ನಮಸ್ಕಾರ!
ದೇಶದ ಲಕ್ಷಾಂತರ ಐಟಿಐ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲು ಇಂದು ತಮಗೆ ಅವಕಾಶ ದೊರತಿರುವುದು ತಮ್ಮ ಸೌಭಾಗ್ಯವಾಗಿದೆ. ಕೌಶಲ್ಯ ಅಭಿವೃದ್ಧಿಗೆ ಸಂಬಂಧಿಸಿದ ವಿವಿಧ ಸಂಸ್ಥೆಗಳಿಂದ ಶಿಕ್ಷಕರೇ, ಜಗತ್ತಿನ ಶಿಕ್ಷಣ ವಲಯದ ಇತರೆ ಗಣ್ಯರೇ, ಮಹಿಳೆಯರೇ ಮತ್ತು ಮಹನೀಯರೇ!
21 ನೇ ಶತಮಾನದತ್ತ ಸಾಗಲು ಇಂದು ಹೊಸ ಇತಿಹಾಸ ಸೃಷ್ಟಿಯಾಗಿದೆ. ಇದೇ ಮೊದಲ ಬಾರಿಗೆ 9 ಲಕ್ಷಕ್ಕೂ ಹೆಚ್ಚು ಮಂದಿ ಐಟಿಐ ವಿದ್ಯಾರ್ಥಿಗಳು ಕೌಶಲ್ಯ ದೀಕ್ಷಾಂತ್ ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ. ವರ್ಚುವಲ್ ಮೂಲಕ 40 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ. ಕೌಶಲ್ಯ ದೀಕ್ಷಾಂತ್ ಸಮಾರಂಭಕ್ಕಾಗಿ ನಿಮ್ಮೆಲ್ಲರಿಗೂ ಹಾರೈಸುತ್ತೇನೆ ಮತ್ತು ಇದು ಮಂಗಳಕರ ಸಮಾರಂಭ. ಇಂದು ಭಗವಾನ್ ವಿಶ್ವಕರ್ಮ ಅವರ ಜನ್ಮ ದಿನ. ಇದು ವಿಚಿತ್ರ ಕಾಕತಾಳೀಯವಾಗಿದ್ದು, ಕೌಶಲ್ ದೀಕ್ಷಾಂತ್ ಸಮಾರಂಭದಲ್ಲಿ ಕೌಶಲ್ಯದೊಂದಿಗೆ ನಾವೀನ್ಯತೆಯ ಹಾದಿಯಲ್ಲಿ ಸಾಗುವ ಮೊದಲ ಹೆಜ್ಜೆಯನ್ನು ನೀವು ಇಟ್ಟಿದ್ದು, ಇದು ವಿಶ್ವಕರ್ಮ ಜಯಂತಿಯಂತಹ ಶುಭ ಸಂದರ್ಭದಲ್ಲಿ ನಡೆಯುತ್ತಿದೆ. ನಿಮ್ಮ ಆರಂಭ ಎಷ್ಟು ಆಹ್ಲಾದಕರವಾಗಿರುತ್ತದೆಯೋ ಭವಿಷ್ಯದತ್ತ ನಿಮ್ಮ ಪಯಣವೂ ಹೆಚ್ಚು ಸೃಜನಶೀಲವಾಗಿರುತ್ತದೆ ಎಂದು ನಾನು ವಿಶ್ವಾಸದಿಂದ ಹೇಳಬಲ್ಲೇ. ದೇಶದ ಎಲ್ಲಾ ಜನರಿಗೆ ವಿಶ್ವಕರ್ಮ ಜಯಂತಿ ಶುಭಾಶಯಗಳು.
ಸ್ನೇಹಿತರೇ
ವಿಶ್ವಜಯಂತಿ ಕೌಶಲ್ಯವನ್ನು ಪವಿತ್ರಗೊಳಿಸುವ ಹಬ್ಬ. ಶಿಲ್ಪಿಯ ವಿಗ್ರಹ ಎಲ್ಲಿಯವರೆಗೆ ಜೀವ ತುಂಬುವುದಿಲ್ಲವೋ ಅಲ್ಲಿಯತನಕ ಅದಕ್ಕೆ ದೇವರ ರೂಪವಿದೆ ಎಂದು ಕರೆಯಲು ಸಾಧ್ಯವಿಲ್ಲ. ಇಂದು ನಮ್ಮೆಲ್ಲರಿಗೂ ಹೆಮ್ಮೆಯ ಸಂದರ್ಭವಾಗಿದ್ದು, ನಮ್ಮ ಕೌಶಲ್ಯವನ್ನು ಗೌರವಿಸಲಾಗುತ್ತಿದೆ ಮತ್ತು ವಿಶ್ವಕರ್ಮ ಜಯಂತಿ ಸಂದರ್ಭದಲ್ಲಿ ಮಾನ್ಯತೆ ನೀಡಲಾಗುತ್ತಿದೆ. ವಿಶ್ವಕರ್ಮ ಜಯಂತಿ ಕಠಿಣ ಪರಿಶ್ರಮದಿಂದ ಕೆಲಸ ಮಾಡುವ ವ್ಯಕ್ತಿಯನ್ನು ನೈಜವಾಗಿ ಗೌರವಿಸುವ ಪ್ರಜ್ಞೆಯನ್ನು ಹೊಂದಿದೆ; ಇಂದು ಕಾರ್ಮಿಕರ ದಿನ. ನಮ್ಮ ದೇಶದಲ್ಲಿ ಕುಶಲ ಕಾರ್ಮಿಕರನ್ನು ದೇವರ ಭಾಗವಾಗಿ ನೋಡಲಾಗುತ್ತದೆ; ಆತ ವಿಶ್ವಕರ್ಮ ರೂಪದಲ್ಲಿ ಕಾಣಿಸುತ್ತಾನೆ. ಅಂದರೆ ನಿಮ್ಮ ಕೌಶಲ್ಯದಲ್ಲಿ ದೇವರ ಭಾಗವಿದೆ. ಈ ಕಾರ್ಯಕ್ರಮ ಭಾವನಾತ್ಮಕವಾಗಿ ಭಗವಾನ್ ವಿಶ್ವಕರ್ಮರಿಗೆ ಗೌರವ ಸಲ್ಲಿಸಿದಂತಾಗಿದೆ ಎಂದು ನಾನು ಭಾವಿಸುತ್ತೇನೆ. ಇದನ್ನು “ಕೌಶಲ್ಯಾಂಜಲಿ” ಅಥವಾ “ಕರ್ಮಾಂಜಲಿ” ಎಂದು ಕರೆಯಿರಿ, ವಿಶ್ವಕರ್ಮರ ಜನ್ಮ ದಿನಕ್ಕಿಂತ ಅದ್ಭುತವಾದ ದಿನ ಯಾವುದಿದೆ.
ಸ್ನೇಹಿತರೇ
ಕಳೆದ ಎಂಟು ವರ್ಷಗಳಲ್ಲಿ ದೇಶ ಭಗವಾನ್ ವಿಶ್ವಕರ್ಮರ ಸ್ಫೂರ್ತಿಯಿಂದ ಹಲವಾರು ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದೆ. ನಮ್ಮ ‘ಶ್ರಮೇವ ಜಯತೇ’ ಸಂಪ್ರದಾಯವನ್ನು ಪುನರುಜ್ಜೀವಗೊಳಿಸುವ ಪ್ರಯತ್ನ ನಡೆಯುತ್ತಿದೆ. ಇಂದು ದೇಶದಲ್ಲಿ ಮತ್ತೊಮ್ಮೆ ಕೌಶಲ್ಯವನ್ನು ಗೌರವಿಸುವ ಮೂಲಕ ಕೌಶಲ್ಯಾಭಿವೃದ್ಧಿಗೆ ಒತ್ತು ನೀಡಿದೆ. ಈ ಶತಮಾನವನ್ನು ಭಾರತದ ಶತಮಾನವನ್ನಾಗಿ ಮಾಡಲು ಭಾರತದ ಯುವ ಸಮೂಹ ಶಿಕ್ಷಣದ ಜೊತೆಗೆ ಕೌಶಲ್ಯದಲ್ಲಿ ಪರಿಣತಿ ಹೊಂದುವುದು ಮುಖ್ಯವಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ನಮ್ಮ ಸರ್ಕಾರ ಯುವ ಜನಾಂಗದ ಕೌಶಲ್ಯಾಭಿವೃದ್ದಿಗೆ ಪ್ರಧಾನ ಆದ್ಯತೆ ನೀಡಿದೆ ಮತ್ತು ಹೊಸ ಸಂಸ್ಥೆಗಳನ್ನು ಸೃಜಿಸಿದೆ. ದೇಶದಲ್ಲಿ ಮೊದಲ ಐಟಿಐ ಸ್ಥಾಪನೆಯಾಗಿದ್ದು 1950 ರಲ್ಲಿ. ನಂತರ ಏಳು ದಶಕಗಳಲ್ಲಿ 10,000 ಐಟಿಐಗಳು ಪ್ರಾರಂಭವಾದವು. ಕಳೆದ ಎಂಟು ವರ್ಷಗಳಲ್ಲಿ ನಮ್ಮ ಸರ್ಕಾರ ದೇಶದಲ್ಲಿ 5,000 ಹೊಸ ಐಟಿಐಗಳನ್ನು ಸ್ಥಾಪಿಸಿದೆ. 8 ವರ್ಷಗಳ ಅವಧಿಯಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಐಟಿಐ ಸೀಟುಗಳನ್ನು ಸೇರ್ಪಡೆಮಾಡಲಾಗಿದೆ. ಇದಲ್ಲದೇ ದೇಶಾದ್ಯಂತ ರಾಷ್ಟ್ರೀಯ ಕೌಶಲ್ಯ ತರಬೇತಿ ಸಂಸ್ಥೆಗಳು, ಭಾರತೀಯ ಕೌಶಲ್ಯ ಸಂಸ್ಥೆಗಳು ಮತ್ತು ಸಹಸ್ರಾರು ಕೌಶಲ್ಯ ಅಭಿವೃದ್ಧಿ ಕೇಂದ್ರಗಳನ್ನು ತೆರೆಯಲಾಗಿದೆ. ಶಾಲಾ ಹಂತದಲ್ಲಿ ಕೌಶಲ್ಯಾಭಿವೃದ್ಧಿಗೆ ಒತ್ತು ನಿಡುವ ಉದ್ದೇಶದಿಂದ ಸರ್ಕಾರ 5000 ಕ್ಕೂ ಹೆಚ್ಚು ಕೌಶಲ್ಯ ತಾಣಗಳನ್ನು ತೆರೆಯುತ್ತಿದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಅನುಭವ ಆಧಾರಿತ ಕಲಿಕೆಯನ್ನು ಸಹ ಪ್ರೋತ್ಸಾಹಿಸಲಾಗುತ್ತಿದೆ ಮತ್ತು ದೇಶದ ಶಾಲೆಗಳಲ್ಲಿ ಕೌಶಲ್ಯ ಕೋರ್ಸ್ ಗಳನ್ನು ಸಹ ಪರಿಚಯಿಸಲಾಗಿದೆ.
ಐಟಿಐಗಳಲ್ಲಿ ಎಲ್ಲಾ ವಿದ್ಯಾರ್ಥಿಗಳಿಗಾಗಿ ಸರ್ಕಾರ ಮತ್ತೊಂದು ತೀರ್ಮಾನ ತೆಗೆದುಕೊಂಡಿದ್ದು, ಇದರಿಂದ ನಿಮಗೆಲ್ಲರಿಗೂ ಅನುಕೂಲವಾಗಲಿದೆ. 10 ನೇ ತರಗತಿ ಉತ್ತೀರ್ಣರಾದ ನಂತರ ರಾಷ್ಟ್ರೀಯ ಮುಕ್ತ ಶಾಲೆ ಮೂಲಕ 12 ನೇ ತರಗತಿ ತೇರ್ಗಡೆಯಾದ ಪ್ರಮಾಣಪತ್ರವನ್ನು ಸುಲಭವಾಗಿ ಪಡೆಯಬಹುದಾಗಿದೆ. ಇದರಿಂದ ಹೆಚ್ಚಿನ ಅಧ್ಯಯನಕ್ಕೆ ನೆರವಾಗಲಿದೆ. ಕೆಲವು ತಿಂಗಳ ಹಿಂದೆ ಮತ್ತೊಂದು ಪ್ರಮುಖ ನಿರ್ಧಾರ ತೆಗೆದುಕೊಳ್ಳಲಾಗಿದೆ. ಐಟಿಐಗಳಲ್ಲಿ ತಾಂತ್ರಿಕ ತರಬೇತಿ ಪಡೆದ ಯುವ ಜನರಿಗೆ ಸೇನೆಯಲ್ಲಿ ನೇಮಕಾತಿ ಹೊಂದಲು ವಿಶೇಷ ನಿಬಂಧನೆಗಳನ್ನು ಅಳವಡಿಸಲಾಗಿದೆ. ಇದರಿಂದ ಐಟಿಐ ಮುಗಿಸಿದ ಯುವ ಜನಾಂಗಕ್ಕೆ ಸೇನೆಯಲ್ಲೂ ಅವಕಾಶ ಸಿಗಲಿದೆ.
ಸ್ನೇಹಿತರೇ
ನಾಲ್ಕನೇ ಕೈಗಾರಿಕಾ ಕ್ರಾಂತಿಯ ಯುಗದಲ್ಲಿ ಭಾರತದ ಯಶಸ್ಸಿಗೆ ಕೈಗಾರಿಕಾ ತರಬೇತಿ ಸಂಸ್ಥೆಗಳು [ಐಟಿಐಗಳು] ಮಹತ್ವದ ಪಾತ್ರ ವಹಿಸಲಿವೆ. 4.0 ಕೈಗಾರಿಕಾ ಯುಗದಲ್ಲಿ ಕೆಲಸದ ವಿಧಾನವೂ ಸಹ ಬದಲಾಗುತ್ತಿದೆ ಮತ್ತು ಸರ್ಕಾರ ವಿಶೇಷ ಕ್ರಮ ತೆಗೆದುಕೊಂಡಿದ್ದು, ಐಟಿಐಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಆಧುನಿಕ ಕೋರ್ಸ್ ಗಳು ಕೈಗೆಟಕುವಂತೆ ವ್ಯವಸ್ಥೆ ಮಾಡಿದೆ. ಇಂದು ಐಟಿಐಗಳಲ್ಲಿ ಕೋಡಿಂಗ್, ಆರ್ಟಿಫಿಷಿಯಲ್ ಇಂಟಲಿಜೆನ್ಸ್, ರೊಬೊಟಿಕ್ಸ್, 3ಡಿ ಪ್ರಿಂಟಿಂಗ್, ಡ್ರೋನ್ ತಂತ್ರಜ್ಞಾನ, ಟೆಲಿಮೆಡಿಸನ್ ಮತ್ತಿತರ ಕೋರ್ಸ್ ಗಳನ್ನು ಆರಂಭಿಸಲಾಗಿದೆ. ನೀವು ನೋಡಬಹುದು ಭಾರತ ನವೀಕೃತ ಇಂಧನ ಕ್ಷೇತ್ರ, ಸೌರ ವಿದ್ಯುತ್ ಮತ್ತು ವಿದ್ಯುನ್ಮಾನ ವಾಹನಗಳ ವಲಯದಲ್ಲಿ ನಾಯಕತ್ವ ವಹಿಸುತ್ತಿದೆ. ಇಂತಹ ಕೋರ್ಸ್ ಗಳನ್ನು ಆರಂಭಿಸಿರುವುದರಿಂದ ನೀವು ಸುಲಭವಾಗಿ ಉದ್ಯೋಗಾವಕಾಶ ಪಡೆಯಬಹುದಾಗಿದೆ.
ಸ್ನೇಹಿತರೇ
ದೇಶದಲ್ಲಿಂದು ತಂತ್ರಜ್ಞಾನ ವಿಸ್ತರಣೆಯಾಗುತ್ತಿದ್ದು, ಉದ್ಯೋಗಾವಕಾಶಗಳು ಸಹ ಹೆಚ್ಚಾಗುತ್ತಿದೆ. ಉದಾಹರಣೆಗೆ ದೇಶದ ಪ್ರತಿಯೊಂದು ಹಳ್ಳಿಗೆ ಆಪ್ಟಿಕಲ್ ಫೈಬರ್ ಸೇವೆ ಒದಗಿಸಲು ಲಕ್ಷಾಂತರ ಸಾಮಾನ್ಯ ಸೇವಾ ಕೇಂದ್ರಗಳನ್ನು ಆರಂಭಿಸುತ್ತಿದ್ದು, ಐಟಿಐಗಳಲ್ಲಿ ಉದ್ಯೋಗ ಪಡೆದವರಿಗೆ ಹೆಚ್ಚು ಹೆಚ್ಚು ಅವಕಾಶಗಳು ಸೃಷ್ಟಿಯಾಗುತ್ತಿವೆ. ಅದು ಹಳ್ಳಿಗಳಲ್ಲಿ ಮೊಬೈಲ್ ದುರಸ್ತಿ, ಕೃಷಿ ಸಂಬಂಧಿತ ಹೊಸ ತಂತ್ರಜ್ಞಾನ, ಡ್ರೋನ್ ಮೂಲಕ ರಸಗೊಬ್ಬರ ಮತ್ತು ಕೀಟನಾಶಕಗಳನ್ನು ಸಿಂಪಡಿಸುವ, ಹಲವಾರು ಹೊಸ ಮಾದರಿಯ ಉದ್ಯೋಗ ಗ್ರಾಮೀಣ ಆರ್ಥಿಕತೆಯಲ್ಲಿ ಸೃಷ್ಟಿಯಾಗುತ್ತಿದೆ. ಈ ನಿಟ್ಟಿನಲ್ಲಿ ಐಟಿಐಗಳ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಈ ಸಾಧ್ಯತೆಗಳಿಂದ ಯುವ ಸಮೂಹಕ್ಕೆ ಪೂರ್ಣ ಪ್ರಮಾಣದ ಲಾಭವಾಗುತ್ತಿದೆ. ಇದನ್ನು ಮನಸ್ಸಿನಲ್ಲಿಟ್ಟುಕೊಂಡು ಸರ್ಕಾರ ನಿರಂತರವಾಗಿ ಐಟಿಐಗಳನ್ನು ಮೇಲ್ದರ್ಜೆಗೇರಿಸಲು ಮತ್ತು ಸಕಾಲಕ್ಕೆ ಬದಲಾವಣೆಗಳನ್ನು ತರುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ.
ಸ್ನೇಹಿತರೇ
ಕೌಶಲ್ಯಾಭಿವೃದ್ಧಿ ಜೊತೆಗೆ ಯುವ ಸಮೂಹ ಲಘು ಕೌಶಲ್ಯ ಹೊಂದುವುದು ಸಹ ಅಷ್ಟೇ ಮಹತ್ವದ್ದಾಗಿದೆ. ಐಟಿಐಗಳಲ್ಲಿಯೂ ಇದಕ್ಕೆ ವಿಶೇಷ ಒತ್ತು ನೀಡಲಾಗುತ್ತಿದೆ. ವ್ಯವಹಾರದ ಯೋಜನೆ ರೂಪಿಸುವ, ವಿವಿಧ ಯೋಜನೆಗಳಿಂದ ಬ್ಯಾಂಕ್ ಗಳ ಮೂಲಕ ಸಾಲ ಪಡೆಯುವ, ಅಗತ್ಯವಿರುವ ಅರ್ಜಿಗಳನ್ನು ಭರ್ತಿ ಮಾಡುವ ವಿಧಾನ, ಹೊಸ ಕಂಪೆನಿಗಳನ್ನು ನೋಂದಣಿ ಮಾಡುವ ಕ್ರಮ ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿದ ಕೋರ್ಸ್ ಗಳನ್ನು ಆರಂಭಿಸಲಾಗಿದೆ. ಸರ್ಕಾರದ ಇಂತಹ ಪ್ರಯತ್ನಗಳ ಫಲವಾಗಿ ಭಾರತ ಗುಣಮಟ್ಟವಷ್ಟೇ ಅಲ್ಲದೇ ವೈವಿಧ್ಯಮಯ ಕೌಶಲ್ಯವನ್ನು ಸಹ ಹೊಂದುವಂತಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ನಮ್ಮ ಐಟಿಐ ಗಳಲ್ಲಿ ಉತ್ತೀರ್ಣರಾದವರು ವಿಶ್ವಮಟ್ಟದ ಕೌಶಲ್ಯ ಸ್ಪರ್ಧೆಗಳಲ್ಲಿ ಹಲವು ಪ್ರಮುಖ ಬಹುಮಾನಗಳನ್ನು ಗೆದ್ದಿದ್ದಾರೆ.
ಸ್ನೇಹಿತರೇ
ಕೌಶಲ್ಯಾಭಿವೃದ್ಧಿ ವಿಷಯದಲ್ಲಿ ಮತ್ತೊಂದು ಆಯಾಮವಿದ್ದು, ಈ ಕುರಿತಂತೆಯೂ ಅಷ್ಟೇ ಮುಖ್ಯವಾಗಿ ಚರ್ಚಿಸಬೇಕಾಗಿದೆ. ಯುವ ಜನರಿಗೆ ಕೌಶಲ್ಯ ಮತ್ತು ಶಿಕ್ಷಣದ ಶಕ್ತಿ ಇದ್ದಾಗ ಅವನ ಆತ್ಮ ವಿಶ್ವಾಸ ಸ್ವಯಂಚಾಲಿತವಾಗಿ ಹೆಚ್ಚಾಗುತ್ತದೆ. ಯುವ ಜನ ಕೌಶಲ್ಯದಿಂದ ಸಬಲೀಕರಣಗೊಂಡರೆ ಹೇಗೆ ಹೊಸ ಉದ್ಯಮ ಸ್ಥಾಪಿಸಬಹುದು ಎಂಬುದು ಮನಸ್ಸಿಗೆ ಹೊಳೆಯುತ್ತದೆ. ಸ್ವಯಂ ಉದ್ಯೋಗದ ಸ್ಫೂರ್ತಿಗೆ ಇಂದು ಮುದ್ರಾ ಯೋಜನೆ, ಸ್ಟಾರ್ಟ್ ಅಪ್ ಇಂಡಿಯಾ ಮತ್ತು ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆಗಳ ಮೂಲಕ ಯಾವುದೇ ಖಾತರಿ ಇಲ್ಲದೇ ಸಾಲ ಒದಗಿಸಲಾಗುತ್ತಿದೆ. ಗುರಿ ನಿಮ್ಮ ಮುಂದೆ ಇದೆ ಮತ್ತು ಈ ನಿಟ್ಟಿನಲ್ಲಿ ನೀವು ಮುನ್ನಡೆಯಬೇಕು. ಇಂದು ದೇಶ ನಿಮ್ಮ ಕೈ ಹಿಡಿಯುತ್ತದೆ ಮತ್ತು ನಾಳೆ ದೇಶವನ್ನು ನೀವು ಮುನ್ನಡೆಸಬೇಕು. ಮುಂದಿನ 25 ವರ್ಷಗಳ ನಿಮ್ಮ ಜೀವನ ಅತ್ಯಂತ ಮುಖ್ಯವಾಗಿದ್ದು, ಇದೇ ರೀತಿ ಮುಂದಿನ 25 ವರ್ಷಗಳ ಕಾಲ ದೇಶಕ್ಕೆ ‘ಅಮೃತ ಕಾಲ’ವೂ ಸಹ ಅಷ್ಟೇ ಪ್ರಮುಖವಾದದ್ದು. ನೀವೆಲ್ಲರೂ ಭಾರತದಲ್ಲೇ ತಯಾರಿಸು ಮತ್ತು ಸ್ಥಳೀಯ ಉತ್ಪನ್ನಗಳಿಗೆ ಜಾಗತಿಕ ಮನ್ನಣೆ ನೀಡುವ ಅಭಿಯಾನದ ನಾಯಕರು. ನೀವು ಭಾರತದ ಕೈಗಾರಿಕೆಗಳ ಬೆನ್ನೆಲುಬು ಇದ್ದಂತೆ ಮತ್ತು ಆದ್ದರಿಂದ ನೀವು ಅಭಿವೃದ್ಧಿ ಹೊಂದಿದ ಭಾರತ, ಸ್ವಾವಲಂಬಿ ಭಾರತ ನಿರ್ಮಾಣ ಮಾಡಲು ಹೆಚ್ಚಿನ ಪಾತ್ರ ವಹಿಸಬೇಕು.
ಸ್ನೇಹಿತರೇ
ನೀವು ಮತ್ತೊಂದು ವಿಷಯವನ್ನು ಸ್ಮರಿಸಿಕೊಳ್ಳಬೇಕು. ಇಂದು ಜಗತ್ತಿನ ಹಲವು ಪ್ರಮುಖ ರಾಷ್ಟ್ರಗಳು ತಮ್ಮ ಕನಸುಗಳನ್ನು ಸಾಕಾರಗೊಳಿಸಲು ಮತ್ತು ವೇಗವಾಗಿ ಸಾಗಲು ಕೌಶಲ್ಯ ಹೊಂದಿದ ಕಾರ್ಯಶಕ್ತಿ ಅಗತ್ಯವಿದೆ. ದೇಶ, ವಿದೇಶಗಳಲ್ಲಿ ನಿಮಗಾಗಿ ಅವಕಾಶಗಳು ಕಾಯುತ್ತಿವೆ. ಬದಲಾಗುತ್ತಿರುವ ಜಾಗತಿಕ ಪರಿಸ್ಥಿತಿಗಳಲ್ಲಿ ಭಾರತದ ಮೇಲೆ ಜಗತ್ತಿನ ವಿಶ್ವಾಸವೂ ಸಹ ನಿರಂತರವಾಗಿ ಬೆಳೆಯುತ್ತಿದೆ. ತನ್ನ ಕೌಶಲ್ಯ ಹೊಂದಿದ ಕಾರ್ಯಶಕ್ತಿಯ ಮೂಲಕ ಕೊರೋನಾ ಸಮಯದಲ್ಲಿ ಮತ್ತು ಅತಿದೊಡ್ಡ ಸವಾಲುಗಳಿಗೆ ಯುವ ಸಮೂಹ ಪರಿಹಾರಗಳನ್ನು ದೊರಕಿಸಿಕೊಡುವ ಸಾಮರ್ಥ್ಯವನ್ನು ಭಾರತ ನಿರೂಪಿಸಿದೆ. ಇಂದು ಆರೋಗ್ಯ ಸೇವೆ ಇರಬಹುದು, ಹೋಟೆಲ್ – ಆಸ್ಪತ್ರೆ ನಿರ್ವಹಣೆ, ಡಿಜಿಟಲ್ ಪರಿಹಾರಗಳು ಅಥವಾ ವಿಪತ್ತು ನಿರ್ವಹಣೆಯೇ ಆಗಿರಬಹುದು ಭಾರತದ ಯುವ ಜನತೆ ತನ್ನ ಕೌಶಲ್ಯದ ಮೂಲಕ ಪ್ರತಿಯೊಂದು ದೇಶದಲ್ಲೂ ತನ್ನ ಗುರುತುಗಳನ್ನು ಮೂಡಿಸುತ್ತಿದೆ. ಭಾರತದ ಜನ ನಿರ್ದಿಷ್ಟ ಕಟ್ಟಡವನ್ನು ನಿರ್ಮಿಸಿದ್ದಾರೆ ಅಥವಾ ಒಂದು ವಿಶೇಷ ಯೋಜನೆಯನ್ನು ಭಾರತೀಯರು ಪೂರ್ಣಗೊಳಿಸಿದ್ದಾರೆ ಎಂದು ತಮ್ಮ ವಿದೇಶಿ ಭೇಟಿ ಸಂದರ್ಭದಲ್ಲಿ ಪ್ರಮುಖ ನಾಯಕರು ಹೇಳಿದ್ದು ತಮಗೆ ನೆನಪಿದೆ. ಈ ನಂಬಿಕೆಯ ಸಂಪೂರ್ಣ ಪ್ರಯೋಜನವನ್ನು ಸಹ ನೀವು ಪಡೆದುಕೊಳ್ಳಬೇಕು.
ಸ್ನೇಹಿತರೇ
ಇಂದು ನಾನು ನಿಮಗೆ ಮತ್ತೊಂದು ಮನವಿ ಮಾಡುತ್ತೇನೆ. ಇಂದು ನೀವು ಏನನ್ನು ಕಲಿಯುತ್ತೀರೋ ನಿಜವಾಗಿಯೂ ಅದು ನಿಮ್ಮ ಭವಿಷ್ಯಕ್ಕೆ ಆಧಾರವಾಗುತ್ತದೆ, ಭವಿಷ್ಯಕ್ಕೆ ಅನುಗುಣವಾಗಿ ನೀವು ಸಹ ನಿಮ್ಮ ಕೌಶಲ್ಯವನ್ನು ಮೇಲ್ದರ್ಜೆಗೇರಿಸಿಕೊಳ್ಳಬೇಕು. ಆದ್ದರಿಂದ ಕೌಶಲ್ಯದ ವಿಷಯ ಬಂದರೆ ಕೌಶಲ್ಯವಂತರಾಗಬೇಕು, ಮರು ಕೌಶಲ್ಯ ಪಡೆಯಬೇಕು ಮತ್ತು ಕೌಶಲ್ಯವನ್ನು ಮೇಲ್ದರ್ಜೆಗೇರಿಸಿಕೊಳ್ಳಬೇಕು. ನೀವು ಯಾವುದೇ ವಲಯದಲ್ಲಿರಲಿ, ಹೊಸದಾಗಿ ಏನು ನಡೆಯುತ್ತಿದೆ ಎಂಬುದರತ್ತ ಕಣ್ಣು ತೆರೆದು ನೋಡಿ. ಉದಾಹರಣೆಗೆ ಇಂದು ಸಾಮಾನ್ಯವಾಗಿ ಯಾರೋ ಒಬ್ಬರು ಆಟೋ ಮೊಬೈಲ್ ನ ಸಾಮಾನ್ಯ ಕೋರ್ಸ್ ಅಧ್ಯಯನ ಮಾಡಿದ್ದರೆ, ಬೇಡಿಕೆಗೆ ಅನುಗುಣವಾಗಿ ವಿದ್ಯುನ್ಮಾನ ವಾಹನಗಳ ವಲಯದಲ್ಲಿ ಮರುಕೌಶಲ್ಯ ಹೊಂದಬೇಕು. ಇದೇ ರೀತಿ ಪ್ರತಿಯೊಂದು ವಲಯದಲ್ಲಿ ವಿಷಯಗಳು ತ್ವರಿತವಾಗಿ ಬದಲಾವಣೆಯಾಗುತ್ತಿದೆ. ಆದ್ದರಿಂದ ಕೌಶಲ್ಯವನ್ನು ಮೇಲ್ದರ್ಜೆಗೇರಿಸಿಕೊಳ್ಳಿ ಮತ್ತು ಬದಲಾವಣೆಗೆ ಅನುಗುಣವಾಗಿ ನಿಮ್ಮ ಕೌಶಲ್ಯ ಮತ್ತು ನಾವೀನ್ಯವನ್ನು ಹೆಚ್ಚಿಸಿಕೊಳ್ಳಿ. ನಿಮ್ಮ ವಲಯದಲ್ಲಿ ಯಾವ ಹೊಸ ಕೌಶಲ್ಯ ನಿಮ್ಮ ಬೆಳವಣಿಗೆಗೆ ಹಲವು ಪಟ್ಟು ಅನುಕೂಲವಾಗುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಸಹ ಅಷ್ಟೇ ಮುಖ್ಯ. ಆದ್ದರಿಂದ ನೀವು ಹೊಸ ಕೌಶಲ್ಯಗಳನ್ನು ಕಲಿಯಬೇಕು ಮತ್ತು ನಿಮ್ಮ ಜ್ಞಾನವನ್ನು ಸಹ ಹಂಚಿಕೊಳ್ಳಿ. ಈ ವೇಗದಲ್ಲಿ ನೀವು ಮುನ್ನಡೆಯುತ್ತೀರಿ ಎಂದು ತಮಗೆ ಖಚಿತವಾಗಿದೆ ಮತ್ತು ನಿಮ್ಮ ಕೌಶಲ್ಯದ ಮೂಲಕ ನವ ಭಾರತದ ಉತ್ತಮ ಭವಿಷ್ಯದತ್ತ ಸಾಗಲು ನಿರ್ದೇಶನ ನೀಡುತ್ತದೆ.
ಮತ್ತು ಸ್ನೇಹಿತರೇ, ನಿಮಗೆ ಮತ್ತೊಂದು ವಿಷಯವನ್ನು ಸೇರಿಸಲು ನಾನು ಬಯಸುತ್ತಿದ್ದು, ನಿಮ್ಮನ್ನು ನೀವು ಕಡಿಮೆ ಅಂದಾಜು ಮಾಡಿಕೊಳ್ಳಬೇಡಿ. ನಿಮ್ಮ ಕೌಶಲ್ಯ, ಸಾಮರ್ಥ್ಯ, ನಿರ್ಣಯ ಮತ್ತು ಅರ್ಪಣಾ ಮನೋಭಾವನೆ ಭವ್ಯ ಭವಿಷ್ಯಕ್ಕೆ ಅತಿ ದೊಡ್ಡ ಉಜ್ವಲ ಆಸ್ತಿಯಾಗಿದೆ. ಪ್ರತಿಭೆ, ಕೌಶಲ್ಯ ಮತ್ತು ದೊಡ್ಡ ಕನಸುಗಳನ್ನು ಕಾಣುತ್ತಿರುವ ಯುವ ಸಮೂಹದೊಂದಿಗೆ ವಿಶ್ವಕರ್ಮ ಜಯಂತಿಯಂದು ಸಂವಾದ ನಡೆಸಲು ತಮಗೆ ಅವಕಾಶ ದೊರೆತಿದ್ದು, ಇದೊಂದು ಹೆಮ್ಮೆಯ ವಿಷಯವಾಗಿದೆ. ಇದೇ ಸ್ಫೂರ್ತಿಯೊಂದಿಗೆ ಭಗವಾನ್ ವಿಶ್ವಕರ್ಮರ ಆಶಿರ್ವಾದ ನಿಮ್ಮ ಮೇಲೆ ನಿರಂತರವಾಗಿ ಇರಲಿ, ಹಲವಾರು ಕೌಶಲ್ಯಗಳು ಮುಂದುವರೆಯಲಿ ಮತ್ತು ವಿಸ್ತರಣೆಯಾಗಲಿ, ನಿಮಗೆಲ್ಲರಿಗೂ ಅನೇಕ ಶುಭ ಹಾರೈಕೆಗಳು
ತುಂಬಾ ಧನ್ಯವಾದಗಳು!