"ಕಲಿಕೆಯಲ್ಲಿ ತೊಡಗಿಕೊಂಡಾಗ ಮಾತ್ರ ಗೆಲುವು ಸಾಧ್ಯವಾಗುತ್ತದೆ"
"ರಾಷ್ಟ್ರದ ಭದ್ರತೆಯ ವಿಷಯದಲ್ಲಿ ರಾಜಸ್ಥಾನದ ಯುವಕರು ಯಾವಾಗಲೂ ಉಳಿದವರಿಗಿಂತ ಮುಂದೆ ಇರುತ್ತಾರೆ"
"ಜೈಪುರ ಮಹಾಖೇಲ್‌ ಕ್ರೀಡೋತ್ಸವದ ಯಶಸ್ವೀ ಸಂಘಟನೆಯು ಭಾರತದ ಪ್ರಯತ್ನಗಳಿಗೆ ಪ್ರಮುಖ ಕೊಂಡಿಯಾಗಿದೆ"
"ದೇಶವು ಹೊಸ ವ್ಯಾಖ್ಯಾನಗಳನ್ನು ರೂಪಿಸುತ್ತಿದೆ ಮತ್ತು ಅಮೃತ ಕಾಲದಲ್ಲಿ ಹೊಸ ಆದೇಶಗಳನ್ನು ರಚಿಸುತ್ತಿದೆ"
"ದೇಶದ ಕ್ರೀಡಾ ಬಜೆಟ್ 2014 ರಿಂದ ಸುಮಾರು ಮೂರು ಪಟ್ಟು ಹೆಚ್ಚಾಗಿದೆ"
"ದೇಶದಲ್ಲಿ ಕ್ರೀಡಾ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲಾಗುತ್ತಿದೆ ಮತ್ತು ಖೇಲ್ ಮಹಾಕುಂಭದಂತಹ ದೊಡ್ಡ ಕಾರ್ಯಕ್ರಮಗಳನ್ನು ವೃತ್ತಿಪರ ರೀತಿಯಲ್ಲಿ ಆಯೋಜಿಸಲಾಗುತ್ತಿದೆ"
ಹಣದ ಕೊರತೆಯಿಂದ ಯಾವುದೇ ಯುವಕರು ಹಿಂದೆ ಸರಿಯಬಾರದು ಎಂದು ನಮ್ಮ ಸರ್ಕಾರ ಗಮನ ಕೇಂದ್ರೀಕರಿಸಿದೆ.
"ನೀವು ಫಿಟ್ ಆಗಿರುತ್ತೀರಿ, ಆಗ ಮಾತ್ರ ನೀವು ಸೂಪರ್‌ ಹಿಟ್ ಆಗುತ್ತೀರಿ"
"ರಾಜಸ್ಥಾನದ ಶ್ರೀ ಅನ್ನಾ-ಸಜ್ಜೆ (ಬಜ್ರಾ) ಮತ್ತು ಶ್ರೀ ಅನ್ನ-ಜೋಳ(ಜ್ವಾರ್) ಈ ಸ್ಥಳದ ಅನನ್ಯ ಹೆಗ್ಗುರುತಾಗಿದೆ"
"ಇಂದಿನ ಯುವಕರು ತಮ್ಮ ಬಹುಮುಖ ಪ್ರತಿಭೆ ಮತ್ತು ಬಹು ಆಯಾಮದ ಸಾಮರ್ಥ್ಯಗಳಿಂದಾಗಿ ಕೇವಲ ಒಂದು ಕ್ಷೇತ್ರಕ್ಕೆ ಸೀಮಿತವಾಗಿರಲು ಬಯಸುವುದಿಲ್ಲ"
"ಕ್ರೀಡೆ ಕೇವಲ ಒಂದು ಪ್ರಕಾರವಲ್ಲ, ಆದರೆ ಒಂದು ಉದ್ಯಮ"
"ಹೃದಯಪೂರ್ವಕವಾಗಿ ಪ್ರಯತ್ನಗಳನ್ನು ಮಾಡಿದಾಗ, ಫಲಿತಾಂಶಗಳು ಖಚಿತವಾಗಿರುತ್ತವೆ"
"ದೇಶಕ್ಕೆ ಮುಂದಿನ ಚಿನ್ನ ಮತ್ತು ಬೆಳ್ಳಿ ಪದಕ ವಿಜೇತರು ನಿಮ್ಮಿಂದಲೇ ಹೊರಹೊಮ್ಮುತ್ತಾರೆ"

 ಜೈಪುರ ಗ್ರಾಮಾಂತರ ಸಂಸದ ಮತ್ತು ನನ್ನ ಸಹೋದ್ಯೋಗಿ ರಾಜ್ಯವರ್ಧನ್ ಸಿಂಗ್ ರಾಥೋಡ್ ರವರೇ, ಎಲ್ಲ ಆಟಗಾರರು, ತರಬೇತುದಾರರು ಮತ್ತು ನನ್ನ ಯುವ ಸ್ನೇಹಿತರೇ!

ಮೊದಲನೆಯದಾಗಿ, ಜೈಪುರ ಮಹಾಖೇಲ್  ಕ್ರೀಟಾಕೂಟದಲ್ಲಿ  ಭಾಗವಹಿಸಿದ,  ಪದಕಗಳನ್ನು ಗೆದ್ದ ಆಟಗಾರರು ಮತ್ತು ಪ್ರತಿಯೊಬ್ಬ ಆಟಗಾರರು, ತರಬೇತುದಾರರು ಮತ್ತು ಅವರ ಕುಟುಂಬ ಸದಸ್ಯರಿಗೆ ಹೃತ್ಪೂರ್ವಕ ಅಭಿನಂದನೆಗಳು. ನೀವೆಲ್ಲರೂ ಜೈಪುರದ ಆಟದ ಮೈದಾನಕ್ಕೆ ಬಂದಿರುವುದು ಕೇವಲ ಆಟವಾಡಲು ಅಲ್ಲ ಗೆಲ್ಲಲು ಮತ್ತು ಕಲಿಯಲು. ಮತ್ತು, ಕಲಿಕೆ ಇರುವಲ್ಲಿ, ಗೆಲುವು ತಾನೇತಾನಾಗಿ ಖಚಿತವಾಗುತ್ತದೆ. ಯಾವುದೇ ಆಟಗಾರನು ಸ್ಪರ್ಧೆಯಿಂದ ಬರಿಗೈಯಲ್ಲಿ ಹಿಂತಿರುಗುವುದಿಲ್ಲ.

ಸ್ನೇಹಿತರೇ,

ಈಗ ಕಬಡ್ಡಿ ಆಟಗಾರರ ಅದ್ಭುತ ಆಟಕ್ಕೆ ನಾವೆಲ್ಲರೂ ಸಾಕ್ಷಿಯಾಗಿದ್ದೇವೆ. ಇಂದಿನ ಸಮಾರೋಪ ಸಮಾರಂಭದಲ್ಲಿ ಭಾರತಕ್ಕೆ ಕ್ರೀಡೆಯಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಗಳನ್ನು ತಂದುಕೊಟ್ಟ ಅನೇಕ ಪರಿಚಿತ ಮುಖಗಳನ್ನು ನಾನು ನೋಡಬಹುದು. ನಾನು ಏಷ್ಯನ್ ಗೇಮ್ಸ್ ಪದಕ ವಿಜೇತ ರಾಮ್ ಸಿಂಗ್, ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಪುರಸ್ಕೃತ ಪ್ಯಾರಾ ಅಥ್ಲೀಟ್ ಸಹೋದರ ದೇವೇಂದ್ರ ಜಜಾರಿಯಾ, ಅರ್ಜುನ ಪ್ರಶಸ್ತಿ ಪುರಸ್ಕೃತರಾದ ಸಾಕ್ಷಿ ಕುಮಾರಿ ಮತ್ತು ಇತರ ಹಿರಿಯ ಆಟಗಾರರನ್ನು ಸಹ ಕಂಡೆನು. ಜೈಪುರ ಗ್ರಾಮಾಂತರದ ಆಟಗಾರರನ್ನು ಹುರಿದುಂಬಿಸಲು ಇಲ್ಲಿಗೆ ಬಂದಿರುವ ಈ ಕ್ರೀಡಾ ತಾರೆಯರನ್ನು ನೋಡಿ ನನಗೆ ಬಹಳ ಸಂತೋಷವಾಗಿದೆ.

ಸ್ನೇಹಿತರೇ,

ಇಂದು ದೇಶದಲ್ಲಿ ಆರಂಭವಾಗಿರುವ ಕ್ರೀಡಾ ಸ್ಪರ್ಧೆಗಳು ಮತ್ತು ಕ್ರೀಡಾ ಮಹಾಕುಂಭಗಳ ಸರಣಿ ದೊಡ್ಡ ಬದಲಾವಣೆಯ ಪ್ರತಿಬಿಂಬವಾಗಿದೆ. ರಾಜಸ್ಥಾನವು ತನ್ನ ಯೌವನದ ಉತ್ಸಾಹ ಮತ್ತು ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದೆ. ಈ ವೀರ ನೆಲದ ಮಕ್ಕಳು ತಮ್ಮ ಶೌರ್ಯದಿಂದ ರಣರಂಗವನ್ನೂ ಆಟದ ಮೈದಾನವನ್ನಾಗಿಸುತ್ತಾರೆ ಎಂಬುದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ಹಾಗಾಗಿಯೇ ಹಿಂದಿನಿಂದ ಇಂದಿನವರೆಗೂ ರಾಜಸ್ಥಾನದ ಯುವಕರು ದೇಶದ ರಕ್ಷಣೆಯ ವಿಷಯದಲ್ಲಿ ಯಾರಿಗಿಂತಲೂ ಕಡಿಮೆಯಿಲ್ಲ. ಇಲ್ಲಿನ ಯುವಕರ ಈ ದೈಹಿಕ ಮತ್ತು ಮಾನಸಿಕ ಶಕ್ತಿಯನ್ನು ಬೆಳೆಸುವಲ್ಲಿ ರಾಜಸ್ಥಾನಿ ಕ್ರೀಡಾ ಸಂಪ್ರದಾಯಗಳು ಪ್ರಮುಖ ಪಾತ್ರವಹಿಸಿವೆ. ನೂರಾರು ವರ್ಷಗಳಿಂದ ಮಕರ ಸಂಕ್ರಾಂತಿಯಂದು ಆಯೋಜಿಸಲಾಗುತ್ತಿರುವ 'ದಡಾ' ಆಟವಾಗಲಿ, ಬಾಲ್ಯದ ನೆನಪುಗಳಿಗೆ ಸಂಬಂಧಿಸಿದ 'ತೋಲಿಯಾ/ರುಮಾಲ್ ಝಾಪಟ್ಟಾ'ದಂತಹ ಸಾಂಪ್ರದಾಯಿಕ ಆಟಗಳಾಗಲಿ, ಇವು ರಾಜಸ್ಥಾನದ ಸಂಪ್ರದಾಯಗಳಲ್ಲಿ ಬೇರೂರಿದೆ. ಅದಕ್ಕಾಗಿಯೇ ಈ ರಾಜ್ಯವು ದೇಶದಲ್ಲಿ ಹಲವಾರು ಕ್ರೀಡಾ ಪ್ರತಿಭೆಗಳನ್ನು ಹುಟ್ಟುಹಾಕಿದೆ ಮತ್ತು ಹಲವಾರು ಪದಕಗಳನ್ನು ಗೆಲ್ಲುವ ಮೂಲಕ ದೇಶದ ಧ್ವಜದ ವೈಭವವನ್ನು ಹೆಚ್ಚಿಸಿದೆ. ಮತ್ತು ಜೈಪುರದ ಜನರು ಒಲಿಂಪಿಕ್ ಪದಕ ವಿಜೇತರನ್ನು ಸಂಸದರಾಗಿ ಆಯ್ಕೆ ಮಾಡಿದ್ದಾರೆ. ರಾಜ್ಯವರ್ಧನ್ ಸಿಂಗ್ ರಾಥೋಡ್ ಜಿ ಅವರು 'ಎಂಪಿ ಕ್ರೀಡಾ ಸ್ಪರ್ಧೆ'ಯ ಮೂಲಕ ಹೊಸ ಪೀಳಿಗೆಗೆ ದೇಶದಿಂದ ಪಡೆದಿದ್ದನ್ನು ಮರಳಿಸಲು ಕೆಲಸ ಮಾಡುತ್ತಿರುವುದು ನನಗೆ ಖುಷಿ ತಂದಿದೆ. ನಾವು ಈ ಪ್ರಯತ್ನಗಳನ್ನು ಮತ್ತಷ್ಟು ವಿಸ್ತರಿಸಬೇಕು ಇದರಿಂದ ಅದರ ಪ್ರಭಾವವು ಇನ್ನಷ್ಟು ವಿಸ್ತಾರವಾಗುತ್ತದೆ. 'ಜೈಪುರ ಮಹಾಖೇಲ್' ನ ಯಶಸ್ವಿ ಸಂಘಟನೆಯು ನಮ್ಮ ಇದೇ ಪ್ರಯತ್ನಗಳ ಮುಂದುವರಿಕೆಯಾಗಿದೆ. ಈ ವರ್ಷ 600ಕ್ಕೂ ಹೆಚ್ಚು ತಂಡಗಳು ಮತ್ತು 6,500 ಯುವಕರು ಭಾಗವಹಿಸಿರುವುದು ಅದರ ಯಶಸ್ಸಿನ ಪ್ರತಿಬಿಂಬವಾಗಿದೆ. 125 ಕ್ಕೂ ಹೆಚ್ಚು ಬಾಲಕಿಯರ ತಂಡಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿವೆ ಎಂದು ನನಗೆ ತಿಳಿಸಲಾಗಿದೆ. ಹೆಣ್ಣು ಮಕ್ಕಳ ಈ ಹೆಚ್ಚುತ್ತಿರುವ ಭಾಗವಹಿಸುವಿಕೆ ಸಂತೋಷಕರವಾದ ಸಂದೇಶವನ್ನು ರವಾನಿಸುತ್ತಿದೆ.

ಸ್ನೇಹಿತರೇ,

'ಸ್ವಾತಂತ್ರದ ಅಮೃತಕಾಲ'ದ ಈ ಅವಧಿಯಲ್ಲಿ ದೇಶವು ಹೊಸ ವ್ಯಾಖ್ಯಾನಗಳನ್ನು ರೂಪಿಸುತ್ತಿದೆ ಮತ್ತು ಹೊಸ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುತ್ತಿದೆ. ದೇಶದಲ್ಲೇ ಪ್ರಥಮ ಬಾರಿಗೆ ‘ಕ್ರೀಡಾ’ ಕ್ಷೇತ್ರವನ್ನು ನೋಡುತ್ತಿರುವುದು ಸರಕಾರದ ದೃಷ್ಟಿಯಿಂದಲ್ಲ, ಆಟಗಾರರ ದೃಷ್ಟಿಯಿಂದ. ನನಗೆ ಗೊತ್ತು, ಯುವ ಭಾರತದ ಯುವ ಪೀಳಿಗೆಗೆ ಯಾವುದೂ ಅಸಾಧ್ಯವಲ್ಲ. ಯುವಕರು ಶಕ್ತಿ, ಸ್ವಾಭಿಮಾನ, ಸ್ವಾವಲಂಬನೆ, ಸೌಲಭ್ಯಗಳು ಮತ್ತು ಸಂಪನ್ಮೂಲ ಶಕ್ತಿಯನ್ನು ಪಡೆದಾಗ, ಪ್ರತಿ ಗುರಿಯನ್ನು ಸಾಧಿಸುವುದು ಸುಲಭವಾಗುತ್ತದೆ. ದೇಶದ ಈ ವಿಧಾನದ ಮಿಣುಕು ನೋಟ ಈ ಬಜೆಟ್ನಲ್ಲಿಯೂ ಗೋಚರಿಸುತ್ತದೆ. ಈ ಬಾರಿ ದೇಶದ ಬಜೆಟ್ ನಲ್ಲಿ ಕ್ರೀಡಾ ಇಲಾಖೆಗೆ ಸುಮಾರು 2500 ಕೋಟಿ ರೂಪಾಯಿಗಳನ್ನು ಮೀಸಲಾಗಿಡಿಲಾಗಿದೆ. ಆದರೆ 2014ಕ್ಕಿಂತ ಮೊದಲು ಕ್ರೀಡಾ ಇಲಾಖೆಗೆ 800 ಅಥವಾ 850 ಕೋಟಿ ರೂ. ಮಾತ್ರ ಇತ್ತು. ಅಂದರೆ, 2014 ಕ್ಕೆ ಹೋಲಿಸಿದರೆ, ದೇಶದ ಕ್ರೀಡಾ ಇಲಾಖೆಯ ಬಜೆಟ್ ಸುಮಾರು ಮೂರು ಪಟ್ಟು ಹೆಚ್ಚಾಗಿದೆ. ಈ ಬಾರಿ ‘ಖೇಲೋ ಇಂಡಿಯಾ’ ಅಭಿಯಾನಕ್ಕೆ ಬರೋಬ್ಬರಿ 1000 ಕೋಟಿ ರೂ.ಗೂ ಹೆಚ್ಚು ಬಜೆಟ್ ಮೀಸಲಿಡಲಾಗಿದೆ. ಕ್ರೀಡೆಗೆ ಸಂಬಂಧಿಸಿದ ಪ್ರತಿಯೊಂದು ಕ್ಷೇತ್ರದಲ್ಲಿ ಸಂಪನ್ಮೂಲಗಳು ಮತ್ತು ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ಈ ಹಣವನ್ನು ಬಳಸಲಾಗುತ್ತದೆ.

ಸ್ನೇಹಿತರೇ,

ಈ ಹಿಂದೆ, ದೇಶದ ಯುವಕರು ಕ್ರೀಡೆಯ ಬಗ್ಗೆ ಸ್ಫೂರ್ತಿ ಮತ್ತು ಪ್ರತಿಭೆಯನ್ನು ಹೊಂದಿದ್ದರೂ, ಸಂಪನ್ಮೂಲಗಳ ಕೊರತೆ ಮತ್ತು ಸರ್ಕಾರದ ಬೆಂಬಲವು ಪ್ರತಿ ಬಾರಿಯೂ ಅಡ್ಡಿಯಾಗುತ್ತಿತ್ತು. ಈಗ ನಮ್ಮ ಆಟಗಾರರ ಈ ಸಮಸ್ಯೆ ಕೂಡ ಬಗೆಹರಿಯುತ್ತಿದೆ. ಈ ಜೈಪುರ ಮಹಾಖೇಲ್ ನ ಉದಾಹರಣೆಯನ್ನೇ ನಾನು ನಿಮಗೆ ನೀಡುತ್ತೇನೆ. ಜೈಪುರದಲ್ಲಿ ಕಳೆದ 5-6 ವರ್ಷಗಳಿಂದ ಈ ಕ್ರೀಟಾಕೂಟ ನಡೆಯುತ್ತಿದೆ. ಅದೇ ರೀತಿ ದೇಶದ ಮೂಲೆ ಮೂಲೆಗಳಲ್ಲಿ ಭಾರತೀಯ ಜನತಾ ಪಾರ್ಟಿಯ ಸಂಸದರು ತಮ್ಮ ತಮ್ಮ ಪ್ರದೇಶಗಳಲ್ಲಿ ‘ಖೇಲ್ ಮಹಾಕುಂಭ’ಗಳನ್ನು ಆಯೋಜಿಸುತ್ತಿದ್ದಾರೆ. ಸಾವಿರಾರು ಯುವಕರು ಮತ್ತು ಪ್ರತಿಭಾವಂತ ಆಟಗಾರರು ಈ ಕ್ರೀಡಾಕೂಟಗಳಲ್ಲಿ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸುತ್ತಿದ್ದಾರೆ. ‘ಸಂಸದ್ ಖೇಲ್ ಮಹಾಕುಂಭʼದ ಫಲವಾಗಿ ದೇಶದ ಸಾವಿರಾರು ಹೊಸ ಪ್ರತಿಭೆಗಳು ಹೊರಹೊಮ್ಮುತ್ತಿದ್ದಾರೆ.
ಸ್ನೇಹಿತರೇ,

ಕೇಂದ್ರ ಸರ್ಕಾರವು ಈಗ ಜಿಲ್ಲಾ ಮಟ್ಟದಲ್ಲಿ ಮತ್ತು ಸ್ಥಳೀಯ ಮಟ್ಟದಲ್ಲಿ ಕ್ರೀಡಾ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುತ್ತಿರುವುದರಿಂದ ಇದೆಲ್ಲವೂ ಸಾಧ್ಯವಾಗಿದೆ. ಇಲ್ಲಿಯವರೆಗೆ, ದೇಶದ ನೂರಾರು ಜಿಲ್ಲೆಗಳಲ್ಲಿ ಲಕ್ಷಾಂತರ ಯುವಕರಿಗೆ ಕ್ರೀಡಾ ಮೂಲಸೌಕರ್ಯಗಳನ್ನು ರಚಿಸಲಾಗಿದೆ. ರಾಜಸ್ಥಾನದಲ್ಲೂ ಕೇಂದ್ರ ಸರ್ಕಾರವು ಹಲವಾರು ನಗರಗಳಲ್ಲಿ ಕ್ರೀಡಾ ಮೂಲಸೌಕರ್ಯಗಳನ್ನು ನಿರ್ಮಿಸುತ್ತಿದೆ. ಇಂದು, ದೇಶದಲ್ಲಿ ಕ್ರೀಡಾ ವಿಶ್ವವಿದ್ಯಾನಿಲಯಗಳನ್ನು ಸಹ ಸ್ಥಾಪಿಸಲಾಗುತ್ತಿದೆ ಮತ್ತು ಖೇಲ್ ಮಹಾಕುಂಭದಂತಹ ಪ್ರಮುಖ ಕಾರ್ಯಕ್ರಮಗಳನ್ನು ಸಹ ವೃತ್ತಿಪರ ರೀತಿಯಲ್ಲಿ ಆಯೋಜಿಸಲಾಗುತ್ತಿದೆ.

ರಾಷ್ಟ್ರೀಯ ಕ್ರೀಡಾ ವಿಶ್ವವಿದ್ಯಾಲಯಕ್ಕೆ ಈ ಬಾರಿ ಗರಿಷ್ಠ ಬಜೆಟ್ ಒದಗಿಸಲಾಗಿದೆ. ಕ್ರೀಡಾ ನಿರ್ವಹಣೆ ಮತ್ತು ಕ್ರೀಡಾ ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ವಿಭಾಗವನ್ನು ಕಲಿಯಲು ವಾತಾವರಣವನ್ನು ಸೃಷ್ಟಿಸುವುದು ನಮ್ಮ ಪ್ರಯತ್ನವಾಗಿದೆ, ಇದರ ಪರಿಣಾಮವಾಗಿ ಯುವಕರು ಈ ಕ್ಷೇತ್ರವನ್ನು ವೃತ್ತಿಯನ್ನಾಗಿ ಮಾಡಿಕೊಳ್ಳಲು ಅವಕಾಶವನ್ನು ಪಡೆಯುತ್ತಾರೆ.

ಸ್ನೇಹಿತರೇ,

ಯಾವುದೇ ಯುವಕರು ಹಣದ ಕೊರತೆಯಿಂದ ಹಿಂದೆ ಸರಿಯಬಾರದು ಎಂದು ನಮ್ಮ ಸರ್ಕಾರ ಖಾತ್ರಿಪಡಿಸುತ್ತಿದೆ. ಅತ್ಯುತ್ತಮ ಪ್ರದರ್ಶನ ನೀಡುವ ಆಟಗಾರರಿಗೆ ಕೇಂದ್ರ ಸರ್ಕಾರ ಈಗ ವಾರ್ಷಿಕ 5 ಲಕ್ಷ ರೂ.ವರೆಗೆ ನೆರವು ನೀಡುತ್ತದೆ. ಪ್ರಮುಖ ಕ್ರೀಡಾ ಪ್ರಶಸ್ತಿಗಳಲ್ಲಿ ನೀಡಲಾಗುವ ಮೊತ್ತವನ್ನು ಮೂರು ಪಟ್ಟು ಹೆಚ್ಚಿಸಲಾಗಿದೆ. ಒಲಿಂಪಿಕ್ಸ್ನಂತಹ ಪ್ರಮುಖ ಜಾಗತಿಕ ಸ್ಪರ್ಧೆಗಳಲ್ಲಿಯೂ ಸಹ, ಈಗ ಸರ್ಕಾರವು ತನ್ನ ಆಟಗಾರರೊಂದಿಗೆ ಸಂಪೂರ್ಣ ದೃಢತೆಯಿಂದ ನಿಂತಿದೆ. ಟಾಪ್ಸ್ ನಂತಹ ಯೋಜನೆಗಳ ಮೂಲಕ ಕ್ರೀಡಾಪಟುಗಳು ವರ್ಷಗಳಿಂದ ಒಲಿಂಪಿಕ್ಸ್ ಗೆ ತಯಾರಿ ನಡೆಸುತ್ತಿದ್ದಾರೆ.

ಸ್ನೇಹಿತರೇ,

ಕ್ರೀಡಾ ಕ್ಷೇತ್ರದಲ್ಲಿ ಯಾವುದೇ ಆಟಗಾರ ಮುನ್ನಡೆಯಲು ಅತ್ಯಂತ ಮುಖ್ಯವಾದ ವಿಷಯವೆಂದರೆ ಒಬ್ಬರ  ಫಿಟ್ನೆಸ್ ಅನ್ನು ಕಾಪಾಡಿಕೊಳ್ಳುವುದು. ನೀವು ಫಿಟ್ ಆಗಿದ್ದರೆ ಸೂಪರ್ಹಿಟ್ ಆಗುತ್ತೀರಿ. ಮತ್ತು, ಕ್ರೀಡಾ ಕ್ಷೇತ್ರದಲ್ಲಿ ಫಿಟ್ನೆಸ್ ಎಷ್ಟು ಅಗತ್ಯವೋ, ಜೀವನ ಕ್ಷೇತ್ರದಲ್ಲೂ ಅಷ್ಟೇ ಅಗತ್ಯ. ಅದಕ್ಕಾಗಿಯೇ ಇಂದು ಖೇಲೋ ಇಂಡಿಯಾ ಜೊತೆಗೆ ಫಿಟ್ ಇಂಡಿಯಾ ಕೂಡ ದೇಶಕ್ಕೆ ಒಂದು ಬೃಹತ್ ಮಿಷನ್ ಆಗಿದೆ. ನಮ್ಮ ಆಹಾರ ಮತ್ತು ಪೋಷಣೆ ಕೂಡ ನಮ್ಮ ದೇಹದಾರ್ಢ್ಯ, ಫಿಟ್ನೆಸ್ನಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಆದ್ದರಿಂದ, ನಾನು ಅಂತಹ ಒಂದು ಅಭಿಯಾನದ ಬಗ್ಗೆ ನಿಮ್ಮೆಲ್ಲರೊಂದಿಗೆ ಚರ್ಚಿಸಲು ಬಯಸುತ್ತೇನೆ, ಅದು ಭಾರತದಿಂದ ಪ್ರಾರಂಭವಾಯಿತು, ಈಗ ಜಾಗತಿಕ ಅಭಿಯಾನವಾಗಿದೆ. ಭಾರತದ ಪ್ರಸ್ತಾಪದ ಮೇರೆಗೆ, ವಿಶ್ವಸಂಸ್ಥೆಯು (ಯುಎನ್) 2023ನೇ ವರ್ಷವನ್ನು ಅಂತರರಾಷ್ಟ್ರೀಯ ಸಿರಿಧಾನ್ಯದ ವರ್ಷವಾಗಿ ಆಚರಿಸುತ್ತಿದೆ ಎಂದು ನೀವು ಕೇಳಿರಬಹುದು. ಮತ್ತು ರಾಜಸ್ಥಾನವು ಸಿರಿಧಾನ್ಯದ ಅತ್ಯಂತ ಶ್ರೀಮಂತ ಸಂಪ್ರದಾಯದ ನೆಲೆಯಾಗಿದೆ. ಈಗ ಅದನ್ನು ರಾಷ್ಟ್ರವ್ಯಾಪಿ ಗುರುತಿಸಬೇಕು. ಆದ್ದರಿಂದ ಜನರು ಈ ಸಿರಿಧಾನ್ಯಗಳನ್ನು 'ಶ್ರೀ ಅನ್ನ' ಎಂಬ ಹೆಸರಿನಿಂದ ತಿಳಿದುಕೊಳ್ಳುವುದು ಬಹಳ ಮುಖ್ಯ. ಈ ಬಾರಿಯ ಬಜೆಟ್ನಲ್ಲೂ ಅದನ್ನೇ ಪ್ರಸ್ತಾಪಿಸಲಾಗಿದೆ. ಇದು ಸೂಪರ್ಫುಡ್ ಆಗಿದೆ; ಇದು 'ಶ್ರೀ ಅನ್ನ'. ಅದಕ್ಕಾಗಿಯೇ ರಾಜಸ್ಥಾನದ ಒರಟು ಧಾನ್ಯಗಳಾದ ಬಾಜ್ರಾ ಮತ್ತು ಜೋವರ್ ಅನ್ನು ಈಗ 'ಶ್ರೀ ಅನ್ನ' ಎಂದು ಕರೆಯಲಾಗುತ್ತದೆ. ಅದು ಅದರ ಗುರುತು. ಮತ್ತು ಯಾರಿಗೆ ರಾಜಸ್ಥಾನದ ಬಗ್ಗೆ ತಿಳಿದಿದೆಯೋ ಅವರಿಗೆ ಇದು ಹೇಗೆ ತಿಳಿದಿರುವುದಿಲ್ಲ?. ನಮ್ಮ ರಾಜಸ್ಥಾನದ ಬಜ್ರಾ ಖೀಚ್ರಾ ಮತ್ತು ಚುರ್ಮಾವನ್ನು ಯಾರಾದರೂ ಮರೆಯಲು ಸಾಧ್ಯವೇ? ಯುವಕರೇ, ನಿಮ್ಮೆಲ್ಲರಿಗೂ ನನ್ನದೊಂದು ವಿಶೇಷ ಮನವಿ ಇದೆ. ನೀವು ಕೇವಲ ಶ್ರೀ ಅನ್ನವನ್ನು ಅಂದರೆ ಸಿರಿಧಾನ್ಯಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕು ಹಾಗು ಯುವ ಪೀಳಿಗೆಯರಿಗೆ ಶಾಲಾ ಕಾಲೇಜುಗಳಲ್ಲಿ ಬ್ರ್ಯಾಂಡ್ ಅಂಬಾಸಿಡರ್ ಆಗಿ ಬದಲಾಗಬೇಕು.

ಸ್ನೇಹಿತರೇ,

ಇಂದಿನ ಯುವಕರು ಒಂದೇ ಕ್ಷೇತ್ರಕ್ಕೆ ಸೀಮಿತವಾಗಬಾರದು. ಅವರು ಬಹುಮುಖ ಪ್ರತಿಭೆ ಮಾತ್ರವಲ್ಲದೆ ಬಹು ಆಯಾಮದವರೂ ಆಗಿದ್ದಾರೆ. ಅದಕ್ಕಾಗಿಯೇ ದೇಶವೂ ಯುವಜನರ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಒಂದೆಡೆ ಯುವಕರಿಗಾಗಿ ಆಧುನಿಕ ಕ್ರೀಡಾ ಮೂಲಸೌಕರ್ಯಗಳನ್ನು ನಿರ್ಮಿಸಲಾಗುತ್ತಿದ್ದು, ಮಕ್ಕಳು ಮತ್ತು ಯುವಕರಿಗಾಗಿ ರಾಷ್ಟ್ರೀಯ ಡಿಜಿಟಲ್ ಲೈಬ್ರರಿಯನ್ನೂ ಈ ಬಜೆಟ್ನಲ್ಲಿ ಪ್ರಸ್ತಾಪಿಸಲಾಗಿದೆ. ನ್ಯಾಷನಲ್ ಡಿಜಿಟಲ್ ಲೈಬ್ರರಿ ಮೂಲಕ, ವಿಜ್ಞಾನ, ಇತಿಹಾಸ, ಸಮಾಜಶಾಸ್ತ್ರ, ಸಂಸ್ಕೃತದಂತಹ ಪ್ರತಿಯೊಂದು ವಿಷಯದ ಪುಸ್ತಕಗಳು ನಗರದಿಂದ ಹಳ್ಳಿಯವರೆಗೆ ಪ್ರತಿ ಹಂತದಲ್ಲೂ ಡಿಜಿಟಲ್ ರೂಪದಲ್ಲಿ ಲಭ್ಯವಿರುತ್ತವೆ. ಇದು ನಿಮ್ಮ ಕಲಿಕೆಯ ಅನುಭವಕ್ಕೆ ಹೊಸ ಹಂತವನ್ನು ನೀಡುತ್ತದೆ. ಎಲ್ಲ ಸಂಪನ್ಮೂಲಗಳು ನಿಮ್ಮ ಕಂಪ್ಯೂಟರ್ ಮತ್ತು ಮೊಬೈಲ್ನಲ್ಲಿ ಲಭ್ಯವಾಗುವಂತೆ ಮಾಡಲಾಗುವುದು.

ಸ್ನೇಹಿತರೇ,

ಕ್ರೀಡೆ ಕೇವಲ ಕೌಶಲ್ಯವಲ್ಲ; ಕ್ರೀಡೆ ಕೂಡ ಒಂದು ದೊಡ್ಡ ಉದ್ಯಮವಾಗಿದೆ. ಕ್ರೀಡೆಗೆ ಸಂಬಂಧಿಸಿದ ವಸ್ತುಗಳು ಮತ್ತು ಸಂಪನ್ಮೂಲಗಳನ್ನು ಮಾಡುವ ಮೂಲಕ ಹೆಚ್ಚಿನ ಸಂಖ್ಯೆಯ ಜನರು ಉದ್ಯೋಗವನ್ನು ಸಹ ಪಡೆಯುತ್ತಾರೆ. ಈ ಕೆಲಸಗಳನ್ನು ಹೆಚ್ಚಾಗಿ ನಮ್ಮ ದೇಶದಲ್ಲಿ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ - ಎಂಎಸ್ಎಂಇ ಗಳು ಮಾಡುತ್ತವೆ. ಈ ಬಾರಿಯ ಬಜೆಟ್ನಲ್ಲಿ ಕ್ರೀಡಾ ಕ್ಷೇತ್ರಕ್ಕೆ ಸಂಬಂಧಿಸಿದ ಎಂಎಸ್ಎಂಇಗಳನ್ನು ಬಲಪಡಿಸಲು ಹಲವು ಮಹತ್ವದ ಘೋಷಣೆಗಳನ್ನೂ ಮಾಡಲಾಗಿದೆ. ನಾನು ಇನ್ನೊಂದು ಯೋಜನೆಯ ಬಗ್ಗೆ ಹೇಳಲು ಬಯಸುತ್ತೇನೆ. ಈ ಯೋಜನೆಯು ಪಿಎಂ ವಿಶ್ವಕರ್ಮ ಕೌಶಲ್ ಸಮ್ಮಾನ್ ಅಂದರೆ ಪಿಎಂ ವಿಕಾಸ್ ಯೋಜನೆ. ಸ್ವಯಂ ಉದ್ಯೋಗ ಮಾಡುವ, ರಚಿಸುವ, ತಮ್ಮ ಹಸ್ತ ಕೌಶಲ್ಯದಿಂದ ತಯಾರಿಸುವ, ಕೈಯಿಂದ ಚಾಲಿತ ಉಪಕರಣಗಳನ್ನು ಮಾಡುವ ಅಂತಹ ಜನರಿಗೆ ಈ ಯೋಜನೆಯು ಹೆಚ್ಚಿನ ಸಹಾಯವನ್ನು ನೀಡುತ್ತದೆ. ಅವರಿಗೆ ಆರ್ಥಿಕ ಬೆಂಬಲದಿಂದ ಹೊಸ ಮಾರುಕಟ್ಟೆಗಳನ್ನು ಸೃಷ್ಟಿಸುವವರೆಗೆ, ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯಿಂದ ಎಲ್ಲ ರೀತಿಯ ಸಹಾಯವನ್ನು ನೀಡಲಾಗುತ್ತದೆ. ಇದು ನಮ್ಮ ಯುವಕರಿಗೆ ಉದ್ಯೋಗ ಮತ್ತು ಸ್ವಯಂ ಉದ್ಯೋಗಕ್ಕಾಗಿ ದೊಡ್ಡ ಅವಕಾಶಗಳನ್ನು ಸೃಷ್ಟಿಸುತ್ತದೆ.
 ಸ್ನೇಹಿತರೇ,

ಪೂರ್ಣ ಮನಸ್ಸಿನಿಂದ ಪ್ರಯತ್ನಗಳನ್ನು ಮಾಡಿದರೆ, ಫಲಿತಾಂಶಗಳು ಸಹ ಖಚಿತವಾಗಿರುತ್ತವೆ. ದೇಶವು ಪ್ರಯತ್ನಗಳನ್ನು ಮಾಡಿದೆ ಅದರ  ಫಲಿತಾಂಶಗಳನ್ನು ನಾವು ಟೋಕಿಯೊ ಒಲಿಂಪಿಕ್ಸ್, ಕಾಮನ್ವೆಲ್ತ್ ಕ್ರೀಡಾಕೂಟಗಳಲ್ಲಿ ನೋಡಿದ್ದೇವೆ. ಜೈಪುರ ಮಹಾಖೇಲ್ ನಲ್ಲಿ ನಿಮ್ಮೆಲ್ಲರ ಪ್ರಯತ್ನಗಳು ಭವಿಷ್ಯದಲ್ಲಿ ಅಂತಹ ಅದ್ಭುತ ಫಲಿತಾಂಶಗಳನ್ನು ನೀಡುತ್ತವೆ. ದೇಶಕ್ಕೆ ಮುಂದಿನ ಚಿನ್ನ ಮತ್ತು ಬೆಳ್ಳಿ ಪದಕಗಳು ನಿಮ್ಮಿಂದಲೇ ಹೊರಹೊಮ್ಮಲಿವೆ. ದೃಢಸಂಕಲ್ಪ ಮಾಡಿದರೆ ಒಲಿಂಪಿಕ್ಸ್ನಲ್ಲೂ ತ್ರಿವರ್ಣ ಧ್ವಜದ ವೈಭವ ಹೆಚ್ಚಿಸುವಿರಿ. ನೀವು ಎಲ್ಲಿಗೆ ಹೋದರೂ, ನೀವು ದೇಶಕ್ಕೆ ಪ್ರಶಸ್ತಿಗಳನ್ನು ತರುತ್ತೀರಿ. ನಮ್ಮ ಯುವಕರು ದೇಶದ ಯಶಸ್ಸನ್ನು ಬಹಳ ಮುಂದಕ್ಕೆ ಕೊಂಡೊಯ್ಯುತ್ತಾರೆ ಎಂದು ನನಗೆ ಖಾತ್ರಿಯಿದೆ. ಇದೇ ಉತ್ಸಾಹದಲ್ಲಿ, ನಿಮ್ಮೆಲ್ಲರಿಗೂ ತುಂಬಾ ಧನ್ಯವಾದಗಳು. ನಿಮಗೆ ನನ್ನ ಬಹಳ ಹಾರೈಕೆಗಳು.

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
PM Modi hails diaspora in Kuwait, says India has potential to become skill capital of world

Media Coverage

PM Modi hails diaspora in Kuwait, says India has potential to become skill capital of world
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ಡಿಸೆಂಬರ್ 2024
December 21, 2024

Inclusive Progress: Bridging Development, Infrastructure, and Opportunity under the leadership of PM Modi