ಭಾರತ್ ಮಾತಾ ಕಿ ಜೈ!
ಭಾರತ್ ಮಾತಾ ಕಿ ಜೈ!
ಜಗದ್ಗುರು ಬಸವೇಶ್ವರ ಅವರಿಗೆ ನನ್ನ ನಮಸ್ಕಾರಗಳು.
ಕಲೆ, ಸಾಹಿತ್ಯ, ಸಂಸ್ಕೃತಿಯ ಈ ನಾಡಿಗೆ,
ಕರ್ನಾಟಕದ ಎಲ್ಲಾ ಸಹೋದರ, ಸಹೋದರಿಯರಿಗೆ ನನ್ನ ನಮಸ್ಕಾರಗಳು.
ಸ್ನೇಹಿತರೇ,
ಈ ವರ್ಷದ ಆರಂಭದಲ್ಲೂ ಹುಬ್ಬಳ್ಳಿಗೆ ಭೇಟಿ ನೀಡುವ ಅವಕಾಶ ನನಗೆ ಸಿಕ್ಕಿತ್ತು. ಹುಬ್ಬಳ್ಳಿಯ ನನ್ನ ಪ್ರೀತಿಯ ಸಹೋದರ ಸಹೋದರಿಯರು ರಸ್ತೆಬದಿಯಲ್ಲಿ ನಿಂತು ನನ್ನ ಮೇಲೆ ಇಷ್ಟೊಂದು ಪ್ರೀತಿ ಮತ್ತು ಆಶೀರ್ವಾದಗಳನ್ನು ಸುರಿಸಿದ ರೀತಿಯನ್ನು ನಾನು ಎಂದಿಗೂ ಮರೆಯುವುದಿಲ್ಲ. ಈ ಹಿಂದೆ ಕರ್ನಾಟಕದ ವಿವಿಧ ಭಾಗಗಳಿಗೆ ಭೇಟಿ ನೀಡುವ ಅವಕಾಶ ನನಗೆ ಸಿಕ್ಕಿತ್ತು. ಬೆಂಗಳೂರಿನಿಂದ ಬೆಳಗಾವಿಯವರೆಗೆ, ಕಲಬುರಗಿಯಿಂದ ಶಿವಮೊಗ್ಗದವರೆಗೆ, ಮೈಸೂರಿನಿಂದ ತುಮಕೂರಿನವರೆಗೆ ಕನ್ನಡಿಗರು ನನಗೆ ನಿರಂತರವಾಗಿ ನೀಡಿದ ಪ್ರೀತಿ, ವಾತ್ಸಲ್ಯ ಮತ್ತು ಆಶೀರ್ವಾದ ನಿಜಕ್ಕೂ ಅಗಾಧವಾಗಿದೆ. ನಾನು ನಿಮ್ಮ ಪ್ರೀತಿಗೆ ಚಿರಋಣಿಯಾಗಿದ್ದೇನೆ ಮತ್ತು ಕರ್ನಾಟಕದ ಜನರಿಗೆ ನಿರಂತರವಾಗಿ ಸೇವೆ ಸಲ್ಲಿಸುವ ಮೂಲಕ ಈ ಋಣವನ್ನು ತೀರಿಸುತ್ತೇನೆ. ಕರ್ನಾಟಕದ ಪ್ರತಿಯೊಬ್ಬ ವ್ಯಕ್ತಿಯು ಸಂತೃಪ್ತ ಜೀವನವನ್ನು ಹೊಂದಿದ್ದಾನೆ ಎಂದು ಖಚಿತಪಡಿಸಿಕೊಳ್ಳುವ ದಿಕ್ಕಿನಲ್ಲಿ ನಾವು ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ; ಇಲ್ಲಿನ ಯುವಕರು ಮುಂದೆ ಸಾಗುತ್ತಿದ್ದಾರೆ ಮತ್ತು ನಿಯಮಿತವಾಗಿ ಹೊಸ ಉದ್ಯೋಗಾವಕಾಶಗಳನ್ನು ಪಡೆಯುತ್ತಿದ್ದಾರೆ. ಇಲ್ಲಿನ ಸಹೋದರಿಯರು ಮತ್ತು ಹೆಣ್ಣುಮಕ್ಕಳು ಉತ್ತಮ ರೀತಿಯಲ್ಲಿ ಸಶಕ್ತರಾಗಿದ್ದಾರೆ. ಬಿಜೆಪಿಯ ಡಬಲ್ ಎಂಜಿನ್ ಸರಕಾರವು ಕರ್ನಾಟಕದ ಪ್ರತಿ ಜಿಲ್ಲೆ, ಪ್ರತಿ ಗ್ರಾಮ ಮತ್ತು ಪ್ರತಿ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುತ್ತಿದೆ. ಇಂದು ಧಾರವಾಡದ ಈ ಭೂಮಿಯಲ್ಲಿ ಅಭಿವೃದ್ಧಿಯ ಹೊಸ ಪ್ರವಾಹವು ಹೊರಹೊಮ್ಮುತ್ತಿದೆ. ಈ ಅಭಿವೃದ್ಧಿಯ ಪ್ರವಾಹವು ಹುಬ್ಬಳ್ಳಿ, ಧಾರವಾಡ ಮತ್ತು ಇಡೀ ಕರ್ನಾಟಕದ ಭವಿಷ್ಯವನ್ನು ಉಜ್ವಲಗೊಳಿಸುತ್ತದೆ ಮತ್ತು ಅರಳಿಸುತ್ತದೆ.
ಸ್ನೇಹಿತರೇ,
ಶತಮಾನಗಳಿಂದಲೂ ನಮ್ಮ ಧಾರವಾಡವನ್ನು ಮಲೆನಾಡು ಮತ್ತು ಬಯಲು ಸೀಮೆಯ ಹೆಬ್ಬಾಗಿಲು ಪಟ್ಟಣ ಎಂದು ಕರೆಯಲಾಗುತ್ತದೆ. ಈ ನಗರವು ವಿವಿಧ ಪ್ರದೇಶಗಳಿಂದ ಬರುವ ಪ್ರಯಾಣಿಕರಿಗೆ ನಿಲುಗಡೆಯಾಗಿತ್ತು. ಅದು ಎಲ್ಲರನ್ನೂ ತೆರೆದ ತೋಳುಗಳಿಂದ ಸ್ವಾಗತಿಸಿತು, ಮತ್ತು ಎಲ್ಲರಿಂದ ಕಲಿಯುವ ಮೂಲಕ ತನ್ನನ್ನು ಶ್ರೀಮಂತಗೊಳಿಸಿಕೊಂಡಿತು. ಅದಕ್ಕಾಗಿಯೇ ಧಾರವಾಡ ಕೇವಲ ಹೆಬ್ಬಾಗಿಲಾಗಿರದೆ, ಕರ್ನಾಟಕ ಮತ್ತು ಭಾರತದ ಚೈತನ್ಯದ ಪ್ರತಿಬಿಂಬವಾಗಿದೆ. ಇದನ್ನು ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎಂದು ಕರೆಯಲಾಗುತ್ತದೆ. ಧಾರವಾಡವು ಡಾ.ದ.ರಾ.ಬೇಂದ್ರೆ ಅವರಂತಹ ಬರಹಗಾರರನ್ನು ಸೃಷ್ಟಿಸಿದ ಸಾಹಿತ್ಯದೊಂದಿಗೆ ಗುರುತಿಸಿಕೊಂಡಿದೆ. ಪಂಡಿತ್ ಭೀಮಸೇನ ಜೋಶಿ, ಗಂಗೂಬಾಯಿ ಹಾನಗಲ್ ಮತ್ತು ಬಸವರಾಜ ರಾಜಗುರು ಅವರಂತಹ ಸಂಗೀತಗಾರರನ್ನು ನೀಡಿದ ಧಾರವಾಡವು ತನ್ನ ಶ್ರೀಮಂತ ಸಂಗೀತಕ್ಕೆ ಹೆಸರುವಾಸಿಯಾಗಿದೆ. ಪಂಡಿತ್ ಕುಮಾರ್ ಗಂಧರ್ವ, ಪಂಡಿತ್ ಮಲ್ಲಿಕಾರ್ಜುನ ಮನ್ಸೂರ್ ಅವರಂತಹ ಮಹಾನ್ ರತ್ನಗಳಿಗೆ ಧಾರವಾಡದ ಪುಣ್ಯಭೂಮಿ ಜನ್ಮ ನೀಡಿದೆ. ಜೊತೆಗೆ ಧಾರವಾಡವು ತನ್ನ ಪಾಕಪದ್ಧತಿಯಿಂದಾಗಿಯೂ ಗುರುತಿಸಲ್ಪಟ್ಟಿದೆ. 'ಧಾರವಾಡ ಪೇಡಾ'ವನ್ನು ಮತ್ತೆ ಮತ್ತೆ ಸವಿಯಲು ಯಾರು ತಾನೇ ಬಯಸುವುದಿಲ್ಲ? ಆದರೆ ನನ್ನ ಸ್ನೇಹಿತ ಪ್ರಹ್ಲಾದ್ ಜೋಶಿ ನನ್ನ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ. ಆದ್ದರಿಂದ ಇಂದು ಅವರು ನನಗೆ ಪೇಡಾವನ್ನು ನೀಡಿದರೂ, ಪ್ಯಾಕ್ ಮಾಡಿದ ಪೆಟ್ಟಿಗೆಯಲ್ಲಿ ಕೊಟ್ಟಿದ್ದಾರೆ!
ಸ್ನೇಹಿತರೇ,
ಇಂದು ಧಾರವಾಡದಲ್ಲಿ ʻಐಐಟಿʼಯ ಈ ಹೊಸ ಕ್ಯಾಂಪಸ್ ಉದ್ಘಾಟನೆಯೊಂದಿಗೆ ನನ್ನ ಸಂತೋಷ ದ್ವಿಗುಣವಾಗಿದೆ. ಈ ಪ್ರದೇಶದಲ್ಲಿ ಜನರಿಗೆ ಹಿಂದಿ ಅರ್ಥವಾಗುತ್ತದೆ. ಈ ಕ್ಯಾಂಪಸ್ ಧಾರವಾಡದ ಅಸ್ಮಿತೆಯನ್ನು ಮತ್ತಷ್ಟು ಬಲಪಡಿಸಲು ಕೆಲಸ ಮಾಡುತ್ತದೆ.
ಸ್ನೇಹಿತರೇ,
ನಾನು ಇಲ್ಲಿಗೆ ಬರುವ ಮೊದಲು ಮಂಡ್ಯಕ್ಕೆ ಹೋಗಿದ್ದೆ. ಮಂಡ್ಯದಲ್ಲಿ ʻಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇʼ ಅನ್ನು ಕರ್ನಾಟಕ ಮತ್ತು ದೇಶದ ಜನರಿಗೆ ಸಮರ್ಪಿಸುವ ಸೌಭಾಗ್ಯ ನನಗೆ ಸಿಕ್ಕಿತು. ಈ ʻಎಕ್ಸ್‌ಪ್ರೆಸ್ ವೇʼ ಕರ್ನಾಟಕವನ್ನು ವಿಶ್ವದ 'ಸಾಫ್ಟ್ ವೇರ್ ಮತ್ತು ತಂತ್ರಜ್ಞಾನ' ಕೇಂದ್ರವಾಗಿ ಮತ್ತಷ್ಟು ಉನ್ನತಿಗೇರಿಸಲು ದಾರಿ ಮಾಡಿಕೊಡುತ್ತದೆ. ಕೆಲವು ದಿನಗಳ ಹಿಂದೆ, ಬೆಳಗಾವಿಯಲ್ಲಿ ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಉದ್ಘಾಟನೆ/
ಶಂಕುಸ್ಥಾಪನೆ ನೆರವೇರಿಸಲಾಯಿತು. ಕುವೆಂಪು ವಿಮಾನ ನಿಲ್ದಾಣವನ್ನು ಶಿವಮೊಗ್ಗದಲ್ಲಿ ಉದ್ಘಾಟಿಸಲಾಯಿತು. ಈಗ ಧಾರವಾಡದ ʻಐಐಟಿʼಯ ಈ ಹೊಸ ಕ್ಯಾಂಪಸ್ ಕರ್ನಾಟಕದ ಅಭಿವೃದ್ಧಿಯ ಪಯಣದಲ್ಲಿ ಹೊಸ ಅಧ್ಯಾಯವನ್ನು ಬರೆಯುತ್ತಿದೆ. ಒಂದು ಸಂಸ್ಥೆಯಾಗಿ, ಇಲ್ಲಿನ ಹೈಟೆಕ್ ಸೌಲಭ್ಯಗಳು ಐಐಟಿ-ಧಾರವಾಡವನ್ನು ವಿಶ್ವದ ಅತ್ಯುತ್ತಮ ಸಂಸ್ಥೆಗಳಿಗೆ ಸರಿಸಮನಾಗಿರಲು ಪ್ರೇರೇಪಿಸುತ್ತವೆ.
ಸ್ನೇಹಿತರೇ,
ಈ ಸಂಸ್ಥೆಯು ಬಿಜೆಪಿ ಸರಕಾರದ ʻಸಂಕಲ್ಪದಿಂದ ಸಿದ್ಧಿʼ ಧ್ಯೇಯವಾಕ್ಯಕ್ಕೆ ಒಂದು ಉದಾಹರಣೆಯಾಗಿದೆ. ನಾಲ್ಕು ವರ್ಷಗಳ ಹಿಂದೆ 2019ರ ಫೆಬ್ರವರಿಯಲ್ಲಿ ನಾನು ಈ ಆಧುನಿಕ ಸಂಸ್ಥೆಗೆ ಅಡಿಪಾಯ ಹಾಕಿದ್ದೆ. ಆಗ ಕೋವಿಡ್ ಸಾಂಕ್ರಾಮಿಕ ರೋಗ ಅಪ್ಪಳಿಸಿತ್ತು. ಕೆಲಸವನ್ನು ಪೂರ್ಣಗೊಳಿಸುವಲ್ಲಿ ಹಲವಾರು ಅಡೆತಡೆಗಳು ಇದ್ದವು. ಅದರ ಹೊರತಾಗಿಯೂ, ನಾಲ್ಕು ವರ್ಷಗಳಲ್ಲಿ, ಐಐಟಿ-ಧಾರವಾಡ ಇಂದು ಭವಿಷ್ಯದ ಸಂಸ್ಥೆಯಾಗಿ ಮಾರ್ಪಟ್ಟಿರುವುದು ನನಗೆ ಸಂತೋಷ ತಂದಿದೆ. ಶಂಕುಸ್ಥಾಪನೆಯಿಂದ ಉದ್ಘಾಟನೆಯವರೆಗೆ, ಡಬಲ್ ಎಂಜಿನ್ ಸರಕಾರವು ಇದೇ ವೇಗದಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಅಡಿಪಾಯ ಹಾಕುತ್ತಿರುವ ಪ್ರತಿಯೊಂದು ಯೋಜನೆಯನ್ನು ನಾವು ಉದ್ಘಾಟಿಸುತ್ತೇವೆ ಎಂಬ ಸಂಕಲ್ಪವನ್ನು ನಾನು ತೊಟ್ಟಿದ್ದೇನೆ. 'ಶಂಕುಸ್ಥಾಪನೆ ಮಾಡಿ, ಅದರ ಬಗ್ಗೆ ಮರೆತು ಹೋಗುವʼ ಸಮಯ ಹಳೆಯದು.
ಸ್ನೇಹಿತರೇ,
ಸ್ವಾತಂತ್ರ್ಯಾನಂತರ ಹಲವಾರು ದಶಕಗಳ ಕಾಲ, ಪ್ರಸಿದ್ಧ ಶಿಕ್ಷಣ ಸಂಸ್ಥೆಗಳು ವಿಸ್ತರಿಸಿದರೆ, ಅವುಗಳ ಬ್ರಾಂಡ್ ಮೇಲೆ ಪರಿಣಾಮ ಬೀರುತ್ತದೆ ಎಂಬ ಕಲ್ಪನೆಯನ್ನು ನಾವು ಹೊಂದಿದ್ದೆವು. ಈ ಮನಸ್ಥಿತಿ ದೇಶದ ಯುವಕರಿಗೆ ಹಾನಿ ಮಾಡಿದೆ. ಆದರೆ ಈಗ ನವ ಭಾರತ, ಯುವ ಭಾರತವು ಈ ಹಳೆಯ ಚಿಂತನೆಯನ್ನು ಬಿಟ್ಟು ಮುಂದೆ ಸಾಗುತ್ತಿದೆ. ಉತ್ತಮ ಗುಣಮಟ್ಟದ ಶಿಕ್ಷಣವು ಎಲ್ಲೆಡೆ ತಲುಪಬೇಕು ಮತ್ತು ಪ್ರತಿಯೊಬ್ಬರೂ ಅದನ್ನು ಪಡೆಯಬೇಕು. ನಾವು ಹೆಚ್ಚಿನ ಸಂಖ್ಯೆಯ ಉತ್ತಮ ಗುಣಮಟ್ಟದ ಸಂಸ್ಥೆಗಳನ್ನು ಹೊಂದಿದ್ದೇವೆ, ಹೆಚ್ಚಿನ ಸಂಖ್ಯೆಯ ಜನರು ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಪ್ರವೇಶವನ್ನು ಪಡೆಯುತ್ತಿದ್ದಾರೆ. ಕಳೆದ 9 ವರ್ಷಗಳಲ್ಲಿ ಭಾರತದಲ್ಲಿ ಉತ್ತಮ ಶಿಕ್ಷಣ ಸಂಸ್ಥೆಗಳ ಸಂಖ್ಯೆ ನಿರಂತರವಾಗಿ ಹೆಚ್ಚಾಗಲು ಇದೇ ಕಾರಣವಾಗಿದೆ. ನಾವು ʻಏಮ್ಸ್ʼ ಸಂಖ್ಯೆಯನ್ನು ಮೂರು ಪಟ್ಟು ಹೆಚ್ಚಿಸಿದ್ದೇವೆ. ಸ್ವಾತಂತ್ರ್ಯಾನಂತರದ 7 ದಶಕಗಳಲ್ಲಿ ದೇಶದಲ್ಲಿ ಕೇವಲ 380 ವೈದ್ಯಕೀಯ ಕಾಲೇಜುಗಳಿದ್ದವು, ಆದರೆ ಕಳೆದ 9 ವರ್ಷಗಳಲ್ಲಿ 250 ವೈದ್ಯಕೀಯ ಕಾಲೇಜುಗಳನ್ನು ತೆರೆಯಲಾಗಿದೆ. ಈ 9 ವರ್ಷಗಳಲ್ಲಿ, ದೇಶದಲ್ಲಿ ಅನೇಕ ಹೊಸ ʻಐಐಎಂʼಗಳು ಮತ್ತು ʻಐಐಟಿʼಗಳನ್ನು ತೆರೆಯಲಾಗಿದೆ. ಇಂದಿನ ಕಾರ್ಯಕ್ರಮವು ಬಿಜೆಪಿ ಸರಕಾರದ ಈ ಬದ್ಧತೆಯ ಸಂಕೇತವಾಗಿದೆ.
ಸ್ನೇಹಿತರೇ,
21ನೇ ಶತಮಾನದ ಭಾರತವು ತನ್ನ ನಗರಗಳನ್ನು ಆಧುನೀಕರಿಸುವ ಮೂಲಕ ಮುನ್ನಡೆಯುತ್ತಿದೆ. ಹುಬ್ಬಳ್ಳಿ-ಧಾರವಾಡವನ್ನು ಬಿಜೆಪಿ ಸರಕಾರ ʻಸ್ಮಾರ್ಟ್ ಸಿಟಿʼ ಯೋಜನೆಯಲ್ಲಿ ಸೇರಿಸಿತು. ಇಂದು, ಇದರ ಅಡಿಯಲ್ಲಿ ಅನೇಕ ಸ್ಮಾರ್ಟ್ ಯೋಜನೆಗಳನ್ನು ಇಲ್ಲಿ ಉದ್ಘಾಟಿಸಲಾಗಿದೆ. ಇದಲ್ಲದೆ, ಕ್ರೀಡಾ ಸಂಕೀರ್ಣಕ್ಕೆ ಅಡಿಪಾಯ ಹಾಕಲಾಗಿದೆ. ತಂತ್ರಜ್ಞಾನ, ಮೂಲಸೌಕರ್ಯ ಮತ್ತು ಸ್ಮಾರ್ಟ್ ಆಡಳಿತದ ಪರಿಣಾಮವಾಗಿ, ಹುಬ್ಬಳ್ಳಿ ಧಾರವಾಡದ ಈ ಪ್ರದೇಶವು ಮುಂಬರುವ ದಿನಗಳಲ್ಲಿ ಅಭಿವೃದ್ಧಿಯ ಹೊಸ ಎತ್ತರವನ್ನು ತಲುಪಲಿದೆ.
ಸ್ನೇಹಿತರೇ,
ʻಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆʼ ಕೂಡ ಕರ್ನಾಟಕದಾದ್ಯಂತ ಅತ್ಯಂತ ವಿಶ್ವಾಸಾರ್ಹವಾದುದು. ಇದರ ಸೇವೆಗಳು ಬೆಂಗಳೂರು, ಮೈಸೂರು ಮತ್ತು ಕಲಬುರಗಿಯಲ್ಲಿ ಲಭ್ಯವಿದೆ. ಇಂದು ಅದರ ಹೊಸ ಶಾಖೆಗೆ ಹುಬ್ಬಳ್ಳಿಯಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಇದು ಸಿದ್ಧವಾದ ನಂತರ, ಈ ಪ್ರದೇಶದ ಜನರು ಸಾಕಷ್ಟು ಪ್ರಯೋಜನಗಳನ್ನು ಪಡೆಯಬಹುದು. ಈ ಪ್ರದೇಶವು ಈಗಾಗಲೇ ಆರೋಗ್ಯ ರಕ್ಷಣಾ ಕೇಂದ್ರವಾಗಿದೆ. ಈಗ ಹೊಸ ಆಸ್ಪತ್ರೆಯಿಂದ ಹೆಚ್ಚಿನ ಜನರು ಅನುಕೂಲ ಪಡೆಯಲಿದ್ದಾರೆ.
ಸ್ನೇಹಿತರೇ,
ಧಾರವಾಡ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಒಟ್ಟಾಗಿ ಕೆಲಸ ಮಾಡುತ್ತಿವೆ. ʻಜಲ ಜೀವನ್ ಮಿಷನ್ʼ ಅಡಿಯಲ್ಲಿ, 1000 ಕೋಟಿ ರೂ.ಗಿಂತ ಹೆಚ್ಚು ಮೌಲ್ಯದ ಯೋಜನೆಗೆ ಇಲ್ಲಿ ಶಂಕುಸ್ಥಾಪನೆ ಮಾಡಲಾಗಿದೆ. ಈ ಮೂಲಕ ರೇಣುಕಾ ಸಾಗರ ಜಲಾಶಯ ಮತ್ತು ಮಲಪ್ರಭಾ ನದಿಯ ನೀರನ್ನು 1.25 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ನಲ್ಲಿಗಳ ಮೂಲಕ ಪೂರೈಸಲಾಗುವುದು. ಧಾರವಾಡದಲ್ಲಿ ಹೊಸ ನೀರು ಸಂಸ್ಕರಣಾ ಘಟಕ ಸಿದ್ಧವಾದಾಗ ಇಡೀ ಜಿಲ್ಲೆಯ ಜನರಿಗೆ ಅನುಕೂಲವಾಗಲಿದೆ. ಇಂದು ತುಪಾರಿಹಳ್ಳ ಪ್ರವಾಹ ಹಾನಿ ನಿಯಂತ್ರಣ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಈ ಯೋಜನೆಯ ಸಹಾಯದಿಂದ,
ಪ್ರವಾಹದಿಂದ ಉಂಟಾಗುವ ಹಾನಿಯನ್ನು ಕಡಿಮೆ ಮಾಡಬಹುದು.
ಸ್ನೇಹಿತರೇ,
ಇಂದು ನಾನು ಇನ್ನೊಂದು ವಿಷಯದ ಬಗ್ಗೆ ತುಂಬಾ ಸಂತೋಷವಾಗಿದ್ದೇನೆ. ಸಂಪರ್ಕದ ವಿಷಯದಲ್ಲಿ ಕರ್ನಾಟಕ ಇಂದು ಮತ್ತೊಂದು ಮೈಲುಗಲ್ಲನ್ನು ತಲುಪಿದೆ. ಈ ವೈಭವವನ್ನು ಕರ್ನಾಟಕಕ್ಕೆ ತಂದುಕೊಡುವ ಮೂಲಕ ಹುಬ್ಬಳ್ಳಿಯು ಅದೃಷ್ಟಶಾಲಿಯಾಗಿದೆ. ಈಗ ʻಸಿದ್ಧಾರೂಢ ಸ್ವಾಮೀಜಿʼ ರೈಲು ನಿಲ್ದಾಣವು ವಿಶ್ವದ ಅತಿ ಉದ್ದದ ಪ್ಲಾಟ್‌ಫಾರಂ ಹೊಂದಿದೆ. ಆದರೆ ಇದು ಕೇವಲ ದಾಖಲೆಯಲ್ಲ; ಇದು ಕೇವಲ ಪ್ಲಾಟ್‌ಫಾರಂ ವಿಸ್ತರಣೆಯಲ್ಲ. ಇದು ನಾವು ಮೂಲಸೌಕರ್ಯಕ್ಕೆ ಆದ್ಯತೆ ನೀಡುವ ಚಿಂತನೆಯ ವಿಸ್ತರಣೆಯಾಗಿದೆ. ಹೊಸಪೇಟೆ-ಹುಬ್ಬಳ್ಳಿ-ತಿನೈಘಾಟ್ ವಿಭಾಗದ ವಿದ್ಯುದ್ದೀಕರಣ ಮತ್ತು ಹೊಸಪೇಟೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವುದು ಈ ದೂರದೃಷ್ಟಿಗೆ ಪುಷ್ಟಿ ನೀಡುತ್ತದೆ. ಈ ಮಾರ್ಗದ ಮೂಲಕ ಕೈಗಾರಿಕೆಗಳಿಗೆ ದೊಡ್ಡ ಪ್ರಮಾಣದಲ್ಲಿ ಕಲ್ಲಿದ್ದಲನ್ನು ಸಾಗಿಸಲಾಗುತ್ತದೆ. ಈ ಮಾರ್ಗದ ವಿದ್ಯುದ್ದೀಕರಣದ ನಂತರ, ಡೀಸೆಲ್ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ ಮತ್ತು ಪರಿಸರವನ್ನು ರಕ್ಷಿಸಲಾಗುತ್ತದೆ. ಈ ಎಲ್ಲಾ ಪ್ರಯತ್ನಗಳು ಈ ಪ್ರದೇಶದ ಆರ್ಥಿಕ ಅಭಿವೃದ್ಧಿಯನ್ನು ವೇಗಗೊಳಿಸುತ್ತವೆ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸುತ್ತವೆ.
ಸಹೋದರ ಸಹೋದರಿಯರೇ,
ಉತ್ತಮ ಮತ್ತು ಆಧುನಿಕ ಮೂಲಸೌಕರ್ಯವು ಕಣ್ಣುಗಳಿಗೆ ಆಹ್ಲಾದಕರ ಮಾತ್ರವಲ್ಲ, ಜೀವನವನ್ನು ಸುಲಭಗೊಳಿಸುತ್ತದೆ. ಇದು ಕನಸುಗಳು ನನಸಾಗಲು ದಾರಿ ಮಾಡಿಕೊಡುತ್ತದೆ. ನಮಗೆ ಉತ್ತಮ ರಸ್ತೆಗಳು ಅಥವಾ ಉತ್ತಮ ಆಸ್ಪತ್ರೆಗಳು ಇಲ್ಲದಿದ್ದಾಗ, ಸಮಾಜದ ಪ್ರತಿಯೊಂದು ವರ್ಗದ ಜನರು ಮತ್ತು ಎಲ್ಲಾ ವಯಸ್ಸಿನ ಜನರು ಭಾರಿ ತೊಂದರೆಗಳನ್ನು ಎದುರಿಸಬೇಕಾಯಿತು. ಆದರೆ ಇಂದು ನವ ಭಾರತದಲ್ಲಿ ಆಧುನಿಕ ಮೂಲಸೌಕರ್ಯಗಳನ್ನು ನಿರ್ಮಿಸಲಾಗುತ್ತಿದ್ದು, ಪ್ರತಿಯೊಬ್ಬರೂ ಅದರ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ. ಉತ್ತಮ ರಸ್ತೆಗಳು ಶಾಲೆ ಮತ್ತು ಕಾಲೇಜಿಗೆ ಹೋಗಲು ವಿದ್ಯಾರ್ಥಿಗಳ ಪರದಾಟವನ್ನು ತಪ್ಪಿಸುತ್ತವೆ. ಆಧುನಿಕ ಹೆದ್ದಾರಿಗಳು ರೈತರು, ಕಾರ್ಮಿಕರು, ಉದ್ಯಮಿಗಳು, ಕಚೇರಿಗೆ ಹೋಗುವವರು, ಮಧ್ಯಮ ವರ್ಗದವರು, ಎಲ್ಲರಿಗೂ ಪ್ರಯೋಜನವನ್ನು ನೀಡುತ್ತವೆ. ಆದ್ದರಿಂದ, ಪ್ರತಿಯೊಬ್ಬರೂ ಉತ್ತಮ-ಆಧುನಿಕ ಮೂಲಸೌಕರ್ಯವನ್ನು ಬಯಸುತ್ತಾರೆ. ಹೀಗಾಗಿ ಕಳೆದ 9 ವರ್ಷಗಳಿಂದ ದೇಶವು ತನ್ನ ಮೂಲಸೌಕರ್ಯಗಳನ್ನು ಆಧುನೀಕರಿಸಲು ನಿರಂತರವಾಗಿ ಕೆಲಸ ಮಾಡುತ್ತಿರುವುದು ನನಗೆ ಸಂತೋಷ ತಂದಿದೆ. ಕಳೆದ 9 ವರ್ಷಗಳಲ್ಲಿ, ʻಪಿಎಂ ಸಡಕ್ʼ ಯೋಜನೆಯ ಮೂಲಕ ದೇಶದ ಹಳ್ಳಿಗಳಲ್ಲಿ ರಸ್ತೆಗಳ ಜಾಲವು ದ್ವಿಗುಣಗೊಂಡಿದೆ. ರಾಷ್ಟ್ರೀಯ ಹೆದ್ದಾರಿ ಜಾಲವು ಶೇ. 55ಕ್ಕಿಂತ ಹೆಚ್ಚು ವಿಸ್ತರಿಸಿದೆ. ರಸ್ತೆಗಳು ಮಾತ್ರವಲ್ಲ, ಇಂದು ವಿಮಾನ ನಿಲ್ದಾಣ ಮತ್ತು ರೈಲ್ವೆಗಳು ಸಹ ದೇಶದಲ್ಲಿ ಅಭೂತಪೂರ್ವವಾಗಿ ವಿಸ್ತರಿಸುತ್ತಿವೆ. ಕಳೆದ 9 ವರ್ಷಗಳಲ್ಲಿ ದೇಶದಲ್ಲಿ ವಿಮಾನ ನಿಲ್ದಾಣಗಳ ಸಂಖ್ಯೆ ದ್ವಿಗುಣಗೊಂಡಿದೆ.
ಸ್ನೇಹಿತರೇ,
2014ಕ್ಕೂ ಮೊದಲು ದೇಶದಲ್ಲಿ ಅಂತರ್ಜಾಲ ಮತ್ತು ಭಾರತದ ಡಿಜಿಟಲ್ ಶಕ್ತಿಯ ಬಗ್ಗೆ ಬಹಳ ಕಡಿಮೆ ಚರ್ಚೆ ನಡೆದಿತ್ತು. ಆದರೆ ಇಂದು ಭಾರತವು ವಿಶ್ವದ ಅತ್ಯಂತ ಶಕ್ತಿಶಾಲಿ ಡಿಜಿಟಲ್ ಆರ್ಥಿಕತೆಗಳಲ್ಲಿ ಒಂದಾಗಿದೆ. ಏಕೆಂದರೆ ನಾವು ಅಗ್ಗದ ಇಂಟರ್ನೆಟ್ ಲಭ್ಯವಾಗುವಂತೆ ಮಾಡಿದ್ದೇವೆ ಮತ್ತು ಪ್ರತಿ ಹಳ್ಳಿಗೆ ಇಂಟರ್ನೆಟ್ ಅನ್ನು ತೆಗೆದುಕೊಂಡಿದ್ದೇವೆ. ಕಳೆದ 9 ವರ್ಷಗಳಲ್ಲಿ, ಪ್ರತಿದಿನ ಸರಾಸರಿ 2.5 ಲಕ್ಷ ಬ್ರಾಡ್‌ಬ್ಯಾಂಡ್ ಸಂಪರ್ಕಗಳನ್ನು ಒದಗಿಸಲಾಗಿದೆ; ದಿನಕ್ಕೆ 2.5 ಲಕ್ಷ ಸಂಪರ್ಕಗಳು!
ಮೂಲಸೌಕರ್ಯಗಳ ಅಭಿವೃದ್ಧಿಯು ಇಷ್ಟು ವೇಗವನ್ನು ಪಡೆಯಲು ಕಾರಣವೆಂದರೆ ಇಂದು ಮೂಲಸೌಕರ್ಯಗಳನ್ನು ದೇಶ ಮತ್ತು ದೇಶವಾಸಿಗಳ ಅಗತ್ಯಗಳಿಗೆ ಅನುಗುಣವಾಗಿ ನಿರ್ಮಿಸಲಾಗುತ್ತಿದೆ. ಈ ಹಿಂದೆ ರಾಜಕೀಯ ಲಾಭಗಳ ಆಧಾರದ ಮೇಲೆ ರೈಲು ಮತ್ತು ರಸ್ತೆ ಯೋಜನೆಗಳನ್ನು ಘೋಷಿಸಲಾಗುತ್ತಿತ್ತು. ನಾವು ಇಡೀ ದೇಶಕ್ಕೆ ʻಪ್ರಧಾನ ಮಂತ್ರಿ ಗತಿಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ʼ ಅನ್ನು ತಂದಿದ್ದೇವೆ, ಇದರಿಂದ ದೇಶದಲ್ಲಿ ಅಗತ್ಯವಿರುವಲ್ಲಿ ಮೂಲಸೌಕರ್ಯಗಳನ್ನು ವೇಗವಾಗಿ ನಿರ್ಮಿಸಬಹುದು.
ಸ್ನೇಹಿತರೇ,
ಇಂದು ದೇಶದಲ್ಲಿ ಸಾಮಾಜಿಕ ಮೂಲಸೌಕರ್ಯಗಳಲ್ಲಿ ಅಭೂತಪೂರ್ವ ಕೆಲಸಗಳು ನಡೆಯುತ್ತಿವೆ. 2014ರ ವರೆಗೆ, ದೇಶದ ಹೆಚ್ಚಿನ ಜನಸಂಖ್ಯೆಗೆ ಶಾಶ್ವತ ಮನೆ ಇರಲಿಲ್ಲ. ಶೌಚಾಲಯಗಳ ಕೊರತೆಯಿಂದಾಗಿ ನಮ್ಮ ಸಹೋದರಿಯರು ಸಾಕಷ್ಟು ತೊಂದರೆ ಅನುಭವಿಸಬೇಕಾಯಿತು. ಸಹೋದರಿಯರು ತಮ್ಮ ಎಲ್ಲಾ ಸಮಯವನ್ನು ಸೌದೆ ಮತ್ತು ನೀರನ್ನು ವ್ಯವಸ್ಥೆ ಮಾಡುವುದರಲ್ಲಿ ಕಳೆಯುತ್ತಿದ್ದರು. ಬಡವರಿಗೆ ಆಸ್ಪತ್ರೆಗಳ ಕೊರತೆ ಇತ್ತು. ಆಸ್ಪತ್ರೆಗಳಲ್ಲಿ ಚಿಕಿತ್ಸೆ ದುಬಾರಿಯಾಗಿತ್ತು. ನಾವು ಈ ಸಮಸ್ಯೆಗಳನ್ನು ಒಂದೊಂದಾಗಿ ಪರಿಹರಿಸಿದ್ದೇವೆ. ಬಡವರು ತಮ್ಮದೇ ಆದ ಶಾಶ್ವತ ಸೂರುಗಳು, ವಿದ್ಯುತ್-ಅನಿಲ ಸಂಪರ್ಕಗಳು ಮತ್ತು ಶೌಚಾಲಯಗಳನ್ನು ಪಡೆದರು. ಈಗ ಪ್ರತಿ ಮನೆಗೂ ನಲ್ಲಿ ನೀರಿನ ಸೌಲಭ್ಯ ಸಿಗುತ್ತಿದೆ. ಅವರ ಮನೆಗಳು ಮತ್ತು ಹಳ್ಳಿಗಳ ಬಳಿ ಉತ್ತಮ ಆಸ್ಪತ್ರೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲಾಗುತ್ತಿದೆ. ಅಂದರೆ, ಇಂದು ನಾವು ನಮ್ಮ ಯುವಕರಿಗೆ ಎಲ್ಲಾ ವಿಧಾನಗಳನ್ನು ಒದಗಿಸುತ್ತಿದ್ದೇವೆ, ಇದು ಮುಂಬರುವ 25 ವರ್ಷಗಳವರೆಗೆ ಅವರ ಸಂಕಲ್ಪಗಳನ್ನು ಪೂರೈಸಲು ಸಹಾಯ ಮಾಡುತ್ತದೆ.
ಸ್ನೇಹಿತರೇ,
ಇಂದು ನಾನು ಭಗವಾನ್ ಬಸವೇಶ್ವರರ ನಾಡಿಗೆ ಬಂದಿರುವುದರಿಂದ, ನಾನು ಮತ್ತಷ್ಟು ಆಶೀರ್ವಾದ ಪಡೆದ ಭಾವನೆ ನನಗೆ ಮೂಡಿದೆ. ಭಗವಾನ್ ಬಸವೇಶ್ವರರ ಅನೇಕ ಕೊಡುಗೆಗಳಲ್ಲಿ, ಅತ್ಯಂತ ಪ್ರಮುಖವಾದುದು ಅನುಭವ ಮಂಟಪದ ಸ್ಥಾಪನೆ. ಈ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಪ್ರಪಂಚದಾದ್ಯಂತ ಅಧ್ಯಯನ ಮಾಡಲಾಗುತ್ತದೆ. ಮತ್ತು ಈ ರೀತಿಯ ವಿಷಯಗಳಿಂದಾಗಿ, ಭಾರತವು ಅತಿದೊಡ್ಡ ಪ್ರಜಾಪ್ರಭುತ್ವ ಮಾತ್ರವಲ್ಲ, ಪ್ರಜಾಪ್ರಭುತ್ವದ ತಾಯಿಯೂ ಹೌದು ಎಂದು ನಾವು ವಿಶ್ವಾಸದಿಂದ ಹೇಳುತ್ತೇವೆ. ಕೆಲವು ವರ್ಷಗಳ ಹಿಂದೆ ಲಂಡನ್‌ನಲ್ಲಿ ಬಸವೇಶ್ವರರ ಪ್ರತಿಮೆಯನ್ನು ಉದ್ಘಾಟಿಸುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ಭಗವಾನ್ ಬಸವೇಶ್ವರ ಮತ್ತು ಅನುಭವ ಮಂಟಪವು ಲಂಡನ್‌ನಲ್ಲಿ ಪ್ರಜಾಪ್ರಭುತ್ವದ ಬಲವಾದ ಅಡಿಪಾಯವನ್ನು ಸಂಕೇತಿಸುತ್ತದೆ. ಲಂಡನ್‌ನಲ್ಲಿ ಭಗವಾನ್ ಬಸವೇಶ್ವರರ ಪ್ರತಿಮೆ ಇದೆ, ಆದರೆ ಲಂಡನ್ ನಲ್ಲಿಯೇ ಭಾರತದ ಪ್ರಜಾಪ್ರಭುತ್ವದ ವಿರುದ್ಧ ಪ್ರಶ್ನೆಗಳು ಎದ್ದಿರುವುದು ದುರದೃಷ್ಟಕರ. ಭಾರತದ ಪ್ರಜಾಪ್ರಭುತ್ವವು ನಮ್ಮ ಶತಮಾನಗಳಷ್ಟು ಹಳೆಯ ಇತಿಹಾಸದಲ್ಲಿ ಬೇರೂರಿದೆ. ವಿಶ್ವದ ಯಾವುದೇ ಶಕ್ತಿಯು ಭಾರತದ ಪ್ರಜಾಪ್ರಭುತ್ವ ಸಂಪ್ರದಾಯಗಳಿಗೆ ಹಾನಿ ಮಾಡಲು ಸಾಧ್ಯವಿಲ್ಲ. ಇದರ ಹೊರತಾಗಿಯೂ, ಕೆಲವರು ಭಾರತದ ಪ್ರಜಾಪ್ರಭುತ್ವವನ್ನು ನಿರಂತರವಾಗಿ ಪ್ರಶ್ನಿಸುತ್ತಿದ್ದಾರೆ. ಇಂತಹವರು ಬಸವೇಶ್ವರರನ್ನು ಅವಮಾನಿಸುತ್ತಿದ್ದಾರೆ. ಇಂತಹ ಜನರು ಕರ್ನಾಟಕದ ಜನರನ್ನು, ಭಾರತದ ಶ್ರೇಷ್ಠ ಸಂಪ್ರದಾಯವನ್ನು ಮತ್ತು ಭಾರತದ 130 ಕೋಟಿ ಸುಶಿಕ್ಷಿತ ನಾಗರಿಕರನ್ನು ಅವಮಾನಿಸುತ್ತಿದ್ದಾರೆ. ಕರ್ನಾಟಕದ ಜನರು ಸಹ ಇಂತಹ ಜನರ ಬಗ್ಗೆ ಜಾಗರೂಕರಾಗಿರಬೇಕು.
ಸ್ನೇಹಿತರೇ,
ಕಳೆದ ವರ್ಷಗಳಲ್ಲಿ ಕರ್ನಾಟಕವು ಭಾರತದ ಪಾಲಿಗೆ ತಂತ್ರಜ್ಞಾನದ ಭವಿಷ್ಯ ಎಂಬ ಮಾನ್ಯತೆಯನ್ನು ತಂದುಕೊಟ್ಟಿದೆ. ಅದೇ ರೀತಿ ಅದನ್ನು ಮತ್ತಷ್ಟು ಮುಂದಕ್ಕೆ ಕೊಂಡೊಯ್ಯುವ ಸಮಯ ಬಂದಿದೆ. ಕರ್ನಾಟಕವು ಹೈಟೆಕ್ ಇಂಡಿಯಾದ ಎಂಜಿನ್ ಆಗಿದೆ. ಡಬಲ್ ಎಂಜಿನ್ ಸರಕಾರದ ಶಕ್ತಿಯನ್ನು ಪಡೆಯುವುದು ಈ ಎಂಜಿನ್‌ಗೆ ಬಹಳ ಮುಖ್ಯ.
ಸ್ನೇಹಿತರೇ,
ಅಭಿವೃದ್ಧಿ ಯೋಜನೆಗಳಿಗಾಗಿ ಮತ್ತೊಮ್ಮೆ ಹುಬ್ಬಳ್ಳಿ-ಧಾರವಾಡದ ಜನತೆಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭ ಹಾರೈಕೆಗಳು. ನನ್ನೊಂದಿಗೆ ಗಟ್ಟಿಯಾಗಿ ಹೇಳಿ - ಭಾರತ್ ಮಾತಾ ಕಿ ಜೈ. ಎರಡೂ ಕೈಗಳನ್ನು ಮೇಲಕ್ಕೆತ್ತಿ ಗಟ್ಟಿಯಾಗಿ ಹೇಳಿ - ಭಾರತ್ ಮಾತಾ ಕಿ ಜೈ, ಭಾರತ್ ಮಾತಾ ಕಿ ಜೈ, ಭಾರತ್ ಮಾತಾ ಕಿ ಜೈ.
ತುಂಬಾ ಧನ್ಯವಾದಗಳು.