ಜಮ್ಮು ಮತ್ತು ಕಾಶ್ಮೀರದ ಲೆಫ್ಸಿನೆಂಟ್ ಗೌರ್ನರ್ ಶ್ರೀ ಮನೋಜ್ ಸಿನ್ಹಾಜಿ, ನನ್ನ ಸಂಪುಟದ ಸಹೋದ್ಯೋಗಿ ಶ್ರೀ ಪ್ರತಾಪ್ ರಾವ್ ಜಾದವ್ ಜಿ, ಇತರ ಗಣ್ಯರೇ ಮತ್ತು ಜಮ್ಮು ಮತ್ತು ಕಾಶ್ಮೀರದಾದ್ಯಂತ ಇರುವ ನನ್ನ ಯುವ ಸ್ನೇಹಿತರೇ ಹಾಗೂ ನನ್ನೆಲ್ಲಾ ಸಹೋದರ ಮತ್ತು ಸಹೋದರಿಯರೇ..!
ಮಿತ್ರರೇ,
ಇಂದು ಬೆಳಿಗ್ಗೆ, ನಾನು ದೆಹಲಿಯಿಂದ ಶ್ರೀನಗರಕ್ಕೆ ಪ್ರಯಾಣ ಮಾಡಲು ತಯಾರಿ ನಡೆಸಿದ್ದಾಗ, ನನ್ನಲ್ಲಿ ಅಪಾರ ಉತ್ಸಾಹ ತುಂಬಿತ್ತು. ಏಕೆ ನಾನು ಇಂದು ಇಷ್ಟು ಉತ್ಸುಕನಾಗಿದ್ದೇನೆ ಎಂದು ನನಗೆ ನಾನೇ ಆಶ್ಚರ್ಯಪಟ್ಟುಕೊಂಡೆನು ಮತ್ತು ನಾನು ಅದಕ್ಕೆ ಎರಡು ಪ್ರಾಥಮಿಕ ಕಾರಣಗಳನ್ನು ಗುರುತಿಸಿದೆ. ಆದರೆ ಮೂರನೇ ಕಾರಣವೂ ಇದೆ. ದೀರ್ಘ ಕಾಲದಿಂದ ಇಲ್ಲಿ ಕೆಲಸ ಮಾಡುತ್ತಿರುವ ನನಗೆ ಈ ಸ್ಥಳದ ಅನೇಕ ಜನರ ಪರಿಚಯವಿದೆ ಮತ್ತು ವಿವಿಧ ವಲಯಗಳಲ್ಲಿ ಗಾಢವಾದ ಸಂಪರ್ಕವನ್ನು ಹೊಂದಿದ್ದೇನೆ. ಸ್ವಾಭಾವಿಕವಾಗಿ, ಇದು ಅನೇಕ ಹಳೆಯ ನೆನಪುಗಳನ್ನು ತರುತ್ತದೆ. ಆದರೆ ನನ್ನ ಪ್ರಾಥಮಿಕ ಗಮನವು ಎರಡು ಕಾರಣಗಳ ಮೇಲೆ ಉಳಿದಿದೆ: ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿಗೆ ಸಂಬಂಧಿಸಿದ ಇಂದಿನ ಕಾರ್ಯಕ್ರಮ ಮತ್ತು ಲೋಕಸಭಾ ಚುನಾವಣೆಯ ನಂತರ ಇದು ಕಾಶ್ಮೀರದ ಜನರೊಂದಿಗೆ ನನ್ನ ಮೊದಲ ಭೇಟಿಯಾಗಿರುವುದು.
ಮಿತ್ರರೇ,
ನಾನು ಇಟಲಿಯಲ್ಲಿ ನಡೆದ ಜಿ-7 ಶೃಂಗಸಭೆಯಿಂದ ಕಳೆದ ವಾರವಷ್ಟೇ ವಾಪಸ್ಸಾಗಿದ್ದೇನೆ. ಮನೋಜ್ ಜಿ ಪ್ರಸ್ತಾಪಿಸಿದಂತೆ, ಸತತವಾಗಿ ಮೂರು ಬಾರಿ ಸರ್ಕಾರ ರಚಿಸುವುದು ಗಮನಾರ್ಹ ಜಾಗತಿಕ ಪರಿಣಾಮವನ್ನು ಮೂಡಿಸಿದೆ. ವಿಶ್ವ ನಮ್ಮ ದೇಶವನ್ನು ಹೇಗೆ ನೋಡುತ್ತದೆ ಎಂಬುದನ್ನು ಇದು ಬದಲಾಯಿಸುತ್ತದೆ. ಇತರ ರಾಷ್ಟ್ರಗಳು ಭಾರತದೊಂದಿಗೆ ತಮ್ಮ ಸಂಬಂಧಗಳಿಗೆ ಆದ್ಯತೆ ನೀಡುತ್ತಿವೆ ಮತ್ತು ಬಲಪಡಿಸುತ್ತಿವೆ. ನಾವು ಇಂದು ಬಹಳ ಅದೃಷ್ಟವಂತರು. ಭಾರತೀಯ ಜನರ ಆಕಾಂಕ್ಷೆಗಳು ಸಾರ್ವಕಾಲಿಕ ಎತ್ತರದಲ್ಲಿವೆ ಮತ್ತು ಈ ಉನ್ನತ ಆಕಾಂಕ್ಷೆಗಳು ದೇಶದ ದೊಡ್ಡ ಶಕ್ತಿಯಾಗಿದೆ. ಅಂತಹ ಆಶೋತ್ತರಗಳೊಂದಿಗೆ ಸರ್ಕಾರದ ಬಗ್ಗೆ ಸಾರ್ವಜನಿಕ ನಿರೀಕ್ಷೆಗಳು ಗಣನೀಯವಾಗಿ ಹೆಚ್ಚಾಗುತ್ತಿವೆ. ನಮ್ಮನ್ನು ಈ ಮಾನದಂಡಗಳ ಮೇಲೆ ಮೌಲ್ಯಮಾಪನ ಮಾಡಿದ ನಂತರ, ಜನರು ಮೂರನೇ ಬಾರಿಗೆ ನಮ್ಮ ಸರ್ಕಾರವನ್ನು ಆಯ್ಕೆ ಮಾಡಿದ್ದಾರೆ. ಮಹತ್ವಾಕಾಂಕ್ಷೆಯ ಸಮಾಜವು ಎರಡನೇ ಅವಕಾಶಗಳನ್ನು ಸುಲಭವಾಗಿ ನೀಡುವುದಿಲ್ಲ. ಇದು ಕಾರ್ಯಕ್ಷಮತೆಯ ಮೇಲೆ ಮಾತ್ರ ನಿರ್ಣಯಿಸುತ್ತದೆ-ನಿಮ್ಮ ಅಧಿಕಾರಾವಧಿಯಲ್ಲಿ ನೀವು ಏನು ಸಾಧಿಸಿದ್ದೀರಿ. ಈ ಕಾರ್ಯಕ್ಷಮತೆ ಅವರಿಗೆ ಸ್ಪಷ್ಟವಾಗಿದೆ; ಇದು ಸಾಮಾಜಿಕ ಮಾಧ್ಯಮ ಅಥವಾ ಭಾಷಣಗಳನ್ನು ಅವಲಂಬಿಸಿಲ್ಲ. ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡಿದ ನಂತರ, ರಾಷ್ಟ್ರವು ನಮ್ಮ ಸರ್ಕಾರಕ್ಕೆ ಮೂರನೇ ಬಾರಿ ನಿಮ್ಮೆಲ್ಲರಿಗೂ ಸೇವೆ ಸಲ್ಲಿಸುವ ಅವಕಾಶ ನೀಡಿದೆ. ಸಾರ್ವಜನಿಕರಿಗೆ ನಮ್ಮ ಮೇಲೆ ನಂಬಿಕೆಯಿದೆ ಮತ್ತು ನಮ್ಮ ಸರ್ಕಾರ ಮಾತ್ರ ಅವರ ಆಶೋತ್ತರಗಳನ್ನು ಈಡೇರಿಸುತ್ತದೆಂದು ನಂಬಿದ್ದಾರೆ. ನಮ್ಮ ಉದ್ದೇಶಗಳು ಮತ್ತು ನೀತಿಗಳಲ್ಲಿ ಈ ವಿಶ್ವಾಸವನ್ನು ದೃಢೀಕರಿಸಲಾಗಿದೆ. ಈ ಮಹತ್ವಾಕಾಂಕ್ಷೆಯ ಸಮಾಜವು ನಿರಂತರ, ತ್ವರಿತ ಸಾಧನೆ ಮತ್ತು ಫಲಿತಾಂಶಗಳನ್ನು ಬಯಸುತ್ತದೆ. ಇದು ಇನ್ನು ಮುಂದೆ ವಿಳಂಬವನ್ನು ಸಹಿಸುವುದಿಲ್ಲ. ಆಗುತ್ತದೆ, ನೋಡುತ್ತೇವೆ ಎಂಬ ಧೋರಣೆಯನ್ನು ಇನ್ನು ನಾವು ಒಪ್ಪುವುದಿಲ್ಲ. ಜನರು ಈಗ ತಕ್ಷಣ ಉತ್ತರವನ್ನು ಕೇಳುತ್ತಾರೆ. ಇದು ಈಗಿನ ಮನಸ್ಥಿತಿ. ಸಾರ್ವಜನಿಕ ನಿರೀಕ್ಷೆಗಳಿಗೆ ಪ್ರತಿಕ್ರಿಯೆಯಾಗಿ, ನಮ್ಮ ಸರ್ಕಾರವು ಸಾಧನೆ ಮತ್ತು ಫಲಿತಾಂಶಗಳನ್ನು ನೀಡುತ್ತದೆ. ಈ ಕಾರ್ಯಕ್ಷಮತೆಯ ಆಧಾರದ ಮೇಲೆಯೇ 60 ವರ್ಷಗಳ ನಂತರ-ಆರು ದಶಕಗಳ ನಂತರ ನಮ್ಮ ದೇಶವು ಮೂರನೇ ಬಾರಿಗೆ ಸರ್ಕಾರವನ್ನು ಮತ್ತೆ ಆಯ್ಕೆ ಮಾಡಿದೆ. ಈ ಚುನಾವಣೆಯ ಫಲಿತಾಂಶ ಮತ್ತು ಮೂರನೇ ಬಾರಿಗೆ ಸರ್ಕಾರ ರಚನೆಯು ಇಡೀ ವಿಶ್ವಕ್ಕೆ ಮಹತ್ವದ ಸಂದೇಶ ರವಾನಿಸಿದೆ.
ಮಿತ್ರರೇ,
ಲೋಕಸಭಾ ಚುನಾವಣೆಯಲ್ಲಿ ದೊರೆತಿರುವ ಜನಾದೇಶವು ಸ್ಥಿರತೆಯ ಮಹತ್ವದ ಸಂದೇಶವಾಗಿದೆ. ಇಪ್ಪತ್ತು ವರ್ಷಗಳ ಹಿಂದೆ, ದೇಶವು 20ನೇ ಶತಮಾನದ ಕೊನೆಯ ದಶಕದಲ್ಲಿ ಅಸ್ಥಿರ ಸರ್ಕಾರಗಳ ಸುದೀರ್ಘ ಅವಧಿಯನ್ನು ಅನುಭವಿಸಿತು. ನಿಮ್ಮಲ್ಲಿ ಅನೇಕರು ಸಣ್ಣವರು ಅಥವಾ ಆ ಸಮಯದಲ್ಲಿ ಜನಿಸಿಯೇ ಇರಲಿಲ್ಲ. ಇಷ್ಟು ದೊಡ್ಡ ದೇಶ ಹತ್ತು ವರ್ಷಗಳಲ್ಲಿ ಐದು ಚುನಾವಣೆಗಳನ್ನು ನಡೆಸಿತು ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. ಈ ನಿರಂತರ ಚುನಾವಣೆ ಪರಿಸ್ಥಿತಿಯಿಂದಾಗಿ ದೇಶವು ಬೇರೆ ಯಾವುದರತ್ತಲೂ ಗಮನ ಹರಿಸಲು ಸಾಧ್ಯವಾಗಲಿಲ್ಲ. ಇಂತಹ ಅಸ್ಥಿರತೆ ಮತ್ತು ಅನಿಶ್ಚಿತತೆಯಿಂದಾಗಿ, ಭಾರತವು ಮೇಲೆ ಹಾರುವ ಬದಲು (ಟೇಕ್ ಆಫ್ ಆಗುವ ಸಮಯದಲ್ಲಿ) ನೆಲಕ್ಕೆ ಕುಸಿಯಿತು. ಇದರಿಂದಾಗಿ ದೇಶಕ್ಕೆ ಮಹತ್ವದ ನಷ್ಟಗಳುಂಟಾದವು. ಆ ಅವಧಿಯನ್ನು ಬಿಟ್ಟು, ಭಾರತವು ಈಗ ಸ್ಥಿರ ಸರ್ಕಾರದ ಹೊಸ ಯುಗವನ್ನು ಪ್ರವೇಶಿಸಿದೆ, ನಮ್ಮ ಪ್ರಜಾಪ್ರಭುತ್ವವನ್ನು ಮತ್ತಷ್ಟು ಬಲವರ್ಧನೆಗೊಂಡಿದೆ. ಈ ಪ್ರಜಾಪ್ರಭುತ್ವದ ಬಲವರ್ಧನೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಜನರು ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಅಟಲ್ ಜಿ ಅವರು ಪರಿಕಲ್ಪನೆಯ 'ಇನ್ಸಾನಿಯತ್' (ಮಾನವೀಯತೆ), 'ಜಮ್ಹುರಿಯತ್' (ಪ್ರಜಾಪ್ರಭುತ್ವ), ಮತ್ತು 'ಕಾಶ್ಮೀರಿಯತ್' (ಸಂಯೋಜಿತ ಸಂಸ್ಕೃತಿ) ನ ದೃಷ್ಟಿಕೋನ ಈಗ ನಿಜವಾಗುತ್ತಿದೆ.
ಈ ಚುನಾವಣೆಯಲ್ಲಿ ನೀವು ಪ್ರಜಾಪ್ರಭುತ್ವವನ್ನು ಬಲವಾಗಿ ಪ್ರತಿಪಾದಿಸಿದ್ದೀರಿ, ಕಳೆದ 35-40 ವರ್ಷಗಳ ದಾಖಲೆಗಳನ್ನು ಮುರಿದು, ಪ್ರಜಾಪ್ರಭುತ್ವದಲ್ಲಿ ಯುವಕರ ಬಲವಾದ ನಂಬಿಕೆಯನ್ನು ಪ್ರದರ್ಶಿಸಿದ್ದೀರಿ. ನನ್ನ ಕಾಶ್ಮೀರಿ ಸಹೋದರ ಸಹೋದರಿಯರಿಗೆ ವೈಯಕ್ತಿಕವಾಗಿ ಧನ್ಯವಾದ ಹೇಳಲು ಇಂದು ನಾನು ಇಲ್ಲಿಗೆ ಬಂದಿದ್ದೇನೆ. ಈ ಚುನಾವಣೆಯಲ್ಲಿ ನಿಮ್ಮ ಉತ್ಸಾಹದಿಂದ ಪಾಲ್ಗೊಂಡಿರುವುದು ಪ್ರಜಾಪ್ರಭುತ್ವದ ಧ್ವಜವನ್ನು ಎತ್ತಿ ಹಿಡಿದಂತಾಗಿದೆ. ಇದು ಭಾರತದ ಪ್ರಜಾಪ್ರಭುತ್ವ ಮತ್ತು ಸಂವಿಧಾನವು ಹಾಕಿದ ಹಾದಿಯಲ್ಲಿ ಹೊಸ ಅಧ್ಯಾಯದ ಆರಂಭವನ್ನು ಸೂಚಿಸುತ್ತದೆ. ನಮ್ಮ ವಿರೋಧಪಕ್ವವೂ ನನ್ನ ಕಾಶ್ಮೀರಿ ಸಹೋದರ ಸಹೋದರಿಯರನ್ನು ಹೊಗಳಿದ್ದರೆ, ಅವರನ್ನು ಪ್ರೋತ್ಸಾಹಿಸಿ, ಕಾಶ್ಮೀರದ ಪ್ರಜಾಪ್ರಭುತ್ವದಲ್ಲಿ ಉತ್ಸಾಹದಿಂದ ಭಾಗವಹಿಸಿದ್ದನ್ನು ಸಂಭ್ರಮಿಸಿದ್ದರೆ ನನಗೆ ಹೆಚ್ಚು ಸಂತೋಷವಾಗುತ್ತಿತ್ತು. ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗಿದ್ದು, ಸಂಭ್ರಮದ ವಾತಾವರಣ ನಿಜಕ್ಕೂ ಶ್ಲಾಘನೀಯ. ವಿರೋಧ ಪಕ್ಷಗಳು ನನ್ನ ಕಾಶ್ಮೀರಿ ಸಹೋದರ ಸಹೋದರಿಯರನ್ನು ಗುರುತಿಸಿ ಅವರ ನೈತಿಕ ಸ್ಥೈರ್ಯವನ್ನು ಹೆಚ್ಚಿಸಿದ್ದರೆ ನನಗೆ ಇನ್ನೂ ತುಂಬಾ ಸಂತೋಷವಾಗುತ್ತಿತ್ತು. ಆದರೆ ದುರದೃಷ್ಟವಶಾತ್, ಈ ಸಕಾರಾತ್ಮಕ ಬೆಳವಣಿಗೆಯಲ್ಲೂ ಪ್ರತಿಪಕ್ಷಗಳು ದೇಶವನ್ನು ನಿರಾಸೆಗೊಳಿಸಿವೆ.
ಮಿತ್ರರೇ,
ಕಳೆದ ಹತ್ತು ವರ್ಷಗಳಲ್ಲಿ ನಮ್ಮ ಸರ್ಕಾರದ ಪ್ರಯತ್ನಗಳ ಫಲಿತಾಂಶವಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿನ ಪರಿವರ್ತನೆಯಾಗಿದೆ. ಸ್ವಾತಂತ್ರ್ಯದ ನಂತರ, ನಮ್ಮ ಹೆಣ್ಣುಮಕ್ಕಳು ಮತ್ತು ಸಮಾಜದ ಇತರ ದುರ್ಬಲ ವರ್ಗದ ಜನರು ತಮ್ಮ ಹಕ್ಕುಗಳಿಂದ ವಂಚಿತರಾದರು. ನಮ್ಮ ಸರ್ಕಾರವು 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್' ಎಂಬ ಮಂತ್ರವನ್ನು ಅನುಸರಿಸಿ ಎಲ್ಲರಿಗೂ ಹಕ್ಕುಗಳು ಮತ್ತು ಅವಕಾಶಗಳನ್ನು ಒದಗಿಸಿದೆ. ಮೊದಲ ಬಾರಿಗೆ ಪಾಕಿಸ್ತಾನದ ನಿರಾಶ್ರಿತರು, ನಮ್ಮ ವಾಲ್ಮೀಕಿ ಸಮುದಾಯ ಮತ್ತು ಪೌರ ಕಾರ್ಮಿಕರ ಕುಟುಂಬಗಳು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತದಾನದ ಹಕ್ಕನ್ನು ಪಡೆದಿದ್ದಾರೆ. ಎಸ್ ಟಿ ವರ್ಗದಡಿ ಸೌಲಭ್ಯ ಪಡೆಯಬೇಕೆಂಬ ವಾಲ್ಮೀಕಿ ಸಮುದಾಯದ ಬಹುದಿನಗಳ ಬೇಡಿಕೆ ಈಡೇರಿದೆ. ಎಸ್ ಟಿ ಸಮುದಾಯಕ್ಕೆ ಮೊದಲ ಬಾರಿಗೆ ವಿಧಾನಸಭೆಯಲ್ಲಿ ಸೀಟು ಮೀಸಲಿಡಲಾಗಿದೆ. 'ಪದ್ದರಿ ಬುಡಕಟ್ಟು,' 'ಪಹಾರಿ ಜನಾಂಗ,' 'ಗಡ್ಡ ಬ್ರಾಹ್ಮಣ,' ಮತ್ತು 'ಕೋಲಿ' ಮುಂತಾದ ಸಮುದಾಯಗಳಿಗೆ ಎಸ್‌ಟಿ ಸ್ಥಾನಮಾನ ನೀಡಲಾಗಿದೆ. ಪಂಚಾಯತ್, ನಗರ ಪಾಲಿಕೆ, ಮಹಾನಗರ ಪಾಲಿಕೆ ಚುನಾವಣೆಗಳಲ್ಲಿ ಪ್ರಥಮ ಬಾರಿಗೆ ಒಬಿಸಿ ಮೀಸಲಾತಿ ಜಾರಿಗೊಳಿಸಲಾಗಿದೆ. ಇದು ಸಂವಿಧಾನಕ್ಕೆ ನಮ್ಮ ಬದ್ಧತೆ ಮತ್ತು ಆಚರಣೆ ಎರಡರಲ್ಲೂ ಅದರ ಶ್ರೇಷ್ಠತೆಯನ್ನು ತೋರಿಸುತ್ತದೆ. ಸಂವಿಧಾನವು 140 ಕೋಟಿ ಭಾರತೀಯರ ಜೀವನವನ್ನು ಬದಲಾಯಿಸಲು ಅವಕಾಶವನ್ನು ನೀಡುತ್ತದೆ, ಅವರಿಗೆ ಹಕ್ಕುಗಳನ್ನು ನೀಡುತ್ತದೆ ಮತ್ತು ಅವರನ್ನು ಪಾಲುದಾರರನ್ನಾಗಿ ಮಾಡುತ್ತದೆ. ಆದರೂ ಸ್ವಾತಂತ್ರ್ತಾನಂತರ ಹಲವು ವರ್ಷಗಳವರೆಗೆ, ಸಂವಿಧಾನದ ಈ ಮಹಾ ಆಸ್ತಿಯನ್ನು ದೆಹಲಿಯ ಆಡಳಿತಗಾರರು ನಿರಾಕರಿಸಿದರು. ನಾವು ಇಂದು ಸಂವಿಧಾನದೊಂದಿಗೆ ಜೀವಿಸುತ್ತಿದ್ದೇವೆ ಮತ್ತು ಅದರ ಮೂಲಕ ಕಾಶ್ಮೀರದಲ್ಲಿ ಜೀವನವನ್ನು ಸುಧಾರಿಸಲು ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದೇವೆ ಎಂಬುದು ನನಗೆ ಸಂತೋಷವನ್ನುಂಟು ಮಾಡಿದೆ. ಈಗ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸಂವಿಧಾನವನ್ನು ನಿಜವಾಗಿಯೂ ಜಾರಿಗೊಳಿಸಲಾಗಿದೆ. ಈವರೆಗೆ ಸಂವಿಧಾನವನ್ನು ಜಾರಿಗೆ ತರಲು ವಿಫಲರಾದವರು ತಪ್ಪಿತಸ್ಥರು; ಅವರು ಯುವಕರು, ಹೆಣ್ಣು ಮಕ್ಕಳು ಮತ್ತು ಕಾಶ್ಮೀರದ ಜನರಿಗೆ ಅನ್ಯಾಯ ಮಾಡಿದ್ದಾರೆ. ಮಿತ್ರರೇ, 370ನೇ ವಿಧಿಯ ವಿಭಜನೆಯ ಗೋಡೆಯನ್ನು ಬೀಳಿಸಿರುವುದರಿಂದ ಇಷ್ಟೆಲ್ಲಾ ಒಳ್ಳೆಯ ಕೆಲಸಗಳನ್ನು ಮಾಡಲು ಸಾಧ್ಯವಾಗಿದೆ.
ಸಹೋದರ ಮತ್ತು ಸಹೋದರಿಯರೇ,
ಕಾಶ್ಮೀರ ಕಣಿವೆಯಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಇಡೀ ಪ್ರಪಂಚವೇ ನೋಡುತ್ತಿದೆ. ಇಲ್ಲಿಗೆ ಭೇಟಿ ನೀಡಿದ ಜಿ-20 ಗುಂಪಿನ ಪ್ರತಿನಿಧಿಗಳು ವಿಶೇಷವಾಗಿ ಪ್ರಭಾವಿತರಾಗಿದ್ದರು, ಆಗಾಗ್ಗೆ ಕಾಶ್ಮೀರ ಮತ್ತು ಅದರ ಆತಿಥ್ಯವನ್ನು ಹೊಗಳುತ್ತಿದ್ದರು. ಶ್ರೀನಗರದಲ್ಲಿ ಜಿ-20 ನಂತಹ ಅಂತಾರಾಷ್ಟ್ರೀಯ ಕಾರ್ಯಕ್ರಮದ ಆತಿಥ್ಯವು ಪ್ರತಿ ಕಾಶ್ಮೀರಿ ಹೃದಯದಲ್ಲೂ ಹೆಮ್ಮೆಯ ಭಾವನೆ ಮೂಡಿಸುತ್ತದೆ. ನಮ್ಮ ಮಕ್ಕಳು ಲಾಲ್ ಚೌಕ್‌ನಲ್ಲಿ ಸಂಜೆಯವರೆಗೂ ಆಟವಾಡುತ್ತಾ ನಗುತ್ತಿದ್ದರೆ ಪ್ರತಿಯೊಬ್ಬ ಭಾರತೀಯನಿಗೂ ಸಂತೋಷವಾಗುತ್ತದೆ. ಗದ್ದಲದ ಸಿನಿಮಾ ಮಂದಿರಗಳು ಮತ್ತು ಮಾರುಕಟ್ಟೆಗಳು ಎಲ್ಲರ ಮುಖವನ್ನು ಬೆಳಗುತ್ತವೆ. ದಾಲ್ ಸರೋವರದ ದಡದಲ್ಲಿ ಇತ್ತೀಚೆಗೆ ಪ್ರದರ್ಶಿಸಲಾದ ಕ್ರೀಡಾ ಕಾರುಗಳ ಪ್ರದರ್ಶನವನ್ನು ನಾನು ನೆನಪಿಸಿಕೊಳ್ಳುತ್ತೇನೆ, ಅದು ಜಾಗತಿಕ ಗಮನವನ್ನು ಸೆಳೆಯಿತು. ಕಾಶ್ಮೀರ ಎಷ್ಟು ಪ್ರಗತಿ ಸಾಧಿಸಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ದಾಖಲೆ ಅಳಿಸಿಹಾಕುವ ರೀತಿಯಲ್ಲಿ ಪ್ರವಾಸೋದ್ಯಮದ ಕುರಿತ ಚರ್ಚೆಗಳು ಈಗ ಇಲ್ಲಿ ಸಾಮಾನ್ಯವಾಗಿ ನಡೆಯುತ್ತಿವೆ. ನಾಳಿನ ಅಂತಾರಾಷ್ಟ್ರೀಯ ಯೋಗ ದಿನವೂ ಪ್ರವಾಸಿಗರನ್ನು ಸೆಳೆಯಲಿದೆ. ಕಳೆದ ವರ್ಷ, ಮನೋಜ್ ಜಿ ಪ್ರಸ್ತಾಪಿಸಿದಂತೆ, 2 ಕೋಟಿಗೂ ಅಧಿಕ ಪ್ರವಾಸಿಗರು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಈ ಜನರ ಹರಿವು ಸ್ಥಳೀಯ ಉದ್ಯೋಗವನ್ನು ಹೆಚ್ಚಿಸುತ್ತದೆ, ಆದಾಯದ ಬೆಳವಣಿಗೆಗೆ ವೇಗ ನೀಡುತ್ತದೆ ಮತ್ತು ವ್ಯವಹಾರಗಳನ್ನು ವಿಸ್ತರಿಸುತ್ತದೆ.
ಮಿತ್ರರೇ,
ನಾನು ನನ್ನ ದೇಶ ಮತ್ತು ದೇಶವಾಸಿಗಳಿಗಾಗಿ ಹಗಲಿರುಳು ದಣಿವರಿವರಿಯದೆ ದುಡಿಯುತ್ತೇನೆ. ನಾನು ಮಾಡುವ ಎಲ್ಲವನ್ನೂ ಒಳ್ಳೆಯ ಉದ್ದೇಶದಿಂದಲೇ ಮಾಡುತ್ತೇನೆ. ಕಾಶ್ಮೀರದಲ್ಲಿ ಹಿಂದಿನ ತಲೆಮಾರುಗಳು ಅನುಭವಿಸಿದ ನೋವನ್ನು ನಿವಾರಿಸಲು ನಾನು ಅತ್ಯಂತ ಪ್ರಾಮಾಣಿಕತೆ ಮತ್ತು ಬದ್ಧತೆಯೊಂದಿಗೆ ಕೆಲಸ ಮಾಡುತ್ತಿದ್ದೇನೆ. ಕಾಶ್ಮೀರದ ಪ್ರತಿಯೊಂದು ಪ್ರದೇಶ ಮತ್ತು ಕುಟುಂಬವು ಪ್ರಜಾಪ್ರಭುತ್ವದಿಂದ ಪ್ರಯೋಜನ ಪಡೆಯುತ್ತದೆ ಮತ್ತು ಒಟ್ಟಿಗೆ ಪ್ರಗತಿ ಹೊಂದುತ್ತದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ನಾವು ಭಾವನಾತ್ಮಕ ಅಥವಾ ಭೌಗೋಳಿಕ ಎಲ್ಲ ಅಂತರಗಳನ್ನು ನಿವಾರಿಸಲು ಸರ್ವ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಹಿಂದೆಯೂ ಕೇಂದ್ರ ಸರ್ಕಾರದಿಂದ ಹಣ ನೀಡಲಾಗುತ್ತಿತ್ತು, ಆದರೆ ಇಂದು ಪ್ರತಿ ಪೈಸೆಯೂ ನಿಮ್ಮ ಕಲ್ಯಾಣಕ್ಕೆ ವ್ಯಯವಾಗುತ್ತಿದೆ. ಹಣವನ್ನು ನಿರ್ದಿಷ್ಟ ಉದ್ದೇಶಗಳಿಗಾಗಿ ಬಳಸಲಾಗುತ್ತಿದೆ ಮತ್ತು ಫಲಿತಾಂಶಗಳು ಗೋಚರಿಸುತ್ತವೆ ಎಂದು ನಾವು ಖಾತ್ರಿಪಡಿಸಿಕೊಳ್ಳುತ್ತಿದ್ದೇವೆ. ಜಮ್ಮು ಮತ್ತು ಕಾಶ್ಮೀರದ ಜನರು ಸ್ಥಳೀಯ ಮಟ್ಟದಲ್ಲಿ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಿ ಅವರ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದಕ್ಕಿಂತ ಉತ್ತಮವಾದದ್ದೇನೂ ಇಲ್ಲ. ಹಾಗಾಗಿ ವಿಧಾನಸಭಾ ಚುನಾವಣೆಗೆ ತಯಾರಿ ಆರಂಭವಾಗಿದೆ. ನಿಮ್ಮ ಮತದಿಂದ ಜಮ್ಮು ಮತ್ತು ಕಾಶ್ಮೀರಕ್ಕೆ ಹೊಸ ಸರ್ಕಾರವನ್ನು ಆಯ್ಕೆ ಮಾಡಲು ಹೆಚ್ಚು ದಿನ ಕಾಯಬೇಕಿಲ್ಲ. ಜಮ್ಮು ಮತ್ತು ಕಾಶ್ಮೀರ ಮತ್ತೊಮ್ಮೆ ರಾಜ್ಯವಾಗಿ ತನ್ನ ಭವಿಷ್ಯವನ್ನು ರೂಪಿಸಿಕೊಳ್ಳುವ ದಿನ ಸನಿಹದಲ್ಲಿದೆ.
ಮಿತ್ರರೇ,
ಈಗ್ಗೆ ಕೆಲ ಸಮಯದ ಹಿಂದೆ ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿಗಾಗಿ 1500 ಕೋಟಿ ರೂಪಾಯಿಗಳ ಯೋಜನೆಗಳನ್ನು ಉದ್ಗಾಟಿಸಲಾಗಿದೆ. ಹೆಚ್ಚುವರಿಯಾಗಿ, ಕೃಷಿ ಮತ್ತು ಅದರ ಸಂಬಂಧ ವಲಯಗಳಿಗೆ 1800 ಕೋಟಿ ರೂಪಾಯಿಗಳ ಯೋಜನೆಗಳು ಆರಂಭಿಸಲಾಗಿದೆ, ಈ ಉಪಕ್ರಮಗಳಿಗಾಗಿ ಜಮ್ಮು ಮತ್ತು ಕಾಶ್ಮೀರದ ಜನರಿಗೆ ನಾನು ಅಭಿನಂದನೆಗಳನ್ನು ಹೇಳಬಯಸುತ್ತೇನೆ. ಕಳೆದ ಐದು ವರ್ಷಗಳಲ್ಲಿ ಸರಿಸುಮಾರು 40,000 ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವುದರೊಂದಿಗೆ, ಸರ್ಕಾರಿ ಉದ್ಯೋಗಗಳ ತ್ವರಿತ ನೇಮಕಾತಿಗೆ ನಾನು ರಾಜ್ಯ ಆಡಳಿತವನ್ನು ಶ್ಲಾಘಿಸುತ್ತೇನೆ. ಈ ಕಾರ್ಯಕ್ರಮದಲ್ಲಿಯೇ ಸುಮಾರು 2000 ಯುವಕರು ಉದ್ಯೋಗ ಪತ್ರಗಳನ್ನು ಸ್ವೀಕರಿಸಿದ್ದಾರೆ. ಕಾಶ್ಮೀರದಲ್ಲಿ ಲಕ್ಷಾಂತರ ಕೋಟಿ ರೂಪಾಯಿಗಳ ಗಣನೀಯ ಹೂಡಿಕೆಯು ಸ್ಥಳೀಯ ಯುವಕರಿಗೆ ಸಾವಿರಾರು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದೆ.
ಸಹೋದರ ಮತ್ತು ಸಹೋದರಿಯರೇ,
ಜಮ್ಮು ಮತ್ತು ಕಾಶ್ಮೀರದಲ್ಲಿ ರಸ್ತೆ ಮತ್ತು ರೈಲು ಸಂಪರ್ಕ, ಶಿಕ್ಷಣ, ಆರೋಗ್ಯ ಮೂಲಸೌಕರ್ಯ, ವಿದ್ಯುತ್ ಮತ್ತು ನೀರು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಹತ್ವದ ಕೆಲಸಗಳನ್ನ ಮಾಡಲಾಗುತ್ತಿದೆ. ಪ್ರಧಾನಮಂತ್ರಿ ಗ್ರಾಮೀಣ ಸಡಕ್ ಯೋಜನೆ ಅಡಿಯಲ್ಲಿ ಸಾವಿರಾರು ಕಿಲೋಮೀಟರ್‌ಗಳಷ್ಟು ಹೊಸ ರಸ್ತೆಗಳನ್ನು ನಿರ್ಮಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಹೊಸ ರಾಷ್ಟ್ರೀಯ ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ವೇಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಮತ್ತು ಕಾಶ್ಮೀರ ಕಣಿವೆಯು ಈಗ ರೈಲಿನ ಮೂಲಕ ಸಂಪರ್ಕ ಹೊಂದಿದೆ. ಚೆನಾಬ್ ನದಿಯ ಮೇಲೆ ನಿರ್ಮಿಸಲಾದ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆಯನ್ನು ನೋಡಿದಾಗ ಪ್ರತಿಯೊಬ್ಬ ಭಾರತೀಯನೂ ಹೆಮ್ಮೆಪಡುವಂತಾಗಿದೆ. ಇದೇ ಮೊದಲ ಬಾರಿಗೆ ಉತ್ತರ ಕಾಶ್ಮೀರದ ಗುರೇಜ್ ಕಣಿವೆಯನ್ನು ವಿದ್ಯುತ್ ಜಾಲಕ್ಕೆ ಜೋಡಿಸಲಾಗಿದೆ. ಕಾಶ್ಮೀರದಲ್ಲಿ ಕೃಷಿ, ತೋಟಗಾರಿಕೆ, ಕೈಮಗ್ಗ ಉದ್ಯಮ, ಕ್ರೀಡೆ ಮತ್ತು ನವೋದ್ಯಮಗಳಲ್ಲಿ ಅವಕಾಶಗಳನ್ನು ಸೃಷ್ಟಿಸಲಾಗುತ್ತಿದೆ. ನವೋದ್ಯಮ ಪರಿಸರ ವ್ಯವಸ್ಥೆಯಲ್ಲಿ ತೊಡಗಿರುವ ಯುವ ಉದ್ಯಮಿಗಳನ್ನು ನಾನು ಇತ್ತೀಚೆಗೆ ಭೇಟಿಯಾದೆ. ನಾನು ಇಲ್ಲಿಗೆ ಬರಲು ತಡವಾಯಿತು ಏಕೆಂದರೆ ಯುವಕರು ಹಂಚಿಕೊಳ್ಳಲು ಬಹಳಷ್ಟು ವಿಷಯಗಳಿದ್ದವು, ನಾನು ಅವುಗಳನ್ನು ಸಮಗ್ರವಾಗಿ ಕೇಳಲು ಬಯಸಿದ್ದೆ; ಅವರ ಆತ್ಮವಿಶ್ವಾಸವು ನಂಬಲಾಗದಷ್ಟು ಸ್ಪೂರ್ತಿದಾಯಕವಾಗಿತ್ತು. ಅನೇಕರು ಭರವಸೆಯ ಅಧ್ಯಯನ ಮತ್ತು ವೃತ್ತಿಜೀವನವನ್ನು ನವೋದ್ಯಮಗಳಲ್ಲಿ ತೊಡಗಿಸಿಕೊಂಡಿದ್ದಾರೆ ಮತ್ತು ಗಮನಾರ್ಹ ಸಾಧನೆಗಳನ್ನು ಮಾಡಿದ್ದಾರೆ. ಕೆಲವರು ಎರಡು ಅಥವಾ ಮೂರು ವರ್ಷಗಳ ಹಿಂದೆ ತಮ್ಮ ಉದ್ಯಮಗಳನ್ನು ಆರಂಭಿಸಿದರು ಮತ್ತು ಈಗಾಗಲೇ ಹೆಸರು ಮಾಡಿದ್ದಾರೆ. ಅವರು ಆಯುರ್ವೇದ, ಆಹಾರ, ಮಾಹಿತಿ ತಂತ್ರಜ್ಞಾನ, ಸೈಬರ್ ಭದ್ರತೆ, ಫ್ಯಾಷನ್ ವಿನ್ಯಾಸ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸುವ ಹೋಂಸ್ಟೇಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ನವೋದ್ಯಮಗಳನ್ನು ಹೊಂದಿದ್ದಾರೆ. ಅದರರ್ಥ ಜಮ್ಮು ಮತ್ತು ಕಾಶ್ಮೀರದೊಳಗೆ ಹಲವು ಪ್ರದೇಶಗಳಲ್ಲಿ ನವೋದ್ಯಮಗಳಿರಬಹುದು. ಸ್ನೇಹಿತರೇ, ಜಮ್ಮು ಮತ್ತು ಕಾಶ್ಮೀರದ ಯುವಕರು ನವೋದ್ಯಮಗಳ ಜಗತ್ತಿನಲ್ಲಿ ತಮ್ಮ ಛಾಪು ಮೂಡಿಸುತ್ತಿರುವುದನ್ನು ನೋಡುವುದು ನನಗೆ ಸಂತೋಷದ ಕ್ಷಣವಾಗಿದೆ. ಈ ಎಲ್ಲಾ ಯುವ ಉದ್ಯಮಿಗಳನ್ನು ನಾನು ಅಭಿನಂದಿಸುತ್ತೇನೆ.
ಮಿತ್ರರೇ,
ಜಮ್ಮು ಮತ್ತು ಕಾಶ್ಮೀರವು ಇಂದು ನವೋದ್ಯಮಗಳು, ಕೌಶಲ್ಯಾಭಿವೃದ್ಧಿ ಮತ್ತು ಕ್ರೀಡೆಗಳಿಗೆ ಪ್ರಮುಖ ಕೇಂದ್ರವಾಗಿ ಹೊರಹೊಮ್ಮುತ್ತಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿನ ಕ್ರೀಡಾ ಪ್ರತಿಭೆಗಳು ಅಸಾಧಾರಣ ಎಂದು ನಾನು ನಂಬುತ್ತೇನೆ. ನಾವು ಅಭಿವೃದ್ಧಿಪಡಿಸುತ್ತಿರುವ ಮೂಲಸೌಕರ್ಯಗಳು, ನಾವು ಮಾಡುತ್ತಿರುವ ವ್ಯವಸ್ಥೆಗಳು ಮತ್ತು ಹೊಸ ಕ್ರೀಡೆಗಳಿಗೆ ಉತ್ತೇಜನ ನೀಡುವುದರಿಂದ ಜಮ್ಮು ಮತ್ತು ಕಾಶ್ಮೀರದ ಯುವಕರು ಅಂತಾರಾಷ್ಟ್ರೀಯ ಕ್ರೀಡಾ ಕ್ಷೇತ್ರದಲ್ಲಿ ಮಿಂಚುತ್ತಾರೆಂಬ ವಿಶ್ವಾಸ ನನಗೆ ಬಂದಿದೆ. ಜಮ್ಮು ಮತ್ತು ಕಾಶ್ಮೀರದ ಮಕ್ಕಳು ನಮ್ಮ ದೇಶಕ್ಕೆ ಕೀರ್ತಿ ತರುತ್ತಾರೆ ಮತ್ತು ಇದು ನನ್ನ ಕಣ್ಣಮುಂದೆ ನಡೆಯುವುದನ್ನು ನಾನು ನೋಡುತ್ತಿದ್ದೇನೆ.
ಮಿತ್ರರೇ,
ಕೃಷಿ ಕ್ಷೇತ್ರದಲ್ಲಿ ಇಲ್ಲಿ ಸುಮಾರು 70 ನವೋದ್ಯಮಗಳನ್ನು ಸ್ಥಾಪಿಸಲಾಗಿದೆ ಎಂದು ನನಗೆ ಕೇಳಿದ್ದೇನೆ. ಇದು ಕೃಷಿಯಲ್ಲಿ ಕ್ರಾಂತಿಯನ್ನು ಸೂಚಿಸುತ್ತದೆ. ಕೃಷಿಯನ್ನು ಆಧುನೀಕರಿಸುವ ಹೊಸ ಪೀಳಿಗೆಯ ದೂರದೃಷ್ಠಿ ಮತ್ತು ಅವರ ಜಾಗತಿಕ ಮಾರುಕಟ್ಟೆ ದೂರದೃಷ್ಟಿಯು ನಿಜವಾಗಿಯೂ ಸ್ಪೂರ್ತಿದಾಯಕವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಇಲ್ಲಿ 50 ಕ್ಕೂ ಅಧಿಕ ಪದವಿ ಕಾಲೇಜುಗಳನ್ನು ಸ್ಥಾಪಿಸಲಾಗಿದೆ. ಇದೇನು ಸಣ್ಣ ಸಾಧನೆಯಲ್ಲ. ಸ್ವಾತಂತ್ರ್ಯಾನಂತರದ ಕಳೆದ 50-60 ವರ್ಷಗಳ ಸಾಧಿಸಿದ ಪ್ರಗತಿಯನ್ನು ಕಳೆದ ದಶಕದ ಸಾಧನೆಗಳೊಂದಿಗೆ ಹೋಲಿಸಿ ನೋಡಿದಾಗ ಒಂದು ಸ್ಪಷ್ಟ ವ್ಯತ್ಯಾಸ ಕಂಡುಬರುತ್ತದೆ. ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಸೀಟುಗಳ ಹೆಚ್ಚಳದಿಂದಾಗಿ ಸ್ಥಳೀಯ ಯುವಕರಿಗೆ ಹೊಸ ಕೌಶಲ್ಯಗಳನ್ನು ಪಡೆಯಲು ಅವಕಾಶಗಳು ಲಭ್ಯವಾಗುತ್ತಿವೆ. ಜಮ್ಮು ಮತ್ತು ಕಾಶ್ಮೀರವು ಇಂದು ಐಐಟಿ ಮತ್ತು ಐಐಎಂಗಳನ್ನು ಹೊಂದಿದೆ. ಅಲ್ಲದೆ, ಏಮ್ಸ್ ನಿರ್ಮಾಣ ಹಂತದಲ್ಲಿದೆ ಮತ್ತು ಹಲವಾರು ಹೊಸ ವೈದ್ಯಕೀಯ ಕಾಲೇಜುಗಳನ್ನು ಇಲ್ಲಿ ಸ್ಥಾಪಿಸಲಾಗಿದೆ. ಪ್ರವಾಸೋದ್ಯಮ ಮತ್ತು ಆತಿಥ್ಯ ಕ್ಷೇತ್ರಗಳಲ್ಲಿ ಸ್ಥಳೀಯ ಮಟ್ಟದಲ್ಲಿ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇಂದು ಕಾಶ್ಮೀರದಲ್ಲಿ ಪ್ರವಾಸಿ ಮಾರ್ಗದರ್ಶಿಗಳಿಗಾಗಿ ಆನ್‌ಲೈನ್ ಕೋರ್ಸ್‌ಗಳು ಮತ್ತು ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಯುವ ಪ್ರವಾಸೋದ್ಯಮ ಕ್ಲಬ್‌ಗಳನ್ನು ಸ್ಥಾಪಿಸುವುದು ವ್ಯಾಪಕವಾಗಿ ನಡೆಯುತ್ತಿದೆ.
ಮಿತ್ರರೇ,
ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿ ಕಾರ್ಯಗಳಿಂದ ಕಾಶ್ಮೀರದ ಹೆಣ್ಣುಮಕ್ಕಳು ಗಣನೀಯವಾಗಿ ಪ್ರಯೋಜನ ಪಡೆಯುತ್ತಿದ್ದಾರೆ. ಸ್ವ-ಸಹಾಯ ಗುಂಪುಗಳಿಗೆ ಸಂಬಂಧಿಸಿದ ಮಹಿಳೆಯರಿಗೆ ಪ್ರವಾಸೋದ್ಯಮ, ಐಟಿ ಮತ್ತಿತರ ಕೌಶಲ್ಯಗಳಲ್ಲಿ ತರಬೇತಿ ನೀಡಲು ಸರ್ಕಾರವು ಅಭಿಯಾನಗಳನ್ನು ನಡೆಸುತ್ತಿದೆ. ಎರಡು ದಿನಗಳ ಹಿಂದೆಯಷ್ಟೇ ‘ಕೃಷಿ ಸಖಿ’ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು, ಇಂದು ಜಮ್ಮು ಮತ್ತು ಕಾಶ್ಮೀರದಲ್ಲಿ 1200ಕ್ಕೂ ಅಧಿಕ ಮಹಿಳೆಯರು ‘ಕೃಷಿ ಸಖಿ’ಗಳಾಗಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ, ಹೆಚ್ಚುವರಿಯಾಗಿ, ಜಮ್ಮು ಮತ್ತು ಕಾಶ್ಮೀರದ ಹೆಣ್ಣುಮಕ್ಕಳು ನಮೋ ಡ್ರೋನ್ ದೀದಿ ಯೋಜನೆ ಅಡಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ, ಪೈಲಟ್ ಆಗುತ್ತಿದ್ದಾರೆ. ಕೆಲವು ತಿಂಗಳ ಹಿಂದೆ ನಾನು ದೆಹಲಿಯಲ್ಲಿ ಈ ಯೋಜನೆಯನ್ನು ಆರಂಭಿಸಿದಾಗ, ಜಮ್ಮು ಮತ್ತು ಕಾಶ್ಮೀರದ ಡ್ರೋನ್ ದೀದಿಗಳು ಸಹ ಭಾಗವಹಿಸಿದ್ದರು. ಈ ಉಪಕ್ರಮಗಳು ಕಾಶ್ಮೀರದಲ್ಲಿ ಮಹಿಳೆಯರ ಆದಾಯವನ್ನು ವೃದ್ಧಿಸುತ್ತಿವೆ ಮತ್ತು ಅವರಿಗೆ ಹೊಸ ಉದ್ಯೋಗಾವಕಾಶಗಳನ್ನು ಒದಗಿಸುತ್ತಿವೆ. ದೇಶಾದ್ಯಂತ 3 ಕೋಟಿ ಮಹಿಳೆಯರನ್ನು 'ಲಖಪತಿ ದೀದಿ'ಗಳನ್ನಾಗಿ ಮಾಡುವ ಗುರಿಯತ್ತ ನಮ್ಮ ಸರ್ಕಾರ ಕ್ಷಿಪ್ರವಾಗಿ ಕಾರ್ಯೋನ್ಮುಖವಾಗಿದೆ.
ಸಹೋದರ ಮತ್ತು ಸಹೋದರಿಯರೇ,
ಭಾರತವು ಪ್ರವಾಸೋದ್ಯಮ ಮತ್ತು ಕ್ರೀಡೆಗಳಲ್ಲಿ ಪ್ರಮುಖ ಜಾಗತಿಕ ಶಕ್ತಿಯಾಗುವತ್ತ ಮುಂದೆ ಸಾಗುತ್ತಿದೆ ಮತ್ತು ಜಮ್ಮು ಮತ್ತು ಕಾಶ್ಮೀರವು ಈ ಎರಡೂ ಕ್ಷೇತ್ರಗಳಲ್ಲಿ ಅದ್ಭುತ ಸಾಮರ್ಥ್ಯವನ್ನು ಹೊಂದಿದೆ. ಇಂದು ಜಮ್ಮು ಮತ್ತು ಕಾಶ್ಮೀರದ ಪ್ರತಿ ಜಿಲ್ಲೆಯಲ್ಲಿ ಅತ್ಯುತ್ತಮ ಕ್ರೀಡಾ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಸುಮಾರು 100 ಖೇಲೋ ಇಂಡಿಯಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ, ಸುಮಾರು 4,500 ಯುವಕರಿಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸ್ಪರ್ಧೆಗಳಿಗೆ ತರಬೇತಿ ನೀಡಲಾಗುತ್ತಿದೆ, ಇದು ಗಮನಾರ್ಹ ಸಂಖ್ಯೆಯಾಗಿದೆ. ಚಳಿಗಾಲದ ಕ್ರೀಡೆಗಳಿಗೆ ಸಂಬಂಧಿಸಿದಂತೆ, ಜಮ್ಮು ಮತ್ತು ಕಾಶ್ಮೀರವು ಭಾರತದ ಚಳಿಗಾಲದ ಕ್ರೀಡಾ ರಾಜಧಾನಿಯಾಗುತ್ತಿದೆ. ಫೆಬ್ರವರಿಯಲ್ಲಿ ಇಲ್ಲಿ ನಡೆದ ನಾಲ್ಕನೇ ಖೇಲೋ ಇಂಡಿಯಾ ಚಳಿಗಾಲದ ಕ್ರೀಡಾಕೂಟದಲ್ಲಿ ದೇಶಾದ್ಯಂತ 800 ಕ್ಕೂ ಅಧಿಕ ಆಟಗಾರರು ಭಾಗವಹಿಸಿದ್ದರು. ಅಂತಹ ಕೂಟಗಳು ಈ ಪ್ರದೇಶದಲ್ಲಿ ಭವಿಷ್ಯದ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಿಗೆ ದಾರಿ ಮಾಡಿಕೊಡುತ್ತವೆ.
ಮಿತ್ರರೇ,
ಈ ತಾಜಾ ಉತ್ಸಾಹ ಮತ್ತು ಉಮೇದಿಗಾಗಿ ನಿಮ್ಮೆಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳು! ಆದರೂ ಶಾಂತಿ ಮತ್ತು ಮಾನವೀಯತೆಯ ವಿರುದ್ಧ ಇರುವವರು ಜಮ್ಮು ಮತ್ತು ಕಾಶ್ಮೀರದ ಪ್ರಗತಿಯಿಂದ ಅಸಮಾಧಾನಗೊಂಡಿದ್ದಾರೆ. ಅವರು ಅಭಿವೃದ್ಧಿಯನ್ನು ಸ್ಥಗಿತಗೊಳಿಸಲು ಮತ್ತು ಶಾಂತಿಯನ್ನು ಕದಡಲು ಕೊನೆಯ ಪ್ರಯತ್ನ ಮಾಡುತ್ತಿದ್ದಾರೆ. ಇತ್ತೀಚಿನ ಭಯೋತ್ಪಾದಕ ಕೃತ್ಯಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಗೃಹ ಸಚಿವರು ಜಮ್ಮು ಮತ್ತು ಕಾಶ್ಮೀರ ಆಡಳಿತದ ಸಹಯೋಗದಲ್ಲಿ ಎಲ್ಲಾ ವ್ಯವಸ್ಥೆಗಳನ್ನು ಪರಿಶೀಲಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ವೃರಿಗಳೊಂದಿಗೆ ವ್ಯವಹರಿಸುವಾಗ ಯಾವ ಕ್ರಮಗಳನ್ನೂ ಕೈಗೊಳ್ಳದೆ ಬಿಡುವುದಿಲ್ಲ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ.
ಜಮ್ಮು ಮತ್ತು ಕಾಶ್ಮೀರದ ಹೊಸ ಪೀಳಿಗೆ ಶಾಶ್ವತ ಶಾಂತಿಯನ್ನು ಅನುಭವಿಸುತ್ತದೆ. ಜಮ್ಮು ಮತ್ತು ಕಾಶ್ಮೀರ ಆಯ್ಕೆ ಮಾಡಿಕೊಂಡಿರುವ ಪ್ರಗತಿಯ ಹಾದಿಯನ್ನು ನಾವು ಬಲವರ್ಧನೆ ಮಾಡುವುದನ್ನು ಮುಂದುವರಿಸುತ್ತೇವೆ. ಈ ಹೊಸ ಯೋಜನೆಗಳಿಗಾಗಿ ನಾನು ಮತ್ತೊಮ್ಮೆ ಎಲ್ಲರಿಗೂ ಧನ್ಯವಾದಗಳನ್ನು ಹೇಳಬಯಸುತ್ತೇನೆ. ನಾಳೆ ಶ್ರೀನಗರದ ನೆಲದಿಂದ ಇಡೀ ವಿಶ್ವಕ್ಕೆ ಅಂತಾರಾಷ್ಟ್ರೀಯ ಯೋಗ ದಿನದ ಸಂದೇಶ ರವಾನೆಯಾಗಲಿದೆ. ಇದಕ್ಕಿಂತ ಸುಂದರವಾದ ಸಂದರ್ಭ ಇನ್ನೇನಿದೆ? ನನ್ನ ಶ್ರೀನಗರ ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ಮಿಂಚಲಿದೆ. ನಿಮ್ಮೆಲ್ಲರಿಗೂ ನನ್ನ ಶುಭಾಶಯಗಳು. ತುಂಬ ತುಂಬಾ ಧನ್ಯವಾದಗಳು ..!