"ಭಾರತವು ವರ್ಷದ ಮೊದಲ ತಿಂಗಳ ಮೊದಲ ವಾರದಲ್ಲಿ ತನ್ನ ಲಸಿಕೆಯ 1.5 ಶತಕೋಟಿ ಲಸಿಕೆ ಡೋಸ್ ಗಳ ಐತಿಹಾಸಿಕ ಮೈಲಿಗಲ್ಲನ್ನು ಸಾಧಿಸುತ್ತಿದೆ"
"ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ 150 ಕೋಟಿ ಡೋಸ್ ಗಳ ಲಸಿಕೆ, ದೇಶದ ಹೊಸ ಇಚ್ಛಾಶಕ್ತಿಯ ಮಹತ್ವದ ಸಾಧನೆ ಮತ್ತು ಸಂಕೇತವಾಗಿದೆ"
"ಆಯುಷ್ಮಾನ್ ಭಾರತ್ ಯೋಜನೆ ಅಗ್ಗದ ಮತ್ತು ಅಂತರ್ಗತ ಆರೋಗ್ಯ ರಕ್ಷಣೆಯ ದೃಷ್ಟಿಯಿಂದ ಜಾಗತಿಕ ಮಾನದಂಡವಾಗುತ್ತಿದೆ"
"ಪಿಎಂ-ಜೆಎವೈ ಅಡಿಯಲ್ಲಿ, ದೇಶಾದ್ಯಂತದ ಆಸ್ಪತ್ರೆಗಳಲ್ಲಿ 2 ಕೋಟಿ 60 ಲಕ್ಷಕ್ಕೂ ಹೆಚ್ಚು ರೋಗಿಗಳು ಉಚಿತ ಚಿಕಿತ್ಸೆ ಪಡೆದಿದ್ದಾರೆ"

ನಮಸ್ಕಾರ, ಪಶ್ಚಿಮ ಬಂಗಾಳದ ಗೌರವಾನ್ವಿತ ಮುಖ್ಯಮಂತ್ರಿ ಕುಮಾರಿ ಮಮತಾ ಜಿ,  ಕೇಂದ್ರ ಸಚಿವ ಸಂಪುಟದಲ್ಲಿ ನನ್ನ ಸಹೋದ್ಯೋಗಿಗಳಾಗಿರುವ ಮನ್ಸುಖ್ ಮಾಂಡವಿಯಾ ಜಿ, ಸುಭಾಸ್ ಸರ್ಕಾರ್ ಜಿ. ಶಾಂತನು ಠಾಕೂರ್ ಜಿ, ಜಾನ್ ಬಾರ್ಲಾ ಜಿ ಮತ್ತು ನಿಸಿತ್ ಪ್ರಮಾಣಿಕ್ ಜಿ, ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಜಿ. ಸಿ.ಎನ್.ಐ.ಸಿ ಕೋಲ್ಕತ್ತಾದ ಆಡಳಿತ ಮಂಡಳಿ, ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲಾ ಪರಿಶ್ರಮಪಡುವ ಮಿತ್ರರೇ, ಇತರ ಗಣ್ಯರು, ಮಹಿಳೆಯರು ಮತ್ತು ಮಹನೀಯರೇ….!

ದೇಶದ ಪ್ರತಿಯೊಬ್ಬ ನಾಗರಿಕರಿಗೂ ಅತ್ಯುತ್ತಮ ಆರೋಗ್ಯ ಸೌಲಭ್ಯಗಳನ್ನು ಒದಗಿಸುವ ರಾಷ್ಟ್ರೀಯ ಸಂಕಲ್ಪವನ್ನು ಬಲಪಡಿಸುವ ಮೂಲಕ ಇಂದು ನಾವು ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದೇವೆ. ಚಿತ್ತರಂಜನ್ ರಾಷ್ಟ್ರೀಯ ಕ್ಯಾನ್ಸರ್ ಕೇಂದ್ರದ ಈ ಎರಡನೇ ಕ್ಯಾಂಪಸ್, ಪಶ್ಚಿಮ ಬಂಗಾಳದ ಪ್ರಜೆಗಳಿಗಾಗಿ ಹಲವು ಮಹತ್ವದ ಸೌಲಭ್ಯಗಳೊಂದಿಗೆ ನಿರ್ಮಾಣವಾಗಿದೆ. ಇದು ವಿಶೇಷವಾಗಿ ಕ್ಯಾನ್ಸರ್‌ನೊಂದಿಗೆ ಹೋರಾಡುತ್ತಿರುವ ತಮ್ಮ ಬಂಧು ಬಾಂಧವರನ್ನು ಒಳಗೊಂಡ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಭಾರಿ ನೆಮ್ಮದಿಯನ್ನು ನೀಡುತ್ತದೆ. ಕೋಲ್ಕತ್ತಾದಲ್ಲಿರುವ ಈ ಆಧುನಿಕ ಆಸ್ಪತ್ರೆಯಿಂದಾಗಿ ಕ್ಯಾನ್ಸರ್ ಸಂಬಂಧಿ ಚಿಕಿತ್ಸೆಗಳು, ಶಸ್ತ್ರಚಿಕಿತ್ಸೆಗಳು ಮತ್ತು ಥೆರಪಿಗಳು  ಅತ್ಯಂತ ಸುಲಭವಾಗಿ ಲಭ್ಯವಾಗಲಿವೆ.

ಮಿತ್ರರೇ,

 ದೇಶ ಇಂದು ಮತ್ತೊಂದು ಮಹತ್ವದ ಮೈಲಿಗಲ್ಲು ದಾಟಿದೆ. ದೇಶದಲ್ಲಿ 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡಿಕೆ ಕಾರ್ಯ ಆರಂಭವಾಗಿದೆ. ಇಂದು, ವರ್ಷದ ಮೊದಲ ತಿಂಗಳ ಮೊದಲ ವಾರದಲ್ಲಿ, ಭಾರತವು 150 ಕೋಟಿ ಅಥವಾ 1.5 ಬಿಲಿಯನ್ ಲಸಿಕೆ ಡೋಸ್‌ ನೀಡುವ ಐತಿಹಾಸಿಕ ಮೈಲಿಗಲ್ಲು ಸಹ ಸಾಧಿಸುತ್ತಿದೆ. ಒಂದು ವರ್ಷದೊಳಗೆ 150 ಕೋಟಿ ಲಸಿಕೆ ಡೋಸ್ ! ಅಂಕಿ ಸಂಖ್ಯೆಗಳ ದೃಷ್ಟಿಯಿಂದ ಇದು ಬಹು ದೊಡ್ಡದು.  ಪ್ರಪಂಚದ ಬಹುತೇಕ ಅಭಿವೃದ್ಧಿ ಹೊಂದಿದ ದೇಶಗಳಿಗೆ ಇದು ಆಶ್ಚರ್ಯ ಚಕಿತವಾದುದು,ಆದರೆ ಭಾರತಕ್ಕೆ ಇದು 130 ಕೋಟಿ ದೇಶವಾಸಿಗಳ ಶಕ್ತಿಯ ಸಂಕೇತವಾಗಿದೆ. ಭಾರತಕ್ಕೆ ಇದು ಹೊಸ ಇಚ್ಛಾಶಕ್ತಿ ಸಂಕೇತವಾಗಿದ್ದು, ಅದು ಅಸಾಧ್ಯವನ್ನು ಸಾಧ್ಯವಾಗಿಸಲು ಏನು ಬೇಕಾದರೂ ಮಾಡುವ ಧೈರ್ಯವನ್ನು ನೀಡಿದೆ. ಇದು ಭಾರತಕ್ಕೆ ಆತ್ಮ ವಿಶ್ವಾಸ, ಸ್ವಾವಲಂಬನೆ ಮತ್ತು ಸ್ವಾಭಿಮಾನದ ಸಂಕೇತವಾಗಿದೆ! ಅದರ ಅಂಗವಾಗಿ ಇಂದು ನಾನು ಎಲ್ಲಾ ದೇಶವಾಸಿಗಳನ್ನು ಅಭಿನಂದಿಸುತ್ತೇನೆ.

ಮಿತ್ರರೇ,

ಕೊರೊನಾ ವಿರುದ್ಧದ ನಮ್ಮ ಹೋರಾಟದಲ್ಲಿ ನಮ್ಮ ಲಸಿಕೆ ಕಾರ್ಯಕ್ರಮವು ಅತ್ಯಂತ ಮುಖ್ಯವಾದುದು, ಏಕೆಂದರೆ ಕೊರೊನಾ ಸೋಂಕು ಅಪಾಯಕಾರಿಯದ್ದಾಗಿದೆ. ವಿಶ್ವ ಇಂದು ಮತ್ತೊಮ್ಮೆ ಕೊರೊನಾದ ಹೊಸ ರೂಪಾಂತರಿಯನ್ನು ಎದುರಿಸುತ್ತಿದೆ ಮತ್ತು ಅದು ಒಮಿಕ್ರಾನ್ ಆಗಿದೆ. ಈ ಹೊಸ ರೂಪಾಂತರಿಯಿಂದಾಗಿ ನಮ್ಮ ದೇಶದಲ್ಲಿಯೂ ಪ್ರಕರಣಗಳು ಕ್ಷಿಪ್ರವಾಗಿ ಹೆಚ್ಚಾಗುತ್ತಿವೆ. ಆದ್ದರಿಂದ 150 ಕೋಟಿ ಲಸಿಕೆ ಡೋಸ್‌ಗಳ ಈ ರಕ್ಷಾ ಕವಚ ನಮಗೆ ಅತಿ ಮುಖ್ಯವಾಗಿದೆ. ಭಾರತದ ವಯಸ್ಕ ಜನಸಂಖ್ಯೆಯ ಶೇಕಡ 90 ಕ್ಕಿಂತ ಹೆಚ್ಚು ಜನರು ಇಂದು ಒಂದು ಡೋಸ್ ಲಸಿಕೆಗಳನ್ನು ಪಡೆದಿದ್ದಾರೆ. ಕೇವಲ ಐದೇ ದಿನಗಳಲ್ಲಿ 1.5 ಕೋಟಿಗೂ ಹೆಚ್ಚು ಮಕ್ಕಳಿಗೆ ಲಸಿಕೆ ಹಾಕಲಾಗಿದೆ. ಈ ಸಾಧನೆಯ ಯಶಸ್ಸು ಇಡೀ ದೇಶಕ್ಕೆ, ಪ್ರತಿ ಸರ್ಕಾರಗಳಿಗೆ  ಸೇರಬೇಕಾಗಿದೆ. ಈ ಸಾಧನೆಗಾಗಿ ನಾನು ವಿಶೇಷವಾಗಿ ವಿಜ್ಞಾನಿಗಳು, ಲಸಿಕೆ ಉತ್ಪಾದಕರು ಮತ್ತು ಆರೋಗ್ಯ ಕ್ಷೇತ್ರದ ನಮ್ಮ ಸಹೋದ್ಯೋಗಿಗಳಿಗೆ ಧನ್ಯವಾದಗಳನ್ನು ಹೇಳಬಯಸುತ್ತೇನೆ.  ಪ್ರತಿಯೊಬ್ಬರ ಸಾಮೂಹಿಕ ಪ್ರಯತ್ನದ ಮೂಲಕವೇ ದೇಶವು ಆ ಸಂಕಲ್ಪವನ್ನು ಉತ್ತುಂಗಕ್ಕೆ ಕೊಂಡೊಯ್ದಿದೆ, ಏಕೆಂದರೆ ನಾವು ತೀರಾ ತಳಮಟ್ಟದಿಂದ ಅಕ್ಷರಶಃ ಮೊದಲಿನಿಂದ ಆರಂಭಿಸಿದ್ದೇವೆ.

ಮಿತ್ರರೇ,

‘ಸಬ್ ಕಾ ಪ್ರಯಾಸ್’ (ಎಲ್ಲರ ಪ್ರಯತ್ನ)ದ ಮನೋಭಾವವು ದೇಶಕ್ಕೆ 100 ವರ್ಷಗಳ ಅತಿ ದೊಡ್ಡ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಡಲು ಶಕ್ತಿಯನ್ನು ನೀಡುತ್ತಿದೆ. ಮೂಲಭೂತ ಮತ್ತು ನಿರ್ಣಾಯಕ ಮೂಲಸೌಕರ್ಯಗಳನ್ನು ನಿರ್ಮಿಸುವುದರಿಂದ ಹಿಡಿದು ಕೋವಿಡ್ ವಿರುದ್ಧ ಹೋರಾಡುವವರೆಗೆ, ವಿಶ್ವದ ಅತ್ಯಂತ ವೇಗದ ಉಚಿತ ಲಸಿಕೆ ಅಭಿಯಾನದವರೆಗೆ ಆ ಶಕ್ತಿ ಇಂದು ಎಲ್ಲೆಡೆ ಕಾಣಿಸುತ್ತಿದೆ. ಭೌಗೋಳಿಕ, ಆರ್ಥಿಕ ಮತ್ತು ಸಾಮಾಜಿಕ ವೈವಿಧ್ಯದೊಂದಿಗೆ ನಮ್ಮ ದೇಶದಲ್ಲಿ ಪರೀಕ್ಷೆಯಿಂದ ಲಸಿಕೆ ನೀಡಿಕೆವರೆಗೆ ಭಾರಿ ಪ್ರಮಾಣದ ಮೂಲಸೌಕರ್ಯವನ್ನು ಅತ್ಯಂತ ಕ್ಷಿಪ್ರಗತಿಯಲ್ಲಿ ಅಭಿವೃದ್ಧಿಪಡಿಸುವ ಮೂಲಕ ಇಡೀ ಜಗತ್ತಿಗೆ ಮಾದರಿಯಾಗಿದ್ದೇವೆ.

ಮಿತ್ರರೇ,

ಗಾಢವಾದ ಕತ್ತಲೆಯ ಹಿನ್ನೆಲೆಯಲ್ಲಿ ಬೆಳಕು ಹೆಚ್ಚು ಮುಖ್ಯವಾಗುತ್ತದೆ. ಭಾರಿ ಸವಾಲುಗಳಿದ್ದಾಗ ನೈತಿಕತೆ ಹೆಚ್ಚು ಮುಖ್ಯವಾಗುತ್ತದೆ ಮತ್ತು ಯುದ್ಧವು ಕ್ಲಿಷ್ಟಕರವಾದಾಗ ಶಸ್ತ್ರಾಸ್ತ್ರಗಳು ಹೆಚ್ಚು ಮುಖ್ಯವಾಗುತ್ತವೆ. ಕೇಂದ್ರ ಸರ್ಕಾರವು ಈವರೆಗೆ ಪಶ್ಚಿಮ ಬಂಗಾಳಕ್ಕೆ ಸುಮಾರು 110 ಮಿಲಿಯನ್ ಡೋಸ್ ಕೊರೊನಾ ಲಸಿಕೆಗಳನ್ನು ಉಚಿತವಾಗಿ ನೀಡಿದೆ. ಬಂಗಾಳಕ್ಕೆ 1,500 ಕ್ಕೂ ಅಧಿಕ ವೆಂಟಿಲೇಟರ್‌ಗಳು ಮತ್ತು 9,000 ಹೊಸ ಆಮ್ಲಜನಕ ಸಿಲಿಂಡರ್‌ ನೀಡಲಾಗಿದೆ. 49 ಹೊಸ ಪಿಎಸ್ಎ  ಆಮ್ಲಜನಕ ಘಟಕಗಳು ಸಹ ಕಾರ್ಯನಿರ್ವಹಣೆ ಮಾಡಲಾರಂಭಿಸಿವೆ.ಇವು ಕೊರೊನಾ ವಿರುದ್ಧದ ಹೋರಾಟದಲ್ಲಿ ಪಶ್ಚಿಮ ಬಂಗಾಳದ ಜನರಿಗೆ ನೆರವಾಗುತ್ತವೆ.

ಮಿತ್ರರೇ,

ಚಿತ್ತರಂಜನ್ ರಾಷ್ಟ್ರೀಯ ಕ್ಯಾನ್ಸರ್ ಕೇಂದ್ರದ ಆವರಣದಲ್ಲಿರುವ ದೇಶಬಂಧು ಚಿತ್ತರಂಜನ್ ದಾಸ್ ಜಿ ಮತ್ತು ಮಹರ್ಷಿ ಸುಶ್ರುತರ ಪ್ರತಿಮೆಗಳು ನಮಗೆಲ್ಲರಿಗೂ ಹೆಚ್ಚಿನ ಸ್ಫೂರ್ತಿಯನ್ನು ತುಂಬುತ್ತವೆ. ದೇಶಬಂಧು ಜಿ ಹೀಗೆ ಹೇಳುತ್ತಿದ್ದರು  " ನಾನು ಮತ್ತೆ ಮತ್ತೆ ಈ ದೇಶದಲ್ಲಿ ಹುಟ್ಟಲು ಬಯಸುತ್ತೇನೆ, ಏಕೆಂದರೆ ನಾನು ಈ ದೇಶಕ್ಕಾಗಿ ಜೀವಿಸಬೇಕಾಗಿದೆ ಮತ್ತು ಅದಕ್ಕಾಗಿ ದುಡಿಯಬೇಕಾಗಿದೆ’’.

ಮಹರ್ಷಿ ಸುಶ್ರುತ ಆರೋಗ್ಯ ಕ್ಷೇತ್ರದಲ್ಲಿ ಪ್ರಾಚೀನ ಭಾರತೀಯ ಜ್ಞಾನದ ಪ್ರತಿಬಿಂಬವಾಗಿದ್ದಾರೆ.  ಅಂತಹ ಸ್ಫೂರ್ತಿಗಳೊಂದಿಗೆ, ದೇಶವಾಸಿಗಳ ಆರೋಗ್ಯಕ್ಕೆ ಸಂಬಂಧಿಸಿದ ಸಂಪೂರ್ಣ ಪರಿಹಾರಗಳನ್ನು ಕಂಡುಹಿಡಿಯಲು ಕಳೆದ ಕೆಲವು ವರ್ಷಗಳಲ್ಲಿ ಸಮಗ್ರ ಪ್ರಯತ್ನಗಳನ್ನು ಕೈಗೊಳ್ಳಲಾಗುತ್ತಿದೆ. ಇಂದು ನಾವು ‘ಸಬ್ ಕಾ ಪ್ರಯಾಸ್’ ಎಂಬ ಸ್ಫೂರ್ತಿಯೊಂದಿಗೆ ದೇಶದ ಆರೋಗ್ಯ ಮೂಲಸೌಕರ್ಯ ಮತ್ತು ಆರೋಗ್ಯ ಯೋಜನೆಗಳನ್ನು ರಾಷ್ಟ್ರೀಯ ಸಂಕಲ್ಪಗಳೊಂದಿಗೆ ಸಂಯೋಜಿಸುವ ಕೆಲಸಕ್ಕೂ ವೇಗಪಡೆದುಕೊಳ್ಳುತ್ತಿದೆ.

ಆರೋಗ್ಯ ಕ್ಷೇತ್ರದಲ್ಲಿ ಇಂದು ಹಾಲಿ ಇರುವ ಸವಾಲುಗಳನ್ನು ಎದುರಿಸಲು ಹಾಗೂ ಭವಿಷ್ಯವನ್ನು ಸುರಕ್ಷಿತಗೊಳಿಸಲು ನಾವು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ರೋಗದ ಮೂಲಗಳನ್ನು ನಿರ್ಮೂಲ ಮಾಡಲು ಪ್ರಯತ್ನ ನಡೆದಿದೆ. ನಮ್ಮ ಸರ್ಕಾರವು ಅನಾರೋಗ್ಯದ ವೇಳೆ ಚಿಕಿತ್ಸೆಯು ಅತ್ಯಂತ ಸುಲಭವಾಗಿ ಮತ್ತು ಕೈಗೆಟುಕುವಂತೆ ಮಾಡಲು ಹೆಚ್ಚು ಗಮನಹರಿಸುತ್ತಿದೆ. ಅಲ್ಲದೆ, ಇದೇ ವೇಳೆ  ವೈದ್ಯರು ಮತ್ತು ವೈದ್ಯಕೀಯ ಮೂಲಸೌಕರ್ಯಗಳ ಸಾಮರ್ಥ್ಯ ವಿಸ್ತರಿಸುವ ಮೂಲಕ ಆರೋಗ್ಯ ಸೇವೆಗಳನ್ನು ಸುಧಾರಿಸಲಾಗುತ್ತಿದೆ.

ಮಿತ್ರರೇ,

ಆದ್ದರಿಂದ, ದೇಶವು ತನ್ನ ಆರೋಗ್ಯ ವಲಯವನ್ನು ಪರಿವರ್ತಿಸಲು ಆರೋಗ್ಯ ಮುನ್ನೆಚ್ಚರಿಕೆಗಳು, ಕೈಗೆಟುಕುವ ಆರೋಗ್ಯ, ಪೂರೈಕೆ ಕಡೆಯಿಂದ ಮಧ್ಯಪ್ರವೇಶಗಳು ಮತ್ತು ಸಮರೋಪಾದಿ ಅಭಿಯಾನಗಳಿಗೆ ವೇಗ ನೀಡುತ್ತಿದೆ. ಯೋಗ, ಆಯುರ್ವೇದ, ಫಿಟ್ ಇಂಡಿಯಾ ಚಳವಳಿ, ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ ಇತ್ಯಾದಿಗಳ ಮೂಲಕ ಆರೋಗ್ಯ ಮುನ್ನೆಚ್ಚರಿಕೆ ಕ್ರಮಗಳ ಮೂಲಕ ರಕ್ಷಣೆಗೆ ಉತ್ತೇಜನ ನೀಡಲಾಗುತ್ತಿದೆ. ‘ಸ್ವಚ್ಛ ಭಾರತ್ ಮಿಷನ್’ ಮತ್ತು ‘ಹರ್ ಘರ್ ಜಲ್’ ನಂತಹ ರಾಷ್ಟ್ರೀಯ ಯೋಜನೆಗಳು ಗ್ರಾಮ ಮತ್ತು ಬಡ ಕುಟುಂಬಗಳನ್ನು ಅನೇಕ ರೋಗಗಳಿಂದ ರಕ್ಷಿಸಲು ನೆರವಾಗುತ್ತಿವೆ. ದೇಶದ ಅನೇಕ ರಾಜ್ಯಗಳಲ್ಲಿ ಆರ್ಸೆನಿಕ್ ಮತ್ತು ಇತರ ಮೂಲಗಳಿಂದ ಕಲುಷಿತಗೊಂಡ ನೀರು ಕ್ಯಾನ್ಸರ್‌ಗೆ ಪ್ರಮುಖ ಕಾರಣವಾಗಿದೆ. ಈ ಸಮಸ್ಯೆಯನ್ನು ಪರಿಹರಿಸುವಲ್ಲಿ ‘ಹರ್ ಘಲ್ ಜಲ್’ (ಮನೆ ಮನೆಗೂ ಶುದ್ಧ ಕುಡಿಯುವ ನೀರು) ಅಭಿಯಾನ ಸಾಕಷ್ಟು ಸಹಕಾರಿಯಾಗುತ್ತಿದೆ.

ಮಿತ್ರರೇ,

ಚಿಕಿತ್ಸೆಯು ಲಭ್ಯವಿರಲಿಲ್ಲ ಅಥವಾ ಅದು ತುಂಬಾ ದುಬಾರಿಯಾಗಿದೆ ಎಂಬ ಕಾರಣಕ್ಕೆ ನಮ್ಮ ಬಡ ಮತ್ತು ಕೆಳ ಮಧ್ಯಮ ವರ್ಗದ ಜನರು ದೀರ್ಘಕಾಲದವರೆಗೆ ಆರೋಗ್ಯ ಸೌಲಭ್ಯಗಳಿಂದ ವಂಚಿತರಾಗಿದ್ದರು. ಬಡ ಮನುಷ್ಯ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದರೆ, ಅವರಿಗೆ ಕೇವಲ ಎರಡು ಆಯ್ಕೆಗಳಿದ್ದವು, ಒಂದು ಸಾಲವನ್ನು ತೆಗೆದುಕೊಳ್ಳುವುದು, ಅವನ ಮನೆ ಅಥವಾ ಭೂಮಿಯನ್ನು ಮಾರಾಟ ಮಾಡುವುದು ಅಥವಾ ಚಿಕಿತ್ಸೆಯನ್ನು ಪಡೆಯದಿರುವುದು. ಕ್ಯಾನ್ಸರ್ ಅಂತಹ ಒಂದು ಮಾರಕ ಕಾಯಿಲೆಯಾಗಿದ್ದು, ಬಡವರು ಮತ್ತು ಮಧ್ಯಮ ವರ್ಗದ ಜನರು ಅದರ ಹೆಸರು ಕೇಳಿದರೇನೇ ಹೃದಯ ಹೋಗುವಂತಹ ಕಾಯಿಲೆಯಾಗಿದೆ. ಬಡವರನ್ನು ಈ ವಿಷವರ್ತುಲ ಮತ್ತು ಭಯದಿಂದ ಹೊರತರಲು ಕೈಗೆಟುಕುವ ಮತ್ತು ಸುಲಭವಾಗಿ ಲಭ್ಯವಾಗುವ ಚಿಕಿತ್ಸೆಗಳನ್ನು ದೊರಕಿಸಿಕೊಡಲು ದೇಶವು ನಿರಂತರ ಕ್ರಮಗಳನ್ನು ಕೈಗೊಳ್ಳುತ್ತಿದೆ. ಹಲವು ವರ್ಷಗಳಿಂದೀಚೆಗೆ ಕ್ಯಾನ್ಸರ್ ಚಿಕಿತ್ಸೆಗೆ ಅಗತ್ಯವಿರುವ ಔಷಧಿಗಳ ಬೆಲೆ ಗಣನೀಯವಾಗಿ ತಗ್ಗಿದೆ. ಇದೀಗ ಮನ್ಸುಖ್ ಭಾಯಿ ಅವರು ಅದನ್ನು ವಿವರವಾಗಿ ಹೇಳುತ್ತಿದ್ದರು. ಪಶ್ಚಿಮ ಬಂಗಾಳ ಸೇರಿದಂತೆ ದೇಶದಾದ್ಯಂತ ಸ್ಥಾಪಿಸಲಾದ 8,000 ಕ್ಕೂ ಹೆಚ್ಚು ಜನೌಷಧಿ ಕೇಂದ್ರಗಳಲ್ಲಿ ಔಷಧಿಗಳು ಮತ್ತು ಶಸ್ತ್ರಚಿಕಿತ್ಸಾ ಸಾಧನಗಳನ್ನು ಅತಿ ಕಡಿಮೆ ಬೆಲೆಯಲ್ಲಿ ಒದಗಿಸಲಾಗುತ್ತಿದೆ. ಈ ಮಳಿಗೆಗಳಲ್ಲಿ 50ಕ್ಕೂ ಹೆಚ್ಚು ಕ್ಯಾನ್ಸರ್ ಔಷಧಿಗಳೂ ಅತ್ಯಂತ ಕಡಿಮೆ ಬೆಲೆಯಲ್ಲಿ ದೊರಕುತ್ತಿವೆ. ಕ್ಯಾನ್ಸರ್‌ಗೆ ಕೈಗೆಟಕುವ ದರದಲ್ಲಿ ಔಷಧಗಳನ್ನು ಒದಗಿಸಲು ವಿಶೇಷ ಅಮೃತ್ ಮಳಿಗೆಗಳು ದೇಶಾದ್ಯಂತ ಕಾರ್ಯನಿರ್ವಹಿಸುತ್ತಿವೆ. ಸರ್ಕಾರದ ಈ ಸೇವಾ ಮನೋಭಾವ ಮತ್ತು ಸೂಕ್ಷ್ಮ ಸಂವೇದನೆಯು ಬಡವರಿಗೆ ಕೈಗೆಟುಕುವ ದರದಲ್ಲಿ ಚಿಕಿತ್ಸೆಯನ್ನು ಖಾತ್ರಿಪಡಿಸಿಕೊಳ್ಳಲು ನೆರವಾಗಿದೆ. ಸರ್ಕಾರ  500 ಔಷಧಿಗಳ ಬೆಲೆಯನ್ನು ನಿಯಂತ್ರಿಸುವ ಮೂಲಕ ಪ್ರತಿ ವರ್ಷ ರೋಗಿಗಳಿಗೆ ಸುಮಾರು 3,000 ಕೋಟಿ ರೂ.ಗೂ ಅಧಿಕ ಹಣ ಉಳಿತಾಯ ಮಾಡುತ್ತಿದೆ. ಆ ಮೂಲಕ ನಾಗರಿಕರು ಶ್ರಮವಹಿಸಿ ದುಡಿದ ಹಣ ಉಳಿತಾಯವಾಗುತ್ತಿದೆ. ಹೃದ್ರೋಗಕ್ಕೆ ಬಳಸುವ ಸ್ಟೆಂಟ್‌ಗಳ ಬೆಲೆ ನಿಗದಿಯಿಂದಾಗಿ ಹೃದ್ರೋಗಿಗಳು ಪ್ರತಿ ವರ್ಷ 4,500 ಕೋಟಿ ರೂ.ಗೂ ಅಧಿಕ ಹಣ ಉಳಿತಾಯ ಮಾಡುತ್ತಿದ್ದಾರೆ. ನಮ್ಮ ಹಿರಿಯ ನಾಗರಿಕರು, ಹಿರಿಯ ತಾಯಂದಿರು, ಸಹೋದರಿಯರು ಮತ್ತು ಪುರುಷರಿಗೆ ವಿಶೇಷ ಪ್ರಯೋಜನವನ್ನು ದೊರಕಿಸಿಕೊಡಲು ಮೊಣಕಾಲು ಮಂಡಿಚಿಪ್ಪು ಅಳವಡಿಕೆಯ ಬೆಲೆಯನ್ನು ಕಡಿಮೆ ಮಾಡುವ  ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ. ಅದರ ಪರಿಣಾಮ ವೃದ್ಧ ರೋಗಿಗಳಿಗೆ ಪ್ರತಿ ವರ್ಷ 1500 ಕೋಟಿ ಉಳಿತಾಯವಾಗುತ್ತಿದೆ. ಪ್ರಧಾನಮಂತ್ರಿ ರಾಷ್ಟ್ರೀಯ ಡಯಾಲಿಸಿಸ್ ಕಾರ್ಯಕ್ರಮದಡಿ ಸರ್ಕಾರ 12 ಲಕ್ಷ ಬಡ ರೋಗಿಗಳಿಗೆ ಉಚಿತ ಡಯಾಲಿಸಿಸ್ ಸೇವೆ ಒದಗಿಸಿದೆ, ಇದರಿಂದ 520 ಕೋಟಿ ರೂ.ಗೂ ಅಧಿಕ ಹಣ ಉಳಿತಾಯವಾಗಿದೆ.

ಮಿತ್ರರೇ,

ಕೈಗೆಟುಕುವ ಮತ್ತು ಸಾರ್ವತ್ರಿಕ ಆರೋಗ್ಯ ರಕ್ಷಣೆಯ ವಿಷಯದಲ್ಲಿ ಆಯುಷ್ಮಾನ್ ಭಾರತ್ ಯೋಜನೆಯು ಜಾಗತಿಕ ಮಾನದಂಡವಾಗುತ್ತಿದೆ. ಪಿಎಂ-ಎಜೆವೈ ಯೋಜನೆಯಡಿ, ದೇಶಾದ್ಯಂತ 2.6 ಕೋಟಿಗೂ ಅಧಿಕ ರೋಗಿಗಳು ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಪಡೆದಿದ್ದಾರೆ. ಈ ಯೋಜನೆಗಳು ಜಾರಿಯಲ್ಲಿಲ್ಲದಿದ್ದರೆ, ಈ ರೋಗಿಗಳು ತಮ್ಮ ಸ್ವಂತ ಚಿಕಿತ್ಸೆಗಾಗಿ 50,000 ದಿಂದ 60,000 ಕೋಟಿ ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ ಎಂದು ಅಂದಾಜಿಸಲಾಗುತ್ತಿದೆ.

ಮಿತ್ರರೇ,

ಆಯುಷ್ಮಾನ್ ಭಾರತ್ ಯೋಜನೆ ಕೂಡ 17 ಲಕ್ಷಕ್ಕೂ ಅಧಿಕ ಕ್ಯಾನ್ಸರ್ ರೋಗಿಗಳಿಗೆ ನೆರವಾಗಿದೆ. ಈ ರೋಗಿಗಳಿಗೆ ಆಸ್ಪತ್ರೆಯಲ್ಲಿ ಕಿಮೊಥೆರಪಿ, ರೇಡಿಯೊಥೆರಪಿ ಅಥವಾ ಶಸ್ತ್ರಚಿಕಿತ್ಸೆ ಎಲ್ಲ ಸೌಲಭ್ಯಗಳನ್ನು ಉಚಿತವಾಗಿ ನೀಡಲಾಗುತ್ತದೆ. ಸರ್ಕಾರ ಈ ಪ್ರಯತ್ನಗಳನ್ನು ಮಾಡದಿದ್ದರೆ ಎಷ್ಟು ಬಡಜನರ ಜೀವನ ಅಪಾಯಕ್ಕೆ ಅಥವಾ ಎಷ್ಟು ಕುಟುಂಬಗಳು ಸಾಲದ ವಿಷವರ್ತುಲಕ್ಕೆ ಸಿಲುಕಿಕೊಳ್ಳಬಹುದಿತ್ತು ಎಂದು ಊಹಿಸಿಕೊಳ್ಳಿ.

ಮಿತ್ರರೇ,

ಆಯುಷ್ಮಾನ್ ಭಾರತ್ ಕೇವಲ ಉಚಿತ ಚಿಕಿತ್ಸೆಯ ವಿಧಾನವಲ್ಲ, ಆದರೆ ಅದು ಆರಂಭದಲ್ಲಿ ರೋಗ ಪತ್ತೆ ಮತ್ತು ಚಿಕಿತ್ಸೆಗೆ ಅತ್ಯಂತ ಪರಿಣಾಮಕಾರಿ ಎಂಬುದು ದೃಢಪಟ್ಟಿದೆ. ಕ್ಯಾನ್ಸರ್ ನಂತಹ ಎಲ್ಲಾ ಗಂಭೀರ ಕಾಯಿಲೆಗಳಿಗೆ ಇದು ಬಹಳ ಅವಶ್ಯಕ. ಇಲ್ಲದಿದ್ದರೆ, ಹೆಚ್ಚಿನ ಸಂದರ್ಭಗಳಲ್ಲಿ ಕ್ಯಾನ್ಸರ್ ಅನ್ನು ಗುಣಪಡಿಸಲಾಗದ ಕೊನೆಯ ಹಂತದಲ್ಲಿ ಮಾತ್ರ ಪತ್ತೆಹಚ್ಚಲಾಗುತ್ತಿತ್ತು. ಈ ಸಮಸ್ಯೆಯನ್ನು ಹೋಗಲಾಡಿಸಲು 30 ವರ್ಷ ಮೇಲ್ಪಟ್ಟವರಿಗೆ ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಕ್ಯಾನ್ಸರ್ ತಪಾಸಣೆಗೆ ಒತ್ತು ನೀಡಲಾಗುತ್ತಿದೆ. ಆಯುಷ್ಮಾನ್ ಭಾರತ್ ಯೋಜನೆಯಡಿ ಗ್ರಾಮಗಳಲ್ಲಿ ಸ್ಥಾಪಿಸಲಾಗುತ್ತಿರುವ ಸಾವಿರಾರು ಆರೋಗ್ಯ ಮತ್ತು ಯೋಗಕ್ಷೇಮ ಕೇಂದ್ರಗಳು ತುಂಬಾ ಉಪಯುಕ್ತವಾಗಿವೆ. ಬಂಗಾಳದಲ್ಲಿಯೂ ಅಂತಹ 5,000ಕ್ಕೂ ಅಧಿಕ ಆರೋಗ್ಯ ಮತ್ತು ಯೋಗಕ್ಷೇಮ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ದೇಶಾದ್ಯಂತ ಸುಮಾರು 15 ಕೋಟಿ ಜನರನ್ನು ಬಾಯಿ, ಸ್ತನ ಮತ್ತು ಗರ್ಭಕೋಶದ ಕ್ಯಾನ್ಸರ್‌ಗಾಗಿ ಪರೀಕ್ಷಿಸಲಾಗಿದೆ. ತಪಾಸಣೆ ನಂತರ ರೋಗ ಲಕ್ಷಣ ಕಂಡು ಬಂದವರಿಗೆ ಚಿಕಿತ್ಸೆ ನೀಡಲು ಗ್ರಾಮ ಮಟ್ಟದಲ್ಲಿ ಸಾವಿರಾರು ಆರೋಗ್ಯ ಕಾರ್ಯಕರ್ತರಿಗೆ ವಿಶೇಷ ತರಬೇತಿ ನೀಡಲಾಗಿದೆ.

ಮಿತ್ರರೇ,

ನಮ್ಮ ಆರೋಗ್ಯ ವಲಯದ ಮತ್ತೊಂದು ಪ್ರಮುಖ ಸಮಸ್ಯೆ ಎಂದರೆ ಬೇಡಿಕೆ ಮತ್ತು ಪೂರೈಕೆಯ ನಡುವಿನ ದೊಡ್ಡ ಅಂತರ. ವೈದ್ಯರು ಮತ್ತು ಇತರ ಆರೋಗ್ಯ ವೃತ್ತಿಪರರು, ಆರೋಗ್ಯ ಮೂಲಸೌಕರ್ಯದಲ್ಲಿನ ಬೇಡಿಕೆ ಮತ್ತು ಪೂರೈಕೆಯ ಅಂತರವನ್ನು ನಿವಾರಿಸಲು ಸಮರೋಪಾದಿಯಲ್ಲಿ ಪ್ರಯತ್ನಗಳನ್ನು ಮಾಡಲಾಗುತ್ತಿದೆ. 2014 ರ ಹೊತ್ತಿಗೆ, ದೇಶದಲ್ಲಿ ಪದವಿ ಪೂರ್ವ ಮತ್ತು ಸ್ನಾತಕೋತ್ತರ ಸೀಟುಗಳ ಸಂಖ್ಯೆ ಸುಮಾರು 90,000 ಆಗಿತ್ತು. ಕಳೆದ ಏಳು ವರ್ಷಗಳಲ್ಲಿ 60,000 ಹೊಸ ಸೀಟುಗಳು ಸೇರ್ಪಡೆಯಾಗಿವೆ. 2014ರ ವರೆಗೆ ನಾವು ಕೇವಲ ಆರು ಏಮ್ಸ್‌ಗಳನ್ನು ಹೊಂದಿದ್ದೇವು, ಇಂದು ದೇಶವು 22 ಏಮ್ ಗಳ ಬಲಿಷ್ಠ ಜಾಲದತ್ತ ಸಾಗುತ್ತಿದೆ. ಭಾರತದ ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಒಂದು ವೈದ್ಯಕೀಯ ಕಾಲೇಜು ಸ್ಥಾಪಿಸುವ ಕೆಲಸ ಪ್ರಗತಿಯಲ್ಲಿದೆ. ಈ ಎಲ್ಲಾ ಸಂಸ್ಥೆಗಳಲ್ಲಿ ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳಿಗೆ ಚಿಕಿತ್ಸೆ ನೀಡುವ ಸೌಲಭ್ಯಗಳನ್ನು ಸೇರ್ಪಡೆ ಮಾಡಲಾಗುತ್ತಿದೆ. ದೇಶದಲ್ಲಿ ಕ್ಯಾನ್ಸರ್ ಆರೈಕೆ ಮೂಲಸೌಕರ್ಯವನ್ನು ಬಲಪಡಿಸಲು ಹತ್ತೊಂಬತ್ತು ರಾಜ್ಯ ಕ್ಯಾನ್ಸರ್ ಸಂಸ್ಥೆಗಳು ಮತ್ತು 20 ತೃತೀಯ ಆರೈಕೆ ಕ್ಯಾನ್ಸರ್ ಕೇಂದ್ರಗಳನ್ನು ಸಹ ಮಂಜೂರು ಮಾಡಲಾಗಿದೆ. 30ಕ್ಕೂ ಹೆಚ್ಚು ಸಂಸ್ಥೆಗಳಲ್ಲಿ ಕಾಮಗಾರಿ ಭರದಿಂದ ಸಾಗಿದೆ.  ಪಶ್ಚಿಮ ಬಂಗಾಳದಲ್ಲಿಯೂ ಕೋಲ್ಕತ್ತಾ, ಮುರ್ಷಿದಾಬಾದ್ ಮತ್ತು ಬರ್ಧಮಾನ್ ನ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡಲಾಗುವುದು. ನಮ್ಮ ಆರೋಗ್ಯ ಸಚಿವ ಮನ್ಸುಖ್ ಭಾಯ್ ಕೂಡ ಇದನ್ನು ವಿಸ್ತೃತವಾಗಿ ವಿವರಿಸಿದ್ದಾರೆ. ಈ ಎಲ್ಲಾ ಪ್ರಯತ್ನಗಳು ನಮ್ಮ ದೇಶದಲ್ಲಿ ವೈದ್ಯರ ಲಭ್ಯತೆಯ ಮೇಲೆ ಭಾರಿ ಪರಿಣಾಮ ಬೀರುತ್ತವೆ. ಕಳೆದ 70 ವರ್ಷಗಳಲ್ಲಿ ನಾವು ಕಂಡಷ್ಟು ವೈದ್ಯರು ಮುಂದಿನ 10 ವರ್ಷಗಳಲ್ಲಿ ಲಭ್ಯವಾಗುತ್ತಾರೆ.

ಮಿತ್ರರೇ,

ದೇಶದಲ್ಲಿ ಕಳೆದ ವರ್ಷ ಪ್ರಾರಂಭಿಸಲಾದ ಎರಡು ಪ್ರಮುಖ ರಾಷ್ಟ್ರೀಯ ಅಭಿಯಾನಗಳು ಭಾರತದ ಆರೋಗ್ಯ ಕ್ಷೇತ್ರವನ್ನು ಆಧುನೀಕರಿಸಲು ಸಹಾಯ ಮಾಡುತ್ತಿವೆ, ಆಯುಷ್ಮಾನ್ ಭಾರತ್ ಡಿಜಿಟಲ್ ಹೆಲ್ತ್ ಮಿಷನ್ ದೇಶವಾಸಿಗಳ ಚಿಕಿತ್ಸೆಯಲ್ಲಿ ಅನುಕೂಲತೆ ಹೆಚ್ಚಿಸುತ್ತದೆ. ವೈದ್ಯಕೀಯ ಇತಿಹಾಸದ ಡಿಜಿಟಲ್ ದಾಖಲೆಗಳು ಚಿಕಿತ್ಸೆಯನ್ನು ಸುಲಭ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಮಾಡುತ್ತವೆ; ಸಣ್ಣಪುಟ್ಟ ಕಾಯಿಲೆಗಳಿಗೆ ಆಸ್ಪತ್ರೆಗೆ ಭೇಟಿ ನೀಡುವ ತೊಂದರೆಯನ್ನು ಕಡಿಮೆ ಮಾಡುತ್ತದೆ ಮತ್ತು ಚಿಕಿತ್ಸೆಯ ಮೇಲಿನ ಹೆಚ್ಚುವರಿ ವೆಚ್ಚಗಳನ್ನು ನಾಗರಿಕರಿಗೆ ಉಳಿತಾಯ ಮಾಡುತ್ತದೆ. ಅಂತೆಯೇ, ಆಯುಷ್ಮಾನ್ ಭಾರತ್ ಮೂಲಸೌಕರ್ಯ ಮಿಷನ್ ಅಡಿಯಲ್ಲಿ ನಿರ್ಣಾಯಕ ಆರೋಗ್ಯ ವಿಚಾರಕ್ಕೆ ಸಂಬಂಧಿಸಿದ ವೈದ್ಯಕೀಯ ಮೂಲಸೌಕರ್ಯವು ದೊಡ್ಡ ನಗರಗಳಲ್ಲಿ ಮತ್ತು ಜಿಲ್ಲಾ ಮತ್ತು ಬ್ಲಾಕ್ ಮಟ್ಟದಲ್ಲೂ ಲಭ್ಯವಾಗಲಿದೆ. ಈ ಯೋಜನೆಯಡಿಯಲ್ಲಿ, ಕಳೆದ ಐದು ವರ್ಷಗಳಲ್ಲಿ ಪಶ್ಚಿಮ ಬಂಗಾಳಕ್ಕೆ 2,500 ಕೋಟಿ ರೂಪಾಯಿಗಳಿಗೂ ಅಧಿಕ ಹಣದ ಭರವಸೆ ನೀಡಲಾಗಿದೆ. ಇದು ನೂರಾರು ಆರೋಗ್ಯ ಉಪಕೇಂದ್ರಗಳು, ಸುಮಾರು 1,000 ನಗರ ಆರೋಗ್ಯ ಮತ್ತು ಯೋಗಕ್ಷೇಮ ಕೇಂದ್ರಗಳು, ಡಜನ್‌ಗಟ್ಟಲೆ ಜಿಲ್ಲಾ ಸಮಗ್ರ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯಗಳು ಮತ್ತು ರಾಜ್ಯದಾದ್ಯಂತ ಜಿಲ್ಲಾ ಆಸ್ಪತ್ರೆಗಳಲ್ಲಿ ನೂರಾರು ಕ್ಲಿಷ್ಟ ಆರೈಕೆ ಹಾಸಿಗೆಗಳ ಸಾಮರ್ಥ್ಯವನ್ನು ವೃದ್ಧಿಸಲು ಸಹಾಯಕವಾಗಲಿದೆ.  ಇಂತಹ ಪ್ರಯತ್ನಗಳ ಮೂಲಕ ನಾವು ಭವಿಷ್ಯದಲ್ಲಿ ಕೊರೊನಾದಂತಹ ಸಾಂಕ್ರಾಮಿಕ ರೋಗಗಳನ್ನು ಉತ್ತಮ ರೀತಿಯಲ್ಲಿ ಎದುರಿಸಲು ಸಾಧ್ಯವಾಗುತ್ತದೆ. ಭಾರತವನ್ನು ಆರೋಗ್ಯಕರ ಮತ್ತು ಸಮರ್ಥವಾಗಿಸುವ ಈ ಅಭಿಯಾನವು ಹೀಗೆ ಮುಂದುವರಿಯುತ್ತದೆ. ಎಲ್ಲಾ ನಾಗರಿಕರು ಜಾಗರೂಕತೆಯಿಂದಿರುವಂತೆ ಮತ್ತು ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ನಾನು ಮತ್ತೆ ಆಗ್ರಹಿಸುತ್ತೇನೆ. ಈ ಸಮಾರಂಭದಲ್ಲಿ ಉಪಸ್ಥಿತರಿರುವ ಎಲ್ಲರಿಗೂ ಮತ್ತೊಮ್ಮೆ ನನ್ನ ಹೃದಯಪೂರ್ವಕ ಧನ್ಯವಾದ ಹೇಳುತ್ತೇನೆ. ನಿಮ್ಮೆಲ್ಲರಿಗೂ ಶುಭವಾಗಲಿ. ತುಂಬಾ ತುಂಬಾ ಧನ್ಯವಾದಗಳು.

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Mutual fund industry on a high, asset surges Rs 17 trillion in 2024

Media Coverage

Mutual fund industry on a high, asset surges Rs 17 trillion in 2024
NM on the go

Nm on the go

Always be the first to hear from the PM. Get the App Now!
...
Chief Minister of Andhra Pradesh meets Prime Minister
December 25, 2024

Chief Minister of Andhra Pradesh, Shri N Chandrababu Naidu met Prime Minister, Shri Narendra Modi today in New Delhi.

The Prime Minister's Office posted on X:

"Chief Minister of Andhra Pradesh, Shri @ncbn, met Prime Minister @narendramodi

@AndhraPradeshCM"