ನಮಸ್ಕಾರ!
ಮಧ್ಯಪ್ರದೇಶ ರಾಜ್ಯಪಾಲರಾದ ಶ್ರೀ ಮಂಗೂಭಾಯಿ ಪಟೇಲ್ ಜೀ, ಮುಖ್ಯಮಂತ್ರಿ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಜೀ, ಕೇಂದ್ರ ಸಂಪುಟದಲ್ಲಿ ನನ್ನ ಸಹೋದ್ಯೋಗಿಯಾಗಿರುವ ಶ್ರೀ ಹರ್ದೀಪ್ ಸಿಂಗ್ ಪುರಿ ಜೀ, ಡಾ. ವೀರೇಂದ್ರ ಕುಮಾರ್ ಜೀ, ಮತ್ತು ಕೌಶಲ್ ಕಿಶೋರ್ ಜೀ, ಮಧ್ಯ ಪ್ರದೇಶ ಸರಕಾರದ ಸಚಿವರೇ, ಸಂಸದರೇ, ಶಾಸಕರೇ, ಮಧ್ಯ ಪ್ರದೇಶದ ಅನೇಕ ನಗರಗಳ ಮತ್ತು ಇಂದೋರಿನ ಪ್ರೀತಿಯ ಸಹೋದರರೇ ಮತ್ತು ಸಹೋದರಿಯರೇ ಹಾಗು ಇಲ್ಲಿ ಹಾಜರಿರುವ ಗಣ್ಯರೇ.
ನಾವು ಯುವಕರಾಗಿದ್ದಾಗ ಮತ್ತು ಕಲಿಯುತ್ತಿದ್ದಾಗ ಇಂದೋರ್ ಎಂಬ ಹೆಸರು ಪ್ರಸ್ತಾಪವಾದಾಗ ಮನಸ್ಸಿಗೆ ಬರುತ್ತಿದ್ದುದು ಮಹೇಶ್ವರದ ದೇವಿ ಅಹಿಲ್ಯಾಬಾಯಿ ಹೋಳ್ಕರ್ ಮತ್ತು ಅವರ ಸೇವೆಯ ಉತ್ಸಾಹ. ಕಾಲದೊಂದಿಗೆ ಇಂದೋರ್ ಕೂಡಾ ಬದಲಾಗಿದೆ ಮತ್ತು ಉತ್ತಮ ಸ್ಥಿತಿಗಾಗಿ ಬದಲಾಗಿದೆ, ಆದರೆ ಇಂದೋರ್ ದೇವಿ ಅಹಿಲ್ಯಾ ಜೀ ಅವರ ಪ್ರೇರಣೆಯಿಂದ ವಿಮುಖವಾಗಿಲ್ಲ. ಇಂದೋರಿನ ಹೆಸರು ದೇವಿ ಅಹಿಲ್ಯಾ ಜೀ ಅವರ ಹೆಸರಿನೊಂದಿಗೆ ಸೇರಿ ಸ್ವಚ್ಛತೆಗೆ ಪ್ರೇರಣೆ ನೀಡಿದೆ. ಇಂದೋರ್ ನಾಗರಿಕ ಕರ್ತವ್ಯವನ್ನು ನೆನಪಿಗೆ ತರುತ್ತದೆ. ಇಂದೋರಿನ ಜನತೆ ಬಹಳಷ್ಟು ನಯವಂತರು ಮತ್ತು ಅವರು ಅದಕ್ಕೆ ತಕ್ಕಂತೆ ತಮ್ಮ ನಗರವನ್ನು ರೂಪಿಸಿದ್ದಾರೆ. ಇಂದೋರಿನ ಜನತೆ “ಸೇವ್” (ತಿಂಡಿ) ಪ್ರಿಯರು ಮಾತ್ರವಲ್ಲ ಅವರು ತಮ್ಮ ನಗರಕ್ಕೆ ಹೇಗೆ ಸೇವೆ ಮಾಡಬೇಕು ಎಂಬುದನ್ನೂ ಬಲ್ಲವರು.
ಇಂದಿನ ದಿನ ಇಂದೋರಿನ ಸ್ವಚ್ಛತಾ ಆಂದೋಲನಕ್ಕೆ ಹೊಸ ಶಕ್ತಿಯನ್ನು ಕೊಡಲಿದೆ. ಇಂದೋರ್ ಇಂದು ಪಡೆದುಕೊಂಡಿರುವ ಹಸಿ ತ್ಯಾಜ್ಯದಿಂದ ಜೈವಿಕ-ಸಿ.ಎನ್.ಜಿ. ತಯಾರಿಸುವಂತಹ ಗೋಬರ್-ಧನ್ ಸ್ಥಾವರಕ್ಕಾಗಿ ನಿಮಗೆಲ್ಲ ಬಹಳ ಅಭಿನಂದನೆಗಳು. ಇಷ್ಟೊಂದು ಅತ್ಯಲ್ಪ ಸಮಯದಲ್ಲಿ ಇದನ್ನು ಸಾಧ್ಯ ಮಾಡಿದುದಕ್ಕಾಗಿ ನಾನು ಶಿವರಾಜ್ ಜೀ ಮತ್ತು ಅವರ ತಂಡವನ್ನೂ ಶ್ಲಾಘಿಸುತ್ತೇನೆ. ಸಂಸದರಾಗಿ ಇಂದೋರಿನ ಗುರುತಿಸುವಿಕೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ದ ಸುಮಿತ್ರಾ ತಾಯಿ ಅವರಿಗೆ ನನ್ನ ಕೃತಜ್ಞತೆಗಳು. ನನ್ನ ಸಹೋದ್ಯೋಗಿ ಮತ್ತು ಇಂದೋರಿನ ಹಾಲಿ ಸಂಸದ ಶಂಕರ್ ಲಾಲ್ವಾನೀ ಜೀ ಕೂಡಾ ಅವರ ಹಾದಿಯಲ್ಲಿ ನಡೆಯುತ್ತಿದ್ದಾರೆ ಮತ್ತು ಇಂದೋರನ್ನು ಇನ್ನಷ್ಟು ಉತ್ತಮಗೊಳಿಸಲು ನಿರಂತರ ಶ್ರಮಿಸುತ್ತಿದ್ದಾರೆ.
ಸ್ನೇಹಿತರೇ,
ಇಂದು ನಾನು ಇಂದೋರನ್ನು ಇಷ್ಟೆಲ್ಲಾ ಶ್ಲಾಘಿಸುತ್ತಿರುವಾಗ, ನಾನು ನನ್ನ ಸಂಸತ್ ಕ್ಷೇತ್ರವಾದ ವಾರಾಣಾಸಿಯನ್ನು ಉಲ್ಲೇಖಿಸುತ್ತೇನೆ. ಕಾಶಿ ವಿಶ್ವನಾಥ ಧಾಮದಲ್ಲಿ ಬಹಳ ಸುಂದರವಾದ ದೇವಿ ಅಹಿಲ್ಯಾಬಾಯಿ ಹೋಳ್ಕರ್ ಅವರ ಪ್ರತಿಮೆಯನ್ನು ಸ್ಥಾಪಿಸಲಾಗಿದೆ ಎಂಬುದು ನನಗೆ ಬಹಳ ಸಂತೋಷದ ಸಂಗತಿಯಾಗಿದೆ. ಇಂದೋರಿನ ಜನತೆ ಬಾಬಾ ವಿಶ್ವನಾಥನ ದರ್ಶನಕ್ಕೆ ಹೋದಾಗ ಅವರಿಗೆ ದೇವಿ ಅಹಿಲ್ಯಾಬಾಯಿಯವರ ಪ್ರತಿಮೆಯ ನೋಟಗಳು ಲಭ್ಯವಾಗಲಿವೆ. ನೀವು ನಿಮ್ಮ ನಗರದ ಬಗ್ಗೆ ಹೆಚ್ಚು ಹೆಮ್ಮೆಪಡುತ್ತೀರಿ.
ಸ್ನೇಹಿತರೇ,
ನಮ್ಮ ನಗರಗಳನ್ನು ಮಾಲಿನ್ಯಮುಕ್ತ ಮಾಡಲು ಮತ್ತು ಹಸಿ ಕಸವನ್ನು ವಿಲೇವಾರಿ ಮಾಡಲು ಇಂದಿನ ಇಂತಹ ಪ್ರಯತ್ನ ಬಹಳ ಮುಖ್ಯ. ನಗರಗಳ ಮನೆಗಳಿಂದ ಹಸಿ ಕಸವಿರಲಿ, ಅಥವಾ ಜಾನುವಾರುಗಳ ತ್ಯಾಜ್ಯವಿರಲಿ, ಅಥವಾ ಗ್ರಾಮಗಳಲ್ಲಿ ಕೃಷಿ ಭೂಮಿ ತ್ಯಾಜ್ಯವಿರಲಿ, ಅದಕ್ಕೆ ಗೋಬರ್-ಧನ್ ಒಂದು ದಾರಿ. ನಗರ ತ್ಯಾಜ್ಯ ಮತ್ತು ಜಾನುವಾರುಗಳ ತ್ಯಾಜ್ಯಗಳಿಂದ ಗೋಬರ್- ಧನ್, ಗೋಬರ್ -ಧನ್ ನಿಂದ ಸ್ವಚ್ಛ ಇಂಧನ ಮತ್ತು ಸ್ವಚ್ಛ ಇಂಧನದಿಂದ ಶಕ್ತಿ ಎಂಬುದು ಒಂದು ಬದುಕನ್ನು ಪುಷ್ಟೀಕರಿಸುವ ಸರಪಳಿ. ಈ ಸರಪಳಿಯಲ್ಲಿ ಪ್ರತಿಯೊಂದು ಕೊಂಡಿಯೂ ಹೇಗೆ ಪರಸ್ಪರ ಜೋಡಿಸಲ್ಪಟ್ಟಿದೆ ಎಂಬುದಕ್ಕೆ ಇಂದೋರಿನಲ್ಲಿರುವ ಈ ಗೋಬರ್ –ಧನ್ ಸ್ಥಾವರ ನೇರ ಉದಾಹರಣೆ, ಮತ್ತು ಅದೀಗ ಇತರ ನಗರಗಳಿಗೆ ಕೂಡಾ ಪ್ರೇರಣೆ ನೀಡಲಿದೆ.
ದೇಶದ 75 ಪ್ರಮುಖ ಮುನ್ಸಿಪಾಲಿಟಿಗಳಲ್ಲಿ ಮುಂದಿನ ಎರಡು ವರ್ಷಗಳಲ್ಲಿ ಇಂತಹ ಗೋಬರ್-ಧನ್ ಜೈವಿಕ ಸಿ.ಎನ್.ಜಿ. ಸ್ಥಾವರಗಳು ಸ್ಥಾಪನೆಯಾಗಲಿರುವುದು ನನಗೆ ಬಹಳ ಸಂತೋಷದ ಸಂಗತಿ. ಭಾರತದ ನಗರಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವಲ್ಲಿ, ಮಾಲಿನ್ಯ ಮುಕ್ತವಾಗಿರಿಸಿಕೊಳ್ಳುವಲ್ಲಿ ಇವು ನಮ್ಮನ್ನು ಬಹಳ ದೂರ ಕೊಂಡೊಯ್ಯಬಲ್ಲವು.ಮತ್ತು ಸ್ವಚ್ಛ ಇಂಧನ ನಿಟ್ಟಿನಲ್ಲಿಯೂ ಬಹಳ ದೊಡ್ಡ ಕಾಣಿಕೆ ಕೊಡಬಲ್ಲವು. ಈಗ ನಗರಗಳಲ್ಲಿ ಮಾತ್ರವಲ್ಲ ದೇಶದ ಹಳ್ಳಿಗಳಲ್ಲಿಯೂ ಸಾವಿರಾರು ಗೋಬರ್-ಧನ್ ಜೈವಿಕ ಅನಿಲ ಸ್ಥಾವರಗಳನ್ನು ಸ್ಥಾಪಿಸಲಾಗುತ್ತಿದೆ. ಇದರ ಪರಿಣಾಮವಾಗಿ ನಮ್ಮ ಪಶು ಪಾಲಕರು ಸಗಣಿಯಿಂದ ಹೆಚ್ಚುವರಿ ಆದಾಯವನ್ನು ಪಡೆಯಲು ಆರಂಭಿಸಿದ್ದಾರೆ. ಈ ಗೋಬರ್-ಧನ್ ಸ್ಥಾವರಗಳು ನಮ್ಮ ಗ್ರಾಮಗಳಲ್ಲಿಯ ರೈತರ ಸಮಸ್ಯೆಗಳನ್ನು ಮತ್ತು ದೇಶಾದ್ಯಂತದ ಅಶಕ್ತ ಪ್ರಾಣಿಗಳ ಸಮಸ್ಯೆಗಳನ್ನು ನಿವಾರಿಸಲಿದೆ. ಈ ಎಲ್ಲಾ ಪ್ರಯತ್ನಗಳು ಭಾರತದ ವಾತಾವರಣಕ್ಕೆ ಸಂಬಂಧಿಸಿದ ಬದ್ಧತೆಗಳನ್ನು ಈಡೇರಿಸಲು ಸಹಾಯ ಮಾಡಲಿವೆ.
ಸ್ನೇಹಿತರೇ,
ಗೋಬರ್-ಧನ್ ಯೋಜನಾ ಕುರಿತಂತೆ ಮತ್ತು ಅದರ ಪರಿಣಾಮ ಕುರಿತಂತೆ ಹೆಚ್ಚು ಹೆಚ್ಚು ಜನರು ತಿಳಿದುಕೊಂಡರೆ ಉತ್ತಮ. ಇದು ನಮ್ಮ ಕಸದಿಂದ ಸಂಪತ್ತು ಗಳಿಸುವ ಆಂದೋಲನ. ಗೋಬರ್-ಧನ್ ಜೈವಿಕ –ಸಿ.ಎನ್.ಜಿ. ಸ್ಥಾವರದಿಂದ ಇಂದೋರಿಗೆ ದಿನವೊಂದಕ್ಕೆ 17,000-18,000 ಕಿಲೋ ಗ್ರಾಂ ಜೈವಿಕ-ಸಿ.ಎನ್.ಜಿ. ಲಭ್ಯವಾಗುವುದು ಮಾತ್ರವಲ್ಲ ದಿನಕ್ಕೆ 100 ಟನ್ನಿನಷ್ಟು ಸಾವಯವ ಗೊಬ್ಬರವೂ ಉತ್ಪಾದನೆಯಾಗುತ್ತದೆ. ಸಿ.ಎನ್.ಜಿ. ಬಳಕೆಯಿಂದ ಮಾಲಿನ್ಯ ಕಡಿಮೆಯಾಗುತ್ತದೆ ಮತ್ತು ಜನರ ಜೀವನವೂ ಸುಧಾರಿಸುತ್ತದೆ. ಅದೇ ಕಾಲಕ್ಕೆ ಸಾವಯವ ಗೊಬ್ಬರವು ನಮ್ಮ ಭೂಮಾತೆಗೆ ಹೊಸ ಚೈತನ್ಯವನ್ನು ನೀಡುತ್ತದೆ ಮತ್ತು ಆ ಮೂಲಕ ನಮ್ಮ ಭೂಮಿ ಕೂಡಾ ಪುನಶ್ಚೇತನಗೊಳ್ಳುತ್ತದೆ.
ಈ ಸ್ಥಾವರದಲ್ಲಿ ಉತ್ಪಾದನೆಯಾಗುವ ಸಿ.ಎನ್.ಜಿ.ಯು ಇಂದೋರ್ ನಗರದಲ್ಲಿ ಸುಮಾರು 400 ಬಸ್ ಗಳನ್ನು ಓಡಿಸಲು ಸಾಕಾಗುತ್ತದೆ ಎಂದು ಅಂದಾಜಿಸಲಾಗಿದೆ. ಹಸಿರು ಉದ್ಯೋಗಗಳನ್ನು ಹೆಚ್ಚಿಸಲು ಸಹಾಯ ಮಾಡುವ ಈ ಸ್ಥಾವರದಿಂದಾಗಿ ನೂರಾರು ಯುವಜನರು ಒಂದಲ್ಲ ಒಂದು ರೀತಿಯ ಉದ್ಯೋಗವನ್ನು ಗಳಿಸಲಿದ್ದಾರೆ.
ಸಹೋದರರೇ ಮತ್ತು ಸಹೋದರಿಯರೇ,
ಯಾವುದೇ ಸವಾಲನ್ನು ನಿಭಾಯಿಸಲು ಎರಡು ದಾರಿಗಳಿವೆ. ಸವಾಲಿಗೆ ತಕ್ಷಣವೇ ಪರಿಹಾರವನ್ನು ಹುಡುಕುವುದು ಒಂದು ದಾರಿಯಾದರೆ, ಎರಡನೇಯದ್ದು ಪ್ರತಿಯೊಬ್ಬರಿಗೂ ಶಾಶ್ವತ ಪರಿಹಾರ ದೊರಕುವಂತೆ ಅದನ್ನು ನಿಭಾಯಿಸುವುದು. ಕಳೆದ ಏಳು ವರ್ಷಗಳಲ್ಲಿ ನಮ್ಮ ಸರಕಾರ ರೂಪಿಸಿದ ಯೋಜನೆಗಳು ಶಾಶ್ವತ ಪರಿಹಾರವನ್ನು ಒದಗಿಸಲಿವೆ ಮತ್ತು ಏಕಕಾಲಕ್ಕೆ ಹಲವು ಗುರಿಗಳನ್ನು ಈಡೇರಿಸಲಿವೆ.
ಉದಾಹರಣೆಗೆ ಸ್ವಚ್ಛ ಭಾರತ ಆಂದೋಲನವನ್ನು ತೆಗೆದುಕೊಳ್ಳಿ. ಸ್ವಚ್ಛತೆಯ ಜೊತೆಗೆ ಅದು ಸಹೋದರಿಯರ ಘನತೆ ಹೆಚ್ಚಿಸಿದೆ. ರೋಗಗಳನ್ನು ತಡೆಗಟ್ಟಿದೆ,ಗ್ರಾಮಗಳ ಮತ್ತು ನಗರಗಳ ಸೌಂದರೀಕರಣವಾಗಿದೆ ಮತ್ತು ಉದ್ಯೋಗಾವಕಾಶಗಳ ಸೃಷ್ಟಿಯಾಗಿದೆ. ಈಗ ನಮ್ಮ ಗಮನ ಮನೆಗಳಿಂದ ಮತ್ತು ಬೀದಿಗಳಿಂದ ಸಂಗ್ರಹವಾದ ತ್ಯಾಜ್ಯವನ್ನು ವಿಲೇವಾರಿ ಮಾಡಿ, ನಗರಗಳನ್ನು ಕಸದ ಗುಡ್ಡೆಗಳಿಂದ ಮುಕ್ತ ಮಾಡುವುದು. ಮತ್ತು ಅದರಲ್ಲಿ ಇಂದೋರ್ ಒಂದು ಅತ್ಯುತ್ತಮ ಮಾದರಿಯಾಗಿ ಮೂಡಿ ಬಂದಿದೆ. ಈ ಹೊಸ ಸ್ಥಾವರವನ್ನು ಕಸದ ಗುಡ್ಡೆಗಳಿದ್ದ ದೇವಗುರಾಡಿಯಾ ಬಳಿಯಲ್ಲಿ ಸ್ಥಾಪಿಸಲಾಗಿರುವುದು ನಿಮಗೆಲ್ಲ ತಿಳಿದಿದೆ. ಇಂದೋರಿನ ಪ್ರತಿಯೊಬ್ಬ ನಿವಾಸಿಗೂ ಇದರಿಂದ ಸಮಸ್ಯೆಗಳಿದ್ದವು. ಆದರೆ ಈಗ ಇಂದೋರ್ ಮುನ್ಸಿಪಲ್ ಕಾರ್ಪೋರೇಶನ್ 100 ಎಕರೆ ತ್ಯಾಜ್ಯ ಸಂಗ್ರಹಣಾ ಸ್ಥಳವನ್ನು ಹಸಿರು ವಲಯವನ್ನಾಗಿಸಿದೆ.
ಸ್ನೇಹಿತರೇ,
ಇಂದು ದೇಶದ ವಿವಿಧ ನಗರಗಳಲ್ಲಿ ಮಿಲಿಯನ್ ಟನ್ನುಗಳಷ್ಟು ಕಸ, ತ್ಯಾಜ್ಯವು ದಶಕಗಳಿಂದ ಸಾವಿರಾರು ಎಕರೆ ಪ್ರದೇಶದಲ್ಲಿ ಗುಡ್ಡೆಯಾಗಿ ಬಿದ್ದಿದೆ. ಇದು ಗಾಳಿಯಿಂದ ಮತ್ತು ನೀರಿನ ಮಾಲಿನ್ಯದಿಂದ ಹರಡುವ ರೋಗಗಳಿಗೆ ಮುಖ್ಯ ಕಾರಣವಾಗಿದೆ. ಆದುದರಿಂದ ಸ್ವಚ್ಛ ಭಾರತ್ ಆಂದೋಲನದ ಎರಡನೇ ಹಂತದಲ್ಲಿ ಈ ಸಮಸ್ಯೆ ನಿವಾರಣೆಗೆ ಆದ್ಯತೆಯನ್ನು ಕೊಡಲಾಗಿದೆ. ಈ ಕಸದ ಗುಡ್ಡೆ, ಪರ್ವತಗಳಿಂದ ನಗರಗಳಿಗೆ ಮುಕ್ತಿ ಕೊಡುವುದು ಮತ್ತು ಅವುಗಳನ್ನು ಇನ್ನು ಮುಂದಿನ ಎರಡು-ಮೂರು ವರ್ಷಗಳಲ್ಲಿ ಹಸಿರು ವಲಯವನ್ನಾಗಿಸುವುದು ಇದರ ಗುರಿ.
ಇದಕ್ಕಾಗಿ, ರಾಜ್ಯ ಸರಕಾರಗಳಿಗೆ ಸಾಧ್ಯ ಇರುವ ಎಲ್ಲಾ ನೆರವನ್ನೂ ನೀಡಲಾಗುತ್ತಿದೆ. ದೇಶದಲ್ಲಿ ನಗರ ತ್ಯಾಜ್ಯ ವಿಲೇವಾರಿ ಸಾಮರ್ಥ್ಯ 2014 ಕ್ಕೆ ಹೋಲಿಸಿದರೆ ನಾಲ್ಕು ಪಟ್ಟು ಅಧಿಕವಾಗಿರುವುದು ಬಹಳ ತೃಪ್ತಿಯ ಸಂಗತಿ. ಏಕ ಬಳಕೆ ಪ್ಲಾಸ್ಟಿಕ್ ನಿಂದ ದೇಶವನ್ನು ಪಾರು ಮಾಡಲು 1600 ಕ್ಕೂ ಅಧಿಕ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ..ಸೌಲಭ್ಯವನ್ನು ಸಿದ್ದಮಾಡಲಾಗುತ್ತಿದೆ. ಮುಂದಿನ ಕೆಲವು ವರ್ಷಗಳಲ್ಲಿ ಪ್ರತೀ ನಗರದಲ್ಲಿಯೂ ಇಂತಹ ವ್ಯವಸ್ಥೆಯನ್ನು ಸ್ಥಾಪಿಸಲು ನಾವು ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ಇಂತಹ ಆಧುನಿಕ ವ್ಯವಸ್ಥೆಗಳು ಭಾರತದ ನಗರಗಳಲ್ಲಿ ವೃತ್ತಾಕಾರದ ಆರ್ಥಿಕತೆಗೆ ಹೊಸ ಬಲವನ್ನು ತಂದುಕೊಡಲಿವೆ.
ಸ್ನೇಹಿತರೇ,
ಸ್ವಚ್ಛ ನಗರ ಇನ್ನೊಂದು ಹೊಸ ಸಾಧ್ಯತೆಯತ್ತ ಕರೆದೊಯ್ಯುತ್ತದೆ, ಅದೆಂದರೆ ಪ್ರವಾಸೋದ್ಯಮ. ಪವಿತ್ರ ಸ್ಥಳಗಳು ಇಲ್ಲದ ಮತ್ತು ಐತಿಹಾಸಿಕ ಸ್ಥಳಗಳು ಇಲ್ಲದ ಯಾವುದೇ ನಗರ ನಮ್ಮ ದೇಶದಲ್ಲಿ ಇಲ್ಲ. ಕೊರತೆ ಇರುವುದು ಸ್ವಚ್ಛತೆಯಲ್ಲಿ. ನಗರಗಳು ಸ್ವಚ್ಛವಾದಾಗ ಇತರ ಪ್ರದೇಶಗಳ ಜನರು ಇಲ್ಲಿಗೆ ಭೇಟಿ ನೀಡಲು ಇಚ್ಛೆಪಡುತ್ತಾರೆ ಮತ್ತು ಹೆಚ್ಚು ಜನರೂ ಬರುತ್ತಾರೆ. ಬರೇ ಸ್ವಚ್ಛತಾ ಕಾರ್ಯವನ್ನು ನೋಡುವುದಕ್ಕಾಗಿಯೇ ಇಂದೋರಿಗೆ ಬಹಳಷ್ಟು ಜನರು ಬರುತ್ತಾರೆ. ಸ್ವಚ್ಛತೆ ಇದ್ದಲ್ಲಿ ಪ್ರವಾಸೋದ್ಯಮ ಇರುತ್ತದೆ ಮತ್ತು ಅಲ್ಲಿ ಇಡೀ ಹೊಸ ಆರ್ಥಿಕತೆ ಆರಂಭವಾಗುತ್ತದೆ.
ಸ್ನೇಹಿತರೇ,
ಇತ್ತೀಚೆಗೆ, ಇಂದೋರ್ ಜಲ ಸಮೃದ್ಧಿಯ ಇನ್ನೊಂದು ಸಾಧನೆಯನ್ನು ಮಾಡಿದೆ. ಇದು ಕೂಡಾ ಇತರ ನಗರಗಳಿಗೆ ದಿಕ್ಕು ದಿಶೆಗಳನ್ನು ನೀಡಲಿದೆ. ನಗರದ ಜಲ ಮೂಲಗಳು ಸ್ವಚ್ಛವಾಗಿದ್ದಾಗ ಮತ್ತು ಚರಂಡಿಗಳ ಕೊಳಕು ನೀರು ಅವುಗಳನ್ನು ಸೇರದಿದ್ದಾಗ ನಗರದಲ್ಲಿ ಹೊಸ ಶಕ್ತಿಯ ಸಂಚಯವಾಗುತ್ತದೆ. ಭಾರತದ ಹೆಚ್ಚು ಹೆಚ್ಚು ನಗರಗಳು ಜಲ ಸಮೃದ್ಧ ಆಗಬೇಕು ಎಂಬುದು ಸರಕಾರದ ಪ್ರಯತ್ನವಾಗಿದೆ. ಈ ನಿಟ್ಟಿನಲ್ಲಿ ಸ್ವಚ್ಛ ಭಾರತ್ ಆಂದೋಲನದ ಎರಡನೇ ಹಂತದಲ್ಲಿ ಹೆಚ್ಚಿನ ಒತ್ತನ್ನು ನೀಡಲಾಗಿದೆ. ಒಂದು ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಇರುವ ಮುನ್ಸಿಪಲ್ ಆಡಳಿತ ಸಂಸ್ಥೆಗಳಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಸೌಲಭ್ಯಗಳನ್ನು ಹೆಚ್ಚಿಸಲಾಗುತ್ತಿದೆ.
ಸಹೋದರರೇ ಮತ್ತು ಸಹೋದರಿಯರೇ,
ಸಮಸ್ಯೆಗಳನ್ನು ಗುರುತಿಸಿ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಿದರೆ ಬದಲಾವಣೆ ಸಾಧ್ಯವಾಗುತ್ತದೆ. ನಮ್ಮಲ್ಲಿ ತೈಲ ಬಾವಿಗಳಿಲ್ಲ, ಪೆಟ್ರೋಲಿಯಂ ಉತ್ಪನ್ನಗಳ ಆಮದಿಗೆ ನಾವು ಇತರರನ್ನು ಅವಲಂಬಿಸಬೇಕಾಗಿದೆ. ಆದರೆ ಎಥೆನಾಲ್ ತಯಾರಿಸಲು ಮತ್ತು ವರ್ಷಗಟ್ಟಲೆ ಜೈವಿಕ ಇಂಧನ ತಯಾರಿಸಲು ನಮ್ಮಲ್ಲಿ ಸಂಪನ್ಮೂಲಗಳಿವೆ. ಈ ತಂತ್ರಜ್ಞಾನ ಕೂಡಾ ಬಹಳ ಹಿಂದೆಯೇ ಬಂದಿದೆ. ಈ ತಂತ್ರಜ್ಞಾನ ಬಳಕೆಗೆ ಬಹಳಷ್ಟು ಒತ್ತನ್ನು ನಮ್ಮ ಸರಕಾರ ನೀಡಿತು. 7-8 ವರ್ಷಗಳ ಹಿಂದೆ ಭಾರತದಲ್ಲಿ ಎಥೆನಾಲ್ ಮಿಶ್ರಣ 1%,1.5%, 2% ನಷ್ಟಿತ್ತೇ ಹೊರತು ಅದು ಹೆಚ್ಚುತ್ತಿರಲಿಲ್ಲ. ಇಂದು ಪೆಟ್ರೋಲಿನಲ್ಲಿ ಎಥೆನಾಲ್ ಮಿಶ್ರಣದ ಶೇಖಡಾವಾರು ಪ್ರಮಾಣ ಸುಮಾರು 8% ಗೆ ತಲುಪಿದೆ. ಕಳೆದ ಏಳು ವರ್ಷಗಳಲ್ಲಿ ಮಿಶ್ರಣಕ್ಕಾಗಿ ಎಥೆನಾಲ್ ಪೂರೈಕೆ ಕೂಡಾ ದೊಡ್ಡ ಪ್ರಮಾಣದಲ್ಲಿ ಹೆಚ್ಚಳವಾಗಿದೆ.
ದೇಶದಲ್ಲಿ 2014 ಕ್ಕೆ ಮೊದಲು, ಮಿಶ್ರಣಕ್ಕಾಗಿ ಸುಮಾರು 40 ಕೋಟಿ ಲೀಟರಿನಷ್ಟು ಎಥೆನಾಲ್ ಪೂರೈಕೆಯಾಗುತ್ತಿತ್ತು. ಇಂದು ಮಿಶ್ರಣಕ್ಕಾಗಿ 300 ಕೋಟಿ ಲೀಟರಿಗೂ ಅಧಿಕ ಎಥೆನಾಲ್ ಪೂರೈಕೆಯಾಗುತ್ತಿದೆ. 40 ಕೋಟಿ ಲೀಟರು ಮತ್ತು 300 ಕೋಟಿ ಲೀಟರುಗಳ ನಡುವಣ ವ್ಯತ್ಯಾಸ ನೋಡಿ!. ಇದರಿಂದ ನಮ್ಮ ಸಕ್ಕರೆ ಕಾರ್ಖಾನೆಗಳ ಆರೋಗ್ಯ ಸುಧಾರಿಸಿದೆ ಮತ್ತು ಕಬ್ಬು ಬೆಳೆಗಾರರಿಗೂ ಬಹಳಷ್ಟು ಸಹಾಯವಾಗಿದೆ.
ಸ್ನೇಹಿತರೇ,
ಕೃಷಿ ತ್ಯಾಜ್ಯ ಸುಡುವುದು ಇನ್ನೊಂದು ಸಮಸ್ಯೆ. ನಮ್ಮ ರೈತರು ಮತ್ತು ನಗರಗಳಲ್ಲಿ ವಾಸಿಸುತ್ತಿರುವ ಜನರು ಕೂಡಾ ಇದರಿಂದ ತೊಂದರೆ ಅನುಭವಿಸುತ್ತಾರೆ. ಈ ವರ್ಷದ ಬಜೆಟಿನಲ್ಲಿ ನಾವು ಕೃಷಿ ತ್ಯಾಜ್ಯ ಸುಡುವುದಕ್ಕೆ ಸಂಬಂಧಿಸಿ ಬಹಳ ಮುಖ್ಯವಾದ ನಿರ್ಧಾರವನ್ನು ಕೈಗೊಂಡಿದ್ದೇವೆ. ಕೃಷಿ ತ್ಯಾಜ್ತವನ್ನು ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳಲ್ಲಿ ಬಳಸಲು ನಿರ್ಧರಿಸಲಾಗಿದೆ. ರೈತರು ಇದರ ಸಮಸ್ಯೆಯಿಂದ ಮುಕ್ತರಾಗುತ್ತಾರೆ ಮಾತ್ರವಲ್ಲ ಅವರಿಗೆ ಕೃಷಿ ತ್ಯಾಜ್ಯದಿಂದ ಹೆಚ್ಚುವರಿ ಆದಾಯವೂ ಲಭಿಸುತ್ತದೆ.
ಅದೇ ರೀತಿ ಈ ಮೊದಲು ಸೌರ ಶಕ್ತಿ ಮತ್ತು ಸೌರ ವಿದ್ಯುತ್ ನಡುವೆ ಬಹಳ ವ್ಯತ್ಯಾಸಗಳಿರುವುದನ್ನು ನಾವು ನೋಡಿದ್ದೇವೆ. 2014 ರ ಬಳಿಕ, ನಮ್ಮ ಸರಕಾರ ದೇಶಾದ್ಯಂತ ಸೌರ ವಿದ್ಯುತ್ ಉತ್ಪಾದನೆಯನ್ನು ಹೆಚ್ಚಿಸಲು ಆಂದೋಲನವನ್ನು ಹಮ್ಮಿಕೊಂಡಿತು. ಇದರ ಪರಿಣಾಮವಾಗಿ ಭಾರತವು ಇಂದು ಸೌರ ಶಕ್ತಿಯಿಂದ ವಿದ್ಯುತ್ ಉತ್ಪಾದಿಸುವ ದೇಶಗಳಲ್ಲಿ ಉನ್ನತ-5 ದೇಶಗಳಲ್ಲಿ ಒಂದಾಗಿದೆ. ಈ ಸೌರ ಶಕ್ತಿಯಿಂದಾಗಿ ನಮ್ಮ ಸರಕಾರವು ರೈತರನ್ನು ಆಹಾರ ದಾನಿಗಳ ಜೊತೆ ವಿದ್ಯುತ್ ದಾನಿಗಳನ್ನಾಗಿ ಮಾಡುತ್ತಿದೆ. ದೇಶಾದ್ಯಂತ ರೈತರಿಗೆ ಲಕ್ಷಾಂತರ ಸೌರ ಪಂಪ್ ಗಳನ್ನು ನೀಡಲಾಗುತ್ತಿದೆ.
ಸಹೋದರರೇ ಮತ್ತು ಸಹೋದರಿಯರೇ,
ಭಾರತದ ಸಾಧನೆಗಳ ಹಿಂದೆ ತಂತ್ರಜ್ಞಾನದ ಜೊತೆ ಅನ್ವೇಷಣೆ ಮತ್ತು ಭಾರತೀಯರ ಕಠಿಣ ಪರಿಶ್ರಮಗಳಿವೆ. ಆದುದರಿಂದ, ಭಾರತಕ್ಕೆ ಇಂದು ಹಸಿರು ಮತ್ತು ಸ್ವಚ್ಛ ಭವಿಷ್ಯಕ್ಕೆ ಸಂಬಂಧಿಸಿ ಬಹಳ ದೊಡ್ಡ ಗುರಿಗಳನ್ನು ನಿಗದಿ ಮಾಡುವುದಕ್ಕೆ ಸಾಧ್ಯವಾಗಿದೆ. ನಮ್ಮ ಯುವಜನರು, ಸಹೋದರಿಯರು ಮತ್ತು ನಮ್ಮ ಲಕ್ಷಾಂತರ “ಸಫಾಯಿ ಕರ್ಮಚಾರಿಗಳ”ಲ್ಲಿ ಇಟ್ಟಿರುವ ಅಚಲ ನಂಬಿಕೆಯಿಂದಾಗಿ ನಾವು ಮುನ್ನಡೆ ಸಾಧಿಸುತ್ತಿದ್ದೇವೆ. ಹೊಸ ತಂತ್ರಜ್ಞಾನ ಮತ್ತು ಅನ್ವೇಷಣೆಯಲ್ಲಿ ಹಾಗು ಸಾರ್ವಜನಿಕ ಜಾಗೃತಿ ಮೂಡಿಸುವಲ್ಲಿ ಭಾರತದ ಯುವಜನತೆ ಬಹಳ ಪ್ರಮುಖವಾದಂತಹ ಪಾತ್ರವನ್ನು ನಿಭಾಯಿಸುತ್ತಿದ್ದಾರೆ.
ಇಂದೋರಿನ ಜವಾಬ್ದಾರಿಯುತ ಸಹೋದರಿಯರು ತ್ಯಾಜ್ಯ ನಿರ್ವಹಣೆಯನ್ನು ಬೇರೊಂದು ಮಟ್ಟಕ್ಕೆ ಕೊಂಡೊಯ್ದಿದ್ದಾರೆ ಎಂದು ನನಗೆ ತಿಳಿಸಲಾಗಿದೆ. ಇಂದೋರಿನ ಜನತೆ ತ್ಯಾಜ್ಯದ ಮರುಬಳಕೆ ಸೂಕ್ತವಾಗಿ ಆಗುವಂತೆ ತ್ಯಾಜ್ಯವನ್ನು ಆರು ಭಾಗಗಳಾಗಿ ವಿಂಗಡಿಸುತ್ತಾರೆ. ಯಾವುದೇ ನಗರದ ಜನರ ಈ ಕೆಲಸ ಮತ್ತು ಸ್ಪೂರ್ತಿ, ಉತ್ಸಾಹ ಸ್ವಚ್ಛ ಭಾರತ ಅಭಿಯಾನವನ್ನು ಯಶಸ್ವಿಗೊಳಿಸಲು ಬಹಳ ನೆರವಾಗುತ್ತದೆ. ಸ್ವಚ್ಛತೆ ಜೊತೆಗೆ ಮರು ಬಳಕೆಯ ಮೌಲ್ಯಗಳ ಸಶಕ್ತೀಕರಣ ದೇಶಕ್ಕೆ ಒಂದು ಸೇವೆ. ಇದು ಜೀವನದ (ಲೈಫ್) ತತ್ವಜ್ಞಾನ, ಅಂದರೆ ಪರಿಸರಕ್ಕಾಗಿ ಜೀವನ ವಿಧಾನ, ಅದುವೇ ಜೀವನದ ವಿಧಾನ.
ಸ್ನೇಹಿತರೇ,
ಈ ಕಾರ್ಯಕ್ರಮದ ಮೂಲಕ, ನಾನು ಇಂದೋರಿನ ಜೊತೆಗೆ ದೇಶಾದ್ಯಂತ ಇರುವ ಸ್ವಚ್ಛತಾ ಕಾರ್ಮಿಕರಿಗೆ ನನ್ನ ಕೃತಜ್ಝತೆಗಳನ್ನು ಸಲ್ಲಿಸಲು ಬಯಸುತ್ತೇನೆ. ಚಳಿಗಾಲವಿರಲಿ, ಬೇಸಿಗೆ ಇರಲಿ, ನೀವು ಬೆಳಿಗ್ಗೆ ಮುಂಜಾನೆ ಬಂದು ನಮ್ಮ ನಗರವನ್ನು ಸ್ವಚ್ಛಗೊಳಿಸುತ್ತೀರಿ. ಕೊರೊನಾದಂತಹ ಸಂಕಷ್ಟದ ಪರಿಸ್ಥಿತಿಯಲ್ಲೂ ನಿಮ್ಮ ಸೇವೆ ಹಲವಾರು ಜನರನ್ನು ಉಳಿಸುವಲ್ಲಿ ಸಹಾಯ ಮಾಡಿದೆ. ಈ ದೇಶವು ಪ್ರತಿಯೊಬ್ಬ ಸ್ವಚ್ಛತಾ ಕಾರ್ಮಿಕರಿಗೂ ಕೃತಜ್ಞತೆಯನ್ನು ಸಲ್ಲಿಸುತ್ತದೆ. ಕಸವನ್ನು ಎಲ್ಲೆಂದರಲ್ಲಿ ಬಿಸಾಡದೇ ಇರುವ ಮೂಲಕ ಮತ್ತು ನಿಯಮಗಳನ್ನು ಪಾಲಿಸುವ ಮೂಲಕ ನಮ್ಮ ನಗರಗಳನ್ನ್ನು ಸ್ವಚ್ಛವಾಗಿಟ್ಟುಕೊಂಡು ಆ ಮೂಲಕ ನಾವು ಅವರಿಗೆ ಸಹಾಯ ಮಾಡಬಹುದು.
ಪ್ರಯಾಗ್ ರಾಜ್ ನಲ್ಲಿ ನಡೆದ ಕುಂಭದಲ್ಲಿ ಇದೇ ಮೊದಲ ಬಾರಿಗೆ ಭಾರತದ ಕುಂಭ ಮೇಳಕ್ಕೆ ಹೊಸ ಗುರುತಿಸುವಿಕೆ ದೊರಕಿರುವುದನ್ನು ನಾನು ನೆನಪಿಸಿಕೊಳ್ಳುತ್ತೇನೆ. ಈ ಮೊದಲು ನಮ್ಮ ಕುಂಭ ಮೇಳದ ಗುರುತಿಸುವಿಕೆ ನಮ್ಮ ಸಂತರ ಸುತ್ತ ಸುತ್ತುತ್ತಿರುತ್ತಿತ್ತು. ಆದರೆ ಉತ್ತರಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಯೋಗೀ ಜೀ ಅವರ ನಾಯಕತ್ವದಲ್ಲಿ ನಡೆದ ಕುಂಭ ಮೇಳ ಇದೇ ಮೊದಲ ಬಾರಿಗೆ ಸ್ವಚ್ಛ ಕುಂಭವಾಗಿ ಗುರುತಿಸಲ್ಪಟ್ಟಿತು. ಇದು ಇಡೀ ಜಗತ್ತಿನಾದ್ಯಂತ ಚರ್ಚೆಯಾಯಿತು. ವಿಶ್ವದ ಪತ್ರಿಕೆಗಳು ಇದರ ಬಗ್ಗೆ ಬರೆದವು. ಇದು ನನ್ನ ಮನಸ್ಸಿನ ಮೇಲೆ ಬಹಳ ದೊಡ್ಡ ಧನಾತ್ಮಕ ಪರಿಣಾಮವನ್ನು ಬೀರಿತು. ಕುಂಭ ಮೇಳದಲ್ಲಿ ನಾನು ಪವಿತ್ರ ಸ್ನಾನ ಮಾಡಲು ಹೋದಾಗ ಸ್ವಚ್ಛತಾ ಕಾರ್ಮಿಕರ ಬಗ್ಗೆ ಬಹಳ ದೊಡ್ಡ ಕೃತಜ್ಞತೆಯ ಭಾವವನ್ನು ಹೊಂದಿದ್ದೆ. ನಾನು ಸ್ನಾನದ ಬಳಿಕ ಅವರ ಕಾಲುಗಳನ್ನು ತೊಳೆದಿದ್ದೆ ಮತ್ತು ಅವರನ್ನು ಗೌರವಿಸಿದ್ದೆ. ನಾನವರ ಆಶೀರ್ವಾದವನ್ನೂ ಪಡೆದಿದ್ದೆ.
ಇಂದು, ನಾನು ದಿಲ್ಲಿಯಿಂದ ಇಂದೋರಿನ ಪ್ರತಿಯೊಬ್ಬ ಸ್ವಚ್ಛತಾ ಸಹೋದರರು ಮತ್ತು ಸಹೋದರಿಯರಿಗೆ ನನ್ನ ಗೌರವದ ನಮಸ್ಕಾರಗಳನ್ನು ಸಲ್ಲಿಸುತ್ತೇನೆ. ನಾನವರಿಗೆ ಶಿರಬಾಗುತ್ತೇನೆ. ಕೊರೊನಾ ಅವಧಿಯಲ್ಲಿ ನೀವು ಈ ಸ್ವಚ್ಛತಾ ಆಂದೋಲನವನ್ನು ಮುಂದುವರೆಸಿಕೊಂಡು ಹೋಗಿರದಿದ್ದರೆ ನಾವು ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತಿತ್ತು. ಈ ದೇಶದ ಜನಸಾಮಾನ್ಯರನ್ನು ರಕ್ಷಿಸಿದುದಕ್ಕಾಗಿ ಮತ್ತು ಆತನು ವೈದ್ಯರ ಬಳಿಗೆ ಹೋಗಬೇಕಾದಂತಹ ಸ್ಥಿತಿ ನಿರ್ಮಾಣವಾಗದಂತೆ ಕಾಳಜಿವಹಿಸಿದುದಕ್ಕಾಗಿ ನಾನು ನಿಮಗೆಲ್ಲ ವಂದಿಸುತ್ತೇನೆ.
ಸಹೋದರರೇ ಮತ್ತು ಸಹೋದರಿಯರೇ,
ಇದರೊಂದಿಗೆ, ನಾನು ನನ್ನ ಭಾಷಣವನ್ನು ಮುಗಿಸುತ್ತೇನೆ. ಮತ್ತೊಮ್ಮೆ ಇಂದೋರಿನ ಜನತೆಗೆ ಅದರಲ್ಲೂ ಇಂದೋರಿನ ನನ್ನ ತಾಯಂದಿರು ಮತ್ತು ಸಹೋದರಿಯರು ಕಸವನ್ನು, ತ್ಯಾಜ್ಯವನ್ನು ಹೊರಗೆ ಎಸೆಯದೆ ಮತ್ತು ಅದನ್ನು ವಿಂಗಡಿಸಿ ನೀಡುತ್ತಿರುವ ಉಪಕ್ರಮಕ್ಕಾಗಿ ಅಭಿನಂದನೆಗೆ ಅರ್ಹರು. ಜೊತೆಗೆ ಮನೆಗಳಲ್ಲಿ ಯಾರಿಗೂ ಕಸ ಹೊರಗೆ ಎಸೆಯಲು ಅವಕಾಶ ನೀಡದಿರುವ ಮತ್ತು ಆ ಮೂಲಕ ದೇಶಾದ್ಯಂತ ನನ್ನ ಸ್ವಚ್ಛತಾ ಆಂದೋಲನವನ್ನು ಯಶಸ್ವಿಯಾಗಿಸಲು ಸಹಕಾರ ನೀಡಿದ ನನ್ನ “ಬಾಲ ಸೇನಾ” (ಮಕ್ಕಳ ಸೈನ್ಯ) ಕೂಡಾ ಶ್ಲಾಘನೀಯವಾದ ಕೆಲಸ ಮಾಡಿದೆ. ಮೂರು ಅಥವಾ ನಾಲ್ಕು ವರ್ಷದ ಮಕ್ಕಳು ತಮ್ಮ ಅಜ್ಜಂದಿರಿಗೆ ಕಸವನ್ನು ಹೊರಗೆ ಹರಡದಂತೆ ಹೇಳುತ್ತಾರೆ.”ನೀವು ಚಾಕಲೇಟ್ ತಿಂದರೆ ಅದರ ಪೇಪರ್ ತುಂಡನ್ನು ಎಲ್ಲೆಂದರಲ್ಲಿ ಬಿಸಾಡಬೇಡಿ”. ಬಾಲ ಸೇನಾದ ಪ್ರಯತ್ನಗಳು ನಮ್ಮ ಭಾರತದ ಭವಿಷ್ಯದ ನೆಲೆಗಟ್ಟನ್ನು ಬಲಪಡಿಸುತ್ತವೆ. ಅವರೆಲ್ಲರನ್ನೂ ಇಂದು ನಾನು ಹೃದಯಾಂತರಾಳದಿಂದ ಶ್ಲಾಘಿಸುತ್ತ, ಬಯೋ-ಸಿ.ಎನ್.ಜಿ. ಸ್ಥಾವರಕ್ಕಾಗಿ ನಿಮ್ಮೆಲ್ಲರನ್ನೂ ಅಭಿನಂದಿಸುತ್ತೇನೆ.
ಬಹಳ ಬಹಳ ಧನ್ಯವಾದಗಳು! ನಮಸ್ಕಾರ!