ನಮಃ ಪಾರ್ವತಿ ಪತಯೇ, ಹರ ಹರ ಮಹಾದೇವ್.. !
ಉತ್ತರ ಪ್ರದೇಶದ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ ಜೀ, ಉಪಮುಖ್ಯಮಂತ್ರಿ ಶ್ರೀ ಕೇಶವ್ ಪ್ರಸಾದ್ ಮೌರ್ಯಜಿ, ಗುಜರಾತ್ ವಿಧಾನಸಭೆಯ ಸ್ಪೀಕರ್ ಮತ್ತು ಬನಾಸ್ ಡೈರಿಯ ಮುಖ್ಯಸ್ಥ ಶ್ರೀ ಶಂಕರ್ ಭಾಯ್ ಚೌಧರಿಜಿ ಅವರೇ, ರೈತರಿಗೆ ವಿಶೇಷ ಉಡುಗೊರೆಗಳನ್ನು ನೀಡಲು ಅವರು ಇಂದು ಇಲ್ಲಿಗೆ ಬಂದಿದ್ದಾರೆ, ಸಚಿವರ ಸಂಪುಟದ ಸದಸ್ಯರೇ, ಶಾಸಕರೇ, ಗಣ್ಯರೇ ಮತ್ತು ವಾರಣಾಸಿಯ ನನ್ನ ಕುಟುಂಬದ ಸದಸ್ಯರೇ..!
ಬಾಬ ಶಿವ ಪವಿತ್ರ ಭೂಮಿಯಾದ ಕಾಶಿಯ ಎಲ್ಲ ಜನರಿಗೆ ನನ್ನ ನಮನಗಳು.
ನನ್ನ ಕಾಶಿಯ ಜನರ ಈ ಉತ್ಸಾಹವು ಈ ಚಳಿಗಾಲದಲ್ಲಿಯೂ ವಾತಾವರಣವನ್ನು ಬೆಚ್ಚಗಾಗಿಸಿದೆ. ವಾರಣಾಸಿಯಲ್ಲಿ ಹೀಗೆ ಹೇಳುತ್ತಾರೆ. ಜಿಯಾ ರಝ್ ಬನಾರಸ್!!! ಮೊದಲನೆಯದಾಗಿ, ಕಾಶಿಯ ಜನರ ವಿರುದ್ಧ ನನಗೆ ದೂರು ಇದೆ. ನಾನು ನನ್ನ ದೂರು ನೀಡಬಹುದೇ? ಈ ವರ್ಷ ದೇವ ದೀಪಾವಳಿಯಂದು ನಾನು ಇಲ್ಲಿ ಇರಲಿಲ್ಲ ಮತ್ತು ಈ ಬಾರಿಯ ದೇವ ದೀಪಾವಳಿಯಲ್ಲಿ ಕಾಶಿಯ ಜನರು ಒಟ್ಟಾಗಿ ಎಲ್ಲಾ ದಾಖಲೆಗಳನ್ನು ಅಳಿಸಿಹಾಕಿದರು.
ಎಲ್ಲವೂ ಚೆನ್ನಾಗಿರುವಾಗ ನಾನು ಏಕೆ ದೂರು ನೀಡುತ್ತಿದ್ದೇನೆಂದು ನಿಮ್ಮೆಲ್ಲರಿಗೂ ಆಶ್ಚರ್ಯವಾಗಬಹುದು. ನಾನು ದೂರುತ್ತಿದ್ದೇನೆ, ಏಕೆಂದರೆ ಎರಡು ವರ್ಷಗಳ ಹಿಂದೆ ದೇವ ದೀಪಾವಳಿಯಂದು ನಾನು ಇಲ್ಲಿಗೆ ಆಗಮಿಸಿದ್ದಾಗ ನೀವು ಅಂದಿನ ದಾಖಲೆಯನ್ನು ಸಹ ಮುರಿದಿದ್ದೀರಿ. ಇದೀಗ ಕುಟುಂಬದ ಸದಸ್ಯನಾಗಿ, ನಾನು ಖಂಡಿತ ದೂರು ನೀಡುತ್ತೇನೆ, ಏಕೆಂದರೆ ನಿಮ್ಮ ಶ್ರಮವನ್ನು ವೀಕ್ಷಿಸಲು ನಾನು ಈ ಬಾರಿ ಇಲ್ಲಿ ಇರಲಿಲ್ಲ. ಈ ಬಾರಿ ದೇವ ದೀಪಾವಳಿಯ ಅದ್ಭುತ ಆಚರಣೆಯನ್ನು ನೋಡಲು ಜನ ಬಂದಿದ್ದರು; ವಿದೇಶದ ಅತಿಥಿಗಳೂ ಸಹ ಬಂದಿದ್ದರು. ಅವರು ದೆಹಲಿಯ ಸಂಪೂರ್ಣ ಚಿತ್ರಣವನ್ನು ನನಗೆ ತಿಳಿಸಿದರು. ಜಿ-20ಯ ಅತಿಥಿಗಳಾಗಲಿ ಅಥವಾ ವಾರಣಾಸಿಗೆ ಬರುವ ಯಾವುದೇ ಅತಿಥಿಯಾಗಲಿ, ವಾರಣಾಸಿಯ ಜನರನ್ನು ಹೊಗಳಿದಾಗ ನನಗೂ ಹೆಮ್ಮೆ ಅನಿಸುತ್ತದೆ. ಕಾಶಿಯ ಜನರು ಮಾಡಿದ ಕಾರ್ಯವನ್ನು ಜಗತ್ತೇ ಕೊಂಡಾಡಿದಾಗ ನಾನು ಹೆಚ್ಚು ಸಂತೋಷ ಪಡುತ್ತೇನೆ. ಮಹಾದೇವನ ಕಾಶಿಗೆ ನನ್ನ ಸೇವೆಯನ್ನು ಸಲ್ಲಿಸಲು ನಾನು ಇಷ್ಟಪಡುತ್ತೇನೆ ಮತ್ತು ನಾನು ಇನ್ನೂ ಹೆಚ್ಚಿನದ್ದೇನನ್ನಾದರೂ ಮಾಡಬಹುದು ಎಂದು ಭಾವಿಸುತ್ತೇನೆ.
ನನ್ನ ಕುಟುಂಬದ ಸದಸ್ಯರೇ,
ಕಾಶಿ ಅಭಿವೃದ್ಧಿಯಾದರೆ ಉತ್ತರ ಪ್ರದೇಶವೂ ಅಭಿವೃದ್ಧಿಯಾಗುತ್ತದೆ. ಉತ್ತರಪ್ರದೇಶ ಅಭಿವೃದ್ಧಿಯಾದರೆ ದೇಶವೂ ಅಭಿವೃದ್ಧಿ ಹೊಂದುತ್ತದೆ. ಇಂದೂ ಸಹ ಅದೇ ಉತ್ಸಾಹದಿಂದ ಸುಮಾರು 20 ಸಾವಿರ ಕೋಟಿ ರೂಪಾಯಿಗಳ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆಯನ್ನು ನೆರವೇರಿಸಿದ್ದೇನೆ. ವಾರಣಾಸಿಯ ಗ್ರಾಮಗಳಲ್ಲಿ ಕುಡಿಯುವ ನೀರು ಪೂರೈಕೆ, ಬಿಎಚ್‌ಯು ಟ್ರಾಮಾ ಸೆಂಟರ್‌ನಲ್ಲಿ ಗಂಭೀರ ಆರೈಕೆ ಘಟಕ, ರಸ್ತೆಗಳು, ವಿದ್ಯುತ್, ಗಂಗಾ ಘಾಟ್, ರೈಲ್ವೆ, ವಿಮಾನ ನಿಲ್ದಾಣ, ಸೌರಶಕ್ತಿ ಮತ್ತು ಪೆಟ್ರೋಲಿಯಂನಂತಹ ಹಲವು ಕ್ಷೇತ್ರಗಳಿಗೆ ಸಂಬಂಧಿಸಿದ ಯೋಜನೆಗಳು ಈ ಪ್ರದೇಶದ ಅಭಿವೃದ್ಧಿಗೆ ಪ್ರಮುಖವಾಗಿವೆ ಮತ್ತು ನಾವು ಅಭಿವೃದ್ಧಿಯ ವೇಗವನ್ನು ಮತ್ತಷ್ಟು ಚುರುಕುಗೊಳಿಸುತ್ತೇವೆ. ನಿನ್ನೆ ಸಂಜೆ ಕಾಶಿ-ಕನ್ಯಾಕುಮಾರಿ ತಮಿಳು ಸಂಗಮಂ ರೈಲಿಗೆ ಹಸಿರು ನಿಶಾನೆ ತೋರುವ ಅವಕಾಶ ಸಿಕ್ಕಿತು. ಇಂದು ವಾರಣಾಸಿಯಿಂದ ದೆಹಲಿಗೆ ಮತ್ತೊಂದು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಆರಂಭವಾಗಿದೆ. ಮೌ-ದೋಹ್ರಿಘಾಟ್ ರೈಲು ಕೂಡ ಇಂದು ಆರಂಭವಾಗುತ್ತಿದೆ. ಈ ಮಾರ್ಗದ ಕಾರ್ಯಾರಂಭದೊಂದಿಗೆ, ದೋಹ್ರಿಘಾಟ್ ಹಾಗೂ ಬರ್ಹಲ್‌ಗಂಜ್, ಹಟಾ, ಗೋಲಾ-ಗಗಾಹಾದ ಎಲ್ಲರಿಗೂ ಪ್ರಯೋಜನವಾಗಲಿದೆ. ಈ ಎಲ್ಲಾ ಅಭಿವೃದ್ಧಿ ಯೋಜನೆಗಳಿಗಾಗಿ ನಾನು ನಿಮ್ಮೆಲ್ಲರನ್ನು ಅಭಿನಂದಿಸುತ್ತೇನೆ.
ನನ್ನ ಕುಟುಂಬದ ಸದಸ್ಯರೇ,
ಇಂದು ಕಾಶಿ ಸೇರಿದಂತೆ ಇಡೀ ದೇಶ ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣಕ್ಕೆ ಬದ್ಧವಾಗಿದೆ. ವಿಕಸಿತ ಭಾರತ ಸಂಕಲ್ಪ ಯಾತ್ರೆಯು ಸಾವಿರಾರು ಗ್ರಾಮಗಳನ್ನು ಮತ್ತು ಸಾವಿರಾರು ನಗರಗಳನ್ನು ತಲುಪಿದೆ. ಕೋಟಿಗಟ್ಟಲೆ ಜನರು ಈ ಪ್ರಯಾಣದೊಂದಿಗೆ ಸಂಪರ್ಕ ಹೊಂದಿದ್ದಾರೆ. ಇಲ್ಲಿ ಕಾಶಿಯಲ್ಲಿ ನನಗೂ ವಿಕಸಿತ ಭಾರತ ಸಂಕಲ್ಪ ಯಾತ್ರೆಯಲ್ಲಿ ಭಾಗಿಯಾಗಲು ಅವಕಾಶ ದೊರೆತಿದೆ. ಈ ಯಾತ್ರೆಯಲ್ಲಿ ಓಡುವ ವಾಹನವನ್ನು ‘ಮೋದಿಯವರ ಗ್ಯಾರಂಟಿ ವಾಹನ’ ಎಂದು ದೇಶವಾಸಿಗಳು ಕರೆಯುತ್ತಿದ್ದಾರೆ. ಮೋದಿ ಅವರ ಗ್ಯಾರಂಟಿ ನಿಮಗೆಲ್ಲ ಗೊತ್ತಿದೆಯಲ್ಲವೇ? ಯಾವುದೇ ಫಲಾನುಭವಿಗಳು ಕೇಂದ್ರ ಸರ್ಕಾರದ ಬಡವರ ಕಲ್ಯಾಣ ಮತ್ತು ಸಾರ್ವಜನಿಕ ಕಲ್ಯಾಣಕ್ಕಾಗಿ ಇರುವ ವಿವಿಧ ಯೋಜನೆಗಳಿಂದ ವಂಚಿತರಾಗದಂತೆ ನಾವು ಖಾತ್ರಿಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಮೊದಲು ಬಡವರು ಸೌಲಭ್ಯಗಳಿಗಾಗಿ ಸರ್ಕಾರದ ಮೊರೆ ಹೋಗುತ್ತಿದ್ದರು. ಈಗ ಮೋದಿ ಸರ್ಕಾರವೇ ಬಡವರ ಬಳಿ ಹೋಗುತ್ತಿದೆ ಎಂದು ಹೇಳಿದ್ದಾರೆ. ಹಾಗಾಗಿ ಮೋದಿಯವರ ಗ್ಯಾರಂಟಿ ವಾಹನ ಸೂಪರ್ ಹಿಟ್ ಆಗಿದೆ. ಕಾಶಿಯಲ್ಲೂ ಈ ಹಿಂದೆ ವಂಚಿತರಾಗಿದ್ದ ಸಾವಿರಾರು ಹೊಸ ಫಲಾನುಭವಿಗಳು ಇದೀಗ ಸರ್ಕಾರದ ಯೋಜನೆಗಳ ಲಾಭ ಪಡೆದುಕೊಳ್ಳುತ್ತಿದ್ದಾರೆ. ಕೆಲವರಿಗೆ ಆಯುಷ್ಮಾನ್ ಕಾರ್ಡ್, ಕೆಲವರಿಗೆ ಉಚಿತ ಪಡಿತರ ಚೀಟಿ, ಇಲ್ಲವೇ ಪಕ್ಕಾ ಮನೆ ಗ್ಯಾರಂಟಿ, ಕೆಲವರಿಗೆ ಕೊಳಾಯಿ ನೀರಿನ ಸಂಪರ್ಕ, ಕೆಲವರಿಗೆ ಉಚಿತ ಅಡುಗೆ ಅನಿಲ ಸಂಪರ್ಕ ಸಿಕ್ಕಿದೆ. ಯಾವುದೇ ಫಲಾನುಭವಿ ವಂಚಿತರಾಗದಂತೆ ನೋಡಿಕೊಳ್ಳುವುದು ನಮ್ಮ ಪ್ರಯತ್ನ; ಪ್ರತಿಯೊಬ್ಬರೂ ತಮ್ಮ ಹಕ್ಕುಗಳನ್ನು ಪಡೆಯಬೇಕು. ಮತ್ತು ಈ ಅಭಿಯಾನದಿಂದ ಜನರು ಗಳಿಸಿದ ಪ್ರಮುಖ ವಿಷಯವೆಂದರೆ ನಂಬಿಕೆ. ಯೋಜನೆಗಳ ಲಾಭ ಪಡೆದವರು ಈಗ ತಮ್ಮ ಜೀವನ ಉತ್ತಮಗೊಳ್ಳುವ ವಿಶ್ವಾಸವನ್ನು ಹೊಂದುತ್ತಿದ್ದಾರೆ. ವಂಚಿತರಾದವರಿಗೆ ಮುಂದೊಂದು ದಿನ ಯೋಜನೆಗಳ ಲಾಭ ಸಿಗಲಿದೆ ಎಂಬ ವಿಶ್ವಾಸ ಮೂಡಿದೆ. ಈ ನಂಬಿಕೆಯು 2047ರ ವೇಳೆಗೆ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿದೆ ಎಂಬ ದೇಶದ ವಿಶ್ವಾಸ ವೃದ್ಧಿಸುವಂತೆ ಮಾಡಿದೆ.
ಅಲ್ಲದೆ, ನಾಗರಿಕರ ಜೊತೆಗೆ ನನಗೂ ಲಾಭವಾಗುತ್ತಿದೆ. ಎರಡು ದಿನಗಳಿಂದ ಈ ಸಂಕಲ್ಪ ಯಾತ್ರೆ ಕೈಗೊಂಡು ನಾಗರಿಕರನ್ನು ಭೇಟಿಯಾಗುತ್ತಿದ್ದೇನೆ. ನಿನ್ನೆ ಶಾಲಾ ಮಕ್ಕಳನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತು. ಎಂತಹ ಆತ್ಮವಿಶ್ವಾಸ ಅವರಲ್ಲಿತ್ತು ಗೊತ್ತಾ! ಹುಡುಗಿಯರು ಎಂತಹ ಸುಂದರ ಕವಿತೆಗಳನ್ನು ಹೇಳುತ್ತಿದ್ದರು; ಕೆಲವರು ವಿಜ್ಞಾನವನ್ನು ವಿವರಿಸುತ್ತಿದ್ದರು ಮತ್ತು ಅಂಗನವಾಡಿಯ ಮಕ್ಕಳು ಹಾಡುಗಳನ್ನು ಹೇಳುವ ಮೂಲಕ ನಮ್ಮನ್ನು ಅದ್ಧೂರಿಯಾಗಿ ಸ್ವಾಗತಿಸುತ್ತಿದ್ದರು. ನನಗೆ ಅತೀವ್ರ ಆನಂದವಾಗುತ್ತಿದೆ! ಇಂದು ನಾನು ನಮ್ಮ ಸಹೋದರಿಯರಾದ ಚಂದಾದೇವಿಯ ಭಾಷಣವನ್ನು ಕೇಳಿದೆ. ಅವರ ಭಾಷಣ ಅದ್ಭುತವಾಗಿತ್ತು! ಕೆಲವು ದಿಗ್ಗಜರು ಕೂಡ ಅಂತಹ ಭಾಷಣವನ್ನು ಮಾಡಲು ಸಾಧ್ಯವಿಲ್ಲ ಎಂದು ನಾನು ಹೇಳಲು ಬಯಸುತ್ತೇನೆ. ಆಕೆ ಎಲ್ಲಾ ವಿಷಯಗಳನ್ನು ವಿವರವಾಗಿ ವಿವರಿಸುತ್ತಿದ್ದಳು, ಆದ್ದರಿಂದ ನಾನು ಕೆಲವು ಪ್ರಶ್ನೆಗಳನ್ನು ಕೇಳಿದೆ. ಆ ಪ್ರಶ್ನೆಗಳಿಗೆ ಅಕೆಯ ಬಳಿ ಉತ್ತರವೂ ಇತ್ತು ಮತ್ತು ಆಕೆ ನಮ್ಮ ಲಕ್ಷಪತಿ ದೀದಿಯಾಗಿದ್ದಾರೆ ಮತ್ತು ಅವಳು ಲಕ್ಷಪತಿ ದೀದಿಯಾದ ಕಾರಣ ನಾನು ಅಕೆಯನ್ನು ಶ್ಲಾಘಿಸಿದಾಗ, ಆಕೆ ಸರ್, ನಮ್ಮ ಗುಂಪಿನಲ್ಲಿ ಇತರ 3-4 ಸಹೋದರಿಯರು ಕೂಡ ಲಕ್ಷಪತಿಗಳಾಗಿದ್ದಾರೆ ಎಂದು ಹೇಳಿದರು ಮತ್ತು ಅವರು ಎಲ್ಲರನ್ನೂ ಲಕ್ಷಪತಿಗಳನ್ನಾಗಿ ಮಾಡಲು ಸಂಕಲ್ಪ ಮಾಡಿದ್ದಾರೆ. ಆದ್ದರಿಂದ, ಈ ಸಂಕಲ್ಪ ಯಾತ್ರೆಯ ಮೂಲಕ ಸಮಾಜದೊಳಗೆ ಅಪಾರ ಸಾಮರ್ಥ್ಯ ಹೊಂದಿರುವ ನಮ್ಮ ಜನರನ್ನು ನಾವು ಕಂಡಿದ್ದೇವೆ. ನಮ್ಮ ತಾಯಂದಿರು, ಸಹೋದರಿಯರು, ಹೆಣ್ಣುಮಕ್ಕಳು ಮತ್ತು ಮಕ್ಕಳು ಸಂಪೂರ್ಣ ಸಾಮರ್ಥ್ಯದಿಂದ ಕೂಡಿದ್ದಾರೆ. ಅವರು ಕ್ರೀಡೆಯಲ್ಲಿ ಮತ್ತು ಜ್ಞಾನದ ವಿಷಯದಲ್ಲಿ ಬುದ್ಧಿವಂತರು. ಸಂಕಲ್ಪ ಯಾತ್ರೆ ನನಗೆ ಈ ಎಲ್ಲಾ ವಿಷಯಗಳನ್ನು ವೈಯಕ್ತಿಕವಾಗಿ ನೋಡಲು, ಅರ್ಥಮಾಡಿಕೊಳ್ಳಲು, ತಿಳಿದುಕೊಳ್ಳಲು ಮತ್ತು ಅನುಭವಿಸಲು ದೊಡ್ಡ ಅವಕಾಶವನ್ನು ನೀಡಿದೆ. ಅದಕ್ಕಾಗಿಯೇ ನಾನು ಸಾರ್ವಜನಿಕ ಜೀವನದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರಿಗೂ ಹೇಳುವುದೇನೆಂದರೆ, ಈ ವಿಕಸಿತ ಭಾರತ ಸಂಕಲ್ಪ ಯಾತ್ರೆಯು ನಮ್ಮಂತಹವರಿಗೆ ಶಿಕ್ಷಣದ ಸಂಚಾರಿ ವಿಶ್ವವಿದ್ಯಾಲಯವಾಗಿದೆ. ನಾವು ಬಹಳಷ್ಟು ಕಲಿಯುತ್ತೇವೆ. ನಾನು 2 ದಿನಗಳಲ್ಲಿ ಸಾಕಷ್ಟು ಕಲಿತಿದ್ದೇನೆ; ನಾನು ವಿವಿಧ ವಿಷಯಗಳನ್ನು ಅರ್ಥಮಾಡಿಕೊಂಡಿದ್ದೇನೆ. ಇಂದು ನಾನು ಆಶೀರ್ವಾದ ಪಡೆದಿದ್ದೇನೆ.
ನನ್ನ ಕುಟುಂಬದ ಸದಸ್ಯರೇ,
ಕಹಲ್ ಜಲ: ಕಾಶಿ ಕಭೂ ನ ಛಡಿಯೇ, ವಿಶ್ವನಾಥ ದರ್ಬಾರ್. ಕಾಶಿಯಲ್ಲಿ ಜೀವನ ನಡೆಸುವುದು ಸುಲಭಗೊಳಿಸುವುದರ ಜೊತೆಗೆ, ನಮ್ಮ ಸರ್ಕಾರವು ಕಾಶಿಯಲ್ಲಿ ಸಂಪರ್ಕವನ್ನು ಸುಧಾರಿಸಲು ಹೆಚ್ಚಿನ ಪ್ರಮಾಣದಲ್ಲಿ ಶ್ರಮಿಸುತ್ತಿದೆ. ಹಳ್ಳಿಗಳಿರಲಿ ಅಥವಾ ನಗರ ಪ್ರದೇಶಗಳಿರಲಿ, ಅಲ್ಲಿ ಅತ್ಯುತ್ತಮ ಸಂಪರ್ಕ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇಂದು ಇಲ್ಲಿ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದ ಯೋಜನೆಗಳು ಕಾಶಿಯ ಅಭಿವೃದ್ಧಿಗೆ ಮತ್ತಷ್ಟು ವೇಗ ನೀಡಲಿವೆ. ಸುತ್ತಮುತ್ತಲಿನ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಹಲವು ರಸ್ತೆಗಳೂ ಇವೆ. ಶಿವಪುರ್-ಫುಲ್ವಾರಿಯಾ-ಲಹರ್ತಾರಾ ರಸ್ತೆ ಮತ್ತು ರಸ್ತೆ-ಮೇಲ್ಸೇತುವೆ ನಿರ್ಮಾಣವು ಸಮಯ ಮತ್ತು ಇಂಧನ ಎರಡನ್ನೂ ಉಳಿಸುತ್ತದೆ. ನಗರದ ದಕ್ಷಿಣ ಭಾಗದಿಂದ ಬಬತ್‌ಪುರ ವಿಮಾನ ನಿಲ್ದಾಣಕ್ಕೆ ತೆರಳುವವರಿಗೂ ಈ ಯೋಜನೆಯು ಹೆಚ್ಚು ಸಹಕಾರಿಯಾಗಲಿದೆ.
ನನ್ನ ಕುಟುಂಬದ ಸದಸ್ಯರೇ,
ಕಾಶಿಯ ಉದಾಹರಣೆಯಿಂದ ನಾವು ಆಧುನಿಕ ಸಂಪರ್ಕ ಮತ್ತು ಸೌಂದರ್ಯೀಕರಣದಿಂದ ಆಗುತ್ತಿರುವ ಬದಲಾವಣೆಗಳನ್ನು ನಾವು ಕಾಣುತ್ತಿದ್ದೇವೆ. ಹೆಮ್ಮೆಯ ಕಾಶಿ ಪ್ರಮುಖ ಯಾತ್ರಾ ಕೇಂದ್ರವಾಗಿದೆ ಮತ್ತು ದಿನೇ ದಿನೆ ಆಧ್ಯಾತ್ಮಿಕ ಕೇಂದ್ರವಾಗುತ್ತಿದೆ. ಇಲ್ಲಿ ಪ್ರವಾಸೋದ್ಯಮ ನಿರಂತರವಾಗಿ ವಿಸ್ತರಣೆಯಾಗುತ್ತಿದೆ ಮತ್ತು ಪ್ರವಾಸೋದ್ಯಮದ ಮೂಲಕ ಸಾವಿರಾರು ಹೊಸ ಉದ್ಯೋಗಗಳು ಕಾಶಿಯಲ್ಲಿ ಸೃಷ್ಟಿಯಾಗುತ್ತಿವೆ. ಶ್ರೀ ಕಾಶಿ ವಿಶ್ವನಾಥ ಧಾಮದ ವೈಭವದ ಉದ್ಘಾಟನೆ ನಂತರ ಈವರರೆಗೆ ಸುಮಾರು 13 ಕೋಟಿ ಜನರು ಬಾಬ ವಿಶ್ವನಾಥನ ದರ್ಶನ ಪಡೆದಿದ್ದಾರೆ. ಬನಾರಸ್ ಗೆ ಆಗಮಿಸುವ ಭಕ್ತರು ಮತ್ತು ಪ್ರವಾಸಿಗರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಪ್ರವಾಸಿಗರು ಭೇಟಿ ನೀಡಿದರೆ ಅವರು ಏನಾದರೊಂದು ಬಿಟ್ಟು ಹೋಗುತ್ತಾರೆ. ಪ್ರತಿಯೊಬ್ಬ ಪ್ರವಾಸಿಯೂ ಕಾಶಿಯಲ್ಲಿ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ 100 ರೂ, 200 ರೂ, 1000 ರೂ, 5000 ರೂ.ಗಳನ್ನು ಖರ್ಚು ಮಾಡುತ್ತಾರೆ. ಆ ಹಣ ನಿಮ್ಮ ಜೇಬಿಗೆ ಹೋಗುತ್ತದೆ. ನಾವು ಮೊದಲು ನಮ್ಮ ದೇಶದ ಕನಿಷ್ಠ 15 ನಗರಗಳಿಗೆ ಭೇಟಿ ನೀಡಬೇಕು, ನಂತರ ಬೇರೆಡೆಗೆ ಹೋಗುವ ಬಗ್ಗೆ ಆಲೋಚಿಸಬೇಕೆಂದು ಕೆಂಪು ಕೋಟೆಯ ಮೇಲಿಂದ ನಾನು ಹೇಳಿದ್ದು ನಿಮಗೆ ನೆನಪಿರಬಹುದು. ಈ ಹಿಂದೆ ಸಿಂಗಾಪುರ ಅಥವಾ ದುಬೈಗೆ ಭೇಟಿ ನೀಡಲು ಯೋಚಿಸುತ್ತಿದ್ದ ಜನರು ಇದೀಗ ಮೊದಲು ತಮ್ಮ ದೇಶವನ್ನು ಶೋಧಿಸಲು ಹೋಗುತ್ತಿದ್ದಾರೆ ಮತ್ತು ತಮ್ಮ ಮಕ್ಕಳಿಗೆ ಮೊದಲು ನಮ್ಮ ದೇಶವನ್ನು ಹೋಗಿ ನೋಡಿ ಎಂದು ಹೇಳುತ್ತಿರುವುದು ನನಗೆ ಖುಷಿ ತಂದಿದೆ. ವಿದೇಶದಲ್ಲಿ ವ್ಯಯಿಸುತ್ತಿದ್ದ ಹಣ ಈಗ ಅವರದ್ದೇ ದೇಶದಲ್ಲೇ ಖರ್ಚು ಮಾಡಲಾಗುತ್ತಿದೆ.
ಮತ್ತು ನನ್ನ ಸಹೋದರ-ಸಹೋದರಿಯರೇ,
ಪ್ರವಾಸೋದ್ಯಮ ವೃದ್ಧಿಯಾದಾಗ ಎಲ್ಲರೂ ಗಳಿಕೆ ಮಾಡುತ್ತಾರೆ. ಪ್ರವಾಸಿಗರು ವಾರಣಾಸಿಗೆ ಭೇಟಿ ನೀಡಿದಾಗ, ಹೋಟೆಲ್‌ನವರೂ ಹಣ ಸಂಪಾದಿಸುತ್ತಿದ್ದಾರೆ. ವಾರಣಾಸಿಗೆ ಬರುವ ಪ್ರತಿಯೊಬ್ಬ ಪ್ರವಾಸಿಗರು ಪ್ರವಾಸಿ-ಟ್ಯಾಕ್ಸಿ ನಿರ್ವಾಹಕರು, ನಮ್ಮ ದೋಣಿ ನಡೆಸುವವರು ಮತ್ತು ನಮ್ಮ ರಿಕ್ಷಾ ಎಳೆಯುವವರಿಗೆ ಸ್ವಲ್ಪ ಆದಾಯ ಬರುತ್ತದೆ. ಇಲ್ಲಿ ಪ್ರವಾಸೋದ್ಯಮ ವೃದ್ಧಿಯಾಗಿರುವುದರಿಂದ ಎಲ್ಲಾ ಸಣ್ಣ ಮತ್ತು ದೊಡ್ಡ ಅಂಗಡಿಗಳವರು ಅಪಾರ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ. ಸರಿ, ಒಂದು ವಿಷಯ ಹೇಳಿ, ಗೋಡೋಲಿಯಾದಿಂದ ಲಂಕಾಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಿದೆಯೇ ಅಥವಾ ಇಲ್ಲವೇ?
ಮಿತ್ರರೇ,
ಕಾಶಿಯ ಜನರ ಆದಾಯ ವೃದ್ಧಿಸಲು, ಇಲ್ಲಿನ ಪ್ರವಾಸಿಗರಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸಲು ನಮ್ಮ ಸರ್ಕಾರ ಅಹರ್ನಿಶಿ ಶ್ರಮಿಸುತ್ತಿದೆ. ಇಂದು ವಾರಣಾಸಿಯಲ್ಲಿ ಸ್ಮಾರ್ಟ್ ಸಿಟಿ ಮಿಷನ್ ಅಡಿಯಲ್ಲಿ ಕಾಶಿ ದರ್ಶನಕ್ಕೆ ಏಕೀಕೃತ ಪ್ರವಾಸಿ ಪಾಸ್ ವ್ಯವಸ್ಥೆ ಆರಂಭಿಸಲಾಗಿದೆ. ಇದರೊಂದಿಗೆ ಪ್ರವಾಸಿಗರು ಬೇರೆ ಬೇರೆ ಸ್ಥಳಗಳಿಗೆ ಹೋಗಲು ಪ್ರತ್ಯೇಕ ಟಿಕೆಟ್ ಖರೀದಿಸುವ ಅಗತ್ಯವಿಲ್ಲ. ಕೇವಲ ಒಂದು ಪಾಸ್‌ನಿಂದ ಎಲ್ಲೆಡೆ ಪ್ರವೇಶ ಸಾಧ್ಯವಿದೆ.
ಮಿತ್ರರೇ,
ಕಾಶಿಯಲ್ಲಿ ಏನು ನೋಡಬೇಕು ಎಂಬುದರ ಕುರಿತು ದೇಶ ಮತ್ತು ಜಗತ್ತಿನ ಪ್ರವಾಸಿಗರಿಗೆ ಅಂತಹ ಎಲ್ಲಾ ಮಾಹಿತಿಯನ್ನು ಒದಗಿಸಲು ವಾರಣಾಸಿಯ ಪ್ರವಾಸಿ ವೆಬ್‌ಸೈಟ್ ಕಾಶಿಯನ್ನು ಸಹ ಆರಂಭಿಸಲಾಗಿದೆ; ಕಾಶಿಯಲ್ಲಿ ತಿನ್ನಲು ಮತ್ತು ಕುಡಿಯಲು ಪ್ರಸಿದ್ಧವಾದ ಸ್ಥಳಗಳು ಯಾವುವು; ಇಲ್ಲಿ ಮನರಂಜನೆ ಮತ್ತು ಐತಿಹಾಸಿಕ ಪ್ರಾಮುಖ್ಯತೆಯ ಸ್ಥಳಗಳು ಯಾವುವು. ಈಗ ಹೊರಗಿಂದ ಬಂದವವರಿಗೆ ಇದು ಮಲಯೋ ಋತುಮಾನವೋ ಅಥವಾ ಚಳಿಗಾಲದ ಬಿಸಿಲಿನಲ್ಲಿ ಚೌರ ಮಾತುರ್ ಖುಷಿಯೋ ಹೇಗೆ ಗೊತ್ತಾಗುತ್ತೆ? ಆ ವ್ಯಕ್ತಿಗೆ ಹೇಗೆ ತಿಳಿಯುತ್ತದೆ? ಗೋಡೋಲಿಯಾ ಚಾಟ್ ಅಥವಾ ರಾಮ್ ನಗರದ ಲಸ್ಸಿಯೇ ಆಗಿರಲಿ, ಈ ಎಲ್ಲಾ ಮಾಹಿತಿಯನ್ನು ಈಗ ಕಾಶಿ ವೆಬ್‌ಸೈಟ್‌ನಲ್ಲಿ ಕಾಣಬಹುದು
ಮಿತ್ರರೇ,
ಇಂದು ಗಂಗಾ ನದಿಯ ಹಲವಾರು ಘಾಟ್‌ಗಳ ನವೀಕರಣ ಕಾರ್ಯವೂ ಆರಂಭವಾಗಿದೆ. ಆಧುನಿಕ ಬಸ್ ನಿಲ್ದಾಣಗಳು ಅಥವಾ ವಿಮಾನ ನಿಲ್ದಾಣ ಮತ್ತು ರೈಲು ನಿಲ್ದಾಣದಲ್ಲಿ ಆಧುನಿಕ ಸೌಕರ್ಯಗಳನ್ನು ನಿರ್ಮಿಸಲಾಗಿದೆ, ಇದು ವಾರಣಾಸಿಗೆ ಬರುವ ಜನರ ಅನುಭವವನ್ನು ಮತ್ತಷ್ಟು ಹೆಚ್ಚಿಸುತ್ತದೆ.
ನನ್ನ ಕುಟುಂಬದ ಸದಸ್ಯರೇ,
ಕಾಶಿ ಸೇರಿದಂತೆ ದೇಶದ ರೈಲು ಸಂಪರ್ಕಕ್ಕೆ ಇಂದು ನಿರ್ಣಾಯಕ ದಿನ. ರೈಲು ಸಂಚಾರದ ವೇಗವನ್ನು ಹೆಚ್ಚಿಸಲು ದೇಶದಲ್ಲಿ ಬೃಹತ್ ಅಭಿಯಾನ ನಡೆಯುತ್ತಿದೆ ಎಂಬುದು ನಿಮಗೆ ಚೆನ್ನಾಗಿ ತಿಳಿದಿದೆ. ಸರಕು ರೈಲುಗಳಿಗಾಗಿ ಪೂರ್ವ ಮತ್ತು ಪಶ್ಚಿಮದಲ್ಲಿ ಸರಕು ಸಾಗಣೆಗೆ ಮೀಸಲಾದ ಕಾರಿಡಾರ್‌ಗಳ ನಿರ್ಮಾಣದೊಂದಿಗೆ, ರೈಲ್ವೆಯ ಚಿತ್ರಣವೇ ಸಂಪೂರ್ಣ ಬದಲಾಗುತ್ತಿದೆ. ಅದಕ್ಕೆ ನಿಟ್ಟಿನಲ್ಲಿ ಇಂದು ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್ ಮತ್ತು ನ್ಯೂ ಭೌಪುರ್ ಜಂಕ್ಷನ್ ನಡುವಿನ ವಿಭಾಗವನ್ನು ಉದ್ಘಾಟಿಸಲಾಗಿದೆ. ಇದು ಪೂರ್ವ ಭಾರತದಿಂದ ಉತ್ತರಪ್ರದೇಶಕ್ಕೆ ಕಲ್ಲಿದ್ದಲು ಮತ್ತು ಇತರ ಕಚ್ಚಾ ವಸ್ತುಗಳನ್ನು ಸಾಗಿಸಲು ಸುಲಭವಾಗುತ್ತದೆ. ಇದು ಕಾಶಿ ಪ್ರದೇಶದ ಕೈಗಾರಿಕೆಗಳಲ್ಲಿ ತಯಾರಿಸಿದ ಸರಕುಗಳನ್ನು ಮತ್ತು ರೈತರ ಉತ್ಪನ್ನಗಳನ್ನು ಪೂರ್ವ ಭಾರತ ಮತ್ತು ವಿದೇಶಗಳಿಗೆ ಸಾಗಣೆ ಮಾಡು ಸಾಕಷ್ಟು ಸಹಾಯ ಮಾಡುತ್ತದೆ.
ಮಿತ್ರರೇ,
ಬನಾರಸ್ ರೈಲ್ವೇ ಇಂಜಿನ್ ಫ್ಯಾಕ್ಟರಿಯಲ್ಲಿ ತಯಾರಿಸಲಾದ 10,000ನೇ ಎಂಜಿನ್ ಅನ್ನು ಇಂದು ಕಾರ್ಯಾಚರಣೆಗೆ ಒಳಪಡಿಸಲಾಗಿದೆ. ಇದು 'ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್' ನಿಟ್ಟಿನಲ್ಲಿ ನಮ್ಮ ಬದ್ಧತೆ ಮತ್ತಷ್ಟು ಬಲಪಡಿಸುತ್ತದೆ. ಉತ್ತರ ಪ್ರದೇಶದ ವಿವಿಧ ಭಾಗಗಳಲ್ಲಿ ಕೈಗಾರಿಕೀಕರಣಕ್ಕೆ ಒತ್ತು ನೀಡಲು ಕೈಗೆಟುಕುವ ಮತ್ತು ಸಾಕಷ್ಟು ವಿದ್ಯುತ್ ಮತ್ತು ಅನಿಲದ ಲಭ್ಯತೆ ಅತ್ಯಗತ್ಯ. ಡಬಲ್ ಇಂಜಿನ್ ಸರ್ಕಾರದ ಪ್ರಯತ್ನಗಳಿಂದಾಗಿ ಉತ್ತರಪ್ರದೇಶ ಸೌರಶಕ್ತಿ ವಲಯದಲ್ಲಿ ಕ್ಷಿಪ್ರ ಪ್ರಗತಿಯನ್ನು ಸಾಧಿಸುತ್ತಿದೆ ಎಂಬುದನ್ನು ತಿಳಿಸಲು ನನಗೆ ಹರ್ಷವಾಗುತ್ತಿದೆ. ಚಿತ್ರಕೂಟದಲ್ಲಿ 800 ಮೆಗಾವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ಪಾರ್ಕ್ ಸ್ಥಾಪನೆ ಉತ್ತರಪ್ರದೇಶದಲ್ಲಿ ಸಾಕಷ್ಟು ವಿದ್ಯುತ್ ಒದಗಿಸುವ ನಮ್ಮ ಬದ್ಧತೆ ಬಲಪಡಿಸುತ್ತದೆ. ಇದರಿಂದ ಹಲವು ಉದ್ಯೋಗಾವಕಾಶಗಳು ಸೃಷ್ಟಿಯಾಗುವುದರ ಜೊತೆಗೆ ಸಮೀಪದ ಗ್ರಾಮಗಳ ಅಭಿವೃದ್ಧಿಗೂ ಉತ್ತೇಜನ ದೊರಕಲಿದೆ. ಸೌರಶಕ್ತಿಯ ಜೊತೆಗೆ, ಉತ್ತರ ಪ್ರದೇಶದ ಪೂರ್ವ ಭಾಗದಲ್ಲಿ ಪೆಟ್ರೋಲಿಯಂಗೆ ಸಂಬಂಧಿಸಿದ ಪ್ರಬಲ ಜಾಲವನ್ನು ಸಹ ಅಭಿವೃದ್ಧಿಪಡಿಸಲಾಗುತ್ತಿದೆ. ದಿಯೋರಿಯಾ ಮತ್ತು ಮಿರ್ಜಾಪುರದಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ಈ ಸೌಲಭ್ಯಗಳು ಪೆಟ್ರೋಲ್-ಡೀಸೆಲ್, ಬಯೋ-ಸಿಎನ್‌ಜಿ ಮತ್ತು ಎಥೆನಾಲ್ ಸಂಸ್ಕರಣೆಗೂ ಸಹಕಾರಿಯಾಗಲಿವೆ.
ನನ್ನ ಕುಟುಂಬದ ಸದಸ್ಯರೇ,
ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣಕ್ಕಾಗಿ, ದೇಶದ ಮಹಿಳಾ ಶಕ್ತಿ, ಯುವ ಶಕ್ತಿ, ರೈತರು ಮತ್ತು ಪ್ರತಿಯೊಬ್ಬ ಬಡವರನ್ನು ಅಭಿವೃದ್ಧಿಪಡಿಸುವುದು ಅತಿ ಮುಖ್ಯ. ಈ ನಾಲ್ಕು ವಿಭಾಗಗಳು ನನಗೆ ಅತ್ಯಂತ ಪ್ರಮುಖ ವರ್ಗಗಳಾಗಿವೆ. ಈ ನಾಲ್ಕು ವರ್ಗಗಳು ಬಲಿಷ್ಠವಾದರೆ ಇಡೀ ದೇಶವೇ ಬಲಿಷ್ಠವಾಗುತ್ತದೆ. ಮನಸ್ಸಿನಲ್ಲಿ ಆ ಆಲೋಚನೆಯೊಂದಿಗೆ ನಮ್ಮ ಸರ್ಕಾರ ರೈತರ ಹಿತರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಪಿಎಂ ಕಿಸಾನ್ ಸಮ್ಮಾನ್ ನಿಧಿ ಮೂಲಕ ಈವರೆಗೆ ದೇಶದ ಪ್ರತಿಯೊಬ್ಬ ರೈತರ ಬ್ಯಾಂಕ್ ಖಾತೆಗೆ 30 ಸಾವಿರ ರೂ. ಹಣ ಜಮೆ ಮಾಡಲಾಗಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿರದ ಸಣ್ಣ ರೈತರಿಗೂ ಈ ಸೌಲಭ್ಯವನ್ನು ನೀಡಲಾಗುತ್ತಿದೆ. ನಮ್ಮ ಸರ್ಕಾರ ಸಾವಯವ ಕೃಷಿಗೆ ಒತ್ತು ನೀಡುವುದರ ಜೊತೆಗೆ ರೈತರಿಗಾಗಿ ಆಧುನಿಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುತ್ತಿದೆ. ಈ ನಡೆಯುತ್ತಿರುವ ವಿಕಸಿತ ಭಾರತ ಸಂಕಲ್ಪ ಯಾತ್ರೆಯಲ್ಲಿ, ಎಲ್ಲಾ ರೈತರು ಡ್ರೋಣ್ ಗಳನ್ನು ನೋಡಿ ತುಂಬಾ ಉತ್ಸುಕರಾಗುತ್ತಿದ್ದಾರೆ. ಈ ಡ್ರೋಣ್ ಗಳು ನಮ್ಮ ಕೃಷಿ ವ್ಯವಸ್ಥೆಯ ಭವಿಷ್ಯವನ್ನು ರೂಪಿಸಲಿವೆ. ಕೀಟನಾಶಕ ಮತ್ತು ರಸಗೊಬ್ಬರ ಎರಡನ್ನೂ ಸಿಂಪಡಿಸುವುದು ಸುಲಭವಾಗುತ್ತದೆ. ಇದಕ್ಕಾಗಿ ಸರ್ಕಾರ ‘ನಮೋ ದ್ರೋಣ್ ದೀದಿ’ ಅಭಿಯಾನವನ್ನೂ ಆರಂಭಿಸಿದೆ. ಹಳ್ಳಿಗಳಲ್ಲಿ ಜನರು ಇದನ್ನು “ನಮೋ ದೀದಿ’’ ಎಂದು ಕರೆಯುತ್ತಾರೆ. ಈ ಅಭಿಯಾನದಡಿಯಲ್ಲಿ, ಸ್ವ-ಸಹಾಯ ಗುಂಪುಗಳಿಗೆ ಸಂಬಂಧಿಸಿದ ಸಹೋದರಿಯರಿಗೆ ಡ್ರೋಣ್ ಗಳನ್ನು ನಿರ್ವಹಿಸಲು ತರಬೇತಿ ನೀಡಲಾಗುತ್ತಿದೆ. ಕಾಶಿಯ ಸಹೋದರಿಯರು, ಹೆಣ್ಣುಮಕ್ಕಳು ಕೂಡ ಡ್ರೋಣ್ ಕ್ಷೇತ್ರದಲ್ಲಿ ತಮ್ಮ ಛಾಪು ಮೂಡಿಸುವ ದಿನಗಳು ದೂರವಿಲ್ಲ.
ಮಿತ್ರರೇ,
ನಿಮ್ಮೆಲ್ಲರ ಪ್ರಯತ್ನದಿಂದಾಗಿ ವಾರಣಾಸಿಯಲ್ಲಿ ಆಧುನಿಕ ಬನಾಸ್ ಡೈರಿ ಘಟಕ ಅಥವಾ ಅಮುಲ್ ನಿರ್ಮಾಣವು ತ್ವರಿತ ಗತಿಯಲ್ಲಿ ನಡೆಯುತ್ತಿದ್ದು, ಬಹುಶಃ ಒಂದೂವರೆ ತಿಂಗಳಲ್ಲಿ ಕೆಲಸ ಪೂರ್ಣಗೊಳ್ಳಲಿದೆ ಎಂದು ಶಂಕರ್ ಭಾಯ್ ಹೇಳುತ್ತಿದ್ದರು. ಬನಾಸ್ ಡೈರಿ ವಾರಣಾಸಿಯಲ್ಲಿ 500 ಕೋಟಿ ರೂ.ಗೂ ಅಧಿಕ ಹೂಡಿಕೆ ಮಾಡುತ್ತಿದೆ. ಈ ಡೈರಿಯು ಹಸುಗಳ ಸಂವರ್ಧನೆಗಾಗಿ ಅಭಿಯಾನವನ್ನೂ ನಡೆಸುತ್ತಿದೆ, ಇದರಿಂದ ಹಾಲಿನ ಉತ್ಪಾದನೆಯು ಮತ್ತಷ್ಟು ಹೆಚ್ಚಾಗಲಿದೆ. ಬನಾಸ್ ಡೈರಿ ರೈತರಿಗೆ ವರದಾನವಾಗಿದೆ. ಬನಾಸ್ ಡೈರಿ ಘಟಕಗಳು ಈಗಾಗಲೇ ಲಖನೌ ಮತ್ತು ಕಾನ್ಪುರದಲ್ಲಿ ಕಾರ್ಯಾರಂಭ ಮಾಡಿವೆ. ಈ ವರ್ಷ, ಬನಾಸ್ ಡೈರಿ ಉತ್ತರಪ್ರದೇಶದ 4000 ಕ್ಕೂ ಅಧಿಕ ಗ್ರಾಮಗಳ ರೈತರಿಗೆ 1000 ಕೋಟಿ ರೂ. ಅಧಿಕ ಹಣವನ್ನು ಪಾವತಿ ಮಾಡಿದೆ. ಈ ಕಾರ್ಯದಲ್ಲಿ ಮತ್ತೊಂದು ಮಹತ್ವದ ಕೆಲಸವನ್ನು ಇಲ್ಲಿ ಮಾಡಲಾಗಿದೆ. ಬನಾಸ್ ಡೈರಿ ಇಂದು ಉತ್ತರಪ್ರದೇಶದ ಹಾಲು ಉತ್ಪಾದಕ ರೈತರ ಬ್ಯಾಂಕ್ ಖಾತೆಗಳಿಗೆ 100 ಕೋಟಿ ರೂ. ಲಾಭಾಂಶವನ್ನು ಠೇವಣಿ ಮಾಡಿದೆ. ಈ ಸವಲತ್ತು ಪಡೆದ ಎಲ್ಲ ರೈತರನ್ನು ನಾನು ಅಭಿನಂದಿಸುತ್ತೇನೆ.
ನನ್ನ ಕುಟುಂಬದ ಸದಸ್ಯರೇ,
ಕಾಶಿಯಲ್ಲಿ ಹರಿಯುತ್ತಿರುವ ಅಭಿವೃದ್ಧಿಯ ಈ ಅಮೃತವು ಈ ಇಡೀ ಪ್ರದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ. ಪೂರ್ವಾಂಚಲದ ಈ ಇಡೀ ಪ್ರದೇಶವು ದಶಕಗಳಿಂದ ನಿರ್ಲಕ್ಷಿಸಲ್ಪಟ್ಟಿದೆ. ಆದರೆ ಮಹಾದೇವನ ಆಶೀರ್ವಾದದಿಂದ ಈಗ ಮೋದಿ ನಿಮ್ಮ ಸೇವೆಯಲ್ಲಿ ತೊಡಗಿದ್ದಾರೆ. ಇನ್ನು ಕೆಲವೇ ತಿಂಗಳುಗಳಲ್ಲಿ ದೇಶಾದ್ಯಂತ ಚುನಾವಣೆ ಇದೆ. ಮೋದಿ ಅವರು ತಮ್ಮ ಮೂರನೇ ಇನ್ನಿಂಗ್ಸ್‌ನಲ್ಲಿ ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯನ್ನಾಗಿ ಮಾಡುವುದಾಗಿ ದೇಶಕ್ಕೆ ಗ್ಯಾರಂಟಿ ನೀಡಿದ್ದಾರೆ. ನಾನು ಇಂದು ದೇಶಕ್ಕೆ ಈ ಗ್ಯಾರಂಟಿ ನೀಡುತ್ತಿದ್ದೇನೆ ಎಂದಾದರೆ ಅದಕ್ಕೆ ನನ್ನ ಕಾಶಿಯ ಜನರೇ ಕಾರಣ. ನೀವು ಸದಾ ನನ್ನೊಂದಿಗೆ ನಿಲ್ಲುತ್ತೀರಿ, ನನ್ನ ನಿರ್ಣಯಗಳನ್ನು ಬಲಪಡಿಸುತ್ತೀರಿ.
ಬನ್ನಿ ಮತ್ತೊಮ್ಮೆ ಇಲ್ಲಿ ಎಲ್ಲರೂ ನಿಮ್ಮ ಕೈಗಳನ್ನು ಎತ್ತಿ ಮತ್ತು ಹೇಳಿ- ನಮಃ ಪಾರ್ವತಿ ಪತಯೇ, ಹರ ಹರ ಮಹಾದೇವ್ ಎಂದು.
ನನ್ನ ಹೃದಯಪೂರ್ವಕ ಅಭಿನಂದನೆಗಳು..!