ಭಾರತ್ ಮಾತಾ ಕಿ - ಜೈ!
ಭಾರತ್ ಮಾತಾ ಕಿ - ಜೈ!
ಮಧ್ಯಪ್ರದೇಶದ ರಾಜ್ಯಪಾಲರಾದ ಶ್ರೀ ಮಂಗುಭಾಯಿ ಪಟೇಲ್ ಅವರೇ, ಮುಖ್ಯಮಂತ್ರಿ ಶ್ರೀ ಶಿವರಾಜ್ ಅವರೇ, ಕೇಂದ್ರ ಸಂಪುಟದ ನನ್ನ ಸಹೋದ್ಯೋಗಿಗಳಾದ ಶ್ರೀ ಮನ್ಸುಖ್ ಮಾಂಡವೀಯ ಅವರೇ, ಶ್ರೀ ಫಗ್ಗನ್ ಸಿಂಗ್ ಕುಲಸ್ತೆ ಅವರೇ, ಪ್ರೊಫೆಸರ್ ಎಸ್.ಪಿ.ಸಿಂಗ್ ಬಘೇಲ್ ಅವರೇ, ಶ್ರೀಮತಿ ರೇಣುಕಾ ಸಿಂಗ್ ಸರುತಾ ಅವರೇ, ಡಾ. ಭಾರತಿ ಪವಾರ್ ಅವರೇ, ಶ್ರೀ ಬಿಶ್ವೇಶ್ವರ್ ತುಡು ಅವರೇ, ಸಂಸತ್ ಸದಸ್ಯ ಶ್ರೀ ವಿ.ಡಿ. ಶರ್ಮಾ ಅವರೇ, ಮಧ್ಯಪ್ರದೇಶ ಸರ್ಕಾರದ ಮಂತ್ರಿಗಳು, ಎಲ್ಲಾ ಶಾಸಕರು, ಈ ಕಾರ್ಯಕ್ರಮದಲ್ಲಿ ದೇಶಾದ್ಯಂತ ನಮ್ಮೊಂದಿಗೆ ಇರುವ ಇತರ ಗೌರವಾನ್ವಿತ ಅತಿಥಿಗಳು ಹಾಗೂ ನಮ್ಮೆಲ್ಲರನ್ನೂ ಆಶೀರ್ವದಿಸಲು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಇಲ್ಲಿ ನೆರೆದಿರುವ ನನ್ನ ಪ್ರೀತಿಯ ಸಹೋದರ-ಸಹೋದರಿಯರೇ!
ಜೈ ಸೇವಾ, ಜೈ ಜೋಹರ್. ಇಂದು, ರಾಣಿ ದುರ್ಗಾವತಿ ಅವರ ಈ ಪವಿತ್ರ ಭೂಮಿಯಲ್ಲಿ ನಿಮ್ಮೆಲ್ಲರ ನಡುವೆ ಇರುವುದು ನನ್ನ ಅದೃಷ್ಟವೇ ಸರಿ. ನಾನು ರಾಣಿ ದುರ್ಗಾವತಿ ಅವರ ಪಾದಗಳಿಗೆ ನನ್ನ ಹೃತ್ಪೂರ್ವಕ ಗೌರವವನ್ನು ಸಲ್ಲಿಸುತ್ತೇನೆ. ಅವರಿಂದ ಪ್ರೇರಿತರಾಗಿ ಇಂದು 'ಕುಡಗೋಲು ಕೋಶ ರಕ್ತಹೀನತೆ ನಿರ್ಮೂಲನೆ ಯೋಜನೆʼ (ಸಿಕಲ್ ಸೆಲ್ ಅನೀಮಿಯಾ ಎಲಿಮಿನೇಷನ್ ಮಿಷನ್) ಎಂಬ ಬೃಹತ್ ಅಭಿಯಾನವನ್ನು ಪ್ರಾರಂಭಿಸಲಾಗುತ್ತಿದೆ. ಇಂದು, ಮಧ್ಯಪ್ರದೇಶದಲ್ಲಿ ಒಂದು ಕೋಟಿ ಫಲಾನುಭವಿಗಳಿಗೆ ʻಆಯುಷ್ಮಾನ್ ಕಾರ್ಡ್ʼಗಳನ್ನು ಸಹ ಒದಗಿಸಲಾಗುತ್ತಿದೆ. ಈ ಎರಡೂ ಪ್ರಯತ್ನಗಳ ಪ್ರಾಥಮಿಕ ಫಲಾನುಭವಿಗಳು ನಮ್ಮ ಗೊಂಡ್, ಭಿಲ್ ಮತ್ತು ಇತರ ಬುಡಕಟ್ಟು ಸಮುದಾಯಗಳು. ನಿಮ್ಮೆಲ್ಲರಿಗೂ ಮತ್ತು ಮಧ್ಯಪ್ರದೇಶದ ಡಬಲ್ ಇಂಜಿನ್ ಸರ್ಕಾರಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಸ್ನೇಹಿತರೇ,
ಇಂದು, ರಾಷ್ಟ್ರವು ಈ ಶಹದೋಲ್ ನೆಲದಲ್ಲಿ ಮಹತ್ವದ ಸಂಕಲ್ಪವನ್ನು ಕೈಗೊಳ್ಳುತ್ತಿದೆ. ನಮ್ಮ ಬುಡಕಟ್ಟು ಸಹೋದರ-ಸಹೋದರಿಯರ ಯೋಗಕ್ಷೇಮವನ್ನು ಖಚಿತಪಡಿಸುವ ಸಂಕಲ್ಪವಿದು. ʻಕುಡಗೋಲು ಕೋಶ ರಕ್ತಹೀನತೆʼ ನಿರ್ಮೂಲನೆಯ ಸಂಕಲ್ಪವಿದು. ಪ್ರತಿ ವರ್ಷ ಕುಡಗೋಲು ಕೋಶ ರಕ್ತಹೀನತೆಗೆ ತುತ್ತಾಗುತ್ತಿರುವ 2.5 ಲಕ್ಷ ಮಕ್ಕಳು ಹಾಗೂ ಅವರ 2.5 ಲಕ್ಷ ಕುಟುಂಬಗಳ ಜೀವವನ್ನು ಉಳಿಸುವ ಸಂಕಲ್ಪವಿದು.
ಸ್ನೇಹಿತರೇ,
ನಾನು ದೇಶದ ವಿವಿಧ ಭಾಗಗಳಲ್ಲಿರುವ ಬುಡಕಟ್ಟು ಸಮುದಾಯಗಳ ನಡುವೆ ಬಹಳ ಸಮಯ ಕಳೆದಿದ್ದೇನೆ. ಕುಡಗೋಲು ಕೋಶ ರಕ್ತಹೀನತೆಯಂತಹ ರೋಗಗಳು ಅಪಾರ ಯಾತನೆಯನ್ನು ಉಂಟುಮಾಡುತ್ತವೆ. ರೋಗಿಗಳು ನಿರಂತರವಾಗಿ ತಮ್ಮ ಕೀಲುಗಳಲ್ಲಿ ನೋವು, ಊತ ಹಾಗೂ ದೈಹಿಕ ಬಳಲಿಕೆಯನ್ನು ಅನುಭವಿಸುತ್ತಾರೆ. ಅವರು ತಮ್ಮ ಬೆನ್ನು, ಕಾಲುಗಳು ಮತ್ತು ಎದೆಯಲ್ಲಿ ಅಸಹನೀಯ ನೋವನ್ನು ಸಹಿಸಿಕೊಳ್ಳುತ್ತಾರೆ, ಉಸಿರಾಡಲು ಹೆಣಗಾಡುತ್ತಾರೆ. ದೀರ್ಘಕಾಲದ ಯಾತನೆಯು ರೋಗಿಗಳ ಆಂತರಿಕ ಅಂಗಗಳನ್ನು ಹಾನಿಗೊಳಿಸುತ್ತದೆ. ಈ ರೋಗವು ವ್ಯಕ್ತಿಗಳ ಮೇಲೆ ಮಾತ್ರವಲ್ಲದೆ ಅವರ ಕುಟುಂಬಗಳ ಮೇಲೂ ಪರಿಣಾಮ ಬೀರುತ್ತದೆ. ಇದು ಗಾಳಿ, ನೀರು ಅಥವಾ ಆಹಾರದ ಮೂಲಕ ಹರಡುವುದಿಲ್ಲ. ಇದು ಆನುವಂಶಿಕವಾದುದು. ಪೋಷಕರಿಂದ ಅವರ ಮಕ್ಕಳಿಗೆ ರವಾನೆಯಾಗುತ್ತದೆ. ಮತ್ತು ಈ ಕಾಯಿಲೆಯೊಂದಿಗೆ ಜನಿಸಿದ ಮಕ್ಕಳು ತಮ್ಮ ಜೀವನದುದ್ದಕ್ಕೂ ಸವಾಲುಗಳನ್ನು ಎದುರಿಸುತ್ತಲೇ ಇರುತ್ತಾರೆ.
ಸ್ನೇಹಿತರೇ,
ವಿಶ್ವದಾದ್ಯಂತ ಕುಡಗೋಲು ಕೋಶ ರಕ್ತಹೀನತೆಯ ಒಟ್ಟು ಪ್ರಕರಣಗಳಲ್ಲಿ, ಸರಿಸುಮಾರು 50 ಪ್ರತಿಶತದಷ್ಟು ಪ್ರಕರಣಗಳು ನಮ್ಮ ದೇಶದಲ್ಲಿ ಮಾತ್ರ ಸಂಭವಿಸುತ್ತವೆ. ದುರದೃಷ್ಟವಶಾತ್, ಈ ಸಮಸ್ಯೆಯ ಬಗ್ಗೆ ಯಾರೂ ಕಾಳಜಿ ವಹಿಸಲಿಲ್ಲ ಮತ್ತು ಕಳೆದ 70 ವರ್ಷಗಳಲ್ಲಿ ಈ ಸಮಸ್ಯೆಯನ್ನು ಎದುರಿಸಲು ಯಾವುದೇ ದೃಢವಾದ ಯೋಜನೆಯನ್ನು ರೂಪಿಸಲಾಗಿಲ್ಲ. ಈ ರೋಗ ಪೀಡಿತ ಜನರಲ್ಲಿ ಹೆಚ್ಚಿನವರು ಬುಡಕಟ್ಟು ಸಮುದಾಯಕ್ಕೆ ಸೇರಿದವರು. ಬುಡಕಟ್ಟು ಸಮಾಜದ ಬಗ್ಗೆ ಉದಾಸೀನತೆಯಿಂದಾಗಿ ಹಿಂದಿನ ಸರ್ಕಾರಗಳಿಗೆ ಇದು ಸಮಸ್ಯೆಯಾಗಿ ಕಂಡಿರಲಿಲ್ಲ. ಆದಾಗ್ಯೂ, ಬುಡಕಟ್ಟು ಸಮಾಜದ ಈ ಪ್ರಮುಖ ಸವಾಲನ್ನು ಪರಿಹರಿಸುವ ಜವಾಬ್ದಾರಿಯನ್ನು ಈಗ ಬಿಜೆಪಿ ಸರ್ಕಾರ, ನಮ್ಮ ಸರ್ಕಾರ ವಹಿಸಿಕೊಂಡಿದೆ. ನಮಗೆ, ಬುಡಕಟ್ಟು ಸಮಾಜವು ಕೇವಲ ಸರ್ಕಾರದ ಅಂಕಿ-ಅಂಶವಲ್ಲ. ಇದು ನಮಗೆ ಅನುಭೂತಿ ಮತ್ತು ಭಾವನಾತ್ಮಕ ಕಾಳಜಿಯ ವಿಷಯವಾಗಿದೆ. ನಾನು ಮೊದಲ ಬಾರಿಗೆ ಗುಜರಾತ್ ಮುಖ್ಯಮಂತ್ರಿಯಾಗುವ ಮೊದಲೇ ಈ ನಿಟ್ಟಿನಲ್ಲಿ ಪ್ರಯತ್ನಗಳನ್ನು ಆರಂಭಿಸಿದ್ದೆ. ನಮ್ಮ ರಾಜ್ಯಪಾಲರಾದ ಶ್ರೀ ಮಂಗುಭಾಯಿ ಅವರು ಬುಡಕಟ್ಟು ಸಮುದಾಯದ ಸಮರ್ಪಿತ ನಾಯಕರಾಗಿದ್ದಾರೆ. ಮಂಗುಭಾಯಿ ಮತ್ತು ನಾನು ಸುಮಾರು 50 ವರ್ಷಗಳಿಂದ ಬುಡಕಟ್ಟು ಪ್ರದೇಶಗಳಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ. ಈ ರೋಗವನ್ನು ಪರಿಹರಿಸುವ ಮಾರ್ಗಗಳನ್ನು ಕಂಡುಹಿಡಿಯಲು ಮತ್ತು ಬುಡಕಟ್ಟು ಕುಟುಂಬಗಳಲ್ಲಿ ಜಾಗೃತಿ ಮೂಡಿಸಲು ನಾವು ನಿರಂತರವಾಗಿ ಕೆಲಸ ಮಾಡಿದ್ದೇವೆ. ನಾನು ಗುಜರಾತ್ ಮುಖ್ಯಮಂತ್ರಿಯಾದ ನಂತರವೂ ಈ ನಿಟ್ಟಿನಲ್ಲಿ ಅನೇಕ ಅಭಿಯಾನಗಳನ್ನು ಪ್ರಾರಂಭಿಸಿದೆ. ನಾನು ಪ್ರಧಾನಿಯಾದ ನಂತರ ಜಪಾನ್‌ಗೆ ಭೇಟಿ ನೀಡಿದಾಗ, ಅಲ್ಲಿ ನೊಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿಯೊಬ್ಬರನ್ನು ಭೇಟಿಯಾದೆ. ಕುಡಗೋಲು ಕೋಶ ರೋಗದ ಬಗ್ಗೆ ಅವರು ಸಾಕಷ್ಟು ಸಂಶೋಧನೆ ಮಾಡಿದ್ದಾರೆ ಎಂದು ನನಗೆ ತಿಳಿಯಿತು. ಕುಡಗೋಲು ಕೋಶ ರಕ್ತಹೀನತೆಗೆ ಪರಿಹಾರವನ್ನು ಕಂಡುಹಿಡಿಯಲು ನಾನು ಅವರ ಸಹಾಯವನ್ನು ಕೋರಿದೆ.
ಸ್ನೇಹಿತರೇ,
ಕುಡಗೋಲು ಕೋಶ ರಕ್ತಹೀನತೆಯಿಂದ ಮುಕ್ತಿ ಪಡೆಯುವ ಈ ಅಭಿಯಾನವು 'ಅಮೃತ ಕಾಲ'ದ ಮುಖ್ಯ ಧ್ಯೇಯವಾಗಲಿದೆ. ದೇಶವು ಸ್ವಾತಂತ್ರ್ಯದ 100ನೇ ವರ್ಷವನ್ನು ಆಚರಿಸುವ ವೇಳೆಗೆ, ನಾವು ನಮ್ಮ ಬುಡಕಟ್ಟು ಕುಟುಂಬಗಳನ್ನು ಕುಡಗೋಲು ಕೋಶ ರಕ್ತಹೀನತೆಯಿಂದ ಮುಕ್ತಗೊಳಿಸುತ್ತೇವೆ ಮತ್ತು ಸಮರೋಪಾದಿಯಲ್ಲಿ ಇದಕ್ಕಾಗಿ ಒಟ್ಟಾಗಿ ಕೆಲಸ ಮಾಡುವ ಮೂಲಕ 2047ರ ವೇಳೆಗೆ ರಾಷ್ಟ್ರವನ್ನು ಈ ಪಿಡುಗಿನಿಂದ ಮುಕ್ತಗೊಳಿಸುತ್ತೇವೆ ಎಂದು ನಾನು ನಂಬಿದ್ದೇನೆ. ಇದಕ್ಕಾಗಿ, ನಾವೆಲ್ಲರೂ ನಮ್ಮ ಜವಾಬ್ದಾರಿಗಳನ್ನು ಪೂರೈಸಬೇಕು. ಸರ್ಕಾರ, ಆರೋಗ್ಯ ಕಾರ್ಯಕರ್ತರು ಮತ್ತು ಬುಡಕಟ್ಟು ಸಮುದಾಯಗಳು ಸಮನ್ವಯದಿಂದ ಒಟ್ಟಾಗಿ ಕೆಲಸ ಮಾಡುವುದು ಅತ್ಯಗತ್ಯ. ಕುಡಗೋಲು ಕೋಶ ರಕ್ತಹೀನತೆ ಹೊಂದಿರುವ ರೋಗಿಗಳಿಗೆ ರಕ್ತ ವರ್ಗಾವಣೆಯ ಅಗತ್ಯವಿರುತ್ತದೆ. ಆದ್ದರಿಂದ, ಅವರಿಗಾಗಿ ರಕ್ತ ಬ್ಯಾಂಕ್ ಗಳನ್ನು ತೆರೆಯಲಾಗುತ್ತಿದೆ. ಅವರ ಚಿಕಿತ್ಸೆಗಾಗಿ ಅಸ್ಥಿಮಜ್ಜೆ ಕಸಿ ಸೌಲಭ್ಯಗಳನ್ನು ವಿಸ್ತರಿಸಲಾಗುತ್ತಿದೆ. ಕುಡಗೋಲು ಕೋಶ ರಕ್ತಹೀನತೆ ಹೊಂದಿರುವ ರೋಗಿಗಳು ಪರೀಕ್ಷೆಗೆ ಒಳಗಾಗುವುದು ಎಷ್ಟು ಮುಖ್ಯ ಎಂದು ನಿಮಗೆಲ್ಲಾ ತಿಳಿದಿದೆ. ಯಾವುದೇ ಬಾಹ್ಯ ರೋಗಲಕ್ಷಣಗಳಿಲ್ಲದ ಕಾರಣ, ಯಾರಾದರೂ ಕುಡಗೋಲು ಕೋಶದ ಗುಣಲಕ್ಷಣದ ವಾಹಕರಾಗಬಹುದು. ಅಂತಹ ವ್ಯಕ್ತಿಗಳು ಅವರಿಗೇ ಅರಿವಿಲ್ಲದೆ ಈ ರೋಗವನ್ನು ತಮ್ಮ ಮಕ್ಕಳಿಗೆ ರವಾನಿಸಬಹುದು. ಆದ್ದರಿಂದ, ಪರೀಕ್ಷೆಗೆ ಒಳಗಾಗುವುದು, ಸ್ಕ್ರೀನಿಂಗ್‌ಗೆ ಒಳಗಾಗುವುದು ಮತ್ತು ವಾಹಕಗಳನ್ನು ಗುರುತಿಸುವುದು ಬಹಳ ಮುಖ್ಯ. ಪರೀಕ್ಷೆಗೆ ಒಳಗಾಗದ ಕಾರಣ ರೋಗಿಗಳಿಗೆ ತಮಗೆ ಈ ರೋಗ ಇರುವ ಬಗ್ಗೆ ದೀರ್ಘಕಾಲದವರೆಗೆ ಗೊತ್ತಾಗುವುದಿಲ್ಲ. ಮನ್ಸುಖ್ ಭಾಯ್ ಅವರು ಮೊದಲೇ ಹೇಳಿದಂತೆ, ಜಾತಕ ಮತ್ತು ಜಮ್ಮ ಕುಂಡಲಿ ಹೋಲಿಕೆ ಪರಿಕಲ್ಪನೆಯು ಅನೇಕ ಕುಟುಂಬಗಳಲ್ಲಿ ಪ್ರಚಲಿತದಲ್ಲಿದೆ. ಅವರು ಮದುವೆಗೆ ಮುಂಚಿತವಾಗಿ ಜಾತಕ ಮತ್ತು ಜನ್ಮ ಕುಂಡಲಿ ಹೊಂದಾಣಿಕೆ ಮಾಡುತ್ತಾರೆ. ನೀವು ಜಾತಕವನ್ನು ಹೊಂದಾಣಿಕೆ ಮಾಡುತ್ತೀರೋ ಇಲ್ಲವೋ ಆದರೆ, ನೀವು ಕುಡಗೋಲು ಕೋಶ ತಪಾಸಣೆಯ ವರದಿ, ಸರಕಾರ ನೀಡುವ ಕಾರ್ಡ್ ಅನ್ನು ಹೊಂದಾಣಿಕೆ ಮಾಡುವುದು ಅತ್ಯಗತ್ಯ. ಆ ನಂತರವಷ್ಟೇ ಮದುವೆಯೊಂದಿಗೆ ಮುಂದುವರಿಯಿರಿ ಎಂದು ಮನ್ಸುಖ್ ಅವರು ಹೇಳಿದರು.
ಸ್ನೇಹಿತರೇ,
ಈ ಮೂಲಕ ಈ ರೋಗವು ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಹೋಗುವುದನ್ನು ನಾವು ತಡೆಯಬಹುದು. ಆದ್ದರಿಂದ, ಸ್ಕ್ರೀನಿಂಗ್ ಅಭಿಯಾನದಲ್ಲಿ ಭಾಗವಹಿಸಲು, ಕಾರ್ಡ್ ಪಡೆಯಲು ಮತ್ತು ರೋಗ ಪರೀಕ್ಷೆಗೆ ಒಳಗಾಗಲು ನಾನು ಪ್ರತಿಯೊಬ್ಬ ವ್ಯಕ್ತಿಯನ್ನು ಒತ್ತಾಯಿಸುತ್ತೇನೆ. ಸಮಾಜವು ಇದರ ಜವಾಬ್ದಾರಿಯನ್ನು ಹೆಚ್ಚು ವಹಿಸಿಕೊಂಡಷ್ಟೂ ಕುಡಗೋಲು ಕೋಶ ರಕ್ತಹೀನತೆಯನ್ನು ತೊಡೆದುಹಾಕುವುದು ಸುಲಭವಾಗುತ್ತದೆ.
ಸ್ನೇಹಿತರೇ,
ರೋಗಗಳು ಒಬ್ಬ ವ್ಯಕ್ತಿಯ ಮೇಲೆ ಮಾತ್ರ ಪರಿಣಾಮ ಬೀರುವುದಿಲ್ಲ. ಕುಟುಂಬದಲ್ಲಿ ಯಾರಾದರೂ ಅನಾರೋಗ್ಯಕ್ಕೆ ಒಳಗಾದಾಗ, ಅದು ಇಡೀ ಕುಟುಂಬದ ಮೇಲೆ ಪರಿಣಾಮ ಬೀರುತ್ತದೆ. ಒಬ್ಬ ವ್ಯಕ್ತಿಯು ಅನಾರೋಗ್ಯಕ್ಕೆ ಒಳಗಾದಾಗ, ಇಡೀ ಕುಟುಂಬವು ಬಡತನ ಮತ್ತು ಅಸಹಾಯಕತೆಯ ವಿಷಮ ಚಕ್ರಕ್ಕೆ ಸಿಲುಕುತ್ತದೆ. ಒಂದು ರೀತಿಯಲ್ಲಿ, ನಾನು ನಿಮ್ಮದಕ್ಕಿಂತ ವಿಭಿನ್ನವಾದ ಕುಟುಂಬದಿಂದ ಬಂದವನೇನಲ್ಲ. ನಾನು ನಿಮ್ಮ ಹಂತವನ್ನು ದಾಟಿಯೇ ಇಲ್ಲಿಗೆ ಬಂದಿದ್ದೇನೆ. ಅದಕ್ಕಾಗಿಯೇ ನಾನು ನಿಮ್ಮ ಸಮಸ್ಯೆಗಳನ್ನು ಅರ್ಥಮಾಡಿಕೊಂಡಿದ್ದೇನೆ ಮತ್ತು ನಿಮ್ಮ ಬಗ್ಗೆ ಸಹಾನುಭೂತಿ ಹೊಂದಿದ್ದೇನೆ. ಅದಕ್ಕಾಗಿಯೇ ನಮ್ಮ ಸರ್ಕಾರ ಇಂತಹ ಗಂಭೀರ ರೋಗಗಳನ್ನು ನಿರ್ಮೂಲನೆ ಮಾಡಲು ದಣಿವರಿಯದೆ ಕೆಲಸ ಮಾಡುತ್ತಿದೆ. ಈ ಪ್ರಯತ್ನಗಳು ಈಗಾಗಲೇ ದೇಶದಲ್ಲಿ ಕ್ಷಯರೋಗ ಪ್ರಕರಣಗಳಲ್ಲಿ ಇಳಿಕೆಗೆ ಕಾರಣವಾಗಿವೆ. ಈಗ, ದೇಶವು 2025ರ ವೇಳೆಗೆ ಕ್ಷಯರೋಗವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ.
ಸ್ನೇಹಿತರೇ,
ನಮ್ಮ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು, 2013 ರಲ್ಲಿ 11,000 ʻಕಾಲಾ-ಅಜರ್ʼ(ಕಪ್ಪು ಜ್ವರ) ಪ್ರಕರಣಗಳು ಇದ್ದವು. ಇಂದು, ಆ ಸಂಖ್ಯೆ ಸಾವಿರಕ್ಕಿಂತ ಕಡಿಮೆಯಾಗಿದೆ. 2013ರಲ್ಲಿ, 10 ಲಕ್ಷ ಮಲೇರಿಯಾ ಪ್ರಕರಣಗಳು ಇದ್ದವು, ಆದರೆ 2022ರ ವೇಳೆಗೆ, ಆ ಸಂಖ್ಯೆ 2 ಲಕ್ಷಕ್ಕಿಂತ ಕಡಿಮೆಯಾಗಿದೆ. 2013ರಲ್ಲಿ, ಸುಮಾರು 1.25 ಲಕ್ಷ ಕುಷ್ಠರೋಗ ಪ್ರಕರಣಗಳು ಇದ್ದವು, ಆದರೆ ಈಗ ಈ ಸಂಖ್ಯೆ ಸುಮಾರು ಎಪ್ಪತ್ತರಿಂದ ಎಪ್ಪತ್ತೈದು ಸಾವಿರಕ್ಕೆ ಇಳಿದಿದೆ. ಈ ಹಿಂದೆ ʻಮೆನಿಂಜೈಟಿಸ್ʼನಿಂದ (ಮೆದುಳಿನಪೊರೆ ಊತ) ಉಂಟಾದ ಹಾನಿ ನಮಗೆಲ್ಲರಿಗೂ ತಿಳಿದಿದೆ. ಇತ್ತೀಚಿನ ವರ್ಷಗಳಲ್ಲಿ, ಈ ರೋಗದಿಂದ ಬಳಲುತ್ತಿರುವ ರೋಗಿಗಳ ಸಂಖ್ಯೆಯಲ್ಲಿಯೂ ಇಳಿಕೆ ಕಂಡುಬಂದಿದೆ. ಇವು ಕೇವಲ ಅಂಕಿ-ಅಂಶಗಳಲ್ಲ. ರೋಗಗಳು ಕಡಿಮೆಯಾದಾಗ, ಜನರು ದುಃಖ, ನೋವು, ಸಂಕಟ ಮತ್ತು ಸಾವಿನಿಂದ ರಕ್ಷಿಸಲ್ಪಡುತ್ತಾರೆ.
ಸಹೋದರ ಸಹೋದರಿಯರೇ,
ನಮ್ಮ ಸರ್ಕಾರದ ಪ್ರಯತ್ನವು ರೋಗಗಳ ಹೊರೆಯನ್ನು ಕಡಿಮೆ ಮಾಡುವುದು ಮಾತ್ರವಲ್ಲದೆ ಅವುಗಳಿಗೆ ಸಂಬಂಧಿಸಿದ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವುದು. ಅದಕ್ಕಾಗಿಯೇ ನಾವು ʻಆಯುಷ್ಮಾನ್ ಭಾರತ್ʼ ಯೋಜನೆಯನ್ನು ಪರಿಚಯಿಸಿದ್ದೇವೆ, ಇದು ಜನರ ಮೇಲಿನ ಹೊರೆಯನ್ನು ಕಡಿಮೆ ಮಾಡಿದೆ. ಇಂದು ಮಧ್ಯಪ್ರದೇಶ ಒಂದರಲ್ಲೇ ಒಂದು ಕೋಟಿ ಜನರಿಗೆ ʻಆಯುಷ್ಮಾನ್ ಕಾರ್ಡ್ʼ ನೀಡಲಾಗಿದೆ. ಒಬ್ಬ ಬಡ ವ್ಯಕ್ತಿಯು ಎಂದಾದರೂ ಆಸ್ಪತ್ರೆಗೆ ಹೋಗಬೇಕಾಗಿ ಬಂದರೆ, ಈ ಕಾರ್ಡ್ ಅವನ ಜೇಬಿನಲ್ಲಿ 5 ಲಕ್ಷ ರೂ.ಗಳ ಎಟಿಎಂ ಕಾರ್ಡ್‌ನಂತೆ ಕಾರ್ಯನಿರ್ವಹಿಸುತ್ತದೆ. ನೆನಪಿಡಿ, ನೀವು ಇಂದು ಪಡೆದ ಕಾರ್ಡ್ ಆಸ್ಪತ್ರೆಯ ವೆಚ್ಚಗಳಿಗೆ ಸಂಬಂಧಿಸಿದಂತೆ 5 ಲಕ್ಷ ರೂಪಾಯಿಗಳ ಮೌಲ್ಯದ್ದಾಗಿದೆ. ನೀವು ಈ ಕಾರ್ಡ್ ಹೊಂದಿದ್ದರೆ, ಯಾರೂ ನಿಮಗೆ ಚಿಕಿತ್ಸೆಯನ್ನು ನಿರಾಕರಿಸಲು ಸಾಧ್ಯವಿಲ್ಲ, ಅಲ್ಲದೆ, ಅವರು ಹಣವನ್ನು ಕೇಳುವುದಿಲ್ಲ. ಭಾರತದಲ್ಲಿ ನೀವು ಯಾವ ಮೂಲೆಯಲ್ಲಿದ್ದರೂ, ಏನೇ ತೊಂದರೆಯನ್ನು ಎದುರಿಸಿದರೂ ನೀವು ಅಲ್ಲಿನ ಆಸ್ಪತ್ರೆಗೆ ಹೋಗಿ ಮೋದಿಯವರಿಂದ ಕೊಡಲಾದ ಈ ಗ್ಯಾರಂಟಿಯನ್ನು ತೋರಿಸಿದರೆ, ಅವರು ನಿಮಗೆ ಅಲ್ಲಿಯೂ ಚಿಕಿತ್ಸೆ ನೀಡುತ್ತಾರೆ. ಈ ಆಯುಷ್ಮಾನ್ ಕಾರ್ಡ್ ಬಡವರ ಚಿಕಿತ್ಸೆಗಾಗಿ 5 ಲಕ್ಷ ರೂಪಾಯಿಗಳ ʻಗ್ಯಾರಂಟಿʼಯಾಗಿದೆ ಮತ್ತು ಇದು ಮೋದಿಯವರ ʻಗ್ಯಾರಂಟಿʼಯಾಗಿದೆ.
ಸಹೋದರ ಸಹೋದರಿಯರೇ,
ʻಆಯುಷ್ಮಾನ್ ಯೋಜನೆʼ ಅಡಿಯಲ್ಲಿ ದೇಶಾದ್ಯಂತ ಸುಮಾರು ಐದು ಕೋಟಿ ಬಡ ವ್ಯಕ್ತಿಗಳಿಗೆ ಚಿಕಿತ್ಸೆ ನೀಡಲಾಗಿದೆ. ʻಆಯುಷ್ಮಾನ್ ಭಾರತ್ ಕಾರ್ಡ್ʼ ಇಲ್ಲದಿದ್ದರೆ, ಈ ಬಡ ಜನರು ರೋಗದ ಚಿಕಿತ್ಸೆಗಾಗಿ ಒಂದು ಲಕ್ಷ ಕೋಟಿ ರೂ.ಗಿಂತ ಹೆಚ್ಚು ಖರ್ಚು ಮಾಡಬೇಕಾಗಿತ್ತು. ಈ ಪೈಕಿ ಎಷ್ಟು ಜನರು ಜೀವನದಲ್ಲಿ ಭರವಸೆಯನ್ನು ಕಳೆದುಕೊಳ್ಳುತ್ತಿದ್ದರು ಎಂದು ನೀವೇ ಊಹಿಸಿ. ವೈದ್ಯಕೀಯ ಚಿಕಿತ್ಸೆ ಪಡೆಯಲು ಎಷ್ಟು ಕುಟುಂಬಗಳು ತಮ್ಮ ಮನೆಗಳನ್ನು ಮತ್ತು ಬಹುಶಃ ತಮ್ಮ ಕೃಷಿಭೂಮಿಯನ್ನು ಮಾರಾಟ ಮಾಡಬೇಕಾಗಿತ್ತು? ಆದರೆ ನಮ್ಮ ಸರ್ಕಾರವು ಪ್ರತಿಯೊಂದು ಕಷ್ಟದ ಪರಿಸ್ಥಿತಿಯಲ್ಲೂ ಬಡವರ ಪರವಾಗಿ ನಿಂತಿದೆ. ಈ 5 ಲಕ್ಷ ರೂ.ಗಳ ʻಆಯುಷ್ಮಾನ್ ಯೋಜನೆʼ ಗ್ಯಾರಂಟಿ ಕಾರ್ಡ್ ಬಡವರ ದೊಡ್ಡ ಚಿಂತೆಯನ್ನು ಕಡಿಮೆ ಮಾಡುವ ʻಗ್ಯಾರಂಟಿʼಯಾಗಿದೆ. ಆಯುಷ್ಮಾನ್ ಅನುಷ್ಠಾನದಲ್ಲಿ ತೊಡಗಿರುವವರಿಗೆ, ಈ ಕಾರ್ಡ್ ಅನ್ನು ನೋಡಿ - ಇದು 5 ಲಕ್ಷ ರೂಪಾಯಿಗಳವರೆಗೆ ಉಚಿತ ಚಿಕಿತ್ಸೆ ಎಂದು ಹೇಳುತ್ತದೆ. ಈ ದೇಶದಲ್ಲಿ ಒಬ್ಬ ಬಡ ವ್ಯಕ್ತಿಗೆ ಯಾರೂ 5 ಲಕ್ಷ ರೂಪಾಯಿಗಳ ʻಗ್ಯಾರಂಟಿʼಯನ್ನು ನೀಡಿಲ್ಲ. ಬಿಜೆಪಿ ಸರ್ಕಾರ; ಮೋದಿ ಅವರು ನಿಮಗೆ 5 ಲಕ್ಷ ರೂಪಾಯಿಗಳ ಗ್ಯಾರಂಟಿಯೊಂದಿಗೆ ಈ ಕಾರ್ಡ್ ನೀಡಿದ್ದಾರೆ.
ಸ್ನೇಹಿತರೇ,
ಈ ಎಲ್ಲಾ ʻಗ್ಯಾರಂಟಿʼಗಳ ಮಾತುಗಳ ಮಧ್ಯೆ, ಸುಳ್ಳು ಗ್ಯಾರಂಟಿಗಳನ್ನು ನೀಡುವವರ ಬಗ್ಗೆಯೂ ನೀವು ಜಾಗರೂಕರಾಗಿರಬೇಕು. ತಮ್ಮದೇ ಆದ ಯಾವುದೇ ಗ್ಯಾರಂಟಿಗಳನ್ನು ಹೊಂದಿರದ ವ್ಯಕ್ತಿಗಳು ಗ್ಯಾರಂಟಿಗಳ ಆಧಾರದ ಮೇಲೆ ಹೊಸ ಯೋಜನೆಗಳೊಂದಿಗೆ ನಿಮ್ಮ ಬಳಿಗೆ ಬರುತ್ತಿದ್ದಾರೆ. ಅವರ ಗ್ಯಾರಂಟಿಗಳಲ್ಲಿ ಅಡಗಿರುವ ನ್ಯೂನತೆಗಳನ್ನು ಗುರುತಿಸಿ. ಸುಳ್ಳು ಗ್ಯಾರಂಟಿಗಳ ಹೆಸರಿನಲ್ಲಿ ಅವರು ಆಡುವ ಮೋಸದ ಆಟದ ವಿರುದ್ಧ ನೀವು ಜಾಗರೂಕರಾಗಿರಬೇಕು.
ಸ್ನೇಹಿತರೇ,
ಅವರು ಉಚಿತ ವಿದ್ಯುತ್ನ ʻಗ್ಯಾರಂಟಿʼ ನೀಡಿದರೆ, ಅವರು ವಿದ್ಯುತ್ ದರವನ್ನು ಹೆಚ್ಚಿಸಲಿದ್ದಾರೆ ಎಂದರ್ಥ. ಅವರು ಉಚಿತ ಪ್ರಯಾಣದ ʻಗ್ಯಾರಂಟಿʼ ನೀಡಿದರೆ, ಆ ರಾಜ್ಯದ ಸಾರಿಗೆ ವ್ಯವಸ್ಥೆ ಹಾಳಾಗುತ್ತದೆ ಎಂದರ್ಥ. ಅವರು ಹೆಚ್ಚಿನ ಪಿಂಚಣಿಯ ಗ್ಯಾರಂಟಿ ನೀಡಿದರೆ ಆ ರಾಜ್ಯದ ನೌಕರರು ತಮ್ಮ ಸಂಬಳವನ್ನು ಸಮಯಕ್ಕೆ ಸರಿಯಾಗಿ ಪಡೆಯುವುದಿಲ್ಲ ಎಂದರ್ಥ. ಅವರು ಅಗ್ಗದ ಪೆಟ್ರೋಲ್ನ ಗ್ಯಾರಂಟಿ ನೀಡಿದರೆ, ಅವರು ತೆರಿಗೆಗಳನ್ನು ಹೆಚ್ಚಿಸುವ ಮೂಲಕ ನಿಮ್ಮ ಜೇಬಿನಿಂದ ಹಣವನ್ನು ಹೊರತೆಗೆಯಲು ತಯಾರಿ ನಡೆಸುತ್ತಿದ್ದಾರೆ ಎಂದರ್ಥ. ಅವರು ಹೆಚ್ಚಿನ ಉದ್ಯೋಗದ ʻಗ್ಯಾರಂಟಿʼ ನೀಡಿದರೆ ಅವರು ಅಲ್ಲಿನ ಕೈಗಾರಿಕೆಗಳು ಮತ್ತು ವ್ಯವಹಾರಗಳನ್ನು ನಾಶಪಡಿಸುವ ನೀತಿಗಳನ್ನು ತರುತ್ತಾರೆ ಎಂದರ್ಥ. ಕಾಂಗ್ರೆಸ್‌ನಂತಹ ಪಕ್ಷಗಳ ʻಗ್ಯಾರಂಟಿʼಯು ಮೋಸದ ಉದ್ದೇಶಗಳು ಮತ್ತು ಬಡವರಿಗೆ ಹಾನಿಯನ್ನು ಸೂಚಿಸುತ್ತದೆ. ಇದು ಅವರ ಆಟ. 70 ವರ್ಷಗಳಲ್ಲಿ ಬಡವರಿಗೆ ತೃಪ್ತಿದಾಯಕ ಊಟವನ್ನು ಒದಗಿಸುವ ಭರವಸೆಯನ್ನು ಅವರು ನೀಡಲು ಸಾಧ್ಯವಾಗಲಿಲ್ಲ. ಆದರೆ 80 ಕೋಟಿಗೂ ಹೆಚ್ಚು ಜನರಿಗೆ ಉಚಿತ ಪಡಿತರವನ್ನು ನಾವು ಖಾತರಿಪಡಿಸಿದ್ದೇವೆ. ʻಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆʼ ಅಡಿಯಲ್ಲಿ ಬಡವರು ಅದನ್ನು ಪಡೆಯುತ್ತಿದ್ದಾರೆ. 70 ವರ್ಷಗಳಲ್ಲಿ ಬಡವರಿಗೆ ಕೈಗೆಟುಕುವ ಆರೋಗ್ಯ ರಕ್ಷಣೆಯ ʻಗ್ಯಾರಂಟಿʼ ನೀಡಲು ಅವರಿಗೆ ಸಾಧ್ಯವಾಗಲಿಲ್ಲ. ಆದರೆ ʻಆಯುಷ್ಮಾನ್ ಭಾರತ್ʼ ಯೋಜನೆಯಡಿ 50 ಕೋಟಿ ಫಲಾನುಭವಿಗಳಿಗೆ ಆರೋಗ್ಯ ವಿಮೆಯ ಖಾತರಿ ನೀಡಲಾಗಿದೆ. ಅವರು 70 ವರ್ಷಗಳಲ್ಲಿ ಮಹಿಳೆಯರಿಗೆ ಹೊಗೆ ಮುಕ್ತ ಜೀವನದ ʻಗ್ಯಾರಂಟಿʼ ನೀಡಲು ಸಾಧ್ಯವಾಗಲಿಲ್ಲ. ಆದರೆ ಉಜ್ವಲ ಯೋಜನೆಯಡಿ ಸುಮಾರು 10 ಕೋಟಿ ಮಹಿಳೆಯರಿಗೆ ಹೊಗೆ ಮುಕ್ತ ಜೀವನ ಖಾತರಿಪಡಿಸಲಾಗಿದೆ. 70 ವರ್ಷಗಳಲ್ಲಿ ಬಡವರು ತಮ್ಮ ಕಾಲ ಮೇಲೆ ನಿಲ್ಲುತ್ತಾರೆ ಎಂದು ಅವರು ಭರವಸೆ ನೀಡಲು ಸಾಧ್ಯವಾಗಲಿಲ್ಲ. ಆದರೆ ಮುದ್ರಾ ಯೋಜನೆ ಅಡಿಯಲ್ಲಿ 8.5 ಕೋಟಿ ಜನರಿಗೆ ಗೌರವಾನ್ವಿತ ಸ್ವಯಂ ಉದ್ಯೋಗವನ್ನು ಖಾತರಿಪಡಿಸಲಾಗಿದೆ.
ಅವರ ʻಗ್ಯಾರಂಟಿʼಯ ಅರ್ಥ ಒಂದು ರೀತಿಯ ವಂಚನೆ ಅಥವಾ ಮೋಸ. ಇಂದು, ಒಗ್ಗೂಡುತ್ತೇವೆ ಎಂದು ಹೇಳಿಕೊಳ್ಳುವವರ ಹಳೆಯ ಹೇಳಿಕೆಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಅವರು ಯಾವಾಗಲೂ ಒಬ್ಬರನ್ನೊಬ್ಬರು ಟೀಕಿಸಿದ್ದಾರೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ವಿರೋಧ ಪಕ್ಷದ ಏಕತೆಗೆ ಯಾವುದೇ ʻಗ್ಯಾರಂಟಿʼ ಇಲ್ಲ. ಈ ವಂಶಪಾರಂಪರ್ಯ ಪಕ್ಷಗಳು ತಮ್ಮ ಸ್ವಂತ ಕುಟುಂಬಗಳ ಕಲ್ಯಾಣಕ್ಕಾಗಿ ಮಾತ್ರ ಕೆಲಸ ಮಾಡಿವೆ. ದೇಶದ ಸಾಮಾನ್ಯ ಜನರನ್ನು ಮೇಲೆತ್ತುವ ʻಗ್ಯಾರಂಟಿʼ ಅವರಿಗಿಲ್ಲ. ಭ್ರಷ್ಟಾಚಾರದ ಆರೋಪ ಹೊತ್ತವರು ಜಾಮೀನಿನ ಮೇಲೆ ಮುಕ್ತವಾಗಿ ಓಡಾಡುತ್ತಿದ್ದಾರೆ. ಹಗರಣಗಳಿಗಾಗಿ ಶಿಕ್ಷೆ ಅನುಭವಿಸುತ್ತಿರುವವರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಅವರಿಗೆ ಭ್ರಷ್ಟಾಚಾರ ಮುಕ್ತ ಆಡಳಿತದ ʻಗ್ಯಾರಂಟಿʼ ಇಲ್ಲ. ಅವರು ಒಂದೇ ಧ್ವನಿಯಲ್ಲಿ ದೇಶದ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅವರು ರಾಷ್ಟ್ರ ವಿರೋಧಿ ಶಕ್ತಿಗಳೊಂದಿಗೆ ಸಭೆಗಳನ್ನು ನಡೆಸುತ್ತಿದ್ದಾರೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಅವರಿಗೆ ಭಯೋತ್ಪಾದನೆ ಮುಕ್ತ ಭಾರತದ ʻಗ್ಯಾರಂಟಿʼ ಇಲ್ಲ. ಅವರು ಭರವಸೆಗಳನ್ನು ನೀಡುತ್ತಾರೆ ಮತ್ತು ಹೋಗುತ್ತಾರೆ, ಆದರೆ ಪರಿಣಾಮಗಳನ್ನು ನೀವು ಸಹಿಸಬೇಕಾಗುತ್ತದೆ. ಅವರು ʻಗ್ಯಾರಂಟಿʼಗಳನ್ನು ನೀಡುವ ಮೂಲಕ ತಮ್ಮ ಜೇಬುಗಳನ್ನು ತುಂಬಿಸಿಕೊಳ್ಳುತ್ತಾರೆ, ಆದರೆ ನಿಮ್ಮ ಮಕ್ಕಳು ತೊಂದರೆ ಅನುಭವಿಸುತ್ತಾರೆ. ಅವರು ʻಗ್ಯಾರಂಟಿʼಗಳನ್ನು ನೀಡುವ ಮೂಲಕ ತಮ್ಮ ಕುಟುಂಬಗಳನ್ನು ಮುಂದೆ ಕೊಂಡೊಯ್ಯುತ್ತಾರೆ, ಆದರೆ ದೇಶವು ಬೆಲೆ ತೆರಬೇಕಾಗುತ್ತದೆ. ಆದ್ದರಿಂದ, ನೀವು ಕಾಂಗ್ರೆಸ್ ಸೇರಿದಂತೆ ರಾಜಕೀಯ ಪಕ್ಷಗಳು ಮತ್ತು ಅವುಗಳ ʻಗ್ಯಾರಂಟಿʼಗಳ ಬಗ್ಗೆ ಜಾಗರೂಕರಾಗಿರಬೇಕು.
ಸ್ನೇಹಿತರೇ,
ಸುಳ್ಳು ʻಗ್ಯಾರಂಟಿʼಗಳನ್ನು ನೀಡುವವರ ವರ್ತನೆ ಸದಾ ಬುಡಕಟ್ಟು ಸಮುದಾಯಗಳ ವಿರುದ್ಧವಾಗಿಯೇ ಇದೆ. ಈ ಹಿಂದೆ, ಬುಡಕಟ್ಟು ಸಮುದಾಯಗಳ ಯುವಕರಿಗೆ ಭಾಷೆ ದೊಡ್ಡ ಸವಾಲಾಗಿತ್ತು. ಆದರೆ, ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ಈಗ ಸ್ಥಳೀಯ ಭಾಷೆಯಲ್ಲಿ ಶಿಕ್ಷಣದ ಸೌಲಭ್ಯವನ್ನು ಒದಗಿಸುತ್ತದೆ. ಆದರೆ ಸುಳ್ಳು ʻಗ್ಯಾರಂಟಿʼಗಳನ್ನು ನೀಡುವವರು ಮತ್ತೊಮ್ಮೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವಿರೋಧಿಸುತ್ತಿದ್ದಾರೆ. ನಮ್ಮ ಬುಡಕಟ್ಟು ಸಹೋದರ-ಸಹೋದರಿಯರ ಮಕ್ಕಳು ತಮ್ಮದೇ ಆದ ಭಾಷೆಯಲ್ಲಿ ಶಿಕ್ಷಣವನ್ನು ಪಡೆಯುವುದನ್ನು ಅವರು ಬಯಸುವುದಿಲ್ಲ. ಆದಿವಾಸಿಗಳು, ದಲಿತರು, ಹಿಂದುಳಿದ ವರ್ಗಗಳು ಮತ್ತು ಬಡವರ ಮಕ್ಕಳು ಮುಂದೆ ಸಾಗಿದರೆ, ಅವರ ವೋಟ್ ಬ್ಯಾಂಕ್ ರಾಜಕೀಯಕ್ಕೆ ಅಡ್ಡಿಯಾಗುತ್ತದೆ ಎಂದು ಅವರಿಗೆ ಗೊತ್ತು. ಬುಡಕಟ್ಟು ಪ್ರದೇಶಗಳಲ್ಲಿನ ಶಾಲೆಗಳು ಮತ್ತು ಕಾಲೇಜುಗಳ ಮಹತ್ವವನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಅದಕ್ಕಾಗಿಯೇ ನಮ್ಮ ಸರ್ಕಾರವು ಬುಡಕಟ್ಟು ಮಕ್ಕಳಿಗೆ 400 ಕ್ಕೂ ಹೆಚ್ಚು ʻಏಕಲವ್ಯ ಶಾಲೆʼಗಳಲ್ಲಿ ವಸತಿ ಶಿಕ್ಷಣವನ್ನು ಪಡೆಯುವ ಅವಕಾಶ ಒದಗಿಸಿದೆ. ಮಧ್ಯಪ್ರದೇಶ ಒಂದರಲ್ಲೇ ಸುಮಾರು 24,000 ವಿದ್ಯಾರ್ಥಿಗಳು ಇಂತಹ ಶಾಲೆಗಳಲ್ಲಿ ಓದುತ್ತಿದ್ದಾರೆ.
ಸ್ನೇಹಿತರೇ,
ಹಿಂದಿನ ಸರ್ಕಾರಗಳು ಬುಡಕಟ್ಟು ಸಮಾಜವನ್ನು ನಿರಂತರವಾಗಿ ನಿರ್ಲಕ್ಷಿಸಿದವು. ನಾವು ಬುಡಕಟ್ಟು ವ್ಯವಹಾರಗಳ ಪ್ರತ್ಯೇಕ ಸಚಿವಾಲಯವನ್ನೇ ಸ್ಥಾಪಿಸಿದ್ದೇವೆ ಮತ್ತು ಅದನ್ನು ನಮ್ಮ ಆದ್ಯತೆಯನ್ನಾಗಿ ಮಾಡಿದ್ದೇವೆ. ನಾವು ಈ ಸಚಿವಾಲಯದ ಬಜೆಟ್ ಅನ್ನು ಮೂರು ಪಟ್ಟು ಹೆಚ್ಚಿಸಿದ್ದೇವೆ. ಈ ಹಿಂದೆ, ಕಾಡು ಮತ್ತು ಭೂಮಿಯನ್ನು ಶೋಷಿಸಿದವರಿಗೆ ರಕ್ಷಣೆ ಸಿಗುತ್ತಿತ್ತು. ನಾವು ಅರಣ್ಯ ಹಕ್ಕುಗಳ ಕಾಯ್ದೆಯಡಿ 20 ಲಕ್ಷಕ್ಕೂ ಹೆಚ್ಚು ಹಕ್ಕುಪತ್ರಗಳನ್ನು ವಿತರಿಸಿದ್ದೇವೆ. ಹಿಂದಿನ ಸರ್ಕಾರದವರು ಹಲವು ವರ್ಷಗಳಿಂದ ʻಪಂಚಾಯತ್ (ಪರಿಶಿಷ್ಟ ಪ್ರದೇಶಗಳಿಗೆ ವಿಸ್ತರಣೆ) ಕಾಯ್ದೆʼ (ಪಿಇಎಸ್‌ಎ) ಹೆಸರಿನಲ್ಲಿ ರಾಜಕೀಯ ಆಟಗಳನ್ನು ಆಡಿದರು. ಆದರೆ, ನಾವು ಈ ಕಾಯ್ದೆಯನ್ನು ಜಾರಿಗೆ ತಂದಿದ್ದೇವೆ ಮತ್ತು ಬುಡಕಟ್ಟು ಸಮಾಜಕ್ಕೆ ಅವರ ಹಕ್ಕುಗಳನ್ನು ನೀಡಿದ್ದೇವೆ. ಹಿಂದೆ, ಬುಡಕಟ್ಟು ಸಂಪ್ರದಾಯಗಳು ಮತ್ತು ಕಲಾತ್ಮಕ ಕೌಶಲ್ಯಗಳನ್ನು ಅಪಹಾಸ್ಯ ಮಾಡಲಾಗುತ್ತಿತ್ತು. ಆದರೆ ನಾವು ʻಆದಿ ಮಹೋತ್ಸವʼ (ಬುಡಕಟ್ಟು ಉತ್ಸವ) ದಂತಹ ಕಾರ್ಯಕ್ರಮಗಳನ್ನು ಪ್ರಾರಂಭಿಸಿದ್ದೇವೆ.
ಸ್ನೇಹಿತರೇ,
ಕಳೆದ ಒಂಬತ್ತು ವರ್ಷಗಳಲ್ಲಿ, ಬುಡಕಟ್ಟು ಹೆಮ್ಮೆಯನ್ನು ಸಂರಕ್ಷಿಸಲು ಮತ್ತು ಹೆಚ್ಚಿಸಲು ನಿರಂತರ ಪ್ರಯತ್ನಗಳನ್ನು ಮಾಡಲಾಗಿದೆ. ಈಗ, ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮದಿನವಾದ ನವೆಂಬರ್ 15 ರಂದು ಇಡೀ ದೇಶವು 'ಜನಜಾತಿಯ ಗೌರವ್ ದಿವಾಸ್' (ರಾಷ್ಟ್ರೀಯ ಬುಡಕಟ್ಟು ಹೆಮ್ಮೆಯ ದಿನ) ಆಚರಿಸುತ್ತದೆ. ದೇಶದ ವಿವಿಧ ರಾಜ್ಯಗಳಲ್ಲಿ ಬುಡಕಟ್ಟು ಸಮುದಾಯದ ಸ್ವಾತಂತ್ರ್ಯ ಹೋರಾಟಗಾರರಿಗೆ ಮೀಸಲಾದ ವಸ್ತುಸಂಗ್ರಹಾಲಯಗಳನ್ನು ಸ್ಥಾಪಿಸಲಾಗುತ್ತಿದೆ. ಈ ಪ್ರಯತ್ನಗಳ ನಡುವೆ, ಹಿಂದಿನ ಸರ್ಕಾರಗಳ ನಡವಳಿಕೆಯನ್ನು ನಾವು ಮರೆಯಬಾರದು. ದಶಕಗಳ ಕಾಲ ದೇಶದಲ್ಲಿ ಸರ್ಕಾರವನ್ನು ನಡೆಸಿದವರ ಮನೋಭಾವವು ಬುಡಕಟ್ಟು ಸಮಾಜ ಮತ್ತು ಬಡವರ ಬಗ್ಗೆ ಸಂವೇದನಾರಹಿತವಾಗಿತ್ತು ಮತ್ತು ಅಗೌರವದಿಂದ ಕೂಡಿತ್ತು. ಬುಡಕಟ್ಟು ಮಹಿಳೆಯನ್ನು ದೇಶದ ರಾಷ್ಟ್ರಪತಿಯನ್ನಾಗಿ ಮಾಡುವ ಚರ್ಚೆ ಬಂದಾಗ ಹಲವಾರು ಪಕ್ಷಗಳ ವರ್ತನೆ ಹೇಗಿತ್ತೆಂಬುದಕ್ಕೆ ನಾವು ಸಾಕ್ಷಿಯಾಗಿದ್ದೇವೆ. ಮಧ್ಯಪ್ರದೇಶದ ಜನರು ಸಹ ಅವರ ವರ್ತನೆಗೆ ಸಾಕ್ಷಿಯಾಗಿದ್ದಾರೆ. ಶಹದೋಲ್ ವಿಭಾಗದಲ್ಲಿ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯವನ್ನು ತೆರೆದಾಗ, ಅವರು ಅದಕ್ಕೆ ತಮ್ಮದೇ ಕುಟುಂಬದ ಹೆಸರನ್ನು ಇಟ್ಟರೆ, ಶಿವರಾಜ್ ಜಿ ಅವರ ಸರ್ಕಾರವು ಚಿಂದ್ವಾರ ವಿಶ್ವವಿದ್ಯಾಲಯಕ್ಕೆ ಮಹಾನ್ ಗೊಂಡ್ ಕ್ರಾಂತಿಕಾರಿ ರಾಜಾ ಶಂಕರ್ ಷಾ ಅವರ ಹೆಸರನ್ನು ನಾಮಕರಣ ಮಾಡಿತು. ಅವರು ತಾಂತ್ಯ ಮಾಮಾ ಅವರಂತಹ ವೀರರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದರು, ಆದರೆ ನಾವು ಪಾತಲ್ಪಾನಿ ರೈಲ್ವೆ ನಿಲ್ದಾಣಕ್ಕೆ ತಾಂತ್ಯ ಮಾಮಾ ಅವರ ಹೆಸರನ್ನು ಇಟ್ಟಿದ್ದೇವೆ. ಅವರು ಮಹಾನ್ ಗೊಂಡ್ ಸಮುದಾಯದ ನಾಯಕ ಶ್ರೀ ದಲ್ಬೀರ್ ಸಿಂಗ್ ಜಿ ಅವರ ಕುಟುಂಬಕ್ಕೂ ಅಗೌರವ ತೋರಿದರು. ನಾವು ಅದಕ್ಕೆ ಪರಿಹಾರ ನೀಡಿದ್ದೇವೆ ಮತ್ತು ಅವರನ್ನು ಗೌರವಿಸಿದ್ದೇವೆ. ನಮ್ಮ ಬುಡಕಟ್ಟು ಯುವಕರ ಮೇಲಿನ ಗೌರವ ಮತ್ತು ನಿಮ್ಮೆಲ್ಲರ ಮೇಲಿನ ಗೌರವವೇ ಬುಡಕಟ್ಟು ನಾಯಕರ ಬಗ್ಗೆ ನಮಗೆ ಇರುವ ಗೌರವವಾಗಿದೆ.
ಸ್ನೇಹಿತರೇ,
ನಾವು ಈ ಪ್ರಯತ್ನಗಳನ್ನು ಮುಂದುವರಿಸಬೇಕು ಮತ್ತು ಅವುಗಳಿಗೆ ವೇಗ ನೀಡಬೇಕು. ಇದು ನಿಮ್ಮ ಸಹಕಾರ ಮತ್ತು ನಿಮ್ಮೆಲ್ಲರ ಆಶೀರ್ವಾದದಿಂದ ಮಾತ್ರ ಸಾಧ್ಯ. ನಿಮ್ಮ ಆಶೀರ್ವಾದ ಮತ್ತು ರಾಣಿ ದುರ್ಗಾವತಿಯ ಸ್ಫೂರ್ತಿ ಈ ನಿಟ್ಟಿನಲ್ಲಿ ನಮಗೆ ಮಾರ್ಗದರ್ಶನ ನೀಡುತ್ತದೆ ಎಂದು ನನಗೆ ಖಾತರಿಯಿದೆ. ಅಕ್ಟೋಬರ್ 5ರಂದು ರಾಣಿ ದುರ್ಗಾವತಿಯ 500ನೇ ಜನ್ಮ ದಿನಾಚರಣೆ ಸಮೀಪಿಸುತ್ತಿದೆ ಎಂದು ಶಿವರಾಜ್ ಜಿ ಹೇಳಿದರು. ಇಂದು, ರಾಣಿ ದುರ್ಗಾವತಿಯ ಶೌರ್ಯಕ್ಕೆ ಸಾಕ್ಷಿಯಾದ ಈ ಪವಿತ್ರ ಭೂಮಿಯಲ್ಲಿ ನಾನು ನಿಮ್ಮೆಲ್ಲರ ನಡುವೆ ನಿಂತಿರುವಾಗಲೇ, ಭಾರತ ಸರ್ಕಾರವು ರಾಣಿ ದುರ್ಗಾವತಿಯ 500ನೇ ಜನ್ಮ ಶತಮಾನೋತ್ಸವವನ್ನು ದೇಶಾದ್ಯಂತ ಆಚರಿಸಲಿದೆ ಎಂದು ನಾನು ರಾಷ್ಟ್ರದ ಮುಂದೆ ಘೋಷಿಸುತ್ತಿದ್ದೇನೆ. ರಾಣಿ ದುರ್ಗಾವತಿ ಅವರ ಜೀವನವನ್ನು ಆಧರಿಸಿದ ಚಲನಚಿತ್ರವನ್ನು ನಿರ್ಮಿಸಲಾಗುವುದು, ಅವರ ಗೌರವಾರ್ಥ ಬೆಳ್ಳಿಯ ನಾಣ್ಯವನ್ನು ಬಿಡುಗಡೆ ಮಾಡಲಾಗುವುದು ಮತ್ತು ರಾಣಿ ದುರ್ಗಾವತಿಯನ್ನು ಒಳಗೊಂಡ ಅಂಚೆ ಚೀಟಿಯನ್ನು ಸಹ ಬಿಡುಗಡೆ ಮಾಡಲಾಗುವುದು. ಇದಲ್ಲದೆ, 500 ವರ್ಷಗಳ ಹಿಂದೆ ಜನಿಸಿದ ನಮ್ಮ ಪೂಜ್ಯ ತಾಯಿಯ ಸ್ಫೂರ್ತಿಯನ್ನು ಭಾರತ ಮತ್ತು ವಿಶ್ವದ ಪ್ರತಿಯೊಂದು ಮನೆಗೂ ಹರಡಲು ಉಪಕ್ರಮವನ್ನು ಪ್ರಾರಂಭಿಸಲಾಗುವುದು.
ಮಧ್ಯಪ್ರದೇಶವು ಅಭಿವೃದ್ಧಿಯ ಹೊಸ ಎತ್ತರವನ್ನು ಮುಟ್ಟಲಿದೆ ಮತ್ತು ನಾವು ಒಟ್ಟಾಗಿ ಅಭಿವೃದ್ಧಿ ಹೊಂದಿದ ಭಾರತದ ಕನಸನ್ನು ನನಸು ಮಾಡುತ್ತೇವೆ. ಇದೀಗ, ನಾನು ಇಲ್ಲಿನ ಕೆಲವು ಬುಡಕಟ್ಟು ಕುಟುಂಬಗಳನ್ನು ಭೇಟಿಯಾಗಲಿದ್ದೇನೆ ಮತ್ತು ಇಂದು ಅವರೊಂದಿಗೆ ಮಾತನಾಡಲು ನನಗೆ ಅವಕಾಶ ಸಿಗಲಿದೆ. ನೀವು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಬಂದಿದ್ದೀರಿ... ಕುಡಗೋಲು ಕೋಶ ಮತ್ತು ಆಯುಷ್ಮಾನ್ ಕಾರ್ಡ್ ಭವಿಷ್ಯದ ಪೀಳಿಗೆಯ ಕಾಳಜಿಗಳನ್ನು ಪರಿಹರಿಸಲು ನನ್ನ ದೊಡ್ಡ ಅಭಿಯಾನವಾಗಿದೆ. ನನಗೆ ನಿಮ್ಮ ಬೆಂಬಲ ಬೇಕು. ನಾವು ದೇಶವನ್ನು ಕುಡಗೋಲು ಕೋಶ ರಕ್ತಹೀನತೆಯಿಂದ ಮುಕ್ತಗೊಳಿಸಬೇಕು ಮತ್ತು ನಾವು ನಮ್ಮ ಬುಡಕಟ್ಟು ಕುಟುಂಬಗಳಿಗೆ ಈ ಬಿಕ್ಕಟ್ಟಿನಿಂದ ಮುಕ್ತಿ ನೀಡಬೇಕು. ಈ ಕೆಲಸವು ನನ್ನ ಹೃದಯಕ್ಕೆ ಹತ್ತಿರವಾದುದು, ಇದರಲ್ಲಿ ನನಗೆ ನಿಮ್ಮ ಸಹಾಯ ಬೇಕು, ನನಗೆ ನನ್ನ ಬುಡಕಟ್ಟು ಕುಟುಂಬಗಳ ಬೆಂಬಲ ಬೇಕು. ಇದು ನಿಮಗೆ ನನ್ನ ವಿನಂತಿ. ಆರೋಗ್ಯವಾಗಿರಿ ಮತ್ತು ಸಮೃದ್ಧರಾಗಿರಿ. ಈ ಹಾರೈಕೆಯೊಂದಿಗೆ, ನಿಮ್ಮೆಲ್ಲರಿಗೂ ಅನೇಕಾನೇಕ ಧನ್ಯವಾದಗಳು!
ಭಾರತ್ ಮಾತಾ ಕಿ - ಜೈ!
ಭಾರತ್ ಮಾತಾ ಕಿ - ಜೈ!
ಭಾರತ್ ಮಾತಾ ಕಿ - ಜೈ!
ತುಂಬಾ ಧನ್ಯವಾದಗಳು!