನ್ನಗಳಿಗೆ ಎಂ.ಎಸ್.ಪಿ ಕೊಡುತ್ತಿದೆ. ಇಂದು ಬುಡಕಟ್ಟು ಪ್ರದೇಶಗಳಲ್ಲಿ 50,000 ಕ್ಕೂ ಹೆಚ್ಚು ವನ್ ಧನ್ ಕೇಂದ್ರಗಳಿದ್ದು, ಇದರಿಂದ ಸುಮಾರು 9 ಲಕ್ಷ ಬುಡಕಟ್ಟು ಜನರಿಗೆ ಉದ್ಯೋಗದ ಖಾತರಿ ದೊರೆತಿದೆ ಮತ್ತು ಬಹುತೇಕ ಇದರಲ್ಲಿ ನಮ್ಮ ಸಹೋದರಿಯರಿದ್ದಾರೆ. ಬುಡಕಟ್ಟು ಜನಾಂಗಕ್ಕೆ ಬಿದಿರಿನ ವ್ಯಾಪಾರವನ್ನು ಸುಗಮಗೊಳಿಸಿದ್ದು ಬಿಜೆಪಿ ಸರ್ಕಾರ.
ಸ್ನೇಹಿತರೇ
ಮೊದಲ ಬಾರಿಗೆ ಬಿಜೆಪಿ ಸರ್ಕಾರ ‘ಜನ್ ಜಾತಿಯಾ ಗೌರವ್ ದಿವಸ್ [ಬುಡಕಟ್ಟು ಹೆಮ್ಮೆ ದಿನ] ಅನ್ನು ಆಚರಿಸುವುದನ್ನು ಮನಗಂಡಿತು. ನವೆಂಬರ್ 15 ರಂದು ಬಿರ್ಸಾ ಮುಂಡಾ ಅವರ ಜನ್ಮ ದಿನವನ್ನು ಬಿಜೆಪಿ ಸರ್ಕಾರ ದೇಶಾದ್ಯಂತ ‘ಜನ್ ಜಾತಿಯಾ ಗೌರವ್ ದಿವಸ್’ ಆಗಿ ಆಚರಿಸಲು ಆರಂಭಿಸಿತು. ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬುಡಕಟ್ಟು ಜನರ ಕೊಡುಗೆಯನ್ನು ಸ್ಮರಿಸುವ ಮತ್ತೊಂದು ಹೆಜ್ಜೆ ಇರಿಸಿತು. ಇಂದು ದೇಶಾದ್ಯಂತ 10 ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರ ವಸ್ತು ಸಂಗ್ರಹಾಲಯವನ್ನು ಸ್ಥಾಪಿಸಲಾಗುತ್ತಿದೆ. ಇತ್ತೀಚೆಗೆ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಜೀ ಅವರು ತ್ರಿಪುರದಲ್ಲಿ ಮಹಾರಾಜ ಬೀರೇಂದ್ರ ಕಿಶೋರ್ ಮಾಣಿಕ್ಯ ವಸ್ತು ಸಂಗ್ರಹಾಲಯ ಮತ್ತು ಸಾಂಸ್ಕೃತಿಕ ಕೇಂದ್ರಕ್ಕೆ ಶಿಲಾನ್ಯಾಸ ನೆರವೇರಿಸಿದ್ದಾರೆ. ಬುಡಕಟ್ಟು ಸಮುದಾಯದ ಸಂಸ್ಕೃತಿ ಮತ್ತು ಕೊಡುಗೆಯನ್ನು ಉತ್ತೇಜಿಸಲು ತ್ರಿಪುರಾ ಸರ್ಕಾರ ಪ್ರಯತ್ನಿಸುತ್ತಿದೆ. ತ್ರಿಪುರಾದ ಬುಡಕಟ್ಟು ಕಲೆ ಮತ್ತು ಸಂಸ್ಕೃತಿಯನ್ನು ಮುನ್ನಡೆಸಿದ ವ್ಯಕ್ತಿಗಳನ್ನು ಪದ್ಮಭೂಷಣ ಪ್ರಶಸ್ತಿಗಳೊಂದಿಗೆ ಗೌರವಿಸುವ ಸುಯೋಗವನ್ನು ಬಿಜೆಪಿ ಸರ್ಕಾರ ಪಡೆದುಕೊಂಡಿದೆ. ಇಂತಹ ಅನೇಕ ಉಪ ಕ್ರಮಗಳಿಂದಾಗಿಯೇ ತ್ರಿಪುರಾ ಸೇರಿದಂತೆ ದೇಶಾದ್ಯಂತ ಬುಡಕಟ್ಟು ಸಮುದಾಯ ಬಿಜೆಪಿಯ ಬಗ್ಗೆ ಗರಿಷ್ಠ ನಂಬಿಕೆ ಹೊಂದಿದೆ.
ಸಹೋದರರೇ ಮತ್ತು ಸಹೋದರಿಯರೇ
ತ್ರಿಪುರಾದಲ್ಲಿ ಸಣ್ಣ ರೈತರು ಮತ್ತು ಸಣ್ಣ ಉದ್ದಿಮೆದಾರರು ಉತ್ತಮ ಅವಕಾಶಗಳನ್ನು ಪಡೆಯುವಂತೆ ಮಾಡಲು ಡಬಲ್ ಎಂಜಿನ್ ಸರ್ಕಾರ ಪ್ರಯತ್ನಿಸುತ್ತಿದೆ. ಸ್ಥಳೀಯ ಉತ್ಪನ್ನಗಳಿಗೆ ಜಾಗತಿಕ ಮಾನ್ಯತೆ ದೊರೆಕಿಸಲು ಶ್ರಮಿಸುತ್ತಿದೆ. ತ್ರಿಪುರಾದ ಅನಾನಸ್ ಜಾಗತಿಕ ಮಾರುಕಟ್ಟೆಗಳನ್ನು ತಲುಪುತ್ತಿದೆ. ನೂರಾರು ಮೆಟ್ರಿಕ್ ಟನ್ ಗಳಷ್ಟು ಹಣ್ಣು ಮತ್ತು ತರಕಾರಿಗಳನ್ನು ಬಾಂಗ್ಲಾದೇಶ, ಜರ್ಮನಿ ಮತ್ತು ದುಬೈ ದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಇದರಿಂದ ರೈತರು ತಮ್ಮ ಉತ್ಪನ್ನಗಳಿಗೆ ಹೆಚ್ಚಿನ ದರ ಪಡೆಯುತ್ತಿದ್ದಾರೆ. ಪಿಎಂ ಕಿಸಾನ್ ಸಮ್ಮಾನ್ ನಿಧಿ ಮೂಲಕ ತ್ರಿಪುರಾ ರೈತರು 500 ಕೋಟಿ ರೂಪಾಯಿಗೂ ಹೆಚ್ಚು ಮೊತ್ತವನ್ನು ಪಡೆದುಕೊಂಡಿದ್ದಾರೆ. ಬಿಜೆಪಿ ಸರ್ಕಾರ ತ್ರಿಪುರಾದಲ್ಲಿ ಅಗರ್ ವುಡ್ ಉದ್ಯಮವನ್ನು ಬಲಪಡಿಸುತ್ತಿದ್ದು. ಮುಂಬರುವ ವರ್ಷಗಳಲ್ಲಿ ಇದರಿಂದ ಅರ್ಥಪೂರ್ಣ ಫಲಿತಾಂಶ ದೊರೆಯಲಿದೆ. ಇದರಿಂದ ತ್ರಿಪುರಾದ ಯುವ ಸಮೂಹಕ್ಕೆ ಹೊಸ ಅವಕಾಶ ಮತ್ತು ಗಳಿಕೆಯ ಹೊಸ ಮಾರ್ಗ ಕಂಡುಕೊಳ್ಳಲು ಸಹಕಾರಿಯಾಗಲಿದೆ.
ಸ್ನೇಹಿತರೇ
ಮುಖ್ಯವಾಗಿ ತ್ರಿಪುರಾ ಇಂದು ಶಾಂತಿ ಮತ್ತು ಅಭಿವೃದ್ಧಿಯ ಹಾದಿಯಲ್ಲಿದೆ. ಡಬಲ್ ಎಂಜಿನ್ ಸರ್ಕಾರದ ಅಭಿವೃದ್ಧಿಯಿಂದ ತ್ರಿಪುರಾದಲ್ಲಿ ಫಲಿತಾಂಶ ದೊರೆಯುತ್ತಿದೆ. ತ್ರಿಪುರಾ ಜನರ ಸಾಮರ್ಥ್ಯದ ಬಗ್ಗೆ ತಮಗೆ ಪೂರ್ಣ ನಂಬಿಕೆ ಇದೆ. ನಾವು ಅಭಿವೃದ್ಧಿಯ ವೇಗವನ್ನು ತ್ವರಿತಗೊಳಿಸುತ್ತೇವೆ. ಈ ನಂಬಿಕೆಯಿಂದ ತ್ರಿಪುರಾದ ಉಜ್ವಲ ಭವಿಷ್ಯಕ್ಕಾಗಿ ಇಂದು ಉದ್ಘಾಟನೆಗೊಂಡ ಅಥವಾ ಶಂಕುಸ್ಥಾಪನೆ ನೆರವೇರಿಸಿದ ಯೋಜನೆಗಳಿಗಾಗಿ ನಾನು ಮತ್ತೊಮ್ಮೆ ತ್ರಿಪುರಾದ ಜನತೆಗೆ ಅಭಿನಂದನೆ ಸಲ್ಲಿಸುತ್ತೇನೆ ಮತ್ತು ನನ್ನ ಶುಭ ಹಾರೈಕೆಗಳನ್ನು ತಿಳಿಸುತ್ತೇನೆ. ತ್ರಿಪುರಾ ಮುಂಬರುವ ದಿನಗಳಲ್ಲಿ ಹೊಸ ಎತ್ತರಕ್ಕೇರುತ್ತದೆ ಎಂಬ ನಿರೀಕ್ಷೆಯಿದ್ದು, ನಿಮಗೆ ತುಂಬಾ ಧನ್ಯವಾದಗಳು.
ಭಾರತ್ ಮಾತಾ ಕಿ ಜೈ!
ಭಾರತ್ ಮಾತಾ ಕಿ ಜೈ!