Quoteʻಭಾರತ್ 6ಜಿ ವಿಷನ್ ಡಾಕ್ಯುಮೆಂಟ್ʼ ಅನಾವರಣ ಹಾಗೂ 6ಜಿ ಸಂಶೋಧನಾ ಮತ್ತು ಅಭಿವೃದ್ಧಿ ಪ್ರಯೋಗ ವೇದಿಕೆಗೆ ಚಾಲನೆ
Quote'ಕಾಲ್ ಬಿಫೋರ್ ಯು ಡಿಗ್' ಆ್ಯಪ್ ಬಿಡುಗಡೆ
Quoteತಮ್ಮ ಆರ್ಥಿಕತೆಯನ್ನು ಬೆಳೆಸಲು ಡಿಜಿಟಲ್ ರೂಪಾಂತರವನ್ನು ಬಯಸುವ ದೇಶಗಳಿಗೆ ಭಾರತವು ಮಾದರಿಯಾಗಿದೆ: ಐಟಿಯು ಪ್ರಧಾನ ಕಾರ್ಯದರ್ಶಿ
Quote"ಭಾರತವು ಎರಡು ಪ್ರಮುಖ ಸಾಮರ್ಥ್ಯಗಳನ್ನು ಹೊಂದಿದೆ, ಅವೆಂದರೆ - ನಂಬಿಕೆ ಮತ್ತು ಪ್ರಮಾಣ. ನಂಬಿಕೆ ಮತ್ತು ಪ್ರಮಾಣವಿಲ್ಲದೆ ನಾವು ತಂತ್ರಜ್ಞಾನವನ್ನು ಎಲ್ಲಾ ಮೂಲೆಗಳಿಗೆ ಕೊಂಡೊಯ್ಯಲು ಸಾಧ್ಯವಿಲ್ಲ"
Quote"ಭಾರತದ ಪಾಲಿಗೆ ದೂರಸಂಪರ್ಕ ತಂತ್ರಜ್ಞಾನವು ಶಕ್ತಿಯ ಸ್ವರೂಪದಲ್ಲಿಲ್ಲ, ಬದಲಿಗೆ ಅದು ಸಬಲೀಕರಣದ ಧ್ಯೇಯವಾಗಿದೆ"
Quote"ಭಾರತವು ಡಿಜಿಟಲ್ ಕ್ರಾಂತಿಯ ಮುಂದಿನ ಹಂತದತ್ತ ವೇಗವಾಗಿ ಸಾಗುತ್ತಿದೆ"
Quote"ಇಂದು ಪ್ರಸ್ತುತಪಡಿಸಿದ ವಿಷನ್ ಡಾಕ್ಯುಮೆಂಟ್ ಮುಂದಿನ ಕೆಲವು ವರ್ಷಗಳಲ್ಲಿ 6ಜಿ ಚಾಲನೆಗೆ ಪ್ರಮುಖ ಆಧಾರವಾಗಲಿದೆ"
Quote"5ಜಿ ಶಕ್ತಿಯೊಂದಿಗೆ ಇಡೀ ವಿಶ್ವದ ಕೆಲಸದ ಸಂಸ್ಕೃತಿಯನ್ನು ಬದಲಾಯಿಸಲು ಭಾರತವು ಅನೇಕ ದೇಶಗಳೊಂದಿಗೆ ಕೆಲಸ ಮಾಡುತ್ತಿದೆ"
Quote"ಐಟಿಯುನ ʻವಿಶ್ವ ದೂರಸಂಪರ್ಕ ಪ್ರಮಾಣೀಕರಣ ಸಭೆʼ ಮುಂದಿನ ವರ್ಷ ಅಕ್ಟೋಬರ್‌ನಲ್ಲಿ ದೆಹಲಿಯಲ್ಲಿ ನಡೆಯಲಿದೆ"
Quote"ಈ ದಶಕವು ಭಾರತದ `ತಂತ್ರಜ್ಞಾನದ ದಶಕ’ (tech-Ade) ಆಗಿದೆ”

ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿಗಳಾದ ಡಾ. ಎಸ್. ಜೈಶಂಕರ್ ಅವರೇ, ಶ್ರೀ ಅಶ್ವಿನಿ ವೈಷ್ಣವ್ ಅವರೇ ಮತ್ತು ʻಐಟಿಯುʼ ಪ್ರಧಾನ ಕಾರ್ಯದರ್ಶಿ ಶ್ರೀ ದೇವುಸಿನ್ಹ ಚೌಹಾಣ್ ಅವರೇ, ಇತರ ಗಣ್ಯರು, ಮಹಿಳೆಯರೇ ಮತ್ತು ಮಹನೀಯರೇ!

ಇಂದು ಬಹಳ ವಿಶೇಷ ಮತ್ತು ಪವಿತ್ರ ದಿನ. 'ಹಿಂದೂ ಕ್ಯಾಲೆಂಡರ್' ಹೊಸ ವರ್ಷ ಇಂದಿನಿಂದ ಪ್ರಾರಂಭವಾಗಿದೆ. ನಿಮ್ಮೆಲ್ಲರಿಗೂ ಮತ್ತು ಎಲ್ಲಾ ದೇಶವಾಸಿಗಳಿಗೆ ʻವಿಕ್ರಮ್ ಸಂವತ್ 2080ʼ ಶುಭಾಶಯಗಳನ್ನು ತಿಳಿಸಲು ಬಯಸುತ್ತೇನೆ. ನಮ್ಮ ವಿಶಾಲ ಮತ್ತು ವೈವಿಧ್ಯಮಯ ದೇಶದಲ್ಲಿ ಶತಮಾನಗಳಿಂದ ವಿಭಿನ್ನ ಕ್ಯಾಲೆಂಡರ್‌ಗಳು ಚಾಲ್ತಿಯಲ್ಲಿವೆ. ಕೊಲ್ಲಂ ಅವಧಿಯ ಮಲಯಾಳಂ ಕ್ಯಾಲೆಂಡರ್ ಇದೆ, ತಮಿಳು ಕ್ಯಾಲೆಂಡರ್ ಇದೆ, ಇದು ನೂರಾರು ವರ್ಷಗಳಿಂದ ಭಾರತಕ್ಕೆ ದಿನಾಂಕ ಮತ್ತು ಸಮಯವನ್ನು ತಿಳಿಸುತ್ತಿದೆ. ʻವಿಕ್ರಮ್ ಸಂವತ್ʼ ಕೂಡ 2080 ವರ್ಷಗಳ ಹಿಂದಿನಿಂದ ಇದೆ. ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಸ್ತುತ 2023 ಅನ್ನು ಸೂಚಿಸುತ್ತದೆ. ಆದರೆ ʻವಿಕ್ರಮ್ ಸಂವತ್ʼ ಅದಕ್ಕಿಂತಲೂ 57 ವರ್ಷಗಳ ಹಿಂದೆ ಪ್ರಾರಂಭವಾಯಿತು. ಈ ಶುಭ ದಿನದಂದು ದೂರಸಂಪರ್ಕ, ʻಐಸಿಟಿʼ ಮತ್ತು ಸಂಬಂಧಿತ ಆವಿಷ್ಕಾರಗಳಲ್ಲಿ ಹೊಸ ಆರಂಭ ಆಗುತ್ತಿರುವುದು ನನಗೆ ಸಂತೋಷ ತಂದಿದೆ. ಇಂದು ʻಅಂತಾರಾಷ್ಟ್ರೀಯ ದೂರಸಂಪರ್ಕ ಒಕ್ಕೂಟʼ(ಐಟಿಯು) ಪ್ರದೇಶ ಕಚೇರಿ ಮತ್ತು ಆವಿಷ್ಕಾರ ಕೇಂದ್ರವನ್ನು ಉದ್ಘಾಟಿಸಲಾಯಿತು. ಇದಲ್ಲದೆ, ʻ6 ಜಿʼ ಪ್ರಯೋಗ ವೇದಿಕೆ (ಟೆಸ್ಟ್ ಬೆಡ್) ಅನ್ನು ಸಹ ಇಂದು ಪ್ರಾರಂಭಿಸಲಾಗಿದೆ. ಈ ತಂತ್ರಜ್ಞಾನಕ್ಕೆ ಸಂಬಂಧಿಸಿದ ನಮ್ಮ ʻವಿಷನ್ ಡಾಕ್ಯುಮೆಂಟ್ʼ ಅನ್ನು ಸಹ ಅನಾವರಣಗೊಳಿಸಲಾಗಿದೆ. ಇದು ಡಿಜಿಟಲ್ ಇಂಡಿಯಾದಲ್ಲಿ ಹೊಸ ಶಕ್ತಿಯನ್ನು ತರುವುದಲ್ಲದೆ, ದಕ್ಷಿಣ ಏಷ್ಯಾ ಮತ್ತು ಜಗತ್ತಿನ ದಕ್ಷಿದದ ದೇಶಗಳಿಗೆ ಪರಿಹಾರಗಳು ಮತ್ತು ನಾವೀನ್ಯತೆಗಳನ್ನು ಒದಗಿಸುತ್ತದೆ. ಇದು ಅನೇಕ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ, ವಿಶೇಷವಾಗಿ ನಮ್ಮ ಶಿಕ್ಷಣ ತಜ್ಞರು, ಆವಿಷ್ಕಾರಕರು, ನವೋದ್ಯಮಗಳು ಮತ್ತು ಉದ್ಯಮಕ್ಕೆ ಅವಕಾಶಗಳ ಮಹಾಪೂರವೇ ತೆರೆದುಕೊಳ್ಳಲಿದೆ. 

|

ಸ್ನೇಹಿತರೇ,

ಭಾರತವು ʻಜಿ-20ʼ ಶೃಂಗಸಭೆಯ ಅಧ್ಯಕ್ಷತೆ ವಹಿಸುತ್ತಿರುವ ಈ ಸಂದರ್ಭದಲ್ಲಿ ಪ್ರಾದೇಶಿಕ ವಿಭಜನೆಯನ್ನು ಕಡಿಮೆ ಮಾಡುವುದು ಭಾರತದ ಆದ್ಯತೆಗಳಲ್ಲಿ ಒಂದಾಗಿದೆ. ಕೆಲವು ವಾರಗಳ ಹಿಂದೆ ಭಾರತವು ʻಗ್ಲೋಬಲ್ ಸೌತ್ ಶೃಂಗಸಭೆʼಯನ್ನು ಆಯೋಜಿಸಿತ್ತು. ಜಾಗತಿಕ ದಕ್ಷಿಣದ ವಿಶಿಷ್ಟ ಅಗತ್ಯಗಳನ್ನು ಗಮನಿಸಿದರೆ, ತಂತ್ರಜ್ಞಾನ, ವಿನ್ಯಾಸ ಮತ್ತು ಮಾನದಂಡಗಳ ಪಾತ್ರ ಬಹಳ ಮುಖ್ಯ. ʻಗ್ಲೋಬಲ್ ಸೌತ್ʼ ಈಗ ತಾಂತ್ರಿಕ ವಿಭಜನೆಯನ್ನು ನಿವಾರಿಸಲು ಪ್ರಯತ್ನಿಸುತ್ತಿದೆ. ʻಐಟಿಯುʼನ ಈ ಪ್ರದೇಶ ಕಚೇರಿ ಮತ್ತು ಆವಿಷ್ಕಾರ ಕೇಂದ್ರವು ಈ ನಿಟ್ಟಿನಲ್ಲಿ ಒಂದು ದೊಡ್ಡ ಹೆಜ್ಜೆಯಾಗಿದೆ. ಇದರಿಂದ ಜಗತ್ತಿನ ದಕ್ಷಿಣದಲ್ಲಿ ಸಾರ್ವತ್ರಿಕ ಸಂಪರ್ಕವನ್ನು ನಿರ್ಮಿಸುವ ಭಾರತದ ಪ್ರಯತ್ನಗಳಿಗೆ ಭಾರಿ ಉತ್ತೇಜಕ ಮತ್ತು ವೇಗ ದೊರೆಯಲಿದೆ ಎಂದು ನಾನು ಭಾವಿಸುತ್ತೇನೆ. ಇದು ದಕ್ಷಿಣ ಏಷ್ಯಾದ ದೇಶಗಳಲ್ಲಿ ʻಐಸಿಟಿʼ ವಲಯದಲ್ಲಿ ಸಹಕಾರ ಮತ್ತು ಸಹಯೋಗವನ್ನು ಬಲಪಡಿಸುತ್ತದೆ. ಇಲ್ಲಿ ಉಪಸ್ಥಿತರಿರುವ ವಿದೇಶದ ಅನೇಕ ಅತಿಥಿಗಳು ಸೇರಿದಂತೆ ಎಲ್ಲರಿಗೂ ನಾನು ಈ ನಿಟ್ಟಿನಲ್ಲಿ ಅಭಿನಂದನೆ ಸಲ್ಲಿಸುತ್ತೇನೆ ಮತ್ತು ಶುಭ ಹಾರೈಸುತ್ತೇನೆ.

ಸ್ನೇಹಿತರೇ,

ನಾವು ತಾಂತ್ರಿಕ ವಿಭಜನೆಯನ್ನು ನಿವಾರಿಸುವ ಬಗ್ಗೆ ಮಾತನಾಡುವಾಗ ಭಾರತದಿಂದ ಬಹಳಷ್ಟು ನಿರೀಕ್ಷಿಸುವುದು ಸ್ವಾಭಾವಿಕವಾಗಿದೆ. ಭಾರತದ ಸಾಮರ್ಥ್ಯ, ನಾವೀನ್ಯತೆ ಸಂಸ್ಕೃತಿ, ಮೂಲಸೌಕರ್ಯ, ನುರಿತ ಮತ್ತು ನವೀನ ಮಾನವಶಕ್ತಿ ಮತ್ತು ಅನುಕೂಲಕರ ನೀತಿ ವಾತಾವರಣವು ಈ ನಿರೀಕ್ಷೆಗೆ ಆಧಾರವಾಗಿದೆ. ಈ ವಿಷಯಗಳ ಜೊತೆಗೆ, ಭಾರತವು ನಂಬಿಕೆ ಮತ್ತು ಪ್ರಮಾಣ ಎಂಬ ಎರಡು ಪ್ರಮುಖ ಶಕ್ತಿಗಳನ್ನು ಹೊಂದಿದೆ. ನಂಬಿಕೆ ಮತ್ತು ಪ್ರಮಾಣವಿಲ್ಲದೆ ನಾವು ತಂತ್ರಜ್ಞಾನವನ್ನು ಪ್ರತಿಯೊಂದು ಮೂಲೆ ಮೂಲೆಗೂ ಕೊಂಡೊಯ್ಯಲು ಸಾಧ್ಯವಿಲ್ಲ. ಇಂದಿನ ತಂತ್ರಜ್ಞಾನದಲ್ಲಿ ನಂಬಿಕೆಯು ಒಂದು ಪೂರ್ವ ಷರತ್ತಾಗಿದೆ ಎಂದು ನಾನು ಹೇಳಲು ಬಯಸುತ್ತೇನೆ. ಇಂದು ಇಡೀ ಜಗತ್ತು ಈ ನಿಟ್ಟಿನಲ್ಲಿ ಭಾರತದ ಪ್ರಯತ್ನಗಳ ಬಗ್ಗೆ ಚರ್ಚಿಸುತ್ತಿದೆ. ಇಂದು ಭಾರತವು 100 ಕೋಟಿ ಮೊಬೈಲ್ ಫೋನ್‌ಗಳೊಂದಿಗೆ ವಿಶ್ವದ ಅತ್ಯಂತ ಸಂಪರ್ಕಿತ ಪ್ರಜಾಪ್ರಭುತ್ವವೆನಿಸಿದೆ. ಕೈಗೆಟುಕುವ ಸ್ಮಾರ್ಟ್‌ಫೋನ್‌ಗಳು ಮತ್ತು ಅಗ್ಗದ ಇಂಟರ್ನೆಟ್ ಡೇಟಾ ಭಾರತದ ಡಿಜಿಟಲ್ ಜಗತ್ತನ್ನು ಪರಿವರ್ತಿಸಿದೆ. ಭಾರತದಲ್ಲಿ ಪ್ರತಿ ತಿಂಗಳು 800 ಕೋಟಿ ʻಯುಪಿಐʼ ಆಧಾರಿತ ಡಿಜಿಟಲ್ ಪಾವತಿಗಳು ನಡೆಯುತ್ತಿವೆ. ಇಂದು, ಭಾರತದಲ್ಲಿ ಪ್ರತಿದಿನ 7 ಕೋಟಿ ಇ-ದೃಢೀಕರಣಗಳು ನಡೆಯುತ್ತಿವೆ. ಭಾರತದ ʻಕೋವಿನ್ʼ ತಂತ್ರಾಂಶದ ಮೂಲಕ ಮೂಲಕ ದೇಶದಲ್ಲಿ 220 ಕೋಟಿಗೂ ಹೆಚ್ಚು ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ. ಕಳೆದ ಕೆಲವು ವರ್ಷಗಳಲ್ಲಿ, ಭಾರತವು ತನ್ನ ನಾಗರಿಕರ ಬ್ಯಾಂಕ್ ಖಾತೆಗಳಿಗೆ ನೇರ ಲಾಭ ವರ್ಗಾವಣೆಯ ಮೂಲಕ 28 ಲಕ್ಷ ಕೋಟಿ ರೂ.ಗಳನ್ನು ವರ್ಗಾಯಿಸಿದೆ. ನಾವು ʻಜನ್ ಧನ್ʼ ಯೋಜನೆಯ ಮೂಲಕ ಅಮೆರಿಕದ ಒಟ್ಟು ಜನಸಂಖ್ಯೆಗಿಂತಲೂ ಹೆಚ್ಚಿನ ಜನರ ಬ್ಯಾಂಕ್ ಖಾತೆಗಳನ್ನು ತೆರೆದಿದ್ದೇವೆ. ಅಲ್ಲದೆ, ನಾವು ಈ ಖಾತೆಗಳನ್ನು ವಿಶಿಷ್ಟ ಡಿಜಿಟಲ್ ಗುರುತಿನ ಮೂಲಕ ಅಂದರೆ ಆಧಾರ್ ಮೂಲಕ ಪ್ರಮಾಣೀಕರಿಸಿದ್ದೇವೆ. ಜೊತೆಗೆ ಮೊಬೈಲ್ ಫೋನ್‌ಗಳ ಮೂಲಕ 100 ಕೋಟಿಗೂ ಹೆಚ್ಚು ಜನರನ್ನು ಸಂಪರ್ಕಿಸಿದ್ದೇವೆ. ʻಜನ್‌ಧನ್-ಆಧಾರ್-ಮೊಬೈಲ್ (ಜೆಎಎಂ) ಎಂಬ ತ್ರಿವಳಿ ಶಕ್ತಿ ಜಗತ್ತಿಗೆ ಇಂದು ಅಧ್ಯಯನದ ವಿಷಯವಾಗಿದೆ.

|

ಸ್ನೇಹಿತರೇ,

ದೂರಸಂಪರ್ಕ ತಂತ್ರಜ್ಞಾನವು ಭಾರತಕ್ಕೆ ಕೇವಲ ಶಕ್ತಿಯ ಸಾಧನವಲ್ಲ, ಅದು ಜನರನ್ನು ಸಬಲೀಕರಣಗೊಳಿಸುವ ಧ್ಯೇಯವಾಗಿದೆ. ಇಂದು ಡಿಜಿಟಲ್ ತಂತ್ರಜ್ಞಾನವು ಭಾರತದಲ್ಲಿ ಸಾರ್ವತ್ರಿಕವಾಗಿದೆ, ಎಲ್ಲರಿಗೂ ಲಭ್ಯವಿದೆ. ಕಳೆದ ಕೆಲವು ವರ್ಷಗಳಲ್ಲಿ ಭಾರತದಲ್ಲಿ ದೊಡ್ಡ ಮಟ್ಟದಲ್ಲಿ ಡಿಜಿಟಲ್ ಸೇರ್ಪಡೆ ಸಂಭವಿಸಿದೆ. ಬ್ರಾಡ್ ಬ್ಯಾಂಡ್ ಸಂಪರ್ಕದ ಬಗ್ಗೆ ಮಾತನಾಡುವುದಾದರೆ, 2014ರ ಮೊದಲು ಭಾರತದಲ್ಲಿ ಆರು ಕೋಟಿ ಬಳಕೆದಾರರಿದ್ದರು. ಇಂದು ಬ್ರಾಡ್ ಬ್ಯಾಂಡ್ ಬಳಕೆದಾರರ ಸಂಖ್ಯೆ 80 ಕೋಟಿಗಿಂತ ಹೆಚ್ಚಾಗಿದೆ. 2014ರ ಮೊದಲು ಭಾರತದಲ್ಲಿ ಇಂಟರ್ನೆಟ್ ಸಂಪರ್ಕಗಳ ಸಂಖ್ಯೆ 25 ಕೋಟಿ ಇತ್ತು. ಇಂದು ಅದು 85 ಕೋಟಿಗೂ ಅಧಿಕವಾಗಿದೆ.

ಸ್ನೇಹಿತರೇ,

ಈಗ ಭಾರತದ ಹಳ್ಳಿಗಳಲ್ಲಿ ಇಂಟರ್ನೆಟ್ ಬಳಕೆದಾರರ ಸಂಖ್ಯೆ ನಗರಗಳಲ್ಲಿನ ಇಂಟರ್ನೆಟ್ ಬಳಕೆದಾರರಿಗಿಂತ ಹೆಚ್ಚಾಗಿದೆ. ಡಿಜಿಟಲ್ ಶಕ್ತಿ ದೇಶದ ಮೂಲೆ ಮೂಲೆಗೂ ಹೇಗೆ ತಲುಪುತ್ತಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಕಳೆದ ಒಂಬತ್ತು ವರ್ಷಗಳಲ್ಲಿ, ಸರಕಾರ ಮತ್ತು ಖಾಸಗಿ ವಲಯ ಒಟ್ಟಾಗಿ ಭಾರತದಲ್ಲಿ 25 ಲಕ್ಷ ಕಿಲೋಮೀಟರ್ ಆಪ್ಟಿಕಲ್ ಫೈಬರ್ ಕೇಬಲ್‌ ಅಳವಡಿಸವೆ. 25 ಲಕ್ಷ ಕಿಲೋಮೀಟರ್ ಆಪ್ಟಿಕಲ್ ಫೈಬರ್ ಎಂದರೆ ಸಾಮಾನ್ಯವಲ್ಲ! ಇತ್ತೀಚಿನ ವರ್ಷಗಳಲ್ಲಿ, ಸುಮಾರು ಎರಡು ಲಕ್ಷ ಗ್ರಾಮ ಪಂಚಾಯಿತಿಗಳಿಗೆ ಆಪ್ಟಿಕಲ್ ಫೈಬರ್ ಸಂಪರ್ಕ ಕಲ್ಪಿಸಲಾಗಿದೆ. ಇಂದು, ಐದು ಲಕ್ಷಕ್ಕೂ ಹೆಚ್ಚು ʻಸಾಮಾನ್ಯ ಸೇವಾ ಕೇಂದ್ರʼಗಳು ದೇಶಾದ್ಯಂತ ಹಳ್ಳಿಗಳಲ್ಲಿ ಡಿಜಿಟಲ್ ಸೇವೆಗಳನ್ನು ಒದಗಿಸುತ್ತಿವೆ. ಈ ಎಲ್ಲಾ ಕ್ರಮಗಳ ಪರಿಣಾಮವೆಂಬಂತೆ ಇಂದು ನಮ್ಮ ಡಿಜಿಟಲ್ ಆರ್ಥಿಕತೆಯು ದೇಶದ ಒಟ್ಟಾರೆ ಆರ್ಥಿಕತೆಗಿಂತ ಸುಮಾರು ಎರಡೂವರೆ ಪಟ್ಟು ವೇಗವಾಗಿ ಪ್ರಗತಿ ಸಾಧಿಸುತ್ತಿದೆ.

|

ಸ್ನೇಹಿತರೇ,

ಡಿಜಿಟಲ್ ಅಲ್ಲದ ಕ್ಷೇತ್ರಗಳು ಸಹ ಡಿಜಿಟಲ್ ಇಂಡಿಯಾದಿಂದ ಶಕ್ತಿಯನ್ನು ಪಡೆಯುತ್ತಿವೆ. ನಮ್ಮ ʻಪಿಎಂ ಗತಿಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ʼ ಇದಕ್ಕೆ ಉದಾಹರಣೆಯಾಗಿದೆ. ದೇಶದಲ್ಲಿ ನಿರ್ಮಿಸಲಾಗುತ್ತಿರುವ ಎಲ್ಲಾ ರೀತಿಯ ಮೂಲಸೌಕರ್ಯಗಳಿಗೆ ಸಂಬಂಧಿಸಿದ ದತ್ತಾಂಶಗಳನ್ನು ಒಂದೇ ವೇದಿಕೆಯಲ್ಲಿ ತರಲಾಗುತ್ತಿದೆ. ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದ ಪ್ರತಿಯೊಂದು ಸಂಪನ್ಮೂಲದ ಬಗ್ಗೆ ಮಾಹಿತಿಯನ್ನು ಒಂದೇ ಸ್ಥಳದಲ್ಲಿ ಇರಿಸುವುದು, ಪ್ರತಿ ಮಧ್ಯಸ್ಥಗಾರರಿಗೆ ನೈಜ ಸಮಯದ ಮಾಹಿತಿ ಲಭ್ಯವಾಗುವಂತೆ ಮಾಡುವುದು ಇದರ ಗುರಿಯಾಗಿದೆ. ಇಂದು ಇಲ್ಲಿ ಪ್ರಾರಂಭಿಸಲಾದ 'ಕಾಲ್ ಬಿಫೋರ್ ಯು ಡಿಗ್' ತಂತ್ರಾಂಶ ಕೂಡ ಅದೇ ಆಶಯದ ವಿಸ್ತರಣೆಯಾಗಿದೆ. 'ಕಾಲ್‌ ಬಿಫೋರ್‌ ಯು ಡಿಗ್‌ʼ ಎಂದರೆ ಅದನ್ನು ನೀವು ರಾಜಕೀಯವಾಗಿ ಬಳಸಬೇಕು ಎಂದು ಅರ್ಥವಲ್ಲ. ವಿವಿಧ ಯೋಜನೆಗಳಿಗಾಗಿ ಅಗೆಯುವುದರಿಂದ ಆಗಾಗ್ಗೆ ಟೆಲಿಕಾಂ ಸಂಪರ್ಕ ಹಾನಿಗೊಳಗಾಗುವ ವಿಚಾರ ನಿಮಗೆ ತಿಳಿದಿದೆ. ಈ ಹೊಸ ತಂತ್ರಾಂಶದೊಂದಿಗೆ, ಅಗೆಯುವ ಏಜೆನ್ಸಿಗಳು ಮತ್ತು ಭೂಗತ ಸ್ವತ್ತುಗಳನ್ನು ಹೊಂದಿರುವ ಇಲಾಖೆಗಳ ನಡುವಿನ ಸಮನ್ವಯವು ಹೆಚ್ಚಾಗುತ್ತದೆ. ಪರಿಣಾಮವಾಗಿ, ನಷ್ಟವೂ ಕಡಿಮೆಯಾಗುತ್ತದೆ ಮತ್ತು ಜನರು ಎದುರಿಸುತ್ತಿರುವ ಸಮಸ್ಯೆಗಳು ಸಹ ಕಡಿಮೆಯಾಗುತ್ತವೆ.

ಸ್ನೇಹಿತರೇ,

ಇಂದಿನ ಭಾರತವು ಡಿಜಿಟಲ್ ಕ್ರಾಂತಿಯ ಮುಂದಿನ ಹಂತದತ್ತ ವೇಗವಾಗಿ ಸಾಗುತ್ತಿದೆ. ಇಂದು ಭಾರತವು ವಿಶ್ವದಲ್ಲೇ ಅತ್ಯಂತ ವೇಗವಾಗಿ ʻ5 ಜಿʼ ಸೇವೆ ವಿಸ್ತರಿಸಿದ ದೇಶವಾಗಿದೆ. ಕೇವಲ 120 ದಿನಗಳಲ್ಲಿ, 125 ಕ್ಕೂ ಹೆಚ್ಚು ನಗರಗಳಲ್ಲಿ ʻ5 ಜಿʼ ಸೇವೆಗೆ ಚಾಲನೆ ನೀಡಲಾಗಿದೆ. ಇಂದು ʻ5 ಜಿʼ ಸೇವೆಗಳು ದೇಶದ ಸುಮಾರು 350 ಜಿಲ್ಲೆಗಳನ್ನು ತಲುಪಿವೆ. ಅಲ್ಲದೆ, ಇಂದು ನಾವು ʻ5 ಜಿʼ ಸೇವೆ ಆರಂಭದ ಕೇವಲ 6 ತಿಂಗಳಲ್ಲೇ ʻ6 ಜಿʼ ಬಗ್ಗೆ ಮಾತನಾಡುತ್ತಿದ್ದೇವೆ. ಇದು ಭಾರತದ ವಿಶ್ವಾಸವನ್ನು ತೋರಿಸುತ್ತದೆ. ಇಂದು ನಾವು ನಮ್ಮ ʻವಿಷನ್ ಡಾಕ್ಯುಮೆಂಟ್ʼ ಅನ್ನು ಸಹ ಪ್ರಸ್ತುತಪಡಿಸಿದ್ದೇವೆ. ಇದು ಮುಂದಿನ ಕೆಲವು ವರ್ಷಗಳಲ್ಲಿ ʻ6 ಜಿʼ ಚಾಲನೆಗೆ  ಪ್ರಮುಖ ಆಧಾರವಾಗಲಿದೆ.

|

ಸ್ನೇಹಿತರೇ,

ಭಾರತದ ದೇಶೀಯ ದೂರಸಂಪರ್ಕ ತಂತ್ರಜ್ಞಾನ ಯಶಸ್ಸು ಇಂದು ವಿಶ್ವದ ಅನೇಕ ದೇಶಗಳ ಗಮನವನ್ನು ಸೆಳೆಯುತ್ತಿದೆ. ʻ4ಜಿʼ ಸೇವೆ ಆರಂಭಕ್ಕೆ ಮೊದಲು, ಭಾರತವು ಟೆಲಿಕಾಂ ತಂತ್ರಜ್ಞಾನದ ಗ್ರಾಹಕನಾಗಿತ್ತು. ಆದರೆ ಈಗ ಭಾರತವು ಟೆಲಿಕಾಂ ತಂತ್ರಜ್ಞಾನವನ್ನು ರಫ್ತು ಮಾಡುವ ವಿಶ್ವದ ಅತಿದೊಡ್ಡ ದೇಶವಾಗುವತ್ತ ಸಾಗುತ್ತಿದೆ. ʻ5 ಜಿʼ ಶಕ್ತಿಯ ಸಹಾಯದಿಂದ, ಇಡೀ ವಿಶ್ವದ ಕೆಲಸದ ಸಂಸ್ಕೃತಿಯನ್ನು ಬದಲಾಯಿಸಲು ಭಾರತವು ಅನೇಕ ದೇಶಗಳೊಂದಿಗೆ ಕೆಲಸ ಮಾಡುತ್ತಿದೆ. ಶೀಘ್ರದಲ್ಲೇ, ಭಾರತವು 100 ಹೊಸ ʻ5 ಜಿʼ ಪ್ರಯೋಗಾಲಯಗಳನ್ನು ಸ್ಥಾಪಿಸಲಿದೆ. ಇದು ʻ5ಜಿʼಗೆ ಸಂಬಂಧಿಸಿದ ಅವಕಾಶಗಳು, ವ್ಯವಹಾರ ಮಾದರಿಗಳು ಮತ್ತು ಉದ್ಯೋಗ ಸಾಮರ್ಥ್ಯವನ್ನು ಅರಿತುಕೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಈ 100 ಹೊಸ ಪ್ರಯೋಗಾಲಯಗಳು ಭಾರತದ ಅನನ್ಯ ಅಗತ್ಯಗಳಿಗೆ ಅನುಗುಣವಾಗಿ ʻ5ಜಿʼ ತಂತ್ರಾಂಶಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. ಅದು ʻ5ಜಿʼ ಸ್ಮಾರ್ಟ್ ತರಗತಿಳಾಗಿರಲಿ, ಕೃಷಿ, ʻಇಂಟಲಿಜೆಂಟ್‌ ಸಾರಿಗೆ ವ್ಯವಸ್ಥೆʼಗಳಾಗಿರಲಿ ಅಥವಾ ಆರೋಗ್ಯ ತಂತ್ರಾಂಶಗಳಾಗಿರಲಿ, ಭಾರತವು ಪ್ರತಿಯೊಂದು ದಿಕ್ಕಿನಲ್ಲಿಯೂ ವೇಗವಾಗಿ ಕಾರ್ಯಮಗ್ನವಾಗಿದೆ. ಭಾರತದ ʻ5ಜಿʼ ಮಾನದಂಡಗಳು ಜಾಗತಿಕ ʻ5ಜಿʼ ವ್ಯವಸ್ಥೆಗಳ ಭಾಗವಾಗಿವೆ. ಭವಿಷ್ಯದ ತಂತ್ರಜ್ಞಾನಗಳ ಪ್ರಮಾಣೀಕರಣಕ್ಕಾಗಿ ನಾವು ʻಐಟಿಯುʼ ಜೊತೆಗೆ ಒಟ್ಟಾಗಿ ಕೆಲಸ ಮಾಡುತ್ತೇವೆ. ಇಂದು ಪ್ರಾರಂಭಿಸಲಾದ ಭಾರತೀಯ ಐಟಿಯು ಪ್ರದೇಶ ಕಚೇರಿಯು ʻ6ಜಿʼಗೆ ಸೂಕ್ತ ವಾತಾವರಣವನ್ನು ಸೃಷ್ಟಿಸಲು ನಮಗೆ ಸಹಾಯ ಮಾಡುತ್ತದೆ. ಮುಂದಿನ ವರ್ಷ ಅಕ್ಟೋಬರ್‌ನಲ್ಲಿ ʻಐಟಿಯುʼನ ʻವಿಶ್ವ ದೂರಸಂಪರ್ಕ ಪ್ರಮಾಣೀಕರಣ ಸಮಾವೇಶʼ ದೆಹಲಿಯಲ್ಲಿ ನಡೆಯಲಿದೆ ಎಂದು ಇಂದು ಘೋಷಿಸಲು ನನಗೆ ಸಂತೋಷವಾಗಿದೆ. ಈ ಸಮಾವೇಶದಲ್ಲಿ ಭಾಗವಹಿಸಲು ಪ್ರಪಂಚದ ಮೂಲೆ ಮೂಲೆಗಳಿಂದ ಪ್ರತಿನಿಧಿಗಳು ಭಾರತಕ್ಕೆ ಬರುತ್ತಾರೆ. ಈ ಕಾರ್ಯಕ್ರಮಕ್ಕಾಗಿ ನಾನು ನಿಮಗೆ ಶುಭ ಹಾರೈಸುತ್ತೇನೆ. ಇದೇ ವೇಳೆ, ಅಕ್ಟೋಬರ್‌ಗೆ ಮೊದಲು ನಾವು ವಿಶ್ವದ ಬಡ ದೇಶಗಳಿಗೆ ಗರಿಷ್ಠ ಉಪಯುಕ್ತವಾದ ಏನನ್ನಾದರೂ ಮಾಡಬೇಕು ಎಂದು ನಾನು ಈ ಕ್ಷೇತ್ರದ ತಜ್ಞರನ್ನು ಈ ಸಂದರ್ಭದಲ್ಲಿ ಒತ್ತಾಯಿಸಲು ಬಯಸುತ್ತೇನೆ. 

|

ಸ್ನೇಹಿತರೇ,

ಭಾರತದ ಅಭಿವೃದ್ಧಿಯ ಈ ವೇಗವನ್ನು ನೋಡಿದರೆ, ಈ ದಶಕವು ಭಾರತದ ʻತಂತ್ರಜ್ಞಾನ ದಶಕʼ (ಟೆಕೇಡ್)  ಎಂದು ಹೇಳಲಾಗುತ್ತದೆ. ಭಾರತದ ದೂರಸಂಪರ್ಕ ಮತ್ತು ಡಿಜಿಟಲ್ ಮಾದರಿಯು ಸುಗಮ, ಸುರಕ್ಷಿತ, ಪಾರದರ್ಶಕ, ವಿಶ್ವಾಸಾರ್ಹ ಹಾಗೂ ಪರೀಕ್ಷಿತವಾದುದು. ದಕ್ಷಿಣ ಏಷ್ಯಾದ ಎಲ್ಲಾ ಮಿತ್ರ ದೇಶಗಳು ಇದರ ಲಾಭವನ್ನು ಪಡೆಯಬಹುದು. ʻಐಟಿಯುʼನ ಈ ಕೇಂದ್ರವು ಈ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ನಾನು ನಂಬಿದ್ದೇನೆ. ಮತ್ತೊಮ್ಮೆ, ಈ ಮಹತ್ವದ ಸಂದರ್ಭದಲ್ಲಿ ನಾನು ವಿಶ್ವದ ಅನೇಕ ದೇಶಗಳ ಗಣ್ಯರನ್ನು ಸ್ವಾಗತಿಸುತ್ತೇನೆ ಮತ್ತು ನಿಮ್ಮೆಲ್ಲರಿಗೂ ಅನೇಕಾನೇಕ ಶುಭ ಹಾರೈಕೆಗಳನ್ನು ಸಲ್ಲಿಸಲು ಬಯಸುತ್ತೇನೆ.

ಧನ್ಯವಾದಗಳು.
 

  • Jitendra Kumar April 16, 2025

    🙏🇮🇳❤️
  • कृष्ण सिंह राजपुरोहित भाजपा विधान सभा गुड़ामा लानी November 21, 2024

    जय श्री राम 🚩 वन्दे मातरम् जय भाजपा विजय भाजपा
  • दिग्विजय सिंह राना September 20, 2024

    हर हर महादेव
  • Rasiya July 29, 2024

    Great venture!
  • JBL SRIVASTAVA May 27, 2024

    मोदी जी 400 पार
  • Vaishali Tangsale February 12, 2024

    🙏🏻🙏🏻✌️❤️❤️
  • ज्योती चंद्रकांत मारकडे February 11, 2024

    जय हो
  • ज्योती चंद्रकांत मारकडे February 11, 2024

    जय हो
  • Pt Deepak Rajauriya jila updhyachchh bjp fzd December 23, 2023

    जय
  • Shalini Srivastava September 22, 2023

    कृपया योग सभी स्कूलो मे अनिवार्य किया जाय स्वस्थ जीवन उज्ज्वल भविष्य का पथ है प्रधान मंत्री जी की ओजस्विता समस्त संसार को प्रकाशित कर रही है
Explore More
ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
Maratha bastion in Tamil heartland: Gingee fort’s rise to Unesco glory

Media Coverage

Maratha bastion in Tamil heartland: Gingee fort’s rise to Unesco glory
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ಜುಲೈ 2025
July 21, 2025

Green, Connected and Proud PM Modi’s Multifaceted Revolution for a New India