ಭಾರತ್ ಮಾತಾ ಕಿ-ಜೈ!
ಭಾರತ್ ಮಾತಾ ಕಿ-ಜೈ!
ಭಾರತ್ ಮಾತಾ ಕಿ-ಜೈ!
ಉನಾದ ಜನರು, ನೀವು ಹೇಗಿದ್ದೀರಿ ? ನಿಮ್ಮ ಕೆಲಸ ಹೇಗೆ ನಡೆಯುತ್ತಿದೆ? ನೀವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದೀರಿ, ಚೆನ್ನಾಗಿದ್ದೀರಿ ಎಂದು ಭಾವಿಸುತ್ತೇನೆ. ಮಾ ಚಿಂತಪೂರ್ಣಿ ಅವರ ಭೂಮಿ ಮತ್ತು ಗುರುನಾನಕ್ ದೇವ್ ಜೀ ಅವರ ವಂಶಸ್ಥರಿಗೆ ನಾನು ನಮಸ್ಕರಿಸುತ್ತೇನೆ.
ಸ್ನೇಹಿತರೇ,
ಗುರುನಾನಕ್ ಮತ್ತು ಇತರ ಗುರುಗಳನ್ನು ಸ್ಮರಿಸುತ್ತಾ ಮತ್ತು ಮಾ ಚಿಂತಪೂರ್ಣಿ ಅವರ ಪಾದಗಳಿಗೆ ನಮಸ್ಕರಿಸಿ, ಧನ್ ತೇರಾಸ್ ಮತ್ತು ದೀಪಾವಳಿಯ ಮೊದಲು ಹಿಮಾಚಲ ಪ್ರದೇಶಕ್ಕೆ ಸಾವಿರಾರು ಕೋಟಿ ರೂಪಾಯಿಗಳ ಉಡುಗೊರೆಗಳನ್ನು ನೀಡಲು ನಾನು ಇಂದು ತುಂಬಾ ಸಂತೋಷಪಡುತ್ತೇನೆ. ಹಿಮಾಚಲದ ಉನಾದಲ್ಲಿ ದೀಪಾವಳಿ ತನ್ನ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಬಂದಿದೆ. ದೇವತೆಗಳ ರೂಪದಲ್ಲಿ ನಮ್ಮ ತಾಯಂದಿರು ಮತ್ತು ಸಹೋದರಿಯರು ಇಷ್ಟು ದೊಡ್ಡ ಸಂಖ್ಯೆಯಲ್ಲಿ ನಮ್ಮನ್ನು ಆಶೀರ್ವದಿಸಲು ಬಂದಿದ್ದಾರೆ. ನಿಮ್ಮ ಆಶೀರ್ವಾದವು ನಮ್ಮೆಲ್ಲರಿಗೂ ದೊಡ್ಡ ಜವಾಬ್ದಾರಿ ಮತ್ತು ಶಕ್ತಿಯಾಗಿದೆ.
ಸಹೋದರರೇ ಮತ್ತು ಸಹೋದರಿಯರೇ,
ನಾನು ಇಲ್ಲಿ ಬಹಳಷ್ಟು ಸಮಯವನ್ನು ಕಳೆದಿದ್ದೇನೆ,, ನಾನು ಉನಾಗೆ ಬಂದಾಗಲೆಲ್ಲಾ, ಹಿಂದಿನ ನೆನಪುಗಳು ನನ್ನ ಕಣ್ಣುಗಳ ಮುಂದೆ ಮಿನುಗುತ್ತವೆ. ಮಾ ಚಿಂತಪೂರ್ಣಿ ದೇವಿಯ ಮುಂದೆ ತಲೆಬಾಗಿ ನಮಸ್ಕರಿಸಿ, ಅವರ ಆಶೀರ್ವಾದವನ್ನು ಹಲವಾರು ಬಾರಿ ಪಡೆಯುವ ಸುಯೋಗ ನನಗೆ ದೊರೆತಿದೆ. ಕಬ್ಬಿನ ರುಚಿ ಮತ್ತು 'ಗಾಂಡಿಯಾಲಿ'ಯನ್ನು ಯಾರು ಮರೆಯಲು ಸಾಧ್ಯ?
ಸ್ನೇಹಿತರೇ,
ಹಿಮಾಚಲದಲ್ಲಿ ವಾಸಿಸುತ್ತಿರುವಾಗ, ಪ್ರಕೃತಿಯು ಈ ದೇವಭೂಮಿಯನ್ನು ಬಹಳಷ್ಟು ದೊಡ್ಡ ರೀತಿಯಲ್ಲಿ ಆಶೀರ್ವದಿಸಿದೆ ಎಂದು ನಾನು ಯಾವಾಗಲೂ ಭಾವಿಸುತ್ತಿದ್ದೆ. ಇಲ್ಲಿ ನದಿಗಳು, ಜಲಪಾತಗಳು, ಫಲವತ್ತಾದ ಭೂಮಿ, ಹೊಲಗಳು, ಪರ್ವತಗಳು ಮತ್ತು ಪ್ರವಾಸೋದ್ಯಮ – ಹೀಗೆ ಬಹಳಷ್ಟು ಇವೆ - ಆದರೆ ಇಲ್ಲಿನ ಕೆಲವು ಸವಾಲುಗಳಿಗೆ ಜನರು ಆಗಾಗ್ಗೆ ಪಶ್ಚಾತ್ತಾಪ ಪಡುತ್ತಾರೆ. ಉತ್ತಮ ಸಂಪರ್ಕ, ಕೈಗಾರಿಕೆಗಳ ಸ್ಥಾಪನೆ ಮತ್ತು ಹಿಮಾಚಲದ ಮಕ್ಕಳು ತಮ್ಮ ಪೋಷಕರು, ಸ್ನೇಹಿತರು ಮತ್ತು ಗ್ರಾಮಗಳನ್ನು ಬಿಟ್ಟು ತಮ್ಮ ಅಧ್ಯಯನಕ್ಕಾಗಿ ರಾಜ್ಯದಿಂದ ಹೊರಹೋಗುವ ಅಗತ್ಯವಿಲ್ಲದ ದಿನ ಹಿಮಾಚಲವು ರೂಪಾಂತರಗೊಳ್ಳುತ್ತದೆ ಎಂದು ನಾನು ಸದಾ ಭಾವಿಸಿದ್ದೆ.
ಮತ್ತು ನೋಡಿ, ಇಂದು ನಾನು ಸಂಪರ್ಕ, ಶಿಕ್ಷಣ ಸಂಸ್ಥೆಗಳು ಮತ್ತು ಕೈಗಾರಿಕೀಕರಣಕ್ಕಾಗಿ ಉಡುಗೊರೆಗಳೊಂದಿಗೆ ಬಂದಿದ್ದೇನೆ. ಇಂದು, ದೇಶದ ಎರಡನೇ ಬೃಹತ್ ಔಷಧ ಪಾರ್ಕ್ ಉನಾದಲ್ಲಿ ತೆರೆಯಲಾಗಿದೆ. ಸ್ನೇಹಿತರೇ, ಇದಕ್ಕಿಂತ ದೊಡ್ಡ ಉಡುಗೊರೆ ಏನಾದರೂ ಇರಬಹುದೇ? ಹಿಮಾಚಲ ಪ್ರದೇಶವು ಅನೇಕ ಸಮಸ್ಯೆಗಳಿಂದ ಆವೃತವಾಗಿದ್ದರೂ ಮತ್ತು ನೈಸರ್ಗಿಕ ವೈವಿಧ್ಯತೆಯಿಂದ ತುಂಬಿದ್ದರೂ , ಭಾರತದಲ್ಲಿ ನಿರ್ಮಿಸಲಾಗುತ್ತಿರುವ ಮೂರು ಬೃಹತ್ ಔಷಧ ಪಾರ್ಕ್ ಗಳಲ್ಲಿ ಒಂದನ್ನು ಪಡೆಯುತ್ತಿದೆ. ಇದಕ್ಕಿಂತ ದೊಡ್ಡ ನಿರ್ಧಾರ ಬೇರೆ ಇರಬಹುದೇ? ಇದು ಹಿಮಾಚಲ, ಸೋದರರ ಬಗ್ಗೆ ನನ್ನ ಪ್ರೀತಿ ಮತ್ತು ಸಮರ್ಪಣೆಯ ಫಲಿತಾಂಶವಾಗಿದೆ.
ಕೆಲವು ಸಮಯದ ಹಿಂದೆ, ಅಂಬ್-ಅಂಡೌರಾದಿಂದ ದಿಲ್ಲಿಗೆ ಭಾರತದ ನಾಲ್ಕನೇ ವಂದೇ ಭಾರತ್ ರೈಲಿಗೆ ಹಸಿರು ನಿಶಾನೆ ತೋರುವ ಸೌಭಾಗ್ಯ ನನಗೆ ದೊರಕಿತ್ತು. ನನ್ನ ಸಹೋದರರನ್ನು ಕಲ್ಪಿಸಿಕೊಳ್ಳಿ! ಭಾರತದ ಹಲವಾರು ದೊಡ್ಡ ನಗರಗಳಿಗಿಂತ ಮೊದಲೇ ಹಿಮಾಚಲವು ನಾಲ್ಕನೇ ವಂದೇ ಭಾರತ್ ರೈಲನ್ನು ಪಡೆಯಿತು. ನನಗೆ ಗೊತ್ತು ಸ್ನೇಹಿತರೇ, ವಿಮಾನಗಳನ್ನು ನೋಡಲು ವಿಮಾನ ನಿಲ್ದಾಣಕ್ಕೆ ಹೋಗಲು ಬಯಸುವ, ಅವುಗಳಲ್ಲಿ ಪ್ರಯಾಣಿಸುವುದನ್ನು ಮರೆತುಬಿಡುವ ಅನೇಕ ಕುಟುಂಬಗಳು ಭಾರತದಾದ್ಯಂತ ಇವೆ. ಆದರೆ ನೀವು ಹಿಮಾಚಲದ ಬೆಟ್ಟಗಳಲ್ಲಿ ವಾಸಿಸುವ ಜನರ ಬಗ್ಗೆ ಕೇಳಿದರೆ, ಹಲವಾರು ತಲೆಮಾರುಗಳಿಂದ ರೈಲನ್ನು ನೋಡದ ಅಥವಾ ರೈಲಿನಲ್ಲಿ ಪ್ರಯಾಣಿಸದ ಜನರಿದ್ದಾರೆ. ಸ್ವಾತಂತ್ರ್ಯ ಬಂದು 75 ವರ್ಷಗಳ ನಂತರವೂ ಇಂತಹ ಪರಿಸ್ಥಿತಿಗಳು ಇಲ್ಲಿ ಅಸ್ತಿತ್ವದಲ್ಲಿವೆ. ಯಾವುದೇ ಸಾಮಾನ್ಯ ರೈಲಿನ ಬಗ್ಗೆ ಮರೆತುಬಿಡಿ, ಇಂದು ಭಾರತದ ಅತ್ಯಂತ ಆಧುನಿಕ ರೈಲು ಹಿಮಾಚಲಕ್ಕೆ ಬಂದು ಇಲ್ಲಿಂದ ಚಲಿಸಿತು, ಸ್ನೇಹಿತರೇ.
ಹಿಮಾಚಲದ ಸ್ವಂತ ಐಐಐಟಿಯ ಶಾಶ್ವತ ಕಟ್ಟಡವನ್ನು ಸಹ ಇಂದು ಉದ್ಘಾಟಿಸಲಾಗಿದೆ. ಈ ಯೋಜನೆಗಳು ಡಬಲ್ ಎಂಜಿನ್ ಸರ್ಕಾರವು ಹಿಮಾಚಲವನ್ನು ಎಂತಹ ಎತ್ತರದಲ್ಲಿ ನೋಡ ಬಯಸುತ್ತದೆ ಎಂಬುದರ ಒಂದು ಇಣುಕುನೋಟವಾಗಿದೆ. ಈ ಯೋಜನೆಗಳು ವಿಶೇಷವಾಗಿ ಹಿಮಾಚಲದ ಹೊಸ ತಲೆಮಾರಿನ ಕನಸುಗಳಿಗೆ ಹೊಸ ರೆಕ್ಕೆಗಳನ್ನು ನೀಡಲಿವೆ. ಈ ಯೋಜನೆಗಳಿಗಾಗಿ ಉನಾ ಮತ್ತು ಹಿಮಾಚಲ ಪ್ರದೇಶಕ್ಕೆ ಅನೇಕ ಅಭಿನಂದನೆಗಳು.
ಸ್ನೇಹಿತರೇ,
ಅಗತ್ಯಗಳು ಮತ್ತು ಭರವಸೆಗಳು ಮತ್ತು ಆಕಾಂಕ್ಷೆಗಳ ನಡುವೆ ವ್ಯತ್ಯಾಸವಿದೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಹಿಮಾಚಲ ಮತ್ತು ದಿಲ್ಲಿಯ ಹಿಂದಿನ ಸರ್ಕಾರಗಳು ನಿಮ್ಮ ಅಗತ್ಯಗಳನ್ನು ಪೂರೈಸುವಲ್ಲಿ ಅಸಡ್ಡೆ ತೋರಿದವು ಮತ್ತು ಅವರು ನಿಮ್ಮ ಭರವಸೆಗಳು ಮತ್ತು ಆಕಾಂಕ್ಷೆಗಳ ಬಗ್ಗೆ ಎಂದಿಗೂ ಕಾಳಜಿ ವಹಿಸಲಿಲ್ಲ. ಹಿಮಾಚಲ, ಅದರ ಯುವ ಪೀಳಿಗೆ ಮತ್ತು ಇಲ್ಲಿನ ತಾಯಂದಿರು ಮತ್ತು ಸಹೋದರಿಯರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ.
ಆದರೆ ಈಗ ಕಾಲ ಬದಲಾಗಿದೆ. ನಮ್ಮ ಸರ್ಕಾರವು ಜನರ ಅಗತ್ಯಗಳನ್ನು ಪೂರೈಸುವುದಲ್ಲದೆ, ಅವರ ಭರವಸೆಗಳು ಮತ್ತು ಆಕಾಂಕ್ಷೆಗಳನ್ನು ಸಾಕಾರಗೊಳಿಸಲು ಪೂರ್ಣ ಶಕ್ತಿಯೊಂದಿಗೆ ಕೆಲಸ ಮಾಡುತ್ತಿದೆ. ನಾನು ಇಲ್ಲಿ ವಾಸಿಸುತ್ತಿದ್ದಾಗ ಯಾವುದೇ ಅಭಿವೃದ್ಧಿ ಕಾರ್ಯಗಳು ಇಲ್ಲದ ಕಾರಣ ಹಿಮಾಚಲದ ಸ್ಥಿತಿಯನ್ನು ನಾನು ನೆನಪಿಸಿಕೊಳ್ಳುತ್ತೇನೆ. ಸುತ್ತಲೂ ಅಪನಂಬಿಕೆ, ಹತಾಶೆಯ ಪರ್ವತಗಳು ಮತ್ತು ಮುಂದಿನ ಹಾದಿಯ ಬಗ್ಗೆ ಸಂದೇಹಗಳು ಇದ್ದವು. ಅಭಿವೃದ್ಧಿಯ ನಿರೀಕ್ಷೆಗಳ ಹಾದಿಯಲ್ಲಿ ದೊಡ್ಡ ಅಂತರವಿತ್ತು. ಅಭಿವೃದ್ಧಿಯ ಅಗತ್ಯಗಳ ಈ ರಂಧ್ರಗಳನ್ನು ತುಂಬಲು ಅವರು ಎಂದಿಗೂ ಕಾಳಜಿ ವಹಿಸಲಿಲ್ಲ ಮತ್ತು ಅವುಗಳನ್ನು ಕೈಬಿಟ್ಟರು. ನಾವು ಆ ರಂಧ್ರಗಳನ್ನು ತುಂಬಿಸಿದ್ದೇವೆ ಮಾತ್ರವಲ್ಲ, ನಾವು ಈಗ ಹಿಮಾಚಲದಲ್ಲಿ ಹೊಸ ಕಟ್ಟಡಗಳನ್ನು ದೃಢವಾಗಿ, ಬಲಿಷ್ಟವಾಗಿ ನಿರ್ಮಿಸುತ್ತಿದ್ದೇವೆ.
ಸ್ನೇಹಿತರೇ,
ಕಳೆದ ಶತಮಾನದಲ್ಲಿಯೇ ತಮ್ಮ ನಾಗರಿಕರಿಗೆ ಗ್ರಾಮೀಣ ರಸ್ತೆಗಳು, ಶುದ್ಧ ಕುಡಿಯುವ ನೀರು, ಶೌಚಾಲಯಗಳು, ಆಧುನಿಕ ಆಸ್ಪತ್ರೆಗಳು ಮುಂತಾದ ಸೌಲಭ್ಯಗಳನ್ನು ಒದಗಿಸಿದ ಭಾರತದ ಗುಜರಾತ್ ನಂತಹ ಅನೇಕ ರಾಜ್ಯಗಳು ಸೇರಿದಂತೆ ವಿಶ್ವದ ಅನೇಕ ದೇಶಗಳಿವೆ. ಆದರೆ ಭಾರತದಲ್ಲಿ ಕೆಲವು ಸರ್ಕಾರಗಳು ಸಾಮಾನ್ಯ ಜನರಿಗೆ ಈ ಸೌಲಭ್ಯಗಳು ಲಭ್ಯವಾಗುವುದನ್ನು ಬಹಳ ಕ್ಲಿಷ್ಟಗೊಳಿಸಿದವು. ಈ ಕಾರಣದಿಂದಾಗಿ ನಮ್ಮ ಗುಡ್ಡಗಾಡು ಪ್ರದೇಶಗಳು ಸಾಕಷ್ಟು ತೊಂದರೆ ಅನುಭವಿಸಿವೆ. ನಾನು ಇಲ್ಲೇ ಇದ್ದಾಗ, ನಮ್ಮ ಗರ್ಭಿಣಿ ತಾಯಂದಿರು ಮತ್ತು ಸಹೋದರಿಯರು ರಸ್ತೆಗಳ ಅನುಪಸ್ಥಿತಿಯಲ್ಲಿ, ರಸ್ತೆಗಳೇ ಇಲ್ಲದೆ ಆಸ್ಪತ್ರೆಗೆ ಹೋಗಲು ಎಷ್ಟು ಕಷ್ಟವನ್ನು ಅನುಭವಿಸುತ್ತಿದ್ದರು ಎಂಬುದನ್ನು ಮತ್ತು ಅನೇಕ ಹಿರಿಯರು ಆಸ್ಪತ್ರೆಗೆ ತಲುಪುವ ಮೊದಲೇ ಸಾಯುವುದನ್ನು ನಾನು ಹತ್ತಿರದಿಂದ ನೋಡಿದ್ದೇನೆ.
ಸಹೋದರರೇ ಮತ್ತು ಸಹೋದರಿಯರೇ,
ರೈಲು ಸಂಪರ್ಕದ ಕೊರತೆಯಿಂದಾಗಿ ಪ್ರಪಂಚದ ಇತರ ಭಾಗಗಳ ಜೊತೆ ಸಂಪರ್ಕ ಕಡಿದುಕೊಂಡಿರುವ ಸಂಗತಿ ಗಿರಿ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ತಿಳಿದಿದೆ. ಹೇರಳವಾದ ಬುಗ್ಗೆಗಳು ಮತ್ತು ಹರಿಯುವ ನದಿಗಳನ್ನು ಹೊಂದಿರುವ ಪ್ರದೇಶದಲ್ಲಿ ಕುಡಿಯುವ ನೀರು ಮತ್ತು ನಲ್ಲಿ ನೀರಿನ ಲಭ್ಯತೆಯ ಸವಾಲುಗಳನ್ನು ಹೊರಗಿನವರು ಎಂದಿಗೂ ಊಹಿಸಲು ಸಾಧ್ಯವಿಲ್ಲ.
ಹಲವಾರು ವರ್ಷಗಳ ಕಾಲ ರಾಜ್ಯವನ್ನು ಆಳಿದ ಜನರು ಹಿಮಾಚಲದ ಜನರ ಸಮಸ್ಯೆಗಳ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಈಗ ಇಂದಿನ ನವ ಭಾರತವು ಈ ಎಲ್ಲಾ ಹಳೆಯ ಸವಾಲುಗಳ ಮೇಲೆ ಅವುಗಳನ್ನು ನಿವಾರಿಸುವ ನಿಟ್ಟಿನಲ್ಲಿ ವೇಗವಾಗಿ ಕೆಲಸ ಮಾಡುತ್ತಿದೆ. ಕಳೆದ ಶತಮಾನದಲ್ಲಿಯೇ ಜನರಿಗೆ ತಲುಪಬೇಕಾಗಿದ್ದ ಸೌಲಭ್ಯಗಳು ಈಗ ಜನರನ್ನು ತಲುಪುತ್ತಿವೆ.
ಆದರೆ ನಾವು ಈಗ ಇಲ್ಲಿ ನಿಲ್ಲಿಸಬೇಕೆ? ಸ್ನೇಹಿತರೇ, ನನಗೆ ಹೇಳಿ. ಅಷ್ಟೊಂದು ಕೆಲಸ ಮಾಡಲಾಗಿದೆ ಎಂಬ ಒಂದೇ ಕಾರಣಕ್ಕೆ ನಾವು ಸಂತೋಷಪಡಬೇಕೆ? ನಾವು ಮುಂದುವರಿಯಬೇಕೆ ಅಥವಾ ಬೇಡವೇ? ನಾವು ವೇಗವಾಗಿ ಬೆಳೆಯಬೇಕೇ ಅಥವಾ ಬೇಡವೇ? ಸಹೋದರರೇ, ಈ ಕೆಲಸಗಳನ್ನು ಯಾರು ಮಾಡುವರು? ಸಹೋದರರೇ, ನೀವು ಮತ್ತು ನಾನು ಒಟ್ಟಿಗೆ ಅದನ್ನು ಮಾಡುತ್ತೇವೆ. ನಾವು 20 ನೇ ಶತಮಾನದ ಸೌಲಭ್ಯಗಳನ್ನು ಒದಗಿಸುತ್ತೇವೆ ಮತ್ತು ಹಿಮಾಚಲವನ್ನು 21 ನೇ ಶತಮಾನದ ಹೊಸತನದ ಜೊತೆ ಜೋಡಿಸುತ್ತೇವೆ.
ಆದ್ದರಿಂದ, ಹಿಮಾಚಲದಲ್ಲಿ ಇಂದು ಅಭೂತಪೂರ್ವ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಇಂದು, ಹಿಮಾಚಲದಲ್ಲಿ ಗ್ರಾಮೀಣ ರಸ್ತೆಗಳನ್ನು ದುಪ್ಪಟ್ಟು ವೇಗದಲ್ಲಿ ನಿರ್ಮಿಸುತ್ತಿದ್ದರೆ, ಮತ್ತೊಂದೆಡೆ, ಗ್ರಾಮ ಪಂಚಾಯಿತಿಗಳಿಗೆ ಬ್ರಾಡ್ ಬ್ಯಾಂಡ್ ಸಂಪರ್ಕವನ್ನು ಸಹ ಬಹಳ ತ್ವರಿತವಾಗಿ ಒದಗಿಸಲಾಗುತ್ತಿದೆ. ಇಂದು, ಹಿಮಾಚಲದಲ್ಲಿ ಸಾವಿರಾರು ಶೌಚಾಲಯಗಳನ್ನು ನಿರ್ಮಿಸಲಾಗುತ್ತಿದೆ, ಮತ್ತೊಂದೆಡೆ, ಪ್ರತಿ ಹಳ್ಳಿಯಲ್ಲೂ ವಿದ್ಯುತ್ ಪರಿಸ್ಥಿತಿಯನ್ನು ಸುಧಾರಿಸಲಾಗುತ್ತಿದೆ. ಇಂದು, ಒಂದು ಕಡೆ, ಹಿಮಾಚಲದಲ್ಲಿ ದುರ್ಗಮ ಪ್ರದೇಶಗಳಿಗೆ ಅಗತ್ಯ ಸರಕುಗಳನ್ನು ಸಾಗಿಸಲು ಡ್ರೋನ್ ಗಳನ್ನು ಬಳಸಲಾಗುತ್ತಿದೆ, ಮತ್ತೊಂದೆಡೆ, ವಂದೇ ಭಾರತದಂತಹ ಹೈಸ್ಪೀಡ್ (ಭಾರೀ ವೇಗದ) ರೈಲುಗಳನ್ನು ಇಲ್ಲಿಂದ ದಿಲ್ಲಿಗೆ ಓಡಿಸಲಾಗುತ್ತಿದೆ.
ಇಂದು, ಒಂದು ಕಡೆ, ಹಿಮಾಚಲದಲ್ಲಿ ನಲ್ಲಿ ನೀರನ್ನು ಪೂರೈಸುವ ಅಭಿಯಾನ ನಡೆಯುತ್ತಿದೆ, ಮತ್ತೊಂದೆಡೆ, ಸರ್ಕಾರದ ಎಲ್ಲಾ ಸೇವೆಗಳನ್ನು ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ಹಳ್ಳಿಗಳಲ್ಲಿ ತಲುಪಿಸಲಾಗುತ್ತಿದೆ. ನಾವು 20 ನೇ ಶತಮಾನದ ಜನರ ಅಗತ್ಯಗಳನ್ನು ಪೂರೈಸುವುದಲ್ಲದೆ, 21 ನೇ ಶತಮಾನದ ಆಧುನಿಕ ಸೌಲಭ್ಯಗಳನ್ನು ಹಿಮಾಚಲದ ಮನೆ ಬಾಗಿಲಿಗೆ ತಲುಪಿಸುತ್ತಿದ್ದೇವೆ.
ಸ್ನೇಹಿತರೇ,
ಇಂದು, ಹರೋಲಿಯಲ್ಲಿ ಬೃಹತ್ ಔಷಧ ಪಾರ್ಕ್ ಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಕೆಲವು ದಿನಗಳ ಹಿಂದೆ ಜೈ ರಾಮ್ ಜೀ ಅವರು ಹೇಳಿದಂತೆ, ನಲಘರ್-ಬದ್ದಿಯಲ್ಲಿರುವ ಮೆಡಿಕಲ್ ಡಿವೈಸ್ ಪಾರ್ಕ್ (ವೈದ್ಯಕೀಯ ಸಲಕರಣೆಗಳ ಪಾರ್ಕ್)ನ ಕೆಲಸವೂ ಪ್ರಾರಂಭವಾಗಿದೆ. ಈ ಎರಡೂ ಯೋಜನೆಗಳು ದೇಶದಲ್ಲಿ ಮತ್ತು ವಿಶ್ವದಾದ್ಯಂತ ಹಿಮಾಚಲದ ಹೆಸರನ್ನು ಬೆಳಗಿಸಲಿವೆ. ಪ್ರಸ್ತುತ, ಡಬಲ್ ಎಂಜಿನ್ ಸರ್ಕಾರವು ಈ ಬೃಹತ್ ಔಷಧ ಪಾರ್ಕಿಗಾಗಿ ಸುಮಾರು 2,000 ಕೋಟಿ ರೂ.ಗಳನ್ನು ಹೂಡಿಕೆ ಮಾಡುತ್ತಿದೆ. ಹಿಮಾಚಲದಂತಹ ಸಣ್ಣ ರಾಜ್ಯದಲ್ಲಿ, ಒಂದು ಯೋಜನೆಗೆ 2,000 ಕೋಟಿ ರೂ.! ಸದ್ಯೋಭವಿಷ್ಯದಲ್ಲಿ 10,000 ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ಈ ಕ್ಷೇತ್ರದಲ್ಲಿಯೇ ಹೂಡಿಕೆ ಮಾಡಲಾಗುವುದು. ಸಾವಿರಾರು ಕೋಟಿ ರೂಪಾಯಿಗಳ ಹೂಡಿಕೆಯು ಉನಾ ಮತ್ತು ಹಿಮಾಚಲವನ್ನು ಪರಿವರ್ತಿಸುತ್ತದೆ. ಇದು ಸಾವಿರಾರು ಉದ್ಯೋಗ ಮತ್ತು ಸ್ವಯಂ-ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ.
ಸ್ನೇಹಿತರೇ,
ಕೊರೋನಾ ಅವಧಿಯಲ್ಲಿ ಹಿಮಾಚಲದಲ್ಲಿ ತಯಾರಾದ ಔಷಧಗಳ ಶಕ್ತಿಯನ್ನು ಇಡೀ ಜಗತ್ತು ನೋಡಿದೆ. ವಿಶ್ವದ ಔಷಧೀಯ ಉತ್ಪಾದನೆಯಲ್ಲಿ ಭಾರತವನ್ನು ಅಗ್ರಸ್ಥಾನದಲ್ಲಿ ನಿಲ್ಲಿಸುವಲ್ಲಿ ಹಿಮಾಚಲದ ಪಾತ್ರವು ಮತ್ತಷ್ಟು ಹೆಚ್ಚಾಗಲಿದೆ. ಇಲ್ಲಿಯವರೆಗೆ, ಔಷಧಿಗಳಿಗೆ ಅಗತ್ಯವಿರುವ ಹೆಚ್ಚಿನ ಕಚ್ಚಾವಸ್ತುಗಳಿಗಾಗಿ ನಾವು ವಿದೇಶಗಳನ್ನು ಅವಲಂಬಿಸಬೇಕಾಗಿತ್ತು. ಹಿಮಾಚಲದಲ್ಲಿಯೇ ಕಚ್ಚಾವಸ್ತುಗಳನ್ನು ತಯಾರಿಸಿದಾಗ, ಹಿಮಾಚಲದಲ್ಲಿಯೇ ಔಷಧಿಗಳನ್ನು ತಯಾರಿಸಲಾಗುತ್ತದೆ, ನಂತರ ಔಷಧೀಯ ಉದ್ಯಮವು ಸಹ ಅಭಿವೃದ್ಧಿ ಹೊಂದುತ್ತದೆ ಮತ್ತು ಔಷಧಿಗಳು ಸಹ ಕೈಗೆಟುಕುವಂತಾಗುತ್ತವೆ.
ಇಂದು, ನಮ್ಮ ಸರ್ಕಾರವು ಆಯುಷ್ಮಾನ್ ಭಾರತ್ ಯೋಜನೆಯಡಿ ಮತ್ತು ಜನೌಷಧಿ ಕೇಂದ್ರಗಳ ಮೂಲಕ 5 ಲಕ್ಷ ರೂ.ಗಳವರೆಗೆ ಉಚಿತ ಚಿಕಿತ್ಸೆ ನೀಡುವ ಮೂಲಕ ಬಡವರ ಸಮಸ್ಯೆಗಳನ್ನು ನಿವಾರಿಸಲು ಕೆಲಸ ಮಾಡುತ್ತಿದೆ. ಈ ಬೃಹತ್ ಔಷಧ ಪಾರ್ಕ್ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಕೈಗೆಟುಕುವ ಮತ್ತು ಉತ್ತಮ ಚಿಕಿತ್ಸೆಯನ್ನು ಒದಗಿಸುವ ಅಭಿಯಾನವನ್ನು ಮತ್ತಷ್ಟು ಬಲಪಡಿಸುತ್ತದೆ.
ಸ್ನೇಹಿತರೇ,
ಉತ್ತಮ ಸಂಪರ್ಕ ಇಲ್ಲದಿದ್ದರೆ, ಅಭಿವೃದ್ಧಿಯ ವೇಗವನ್ನು ಹೆಚ್ಚಿಸಲು ಸಾಧ್ಯವಾಗುವುದಿಲ್ಲ. ಅದು ಕೃಷಿ ಅಥವಾ ಕೈಗಾರಿಕಾ ಕ್ಷೇತ್ರಕ್ಕೂ ಅನ್ವಯಿಸುತ್ತದೆ ಎಂದು ಹಿಮಾಚಲ ಪ್ರದೇಶದ ಜನರಿಗೆ ತಿಳಿದಿದೆ. ಹಿಂದಿನ ಸರ್ಕಾರಗಳು ಹೇಗೆ ಕೆಲಸ ಮಾಡುತ್ತಿದ್ದವು ಎಂಬುದಕ್ಕೆ ಒಂದು ಉದಾಹರಣೆಯೆಂದರೆ ನಮ್ಮ ನಂಗಲ್ ಅಣೆಕಟ್ಟು ತಲ್ವಾರಾ ರೈಲು ಮಾರ್ಗ. ನಲವತ್ತು ವರ್ಷಗಳ ಹಿಂದೆ, ದಿಲ್ಲಿಯ ಸರ್ಕಾರವು ಸಣ್ಣ ರೈಲು ಮಾರ್ಗಕ್ಕೆ ಅನುಮೋದನೆಯ ಮುದ್ರೆಯನ್ನು ಹಾಕಿತು, ಒಂದು ಕಡತವನ್ನು ತಯಾರಿಸಿತು, ಅದಕ್ಕೆ ಸಹಿ ಹಾಕಿತು ಮತ್ತು ಜನರನ್ನು ಮೂರ್ಖರನ್ನಾಗಿಸುವ ಮೂಲಕ ಅದರ ಹೆಸರಿನಲ್ಲಿ ಮತಗಳನ್ನು ಗಳಿಸಿತು. ಈಗ 40 ಕ್ಕೂ ಹೆಚ್ಚು ವರ್ಷಗಳಾಗಿವೆ ಮತ್ತು ಈ ಯೋಜನೆಯಲ್ಲಿ ಒಂದು ಸಣ್ಣ ಕೆಲಸವನ್ನು ಸಹ ಮಾಡಲಾಗಿಲ್ಲ. ಇದು ಅನೇಕ ವರ್ಷಗಳವರೆಗೆ ಅಪೂರ್ಣವಾಗಿಯೇ ಉಳಿಯಿತು. ಕೇಂದ್ರದಲ್ಲಿ ನಮ್ಮ ಸರ್ಕಾರ ರಚನೆಯಾದ ನಂತರ ಈಗ ಈ ರೈಲ್ವೆ ಮಾರ್ಗದ ಕೆಲಸವು ವೇಗವಾಗಿ ನಡೆಯುತ್ತಿದೆ. ಊಹಿಸಿಕೊಳ್ಳಿ, ಈ ಕೆಲಸವನ್ನು ಮೊದಲೇ ಪೂರ್ಣಗೊಳಿಸಿದ್ದರೆ, ಉನಾದ ಜನರು ಸಹ ಪ್ರಯೋಜನ ಪಡೆಯುತ್ತಿದ್ದರು.
ಸ್ನೇಹಿತರೇ,
ಹಿಮಾಚಲದಲ್ಲಿ ರೈಲ್ವೆ ಸೇವೆಗಳನ್ನು ವಿಸ್ತರಿಸಲು ಮತ್ತು ಆಧುನೀಕರಿಸಲು ಡಬಲ್ ಎಂಜಿನ್ ಸರ್ಕಾರವು ಅವಿರತವಾಗಿ ಶ್ರಮಿಸುತ್ತಿದೆ. ಇಂದು ಹಿಮಾಚಲದಲ್ಲಿ ಮೂರು ಹೊಸ ರೈಲು ಯೋಜನೆಗಳ ಕಾಮಗಾರಿ ಪ್ರಗತಿಯಲ್ಲಿದೆ. ಇಂದು, ದೇಶ ಭಾರತೀಯ ನಿರ್ಮಿತ (ಮೇಡ್ ಇನ್ ಇಂಡಿಯಾ) ವಂದೇ ಭಾರತ್ ರೈಲುಗಳೊಂದಿಗೆ ಜೋಡಣೆಗೊಳ್ಳುತ್ತಿರುವಾಗ, ಹಿಮಾಚಲವು ಅದನ್ನು ಪಡೆಯುತ್ತಿರುವ ದೇಶದ ಪ್ರಮುಖ ರಾಜ್ಯಗಳಲ್ಲಿ ಒಂದಾಗಿದೆ. ಈ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿನಿಂದಾಗಿ ನೈನಾ ದೇವಿ, ಚಿಂತ್ಪುರ್ಣಿ, ಜ್ವಾಲಾ ದೇವಿ, ಕಾಂಗ್ರಾ ದೇವಿ, ಶಕ್ತಿ ಪೀಠಗಳು ಮತ್ತು ಆನಂದಪುರ ಸಾಹಿಬ್ ನಂತಹ ಪವಿತ್ರ ಸ್ಥಳಗಳಿಗೆ ಭೇಟಿ ನೀಡುವುದು ಸುಲಭವಾಗಲಿದೆ. ಗುರುನಾನಕ್ ದೇವ್ ಜೀ ಅವರ ವಂಶಸ್ಥರು ವಾಸಿಸುವ ಉನಾದಂತಹ ಪವಿತ್ರ ನಗರಕ್ಕೆ ಇದು ಡಬಲ್ ಉಡುಗೊರೆಯಾಗಿದೆ.
ಕರ್ತಾರ್ಪುರ ಕಾರಿಡಾರ್ ತೆರೆಯುವ ಮೂಲಕ ನಮ್ಮ ಸರ್ಕಾರವು ಮಾಡಿದ ಸೇವೆಯನ್ನು ಈ ವಂದೇ ಭಾರತ್ ರೈಲು ಮತ್ತಷ್ಟು ಹೆಚ್ಚಿಸುತ್ತದೆ. ಮಾ ವೈಷ್ಣೋದೇವಿಯ ದರ್ಶನಕ್ಕಾಗಿ ವಂದೇ ಭಾರತ್ ಎಕ್ಸ್ ಪ್ರೆಸ್ ಈಗಾಗಲೇ ಇತ್ತು, ಈಗ ಇಲ್ಲಿನ ಶಕ್ತಿ ಪೀಠಗಳು ಸಹ ಈ ಆಧುನಿಕ ಸೇವೆಯೊಂದಿಗೆ ಜೋಡಣೆಗೊಂಡಿವೆ. ಇತರ ನಗರಗಳಲ್ಲಿ ಕೆಲಸ ಮಾಡುವ ಜನರು ಸಹ ವಂದೇ ಭಾರತ್ ಎಕ್ಸ್ ಪ್ರೆಸ್ ನಿಂದ ಪ್ರಯೋಜನ ಪಡೆಯುತ್ತಾರೆ.
ಸ್ನೇಹಿತರೇ,
ತಮ್ಮ ಅಧ್ಯಯನಕ್ಕಾಗಿ ತಮ್ಮ ರಾಜ್ಯದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಪಡೆಯುವುದು ಹಿಮಾಚಲದ ಯುವಜನತೆಯ ಕನಸಾಗಿದೆ. ನಿಮ್ಮ ಈ ಆಕಾಂಕ್ಷೆಯನ್ನು ಈ ಹಿಂದೆ ನಿರ್ಲಕ್ಷಿಸಲಾಗಿತ್ತು. ನಾವು ಗತಕಾಲದ ಅಭ್ಯಾಸಗಳನ್ನು, ಪದ್ಧತಿಗಳನ್ನು ಬದಲಾಯಿಸುತ್ತಿದ್ದೇವೆ. ಅಲುಗಾಡುವುದು, ಕಾಲಕ್ಷೇಪ ಮಾಡುವುದು, ಕೈಬಿಡುವುದು, ದಾರಿತಪ್ಪುವುದು ಮತ್ತು ಮರೆತುಬಿಡುವುದು ನಮ್ಮ ಕೆಲಸದ ವಿಧಾನವಲ್ಲ. ನಾವು ನಿರ್ಧರಿಸುತ್ತೇವೆ, ಸಂಕಲ್ಪ ಮಾಡುತ್ತೇವೆ, ಪೂರೈಸುತ್ತೇವೆ ಮತ್ತು ಫಲಿತಾಂಶಗಳನ್ನು ಸಹ ತೋರಿಸುತ್ತೇವೆ. ಅಷ್ಟಕ್ಕೂ, ಹಿಮಾಚಲದ ಯುವಜನರು ದೀರ್ಘಕಾಲದವರೆಗೆ ಉನ್ನತ ಶಿಕ್ಷಣದ ಪ್ರತಿಷ್ಠಿತ ಸಂಸ್ಥೆಗಳಿಂದ ವಂಚಿತರಾಗಲು ಕಾರಣವೇನು? ಇಲ್ಲಿನ ಯುವಕರು ವೈದ್ಯಕೀಯ, ಎಂಜಿನಿಯರಿಂಗ್, ಬಿಸಿನೆಸ್ ಮ್ಯಾನೇಜ್ಮೆಂಟ್ ಮತ್ತು ಫಾರ್ಮಸಿಯನ್ನು ಅಧ್ಯಯನ ಮಾಡಲು ನೆರೆಯ ರಾಜ್ಯಗಳಿಗೆ ಏಕೆ ಹೋಗಬೇಕಾಯಿತು?
ಸ್ನೇಹಿತರೇ,
ಹಿಂದಿನ ಸರ್ಕಾರಗಳು ಈ ಎಲ್ಲಾ ವಿಷಯಗಳ ಬಗ್ಗೆ ಗಮನ ಹರಿಸಲಿಲ್ಲ, ಏಕೆಂದರೆ ಅವರು ಹಿಮಾಚಲವನ್ನು ಅದರ ಸಾಮರ್ಥ್ಯದಿಂದ ನೋಡದೆ ಸಂಸತ್ತಿನಲ್ಲಿ ಅದು ಪ್ರತಿನಿಧಿಸುವ ಸ್ಥಾನಗಳ ಸಂಖ್ಯೆಯ ಮೇಲೆ ನಿರ್ಣಯಿಸುತ್ತಿದ್ದರು. ಆದ್ದರಿಂದ, ಹಿಮಾಚಲವು ಐಐಟಿ, ಐಐಐಟಿ, ಐಐಎಂ ಮತ್ತು ಎ.ಐ.ಐ.ಎಂ.ಎಸ್.ಗಳಿಗಾಗಿ ಡಬಲ್ ಎಂಜಿನ್ ಸರ್ಕಾರ ಬರುವವರೆಗೆ ಕಾಯಬೇಕಾಯಿತು. ಉನಾದಲ್ಲಿ ಐಐಐಟಿಯ ಶಾಶ್ವತ ಕಟ್ಟಡದ ನಿರ್ಮಾಣದಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲಗಳು ದೊರೆಯಲಿವೆ. ಈ ಸಂಸ್ಥೆಗಳಿಂದ ಪದವಿ ಪಡೆದ ಹಿಮಾಚಲದ ಪುತ್ರರು ಮತ್ತು ಪುತ್ರಿಯರು ಸಹ ರಾಜ್ಯದಲ್ಲಿ ಡಿಜಿಟಲ್ ಕ್ರಾಂತಿಯನ್ನು ಬಲಪಡಿಸುತ್ತಾರೆ.
ಈ ಐಐಐಟಿ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಲು ನೀವು ನನಗೆ ಅವಕಾಶ ನೀಡಿದ್ದೀರಿ ಎಂಬುದು ನನಗೆ ನೆನಪಿದೆ. ನಾನು ಶಂಕುಸ್ಥಾಪನೆ ನೆರವೇರಿಸಿದ್ದೇನೆ ಮತ್ತು ಇಂದು ನೀವು ಅದರ ಉದ್ಘಾಟನೆಗೂ ನನಗೆ ಒಂದು ಅವಕಾಶವನ್ನು ನೀಡಿದ್ದೀರಿ. ಇದುವೇ ರೂಪಾಂತರ ಅಥವಾ ಪರಿವರ್ತನೆ. ನಾವು (ಯೋಜನೆಗಳಿಗೆ) ಅಡಿಪಾಯ ಹಾಕುತ್ತೇವೆ ಮತ್ತು ಅದನ್ನು ಉದ್ಘಾಟಿಸುತ್ತೇವೆ, ಸಹೋದರರೇ. ಮತ್ತು ಡಬಲ್ ಇಂಜಿನ್ ಸರ್ಕಾರವು ಈ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ನಮ್ಮ ಸರ್ಕಾರ ಯಾವುದೇ ನಿರ್ಣಯವನ್ನು ತೆಗೆದುಕೊಂಡರೂ, ಅದನ್ನು ಸರಕಾರ ಪೂರೈಸುತ್ತದೆ. ಕೋವಿಡ್ ಅಡೆತಡೆಗಳ ಹೊರತಾಗಿಯೂ ಐಐಐಟಿ ನಿರ್ಮಾಣವನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿದ್ದಕ್ಕಾಗಿ ನಾನು ಎಲ್ಲಾ ಸಹೋದ್ಯೋಗಿಗಳನ್ನು ಅಭಿನಂದಿಸಲು ಬಯಸುತ್ತೇನೆ.
ಸ್ನೇಹಿತರೇ,
ಯುವಜನರ ಕೌಶಲ್ಯ ಮತ್ತು ಸಾಮರ್ಥ್ಯವನ್ನು ಹೆಚ್ಚಿಸುವುದು ಇಂದು ನಮ್ಮ ಅತಿದೊಡ್ಡ ಆದ್ಯತೆಯಾಗಿದೆ. ಆದ್ದರಿಂದ, ಆವಿಷ್ಕಾರ ಮತ್ತು ಕೌಶಲ್ಯಗಳಿಗೆ ಸಂಬಂಧಿಸಿದ ಸಂಸ್ಥೆಗಳನ್ನು ದೇಶಾದ್ಯಂತ ವಿಸ್ತರಿಸಲಾಗುತ್ತಿದೆ. ಹಿಮಾಚಲ ಪ್ರದೇಶಕ್ಕೆ ಇದು ಕೇವಲ ಆರಂಭವಷ್ಟೇ. ಹಿಮಾಚಲದ ಯುವಕರು ಸೈನ್ಯದಲ್ಲಿದ್ದಾಗ ದೇಶದ ಭದ್ರತೆಯಲ್ಲಿ ಹೊಸ ಆಯಾಮಗಳನ್ನು ಸೃಷ್ಟಿಸಿದ್ದಾರೆ. ಈಗ ವಿವಿಧ ರೀತಿಯ ಕೌಶಲ್ಯಗಳು ಅವರಿಗೆ ಸೇನೆಯಲ್ಲಿ ಉನ್ನತ ಸ್ಥಾನಗಳನ್ನು ತಲುಪಲು ಸಹಾಯ ಮಾಡುತ್ತವೆ. ಡಬಲ್ ಎಂಜಿನ್ ಸರ್ಕಾರ ಅಭಿವೃದ್ಧಿ ಹೊಂದಿದ ಹಿಮಾಚಲವನ್ನು ರೂಪಿಸುವುದಕ್ಕಾಗಿ ಸದಾ ನಿಮ್ಮೊಂದಿಗೆ ಇರುತ್ತದೆ.
ಸ್ನೇಹಿತರೇ,
ಕನಸುಗಳು ದೊಡ್ಡದಾಗಿರುವಾಗ ಮತ್ತು ನಿರ್ಣಯಗಳು ದೊಡ್ಡದಾಗಿದ್ದಾಗ, ಅದಕ್ಕೆ ಅದೇ ಪ್ರಮಾಣದ ಪ್ರಯತ್ನಗಳು ಬೇಕಾಗುತ್ತವೆ. ಇಂದು ಈ ಪ್ರಯತ್ನವು ಡಬಲ್ ಎಂಜಿನ್ ಸರ್ಕಾರದಲ್ಲಿ ಎಲ್ಲೆಡೆ ಕಾಣಸಿಗುತ್ತದೆ. ಆದ್ದರಿಂದ, ಹಿಮಾಚಲದ ಜನರು ಹಳೆಯ ಸಂಪ್ರದಾಯವನ್ನು ಬದಲಾಯಿಸಲು ನಿರ್ಧರಿಸಿದ್ದಾರೆ ಎಂದು ನನಗೆ ತಿಳಿದಿದೆ. ನೀವು ನಿರ್ಧರಿಸಿದ್ದೀರಿ ಹೌದೋ, ಅಲ್ಲವೋ? ಈಗ ಡಬಲ್ ಎಂಜಿನ್ ಸರ್ಕಾರವು ಹೊಸ ಇತಿಹಾಸವನ್ನು ಸೃಷ್ಟಿಸಲಿದೆ. ಮತ್ತು ಹಿಮಾಚಲದ ಜನರು ಹೊಸ ಸಂಪ್ರದಾಯವನ್ನು ಸೃಷ್ಟಿಸುತ್ತಾರೆ.
ಹಿಮಾಚಲದ ಅಭಿವೃದ್ಧಿಯ ಸುವರ್ಣಯುಗವು ಸ್ವಾತಂತ್ರ್ಯದ 'ಅಮೃತ ಕಾಲ'ದಲ್ಲಿ ಪ್ರಾರಂಭವಾಗಲಿದೆ ಎಂದು ನಾನು ನಂಬುತ್ತೇನೆ. ಈ ಸುವರ್ಣ ಯುಗವು ಹಿಮಾಚಲವನ್ನು ಅಭಿವೃದ್ಧಿಯ ಉತ್ತುಂಗಕ್ಕೆ ಕೊಂಡೊಯ್ಯುತ್ತದೆ, ಅದಕ್ಕಾಗಿ ನೀವು ದಶಕಗಳಿಂದ ಕಾಯುತ್ತಿದ್ದೀರಿ. ಈ ಎಲ್ಲಾ ಯೋಜನೆಗಳಿಗಾಗಿ ನಾನು ಮತ್ತೊಮ್ಮೆ ನಿಮ್ಮನ್ನು ಬಹಳ ಬಹಳ ಅಭಿನಂದಿಸುತ್ತೇನೆ. ನಾನು ನಿಮಗೆ ಶುಭವನ್ನು ಹಾರೈಸುತ್ತೇನೆ. ಮತ್ತು ಮುಂಬರುವ ಎಲ್ಲಾ ಪ್ರಮುಖ ಹಬ್ಬಗಳಿಗೆ ನಾನು ನಿಮಗೆ ಶುಭ ಹಾರೈಸುತ್ತೇನೆ.
ಭಾರತ್ ಮಾತಾ ಕಿ-ಜೈ!
ಭಾರತ್ ಮಾತಾ ಕಿ-ಜೈ!
ಭಾರತ್ ಮಾತಾ ಕಿ-ಜೈ!
ಧನ್ಯವಾದಗಳು!