ನಮಸ್ಕಾರ್!
ಈ ಕಾರ್ಯಕ್ರಮದಲ್ಲಿ ಹಾಜರಿರುವ ಸಚಿವ ಸಂಪುಟದ ನನ್ನ ಸಹೋದ್ಯೋಗಿಗಳೇ, ಆರೋಗ್ಯ ಸಚಿವ ಮನ್ ಸುಖ್ ಮಾಂಡವೀಯ ಜೀ, ನನ್ನ ಎಲ್ಲಾ ಸಂಪುಟ ಸಹೋದ್ಯೋಗಿಗಳೇ, ಹಿರಿಯ ಅಧಿಕಾರಿಗಳೇ, ದೇಶಾದ್ಯಂತದ ಸರಕಾರೀ ವೈದ್ಯರೇ ಮತ್ತು ಖಾಸಗಿ ಆಸ್ಪತ್ರೆಗಳ ವೈದ್ಯರೇ, ಆರೋಗ್ಯಾಡಳಿತಕ್ಕೆ ಸಂಬಂಧಪಟ್ಟ ಮತ್ತು ಈ ಕಾರ್ಯಕ್ರಮದಲ್ಲಿ ಹಾಜರಿರುವ ಎಲ್ಲಾ ಗಣ್ಯರೇ ಮತ್ತು ನನ್ನ ಪ್ರೀತಿಯ ಸಹೋದರರೇ ಹಾಗು ಸಹೋದರಿಯರೇ.
21 ನೇ ಶತಮಾನದ ಪಯಣದಲ್ಲಿ ಇಂದು ಭಾರತಕ್ಕೆ ಬಹಳ ಮಹತ್ವದ ದಿನ. ದೇಶದ ಆರೋಗ್ಯ ಸೌಲಭ್ಯಗಳನ್ನು ಬಲಪಡಿಸುವ ಕಳೆದ ಏಳು ವರ್ಷಗಳ ಆಂದೋಲನ ಇಂದಿನಿಂದ ಹೊಸ ಹಂತ ಪ್ರವೇಶಿಸುತ್ತಿದೆ ಮತ್ತು ಇದು ಸಾಮಾನ್ಯ ಹಂತ ಅಲ್ಲ, ಇದು ಅಸಾಮಾನ್ಯ ಹಂತ. ಇಂದು ಆರಂಭವಾಗುತ್ತಿರುವ ಆಂದೋಲನ ಭಾರತದಲ್ಲಿಯ ಆರೋಗ್ಯ ಸವಲತ್ತುಗಳನ್ನು ಕ್ರಾಂತಿಕಾರಕವಾಗಿ ಬದಲಾಯಿಸಲಿದೆ.
ಸ್ನೇಹಿತರೇ,
ಮೂರು ವರ್ಷಗಳ ಹಿಂದೆ, ಆಯುಷ್ಮಾನ್ ಭಾರತ್ ಯೋಜನೆಯನ್ನು ಪಂಡಿತ್ ದೀನ ದಯಾಳ ಉಪಾಧ್ಯಾಯ ಜೀ ಅವರ ಜನ್ಮದಿನದಂದು ಅವರಿಗೆ ಅರ್ಪಿಸಲಾಯಿತು ಮತ್ತು ಇಡೀ ದೇಶಾದ್ಯಂತ ಅನುನಕ್ಕೆ ತರಲಾಯಿತು. ಇಂದಿನಿಂದ ಆಯುಷ್ಮಾನ ಡಿಜಿಟಲ್ ಆಂದೋಲನವನ್ನು ಇಡೀ ದೇಶಾದ್ಯಂತ ಜಾರಿಗೆ ತರಲಾಗುತ್ತಿರುವುದು ನನಗೆ ಸಂತೋಷದ ಸಂಗತಿಯಾಗಿದೆ. ಈ ಆಂದೋಲನ ದೇಶದ ಬಡವರ ಮತ್ತು ಮಧ್ಯಮ ವರ್ಗದವರ ಸಮಸ್ಯೆಗಳ ನಿವಾರಣೆಯಲ್ಲಿ ಪ್ರಮುಖ ಪಾತ್ರವಹಿಸಲಿದೆ. ದೇಶಾದ್ಯಂತ ರೋಗಿಗಳನ್ನು ತಂತ್ರಜ್ಞಾನದ ಮೂಲಕ ಸಾವಿರಾರು ಆಸ್ಪತ್ರೆಗಳ ಜೊತೆ ಬೆಸೆದಿರುವ ಆಯುಷ್ಮಾನ್ ಭಾರತ್ ಯೋಜನೆಯನ್ನು ಇಂದು ಬಲಿಷ್ಟ ತಂತ್ರಜ್ಞಾನ ವೇದಿಕೆಯ ಮೂಲಕ ವಿಸ್ತರಿಸಲಾಗುತ್ತಿದೆ.
ಸ್ನೇಹಿತರೇ,
ಭಾರತದಲ್ಲಿ ಉತ್ತಮ ಆಡಳಿತ ಮತ್ತು ಮತ್ತು ಆಡಳಿತ ಸುಧಾರಣೆಗಾಗಿ ತಂತ್ರಜ್ಞಾನವನ್ನು ಮುಖ್ಯ ಸ್ಥಾನದಲ್ಲಿಡಲಾಗಿದ್ದು, ಅದು ಸಾಮಾನ್ಯ ಜನರನ್ನು ಸಶಕ್ತೀಕರಣ ಮಾಡುತ್ತಿದೆ ಮತ್ತು ಅದು ಅಭೂತಪೂರ್ವವೂ ಆಗಿದೆ. ಡಿಜಿಟಲ್ ಇಂಡಿಯಾ ಆಂದೋಲನ ಭಾರತದ ಜನ ಸಾಮಾನ್ಯನನ್ನು ಸಂಪರ್ಕಿಸುವ ಮೂಲಕ ದೇಶವನ್ನು ಹಲವು ಪಟ್ಟು ಸಶಕ್ತೀಕರಣಗೊಳಿಸಿದೆ. ಮತ್ತು ನಮಗೆ ಬಹಳ ಚೆನ್ನಾಗಿ ಗೊತ್ತಿದೆ, ನಮ್ಮ ರಾಷ್ಟ್ರವು ಹೆಮ್ಮೆಯಿಂದ ಹೇಳಿಕೊಳ್ಳಬಹುದು ನಮ್ಮಲ್ಲಿ 130 ಕೋಟಿ ಆಧಾರ್ ಸಂಖ್ಯೆಗಳಿವೆ, 118 ಕೋಟಿ ಮೊಬೈಲ್ ಚಂದಾದಾರರಿದ್ದಾರೆ, ಸುಮಾರು 80 ಕೋಟಿ ಅಂತರ್ಜಾಲ ಬಳಕೆದಾರರಿದ್ದಾರೆ ಮತ್ತು ಸುಮಾರು 43 ಕೋಟಿ ಜನ ಧನ್ ಬ್ಯಾಂಕ್ ಖಾತೆಗಳಿವೆ. ಇಷ್ಟೊಂದು ವಿಸ್ತಾರ ವ್ಯಾಪ್ತಿಯಲ್ಲಿ ಸಂಪರ್ಕಿತವಾದಂತಹ ಮೂಲ ಸೌಕರ್ಯ ಜಗತ್ತಿನಲ್ಲಿ ಬೇರೆಲ್ಲೂ ಇಲ್ಲ. ಈ ಡಿಜಿಟಲ್ ಮೂಲಸೌಕರ್ಯ ಸಾಮಾನ್ಯ ಭಾರತೀಯನಿಗೆ ಪಡಿತರದಿಂದ ಹಿಡಿದು ಆಡಳಿತದವರೆಗೆ ಸೌಲಭ್ಯಗಳನ್ನು ತ್ವರಿತವಾಗಿ ಮತ್ತು ಪಾರದರ್ಶಕವಾಗಿ ಒದಗಿಸುತ್ತಿದೆ. ಇಂದು ಭಾರತವು ಯು.ಪಿ.ಐ. ಮೂಲಕ ಡಿಜಿಟಲ್ ವರ್ಗಾವಣೆಗಳನ್ನು ಮಾಡುವಲ್ಲಿ ತನ್ನದೇ ಛಾಪನ್ನು ಬೀರಿದೆ. ಇತ್ತೀಚೆಗೆ ಆರಂಭ ಮಾಡಲಾದ ಇ-ರುಪಿ ವೋಚರ್ ಕೂಡಾ ಬಹಳ ದೊಡ್ಡ ಉಪಕ್ರಮ.
ಸ್ನೇಹಿತರೇ,
ಕೊರೊನಾ ವಿರುದ್ಧದ ಯುದ್ದದಲ್ಲಿ ಭಾರತದ ಡಿಜಿಟಲ್ ಪರಿಹಾರಗಳು ಪ್ರತಿಯೊಬ್ಬ ಭಾರತೀಯನಿಗೂ ಬಹಳ ದೊಡ್ಡ ಸಹಾಯ ಮಾಡಿವೆ. ಉದಾಹರಣೆಗೆ ಆರೋಗ್ಯ ಸೇತು ಆಪ್ ಕೊರೊನಾ ಹರಡುವಿಕೆಯನ್ನು ತಡೆಯುವಲ್ಲಿ, ಜಾಗೃತಿ ಮೂಡಿಸುವಲ್ಲಿ, ಸುತ್ತಲಿನ ಪರಿಸ್ಥಿತಿಯನ್ನು ತಿಳಿದುಕೊಳ್ಳುವಲ್ಲಿ ಮತ್ತು ಇಡೀ ಪರಿಸ್ಥಿತಿಯನ್ನು ಅಂದಾಜಿಸುವಲ್ಲಿ ಬಹಳ ಸಹಾಯ ಮಾಡಿದೆ. ಅದೇ ರೀತಿ, ಎಲ್ಲರಿಗೂ ಉಚಿತ ಲಸಿಕೆ ಆಂದೋಲನದಲ್ಲಿ, ಭಾರತ ಇದುವರೆಗೆ 90 ಕೋಟಿ ಲಸಿಕಾ ಡೋಸ್ ಗಳನ್ನು ನೀಡುವಲ್ಲಿ ಯಶಸ್ವಿಯಾಗಿದೆ. ದಾಖಲೆಗಳನ್ನು ಮಾಡುವಲ್ಲಿ ಮತ್ತು ನಿಮಗೆ ಪ್ರಮಾಣ ಪತ್ರ ಲಭ್ಯವಾಗುವಂತೆ ಮಾಡುವಲ್ಲಿ ಕೊವಿನ್ ಬಹಳ ದೊಡ್ಡ ಪಾತ್ರವನ್ನು ವಹಿಸಿದೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಕೂಡಾ ನೋಂದಣೆಯಿಂದ ಹಿಡಿದು ಪ್ರಮಾಣ ಪತ್ರ ನೀಡುವಲ್ಲಿಯವರೆಗೆ ಇಂತಹ ದೊಡ್ಡ ಡಿಜಿಟಲ್ ವೇದಿಕೆಯನ್ನು ಹೊಂದಿಲ್ಲ.
ಸ್ನೇಹಿತರೇ,
ಕೊರೊನಾ ಅವಧಿಯಲ್ಲಿ ಟೆಲಿಮೆಡಿಸಿನ್ ಅಭೂತಪೂರ್ವವಾಗಿ ವಿಸ್ತರಣೆಯಾಗಿದೆ. ಇದುವರೆಗೆ ಇ-ಸಂಜೀವಿನಿ ಮೂಲಕ ಸುಮಾರು 1.25 ಕೋಟಿ ದೂರ ಪ್ರದೇಶದ ಸಮಾಲೋಚನೆಗಳು ಪೂರ್ಣಗೊಂಡಿವೆ. ಈ ಸೌಲಭ್ಯವು ದೇಶದ ದುರ್ಗಮ ಪ್ರದೇಶಗಳಲ್ಲಿ ವಾಸಿಸುವ ಸಾವಿರಾರು ದೇಶವಾಸಿಗಳನ್ನು ಪ್ರತೀ ದಿನ ನಗರಗಳಲ್ಲಿ ದೊಡ್ಡ ಆಸ್ಪತ್ರೆಗಳಲ್ಲಿ ಇರುವ ಹಿರಿಯ ವೈದ್ಯರೊಂದಿಗೆ ಮನೆಯಲ್ಲಿ ಕುಳಿತುಕೊಂಡೇ ಸಂಪರ್ಕಿಸುವುದಕ್ಕೆ ಅನುಕೂಲ ಮಾಡಿಕೊಡುತ್ತದೆ. ಪ್ರಖ್ಯಾತ ವೈದ್ಯರ ಸೇವೆಗಳು ಬಹಳ ಸುಲಭವಾಗಿ ದೊರೆಯುತ್ತವೆ. ಈ ಸಂದರ್ಭದಲ್ಲಿ, ನಾನು ದೇಶದ ಎಲ್ಲಾ ವೈದ್ಯರು, ದಾದಿಯರು, ಮತ್ತು ವೈದ್ಯಕೀಯ ಸಿಬ್ಬಂದಿಗಳಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳನ್ನು ಸಲ್ಲಿಸಲು ಇಚ್ಛಿಸುತ್ತೇನೆ. ಅದು ಲಸಿಕಾಕರಣ ಇರಲಿ ಅಥವಾ ಕೊರೊನಾ ರೋಗಿಗಳಿಗೆ ಚಿಕಿತ್ಸೆ ಇರಲಿ ಅವರ ಪ್ರಯತ್ನಗಳು ಕೊರೊನಾ ಯುದ್ದದ ಸಂದರ್ಭದಲ್ಲಿ ದೇಶಕ್ಕೆ ಬಹಳ ದೊಡ್ಡ ಪರಿಹಾರವನ್ನು ಒದಗಿಸಿವೆ.
ಸ್ನೇಹಿತರೇ,
ಆಯುಷ್ಮಾನ ಭಾರತ್-ಪಿ.ಎಂ.-ಜೆ.ಎ.ವೈ. ಬಡವರ ಬದುಕಿನ ಬಹುತೇಕ ಭಾರೀ ಉದ್ವಿಗ್ನತೆಯನ್ನು ನಿವಾರಣೆ ಮಾಡಿದೆ. ಇದುವರೆಗೆ, ಈ ಯೋಜನೆ ಅಡಿಯಲ್ಲಿ ಎರಡು ಕೋಟಿಗೂ ಅಧಿಕ ದೇಶವಾಸಿಗಳು ಉಚಿತ ಚಿಕಿತ್ಸೆಯನ್ನು ಪಡೆದಿದ್ದಾರೆ. ಮತ್ತು ಅರ್ಧದಷ್ಟು ಫಲಾನುಭವಿಗಳು ನಮ್ಮ ಮಾತೆಯರು ಮತ್ತು ಸಹೋದರಿಯರು ಮತ್ತು ಹೆಣ್ಣು ಮಕ್ಕಳು. ಇದು ಬಹಳ ಸಮಾಧಾನದ ಮತ್ತು ತೃಪ್ತಿಯ ಸಂಗತಿ. ನಮಗೆಲ್ಲಾ ನಮ್ಮ ಕುಟುಂಬದ ಪರಿಸ್ಥಿತಿಯ ಬಗ್ಗೆ ಅರಿವಿದೆ. ಕೈಗೆಟಕುವ ದರದಲ್ಲಿ ಚಿಕಿತ್ಸೆ ಲಭ್ಯ ಇಲ್ಲದ ಕಾರಣಕ್ಕೆ ದೇಶದ ತಾಯಂದಿರು ಮತ್ತು ಸಹೋದರಿಯರು ಬಹಳ ತೊಂದರೆಗಳನ್ನು ಅನುಭವಿಸುತ್ತಿದ್ದರು. ಮನೆಯ ಬಗ್ಗೆ, ಮನೆಯ ಖರ್ಚುಗಳ ಬಗ್ಗೆ, ಮತ್ತು ಕುಟುಂಬದ ಇತರ ಸದಸ್ಯರ ಬಗ್ಗೆ ಚಿಂತೆ ಮಾಡುತ್ತಲೇ ನಮ್ಮ ತಾಯಂದಿರು ಮತ್ತು ಸಹೋದರಿಯರು ತಮ್ಮ ಚಿಕಿತ್ಸೆಯನ್ನು ಮುಂದೂಡುತ್ತಿದ್ದರು. ಬಹುತೇಕ ಸಂದರ್ಭಗಳಲ್ಲಿ ಅವರು ಅದು ತನ್ನಿಂದ ತಾನೇ ಗುಣವಾಗುತ್ತದೆ ಎಂದು ಭಾವಿಸುತ್ತಿದ್ದರು. ಮತ್ತು ಸ್ಥಳೀಯ ವೈದ್ಯರಿಂದ ಒಂದು ಡೋಸ್ ಮದ್ದು ತೆಗೆದುಕೊಂಡರೆ ಸಾಕು ಮತ್ತು ಎಲ್ಲವೂ ಸರಿಯಾಗುತ್ತದೆ ಎಂದು ನಂಬುತ್ತಿದ್ದರು. ತಾಯಿಯ ಹೃದಯ ಹೇಗೆಂದರೆ ಅವರು ತಾವೇ ನೋವು ಅನುಭವಿಸುತ್ತಾರೆಯೇ ಹೊರತು ತಮ್ಮ ಕುಟುಂಬದ ಮೇಲೆ ಯಾವುದೇ ಹಣಕಾಸಿನ ಹೊರೆ ಬೀಳಲು ಬಿಡುವುದಿಲ್ಲ.
ಸ್ನೇಹಿತರೇ,
ಇದುವರೆಗೆ ಆಯುಷ್ಮಾನ್ ಭಾರತ್ ಅಡಿಯಲ್ಲಿ ಚಿಕಿತ್ಸೆ ಪಡೆದವರು ಅಥವಾ ಚಿಕಿತ್ಸೆ ಪಡೆಯುತ್ತಿರುವವರು ಈ ಮೊದಲು, ಈ ಯೋಜನೆಗಿಂತ ಮೊದಲು ಆಸ್ಪತ್ರೆಗಳಿಗೆ ಹೋಗುವ ಧೈರ್ಯ ಮಾಡುತ್ತಿರಲಿಲ್ಲ ಮತ್ತು ಆಸ್ಪತ್ರೆಗೆ ಹೋಗುವುದನ್ನು ಮುಂದೂಡುತ್ತಿದ್ದರು. ಅವರು ನೋವನ್ನು ಅನುಭವಿಸುತ್ತಿದ್ದರು. ತಮ್ಮನ್ನು ತಾವು ಹೇಗೋ ಸಂಭಾಳಿಸಿಕೊಳ್ಳುತ್ತಿದ್ದರು ಹೊರತು ಹಣ ಇಲ್ಲದ ಕಾರಣಕ್ಕೆ ಆಸ್ಪತ್ರೆಗೆ ಹೋಗುತ್ತಿರಲಿಲ್ಲ. ಈ ನೋವಿನ ಅರಿವು ನಮ್ಮನ್ನು ಅಲುಗಾಡಿಸಿತು. ಅಂತಹ ಕುಟುಂಬಗಳನ್ನು ನಾನು ಈ ಕೊರೊನಾ ಅವಧಿಯಲ್ಲಿ ಭೇಟಿಯಾಗಿದ್ದೆ. ಮತ್ತು ಜನರು ಆಯುಷ್ಮಾನ್ ಸೇವೆಗಳನ್ನು ಪಡೆಯುವುದಕ್ಕೆ ಮೊದಲೂ ಇಂತಹ ಕುಟುಂಬಗಳನ್ನು ನಾನು ನೋಡಿದ್ದೆ. ಅನೇಕ ಹಿರಿಯರು ನಮ್ಮ ಮಕ್ಕಳು ಸಾಲದ ಹೊರೆಯಲ್ಲಿ ಸಿಲುಕಿಕೊಳ್ಳುವುದು ಬೇಡ ಎಂಬ ಕಾರಣಕ್ಕೆ ತಾವು ಚಿಕಿತ್ಸೆ ಪಡೆಯುವುದಕ್ಕೆ ಹಿಂಜರಿದಿರುವುದಾಗಿ ಹೇಳುತ್ತಿದ್ದರು. ಅವರು ತಾವೇ ನೋವನ್ನು ಅನುಭವಿಸುತ್ತಿದ್ದರು ಮತ್ತು ಜಗತ್ತನ್ನು ಬಿಟ್ಟು ಹೋಗಲು ತಯಾರಾಗುತ್ತಿದ್ದರೇ ಹೊರತು ತಮ್ಮ ಮಕ್ಕಳು ಸಾಲದ ಉರುಳಿನಲ್ಲಿ ಸಿಕ್ಕಿ ಬೀಳಬಾರದು ಎಂದು ಹೇಳುತ್ತಿದ್ದರು. ಆದುದರಿಂದ ಅವರು ಚಿಕಿತ್ಸೆ ಪಡೆಯುತ್ತಿರಲಿಲ್ಲ. ಇಲ್ಲಿರುವ ಬಹುತೇಕ ಜನರು ನಮ್ಮ ಕುಟುಂಬಗಳಲ್ಲಿ ಮತ್ತು ನೆರೆ ಹೊರೆಯಲ್ಲಿ ಇಂತಹ ಅನೇಕರನ್ನು ಕಂಡಿರಬಹುದು. ನಮ್ಮಲ್ಲಿ ಬಹುತೇಕ ಮಂದಿ ಕೂಡಾ ಇಂತಹದೇ ಆತಂಕದಲ್ಲಿ ಸಾಗುತ್ತಿರಬಹುದು.
ಸ್ನೇಹಿತರೇ,
ಕೊರೊನಾಕ್ಕೆ ಮೊದಲು ರಾಜ್ಯಗಳಿಗೆ ಹೋದಾಗೆಲ್ಲ ಆಯುಷ್ಮಾನ್ ಭಾರತದ ಫಲಾನುಭವಿಗಳನ್ನು ಭೇಟಿಯಾಗುವುದು ನನ್ನ ಅಭ್ಯಾಸ. ನಾನು ಅವರನ್ನು ಭೇಟಿಯಾಗುತ್ತಿದ್ದೆ, ಮಾತನಾಡುತ್ತಿದ್ದೆ, ಅವರ ನೋವನ್ನು ಮತ್ತು ಅನುಭವಗಳನ್ನು ತಿಳಿದುಕೊಳ್ಳುತ್ತಿದ್ದೆ ಮತ್ತು ಅವರ ಸಲಹೆಗಳನ್ನು ಪಡೆದುಕೊಳ್ಳುತ್ತಿದ್ದೆ. ಇದು ಮಾಧ್ಯಮಗಳಲ್ಲಿ ಮತ್ತು ಸಾರ್ವಜನಿಕವಾಗಿ ಅಷ್ಟಾಗಿ ಚರ್ಚೆಯಾಗುತ್ತಿರಲಿಲ್ಲ, ಆದರೆ ನಾನದನ್ನು ಆಗಾಗ ನಡೆಸುತ್ತಿದ್ದೆ. ನಾನು ವೈಯಕ್ತಿಕವಾಗಿ ಆಯುಷ್ಮಾನ್ ಭಾರತ್ ಯೋಜನೆಯ ನೂರಾರು ಫಲಾನುಭವಿಗಳನ್ನು ಭೇಟಿಯಾಗಿದ್ದೇನೆ ಮತ್ತು ನಾನು ಆ ಹಿರಿಯ ತಾಯಿಯನ್ನು ಹೇಗೆ ಮರೆಯಲಿ, ಅವರು ಹಲವು ವರ್ಷಗಳ ಕಾಲ ಕಿಡ್ನಿ ಕಲ್ಲುಗಳ ಸಮಸ್ಯೆಯಿಂದ ಬಳಲುತ್ತಿದ್ದರು, ಕಡೆಗೊಂದು ದಿನ ಅವರು ಅದಕ್ಕಾಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡರು. ಮತ್ತೋರ್ವ ಯುವಕ ಕೂಡಾ ಕಿಡ್ನಿಗೆ ಸಂಬಂಧಪಟ್ಟ ಖಾಯಿಲೆಯಿಂದ ಬಳಲುತ್ತಿದ್ದರು. ಕಾಲಿನಲ್ಲಿ ಕೆಲವು ಸಮಸ್ಯೆಗಳಿಂದ ಬಳಲುತ್ತಿದ್ದ ಅಥವಾ ಬೆನ್ನು ಹುರಿ ನೋವಿನ ಜೊತೆ ಹೋರಾಡುತ್ತಿದ್ದ ಆ ಕೆಲವು ರೋಗಿಗಳ ಮುಖಗಳನ್ನು ಮರೆಯಲಾರೆ. ಇಲ್ಲಿ ಕೆಲ ಸಮಯದ ಹಿಂದೆ ತೋರಿಸಲಾದ ಸಾಕ್ಷ್ಯಚಿತ್ರ ಮತ್ತು ಬಿಡುಗಡೆ ಮಾಡಲಾದ ಕಾಫಿ ಟೇಬಲ್ ಪುಸ್ತಕ ಆ ತಾಯಂದಿರ ಮತ್ತು ಸಹೋದರಿಯರ ವಿವರಗಳನ್ನು ಒಳಗೊಂಡಿದೆ. ಕಳೆದ ಮೂರು ವರ್ಷಗಳಲ್ಲಿ ಸರಕಾರ ಖರ್ಚು ಮಾಡಿದ ಸಾವಿರಾರು ಕೋಟಿ ರೂಪಾಯಿ ಬಡತನದ ವಿಷವರ್ತುಲದಲ್ಲಿ ಸಿಲುಕಿದ್ದ ಲಕ್ಷಾಂತರ ಕುಟುಂಬಗಳನ್ನು ರಕ್ಷಿಸಿದೆ. ಯಾರೂ ಬಡವರಾಗಿ ಉಳಿಯಲು ಆಶಿಸುವುದಿಲ್ಲ. ಪ್ರತಿಯೊಬ್ಬರೂ ಕಠಿಣ ದುಡಿಮೆ ಮಾಡುವ ಮೂಲಕ ಬಡತನದಿಂದ ಹೊರಬರಲು ಪ್ರಯತ್ನಿಸುತ್ತಾರೆ ಮತ್ತು ಅವಕಾಶಗಳಿಗೆ ಹುಡುಕಾಡುತ್ತಾರೆ. ಕೆಲವೊಮ್ಮೆ ಆ ವ್ಯಕ್ತಿ ಬಹಳ ಬೇಗ ಬಡತನದ ವಿಷವರ್ತುಲದಿಂದ ಪಾರಾಗುತ್ತಾರೆ ಎಂಬಂತೆ ಕಾಣುತ್ತದೆ, ಆದರೆ ಕುಟುಂಬದ ಯಾರಾದರೊಬ್ಬರಿಗೆ ಖಾಯಿಲೆ ಬರುತ್ತದೆ, ಆಗ ಎಲ್ಲಾ ಕಠಿಣ ದುಡಿಮೆ ನಿರರ್ಥಕವಾಗುತ್ತದೆ. ಆಗ ಅವರು 5-10 ವರ್ಷ ಹಿಂದೆ ಬೀಳುತ್ತಾರೆ ಮತ್ತು ಬಡತನದ ವರ್ತುಲದಲ್ಲಿ ಸಿಕ್ಕಿ ಬೀಳುತ್ತಾರೆ. ಖಾಯಿಲೆಯು ಆ ಕುಟುಂಬಕ್ಕೆ ಬಡತನದ ವಿಷವರ್ತುಲದಿಂದ ಹೊರಬರಲು ಅವಕಾಶ ಕೊಡುವುದಿಲ್ಲ. ಮತ್ತು ಅದರಿಂದಾಗಿ ಆಯುಷ್ಮಾನ್ ಭಾರತ ಸಹಿತ ಸರಕಾರ ಜಾರಿಗೆ ತಂದಿರುವ ಆರೋಗ್ಯ ಸಂಬಂಧಿ ಪರಿಹಾರಗಳು ದೇಶದ ವರ್ತಮಾನ ಕಾಲ ಮತ್ತು ಭವಿಷ್ಯತ್ ಕಾಲಕ್ಕೆ ಬಹಳ ದೊಡ್ಡ ಹೂಡಿಕೆಗಳು.
ಸಹೋದರರೇ ಮತ್ತು ಸಹೋದರಿಯರೇ,
ಆಯುಷ್ಮಾನ್ ಭಾರತ್-ಡಿಜಿಟಲ್ ಆಂದೋಲನ ಆಸ್ಪತ್ರೆಗಳಲ್ಲಿಯ ಪ್ರಕ್ರಿಯೆಗಳನ್ನು ಸರಳೀಕರಣ ಮಾಡುವ ಮೂಲಕ ಜೀವನಕ್ಕೆ ಅನುಕೂಲಕರ ವ್ಯವಸ್ಥೆಯನ್ನು ನಿರ್ಮಾಣ ಮಾಡಿದೆ. ಪ್ರಸ್ತುತ, ಆಸ್ಪತ್ರೆಗಳಲ್ಲಿ ತಂತ್ರಜ್ಞಾನದ ಬಳಕೆ ಒಂದೇ ಒಂದು ಆಸ್ಪತ್ರೆಗೆ ಅಥವಾ ಒಂದು ಸರಣಿಯ ಆಸ್ಪತ್ರೆಗೆ ಮಾತ್ರ ಸೀಮಿತವಾಗಿದೆ. ರೋಗಿ ಹೊಸ ಆಸ್ಪತ್ರೆಗೆ ಹೋದಾಗ ಅಥವಾ ಹೊಸ ನಗರಕ್ಕೆ ಹೋದಾಗ ಆತ ಅದೇ ಪ್ರಕ್ರಿಯೆಯ ಮೂಲಕ ಹಾದು ಹೋಗಬೇಕಾಗುತ್ತದೆ. ಡಿಜಿಟಲ್ ಆರೋಗ್ಯ ದಾಖಲೆಗಳು ಲಭ್ಯ ಇಲ್ಲದಿದ್ದರೆ ಅವರು ಹಳೆಯ ಕೆಲವು ವರ್ಷಗಳ ಕಡತವನ್ನು ಕೊಂಡೊಯ್ಯಬೇಕಾಗುತ್ತದೆ. ತುರ್ತುಪರಿಸ್ಥಿತಿಗಳಲ್ಲಿ ಇದು ಸಾಧ್ಯವಿಲ್ಲ. ಇದರ ಪರಿಣಾಮವಾಗಿ ರೋಗಿ ಮತ್ತು ವೈದ್ಯರ ಬಹಳ ಸಮಯದ ಅಪವ್ಯಯ ಆಗುತ್ತದೆ. ಸಮಸ್ಯೆ ಗಂಭೀರವಾಗುತ್ತದೆ ಮತ್ತು ಚಿಕಿತ್ಸಾ ವೆಚ್ಚವೂ ಏರುತ್ತದೆ. ನಾವು ಹೆಚ್ಚಾಗಿ ನೋಡುವಾಗ ಹಲವು ಜನರಲ್ಲಿ ಅವರು ಆಸ್ಪತ್ರೆಗಳಿಗೆ ಭೇಟಿ ನೀಡುವಾಗ ಅವರಲ್ಲಿ ವೈದ್ಯಕೀಯ ದಾಖಲೆಗಳು ಇರುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ವೈದ್ಯಕೀಯ ಸಮಾಲೋಚನೆ, ಪರೀಕ್ಷೆ ಮತ್ತು ರೋಗ ಪತ್ತೆ ಇತ್ಯಾದಿಗಳನ್ನು ಹೊಸದಾಗಿ ಮಾಡಬೇಕಾಗುತ್ತದೆ. ವೈದ್ಯಕೀಯ ಇತಿಹಾಸದ ಗೈರುಹಾಜರಿಯಲ್ಲಿ ಅದು ಸಮಯವನ್ನು ಕಬಳಿಸುತ್ತದೆ ಮತ್ತು ಬಹಳ ವೆಚ್ಚದಾಯಕವಾಗಿರುತ್ತದೆ ಮತ್ತು ಕೆಲವೊಮ್ಮೆ ಪರಸ್ಪರ ವಿರೋಧಾಭಾಸದ ಚಿಕಿತ್ಸೆ ನೀಡುವಂತಾಗುತ್ತದೆ ಮತ್ತು ಇದರಿಂದಾಗಿ ಗ್ರಾಮೀಣ ಭಾಗದಲ್ಲಿ ವಾಸಿಸುವ ನಮ್ಮ ಸಹೋದರರು ಹಾಗು ಸಹೋದರಿಯರು ಬಹಳಷ್ಟು ಸಂಕಷ್ಟಗಳನ್ನು ಎದುರಿಸುವಂತಾಗುತ್ತದೆ. ವೈದ್ಯರು ವೃತ್ತಪತ್ರಿಕೆಗಳಲ್ಲಿ ಜಾಹೀರಾತು ನೀಡದಿರುವುದರಿಂದ ಬರೇ ಬಾಯಿ ಮಾತಿನಿಂದ ಒಳ್ಳೆಯ ವೈದ್ಯರ ಬಗ್ಗೆ ತಿಳಿದುಕೊಳ್ಳಬೇಕಾಗಿರುತ್ತದೆ. ಈಗ ಎಲ್ಲಾ ವೈದ್ಯರ ಮಾಹಿತಿ, ಅವರ ಪ್ರಾವೀಣ್ಯತಾ ಕ್ಷೇತ್ರ, ಹತ್ತಿರದಲ್ಲಿ ಲಭ್ಯ ಇರುವ ವೈದ್ಯರು, ತಕ್ಷಣ ಎಲ್ಲಿಗೆ ಹೋಗಬೇಕು ಎಂಬಿತ್ಯಾದಿ ಮಾಹಿತಿ ಕೂಡಲೇ ಲಭ್ಯವಾಗುತ್ತದೆ. ಮತ್ತು ನಾನು ನಿಮಗೆ ಹೇಳಲು ಇಚ್ಛಿಸುತ್ತೇನೆ-ಆಯುಷ್ಮಾನ ಡಿಜಿಟಲ್ ಆಂದೋಲನ ಇಂತಹ ಸಮಸ್ಯೆಗಳನ್ನು ನಿವಾರಿಸುವಲ್ಲಿ ಬಹಳ ಪ್ರಮುಖವಾದಂತಹ ಪಾತ್ರವನ್ನು ವಹಿಸುತ್ತದೆ.
ಸ್ನೇಹಿತರೇ,
ಆಯುಷ್ಮಾನ್ ಭಾರತ್ –ಡಿಜಿಟಲ್ ಆಂದೋಲನ ಈಗ ದೇಶಾದ್ಯಂತ ಇರುವ ಡಿಜಿಟಲ್ ಆರೋಗ್ಯ ಪರಿಹಾರಗಳನ್ನು ಪರಸ್ಪರ ಜೋಡಿಸಲಿದೆ. ಇದರಡಿಯಲ್ಲಿ ದೇಶವಾಸಿಗಳು ಈಗ ಡಿಜಿಟಲ್ ಆರೋಗ್ಯ ಗುರುತಿನ ಕಾರ್ಡ್ ಪಡೆಯುತ್ತಾರೆ. ಪ್ರತೀ ನಾಗರಿಕರ ಆರೋಗ್ಯ ದಾಖಲೆ ಡಿಜಿಟಲ್ ಮಾದರಿಯಲ್ಲಿ ಸಂರಕ್ಷಿಸಲ್ಪಡಲಿದೆ. ಡಿಜಿಟಲ್ ಆರೋಗ್ಯ ಗುರುತಿನ ಕಾರ್ಡ್ ಮೂಲಕ ರೋಗಿಯು ತಾನೇ ಹಳೆಯ ದಾಖಲೆಗಳನ್ನು ಪರಿಶೀಲಿಸಬಹುದು ಅಥವಾ ಅಗತ್ಯ ಬಿದ್ದರೆ ವೈದ್ಯರು ಕೂಡಾ ಹಳೆಯ ದಾಖಲೆಗಳನ್ನು ಪರಿಶೀಲಿಸಬಹುದು. ಎಲ್ಲಕ್ಕಿಂತ ಮಿಗಿಲಾಗಿ ಅಲ್ಲಿ ವೈದ್ಯರ, ದಾದಿಯರ, ಮತ್ತು ಅರೆ ವೈದ್ಯಕೀಯ ಸಿಬ್ಬಂದಿಗಳ ನೋಂದಣೆ ಇರುತ್ತದೆ. ದೇಶದಲ್ಲಿಯ ಎಲ್ಲಾ ಆಸ್ಪತ್ರೆಗಳು, ಕ್ಲಿನಿಕ್ ಗಳು ಪ್ರಯೋಗಾಲಯಗಳು, ಕೆಮಿಸ್ಟ್ ಅಂಗಡಿಗಳು ನೋಂದಾಯಿಸಲ್ಪಟ್ಟಿರುತ್ತವೆ. ಸಂಕ್ಷಿಪ್ತವಾಗಿ ಹೇಳುವುದಾದರೆ ಈ ಡಿಜಿಟಲ್ ಆಂದೋಲನ ಆರೋಗ್ಯಕ್ಕೆ ಸಂಬಂಧಿಸಿದ ಪ್ರತಿಯೊಬ್ಬ ಭಾಗೀದಾರರನ್ನೂ ಏಕ ವೇದಿಕೆಯಲ್ಲಿ ಒಗ್ಗೂಡಿಸಲಿದೆ.
ಸ್ನೇಹಿತರೇ,
ದೇಶದ ಬಡವರು ಮತ್ತು ಮಧ್ಯಮ ವರ್ಗದವರು ಈ ಆಂದೋಲನದ ಬಹಳ ದೊಡ್ಡ ಫಲಾನುಭವಿಗಳು. ಇದರ ಪ್ರಯೋಜನಗಳಲ್ಲಿ ಒಂದೆಂದರೆ ದೇಶದ ಯಾವುದೇ ಭಾಗದಲ್ಲಿದ್ದರೂ ತನ್ನ ಭಾಷೆಯನ್ನು ಬಲ್ಲ ಮತ್ತು ತನಗೆ ಗೊತ್ತಿರುವ ಹಾಗು ತನ್ನನ್ನು ಬಾಧಿಸುತ್ತಿರುವ ನಿರ್ದಿಷ್ಟ ಖಾಯಿಲೆಯ ತಜ್ಞ ವೈದ್ಯರನ್ನು ಹುಡುಕುವುದು ರೋಗಿಗೆ ಬಹಳ ಸುಲಭವಾಗಲಿದೆ. ಇದು ರೋಗಿಗೆ ದೇಶದ ಯಾವುದೇ ಭಾಗದಲ್ಲಿರುವ ತಜ್ಞ ವೈದ್ಯರನ್ನು ಸಂಪರ್ಕಿಸಲು ಅನುವು ಮಾಡಿಕೊಡುತ್ತದೆ. ವೈದ್ಯರಲ್ಲದೆ, ಅದು ಉತ್ತಮ ಪರೀಕ್ಷೆಗಳಿಗಾಗಿ ಪ್ರಯೋಗಾಲಯಗಳನ್ನು ಹುಡುಕಲು ಮತ್ತು ಔಷಧಿ ಮಳಿಗೆಗಳನ್ನು ಹುಡುಕಲು ಸಹಾಯ ಮಾಡುತ್ತದೆ.
ಸ್ನೇಹಿತರೇ,
ದೇಶದ ಬಡವರು ಮತ್ತು ಮಧ್ಯಮ ವರ್ಗದವರು ಈ ಆಂದೋಲನದ ಬಹಳ ದೊಡ್ಡ ಫಲಾನುಭವಿಗಳು. ಇದರ ಪ್ರಯೋಜನಗಳಲ್ಲಿ ಒಂದೆಂದರೆ ದೇಶದ ಯಾವುದೇ ಭಾಗದಲ್ಲಿದ್ದರೂ ತನ್ನ ಭಾಷೆಯನ್ನು ಬಲ್ಲ ಮತ್ತು ತನಗೆ ಗೊತ್ತಿರುವ ಹಾಗು ತನ್ನನ್ನು ಬಾಧಿಸುತ್ತಿರುವ ನಿರ್ದಿಷ್ಟ ಖಾಯಿಲೆಯ ತಜ್ಞ ವೈದ್ಯರನ್ನು ಹುಡುಕುವುದು ರೋಗಿಗೆ ಬಹಳ ಸುಲಭವಾಗಲಿದೆ. ಇದು ರೋಗಿಗೆ ದೇಶದ ಯಾವುದೇ ಭಾಗದಲ್ಲಿರುವ ತಜ್ಞ ವೈದ್ಯರನ್ನು ಸಂಪರ್ಕಿಸಲು ಅನುವು ಮಾಡಿಕೊಡುತ್ತದೆ. ವೈದ್ಯರಲ್ಲದೆ, ಅದು ಉತ್ತಮ ಪರೀಕ್ಷೆಗಳಿಗಾಗಿ ಪ್ರಯೋಗಾಲಯಗಳನ್ನು ಹುಡುಕಲು ಮತ್ತು ಔಷಧಿ ಮಳಿಗೆಗಳನ್ನು ಹುಡುಕಲು ಸಹಾಯ ಮಾಡುತ್ತದೆ.
ಸ್ನೇಹಿತರೇ,
ಈ ಆಧುನಿಕ ವೇದಿಕೆಯಿಂದಾಗಿ ಚಿಕಿತ್ಸೆ ಮತ್ತು ಆರೋಗ್ಯ ಸೇವೆಗೆ ಸಂಬಂಧಿಸಿದ ನೀತಿ ರೂಪಿಸುವ ಇಡೀ ಪರಿಸರ ವ್ಯವಸ್ಥೆ ಹೆಚ್ಚು ಸಮರ್ಪಕವಾಗಲಿದೆ. ದೇಶದ ದೂರದ ದುರ್ಗಮ ಭಾಗಗಳಿಗೆ ತಮ್ಮ ಸೇವೆಗಳನ್ನು ಒದಗಿಸಲು ವೈದ್ಯರು ಮತ್ತು ಆಸ್ಪತ್ರೆಗಳು ಈ ವೇದಿಕೆಯನ್ನು ಬಳಸಲು ಸಮರ್ಥವಾಗುತ್ತವೆ. ಸಮರ್ಪಕ ಮತ್ತು ವಿಶ್ವಾಸಾರ್ಹ ದತ್ತಾಂಶಗಳಿಂದಾಗಿ ಚಿಕಿತ್ಸೆಯಲ್ಲಿ ಸುಧಾರಣೆಯಾಗಲಿದೆ ಮತ್ತು ರೋಗಿಗಳಿಗೆ ಹಣ ಉಳಿತಾಯವಾಗಲಿದೆ. ಸಹೋದರರೇ ಮತ್ತು ಸಹೋದರಿಯರೇ,
ದೇಶದಲ್ಲಿ ಆರೋಗ್ಯ ಸೇವೆಗಳು ಸುಲಭದಲ್ಲಿ ಲಭ್ಯವಾಗಬೇಕು ಎಂಬ ಕಾರಣಕ್ಕೆ ಇಂದು ದೇಶಾದ್ಯಂತ ಆಂದೋಲನವನ್ನು ಆರಂಭಿಸಲಾಗಿದೆ. ಇದು 6-7 ವರ್ಷಗಳ ಕಾಲ ನಡೆಯುವ ನಿರಂತರ ಪ್ರಕ್ರಿಯೆಯ ಭಾಗ. ಹಲವಾರು ವರ್ಷಗಳಲ್ಲಿ ಭಾರತವು ಆರೋಗ್ಯಕ್ಕೆ ಸಂಬಂಧಿಸಿ ದಶಕಗಳಷ್ಟು ಹಳೆಯ ಚಿಂತನೆಯನ್ನು ಮತ್ತು ಧೋರಣೆಯನ್ನು ಬದಲು ಮಾಡಿದೆ. ಈಗ ಸಮಗ್ರವಾದಂತಹ ಮತ್ತು ಎಲ್ಲರನ್ನೂ ಒಳಗೊಳ್ಳುವಂತಹ ಆರೋಗ್ಯ ಮಾದರಿಯನ್ನು ರೂಪಿಸುವ ಕಾರ್ಯ ಪ್ರಗತಿಯಲ್ಲಿದೆ. ಖಾಯಿಲೆಗಳು ಬಾರದಂತೆ ತಡೆಗಟ್ಟುವ ಮಾದರಿಗೆ ಆದ್ಯತೆ ನೀಡಲಾಗುತ್ತಿದೆ; ಅಂದರೆ ರೋಗ ತಡೆಗಟ್ಟುವ ಆರೋಗ್ಯ ಸೇವೆ, ಕೈಗೆಟಕುವ ದರದಲ್ಲಿ ಆರೋಗ್ಯ ಸೇವೆ, ಮತ್ತು ಅದು ಎಲ್ಲರಿಗೂ ಲಭ್ಯವಾಗುವಂತೆ ಮಾಡುವ ನಿಟ್ಟಿನಲ್ಲಿ ಗಮನ ಹರಿಸಲಾಗಿದೆ. ನಮ್ಮ ಸಾಂಪ್ರದಾಯಿಕ ಆಯುಷ್ ವ್ಯವಸ್ಥೆಗಳಾದ ಯೋಗ ಮತ್ತು ಆಯುರ್ವೇದಕ್ಕೆ ಹೆಚ್ಚಿನ ಒತ್ತನ್ನು ನೀಡಲಾಗುತ್ತಿದೆ, ಈ ಎಲ್ಲಾ ಕಾರ್ಯಕ್ರಮಗಳನ್ನು ಬಡವರು ಮತ್ತು ಮಧ್ಯಮವರ್ಗದವರನ್ನು ರೋಗಗಳೆಂಬ ವಿಷವರ್ತುಲದಿಂದ ರಕ್ಷಿಸುವುದಕ್ಕಾಗಿ ಆರಂಭ ಮಾಡಲಾಗಿದೆ. ಆರೋಗ್ಯ ಮೂಲ ಸೌಕರ್ಯ ಅಭಿವೃದ್ಧಿಗೆ ಮತ್ತು ದೇಶದಲ್ಲಿ ಉತ್ತಮ ಚಿಕಿತ್ಸಾ ಸೌಲಭ್ಯಗಳಿಗಾಗಿ ಹೊಸ ಆರೋಗ್ಯ ನೀತಿಯನ್ನು ರೂಪಿಸಲಾಗಿದೆ. ಇಂದು ಎ.ಐ.ಐ.ಎಂ.ಎಸ್. ನಂತಹ ಆಧುನಿಕ ಆರೋಗ್ಯ ಸಂಸ್ಥೆಗಳ ಬಹಳ ದೊಡ್ಡ ಜಾಲವನ್ನು ದೇಶದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಪ್ರತೀ ಮೂರು ಲೋಕಸಭಾ ಕ್ಷೇತ್ರಗಳಿಗೆ ಸಂಬಂಧಿಸಿ ಒಂದು ವೈದ್ಯಕೀಯ ಕಾಲೇಜು ನಿರ್ಮಾಣ ಮಾಡುವ ಕೆಲಸ ಪ್ರಗತಿಯಲ್ಲಿದೆ.
ಸ್ನೇಹಿತರೇ,
ಭಾರತದಲ್ಲಿ ಆರೋಗ್ಯ ಸೇವೆಗಳನ್ನು ವೃದ್ಧಿ ಮಾಡಲು ಗ್ರಾಮಗಳಲ್ಲಿ ಲಭ್ಯ ಇರುವ ವೈದ್ಯಕೀಯ ಸೌಲಭ್ಯಗಳನ್ನು ಸುಧಾರಿಸುವುದು ಬಹಳ ಅವಶ್ಯ. ಈಗ ದೇಶದಲ್ಲಿಯ ಪ್ರಾಥಮಿಕ ಆರೋಗ್ಯ ಜಾಲವನ್ನು ಗ್ರಾಮಗಳಲ್ಲಿ, ಮನೆಗಳಿಗೆ ಹತ್ತಿರದಲ್ಲಿ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ಬಲಪಡಿಸಲಾಗುತ್ತಿದೆ. ಇದುವರೆಗೆ ಇಂತಹ 80,000 ಕೇಂದ್ರಗಳನ್ನು ಕಾರ್ಯಾರಂಭ ಮಾಡಲಾಗಿದೆ. ಈ ಕೇಂದ್ರಗಳಲ್ಲಿ ದೈನಂದಿನ ಸಾಮಾನ್ಯ ಆರೋಗ್ಯ ತಪಾಸಣೆ ಮತ್ತು ಲಸಿಕಾಕರಣ, ಗಂಭೀರ ರೋಗಗಳನ್ನು ಮುಂಚಿತವಾಗಿಯೇ ಪತ್ತೆ ಮಾಡುವ ಮತ್ತು ಇತರ ವಿವಿಧ ಪರೀಕ್ಷೆಗಳನ್ನು ನಡೆಸುವ ಸಲಕರಣೆಗಳು ಮತ್ತು ಸೌಲಭ್ಯಗಳು ಲಭ್ಯವಿವೆ. ಈ ಕೇಂದ್ರಗಳ ಮೂಲಕ ಜಾಗೃತಿ ಹೆಚ್ಚಿಸಿ ಗಂಭೀರ ಖಾಯಿಲೆಗಳನ್ನು ಸಕಾಲದಲ್ಲಿ ಪತ್ತೆ ಮಾಡುವ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಿವೆ.
ಸ್ನೇಹಿತರೇ,
ಕೊರೊನಾ ಜಾಗತಿಕ ಸಾಂಕ್ರಾಮಿಕದ ಈ ಸಂದರ್ಭದಲ್ಲಿ ವೈದ್ಯಕೀಯ ಮೂಲಸೌಕರ್ಯ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಸಂಕೀರ್ಣ ಆರೈಕೆಯ ಬ್ಲಾಕ್ ಗಳನ್ನು ದೇಶದ ಜಿಲ್ಲಾ ಆಸ್ಪತ್ರೆಗಳಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಜಿಲ್ಲೆಗಳಲ್ಲಿ ಮತ್ತು ಬ್ಲಾಕ್ ಆಸ್ಪತ್ರೆಗಳಲ್ಲಿ ಮಕ್ಕಳ ಚಿಕಿತ್ಸೆಗೆ ವಿಶೇಷ ಸೌಲಭ್ಯಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಜಿಲ್ಲಾ ಮಟ್ಟದ ಆಸ್ಪತ್ರೆಗಳಲ್ಲಿ ಆಮ್ಲಜನಕ ಸ್ಥಾವರಗಳನ್ನು ಸ್ಥಾಪಿಸಲಾಗುತ್ತಿದೆ.
ಸ್ನೇಹಿತರೇ,
ಭಾರತದ ವೈದ್ಯಕೀಯ ವಲಯವನ್ನು ಪರಿವರ್ತಿಸಲು ವೈದ್ಯಕೀಯ ಶಿಕ್ಷಣದಲ್ಲಿ ಅಭೂತಪೂರ್ವ ಸುಧಾರಣೆಗಳನ್ನು ತರಲಾಗುತ್ತಿದೆ. ಕಳೆದ ಏಳು-ಎಂಟು ವರ್ಷಗಳಲ್ಲಿ ದೇಶದಲ್ಲಿ ಹಿಂದೆಂದಿಗಿಂತಲೂ ಹೆಚ್ಚು ವೈದ್ಯರನ್ನು ಮತ್ತು ಅರೆ ವೈದ್ಯಕೀಯ ಮಾನವ ಸಂಪನ್ಮೂಲವನ್ನು ರೂಪಿಸಲಾಗಿದೆ. ಆರೋಗ್ಯ, ಜೀವತಂತ್ರಜ್ಞಾನದಲ್ಲಿ ಸಂಶೋಧನೆ, ಔಷಧಿಗಳಲ್ಲಿ ಮತ್ತು ಸಲಕರಣೆಗಳಲ್ಲಿ ಆಧುನಿಕ ತಂತ್ರಜ್ಞಾನವನ್ನು ತರಲು ಆದೋಲನದೋಪಾದಿಯಲ್ಲಿ ಕೆಲಸ ಮಾಡಲಾಗುತ್ತಿದೆ. ಕೊರೊನಾ ಲಸಿಕೆ ಅಭಿವೃದ್ಧಿ ಮತ್ತು ಉತ್ಪಾದನೆಯಲ್ಲಿ ಭಾರತವು ತನ್ನ ಸಾಮರ್ಥ್ಯದ ಮೂಲಕ ಜಗತ್ತಿಗೆ ದಾರಿ ತೋರಿಸಿದೆ. ಅದು ನಮಗೆ ಹೆಮ್ಮೆಯನ್ನು ತಂದಿದೆ. ಆರೋಗ್ಯ ಸಲಕರಣೆಗಳಿಗಾಗಿ ಮತ್ತು ಔಷಧಿಗಳಿಗಾಗಿ ಕಚ್ಛಾ ವಸ್ತುವಿಗೆ ಸಂಬಂಧಿಸಿದ ಪಿ.ಎಲ್.ಐ. ಯೋಜನೆಗಳು ಈ ವಲಯದಲ್ಲಿ ಆತ್ಮನಿರ್ಭರ ಭಾರತಕ್ಕೆ ಬಹಳ ವೇಗವನ್ನು ತಂದುಕೊಟ್ಟಿವೆ.
ಸ್ನೇಹಿತರೇ,
ಉತ್ತಮ ವೈದ್ಯಕೀಯ ವ್ಯವಸ್ಥೆಯ ಜೊತೆ ಬಡವರು ಮತ್ತು ಮಧ್ಯಮ ವರ್ಗದವರು ಔಷಧಿಗಳಿಗಾಗಿ ಅತಿ ಕಡಿಮೆ ವೆಚ್ಚ ಮಾಡುವಂತಾಗಬೇಕು. ಕೇಂದ್ರ ಸರಕಾರವು ಅವಶ್ಯಕ ಔಷಧಿಗಳು, ಶಸ್ತ್ರಚಿಕಿತ್ಸಾ ಸಾಮಗ್ರಿಗಳು, ಡಯಾಲಿಸಿಸ್ ಇತ್ಯಾದಿ ಸಾಮಗ್ರಿಗಳು ಮತ್ತು ಸೇವೆಗಳು ಕಡಿಮೆ ದರದಲ್ಲಿ ಲಭ್ಯವಾಗುವಂತೆ ವ್ಯವಸ್ಥೆ ಮಾಡಿದೆ. ವಿಶ್ವದ ಅತ್ಯುತ್ತಮ ಜೆನರಿಕ್ ಔಷಧಿಗಳನ್ನು ಭಾರತದಲ್ಲಿ ತಯಾರಿಸಲಾಗುತ್ತಿದೆ ಮತ್ತು ಅದನ್ನು ಚಿಕಿತ್ಸೆಯಲ್ಲಿ ಗರಿಷ್ಟ ಪ್ರಮಾಣದಲ್ಲಿ ಬಳಸುವಂತೆ ಉತ್ತೇಜಿಸಲಾಗುತ್ತಿದೆ. 8,000 ಕ್ಕೂ ಅಧಿಕ ಜನ ಔಷಧಿ ಕೇಂದ್ರಗಳು ಬಡವರಿಗೆ ಮತ್ತು ಮಧ್ಯಮವರ್ಗದವರಿಗೆ ಬಹಳ ದೊಡ್ಡ ಪರಿಹಾರವನ್ನು ನೀಡುತ್ತಿವೆ. ಜನ ಔಷಧಿ ಕೇಂದ್ರಗಳಿಂದ ಔಷಧಿ ಪಡೆಯುತ್ತಿರುವ ಹಲವು ರೋಗಿಗಳ ಜೊತೆಗೆ ಮಾತನಾಡುವ ಅವಕಾಶ ನನಗೆ ಲಭಿಸಿತ್ತು. ಮತ್ತು ಕೆಲವು ಕುಟುಂಬಗಳಲ್ಲಿಯ ಜನರು ದಿನ ನಿತ್ಯ ಕೆಲವು ಔಷಧಿಗಳನ್ನು ವಯೋ ಸಂಬಂಧಿ ರೋಗಗಳಿಗಾಗಿ ಅಥವಾ ಇತರ ಖಾಯಿಲೆಗಳಿಗಾಗಿ ಸೇವಿಸಬೇಕಾಗಿರುವುದೂ ನನ್ನ ಗಮನಕ್ಕೆ ಬಂದಿತು. ಜನ ಔಷಧಿ ಕೇಂದ್ರಗಳಿಂದಾಗಿ, ಇಂತಹ ಮಧ್ಯಮ ವರ್ಗದ ಕುಟುಂಬಗಳು ಪ್ರತೀ ತಿಂಗಳೂ 1,000-2,000 ರೂಪಾಯಿಗಳನ್ನು ಉಳಿಸುತ್ತಿವೆ.
ಸ್ನೇಹಿತರೇ,
ಇಂದಿನ ಕಾರ್ಯಕ್ರಮ ವಿಶ್ವ ಪ್ರವಾಸೋದ್ಯಮ ದಿನದೊಂದಿಗೆ ಸಂಘಟನೆಯಾಗಿರುವುದು ಒಂದು ಯೋಗಾ ಯೋಗ. ಕೆಲವರಿಗೆ ಆಶ್ಚರ್ಯವಾಗಬಹುದು, ಆರೋಗ್ಯ ಕಾರ್ಯಕ್ರಮ ಪ್ರವಾಸೋದ್ಯಮದ ಜೊತೆ ಏನು ಮಾಡಲಿಕ್ಕಿದೆ ಎಂದು. ಆದರೆ ಆರೋಗ್ಯವು ಪ್ರವಾಸೋದ್ಯಮದ ಜೊತೆ ಬಹಳ ಬಲಿಷ್ಟವಾದ ಸಂಬಂಧವನ್ನು ಹೊಂದಿದೆ. ನಮ್ಮ ಆರೋಗ್ಯ ಮೂಲಸೌಕರ್ಯ ಸಮಗ್ರಗೊಂಡಾಗ, ಅದು ಪ್ರವಾಸೋದ್ಯಮ ವಲಯದ ಮೇಲೂ ಪರಿಣಾಮ ಬೀರುತ್ತದೆ. ತುರ್ತು ಪರಿಸ್ಥಿತಿಯಲ್ಲಿ ಉತ್ತಮ ಚಿಕಿತ್ಸಾ ಸೌಲಭ್ಯ ಲಭ್ಯ ಇರದೇ ಇರುವಲ್ಲಿ ಪ್ರವಾಸಿಗರು ಹೋಗಲು ಇಚ್ಛಿಸುತ್ತಾರೆಯೇ?. ಮತ್ತು ಈಗ ಕೊರೊನಾ ಬಳಿಕ ಅದು ಇನ್ನಷ್ಟು ಪ್ರಮುಖ ಸಂಗತಿಯಾಗಿದೆ. ಪ್ರವಾಸಿಗರು ಗರಿಷ್ಟ ಲಸಿಕಾಕರಣ ಆಗಿರುವ ಪ್ರದೇಶಗಳಿಗೆ ಭೇಟಿ ನೀಡುವುದು ಸುರಕ್ಷೆ ಎಂದು ಭಾವಿಸುತ್ತಾರೆ. ನೀವು ನೋಡಿರಬಹುದು ಪ್ರವಾಸೀ ತಾಣಗಳಾದ ಹಿಮಾಚಲ, ಉತ್ತರಾಖಂಡ, ಸಿಕ್ಕಿಂ, ಗೋವಾ, ಅಂಡಮಾನ್ ಮತ್ತು ನಿಕೋಬಾರ್ ಗಳು ಲಸಿಕಾಕರಣಕ್ಕೆ ಬಹಳ ಒತ್ತನ್ನು ನೀಡಿವೆ. ಆ ಮೂಲಕ ಪ್ರವಾಸಿಗರಲ್ಲಿ ವಿಶ್ವಾಸ , ಭರವಸೆ ಮೂಡಿಸಲು ಯತ್ನಿಸಿವೆ. ಬರುವ ವರ್ಷಗಳಲ್ಲಿ ಎಲ್ಲಾ ಸಂಗತಿಗಳೂ ಇನ್ನಷ್ಟು ಬಲಗೊಳ್ಳಲಿವೆ. ಎಲ್ಲೆಲ್ಲಿ ಆರೋಗ್ಯ ಮೂಲಸೌಕರ್ಯ ಉತ್ತಮವಾಗಿದೆಯೋ, ಅಲ್ಲಿ ಪ್ರವಾಸಿಗರ ಆಗಮನ ಸಾಧ್ಯತೆಯೂ ಉತ್ತಮವಾಗಿರುತ್ತದೆ. ಅಂದರೆ, ಆಸ್ಪತ್ರೆ ಮತ್ತು ಆತಿಥ್ಯ ಪರಸ್ಪರ ಜೊತೆಯಾಗಿ ಸಾಗುತ್ತದೆ.
ಸ್ನೇಹಿತರೇ,
ಇಂದು ಭಾರತದ ವೈದ್ಯರಲ್ಲಿ ಮತ್ತು ಆರೋಗ್ಯ ವ್ಯವಸ್ಥೆಯಲ್ಲಿ ವಿಶ್ವದ ನಂಬಿಕೆ ಸತತ ಹೆಚ್ಚುತ್ತಿದೆ. ನಮ್ಮ ದೇಶದ ವೈದ್ಯರು ಜಗತ್ತಿನಲ್ಲಿ ಬಹಳ ಗೌರವವನ್ನು ಸಂಪಾದಿಸಿದ್ದಾರೆ ಮತ್ತು ಭಾರತದ ಹೆಸರನ್ನು ಸ್ಥಾಪಿಸಿದ್ದಾರೆ. ನೀವು ಜಗತ್ತಿನ ಶ್ರೀಮಂತ ಜನರನ್ನು ಕೇಳಿದರೆ ಅವರು ಅವರ ಒಬ್ಬರು ವೈದ್ಯರು ಭಾರತೀಯರೆಂಬುದನ್ನು ಒಪ್ಪಿಕೊಳ್ಳುತ್ತಾರೆ. ಭಾರತದ ಮೂಲಸೌಕರ್ಯ ಉತ್ತಮವಾಗಿದ್ದರೆ ಆಗ ಚಿಕಿತ್ಸೆಗಾಗಿ ಜಗತ್ತಿನ ವಿವಿಧ ಭಾಗಗಳಿಂದ ಭಾರತಕ್ಕೆ ಬರುವ ಜನರ ಸಂಖ್ಯೆ ಹೆಚ್ಚುತ್ತದೆ. ಮೂಲಸೌಕರ್ಯದ ಮಿತಿಗಳಿದ್ದಾಗ್ಯೂ ಚಿಕಿತ್ಸೆಗಾಗಿ ಜನರು ಭಾರತಕ್ಕೆ ಬರುತ್ತಾರೆ. ಮತ್ತು ಕೆಲವೊಮ್ಮೆ ನಾವು ಭಾವನಾತ್ಮಕ ಕಥೆಗಳನ್ನು ಕೇಳುತ್ತೇವೆ. ನಮ್ಮ ನೆರೆಯ ದೇಶಗಳ ಸಣ್ಣ ಮಕ್ಕಳು ಇಲ್ಲಿಗೆ ಚಿಕಿತ್ಸೆಗೆ ಬಂದಾಗ ಮತ್ತು ಅವರಿಗೆ ಖಾಯಿಲೆ ಗುಣವಾದಾಗ, ಅವರ ಕುಟುಂಬದ ಸಂತೋಷ ಎಲ್ಲವನ್ನೂ ಹೇಳುತ್ತದೆ.
ಸ್ನೇಹಿತರೇ,
ನಮ್ಮ ಲಸಿಕಾ ಕಾರ್ಯಕ್ರಮ, ಕೊವಿನ್ ವೇದಿಕೆ ಮತ್ತು ಔಷಧಿ ವಲಯಗಳು ಭಾರತದ ಪ್ರತಿಷ್ಟೆಯನ್ನು ಇನ್ನಷ್ಟು ಎತ್ತರಿಸಿವೆ. ಆಯುಷ್ಮಾನ್ ಭಾರತ್ ಡಿಜಿಟಲ್ ಆಂದೋಲನವು ತಂತ್ರಜ್ಞಾನದ ಹೊಸ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಿದಾಗ, ಯಾವುದೇ ದೇಶದ ರೋಗಿಗಳಿಗೆ ಸಲಹೆಗಳನ್ನು ಪಡೆಯುವುದು, ಭಾರತದ ವೈದ್ಯರಿಗೆ ಅವರ ವರದಿಗಳನ್ನು ಕಳುಹಿಸುವುದು ಮತ್ತು ಚಿಕಿತ್ಸೆಯನ್ನು ಪಡೆಯುವುದು ಸುಲಭವಾಗಲಿದೆ. ಇದರಿಂದ ಖಚಿತವಾಗಿಯೂ ಆರೋಗ್ಯ ಪ್ರವಾಸೋದ್ಯಮದ ಮೇಲೆ ಪರಿಣಾಮ ಉಂಟಾಗಲಿದೆ.
ಸ್ನೇಹಿತರೇ,
ಸ್ವಾತಂತ್ರ್ಯದ ಈ ಶಕೆಯಲ್ಲಿ ಬೃಹತ್ ದೃಢ ನಿರ್ಧಾರಗಳನ್ನು ಕಾರ್ಯಗತಗೊಳಿಸಲು ಮತ್ತು ದೊಡ್ಡ ಕನಸುಗಳನ್ನು ಸಾಕಾರಗೊಳಿಸಲು ಆರೋಗ್ಯವಂತ ಭಾರತಕ್ಕೆ ರಸ್ತೆ ನಿರ್ಮಾಣ ಮಾಡುವುದು ಬಹಳ ಮುಖ್ಯ. ಇದಕ್ಕಾಗಿ ನಾವು ದೃಢವಾದ ಪ್ರಯತ್ನಗಳನ್ನು ಮಾಡಬೇಕಾಗಿದೆ. ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲ ಜನರು, ನಮ್ಮ ವೈದ್ಯರು, ಅರೆ ವೈದ್ಯಕೀಯ ಸಿಬ್ಬಂದಿ ಮತ್ತು ವೈದ್ಯಕೀಯ ಸಂಸ್ಥೆಗಳು ಈ ಹೊಸ ವ್ಯವಸ್ಥೆಯನ್ನು ತ್ವರಿತವಾಗಿ ಸ್ಥಾಪಿಸಿಕೊಳ್ಳುತ್ತವೆ ಎಂಬ ಬಗ್ಗೆ ನನಗೆ ಖಾತ್ರಿ ಇದೆ. ಮತ್ತೊಮ್ಮೆ ನಾನು ಆಯುಷ್ಮಾನ್ ಭಾರತ್-ಡಿಜಿಟಲ್ ಆಂದೋಲನಕ್ಕಾಗಿ ದೇಶಕ್ಕೆ ಶುಭಾಶಯಗಳನ್ನು ಹೇಳುತ್ತೇನೆ.
ಬಹಳ ಬಹಳ ಧನ್ಯವಾದಗಳು!