करुनाड जनतेगे, नन्न प्रीतिय, नमस्कारगड़ु, बैंगलूरिनअ महा जनतेगे, विशेषवाद नमस्कारगड़ु, कर्नाटका राज्यद पालिगे, इंदु महत्वद दिनवागिदे। राज्यदल्लि, हलवारु मूलभूत सउकर्य, कल्पिसुव योजनेगड़न्नु, जारि-गोड़िसलु, ननगे बहड़, संतोष-वागुत्तिदे।
ಕರ್ನಾಟಕದ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಜೀ ಗೆಹ್ಲೋಟ್, ಕರ್ನಾಟಕದ ಜನಪ್ರಿಯ ಮುಖ್ಯಮಂತ್ರಿ ಶ್ರೀ ಬಸವರಾಜ್ ಜೀ, ಕೇಂದ್ರ ಸಚಿವ ಸಂಪುಟದಲ್ಲಿ ನನ್ನ ಸಹೋದ್ಯೋಗಿ ಪ್ರಹ್ಲಾದ್ ಜೋಶಿ ಜೀ, ಕರ್ನಾಟಕ ಸರ್ಕಾರದ ಸಚಿವರು, ಸಂಸದರು ಮತ್ತು ಶಾಸಕರೇ, ಹಾಗು ಬೆಂಗಳೂರಿನ ನನ್ನ ಎಲ್ಲಾ ಸಹೋದರರೇ ಮತ್ತು ಸಹೋದರಿಯರೇ, ನಮಸ್ಕಾರ,
ಕರ್ನಾಟಕದ ಕ್ಷಿಪ್ರ ಅಭಿವೃದ್ಧಿಗೆ ಸಂಬಂಧಿಸಿ ಡಬಲ್ ಇಂಜಿನ್ ಸರ್ಕಾರವು ನಿಮಗೆ ನೀಡಿದ ನಂಬಿಕೆ, ವಿಶ್ವಾಸವನ್ನು ಇಂದು ನಾವೆಲ್ಲರೂ ಮತ್ತೊಮ್ಮೆ ಸಾಕ್ಷೀಕರಿಸುತ್ತಿದ್ದೇವೆ. ಇಂದು 27,000 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಯೋಜನೆಗಳು ಒಂದೋ ಉದ್ಘಾಟನೆಯಾಗುತ್ತಿವೆ ಅಥವಾ ಅವುಗಳಿಗೆ ಶಿಲಾನ್ಯಾಸ ಮಾಡಲಾಗುತ್ತಿದೆ. ಈ ಬಹು ಆಯಾಮದ ಯೋಜನೆಗಳು ಉನ್ನತ ಶಿಕ್ಷಣ, ಸಂಶೋಧನೆ, ಕೌಶಲ್ಯ ಅಭಿವೃದ್ಧಿ, ಆರೋಗ್ಯ ಮತ್ತು ಸಂಪರ್ಕದಲ್ಲಿ ನಿಮಗೆ ಸೇವೆಯನ್ನು ಒದಗಿಸಲಿವೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಜೀವನ ಮತ್ತು ವ್ಯವಹಾರಕ್ಕೆ ಅನುಕೂಲಕರ ವಾತಾವರಣವನ್ನು ನಿರ್ಮಾಣ ಮಾಡುವುದು ಮತ್ತು ಅದನ್ನು ಸುಲಭಗೊಳಿಸುವುದು ಈ ಯೋಜನೆಗಳ ಪ್ರಮುಖ ಆದ್ಯತೆಯಾಗಿದೆ.
ಸಹೋದರರೇ ಮತ್ತು ಸಹೋದರಿಯರೇ,
ಇಲ್ಲಿಗೆ ಬರುವ ಮೊದಲು, ನಾನು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಮತ್ತು ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳೊಂದಿಗೆ ಶಿಕ್ಷಣ, ಸಂಶೋಧನೆ ಮತ್ತು ನಾವೀನ್ಯತೆಗಳಲ್ಲಿ ಅವರ ಉತ್ಸಾಹವನ್ನು ಅನುಭವಿಸಿದೆ ಮತ್ತು ನಾನು ಹೊಸ ಶಕ್ತಿಯೊಂದಿಗೆ ಹೊರಬಂದೆ. ಈ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿರುವ ದೇಶದ ಖಾಸಗಿ ವಲಯವನ್ನೂ ನಾನು ಸಂಪೂರ್ಣವಾಗಿ ಪ್ರಶಂಸಿಸುತ್ತೇನೆ. ಸಂಪರ್ಕದ ಈ ಹಬ್ಬವನ್ನು ನಾನು ಉತ್ಸಾಹದಿಂದ ತುಂಬಿ ತುಳುಕುತ್ತಿರುವ ನಿಮ್ಮೊಂದಿಗೆ ಆಚರಿಸುತ್ತಿದ್ದೇನೆ. ನಿಮಗೆ ತಿಳಿದಿರುವಂತೆ ಇದು ಇಂದು ಬೆಂಗಳೂರಿನಲ್ಲಿ ನನ್ನ ಕೊನೆಯ ಕಾರ್ಯಕ್ರಮವಾಗಿದ್ದು, ನಾನು ಮೈಸೂರಿಗೆ ಹೋಗುತ್ತಿದ್ದೇನೆ, ಅಲ್ಲಿ ಕರ್ನಾಟಕದ ಈ ಅಭಿವೃದ್ಧಿಯ ಪಯಣವನ್ನು ತ್ವರಿತಗೊಳಿಸುವ ಅಭಿಯಾನ ಮುಂದುವರಿಯುತ್ತದೆ. ಸ್ವಲ್ಪ ಸಮಯದ ಹಿಂದೆ, ಕರ್ನಾಟಕದಲ್ಲಿ ಐದು ರಾಷ್ಟ್ರೀಯ ಹೆದ್ದಾರಿ ಯೋಜನೆಗಳು ಮತ್ತು ಏಳು ರೈಲ್ವೆ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಲಾಯಿತು. ಕೊಂಕಣ ರೈಲ್ವೆಯ 100 ಪ್ರತಿಶತ ವಿದ್ಯುದ್ದೀಕರಣದ ಪ್ರಮುಖ ಮೈಲಿಗಲ್ಲನ್ನು ನಾವು ಸಾಕ್ಷೀಕರಿಸಿದ್ದೇವೆ. ಈ ಎಲ್ಲಾ ಯೋಜನೆಗಳು ಯುವಜನರಿಗೆ, ಮಧ್ಯಮ ವರ್ಗದವರಿಗೆ, ನಮ್ಮ ರೈತ ಮತ್ತು ಕಾರ್ಮಿಕ ಸಹೋದರ ಸಹೋದರಿಯರಿಗೆ ಮತ್ತು ಕರ್ನಾಟಕದ ಉದ್ಯಮಿಗಳಿಗೆ ಹೆಚ್ಚಿನ ಸೌಲಭ್ಯಗಳು ಮತ್ತು ಅವಕಾಶಗಳನ್ನು ಒದಗಿಸುತ್ತವೆ. ಈ ಅಭಿವೃದ್ಧಿ ಯೋಜನೆಗಳಿಗಾಗಿ ಇಡೀ ಕರ್ನಾಟಕಕ್ಕೆ ಬಹಳ ಅಭಿನಂದನೆಗಳು ಮತ್ತು ಶುಭಾಶಯಗಳು!
ಸ್ನೇಹಿತರೇ,
ಬೆಂಗಳೂರು ದೇಶದ ಲಕ್ಷಾಂತರ ಯುವಜನರ ಕನಸಿನ ನಗರವಾಗಿದೆ. ಬೆಂಗಳೂರು ‘ಏಕ್ ಭಾರತ್-ಶ್ರೇಷ್ಠ ಭಾರತ” ಮನೋಭಾವದ, ಸ್ಪೂರ್ತಿಯ ಪ್ರತಿಬಿಂಬವಾಗಿದೆ. ಬೆಂಗಳೂರಿನ ಅಭಿವೃದ್ಧಿ ಎಂದರೆ ಮಿಲಿಯಾಂತರ ಕನಸುಗಳ ಅಭಿವೃದ್ಧಿ, ಮತ್ತು ಆದ್ದರಿಂದ ಕಳೆದ ಎಂಟು ವರ್ಷಗಳಿಂದ ಬೆಂಗಳೂರಿನ ಸಾಮರ್ಥ್ಯವನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ನಿರಂತರ ಪ್ರಯತ್ನಗಳನ್ನು ಮಾಡಿದೆ. ಪ್ರಯಾಣದ ಸಮಯವನ್ನು ಕಡಿತಗೊಳಿಸುವುದರ ಮೂಲಕ ಮತ್ತು ಲಾಜಿಸ್ಟಿಕ್ ವೆಚ್ಚವನ್ನು ಕಡಿಮೆ ಮಾಡುವ ಮೂಲಕ ಎರಡು ಇಂಜಿನ್ ಗಳ ಸರಕಾರ ಬೆಂಗಳೂರಿನಲ್ಲಿ ತಮ್ಮ ಕನಸುಗಳನ್ನು ಈಡೇರಿಸಲು ಕೆಲಸ ಮಾಡುವ ಪ್ರತಿಯೊಬ್ಬ ಪಾಲುದಾರರ ಜೀವನವನ್ನು ಸುಲಭ ಮತ್ತು ಆರಾಮದಾಯಕವಾಗಿಸಲು ಅವಿಶ್ರಾಂತವಾಗಿ ಕೆಲಸ ಮಾಡಿದೆ. ಇಂದಿಗೂ ಅದೇ ಬದ್ಧತೆಯನ್ನು ನಾವು ಸಾಕ್ಷೀಕರಿಸುತ್ತಿದ್ದೇವೆ.
ಸ್ನೇಹಿತರೇ
ರೈಲು, ರಸ್ತೆಗಳು, ಮೆಟ್ರೋ, ಅಂಡರ್-ಪಾಸ್‌ಗಳು ಮತ್ತು ಮೇಲ್ಸೇತುವೆಗಳನ್ನು ಅಭಿವೃದ್ಧಿಪಡಿಸುವ ಮೂಲಕ ಬೆಂಗಳೂರನ್ನು ಸಂಚಾರ ದಟ್ಟಣೆಯಿಂದ ಮುಕ್ತಗೊಳಿಸಲು ಎರಡು ಇಂಜಿನ್ ಗಳ ಸರ್ಕಾರವು ಸಾಧ್ಯವಿರುವ ಎಲ್ಲ ವಿಧಾನಗಳನ್ನೂ ಕಾರ್ಯಾನುಷ್ಠಾನ ಮಾಡುತ್ತಿದೆ. ನಮ್ಮ ಸರ್ಕಾರವು ಬೆಂಗಳೂರಿನ ಉಪನಗರ ಪ್ರದೇಶಗಳನ್ನು ಉತ್ತಮ ಸಂಪರ್ಕದೊಂದಿಗೆ ಜೋಡಿಸಲು ಬದ್ಧವಾಗಿದೆ. ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳಿಗೆ ರೈಲು ಸಂಪರ್ಕ ಕಲ್ಪಿಸಲು 80ರ ದಶಕದಿಂದಲೂ ಚರ್ಚೆಗಳು ನಡೆಯುತ್ತಿವೆ ಎಂದು ನನಗೆ ತಿಳಿಸಲಾಗಿದೆ. ಚರ್ಚೆಯಲ್ಲೇ ನಲವತ್ತು ವರ್ಷಗಳು! ಎಂತಹ ವಿಷಾದನೀಯ ಸ್ಥಿತಿ ಇದು? ಚರ್ಚೆಯಲ್ಲಿಯೇ ನಲವತ್ತು ವರ್ಷಗಳು ಕಳೆದು ಹೋಗಿವೆ. ಇಂತಹ ಯೋಜನೆಗಳನ್ನು 40 ತಿಂಗಳಲ್ಲಿ ಪೂರ್ಣಗೊಳಿಸಿ ನಿಮ್ಮ ಕನಸುಗಳನ್ನು ಈಡೇರಿಸಲು ಶ್ರಮಿಸುತ್ತೇನೆ ಎಂದು ಕರ್ನಾಟಕದ ಸಹೋದರ ಸಹೋದರಿಯರಿಗೆ ಭರವಸೆ ನೀಡಲು ನಾನು ಬಂದಿದ್ದೇನೆ. ಈ ಯೋಜನೆಗಳು 16 ವರ್ಷಗಳ ಕಾಲ ಕಡತಗಳಲ್ಲಿ ಬಾಕಿಯಾಗಿದ್ದವು ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. ಬೆಂಗಳೂರು ಮತ್ತು ಕರ್ನಾಟಕದ ಜನರ ಪ್ರತಿಯೊಂದು ಕನಸನ್ನು ನನಸಾಗಿಸಲು ಎರಡು ಇಂಜಿನ್ ಗಳ ಸರ್ಕಾರ ಶ್ರಮಿಸುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ. ಬೆಂಗಳೂರು ಉಪನಗರ ರೈಲ್ವೆಯು ಬೆಂಗಳೂರಿನ ಸಾಮರ್ಥ್ಯವನ್ನು ವಿಸ್ತರಿಸುವಲ್ಲಿ ಬಹಳ ದೂರ ಸಾಗಲಿದೆ. ಈ ಯೋಜನೆಯು ಬೆಂಗಳೂರು ನಗರದಲ್ಲಿಯೇ ವಾಸಿಸಬೇಕಾದಂತಹ ಅನಿವಾರ್ಯತೆಯನ್ನು ಕಡಿಮೆ ಮಾಡುತ್ತದೆ. ಸ್ನೇಹಿತರೇ, 40 ವರ್ಷಗಳ ಹಿಂದೆ ಮಾಡಬೇಕಾಗಿದ್ದ ಕೆಲಸವನ್ನು ನಾನು ಸಾಧಿಸುವ ಗುರಿ ಹೊಂದಿದ್ದೇನೆ. ಈ ಯೋಜನೆಗಳು 40 ವರ್ಷಗಳ ಹಿಂದೆ ಪೂರ್ಣಗೊಂಡಿದ್ದರೆ, ಬೆಂಗಳೂರು ಈ ಅಗಾಧವಾದ ಒತ್ತಡವನ್ನು ಎದುರಿಸುತ್ತಿರಲಿಲ್ಲ. ಬೆಂಗಳೂರು ಮತ್ತಷ್ಟು ಅರಳುತ್ತಿತ್ತು. ಆದರೆ 40 ವರ್ಷಗಳು ಕಡಿಮೆ ಸಮಯವಲ್ಲ. ಸ್ನೇಹಿತರೇ, ಈಗ ನೀವು ನನಗೆ ಅವಕಾಶ ನೀಡಿದ್ದೀರಿ, ನಾನು ಇನ್ನು ಮುಂದೆ ಸಮಯ ವ್ಯರ್ಥ ಮಾಡಲು ಬಯಸುವುದಿಲ್ಲ. ಪ್ರತಿ ಕ್ಷಣವನ್ನೂ ನಿಮ್ಮ ಸೇವೆಗಾಗಿ ವಿನಿಯೋಗಿಸುತ್ತೇನೆ.
ಸ್ನೇಹಿತರೇ,
ಸುತ್ತಮುತ್ತಲಿನ ಉಪಗ್ರಹ ಟೌನ್‌ಶಿಪ್‌ಗಳು, ಉಪನಗರಗಳು ಮತ್ತು ಗ್ರಾಮೀಣ ಪ್ರದೇಶಗಳು ರೈಲು ಆಧಾರಿತ ಕ್ಷಿಪ್ರ ಸಾರಿಗೆ ವ್ಯವಸ್ಥೆಗೆ ಜೋಡಣೆಗೊಂಡಾಗ ಅದು ಬಹುಮುಖಿ ಪರಿಣಾಮವನ್ನು ಬೀರಲಿದೆ. ಉಪನಗರ ರೈಲ್ವೆಯಂತೆ ಬೆಂಗಳೂರು ರಿಂಗ್ ರೋಡ್ ಕೂಡ ನಗರದ ಜನದಟ್ಟಣೆಯನ್ನು ಕಡಿಮೆ ಮಾಡುತ್ತದೆ. ಇದು ಆರು ರಾಷ್ಟ್ರೀಯ ಹೆದ್ದಾರಿಗಳು ಮತ್ತು ಎಂಟು ರಾಜ್ಯ ಹೆದ್ದಾರಿಗಳನ್ನು ಸಂಪರ್ಕಿಸುತ್ತದೆ. ಕರ್ನಾಟಕದ ಇತರ ಭಾಗಗಳಿಗೆ ಹೋಗುವ ಹೆಚ್ಚಿನ ಸಂಖ್ಯೆಯ ವಾಹನಗಳು ಬೆಂಗಳೂರು ನಗರವನ್ನು ಪ್ರವೇಶಿಸುವ ಅಗತ್ಯವಿಲ್ಲ. ನೆಲಮಂಗಲದಿಂದ ತುಮಕೂರಿನ ನಡುವಿನ ಈ ರಾಷ್ಟ್ರೀಯ ಹೆದ್ದಾರಿಯ ಸುತ್ತ ಹೆಚ್ಚಿನ ಕೈಗಾರಿಕೆಗಳು ಇವೆ ಎಂಬುದು ನಿಮಗೆ ಗೊತ್ತಿದೆ. ಈ ಮಾರ್ಗದಲ್ಲಿ ಸಂಚಾರ ದಟ್ಟಣೆ ಹೆಚ್ಚಿದೆ. ಈ ಹೆದ್ದಾರಿಯ ಪ್ರಸ್ತಾವಿತ ಆರು-ಪಥ ಮತ್ತು ತುಮಕೂರು ಬೈಪಾಸ್ ಈ ಇಡೀ ಪ್ರದೇಶದಲ್ಲಿ ಸಂಚಾರ ಮತ್ತು ಸಾರಿಗೆಯನ್ನು ಸುಲಭಗೊಳಿಸುತ್ತದೆ, ಆರ್ಥಿಕ ಚಟುವಟಿಕೆಯನ್ನು ಉತ್ತೇಜಿಸುತ್ತದೆ. ನಂಬಿಕೆಯ ಪ್ರಮುಖ ಸ್ಥಳಗಳು ಮತ್ತು ಪ್ರವಾಸಿ ಸ್ಥಳಗಳಾದ ಧರ್ಮಸ್ಥಳ ದೇವಾಲಯ, ಸುರ್ಯ ಮಂದಿರ ಮತ್ತು ಜೋಗ ಜಲಪಾತದಂತಹ ಕೇಂದ್ರಗಳ ಸಂಪರ್ಕವನ್ನು ಸುಧಾರಿಸುವ ಕೆಲಸವನ್ನು ಕೈಗೆತ್ತಿಕೊಳ್ಳಲಾಗಿದ್ದು, ಇದರಿಂದ ಪ್ರವಾಸೋದ್ಯಮಕ್ಕೆ ಹೊಸ ಅವಕಾಶಗಳು ಲಭ್ಯವಾಗಲಿವೆ. ಈ ಕೆಲಸವೂ ಇಂದು ಆರಂಭವಾಗಿದೆ.
ಸಹೋದರರೇ ಮತ್ತು ಸಹೋದರಿಯರೇ,
ಕಳೆದ ಎಂಟು ವರ್ಷಗಳಲ್ಲಿ, ನಾವು ರೈಲು ಸಂಪರ್ಕದ ಸಂಪೂರ್ಣ ಪರಿವರ್ತನೆಗಾಗಿ ಕೆಲಸ ಮಾಡಿದ್ದೇವೆ. ಇಂದಿನ ರೈಲು ಪ್ರಯಾಣದ ಅನುಭವವನ್ನು ಎಂಟು ವರ್ಷಗಳ ಹಿಂದೆ ರೈಲ್ವೇಯಲ್ಲಿ ಪ್ರಯಾಣಿಸುವಾಗಿನ ಅನುಭವಕ್ಕೆ ಹೋಲಿಸಿದರೆ ಅದು ಪೂರ್ಣ ಭಿನ್ನವಾಗಿದೆ. ಭಾರತೀಯ ರೈಲ್ವೇಯು ವೇಗ ಗಳಿಸಿಕೊಂಡಿದೆ, ಸ್ವಚ್ಛವಾಗಿದೆ ಮತ್ತು ಸುರಕ್ಷಿತವಾಗಿದೆ ಹಾಗು ಆಧುನೀಕರಣ ಮೈಗೂಢಿಸಿಕೊಂಡು ನಾಗರಿಕ ಸ್ನೇಹಿಯಾಗುತ್ತಿದೆ. ಊಹಿಸಲೂ ಕಷ್ಟವಾಗಿದ್ದ ದೇಶದ ಅನೇಕ ಭಾಗಗಳಿಗೆ ನಾವು ರೈಲುಗಳನ್ನು ಕೊಂಡೊಯ್ದಿದ್ದೇವೆ. ಕರ್ನಾಟಕದಲ್ಲಿಯೂ ಕಳೆದ ಕೆಲವು ವರ್ಷಗಳಲ್ಲಿ 1200 ಕಿಲೋಮೀಟರ್‌ಗಿಂತಲೂ ಅಧಿಕ ರೈಲು ಮಾರ್ಗಗಳನ್ನು ಒಂದೋ ಹೊಸದಾಗಿ ನಿರ್ಮಾಣ ಮಾಡಲಾಗಿದೆ ಇಲ್ಲವೇ ಅಗಲಗೊಳಿಸಲಾಗಿದೆ. ಒಂದು ಕಾಲದಲ್ಲಿ ವಿಮಾನ ನಿಲ್ದಾಣಗಳಲ್ಲಿ ಮತ್ತು ವಿಮಾನ ಪ್ರಯಾಣದಲ್ಲಿ ಮಾತ್ರ ಕಂಡುಬರುತ್ತಿದ್ದ ಸೌಕರ್ಯಗಳ ವಾತಾವರಣವನ್ನು ಒದಗಿಸಲು ಭಾರತೀಯ ರೈಲ್ವೇ ಕೂಡಾ ಪ್ರಯತ್ನಿಸುತ್ತಿದೆ. ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯ ಅವರ ಹೆಸರಿನ ಬೆಂಗಳೂರಿನ ಆಧುನಿಕ ರೈಲು ನಿಲ್ದಾಣ ಇದಕ್ಕೆ ಸಾಕ್ಷಿಯಾಗಿದೆ. ಇಂದು ಬೆಂಗಳೂರಿನ ಜನರು ಈ ನಿಲ್ದಾಣಕ್ಕೆ ಪ್ರವಾಸಿ ತಾಣ ಎಂಬಂತೆ ಭೇಟಿ ನೀಡುತ್ತಾರೆ ಎಂದು ನನಗೆ ತಿಳಿಸಲಾಗಿದೆ. ಆ ರೈಲು ನಿಲ್ದಾಣದ ಮೂಲಕ ದೇಶದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಅವರು ನೋಡುತ್ತಾರೆ ಮತ್ತು ಯುವ ಪೀಳಿಗೆ ಅಲ್ಲಿ ಸೆಲ್ಫಿ ತೆಗೆದುಕೊಳ್ಳಲು ಸರದಿಯಲ್ಲಿ ನಿಂತಿರುತ್ತಾರೆ ಎಂದು ಜನರು ಹೇಳುತ್ತಿದ್ದರು. ಇದು ಕರ್ನಾಟಕದಲ್ಲಿ ಮೊದಲ ಮತ್ತು ದೇಶದ ಮೂರನೇ ಆಧುನಿಕ ರೈಲು ನಿಲ್ದಾಣವಾಗಿದೆ. ಇದು ಸೌಲಭ್ಯಗಳನ್ನು ಆಧುನೀಕರಿಸಿದೆ ಮಾತ್ರವಲ್ಲದೆ, ಬೆಂಗಳೂರಿಗೆ ಹೆಚ್ಚಿನ ರೈಲುಗಳಿಗೆ ದಾರಿಯನ್ನು ತೆರೆದಿದೆ. ಬೆಂಗಳೂರು ಕಂಟೋನ್ಮೆಂಟ್ ಮತ್ತು ಯಶವಂತಪುರ ಜಂಕ್ಷನ್‌ನ ಆಧುನೀಕರಣವೂ ಇಂದಿನಿಂದ ಆರಂಭವಾಗಿದೆ.
ಸ್ನೇಹಿತರೇ
21ನೇ ಶತಮಾನದಲ್ಲಿ ನಾವು ರೈಲು, ರಸ್ತೆ, ಬಂದರು, ವಿಮಾನ ನಿಲ್ದಾಣಗಳಿಗೆ ಸೀಮಿತವಾಗಿರಲು ಸಾಧ್ಯವಿಲ್ಲ. ಆದ್ದರಿಂದ, ನಾವು ಈ ಸಾರಿಗೆ ವಿಧಾನಗಳನ್ನು ಪರಸ್ಪರ ಸಂಪರ್ಕಿಸುವ ಮತ್ತು ಬೆಂಬಲಿಸುವ ಮೂಲಕ ಬಹು ಮಾದರಿ ಸಂಪರ್ಕದ ಮೇಲೆ ಗಮನವನ್ನು ಕೇಂದ್ರೀಕರಿಸುತ್ತಿದ್ದೇವೆ. ಈ ಬಹುಮಾದರಿ ಸಂಪರ್ಕವನ್ನು ಪ್ರಧಾನ ಮಂತ್ರಿ ಗತಿಶಕ್ತಿ ರಾಷ್ಟ್ರೀಯ ಮಹಾ ಯೋಜನೆ ಮೂಲಕ ಬೆಂಬಲಿಸಲಾಗುತ್ತಿದೆ. ಬೆಂಗಳೂರಿನ ಬಳಿ ನಿರ್ಮಿಸಲು ಉದ್ದೇಶಿಸಿರುವ ಬಹು ಮಾದರಿ ಲಾಜಿಸ್ಟಿಕ್ ಪಾರ್ಕ್ ಈ ಚಿಂತನೆಯ ಭಾಗವಾಗಿದೆ. ಕೊನೆಯ ಮೈಲಿಯವರೆಗೂ ಅಂದರೆ ಕಟ್ಟ ಕಡೆಯ ಹಂತದವರೆಗೂ ಸರಬರಾಜನ್ನು ಸುಧಾರಿಸಲು ಮತ್ತು ಸಾರಿಗೆ ವೆಚ್ಚವನ್ನು ಕಡಿಮೆ ಮಾಡಲು ಪಾರ್ಕ್ ನ್ನು ಬಂದರು, ವಿಮಾನ ನಿಲ್ದಾಣ, ರೈಲ್ವೆ ಮತ್ತು ರಸ್ತೆ ಸೌಲಭ್ಯಗಳಿಗೆ ಜೋಡಿಸಲಾಗುತ್ತದೆ. ಗತಿಶಕ್ತಿಯ ಸ್ಪೂರ್ತಿ, ಉತ್ಸಾಹದೊಂದಿಗೆ ಕೈಗೊಳ್ಳಲಾಗುತ್ತಿರುವ ಇಂತಹ ಯೋಜನೆಗಳು ಸಾವಿರಾರು ಯುವಜನರಿಗೆ ಉದ್ಯೋಗವನ್ನು ನೀಡುತ್ತವೆ ಮತ್ತು ‘ಆತ್ಮನಿರ್ಭರ ಭಾರತ’ದ ಸಂಕಲ್ಪವನ್ನು ಸಾಧಿಸಲು ವೇಗವನ್ನು ಒದಗಿಸುತ್ತವೆ.
ಸಹೋದರರೇ ಮತ್ತು ಸಹೋದರಿಯರೇ,
ಬೆಂಗಳೂರಿನ ಯಶೋಗಾಥೆಯು 21ನೇ ಶತಮಾನದ ಭಾರತವನ್ನು ಆತ್ಮನಿರ್ಭರ ಭಾರತವಾಗಲು ಪ್ರೇರೇಪಿಸುತ್ತದೆ. ಉದ್ಯಮಶೀಲತೆ, ನಾವೀನ್ಯತೆ, ಖಾಸಗಿ ವಲಯ ಮತ್ತು ಯುವಕರಿಗೆ ತಮ್ಮ ನೈಜ ಸಾಮರ್ಥ್ಯವನ್ನು ಪ್ರದರ್ಶಿಸಲು ನೀಡಿದ ಅವಕಾಶಗಳು ಎಂತಹ ದೊಡ್ಡ ಪರಿಣಾಮವನ್ನು ಉಂಟುಮಾಡಬಹುದು ಎಂಬುದನ್ನು ಈ ನಗರವು ತೋರಿಸಿಕೊಟ್ಟಿದೆ. ಕೊರೋನಾ ಬಿಕ್ಕಟ್ಟಿನ ಸಂದರ್ಭದಲ್ಲಿ, ಬೆಂಗಳೂರಿನ ನಮ್ಮ ಯುವಜನರು ಇಡೀ ಜಗತ್ತಿಗೆ ಚೇತರಿಸಿಕೊಳ್ಳಲು ಸಹಾಯ ಮಾಡಿದ್ದಾರೆ. ಸರ್ಕಾರವು ಸೌಲಭ್ಯಗಳನ್ನು ಒದಗಿಸಿದರೆ ಮತ್ತು ನಾಗರಿಕರ ಜೀವನದಲ್ಲಿ ಹಸ್ತಕ್ಷೇಪ ಕನಿಷ್ಟ ಪ್ರಮಾಣದಲ್ಲಿದ್ದರೆ, ಆಗ ಭಾರತದ ಯುವಜನರು ಏನು ಬೇಕಾದರೂ ಮಾಡಬಲ್ಲರು ಮತ್ತು ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಬಲ್ಲರು ಎಂಬುದನ್ನು ಬೆಂಗಳೂರು ನಿರೂಪಿಸಿದೆ. ಬೆಂಗಳೂರು ದೇಶದ ಯುವಕರ ಕನಸಿನ ನಗರವಾಗಿದ್ದು, ಅದರ ಹಿಂದೆ ಉದ್ಯಮಶೀಲತೆ, ನಾವೀನ್ಯತೆ ಮತ್ತು ಸಾರ್ವಜನಿಕ ಹಾಗು ಖಾಸಗಿ ವಲಯದ ದಕ್ಷತೆ, ಸಾಮರ್ಥ್ಯ ಅಡಗಿದೆ. ಭಾರತದ ಖಾಸಗಿ ವಲಯ, ಖಾಸಗಿ ಉದ್ಯಮವನ್ನು ಒರಟು ಪದಗಳಿಂದ ಕರೆಯುವ ಜನರಿಗೆ ತಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳುವಂತಹ ಪಾಠವನ್ನು ಬೆಂಗಳೂರು ಕಲಿಸುತ್ತಿದೆ. ಈ ನಿರಂಕುಶ ಮನೋಭಾವದ ಜನರು ದೇಶದ ಮತ್ತು ಅದರ ಕೋಟ್ಯಂತರ ಜನರ ಶಕ್ತಿಯನ್ನು ಕೀಳಂದಾಜು ಮಾಡುತ್ತಾರೆ.
ಸ್ನೇಹಿತರೇ,
21 ನೇ ಶತಮಾನದ ಭಾರತವು ಸಂಪತ್ತು ಸೃಷ್ಟಿಕರ್ತರು, ಉದ್ಯೋಗ ಸೃಷ್ಟಿಕರ್ತರು ಮತ್ತು ಆವಿಷ್ಕಾರಕರಿಗೆ ಸೇರಿದೆ. ವಿಶ್ವದಲ್ಲಿಯೇ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಯುವ ಜನರನ್ನು ಹೊಂದಿರುವ ದೇಶವಾಗಿರುವ ಭಾರತದ ನಿಜವಾದ ಶಕ್ತಿ ಇದರಲ್ಲಿ ಅಡಕವಾಗಿದೆ ಮತ್ತು ಇದು ನಮ್ಮ ಸಂಪತ್ತು. ಈ ಶಕ್ತಿಯನ್ನು ಉತ್ತೇಜಿಸಲು ಕಳೆದ ಎಂಟು ವರ್ಷಗಳಲ್ಲಿ ಮಾಡಿದ ಪ್ರಯತ್ನಗಳನ್ನು ಚರ್ಚಿಸಲಾಗಿದೆ- ಆದರೆ ಬಹಳ ಸೀಮಿತ ರೀತಿಯಲ್ಲಿ ಆಗಿದೆ. ಈ ಸಂಸ್ಕೃತಿಯಲ್ಲಿ ಬದುಕುತ್ತಿರುವ ಬೆಂಗಳೂರಿಗೆ ನಾನು ಬಂದಾಗ ಅದರ ಬಗ್ಗೆ ವಿವರವಾಗಿ ಚರ್ಚಿಸುವುದು ನನ್ನ ಜವಾಬ್ದಾರಿ ಎಂದು ಭಾವಿಸಿದ್ದೇನೆ.
ಸಹೋದರರೇ ಮತ್ತು ಸಹೋದರಿಯರೇ,
ಕೃಷಿಯ ನಂತರ ಅತಿ ದೊಡ್ಡ ಉದ್ಯೋಗದಾತ ಎಂದರೆ ಎಂಎಸ್‌ಎಂಇ ವಲಯ. ದೇಶದ ಹಂತ-2, ಹಂತ-3 ನಗರಗಳ ಆರ್ಥಿಕತೆಯನ್ನು ಅದು ಬಲಪಡಿಸುತ್ತಿದೆ. ದೇಶದ ಕೋಟಿಗಟ್ಟಲೆ ಜನರು ಎಂಎಸ್‌ಎಂಇ ವಲಯದೊಂದಿಗೆ ಸಂಪರ್ಕ ಹೊಂದಿದ್ದಾರೆ. ಆದರೆ ಎಂಎಸ್‌ಎಂಇಗಳನ್ನು ತಮ್ಮದೇ ಆದ ರೀತಿಯಲ್ಲಿ ವಿಸ್ತರಿಸಲು ಬಯಸಿದರೆ, ಅವರು ಬಳಲುತ್ತಾರೆ ಎಂದು ವ್ಯಾಖ್ಯಾನಿಸಲಾಗುತ್ತಿತ್ತು. ಆದ್ದರಿಂದ ಅವರು ತಮ್ಮ ಉದ್ಯಮಗಳನ್ನು ವಿಸ್ತರಿಸುವ ಬದಲು, ಇತರ ಸಣ್ಣ ಉದ್ಯಮಗಳತ್ತ ಸಾಗುತ್ತಿದ್ದರು. ನಾವು ಈ ವ್ಯಾಖ್ಯಾನವನ್ನೇ ಬದಲಾಯಿಸಿದ್ದೇವೆ, ಇದರಿಂದ ಎಂಎಸ್‌ಎಂಇಗಳು ಬೆಳವಣಿಗೆಯತ್ತ ಸಾಗಬಹುದು ಮತ್ತು ಉದ್ಯೋಗವನ್ನು ಸೃಷ್ಟಿಸಬಹುದು. ಸಣ್ಣ ಸರ್ಕಾರಿ ಯೋಜನೆಗಳಲ್ಲಿಯೂ ಜಾಗತಿಕ ಟೆಂಡರ್‌ಗಳಿಂದಾಗಿ ನಮ್ಮ ಎಂಎಸ್‌ಎಂಇಗಳಿಗೆ ಅವಕಾಶಗಳು ಬಹಳ ಸೀಮಿತವಾಗಿದ್ದವು. 200 ಕೋಟಿ ರೂಪಾಯಿಯವರೆಗಿನ ಟೆಂಡರ್‌ಗಳಲ್ಲಿ ವಿದೇಶಿ ಸಂಸ್ಥೆಗಳ ಭಾಗವಹಿಸುವಿಕೆಯನ್ನು ನಾವು ತೆಗೆದುಹಾಕಿದ್ದೇವೆ. ಇದು ಆತ್ಮನಿರ್ಭರ ಭಾರತ್ ಬಗ್ಗೆ ನಮ್ಮ ವಿಶ್ವಾಸ. ಕೇಂದ್ರ ಸರ್ಕಾರದ ಎಲ್ಲಾ ಇಲಾಖೆಗಳಿಗೆ ತಮ್ಮ ಅಗತ್ಯಗಳ ಪೈಕಿ 25 ಪ್ರತಿಶತದಷ್ಟನ್ನು ಎಂಎಸ್‌ಎಂಇಗಳಿಂದ ಖರೀದಿಸಲು ಸೂಚಿಸಲಾಗಿದೆ. ಮೇಲಾಗಿ, ಎಂಎಸ್‌ಎಂಇಗಳಿಗೆ ಪ್ರತಿ ಸರ್ಕಾರಿ ಇಲಾಖೆ ಮತ್ತು ಸರ್ಕಾರಿ ಕಂಪನಿಗಳೊಂದಿಗೆ ನೇರವಾಗಿ ವ್ಯಾಪಾರ ಮಾಡಲು ಸರ್ಕಾರಿ ಇ-ಮಾರುಕಟ್ಟೆಯ ರೂಪದಲ್ಲಿ ಸುಲಭವಾದ ಮಾಧ್ಯಮವನ್ನು ಒದಗಿಸಲಾಗಿದೆ. ಇಂದು 45 ಲಕ್ಷಕ್ಕೂ ಹೆಚ್ಚು ಮಾರಾಟಗಾರರು ಜಿಇಎಂನಲ್ಲಿ ತಮ್ಮ ಉತ್ಪನ್ನಗಳು ಮತ್ತು ಸೇವೆಗಳನ್ನು ಒದಗಿಸುತ್ತಿದ್ದಾರೆ.
ಸಹೋದರರೇ ಮತ್ತು ಸಹೋದರಿಯರೇ,
ಭಾರತದ ನವೋದ್ಯಮ ಪರಿಸರ ವ್ಯವಸ್ಥೆಗೆ ಬೆಂಗಳೂರು ದೊಡ್ಡ ಕೇಂದ್ರವಾಗಿದೆ. ಇದರ ಬಗ್ಗೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಕಳೆದ ದಶಕಗಳನ್ನು ಗಮನಿಸಿದರೆ ಕಳೆದ ಎಂಟು ವರ್ಷಗಳಲ್ಲಿ ದೇಶ ಗಮನಾರ್ಹ ಪ್ರಗತಿಯನ್ನು ಸಾಧಿಸಿರುವುದನ್ನು ನಾವು ಗ್ರಹಿಸಲು ಸಾಧ್ಯವಿದೆ. ಕಳೆದ ಕೆಲವು ದಶಕಗಳಲ್ಲಿ ಶತಕೋಟಿ ಡಾಲರ್ ಕಂಪನಿಗಳ ಸಂಖ್ಯೆಯನ್ನು ನೀವು ನಿಮ್ಮ ಬೆರಳುಗಳ ಮೂಲಕ ಎಣಿಕೆ ಮಾಡಬಹುದಾಗಿತ್ತು. ಆದರೆ ಕಳೆದ ಎಂಟು ವರ್ಷಗಳಲ್ಲಿ, 100 ಶತಕೋಟಿ ಡಾಲರ್‌ಗಿಂತಲೂ ಹೆಚ್ಚು ಮೌಲ್ಯದ ಕಂಪನಿಗಳು ರಚನೆಯಾಗಿವೆ. ಮತ್ತು ಪ್ರತಿ ತಿಂಗಳು ಹೊಸ ಕಂಪನಿಗಳು ಈ ಪಟ್ಟಿಗೆ ಸೇರುತ್ತಿವೆ. ಕಳೆದ ಎಂಟು ವರ್ಷಗಳಲ್ಲಿ ರೂಪುಗೊಂಡ ಈ ಯುನಿಕಾರ್ನ್‌ಗಳ ಮೌಲ್ಯ ಇಂದು ಸುಮಾರು 150 ಬಿಲಿಯನ್ ಡಾಲರ್‌ಗಳು, ಅಂದರೆ ಸುಮಾರು 12 ಲಕ್ಷ ಕೋಟಿ ರೂಪಾಯಿಗಳು. ದೇಶದಲ್ಲಿ ನವೋದ್ಯಮ ಪರಿಸರ ವ್ಯವಸ್ಥೆಯು ಹೇಗೆ ಬೆಳೆಯುತ್ತಿದೆ ಎಂಬುದನ್ನು ಹೇಳಲು ನಾನು ಇನ್ನೊಂದು ಅಂಕಿ ಅಂಶವನ್ನು ಉಲ್ಲೇಖಿಸುತ್ತೇನೆ. 2014 ರ ಬಳಿಕ ಮೊದಲ 10,000 ನವೋದ್ಯಮಗಳ ಸಂಖ್ಯೆಯನ್ನು ತಲುಪಲು ನಮಗೆ ಸುಮಾರು 800 ದಿನಗಳು ಬೇಕಾಯಿತು. ಈಗ ನಾನು ನಿಮಗೆ ಹೇಳುತ್ತಿರುವುದು, ನೀವು ನನ್ನನ್ನು ದಿಲ್ಲಿಗೆ ಸೇವೆ ಸಲ್ಲಿಸಲು ಕಳುಹಿಸಿದ ಅವಧಿಯ ಬಗ್ಗೆ. ಇತ್ತೀಚೆಗೆ ಈ ಪರಿಸರ ವ್ಯವಸ್ಥೆಗೆ 10,000 ಹೊಸ ನವೋದ್ಯಮಗಳು ಸೇರ್ಪಡೆಗೊಳ್ಳಲು 200 ದಿನಗಳಿಗಿಂತ ಕಡಿಮೆ ಸಮಯ ತಗಲಿದೆ. ಕಳೆದ ಎಂಟು ವರ್ಷಗಳ ಹಿಂದೆ ಕೆಲವು ನೂರರಷ್ಟಿದ್ದ ನವೋದ್ಯಮಗಳಿಂದ, ಈಗ ನಾವು 70,000 ನವೋದ್ಯಮಗಳವರೆಗೆ ಬೆಳೆದಿದ್ದೇವೆ.
ಸಹೋದರರೇ ಮತ್ತು ಸಹೋದರಿಯರೇ,
ನವೋದ್ಯಮಗಳು ಮತ್ತು ನಾವೀನ್ಯತೆಗಳ, ಅನ್ವೇಷಣೆಗಳ ಹಾದಿ ಬಹಳ ಸುಲಭವೇನಲ್ಲ. ಮತ್ತು ಕಳೆದ ಎಂಟು ವರ್ಷಗಳಲ್ಲಿ ಈ ಹಾದಿಯಲ್ಲಿ ದೇಶಕ್ಕೆ ವೇಗವನ್ನು ತಂದುಕೊಡುವ ಮಾರ್ಗವೂ ಸುಲಭವಾದುದೇನಲ್ಲ. ಅನೇಕ ನಿರ್ಧಾರಗಳು ಮತ್ತು ಸುಧಾರಣೆಗಳು ಒಂದು ಕ್ಷಣದಲ್ಲಿ ಅಹಿತಕರವೆಂದು ತೋರಬಹುದು ಆದರೆ ಕಾಲಾಂತರದಲ್ಲಿ ಆ ಸುಧಾರಣೆಗಳ ಪ್ರಯೋಜನಗಳನ್ನು ದೇಶವು ಗ್ರಹಿಸುತ್ತದೆ, ಅನುಭವಿಸುತ್ತದೆ. ಸುಧಾರಣೆಯ ಹಾದಿ ಮಾತ್ರವೇ ನಮ್ಮನ್ನು ಹೊಸ ಗುರಿಗಳು ಮತ್ತು ನಿರ್ಣಯಗಳತ್ತ ಕೊಂಡೊಯ್ಯುತ್ತದೆ. ದಶಕಗಳ ಕಾಲ ಸರ್ಕಾರದ ಏಕಸ್ವಾಮ್ಯವನ್ನು ಹೊಂದಿದ್ದ ಬಾಹ್ಯಾಕಾಶ ಮತ್ತು ರಕ್ಷಣೆಯಂತಹ ಪ್ರತಿಯೊಂದು ಕ್ಷೇತ್ರವನ್ನು ನಾವು ಮುಕ್ತಗೊಳಿಸಿದ್ದೇವೆ. ಇಂದು ನಾವು ಡ್ರೋನ್‌ನಿಂದ ವಿಮಾನದವರೆಗೆ ಪ್ರತಿಯೊಂದು ಅತ್ಯಾಧುನಿಕ ತಂತ್ರಜ್ಞಾನದಲ್ಲಿ ಭಾರತದ ಯುವಜನರನ್ನು ಪ್ರೋತ್ಸಾಹಿಸುತ್ತಿದ್ದೇವೆ ಉತ್ತೇಜಿಸುತ್ತಿದ್ದೇವೆ. ಇಸ್ರೋ ದೇಶದ ಹೆಮ್ಮೆ ಮತ್ತು ಡಿ.ಆರ್.ಡಿ.ಒ. ಆಧುನಿಕ ಮೂಲಸೌಕರ್ಯವನ್ನು ಹೊಂದಿದೆ. ಇಂದು ನಾವು ದೇಶದ ಯುವಜನರಿಗೆ ಸರ್ಕಾರವು ಸೃಷ್ಟಿಸಿರುವ ಈ ವಿಶ್ವ ದರ್ಜೆಯ ಸೌಲಭ್ಯಗಳಲ್ಲಿ ತಮ್ಮ ಚಿಂತನೆ ಮತ್ತು ಆಲೋಚನೆಗಳ ಬಗ್ಗೆ ಪ್ರಯೋಗನಿರತರಾಗಲು ಹೇಳುತ್ತಿದ್ದೇವೆ. ಯುವಜನರು ಶ್ರದ್ಧೆಯಿಂದ ದುಡಿಯಲು ಕೇಂದ್ರ ಸರ್ಕಾರ ಎಲ್ಲ ಅಗತ್ಯ ವೇದಿಕೆಯನ್ನು ಒದಗಿಸುತ್ತಿದೆ. ದೇಶದ ಯುವಜನರು ಹುಟ್ಟು ಹಾಕಿರುವ ಕಂಪನಿಗಳ ಜೊತೆ ಸರ್ಕಾರಿ ಕಂಪನಿಗಳೂ ಸ್ಪರ್ಧೆ ಮಾಡಲಿವೆ. ಆಗ ಮಾತ್ರ ನಮಗೆ ವಿಶ್ವದೊಂದಿಗೆ ಸ್ಪರ್ಧಿಸಲು ಸಾಧ್ಯವಾಗುತ್ತದೆ. ಸಂಸ್ಥೆಯು ಸರ್ಕಾರಿ ಸ್ವಾಮ್ಯದ್ದಾಗಿರಲಿ ಅಥವಾ ಖಾಸಗಿಯವರದಾಗಿರಲಿ ಅವೆರಡೂ ದೇಶದ ಆಸ್ತಿ ಎಂಬುದರಲ್ಲಿ ನನಗೆ ದೃಢವಾದ ನಂಬಿಕೆ ಇದೆ ಮತ್ತು ಅಲ್ಲಿ ಎಲ್ಲರಿಗೂ ಸ್ಪರ್ಧೆಯ ಸಮಾನ ಅವಕಾಶಗಳು ಇರಬೇಕು. ಇದು ‘ಸಬ್ಕಾ ಪ್ರಯಾಸ್’ (ಎಲ್ಲರ ಪ್ರಯತ್ನ). ‘ಸಬ್ಕಾ ಪ್ರಯಾಸ್’ ಎಂಬ ಈ ಮಂತ್ರವು ‘ಅಮೃತ ಕಾಲ’ದಲ್ಲಿ ಅಂದರೆ ಸ್ವಾತಂತ್ರ್ಯದ ಮುಂದಿನ 25 ವರ್ಷಗಳಲ್ಲಿ ಸ್ವಾವಲಂಬಿ ಭಾರತವನ್ನು ನಿರ್ಮಿಸುವ ಶಕ್ತಿಯಾಗಿದೆ. ಮತ್ತೊಮ್ಮೆ, ಈ ಅಭಿವೃದ್ಧಿ ಯೋಜನೆಗಳಿಗಾಗಿ ನಾನು ಕರ್ನಾಟಕದ ಎಲ್ಲಾ ಜನರನ್ನು ಅಭಿನಂದಿಸುತ್ತೇನೆ. ಬಸವರಾಜ್ ಜೀ ಅವರ ನೇತೃತ್ವದಲ್ಲಿ ನಮ್ಮ ಕರ್ನಾಟಕವು ವೇಗವಾಗಿ ಮುನ್ನಡೆಯಲು ಭಾರತ ಸರಕಾರವು ನಿಮ್ಮೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ದುಡಿಯುತ್ತದೆ. ನಿಮ್ಮೆಲ್ಲರಿಗೂ ಶುಭಾಶಯಗಳು ಮತ್ತು ಅನೇಕಾನೇಕ ಧನ್ಯವಾದಗಳು! ನಮಸ್ಕಾರ!.