ನಮಸ್ಕಾರ!
ಇಂದು, ನೀವು ಅಬುಧಾಬಿಯಲ್ಲಿ ಇತಿಹಾಸ ನಿರ್ಮಿಸಿದ್ದೀರಿ. ಅರಬ್‌ ಸಂಯುಕ್ತ ಸಂಸ್ಥಾನದ(ಯುಎಇ) ವಿವಿಧ ಮೂಲೆಗಳಿಂದ ಮತ್ತು ಭಾರತದ ವಿವಿಧ ರಾಜ್ಯಗಳಿಂದ ನೀವು ಬಂದಿದ್ದೀರಿ, ಆದರೆ ಎಲ್ಲರ ಹೃದಯಗಳು ಪರಸ್ಪರ ಬೆಸೆದುಕೊಂಡಿವೆ. ಈ ಐತಿಹಾಸಿಕ ಕ್ರೀಡಾಂಗಣದಲ್ಲಿ ಪ್ರತಿ ಹೃದಯ ಮಿಡಿತವು ಹೇಳುತ್ತಿದೆ - ʻಭಾರತ-ಯುಎಇ ಸ್ನೇಹವು ಚಿರಾಯುವಾಗಲಿʼ! ಪ್ರತಿ ಉಸಿರು ಹೇಳುತ್ತಿದೆ - ʻಭಾರತ-ಯುಎಇ ಸ್ನೇಹ ಚಿರಾಯುವಾಗಲಿ! ಪ್ರತಿಯೊಂದು ಧ್ವನಿಯೂ ಹೇಳುತ್ತಿದೆ - ʻಭಾರತ-ಯುಎಇ ಸ್ನೇಹವು ಚಿರಾಯುವಾಗಲಿ! ನಾವು ಈ ಕ್ಷಣವನ್ನು ಪೂರ್ಣವಾಗಿ ಬದುಕಬೇಕು. ಇಂದು, ನಾವು ಜೀವಮಾನವಿಡೀ ನಮ್ಮೊಂದಿಗೆ ಉಳಿಯುವ ನೆನಪುಗಳನ್ನು ಸಂಗ್ರಹಿಸಬೇಕಾಗಿದೆ - ಜೀವಮಾನವಿಡೀ ನನ್ನೊಂದಿಗೆ ಉಳಿಯುವ ನೆನಪುಗಳು...

 

ನನ್ನ ಸಹೋದರ-ಸಹೋದರಿಯರೇ,
ಇಂದು, ನಾನು ನನ್ನ ಕುಟುಂಬದ ಸದಸ್ಯರನ್ನು ಭೇಟಿಯಾಗಲು ಬಂದಿದ್ದೇನೆ. ಸಮುದ್ರವನ್ನು ದಾಟಿ, ನೀವು ಹುಟ್ಟಿದ ಭೂಮಿಯ ಪರಿಮಳವನ್ನು ನಾನು ಹೊತ್ತು ತಂದಿದ್ದೇನೆ. ನಾನು ನಿಮ್ಮ 1.4 ಶತಕೋಟಿ ಭಾರತೀಯ ಸಹೋದರ-ಸಹೋದರಿಯರಿಂದ ಸಂದೇಶವನ್ನು ಹೊತ್ತು ತಂದಿದ್ದೇನೆ... ಮತ್ತು ಆ ಸಂದೇಶವೆಂದರೆ - ಭಾರತವು ನಿಮ್ಮ ಬಗ್ಗೆ ಹೆಮ್ಮೆಪಡುತ್ತದೆ ಮತ್ತು ನೀವು ರಾಷ್ಟ್ರದ ಹೆಮ್ಮೆಯಾಗಿದ್ದೀರಿ. ಭಾರತ್ ನಿಮ್ಮ ಬಗ್ಗೆ ಹೆಮ್ಮೆ ಪಡುತ್ತದೆ.

भारतम् निंगड़ै-और्त् अभिमा-निक्कुन्नु !! उंगलई पार्त् भारतम् पेरुमई पड़गिरदु !!
भारता निम्मा बग्गे हेम्मे पडु-त्तदे !! मी पइ भारतदेशम् गर्विस्तोन्दी !!

'ಏಕ ಭಾರತ, ಶ್ರೇಷ್ಠ ಭಾರತ'ದ ಈ ಸುಂದರ ಚಿತ್ರ, ನಿಮ್ಮ ಉತ್ಸಾಹ ಮತ್ತು ಧ್ವನಿ ಇಂದು ಅಬುಧಾಬಿಯ ಆಗಸವನ್ನು ಮೀರಿ ಎತ್ತರಕ್ಕೆ ತಲುಪುತ್ತಿದೆ. ಈ ಪ್ರೀತಿ ಮತ್ತು ಆಶೀರ್ವಾದ ನನ್ನ ಪಾಲಿಗೆ ಅಪಾರವಾದುದು. ನೀವು ಸಮಯ ಮಾಡಿಕೊಂಡು ಇಲ್ಲಿಗೆ ಬಂದದ್ದಕ್ಕಾಗಿ ನಾನು ನಿಮಗೆ ತುಂಬಾ ಕೃತಜ್ಞನಾಗಿದ್ದೇನೆ.

ಸ್ನೇಹಿತರೇ,
ಇಂದು, ಸಹಿಷ್ಣುತೆ ಸಚಿವರಾದ ಗೌರವಾನ್ವಿತ ಶೇಖ್ ನಹ್ಯಾನ್ ಅವರೂ ನಮ್ಮ ನಡುವೆ ಇದ್ದಾರೆ. ಅವರು ಭಾರತೀಯ ಸಮುದಾಯದ ಉತ್ತಮ ಸ್ನೇಹಿತ ಮತ್ತು ಹಿತೈಷಿ. ಭಾರತೀಯ ಸಮುದಾಯದ ಬಗ್ಗೆ ಅವರ ಪ್ರೀತಿ ಶ್ಲಾಘನೀಯ. ಇಂದು, ಈ ಭವ್ಯವಾದ ಕಾರ್ಯಕ್ರಮಕ್ಕಾಗಿ ನಾನು ನನ್ನ ಸಹೋದರ, ಗೌರವಾನ್ವಿತ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅವರಿಗೆ ನನ್ನ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಅವರ ಬೆಂಬಲವಿಲ್ಲದೆ ಈ ಉತ್ಸಾಹಭರಿತ ಆಚರಣೆ ಸಾಧ್ಯವಾಗುತ್ತಿರಲಿಲ್ಲ. ಅವರ ವೈಯಕ್ತಿಕ ಸ್ಪರ್ಶ, ನನ್ನ ಬಗ್ಗೆ ಅವರಿಗಿರುವ ಕಾಳಜಿ ನನ್ನ ದೊಡ್ಡ ಆಸ್ತಿ. 2015ರಲ್ಲಿ ನನ್ನ ಮೊದಲ ಪ್ರವಾಸ ನನಗೆ ನೆನಪಿದೆ. ಆಗಿನ್ನೂ ಕೇಂದ್ರದಲ್ಲಿ ನಾನು ಬಹಳ ಕಾಲ ಅಧಿಕಾರದಲ್ಲಿ ಇರಲಿಲ್ಲ. ಅದು ಮೂರು ದಶಕಗಳ ನಂತರ ಭಾರತೀಯ ಪ್ರಧಾನಿಯೊಬ್ಬರ ಮೊದಲ ಯುಎಇ ಪ್ರವಾಸವಾಗಿತ್ತು. ರಾಜತಾಂತ್ರಿಕತೆಯ ಜಗತ್ತು ನನಗೆ ಹೊಸದು. ಆ ಸಮಯದಲ್ಲಿ, ಯುವರಾಜ ಮತ್ತು ಪ್ರಸ್ತುತ ಅಧ್ಯಕ್ಷರು ತಮ್ಮ ಐದು ಸಹೋದರರೊಂದಿಗೆ ನನ್ನನ್ನು ಸ್ವಾಗತಿಸಲು ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಅವರ ಉತ್ಸಾಹ, ಅವರ ಕಣ್ಣುಗಳಲ್ಲಿನ ಹೊಳಪನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಆ ಮೊದಲ ಭೇಟಿಯಲ್ಲಿ, ನಾನು ಪ್ರೀತಿಪಾತ್ರರ ಮನೆಗೆ ಬಂದಂತೆ ಭಾಸವಾಯಿತು. ಅವರು ನನ್ನನ್ನು ಕುಟುಂಬದ ಸದಸ್ಯನಂತೆ ಗೌರವಿಸುತ್ತಿದ್ದರು. ಆದರೆ ಸ್ನೇಹಿತರೇ, ಆ ಗೌರವ ನನ್ನದು ಮಾತ್ರವಲ್ಲ. ಆ ಗೌರವ, ಆ ಸ್ವಾಗತವು 1.4 ಶತಕೋಟಿ ಭಾರತೀಯರಿಗೆ ಸೇರಿದ್ದು. ಆ ಗೌರವವು ಯುಎಇಯಲ್ಲಿ ವಾಸಿಸುವ ಪ್ರತಿಯೊಬ್ಬ ಭಾರತೀಯನಿಗೂ ಸೇರಿದ್ದು.

ಸ್ನೇಹಿತರೇ,
ಅದು ಆ ದಿನ, ಮತ್ತು ಇಂದು ಈ ದಿನ. ಕಳೆದ 10 ವರ್ಷಗಳಲ್ಲಿ ಯುಎಇಗೆ ಇದು ನನ್ನ 7ನೇ ಪ್ರವಾಸವಾಗಿದೆ. ಸಹೋದರ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಇಂದು ಕೂಡ ನನ್ನನ್ನು ಸ್ವಾಗತಿಸಲು ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಅವರ ಉತ್ಸಾಹ ಅಂದೂ-ಇಂದೂ ಒಂದೇ ಆಗಿತ್ತು, ಅವರ ಪ್ರೀತಿ ಸಹ ಅಂದೂ-ಇಂದೂ ಒಂದೇ ರೀತಿ ಇತ್ತು, ಮತ್ತು ಇದು ಅವರನ್ನು ತುಂಬಾ ವಿಶೇಷ ವ್ಯಕ್ತಿಯನ್ನಾಗಿಸುತ್ತದೆ. 

 

ಸ್ನೇಹಿತರೇ,
ಅವರನ್ನು ನಾಲ್ಕು ಬಾರಿ ಭಾರತಕ್ಕೆ ಸ್ವಾಗತಿಸುವ ಅವಕಾಶ ನಮಗೆ ದೊರೆತಿರುವುದು ನನಗೆ ಬಹಳ ಸಂತೋಷದ ವಿಷಯ. ಕೆಲ ದಿನಗಳ ಹಿಂದಷ್ಟೇ ಅವರು ಗುಜರಾತ್ಗೆ ಭೇಟಿ ನೀಡಿದ್ದರು. ಆ ಸಮಯದಲ್ಲಿ, ಲಕ್ಷಾಂತರ ಜನರು ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಲು ರಸ್ತೆಯ ಎರಡೂ ಬದಿಗಳಲ್ಲಿ ನೆರೆದಿದ್ದರು. ಅವರು ಈ ಕೃತಜ್ಞತೆಯನ್ನು ಏಕೆ ವ್ಯಕ್ತಪಡಿಸುತ್ತಿದ್ದಾರೆಂದು ನಿಮಗೆ ತಿಳಿದಿದೆಯೇ? ಈ ಕೃತಜ್ಞತೆ ಏಕೆಂದರೆ ಅವರು ʻಯುಎಇʼನಲ್ಲಿ ನಿಮ್ಮೆಲ್ಲರನ್ನೂ ನೋಡಿಕೊಳ್ಳುವ ರೀತಿ, ನಿಮ್ಮ ಹಿತಾಸಕ್ತಿಗಳ ಬಗ್ಗೆ ಅವರು ಕಾಳಜಿ ವಹಿಸುವ ರೀತಿ, ನಿಜಕ್ಕೂ ಇಂಥದ್ದನ್ನು ಕಾಣುವುದು ಅಪರೂಪ. ಅದಕ್ಕಾಗಿಯೇ ಆ ಜನರೆಲ್ಲರೂ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಲು ತಮ್ಮ ಮನೆಗಳಿಂದ ಹೊರಬಂದಿದ್ದರು.

ಸ್ನೇಹಿತರೇ,
ಯುಎಇ ತನ್ನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ʻದಿ ಆರ್ಡರ್ ಆಫ್ ಜಾಯೆದ್ʼ ಅನ್ನು ನನಗೆ ನೀಡಿ ಗೌರವಿಸಿರುವುದು ನನ್ನ ಸೌಭಾಗ್ಯವಾಗಿದೆ. ಈ ಗೌರವ ನನ್ನದು ಮಾತ್ರವಲ್ಲ, ಈ ಗೌರವ ಲಕ್ಷಾಂತರ ಭಾರತೀಯರಿಗೆ, ನಿಮ್ಮೆಲ್ಲರಿಗೂ ಸಲ್ಲುತ್ತದೆ. ನಾನು ನನ್ನ ಸಹೋದರ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅವರನ್ನು ಭೇಟಿಯಾದಾಗಲೆಲ್ಲಾ ಅವರು ಎಲ್ಲಾ ಭಾರತೀಯ ಪ್ರಜೆಗಳನ್ನು ತುಂಬಾ ಹೊಗಳುತ್ತಾರೆ. ʻಯುಎಇʼಯ ಅಭಿವೃದ್ಧಿಯಲ್ಲಿ ನಿಮ್ಮ ಪಾತ್ರವನ್ನು ಅವರು ಪ್ರಶಂಸಿಸುತ್ತಾರೆ. ಈ ಜಾಯೆದ್ ಕ್ರೀಡಾಂಗಣವೂ ಭಾರತೀಯ ಬೆವರಿನ ಸಾರವನ್ನು ಹೊಂದಿದೆ. ನಮ್ಮ ʻಎಮಿರೇಟಿʼ ಸ್ನೇಹಿತರು (ಯುಎಇ ಪ್ರಜೆಗಳು) ಭಾರತೀಯರಿಗೆ ತಮ್ಮ ಹೃದಯದಲ್ಲಿ ಸ್ಥಾನವನ್ನು ನೀಡಿದ್ದಾರೆ ಮತ್ತು ಅವರ ಸಂತೋಷ ಮತ್ತು ದುಃಖದಲ್ಲಿ ಅವರನ್ನು ಪಾಲುದಾರರನ್ನಾಗಿ ಮಾಡಿದ್ದಾರೆ ಎಂಬುದು ನನಗೆ ಸಂತೋಷ ತಂದಿದೆ. ಕಾಲಾನಂತರದಲ್ಲಿ, ಈ ಸಂಬಂಧವು ದಿನದಿಂದ ದಿನಕ್ಕೆ ಬಲಗೊಳ್ಳುತ್ತಿದೆ, ಮತ್ತು ಸಹೋದರ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಇದರಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಕೋವಿಡ್ ಸಮಯದಲ್ಲಿ ನಿಮ್ಮ ಬಗ್ಗೆ ಅವರ ಸಹಾನುಭೂತಿಯನ್ನು ನಾನು ನೋಡಿದೆ. ಆ ಸಮಯದಲ್ಲಿ, ನಾವು ಭಾರತೀಯರನ್ನು ಮರಳಿ ಕರೆತರಲು ವ್ಯವಸ್ಥೆ ಮಾಡುತ್ತಿದ್ದೇವೆ ಎಂದು ನಾನು ಅವರಿಗೆ ಹೇಳಿದೆ. ಆದರೆ ಅವರು ಆ ಬಗ್ಗೆ ಚಿಂತಿಸಬೇಡಿ ಎಂದು ನನಗೆ ಹೇಳಿದರು. ಅವರು ಇಲ್ಲಿ ಭಾರತೀಯರಿಗೆ ಲಸಿಕೆ ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ಮಾಡಿದರು. ಅವರು ಇಲ್ಲಿರುವುದರಿಂದ, ನಾನು ಚಿಂತಿಸಬೇಕಾಗಿಲ್ಲ. ನಿಮ್ಮೆಲ್ಲರ ಬಗ್ಗೆ ಅವರ ಅಪರಿಮಿತ ಪ್ರೀತಿಯನ್ನು ನಾನು ಪ್ರತಿ ಕ್ಷಣವೂ ಅನುಭವಿಸುತ್ತೇನೆ. ಅಷ್ಟೇ ಅಲ್ಲ, 2015ರಲ್ಲಿ ನಿಮ್ಮೆಲ್ಲರ ಪರವಾಗಿ ಅಬುಧಾಬಿಯಲ್ಲಿ ದೇವಾಲಯವನ್ನು ನಿರ್ಮಿಸುವ ಆಲೋಚನೆಯನ್ನು ನಾನು ಪ್ರಸ್ತಾಪಿಸಿದಾಗ, ಅವರು ಒಂದು ಕ್ಷಣವನ್ನೂ ವ್ಯರ್ಥ ಮಾಡದೆ ತಕ್ಷಣ ಹೌದು ಎಂದು ಹೇಳಿದರು. "ನೀವು ಗೆರೆ ಎಳೆಯುವ ಭೂಮಿಯನ್ನು ನಾನು ನಿಮಗೆ ನೀಡುತ್ತೇನೆ" ಎಂದು ಅವರು ಹೇಳಿದರು. ಮತ್ತು ಈಗ ಅಬುಧಾಬಿಯಲ್ಲಿ ಈ ಭವ್ಯವಾದ ದೇವಾಲಯವನ್ನು ಉದ್ಘಾಟಿಸುವ ಐತಿಹಾಸಿಕ ಸಮಯ ಬಂದಿದೆ.

 

ಸ್ನೇಹಿತರೇ,
ಭಾರತ ಮತ್ತು ಯುಎಇ ನಡುವಿನ ಸ್ನೇಹವು ನೆಲ ಮತ್ತು ಬಾಹ್ಯಾಕಾಶದಲ್ಲಿ ಅಭೂತಪೂರ್ವ ಎತ್ತರವನ್ನು ತಲುಪುತ್ತಿದೆ. ಭಾರತದ ಪರವಾಗಿ, ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 6 ತಿಂಗಳು ಕಳೆದ ಮೊದಲ ʻಎಮಿರಾಟಿʼ ಗಗನಯಾತ್ರಿ ಸುಲ್ತಾನ್ ಅಲ್ ನೆಯಾಡಿ ಅವರನ್ನು ನಾನು ಅಭಿನಂದಿಸುತ್ತೇನೆ. ʻಅಂತಾರಾಷ್ಟ್ರೀಯ ಯೋಗ ದಿನʼ ಮತ್ತು ಸ್ವಾತಂತ್ರ್ಯ ದಿನದಂದು ಬಾಹ್ಯಾಕಾಶದಿಂದ ಭಾರತಕ್ಕೆ ಶುಭಾಶಯಗಳನ್ನು ಕಳುಹಿಸಿದ್ದಕ್ಕಾಗಿ ನಾನು ಅವರಿಗೆ ಧನ್ಯವಾದ ಅರ್ಪಿಸುತ್ತೇನೆ.

ಸ್ನೇಹಿತರೇ,
21ನೇ ಶತಮಾನದ ಈ ಮೂರನೇ ದಶಕದಲ್ಲಿ ಭಾರತ ಮತ್ತು ಯುಎಇ ನಡುವಿನ ಸಂಬಂಧವು ಅಭೂತಪೂರ್ವ ಎತ್ತರವನ್ನು ತಲುಪುತ್ತಿದೆ. ನಾವು ಪರಸ್ಪರರ ಪ್ರಗತಿಯಲ್ಲಿ ಪಾಲುದಾರರಾಗಿದ್ದೇವೆ. ನಮ್ಮ ಸಂಬಂಧವು ಪ್ರತಿಭೆ, ನಾವೀನ್ಯತೆ ಮತ್ತು ಸಂಸ್ಕೃತಿಯನ್ನು ಆಧರಿಸಿದೆ. ಇತ್ತೀಚಿನ ದಿನಗಳಲ್ಲಿ, ನಾವು ನಮ್ಮ ಸಂಬಂಧಕ್ಕೆ ಪ್ರತಿಯೊಂದು ದಿಕ್ಕಿನಲ್ಲಿಯೂ ಹೊಸ ಶಕ್ತಿಯನ್ನು ತುಂಬಿದ್ದೇವೆ. ನಾವು ಒಟ್ಟಾಗಿ, ಕೈ ಜೋಡಿಸಿ ಮುಂದೆ ಸಾಗಿದ್ದೇವೆ. ಇಂದು, ಯುಎಇ ಭಾರತದ ಮೂರನೇ ಅತಿದೊಡ್ಡ ವ್ಯಾಪಾರ ಪಾಲುದಾರ. ಇಂದು, ಯುಎಇ ಭಾರತದ ಏಳನೇ ಅತಿದೊಡ್ಡ ಹೂಡಿಕೆದಾರ. ನಮ್ಮ ಎರಡೂ ದೇಶಗಳು ಸುಗಮ ಜೀವನ ಮತ್ತು ಸುಗಮ ವ್ಯಾಪಾರದಲ್ಲಿ ಗಣನೀಯ ಸಹಕಾರ ನೀಡುತ್ತಿವೆ. ಇಂದು ನಾವು ಸಹಿ ಹಾಕಿದ ಒಪ್ಪಂದಗಳು ಈ ಬದ್ಧತೆಯನ್ನು ಹೆಚ್ಚಿಸುತ್ತಿವೆ. ನಾವು ನಮ್ಮ ಹಣಕಾಸು ವ್ಯವಸ್ಥೆಯಲ್ಲೂ ಸಂಯೋಜನೆಗೆ ಸಾಕ್ಷಿಯಾಗುತ್ತಿದ್ದೇವೆ. ಭಾರತ ಮತ್ತು ಯುಎಇ ನಡುವಿನ ಸಹಭಾಗಿತ್ವವು ತಂತ್ರಜ್ಞಾನ ಮತ್ತು ನಾವೀನ್ಯತೆ ಕ್ಷೇತ್ರದಲ್ಲಿ ನಿರಂತರವಾಗಿ ಬಲಗೊಳ್ಳುತ್ತಿದೆ.

ಸ್ನೇಹಿತರೇ,
ಸಮುದಾಯ ಮತ್ತು ಸಾಂಸ್ಕೃತಿಕ ಸಂಬಂಧಗಳ ವಿಷಯದಲ್ಲಿ ಭಾರತ ಮತ್ತು ಯುಎಇ ಸಾಧನೆಯು ಜಗತ್ತಿಗೇ ಮಾದರಿಯಾಗಿದೆ. ಭಾಷೆಗಳ ಕ್ಷೇತ್ರದಲ್ಲಿ ಎರಡೂ ದೇಶಗಳು ಎಷ್ಟು ಹತ್ತಿರವಾಗಿವೆ ಎಂದು ನನ್ನ ʻಎಮಿರಾಟಿʼ ಸ್ನೇಹಿತರಿಗೆ ಹೇಳಲು ನಾನು ಬಯಸುತ್ತೇನೆ. ನಾನು ಅರೇಬಿಕ್ ಭಾಷೆಯಲ್ಲಿ ಕೆಲವು ವಾಕ್ಯಗಳನ್ನು ಮಾತನಾಡಲು ಪ್ರಯತ್ನಿಸುತ್ತಿದ್ದೇನೆ -
“अल हिंद वल इमारात, बी-कलम अल ज़मान, वल किताब अद्दुनिया. नक्तुबु, हिसाब ली मुस्तकबल अफ़दल. व सदाका बयिना, अल हिंद वल इमारात हिया, सरवतना अल मुश्तरका. फ़िल हक़ीका, नहनु, फ़ी बीदएया, साईदा ली मुस्तकबल जईईदा !!!
ನಾನು ಅರೇಬಿಕ್ ಭಾಷೆಯಲ್ಲಿ ಮಾತನಾಡಲು ಪ್ರಯತ್ನಿಸಿದ್ದೇನೆ. ನನ್ನ ಉಚ್ಚಾರಣೆಯಲ್ಲಿ ಏನಾದರೂ ತಪ್ಪುಗಳಿದ್ದರೆ ನಾನು ನನ್ನ ಯುಎಇ ಸ್ನೇಹಿತರಲ್ಲಿ ಕ್ಷಮೆಯಾಚಿಸುತ್ತೇನೆ. ಮತ್ತು ನಾನು ಹೇಳಿದ್ದನ್ನು ಅರ್ಥಮಾಡಿಕೊಳ್ಳದವರಿಗೆ, ನಾನು ಅದರ ಅರ್ಥವನ್ನು ಸಹ ವಿವರಿಸುತ್ತಿದ್ದೇನೆ. ನಾನು ಅರೇಬಿಕ್ ಭಾಷೆಯಲ್ಲಿ ಹೇಳಿದ್ದೇನೆಂದರೆ: ಭಾರತ ಮತ್ತು ಯುಎಇ ಸಮಯವೆಂಬ ಲೇಖನಿಯನ್ನು ಬಳಸಿ ವಿಶ್ವದ ಪುಸ್ತಕದಲ್ಲಿ ಉತ್ತಮ ಭವಿಷ್ಯವನ್ನು ಬರೆಯುತ್ತಿವೆ. ಭಾರತ ಮತ್ತು ಯುಎಇ ನಡುವಿನ ಸ್ನೇಹವು ನಾವು ಪರಸ್ಪರ ಹಂಚಿಕೊಂಡಿರುವ ಸಂಪತ್ತು. ವಾಸ್ತವವಾಗಿ, ನಾವು ಉತ್ತಮ ಭವಿಷ್ಯವನ್ನು ಪ್ರಾರಂಭಿಸುತ್ತಿದ್ದೇವೆ. ಈಗ ಇದರ ಬಗ್ಗೆ ಯೋಚಿಸಿ ನೋಡಿ - 'ಕಲಾಂ' (ಪೆನ್ನು), 'ಕಿತಾಬ್' (ಪುಸ್ತಕ), 'ದುನಿಯಾ' (ಜಗತ್ತು), 'ಹಿಸಾಬ್' (ಖಾತೆ), 'ಜಮೀನ್' (ಭೂಮಿ) ಮುಂತಾದ ಪದಗಳನ್ನು ಭಾರತದಲ್ಲಿ ಎಷ್ಟು ಸುಲಭವಾಗಿ ಮಾತನಾಡಲಾಗುತ್ತದೆ. ಮತ್ತು ಈ ಮಾತುಗಳು ಅಲ್ಲಿಗೆ ಹೇಗೆ ತಲುಪಿದವು? ಈ ಗಲ್ಫ್ ಪ್ರದೇಶದಿಂದ! ನಮ್ಮ ಎರಡು ದೇಶಗಳ ನಡುವಿನ ಸಂಬಂಧವು ನೂರಾರು ಮತ್ತು ಸಾವಿರಾರು ವರ್ಷಗಳ ಹಿಂದಿನವರೆಗೆ ವ್ಯಾಪಿಸಿದೆ. ಮತ್ತು ಈ ಸಂಬಂಧವು ದಿನದಿಂದ ದಿನಕ್ಕೆ ವರ್ಧನೆಯಾಗುತ್ತಲೇ ಇರುತ್ತದೆ ಎಂದು ಭರತ ಆಶಿಸುತ್ತದೆ.

 

ಸ್ನೇಹಿತರೇ,
ಈ ಕ್ಷಣದಲ್ಲಿ ಕ್ರೀಡಾಂಗಣದಲ್ಲಿ ನೂರಾರು ವಿದ್ಯಾರ್ಥಿಗಳು ಸಹ ಇದ್ದಾರೆ ಎಂದು ನಾನು ಕೇಳಲ್ಪಟ್ಟೆ.  ಪ್ರಸ್ತುತ, ʻಯುಎಇʼಯ ಭಾರತೀಯ ಶಾಲೆಗಳಲ್ಲಿ 1.25 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಈ ಯುವ ಸ್ನೇಹಿತರು ಭಾರತ ಮತ್ತು ಯುಎಇಯ ಸಮೃದ್ಧಿಯಲ್ಲಿ ಪಾಲುದಾರರಾಗಲಿದ್ದಾರೆ. ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅವರ ಬೆಂಬಲದೊಂದಿಗೆ ʻಐಐಟಿ-ದೆಹಲಿʼಯ ಅಬುಧಾಬಿ ಕ್ಯಾಂಪಸ್ಲ್ಲಿ ಸ್ನಾತಕೋತ್ತರ ಕೋರ್ಸ್ ಅನ್ನು ಕಳೆದ ತಿಂಗಳು ಆರಂಭಿಸಲಾಯಿತು. ದುಬೈನಲ್ಲಿ ʻಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ʼ(ಸಿಬಿಎಸ್ಇ) ಕಚೇರಿ ಕೂಡ ಶೀಘ್ರದಲ್ಲೇ ತೆರೆಯಲಿದೆ. ಈ ಸಂಸ್ಥೆಗಳು ಇಲ್ಲಿನ ಭಾರತೀಯ ಸಮುದಾಯಕ್ಕೆ ಉತ್ತಮ ಶಿಕ್ಷಣವನ್ನು ಒದಗಿಸಲು ಸಹಾಯ ಮಾಡುತ್ತವೆ ಎಂದು ನಾನು ನಂಬುತ್ತೇನೆ.

ಸ್ನೇಹಿತರೇ,
2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವುದು ಇಂದು, ಪ್ರತಿಯೊಬ್ಬ ಭಾರತೀಯನ ಗುರಿಯಾಗಿದೆ. ಆರ್ಥಿಕತೆಯು ವೇಗವಾಗಿ ಬೆಳೆಯುತ್ತಿರುವ ದೇಶ ಯಾವುದು? ಅದು ನಮ್ಮ ಭಾರತ! ಅತಿ ಹೆಚ್ಚು ಸ್ಮಾರ್ಟ್ಫೋನ್ ಡೇಟಾ ಬಳಸುವ ದೇಶ ಯಾವುದು? ಅದು ನಮ್ಮ ಭಾರತ! ಅತಿ ಹೆಚ್ಚು ಜಾಗತಿಕ ʻಫಿನ್‌ಟೆಕ್ʼ ಅಳವಡಿಕೆ ದರವನ್ನು ಹೊಂದಿರುವ ದೇಶ ಯಾವುದು? ಅದೂ ನಮ್ಮ ಭಾರತವೇ! ಅತಿ ಹೆಚ್ಚು ಹಾಲು ಉತ್ಪಾದಿಸುವ ದೇಶ ಯಾವುದು? ಅದು ನಮ್ಮ ಭಾರತ! ಇಂಟರ್ನೆಟ್ ಬಳಕೆದಾರರ ವಿಷಯದಲ್ಲಿ ಎರಡನೇ ಸ್ಥಾನದಲ್ಲಿರುವ ದೇಶ ಯಾವುದು? ಅದು ನಮ್ಮ ಭಾರತ! ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್ ತಯಾರಕ ದೇಶ ಯಾವುದು? ಅದು ನಮ್ಮ ಭಾರತ! ವಿಶ್ವದ ಮೂರನೇ ಅತಿದೊಡ್ಡ ನವೋದ್ಯಮ ಪರಿಸರ ವ್ಯವಸ್ಥೆಯನ್ನು ಹೊಂದಿರುವ ದೇಶ ಯಾವುದು? ಅದು ನಮ್ಮ ಭಾರತ! ತನ್ನ ಮೊದಲ ಪ್ರಯತ್ನದಲ್ಲೇ ಮಂಗಳ ಗ್ರಹವನ್ನು ತಲುಪಿದ ದೇಶ ಯಾವುದು? ಅದು ನಮ್ಮ ಭಾರತ! ಚಂದ್ರನ ದಕ್ಷಿಣ ಧ್ರುವದ ಮೇಲೆ ತನ್ನ ಧ್ವಜವನ್ನು ನೆಟ್ಟ ದೇಶ ಯಾವುದು? ಅದು ನಮ್ಮ ಭಾರತ! ಒಂದೇ ಬಾರಿಗೆ ನೂರಾರು ಉಪಗ್ರಹಗಳನ್ನು ಕಳುಹಿಸುವ ಮೂಲಕ ದಾಖಲೆಯನ್ನು ಸ್ಥಾಪಿಸಿದ ದೇಶ ಯಾವುದು? ಅದು ನಮ್ಮ ಭಾರತ! 5G ತಂತ್ರಜ್ಞಾನವನ್ನು ತನ್ನದೇ ಆದ ರೀತಿಯಲ್ಲಿ ಅಭಿವೃದ್ಧಿಪಡಿಸಿದ ಮತ್ತು ಅದನ್ನು ವೇಗವಾಗಿ ಹೊರತಂದ ದೇಶ ಯಾವುದು? ಅದೂ ನಮ್ಮ ಭಾರತವೇ!

ಸ್ನೇಹಿತರೇ,
ಭಾರತದ ಸಾಧನೆಗಳು ಪ್ರತಿಯೊಬ್ಬ ಭಾರತೀಯನ ಸಾಧನೆಗಳಾಗಿವೆ. ಕೇವಲ 10 ವರ್ಷಗಳಲ್ಲಿ, ಭಾರತವು ವಿಶ್ವದ ಹನ್ನೊಂದನೇ ಅತಿದೊಡ್ಡ ಆರ್ಥಿಕತೆಯ ಸ್ಥಾನದಿಂದ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಪರಿವರ್ತನೆಗೊಂಡಿದೆ. ಮತ್ತು ನಿಮಗೆ ತಿಳಿದಿದೆ, ಪ್ರತಿಯೊಬ್ಬ ಭಾರತೀಯನ ಸಾಮರ್ಥ್ಯದ ಬಗ್ಗೆ ನನಗೆ ಅಪಾರ ವಿಶ್ವಾಸವಿದೆ. ಈ ವಿಶ್ವಾಸದ ಆಧಾರದ ಮೇಲೆಯೇ ಮೋದಿ ಕೂಡ ʻಗ್ಯಾರಂಟಿʼ ನೀಡಿದ್ದಾರೆ. ಮೋದಿಯವರ ಗ್ಯಾರಂಟಿ ನಿಮಗೆ ತಿಳಿದಿದೆಯೇ? ಮೋದಿ ಅವರು ತಮ್ಮ ಮೂರನೇ ಅವಧಿಯಲ್ಲಿ ಭಾರತವನ್ನು ಜಗತ್ತಿನ  ಮೂರನೇ ಅತಿದೊಡ್ಡ ಆರ್ಥಿಕತೆಯನ್ನಾಗಿ ಮಾಡುವ ಗ್ಯಾರಂಟಿ ನೀಡಿದ್ದಾರೆ. ಮತ್ತು ಮೋದಿಯವರ ಗ್ಯಾರಂಟಿ ಎಂದರೆ ಈಡೇರಿಕೆಯ ಗ್ಯಾರಂಟಿ. ನಮ್ಮ ಸರ್ಕಾರವು ಜನರ ಜೀವನ ಮಟ್ಟವನ್ನು ಸುಧಾರಿಸಲು, ಅವರ ಸಮಸ್ಯೆಗಳನ್ನು ಕಡಿಮೆ ಮಾಡಲು ನಿರಂತರವಾಗಿ ಕೆಲಸ ಮಾಡುತ್ತಿದೆ. ನಾವು ನಾಲ್ಕು ಕೋಟಿಗೂ ಹೆಚ್ಚು ಕುಟುಂಬಗಳಿಗೆ ಶಾಶ್ವತ ಮನೆಗಳನ್ನು ಒದಗಿಸಿದ್ದೇವೆ. ನಾವು 10 ಕೋಟಿಗೂ ಹೆಚ್ಚು ಕುಟುಂಬಗಳಿಗೆ ನೀರಿನ ಸಂಪರ್ಕವನ್ನು ಒದಗಿಸಿದ್ದೇವೆ. ನಾವು 50 ಕೋಟಿಗೂ ಹೆಚ್ಚು ಜನರನ್ನು ಬ್ಯಾಂಕಿಂಗ್ ವ್ಯವಸ್ಥೆಗೆ ಸಂಪರ್ಕಿಸಿದ್ದೇವೆ. ನಾವು 50 ಕೋಟಿಗೂ ಹೆಚ್ಚು ಜನರಿಗೆ 5 ಲಕ್ಷ ರೂಪಾಯಿಗಳವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆಯನ್ನು ಒದಗಿಸಿದ್ದೇವೆ. ಗ್ರಾಮೀಣ ಪ್ರದೇಶದ ಜನರಿಗೆ ಚಿಕಿತ್ಸೆ ಪಡೆಯಲು ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ನಾವು 1.5 ಲಕ್ಷಕ್ಕೂ ಹೆಚ್ಚು ʻಆಯುಷ್ಮಾನ್ ಆರೋಗ್ಯ ಮಂದಿರʼಗಳನ್ನು ನಿರ್ಮಿಸಿದ್ದೇವೆ.

 

ಸ್ನೇಹಿತರೇ,
ಇತ್ತೀಚೆಗೆ ನಿಮ್ಮಲ್ಲಿ ಯಾರೇ ಭಾರತಕ್ಕೆ ಭೇಟಿ ನೀಡಿದ್ದರೂ ಈ ದಿನಗಳಲ್ಲಿ ಭಾರತವು ಎಷ್ಟು ವೇಗವಾಗಿ ಬದಲಾಗುತ್ತಿದೆ ಎಂದು ತಿಳಿದಿರುತ್ತದೆ. ಇಂದು, ಭಾರತವು ಆಧುನಿಕ ʻಎಕ್ಸ್ಪ್ರೆಸ್ ವೇʼಗಳನ್ನು ನಿರ್ಮಿಸುತ್ತಿದೆ. ಇಂದು, ಭಾರತವು ಹೊಸ ವಿಮಾನ ನಿಲ್ದಾಣಗಳನ್ನು ನಿರ್ಮಿಸುತ್ತಿದೆ. ಇಂದು, ಭಾರತವು ಆಧುನಿಕ ರೈಲ್ವೆ ನಿಲ್ದಾಣಗಳನ್ನು ನಿರ್ಮಿಸುತ್ತಿದೆ. ಇಂದು, ಭಾರತದ ಅಸ್ಮಿತೆಯು ಹೊಸ ಆಲೋಚನೆಗಳು, ಹೊಸ ಆವಿಷ್ಕಾರಗಳಿಂದ ರೂಪುಗೊಳ್ಳುತ್ತಿದೆ. ಇಂದು, ಭಾರತವನ್ನು ಬೃಹತ್ ಮೂಲಸೌಕರ್ಯ ಯೋಜನೆಗಳಿಂದ ಗುರುತಿಸಲಾಗಿದೆ. ಇಂದು, ಭಾರತದ ಅಸ್ಮಿತೆ ರೋಮಾಂಚಕ ಪ್ರವಾಸೋದ್ಯಮ ತಾಣವಾಗಿ ವಿಕಸನಗೊಳ್ಳುತ್ತಿದೆ. ಇಂದು, ಭಾರತವನ್ನು ಪ್ರಮುಖ ಕ್ರೀಡಾ ಶಕ್ತಿಯಾಗಿ ಗುರುತಿಸಲಾಗುತ್ತಿದೆ. ಮತ್ತು ಇದೆಲ್ಲವನ್ನೂ ಕೇಳಿದರೆ ನಿಮ್ಮಲ್ಲಿ ಹೆಮ್ಮೆಯ ಭಾವ ತುಂಬುತ್ತದೆ, ಹೌದಲ್ಲವೇ?

ಸ್ನೇಹಿತರೇ,
ಭಾರತದಲ್ಲಿ ನಡೆಯುತ್ತಿರುವ ಡಿಜಿಟಲ್ ಕ್ರಾಂತಿಯ ಬಗ್ಗೆ ನಿಮಗೆಲ್ಲರಿಗೂ ತಿಳಿದಿದೆ. ಡಿಜಿಟಲ್ ಇಂಡಿಯಾ ಕುರಿತಾದ ಪ್ರಶಂಸೆ ವಿಶ್ವಾದ್ಯಂತ ಪ್ರತಿಧ್ವನಿಸುತ್ತಿದೆ. ʻಯುಎಇʼನಲ್ಲಿರುವ ನಮ್ಮ ಎಲ್ಲಾ ಸಹೋದ್ಯೋಗಿಗಳು ಸಹ ಇದರಿಂದ ಪ್ರಯೋಜನ ಪಡೆಯುತ್ತಾರೆ ಎಂದು ಖಚಿತಪಡಿಸಿಕೊಳ್ಳಲು ನಾವು ಶ್ರಮಿಸುತ್ತಿದ್ದೇವೆ. ನಾವು ನಮ್ಮ ʻರುಪೇ ಕಾರ್ಡ್ʼ ತಂತ್ರಾಂಶವನ್ನು ಅನ್ನು ʻಯುಎಇʼಯೊಂದಿಗೆ ಹಂಚಿಕೊಂಡಿದ್ದೇವೆ. ಇದು ʻಯುಎಇʼಗೆ ತನ್ನ ದೇಶೀಯ ಕಾರ್ಡ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡಿದೆ. ಮತ್ತು ಭಾರತದ ಬೆಂಬಲದೊಂದಿಗೆ ಅಭಿವೃದ್ಧಿಪಡಿಸಿದ ಕಾರ್ಡ್ ವ್ಯವಸ್ಥೆಗೆ ʻಯುಎಇʼ ಯಾವ ಹೆಸರನ್ನು ನೀಡಿದೆ ಎಂದು ನಿಮಗೆ ತಿಳಿದಿದೆಯೇ? ಯುಎಇ ಇದಕ್ಕೆ "ಜೀವನ್" ಎಂದು ಹೆಸರಿಸಿದೆ. ಎಷ್ಟು ಸುಂದರವಾದ ಹೆಸರನ್ನು ʻಯುಎಇʼ ನೀಡಿದೆ!!

ಸ್ನೇಹಿತರೇ,
ಶೀಘ್ರದಲ್ಲೇ, ʻಯುಪಿಐʼ ಅನ್ನು ʻಯುಎಇʼನಲ್ಲಿಯೂ ಪ್ರಾರಂಭಿಸಲಾಗುವುದು. ಇದು ಯುಎಇ ಮತ್ತು ಭಾರತೀಯ ಖಾತೆಗಳ ನಡುವೆ ತಡೆರಹಿತ ಪಾವತಿಗೆ ಅನುವು ಮಾಡಿಕೊಡುತ್ತದೆ. ಇದರೊಂದಿಗೆ, ನೀವು ಭಾರತದಲ್ಲಿರುವ ನಿಮ್ಮ ಕುಟುಂಬ ಸದಸ್ಯರಿಗೆ ಹಣವನ್ನು ಸುಲಭವಾಗಿ ಕಳುಹಿಸಲು ಸಾಧ್ಯವಾಗುತ್ತದೆ.

ಸ್ನೇಹಿತರೇ,
ಭಾರತದ ಬೆಳೆಯುತ್ತಿರುವ ಸಾಮರ್ಥ್ಯಗಳು ಜಗತ್ತಿನಲ್ಲಿ ಸ್ಥಿರತೆ ಮತ್ತು ಸಮೃದ್ಧಿಯ ಭರವಸೆಯನ್ನು ಹುಟ್ಟುಹಾಕಿವೆ. ವಿಶ್ವಾಸಾರ್ಹ ಜಾಗತಿಕ ವ್ಯವಸ್ಥೆಯನ್ನು ಸ್ಥಾಪಿಸುವಲ್ಲಿ ಭಾರತವು ಸಕ್ರಿಯ ಪಾತ್ರ ವಹಿಸಬಹುದು ಎಂದು ಜಗತ್ತು ನಂಬಿದೆ. ಇಂದು ಭಾರತ ಮತ್ತು ಯುಎಇ ಒಟ್ಟಾಗಿ ಈ ನಂಬಿಕೆಯನ್ನು ಬಲಪಡಿಸುತ್ತಿವೆ ಎಂದು ನನಗೆ ಸಂತೋಷವಾಗಿದೆ. ಭಾರತವು ʻಜಿ-20ʼ ಶೃಂಗಸಭೆಯನ್ನು ಯಶಸ್ವಿಯಾಗಿ ಆಯೋಜಿಸಿದ್ದನ್ನು ನೀವೆಲ್ಲರೂ ನೋಡಿದ್ದೀರಿ. ಈ ಶೃಂಗಸಭೆಯಲ್ಲಿ ಪಾಲುದಾರರಾಗಿ ನಾವು ʻಯುಎಇʼಯನ್ನು ಆಹ್ವಾನಿಸಿದ್ದೆವು. ಇಂತಹ ಪ್ರಯತ್ನಗಳು ನಮ್ಮ ವ್ಯೂಹಾತ್ಮಕ ಪಾಲುದಾರಿಕೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿವೆ. ಇಂದು, ಜಗತ್ತು ಭಾರತವನ್ನು 'ವಿಶ್ವ ಬಂಧು' (ಜಾಗತಿಕ ಸ್ನೇಹಿತ) ಎಂದು ನೋಡುತ್ತದೆ. ಇಂದು, ವಿಶ್ವದ ಪ್ರತಿಯೊಂದು ಪ್ರಮುಖ ವೇದಿಕೆಯಲ್ಲೂ ಭಾರತದ ಧ್ವನಿ ಕೇಳಿಬರುತ್ತಿದೆ. ಬಿಕ್ಕಟ್ಟು ಉದ್ಭವಿಸಿದೆಡೆಗೆಲ್ಲಾ ತಲುಪುವ ಮೊದಲ ದೇಶಗಳಲ್ಲಿ ಭಾರತದ ಹೆಸರು ಸಹ ಸೇರಿದೆ. ಇಂದಿನ ಬಲಿಷ್ಠ ಭಾರತವು ಪ್ರತಿ ಹಂತದಲ್ಲೂ ತನ್ನ ಜನರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಂತಿದೆ. ಕಳೆದ 10 ವರ್ಷಗಳಲ್ಲಿ, ವಿದೇಶದಲ್ಲಿ ವಾಸಿಸುವ ಭಾರತೀಯರು ಸಮಸ್ಯೆಗಳನ್ನು ಎದುರಿಸಿದಾಗಲೆಲ್ಲಾ ಭಾರತ ಸರ್ಕಾರವು ತ್ವರಿತವಾಗಿ ಪ್ರತಿಕ್ರಿಯಿಸಿರುವುದನ್ನು ನೀವು ನೋಡಿದ್ದೀರಿ. ಉಕ್ರೇನ್, ಸುಡಾನ್, ಯೆಮೆನ್ ಮತ್ತು ಇತರ ಸ್ಥಳಗಳಲ್ಲಿ ಬಿಕ್ಕಟ್ಟು ಉಂಟಾದಾಗ ಆ ಸಮಯದಲ್ಲಿ ಅಲ್ಲಿ ಸಿಲುಕಿದ ಸಾವಿರಾರು ಭಾರತೀಯರನ್ನು ನಾವು ಸುರಕ್ಷಿತವಾಗಿ ಸ್ಥಳಾಂತರಿಸಿದ್ದೇವೆ ಮತ್ತು ಅವರನ್ನು ಭಾರತಕ್ಕೆ ಮರಳಿ ಕರೆತಂದಿದ್ದೇವೆ. ವಿಶ್ವದ ವಿವಿಧ ಭಾಗಗಳಲ್ಲಿ ವಾಸಿಸುವ ಭಾರತೀಯರಿಗೆ ಸಹಾಯ ಮಾಡಲು ಸರ್ಕಾರ ಹಗಲು ರಾತ್ರಿ ಕೆಲಸ ಮಾಡುತ್ತಿದೆ.

 

ಸ್ನೇಹಿತರೇ,
ಭಾರತ ಮತ್ತು ಯುಎಇ ಒಟ್ಟಾಗಿ 21ನೇ ಶತಮಾನಕ್ಕೆ ಹೊಸ ಇತಿಹಾಸವನ್ನು ಬರೆಯುತ್ತಿವೆ. ಮತ್ತು ನೀವೆಲ್ಲರೂ, ನನ್ನ ಸ್ನೇಹಿತರೇ, ಈ ಇತಿಹಾಸದ ಮಹತ್ವದ ಅಡಿಪಾಯವಾಗಿದ್ದೀರಿ. ನೀವು ಇಲ್ಲಿ ಪಡುತ್ತಿರುವ ಕಠಿಣ ಪರಿಶ್ರಮವು ಭಾರತದ ಶಕ್ತಿಯನ್ನು ಹೆಚ್ಚಿಸುತ್ತದೆ. ಭಾರತ ಮತ್ತು ಯುಎಇ ನಡುವಿನ ಅಭಿವೃದ್ಧಿ ಮತ್ತು ಸ್ನೇಹವನ್ನು ಬಲಪಡಿಸುತ್ತಲೇ ಇರಿ. ಈ ನಂಬಿಕೆಯೊಂದಿಗೆ, ಈ ಭವ್ಯ ಸ್ವಾಗತಕ್ಕಾಗಿ ನಾನು ಮತ್ತೊಮ್ಮೆ ನಿಮ್ಮೆಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ! ನನ್ನೊಂದಿಗೆ ಎಲ್ಲರೂ ಜೋರಾಗಿ ಹೇಳಿ: 
ಭಾರತ್ ಮಾತಾ ಕಿ - ಜೈ! ಭಾರತ್ ಮಾತಾ ಕಿ - ಜೈ! ಭಾರತ್ ಮಾತಾ ಕಿ - ಜೈ!

ನಿಮ್ಮ ಮತ್ತು ನನ್ನ ನಡುವೆ ತುಂಬಾ ಅಂತರವಿದೆ, ಹಾಗಾಗಿ ನಿಮ್ಮನ್ನು ನೋಡಲು ನಾನೇ ಬರುತ್ತಿದ್ದೇನೆ. ಆದರೆ ನಿಮ್ಮಲ್ಲಿ ನನ್ನ ವಿನಂತಿಯೆಂದರೆ ನೀವು ಇರುವಲ್ಲಿಯೇ ಇರಿ, ಇದರಿಂದ ನಾನು ನಿಮ್ಮನ್ನು ಸೂಕ್ತ ರೀತಿಯಲ್ಲಿ ಭೇಟಿಯಾಗಲು ಸಾಧ್ಯವಾಗುತ್ತದೆ. ಆದ್ದರಿಂದ, ನೀವು ನನಗೆ ಸಹಾಯ ಮಾಡುವಿರಲ್ಲವೇ?

ಭಾರತ್ ಮಾತಾ ಕಿ - ಜೈ!
ಭಾರತ್ ಮಾತಾ ಕಿ - ಜೈ!
ಅನಂತ ಧನ್ಯವಾದಗಳು.

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
PM Modi hails diaspora in Kuwait, says India has potential to become skill capital of world

Media Coverage

PM Modi hails diaspora in Kuwait, says India has potential to become skill capital of world
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ಡಿಸೆಂಬರ್ 2024
December 21, 2024

Inclusive Progress: Bridging Development, Infrastructure, and Opportunity under the leadership of PM Modi