ಭಾರತ್ ಮಾತಾ ಕಿ ಜೈ, ಭಾರತ್ ಮಾತಾ ಕಿ ಜೈ, ಭಾರತ್ ಮಾತಾ ಕಿ ಜೈ,
ಹರ್ ಹರ್ ಮಹಾದೇವ್! ಮಾತಾ ಅನ್ನಪೂರ್ಣ ಕೀ ಜೈ! ಗಂಗಾ ಮೈಯಾ ಕಿ ಜೈ!
ಉತ್ತರ ಪ್ರದೇಶದ ರಾಜ್ಯಪಾಲರಾದ ಶ್ರೀಮತಿ ಆನಂದಿಬೆನ್ ಪಟೇಲ್, ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್ ಜಿ, ಕೇಂದ್ರ ಸಂಪುಟದ ನನ್ನ ಸಹೋದ್ಯೋಗಿಗಳೆ, ಉತ್ತರ ಪ್ರದೇಶ ಸರ್ಕಾರದ ಎಲ್ಲಾ ಸಚಿವರು, ಸಂಸದರು ಮತ್ತು ಶಾಸಕರೆ, ವಿವಿಧ ಯೋಜನೆಗಳ ಫಲಾನುಭವಿಗಳು ಮತ್ತು ಕಾಶಿಯ ನನ್ನ ಪ್ರೀತಿಯ ಸಹೋದರ ಸಹೋದರಿಯರೆ,
ಶ್ರಾವಣ ಮಾಸದ ಆರಂಭದೊಂದಿಗೆ... ಬಾಬಾ ವಿಶ್ವನಾಥ ಮತ್ತು ಗಂಗಾ ಮಾತೆಯ ಆಶೀರ್ವಾದ ಮತ್ತು ಬನಾರಸ್ ಜನರ ಸಾಂಗತ್ಯದಿಂದ ಜೀವನ ನಿಜವಾಗಿಯೂ ಆಶೀರ್ವದಿಸಲ್ಪಡುತ್ತದೆ. ಇಂದಿನ ದಿನಮಾನಗಳಲ್ಲಿ ಕಾಶಿಯಲ್ಲಿ ಜನರು ತುಂಬಾ ಕಾರ್ಯ ನಿರತರಾಗಿದ್ದಾರೆ. ಕಾಶಿಯಲ್ಲಿ ಜನರ ಪಾಲ್ಗೊಳ್ಳುವಿಕೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದು ನನಗೆ ತಿಳಿದಿದೆ. ಬಾಬಾನಿಗೆ ಪವಿತ್ರ ಜಲ ಸಮರ್ಪಿಸಲು ದೇಶ ಮತ್ತು ವಿಶ್ವದೆಲ್ಲೆಡೆಯಿಂದ ಲಕ್ಷಾಂತರ ಶಿವ ಭಕ್ತರು ಪ್ರತಿದಿನ ಇಲ್ಲಿಗೆ ಆಗಮಿಸುತ್ತಿದ್ದು, ಈ ಬಾರಿಯ ಶ್ರಾವಣ ಅವಧಿಯು ಇನ್ನೂ ಹೆಚ್ಚಾಗಿದೆ. ತತ್ಪರಿಣಾಮವಾಗಿ, ಬಾಬಾ ಅವರ ದರ್ಶನಕ್ಕೆ ದಾಖಲೆ ಸಂಖ್ಯೆಯಲ್ಲಿ ಭಕ್ತರು ಬರುತ್ತಿವುದು ಖಚಿತವಾಗಿದೆ. ಆದರೆ ಇದೆಲ್ಲದರ ಜತೆಗೆ, ಒಂದು ವಿಷಯ ಖಚಿತ. ಈಗ ಬನಾರಸ್ ಗೆ ಯಾರೇ ಬಂದರೂ ನೆಮ್ಮದಿಯಿಂದ ಹಿಂತಿರುಗುತ್ತಾರೆ! ಇಷ್ಟು ಜನರು ಬಂದರೂ, ಬನಾರಸ್‌ನಲ್ಲಿ ಎಲ್ಲವನ್ನೂ ಹೇಗೆ ನಿರ್ವಹಿಸಲಾಗುತ್ತದೆ ಎಂಬುದರ ಬಗ್ಗೆ ನಾನು ಹೆಚ್ಚು ಚಿಂತಿಸುವುದಿಲ್ಲ. ಕಾಶಿಯ ಜನರು ನನಗೆ ಕಲಿಸುತ್ತಾರೆ, ಆದರೆ ನಾನು ಅವರಿಗೆ ಏನನ್ನೂ ಕಲಿಸಲು ಸಾಧ್ಯವಿಲ್ಲ. ಜಿ-20 ಶೃಂಗಸಭೆಯ ಸಮಯದಲ್ಲಿ, ವಿಶ್ವಾದ್ಯಂತದ ಅನೇಕ ಜನರು ಬನಾರಸ್‌ಗೆ ಬಂದರು. ಕಾಶಿಯ ಜನರು ಅವರಿಗೆ ಅಂತಹ ಭವ್ಯವಾದ ಸ್ವಾಗತ ನೀಡಿದರು ಮತ್ತು ಎಲ್ಲವನ್ನೂ ಉತ್ತಮವಾಗಿ ನಿರ್ವಹಿಸಿದರು. ಇಂದು ನೀವು ಮತ್ತು ಕಾಶಿ ವಿಶ್ವದಾದ್ಯಂತ ಪ್ರಶಂಸಿಸಲ್ಪಡುತ್ತಿದ್ದೀರಿ. ಅದಕ್ಕಾಗಿಯೇ ಕಾಶಿಯ ಜನರು ಎಲ್ಲವನ್ನೂ ನಿಭಾಯಿಸುತ್ತಾರೆ ಎಂದು ನನಗೆ ತಿಳಿದಿದೆ. ನೀವು ಕಾಶಿ ವಿಶ್ವನಾಥ ಧಾಮವನ್ನು ಮತ್ತು ಇಡೀ ಸುತ್ತಮುತ್ತಲಿನ ಪ್ರದೇಶವನ್ನು ಎಷ್ಟು ಭವ್ಯವಾಗಿ ಮಾಡಿದ್ದೀರಿ ಎಂದರೆ ಇಲ್ಲಿಗೆ ಬರುವ ಯಾರಿಗಾದರೂ ಅತಿಯಾದ ದೈವೀಭಾವನೆ ಮೂಡುತ್ತದೆ. ಅದನ್ನು ಈಡೇರಿಸುವಲ್ಲಿ ನಾವು ಸಹಕಾರಿಯಾಗಬೇಕೆಂಬುದು ಬಾಬಾ ಅವರ ಆಶಯವಾಗಿತ್ತು. ಇದು ನಮ್ಮೆಲ್ಲರ ಸೌಭಾಗ್ಯವೂ ಹೌದು.
ಸಹೋದರ ಸಹೋದರಿಯರೆ,
ಇಂದು ಕಾಶಿ ಸೇರಿದಂತೆ ಉತ್ತರ ಪ್ರದೇಶಕ್ಕೆ ಸುಮಾರು 12,000 ಕೋಟಿ ರೂ. ಮೊತ್ತದ ಯೋಜನೆಗಳನ್ನು ಉಡುಗೊರೆಯಾಗಿ ನೀಡಲಾಗಿದೆ. ಇದು ಕಾಶಿಯ ಆತ್ಮವನ್ನು ಉಳಿಸಿಕೊಂಡು ಸಂಪೂರ್ಣ ಪರಿವರ್ತನೆಗಾಗಿ ನಾವು ಕೈಗೊಂಡ ದೃಢ ನಿರ್ಣಯದ ವಿಸ್ತರಣೆಯಾಗಿದೆ. ಅವು ರೈಲ್ವೆಗಳು, ರಸ್ತೆಗಳು, ನೀರು, ಶಿಕ್ಷಣ ಮತ್ತು ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಯೋಜನೆಗಳು, ಹಾಗೆಯೇ ಘಾಟ್‌ಗಳ ಪುನರಾಭಿವೃದ್ಧಿಗೆ ಸಂಬಂಧಿಸಿದ ಯೋಜನೆಗಳು(ನದಿಯ ಮುಂಭಾಗದ ಹಂತಗಳು) ಒಳಗೊಂಡಿವೆ. ಈ ಅಭಿವೃದ್ಧಿ ಕಾರ್ಯಗಳಿಗಾಗಿ ನಿಮ್ಮೆಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ.
ಸ್ನೇಹಿತರೆ,
ಸ್ವಲ್ಪ ಸಮಯದ ಹಿಂದೆ, ನಾನು ಪ್ರಧಾನ ಮಂತ್ರಿ ಆವಾಸ್ ಯೋಜನೆ ಮತ್ತು ಆಯುಷ್ಮಾನ್ ಭಾರತ್ ಯೋಜನೆಯ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದ್ದೇನೆ. ಹವಾನಿಯಂತ್ರಿತ ಕೊಠಡಿಗಳಲ್ಲಿ ಕುಳಿತು ಯೋಜನೆಗಳನ್ನು ರೂಪಿಸುತ್ತಿದ್ದರು ಎಂಬುದು ಹಿಂದಿನ ಸರ್ಕಾರಗಳ ಬಗ್ಗೆ ಇದ್ದ ಜನರ ದೊಡ್ಡ ದೂರು. ಈ ಯೋಜನೆಗಳು ನೆಲಗಟ್ಟಿನಲ್ಲಿ ಬೀರುವ ಪರಿಣಾಮ ಆ ಕಾಲದ ಸರ್ಕಾರಗಳಿಗೆ ತಿಳಿದಿರಲಿಲ್ಲ. ಆದರೆ, ಬಿಜೆಪಿ ಸರ್ಕಾರ ಫಲಾನುಭವಿಗಳೊಂದಿಗೆ ಸಂವಾದ, ಸಂವಹನ, ಸಭೆಗಳಲ್ಲಿ ತೊಡಗಿದ್ದು, ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದೆ. ಇದರರ್ಥ ಪ್ರಯೋಜನಗಳನ್ನು ಈಗ ನೇರವಾಗಿ ಒದಗಿಸಲಾಗಿದೆ ಮತ್ತು ಪ್ರತಿಕ್ರಿಯೆಯನ್ನು ನೇರವಾಗಿ ಪಡೆಯಲಾಗುತ್ತದೆ. ಇದರ ಪ್ರಯೋಜನವೆಂದರೆ, ಪ್ರತಿ ಸರ್ಕಾರಿ ಇಲಾಖೆ ಮತ್ತು ಅಧಿಕಾರಿಗಳು ತಮ್ಮ ಜವಾಬ್ದಾರಿಗಳನ್ನು ಅರ್ಥ ಮಾಡಿಕೊಳ್ಳಲು ಪ್ರಾರಂಭಿಸಿದ್ದಾರೆ. ಈಗ ಪರಿಶೀಲನೆಯಿಂದ ತಪ್ಪಿಸಿಕೊಳ್ಳಲು ಯಾರಿಗೂ ಅವಕಾಶವಿಲ್ಲ.
ಸ್ನೇಹಿತರೆ,
ಈ ಹಿಂದೆ ಭ್ರಷ್ಟ, ನಿಷ್ಪರಿಣಾಮಕಾರಿ ಸರ್ಕಾರಗಳನ್ನು ನಡೆಸಿದ ಪಕ್ಷಗಳು, ಫಲಾನುಭವಿಗಳ ಹೆಸರು ಕೇಳಿದರೆ ಬೆಚ್ಚಿ ಬೀಳುತ್ತವೆ. ಸ್ವಾತಂತ್ರ್ಯದ ಹಲವು ವರ್ಷಗಳ ನಂತರ, ಪ್ರಜಾಪ್ರಭುತ್ವದ ನಿಜವಾದ ಪ್ರಯೋಜನಗಳು ಈಗ ನಿಜವಾದ ಫಲಾನುಭವಿಗಳಿಗೆ ಸರಿಯಾದ ರೀತಿಯಲ್ಲಿ ಲಭ್ಯವಾಗುತ್ತಿವೆ. ಇಲ್ಲದಿದ್ದರೆ, ಮೊದಲು ಪ್ರಜಾಪ್ರಭುತ್ವದ ಹೆಸರಿನಲ್ಲಿ, ಕೆಲವೇ ಜನರ ಹಿತಾಸಕ್ತಿಗಳನ್ನು ಪೂರೈಸಲಾಯಿತು ಮತ್ತು ಬಡವರನ್ನು ನಿರ್ಲಕ್ಷಿಸಲಾಯಿತು. ಫಲಾನುಭವಿ ವರ್ಗ ಬಿಜೆಪಿ ಸರ್ಕಾರದಲ್ಲಿ ನಿಜವಾದ ಸಾಮಾಜಿಕ ನ್ಯಾಯ ಮತ್ತು ನಿಜವಾದ ಜಾತ್ಯತೀತತೆಯ ಉದಾಹರಣೆಯಾಗಿದೆ. ಪ್ರತಿಯೊಂದು ಯೋಜನೆಯ ನೈಜ ಫಲಾನುಭವಿಗಳನ್ನು ಗುರುತಿಸಲು, ಅವರನ್ನು ತಲುಪಲು ಮತ್ತು ಅವರು ಎಲ್ಲಾ ಯೋಜನೆಗಳ ಪ್ರಯೋಜನಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ನಾವು ನಮ್ಮ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಇದರಿಂದ ಆಗುವ ದೊಡ್ಡ ಲಾಭ ಏನು ಗೊತ್ತಾ? ಸರ್ಕಾರವೇ ಜನರನ್ನು ತಲುಪಿದಾಗ ಏನಾಗುತ್ತದೆ? ಕಮಿಷನ್ ಪಡೆಯುತ್ತಿದ್ದವರ ಕಚೇರಿಗಳು ಈಗ ಬಂದ್ ಆಗಿವೆ. ಮಧ್ಯವರ್ತಿಗಳನ್ನು ತಡೆಯಲಾಗಿದೆ. ಭ್ರಷ್ಟಾಚಾರದಲ್ಲಿ ತೊಡಗಿದ್ದವರ ಸಂಸ್ಥೆಗಳು ಮುಚ್ಚಿವೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಯಾವುದೇ ತಾರತಮ್ಯ ಮತ್ತು ಭ್ರಷ್ಟಾಚಾರವಿಲ್ಲ.
ಸ್ನೇಹಿತರೆ,
ಕಳೆದ 9 ವರ್ಷಗಳಲ್ಲಿ, ನಾವು ಕೇವಲ ಒಂದು ಕುಟುಂಬ ಅಥವಾ ಒಂದು ಪೀಳಿಗೆಗಾಗಿ ಯೋಜನೆಗಳನ್ನು ಮಾಡಿಲ್ಲ, ಆದರೆ ನಾವು ಭವಿಷ್ಯದ ಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡು ಅವರ ಭವಿಷ್ಯವನ್ನು ಸುಧಾರಿಸಲು ಕೆಲಸ ಮಾಡಿದ್ದೇವೆ. ಉದಾಹರಣೆಗೆ, ಬಡವರಿಗೆ ವಸತಿ ಯೋಜನೆ ಇದೆ. ಇದುವರೆಗೆ ದೇಶದ 4 ಕೋಟಿಗೂ ಹೆಚ್ಚು ಕುಟುಂಬಗಳು ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಪಕ್ಕಾ ಮನೆಗಳನ್ನು ಪಡೆದಿವೆ. ಇಂದಿಗೂ ಉತ್ತರ ಪ್ರದೇಶದಲ್ಲಿ ಸುಮಾರು 4.5 ಲಕ್ಷ ಬಡ ಕುಟುಂಬಗಳಿಗೆ ಪಕ್ಕಾ ಮನೆಗಳನ್ನು ಒದಗಿಸಲಾಗಿದೆ. ಇದು ಶ್ರಾವಣ ಮಾಸದಲ್ಲಿ ಭಗವಾನ್ ಮಹಾದೇವನ ಮಹಾನ್ ಅನುಗ್ರಹವಾಗಿದೆ.
ಸ್ನೇಹಿತರೆ,
ಈ ಮನೆಗಳನ್ನು ಬಡವರಿಗೆ ಒದಗಿಸಿದಾಗ, ಅವರ ಪ್ರಮುಖ ಚಿಂತೆಗಳು ಮಾಯವಾಗುತ್ತವೆ. ಅವರಲ್ಲಿ ಭದ್ರತೆಯ ಭಾವನೆ ಹೊರಹೊಮ್ಮುತ್ತದೆ. ಈ ಮನೆಗಳನ್ನು ಸ್ವೀಕರಿಸುವವರು ಹೆಮ್ಮೆ ಮತ್ತು ಶಕ್ತಿಯ ಹೊಸ ಪ್ರಜ್ಞೆಯನ್ನು ಅನುಭವಿಸುತ್ತಾರೆ. ಅಂತಹ ಮನೆಯಲ್ಲಿ ಮಗು ಬೆಳೆದಾಗ, ಅವನ ಆಕಾಂಕ್ಷೆಗಳು ಸಹ ವಿಭಿನ್ನವಾಗಿವೆ. ನಾನು ನಿಮಗೆ ಪದೇಪದೆ ನೆನಪಿಸುತ್ತೇನೆ, ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ, ಹೆಚ್ಚಿನ ಮನೆಗಳು ಮಹಿಳೆಯರ ಹೆಸರಿನಲ್ಲಿ ನೋಂದಾಯಿಸಲಾಗುತ್ತಿದೆ. ಇಂದು ಈ ಮನೆಗಳ ಮೌಲ್ಯ ಹಲವು ಲಕ್ಷ ರೂ., ಕೋಟಿಗಟ್ಟಲೆ ಆಗಿದೆ. ಸಹೋದರಿಯರ ಹೆಸರಿನಲ್ಲಿ ಮೊದಲ ಬಾರಿಗೆ ಆಸ್ತಿ ನೋಂದಣಿಯಾಗುತ್ತಿದೆ. ಈ ಬಡ ಕುಟುಂಬಗಳ ಸಹೋದರಿಯರು ತಾವು ಪಡೆದ ಆರ್ಥಿಕ ಭದ್ರತೆಯ ಭರವಸೆಯನ್ನು ನಿಜವಾಗಿಯೂ ಅರ್ಥ ಮಾಡಿಕೊಳ್ಳುತ್ತಾರೆ.
ಸ್ನೇಹಿತರೆ,
ಆಯುಷ್ಮಾನ್ ಭಾರತ್ ಯೋಜನೆಯು ಕೇವಲ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ ನೀಡಲು ಸೀಮಿತವಾಗಿಲ್ಲ. ಇದರ ಪರಿಣಾಮವು ಹಲವಾರು ತಲೆಮಾರುಗಳಿಗೆ ವಿಸ್ತರಿಸುತ್ತದೆ. ಬಡ ಕುಟುಂಬಕ್ಕೆ ಗಂಭೀರ ಕಾಯಿಲೆ ಬಂದರೆ, ಯಾರೊಬ್ಬರ ವಿದ್ಯಾಭ್ಯಾಸಕ್ಕೂ ತೊಂದರೆಯಾಗುತ್ತದೆ, ಯಾರಾದರೂ ಚಿಕ್ಕ ವಯಸ್ಸಿನಲ್ಲೇ ಕೆಲಸ ಮಾಡಲು ಪ್ರಾರಂಭಿಸುತ್ತಾರೆ. ಜೀವನ ನಡೆಸಲು ಹೆಂಡತಿಯೂ ದುಡಿಯಬೇಕಾಗುತ್ತದೆ. ಅನಾರೋಗ್ಯದಿಂದ ಆರ್ಥಿಕ ಪರಿಸ್ಥಿತಿ ಹದಗೆಡುವುದರಿಂದ, ಗಂಭೀರ ಅನಾರೋಗ್ಯದ ಹೊರೆಯು ಮಕ್ಕಳಿಗೆ ಮದುವೆಯಾಗಲು ಸಾಧ್ಯವಾಗದೆ ಹಲವು ವರ್ಷಗಳು ಕಳೆಯಬಹುದು. ಹಾಗಾಗಿ, ಬಡವರಿಗೆ 2 ಆಯ್ಕೆಗಳು ಮಾತ್ರ ಉಳಿಯುತ್ತವೆ. ಒಂದೋ ಅವರು ತಮ್ಮ ಕಣ್ಣೆದುರೇ ತಮ್ಮ ಪ್ರೀತಿಪಾತ್ರರು ಜೀವನ್ಮರಣ ಹೋರಾಟವನ್ನು ನೋಡಬೇಕಾಗುತ್ತದೆ, ಅಥವಾ ಅವರು ತಮ್ಮ ಆಸ್ತಿ ಮತ್ತು ಭೂಮಿ ಮಾರಿ ವೈದ್ಯಕೀಯ ಚಿಕಿತ್ಸೆಗಾಗಿ ಯಾರಿಂದಲೋ ಸಾಲ ತೆಗೆದುಕೊಳ್ಳುತ್ತಾರೆ. ಆಸ್ತಿಗಳನ್ನು ಮಾರಾಟ ಮಾಡಿದಾಗ, ಸಾಲದ ಹೊರೆ ಹೆಚ್ಚಾಗುತ್ತದೆ, ಇದು ಭವಿಷ್ಯದ ಪೀಳಿಗೆಯ ಮೇಲೆ ಪರಿಣಾಮ ಬೀರುತ್ತದೆ. ಆಯುಷ್ಮಾನ್ ಭಾರತ್ ಯೋಜನೆ ಇಂದು ಇಂತಹ ಬಡವರನ್ನು ಈ ಬಿಕ್ಕಟ್ಟಿನಿಂದ ಪಾರು ಮಾಡುತ್ತಿದೆ. ಅದಕ್ಕಾಗಿಯೇ ಆಯುಷ್ಮಾನ್ ಕಾರ್ಡ್ ಕಾರ್ಯಾಚರಣೆ ಮಾದರಿಯಲ್ಲಿ(ಮಿಷನ್ ಮೋಡ್‌ನಲ್ಲಿ) ಫಲಾನುಭವಿಗಳಿಗೆ ತಲುಪುವುದನ್ನು ಖಚಿತಪಡಿಸಿಕೊಳ್ಳಲು ನಾನು ಶ್ರಮಿಸುತ್ತಿದ್ದೇನೆ. ಇಂದಿಗೂ ಇಲ್ಲಿಂದ ಒಂದು ಕೋಟಿ ಅರವತ್ತು ಲಕ್ಷ ಫಲಾನುಭವಿಗಳಿಗೆ ಆಯುಷ್ಮಾನ್ ಭಾರತ್ ಕಾರ್ಡ್ ವಿತರಣೆ ಆರಂಭವಾಗಿದೆ.
ಸಹೋದರ ಸಹೋದರಿಯರೆ,
ವಂಚಿತರು ಮತ್ತು ಬಡವರು ದೇಶದ ಸಂಪನ್ಮೂಲಗಳ ಮೇಲೆ ಹೆಚ್ಚಿನ ಹಕ್ಕು ಹೊಂದಿದ್ದಾರೆ. ಹಿಂದೆ ಶ್ರೀಮಂತರಿಗೆ ಮಾತ್ರ ಬ್ಯಾಂಕ್‌ಗಳ ಪ್ರವೇಶ ಸೀಮಿತವಾಗಿತ್ತು. ಬಡವರಿಗೆ ಹಣವಿಲ್ಲದಿದ್ದರೆ ಬ್ಯಾಂಕ್ ಖಾತೆಯಿಂದ ಏನು ಮಾಡುತ್ತಾರೆ ಎಂಬ ನಂಬಿಕೆ ಇತ್ತು. ಯಾವುದೇ ಗ್ಯಾರಂಟಿ ಇಲ್ಲದಿರುವಾಗ ಬ್ಯಾಂಕ್ ಸಾಲವನ್ನು ಹೇಗೆ ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಕೆಲವರು ಯೋಚಿಸುತ್ತಿದ್ದರು? ಕಳೆದ 9 ವರ್ಷಗಳಲ್ಲಿ ಬಿಜೆಪಿ ಸರ್ಕಾರ ಈ ಮನಸ್ಥಿತಿಯನ್ನು ಬದಲಾಯಿಸಿದೆ. ಎಲ್ಲರಿಗೂ ಬ್ಯಾಂಕ್‌ಗಳ ಬಾಗಿಲು ತೆರೆದಿದ್ದೇವೆ. ನಾವು ಸುಮಾರು 50 ಕೋಟಿ ಜನ್ ಧನ್ ಬ್ಯಾಂಕ್ ಖಾತೆಗಳನ್ನು ತೆರೆದಿದ್ದೇವೆ. ಮುದ್ರಾ ಯೋಜನೆಯಡಿ 50,000ದಿಂದ 10 ಲಕ್ಷ ರೂ.ವರೆಗೆ ಯಾವುದೇ ಜಾಮೀನು ಇಲ್ಲದೆ ಸಾಲ ಒದಗಿಸಲಾಗಿದೆ. ಇತ್ತ ಉತ್ತರ ಪ್ರದೇಶದಲ್ಲೂ ಸಹ ಕೋಟಿಗಟ್ಟಲೆ ಫಲಾನುಭವಿಗಳು ಮುದ್ರಾ ಯೋಜನೆಯ ಲಾಭ ಪಡೆದು ತಮ್ಮ ವ್ಯವಹಾರ ಆರಂಭಿಸಿದ್ದಾರೆ. ಬಡವರು, ದಲಿತರು, ಹಿಂದುಳಿದ ಸಮುದಾಯಗಳು, ಬುಡಕಟ್ಟು ಸಮುದಾಯಗಳು, ಅಲ್ಪಸಂಖ್ಯಾತ ಕುಟುಂಬಗಳು ಮತ್ತು ಮಹಿಳಾ ಉದ್ಯಮಿಗಳು ಹೆಚ್ಚಿನ ಪ್ರಯೋಜನ ಪಡೆದಿದ್ದಾರೆ. ಇದು ಸಾಮಾಜಿಕ ನ್ಯಾಯ, ಬಿಜೆಪಿ ಸರಕಾರದಿಂದ ಖಾತರಿಯಾಗುತ್ತಿದೆ.
ಸ್ನೇಹಿತರೆ,
ಗಾಡಿ, ಗೂಡಂಗಡಿ, ಬೀದಿ ಬದಿಯಲ್ಲಿ ಸಣ್ಣ ವ್ಯಾಪಾರ ನಡೆಸುವ ನಮ್ಮ ಮಿತ್ರರಲ್ಲಿ ಹೆಚ್ಚಿನವರು ವಂಚಿತ ಸಮಾಜಕ್ಕೆ ಸೇರಿದವರು. ಆದರೆ ಹಿಂದಿನ ಸರ್ಕಾರಗಳು ಅವರನ್ನು ನಿರ್ಲಕ್ಷಿಸಿ ಅವಮಾನ ಮತ್ತು ಕಿರುಕುಳಕ್ಕೆ ಗುರಿ ಮಾಡಿದ್ದವು. ಬಂಡಿಗಳು, ಸ್ಟಾಲ್‌ಗಳು ಮತ್ತು ಫುಟ್‌ಪಾತ್‌ಗಳಲ್ಲಿ ಸಣ್ಣ ವ್ಯಾಪಾರಗಳನ್ನು ನಡೆಸುವವರನ್ನು ಯಾರಾದರೂ ನಿಂದಿಸುತ್ತಾರೆ ಮತ್ತು ಅವಮಾನಿಸುತ್ತಾರೆ. ಆದರೆ ಬಡ ತಾಯಿಯ ಮಗನಾಗಿರುವ ಮೋದಿ ಈ ಅವಮಾನ ಸಹಿಸಲು ಸಾಧ್ಯವಿಲ್ಲ. ಹಾಗಾಗಿ ಬೀದಿ ಬದಿ ವ್ಯಾಪಾರಿಗಳಿಗಾಗಿ ಪ್ರಧಾನಮಂತ್ರಿ-ಸ್ವನಿಧಿ ಯೋಜನೆ ಆರಂಭಿಸಿದ್ದೇನೆ. ನಾವು ಅವರಿಗೆ ಗೌರವ ನೀಡಿದ್ದೇವೆ. ಪಿಎಂ ಸ್ವನಿಧಿ ಯೋಜನೆಯಡಿ ಅವರನ್ನು ಬೆಂಬಲಿಸುವಂತೆ ಬ್ಯಾಂಕ್‌ಗಳನ್ನು ಒತ್ತಾಯಿಸಿದ್ದೇವೆ. ಫುಟ್ ಪಾತ್ ಮಾರಾಟಗಾರರಿಗೆ ನೀಡುವ ಸಾಲಕ್ಕೆ ಸರ್ಕಾರವೇ ಗ್ಯಾರಂಟಿ ನೀಡುತ್ತದೆ. ಇಲ್ಲಿಯವರೆಗೆ ಪಿಎಂ ಸ್ವನಿಧಿ ಯೋಜನೆಯಡಿ, 35 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ಆರ್ಥಿಕ ಸಹಾಯ ಒದಗಿಸಲಾಗಿದೆ. ಬನಾರಸ್‌ನಲ್ಲೂ ಸಹ ಇಂದು 1.25 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ಈ ಯೋಜನೆಯಡಿ ಸಾಲ ನೀಡಲಾಗಿದೆ. ಈ ಸಾಲದಿಂದ ಅವರು ತಮ್ಮ ಕೆಲಸದಲ್ಲಿ ಪ್ರಗತಿ ಹೊಂದಲು ಮತ್ತು ತಮ್ಮ ವ್ಯವಹಾರಗಳನ್ನು ವಿಸ್ತರಿಸಲು ಸಾಧ್ಯವಾಗುತ್ತದೆ. ಅವರನ್ನು ಅವಮಾನಿಸಲು ಅಥವಾ ಕೀಳಾಗಿ ಕಾಣಲು ಯಾರೂ ಧೈರ್ಯ ಮಾಡುವುದಿಲ್ಲ. ಬಡವರಿಗೆ ಘನತೆ ಸಿಗುವುದು ಮೋದಿಯವರ ಗ್ಯಾರಂಟಿಯಿಂದ.
ಸ್ನೇಹಿತರೆ,
ದಶಕಗಳ ಕಾಲ ದೇಶವನ್ನು ಆಳಿದ ಸರ್ಕಾರಗಳು ತಮ್ಮ ಆಡಳಿತದಲ್ಲಿ ಭ್ರಷ್ಟಾಚಾರವನ್ನು ಬೇರೂರಿಸಿದ್ದವು. ಇದು ಆಗುತ್ತಿದ್ದಾಗ ಎಷ್ಟು ಹಣ ಮಂಜೂರು ಮಾಡಿದರೂ, ಅದು ಸಾಲುತ್ತಿರಲಿಲ್ಲ. 2014ರ ಮೊದಲು ಹಿಂದಿನ ಸರ್ಕಾರಗಳ ಅವಧಿಯಲ್ಲಿ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತ ವಿಜೃಂಭಿಸಿತ್ತು. ಬಜೆಟ್ ನಲ್ಲಿ ಯಾವಾಗಲೂ ಕೊರತೆ ಮತ್ತು ನಷ್ಟ ಎದುರಾಗುತ್ತಿತ್ತು. ಆದರೆ ಇಂದು, ಬಡವರ ಕಲ್ಯಾಣವಾಗಲಿ ಅಥವಾ ಮೂಲಸೌಕರ್ಯ ಅಭಿವೃದ್ಧಿಯಾಗಲಿ ಬಜೆಟ್‌ಗೆ ಕೊರತೆಯಿಲ್ಲ. ತೆರಿಗೆದಾರರು ಒಂದೇ ಮತ್ತು ವ್ಯವಸ್ಥೆಯೂ ಒಂದೇ. ಆದರೆ ಸರ್ಕಾರ ಬದಲಾಗಿದೆ, ಉದ್ದೇಶಗಳು ಬದಲಾಗಿವೆ ಮತ್ತು ಫಲಿತಾಂಶಗಳು ಗೋಚರಿಸುತ್ತಿವೆ. ಈ ಹಿಂದೆ ಪತ್ರಿಕೆಗಳಲ್ಲಿ ಭ್ರಷ್ಟಾಚಾರ ಮತ್ತು ಹಗರಣಗಳ ವರದಿಗಳೇ ತುಂಬಿರುತ್ತಿದ್ದವು. ಈಗ ಹೊಸ ಯೋಜನೆಗಳ ಉದ್ಘಾಟನೆ ಮತ್ತು ಅನಾವರಣದಿಂದ ಮುಖ್ಯಾಂಶಗಳು ವಿಜೃಂಭಿಸುತ್ತಿವೆ. ಭಾರತೀಯ ರೈಲ್ವೆ ಕಳೆದ 9 ವರ್ಷಗಳಲ್ಲಿ ಪರಿವರ್ತನೆಯ ದೊಡ್ಡ ಉದಾಹರಣೆಯಾಗಿದೆ. ಪೂರ್ವ ಮೀಸಲಾದ ಸರಕು ಸಾಗಣೆ ಕಾರಿಡಾರ್ ಯೋಜನೆ, ಸರಕು ಸಾಗಣೆಗೆ ಮೀಸಲಾದ ಮಾರ್ಗಗಳನ್ನು 2006ರಲ್ಲಿ ಪ್ರಾರಂಭಿಸಲಾಯಿತು. ಆದರೆ 2014ರ ವರೆಗೆ ಒಂದು ಕಿಲೋಮೀಟರ್ ರೈಲು ಮಾರ್ಗವನ್ನು ಸಹ ಅಭಿವೃದ್ಧಿ ಪಡಿಸಿಲ್ಲ. ಈ ಯೋಜನೆಯ ಮಹತ್ವದ ಭಾಗವು ಕಳೆದ 9 ವರ್ಷಗಳಲ್ಲಿ ಪೂರ್ಣಗೊಂಡಿದೆ. ಈ ಹಳಿಗಳಲ್ಲಿ ಈಗಾಗಲೇ ಸರಕು ರೈಲುಗಳು ಸಂಚರಿಸುತ್ತಿವೆ. ಇಂದು ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್‌ನಿಂದ ಸೋನ್ ನಗರ್ ವಿಭಾಗವನ್ನು ಉದ್ಘಾಟಿಸಲಾಗಿದೆ. ಇದು ಸರಕು ರೈಲುಗಳ ವೇಗ ಹೆಚ್ಚಿಸುವುದಲ್ಲದೆ, ಪೂರ್ವಾಂಚಲ್ ಮತ್ತು ಪೂರ್ವ ಭಾರತದಲ್ಲಿ ಹಲವಾರು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ.
ಸ್ನೇಹಿತರೆ,
ಉದ್ದೇಶವು ಸ್ಪಷ್ಟವಾದಾಗ ಅದು ಹೇಗೆ ಕಾರ್ಯ ರ್ವಹಿಸುತ್ತದೆ ಎಂಬುದಕ್ಕೆ ನಾನು ನಿಮಗೆ ಇನ್ನೊಂದು ಉದಾಹರಣೆ ನೀಡುತ್ತೇನೆ. ದೇಶವು ಯಾವಾಗಲೂ ಹೈಸ್ಪೀಡ್ ರೈಲುಗಳನ್ನು ಬಯಸುತ್ತದೆ. ಸುಮಾರು 50 ವರ್ಷಗಳ ಹಿಂದೆ ಮೊದಲ ಬಾರಿಗೆ ರಾಜಧಾನಿ ಎಕ್ಸ್‌ಪ್ರೆಸ್ ಅನ್ನು ದೇಶದಲ್ಲಿ ಪರಿಚಯಿಸಲಾಯಿತು. ರಾಜಧಾನಿ ಎಕ್ಸ್‌ಪ್ರೆಸ್ ಓಡಲಾರಂಭಿಸಿತು. ಆದರೆ, ಇಷ್ಟು ವರ್ಷಗಳ ನಂತರವೂ ಈ ರಾಜಧಾನಿ ಎಕ್ಸ್‌ಪ್ರೆಸ್ ರೈಲುಗಳು ಕೇವಲ 16 ಮಾರ್ಗಗಳಲ್ಲಿ ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ಅದೇ ರೀತಿ ಸುಮಾರು 30-35 ವರ್ಷಗಳ ಹಿಂದೆ ಶತಾಬ್ದಿ ಎಕ್ಸ್ ಪ್ರೆಸ್ ಆರಂಭಿಸಲಾಗಿತ್ತು, ಆದರೆ ಇಷ್ಟು ವರ್ಷಗಳ ನಂತರವೂ ಇದು ಕೇವಲ 19 ಮಾರ್ಗಗಳಲ್ಲಿ ಮಾತ್ರ ಸೇವೆ ಸಲ್ಲಿಸುತ್ತಿದೆ. ಈ ರೈಲುಗಳ ಮಧ್ಯೆ, ವಂದೇ ಭಾರತ್ ಎಕ್ಸ್‌ಪ್ರೆಸ್ ಇದೆ. ಬನಾರಸ್ ದೇಶದ ಮೊದಲ ವಂದೇ ಭಾರತ ರೈಲು ಪಡೆಯಲು ಹೆಮ್ಮೆಪಡುತ್ತದೆ. ಈ ರೈಲು 4 ವರ್ಷಗಳಲ್ಲಿ 25 ಮಾರ್ಗಗಳಲ್ಲಿ ಕಾರ್ಯಾಚರಣೆ ಪ್ರಾರಂಭಿಸಿದೆ. ಇಂದು 2 ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಗೋರಖ್‌ಪುರದಿಂದ ಹಸಿರುನಿಶಾನೆ ತೋರಲಾಗಿದೆ. ಒಂದು ರೈಲು ಗೋರಖ್‌ಪುರದಿಂದ ಲಕ್ನೋಗೆ ಮತ್ತು ಇನ್ನೊಂದು ಅಹಮದಾಬಾದ್‌ನಿಂದ ಜೋಧ್‌ಪುರಕ್ಕೆ. ಈ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ದೇಶದ ಮಧ್ಯಮ ವರ್ಗದವರಲ್ಲಿ ನಂಬಲಾಗದಷ್ಟು ಜನಪ್ರಿಯವಾಗಿದೆ. ಅದಕ್ಕಾಗಿ ಎಲ್ಲಾ ಮೂಲೆಗಳಿಂದ ಬೇಡಿಕೆಗಳು ಬರುತ್ತಿವೆ. ವಂದೇ ಭಾರತ್ ದೇಶದ ಮೂಲೆ ಮೂಲೆಗಳನ್ನು ಸಂಪರ್ಕಿಸುವ ದಿನ ದೂರವಿಲ್ಲ.
ಸಹೋದರ ಸಹೋದರಿಯರೆ,
ಕಳೆದ 9 ವರ್ಷಗಳಲ್ಲಿ ಕಾಶಿಯ ಸಂಪರ್ಕ ಹೆಚ್ಚಿಸಲು ನಂಬಲಾಗದ ಕೆಲಸ ಮಾಡಲಾಗಿದೆ. ಇಲ್ಲಿನ ಅಭಿವೃದ್ಧಿ ಯೋಜನೆಗಳು ಹಲವಾರು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿವೆ. ಉದಾಹರಣೆಗೆ, ಕಳೆದ ವರ್ಷ 70 ದಶಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಮತ್ತು ಯಾತ್ರಿಕರು ಕಾಶಿಗೆ ಭೇಟಿ ನೀಡಿದ್ದಾರೆ. ಕೇವಲ 1 ವರ್ಷದಲ್ಲಿ ಕಾಶಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ 12 ಪಟ್ಟು ಹೆಚ್ಚಾಗಿದೆ. ಪ್ರವಾಸಿಗರ ಆಗಮನದಲ್ಲಿ 12 ಪಟ್ಟು ಹೆಚ್ಚಳದೊಂದಿಗೆ, ನೇರ ಫಲಾನುಭವಿಗಳು ರಿಕ್ಷಾ ಚಾಲಕರು, ಅಂಗಡಿ ವರ್ತಕರು ಮತ್ತು ಸಣ್ಣ ತಿನಿಸುಗಳು ಮತ್ತು ಹೋಟೆಲ್‌ಗಳನ್ನು ನಡೆಸುತ್ತಿರುವ ನನ್ನ ಸಹೋದರರೇ, ನೀವು ಬನಾರಸಿ ಸೀರೆ ಅಥವಾ ಬನಾರಸಿ ಪಾನ್ ವ್ಯಾಪಾರದಲ್ಲಿ ತೊಡಗಿಸಿಕೊಂಡಿರುವಿರಿ, ಪ್ರತಿಯೊಬ್ಬರೂ ಇದರಿಂದ ಹೆಚ್ಚಿನ ಲಾಭ ಪಡೆಯುತ್ತಿದ್ದಾರೆ. ಪ್ರವಾಸೋದ್ಯಮದ ಹೆಚ್ಚಳವು ನಮ್ಮ ದೋಣಿ ಸವಾರರಿಗೆ ಗಮನಾರ್ಹ ಪ್ರಯೋಜನ ನೀಡುತ್ತಿದೆ. ಸಂಜೆ ಗಂಗಾ ಆರತಿ (ಪ್ರಾರ್ಥನಾ ಆಚರಣೆ) ಸಮಯದಲ್ಲಿ ದೋಣಿಗಳಲ್ಲಿ ಅಪಾರ ಜನಸಮೂಹವನ್ನು ನೋಡಿ ನಾನು ಆಶ್ಚರ್ಯಚಕಿತನಾಗಿದ್ದೇನೆ. ದಯವಿಟ್ಟು ಬನಾರಸ್ ಅನ್ನು ಅದೇ ರೀತಿ, ನೋಡಿಕೊಳ್ಳುವುದನ್ನು ಮುಂದುವರಿಸಿ.
ಸ್ನೇಹಿತರೆ,
ಬಾಬಾ(ಶಿವ ದೇವರು) ಆಶೀರ್ವಾದದೊಂದಿಗೆ ವಾರಾಣಸಿಯ ತ್ವರಿತ ಅಭಿವೃದ್ಧಿಯ ಪಯಣ ಮುಂದುವರಿಯುತ್ತದೆ. ಕಾಶಿಯ ಜನತೆಗೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಇತ್ತೀಚೆಗೆ ಕಾಶಿಯಲ್ಲಿ ನಗರಸಭೆ ಚುನಾವಣೆ ನಡೆದಿತ್ತು. ನೀವೆಲ್ಲರೂ ಅಭಿವೃದ್ಧಿಯ ಪಯಣವನ್ನು ಬೆಂಬಲಿಸಿದ್ದೀರಿ, ಅಭಿವೃದ್ಧಿಯಲ್ಲಿ ನಂಬಿಕೆ ಇಟ್ಟವರ ವಿಜಯವನ್ನು ಖಾತ್ರಿಪಡಿಸಿದ್ದೀರಿ. ಕಾಶಿಯಲ್ಲಿ ಉತ್ತಮ ಆಡಳಿತ ಸ್ಥಾಪಿಸಲು ನೀವು ಕೊಡುಗೆ ನೀಡಿದ್ದೀರಿ. ಸಂಸತ್ತಿನಲ್ಲಿ ನಿಮ್ಮ ಪ್ರತಿನಿಧಿಯಾಗಿ, ನಿಮ್ಮ ಬೆಂಬಲಕ್ಕೆ ನಾನು ನಿಜವಾಗಿಯೂ ಕೃತಜ್ಞನಾಗಿದ್ದೇನೆ. ಮತ್ತೊಮ್ಮೆ, ಅಭಿವೃದ್ಧಿ ಕಾರ್ಯಗಳಲ್ಲಿ ಸಾಧಿಸಿರುವ ಪ್ರಗತಿಗಾಗಿ ನಾನು ನಿಮಗೆಲ್ಲರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಪವಿತ್ರ ಶ್ರಾವಣ ಮಾಸದ ಶುಭ ಸಂದರ್ಭದಲ್ಲಿ ನಿಮ್ಮೆಲ್ಲರಿಗೂ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ.
ಹರ್ ಹರ್ ಮಹಾದೇವ್!