ಭಾರತ್ ಮಾತಾ ಕಿ - ಜೈ!
ಭಾರತ್ ಮಾತಾ ಕಿ - ಜೈ!
ಭಾರತ್ ಮಾತಾ ಕಿ - ಜೈ!
ನಮ್ಮ, ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಮಂತ್ರದ ಸ್ಫೂರ್ತಿಯಾದ, ಶ್ರೀ ಜಗಜ್ಯೋತಿ ಬಸವೇಶ್ವರ, ಅವರಿಗೆ ನಮಸ್ಕಾರಗಳು.
ಬೆಳಗಾವಿಯ ಕುಂದಾ, ಮತ್ತು ಬೆಳಗಾವಿ ಜನರ ಪ್ರೀತಿ, ಎರಡೂ ಎಂದಿಗೂ ಮರೆಯಲಾಗದ ಸಿಹಿ. ಬೆಳಗಾವಿಯ ನನ್ನ ಬಂಧು-ಭಗಿನಿಯರಿಗೆ, ನಮಸ್ಕಾರಗಳು.
ಬೆಳಗಾವಿ ಜನತೆಯ ಪ್ರೀತಿ ಮತ್ತು ಆಶೀರ್ವಾದ ಸದಾ ಅನುಪಮವಾಗಿದೆ. ಈ ಪ್ರೀತಿ ಮತ್ತು ಆಶೀರ್ವಾದಗಳು ನಿಮ್ಮ ಸೇವೆಗಾಗಿ ಹಗಲಿರುಳು ಶ್ರಮಿಸಲು ನಮಗೆಲ್ಲರಿಗೂ ವಿಶೇಷ ಸ್ಫೂರ್ತಿ ನೀಡುತ್ತದೆ. ನಿಮ್ಮ ಈ ಆಶೀರ್ವಾದ ನಮಗೆ ಸದಾ ಸ್ಫೂರ್ತಿಯಾಗಲಿ. ಬೆಳಗಾವಿ ನಾಡಿಗೆ ಬರುವುದು ಯಾವುದೋ ತೀರ್ಥಯಾತ್ರೆಗೆ ಹೋದ ಅನುಭವ ನೀಡುತ್ತದೆ. ಇಲ್ಲಿಗೆ ಭೇಟಿ ನೀಡಲು ನಿಜಕ್ಕೂ ಸದಾ ಖುಷಿಯಾಗುತ್ತದೆ. ಇದು ನಮ್ಮ ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಕೆಚ್ಚೆದೆಯ ಕಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ನಾಡು. ಅವರ ಧೈರ್ಯ, ಶೌರ್ಯಕ್ಕಾಗಿ ಮತ್ತು ಬ್ರಿಟಿಷ್ ವಿರುದ್ಧ ಹೋರಾಟಕ್ಕಾಗಿ ಮತ್ತು ಗುಲಾಮಗಿರಿಯ ವಿರುದ್ಧ ಧ್ವನಿ ಎತ್ತಿದ್ದಕ್ಕಾಗಿ ದೇಶವು ಅವರನ್ನು ಇಂದಿಗೂ ಸ್ಮರಣೆ ಮಾಡುತ್ತದೆ.
ಸ್ನೇಹಿತರೇ,
ಸ್ವಾತಂತ್ರ್ಯ ಹೋರಾಟದಲ್ಲಿ ಅಥವಾ ಅದರ ನಂತರ ಭಾರತದ 'ನವ ನಿರ್ಮಾಣ'ದಲ್ಲಿ ಬೆಳಗಾವಿ ಯಾವಾಗಲೂ ಪ್ರಮುಖ ಪಾತ್ರವನ್ನು ವಹಿಸಿದೆ. ಇತ್ತೀಚಿನ ದಿನಗಳಲ್ಲಿ ಕರ್ನಾಟಕದಲ್ಲಿ ಸ್ಟಾರ್ಟ್ಅಪ್ ಗಳ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಆದರೆ ಒಂದು ರೀತಿಯಲ್ಲಿ, 100 ವರ್ಷಗಳ ಹಿಂದೆಯೇ ಬೆಳಗಾವಿಯಲ್ಲಿ ಸ್ಟಾರ್ಟ್ಅಪ್ ಗಳು ಪ್ರಾರಂಭವಾದವು. ಹೌದು, 100 ವರ್ಷಗಳ ಹಿಂದೆ ಅದನ್ನು ನೆನಪಿಸಲು ಇಲ್ಲಿಗೆ ಬಂದಿದ್ದೇನೆ. ನಿಮಗೆಲ್ಲರಿಗೂ ಬಾಬುರಾವ್ ಪುಸಲ್ಕರ್ ಜೀ ನೆನಪಿರಬೇಕು. ಮಹಾನುಭಾವ. ಬಾಬುರಾವ್ ಪುಸಲ್ಕರ್ ಜೀ ಅವರು 100 ವರ್ಷಗಳ ಹಿಂದೆ ಬೆಳಗಾವಿ ಪ್ರದೇಶದಲ್ಲಿ ಸಣ್ಣ ಘಟಕವನ್ನು ಸ್ಥಾಪಿಸಿದ್ದರು. ಅಂದಿನಿಂದ, ಬೆಳಗಾವಿಯು ವಿವಿಧ ಕೈಗಾರಿಕೆಗಳಿಗೆ ದೊಡ್ಡ ಮತ್ತು ಮುಖ್ಯ ನೆಲೆಯಾಗಿ ಹೊರಹೊಮ್ಮಿದೆ. ಬೆಳಗಾವಿಯ ಈ ರೀತಿಯ ಮಾದರಿಯನ್ನೇ ಡಬಲ್ ಇಂಜಿನ್ ಸರ್ಕಾರವು ಈ ದಶಕದಲ್ಲಿ ಮತ್ತಷ್ಟು ಬಲಗೊಳಿಸಲು ಬಯಸುತ್ತದೆ.
ಸಹೋದರ ಸಹೋದರಿಯರೇ,
ಇಂದು ಉದ್ಘಾಟನೆಗೊಂಡ ಯೋಜನೆಗಳು ಅಥವಾ ಇಂದು ಶಂಕುಸ್ಥಾಪನೆ ಮಾಡಲಾದ ಯೋಜನೆಗಳು ಬೆಳಗಾವಿಯ ಅಭಿವೃದ್ಧಿಗೆ ಹೊಸ ಚೈತನ್ಯವನ್ನು ನೀಡುತ್ತವೆ. ನೂರಾರು ಕೋಟಿ ರೂಪಾಯಿಗಳ ಈ ಯೋಜನೆಗಳು ಸಂಪರ್ಕ ಮತ್ತು ನೀರು ಪೂರೈಕೆಗೆ ಸಂಬಂಧಿಸಿದ್ದಾಗಿದೆ. ಈ ಸಂದರ್ಭದಲ್ಲಿ, ಈ ಪ್ರದೇಶದ ಅಭಿವೃದ್ಧಿಯ ವೇಗವನ್ನು ಹೆಚ್ಚಿಸಲು ಈ ಎಲ್ಲ ಯೋಜನೆಗಳು ಸಹಕಾರಿಯಾಗುತ್ತದೆ. ಈ ಎಲ್ಲಾ ಅಭಿವೃದ್ಧಿ ಯೋಜನೆಗಳಿಗಾಗಿ ನಾನು ನಿಮ್ಮೆಲ್ಲರನ್ನು ಅಭಿನಂದಿಸುತ್ತೇನೆ.
ಇಂದು ಇಡೀ ಭಾರತಕ್ಕೆ ಬೆಳಗಾವಿಯಿಂದ ಉಡುಗೊರೆ ಸಿಕ್ಕಿದೆ. ಇಂದು ಭಾರತದ ಪ್ರತಿಯೊಬ್ಬ ರೈತನೂ ಕರ್ನಾಟಕ, ಬೆಳಗಾವಿಯೊಂದಿಗೆ ವಿಶೇಷ ಸಂಬಂಧ ಹೊಂದಿದ್ದಾನೆ. ಏಕೆಂದರೆ ಇಂದು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ ಮತ್ತೊಂದು ಕಂತನ್ನು ರೈತರಿಗೆ ಇಲ್ಲಿಂದ ಕಳುಹಿಸಲಾಗಿದೆ. ಕೇವಲ ಒಂದು ಗುಂಡಿಯನ್ನು ಒತ್ತುವ ಮೂಲಕ ದೇಶದ ಕೋಟ್ಯಂತರ ರೈತರ ಬ್ಯಾಂಕ್ ಖಾತೆಗಳಿಗೆ 16,000 ಕೋಟಿ ರೂ. ಜಮೆಯಾಗಿದೆ. ಇದೊಂದು ಮಹತ್ವದ ಮತ್ತು ಅಭೂತಪೂರ್ವ ಕ್ಷಣ.
ಇಲ್ಲಿ ಕುಳಿತಿರುವ ನನ್ನ ರೈತ ಬಂಧು ಮಿತ್ರರೇ, ನಿಮ್ಮ ಮೊಬೈಲ್ ಫೋನ್ಗಳಿಗೆ ಸಂದೇಶ ಬಂದಿರಬಹುದು. ಇಷ್ಟು ದೊಡ್ಡ ಮೊತ್ತದ ಅಂದರೆ 16,000 ಕೋಟಿ ರೂಪಾಯಿಗಳು ಒಂದು ಕ್ಷಣದಲ್ಲಿ ನೇರವಾಗಿ ರೈತರ ಖಾತೆಗೆ ಸೇರುತ್ತದೆ ಮತ್ತು ಅದು ಕೂಡ ಯಾವುದೇ ಮಧ್ಯವರ್ತಿ ಅಥವಾ ಭ್ರಷ್ಟಾಚಾರವಿಲ್ಲದೆ ಜಮೆಯಾಗುತ್ತಿದೆ. ಇದನ್ನು ಕಂಡು ವಿಶ್ವದ ಜನರು ಆಶ್ಚರ್ಯ ಪಡುತ್ತಿದ್ದಾರೆ. ಕೇಂದ್ರವು ಒಂದು ರೂಪಾಯಿ ಕಳುಹಿಸಿದರೆ ಕೇವಲ 15 ಪೈಸೆ ಫಲಾನುಭವಿಗಳಿಗೆ ತಲುಪುತ್ತದೆ ಎಂದು ಅಂದಿನ ಕಾಂಗ್ರೆಸ್ ಪಕ್ಷದ ಪ್ರಧಾನಿ ಹೇಳಿದ್ದರು. 16,000 ಕೋಟಿ ರೂಪಾಯಿ ಆಗಿದ್ದರೆ, ಸುಮಾರು 12,000-13,000 ಕೋಟಿ ರೂಪಾಯಿ ಎಲ್ಲೋ ಕಣ್ಮರೆಯಾಗುತ್ತಿತ್ತು ಎಂದು ನೀವು ಊಹಿಸಬಹುದು. ಆದರೆ ಈಗ ಇರುವುದು ಮೋದಿ ಸರ್ಕಾರ. ಪ್ರತಿ ಪೈಸೆ ನಿಮಗೆ ಸೇರಿದ್ದು ಮತ್ತು ಅದು ನಿಮಗಾಗಿ ಮೀಸಲಿರಿಸಲಾಗಿದೆ. ಕರ್ನಾಟಕ ಸೇರಿದಂತೆ ಇಡೀ ದೇಶದ ರೈತ ಸಹೋದರ ಸಹೋದರಿಯರನ್ನು ಅಭಿನಂದಿಸುತ್ತೇನೆ. ಇದು ಹೋಳಿ ಹಬ್ಬದ ಮುನ್ನ ನನ್ನ ರೈತರಿಗೆ ಹೋಳಿ ಹಬ್ಬದ ಉಡುಗೊರೆ.
ಸಹೋದರ ಸಹೋದರಿಯರೇ,
ಇಂದಿನ ಬದಲಾಗುತ್ತಿರುವ ಭಾರತವು ಅಭಿವೃದ್ಧಿಯಲ್ಲಿ ದಾಪುಗಾಲು ಹಾಕುತ್ತಿರುವಾಗ ಪ್ರತಿಯೊಬ್ಬ ವಂಚಿತರಿಗೂ ಆದ್ಯತೆ ನೀಡಲಾಗುತ್ತಿದೆ. ನಮ್ಮ ದೇಶದಲ್ಲಿ ದಶಕಗಳಿಂದ ಸಣ್ಣ ರೈತರನ್ನು ನಿರ್ಲಕ್ಷಿಸಲಾಗಿದೆ. ಭಾರತದಲ್ಲಿ ಶೇ.80-85 ರಷ್ಟು ಸಣ್ಣ ರೈತರಿದ್ದಾರೆ. ಈಗ ಈ ಸಣ್ಣ ರೈತರ ಬಗ್ಗೆಯೇ ಬಿಜೆಪಿ ಸರ್ಕಾರ ಹೆಚ್ಚು ಆದ್ಯತೆ ನೀಡುತ್ತಿದೆ. ಇದುವರೆಗೆ ಪ್ರಧಾನಿ ಕಿಸಾನ್ ಸಮ್ಮಾನ್ ನಿಧಿ ಮೂಲಕ ದೇಶದ ಸಣ್ಣ ರೈತರ ಬ್ಯಾಂಕ್ ಖಾತೆಗಳಿಗೆ ಸುಮಾರು 2.5 ಲಕ್ಷ ಕೋಟಿ ರೂಪಾಯಿಗಳನ್ನು ಜಮೆ ಮಾಡಲಾಗಿದೆ. 2.5 ಲಕ್ಷ ಕೋಟಿ ರೂಪಾಯಿ! ಮತ್ತು ಇದರಲ್ಲಿ ಕೃಷಿಯಲ್ಲಿ ತೊಡಗಿರುವ ನಮ್ಮ ತಾಯಂದಿರು ಮತ್ತು ಸಹೋದರಿಯರ ಖಾತೆಗಳಿಗೆ ಠೇವಣಿ ಮಾಡಲಾದ ಮೊತ್ತ 50,000 ಕೋಟಿ ರೂಪಾಯಿ. ಈ ಹಣ ರೈತರ ಸಣ್ಣಪುಟ್ಟ ಅಗತ್ಯಗಳನ್ನು ಪೂರೈಸುತ್ತಿದೆ. ಈಗ ಅವರು ಸಣ್ಣಪುಟ್ಟ ಖರ್ಚುಗಳಿಗೆ ಬೇರೆ ಬೇರೆ ಕಡೆ ಮೊರೆ ಹೋಗಬೇಕಾಗಿಲ್ಲ ಅಥವಾ ಅತಿ ಹೆಚ್ಚು ಬಡ್ಡಿಯನ್ನು ವಿಧಿಸುವ ಲೇವಾದೇವಿದಾರರ ಬಳಿಯೂ ಹೋಗಬೇಕಾದ ಅಗತ್ಯವಿಲ್ಲ.
ಸ್ನೇಹಿತರೇ,
ದೇಶವು 2014 ರಿಂದ ನಿರಂತರವಾಗಿ ಕೃಷಿಯಲ್ಲಿ ಅರ್ಥಪೂರ್ಣ ಬದಲಾವಣೆಯತ್ತ ಹೆಜ್ಜೆ ಹಾಕಿ ಸಾಗುತ್ತಿದೆ. ಬಿಜೆಪಿ ಸರ್ಕಾರವು ಕೃಷಿಯನ್ನು ಆಧುನಿಕತೆಯೊಂದಿಗೆ ಜೋಡಿಸುತ್ತಿದೆ ಮತ್ತು ಭವಿಷ್ಯಕ್ಕಾಗಿ ಕೃಷಿ ಕ್ಷೇತ್ರವನ್ನು ಸಜ್ಜುಗೊಳಿಸುತ್ತಿದೆ. 2014 ರಲ್ಲಿ ದೇಶ ಸೇವೆ ಮಾಡುವ ಅವಕಾಶ ಸಿಕ್ಕಾಗ ಭಾರತದ ಕೃಷಿ ಬಜೆಟ್ 25,000 ಕೋಟಿ ರೂಪಾಯಿ ಇತ್ತು. ಈ ವರ್ಷದ ಕೃಷಿ ಬಜೆಟ್ನ ಅಂಕಿ ಅಂಶ ನಿಮಗೆ ನೆನಪಿದೆಯೇ? ನೀವು ನೆನಪಿಸಿಕೊಳ್ಳುತ್ತೀರಾ? ಜೋರಾಗಿ ಹೇಳಿ, ನೆನಪಿದೆಯಾ? ನೋಡಿ, 2014ರಲ್ಲಿ ನೀವು ನಮಗೆ ದೇಶ ಸೇವೆ ಮಾಡಲು ಅವಕಾಶ ನೀಡಿದಾಗ ಭಾರತದ ಕೃಷಿ ಬಜೆಟ್ಗೆ ಮೀಸಲಿರಿಸಲಾಗಿದ್ದ ಒಟ್ಟು ಮೊತ್ತ 25,000 ಕೋಟಿ ರೂಪಾಯಿ. ಎಷ್ಟು? 25,000 ಕೋಟಿ ರೂಪಾಯಿ! ಪ್ರಸ್ತುತ, ನಮ್ಮ ಕೃಷಿ ಬಜೆಟ್ 1.25 ಲಕ್ಷ ಕೋಟಿ ರೂಪಾಯಿಗಳಿಗಿಂತ ಹೆಚ್ಚು. ಅಂದರೆ, ಕಳೆದ ಒಂಬತ್ತು ವರ್ಷದಲ್ಲಿ ಐದು ಪಟ್ಟು ಹೆಚ್ಚಳವಾಗಿದೆ. ಇದು ರೈತರ ನೆರವಿಗೆ ಬಿಜೆಪಿ ಸರ್ಕಾರ ನೀಡುತ್ತಿರುವ ಆದ್ಯತೆ ಮತ್ತು ನಮ್ಮ ಬದ್ಧತೆಯನ್ನು ತೋರಿಸುತ್ತದೆ. ರೈತರಿಗೆ ಅನುಕೂಲವಾಗುವ ತಂತ್ರಜ್ಞಾನಕ್ಕೆ ಬಿಜೆಪಿ ಸರ್ಕಾರ ಸದಾ ಒತ್ತು ನೀಡುತ್ತಿದೆ.
ಜನ್ ಧನ್ ಬ್ಯಾಂಕ್ ಖಾತೆಗಳು, ಮೊಬೈಲ್ ಸಂಪರ್ಕಗಳು ಮತ್ತು ಆಧಾರ್ ಇಲ್ಲದಿದ್ದರೆ ಇದು ಸಾಧ್ಯವಾಗುತ್ತಿತ್ತೇ? ನಮ್ಮ ಸರ್ಕಾರವು ಹೆಚ್ಚು ಹೆಚ್ಚು ರೈತರನ್ನು ಕಿಸಾನ್ ಕ್ರೆಡಿಟ್ ಕಾರ್ಡ್ಗಳೊಂದಿಗೆ ಜೋಡಣೆ ಮಾಡುತ್ತಿದೆ. ರೈತರಿಗೆ ಬ್ಯಾಂಕ್ಗಳಿಂದ ಸಹಾಯ ಪಡೆಯುವ ಸೌಲಭ್ಯ ಸದಾ ಸಿಗಬೇಕು ಎಂಬುದು ನಮ್ಮ ನಿರಂತರ ಪ್ರಯತ್ನ.
ಸ್ನೇಹಿತರೇ
ಈ ವರ್ಷದ ಬಜೆಟ್ ನಮ್ಮ ಕೃಷಿಯ ಪ್ರಸ್ತುತ ಸ್ಥಿತಿ ಮತ್ತು ಭವಿಷ್ಯದ ಅಗತ್ಯತೆಗಳನ್ನು ಪೂರೈಸಲು ಸ್ಪಷ್ಟ ಮಾರ್ಗಸೂಚಿಯನ್ನು ರೂಪಿಸಿದೆ.
ಸಂಗ್ರಹಣೆ, ಕೃಷಿ ವೆಚ್ಚವನ್ನು ಕಡಿಮೆ ಮಾಡುವುದು ಮತ್ತು ಸಣ್ಣ ರೈತರನ್ನು ಸಂಘಟಿಸುವುದು ಇಂದಿನ ಅಗತ್ಯವಾಗಿದೆ. ಹಾಗಾಗಿ ಈ ಬಾರಿಯ ಬಜೆಟ್ ನಲ್ಲಿ ನೂರಾರು ಹೊಸ ಶೇಖರಣಾ ಸೌಲಭ್ಯ ಕಲ್ಪಿಸಲು ಒತ್ತು ನೀಡಲಾಗಿದೆ. ಇದರೊಂದಿಗೆ ಸಹಕಾರಿ ಸಂಘಗಳ ವಿಸ್ತರಣೆಗೆ ಅಭೂತಪೂರ್ವ ಗಮನ ನೀಡಲಾಗಿದೆ. ನೈಸರ್ಗಿಕ ಕೃಷಿಯನ್ನು ಉತ್ತೇಜಿಸಲು ಹಲವಾರು ಯೋಜನೆಗಳನ್ನು, ಕ್ರಮಗಳನ್ನು ಹಾಗೂ ಉಪ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ನೈಸರ್ಗಿಕ ಕೃಷಿಯಿಂದ ರೈತರಿಗೆ ಸಾಕಷ್ಟು ಖರ್ಚು ಕಡಿಮೆಯಾಗಲಿದೆ. ನೈಸರ್ಗಿಕ ಕೃಷಿಯಲ್ಲಿ ತೊಡಗಿರುವ ರೈತರು ಎದುರಿಸುತ್ತಿರುವ ದೊಡ್ಡ ಸಮಸ್ಯೆ ಎಂದರೆ ರಸಗೊಬ್ಬರಗಳು ಮತ್ತು ಕೀಟನಾಶಕಗಳು. ಈಗ ಈ ನಿಟ್ಟಿನಲ್ಲಿ ರೈತರಿಗೆ ನೆರವಾಗಲು ಸಾವಿರಾರು ಸಹಾಯ ಕೇಂದ್ರಗಳನ್ನು ಬಿಜೆಪಿ ಸರ್ಕಾರ ಸ್ಥಾಪಿಸಲು ಮುಂದಾಗಿದೆ. ರಾಸಾಯನಿಕ ಗೊಬ್ಬರವು ಕೃಷಿ ವೆಚ್ಚವನ್ನು ಹೆಚ್ಚಿಸುತ್ತದೆ. ಈಗ ನಾವು PM-PRANAM ಯೋಜನೆಯನ್ನು ಪ್ರಾರಂಭಿಸಿದ್ದೇವೆ. ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಕಡಿಮೆ ಮಾಡುವ ರಾಜ್ಯಗಳಿಗೆ ಕೇಂದ್ರದಿಂದ ಹೆಚ್ಚುವರಿ ಸಹಾಯ ಸಿಗುತ್ತದೆ.
ಸಹೋದರ ಸಹೋದರಿಯರೇ,
ದೇಶದ ಕೃಷಿ ಕ್ಷೇತ್ರದ ಭವಿಷ್ಯದ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ನಮ್ಮ ಗ್ರಾಮೀಣ ಆರ್ಥಿಕತೆಗೆ ಹೊಸ ಜೀವನವನ್ನು ನೀಡಲು ನಾವು ನಿರ್ಧರಿಸಿದ್ದೇವೆ.
ಇಂದು ಹವಾಮಾನ ಬದಲಾವಣೆಯಿಂದ ನಮ್ಮ ರೈತರು ಅನೇಕ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಆದ್ದರಿಂದ, ನಾವು ನಮ್ಮ ಹಳೆಯ ಸಂಪ್ರದಾಯಗಳ ಪದ್ಧತಿಗಳನ್ನು ಮತ್ತು ನಮ್ಮ ಪ್ರಾಚೀನ ಶಕ್ತಿಗಳನ್ನು ಮರು ಅಳವಡಿಸಿಕೊಳ್ಳುವ ಬಗ್ಗೆ ಪರಿಶೀಲನೆ ನಡೆಸಬೇಕು. ನಮ್ಮ ಕೆಲವು ಧಾನ್ಯಗಳು ಪ್ರತಿ ಋತುವಿನಲ್ಲಿ, ಪ್ರತಿ ಪರಿಸ್ಥಿತಿಯನ್ನು ತಡೆದುಕೊಳ್ಳಬಲ್ಲವು ಮತ್ತು ಇದು ಸೂಪರ್ ಫುಡ್ ಆಗಿದೆ. ಈ ಧಾನ್ಯವು ಹೆಚ್ಚು ಪೌಷ್ಟಿಕವಾಗಿದೆ. ಆದ್ದರಿಂದ ಈ ಬಾರಿಯ ಬಜೆಟ್ನಲ್ಲಿ ಈ ಧಾನ್ಯಗಳಿಗೆ ಶ್ರೀ ಅನ್ನ ಎಂದು ಮರು ನಾಮಕರಣ ಮಾಡಲಾಗಿದೆ. ಮತ್ತು ಶ್ರೀ ಅನ್ನದ ವಿಷಯದಲ್ಲಿ ಕರ್ನಾಟಕವು ವಿಶ್ವದ ಪ್ರಮುಖ ಕೇಂದ್ರವಾಗಿದೆ. ಇಲ್ಲಿ ಶ್ರೀ ಅನ್ನವನ್ನು ಈಗಾಗಲೇ ಸಿರಿ ಧಾನ್ಯ ಎಂದು ಕರೆಯಲಾಗುತ್ತದೆ. ಇಲ್ಲಿನ ರೈತರು ಹಲವು ಬಗೆಯ ಶ್ರೀ ಅನ್ನವನ್ನು ಬೆಳೆಯುತ್ತಾರೆ. ನಮ್ಮ ಮುಖ್ಯಮಂತ್ರಿಗಳ ನೇತೃತ್ವದ ಕರ್ನಾಟಕದ ಬಿಜೆಪಿ ಸರ್ಕಾರವೂ ಈ ನಿಟ್ಟಿನಲ್ಲಿ ರೈತರಿಗೆ ಸಹಾಯ ನಿರಂತರ ಮಾಡುತ್ತಿದೆ. ಶ್ರೀ ಅನ್ನವನ್ನು ಉತ್ತೇಜಿಸಲು ರೈತ ಬಂಧು, ರೈತ ನಾಯಕ ಯಡಿಯೂರಪ್ಪ ಅವರು ಇಲ್ಲಿ ಹಮ್ಮಿಕೊಂಡಿದ್ದ ಬೃಹತ್ ಅಭಿಯಾನವನ್ನು ನಾನು ಸದಾ ನೆನಪಿಸಿಕೊಳ್ಳುತ್ತೇನೆ. ಈಗ ನಾವು ಶ್ರೀ ಅನ್ನವನ್ನು ಇಡೀ ಜಗತ್ತಿಗೆ ಕೊಂಡೊಯ್ಯಬೇಕಾಗಿದೆ. ಶ್ರೀ ಅನ್ನ ಬೆಳೆಯುವ ವೆಚ್ಚವೂ ಕಡಿಮೆ ಮತ್ತು ಇದಕ್ಕೆ ಕಡಿಮೆ ನೀರು ಬೇಕಾಗುತ್ತದೆ. ಇದರಿಂದ ಸಣ್ಣ ರೈತರಿಗೆ ದುಪ್ಪಟ್ಟು ಲಾಭ ಸಿಗಲಿದೆ.
ಸ್ನೇಹಿತರೇ,
ಈ ಪ್ರದೇಶದಲ್ಲಿ ಹೇರಳವಾಗಿ ಕಬ್ಬು ಉತ್ಪಾದನೆಯಾಗುತ್ತದೆ. ಬಿಜೆಪಿ ಸರ್ಕಾರವು ಕಬ್ಬು ರೈತರ ಹಿತಾಸಕ್ತಿಗಳನ್ನು ಯಾವಾಗಲೂ ಪ್ರಮುಖವಾಗಿ ಕೇಂದ್ರೀಕರಿಸಲಾಗುತ್ತಿದೆ. ಈ ಬಾರಿಯ ಬಜೆಟ್ನಲ್ಲೂ ಕಬ್ಬು ಬೆಳೆಗಾರರಿಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. 2016-17ಕ್ಕಿಂತ ಮೊದಲು ಸಕ್ಕರೆ ಸಹಕಾರ ಸಂಘಗಳು ಮಾಡಿದ ಪಾವತಿಗಳಿಗೆ ತೆರಿಗೆ ವಿನಾಯಿತಿ ನೀಡಲಾಗಿದೆ. ಇದರಿಂದ ಸಕ್ಕರೆ ಸಹಕಾರಿ ಸಂಘಗಳು ಹಿಂದಿನ ಯುಪಿಎ ಸರ್ಕಾರದ 10 ಸಾವಿರ ಕೋಟಿ ರೂಪಾಯಿ ಹೊರೆಯಿಂದ ಮುಕ್ತಿ ಪಡೆಯಲಿವೆ. ನಮ್ಮ ಸರ್ಕಾರವು ಎಥೆನಾಲ್ ಉತ್ಪಾದನೆಗೆ ಒತ್ತು ನೀಡುತ್ತಿದೆ ಎಂಬುದು ನಿಮಗೆ ತಿಳಿದಿರಬೇಕು. ಎಥೆನಾಲ್ ಉತ್ಪಾದನೆ ಹೆಚ್ಚಳದಿಂದ ಕಬ್ಬು ಬೆಳೆಯುವ ರೈತರ ಆದಾಯವೂ ಹೆಚ್ಚುತ್ತಿದೆ. ಕಳೆದ ಒಂಬತ್ತು ವರ್ಷಗಳಲ್ಲಿ ಪೆಟ್ರೋಲ್ನಲ್ಲಿ ಎಥೆನಾಲ್ ಮಿಶ್ರಣವು 1.5 ಪ್ರತಿಶತದಿಂದ 10 ಪ್ರತಿಶತಕ್ಕೆ ಹೆಚ್ಚಾಗಿದೆ. ಈಗ ಸರ್ಕಾರವು ಪೆಟ್ರೋಲ್ನಲ್ಲಿ ಶೇಕಡಾ 20 ರಷ್ಟು ಎಥೆನಾಲ್ ಮಿಶ್ರಣ ಮಾಡುವ ಗುರಿಯನ್ನು ಹೊಂದಿದೆ. ದೇಶವು ಈ ದಿಶೆಯಲ್ಲಿ ಎಷ್ಟು ಮುನ್ನಡೆಯುತ್ತದೋ ಅಷ್ಟು ನಮ್ಮ ಕಬ್ಬು ರೈತರಿಗೆ ಹೆಚ್ಚು ಲಾಭವಾಗುತ್ತದೆ.
ಸಹೋದರ ಸಹೋದರಿಯರೇ,
ಕೃಷಿ, ಉದ್ಯಮ, ಪ್ರವಾಸೋದ್ಯಮ ಅಥವಾ ಶಿಕ್ಷಣದಲ್ಲಿ ಉತ್ತಮ ಸಂಪರ್ಕವು ದೊಡ್ಡ ಪಾತ್ರವನ್ನು ವಹಿಸುತ್ತದೆ. ಆದ್ದರಿಂದ, ಕಳೆದ ಕೆಲವು ವರ್ಷಗಳಲ್ಲಿ ನಾವು ಕರ್ನಾಟಕದಲ್ಲಿ ಸಂಪರ್ಕ ಹೆಚ್ಚಳ ಮಾಡಲು ಹೆಚ್ಚು ಗಮನಹರಿಸುತ್ತಿದ್ದೇವೆ. 2014 ರ ಹಿಂದಿನ ಐದು ವರ್ಷಗಳಲ್ಲಿ ಕರ್ನಾಟಕದಲ್ಲಿ ರೈಲ್ವೆಯ ಒಟ್ಟು ಬಜೆಟ್ 4,000 ಕೋಟಿ ರೂಪಾಯಿಗಳಾಗಿದ್ದರೆ, ಈ ವರ್ಷ ಕರ್ನಾಟಕದಲ್ಲಿ ರೈಲ್ವೆಗೆ 7,500 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ. ಪ್ರಸ್ತುತ ಕರ್ನಾಟಕದಲ್ಲಿ ಸುಮಾರು 45,000 ಕೋಟಿ ರೂಪಾಯಿಗಳಿಗೂ ಅಧಿಕ ಮೊತ್ತದ ರೈಲ್ವೆ ಯೋಜನೆಗಳು ಪ್ರಗತಿಯಲ್ಲಿವೆ. ಈ ಯೋಜನೆಗಳಿಂದ ಕರ್ನಾಟಕದಲ್ಲಿ ಎಷ್ಟು ಜನರಿಗೆ ಉದ್ಯೋಗ ಸಿಗುತ್ತಿದೆ ಎಂದು ನೀವು ಊಹಿಸಬಹುದು.
ಬೆಳಗಾವಿಯ ಆಧುನಿಕ ರೈಲು ನಿಲ್ದಾಣವು ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡುತ್ತದೆ ಮತ್ತು ಹೆಮ್ಮೆಯ ಪ್ರತೀಕವಾಗಿದೆ. ಈ ಆಧುನಿಕ ರೈಲು ನಿಲ್ದಾಣದಿಂದ ಸೌಲಭ್ಯಗಳು ಹೆಚ್ಚಾಗುತ್ತಿರುವುದು ಮಾತ್ರವಲ್ಲದೇ, ರೈಲ್ವೆ ಮೇಲಿನ ಜನರ ನಂಬಿಕೆಯೂ ದುಪ್ಪಟ್ಟು ಆಗುತ್ತಿದೆ. ಹಿಂದೆ, ಜನರು ಇಂತಹ ಭವ್ಯವಾದ ನಿಲ್ದಾಣಗಳನ್ನು ವಿದೇಶಗಳಲ್ಲಿ ಮಾತ್ರ ನೋಡುತ್ತಿದ್ದರು. ಈಗ ಅಂತಹ ನಿಲ್ದಾಣಗಳನ್ನು ಭಾರತದಲ್ಲಿಯೂ ಅಭಿವೃದ್ಧಿಪಡಿಸಲಾಗುತ್ತಿದೆ. ಕರ್ನಾಟಕದ ಅನೇಕ ರೈಲು ನಿಲ್ದಾಣಗಳು ಆಧುನಿಕ, ವೈಭವೋಪೇತವಾಗಿ ಬದಲಾಗುತ್ತಿವೆ. ಲೋಂಡಾ-ಘಟಪ್ರಭಾ ಮಾರ್ಗವನ್ನು ದ್ವಿಗುಣಗೊಳಿಸುವುದರೊಂದಿಗೆ, ಪ್ರಯಾಣವು ಈಗ ವೇಗವಾಗಿ ಮತ್ತು ಸುರಕ್ಷಿತವಾಗಿರುತ್ತದೆ. ಅಂತೆಯೇ, ಇಂದು ಕೆಲಸ ಪ್ರಾರಂಭವಾಗಿರುವ ಹೊಸ ರೈಲು ಮಾರ್ಗಗಳು ಈ ಪ್ರದೇಶದಲ್ಲಿ ರೈಲು ಜಾಲವನ್ನು ಇನ್ನಷ್ಟು ವೃದ್ಧಿಪಡಿಸುತ್ತದೆ. ಶಿಕ್ಷಣ, ಆರೋಗ್ಯ ಮತ್ತು ಪ್ರವಾಸೋದ್ಯಮದ ದೃಷ್ಟಿಯಿಂದ ಬೆಳಗಾವಿ ಪ್ರಮುಖ ಕೇಂದ್ರವಾಗಿದೆ. ಆದ್ದರಿಂದ, ಈ ವಲಯಗಳು ಉತ್ತಮ ರೈಲು ಸಂಪರ್ಕದಿಂದ ಪ್ರಯೋಜನ ಪಡೆಯುತ್ತವೆ.
ಸಹೋದರ ಸಹೋದರಿಯರೇ,
ಬಿಜೆಪಿಯ ಡಬಲ್ ಇಂಜಿನ್ ಸರ್ಕಾರವು ತ್ವರಿತ ಅಭಿವೃದ್ಧಿಯ ಭರವಸೆಯಾಗಿ ಹೊರಹೊಮ್ಮಿದೆ. ಡಬಲ್ ಇಂಜಿನ್ ಸರ್ಕಾರವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದಕ್ಕೆ ಜಲ ಜೀವನ್ ಮಿಷನ್ ಒಂದು ಉದಾಹರಣೆಯಾಗಿದೆ. 2019 ರ ಹೊತ್ತಿಗೆ, ಕರ್ನಾಟಕದ ಹಳ್ಳಿಗಳಲ್ಲಿ ಕೇವಲ 25 ಪ್ರತಿಶತ ಕುಟುಂಬಗಳು ನಲ್ಲಿ ನೀರಿನ ಸಂಪರ್ಕವನ್ನು ಹೊಂದಿದ್ದವು. ಇಂದು ನಮ್ಮ ಮುಖ್ಯಮಂತ್ರಿ ಮತ್ತು ಡಬಲ್ ಇಂಜಿನ್ ಸರ್ಕಾರದ ಸಕ್ರಿಯ ಪ್ರಯತ್ನದಿಂದ ಕರ್ನಾಟಕದಲ್ಲಿ ನಲ್ಲಿಯ ನೀರಿನ ಸಂಪರ್ಕ ಶೇಕಡಾ 60 ಕ್ಕಿಂತ ಹೆಚ್ಚಿದೆ. ಬೆಳಗಾವಿಯಲ್ಲಿ 2 ಲಕ್ಷಕ್ಕಿಂತ ಕಡಿಮೆ ಮನೆಗಳಿಗೆ ನಲ್ಲಿ ನೀರು ಸಿಗುತ್ತಿತ್ತು. ಇಂದು ಈ ಸಂಖ್ಯೆ 4.5 ಲಕ್ಷ ದಾಟಿದೆ. ನಮ್ಮ ಗ್ರಾಮದ ಸಹೋದರಿಯರು ನೀರಿಗಾಗಿ ಪರದಾಡಬಾರದು ಎಂಬ ಉದ್ದೇಶದಿಂದ ಈ ಬಾರಿಯ ಬಜೆಟ್ನಲ್ಲಿ ನಲ್ಲಿ ನೀರಿಗಾಗಿ 60 ಸಾವಿರ ಕೋಟಿ ರೂ. ಅನುದಾನವನ್ನು ಮೀಸಲಿರಿಸಲಾಗಿದೆ.
ಸೋದರ ಸೋದರಿಯರೇ,
ಹಿಂದಿನ ಸರ್ಕಾರಗಳು ಕಾಳಜಿ ವಹಿಸದ ಸಮಾಜದ ಪ್ರತಿಯೊಂದು ಸಣ್ಣ ವರ್ಗವನ್ನು ಸಬಲೀಕರಣಗೊಳಿಸುವಲ್ಲಿ ಬಿಜೆಪಿ ಸರ್ಕಾರ ಮುಂದಾಗಿದೆ. ಬೆಳಗಾವಿಯು ಕುಶಲಕರ್ಮಿಗಳು ಮತ್ತು ಕರಕುಶಲ ಕಲಾವಿದರ ನಗರವಾಗಿದೆ. ಇದು ವೇಣುಗ್ರಾಮ ಎಂದು ಪ್ರಸಿದ್ಧವಾಗಿದೆ. ಬಿದಿರು ಗ್ರಾಮವನ್ನು ಸ್ಥಾಪಿಸಲು. ಹಿಂದಿನ ಸರ್ಕಾರಗಳು ಬಿದಿರು ಕೊಯ್ಲು ಮಾಡುವುದನ್ನು ದೀರ್ಘಕಾಲದವರೆಗೆ ನಿಷೇಧಿಸಿದ್ದು ನಿಮಗೆ ನೆನಪಿರಬಹುದು. ಕಾನೂನನ್ನು ಬದಲಾಯಿಸಿ ಬಿದಿರು ಕೃಷಿ ಮತ್ತು ವ್ಯಾಪಾರಕ್ಕೆ ದಾರಿ ಮಾಡಿಕೊಟ್ಟಿದ್ದೇವೆ. ಬಿದಿರಿನ ಕೆಲಸದಲ್ಲಿ ತೊಡಗಿರುವ ಹಲವಾರು ಮಂದಿಗೆ ಇದು ಹೆಚ್ಚು ಪ್ರಯೋಜನವನ್ನು ನೀಡಿದೆ. ಬಿದಿರಿನ ಹೊರತಾಗಿ ಇಲ್ಲಿ ಹಲವಾರು ಕರಕುಶಲ ವಸ್ತುಗಳು ಇವೆ. ಈ ವರ್ಷದ ಬಜೆಟ್ನಲ್ಲಿ ಮೊದಲ ಬಾರಿಗೆ ನಾವು ಅಂತಹ ಸ್ನೇಹಿತರಿಗಾಗಿ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯನ್ನು ಆರಂಭಿಸಿದ್ದೇವೆ. ಈ ಯೋಜನೆಯು ಅಂತಹ ಎಲ್ಲಾ ಸ್ನೇಹಿತರಿಗೆ ಎಲ್ಲಾ ರೀತಿಯ ಸಹಾಯವನ್ನು ಒದಗಿಸುತ್ತದೆ.
ಸ್ನೇಹಿತರೇ,
ಇಂದು ನಾನು ಬೆಳಗಾವಿಗೆ ಬಂದಿರುವಾಗ, ನಾನು ಖಂಡಿತವಾಗಿಯೂ ಇನ್ನೊಂದು ವಿಷಯದ ಬಗ್ಗೆ ಮಾತನಾಡಲು ಬಯಸುತ್ತೇನೆ. ಕರ್ನಾಟಕವನ್ನು ಕಾಂಗ್ರೆಸ್ ಹೇಗೆ ದ್ವೇಷಿಸುತ್ತದೆ ಎಂಬುದನ್ನು ನಾನು ನಿಮಗೆ ನೆನಪಿಸುತ್ತೇನೆ. ಕರ್ನಾಟಕದ ನಾಯಕರನ್ನು ಅವಮಾನಿಸುವುದು ಹಳೆಯ ಕಾಂಗ್ರೆಸ್ ಸಂಸ್ಕೃತಿಯ ಭಾಗವಾಗಿದೆ. ಕಾಂಗ್ರೆಸ್ ನ ವಿಶೇಷ ಕುಟುಂಬದ ಸದಸ್ಯರಿಗೆ ಯಾರು ತೊಂದರೆ ಕೊಡುತ್ತಾರೋ ಅವರಿಗೆ ಕಾಂಗ್ರೆಸ್ ನಲ್ಲಿ ಅವಮಾನವಾಗುತ್ತದೆ.
ಎಸ್.ನಿಜಲಿಂಗಪ್ಪ, ವೀರೇಂದ್ರ ಪಾಟೀಲರಂತಹ ಕಾಂಗ್ರೆಸ್ ನಾಯಕರು ಪಕ್ಷದಿಂದ ಹೇಗೆ ಅವಮಾನಕ್ಕೊಳಗಾದರು ಎಂಬುದಕ್ಕೆ ಇತಿಹಾಸವೇ ಸಾಕ್ಷಿ. ಕರ್ನಾಟಕದ ಜನತೆಗೆ ಇದರ ಬಗ್ಗೆ ಅರಿವಿದೆ. ಇದೀಗ ಮತ್ತೊಮ್ಮೆ ಕರ್ನಾಟಕದ ಮತ್ತೊಬ್ಬ ನಾಯಕ ಕಾಂಗ್ರೆಸ್ ನ ವಿಶೇಷ ಕುಟುಂಬದ ಮುಂದೆ ಮುಖಭಂಗಕ್ಕೀಡಾಗಿದ್ದಾರೆ. ಸ್ನೇಹಿತರೇ, 50 ವರ್ಷಗಳಿಗಿಂತಲೂ ಹೆಚ್ಚು ಸಂಸದೀಯ ಅನುಭವನ್ನು ಹೊಂದಿರುವ ಕಲ್ಯಾಣ ಕರ್ನಾಟಕದ ಮಣ್ಣಿನ ಮಗ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ಜನಸೇವೆಗೆ ಕೈಲಾದಷ್ಟು ಪ್ರಯತ್ನ ಮಾಡಿದ್ದಾರೆ. ಆದರೆ ಛತ್ತೀಸ್ಗಢದ ಕಾಂಗ್ರೆಸ್ ಪಕ್ಷದ ಅಧಿವೇಶನದಲ್ಲಿ ಅತ್ಯಂತ ಹಿರಿಯ ವ್ಯಕ್ತಿ ಮತ್ತು ರಾಜಕೀಯದ ಅತ್ಯಂತ ಹಿರಿಯ ನಾಯಕ ಖರ್ಗೆಯವರಿಗೆ ನೀಡಿದ ಉಪಚಾರ ನೋಡಿ ನನಗೆ ಅತೀವ ಬೇಸರವಾಯಿತು. ಅವರು ಪಕ್ಷದ ಅಧ್ಯಕ್ಷರೂ ಆಗಿದ್ದಾರೆ. ಅಂದು ತುಂಬಾ ಬಿಸಿಲು ಹೆಚ್ಚಾಗಿತ್ತು. ಆದರೆ ಹಿರಿಯರು ಮತ್ತು ಹಿರಿಯ ನಾಯಕ ಮತ್ತು ಕಾಂಗ್ರೆಸ್ ಅಧ್ಯಕ್ಷ ಖರ್ಗೆ ಜೀ ಅವರಿಗೆ ಬಿಸಿಲಿನಿಂದ ರಕ್ಷಿಸಲು ಕೊಡೆ ನೀಡಲಿಲ್ಲ. ಆದರೆ, ಅವರ ಪಕ್ಕದಲ್ಲಿ ನಿಂತಿದ್ದ ಬೇರೆಯವರಿಗೆ ಕೊಡೆಯ ವ್ಯವಸ್ಥೆ ಮಾಡಲಾಗಿತ್ತು. ಇದು ಕಾಂಗ್ರೆಸ್ ಸಂಸ್ಕೃತಿ.
ಖರ್ಗೆ ಜೀ ಅವರು ಕಾಂಗ್ರೆಸ್ ಅಧ್ಯಕ್ಷರಾಗಿರಬಹುದು, ಆದರೆ ಇಡೀ ಜಗತ್ತೇ ಅವರಿಗೆ ನೀಡಿದ ಮರ್ಯಾದೆಯನ್ನು ನೋಡಿದೆ. ಪಕ್ಷದ ರಿಮೋಟ್ ಕಂಟ್ರೋಲ್ ಯಾರ ಬಳಿ ಇದೆ ಎಂಬುದು ಎಲ್ಲರಿಗೂ ತಿಳಿದಿದೆ. ಇಂದು ದೇಶದ ಹಲವು ಪಕ್ಷಗಳು ಸ್ವಜನಪಕ್ಷಪಾತದ ಕಪಿಮುಷ್ಠಿಯಲ್ಲಿ ಸಿಲುಕಿವೆ. ಈ ಕಪಿಮುಷ್ಠಿಯಿಂದ ದೇಶವನ್ನು ಮುಕ್ತಗೊಳಿಸಬೇಕಿದೆ. ಹಾಗಾಗಿ ಕರ್ನಾಟಕದ ಜನತೆ ಕೂಡ ಕಾಂಗ್ರೆಸ್ ನಂಥ ಪಕ್ಷಗಳ ಬಗ್ಗೆ ಎಚ್ಚರದಿಂದಿರಬೇಕು. ಮತ್ತು ಈ ಕಾಂಗ್ರೆಸ್ಸಿಗರು ಎಷ್ಟು ಹತಾಶರಾಗಿದ್ದಾರೆಂದರೆ ಅವರು ಮೋದಿ ಬದುಕಿರುವವರೆಗೆ ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ಅವರು ಭಾವಿಸುತ್ತಾರೆ. ಆದ್ದರಿಂದ, ಈ ಜನರು 'ಮೋದಿ ಸಾಯಲಿ, ಮೋದಿ ಸಾಯಲಿ' ಎಂದು ಜಪ ಮಾಡುತ್ತಿದ್ದಾರೆ. ಕೆಲವರು ನನ್ನ ಸಮಾಧಿ ತೋಡುವುದರಲ್ಲಿ ನಿರತರಾಗಿದ್ದಾರೆ. ಅವರು ಹೇಳುತ್ತಿದ್ದಾರೆ: 'ಮೋದಿ, ನಿಮ್ಮ ಸಮಾಧಿ ಅಗೆಯಲಾಗುತ್ತದೆ, ಮೋದಿ, ನಿಮ್ಮ ಸಮಾಧಿ ಅಗೆಯಲಾಗುತ್ತದೆ'. ಆದರೆ, ದೇಶ ಹೇಳುತ್ತಿದೆ: 'ಮೋದಿ, ನಿಮ್ಮ ಕಮಲ ಅರಳುತ್ತದೆ' 'ಮೋದಿ, ನಿಮ್ಮ ಕಮಲ ಅರಳುತ್ತದೆ'.
ಸ್ನೇಹಿತರೇ,
ನಿಜವಾದ ಉದ್ದೇಶದಿಂದ ಕೆಲಸ ಮಾಡಿದಾಗ, ಸರಿಯಾದ ಅಭಿವೃದ್ಧಿ ಇರುತ್ತದೆ. ಡಬಲ್ ಇಂಜಿನ್ ಸರ್ಕಾರದ ಉದ್ದೇಶವೂ ಇದೇ ಆಗಿದೆ. ಮತ್ತು ಅಭಿವೃದ್ಧಿಯ ಬದ್ಧತೆ ಕೂಡ ದೃಢವಾಗಿದೆ. ಆದ್ದರಿಂದ, ನಾವು ಈ ನಂಬಿಕೆಯನ್ನು ಉಳಿಸಿಕೊಳ್ಳಬೇಕು. ಕರ್ನಾಟಕ ಮತ್ತು ದೇಶದ ಅಭಿವೃದ್ಧಿಯನ್ನು ವೇಗಗೊಳಿಸಲು ನಾವು ಒಟ್ಟಾಗಿ ಮುನ್ನಡೆಯಬೇಕು. 'ಸಬ್ ಕಾ ಪ್ರಯಾಸ್' (ಎಲ್ಲರ ಪ್ರಯತ್ನ) ದಿಂದ ನಾವು ದೇಶವನ್ನು ಅಭಿವೃದ್ಧಿಪಡಿಸುವ ಕನಸನ್ನು ನನಸಾಗಿಸಲು ಸಾಧ್ಯವಾಗುತ್ತದೆ. ನಾನು ಇಂದು ಈ ಕಾರ್ಯಕ್ಕೆ ಸ್ವಲ್ಪ ತಡವಾಗಿ ಬಂದೆ. ಏಕೆಂದರೆ ನಾನು ಹೆಲಿಕಾಪ್ಟರ್ನಿಂದ ಇಳಿದಾಗಿನಿಂದ ಬೆಳಗಾವಿಗೆ ಬರುವ ದಾರಿಯುದ್ದಕ್ಕೂ ತಾಯಂದಿರು, ಸಹೋದರಿಯರು, ಹಿರಿಯರು ಮತ್ತು ಮಕ್ಕಳು ನನ್ನನ್ನು ಸ್ವಾಗತಿಸಿದ್ದು ಅಭೂತಪೂರ್ವ ದೃಶ್ಯವಾಗಿತ್ತು. ಇದನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಈ ರೀತಿಯ ಪ್ರೀತಿಯ ಮಳೆಗೆ ನಾನು ಚಿರಋಣಿ.
ಈ ಪ್ರೀತಿಗಾಗಿ ಕರ್ನಾಟಕದ ಬೆಳಗಾವಿ ಜನತೆಗೆ ನಾನು ತಲೆ ಬಾಗಿ ನಮಸ್ಕರಿಸುತ್ತೇನೆ. ಇವತ್ತು ನನ್ನ ಕರ್ನಾಟಕ ಭೇಟಿ ಕೂಡ ವಿಶೇಷವಾಗಿದೆ ಏಕೆಂದರೆ ನಾನು ಇಂದು ಬೆಳಗ್ಗೆ ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣವನ್ನು ಉದ್ಘಾಟನೆ ಮಾಡಿದ್ದೇನೆ ಮತ್ತು ನಮ್ಮ ಕರ್ನಾಟಕದ ಸಿಹಿಮೊಗ್ಗೆಯ ಜನರನ್ನು ಭೇಟಿ ಮಾಡುವ ಭಾಗ್ಯ ಸಿಕ್ಕಿತು. ಇದೇ ಸಂದರ್ಭದಲ್ಲಿ ನಮ್ಮ ಹಿರಿಯ ನಾಯಕರಾದ ಬಿ.ಎಸ್, ಯಡಿಯೂರಪ್ಪ ಜೀ ಅವರಿಗೆ ಜನ್ಮದಿನದ ಶುಭಾಶಯ ಕೋರುವ ಅವಕಾಶವೂ ನನ್ನ ಪಾಲಿಗೆ ಸಿಕ್ಕಿತು. ಮತ್ತು ನಾನು ಶಿವಮೊಗ್ಗದಿಂದ ಇಲ್ಲಿಗೆ ಬಂದಾಗ, ನೀವು ನಿಮ್ಮ ಪ್ರೀತಿ ಮತ್ತು ಆಶೀರ್ವಾದವನ್ನು ನೀಡಿದ್ದೀರಿ. ಬೆಳಗಾವಿ ಮತ್ತು ಕರ್ನಾಟಕದ ನನ್ನ ಆತ್ಮೀಯ ಸಹೋದರ ಸಹೋದರಿಯರೇ, ಬೆಳಗಾವಿ ಮತ್ತು ಕರ್ನಾಟಕವನ್ನು ಅಭಿವೃದ್ಧಿಪಡಿಸುವ ಮೂಲಕ ನಿಮ್ಮ ಪ್ರೀತಿ ಮತ್ತು ಆಶೀರ್ವಾದವನ್ನು ಹಿಂದಿರುಗಿಸುತ್ತೇನೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ.
ಮತ್ತೊಮ್ಮೆ ತುಂಬಾ ತುಂಬಾ ಧನ್ಯವಾದಗಳು.
ನನ್ನೊಂದಿಗೆ ಎಲ್ಲರೂ ಹೇಳಿ –
ಭಾರತ್ ಮಾತಾ ಕಿ ಜೈ
ಭಾರತ್ ಮಾತಾ ಕಿ ಜೈ
ಭಾರತ್ ಮಾತಾ ಕಿ ಜೈ
ಎಲ್ಲರಿಗೂ ನಮಸ್ಕಾರ
ತುಂಬಾ ಧನ್ಯವಾದಗಳು!