ಬಜೆಟ್ ಸಂಬಂಧಿಸಿದ ಈ ನಿರ್ಣಾಯಕ ವೆಬಿನಾರ್‌ಗೆ ನಿಮ್ಮೆಲ್ಲರಿಗೂ ಆತ್ಮೀಯ ಸ್ವಾಗತ. ಕಳೆದ 8-9 ವರ್ಷಗಳಂತೆ ಈ ಬಾರಿಯೂ ಬಜೆಟ್ ನಲ್ಲಿ ಕೃಷಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಕಳೆದ ಕೆಲವು ವರ್ಷಗಳಿಂದ ನೀವು ಬಜೆಟ್ ಮರುದಿನ ದಿನಪತ್ರಿಕೆಗಳನ್ನು ನೋಡುತ್ತಿದ್ದರೆ, ಪ್ರತಿ ಬಜೆಟ್ ನಲ್ಲಿ 'ಗ್ರಾಮಗಳು, ಬಡವರು ಮತ್ತು ರೈತರ ಬಜೆಟ್' ಎಂದು ಕರೆಯುವುದು ನಿಮಗೆ ತಿಳಿದಿರುತ್ತದೆ. ನಮ್ಮ ಆಡಳಿತ ಪ್ರಾರಂಭವಾಗುವ ಮೊದಲು 2014ರಲ್ಲಿ ಕೃಷಿ ಬಜೆಟ್ 25 ಸಾವಿರ ಕೋಟಿ ರೂ.ಗಿಂತ ಕಡಿಮೆ ಇತ್ತು. ಇಂದು ದೇಶದ ಕೃಷಿ ಬಜೆಟ್ 1 ಲಕ್ಷ 25 ಸಾವಿರ ಕೋಟಿ ರೂ.ಗಿಂತ ಅಧಿಕ ಅನುದಾನಕ್ಕೆ ಏರಿಕೆ ಕಂಡಿದೆ.
ಸ್ನೇಹಿತರೆ,
ಸ್ವಾತಂತ್ರ್ಯಾ ನಂತರ ನಮ್ಮ ಕೃಷಿ ಕ್ಷೇತ್ರ ಬಹುಕಾಲ ಅನುದಾನ ಮತ್ತು ಸೌಲಭ್ಯಗಳ ಕೊರತೆಯಲ್ಲೇ ಇತ್ತು. ನಾವು ನಮ್ಮ ಆಹಾರ ಭದ್ರತೆಗಾಗಿ ಜಗತ್ತನ್ನು ಅವಲಂಬಿಸಿದ್ದೆವು. ಆದರೆ ನಮ್ಮ ರೈತರು ನಮ್ಮನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಜತೆಗೆ, ಇಂದು ಆಹಾರ ಉತ್ಪನ್ನಗಳನ್ನು ರಫ್ತು ಮಾಡುವಂತೆ ಮಾಡಿದ್ದಾರೆ. ಅವರಿಂದಲೇ ಇಂದು ಭಾರತ ವಿವಿಧ ರೀತಿಯ ಕೃಷಿ ಉತ್ಪನ್ನಗಳನ್ನು ರಫ್ತು ಮಾಡುತ್ತಿದೆ. ನಮ್ಮ ರೈತರಿಗೆ ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳನ್ನು ಸರಾಗವಾಗಿ ಪ್ರವೇಶಿಸಲು ನಾವು ಸುಲಭ ಮಾಡಿದ್ದೇವೆ. ಆದರೆ ಅದು ಸ್ವಾವಲಂಬನೆಯಾಗಲಿ ಅಥವಾ ರಫ್ತು ಆಗಿರಲಿ, ನಮ್ಮ ಗುರಿ ಕೇವಲ ಅಕ್ಕಿ ಮತ್ತು ಗೋಧಿಗೆ ಸೀಮಿತವಾಗಬಾರದು ಎಂಬುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ಉದಾಹರಣೆಗೆ 2021-22ರಲ್ಲಿ ಬೇಳೆಕಾಳುಗಳ ಆಮದಿಗೆ 17 ಸಾವಿರ ಕೋಟಿ ರೂ., ಮೌಲ್ಯವರ್ಧಿತ ಆಹಾರ ಉತ್ಪನ್ನಗಳ ಆಮದಿಗೆ 25 ಸಾವಿರ ಕೋಟಿ ರೂ., ಅದೇ ರೀತಿ 2021-22ರಲ್ಲಿ ಖಾದ್ಯ ತೈಲ ಆಮದು ಮಾಡಿಕೊಳ್ಳಲು 1.5 ಲಕ್ಷ ಕೋಟಿ ರೂ. ವೆಚ್ಚ ಮಾಡಿದ್ದೇವೆ. ಈ ಎಲ್ಲಾ ಉತ್ಪನ್ನಗಳ ಆಮದು ಮೇಲೆ ಸುಮಾರು 2 ಲಕ್ಷ ಕೋಟಿ ರೂ. ವೆಚ್ಚ ಮಾಡಿದ್ದೇವೆ. ಆದರೆ, ಈ ಕೃಷಿ ಉತ್ಪನ್ನಗಳಲ್ಲಿ ನಾವು ಸ್ವಾವಲಂಬಿಗಳಾದರೆ ಈ ಹಣವನ್ನು ನಮ್ಮ ರೈತರಿಗೆ ತಲುಪಿಸಬಹುದು. ಕಳೆದ ಕೆಲವು ವರ್ಷಗಳಿಂದ ಈ ಕ್ಷೇತ್ರಗಳನ್ನು ಪ್ರಗತಿಯತ್ತ ಕೊಂಡೊಯ್ಯುವ ನಿರ್ಧಾರಗಳನ್ನು ಬಜೆಟ್‌ನಲ್ಲಿ ತೆಗೆದುಕೊಳ್ಳಲಾಗಿದೆ. ನಾವು ಗರಿಷ್ಠ ಬೆಂಬಲ ಬೆಲೆ ಹೆಚ್ಚಿಸಿದ್ದೇವೆ, ಬೇಳೆಕಾಳುಗಳ ಉತ್ಪಾದನೆಯನ್ನು ಉತ್ತೇಜಿಸಿದ್ದೇವೆ ಮತ್ತು ಆಹಾರ ಸಂಸ್ಕರಣಾ ಫುಡ್ ಪಾರ್ಕ್ ಗಳ ಸಂಖ್ಯೆಯನ್ನು ಹೆಚ್ಚಿಸಿದ್ದೇವೆ. ಇದಲ್ಲದೆ, ಖಾದ್ಯ ತೈಲದ ವಿಷಯದಲ್ಲಿ ಸಂಪೂರ್ಣ ಸ್ವಾವಲಂಬಿಯಾಗಲು ಕಾರ್ಯಾಚರಣೆ ಮಾದರಿಯಲ್ಲಿ ಕೆಲಸ ನಡೆಯುತ್ತಿದೆ.
ಸ್ನೇಹಿತರೆ,
ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಸವಾಲುಗಳನ್ನು ನಾವು ಪರಿಹರಿಸದ ಹೊರತು ಸಮಗ್ರ ಅಭಿವೃದ್ಧಿಯ ಗುರಿ ಸಾಧಿಸಲು ಸಾಧ್ಯವಿಲ್ಲ. ಇಂದು ಭಾರತದ ಅನೇಕ ಕ್ಷೇತ್ರಗಳು ವೇಗವಾಗಿ ಪ್ರಗತಿಯಲ್ಲಿವೆ. ನಮ್ಮ ಉತ್ಸಾಹಭರಿತ ಯುವಕರು ಅದರಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. ಆದರೆ ಕೃಷಿಯಲ್ಲಿ ಅವರ ಭಾಗವಹಿಸುವಿಕೆ ಕಡಿಮೆಯಾಗಿದೆ, ಆದರೂ ಅವರು ಅದರ ಮಹತ್ವ ಮತ್ತು ಅದರಲ್ಲಿ ಮುಂದುವರಿಯುವ ಸಾಧ್ಯತೆಗಳ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳುತ್ತಿದ್ದಾರೆ. ಖಾಸಗಿ ಆವಿಷ್ಕಾರ ಮತ್ತು ಹೂಡಿಕೆ ಇನ್ನೂ ಈ ವಲಯದಿಂದ ದೂರವಿದೆ. ಈ ಕೊರತೆಯನ್ನು ತುಂಬಲು ಈ ಬಾರಿಯ ಬಜೆಟ್‌ನಲ್ಲಿ ಹಲವು ಘೋಷಣೆಗಳನ್ನು ಮಾಡಲಾಗಿದೆ. ಉದಾಹರಣೆಗೆ, ಕೃಷಿ ವಲಯದಲ್ಲಿ ಮುಕ್ತ(ತೆರೆದ) ಮೂಲ ಆಧರಿತ ವೇದಿಕೆಗಳ ಪ್ರಚಾರ. ನಾವು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ಮುಕ್ತ(ತೆರೆದ) ಮೂಲ ವೇದಿಕೆಯಾಗಿ ಮುಂದಿಟ್ಟಿದ್ದೇವೆ. ಇದು ಯುಪಿಐನ ಮುಕ್ತ ವೇದಿಕೆಯಂತೆಯೇ ಇದೆ, ಅದರ ಮೂಲಕ ಇಂದು ಡಿಜಿಟಲ್ ವಹಿವಾಟುಗಳು ನಡೆಯುತ್ತಿವೆ. ಇಂದು ಡಿಜಿಟಲ್ ವಹಿವಾಟುಗಳಲ್ಲಿ ಕ್ರಾಂತಿಯಾಗುತ್ತಿರುವಂತೆಯೇ, ಕೃಷಿ ತಂತ್ರಜ್ಞಾನ ಕ್ಷಏತ್ರದಲ್ಲಿ ಹೂಡಿಕೆ ಮತ್ತು ನಾವೀನ್ಯತೆಯ ಅಗಾಧ ಸಾಧ್ಯತೆಗಳು ಸೃಷ್ಟಿಯಾಗುತ್ತಿವೆ. ಸರಕು ಸಾಗಣೆ ವಲಯ ಸುಧಾರಿಸುವ ಸಾಧ್ಯತೆಯಿದೆ; ದೊಡ್ಡ ಮಾರುಕಟ್ಟೆಗಳನ್ನು ತಲುಪಲು ಅನುಕೂಲವಾಗುವಂತೆ ಅವಕಾಶ ಕಲ್ಪಿಸಲಾಗಿದೆ. ತಂತ್ರಜ್ಞಾನದ ಮೂಲಕ ಹನಿ ನೀರಾವರಿ ಉತ್ತೇಜಿಸಲು ಮತ್ತು ಸಮರ್ಪಕ ಸಲಹೆಯೊಂದಿಗೆ ಅರ್ಹ ವ್ಯಕ್ತಿಯನ್ನು ಸಮಯಕ್ಕೆ ಸರಿಯಾಗಿ ತಲುಪಲು ಅವಕಾಶವಿದೆ. ಈ ಸಾಧ್ಯತೆಗಳನ್ನು ಮನಗಂಡು ನಮ್ಮ ಯುವಕರು ಈ ಕ್ಷೇತ್ರಗಳಲ್ಲಿ ಕೆಲಸ ಮಾಡಬಹುದು. ವೈದ್ಯಕೀಯ ಕ್ಷೇತ್ರದಲ್ಲಿ ಪ್ರಯೋಗಾಲಯಗಳು ಕಾರ್ಯ ನಿರ್ವಹಿಸುವ ರೀತಿಯಲ್ಲೇ ಖಾಸಗಿ ಮಣ್ಣು ಪರೀಕ್ಷಾ ಪ್ರಯೋಗಾಲಯಗಳನ್ನು ಸ್ಥಾಪಿಸಬಹುದು. ನಮ್ಮ ಯುವಕರು ತಮ್ಮ ಆವಿಷ್ಕಾರದಿಂದ ಸರ್ಕಾರ ಮತ್ತು ರೈತರ ನಡುವೆ ಮಾಹಿತಿಯ ಸೇತುವಾಗಬಹುದು. ಯಾವ ಬೆಳೆಗಳು ಹೆಚ್ಚು ಲಾಭ ನೀಡಬಲ್ಲವು ಎಂಬುದನ್ನು ಅವರು ಹೇಳಬಲ್ಲರು. ಅವರು ಬೆಳೆ ಅಂದಾಜು ಮಾಡಲು ಡ್ರೋನ್‌ಗಳನ್ನು ಬಳಸಬಹುದು. ಅವರು ನೀತಿ ನಿರೂಪಣೆಯಲ್ಲಿ ಸಹಾಯ ಮಾಡಬಹುದು. ಯಾವುದೇ ಸ್ಥಳದಲ್ಲಿ ಹವಾಮಾನದಲ್ಲಿನ ಬದಲಾವಣೆಗಳ ಬಗ್ಗೆ ನೈಜ ಸಮಯದ (ರಿಯಲ್ ಟೈಮ್) ಮಾಹಿತಿಯನ್ನು ಸಹ ನೀವು ಒದಗಿಸಬಹುದು. ಅಂದರೆ, ಈ ವಲಯದಲ್ಲಿ ನಮ್ಮ ಯುವಕರು ಮಾಡಲು ಸಾಕಷ್ಟು ಅವಕಾಶಗಳು ಇವೆ. ಈ ವಲಯದಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಅವರು ರೈತರಿಗೆ ಸಹಾಯ ಮಾಡಬಹುದು, ಅಲ್ಲದೆ ಅವರು ಈ ಕ್ಷೇತ್ರದಲ್ಲಿ ಮುಂದುವರಿಯಲು ಅವಕಾಶ ಪಡೆಯುತ್ತಾರೆ.
ಸ್ನೇಹಿತರೆ,
ಈ ಬಾರಿಯ ಬಜೆಟ್‌ನಲ್ಲಿ ಮತ್ತೊಂದು ಮಹತ್ವದ ಘೋಷಣೆ ಮಾಡಲಾಗಿದೆ. ಕೃಷಿ ತಂತ್ರಜ್ಞಾನ ಸ್ಟಾರ್ಟಪ್‌ಗಳಿಗೆ ವೇಗವರ್ಧಕ ನಿಧಿಯನ್ನು ಸ್ಥಾಪಿಸಲಾಗುವುದು. ಆದ್ದರಿಂದ, ನಾವು ಕೇವಲ ಡಿಜಿಟಲ್ ಮೂಲಸೌಕರ್ಯವನ್ನು ಮಾತ್ರ ನಿರ್ಮಿಸುತ್ತಿಲ್ಲ, ಜತೆಗೆ ನಿಮಗಾಗಿ ನಿಧಿಯ ಮಾರ್ಗಗಳನ್ನು ಸಹ ಸ್ಥಾಪಿಸುತ್ತಿದ್ದೇವೆ. ಆದ್ದರಿಂದ ಈಗ ನಮ್ಮ ಯುವ ಉದ್ಯಮಶೀಲರು ಉತ್ಸಾಹದಿಂದ ಮುನ್ನಡೆಯಬಹುದು ಮತ್ತು ತಮ್ಮ ಗುರಿಗಳನ್ನು ಸಾಧಿಸಬಹುದು. 9 ವರ್ಷಗಳ ಹಿಂದೆ ದೇಶದಲ್ಲಿ ಕೃಷಿ ತಂತ್ರಜ್ಞಾನ ಸ್ಟಾರ್ಟಪ್‌ಗಳು ನಗಣ್ಯವಾಗಿದ್ದವು, ಆದರೆ ಇಂದು 3,000ಕ್ಕೂ ಹೆಚ್ಚಿನ ಕೃಷಿ ವಲಯದ ಸ್ಟಾರ್ಟಪ್‌ಗಳಿವೆ ಎಂಬುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ಆದರೆ ನಾವು ಇನ್ನೂ ಹೆಚ್ಚಿನ ವೇಗದಲ್ಲಿ ಮುನ್ನಡೆಯಬೇಕಾಗಿದೆ.
ಸ್ನೇಹಿತರೆ,
ಭಾರತದ ಉಪಕ್ರಮದ ಮೇರೆಗೆ ಈ ವರ್ಷವನ್ನು ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷವೆಂದು ಘೋಷಿಸಿರುವುದು ನಿಮಗೆಲ್ಲರಿಗೂ ತಿಳಿದಿದೆ. ಸಿರಿಧಾನ್ಯಗಳಿಗೆ ಅಂತಾರಾಷ್ಟ್ರೀಯ ಮಾನ್ಯತೆ ಸಿಗುತ್ತಿದೆ ಎಂದರೆ ನಮ್ಮ ಸಣ್ಣ ರೈತರಿಗೆ ಜಾಗತಿಕ ಮಾರುಕಟ್ಟೆ ಸಿದ್ಧವಾಗುತ್ತಿದೆ. ದೇಶ ಈಗ ಈ ಬಜೆಟ್‌ನಲ್ಲಿಯೇ ಸಿರಿಧಾನ್ಯಗಳಿಗೆ ‘ಶ್ರೀ ಅನ್ನ’ ಎಂಬ ಗುರುತು ನೀಡಿದೆ. ಇಂದು ‘ಶ್ರೀ ಅನ್ನ’ ಪ್ರಚಾರ ಮಾಡುತ್ತಿರುವ ರೀತಿಯಿಂದ ನಮ್ಮ ಸಣ್ಣ ರೈತರಿಗೆ ಅಪಾರ ಪ್ರಯೋಜನವಾಗಲಿದೆ. ಈ ಪ್ರದೇಶದಲ್ಲಿ ಇಂತಹ ಸ್ಟಾರ್ಟಪ್‌ಗಳ ಬೆಳವಣಿಗೆಯ ಸಾಧ್ಯತೆಯೂ ಹೆಚ್ಚಿದ್ದು, ಇದರಿಂದ ರೈತರಿಗೆ ಜಾಗತಿಕ ಮಾರುಕಟ್ಟೆ ಪ್ರವೇಶಿಸಲು ಸುಲಭವಾಗುತ್ತದೆ.
ಸ್ನೇಹಿತರೆ,
ಭಾರತದ ಸಹಕಾರಿ ಕ್ಷೇತ್ರದಲ್ಲಿ ಹೊಸ ಕ್ರಾಂತಿಯೊಂದು ನಡೆಯುತ್ತಿದೆ. ಇಲ್ಲಿಯವರೆಗೆ ಇದು ಕೆಲವು ರಾಜ್ಯಗಳು ಮತ್ತು ದೇಶದ ಕೆಲವು ಪ್ರದೇಶಗಳಿಗೆ ಸೀಮಿತವಾಗಿತ್ತು. ಆದರೆ ಈಗ ಇಡೀ ದೇಶಕ್ಕೆ ವಿಸ್ತರಣೆಯಾಗುತ್ತಿದೆ. ಈ ಬಾರಿಯ ಬಜೆಟ್‌ನಲ್ಲಿ ಸಹಕಾರಿ ಕ್ಷೇತ್ರಕ್ಕೆ ತೆರಿಗೆ ಪ್ರಯೋಜನಗಳನ್ನು ನೀಡಲಾಗಿದೆ. ಉತ್ಪಾದನೆಯಲ್ಲಿ ತೊಡಗಿರುವ ಹೊಸ ಸಹಕಾರಿ ಸಂಘಗಳು ಕಡಿಮೆ ತೆರಿಗೆ ದರದ ಲಾಭ ಪಡೆಯುತ್ತವೆ. ಸಹಕಾರ ಸಂಘಗಳಿಂದ 3 ಕೋಟಿ ರೂ.ವರೆಗಿನ ನಗದು ಹಿಂಪಡೆಯುವಿಕೆಗೆ ಟಿಡಿಎಸ್ ವಿಧಿಸಲಾಗುವುದಿಲ್ಲ. ಈ ಹಿಂದೆ ಇತರ ಕಂಪನಿಗಳಿಗೆ ಹೋಲಿಸಿದರೆ ಸಹಕಾರಿ ಕ್ಷೇತ್ರಕ್ಕೆ ತಾರತಮ್ಯ ಮಾಡಲಾಗುತ್ತಿದೆ ಎಂಬ ಭಾವನೆ ಇತ್ತು. ಈ ಬಾರಿಯ ಬಜೆಟ್‌ನಲ್ಲೂ ಈ ಅನ್ಯಾಯವನ್ನು ಹೋಗಲಾಡಿಸಲಾಗಿದೆ. ಮಹತ್ವದ ನಿರ್ಧಾರದ ಪ್ರಕಾರ, 2016-17ರ ಮೊದಲು ಸಕ್ಕರೆ ಸಹಕಾರಿ ಸಂಘಗಳು ಮಾಡಿದ ಪಾವತಿಗಳಿಗೆ ತೆರಿಗೆ ವಿನಾಯಿತಿ ನೀಡಲಾಗಿದೆ. ಇದರಿಂದ ಸಕ್ಕರೆ ಸಹಕಾರ ಸಂಘಗಳಿಗೆ 10,000 ಕೋಟಿ ರೂ. ವಿನಾಯಿತಿ ಪ್ರಯೋಜನ ಸಿಗಲಿದೆ.
ಸ್ನೇಹಿತರೆ,
ಸಹಕಾರಿ ಸಂಘಗಳು ಈಗಾಗಲೇ ಅಸ್ತಿತ್ವದಲ್ಲಿಲ್ಲದ ಪ್ರದೇಶಗಳಲ್ಲಿ, ಡೇರಿ ಮತ್ತು ಮೀನುಗಾರಿಕೆಗೆ ಸಂಬಂಧಿಸಿದ ಸಹಕಾರಿ ಸಂಘಗಳು ಸಣ್ಣ ರೈತರಿಗೆ ಹೆಚ್ಚಿನ ಪ್ರಯೋಜನ ನೀಡುತ್ತವೆ. ನಿರ್ದಿಷ್ಟವಾಗಿ ಹೇಳುವುದಾದರೆ, ಮೀನುಗಾರಿಕೆಯಲ್ಲಿ ತೊಡಗಿರುವವರಿಗೆ ಬೃಹತ್ ಅವಕಾಶಗಳಿವೆ. ಕಳೆದ 8-9 ವರ್ಷಗಳಲ್ಲಿ ದೇಶದಲ್ಲಿ ಮೀನು ಉತ್ಪಾದನೆಯು ಸುಮಾರು 70 ಲಕ್ಷ ಮೆಟ್ರಿಕ್ ಟನ್‌ಗಳಷ್ಟು ಹೆಚ್ಚಾಗಿದೆ. 2014ರ ಮೊದಲು, ಮೀನು ಉತ್ಪಾದನೆಯನ್ನು ಇಷ್ಟು ಪ್ರಮಾಣದಲ್ಲಿ ಹೆಚ್ಚಿಸಲು ಸುಮಾರು 30 ವರ್ಷಗಳನ್ನು ತೆಗೆದುಕೊಂಡಿತು. ಈ ವರ್ಷದ ಬಜೆಟ್‌ನಲ್ಲಿ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ 6000 ಕೋಟಿ ರೂಪಾಯಿ ಮೌಲ್ಯದ ಹೊಸ ಉಪಘಟಕಗಳನ್ನು ಘೋಷಿಸಲಾಗಿದೆ. ಇದು ಮೀನುಗಾರಿಕೆ ಮೌಲ್ಯ ಸರಪಳಿ ಹಾಗೂ ಮಾರುಕಟ್ಟೆಗೆ ಉತ್ತೇಜನ ನೀಡಲಿದೆ. ಇದು ಮೀನುಗಾರರಿಗೆ ಮತ್ತು ಸಣ್ಣ ಉದ್ಯಮಿಗಳಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ.
ಸ್ನೇಹಿತರೆ,
ಸಾವಯವ ಕೃಷಿ ಉತ್ತೇಜಿಸಲು ಮತ್ತು ರಾಸಾಯನಿಕ ಆಧಾರಿತ ಕೃಷಿ ಪದ್ಧತಿ ಕಡಿಮೆ ಮಾಡಲು ನಾವು ವೇಗವಾಗಿ ಕೆಲಸ ಮಾಡುತ್ತಿದ್ದೇವೆ. ಪ್ರಧಾನಮಂತ್ರಿ-ಪ್ರಣಾಮ್ ಯೋಜನೆ ಮತ್ತು ಗೋಬರ್ಧನ್ ಯೋಜನೆ ಈ ದಿಸೆಯಲ್ಲಿ ಉತ್ತಮ ಕಾರ್ಯಕ್ರಮಗಳಾಗಿವೆ. ನಾವೆಲ್ಲರೂ ಒಂದು ತಂಡವಾಗಿ ಈ ವಿಷಯಗಳನ್ನು ಮುಂದಕ್ಕೆ ಕೊಂಡೊಯ್ಯುತ್ತೇವೆ ಎಂದು ನಾನು ಭಾವಿಸುತ್ತೇನೆ. ಇಂದಿನ ವೆಬಿನಾರ್‌ಗಾಗಿ ನಾನು ಮತ್ತೊಮ್ಮೆ ನಿಮಗೆ ಶುಭ ಹಾರೈಸುತ್ತೇನೆ. ಈ ಬಜೆಟ್‌ನ ಪ್ರಸ್ತಾವನೆಗಳ ಬಗ್ಗೆ ನಿಮ್ಮೆಲ್ಲರ ನಿರ್ಣಯಗಳೊಂದಿಗೆ ನಿಮ್ಮ ಶಕ್ತಿಯನ್ನು ಸಂಯೋಜಿಸುವ ಮೂಲಕ ಸಾಧ್ಯವಾದಷ್ಟು ಬೇಗ ಈ ಬಜೆಟ್‌ನ ಗರಿಷ್ಠ ಪ್ರಯೋಜನಗಳನ್ನು ಗರಿಷ್ಠ ಸಂಖ್ಯೆಯ ಜನರಿಗೆ ಕೊಂಡೊಯ್ಯುವುದು ಹೇಗೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಪಾಲುದಾರರು ಒಟ್ಟಾಗಿ ಮಾರ್ಗೋಪಾಯಗಳನ್ನು ಕಂಡುಕೊಳ್ಳುತ್ತೀರಿ ಎಂದು ನನಗೆ ಖಾತ್ರಿಯಿದೆ. ನೀವು ಖಂಡಿತವಾಗಿಯೂ ಕೃಷಿ ಕ್ಷೇತ್ರ ಮತ್ತು ಮೀನುಗಾರಿಕೆ ಉದ್ಯಮವನ್ನು ಅಪೇಕ್ಷಿತ ಎತ್ತರಕ್ಕೆ ಕೊಂಡೊಯ್ಯುತ್ತೀರಿ ಎಂಬುದು ನನಗೆ ಖಾತ್ರಿಯಿದೆ. ಆಲೋಚಿಸಿ, ಮೂಲ ಆಲೋಚನೆಗಳನ್ನು ಕೊಡುಗೆಯಾಗಿ ನೀಡಿ, ಮಾರ್ಗಸೂಚಿಯನ್ನು ಸಿದ್ಧಪಡಿಸಿ ಮತ್ತು ಒಂದು ವರ್ಷದ ಸಂಪೂರ್ಣ ಮಾರ್ಗಸೂಚಿಯನ್ನು ಸಿದ್ಧಪಡಿಸುವಲ್ಲಿ ಈ ವೆಬಿನಾರ್ ಯಶಸ್ವಿಯಾಗುತ್ತದೆ ಎಂದು ನನಗೆ ಖಾತ್ರಿಯಿದೆ. ಎಲ್ಲರಿಗೂ ಶುಭಾಶಯಗಳು ಮತ್ತು ನನ್ನ ಹೃತ್ಪೂರ್ವಕ ಧನ್ಯವಾದಗಳು!