ಹರ್ ಹರ್ ಮಹಾದೇವ್! ಶುಭಾಶಯಗಳು ಕಾಶಿ. ತಮಿಳುನಾಡಿಗೆ ಶುಭಾಶಯಗಳು!
ತಮಿಳುನಾಡಿನಿಂದ ಬಂದವರಿಗೆ, ಕೃತಕ ಬುದ್ದಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಂಡು ಮೊದಲ ಬಾರಿಗೆ ತಮ್ಮ ಇಯರ್ಫೋನ್ ಗಳನ್ನು ಬಳಸಲು ವಿನಂತಿಸುತ್ತೇನೆ.
ವೇದಿಕೆಯಲ್ಲಿ ಉಪಸ್ಥಿತರಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜೀ, ನನ್ನ ಸಂಪುಟದ ಸಹೋದ್ಯೋಗಿಗಳು, ಕಾಶಿ ಮತ್ತು ತಮಿಳುನಾಡಿನ ವಿದ್ವಾಂಸರು, ತಮಿಳುನಾಡಿನಿಂದ ಕಾಶಿಗೆ ಬಂದಿರುವ ನನ್ನ ಸಹೋದರ ಸಹೋದರಿಯರು, ಇತರ ಎಲ್ಲ ಗಣ್ಯರು, ಮಹಿಳೆಯರೆ ಮತ್ತು ಸಜ್ಜನರೇ! ನೀವೆಲ್ಲ ನೂರಾರು ಕಿಲೋಮೀಟರ್ ಪ್ರಯಾಣ ಮಾಡಿ ಇಷ್ಟೊಂದು ಸಂಖ್ಯೆಯಲ್ಲಿ ಕಾಶಿಗೆ ಬಂದಿದ್ದೀರಿ. ನೀವೆಲ್ಲರೂ ಕಾಶಿಗೆ ಅತಿಥಿಗಳಿಗಿಂತ ಹೆಚ್ಚಾಗಿ ನನ್ನ ಕುಟುಂಬದ ಸದಸ್ಯರಾಗಿ ಬಂದಿದ್ದೀರಿ. ಕಾಶಿ-ತಮಿಳು ಸಂಗಮಕ್ಕೆ ನಾನು ನಿಮ್ಮೆಲ್ಲರನ್ನು ಸ್ವಾಗತಿಸುತ್ತೇನೆ.
ನನ್ನ ಬಂಧುಗಳೇ,
ತಮಿಳುನಾಡಿನಿಂದ ಕಾಶಿಗೆ ಬರುವುದೆಂದರೆ ಮಹಾದೇವನ ಒಂದು ಮನೆಯಿಂದ ಇನ್ನೊಂದು ಮನೆಗೆ ಬರುವುದು! ತಮಿಳುನಾಡಿನಿಂದ ಕಾಶಿಗೆ ಬರುವುದೆಂದರೆ ಮಧುರೈ ಮೀನಾಕ್ಷಿಯಿಂದ ಕಾಶಿ ವಿಶಾಲಾಕ್ಷಿಗೆ ಬರುವುದು. ಆದ್ದರಿಂದಲೇ ತಮಿಳುನಾಡಿನವರು ಮತ್ತು ಕಾಶಿಯ ಜನರ ಹೃದಯದಲ್ಲಿ ಇರುವ ಪ್ರೀತಿ ಮತ್ತು ಬಾಂಧವ್ಯ ವಿಭಿನ್ನ ಮತ್ತು ಅನನ್ಯವಾಗಿದೆ. ಕಾಶಿಯ ಜನರು ನಿಮ್ಮೆಲ್ಲರಿಗೂ ಸೇವೆ ಸಲ್ಲಿಸಲು ಸರ್ವ ಪ್ರಯತ್ನವನ್ನೂ ಮಾಡುವರು ಎಂದು ನನಗೆ ಖಾತ್ರಿಯಿದೆ. ನೀವು ಈ ಸ್ಥಳದಿಂದ ಹೊರಡುವಾಗ, ಬಾಬಾ ವಿಶ್ವನಾಥರ ಆಶೀರ್ವಾದದ ಜೊತೆಗೆ, ನೀವು ಕಾಶಿಯ ರುಚಿ, ಕಾಶಿಯ ಸಂಸ್ಕೃತಿ ಮತ್ತು ಕಾಶಿಯ ನೆನಪುಗಳನ್ನು ಸಹ ನಿಮ್ಮೊಂದಿಗೆ ತೆಗೆದುಕೊಂಡು ಹೋಗುತ್ತೀರಿ. ಇಂದು ಇಲ್ಲಿ ಕೃತಕ ಬುದ್ಧಿಮತ್ತೆಯ ಮೂಲಕ ತಂತ್ರಜ್ಞಾನದ ಹೊಸ ಬಳಕೆಯೂ ನಡೆದಿದೆ. ಇದು ಹೊಸ ಆರಂಭವಾಗಿದೆ ಮತ್ತು ಆಶಾದಾಯಕವಾಗಿ ಇದು ನನ್ನ ಮಾತುಗಳನ್ನು ಅರ್ಥಮಾಡಿಕೊಳ್ಳಲು ನಿಮಗೆ ಸುಲಭವಾಗಿದೆ ಎಂದುಕೊಳ್ಳುತ್ತೇನೆ.
ಇದು ಪರವಾಗಿಲ್ಲವೇ? ತಮಿಳುನಾಡಿನ ಸ್ನೇಹಿತರೇ, ಸರಿಯಿದೆಯೇ? ನೀವು ಖುಷಿ ಪಡ್ತಿದೀರಾ? ಇದು ನನ್ನ ಮೊದಲ ಅನುಭವ. ಮುಂದೆ, ನಾನು ಅದನ್ನು ಬಳಸುತ್ತೇನೆ. ನೀವು ನನಗೆ ಹೇಗೆಂದು ಪ್ರತಿಕ್ರಿಯೆಯನ್ನು ನೀಡಬೇಕು. ಈಗ ಎಂದಿನಂತೆ ನಾನು ಹಿಂದಿಯಲ್ಲಿ ಮಾತನಾಡುತ್ತೇನೆ; ಅವರು ನನಗೆ ತಮಿಳಿನಲ್ಲಿ ಅರ್ಥೈಸಲು ಸಹಾಯ ಮಾಡುತ್ತಾರೆ.
ನನ್ನ ಬಂಧುಗಳೇ,
ಇಂದು ಕನ್ಯಾಕುಮಾರಿ ವಾರಣಾಸಿ ತಮಿಳು ಸಂಗಮಂ ರೈಲಿಗೆ ಇಲ್ಲಿಂದ ಚಾಲನೆ ನೀಡಲಾಗಿದೆ. ತಿರುಕುರಳ್, ಮಣಿಮೇಕಲೈ ಮತ್ತು ಅನೇಕ ತಮಿಳು ಗ್ರಂಥಗಳ ಅನುವಾದಗಳನ್ನು ವಿವಿಧ ಭಾಷೆಗಳಿಗೆ ಬಿಡುಗಡೆ ಮಾಡುವ ಸೌಭಾಗ್ಯವೂ ನನಗೆ ಸಿಕ್ಕಿದೆ. ಒಂದು ಕಾಲದಲ್ಲಿ ಕಾಶಿಯ ವಿದ್ಯಾರ್ಥಿಯಾಗಿದ್ದ ಸುಬ್ರಹ್ಮಣ್ಯ ಭಾರತಿ ಜೀ ಅವರು ಹೀಗೆ ಬರೆದಿದ್ದಾರೆ - “ಕಾಶಿ ನಗರ ಪುಲವರ್ ಪೇಸುಮ್ ಉರೈತಮ್ ಕಾಂಚಿಯಲ್ಲಿ ಕೇಟ್ಪದರ್ಕು ಒರು ಕರುವಿ ಸೆಯ್ವೊಮ್” ಕಾಶಿಯಲ್ಲಿ ಜಪಿಸಲ್ಪಡುವ ಮಂತ್ರಗಳನ್ನು ತಮಿಳುನಾಡಿನ ಕಂಚಿ ನಗರದಲ್ಲಿ ಕೇಳುವ ವ್ಯವಸ್ಥೆ ಇದ್ದರೆ ಚೆನ್ನಾಗಿರುತ್ತದೆ ಎಂದು ಹೇಳ ಬಯಸಿದ್ದರು. ಇಂದು ಸುಬ್ರಹ್ಮಣ್ಯ ಭಾರತಿ ಜೀ ಅವರ ಆಶಯ ಈಡೇರುವುದು ಕಾಣುತ್ತಿದೆ ಕಾಶಿ-ತಮಿಳು ಸಂಗಮದ ಧ್ವನಿ ದೇಶಾದ್ಯಂತ ಮತ್ತು ಇಡೀ ವಿಶ್ವವನ್ನು ತಲುಪುತ್ತಿದೆ. ಈ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ಸಂಬಂಧಪಟ್ಟ ಎಲ್ಲಾ ಸಚಿವಾಲಯಗಳು, ಯುಪಿ ಸರ್ಕಾರ ಮತ್ತು ತಮಿಳುನಾಡಿನ ಎಲ್ಲಾ ಜನರನ್ನು ನಾನು ಅಭಿನಂದಿಸುತ್ತೇನೆ.
ನನ್ನ ಬಂಧುಗಳೇ,
ಕಳೆದ ವರ್ಷ ಕಾಶಿ-ತಮಿಳು ಸಂಗಮಂ ಆರಂಭವಾದಾಗಿನಿಂದ ಈ ಯಾತ್ರೆಗೆ ದಿನದಿಂದ ದಿನಕ್ಕೆ ಲಕ್ಷಗಟ್ಟಲೆ ಜನ ಸೇರುತ್ತಿದ್ದಾರೆ. ವಿವಿಧ ಮಠಾಧೀಶರು, ವಿದ್ಯಾರ್ಥಿಗಳು, ಅನೇಕ ಕಲಾವಿದರು, ಸಾಹಿತಿಗಳು, ಕುಶಲಕರ್ಮಿಗಳು, ವೃತ್ತಿಪರರು, ಹಲವಾರು ಕ್ಷೇತ್ರಗಳ ಜನರು ಈ ಸಂಗಮದಿಂದ ಪರಸ್ಪರ ಸಂವಹನ ಮತ್ತು ಸಂಪರ್ಕಕ್ಕೆ ಪರಿಣಾಮಕಾರಿ ವೇದಿಕೆಯನ್ನು ಪಡೆದುಕೊಂಡಿದ್ದಾರೆ. ಈ ಸಂಗಮವನ್ನು ಯಶಸ್ವಿಗೊಳಿಸಲು ಬನಾರಸ್ ಹಿಂದೂ ವಿಶ್ವವಿದ್ಯಾನಿಲಯ ಮತ್ತು ಐಐಟಿ ಮದ್ರಾಸ್ ಕೂಡ ಸೇರಿಕೊಂಡಿರುವುದು ನನಗೆ ಖುಷಿ ತಂದಿದೆ. ಐಐಟಿ ಮದ್ರಾಸ್ ಬನಾರಸ್ನ ಸಾವಿರಾರು ವಿದ್ಯಾರ್ಥಿಗಳಿಗೆ ವಿಜ್ಞಾನ ಮತ್ತು ಗಣಿತದಲ್ಲಿ ಆನ್ಲೈನ್ ಬೆಂಬಲವನ್ನು ಒದಗಿಸಲು ವಿದ್ಯಾಶಕ್ತಿ ಉಪಕ್ರಮವನ್ನು ಪ್ರಾರಂಭಿಸಿದೆ. ಒಂದು ವರ್ಷದೊಳಗೆ ತೆಗೆದುಕೊಂಡ ಹಲವಾರು ಉಪಕ್ರಮಗಳು ಕಾಶಿ ಮತ್ತು ತಮಿಳುನಾಡು ನಡುವಿನ ಸಂಬಂಧಗಳು ಭಾವನಾತ್ಮಕ ಮತ್ತು ಸೃಜನಶೀಲವಾಗಿವೆ ಎನ್ನುವುದಕ್ಕೆ ಸಾಕ್ಷಿಯಾಗಿದೆ.
ನನ್ನ ಬಂಧುಗಳೇ,
ʼಕಾಶಿ ತಮಿಳ್ ಸಂಗಮಂ’ ಅಂತಹ ಒಂದು ನಿರಂತರ ಹರಿವಾಗಿದೆ ಅದು ‘ಏಕ ಭಾರತ, ಶ್ರೇಷ್ಠ ಭಾರತ’ಎನ್ನುವ ಮನೋಭಾವವನ್ನು ನಿರಂತರವಾಗಿ ಬಲಪಡಿಸುತ್ತಿದೆ. ಇದೇ ಚಿಂತನೆಯೊಂದಿಗೆ ಕೆಲ ಸಮಯದ ಹಿಂದೆ ಕಾಶಿಯಲ್ಲಿ ಗಂಗಾ-ಪುಷ್ಕರಲು ಉತ್ಸವ ಅಂದರೆ ಕಾಶಿ-ತೆಲುಗು ಸಂಗಮಂ ಅನ್ನು ಆಯೋಜಿಸಲಾಗಿತ್ತು. ಸೌರಾಷ್ಟ್ರ-ತಮಿಳು ಸಂಗಂ ಅನ್ನು ಗುಜರಾತಿನಲ್ಲಿ ಯಶಸ್ವಿಯಾಗಿ ಆಯೋಜಿಸಿದ್ದೆವು. ನಮ್ಮ ರಾಜಭವನಗಳು 'ಏಕ ಭಾರತ, ಶ್ರೇಷ್ಠ ಭಾರತ'ಕ್ಕಾಗಿ ಅದ್ಭುತ ಉಪಕ್ರಮಗಳನ್ನು ಕೈಗೊಂಡಿವೆ. ಈಗ ಇತರ ರಾಜ್ಯಗಳ ಸಂಸ್ಥಾಪನಾ ದಿನವನ್ನು ರಾಜಭವನಗಳಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ; ಇತರ ರಾಜ್ಯಗಳಿಂದ ಜನರನ್ನು ಆಹ್ವಾನಿಸುವ ಮೂಲಕ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ನಾವು ಹೊಸ ಸಂಸತ್ತಿನ ಕಟ್ಟಡವನ್ನು ಪ್ರವೇಶಿಸಿದಾಗಲೂ ಈ ‘ಏಕ ಭಾರತ, ಶ್ರೇಷ್ಠ ಭಾರತʼದ ಚೈತನ್ಯವು ಗೋಚರಿಸಿತು. ಹೊಸ ಸಂಸತ್ ಕಟ್ಟಡದಲ್ಲಿ ಪವಿತ್ರ ಸೆಂಗೋಲ್ ಅನ್ನು ಸ್ಥಾಪಿಸಲಾಗಿದೆ. ಅಧೀನಂ ಮುನಿಗಳ ಮಾರ್ಗದರ್ಶನದಲ್ಲಿ ಇದೇ ಸೆಂಗೋಲ್ 1947ರಲ್ಲಿ ಅಧಿಕಾರ ಹಸ್ತಾಂತರದ ಸಂಕೇತವಾಯಿತು. ಇಂದು ಇದುವೇ ನಮ್ಮ ದೇಶದ ಆತ್ಮಕ್ಕೆ ನೀರೆರೆಯುತ್ತಿರುವ ‘ಏಕ ಭಾರತ ಶ್ರೇಷ್ಠ ಭಾರತದ ಈ ಚೈತನ್ಯದ ಹರಿವು.
ನನ್ನ ಬಂಧುಗಳೇ,
ನಾವು ಭಾರತೀಯರು, ಒಂದಾಗಿದ್ದರೂ, ಆಡುಭಾಷೆ, ಭಾಷೆ, ಬಟ್ಟೆ, ಆಹಾರ, ಜೀವನಶೈಲಿಯಲ್ಲಿ ವೈವಿಧ್ಯತೆಯಿಂದ ತುಂಬಿದ್ದೇವೆ. ಭಾರತದ ಈ ವೈವಿಧ್ಯತೆಯು ಆ ಆಧ್ಯಾತ್ಮಿಕ ಪ್ರಜ್ಞೆಯಲ್ಲಿ ಬೇರೂರಿದೆ, ಅದಕ್ಕಾಗಿ ಇದನ್ನು ತಮಿಳಿನಲ್ಲಿ ಹೇಳಲಾಗುತ್ತದೆ - 'ನೀರೆಲ್ಲಾಮ್ ಗಂಗೈ, ನಿಲಮೆಲ್ಲಮ್ ಕಾಸಿ'. ಈ ಮಾತು ಮಹಾನ್ ಪಾಂಡ್ಯ ರಾಜ 'ಪರಾಕ್ರಮ ಪಾಂಡಿಯನ್' ನಿಂದ ಬಂದಿದೆ. ಇದರ ಅರ್ಥ ಎಲ್ಲಾ ನೀರು ಗಂಗಾಜಲ, ಭಾರತದಲ್ಲಿರುವ ಪ್ರತಿಯೊಂದು ಭೂಮಿಯೂ ಕಾಶಿ ಎಂದು.
ನಮ್ಮ ಆಧ್ಯಾತ್ಮಿಕ ಕೇಂದ್ರಗಳು ಮತ್ತು ಕಾಶಿಯು ಉತ್ತರದಿಂದ ಆಕ್ರಮಣಕಾರರಿಂದ ದಾಳಿಗೊಳಗಾದಾಗ, ರಾಜ ಪರಾಕ್ರಮ್ ಪಾಂಡ್ಯನ್ ಕಾಶಿ ನಾಶ ಮಾಡಲಾಗುವುದಿಲ್ಲ ಎಂದು ತೆಂಕಾಶಿ ಮತ್ತು ಶಿವಕಾಶಿಯಲ್ಲಿ ದೇವಾಲಯಗಳನ್ನು ನಿರ್ಮಿಸಿದರು. ನೀವು ಪ್ರಪಂಚದ ಯಾವುದೇ ನಾಗರಿಕತೆಯನ್ನು ನೋಡಿದರೆ, ಆಧ್ಯಾತ್ಮಿಕತೆಯಲ್ಲಿ ಅಂತಹ ಸರಳ ಮತ್ತು ಉದಾತ್ತ ವೈವಿಧ್ಯತೆಯ ಸ್ವರೂಪವನ್ನು ನೀವು ಎಲ್ಲಿಯೂ ಕಾಣುವುದಿಲ್ಲ! ಇತ್ತೀಚೆಗಂತೂ ಜಿ-20 ಶೃಂಗಸಭೆಯ ವೇಳೆ ಭಾರತ ದೇಶದ ಈ ವೈವಿಧ್ಯತೆಯನ್ನು ಕಂಡು ಜಗತ್ತು ಬೆರಗಾಗಿತ್ತು.
ನನ್ನ ಬಂಧುಗಳೇ,
ಪ್ರಪಂಚದ ಇತರ ದೇಶಗಳಲ್ಲಿ, ಒಂದು ರಾಷ್ಟ್ರವು ರಾಜಕೀಯ ವ್ಯಾಖ್ಯಾನವನ್ನು ಹೊಂದಿದೆ, ಆದರೆ ಒಂದು ರಾಷ್ಟ್ರವಾಗಿ ಭಾರತವು ಆಧ್ಯಾತ್ಮಿಕ ನಂಬಿಕೆಗಳಿಂದ ಕೂಡಿದೆ. ತಮ್ಮ ಪ್ರಯಾಣದ ಮೂಲಕ ಭಾರತದ ರಾಷ್ಟ್ರೀಯ ಪ್ರಜ್ಞೆಯನ್ನು ಜಾಗೃತಗೊಳಿಸಿದ ಆದಿ ಶಂಕರಾಚಾರ್ಯ ಮತ್ತು ರಾಮಾನುಜಾಚಾರ್ಯರಂತಹ ಋಷಿಗಳಿಂದ ಭಾರತವನ್ನು ಏಕೀಕರಿಸಲಾಗಿದೆ. ತಮಿಳುನಾಡಿನ ಅಧೀನಂ ಋಷಿಗಳೂ ಶತಮಾನಗಳಿಂದಲೂ ಕಾಶಿಯಂತಹ ಶೈವ ಕ್ಷೇತ್ರಗಳಿಗೆ ಪ್ರವಾಸ ಮಾಡುತ್ತಿದ್ದಾರೆ. ಕುಮಾರಗುರುಪರರು ಕಾಶಿಯಲ್ಲಿ ಮಠಗಳು ಮತ್ತು ದೇವಾಲಯಗಳನ್ನು ಸ್ಥಾಪಿಸಿದ್ದರು. ತಿರುಪಾನಂದಲ್ ಅಧೀನಂ ಈ ಸ್ಥಳಕ್ಕೆ ಎಷ್ಟು ಅಂಟಿಕೊಂಡಿದೆಯೆಂದರೆ ಇಂದಿಗೂ ಅದರ ಹೆಸರಿನೊಂದಿಗೆ 'ಕಾಶಿ'ಯನ್ನು ಸೇರಿಸಲಾಗುತ್ತದೆ. ಅದೇ ರೀತಿ, 'ಪಾಡಲ್ ಪೆಟ್ರ ಸ್ಥಲಂ' ಬಗ್ಗೆ ತಮಿಳು ಆಧ್ಯಾತ್ಮಿಕ ಸಾಹಿತ್ಯವು ಇದನ್ನು ಮಾಡುವ ವ್ಯಕ್ತಿಯು ಕೇದಾರ ಅಥವಾ ತಿರುಕೇಧಾರಂನಿಂದ ತಿರುನಲ್ವೇಲಿಗೆ ಪ್ರಯಾಣಿಸುತ್ತಾನೆ ಎಂದು ಹೇಳುತ್ತದೆ. ಈ ಪ್ರಯಾಣಗಳು ಮತ್ತು ತೀರ್ಥಯಾತ್ರೆಗಳ ಮೂಲಕ, ಭಾರತವು ಸಾವಿರಾರು ವರ್ಷಗಳಿಂದ ಒಂದು ರಾಷ್ಟ್ರವಾಗಿ ಸ್ಥಿರವಾಗಿ ಮತ್ತು ಶಾಶ್ವತವಾಗಿ ಉಳಿದಿದೆ.
ಕಾಶಿ ತಮಿಳು ಸಂಗಮಂ ಮೂಲಕ ದೇಶದ ಯುವಜನರಲ್ಲಿ ಈ ಪುರಾತನ ಸಂಪ್ರದಾಯದ ಉತ್ಸಾಹ ಹೆಚ್ಚಿರುವುದು ನನಗೆ ಸಂತೋಷ ತಂದಿದೆ. ತಮಿಳುನಾಡಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು, ಯುವಕರು ಕಾಶಿಗೆ ಆಗಮಿಸುತ್ತಿದ್ದಾರೆ. ಇಲ್ಲಿಂದ ಪ್ರಯಾಗ, ಅಯೋಧ್ಯೆ ಮತ್ತಿತರ ತೀರ್ಥಕ್ಷೇತ್ರಗಳಿಗೂ ಹೋಗುತ್ತಿದ್ದೇವೆ. ಕಾಶಿ-ತಮಿಳು ಸಂಗಮಕ್ಕೆ ಬರುವ ಜನರಿಗೆ ಅಯೋಧ್ಯೆ ದರ್ಶನಕ್ಕೂ ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ರಾಮೇಶ್ವರಕ್ಕೆ ಅಡಿಪಾಯ ಹಾಕಿದ ಮಹಾದೇವ ಹಾಗೂ ಶ್ರೀರಾಮರ ದರ್ಶನ ಪಡೆಯುವುದು ಮಹಾಭಾಗ್ಯ.
ನನ್ನ ಬಂಧುಗಳೇ,
“ಜಾನೇಂ ಬಿನು ನ ಹೋಯಿ ಪರತೀತಿ. ಬಿನ್ ಪರತೀತಿ ಹೋಇ ನಹಿ ಪ್ರೀತಿ॥ ಎಂದು ಹೇಳಲಾಗುತ್ತದೆ.
ಅಂದರೆ ಜ್ಞಾನವು ನಂಬಿಕೆಯನ್ನು ಹೆಚ್ಚಿಸುತ್ತದೆ ಮತ್ತು ನಂಬಿಕೆಯು ಪ್ರೀತಿಯನ್ನು ಹೆಚ್ಚಿಸುತ್ತದೆ. ಆದ್ದರಿಂದ, ಪರಸ್ಪರರ ಬಗ್ಗೆ, ಪರಸ್ಪರರ ಸಂಪ್ರದಾಯಗಳು ಮತ್ತು ನಮ್ಮ ಸಾಮಾನ್ಯ ಪರಂಪರೆಯ ಬಗ್ಗೆ ಕಲಿಯುವುದು ಮುಖ್ಯವಾಗಿದೆ. ಉತ್ತರ ಮತ್ತು ದಕ್ಷಿಣದಲ್ಲಿ ಕಾಶಿ ಮತ್ತು ಮಧುರೈನ ಉದಾಹರಣೆ ನಮ್ಮ ಮುಂದಿದೆ. ಇವೆರಡೂ ಮಹಾ ದೇವಾಲಯ ನಗರಗಳು. ಇವೆರಡೂ ಶ್ರೇಷ್ಠ ಯಾತ್ರಾ ಸ್ಥಳಗಳು. ಮಧುರೈ ವೈಗೈ ದಡದಲ್ಲಿದೆ ಮತ್ತು ಕಾಶಿಯು ಗಂಗೆಯ ದಡದಲ್ಲಿದೆ. ತಮಿಳು ಸಾಹಿತ್ಯವು ವೈಗೈ ಮತ್ತು ಗಂಗೆ ಎರಡರ ಬಗ್ಗೆ ಮಾತನಾಡುತ್ತದೆ. ಈ ಪರಂಪರೆಯ ಬಗ್ಗೆ ತಿಳಿದುಕೊಂಡಾಗ ನಮ್ಮ ಸಂಬಂಧಗಳ ಆಳವೂ ಅರಿವಾಗುತ್ತದೆ.
ನನ್ನ ಬಂಧುಗಳೇ,
ಕಾಶಿ-ತಮಿಳು ಸಂಗಮದ ಈ ಸಂಗಮವು ನಮ್ಮ ಪರಂಪರೆಯನ್ನು ಬಲಪಡಿಸುತ್ತದೆ ಮತ್ತು 'ಏಕ ಭಾರತ, ಶ್ರೇಷ್ಠ ಭಾರತ' ಎನ್ನುವ ಮನೋಭಾವವನ್ನು ಬಲಪಡಿಸುತ್ತದೆ ಎಂದು ನನಗೆ ವಿಶ್ವಾಸವಿದೆ. ಕಾಶಿಯಲ್ಲಿನ ವಾಸ್ತವ್ಯ ನಿಮಗೆಲ್ಲರಿಗೂ ಸುಖಮಯವಾಗಿರಲಿ ಎಂದು ಹಾರೈಸುತ್ತಾ ನನ್ನ ಭಾಷಣವನ್ನು ಮುಗಿಸುತ್ತೇನೆ ಮತ್ತು ಅದೇ ಸಮಯದಲ್ಲಿ ತಮಿಳುನಾಡಿನ ಹೆಸರಾಂತ ಗಾಯಕ ಶ್ರೀರಾಮ್ ಕಾಶಿಗೆ ಆಗಮಿಸಿ ನಮ್ಮೆಲ್ಲರನ್ನು ಭಾವುಕರನ್ನಾಗಿಸಿದ್ದಕ್ಕಾಗಿ ಹೃತ್ಪೂರ್ವಕವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ. ನಾನು ಅವರನ್ನು ಅಭಿನಂದಿಸುತ್ತೇನೆ. ಮತ್ತು ಕಾಶಿಯ ಜನರು ತಮಿಳು ಗಾಯಕ ಶ್ರೀರಾಮನನ್ನು ಕೇಳುತ್ತಿದ್ದ ಭಕ್ತಿಯಲ್ಲಿ ನಮ್ಮ ಒಗ್ಗಟ್ಟಿನ ಬಲವನ್ನು ಸಹ ನೋಡುತ್ತಿದ್ದರು. ಕಾಶಿ-ತಮಿಳು ಸಂಗಮದ ಈ ನಿರಂತರ ಪ್ರಯಾಣಕ್ಕೆ ಮತ್ತೊಮ್ಮೆ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ. ಮತ್ತು ಎಲ್ಲರಿಗೂ ಬಹಳ ಧನ್ಯವಾದಗಳು!