ಜೈ ಸೋಮನಾಥ!
ಕಾರ್ಯಕ್ರಮದಲ್ಲಿ ಹಾಜರಿರುವ ಗುಜರಾತ್ ಮುಖ್ಯಮಂತ್ರಿ ಶ್ರೀ ಭುಪೇಂದ್ರ ಭಾಯಿ ಪಟೇಲ್, ರಾಜ್ಯ ಬಿ.ಜೆ.ಪಿ. ಅಧ್ಯಕ್ಷರೂ ಮತ್ತು ಸಂಸತ್ತಿನಲ್ಲಿ ನನ್ನ ಸಹೋದ್ಯೋಗಿಯೂ ಆಗಿರುವ ಶ್ರೀ ಸಿ.ಆರ್. ಪಾಟೀಲ್ ಜೀ, ಗುಜರಾತ್ ಸರಕಾರದ ಸಚಿವರಾದ ಪೂರ್ಣೇಶ್ ಮೋದಿ, ಅರವಿಂದ ರೈಯಾನಿ ಮತ್ತು ದೇವಭಾಯಿ ಮಾಲಮ್, ಜುನಾಘಡ್ ಸಂಸತ್ ಸದಸ್ಯರಾದ ರಾಜೀಶ್ ಚೌಡಾಸಮಾ, ಸೋಮನಾಥ ದೇವಾಲಯ ಟ್ರಸ್ಟಿನ ಸದಸ್ಯರೇ, ಇತರ ಗಣ್ಯರೇ ಮತ್ತು ಮಹಿಳೆಯರೇ ಹಾಗೂ ಮಹನೀಯರೇ!.
ಭಗವಾನ್ ಸೋಮನಾಥರ ಬಗ್ಗೆ ನಮ್ಮ ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ-
भक्ति प्रदानाय कृपा अवतीर्णम्, तम् सोमनाथम् शरणम् प्रपद्ये॥
ಅಂದರೆ ಭಗವಾನ್ ಸೋಮನಾಥ ದೇವರ ಆಶೀರ್ವಾದಗಳು ವ್ಯಕ್ತಿಗತವಾಗಿರುತ್ತವೆ ಮತ್ತು ಅವು ಆಶೀರ್ವಾದಗಳ ಖಜಾನೆಯನ್ನೇ ತೆರೆಯುತ್ತವೆ .ಕೆಲ ಕಾಲದಿಂದ ಸೋಮನಾಥ ದಾದಾ ಅವರ ವಿಶೇಷ ಆಶೀರ್ವಾದದಿಂದ ಸರಣಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ. ಸೋಮನಾಥ ಟ್ರಸ್ಟಿಗೆ ಸೇರಿದ ಬಳಿಕ ನಾನು ಹಲವಾರು ಕಾರ್ಯಚಟುವಟಿಕೆಗಳನ್ನು ಇಲ್ಲಿ ನೋಡುವಂತಾಗಿರುವುದು ಬಹಳ ಅಪೂರ್ವ ಅವಕಾಶ ಎಂದು ನಾನು ಭಾವಿಸುತ್ತೇನೆ. ಪ್ರದರ್ಶನ ಗ್ಯಾಲರಿ ಮತ್ತು ವಾಯುವಿಹಾರ ಸಹಿತ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೆಲವು ತಿಂಗಳ ಹಿಂದೆ ಉದ್ಘಾಟಿಸಲಾಗಿದೆ. ಪಾರ್ವತಿ ದೇವಾಲಯದ ಶಿಲಾನ್ಯಾಸ ಕೂಡಾ ನಾಡಲಾಗಿದೆ. ಮತ್ತು ಇಂದು ಸೋಮನಾಥ ಸರ್ಕ್ಯೂಟ್ ಹೌಸ್ ಕೂಡಾ ಉದ್ಘಾಟನೆ ಮಾಡಲಾಗುತ್ತಿದೆ. ನಾನು ಗುಜರಾತ್ ಸರಕಾರಕ್ಕೆ, ಸೋಮನಾಥ ದೇವಾಲಯ ಟ್ರಸ್ಟಿಗೆ ಮತ್ತು ನಿಮ್ಮೆಲ್ಲರಿಗೂ ಈ ಪ್ರಮುಖವಾದಂತಹ ಸಂದರ್ಭದಲ್ಲಿ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಸ್ನೇಹಿತರೇ,
ಇಲ್ಲಿ ಸರ್ಕ್ಯೂಟ್ ಹೌಸಿನ ಅಗತ್ಯವಿತ್ತು. ಸರ್ಕ್ಯೂಟ್ ಹೌಸಿನ ಕೊರತೆಯಿಂದಾಗಿ ಹೊರ ಪ್ರದೇಶಗಳಿಂದ ಬರುವವರಿಗೆ ವಾಸ್ತವ್ಯದ ವ್ಯವಸ್ಥೆ ಮಾಡುವುದಕ್ಕೆ ಸಂಬಂಧಿಸಿ ದೇವಾಲಯದ ಟ್ರಸ್ಟಿನವರ ಮೇಲೆ ಬಹಳ ಒತ್ತಡ ಬೀಳುತ್ತಿತ್ತು. ಈ ಸ್ವತಂತ್ರ ವ್ಯವಸ್ಥೆಯಾದ ಸರ್ಕ್ಯೂಟ್ ಹೌಸ್ ಉದ್ಘಾಟನೆಯಿಂದ ದೇವಾಲಯದ ಮೇಲಿನ ಒತ್ತಡ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಮತ್ತು ಇದು ಕೂಡಾ ದೇವಾಲಯದಿಂದ ಬಹಳ ದೂರವೇನಿಲ್ಲ. ಈಗ ಅವರು (ಟ್ರಸ್ಟಿಗಳು) ದೇವಾಲಯದ ಸಂಗತಿಗಳ ಬಗ್ಗೆ ಹೆಚ್ಚು ಗಮನ ಕೇಂದ್ರೀಕರಿಸಬಹುದು. ಈ ಕಟ್ಟಡವನ್ನು ಇದರಲ್ಲಿ ತಂಗುವವರಿಗೆ ಸಮುದ್ರದ ದೃಶ್ಯಗಳು ಕಾಣುವಂತೆ ವಿನ್ಯಾಸಗೊಳಿಸಲಾಗಿದೆ ಎಂದು ನನಗೆ ತಿಳಿಸಲಾಗಿದೆ. ಅಂದರೆ ಜನರು ತಮ್ಮ ಕೊಠಡಿಗಳಲ್ಲಿ ಶಾಂತವಾಗಿ ಕುಳಿತಿರುವಾಗ ಅವರು ಸಮುದ್ರದ ಅಲೆಗಳನ್ನು ಮತ್ತು ಸೋಮನಾಥ ದೇವಾಲಯದ ಶಿಖರವನ್ನು ನೋಡಬಹುದು. ಸಮುದ್ರದ ಅಲೆಗಳು ಮತ್ತು ಸೋಮನಾಥದ ಶಿಖರದ ನಡುವೆ ಕಾಲನ ಹೊಡೆತವನ್ನು ಎದುರಿಸಿ ನಿಂತ ಭಾರತದ ಹೆಮ್ಮೆಯ ಅಂತಃಪ್ರಜ್ಞೆಯನ್ನೂ ಕಾಣಬಹುದು. ಈ ವಲಯಕ್ಕೆ ಪ್ರವಾಸ ಬರುವವರಿಗೆ ಈ ಹೆಚ್ಚಿನ ಸವಲತ್ತುಗಳ ಲಭ್ಯತೆಯಿಂದಾಗಿ ಅದು ದಿಯು, ಗಿರ್, ದ್ವಾರಕಾ, ವೇದ ದ್ವಾರಕಾ, ಸೋಮನಾಥಗಳಿರಲಿ, ಇವೆಲ್ಲವೂ ಇಡೀ ಪ್ರವಾಸೋದ್ಯಮ ವಲಯದ ಕೇಂದ್ರ ಬಿಂದುವಾಗಬಲ್ಲವು. ಇದು ಬಹಳ ಮುಖ್ಯ ಶಕ್ತಿ ಕೇಂದ್ರವಾಗಲಿದೆ.
ಸ್ನೇಹಿತರೇ,
ನಮ್ಮ ನಾಗರಿಕತೆಯ ಪ್ರಯಾಣವನ್ನು ನೋಡಿದರೆ ಅಲ್ಲಿ ಸವಾಲುಗಳ ಸಂತೆಯೇ ಇದೆ, ಅದರಿಂದ ನೂರಾರು ವರ್ಷಗಳ ಗುಲಾಮಗಿರಿಯಲ್ಲಿ ಭಾರತ ಏನನ್ನೆಲ್ಲ ಅನುಭವಿಸಿತು ಎಂಬ ಬಗ್ಗೆ ನಮಗೊಂದು ನೋಟ ಸಿಗುತ್ತದೆ. ಸೋಮನಾಥ ದೇವಾಲಯ ಹಾಳುಗೆಡವಲಾದ ಸಂದರ್ಭಗಳು ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ನಡೆಸಿದ ಪ್ರಯತ್ನಗಳ ಫಲವಾಗಿ ದೇವಾಲಯ ಪುನರುತ್ಠಾನಗೊಂಡ ಸಂದರ್ಭ ನಮಗೆ ಬಹಳ ದೊಡ್ಡ ಸಂದೇಶವನ್ನು ನೀಡುವಂತಿದೆ. ಸೋಮನಾಥದಂತಹ ನಂಬಿಕೆಯ ಮತ್ತು ಸಂಸ್ಕೃತಿಯ ಸ್ಥಳಗಳು ಸ್ವಾತಂತ್ರ್ಯದ ಈ ಅಮೃತ ಮಹೋತ್ಸವ ಕಾಲಘಟ್ಟದಲ್ಲಿ ನಮ್ಮ ದೇಶದ ಹಿಂದಿನ ಚರಿತ್ರೆಯ ಬಗ್ಗೆ ಏನನ್ನು ಕಲಿಯಬೇಕೋ ಅದರ ಅಧ್ಯಯನ ಮಾಡಲು ನಮಗೆ ಬಹಳ ಮುಖ್ಯವಾದ ಕೇಂದ್ರಗಳು.
ಸ್ನೇಹಿತರೇ,
ದೇಶದ ವಿವಿಧ ಭಾಗಗಳಿಂದ, ಜಗತ್ತಿನ ವಿವಿಧೆಡೆಗಳಿಂದ, ವಿವಿಧ ರಾಜ್ಯಗಳಿಂದ ಪ್ರತೀ ವರ್ಷ ಸುಮಾರು ಒಂದು ಕೋಟಿ ಭಕ್ತರು ಸೋಮನಾಥ ದೇವಾಲಯಕ್ಕೆ ಬರುತ್ತಾರೆ. ಹಿಂತಿರುಗುವಾಗ ಈ ಭಕ್ತರು ತಮ್ಮೊಂದಿಗೆ ಹಲವು ಹೊಸ ಅನುಭವಗಳನ್ನು, ಚಿಂತನೆಗಳನ್ನು, ಮತ್ತು ನಂಬಿಕೆಗಳನ್ನು ಕೊಂಡೊಯ್ಯುತ್ತಾರೆ. ಆದುದರಿಂದ ಪ್ರವಾಸದಷ್ಟೇ ಮುಖ್ಯ ಅದರ ಅನುಭವ. ವಿಶೇಷವಾಗಿ ಯಾತ್ರೆಗಳಲ್ಲಿ ನಮ್ಮ ಮನಸ್ಸು ದೇವರಲ್ಲಿರಬೇಕು ಎಂದು ನಾವು ಆಶಿಸುತ್ತೇವೆ. ಮತ್ತು ನಾವು ಪ್ರಯಾಣದ ಸಮಸ್ಯೆಗಳ ಬಗ್ಗೆ ಚಿಂತಿಸುವುದಿಲ್ಲ. ಸರಕಾರ ಮತ್ತು ಸಂಸ್ಥೆಗಳು ಹೇಗೆ ಹಲವು ಯಾತ್ರಾ ಸ್ಥಳಗಳನ್ನು ಸುಂದರಗೊಳಿಸಿವೆ ಎಂಬುದಕ್ಕೆ ಸೋಮನಾಥ ದೇವಾಲಯ ಕೂಡಾ ಒಂದು ಜೀವಂತ ಉದಾಹರಣೆ. ಈಗ ಭಕ್ತಾದಿಗಳಿಗೆ ಉತ್ತಮ ವ್ಯವಸ್ಥೆಗಳಿವೆ ಮತ್ತು ರಸ್ತೆಗಳು ಹಾಗು ಸಾರಿಗೆ ಸೌಕರ್ಯಗಳಲ್ಲಿ ಸುಧಾರಣೆಯಾಗಿದೆ. ಉತ್ತಮ ವಾಯುವಿಹಾರ ವ್ಯವಸ್ಥೆ, ಪಾರ್ಕಿಂಗ್ ಸೌಲಭ್ಯಗಳು, ಪ್ರವಾಸೀ ಅನುಕೂಲತೆಗಳ ಕೇಂದ್ರ ಮತ್ತು ತ್ಯಾಜ್ಯ ನಿರ್ವಹಣೆಗೆ ಆಧುನಿಕ ವ್ಯವಸ್ಥೆಗಳನ್ನು ಸ್ವಚ್ಛತೆಗಾಗಿ ಅಭಿವೃದ್ಧಿ ಮಾಡಲಾಗಿದೆ. ಭವ್ಯವಾದ ಯಾತ್ರಾ ಪ್ಲಾಜಾ ಮತ್ತು ಸಂಕೀರ್ಣದ ಪ್ರಸ್ತಾವನೆ ಅದರ ಅಂತಿಮ ಹಂತದಲ್ಲಿದೆ. ಈಗಷ್ಟೇ, ನಮ್ಮ ಪೂರ್ಣೇಶ್ ಭಾಯಿ ಅದನ್ನು ವಿವರಿಸುತ್ತಿದ್ದರು. ಮಾ ಅಂಬಾಜಿ ದೇವಾಲಯದಲ್ಲಿ ಇಂತಹದೇ ಪ್ರವಾಸೀ ಸೌಲಭ್ಯಗಳ ಅಭಿವೃದ್ಧಿಗೆ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ದ್ವಾರಕಾಧೀಶನ ದೇವಾಲಯ, ರುಕ್ಮಿಣಿ ದೇವಾಲಯ ಮತ್ತು ಗೋಮತಿ ಘಾಟ್ ಗಳಲ್ಲಿ ಇಂತಹ ಅನೇಕ ಅಭಿವೃದ್ಧಿ ಕಾರ್ಯಗಳನ್ನು ನಾವು ಈಗಾಗಲೇ ಪೂರ್ಣಗೊಳಿಸಿದ್ದೇವೆ. ಇವುಗಳು ಪ್ರವಾಸಿಗರಿಗೆ ಅನುಕೂಲತೆಗಳನ್ನು ಒದಗಿಸುತ್ತಿವೆ ಮತ್ತು ಗುಜರಾತಿನ ಸಾಂಸ್ಕೃತಿಕ ಗುರುತಿಸುವಿಕೆಯನ್ನು ಬಲಪಡಿಸುತ್ತಿವೆ.
ಈ ಎಲ್ಲಾ ಸಾಧನೆಗಳ ನಡುವೆ, ನಾನು ಈ ಸಂದರ್ಭದಲ್ಲಿ ಗುಜರಾತಿನ ಎಲ್ಲಾ ಧಾರ್ಮಿಕ ಮತ್ತು ಸಾಮಾಜಿಕ ಸಂಘಟನೆಗಳನ್ನು ಅಭಿನಂದಿಸುತ್ತೇನೆ ಮತ್ತು ಅವುಗಳಿಗೆ ಧನ್ಯವಾದ ಸಲ್ಲಿಸುತ್ತೇನೆ. ವೈಯಕ್ತಿಕ ನೆಲೆಯಲ್ಲಿ ನೀವು ಅಭಿವೃದ್ಧಿಯೊಂದಿಗೆ ಮತ್ತು ಸೇವಾ ಕಾರ್ಯಗಳೊಂದಿಗೆ ಮುಂದುವರಿಯುತ್ತಿರುವ ರೀತಿ ನನ್ನ ಪ್ರಕಾರ “ಸಬ್ ಕಾ ಪ್ರಯಾಸ್” ಗೆ ಒಂದು ಅತ್ಯುತ್ತಮ ಉದಾಹರಣೆ. ಕೊರೊನಾದಿಂದಾಗಿ ಉದ್ಭವಿಸಿರುವ ಸಂಕಷ್ಟದ ಹಿನ್ನೆಲೆಯಲ್ಲಿ ಸೋಮನಾಥ ದೇವಾಲಯ ಟ್ರಸ್ಟ್ ಭಕ್ತಾದಿಗಳ ಬಗ್ಗೆ ವಹಿಸಿದ ಕಾಳಜಿ ಮತ್ತು ಸಮಾಜದ ಬಗ್ಗೆ ತೋರ್ಪಡಿಸಿದ ಜವಾಬ್ದಾರಿ ಪ್ರತಿಯೊಂದು ಜೀವಿಯಲ್ಲಿಯೂ ಶಿವ ನೆಲೆಸಿದ್ದಾನೆ ಎಂಬ ನಮ್ಮ ನಂಬಿಕೆಯ ಪ್ರತಿಫಲನ.
ಸ್ನೇಹಿತರೇ,
ಹಲವು ದೇಶಗಳ ಆರ್ಥಿಕತೆಗೆ ಪ್ರವಾಸೋದ್ಯಮದ ಕೊಡುಗೆಯ ಬಗ್ಗೆ ನಾವು ಕೇಳುತ್ತೇವೆ ಮತ್ತು ಅದನ್ನು ಪ್ರಧಾನವಾಗಿ ಪ್ರದರ್ಶಿಸಲಾಗುತ್ತದೆ. ಜಗತ್ತಿನ ಪ್ರತೀ ದೇಶದಲ್ಲಿರುವಷ್ಟು ಸಾಮರ್ಥ್ಯ ನಮ್ಮ ಪ್ರತೀ ರಾಜ್ಯದಲ್ಲಿ, ಮತ್ತು ವಲಯದಲ್ಲಿ ಇದೆ. ಅಲ್ಲಿ ಅಂತಹ ಅಸಂಖ್ಯಾತ ಸಾಧ್ಯತೆಗಳಿವೆ. ನೀವು ಯಾವುದೇ ರಾಜ್ಯದ ಹೆಸರು ತೆಗೆದುಕೊಳ್ಳಿ, ಮನಸ್ಸಿಗೆ ಮೊದಲು ಯಾವುದು ಬರುತ್ತದೆ?. ನೀವು ಗುಜರಾತ್ ತೆಗೆದುಕೊಂಡರೆ ಆಗ ಸೋಮನಾಥ, ದ್ವಾರಕಾ, ಏಕತಾ ಪ್ರತಿಮೆ, ಧೋಲಾವಿರಾ, ರಣ್ ಆಫ್ ಕಚ್ ಮತ್ತು ಇಂತಹ ಹಲವು ಅದ್ಭುತ ಸ್ಥಳಗಳು ನಿಮ್ಮ ಮನಸ್ಸಿನಲ್ಲಿ ಮೂಡುತ್ತವೆ. ನೀವು ಉತ್ತರ ಪ್ರದೇಶದ ಹೆಸರು ತೆಗೆದುಕೊಂಡರೆ ಆಗ ಅಯೋಧ್ಯಾ, ಮಥುರಾ, ಕಾಶಿ, ಪ್ರಯಾಗ, ಕುಶಿನಗರ, ವಿಂಧ್ಯಾಚಲಗಳು ನಮ್ಮ ಮನಸ್ಸಿನಲ್ಲಿ ಮೂಡುತ್ತವೆ. ಜನಸಾಮಾನ್ಯರಿಗೆ ಈ ಎಲ್ಲಾ ಸ್ಥಳಗಳಿಗೆ ಭೇಟಿ ನೀಡಬೇಕು ಎಂಬ ಅಭಿಲಾಷೆ ಇರುತ್ತದೆ. ಉತ್ತರಾಖಂಡವು ತನ್ನೊಳಗೆ ದೇವಭೂಮಿಯನ್ನು ಹೊಂದಿದೆ. ಬದರೀನಾಥ ಜೀ, ಕೇದಾರನಾಥ ಜೀ ಇಲ್ಲಿದ್ದಾರೆ. ಹಿಮಾಚಲ ಪ್ರದೇಶದ ಬಗ್ಗೆ ಮಾತನಾಡುವುದಾದರೆ ಮಾ ಜ್ವಾಲಾದೇವಿ, ಮಾ ನೈನಾದೇವಿ ಅಲ್ಲಿದ್ದಾರೆ. ಇಡೀ ಈಶಾನ್ಯ ದೈವಿಕ ಮತ್ತು ಪ್ರಾಕೃತಿಕ ಆಕರ್ಷಣೆಯನ್ನು ಹೊಂದಿದೆ. ಅದೇ ರೀತಿ ತಮಿಳುನಾಡು ಹೆಸರು ರಾಮೇಶ್ವರಂಗೆ ಭೇಟಿ ನೀಡುವುದನ್ನು ನೆನಪಿಸುತ್ತದೆ. ಒಡಿಶಾ ನೆನಪಾದರೆ ಪುರಿ, ಆಂಧ್ರ ಪ್ರದೇಶವಾದರೆ ತಿರುಪತಿ ಬಾಲಾಜಿ, ಮಹಾರಾಷ್ಟ್ರ ಸಿದ್ಧಿವಿನಾಯಕ ಜೀ ಮತ್ತು ಕೇರಳವು ಶಬರಿಮಲೆಯನ್ನು ನೆನಪಿಗೆ ತರುತ್ತದೆ. ನೀವು ಯಾವುದೇ ರಾಜ್ಯವನ್ನು ಹೆಸರಿಸಿ ಯಾತ್ರೆಗೆ ಮತ್ತು ಪ್ರವಾಸೋದ್ಯಮಕ್ಕೆ ಹಲವು ಕೇಂದ್ರಗಳು ನಮ್ಮ ಮನಸ್ಸಿಗೆ ಬರುತ್ತವೆ. ಈ ಪ್ರದೇಶಗಳು ನಮ್ಮ ರಾಷ್ಟ್ರೀಯ ಏಕತೆಯ ಸ್ಪೂರ್ತಿ ಮತ್ತು “ಏಕ ಭಾರತ್, ಶ್ರೇಷ್ಠ ಭಾರತ್” ನ್ನು ಪ್ರತಿನಿಧಿಸುತ್ತವೆ. ಈ ಸ್ಥಳಗಳಿಗೆ ಭೇಟಿ ನೀಡುವುದರಿಂದ ರಾಷ್ಟ್ರೀಯ ಸಮಗ್ರತೆ ವೃದ್ಧಿಸುತ್ತದೆ. ಇಂದು ರಾಷ್ಟ್ರವು ಈ ಸ್ಥಳಗಳನ್ನು ಸಮೃದ್ಧಿಯ ಮೂಲಗಳನ್ನಾಗಿ ಗುರುತಿಸುತ್ತಿದೆ. ಈ ಸ್ಥಳಗಳ ಅಭಿವೃದ್ಧಿಯೊಂದಿಗೆ ವಿಸ್ತಾರ ವ್ಯಾಪ್ತಿಯ ಅಭಿವೃದ್ಧಿಗೆ ನಾವು ವೇಗ ಕೊಡಬಹುದು.
ಸ್ನೇಹಿತರೇ,
ಪ್ರವಾಸೋದ್ಯಮದ ಸಾಮರ್ಥ್ಯವನ್ನು ಅನಾವರಣ ಮಾಡಲು ದೇಶವು ಕಳೆದ ಏಳು ವರ್ಷಗಳಿಂದ ನಿರಂತರ ಶ್ರಮವಹಿಸುತ್ತಿದೆ. ಪ್ರವಾಸೀ ಕೇಂದ್ರಗಳ ಅಭಿವೃದ್ಧಿ ಮಾತ್ರವೇ ಸರಕಾರಿ ಯೋಜನೆಯ ಭಾಗವಾಗಿಲ್ಲ, ಸಾರ್ವಜನಿಕ ಸಹಭಾಗಿತ್ವದ ಆಂದೋಲನವೂ ಇದರೊಂದಿಗಿದೆ. ದೇಶದ ಪಾರಂಪರಿಕ ತಾಣಗಳು ಮತ್ತು ನಮ್ಮ ದೇಶದ ಸಾಂಸ್ಕೃತಿಕ ಪರಂಪರೆಯ ಅಭಿವೃದ್ಧಿ ಇದಕ್ಕೆ ದೊಡ್ಡ ಉದಾಹರಣೆಗಳು. ಈ ಮೊದಲು ನಿರ್ಲಕ್ಷ್ಯಕ್ಕೆ ಈಡಾಗಿದ್ದ ಪಾರಂಪರಿಕ ಸ್ಥಳಗಳು ಈಗ ಪ್ರತಿಯೊಬ್ಬರ ಪ್ರಯತ್ನದ ಫಲವಾಗಿ ಅಭಿವೃದ್ಧಿಗೊಳ್ಳುತ್ತಿವೆ. ಈ ನಿಟ್ಟಿನಲ್ಲಿ ಸಹಕಾರ ನೀಡಲು ಖಾಸಗಿ ವಲಯ ಕೂಡಾ ಮುಂದೆ ಬಂದಿದೆ. ರೋಮಾಂಚಕಾರಿ ಭಾರತ ಮತ್ತು ದೇಖೋ ಅಪ್ನಾ ದೇಶ್ ನಂತಹ ಆಂದೋಲನಗಳು ದೇಶದ ಹೆಮ್ಮೆಯನ್ನು ಜಗತ್ತಿನೆದುರು ಇಡುತ್ತಿವೆ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸುತ್ತಿವೆ.
ಸ್ವದೇಶ ದರ್ಶನ ಯೋಜನೆ ಅನ್ವಯ 15 ವಿಷಯಾಧಾರಿತ ಪ್ರವಾಸೀ ಸರ್ಕ್ಯೂಟ್ ಗಳನ್ನು ದೇಶದಲ್ಲಿ ಅಭಿವೃದ್ಧಿ ಮಾಡಲಾಗುತ್ತಿದೆ. ಈ ಸರ್ಕ್ಯೂಟ್ ಗಳು ದೇಶದ ವಿವಿಧ ಭಾಗಗಳನ್ನು ಜೋಡಿಸುತ್ತವೆಯಲ್ಲದೆ ಹೊಸ ಗುರುತಿಸುವಿಕೆಯನ್ನು ನೀಡುವ ಮೂಲಕ ಪ್ರವಾಸೋದ್ಯಮಕ್ಕೆ ಅನುಕೂಲತೆಗಳನ್ನು ಒದಗಿಸುತ್ತವೆ. ರಾಮಾಯಣ ಸರ್ಕ್ಯೂಟ್ ಮೂಲಕ ನೀವು ಶ್ರೀ ರಾಮ ಭಗವಾನರಿಗೆ ಸಂಬಂಧಪಟ್ಟ ಎಲ್ಲಾ ಸ್ಥಳಗಳಿಗೂ ಭೇಟಿ ನೀಡಬಹುದು. ಈ ನಿಟ್ಟಿನಲ್ಲಿ ರೈಲ್ವೇಯು ವಿಶೇಷ ರೈಲನ್ನು ಆರಂಭ ಮಾಡಿದೆ. ಮತ್ತು ಅದು ಬಹಳ ಜನಪ್ರಿಯವಾಗುತ್ತಿದೆ ಎಂದು ನನಗೆ ತಿಳಿಸಲಾಗಿದೆ.
ನಾಳೆಯಿಂದ ದಿವ್ಯ ಕಾಶಿ ಯಾತ್ರೆಗಾಗಿ ದಿಲ್ಲಿಯಿಂದ ವಿಶೇಷ ರೈಲು ಆರಂಭವಾಗಲಿದೆ. ಬುದ್ಧ ಸರ್ಕ್ಯುಟ್ ಭಗವಾನ್ ಬುದ್ಧರಿಗೆ ಸಂಬಂಧಪಟ್ಟಂತಹ ಎಲ್ಲಾ ಸ್ಥಳಗಳಿಗೂ ಭೇಟಿ ನೀಡಲು ಭಾರತದ ಮತ್ತು ವಿದೇಶಗಳ ಯಾತ್ರಿಕರಿಗೆ ಅನುಕೂಲಗಳನ್ನು ಒದಗಿಸಲಿದೆ. ವಿದೇಶಿ ಪ್ರವಾಸಿಗರಿಗೆ ವೀಸಾ ನಿಯಮಗಳನ್ನು ಸಡಿಲಿಸಲಾಗಿದ್ದು, ಇದರಿಂದ ದೇಶಕ್ಕೆ ಪ್ರಯೋಜನವಾಗಲಿದೆ. ಈಗ ಅಲ್ಲಿ ಕೋವಿಡ್ ನಿಂದಾಗಿ ಕೆಲವು ಸಮಸ್ಯೆಗಳಿವೆ. ಆದರೆ ಸೋಂಕಿನ ಭೀತಿ ಕಡಿಮೆಯಾದ ಬಳಿಕ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗುವ ಬಗ್ಗೆ ನನಗೆ ನಂಬಿಕೆ ಇದೆ. ಸರಕಾರ ಆರಂಭಿಸಿದ ಲಸಿಕಾಕರಣ ಆಂದೋಲನದಲ್ಲಿ ನಮ್ಮ ಪ್ರವಾಸೋದ್ಯಮ ರಾಜ್ಯಗಳಲ್ಲಿ ಪ್ರತಿಯೊಬ್ಬರೂ ಆದ್ಯತೆಯಾಧಾರದ ಮೇಲೆ ಲಸಿಕೆ ಪಡೆಯುವುದನ್ನು ಖಾತ್ರಿಪಡಿಸಲು ವಿಶೇಷ ಗಮನ ನೀಡಲಾಗಿದೆ. ಗೋವಾ ಮತ್ತು ಉತ್ತರಾಖಂಡದಂತಹ ರಾಜ್ಯಗಳು ಈ ನಿಟ್ಟಿನಲ್ಲಿ ಬಹಳ ತ್ವರಿತಗತಿಯಲ್ಲಿ ಪ್ರಗತಿ ಸಾಧಿಸಿವೆ.
ಸ್ನೇಹಿತರೇ,
ಇಂದು ದೇಶವು ಪ್ರವಾಸೋದ್ಯಮವನ್ನು ಸಮಗ್ರ ರೀತಿಯಲ್ಲಿ ನೋಡುತ್ತಿದೆ. ಇಂದಿನ ಪರಿಸ್ಥಿತಿಯಲ್ಲಿ, ಪ್ರವಾಸೋದ್ಯಮವನ್ನು ಉತ್ತೇಜಿಸಲು ನಾಲ್ಕು ಸಂಗತಿಗಳು ಬಹಳ ಅವಶ್ಯ. ಮೊದಲನೆಯದ್ದು, ಸ್ವಚ್ಛತೆ—ಈ ಮೊದಲು ನಮ್ಮ ಪ್ರವಾಸಿ ಮತ್ತು ಯಾತ್ರಾ ಸ್ಥಳಗಳು ಸ್ವಚ್ಛವಾಗಿ ಇರುತ್ತಿರಲಿಲ್ಲ. ಇಂದು ಸ್ವಚ್ಛ ಭಾರತ್ ಅಭಿಯಾನ ಈ ಮುಖವನ್ನು ಬದಲು ಮಾಡಿದೆ. ಸ್ವಚ್ಛತೆಯಲ್ಲಿ ಹೆಚ್ಚಳದಿಂದಾಗಿ ಪ್ರವಾಸೋದ್ಯಮ ಹೆಚ್ಚುತ್ತಿದೆ. ಪ್ರವಾಸೋದ್ಯಮವನ್ನು ಉತೇಜಿಸುವಲ್ಲಿ ಇರುವ ಇನ್ನೊಂದು ವಿಷಯ ಎಂದರೆ ಅನುಕೂಲತೆ. ಆದರೆ ಸೌಲಭ್ಯಗಳ ವ್ಯಾಪ್ತಿ ಬರೇ ಪ್ರವಾಸೀ ತಾಣಗಳಿಗೆ ಮಿತಿಗೊಳ್ಳಬಾರದು. ಅಲ್ಲಿ ಸಾರಿಗೆ, ಅಂತರ್ಜಾಲ, ಸರಿಯಾದ ಮಾಹಿತಿ, ವೈದ್ಯಕೀಯ ವ್ಯವಸ್ಥೆಗಳು ಸಹಿತ ಎಲ್ಲ ರೀತಿಯ ಸೌಲಭ್ಯಗಳು ಇರಬೇಕು. ಮತ್ತು ಈ ನಿಟ್ಟಿನಲ್ಲಿ ದೇಶಾದ್ಯಂತ ನಿರಂತರ ಕೆಲಸ ನಡೆಯುತ್ತಿದೆ.
ಸ್ನೇಹಿತರೇ,
ಪ್ರವಾಸೋದ್ಯಮ ಹೆಚ್ಚಳದಲ್ಲಿ ಸಮಯ ಮೂರನೇ ಪ್ರಮುಖ ಸಂಗತಿಯಾಗಿರುತ್ತದೆ. ಇದು ಇಪ್ಪತ್ತು-ಇಪ್ಪತ್ತರ (ಟ್ವೆಂಟಿ-ಟ್ವೆಂಟಿ) ಕಾಲ. ಜನರು ಕನಿಷ್ಠ ಸಮಯದಲ್ಲಿ ಗರಿಷ್ಠ ಸ್ಥಳಗಳಿಗೆ ಭೇಟಿ ನೀಡಲು ಇಚ್ಛಿಸುತ್ತಾರೆ. ದೇಶದಲ್ಲಿರುವ ಹೆದ್ದಾರಿಗಳು, ಎಕ್ಸ್ ಪ್ರೆಸ್ ವೇ ಗಳು, ಆಧುನಿಕ ರೈಲುಗಳು, ಮತ್ತು ಹೊಸ ವಿಮಾನ ನಿಲ್ದಾಣಗಳು ಈ ನಿಟ್ಟಿನಲ್ಲಿ ಬಹಳ ಸಹಾಯ ಮಾಡುತ್ತಿವೆ. ಉಡಾನ್ ಯೋಜನೆಯಿಂದ ವಿಮಾನ ಪ್ರಯಾಣದ ದರಗಳು ಗಮನೀಯವಾಗಿ ಇಳಿಕೆಯಾಗುತ್ತಿವೆ. ಅಂದರೆ ಪ್ರಯಾಣದ ಅವಧಿಯಲ್ಲಿ ಕಡಿತದಿಂದ ಖರ್ಚು ಕೂಡಾ ಕಡಿಮೆಯಾಗುತ್ತಿದೆ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಹೊಂದುತ್ತಿದೆ. ನಾವು ಗುಜರಾತಿನತ್ತ ನೋಡಿದರೆ, ಅಂಬಾಜಿಗೆ ಭೇಟಿ ನೀಡಲು ಬನಸ್ಕಾಂತಾದಲ್ಲಿ ರೋಪ್ ವೇ ಇದೆ. ಕಾಳಿಕಾ ಮಾತಾ ಅವರ ದರ್ಶನ ಮಾಡಲು ಪಾವಗಧದಲ್ಲಿ ಈ ವ್ಯವಸ್ಥೆ ಇದೆ. ಈಗ ಗಿರ್ನಾರ್ ಮತ್ತು ಸಾತ್ಪುರದಲ್ಲಿ “ರೋಪ್ ವೇ”ಗಳಿವೆ. ಒಟ್ಟಿನಲ್ಲಿ ನಾಲ್ಕು ರೋಪ್ ವೇಗಳು ಕಾರ್ಯಾಚರಿಸುತ್ತಿವೆ. ಈ ರೋಪ್ ವೇಗಳ ಸೌಲಭ್ಯ ಒದಗಣೆಯ ನಂತರ ಪ್ರವಾಸಿಗರಿಗೆ ಅನುಕೂಲತೆಗಳು ಹೆಚ್ಚಾಗಿವೆ ಮತ್ತು ಪ್ರವಾಸಿಗರ ಸಂಖ್ಯೆಯೂ ಹೆಚ್ಚುತ್ತಿದೆ. ಈಗ ಕೊರೊನಾ ಪ್ರಭಾವದಿಂದಾಗಿ ಅನೇಕ ಸಂಗತಿಗಳು, ಕಾರ್ಯಕ್ರಮಗಳು ಸ್ಥಗಿತಗೊಂಡಿವೆ. ಆದರೆ ಶಾಲೆ ಕಾಲೇಜುಗಳ ವಿದ್ಯಾರ್ಥಿಗಳು ಶೈಕ್ಷಣಿಕ ಪ್ರವಾಸದ ಮೇಲೆ ತೆರಳುವಾಗ ಈ ಚಾರಿತ್ರಿಕ ಸ್ಥಳಗಳು ಅವರಿಗೆ ಬಹಳಷ್ಟನ್ನು ಕಲಿಸುತ್ತವೆ. ದೇಶಾದ್ಯಂತ ಇಂತಹ ಸ್ಥಳಗಳಲ್ಲಿ ಸವಲತ್ತುಗಳು ಹೆಚ್ಚುತ್ತಾ ಮತ್ತು ಸುಧಾರಿಸುತ್ತ ಹೋದಂತೆ, ವಿದ್ಯಾರ್ಥಿಗಳು ಕೂಡಾ ದೇಶದ ಪರಂಪರೆಯ ಜೊತೆ ಅವರ ಸಂಬಂಧವನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಲು ಮತ್ತು ಕಲಿಯಲು ಸಾಧ್ಯವಾಗುವುದರಿಂದ ಅದು ಇನ್ನಷ್ಟು ಗಟ್ಟಿಗೊಳ್ಳುತ್ತಾ ಸಾಗುತ್ತದೆ.
ಸ್ನೇಹಿತರೇ,
ಪ್ರವಾಸೋದ್ಯಮವನ್ನು ಹೆಚ್ಚಿಸಲು ಅವಶ್ಯವಾದ ನಾಲ್ಕನೇ ಮತ್ತು ಬಹಳ ಪ್ರಮುಖವಾದ ವಿಷಯವೆಂದರೆ ನಮ್ಮ ಚಿಂತನೆ, ಯೋಚನೆ. ನಮ್ಮ ಚಿಂತನೆ ನವೀನ ಮತ್ತು ಆಧುನಿಕವಾಗಿರಬೇಕಾದ್ದು ಅವಶ್ಯ. ಆದರೆ ಇದೇ ಸಮಯದಲ್ಲಿ ನಾವು ನಮ್ಮ ಪ್ರಾಚೀನ ಪರಂಪರೆಯ ಬಗ್ಗೆ ಹೆಮ್ಮೆಯಿಂದಿರಬೇಕು. ಇದು ಬಹಳಷ್ಟು ಪರಿಣಾಮ ಬೀರುತ್ತದೆ. ನಮ್ಮಲ್ಲಿ ಈ ಹೆಮ್ಮೆ ಇದೆ ಮತ್ತು ಆದುದರಿಂದ ನಾವು ಕದ್ದು ಹೋದ ವಿಗ್ರಹಗಳನ್ನು, ನಮ್ಮ ಹಳೆಯ ಪರಂಪರೆಗೆ ಸಂಬಂಧಿಸಿದ ವಸ್ತುಗಳನ್ನು ಜಗತ್ತಿನಾದ್ಯಂತದಿಂದ ಹಿಂದೆ ತರುತ್ತಿದ್ದೇವೆ. ನಮ್ಮ ಪ್ರಾಚೀನ ಕಾಲದ ಜನರು, ಹಿರಿಯರು ನಮಗಾಗಿ ಬಹಳಷ್ಟನ್ನು ಬಿಟ್ಟು ಹೋಗಿದ್ದಾರೆ. ಆದರೆ ನಮ್ಮ ಧಾರ್ಮಿಕ-ಸಾಂಸ್ಕೃತಿಕ ಗುರುತಿಸುವಿಕೆಯ ಬಗ್ಗೆ ಮಾತನಾಡಲು ಹಿಂಜರಿಯುವಂತಹ ಕಾಲವೊಂದಿತ್ತು. ಸ್ವಾತಂತ್ರ್ಯದ ನಂತರ ದಿಲ್ಲಿಯಲ್ಲಿಯ ಕೆಲವು ಕುಟುಂಬಗಳಿಗೆ ಮಾತ್ರ ಬದಲಾವಣೆ ಸಂಭವಿಸಿತ್ತು. ಆದರೆ ಇಂದು ದೇಶವು ಈ ಸಣ್ಣ ಮನಸ್ಸಿನ ಧೋರಣೆಯನ್ನು ಬಿಟ್ಟು ಹೆಮ್ಮೆಯ ಹೊಸ ಸ್ಥಳಗಳನ್ನು ನಿರ್ಮಾಣ ಮಾಡುತ್ತಿದೆ ಮತ್ತು ಅವುಗಳಿಗೆ ಭವ್ಯತೆಯನ್ನು ನೀಡುತ್ತಿದೆ. ದಿಲ್ಲಿಯಲ್ಲಿ ಬಾಬಾ ಸಾಹೇಬ್ ಸ್ಮಾರಕವನ್ನು ನಿರ್ಮಾಣ ಮಾಡಿದ್ದು ನಮ್ಮ ಸರಕಾರ. ಎ.ಪಿ.ಜೆ. ಅಬ್ದುಲ್ ಕಲಾಂ ಸ್ಮಾರಕವನ್ನು ರಾಮೇಶ್ವರಂನಲ್ಲಿ ನಿರ್ಮಾಣ ಮಾಡಿದ್ದು ನಮ್ಮದೇ ಸರಕಾರ. ಅದೇ ರೀತಿ ನೇತಾಜಿ ಸುಭಾಷ್ ಚಂದ್ರ ಬೋಸ್, ಮತ್ತು ಶ್ಯಾಮ್ ಜೀ ಕೃಷ್ಣ ವರ್ಮಾ ಅವರಂತಹ ಶ್ರೇಷ್ಟ ವ್ಯಕ್ತಿತ್ವದ ಜೊತೆ ಸಂಬಂಧ ಹೊಂದಿರುವ ಸ್ಥಳಗಳ ಸೌಂದರ್ಯವನ್ನು ಹೆಚ್ಚಿಸಲಾಗಿದೆ. ನಮ್ಮ ಬುಡಕಟ್ಟು ಸಮಾಜದ ವೈಭವ ಪೂರಿತ ಚರಿತ್ರೆಯನ್ನು ಮುಂಚೂಣಿಗೆ ತರಲು ಆದಿವಾಸಿ (ಬುಡಕಟ್ಟು) ವಸ್ತು ಸಂಗ್ರಹಾಲಯಗಳನ್ನು ದೇಶಾದ್ಯಂತ ನಿರ್ಮಾಣ ಮಾಡಲಾಗಿದೆ. ಕೇವಾಡಿಯಾದಲ್ಲಿ ನಿರ್ಮಾಣ ಮಾಡಲಾದ ಏಕತಾ ಪ್ರತಿಮೆ ಇಡೀ ದೇಶದ ಹೆಮ್ಮೆ. ಕೊರೊನಾ ಅವಧಿ ಆರಂಭಕ್ಕೆ ಮೊದಲು 45 ಲಕ್ಷಕ್ಕೂ ಅಧಿಕ ಜನರು ಏಕತಾ ಪ್ರತಿಮೆಗೆ ಭೇಟಿ ನೀಡಿದ್ದರು. ಕೊರೊನಾ ಅವಧಿ ಇದ್ದಾಗಲೂ 75 ಲಕ್ಷ ಜನರು ಇದುವರೆಗೆ ಏಕತಾ ಪ್ರತಿಮೆಗೆ ಭೇಟಿ ನೀಡಿದ್ದಾರೆ. ಇದು ಹೊಸದಾಗಿ ನಿರ್ಮಾಣ ಮಾಡಲಾದ ಸ್ಥಳಗಳ ಆಕರ್ಷಣೆ ಮತ್ತು ಸಾಮರ್ಥ್ಯ. ಈ ಪ್ರಯತ್ನಗಳು ಪ್ರವಾಸೋದ್ಯಮದ ಜೊತೆಗೆ ಕಾಲ ಕಾಲಕ್ಕೆ ನಮ್ಮ ಗುರುತಿಸುವಿಕೆಗೆ ಹೊಸ ಎತ್ತರವನ್ನು ಒದಗಿಸಬಲ್ಲವು.
ಮತ್ತು ಸ್ನೇಹಿತರೇ,
ನಾನು “ವೋಕಲ್ ಫಾರ್ ಲೋಕಲ್" ಕುರಿತು ಮಾತನಾಡುವಾಗ, ಕೆಲವು ಜನರು ಮೋದಿ ಅವರ “ವೋಕಲ್ ಫಾರ್ ಲೋಕಲ್ “ ಎಂದರೆ ದೀಪಾವಳಿ ಸಂದರ್ಭದಲ್ಲಿ ದೀಪಗಳನ್ನು ಎಲ್ಲಿ ಖರೀದಿ ಮಾಡಬೇಕು ಎಂಬುದಾಗಿದೆ ಎಂದು ಯೋಚಿಸುವುದನ್ನು ನಾನು ನೋಡಿದ್ದೇನೆ. ಇದರ ಅರ್ಥವನ್ನು ಅಷ್ಟಕ್ಕೆ ಸೀಮಿತ ಮಾಡಬೇಡಿ, ದಯವಿಟ್ಟು. ನಾನು “ವೋಕಲ್ ಫಾರ್ ಲೋಕಲ್” ಎಂಬ ಸಲಹೆ ನೀಡಿದಾಗ ಅಲ್ಲಿ ಪ್ರವಾಸೋದ್ಯಮ ಕೂಡಾ ನನ್ನ ದೃಷ್ಟಿಯಲ್ಲಿದೆ. ಕುಟುಂಬದಲ್ಲಿ ಮಕ್ಕಳಿಗೆ ಹೋರದೇಶಗಳಿಗೆ ಹೋಗಬೇಕು ಎಂಬ ಆಸೆ ಇದ್ದರೆ, ದುಬೈ ಅಥವಾ ಸಿಂಗಾಪುರಕ್ಕೆ ಹೋಗಬೇಕೆಂದಿದ್ದರೆ, ಆಗ ಕುಟುಂಬವು ವಿದೇಶಕ್ಕೆ ಹೋಗುವ ಯೋಜನೆಯನ್ನು ಮಾಡುವುದಕ್ಕೆ ಮೊದಲು ದೇಶದೊಳಗಿನ 15-10 ಪ್ರಮುಖ ಸ್ಥಳಗಳಿಗೆ ಭೇಟಿ ನೀಡಲು ನಿರ್ಧರಿಸಬೇಕು. ವಿಶ್ವದ ಇತರ ಪ್ರದೇಶಗಳಿಗೆ ಹೋಗುವುದಕ್ಕೆ ಮೊದಲು ಭಾರತದ ಅನುಭವವನ್ನು ಪಡೆಯಿರಿ.
ಸ್ನೇಹಿತರೇ,
ನಾವು ಜೀವನದ ಪ್ರತಿಯೊಂದು ಹಂತದಲ್ಲಿಯೂ “ವೋಕಲ್ ಫಾರ್ ಲೋಕಲ್” ನ್ನು ಅಳವಡಿಸಿಕೊಳ್ಳಬೇಕಾದ ಅಗತ್ಯವಿದೆ. ದೇಶವನ್ನು ಸಮೃದ್ಧಗೊಳಿಸಬೇಕಿದ್ದರೆ ಮತ್ತು ಯುವ ಜನತೆಗೆ ಅವಕಾಶಗಳನ್ನು ಸೃಷ್ಟಿ ಮಾಡಬೇಕಿದ್ದರೆ ನಾವು ಈ ದಾರಿಯನ್ನು ಅನುಸರಿಸಬೇಕು. ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ತನ್ನ ಸಂಪ್ರದಾಯಗಳಲ್ಲಿ ಮೂಲ ನೆಲೆಯನ್ನು ಹೊಂದಿರುವ ಆಧುನಿಕ ಭಾರತವನ್ನು ನಿರ್ಮಾಣ ಮಾಡಲು ನಾವು ಕಟಿಬದ್ಧರಾಗಬೇಕಿದೆ. ನಮ್ಮ ಯಾತ್ರಾ ಸ್ಥಳಗಳು ಮತ್ತು ಪ್ರವಾಸೀ ಸ್ಥಳಗಳು ಈ ನವಭಾರತವನ್ನು ವರ್ಣಮಯಗೊಳಿಸುತ್ತವೆ. ಇವು ನಮ್ಮ ಪರಂಪರೆ ಮತ್ತು ಅಭಿವೃದ್ಧಿಯ ಸಂಕೇತಗಳಾಗುತ್ತವೆ. ದೇಶದ ಅಭಿವೃದ್ಧಿಯ ಈ ನಿರಂತರ ಪ್ರಯಾಣ ಸೋಮನಾಥ ದಾದಾರ ಆಶೀರ್ವಾದದೊಂದಿಗೆ ಮುಂದುವರೆಯಲಿದೆ ಎಂಬ ಬಗ್ಗೆ ನನಗೆ ವಿಶ್ವಾಸವಿದೆ.
ಮತ್ತೊಮ್ಮೆ, ಹೊಸ ಸರ್ಕ್ಯೂಟ್ ಹೌಸ್ ಗಾಗಿ ನಾನು ನಿಮ್ಮೆಲ್ಲರನ್ನೂ ಅಭಿನಂದಿಸುತ್ತೇನೆ.
ನಿಮಗೆ ಬಹಳ ಧನ್ಯವಾದಗಳು
ಜೈ ಸೋಮನಾಥ!