ವಿಶ್ವಕರ್ಮ ಜಯಂತಿಯ ಸಂದರ್ಭದಲ್ಲಿ ಸಾಂಪ್ರದಾಯಿಕ ಕುಶಲಕರ್ಮಿಗಳು ಮತ್ತು ಕರಕುಶಲಿಗಳಿಗಾಗಿ ‘ಪ್ರಧಾನಮಂತ್ರಿ ವಿಶ್ವಕರ್ಮ’ ಯೋಜನೆಗೆ ಚಾಲನೆ
ಪಿಎಂ ವಿಶ್ವಕರ್ಮ ಲೋಗೋ, ಘೋಷವಾಕ್ಯ 'ಸಮ್ಮಾನ್, ಸಾಮರ್ಥ್ಯ, ಸಮೃದ್ಧಿ' ಮತ್ತು ಪೋರ್ಟಲ್ ಬಿಡುಗಡೆ ಮಾಡಿದ ಪ್ರಧಾನಮಂತ್ರಿ
ನಿರ್ದಿಷ್ಟವಾಗಿ ರೂಪಿಸಿದ ಸ್ಟ್ಯಾಂಪ್ ಶೀಟ್ ಮತ್ತು ಟೂಲ್‌ಕಿಟ್ ಬುಕ್‌ಲೆಟ್ ಬಿಡುಗಡೆ
18 ಫಲಾನುಭವಿಗಳಿಗೆ ವಿಶ್ವಕರ್ಮ ಪ್ರಮಾಣ ಪತ್ರಗಳ ವಿತರಣೆ
"ನಾನು 'ಯಶೋಭೂಮಿ'ಯನ್ನು ದೇಶದ ಪ್ರತಿಯೊಬ್ಬ ಕೆಲಸಗಾರನಿಗೆ, ಪ್ರತಿಯೊಬ್ಬ ವಿಶ್ವಕರ್ಮನಿಗೆ ಅರ್ಪಿಸುತ್ತೇನೆ"
"ವಿಶ್ವಕರ್ಮರನ್ನು ಗುರುತಿಸುವುದು ಮತ್ತು ಬೆಂಬಲಿಸುವುದು ಇಂದಿನ ಅಗತ್ಯವಾಗಿದೆ"
"ಹೊರಗುತ್ತಿಗೆ ಕೆಲಸವು ನಮ್ಮ ವಿಶ್ವಕರ್ಮ ಸ್ನೇಹಿತರಿಗೆ ಬರಬೇಕು ಮತ್ತು ಅವರು ಜಾಗತಿಕ ಪೂರೈಕೆ ಸರಪಳಿಯ ನಿರ್ಣಾಯಕ ಭಾಗವಾಗಬೇಕು"
"ಈ ಬದಲಾಗುತ್ತಿರುವ ಕಾಲದಲ್ಲಿ, ವಿಶ್ವಕರ್ಮ ಸ್ನೇಹಿತರಿಗೆ ತರಬೇತಿ, ತಂತ್ರಜ್ಞಾನ ಮತ್ತು ಉಪಕರಣಗಳು ಪ್ರಮುಖವಾಗಿವೆ"
"ಸ್ಥಳೀಯತೆಗೆ ಆದ್ಯತೆ ನೀಡುವುದು ಇಡೀ ದೇಶದ ಜವಾಬ್ದಾರಿ"
"ಇಂದಿನ ವಿಕಸಿತ ಭಾರತವು ಪ್ರತಿಯೊಂದು ಕ್ಷೇತ್ರದಲ್ಲೂ ತನಗಾಗಿ ಹೊಸ ಗುರುತನ್ನು ರೂಪಿಸಿಕೊಳ್ಳುತ್ತಿದೆ"
“ಯಶೋಭೂಮಿಯಿಂದ ಸಂದೇಶವು ಗಟ್ಟಿಯಾಗಿದೆ ಮತ್ತು ಸ್ಪಷ್ಟವಾಗಿದೆ. ಇಲ್ಲಿ ನಡೆಯುವ ಯಾವುದೇ ಕಾರ್ಯಕ್ರಮವು ಯಶಸ್ಸು ಮತ್ತು ಖ್ಯಾತಿಯನ್ನು ಪಡೆಯುತ್ತವೆ”
"ಭಾರತ ಮಂಟಪ ಮತ್ತು ಯಶೋಭೂಮಿ ಕೇಂದ್ರವು ದೆಹಲಿಯನ್ನು ಸಮಾವೇಶ ಪ್ರವಾಸೋದ್ಯಮದ ಅತಿದೊಡ್ಡ ಕೇಂದ್ರವನ್ನಾಗಿ ಮಾಡಲಿದೆ"
"ಭಾರತ ಮಂಟಪ ಮತ್ತು ಯಶೋಭೂಮಿ ಎರಡೂ ಭಾರತೀಯ ಸಂಸ್ಕೃತಿ ಮತ್ತು ಅತ್ಯಾಧುನಿಕ ಸೌಲಭ್ಯಗಳ ಸಂಗಮವಾಗಿವೆ ಮತ್ತು ಈ ಭವ್ಯವಾದ ವ್ಯವಸ್ಥೆಗಳು ವಿಶ್ವದ ಮುಂದೆ ಭಾರತದ ಕಥೆಯನ್ನು ಪ್ರಸ್ತುತಪಡಿಸುತ್ತವೆ"
"ನಮ್ಮ ವಿಶ್ವಕರ್ಮ ಸಹೋದ್ಯೋಗಿಗಳು ಮೇಕ್ ಇನ್ ಇಂಡಿಯಾದ ಹೆಮ್ಮೆಯಾಗಿದ್ದಾರೆ ಮತ್ತು ಈ ಹೆಮ್ಮೆಯನ್ನು ಜಗತ್ತಿಗೆ ಪ್ರದರ್ಶಿಸಲು ಈ ಅಂತಾರಾಷ್ಟ್ರೀಯ ಸಮಾವೇಶ ಕೇಂದ್ರ ಮಾಧ್ಯಮವಾಗಲಿದೆ"
ಇದಕ್ಕೂ ಮೊದಲು, ದೆಹಲಿ ವಿಮಾನ ನಿಲ್ದಾಣ ಮೆಟ್ರೋ ಎಕ್ಸ್‌ಪ್ರೆಸ್ ದ್ವಾರಕಾ ಸೆಕ್ಟರ್ 21 ರಿಂದ ಹೊಸ ಮೆಟ್ರೋ ಸ್ಟೇಷನ್ 'ಯಶೋಭೂಮಿ ದ್ವಾರಕಾ ಸೆಕ್ಟರ್ 25' ವರೆಗಿನ ಮಾರ್ಗವನ್ನು ಪ್ರಧಾನಿ ಉದ್ಘಾಟಿಸಿದರು

 

ಭಾರತ್ ಮಾತಾ ಕಿ - ಜೈ!

ಭಾರತ್ ಮಾತಾ ಕಿ - ಜೈ!

ಭಾರತ್ ಮಾತಾ ಕಿ - ಜೈ!

ಕೇಂದ್ರ ಸಚಿವ ಸಂಪುಟದ ನನ್ನ ಎಲ್ಲಾ ಸಹೋದ್ಯೋಗಿಗಳೆ, ದೇಶದ ಮೂಲೆ ಮೂಲೆಗಳಿಂದ ಆಗಮಿಸಿ, ಈ ಭವ್ಯ ಕಟ್ಟಡದಲ್ಲಿ ಸೇರಿರುವ ಆತ್ಮೀಯ ಸಹೋದರ ಸಹೋದರಿಯರೆ, 70ಕ್ಕಿಂತ ಹೆಚ್ಚಿನ ನಗರಗಳಿಂದ ಈ ಕಾರ್ಯಕ್ರಮಕ್ಕೆ ಸೇರಿರುವ ನನ್ನ ಸಹನಾಗರಿಕರೆ, ಇತರೆ ಗಣ್ಯ ಅತಿಥಿಗಳೆ ಮತ್ತು ನನ್ನ ಕುಟುಂಬ ಸದಸ್ಯರೆ!

ಇಂದು ವಿಶ್ವಕರ್ಮರ ಜಯಂತಿ ಆಚರಣೆ. ಈ ದಿನವನ್ನು ನಮ್ಮ ಸಾಂಪ್ರದಾಯಿಕ ಕುಶಲಕರ್ಮಿಗಳಿಗೆ ಸಮರ್ಪಿಸಲಾಗಿದೆ. ನಾಡಿನ ಸಮಸ್ತ ಜನತೆಗೆ ವಿಶ್ವಕರ್ಮ ಜಯಂತಿಯಂದು ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸುತ್ತೇನೆ. ಈ ದಿನ ದೇಶಾದ್ಯಂತ ಇರುವ ಲಕ್ಷಾಂತರ ವಿಶ್ವಕರ್ಮ ಸ್ನೇಹಿತರನ್ನು ಸಂಪರ್ಕಿಸಲು ಅವಕಾಶ ಸಿಕ್ಕಿರುವುದು ನನಗೆ ಸಂತಸ ತಂದಿದೆ. ಸ್ವಲ್ಪ ಸಮಯದ ಹಿಂದೆ, ನಾನು ನನ್ನ ಅನೇಕ ವಿಶ್ವಕರ್ಮ ಸಹೋದರ ಸಹೋದರಿಯರೊಂದಿಗೆ ಮಾತುಕತೆ ನಡೆಸಿದ್ದೆ. ನಾನು ಇಲ್ಲಿಗೆ ಬರಲು ತಡವಾಗಲು ಕಾರಣವೆಂದರೆ ನಾನು ಅವರೊಂದಿಗೆ ಮಾತನಾಡುವುದರಲ್ಲಿ ಮಗ್ನನಾಗಿದ್ದೆ ಮತ್ತು ವಸ್ತು ಪ್ರದರ್ಶನವು ತುಂಬಾ ಸೊಗಸಾಗಿದೆ, ನನಗೆ ಹೊರಡಲು ಮನಸ್ಸಾಗಲಿಲ್ಲ. ನಿಮ್ಮೆಲ್ಲರಿಗೂ ನನ್ನ ಶ್ರದ್ಧಾಪೂರ್ವಕ ವಿನಂತಿ ಎಂದರೆ ನೀವು ಸಹ ವಸ್ತು ಪ್ರದರ್ಶನಕ್ಕೆ ತಪ್ಪದೆ ಭೇಟಿ ನೀಡಿ. ಇದು ಇನ್ನೂ 2-3 ದಿನಗಳ ಕಾಲ ಅದು ಮುಂದುವರಿಯುತ್ತದೆ. ಆದ್ದರಿಂದ ದೆಹಲಿಯ ನಿವಾಸಿಗಳು ಅಲ್ಲಿಗೆ ಭೇಟಿ ನೀಡುವುದನ್ನು ಖಚಿತಪಡಿಸಿಕೊಳ್ಳಬೇಕೆಂದು ನಾನು ವಿಶೇಷವಾಗಿ ಒತ್ತಾಯಿಸುತ್ತೇನೆ.

ಸ್ನೇಹಿತರೆ,

ಭಗವಾನ್ ವಿಶ್ವಕರ್ಮರ ಆಶೀರ್ವಾದದೊಂದಿಗೆ, ಇಂದು ಪ್ರಧಾನ ಮಂತ್ರಿಗಳ ವಿಶ್ವಕರ್ಮ ಯೋಜನೆ ಪ್ರಾರಂಭವಾಗಿದೆ. ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯು ತಮ್ಮ ಕೈಗಳಿಂದ ಕೌಶಲ್ಯದಿಂದ ಕೆಲಸ ಮಾಡುವ ಮತ್ತು ಸಾಂಪ್ರದಾಯಿಕ ಆಚರಣೆಗಳನ್ನು ಅನುಸರಿಸುವ ಲಕ್ಷಾಂತರ ಕುಟುಂಬಗಳಿಗೆ ಭರವಸೆಯ ಆಶಾಕಿರಣವಾಗಿ ಬರುತ್ತಿದೆ.

ನನ್ನ ಬಾಂಧವರೆ,

ಈ ಯೋಜನೆಯೊಂದಿಗೆ, ಇಂದು ದೇಶವು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರವನ್ನು ಸಹ ಪಡೆದುಕೊಂಡಿದೆ - ಯಶೋಭೂಮಿ. ಇಲ್ಲಿ ನಡೆದಿರುವ ಕೆಲಸಗಳು ನನ್ನ ವಿಶ್ವಕರ್ಮ ಬಾಂಧವರಾದ ನನ್ನ ಕಾರ್ಮಿಕ ಸಹೋದರ ಸಹೋದರಿಯರ ಸಮರ್ಪಣೆ ಮತ್ತು ಶ್ರಮವನ್ನು ಪ್ರತಿಬಿಂಬಿಸುತ್ತದೆ. ಇಂದು ನಾನು ಯಶೋಭೂಮಿಯನ್ನು ದೇಶದ ಪ್ರತಿಯೊಬ್ಬ ಕಾರ್ಯಕರ್ತನಿಗೆ, ಪ್ರತಿಯೊಬ್ಬ ವಿಶ್ವಕರ್ಮ ಒಡನಾಡಿಗೆ ಅರ್ಪಿಸುತ್ತೇನೆ. ನಮ್ಮ ವಿಶ್ವಕರ್ಮ ಸಂಗಡಿಗರಲ್ಲಿ ಗಣನೀಯ ಸಂಖ್ಯೆಯವರು ಕೂಡ ಯಶೋಭೂಮಿಯ ಫಲಾನುಭವಿಗಳಾಗಲಿದ್ದಾರೆ. ಇಂದು ಈ ಕಾರ್ಯಕ್ರಮದಲ್ಲಿ ವೀಡಿಯೊ ಮೂಲಕ ನಮ್ಮೊಂದಿಗೆ ಸೇರಿಕೊಂಡ ಸಾವಿರಾರು ವಿಶ್ವಕರ್ಮ ಸಂಗಡಿಗರಿಗೆ, ನಾನು ವಿಶೇಷವಾಗಿ ಈ ಸಂದೇಶ ತಿಳಿಸಲು ಬಯಸುತ್ತೇನೆ. ನೀವು ಹಳ್ಳಿಗಳಲ್ಲಿ ಏನು ರೂಪಿಸುತ್ತೀರಿ, ನೀವು ಅಭ್ಯಾಸ ಮಾಡುವ ಕಲೆ, ನೀವು ತೊಡಗಿಸಿಕೊಂಡಿರುವ ಕರಕುಶಲತೆ, ಈ ರೋಮಾಂಚಕ ಕೇಂದ್ರವು ಅದನ್ನು ಜಗತ್ತಿಗೆ ಪ್ರದರ್ಶಿಸಲು ಪ್ರಬಲ ಮಾಧ್ಯಮವಾಗಲಿದೆ. ಇದು ನಿಮ್ಮ ಕಲೆ, ನಿಮ್ಮ ಕೌಶಲ್ಯ ಮತ್ತು ನಿಮ್ಮ ಕಲಾತ್ಮಕತೆಯನ್ನು ಜಗತ್ತಿಗೆ ಪ್ರದರ್ಶಿಸುತ್ತದೆ. ಭಾರತದ ಸ್ಥಳೀಯ ಉತ್ಪನ್ನಗಳನ್ನು ಜಾಗತಿಕವಾಗಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ.

ನನ್ನ ಬಾಂಧವರೆ,

ನಮ್ಮ ಧರ್ಮಗ್ರಂಥಗಳಲ್ಲಿ, 'ಯೋ ವಿಶ್ವಂ ಜಗತಂ ಕರೋತ್ಯೇಸೇ ಸ ವಿಶ್ವಕರ್ಮಾ' ಎಂದು ಹೇಳಲಾಗಿದೆ, ಅಂದರೆ ಇಡೀ ಜಗತ್ತನ್ನು ಸೃಷ್ಟಿಸುವ ಅಥವಾ ಅದಕ್ಕೆ ಸಂಬಂಧಿಸಿದ ನಿರ್ಮಾಣ ಕಾರ್ಯದಲ್ಲಿ ತೊಡಗಿರುವವನು 'ವಿಶ್ವಕರ್ಮ.' ಸಾವಿರಾರು ವರ್ಷಗಳಿಂದ ಭಾರತದ ಅಭ್ಯುದಯಕ್ಕೆ ಅಡಿಪಾಯ ಹಾಕಿದ ಆ ಬಾಂಧವರೇ ನಮ್ಮ ವಿಶ್ವಕರ್ಮರು. ನಮ್ಮ ದೇಹದಲ್ಲಿ ನಮ್ಮ ಬೆನ್ನುಮೂಳೆ ಹೇಗೆ ನಿರ್ಣಾಯಕ ಪಾತ್ರ ವಹಿಸುತ್ತದೆಯೋ, ಹಾಗೆಯೇ ಈ ವಿಶ್ವಕರ್ಮ ಬಾಂಧವರು ನಮ್ಮ ಸಾಮಾಜಿಕ ಜೀವನದಲ್ಲಿ ಬಹಳ ಮಹತ್ವದ ಪಾತ್ರ ವಹಿಸುತ್ತಾರೆ. ನಮ್ಮ ವಿಶ್ವಕರ್ಮ ಬಾಂಧವರು ಅಂತಹ ಕೆಲಸ ಮತ್ತು ಕೌಶಲ್ಯಗಳೊಂದಿಗೆ ಸಂಬಂಧ ಹೊಂದಿದ್ದಾರೆ, ಅದು ಇಲ್ಲದೆ ದೈನಂದಿನ ಜೀವನ ಊಹಿಸಲೂ ಸಾಧ್ಯವಿಲ್ಲ. ನೋಡಿ ನಮ್ಮ ಕೃಷಿ ಪದ್ಧತಿಯಲ್ಲಿ ಅಕ್ಕಸಾಲಿಗನಿಲ್ಲದೆ ಬೇಸಾಯ ಮಾಡಲು ಸಾಧ್ಯವೇ? ಸಾಧ್ಯವೇ ಇಲ್ಲ. ಹಳ್ಳಿಗಳಲ್ಲಿ ಪಾದರಕ್ಷೆ ತಯಾರಿಸುವವರು, ಕೂದಲು ಕತ್ತರಿಸುವವರು ಮತ್ತು ಬಟ್ಟೆಗಳ ಟೈಲರಿಂಗ್ ಮಾಡುವವರು ಅವರ ಪ್ರಾಮುಖ್ಯತೆ ಎಂದಿಗೂ ಕಡಿಮೆಯಾಗುವುದಿಲ್ಲ. ರೆಫ್ರಿಜರೇಟರ್‌ಗಳ ಯುಗದಲ್ಲೂ ಜನರು ಇನ್ನೂ ಮಣ್ಣಿನ ಪಾತ್ರೆಗಳು ಮತ್ತು ಮಣ್ಣಿನ ಹೂಜಿಗಳ ನೀರನ್ನು ಕುಡಿಯಲು ಬಯಸುತ್ತಾರೆ. ಜಗತ್ತು ಎಷ್ಟೇ ಮುಂದುವರಿದರೂ, ತಂತ್ರಜ್ಞಾನವು ಎಲ್ಲೆಡೆ ತಲುಪಿದರೂ, ಅವರ ಪಾತ್ರ ಮತ್ತು ಮಹತ್ವ ಯಾವಾಗಲೂ ಉಳಿಯುತ್ತದೆ. ಆದ್ದರಿಂದ, ಈ ವಿಶ್ವಕರ್ಮ ಬಾಂಧವರನ್ನು  ಗುರುತಿಸುವುದು ಮತ್ತು ಸಾಧ್ಯವಿರುವ ಎಲ್ಲ ರೀತಿಯಲ್ಲಿ ಬೆಂಬಲಿಸುವುದು ಇಂದಿನ ಅಗತ್ಯವಾಗಿದೆ.

ಸ್ನೇಹಿತರೆ,

ನಮ್ಮ ವಿಶ್ವಕರ್ಮ ಸಹೋದರ ಸಹೋದರಿಯರ ಘನತೆ, ಸಾಮರ್ಥ್ಯ ಮತ್ತು ಏಳಿಗೆ ಹೆಚ್ಚಿಸಲು ನಮ್ಮ ಸರ್ಕಾರ ಇಂದು ಪಾಲುದಾರನಾಗಿ ಮುಂದೆ ಬಂದಿದೆ. ಈ ಯೋಜನೆಯಲ್ಲಿ, ವಿಶ್ವಕರ್ಮ ಬಾಂಧವರು ನಿರ್ವಹಿಸುವ 18 ವಿವಿಧ ರೀತಿಯ ಕೆಲಸಗಳ ಮೇಲೆ ಗಮನ ಕೇಂದ್ರೀಕರಿಸಲಾಗಿದೆ. ಈ 18 ವಿವಿಧ ರೀತಿಯ ಕೆಲಸಗಳಲ್ಲಿ ತೊಡಗಿರುವ ಜನರಿಲ್ಲದ ಯಾವುದೇ ಹಳ್ಳಿಯೂ ಇರುವುದಿಲ್ಲ. ಅವರಲ್ಲಿ ಮರದಿಂದ ಕೆಲಸ ಮಾಡುವ ಬಡಗಿಗಳು, ಮರದ ಆಟಿಕೆಗಳನ್ನು ಮಾಡುವ ಕುಶಲಕರ್ಮಿಗಳು, ಕಬ್ಬಿಣದಿಂದ ಕೆಲಸ ಮಾಡುವ ಅಕ್ಕಸಾಲಿಗರು, ಆಭರಣಗಳನ್ನು ತಯಾರಿಸುವ ಅಕ್ಕಸಾಲಿಗರು, ಮಣ್ಣಿನಿಂದ ಕೆಲಸ ಮಾಡುವ ಕುಂಬಾರರು, ಶಿಲ್ಪಿಗಳು, ಶೂ ತಯಾರಕರು, ಟೈಲರ್ ಗಳು, ಕೇಶ ವಿನ್ಯಾಸಕರು, ಲಾಂಡ್ರಿ ಕೆಲಸಗಾರರು, ಬಟ್ಟೆ ನೇಯುವವರು, ಹೂಮಾಲೆ ಮಾಡುವವರು, ಮೀನುಗಾರಿಕೆ ಬಲೆ ತಯಾರಕರು, ದೋಣಿ ಕಟ್ಟುವವರು ಇತ್ಯಾದಿ ಹಲವಾರು.  ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಅಡಿ, ಕೇಂದ್ರ ಸರ್ಕಾರ 13,000 ಕೋಟಿ ರೂಪಾಯಿ ಖರ್ಚು ಮಾಡಲಿದೆ.

ನನ್ನ ಬಾಂಧವರೆ,

ಸುಮಾರು 30-35 ವರ್ಷಗಳ ಹಿಂದೆ, ನಾನು ಒಮ್ಮೆ ಯುರೋಪ್ ನ ಬ್ರಸೆಲ್ಸ್‌ಗೆ ಭೇಟಿ ನೀಡಿದ್ದೆ. ನಾನು ಅಲ್ಲಿ ತಂಗಿದ್ದ ಸಮಯದಲ್ಲಿ, ನನ್ನ ಆತಿಥೇಯರು ನನ್ನನ್ನು ಅಲ್ಲಿನ ಆಭರಣ ಪ್ರದರ್ಶನಕ್ಕೆ ಕರೆದೊಯ್ದರು. ಕುತೂಹಲದಿಂದ ನಾನು ಅವರನ್ನು ಕೇಳಿದೆ, ಅಂತಹ ವಸ್ತುಗಳಿಗೆ ಅಲ್ಲಿನ ಮಾರುಕಟ್ಟೆ ಹೇಗಿದೆ ಎಂದು. ಯಂತ್ರದಿಂದ ತಯಾರಿಸಿದ ಆಭರಣಗಳಿಗೆ ಕಡಿಮೆ ಬೇಡಿಕೆಯಿದೆ ಮತ್ತು ಜನರು ಹೆಚ್ಚು ದುಬಾರಿಯಾದರೂ ಕೈಯಿಂದ ಮಾಡಿದ ಆಭರಣಗಳನ್ನು ಖರೀದಿಸಲು ಬಯಸುತ್ತಾರೆ ಎಂದು ಅವರು ನನಗೆ ಹೇಳಿದರು. ನನಗೆ ಆಶ್ಚರ್ಯವಾಯಿತು. ನೀವು ಉತ್ತಮವಾಗಿ ತಯಾರಿಸುವ ವಸ್ತುಗಳಿಗೆ ಜಗತ್ತಿನಲ್ಲಿ ಬೇಡಿಕೆ ಹೆಚ್ಚುತ್ತಿದೆ. ಇತ್ತೀಚಿನ ದಿನಗಳಲ್ಲಿ, ದೊಡ್ಡ ಕಂಪನಿಗಳು ಸಹ ತಮ್ಮ ಉತ್ಪಾದನೆಯನ್ನು ಸಣ್ಣ ಕಂಪನಿಗಳಿಗೆ ಹೊರಗುತ್ತಿಗೆ ನೀಡುವುದನ್ನು ನಾವು ನೋಡುತ್ತೇವೆ. ಇದು ವಿಶ್ವಾದ್ಯಂತ ಬೃಹತ್ ಉದ್ಯಮವಾಗಿದೆ. ಹೊರಗುತ್ತಿಗೆ ಕೆಲಸ ನಮ್ಮ ವಿಶ್ವಕರ್ಮ ಬಾಂಧವರಿಗೂ ಬರುತ್ತದೆ. ನೀವು ಪೂರೈಕೆ ಸರಪಳಿಯ ಭಾಗವಾಗುವಂತೆ ಮಾಡಲು ನಾವು ಆ ದಿಕ್ಕಿನಲ್ಲಿ ಸಾಗುತ್ತಿದ್ದೇವೆ. ನಿಮ್ಮ ಪರಿಣತಿ, ನೈಪುಣ್ಯ ಹಿಡಿದಿಡಲು ಪ್ರಮುಖ ಅಂತಾರಾಷ್ಟ್ರೀಯ ಕಂಪನಿಗಳು ನಿಮ್ಮ ಮನೆ ಬಾಗಿಲು ತಟ್ಟುವಂತೆ ನೀವು ತುಂಬಾ ಪರಿಣಾಮಕಾರಿ ಆಗಿರಬೇಕೆಂದು ನಾವು ಬಯಸುತ್ತೇವೆ. ಆದ್ದರಿಂದ, ಈ ಯೋಜನೆಯು ನಮ್ಮ ವಿಶ್ವಕರ್ಮ ಬಾಂಧವರನ್ನು ಆಧುನಿಕ ಯುಗಕ್ಕೆ ತರಲು ಮತ್ತು ಅವರ ಸಾಮರ್ಥ್ಯವನ್ನು ಹೆಚ್ಚಿಸುವ ಪ್ರಯತ್ನವಾಗಿದೆ.

ಸ್ನೇಹಿತರೆ,

ಬದಲಾಗುತ್ತಿರುವ ಈ ಸಮಯದಲ್ಲಿ, ನಮ್ಮ ವಿಶ್ವಕರ್ಮ ಸಹೋದರ ಸಹೋದರಿಯರಿಗೆ ತರಬೇತಿ, ತಂತ್ರಜ್ಞಾನ ಮತ್ತು ಉಪಕರಣಗಳು ಅತ್ಯಗತ್ಯ. ವಿಶ್ವಕರ್ಮ ಯೋಜನೆ ಮೂಲಕ ನಿಮ್ಮೆಲ್ಲರಿಗೂ ತರಬೇತಿ ನೀಡಲು ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದೆ. ತರಬೇತಿಯ ಸಮಯದಲ್ಲಿ, ನೀವು ಸರ್ಕಾರದಿಂದ 500 ರೂಪಾಯಿ ದೈನಂದಿನ ಭತ್ಯೆ ಪಡೆಯುತ್ತೀರಿ, ಏಕೆಂದರೆ ನೀವು ಪ್ರತಿದಿನ ನಿಮ್ಮ ಜೀವನೋಪಾಯ ಗಳಿಸುವ ಶ್ರಮಜೀವಿಗಳಾಗಿದ್ದೀರಿ. ಆಧುನಿಕ ಪರಿಕರಗಳಿಗಾಗಿ ನೀವು 15,000 ರೂಪಾಯಿ  ಟೂಲ್ ಕಿಟ್ ವೋಚರ್ ಸಹ ಸ್ವೀಕರಿಸುತ್ತೀರಿ. ಬ್ರ್ಯಾಂಡಿಂಗ್ ಮತ್ತು ಪ್ಯಾಕೇಜಿಂಗ್‌ನಿಂದ ಮಾರ್ಕೆಟಿಂಗ್‌ವರೆಗೆ ನೀವು ತಯಾರಿಸುವ ಎಲ್ಲದಕ್ಕೂ ಸರ್ಕಾರ ಸಾಧ್ಯವಿರುವ ಎಲ್ಲ ರೀತಿಯ ಸಹಾಯ ನೀಡುತ್ತದೆ. ಇದಕ್ಕೆ ಪ್ರತಿಯಾಗಿ, ಜಿಎಸ್ಟಿ-ನೋಂದಾಯಿತ ಅಂಗಡಿಯಿಂದ ನೀವು ಟೂಲ್‌ಕಿಟ್ ಖರೀದಿಸಬೇಕು ಎಂದು ಸರ್ಕಾರ ನಿರೀಕ್ಷಿಸುತ್ತದೆ. ಅಕ್ರಮ ವ್ಯವಹಾರಗಳನ್ನು ಸಹಿಸುವುದಿಲ್ಲ. ಇದಲ್ಲದೆ, ಈ ಉಪಕರಣಗಳು 'ಮೇಡ್ ಇನ್ ಇಂಡಿಯಾ' ಆಗಿರಬೇಕು ಎಂದು ನಾನು ಬಲವಾಗಿ ಒತ್ತಾಯಿಸುತ್ತೇನೆ.

ನನ್ನ ಬಾಂಧವರೆ,

ನೀವು ನಿಮ್ಮ ವ್ಯಾಪಾರ ವಿಸ್ತರಿಸಲು ಬಯಸಿದರೆ ಆರಂಭಿಕ ಬಂಡವಾಳದ ಬಗ್ಗೆ ಯಾವುದೇ ಸಮಸ್ಯೆ ಎದುರಾಗದಂತೆ ಸರ್ಕಾರ ನಿಬಂಧನೆ ಮಾಡಿದೆ. ಈ ಯೋಜನೆಯಡಿ, ವಿಶ್ವಕರ್ಮ ಬಾಂಧವರು ಮೇಲಾಧಾರ ಅಥವಾ ಅಡಮಾನದ ಅಗತ್ಯವಿಲ್ಲದೆ 3 ಲಕ್ಷ ರೂಪಾಯಿವರೆಗೆ ಸಾಲ ಪಡೆಯಬಹುದು. ಬ್ಯಾಂಕುಗಳು ನಿಮ್ಮಿಂದ ಮೇಲಾಧಾರ ಕೇಳದಿದ್ದಾಗ, ಮೋದಿ ನಿಮ್ಮ ಸಾಲಕ್ಕೆ ಖಾತರಿ ನೀಡುತ್ತಾರೆ. ಈ ಸಾಲದ ಮೇಲಿನ ಬಡ್ಡಿ ದರವೂ ತೀರಾ ಕಡಿಮೆ ಎಂದು ಖಾತ್ರಿಪಡಿಸಲಾಗಿದೆ. ನೀವು ನಿಮ್ಮ ತರಬೇತಿ ಪೂರ್ಣಗೊಳಿಸಿದ್ದರೆ ಮತ್ತು ಮೊದಲ ಬಾರಿಗೆ ಹೊಸ ಉಪಕರಣಗಳನ್ನು ಖರೀದಿಸಿದರೆ, ನೀವು ಮೊದಲ ಬಾರಿಗೆ 1 ಲಕ್ಷ ರೂಪಾಯಿವರೆಗೆ ಸಾಲಕ್ಕೆ ಅರ್ಹರಾಗುತ್ತೀರಿ ಎಂಬ ನಿಬಂಧನೆಯನ್ನು ಸರ್ಕಾರ ಮಾಡಿದೆ. ಒಮ್ಮೆ ನೀವು ಆ ಸಾಲ ಮರುಪಾವತಿಸಿ, ವ್ಯವಹಾರ ಮುಂದುವರೆಯುತ್ತಿರುವುದನ್ನು ಸಾಬೀತುಪಡಿಸಿದರೆ, ನೀವು 2 ಲಕ್ಷ ರೂಪಾಯಿವರೆಗೆ ಸಾಲಕ್ಕೆ ಅರ್ಹರಾಗುತ್ತೀರಿ.

ನನ್ನ ಬಾಂಧವರೆ,

ಇಂದು ನಮ್ಮ ದೇಶದಲ್ಲಿ ಹಿಂದುಳಿದವರಿಗೆ ಆದ್ಯತೆ ನೀಡುವ ಸರಕಾರವಿದೆ. ಒಂದು ಜಿಲ್ಲೆ ಒಂದು ಉತ್ಪನ್ನ (ಒಡಿಒಪಿ) ಯೋಜನೆಯ ಮೂಲಕ ಪ್ರತಿ ಜಿಲ್ಲೆಯ ವಿಶೇಷ ಉತ್ಪನ್ನಗಳನ್ನು ಪ್ರಚಾರ ಮಾಡುತ್ತಿರುವುದು ನಮ್ಮ ಸರ್ಕಾರ. ಪ್ರಧಾನಮಂತ್ರಿ ಸ್ವಾನಿಧಿ ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳಿಗೆ ನೆರವು ನೀಡಿದ್ದು, ಬ್ಯಾಂಕ್‌ಗಳ ಬಾಗಿಲು ತೆರೆದಿದ್ದು ನಮ್ಮ ಸರ್ಕಾರ. ಸ್ವಾತಂತ್ರ್ಯಾ ನಂತರ ಮೊಟ್ಟಮೊದಲ ಬಾರಿಗೆ ಬಂಜಾರ ಮತ್ತು ಅಲೆಮಾರಿ ಬುಡಕಟ್ಟು ಜನಾಂಗದವರ ರಕ್ಷಣೆ ಮಾಡಿದ್ದು ನಮ್ಮ ಸರ್ಕಾರ. ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ ದಿವ್ಯಾಂಗರಿಗೆ ಪ್ರತಿಯೊಂದು ಹಂತ ಮತ್ತು ಸ್ಥಳದಲ್ಲಿ ವಿಶೇಷ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಿದ್ದು ನಮ್ಮ ಸರ್ಕಾರ. ಯಾರೂ ಕಾಳಜಿ ವಹಿಸದ ಜನರಿಗೆ ಈ ಬಡವನ ಮಗ ಮೋದಿ ಅವರ ‘ಸೇವಕ’ನಾಗಿ ಬಂದಿದ್ದಾನೆ. ಪ್ರತಿಯೊಬ್ಬರಿಗೂ ಘನತೆಯ ಜೀವನ ಒದಗಿಸುವುದು ಮತ್ತು ಎಲ್ಲರಿಗೂ ಸೌಲಭ್ಯಗಳನ್ನು ಖಾತರಿಪಡಿಸುವುದು ಮೋದಿ ಅವರ ಭರವಸೆಯಾಗಿದೆ.

ನನ್ನ ಬಾಂಧವರೆ,

ತಂತ್ರಜ್ಞಾನ ಮತ್ತು ಸಂಪ್ರದಾಯ ಒಟ್ಟಿಗೆ ಸೇರಿದಾಗ, ಅದು ಅದ್ಭುತಗಳನ್ನು ಸೃಷ್ಟಿಸುತ್ತದೆ ಮತ್ತು ಜಿ-20 ಕ್ರಾಫ್ಟ್ ಬಜಾರ್‌ನಲ್ಲಿ ಇಡೀ ಜಗತ್ತು ಇದಕ್ಕೆ ಸಾಕ್ಷಿಯಾಯಿತು. ಜಿ-20ರಲ್ಲಿ ಭಾಗವಹಿಸಿದ ವಿದೇಶಿ ಅತಿಥಿಗಳಿಗೆ ನಮ್ಮ ವಿಶ್ವಕರ್ಮ ಬಾಂಧವರು ತಯಾರಿಸಿದ ವಸ್ತುಗಳನ್ನು ಉಡುಗೊರೆಯಾಗಿ ನೀಡಲಾಯಿತು. 'ಲೋಕಲ್ ಫಾರ್ ವೋಕಲ್' ಬದ್ಧತೆ ನಮ್ಮೆಲ್ಲರ, ಇಡೀ ದೇಶದ ಜವಾಬ್ದಾರಿಯಾಗಿದೆ. ನಮ್ಮ ಕುಶಲಕರ್ಮಿಗಳು, ನಮ್ಮ ಜನರು ತಯಾರಿಸಿದ ಉತ್ಪನ್ನಗಳು ಜಾಗತಿಕ ಮಾರುಕಟ್ಟೆಯನ್ನು ತಲುಪಬೇಕೇ ಅಥವಾ ಬೇಡವೇ? ಈ ಉತ್ಪನ್ನಗಳನ್ನು ವಿಶ್ವದ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಬೇಕೇ ಅಥವಾ ಬೇಡವೇ? ಇದನ್ನು ಸಾಧಿಸಲು, ನಾವು ಮೊದಲು ಸ್ಥಳೀಯ(ಉತ್ಪನ್ನ)ತೆಗೆ ಧ್ವನಿ ತುಂಬಬೇಕು, ನಂತರ ಸ್ಥಳೀಯ ಉತ್ಪನ್ನವನ್ನು ಜಾಗತಿಕಗೊಳಿಸಬೇಕು.

ಸ್ನೇಹಿತರೆ,

ಈಗ ಗಣೇಶ ಚತುರ್ಥಿ, ಧನ್ ತೇರಸ್, ದೀಪಾವಳಿ ಹೀಗೆ ಹಲವು ಹಬ್ಬಗಳು ಬರುತ್ತಿವೆ. ಸ್ಥಳೀಯ ಉತ್ಪನ್ನಗಳನ್ನು ಖರೀದಿಸಲು ನಾನು ಎಲ್ಲಾ ನಾಗರಿಕರನ್ನು ಒತ್ತಾಯಿಸುತ್ತೇನೆ. ನಾನು ಸ್ಥಳೀಯ ಉತ್ಪನ್ನವನ್ನು ಖರೀದಿಸುವ ಬಗ್ಗೆ ಮಾತನಾಡುವಾಗ, ಕೆಲವರು ದೀಪಾವಳಿ ದೀಪಗಳನ್ನು ಖರೀದಿಸುವ ಬಗ್ಗೆ ಮಾತ್ರ ಯೋಚಿಸುತ್ತಾರೆ ಹೊರತು ಬೇರೇನೂ ಅಲ್ಲ. ನಮ್ಮ ನುರಿತ ಕಾರ್ಮಿಕರ ಗುರುತು, ಭಾರತದ ಮಣ್ಣಿನ ಪರಿಮಳ ಮತ್ತು ಬೆವರಿನ ಶ್ರಮ ಹೊಂದಿರುವ ಪ್ರತಿಯೊಂದು ಸಣ್ಣ ಮತ್ತು ದೊಡ್ಡ ವಸ್ತುಗಳನ್ನು ಖರೀದಿಸಿ.

ನನ್ನ ಬಾಂಧವರೆ,

ಇಂದಿನ ಭಾರತವು ಅಭಿವೃದ್ಧಿಯನ್ನು ಮುಂದುವರೆಸುತ್ತಾ ಹೋಗುತ್ತಿರುವಂತೆ, ಪ್ರತಿಯೊಂದು ಕ್ಷೇತ್ರದಲ್ಲೂ ತನ್ನದೇ ಆದ ಛಾಪು ಮೂಡಿಸುತ್ತಿದೆ. ಭಾರತ ಮಂಟಪದೊಂದಿಗೆ ಭಾರತವು ಹೇಗೆ ವಿಶ್ವದ ಗಮನ ಸೆಳೆದಿದೆ ಎಂಬುದನ್ನು ನಾವು ಇತ್ತೀಚೆಗೆ ನೋಡಿದ್ದೇವೆ. ಈ ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರ - ಯಶೋಭೂಮಿ - ಈ ಸಂಪ್ರದಾಯವನ್ನು ಭವ್ಯವಾಗಿ ಮುಂದುವರೆಸಿದೆ. ಯಶೋಭೂಮಿಯ ಸ್ಪಷ್ಟ ಸಂದೇಶವೇನೆಂದರೆ, ಈ ನೆಲದಲ್ಲಿ ಏನೇ ನಡೆದರೂ ಅದು ಕೀರ್ತಿಯನ್ನು ತರುತ್ತದೆ. ಭವಿಷ್ಯದ ಭಾರತವನ್ನು ಪ್ರದರ್ಶಿಸಲು ಇದು ಭವ್ಯ ಕೇಂದ್ರವಾಗಲಿದೆ.

ಸ್ನೇಹಿತರೆ,

ಭಾರತವು ತನ್ನ ಆರ್ಥಿಕ ಸಾಮರ್ಥ್ಯವನ್ನು ಯಶಸ್ವಿಯಾಗಿ ಬಳಸಿಕೊಳ್ಳಲು ಮತ್ತು ಪ್ರಮುಖ ವಾಣಿಜ್ಯ ಶಕ್ತಿಯಾಗಲು, ರಾಜಧಾನಿಯಲ್ಲಿ ಇಂತಹ ಕೇಂದ್ರವು ಅತ್ಯಗತ್ಯ. ಇದು ಬಹು-ಮಾದರಿ ಸಂಪರ್ಕವನ್ನು ನೀಡುತ್ತದೆ ಮತ್ತು ಪ್ರಧಾ ಮಂತ್ರಿಗಳ ಗತಿಶಕ್ತಿಯನ್ನು ಪ್ರದರ್ಶಿಸುತ್ತದೆ. ವಿಶೇಷವಾಗಿ, ಇದು ವಿಮಾನ ನಿಲ್ದಾಣದ ಸಮೀಪದಲ್ಲಿದೆ. ಜತೆಗೆ, ಮೆಟ್ರೋ ವ್ಯವಸ್ಥೆಯ ಸಂಪರ್ಕ ಹೊಂದಿದೆ. ಇಂದು ಉದ್ಘಾಟನೆಯಾಗಿರುವ ಮೆಟ್ರೋ ನಿಲ್ದಾಣವನ್ನು ನೇರವಾಗಿ ಈ ಸಂಕೀರ್ಣದಲ್ಲಿ ಸಂಯೋಜಿಸಲಾಗಿದೆ. ಈ ಮೆಟ್ರೋ ಸೌಲಭ್ಯವು ದೆಹಲಿಯ ವಿವಿಧ ಭಾಗಗಳಿಂದ ಬರುವ ಜನರಿಗೆ ಪ್ರಯಾಣದ ಸಮಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಮತ್ತು ಸುಲಭವಾಗಿ ಪ್ರವೇಶಿಸಬಹುದು. ಇಲ್ಲಿಗೆ ಭೇಟಿ ನೀಡುವವರಿಗೆ ಈ ಪರಿಸರ ವ್ಯವಸ್ಥೆಯಲ್ಲಿ ವಸತಿ, ಮನರಂಜನೆ, ಶಾಪಿಂಗ್ ಮತ್ತು ಪ್ರವಾಸೋದ್ಯಮ ಸೌಲಭ್ಯಗಳನ್ನು ಒದಗಿಸಲು ಈ ಸಂಕೀರ್ಣವನ್ನು ವಿನ್ಯಾಸಗೊಳಿಸಲಾಗಿದೆ.

ನನ್ನ ಬಾಂಧವರೆ,

ಬದಲಾಗುತ್ತಿರುವ ಕಾಲದೊಂದಿಗೆ, ಅಭಿವೃದ್ಧಿ ಮತ್ತು ಉದ್ಯೋಗದ ಹೊಸ ಕ್ಷೇತ್ರಗಳು ಹೊರಹೊಮ್ಮುತ್ತಿವೆ. ಇಂದು ಅಸ್ತಿತ್ವದಲ್ಲಿರುವ ಬೃಹತ್ ಐಟಿ ಉದ್ಯಮವನ್ನು 50-60 ವರ್ಷಗಳ ಹಿಂದೆ ಊಹಿಸಲೂ ಸಾಧ್ಯವಿರಲಿಲ್ಲ. ಅದೇ ರೀತಿ 30-35 ವರ್ಷಗಳ ಹಿಂದೆ ಸಾಮಾಜಿಕ ಮಾಧ್ಯಮಗಳು ಕೇವಲ ಪರಿಕಲ್ಪನೆಯಾಗಿದ್ದವು. ಈಗ, ಭಾರತಕ್ಕೆ ಅಪರಿಮಿತ ಸಾಮರ್ಥ್ಯದೊಂದಿಗೆ ಮತ್ತೊಂದು ಮಹತ್ವದ ಕ್ಷೇತ್ರವು ಹೊರಹೊಮ್ಮುತ್ತಿದೆ. ಈ ಕ್ಷೇತ್ರವು ಕಾನ್ಫರೆನ್ಸ್ ಪ್ರವಾಸೋದ್ಯಮವಾಗಿದೆ. ಜಾಗತಿಕ ಸಮ್ಮೇಳನ ಪ್ರವಾಸೋದ್ಯಮ ಉದ್ಯಮವು 25 ಲಕ್ಷ ಕೋಟಿ ರೂಪಾಯಿಗಳಿಗೂ ಹೆಚ್ಚು ಮೌಲ್ಯದ್ದಾಗಿದೆ. ಪ್ರತಿ ವರ್ಷ, ಪ್ರಪಂಚದಾದ್ಯಂತ 32,000ಕ್ಕೂ ಹೆಚ್ಚು ದೊಡ್ಡ ಪ್ರದರ್ಶನಗಳು ನಡೆಯುತ್ತವೆ. ಕೇವಲ ಊಹಿಸಿ, 2-5 ಕೋಟಿಗಿಂತ ಕಡಿಮೆ ಜನಸಂಖ್ಯೆ ಹೊಂದಿರುವ ದೇಶಗಳು ಸಹ ಈ ಕಾರ್ಯಕ್ರಮಗಳನ್ನು ಆಯೋಜಿಸುತ್ತಿವೆ ಮತ್ತು ಸಮೃದ್ಧವಾಗಿವೆ. 140 ಕೋಟಿ ಜನಸಂಖ್ಯೆ ಹೊಂದಿರುವ ಭಾರತವು ಖಂಡಿತವಾಗಿಯೂ ಇದರಿಂದ ಗಣನೀಯ ಪ್ರಯೋಜನಗಳನ್ನು ಪಡೆಯಬಹುದು. ಯಾರೇ ಇಲ್ಲಿಗೆ ಬಂದರೂ ಅವರಿಗೆ ಅಪಾರ ಪ್ರಯೋಜನವಾಗುತ್ತದೆ. ಅದೊಂದು ದೊಡ್ಡ ಮಾರುಕಟ್ಟೆ. ಸಾಮಾನ್ಯ ಪ್ರವಾಸಿಗರಿಗೆ ಹೋಲಿಸಿದರೆ ಸಮ್ಮೇಳನದ ಪ್ರವಾಸಿಗರು ಸಾಮಾನ್ಯವಾಗಿ ಹೆಚ್ಚು ಹಣ ಖರ್ಚು ಮಾಡುತ್ತಾರೆ. ಅಗಾಧವಾದ ಮಾರುಕಟ್ಟೆಯ ಹೊರತಾಗಿಯೂ, ಈ ಉದ್ಯಮದಲ್ಲಿ ಭಾರತದ ಪ್ರಸ್ತುತ ಭಾಗವಹಿಸುವಿಕೆ ಕೇವಲ 1% ಮಾತ್ರ ಇದೆ. ಭಾರತದ ಅನೇಕ ಬೃಹತ್ ಕಂಪನಿಗಳು ಪ್ರತಿ ವರ್ಷ ವಿದೇಶದಲ್ಲಿ ತಮ್ಮ ಕಾರ್ಯಕ್ರಮಗಳನ್ನು ಆಯೋಜಿಸಲು ಒತ್ತಾಯಿಸುತ್ತಿವೆ. ಅಂತಹ ಬೃಹತ್ ಮಾರುಕಟ್ಟೆಯು ದೇಶೀಯವಾಗಿ ಮತ್ತು ಜಾಗತಿಕವಾಗಿ ನಮ್ಮ ಮುಂದೆ ಇದೆ ಎಂದು ನೀವು ಊಹಿಸಬಲ್ಲಿರಾ? ಹೊಸ ಭಾರತವು ಕಾನ್ಫರೆನ್ಸ್ ಪ್ರವಾಸೋದ್ಯಮಕ್ಕೆ ತನ್ನನ್ನು ತಾನೇ ಸಿದ್ಧಪಡಿಸುತ್ತಿದೆ.

ಮತ್ತು ಸ್ನೇಹಿತರೇ,

ಸಾಹಸಕ್ಕೆ ಬೇಕಾದ ಸಂಪನ್ಮೂಲಗಳು ಇರುವಲ್ಲಿ ಮಾತ್ರ ಸಾಹಸ(ಅಡ್ವೆಂಚರ್) ಪ್ರವಾಸೋದ್ಯಮ ನಡೆಯುತ್ತದೆ ಎಂಬುದು ನಿಮಗೆಲ್ಲರಿಗೂ ತಿಳಿದಿದೆ. ಆಧುನಿಕ ವೈದ್ಯಕೀಯ ಸೌಲಭ್ಯಗಳು ಇರುವಲ್ಲಿ ಮಾತ್ರ ವೈದ್ಯಕೀಯ ಪ್ರವಾಸೋದ್ಯಮ ನಡೆಯುತ್ತದೆ. ಐತಿಹಾಸಿಕ, ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳು ಇರುವಲ್ಲಿ ಮಾತ್ರ ಆಧ್ಯಾತ್ಮಿಕ ಪ್ರವಾಸೋದ್ಯಮ ನಡೆಯುತ್ತದೆ. ಇತಿಹಾಸ ಮತ್ತು ಪರಂಪರೆ ಪ್ರಚಲಿತವಿರುವ ಕಡೆ ಮಾತ್ರ ಪಾರಂಪರಿಕ ಪ್ರವಾಸೋದ್ಯಮವೂ ನಡೆಯುತ್ತದೆ. ಅಂತೆಯೇ, ಸಮಾವೇಶಗಳು, ಸಮ್ಮೇಶನಗಳು, ಸಭೆಗಳು ಮತ್ತು ಪ್ರದರ್ಶನಗಳಿಗೆ ಅಗತ್ಯವಾದ ಸಂಪನ್ಮೂಲಗಳು ಇರುವಲ್ಲಿ ಮಾತ್ರ ಕಾನ್ಫರೆನ್ಸ್ ಪ್ರವಾಸೋದ್ಯಮ ನಡೆಯುತ್ತದೆ. ಆದ್ದರಿಂದ, ಭಾರತ ಮಂಟಪಂ ಮತ್ತು ಯಶೋಭೂಮಿ ಇಂತಹ ಕೇಂದ್ರಗಳಾಗಿದ್ದು, ಈಗ ದೆಹಲಿಯನ್ನು ಕಾನ್ಫರೆನ್ಸ್ ಪ್ರವಾಸೋದ್ಯಮದ ಅತಿದೊಡ್ಡ ಕೇಂದ್ರವನ್ನಾಗಿ ಮಾಡಲು ಹೊರಟಿವೆ. ಯಶೋಭೂಮಿ ಕೇಂದ್ರದಿಂದಲೇ ಲಕ್ಷಾಂತರ ಯುವಕರಿಗೆ ಉದ್ಯೋಗ ಸಿಗುವ ಸಾಧ್ಯತೆ ಇದೆ. ಯಶೋಭೂಮಿ ಭವಿಷ್ಯದಲ್ಲಿ ಪ್ರಪಂಚದಾದ್ಯಂತದ ಜನರು ಅಂತಾರಾಷ್ಟ್ರೀಯ ಸಮ್ಮೇಳನಗಳು, ಸಭೆಗಳು, ಪ್ರದರ್ಶನಗಳು ಇತ್ಯಾದಿಗಳಿಗೆ ಸರತಿ ಸಾಲಿನಲ್ಲಿ ನಿಲ್ಲುವ ಸ್ಥಳವಾಗಲಿದೆ.

ಇಂದು ನಾನು ವಿಶೇಷವಾಗಿ ಪ್ರದರ್ಶನ ಮತ್ತು ಈವೆಂಟ್ ಉದ್ಯಮಕ್ಕೆ ಸಂಬಂಧಿಸಿದ ವಿಶ್ವಾದ್ಯಂತದ ದೇಶಗಳ  ಜನರನ್ನು ಭಾರತಕ್ಕೆ, ದೆಹಲಿಗೆ, ಯಶೋಭೂಮಿಗೆ ಆಹ್ವಾನಿಸುತ್ತೇನೆ. ಪೂರ್ವ-ಪಶ್ಚಿಮ-ಉತ್ತರ-ದಕ್ಷಿಣ ಸೇರಿದಂತೆ ದೇಶದ ಪ್ರತಿಯೊಂದು ಪ್ರದೇಶದ ಚಲನಚಿತ್ರೋದ್ಯಮ ಮತ್ತು ಟಿವಿ ಉದ್ಯಮವನ್ನು ನಾನು ಆಹ್ವಾನಿಸುತ್ತೇನೆ. ನಿಮ್ಮ ಪ್ರಶಸ್ತಿ ಸಮಾರಂಭಗಳು, ಚಲನಚಿತ್ರೋತ್ಸವಗಳನ್ನು ನೀವು ಇಲ್ಲಿ ಆಯೋಜಿಸುತ್ತೀರಿ. ನಿಮ್ಮ ಚಲನಚಿತ್ರಗಳ ಮೊದಲ ಪ್ರದರ್ಶನವನ್ನು ಇಲ್ಲಿ ಆಯೋಜಿಸುತ್ತೀರಿ. ಭಾರತ ಮಂಟಪ ಮತ್ತು ಯಶೋಭೂಮಿಗೆ ಸೇರಲು ಅಂತಾರಾಷ್ಟ್ರೀಯ ಈವೆಂಟ್ ಕಂಪನಿಗಳು ಮತ್ತು ಪ್ರದರ್ಶನ ವಲಯಕ್ಕೆ ಸಂಬಂಧಿಸಿದ ಜನರನ್ನು ಸಹ ನಾನು ಆಹ್ವಾನಿಸುತ್ತೇನೆ.

ನನ್ನ ಬಾಂಧವರೆ,

ಭಾರತ ಮಂಟಪವಾಗಲಿ ಅಥವಾ ಯಶೋಭೂಮಿಯಾಗಲಿ, ಇವು ಭಾರತದ ಆತಿಥ್ಯ, ಭಾರತದ ಶ್ರೇಷ್ಠತೆ ಮತ್ತು ಭಾರತದ ಶ್ರೇಷ್ಠತೆಯ ಸಂಕೇತಗಳಾಗುತ್ತವೆ ಎಂಬ ವಿಶ್ವಾಸ ನನಗಿದೆ. ಭಾರತ ಮಂಟಪ ಮತ್ತು ಯಶೋಭೂಮಿ ಎರಡೂ ಭಾರತೀಯ ಸಂಸ್ಕೃತಿ ಮತ್ತು ಆಧುನಿಕ ಸೌಲಭ್ಯಗಳ ಸಂಗಮವಾಗಿದೆ. ಇಂದು ಈ ಎರಡೂ ಮಹಾಸಂಸ್ಥೆಗಳು ದೇಶ ಮತ್ತು ವಿಶ್ವದ ಮುಂದೆ ನವ ಭಾರತದ ಯಶೋಗಾಥೆ ಹಾಡುತ್ತಿವೆ. ತನಗೆ ಉತ್ತಮ ಸೌಲಭ್ಯಗಳನ್ನು ಬಯಸುತ್ತಿರುವ ನವಭಾರತದ ಆಶಯಗಳನ್ನೂ ಇವು ಬಿಂಬಿಸುತ್ತಿವೆ.

 ಸ್ನೇಹಿತರೆ,

ನನ್ನ ಮಾತುಗಳನ್ನು ಬರೆದಿಟ್ಟುಕೊಳ್ಳಿ. ಭಾರತ ಈಗ ವಿರಮಿಸುವುದಿಲ್ಲ, ನಾವು ಮುಂದುವರಿಯಬೇಕು, ಹೊಸ ಗುರಿಗಳನ್ನು ಸಾಧಿಸುತ್ತಲೇ ಇರಬೇಕು. ಆ ಹೊಸ ಗುರಿಗಳನ್ನು ಸಾಧಿಸಿದ ನಂತರವೇ ವಿಶ್ರಾಂತಿ ಪಡೆಯಬೇಕು. ಇದು ನಮ್ಮೆಲ್ಲರ ಶ್ರಮ ಮತ್ತು ಪ್ರಯತ್ನದ ಪರಾಕಾಷ್ಠೆಯಾಗಿದ್ದು, 2047ರಲ್ಲಿ ದೇಶವನ್ನು ಅಭಿವೃದ್ಧಿ ಹೊಂದಿದ ಭಾರತವನ್ನಾಗಿ ಪ್ರಪಂಚದ ಮುಂದೆ ಮಾಡುತ್ತೇವೆ ಎಂಬ ಸಂಕಲ್ಪದೊಂದಿಗೆ ನಾವು ಮುನ್ನಡೆಯಬೇಕಾಗಿದೆ. ನಾವೆಲ್ಲರೂ ಒಂದಾಗುವ ಸಮಯ ಇದು. ನಮ್ಮ ವಿಶ್ವಕರ್ಮ ಬಾಂಧವರು 'ಮೇಕ್ ಇನ್ ಇಂಡಿಯಾ'ದ ಹೆಮ್ಮೆ ಮತ್ತು ಈ ಹೆಮ್ಮೆಯನ್ನು ಜಗತ್ತಿಗೆ ಪ್ರದರ್ಶಿಸಲು ಈ ಅಂತಾರಾಷ್ಟ್ರೀಯ ಸಮಾವೇಶ ಕೇಂದ್ರವು ಮಾಧ್ಯಮವಾಗಲಿದೆ. ಮತ್ತೊಮ್ಮೆ, ಈ ಉಪಕ್ರಮಕ್ಕಾಗಿ ನಾನು ಎಲ್ಲಾ ವಿಶ್ವಕರ್ಮ ಬಾಂಧವರನ್ನು ಅಭಿನಂದಿಸುತ್ತೇನೆ. ಯಶೋಭೂಮಿ ಎಂಬ ಈ ಹೊಸ ಕೇಂದ್ರವು ಭಾರತದ ಕೀರ್ತಿಯ ಸಂಕೇತವಾಗಲಿ, ದೆಹಲಿಯ ಹೆಮ್ಮೆಯನ್ನು ಇನ್ನಷ್ಟು ಹೆಚ್ಚಿಸಲಿ. ಈ ಶುಭ ಸಂದೇಶದೊಂದಿಗೆ ನಿಮ್ಮೆಲ್ಲರಿಗೂ ಶುಭ ಹಾರೈಕೆಗಳು. ತುಂಬು ಧನ್ಯವಾದಗಳು.

ನಮಸ್ಕಾರ!

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
When PM Modi Fulfilled A Special Request From 101-Year-Old IFS Officer’s Kin In Kuwait

Media Coverage

When PM Modi Fulfilled A Special Request From 101-Year-Old IFS Officer’s Kin In Kuwait
NM on the go

Nm on the go

Always be the first to hear from the PM. Get the App Now!
...
Under Rozgar Mela, PM to distribute more than 71,000 appointment letters to newly appointed recruits
December 22, 2024

Prime Minister Shri Narendra Modi will distribute more than 71,000 appointment letters to newly appointed recruits on 23rd December at around 10:30 AM through video conferencing. He will also address the gathering on the occasion.

Rozgar Mela is a step towards fulfilment of the commitment of the Prime Minister to accord highest priority to employment generation. It will provide meaningful opportunities to the youth for their participation in nation building and self empowerment.

Rozgar Mela will be held at 45 locations across the country. The recruitments are taking place for various Ministries and Departments of the Central Government. The new recruits, selected from across the country will be joining various Ministries/Departments including Ministry of Home Affairs, Department of Posts, Department of Higher Education, Ministry of Health and Family Welfare, Department of Financial Services, among others.